ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 19, 2017

3

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೨ )

‍ನಿಲುಮೆ ಮೂಲಕ

–  ವಿನಾಯಕ ವಿಶ್ವನಾಥ ಹಂಪಿಹೊಳಿ

periclesಟೀಕೆಗಳ ಸ್ವರೂಪದಲ್ಲಿ ಆಗಿರುವ ಬದಲಾವಣೆಯನ್ನು ಅರಿಯಬೇಕಾದರೆ ಪಾಶ್ಚಿಮಾತ್ಯರಲ್ಲಿ ಕ್ರಿಶ್ಚಿಯಾನಿಟಿಯಿಂದ ಆರಂಭವಾದ ಹೊಸ ಟೀಕೆಯ ಪ್ರಕಾರವನ್ನು ನಾವಿಲ್ಲಿ ಗಮನಿಸಬೇಕು. ಕ್ರಿಶ್ಚಿಯಾನಿಟಿಯು ಪ್ರಸಾರವಾಗುವಾಗ ಅದರ ನಂಬಿಕೆಗಳು ಯಹೂದಿ ಹಾಗೂ ಗ್ರೀಕರಿಂದ ವ್ಯಾಪಕ ಟೀಕೆಗೊಳಗಾದವು. ಹಳೆ ಒಡಂಬಡಿಕೆಯಲ್ಲಿ ಗಾಡ್ ಮಸೀಹನ ಕುರಿತು ನೀಡಿರುವ ಭರವಸೆಯನ್ನು ಜೀಸಸ್ ನೆರವೇರಿಸಿರುವದರಿಂದ ಯಹೂದಿಗಳು ಜೀಸಸ್ ನ ಪ್ರಾಫಸಿಯನ್ನು ಒಪ್ಪಿ ಕ್ರಿಶ್ಚಿಯನ್ನರಾಗಬೇಕೆಂಬ ವಾದವನ್ನು ಯಹೂದಿಗಳು ಸ್ಪಷ್ಟವಾಗಿ ನಿರಾಕರಿಸಿದರು. ಹಳೇ ಒಡಂಬಡಿಕೆಯ ಕತೆಗಳೇ ಮಾನವನ ನಿಜವಾದ ಚರಿತ್ರೆಯಾಗಿರುವದರಿಂದ ಉಳಿದೆಲ್ಲ ಗತಕಾಲದ ಕತೆಗಳು ಇವಿಲ್ ನಿಂದ ಪ್ರಭಾವಿತವಾಗಿದ್ದು, ಗ್ರೀಕರು ಅವುಗಳನ್ನು ತ್ಯಜಿಸಿ ಕ್ರಿಶ್ಚಿಯಾನಿಟಿಯನ್ನು ಸ್ವೀಕರಿಸಬೇಕು ಎಂಬ ವಾದವನ್ನು ಗ್ರೀಕರು ನಿರಾಕರಿಸಿದರು.

ಗ್ರೀಕರ ವಾದಗಳನ್ನು ಎದುರಿಸಲು ಹಾಗೂ ಅವರ ನಂಬಿಕೆಗಳನ್ನು ಟೀಕಿಸಲು ಕ್ರಿಶ್ಚಿಯಾನಿಟಿಯು ಹೊಸದೊಂದು ಮಾರ್ಗವನ್ನು ಅನುಸರಿಸುವ ಅನಿವಾರ್ಯತೆಗೆ ಸಿಲುಕಿತು. ಉದಾಹರಣೆಗೆ, ಗ್ರೀಕರು ಕ್ರಿಶ್ಚಿಯನ್ನರ ನಂಬಿಕೆಗಳಿಗೆ ಪ್ರಾಚೀನತೆಯಿಲ್ಲವಾದ್ದರಿಂದ ಅವುಗಳನ್ನು ಒಪ್ಪಲು ಸಾಧ್ಯವಿಲ್ಲವೆಂದು ವಾದಿಸಿದರು. ಈ ಹಿಂದೆ ಯಹೂದಿಗಳು ಗ್ರೀಕರ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅದಕ್ಕೆ ಯಹೂದಿಗಳ ಬಳಿ ಅವರದೇ ಆದ ಉತ್ತರವೊಂದಿತ್ತು. ಮೋಸಸ್ ಕತೆಯನ್ನು ಆಧಾರವಾಗಿಟ್ಟುಕೊಂಡು ಯಹೂದಿಗಳು ನಾವು ಒಂದೇ ಗಾಡ್ ನನ್ನು ಪೂಜಿಸುತ್ತೇವೆಂದು ಅವರು ವಾದಿಸುತ್ತಿದ್ದರು. ಇದು ಗ್ರೀಕರಿಗೆ ವಿಚಿತ್ರವಾಗಿ ಕಂಡಿದ್ದರೂ, ಗ್ರೀಕರಿಗೆ ಬೇಕಾಗಿದ್ದ ಆ ನಂಬಿಕೆಯ ಪ್ರಾಚೀನತೆಯನ್ನು ಒದಗಿಸುವಲ್ಲಿ ಯಹೂದಿಗಳು ಸಫಲರಾಗಿದ್ದರು. ಆದರೆ ಕ್ರಿಶ್ಚಿಯನ್ ನಂಬಿಕೆಗಳಿಗೆ ಪ್ರಾಚೀನತೆಯನ್ನು ಒದಗಿಸುವದು ಕ್ರಿಶ್ಚಿಯನ್ನರಿಗೆ ಸಾಧ್ಯವಿರಲಿಲ್ಲ.

ಹೀಗಾಗಿ ಕ್ರಿಶ್ಚಿಯಾನಿಟಿಯು ಗ್ರೀಕರ ಪ್ರಶ್ನೆಯನ್ನು ರೂಪಾಂತರಿಸುವ ಪ್ರಯತ್ನದಲ್ಲಿ ತೊಡಗಿತು. ಕ್ರಿಶ್ಚಿಯಾನಿಟಿಯು ಗ್ರೀಕರಿಗೆ ನಿಮ್ಮ ಸಂಪ್ರದಾಯವು ಹಾಗೂ ಅದರ ಆಚರಣೆಗಳು ಸತ್ಯವೇ, ಇವು ಗಾಡ್ ನಿಂದ ಬಂದವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿತು. ಹಾಗೆಯೇ, ಕ್ರಿಶ್ಚಿಯನ್ ನಂಬಿಕೆಗಳಿಗೆ ಸರಿಹೊಂದುವ ಗ್ರೀಕರ ಆಚರಣೆಗಳು ಗಾಡ್ ನಿಂದ ಬಂದ ಆಚರಣೆಗಳ ಕುರುಹು ಹಾಗೂ ಉಳಿದವು ಇವಿಲ್ ನಿಂದ ಸೃಷ್ಟಿಸಲ್ಪಟ್ಟವು ಎಂಬ ವಿವರಣೆಯನ್ನು ನೀಡಿತು. ಹೀಗೆ ತಾವು ಒಂದು ಪ್ರಾಚೀನ ಸಂಪ್ರದಾಯ ಹಾಗೂ ಆಚರಣೆಗಳಿಗೆ ಎಷ್ಟು ನಿಷ್ಠರಾಗಿದ್ದೇವೆಯೆಂದು ಸಾಧಿಸುವ ಬದಲು, ನಮ್ಮ ನಂಬಿಕೆಯು ಪ್ರಾಚೀನವಾಗಿರುವದರಿಂದ ಅದೇ ಸತ್ಯವಾಗಿದ್ದು ಅದಕ್ಕೆ ಸರಿಹೊಂದದ ಆಚರಣೆ ಹಾಗೂ ನಂಬಿಕೆಗಳನ್ನು ಸುಳ್ಳೆಂದು ವಾದಿಸಿತು ಹಾಗೂ ಇವುಗಳನ್ನು ಇಡಿಯಾಗಿ ತಿರಸ್ಕರಿಸಬೇಕೆಂದು ಸಾರಿತು. ಹೀಗೆ ನಂಬಿಕೆಗಳ ಮೂಲಕ ಆಚರಣೆಗಳನ್ನು ಟೀಕಿಸಲಾರಂಭಿಸಿತು.

ಈ ರೀತಿಯ ಟೀಕೆಗಳ ಸ್ವರೂಪವೇನೆಂದು ನೋಡೋಣ. ನಮ್ಮಲ್ಲಿ ಬೆಳೆದ ನ್ಯಾಯಶಾಸ್ತ್ರಗಳು ಹೇಳುವಂತೆ ಕಾರ್ಯವೊಂದಕ್ಕೆ ಎರಡು ಕಾರಣಗಳಿರುತ್ತವೆ. ಯಾವುದರ ಪರಿಣಾಮವೇ ಕಾರ್ಯವೋ ಅದು ಉಪಾದಾನ ಕಾರಣ. ಹಾಗೂ ಯಾವುದರಿಂದ ಆ ಕಾರ್ಯವು ಸಂಭವಿಸುತ್ತದೋ ಅದು ನೈಮಿತ್ತಿಕ ಕಾರಣ. ಉದಾಹರಣೆಗೆ ಮಡಕೆ ಎಂಬ ಕಾರ್ಯಕ್ಕೆ ಮಣ್ಣು ಉಪಾದಾನ ಕಾರಣವಾದರೆ, ಕುಂಬಾರ ನೈಮಿತ್ತಿಕ ಕಾರಣವಾಗಿರುತ್ತಾನೆ. ಈ ಉದಾಹರಣೆಯನ್ನಿಟ್ಟುಕೊಂಡು ಈ ಜಗತ್ತೆಂಬ ಕಾರ್ಯಕ್ಕೆ ಯಾವದು ಉಪಾದಾನ ಕಾರಣ ಹಾಗೂ ನೈಮಿತ್ತಿಕ ಕಾರಣ ಎನ್ನುವ ಚರ್ಚೆ ನಮ್ಮಲ್ಲಿ ಅನೇಕ ಚರ್ಚೆಗಳು ನಡೆದಿವೆ. ಈಗ ಆ ಚರ್ಚೆ ಇಲ್ಲಿ ಮುಖ್ಯವಲ್ಲ. ಇದನ್ನಿಟ್ಟುಕೊಂಡು ನಾವು ರಿಲಿಜನ್ನಿನ ವಾದಗಳ ಸ್ವರೂಪವನ್ನು ಅರ್ಥೈಸೋಣ.

ಮಡಕೆಗೆ ಮಣ್ಣೆಂಬುದು ಉಪಾದಾನ ಕಾರಣವಷ್ಟೇ. ಸದ್ಯಕ್ಕೆ ಇದನ್ನು ಕಾರಣ ಎಂದಷ್ಟೇ ಅನ್ನೋಣ. ಹಾಗೆಯೇ ಕುಂಬಾರ ಮಡಕೆಯನ್ನು ಮಾಡುವಾಗ ಒಂದು ಉದ್ದೇಶವನ್ನು ಇಟ್ಟುಕೊಂಡಿರುತ್ತಾನಷ್ಟೇ! ಅದನ್ನು ಬಳಸಲೆಂದೋ ಅಥವಾ ಮಾರಲೆಂದೋ ಹೀಗೆ ಉದ್ದೇಶವೊಂದಕ್ಕಾಗಿ ಮಡಕೆಯನ್ನು ನಿರ್ಮಿಸಿರುತ್ತಾನೆ. ಈ ಉದ್ದೇಶವನ್ನು ಸದ್ಯಕ್ಕೆ ಹೇತು ಎನ್ನೋಣ. ಒಂದು ಕಾರ್ಯದ ಕಾರಣ ಹಾಗೂ ಹೇತುಗಳಿಗೆ ಯಾವ ಸಂಬಂಧವೂ ಇರಬೇಕಿಲ್ಲ. ಆದರೆ “ರಿಲಿಜನ್ ಎನ್ನುವದು ಬ್ರಹ್ಮಾಂಡ ಹಾಗೂ ಆ ರಿಲಿಜನ್ನಿನ ಕಾರಣ ಹಾಗೂ ಹೇತುವನ್ನು ಏಕೀಕರಿಸುವ ವಿವರಣಾತ್ಮಕ ಗ್ರಹಿಕೆ” ಎಂದು ಬಾಲಗಂಗಾಧರರು ತಮ್ಮ ಊಹಾಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ. ಹೀಗೆ ಏಕೀಕರಿಸುವ ಪ್ರಕ್ರಿಯೆಯಲ್ಲಿ ರಿಲಿಜನ್ನು ನಂಬಿಕೆ ಹಾಗೂ ಆಚರಣೆಗಳಿಗೆ ಸಂಬಂಧವನ್ನು ಕಲ್ಪಿಸುತ್ತದೆ ಹಾಗೂ ರಿಲಿಜನ್ ಇಲ್ಲದ ಸಂಸ್ಕೃತಿಗಳಿಗಿಂತ ಭಿನ್ನವಾಗಿ ರೂಪುಗೊಳ್ಳುತ್ತದೆ ಎಂದು ಅವರು ಸಾಧಿಸುತ್ತಾರೆ.

ಮೇಲಿನ ಮಡಕೆಯ ಉದಾಹರಣೆಯನ್ನು ಇಟ್ಟುಕೊಂಡೇ ರಿಲಿಜನ್ನನ್ನು ಅರ್ಥೈಸಲು ಪ್ರಯತ್ನಿಸೋಣ. ಉದಾಹರಣೆಗೆ ನೀವು ದೇವರನ್ನು ನಂಬುವ ಒಬ್ಬ ಕುಂಬಾರನ ಬಳಿ ಹೋಗಿ, “ನೀನು ಮಡಕೆಗೆ ಉಪಯೋಗಿಸುವ ಮಣ್ಣನ್ನು ದೇವರು ಸೃಷ್ಟಿಸಿದ್ದಾನೆ” ಎಂದರೆ ಅದನ್ನು ಆತ ಒಪ್ಪುತ್ತಾನೆ. ನಂತರ ಆತನಿಗೆ “ನೀನು ನಿನ್ನ ಜೀವನೋಪಾಯಕ್ಕಾಗಿ ಮಡಕೆ ಮಾಡುತ್ತೀಯಲ್ಲವೇ?” ಎಂದು ಕೇಳಿದರೆ ಹೌದೆಂದು ತಲೆಯಾಡಿಸುತ್ತಾನೆ. ಇಲ್ಲಿ ಕಾರ್ಯವೊಂದರ ಕಾರಣ ಹಾಗೂ ಹೇತುಗಳು ಸ್ಪಷ್ಟವಾದವು. ಈಗ ನೀವು ಆತನಿಗೆ “ದೇವರ ಒಂದು ಮಹತ್ತರ ಯೋಜನೆಯ ಭಾಗವಾಗಿ ಮಣ್ಣಿನ ಸೃಷ್ಟಿಯಾಗಿದೆ ಹಾಗೂ ನೀನು ಮಡಕೆ ಮಾಡುವದೂ ಅದೇ ಯೋಜನೆಯ ಭಾಗವಾಗಿದೆ. ಆದ್ದರಿಂದ ನೀನು ಹೆಚ್ಚು ಹೆಚ್ಚು ಮಡಕೆಯ ನಿರ್ಮಾಣದಲ್ಲಿ ತೊಡಗಿಕೊಂಡು ನಿನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವವನಾಗು.” ಎಂದರೆ ಆತನಿಗೆ ಅರ್ಥವಾಗುತ್ತದೆಯೇ?

ಈಗ ನೀವು ಹೇಳುವ ವಾದವು ಆತನಿಗೆ ಅರ್ಥವಾಗುವದಿಲ್ಲ. ಏಕೆಂದರೆ ಆತ ಕಾರಣ ಹಾಗೂ ಹೇತುಗಳನ್ನು ಏಕೀಕರಿಸಿ ವಿವರಿಸಿಕೊಳ್ಳುವ ಅನುಭವವನ್ನು ಪಡೆದಿರುವದಿಲ್ಲ. ಆದರೆ ರಿಲಿಜನ್ನಿನ ಪರಿಧಿಯಲ್ಲಿ ಬೆಳೆಯುವವನು ಈ ವಿವರಣೆಯನ್ನೇ ಅನುಭವಿಸುತ್ತ ಬೆಳೆಯುತ್ತಾನೆ. ರಿಲಿಜನ್ನು ಬ್ರಹ್ಮಾಂಡವನ್ನು ಹಾಗೂ ತನ್ನನ್ನು ಮೇಲೆ ಹೇಳಿದಂತೆ ಕಾರಣ ಹಾಗೂ ಹೇತುಗಳನ್ನು ಏಕೀಕರಿಸಿ ವಿವರಿಸಲು ಯತ್ನಿಸುತ್ತದೆ. ಈ ಬ್ರಹ್ಮಾಂಡವು ಗಾಡ್ ನ ವಿಶೇಷ ಯೋಜನೆಯ ಅಭಿವ್ಯಕ್ತಿಯೆಂದು ಕರೆಯುತ್ತದೆ. ಈ ಬ್ರಹ್ಮಾಂಡವನ್ನು ಸೃಷ್ಟಿಸಿರುವದರ ಹಿಂದಿನ ಉದ್ದೇಶವನ್ನು ಗಾಡ್ ಪ್ರವಾದಿಗಳ ಮೂಲಕ ಮಾನವ ಸಮುದಾಯಗಳಿಗೆ ಪ್ರಕಟಪಡಿಸಿರುತ್ತಾನೆ ಎಂದು ರಿಲಿಜನ್ನುಗಳು ಕಲಿಸುತ್ತವೆ.

ಆದ್ದರಿಂದ ಆ ಉದ್ದೇಶವನ್ನು ಅರಿತುಕೊಂಡು ಆ ಉದ್ದೇಶವನ್ನು ಸಾರುವ ಪವಿತ್ರಗ್ರಂಥಗಳ ಅನುಷ್ಠಾನವಾಗಿ ರಿಲಿಜನ್ನಿನ ಜನರು ತಮ್ಮ ಆಚರಣೆಗಳನ್ನು ರೂಪಿಸಿಕೊಳ್ಳಬೇಕು. ಅಂತಹ ಗ್ರಂಥಗಳಿಗೆ ವಿರುದ್ಧವಾಗಿರುವ ಆಚರಣೆಗಳನ್ನು ಹಾಗೂ ನಂಬಿಕೆಗಳನ್ನು ತಿರಸ್ಕರಿಸಬೇಕು. ಇದು ನಂಬಿಕೆ ಹಾಗೂ ಆಚರಣೆಗಳನ್ನು ಏಕೀಕರಿಸಿ ವಿವರಿಸುವದು ಅನಿವಾರ್ಯವಾಗಿಸುತ್ತದೆ. ಈ ವಿವರಣೆಯು ರಿಲಿಜನ್ನಿನ ಜನರಿಗೆ ಆಚರಣೆಗಳನ್ನು ನಂಬಿಕೆಯ ಅನುಷ್ಠಾನವಾಗಿ ವ್ಯಾಖ್ಯಾನಿಸಿ ಅರ್ಥೈಸಿಕೊಳ್ಳುವ ವಿಧಾನವನ್ನು ಕಲಿಸುತ್ತದೆ. ರಿಲಿಜನ್ನಿನ ವಲಯದ ಹೊರಗೂ ಈ ವಿಧಾನವು ಪ್ರಭಾವವನ್ನು ಬೀರುತ್ತದೆ. ಈ ಸ್ವರೂಪವನ್ನು ಅನುಸರಿಸಿಯೇ ರಿಲಿಜನ್ನಿನ ಜನರು ಹಾಗೂ ವಿಚಾರವಂತರು ಬೇರೆ ಸಮುದಾಯದ ಆಚರಣೆಗಳನ್ನು ಸತ್ಯ ನಂಬಿಕೆಗಳ ಉಲ್ಲಂಘನೆಯಾಗಿಯೋ ಇಲ್ಲವೇ ಸುಳ್ಳು ನಂಬಿಕೆಗಳ ಅನುಷ್ಠಾನವೆಂದು ವ್ಯಾಖ್ಯಾನಿಸಿ ಟೀಕಿಸುತ್ತ ಹಾಗೂ ವಿಮರ್ಶಿಸುತ್ತ ಬಂದಿದ್ದಾರೆ.

ಪ್ರೊಟೆಸ್ಟಂಟ್ ಚಳುವಳಿಯ ನಂತರ ಅದರ ಥಿಯಾಲಜಿಯ ಪರಿಕಲ್ಪನೆಗಳು ಪಶ್ಚಿಮದ ಸಮಾಜಗಳಲ್ಲಿ ಉದಯಿಸಿದ ಲಿಬರಲ್ ಸೆಕ್ಯುಲರಿಸಂನಂತಹ ಐಡಿಯಾಲಜಿಗಳ ತತ್ತ್ವಗಳ ಮೇಲೆ ಮೇಲೆ ಗಾಢ ಪ್ರಭಾವವನ್ನು ಬೀರಿದವು. ಗಾಡ್ ನ ಆಶಯವನ್ನು ತಿಳಿಸುವ ಪವಿತ್ರಗ್ರಂಥಕ್ಕೆ ಪರ್ಯಾಯವಾಗಿ, ಸಮಾಜದ ಜನರ ಆಶಯವನ್ನು ತಿಳಿಸುವ ಸಂವಿಧಾನವು ಅಸ್ತಿತ್ವಕ್ಕೆ ಬಂದಿತು. ಪ್ರತಿಯೋರ್ವನೂ ಗಾಡ್ ನಿಂದ ಪ್ರಭಾವಿತನಾಗಲು ಮುಕ್ತನಾಗಿರುವ ಪರಿಕಲ್ಪನೆಗೆ ಪರ್ಯಾಯವಾಗಿ, ಪ್ರತಿಯೋರ್ವನೂ ತನ್ನ ಆಶಯಗಳಿಂದ ಪ್ರಭಾವಿತನಾಗಲು ಮುಕ್ತತೆಯನ್ನು ನೀಡುವ ಸ್ವಾತಂತ್ರ್ಯದ ಪರಿಕಲ್ಪನೆಯು ಬಂದಿತು. ಗಾಡ್ ನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ಪರಿಕಲ್ಪನೆಗೆ ಪರ್ಯಾಯವಾಗಿ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ಸಮಾನತೆಯ ಪರಿಕಲ್ಪನೆಯೂ ಬಂದಿತು.

ಪಾಶ್ಚಿಮಾತ್ಯರು ಇಲ್ಲಿ ಬಂದು ನಮ್ಮ ಸಮಾಜವನ್ನು ಅಧ್ಯಯನ ಮಾಡಲು ಆರಂಭಿಸಿದರು. ಮೇಲೆ ಹೇಳಿದ ವಿವರಣೆಯ ಹಿನ್ನೆಲೆಯಲ್ಲಿಯೇ ನಮ್ಮ ಸಮಾಜದ ಸಂಪ್ರದಾಯಗಳನ್ನು, ನಂಬಿಕೆಗಳನ್ನು ಹಾಗೂ ಆಚರಣೆಗಳನ್ನು ಅರ್ಥೈಸಲು ಯತ್ನಿಸಿದರು. ಆದರೆ ಒಬ್ಬ ಸಂಪ್ರದಾಯಸ್ಥನ ನಂಬಿಕೆ ಹಾಗೂ ಆಚರಣೆಗಳನ್ನು ದೇವನ ಉದ್ದೇಶವೊಂದರ ಅನುಷ್ಠಾನವಾಗಿ ವಿವರಿಸುವ ವಿವರಣೆಯನ್ನು ಪಡೆಯಲು ಪ್ರತಿಯೊಬ್ಬರೂ ಸೋತರು. ಹೀಗಾಗಿ ಸಮಾಜದ ಬಹುತೇಕ ಆಚರಣೆಗಳು ವರ್ಜ್ಯವಾಗಿ ಕಂಡವು. ಹಾಗೆಯೇ ಸಮಾಜ ಸುಧಾರಕರು ಲಿಬರಲ್ ಸೆಕ್ಯುಲರಿಸಂನ ಬೆಳಕಿನಲ್ಲಿ ಇಲ್ಲಿನ ಆಚರಣೆ ಹಾಗೂ ನಂಬಿಕೆಗಳನ್ನು ವಿಶ್ಲೇಷಿಸಿದರು. ಆ ನಾರ್ಮಗಳಿಗೆ ಸರಿಹೊಂದುವ ಆಚರಣೆಗಳಿಗಿಂತ, ಸರಿಹೊಂದದ ಆಚರಣೆಗಳೇ ಅತಿಯಾಗಿ ಕಂಡು ಬಂದವು. ಈ ಎರಡೂ ಕಾರಣಗಳಿಂದ ನಮ್ಮ ಸಮಾಜವು ವಿದೇಶೀ ಅಧ್ಯಯನಕಾರರಿಗೆ ಅನೈತಿಕವಾಗಿಯೇ ಕಂಡಿತು.

ಒಂದು ಅನೈತಿಕ ಸಮಾಜವು ಹೆಚ್ಚು ವರ್ಷಗಳ ಕಾಲ ಅಸ್ತಿತ್ವವನ್ನು ಉಳಿಸಿಕೊಳ್ಳಲಾರದು. ಉದಾಹರಣೆಗೆ ಒಂದು ಸಮಾಜದಲ್ಲಿ ಕಳ್ಳತನ ಹಾಗೂ ಕೊಲೆಗಳಿಗೆ ಮುಕ್ತ ಅನುಮತಿಯಿದೆ ಎಂದು ಭಾವಿಸಿ. ಆಗ ಸಹಜವಾಗಿಯೇ ಆ ಸಮಾಜದ ಜನರು ತಮ್ಮಲ್ಲೇ ದೋಚಿಕೊಂಡು ಹೊಡೆದಾಡಿಕೊಂಡು ವಿನಾಶದತ್ತ ಸಾಗುತ್ತಾರೆ. ಆದರೆ ಭಾರತೀಯ ಸಮಾಜವು ಹಾಗೆ ನಾಶವಾಗಿಲ್ಲ. ಅದಕ್ಕೆ ವಿಪರೀತವಾಗಿ, ವಿದೇಶೀ ಆಕ್ರಮಣಗಳನ್ನೆಲ್ಲ ಸಹಿಸಿಕೊಂಡು, ಅವರನ್ನೂ ಪ್ರೀತಿಯಿಂದ ಒಳಗೊಂಡು ಭಾರತೀಯ ಸಮಾಜವು ಬೆಳೆಯುತ್ತಲೇ ಬಂದಿದೆ. ಹೀಗಾಗಿ ಭಾರತೀಯ ಸಮಾಜವು ಅನೈತಿಕತೆಯ ಗೂಡು ಎನ್ನುವದು ತಾರ್ಕಿಕವಾಗಿ ತಪ್ಪಾಗುತ್ತದೆ. ಆದ್ದರಿಂದ ಭಾರತದ ಸಮಾಜವು ಅನೈತಿಕ ಸಮಾಜವೆಂದು ಯಾರೂ ಭಾವಿಸಬಾರದಿತ್ತು.

ಆದರೆ ಪ್ರಾಚೀನ ಯುರೋಪಿನ ಇಂಡಾಲಜಿಸ್ಟರಿಂದ ಹಿಡಿದು ಈಗಿನ ಅಮೇರಿಕನ್ ಇಂಡಾಲಜಿಸ್ಟರ ತನಕ ಎಲ್ಲರೂ ಭಾರತ ಹಾಗೂ ಉಳಿದ ದಕ್ಷಿಣ ಏಷ್ಯಾದ ಸಂಸ್ಕೃತಿಗಳನ್ನು ಸಂಪೂರ್ಣ ನೈತಿಕವಾದ ಸಂಸ್ಕೃತಿಗಳೆಂದು ಒಪ್ಪಲು ಹಿಂಜರಿಯುತ್ತಾರೆ. ಭಾರತವು ಮೂರು ಸಾವಿರ ವರ್ಷಗಳಿಂದಲೂ ಅನೈತಿಕ ಸಮಾಜವೊಂದನ್ನು ಹೊಂದಿದೆ ಎಂಬ ನಿರ್ಣಯಕ್ಕೇ ಬರುತ್ತಾರೆ. ರಾಮಾಯಣ ಹಾಗೂ ಮಹಾಭಾರತಗಳು ಶೋಷಣೆಗಾಗಿಯೇ ಹುಟ್ಟಿದ್ದು ಎಂದು ವಾದಿಸುತ್ತಾರೆ. ಇದಕ್ಕೆ ಕಾರಣ ಒಂದೋ ನಮ್ಮನ್ನು ಕಲಿಯಲು ಬಂದ ಎಲ್ಲ ವಿದೇಶೀಯರೂ ನಮ್ಮನ್ನು ಅನೈತಿಕರು ಎಂದು ತೋರಿಸಲೆಂದೇ ಬಂದಿರಬೇಕು ಇಲ್ಲವೇ ನಾವು ನಿಜವಾಗಿಯೂ ಅನೈತಿಕರಾಗಿರಬೇಕು. ಆದರೆ ಎರಡು ಸಾಧ್ಯತೆಗಳಲ್ಲಿ ಯಾವದೊಂದೂ ಸತ್ಯವಲ್ಲ. ಮೊದಲನೇ ಸಾಧ್ಯತೆ ಅಧ್ಯಯನಕಾರರ ಅನುಭವವಲ್ಲ ಹಾಗೂ ಎರಡನೇ ಸಾಧ್ಯತೆ ನಮ್ಮ ಅನುಭವವಲ್ಲ.

ಇದಿಷ್ಟು ಪಾಯವನ್ನು ಹಾಕಿಕೊಂಡ ನಂತರ, ಈಗ ನಮ್ಮ ವಿಮರ್ಶೆ ಹಾಗೂ ಟೀಕೆಗಳನ್ನು ಮಾಡುವ ಹಾಗೂ ಸ್ವೀಕರಿಸುವ ಪದ್ಧತಿಯಲ್ಲಿ ಆಗಿರುವ ಬದಲಾವಣೆ ಹಾಗೂ ತಿದ್ದಿಕೊಳ್ಳಬೇಕಾದ ಕ್ರಮಗಳನ್ನು ಸರಳವಾಗಿ ಕಂಡುಕೊಳ್ಳುತ್ತ ಹೋಗಬಹುದು. ನಾವು ಚಿಕ್ಕವರಿದ್ದಾಗ, ಅಮ್ಮ ಹೇಳುತ್ತಿದ್ದ ರಾಮಾಯಣ ಭಾರತ ಕತೆಗಳನ್ನು ಕೇಳಿ “ಇವೆಲ್ಲ ನಡೆದಿದ್ದು ನಿಜಾನಾ?” ಅಂತಾ ಕೇಳಿದರೆ, ಆ ಪ್ರಶ್ನೆಯನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಯಾವನಾದರೂ ನಾಸ್ತಿಕನೊಬ್ಬ “ರಾಮಾಯಣಗಳೆಲ್ಲ ನಿಜವಾಗಿ ನಡೆದ ಕತೆಗಳಲ್ಲ” ಎಂದು ಹೇಳಿದರೆ ಆ ಕಾರಣಕ್ಕಾಗಿ ಅವನ ಮೇಲೆ ಜನರು ಹಲ್ಲೆ ಮಾಡುತ್ತಿರಲಿಲ್ಲ. ಅವನನ್ನು ವಿರೋಧಿಸುವದೇ ಬೇಕಾಗಿದ್ದರೆ, ಆತ ಮಾಡಿದ್ದ ತಪ್ಪೊಂದನ್ನು ಇಟ್ಟುಕೊಂಡು, “ಪುರಾಣ ಕತೆಗಳಲ್ಲಿ ನೀನು ಶ್ರದ್ಧೆಯಿಟ್ಟಿದ್ದರೆ ಆ ತಪ್ಪು ಮಾಡುತ್ತಿರಲಿಲ್ಲ.” ಎಂದು ಪ್ರತ್ಯುತ್ತರ ನೀಡುತ್ತಿದ್ದರು. ಇದು ಆಗ ಟೀಕೆಯನ್ನು ಎದುರಿಸುವ ಸರಿಯಾದ ಕ್ರಮವಾಗಿತ್ತು.

ಆದರೆ ವಸಾಹತುಕಾಲದ ನಂತರ ಟೀಕೆಗಳನ್ನು ಮಾಡುವ ಹಾಗೂ ಟೀಕೆಗಳನ್ನು ಸ್ವೀಕರಿಸುವ ಪದ್ಧತಿಯು ತನ್ನ ಮೂಲರೂಪ ಕಳೆದುಕೊಂಡು ರಿಲಿಜನ್ನಿನ ಸ್ವರೂಪವನ್ನು ಪಡೆದುಕೊಳ್ಳುತ್ತ ಹೋಯಿತು. ಪುರಾಣದ ಕತೆಗಳನ್ನು ವಿರೋಧಿಸುವವರು “ರಾಮಾಯಣದಂತಹ ಕತೆಗಳನ್ನು ಪುರೋಹಿತರು, ಬ್ರಾಹ್ಮಣರು ಉಳಿದವರನ್ನು ಶೋಷಿಸಲು ಕಟ್ಟಿಕೊಂಡಿದ್ದಾರೆ.” ಎಂದರು. ಅಂದರೆ ಅವರು ಈ ಕತೆಗಳನ್ನು ಹಾಗೂ ಇದನ್ನು ಆಧರಿಸಿದ ಆಚರಣೆಗಳನ್ನು ಪುರೋಹಿತಶಾಹಿಯ ಹುನ್ನಾರದ ಅನುಷ್ಠಾನವಾಗಿ ನೋಡಿದರು.  ಈ ಕತೆಗಳ ಪರವಾಗಿರುವವರು “ಇವುಗಳು ನಿಜವಾಗಿಯೂ ನಡೆದ ಘಟನೆಗಳೇ ಹೊರತು ಕಪೋಲಕಲ್ಪಿತವಲ್ಲ” ಎಂದು ಹೇಳಲಾರಂಭಿಸಿದರು. ವಿರೋಧಿಗಳ ಟೀಕೆಗಳನ್ನು ಹಿಂದೂ ವಿರೋಧದ ಹುನ್ನಾರದ ಅನುಷ್ಠಾನವೆಂದು ವ್ಯಾಖ್ಯಾನಿಸಿದರು. ಈ ಟೀಕೆಗಳು ರಿಲಿಜನ್ನಿನ ವಲಯದಲ್ಲಿ ಬೆಳೆದ ಟೀಕೆಗಳ ಸ್ವರೂಪವನ್ನೇ ಪಡೆದುಕೊಂಡವು.

ಇದು ನಂಬಿಕೆಗಳ ಕುರಿತ ಟೀಕೆಗಳಾದರೆ, ಆಚರಣೆಗಳ ಕುರಿತ ಟೀಕೆ ಪ್ರತಿಟೀಕೆಗಳಂತೂ ಸಂದರ್ಭವನ್ನೇ ಕಳಚಿಕೊಂಡಿವೆ. ಮಡೆಸ್ನಾನ, ಬೆತ್ತಲೆಸೇವೆ ಮುಂತಾದ ಆಚರಣೆಗಳನ್ನು ಲಿಬರಲ್ ವಿಚಾರವಂತರು ಅಮೂಲಾಗ್ರವಾಗಿ ನಿಷೇಧಿಸಬೇಕೆನ್ನುತ್ತಾರೆ. ಆ ಆಚರಣೆಗಳು ಸಮಾನತೆ, ಸ್ವಾತಂತ್ರ್ಯ ಮುಂತಾದ ಲಿಬರಲ್ ತತ್ತ್ವಗಳಿಗೆ ವಿರುದ್ಧವಾಗಿವೆ ಎಂದು ವ್ಯಾಖ್ಯಾನಿಸಿ ಅವುಗಳನ್ನು ವಿರೋಧಿಸಲಾಗುತ್ತದೆ. ಇನ್ನು ಈ ಆಚರಣೆಗಳನ್ನು ಸಮರ್ಥಿಸುವವರು ಇದನ್ನು ಹಿಂದೂಗಳ ಅಸ್ಮಿತೆ ಎನ್ನುತ್ತಾರೆ ಇಲ್ಲವೇ ಮಡೆಸ್ನಾನದಿಂದ ಆರೋಗ್ಯಕ್ಕಾಗುವ ಲಾಭಗಳನ್ನು ಪಟ್ಟಿಮಾಡುತ್ತಾರೆ. ಒಟ್ಟಿನಲ್ಲಿ ಇಂತಹ ಅಚರಣೆಗಳಲ್ಲಿ ಜನರಿಗೆ ಮುಖ್ಯವಾಗಿ ಎದ್ದು ಕಾಣುವ ಭಕ್ತಿ ಎಂಬ ಮೂಲಧಾತು, ಎರಡೂ ವಾದಿಗಳಲ್ಲಿ ಕಂಡು ಬರುವದೇ ಇಲ್ಲ. ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರವೇಶ ಏಕೆ ಬೇಕು ಎನ್ನುವದನ್ನು ಪುಟಗಟ್ಟಲೇ ವಿವರಿಸುವ ಸ್ತ್ರೀವಾದಿನಿಯರ ಲೇಖನಗಳಲ್ಲಿ ಭಕ್ತಿ ಎಂಬ ಶಬ್ದ ಹುಡುಕಿದರೂ ಸಿಗುವದಿಲ್ಲ.

ಮುಂದುವರೆಯುವುದು…

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೧ )

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments