ಪ್ರಬಂಧ ಸ್ಪರ್ಧೆ – ೧ : ನಮ್ಮೂರ ಹಬ್ಬ
ಭಾರತದ ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ವಿಶಿಷ್ಟ ಹಬ್ಬಗಳನ್ನು ರೂಢಿಸಿ ಆಚರಿಸಿಕೊಂಡು ಬಂದಿದೆ. ಈ ಹಬ್ಬಗಳಲ್ಲಿ ಊರಿನ ಎಲ್ಲ ಜನರೂ ಭಾಗವಹಿಸುತ್ತಾರೆ. ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದಿರುವ ಈ ಹಬ್ಬಗಳು ಆಯಾ ಊರಿನ ಅವಿಭಾಜ್ಯ ಅಂಗಗಳಾಗಿರುತ್ತವೆ. ಒಂದೊಂದು ಹಳ್ಳಿಯ ಹಬ್ಬವೂ ತನ್ನದೇ ವಿಶಿಷ್ಟವಾದ ಆಚರಣೆಗಳಿಂದ ಕೂಡಿರುತ್ತವೆ. ಆದರೆ ಇಂತಹ ಅನೇಕ ಹಬ್ಬಗಳು ಹಾಗೂ ಅವುಗಳಲ್ಲಿ ಆಚರಿಸಲ್ಪಡುವ ನೂರಾರು ಸೂಕ್ಷ್ಮ ಆಚರಣೆಗಳ ವಿವರಗಳು ಇಂದಿಗೂ ಕೂಡ ಕನ್ನಡಿಗರಿಗೆ ಗೊತ್ತಿಲ್ಲ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇವಲ ಕೆಲವೇ ಕೆಲವು ಜಾತ್ರೆಗಳ ಹಾಗೂ ಹಬ್ಬಗಳ ಸುದ್ದಿಗಳು ಬರುತ್ತವೆ. ಇನ್ನು ನಮ್ಮ ಹಬ್ಬಗಳ ಕುರಿತ ಸಮಾಜ ಶಾಸ್ತ್ರೀಯ ವಿವರಣೆಗಳಂತೂ ಬುದ್ಧಿಜೀವಿಗಳಿಗೇ ಪ್ರೀತಿ.
ನಾವು ನಮ್ಮ ಊರಿನ ಇಂತಹ ವಿಶಿಷ್ಟ ಹಬ್ಬಗಳನ್ನು ಹಾಗೂ ಅವುಗಳ ಆಚರಣೆಗಳನ್ನು ನಮ್ಮ ಪೂರ್ವಜರಿಂದ ಪಡೆದಿದ್ದು, ಇವುಗಳು ಉಳಿದು ಬೆಳೆಯಬೇಕಾದರೆ ಮುಂದಿನ ಪೀಳಿಗೆಗೆ ದಾಟಿಸಬೇಕು ಹಾಗೂ ಆ ಹಬ್ಬಗಳ ಕುರಿತು ನಮಗಿರುವ ಸುಂದರ ಅನುಭವಗಳನ್ನು ವಿವರಿಸಬೇಕು. ಇಂತಹ ಅಚರಣೆಗಳಲ್ಲಿ ನಮ್ಮ ಬಾಲ್ಯವನ್ನು ಹಾಗೂ ಯೌವನವನ್ನು ಕಳೆದಿರುವದರಿಂದ ನಾವು ಊರಿನ ಹಬ್ಬಗಳ ಅನುಭವವನ್ನು ಅಕ್ಷರರೂಪಕ್ಕಿಳಿಸಿ ಕನ್ನಡಿಗರಿಗೆ ಪರಿಚಯಿಸಬೇಕು. ನಿಲುಮೆಯು ಊರಿನ ಹಬ್ಬಗಳ ಕುರಿತು ನಿಮಗಿರುವ ಅನುಭವಗಳನ್ನು ಪ್ರಬಂಧ ರೂಪದಲ್ಲಿ ಮಂಡಿಸಲು ಆಹ್ವಾನಿಸುತ್ತಿದೆ. ಈ ಪ್ರಬಂಧಗಳ ಮೇಲೆ ನಿಲುಮೆಗೆ ಸಂಪೂರ್ಣ ಸ್ವಾಮ್ಯವು ಇರಲಿದೆ. ಪ್ರಬಂಧದ ಸ್ವರೂಪ ಹಾಗೂ ನಿಯಮಗಳು ಹೀಗಿವೆ:
೧) ನೀವು ಬರೆಯ ಹೊರಟಿರುವ ಹಬ್ಬವು ಭಾರತದ ಯಾವ ಊರಿನದ್ದೂ ಆಗಿರಬಹುದು. ಅದು ಯಾವ ಹಬ್ಬವೂ ಆಗಿರಬಹುದು. ಆದರೆ ಆ ಹಬ್ಬದ ಆಚರಣೆಯು ನಿಮ್ಮ ಊರಿನ ವಿಶಿಷ್ಟತೆಯಾಗಿರಬೇಕು ಮತ್ತು ಆ ಊರಿನಲ್ಲಿ ಇದ್ದು ಆ ಹಬ್ಬದಲ್ಲಿ ಒಮ್ಮೆಯಾದರೂ ಪಾಲ್ಗೊಂಡ ಅನುಭವವು ನಿಮಗಿರಬೇಕು.
೨) ಸಾಧ್ಯವಾದಷ್ಟೂ ಹಳ್ಳಿಯ ಎಲ್ಲ ಜನರೂ ಸೇರಿ ಆಚರಿಸುವ ಹಬ್ಬವಾಗಿರಬೇಕು. ಹಬ್ಬಕ್ಕಾಗಿ ನಿಮ್ಮ ಹಾಗೂ ಉಳಿದ ಜನರ ಮನೆಯಲ್ಲಿ ನಡೆಯುತ್ತಿದ್ದ ತಯಾರಿ ಹಾಗೂ ಹಬ್ಬದ ಸಂದರ್ಭದಲ್ಲಿ ನಡೆಸುತ್ತಿದ್ದ ಆಚರಣೆಗಳ ಬಗ್ಗೆ ಅನುಭವ ಪೂರ್ವಕ ಬೆಳಕು ಚೆಲ್ಲಬೇಕು.
೩) ಹಬ್ಬಗಳ ಪ್ರಾಚೀನತೆಗೆ ಹೆಚ್ಚಿನ ಆದ್ಯತೆ ನೀಡಲಾಗುವದು. ಪ್ರಾಚೀನತೆಯನ್ನು ಸಾಧಿಸಲು ಹಿಸ್ಟರಿಯ ಆಧಾರ ನೀಡುವ ಅಗತ್ಯವಿಲ್ಲ. ಆ ಹಬ್ಬದ ಕುರಿತು ಊರಿನ ಜನರಲ್ಲಿ ಪ್ರಚಲಿತದಲ್ಲಿರುವ ಪ್ರಾಚೀನ ದಂತಕತೆಗಳನ್ನಷ್ಟೇ ಬರೆದರೂ ಸಾಕು.
೪) ಸಾಧ್ಯವಾದಷ್ಟೂ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಇನ್ನೂ ಬೆಳಕು ಕಾಣದ ಅಜ್ಞಾತ ಹಬ್ಬಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು. ನಿಮ್ಮ ಪ್ರಬಂಧವು ಈ ಹಬ್ಬಗಳ ಆಚರಣೆಯಲ್ಲಿರುವ ವಿಶೇಷತೆಗಳನ್ನು ವರ್ಣಿಸಬೇಕು.
೫) ಈಗಾಗಲೇ ಪ್ರಸಿದ್ಧವಾಗಿರುವ ಹಬ್ಬಗಳ ಬಗ್ಗೆಯೂ ಬರೆಯಬಹುದು, ಆದರೆ ಆ ಹಬ್ಬಗಳಲ್ಲಿ ನಡೆಸುವ ಆದರೆ ಜನರಿಗೆ ಇನ್ನೂ ಗೊತ್ತಿರದ ಆಚರಣೆಗಳ ಕುರಿತು ನಿಮ್ಮ ಲೇಖನ ಬೆಳಕು ಚೆಲ್ಲಬೇಕು. ಉದಾಹರಣೆಗೆ ಮೈಸೂರು ದಸರಾ ಪ್ರಸಿದ್ಧ ಹಬ್ಬವೇ ಇದ್ದರೂ ಮಾಧ್ಯಮಗಳಲ್ಲಿ ದಾಖಲಿಸದ ಹಲವಾರು ಆಚರಣೆಗಳು ಈ ಹಬ್ಬದಂದು ನಡೆಯುತ್ತಿರುತ್ತವೆ. ನಿಮ್ಮ ಪ್ರಬಂಧವು ಇಂತಹ ಎಷ್ಟು ಆಚರಣೆಗಳ ಕುರಿತು ಬೆಳಕು ಚೆಲ್ಲುತ್ತವೆ ಎನ್ನುವದೂ ಸಹ ನಿರ್ಣಾಯಕವಾಗುವದು.
೬) ಪ್ರಬಂಧದಲ್ಲಿ ನಿಮ್ಮ ಹಾಗೂ ಹಬ್ಬವನ್ನು ಆಚರಿಸುವ ಊರಿನ ಜನರ ಅನುಭವದ ವರ್ಣನೆಗಳೇ ಪ್ರಧಾನವಾಗಿರಬೇಕು. ಆ ಆಚರಣೆಗಳು ಏಕೆ ಶ್ರೇಷ್ಠ ಎನ್ನುವ ವೈಜ್ಞಾನಿಕ ವಿವರಣೆಗಾಗಲೀ, ಆ ಆಚರಣೆಗಳು ಏಕೆ ಕಳಂಕ ಎನ್ನುವ ಸಮಾಜಶಾಸ್ತ್ರೀಯ ವಿವರಣೆಗಾಗಲೀ ಆಸ್ಪದ ಬೇಡ.
೭) ನಿಮ್ಮ ಊರಿನ ಹಬ್ಬದ ಕೆಲವು ವಿಶಿಷ್ಟ ಆಚರಣೆಗಳು ನಿಮಗೆ ಎಷ್ಟೇ ಅಪ್ರಬುದ್ಧ, ಬಾಲಿಶ ಎಂದೆನಿಸಿದರೂ ನಿಸ್ಪೃಹರಾಗಿ ದಾಖಲಿಸಿ. ಉದಾಹರಣೆಗೆ ನಿಮ್ಮೂರಿನ ತೇರನ್ನು ಎಳೆಯುವ ಮೊದಲು ದೇವರನ್ನು ಹಿಗ್ಗಾ ಮುಗ್ಗಾ ಬೈಯುವ ಆಚರಣೆಯಿದ್ದರೆ, ನಿಸ್ಸಂಕೋಚವಾಗಿ ಬರೆಯಿರಿ.
೮) ಅನುಭವಕ್ಕೆ ಪ್ರಾಧಾನ್ಯತೆಯಿರುವದರಿಂದ ಶಬ್ದಗಳಿಗೆ ಯಾವುದೇ ಮಿತಿಗಳಿಲ್ಲ. ಪ್ರಬಂಧವು ಕನ್ನಡದಲ್ಲಿರಬೇಕು ಹಾಗೂ ವ್ಯಾಕರಣ ದೋಷಗಳಿಂದ ಮುಕ್ತವಾಗಿರಬೇಕು.
೯) ನಿಮ್ಮ ಪ್ರಭಂದಗಳನ್ನು ಮಾರ್ಚ್ ೪ ರೊಳಗೆ baraha@nilume.net ಗೆ ಕಳುಹಿಸಬೇಕು.
೧೦) ಈ ಎಲ್ಲ ಅಂಶಗಳನ್ನೂ ಒಳಗೊಳ್ಳುವ ಪ್ರಬಂಧಗಳನ್ನು ಆಯ್ಕೆ ಮಾಡಲಾಗುವದು. ಆಯ್ಕೆಯಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುವುದು. ಆಯ್ದ ಪ್ರಬಂಧಗಳ ಬರಹಗಾರರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವದು.
#ಪ್ರಬಂಧ_ಸ್ಪರ್ಧೆ
#ನಿಲುಮೆ