ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 18, 2017

6

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೧ )

‍ನಿಲುಮೆ ಮೂಲಕ

–  ವಿನಾಯಕ ವಿಶ್ವನಾಥ ಹಂಪಿಹೊಳಿ

the_union_of_vaishnavism_and_shaivism_pg41ಭಾರತೀಯ ಸಂಪ್ರದಾಯಗಳಲ್ಲಿ ಟೀಕೆಗಳು ಹಾಗೂ ವಿಮರ್ಶೆಗಳು ಮುಂಚಿನಿಂದಲೂ ಬೆಳೆದುಕೊಂಡು ಬಂದಿವೆ. ನೂರಾರು ದರ್ಶನಗಳು ತಮ್ಮ ತತ್ತ್ವವನ್ನು ಸಾಧಿಸುವಾಗ ಉಳಿದ ದರ್ಶನಗಳನ್ನು ಟೀಕಿಸುತ್ತವೆ. ಅವೈದಿಕ ದರ್ಶನಗಳು ವೈದಿಕರು ಹೇಳುವ ಆತ್ಮಾಸ್ತಿತ್ವವನ್ನು ನಿರಾಕರಿಸುತ್ತವೆ. ಉಪನಿಷತ್ತಿನ ದರ್ಶನಗಳು ವೈದಿಕರ ಕರ್ಮಕಾಂಡವನ್ನು ಟೀಕಿಸುತ್ತವೆ. ಅದ್ವೈತ, ವಿಶಿಷ್ಟಾದ್ವೈತ, ತತ್ತ್ವವಾದಗಳಂಥ ದರ್ಶನಗಳ ದಾರ್ಶನಿಕರು ಪರಸ್ಪರ ಒಬ್ಬರನ್ನೊಬ್ಬರು ಟೀಕಿಸುತ್ತಾರೆ. ಹಾಗೆಯೇ ವೀರಶೈವ ದರ್ಶನವೂ ಉಳಿದ ದರ್ಶನಗಳನ್ನು ಟೀಕಿಸುತ್ತದೆ. ಹೀಗೆ ನಮ್ಮ ಪೂರ್ವಜರು ಪರಸ್ಪರರ ದರ್ಶನಗಳನ್ನು ಟೀಕಿಸುತ್ತ, ಪರರ ಟೀಕೆಗಳಿಗೆ ಸಮಾಧಾನವನ್ನು ಹೇಳುತ್ತ ತಮ್ಮ ತಮ್ಮ ದರ್ಶನಗಳ ವಾದಗಳನ್ನು ಶ್ರೀಮಂತವಾಗಿಸುತ್ತ ಬಂದಿದ್ದಾರೆ. ಈ ಚರ್ಚೆಯ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ.

ಈ ಟೀಕೆಗಳ ಸ್ವರೂಪವನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕೆ ಕಾರಣ ಇಂದು ನಮ್ಮ ಸಂಪ್ರದಾಯ ಹಾಗೂ ಪರಂಪರೆಗಳ ನಂಬಿಕೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಟೀಕಿಸಿದಾಗ, ದೇವತೆಗಳ ನಗ್ನ ಚಿತ್ರಗಳನ್ನು ಬಿಡಿಸಿದಾಗ, ಆಚರಣೆಗಳನ್ನು ವಿರೂಪವಾಗಿ ಚಿತ್ರಿಸಿದಾಗ ಎರಡು ಗುಂಪುಗಳು ಚರ್ಚೆಯೊಂದನ್ನು ಆರಂಭಿಸುತ್ತವೆ. ಒಂದು ಗುಂಪು ಈ ಕ್ರಿಯೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಪ್ರತಿಪಾದಿಸುತ್ತದೆ. ಇನ್ನೊಂದು ಗುಂಪು ಭಾವನೆಗಳಿಗೆ ಧಕ್ಕೆಯಾಗುವಂತಹ ಈ ರೀತಿಯ ಅವಹೇಳನಗಳು ನಡೆಯಕೂಡದೆಂದು ಹೇಳುತ್ತದೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯವು ತನ್ನ ಇತಿಮಿತಿಗಳೊಳಗೆ ಇರಬೇಕೆಂದು ಪ್ರತಿಪಾದಿಸುತ್ತದೆ. ಕೇವಲ ರಿಲಿಜನ್ ಹಾಗೂ ಸಂಪ್ರದಾಯಗಳ ಬಗ್ಗೆ ಅಷ್ಟೇ ಅಲ್ಲ,  ಐಡಿಯಾಲಜಿಗಳ ಟೀಕೆಗಳು ನಡೆದಾಗಲೂ ಈ ಎರಡು ಗುಂಪುಗಳು ಚರ್ಚೆಯನ್ನು ಆರಂಭಿಸುತ್ತವೆ.

ಗಮನಿಸಬೇಕಾದ ಅಂಶವೆಂದರೆ ಈ ಗುಂಪುಗಳು ಸ್ಥಿರವಾಗಿರುವದಿಲ್ಲ. ಟೀಕೆಗೊಳಗಾದ ವಿಷಯಗಳು ಬದಲಾದಂತೆ ಈ ಗುಂಪುಗಳಲ್ಲಿರುವ ಜನರೂ ಅದಲು ಬದಲಾಗುತ್ತಾರೆ. ಮಹಮದ್ ಪೈಗಂಬರ್ ಹಾಗೂ ಆಯೇಶಾಳ ವ್ಯಂಗ್ಯಚಿತ್ರವನ್ನು ಬಿಡಿಸಿದರೆ ಕ್ರಿಶ್ಚಿಯನ್ನರು ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಭಾವಿಸಿದರೆ ಮುಸ್ಲಿಮರು ಇದನ್ನು ಇಸ್ಲಾಂ ರಿಲಿಜನ್ನಿನ ಅವಹೇಳನವೆಂದು ಭಾವಿಸುತ್ತಾರೆ. ಆದರೆ ಜೀಸಸ್ ದೇವನ ಮಗನಲ್ಲವೆಂದು ಯಾರಾದರೂ ಹೇಳಿದರೆ ಮುಸ್ಲಿಮರು ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಭಾವಿಸಿದರೆ ಕ್ರಿಶ್ಚಿಯನ್ನರು ಅದನ್ನು ಕ್ರಿಶ್ಚಿಯಾನಿಟಿಯ ಅವಹೇಳನವೆಂದು ಭಾವಿಸುತ್ತಾರೆ.

ಹಿಂದೂ ದೇವತೆಗಳ ನಗ್ನಚಿತ್ರಗಳನ್ನು ಬಿಡಿಸುವದು ಎಡಪಂಥೀಯರು ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಚರಿತ್ರೆಯಲ್ಲಿ ಮುಸ್ಲಿಂ ರಾಜರ ಹಾಗೂ ಚರ್ಚಿನ ಹಿಂಸೆಗಳನ್ನು ದಾಖಲಿಸುವ ಪ್ರಕ್ರಿಯೆಯನ್ನು ಅಲ್ಪಸಂಖ್ಯಾತರ ಭಾವನೆಗಳಿಗೆ ನೋವಾಗುವದೆಂಬ ವಾದವನ್ನೊಡ್ಡಿ ವಿರೋಧಿಸುತ್ತಾರೆ. ಭಸ್ಮಾಸುರ ತನ್ನ ವರವನ್ನು ಪರೀಕ್ಷಿಸಲು ಶಿವನನ್ನು ಓಡಿಸಿಕೊಂಡು ಹೋಗುವ ನಾಟಕವನ್ನು ಆಸ್ವಾದಿಸುವ ಹಿಂದೂಗಳು ಹಿಂದಿ ಚಿತ್ರವೊಂದರಲ್ಲಿ ಶಿವನನ್ನು ಓಡಿಸಿಕೊಂಡು ಹೋಗುವ ಪ್ರಸಂಗವನ್ನು ಹಿಂದೂ ಧರ್ಮದ ಅವಹೇಳನವೆಂದು ಹೇಳುತ್ತಾರೆ. ನಂಬಿಕೆ ಹಾಗೂ ಆಚರಣೆಗಳನ್ನು ಹಿಂದೆ ಟೀಕಿಸುತ್ತಿದ್ದ ಹಾಗೂ ಉಳಿದವರ ಟೀಕೆಗಳನ್ನು ಎದುರಿಸುತ್ತಿದ್ದ ರೀತಿಗೂ ಇಂದು ಟೀಕಿಸುತ್ತಿರುವ ಹಾಗೂ ಟೀಕೆಗಳನ್ನು ಎದುರಿಸುತ್ತಿರುವ ರೀತಿಗೂ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಅರಿತುಕೊಳ್ಳುವದು ಇಂದಿನ ಅಗತ್ಯವಾಗಿದೆ.

ದೇವತೆಗಳನ್ನು ನಮ್ಮ ಕಲ್ಪನೆಗನುಗುಣವಾಗಿ ಚಿತ್ರಿಸುವ ಅನೇಕ ಶಿಲ್ಪಗಳನ್ನು ನೋಡಬಹುದು. ಪುರಾಣದ ಪಾತ್ರಗಳು ಈಗಿನ ಜಗತ್ತಿಗೆ ಬಂದರೆ ಹೇಗೆ ವ್ಯವಹರಿಸಬಹುದು ಎಂದೆಲ್ಲ ಊಹಿಸಿಕೊಂಡು ನಾವು ಅನೇಕ ಸಾಹಿತ್ಯ ಹಾಗೂ ಚಲನಚಿತ್ರಗಳನ್ನು ನಿರ್ಮಿಸಿಕೊಂಡಿದ್ದೇವೆ. ರಾಧೆ ಹಾಗೂ ಕೃಷ್ಣನ ಕುರಿತು ಕಾಮಪ್ರಧಾನವಾದ ಕಾವ್ಯಗಳೂ ಹಾಗೂ ನಗ್ನ ಶಿಲ್ಪಗಳೂ ಇರುವಂತೆ, ಭಕ್ತಿ ಹಾಗೂ ಆಧ್ಯಾತ್ಮಪ್ರಧಾನವಾದ ಕಾವ್ಯಗಳೂ ಕೂಡ ನಮ್ಮಲ್ಲಿವೆ. ಶಿವ ಹಾಗೂ ಪಾರ್ವತಿಯರ ನಗ್ನ ಶಿಲ್ಪದಲ್ಲಿ ಕವಿಗಳು ಶೃಂಗಾರ ರಸವನ್ನು ಆಸ್ವಾದಿಸುತ್ತಾರೆ ಹಾಗೂ ಆಧ್ಯಾತ್ಮಿಕ ಸಾಧಕರು ಪ್ರಕೃತಿ ಹಾಗೂ ಪುರುಷನೆಂಬ ಸಾಂಖ್ಯತತ್ತ್ವದ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯುತ್ತಾರೆ. ಹೀಗಾಗಿ ದೇವತೆಗಳನ್ನು ನಗ್ನವಾಗಿ ಚಿತ್ರಿಸುವದು ನಮಗೆ ಎಂದಿಗೂ ಒಂದು ಸಮಸ್ಯೆಯೇ ಆಗಿರಲಿಲ್ಲ. ಇಂದಿಗೂ ಕೂಡ ಹೊಸದಾಗಿ ಕಟ್ಟುವ ದೇವಸ್ಥಾನದ ಆವರಣದಲ್ಲಿ ನಗ್ನ ಶಿಲ್ಪಗಳನ್ನಿಡುವದು ಸಮಸ್ಯೆಯಾಗುವದಿಲ್ಲ.

ಆದರೆ ಹನುಮಂತ ಹಾಗೂ ಸೀತೆ ಕಾಮದಲ್ಲಿ ತೊಡಗಿರುವ ಚಿತ್ರಗಳನ್ನು ಪ್ರಕಟಿಸಿದಾಗ ಅದು ವಿವಾದಕ್ಕೆ ಗ್ರಾಸವಾಗುತ್ತದೆ. ರಾಮಾಯಣ ಹಾಗೂ ಮಹಾಭಾರತದ ಕತೆಗಳನ್ನು ಬ್ರಾಹ್ಮಣರು ಉಳಿದವರನ್ನು ದಮನಿಸಲು ಹರಿಬಿಟ್ಟರು ಎಂಬ ಪಾಶ್ಚಾತ್ಯ ಸಂಸ್ಕೃತ ವಿದ್ವಾಂಸರ ವಿಮರ್ಶೆಗಳನ್ನು ನಾವು ಅಲ್ಲಗಳೆಯುತ್ತೇವೆ. ನಾವು ಸಾಮಾನ್ಯವಾಗಿ ಅಂತಹ ಚಿತ್ರಗಳನ್ನು ಸುಡುವದರ ಮೂಲಕ, ಆ ವಿಮರ್ಶೆಗಳನ್ನು ಮುಟ್ಟುಗೋಲು ಹಾಕುವದರ ಮೂಲಕ, ಅವರಿಗೆ ನಿಷೇಧ ಹೇರುವದರ ಮೂಲಕ ಪ್ರತಿಕ್ರಿಯಿಸುತ್ತೇವೆ. ಆದರೆ ಈ ರೀತಿಯ ಪ್ರತಿಕ್ರಿಯೆಗಳು ಆ ಟೀಕಾಕಾರರ ಹಾಗೂ ವಿಮರ್ಶಕರ ಪ್ರಶ್ನೆಯನ್ನು ಉತ್ತರಿಸಿದಂತಾಗುವದಿಲ್ಲ. ಆದ್ದರಿಂದ ನಮ್ಮ ಪರಂಪರೆಯ ಕತೆಗಳ ಕುರಿತು ಈ ರೀತಿಯ ಹೊಸ ಟೀಕೆಗಳು ಬಂದಾಗ ನಾವು ಅದಕ್ಕೆ ಸಮರ್ಪಕ ಪ್ರತಿಕ್ರಿಯೆಯನ್ನು ಹೇಗೆ ನೀಡಬೇಕೆಂಬುದನ್ನು ಅರಿಯಬೇಕಿದೆ.

ನಮ್ಮ ಸಂಪ್ರದಾಯಗಳ ಕುರಿತು ಬರುವ ಟೀಕೆಗಳನ್ನು ಉತ್ತರಿಸುವ ಮೊದಲು ನಾವು ಮಾಡಬೇಕಾದ ಕೆಲಸ ಆ ಟೀಕೆಗಳ ಸ್ವರೂಪವನ್ನು ಅರ್ಥೈಸಿಕೊಳ್ಳುವದು ಹಾಗೂ ಪರಂಪರಾಗತವಾಗಿ ನಾವು ಇತರರ ಟೀಕೆಗಳನ್ನು ನಾವು ಹೇಗೆ ಎದುರಿಸುತ್ತ ಬಂದಿದ್ದೇವೆಯೋ ಹಾಗೆಯೇ ಈ ಹೊಸ ಟೀಕೆಗಳಿಗೂ ತೆರೆದುಕೊಳ್ಳುವದು. ಆಗ ಮಾತ್ರ ನಾವು ನಮ್ಮ ಸಂಪ್ರದಾಯಗಳ ಕುರಿತು ಹುಟ್ಟುತ್ತಿರುವ ಹೊಸ ಟೀಕೆ ಹಾಗೂ ವಿಮರ್ಶೆಗಳನ್ನು ಸಮರ್ಪಕವಾಗಿ ಎದುರಿಸಬಹುದು. ಹಾಗೆಯೇ ನಮ್ಮ ಪೂರ್ವಜರು ಟೀಕಿಸುತ್ತಿದ್ದ ಸ್ವರೂಪವನ್ನು ಅರಿತುಕೊಂಡರೆ ಆ ವಿಧಾನವು ರಿಲಿಜನ್ನುಗಳನ್ನು ವಿಮರ್ಶಿಸಲು ಹಾಗೂ ಟೀಕಿಸಲೂ ಕೂಡ ಸಹಾಯಕವಾಗಬಹುದು.

ನಮ್ಮ ಪೂರ್ವಜರ ಟೀಕೆಗಳ ಸ್ವರೂಪಕ್ಕೂ ಹಾಗೂ ಈಗ ಹುಟ್ಟುತ್ತಿರುವ ಟೀಕೆಗಳ ಸ್ವರೂಪಕ್ಕೂ ಮೇಲ್ನೋಟಕ್ಕೆ ಕಂಡುಬರುವ ವ್ಯತ್ಯಾಸಗಳನ್ನು ಗಮನಿಸೋಣ. ಉದಾಹರಣೆಗೆ ಮಧ್ವಾಚಾರ್ಯರು ಅದ್ವೈತ ದರ್ಶನವನ್ನು ಟೀಕಿಸುವಾಗ ಅದ್ವೈತದ ಜೀವೇಶ್ವರ ಅಭೇದವನ್ನು ನಿರಾಕರಿಸಲು ನೂರಾರು ತರ್ಕಗಳನ್ನೊಡ್ಡುತ್ತಾರೆ ಹಾಗೂ ಜೀವೇಶ್ವರ ಭೇದವೇ ಸತ್ಯವೆಂದು ಹೇಳುತ್ತಾರೆ. ಆದರೆ ಸ್ಮಾರ್ತರು ಭಸ್ಮಧಾರಣೆ ಮಾಡುವದು ಸರಿಯೇ ತಪ್ಪೇ ಎಂಬ ಚರ್ಚೆಯಲ್ಲಿ ತೊಡಗುವದಿಲ್ಲ. ಹಾಗೆಯೇ ಅದ್ವೈತಿಗಳು ತತ್ತ್ವವಾದವನ್ನು ಟೀಕಿಸುವಾಗ ಜೀವೇಶ್ವರ ಭೇದವನ್ನು ನಿರಾಕರಿಸುತ್ತಾರೆ ಹಾಗೂ ಜೀವೇಶ್ವರ ಅಭೇದವೇ ಸತ್ಯವೆಂದು ಹೇಳುತ್ತಾರೆ. ಆದರೆ ಮುದ್ರಾಧಾರಣೆಯ ಆಚರಣೆಯು ಸುಳ್ಳು ಆಚರಣೆ ಹಾಗೂ ಭಸ್ಮಧಾರಣೆಯೇ ಸತ್ಯವಾದ ಆಚರಣೆಯೆಂದು ಎಲ್ಲಿಯೂ ಹೇಳುವದಿಲ್ಲ. ಇದೇ ವ್ಯತ್ಯಾಸವನ್ನು ನಾವು ಅವೈದಿಕ ಸಂಪ್ರದಾಯಗಳಲ್ಲೂ ಕಾಣಬಹುದಾಗಿದೆ.

ಇದು ವಾದಗಳ ಕುರಿತ ಟೀಕೆಗಳಾದರೆ, ಆಚರಣೆಗಳನ್ನು ಟೀಕಿಸುವ ಪ್ರವೃತ್ತಿಯಂತೂ ಇನ್ನೂ ಗಮನಾರ್ಹವಾಗಿದೆ. ಸ್ವತಃ ಸನ್ಯಾಸಿಯಾಗಿ, ಕೇಸರಿ ವಸ್ತ್ರವನ್ನು ಧರಿಸಿಕೊಂಡ ಶಂಕರಾಚಾರ್ಯರು, ಅವರಿಂದಲೇ ಬರೆದಿದೆಯೆನ್ನಲಾದ ಮೋಹಮುದ್ಗರದಲ್ಲಿ ಹೊಟ್ಟೆಪಾಡಿಗಾಗಿ ಕೇಸರಿ ವಸ್ತ್ರವನ್ನು ಹೊದ್ದು ಸನ್ಯಾಸಿಯಂತೆ ನಾಟಕ ಮಾಡುತ್ತ ಒಳಗೆ ಕಾಮನೆಗಳನ್ನು ಕಾಪಿಟ್ಟುಕೊಳ್ಳುವ ಬದಲು ಗೋವಿಂದನನ್ನು ನೆನೆ ಎಂದು ಹೇಳುತ್ತಾರೆ. ಇಷ್ಟಲಿಂಗ ಧಾರಣೆಗೆ ಹೆಚ್ಚು ಮಹತ್ವ ನೀಡುವ ಬಸವಣ್ಣನವರ ವಚನಗಳಲ್ಲಿ ಮಾಂಸ ಹಾಗೂ ಮದ್ಯಕ್ಕೆ ಆಸೆ ಪಡುತ್ತ ಮೇಲೆ ಇಷ್ಟಲಿಂಗ ಧರಿಸಿದರೆ ಏನು ಪ್ರಯೋಜನ ಎಂದು ಕೇಳುತ್ತಾರೆ. ತಿಲಕ ಇಟ್ಟರೆ, ವಿಭೂತಿ ಬಳಿದರೆ, ಮುದ್ರೆ ಒತ್ತಿದ ಮಾತ್ರಕ್ಕೆ ಮೋಕ್ಷವು ಸಿಗದು ಎಂಬ ಅಂಶಗಳನ್ನು ಸಾರುವ ಜನಪದ ಹಾಗೂ ದಾಸರ ಹಾಡುಗಳು ನಮ್ಮ ಜನರಿಗೆ ಹಿಡಿಸುತ್ತವೆ. ಈ ರೀತಿಯ ವಾದಗಳನ್ನು ಎಲ್ಲರೂ ಒಪ್ಪುತ್ತಾರೆ.

ನಮ್ಮ ಪೂರ್ವಜರಿಗೆ ಇತರ ದರ್ಶನಗಳ ವಾದಗಳನ್ನು ಟೀಕಿಸುವಾಗ, ಅವರು ಒಪ್ಪಿಕೊಂಡ ಪ್ರಮಾಣಗಳನ್ನಾಧರಿಸಿದ ತರ್ಕವೇ ಪ್ರಧಾನವಾಗಿದ್ದರೆ, ಆಚರಣೆಗಳನ್ನು ಟೀಕಿಸುವಾಗ ಮಾತ್ರ ಆ ಆಚರಣೆಗಳ ಹಿಂದಿನ ಶ್ರದ್ಧೆಯ ಅಗತ್ಯತೆಯೇ ಪ್ರಧಾನವಾಗುತ್ತಿತ್ತು. ಹಾಗೆಯೇ ವಾದಗಳನ್ನು ಟೀಕಿಸುವಾಗ ಇತರ ದರ್ಶನಗಳ ವಾದಗಳೇ ಪ್ರಧಾನವಾಗಿದ್ದರೆ, ಶ್ರದ್ಧಾರಹಿತ ಆಚರಣೆಗಳನ್ನು ಟೀಕಿಸುವಾಗ ತಮ್ಮ ದರ್ಶನವು ಹೇಳುವ ಆಚರಣೆಗಳೇ ಪ್ರಧಾನವಾಗಿರುತ್ತಿದ್ದವು. ತನ್ನ ಸಂಪ್ರದಾಯಕ್ಕೆ ಸೇರಿದವನು ಇನ್ನೊಂದು ಸಂಪ್ರದಾಯದ ಆಚರಣೆಗಳನ್ನು ಅನುಸರಿಸಬಾರದೆಂಬ ಕಾರಣಕ್ಕಷ್ಟೇ ಉಳಿದ ಸಂಪ್ರದಾಯಗಳ ಆಚರಣೆಗಳ ಕುರಿತ ಟೀಕೆಗಳು ಸೀಮಿತವಾಗಿರುತ್ತಿದ್ದವು. ಹೀಗಾಗಿ ಎಲ್ಲಿಯೂ ಕೂಡ ತನ್ನ ಸಂಪ್ರದಾಯಗಳ ಆಚರಣೆಗಳೇ ಸತ್ಯ ಹಾಗೂ ಉಳಿದ ಸಂಪ್ರದಾಯದ ಆಚರಣೆಗಳು ಸುಳ್ಳು ಆಚರಣೆಗಳು ಎಂಬ ವಾದಗಳು ನಮ್ಮಲ್ಲಿ ಇರಲೇ ಇಲ್ಲ.

ಇದಕ್ಕೆ ಉದಾಹರಣೆಗಳನ್ನು ನೋಡಬಹುದು. ಒಬ್ಬ ಬ್ರಾಹ್ಮಣ ಜನಿವಾರ ಧರಿಸಿದ್ದರೆ, ಅದೇನೂ ಇತರರಿಗೆ ಇದೊಂದು ಸುಳ್ಳು ಆಚರಣೆ ಎನಿಸುವದಿಲ್ಲ. ಆದರೆ ಬ್ರಾಹ್ಮಣ ಜನಿವಾರ ಕಿತ್ತೊಗೆದರೆ, ಕೇವಲ ಬ್ರಾಹ್ಮಣರಷ್ಟೇ ಅಲ್ಲ, ಹಳ್ಳಿಯ ಉಳಿದ ಜನರೂ ಆತನನ್ನು ಗೌರವಿಸುವದಿಲ್ಲ. ಒಬ್ಬ ಬ್ರಾಹ್ಮಣ ಇಷ್ಟಲಿಂಗ ಹಾಕಿಕೊಂಡರೆ ಆತನ ಪರಿವಾರದವರು ಆತನನ್ನ ಬಹಿಷ್ಕರಿಸುತ್ತಾರೆ. ಆದರೆ ಹಾಗೆ ಮಾಡುವದು ಇಷ್ಟಲಿಂಗ ಧಾರಣೆ ಸುಳ್ಳು ಆಚರಣೆ ಎಂಬ ಕಾರಣಕ್ಕಲ್ಲ. ಬ್ರಾಹ್ಮಣನಾಗಿ ತನ್ನ ಆಚರಣೆ ಪಾಲಿಸದೇ ತನ್ನದಲ್ಲದ ಸಂಪ್ರದಾಯದ ಆಚರಣೆಯನ್ನು ಪಾಲಿಸಿದ್ದಷ್ಟೇ ಕಾರಣ. ಏಕೆಂದರೆ ಲಿಂಗಾಯತರು ಇಷ್ಟಲಿಂಗ ಧರಿಸುವದರ ಕುರಿತು ಇದೇ ಬ್ರಾಹ್ಮಣನ ಪರಿವಾರದವರಿಗೆ ಯಾವುದೇ ಆಕ್ಷೇಪವಿರುವದಿಲ್ಲ. ಆದ್ದರಿಂದ ಒಬ್ಬನು ತನ್ನ ಸಂಪ್ರದಾಯವನ್ನು ಎಷ್ಟರ ಮಟ್ಟಿಗೆ ಶ್ರದ್ಧೆಯಿಂದ ಅನುಸರಿಸುತ್ತಾನೆ ಎನ್ನುವದೇ ಆತ ಎಷ್ಟು ಸಂಪ್ರದಾಯಸ್ಥನಾಗಿದ್ದಾನೆ ಎನ್ನುವದಕ್ಕೆ ಮಾನದಂಡ.

ಈ ರೀತಿಯ ಟೀಕೆಗಳ ಪ್ರವೃತ್ತಿಯು ಇಂದು ತೀವ್ರವಾಗಿ ಕಡಿಮೆಯಾಗುತ್ತಿದೆ. ಈಗ ಬರುವ ಟೀಕೆಗಳು ಈ ಸೂಕ್ಷ್ಮ ಸ್ವರೂಪವನ್ನು ಕಳೆದುಕೊಂಡಿವೆ. ಬೇರೊಂದು ರೂಪವನ್ನು ಪಡೆದುಕೊಂಡಿವೆ. ಈಗ ಆಚರಣೆಗಳನ್ನು ಟೀಕಿಸುವದರ ಉದ್ದೇಶ ಆ ಆಚರಣೆಗಳಲ್ಲಿ ಶ್ರದ್ಧೆಯಿಡಬೇಡಿ ಎಂದು ತಿಳಿಸುವ ಕಾರಣಕ್ಕಲ್ಲ. ಬದಲಿಗೆ ಆ ಆಚರಣೆಯೇ ಸುಳ್ಳು ಆಚರಣೆಯಾದ್ದರಿಂದ ಅದನ್ನು ಯಾರೂ ಪಾಲಿಸಕೂಡದು ಎನ್ನುವ ಅರ್ಥದಲ್ಲಿಯೇ ಆಚರಣೆಗಳನ್ನು ಟೀಕಿಸಲಾಗುತ್ತದೆ. ಹಿಂದೆ, ಭಕ್ತಿಯೇ ಇಲ್ಲದೇ ಕೇವಲ ಮಡಿಯನ್ನು ಪಾಲಿಸುವದನ್ನಷ್ಟೇ ಟೀಕಿಸಲಾಗುತ್ತಿತ್ತು. ಅಂದರೆ ಭಕ್ತಿಯುಕ್ತವಾದ ಮಡಿಯು ಸ್ವೀಕಾರಾರ್ಹವಾಗಿತ್ತು. ಈಗ ಭಕ್ತಿಯ ಸಂದರ್ಭವೇ ಮಾಯವಾಗಿದ್ದು, ಮಡಿಯೆಂಬ ಆಚರಣೆಯೇ ತಪ್ಪೆಂದು ಭಾವಿಸಿ ಅದನ್ನು ತ್ಯಜಿಸಬೇಕೆಂಬ ಉದ್ದೇಶದಿಂದ ಎಲ್ಲರೂ ಟೀಕಿಸುತ್ತಾರೆ.

ಮುಂದುವರೆಯುವುದು…..

ಚಿತ್ರ ಕೃಪೆ : http://www.exoticindiaart.com

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೨ )

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )

6 ಟಿಪ್ಪಣಿಗಳು Post a comment
  1. Sureshkumar M.R
    ಫೆಬ್ರ 18 2017

    ಉತ್ತಮ ಲೇಖನ.

    ಉತ್ತರ
  2. ಶೆಟ್ಟಿನಾಗ ಶೇ.
    ಫೆಬ್ರ 18 2017

    ಪೋಸ್ಟ್ ಟ್ರೂಥ್!

    ಉತ್ತರ
  3. UNIVERSAL
    ಫೆಬ್ರ 18 2017

    ಇವೆಲ್ಲವೂ ನನಗೆ ಅರ್ಥವಾಗದ, ಬೇಕಿಲ್ಲದ, ನಿರುಪಯೋಗೀ ವಿಷಯಗಳು.

    ಉತ್ತರ
    • ಶೆಟ್ಟಿನಾಗ ಶೇ.
      ಫೆಬ್ರ 18 2017

      ಸಾರ್ ಹೇಮಾಪತಿ, ತಮಗೆ ಅರ್ಥವಾಗುವ ಬೇಕಿರುವ ಉಪಯೋಗೀ ವಿಷಯವೇನೆಂದರೆ ತಾವು ಪ್ರತಿ ತಿಂಗಳು ಪಡೆಯುವ ಪೆನ್ಶನ್. ಅದೊಂದು ಬರುತ್ತಿದ್ದರೆ ಅರ್ಥವಾಗಲಿ ಆಗದಿರಲಿ ಬೇಕಿರಲಿ ಬೇಡದಿರಲಿ ಉಪಯೋಗೀ ಅನುಪಯೋಗೀ ಇರಲಿ ಜೀವನ ಸುಖವಾಗಿ ಸುಭದ್ರವಾಗಿ ನಡೆಯುತ್ತಿರುತ್ತದೆ. ಅಲ್ಲವೇ?

      ಉತ್ತರ

Trackbacks & Pingbacks

  1. ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೨ ) | ನಿಲುಮೆ
  2. ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ ) | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments