ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 21, 2017

2

ವಿಶ್ವವನ್ನೇ ಅಚ್ಚರಿಯ ತೆಕ್ಕೆಗೆ ಸೆಳೆಯುವ ಭಾರತದ ದೈತ್ಯ

‍ನಿಲುಮೆ ಮೂಲಕ

– ಸುರೇಶ್ ಮುಗಬಾಳ್

isroತಮಿಳುನಾಡಿನಲ್ಲಿ ಶಶಿಕಲಾ ನಟರಾಜನ್ ತನ್ನ ಆಸೆ ಈಡೇರದೆ ಸೆರೆಮನೆಯತ್ತ ಮುಖಮಾಡಿದಾಗ, ಇತ್ತ ಇಡೀ ಪ್ರಪಂಚವೇ ನಮ್ಮ ದೇಶದತ್ತ ಮುಖಮಾಡಿತ್ತು. ಶಶಿಕಲಾ ಸೆರೆಮನೆಗೆ ಹೋಗುವುದನ್ನು ನೋಡಲಿಕ್ಕಲ್ಲಾ, ನಮ್ಮ ಹೆಮ್ಮೆಯ ISRO ( Indian Space Research Organisation) PSLV-C37 ಗ್ರಹ ನೌಕೆಯ ಸಹಾಯದಿಂದ 104 ಉಪಗ್ರಹಗಳನ್ನು ಒಂದೇ ಬಾರಿಗೆ ಕಕ್ಷೆಗೆ ಸೇರಿಸುವುದರೊಂದಿಗೆ ಯಾರೂ ಮಾಡದ ಸಾಧನೆಗೆ ಕೈ ಹಾಕಿದೆ ಎಂದು. ಅಚ್ಚರಿ ಪಡಲೇಬೇಕು..! ಏಕೆ ಗೊತ್ತೇ? ಭಾರತೀಯ ಟಿ.ವಿ. ಮಾಧ್ಯಮಗಳು ಇಡೀ ದಿನ ಶಶಿಕಲಾರ ಬಗ್ಗೆ ಪ್ರಸಾರ ಮಾಡುತ್ತಿದ್ದರೆ ಅಲ್ಲೆಲ್ಲೋ ಅಮೇರಿಕಾ, ಸ್ವಿಡ್ಜರ್ಲ್ಯಾಂಡ್, ನೆದರ್ಲ್ಯಾಡ್, ಯು.ಎ.ಇ., ಇಸ್ರೇಲ್, ಖಜಕೀಸ್ತಾನ್ ದೇಶಗಳು ತಮ್ಮ ಮಾಧ್ಯಮಗಳ ತಲೆಪಂಕ್ತಿಯಲ್ಲಿ (Headlines) ನಮ್ಮ ದೇಶದ ಸಾಧನೆಯನ್ನು ಬಿತ್ತರಿಸಿದವು. ತಮ್ಮದೇ ದೇಶದ ವಿಜ್ಞಾನಿಗಳು ಭೂಕಕ್ಷೆಗೆ ಉಪಗ್ರಹಗಳನ್ನು ಸೇರಿಸಿದವರಂತೆ ಅಲ್ಲಿನ ಪ್ರಜೆಗಳು ಖುಷಿಪಟ್ಟುಕೊಂಡರು. ನಮ್ಮ ಟಿ.ವಿ.ಮಾಧ್ಯಮಗಳ ಕತೆಯೇ ಬೇರೆ, ಸುದ್ದಿ ಬಿತ್ತರಿಸುವಾಗ ಗಮನಾರ್ಹವಾದ ಸುದ್ದಿಗಳು 2-3 ನಿಮಿಷಗಳಿಗಷ್ಟೇ ಸೀಮಿತವಾಗಿಸಿಬಿಡುತ್ತವೆ. ಅದೇ ಕೊಳಕು ರಾಜಕೀಯವು ಮಾಧ್ಯಮಗಳ ತುಂಬೆಲ್ಲಾ ಹರಡಿರುತ್ತದೆ. ಚೀನಾದ ಪ್ರಮುಖ ಪತ್ರಿಕೆಯೊಂದು ಭಾರತದ ಈ ಸಾಧನೆಯನ್ನು ಕೊಂಡಾಡಿ, ಸಂಪಾದಕೀಯದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿತ್ತು.

ಭಾರತವೇ ಏಕೆ ಈ ಸಾಧನೆಯನ್ನು ಮಾಡಿತು? ಬಾಹ್ಯಾಕಾಶ ಸಂಶೋಧನೆಯಲ್ಲಿ ನಮಗಿಂತ ಮುಂದುವರೆದ ದೇಶಗಳೆನಿಸಿದ NASA, Russian Federal Space Agency, European Space Agency ಮತ್ತು Japan Aerospace Exploraion Agency ಏಕೆ ಈ ಸಾಧನೆಗೆ ಕೈ ಹಾಕಲಿಲ್ಲ? ಸ್ವತಃ ಅಮೇರಿಕಾದ 96 ಸ್ಯಾಟೆಲೈಟ್ಗಳು PSLV-C37 ಗ್ರಹನೌಕೆಯಲ್ಲಿಟ್ಟು ಉಡಾವಣೆ ಮಾಡಲಾಯಿತು. ಆದರೆ ಅಮೇರಿಕಾದ NASA ಸಂಸ್ಥೆಗೆ ಈ ಮೈಲುಗಲ್ಲನ್ನು ಸಾಧಿಸುವ ಸಾಮರ್ಥ್ಯವಿದ್ದರೂ ಅದು ಭಾರತಕ್ಕೆ ಏಕೆ ಗುತ್ತಿಗೆ ನೀಡಿತು? ಇಲ್ಲಿ ಮತ್ತೂ ಗಮನಿಸಬೇಕಾದ ಅಂಶವೊಂದಿದೆ. ಬೇರೆ ಯಾವ ದೇಶಗಳ ಬಾಹ್ಯಾಕಾಶ ಸಂಸ್ಥೆಗಳೂ ಈ ಗುತ್ತಿಗೆಯನ್ನು ಪಡೆಯಲು ಯೋಗ್ಯವಾಗಿರಲಿಲ್ಲ. ಕಾರಣವಿಷ್ಟೇ.. ಅತೀ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಉಡಾವಣೆ ಸಾಧ್ಯವಿದದ್ದು ನಮ್ಮ ಹೆಮ್ಮೆಯ ISROಗೆ ಮಾತ್ರ. ISRO ಈ ಉಡ್ಡಾಯಾನಕ್ಕೆ ಖರ್ಚು ಮಾಡಿದ್ದು ಕೇವಲ 1.5ಕೋಟಿ ಡಾಲರ್.. ಭಾರತದ 3 ಉಪಗ್ರಹಗಳಾದ Cartosat-2D, INS-1A ಮತ್ತು INS-1B ಇವುಗಳೊಂದಿಗೆ 101 ವಿದೇಶಿ ಉಪಗ್ರಹಗಳನ್ನು ಹೊತ್ತೊಯ್ಯಲಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದಂತೆ ಬೇರೆ ದೇಶದ ಉಪಗ್ರಹಗಳೊಂದಿಗೆ ನಮ್ಮ ದೇಶದ ಉಪಗ್ರಹಗಳನ್ನು ಉಡಾಯಿಸಲಿಲ್ಲ. ಬದಲಾಗಿ ನಮ್ಮ ದೇಶದ ಉಪಗ್ರಹಗಳೊಂದಿಗೆ ಇತರೆ ದೇಶಗಳ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು.. ಒಂದೇ ಬಾರಿಗೆ ಅಷ್ಟೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದರಿಂದ ಗುತ್ತಿಗೆ ಕೊಟ್ಟ ದೇಶಕ್ಕೂ ಲಾಭವಿತ್ತು. ಜೊತೆಗೆ ಗುತ್ತಿಗೆ ತೆಗೆದುಕೊಂಡ ಭಾರತಕ್ಕೂ ಲಾಭವಿತ್ತು. ಭಾರತದ Cartosat-2D ಎಂಬ ಒಂದೇ ಉಪಗ್ರವು ಮಿಕ್ಕುಳಿದ 103 ನ್ಯಾನೋ ಉಪಗ್ರಹಗಳನ್ನೆಲ್ಲಾ ಗುಡ್ಡೆ ಹಾಕಿದರೆ ಎಷ್ಟು ಭಾರವಿತ್ತೋ ಅದಕ್ಕಿಂತ ಹೆಚ್ಚು ಭಾರವಿತ್ತು. ಬರೋಬ್ಬರಿ 714 ಕೆ.ಜಿ.ಯಷ್ಟು ತೂಕವಿದ್ದ Cartosat-2D  ಉಪಗ್ರಹವನ್ನು ಹೊತ್ತೊಯ್ಯಲು ISRO ನಿರ್ಮಿತ PSLV ಸರಣಿಯ ಶಕ್ತಿಶಾಲಿ ಗ್ರಹನೌಕೆ (ರಾಕೆಟ್) PSLV-C37 ಯಿಂದ ಮಾತ್ರ ಸಾಧ್ಯವಿತ್ತು. ಅದರೊಟ್ಟಿಗೆ ಉಳಿದ 103 ಸಣ್ಣ-ಸಣ್ಣ ಉಪಗ್ರಹಳನ್ನು ಕಳುಹಿಸಲಾಯಿತಷ್ಟೆ. ಇದಕ್ಕಿಂತ ಶಕ್ತಿಶಾಲಿ ಗ್ರಹನೌಕೆಗಳಾದ GSLV ಹಾಗೂ GSLV-MK III ISRO ಈಗಾಗಲೇ ISRO ಅಭಿವೃದ್ಧಿಪಡಿಸಿದೆ. ಆದರೆ ಈ ವಿಶ್ವದಾಖಲೆಯ ಕಾರ್ಯಕ್ಕೆ ಚಂದ್ರಯಾನ-1ಕ್ಕೆ ಬಳಸಿದ್ದ PSLV ಸಾಕಾಗಿತ್ತು.

ಜಗತ್ತು ಎರಡು ಮಹಾಯುದ್ಧಗಳನ್ನು ಕಂಡ ನಂತರ ಅಮೇರಿಕಾ ಮತ್ತು ರಷ್ಯಾ ದೇಶಗಳು ಶೀತಲ ಸಮರಕ್ಕಿಳಿದವು. ಅದರ ಫಲವಾಗಿ ಬಾಹ್ಯಾಕಾಶ ಸಂಶೋಧನೆಯನ್ನು ತಮ್ಮ ದೊಡ್ಡಸ್ತಿಕೆಯಂತೆ ಬಿಂಬಿಸಿಕೊಂಡವು. ರಷ್ಯಾ ಮೊದಲು ಗ್ರಹನೌಕೆ ಉಡಾಯಿಸಿ ತನ್ನ ಶಕ್ತಿ ಪ್ರದರ್ಶಿಸಿದರೆ, ಅಮೇರಿಕಾ ಅದಕ್ಕೆ ಸೆಡ್ಡು ಹೊಡೆಯುವಂತಹ ತಂತ್ರಜ್ಞಾನವನ್ನು ಬಳಸಿತು. ಹೀಗೆ ಸಾಗಿದ ಪೈಪೋಟಿಯು ಮಾನವನನ್ನು ಅಂತರಿಕ್ಷ ಕಳುಹಿಸುವ ಪ್ರಯತ್ನದವರೆಗೂ ಮುಂದುವರೆಯಿತು. ಈ ಪ್ರಯತ್ನದಲ್ಲಿ ಎರಡೂ ದೇಶಗಳು ಸಫಲವಾದವು. ಅದಾದ ನಂತರದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಹಲವು ರಾಷ್ಟ್ರಗಳು ಒತ್ತು ನೀಡಿದವು. ಅಮೇರಿಕಾ, ರಷ್ಯಾ ಮತ್ತು ಚೀನಾ ದೇಶಗಳು ಮಾನವ ಸಹಿತ ಗ್ರಹನೌಕೆ ಉಡಾಯಿಸಿದ ಹೆಗ್ಗಳಿಕೆಯನ್ನು ಪಡೆದರೆ, ಭಾರತವು ಮೊದಲ ಪ್ರಯತ್ನದಲ್ಲೇ ತನ್ನ ಮಹತ್ವಾಕಾಂಕ್ಷೀ ಯೋಜನೆಗಳಾದ ಚಂದ್ರಯಾನ ಹಾಗೂ ಮಂಗಳಯಾನವನ್ನು ಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆಯನ್ನು ಹೊಂದಿದೆ. ಈಗ ಈ ಸಾಧನೆಗಳ ಸಾಲಿನಲ್ಲಿ 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ವಿಶ್ವದಾಖಲೆಯೂ ಸೇರಿದೆ. ಈ ಸಾಧನೆಗಳು ಸಾಕಲ್ಲವೇ ISRO ಮೇಲಿನ ಇತರ ದೇಶಗಳ ನಂಬಿಕೆಗೆ.

ಇದೇ ನಂಬಿಕೆ ಅಮೇರಿಕಾದ ಉಡಾವಣಾ ಕಂಪೆನಿಗಳ ಕೆಂಗಣ್ಣಿಗೂ ಗುರಿಯಾಗುವಂತೆ ಮಾಡಿದೆ. ತಮಗೆ ದಕ್ಕಬೇಕಿದ್ದ ಯೋಜನೆಗಳನ್ನು ISRO ಕಬಳಿಸುತ್ತಿದೆ ಎಂದು ಅಲ್ಲಿನ ಉಡಾವಣಾ ಕಂಪೆನಿಗಳ ಆರೋಪ. ಅತೀ ಕಡಿಮೆ ಖರ್ಚಿನ ಪ್ರಸ್ತಾವನೆಯನ್ನು ಮುಂದಿಟ್ಟು ಯೋಜನೆಗಳನ್ನು ಬಾಚುವ ISROಗೆ ಕಡಿವಾಣ ಹಾಕಲೇಬೇಕೆಂದು ಅಲ್ಲಿನ ಸರ್ಕಾರಕ್ಕೆ ಈಗಾಗಲೇ ದೂರನ್ನೂ ನೀಡಿಬಿಟ್ಟಿವೆ.

ANTRIX Corporation Limited (ಅಂತರಿಕ್ಷ) ಸಂಸ್ಥೆಯೆಂಬುದು ಭಾರತ ಸರಕಾರವು ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆ, ISROದ ಅಡಿಯಲ್ಲಿ ವಾಣೀಜ್ಯಾಂಗವಾಗಿ ಕೆಲಸಮಾಡುವ ANTRIX, ಅಂತರಿಕ್ಷ ಸಂಶೋಧನೆಯ ವ್ಯವಹಾರಗಳನ್ನು ಕುದುರಿಸುವ ಕೆಲಸ ಮಾಡುತ್ತದೆ. ಈ ಬಾರಿಯ ಉಡಾವಣೆಗೂ ಇದೇ ಸಂಸ್ಥೆ ಅಮೇರಿಕಾ, ಸ್ವಿಡ್ಜರ್ಲ್ಯಾಂಡ್, ನೆದರ್ಲ್ಯಾಡ್, ಯು.ಎ.ಇ., ಇಸ್ರೇಲ್, ಖಜಕೀಸ್ತಾನ್ ದೇಶಗಳೊಂದಿಗೆ ವ್ಯವಹಾರ ಕುದುರಿಸಿ ಲಾಭ ತಂದುಕೊಟ್ಟಿದ್ದು. ಒಂದು ಉದಾಹರಣೆಯ ಮೂಲಕ ಈ ವ್ಯವಹಾರದ ಲಾಭವನ್ನು ವಿವರಿಸಲು ಪ್ರಯತ್ನಿಸೋಣ. ಇನ್ನೋವಾದಂತಹ ಕಾರಿನಲ್ಲಿ ಕನಿಷ್ಠಪಕ್ಷ ಕಾರಿನ ಚಾಲಕನೂ ಸೇರಿ 7 ಮಂದಿ ಪ್ರಯಾಣಿಸಬಹುದು. ಆದರೆ ಕೇವಲ ಚಾಲಕ ಮಾತ್ರ ಪ್ರಯಾಣಿಸಿದರೆ ಕಾರಿನ ಆಸನಗಳೆಲ್ಲಾ ಖಾಲಿ-ಖಾಲಿ. ಅಷ್ಟು ದೊಡ್ಡ ವಾಹನದ ಅವಶ್ಯಕತೆ ಇತ್ತೇ ಎಂಬಂತಾಗುತ್ತದೆ. ಅದೂ ಅಲ್ಲದೇ ಅದರ ಇಂಧನ ಕ್ಷಮತೆಯೂ ಕಡಿಮೆಯಿರುತ್ತದೆ. ಆದರೆ ಚಾಲಕನು ಒಂದು ಉಪಾಯ ಮಾಡಿ ಬರುವ ಹಾದಿಯಲ್ಲಿ ಅವನು ತಲುಪುವ ಜಾಗಕ್ಕೆ ತೆರಳಲಿಚ್ಛಿಸುವ 6 ಜನರನ್ನು ಕೂರಿಸಿಕೊಂಡು ಬಂದರೆ ಆ ಪ್ರಯಾಣಿಕರಿಂದ ಒಂದಷ್ಟು ಹಣ ಸಿಗುತ್ತದೆ. ಲಾಭವಲ್ಲವೇ? UBER, OLA ಕ್ಯಾಬ್ ಕಂಪೆನಿಗಳು ಈಚೆಗೆ ಈ ಶೇರಿಂಗ್ ಉಪಾಯದಿಂದ ಮಾಡುತ್ತಿರುವುದು ಇದೇ ಲಾಭದ ಕೆಲಸವನ್ನೇ. ಇದೇ ರೀತಿಯ ಉಪಾಯವನ್ನೇ ನಮ್ಮ ISRO ಕೂಡ ಬಳಸಿಕೊಂಡಿತು. ನಮ್ಮ ದೇಶದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದರೊಟ್ಟಿಗೆ ಹಿಂದೆ ಹೆಸರಿಸಿದ ದೇಶಗಳ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದರೆ ಉಡಾವಣೆಯ ಅರ್ಧ ಖರ್ಚು ಆ ದೇಶಗಳಿಂದ ಲಾಭವಾಗಿ ISROಗೆ ದಕ್ಕುತ್ತದೆ ಎಂಬುದನ್ನು ತಿಳಿದುಕೊಂಡಿತು.

ISRO ಈ ಯೋಜನೆಯ ‘ಸೆಲ್ಫಿವಿಡಿಯೋ’ ಮಾಡುವುದರ  ಮೂಲಕ ಹೊಸ ಸಾಧನೆ ಮಾಡಿದೆ. ಕೆಳಗಿರುವ ವೀಡಿಯೊ ನೋಡಬಹುದು.

ಈ ಯೋಜನೆಗೆ ಖರ್ಚಾದ ಒಟ್ಟು ವೆಚ್ಚ 1.5ಕೋಟಿ ಡಾಲರ್ ಅಂದರೆ ಬರೋಬ್ಬರಿ 100 ಕೋಟಿ ರೂಪಾಯಿಗಳು, ಅದೇ ಭಾರತವನ್ನು ಬಿಟ್ಟು ಈ ಸಾಧನೆಗೆ ಯಾವುದಾದರೂ ದೇಶ ಕೈ ಹಾಕಿದ್ದರೆ ಯೋಜನೆಯ ಒಟ್ಟು ವೆಚ್ಚವೆಷ್ಟಾಗುತ್ತಿತ್ತು ಗೊತ್ತೇ? ನಂಬಲಸಾಧ್ಯವಾದರೂ ಇದು ನಿಜ, ಬರೋಬ್ಬರಿ  6.5ಕೋಟಿ ಡಾಲರ್, ಭಾರತದ ರೂಪಾಯಿಯ ಲೆಕ್ಕದಲ್ಲಾದರೆ 460 ಕೋಟಿ. ಇಷ್ಟು ಬೃಹತ್ ವೆಚ್ಚದಲ್ಲಿ ಗ್ರಹನೌಕೆ ಉಡಾಯಿಸಲು ಸಾಧ್ಯವಾಗದ ಕಾರಣ ಭಾರತಕ್ಕೆ ಈ ಗುತ್ತಿಗೆ ನೀಡಲಾಯಿತು. ಈ ಯೋಜನೆಯಿಂದ ಪಾಲುದಾರ ರಾಷ್ಟ್ರಗಳಿಂದ ಸುಮಾರು 50 ಕೋಟಿಗಳಷ್ಟು ಹಣ ಮರುಪಾವತಿಯಾಗುತ್ತದೆ. ಅಂದರೆ ಈ ಯೋಜನೆಯಲ್ಲಿ ಭಾರತ ತನ್ನ 3 ಉಪಗ್ರಹಗಳನ್ನು ಕೇವಲ 50 ಕೋಟಿ ವೆಚ್ಚ ಮಾಡಿ ಕಕ್ಷೆಗೆ ಸೇರಿಸಿದಂತಾಗುತ್ತದೆ.

ಇಷ್ಟೇ ಅಲ್ಲ! ISRO ತನ್ನ ಮುಂದಿನ ಯೋಜನೆಗಳಲ್ಲಿ ಭಾರತದ ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2 ಹಾಗೂ ಮಂಗಳಯಾನ-2 ಯೋಜನೆಗಾಗಿ ಭರದ ಸಿದ್ಧತೆಯಲ್ಲಿದೆ. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಚಂದ್ರಯಾನ-2, 2014ರಲ್ಲೇ ಮುಗಿಯಬೇಕಿತ್ತು, ಆದರೆ ರಷ್ಯಾದೊಂದಿಗಿನ ಒಪ್ಪಂದವು ಮುರಿದುಬಿದ್ದ ಕಾರಣ 2018ಕ್ಕೆ ದಿನಾಂಕವನ್ನು ನಿಗದಿಮಾಡಲಾಗಿದೆ. ಈ ಯೋಜನೆಗಾಗಿ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ISRO, ಗ್ರಹನೌಕೆಯನ್ನು ಸಿದ್ಧಪಡಿಸಿಕೊಡುವಂತೆ ಹೇಳಿತ್ತು. ಆದರೆ ಎರಡು ಅವಧಿಗಳ ಕಾಲಾವಕಾಶಗಳ ಸಮಯ ನೀಡಿದರೂ ಪೂರೈಸಲು ಅಶಕ್ತವಾದ ರಷ್ಯಾವನ್ನು ಯೋಜನೆಯಿಂದ ಕೈಬಿಟ್ಟು ತನ್ನದೇ GSLV-MKII ಗ್ರಹನೌಕೆಯನ್ನು ಸಿದ್ಧಪಡಿಸಲು ಮುಂದಾಯಿತು. ಅದರಂತೆ, 2018ರ ಮತ್ತೊಂದು ಯಶಸ್ಸಿನತ್ತ ಮುಖ ಮಾಡಿದೆ. ಮಂಗಳಯಾನ – 2ಕ್ಕೂ ಸಹಾ ಇದೇ ಮಾದರಿಯ ಗ್ರಹ ನೌಕೆಯನ್ನು ಸಿದ್ಧಪಡಿಸುವುದಾಗಿ ISRO ಈಗಾಗಲೇ ತಿಳಿಸಿದೆ. ಈ ಎರಡೂ ಯೋಜನೆಗಳೂ ಸಹಾ ಅತೀ ಕಡಿಮೆ ಖರ್ಚಿನಲ್ಲಿ ಮಾಡಿಮುಗಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.

ISRO ಜಗತ್ತಿನ ಅತ್ಯುನ್ನತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಂತೆ ಭಾರೀ ಗಾತ್ರದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿಲ್ಲದೆ ಇರಬಹುದು. ಆದರೆ ಅತೀ ಕಡಿಮೆ ಖರ್ಚಿನಲ್ಲಿ, ಗುಣಮಟ್ಟದ ಉಡಾವಣೆಯನ್ನು ಮಾಡುವಲ್ಲಿ ಯಾರೂ ಸಂಪಾದಿಸದ ಹೆಗ್ಗಳಿಕೆಯನ್ನು ಸಂಪಾದಿಸಿದೆ. ಇದೂವರೆಗೂ ಕೈಗೊಂಡ ಉಡಾವಣೆಗಳಲ್ಲಿನ ಕಡಮೆ ವಿಫಲತೆಗಳು ಕೂಡ ISROದ ಸಾಧನೆಯೇ. ISROದ ಮುಖ್ಯಸ್ಥರಾದ ಎ.ಎಸ್.ಕಿರಣ್ ಕುಮಾರ್ ರವರು ಹೇಳುವಂತೆ “ನಾವು ಯಾವುದೇ ದಾಖಲೆಗಳ ಮೇಲೂ ಕಣ್ಣಿಟ್ಟಿಲ್ಲ, ನಮ್ಮ ಗುರಿಯೇನಿದ್ದರೂ ಪ್ರತಿ ಉಡಾವಣೆಯಲ್ಲೂ ನಮ್ಮ ಸಾಮರ್ಥವನ್ನರಿತು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಷ್ಟೇ” ಎಂದಿದ್ದಾರೆ. ISRO ತನ್ನ ಮುಂದಿನ ಯೋಜನೆಗಗಳಲ್ಲಿ ಮಾನವ ಸಹಿತ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿಕೊಂಡರೆ ಜಗತ್ತಿನ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆಯುತ್ತದೆ. ಆ ದಿನಗಳೂ ಸಹ ಸನಿಹದಲ್ಲೇ ಇದೆ. 1969ರಲ್ಲಿ ಭಾರತವು ತಾನೊಂದು ಸ್ವಂತ ಬಾಹ್ಯಾಕಾಶ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದಾಗ, “ನಿಮ್ಮ ದೇಶದ ಜನಕ್ಕೆ ಒಂದು ಹೊತ್ತಿನ ಊಟವನ್ನೂ ನೀಡಲು ಅಸಮರ್ಥರಾದ ನಿಮಗೆ ಈ ಕೈ ಸುಟ್ಟುಕೊಳ್ಳುವ ದಡ್ಡತನ ಬೇಕೇ” ಎಂದವರಿಗೆ ಈ ಮೂಲಕ ಉತ್ತರ ನೀಡಲಿದೆ.

2 ಟಿಪ್ಪಣಿಗಳು Post a comment
  1. Sureshkumar M.R
    ಫೆಬ್ರ 21 2017

    ಧನ್ಯವಾದಗಳು ನಿಲುಮೆ ತಂಡಕ್ಕೆ.

    ಉತ್ತರ
  2. ವಿಶ್ವಮಾನವ
    ಫೆಬ್ರ 21 2017

    ನಮ್ಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಶುಭ ಕೋರುತ್ತೇನೆ. ಶಶಿಕಲಾಳ ಬಗ್ಗೆ ನಮ್ಮ ಮಾಧ್ಯಮಗಳು ಬೇಕಿಲ್ಲದ, ಇನ್ನಿಲ್ಲದಷ್ಟು ಪ್ರಚಾರ ಕೊಟ್ಟಿದ್ದನ್ನು ನೋಡಲೂ, ಕೇಳಲೂ ಅಸಹ್ಯವಾಗಿತ್ತು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments