ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 23, 2017

1

ಕಮ್ಯುನಿಸ್ಟರು ನಡೆಸಿದ ಬಡವರು-ದಲಿತರ ರಕ್ತದೋಕುಳಿಗೆ ಈಗ ೩೮ ವರ್ಷ!

by ನಿಲುಮೆ

ರಾಕೇಶ್ ಶೆಟ್ಟಿ

kannur-political-violence-cpim-and-rss-workers-hacked-to-death-indialivetoday” ಕೋಮುವಾದಕ್ಕೆ ವಿರುದ್ಧವಾಗಿ, ಕರಾವಳಿ ಸೌಹಾರ್ದ ರ‌್ಯಾಲಿ” ಎಂಬ ಹೆಸರಿನಲ್ಲಿ ಮುಂದಿನ ಭಾನುವಾರ, ೨೫ನೇ ತಾರೀಖು ಮಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆಯಂತೆ. ಕಮ್ಯುನಿಸ್ಟರ ಈ ರ‌್ಯಾಲಿಯನ್ನುದ್ದೇಶಿಸಿ ಮಾತನಾಡಲು ಕೇರಳದ ಕಮ್ಯುನಿಸ್ಟರ ರಕ್ತಚರಿತ್ರೆಯ ಕೇಂದ್ರವಾದ ಕಣ್ಣೂರಿನ ಸೂತ್ರಧಾರ, ಪಿಣರಾಯಿ ವಿಜಯನ್ ಬರಲಿದ್ದಾರಂತೆ..!

“ನಾವೆಲ್ಲ ಒಂದೇ ಜಾತಿ, ಮತ, ಕುಲ. ನಾವು ಮನುಜರು. ಇದು ಐಕ್ಯತಾ ರ‌್ಯಾಲಿ, ಸೌಹಾರ್ದ ರ‌್ಯಾಲಿ” ಅಂತೆಲ್ಲ ಕಮ್ಯುನಿಸ್ಟ್ ಒಬ್ಬರು ನಾನಿರುವ ವಾಟ್ಸಾಪ್ ಗುಂಪಿನಲ್ಲಿ ಈ ಕಾರ್ಯಕ್ರಮದ ಪ್ರಚಾರ ಮಾಡುತ್ತಿದ್ದರು. ನಾನು ಜೋರಾಗಿ ನಕ್ಕು, ಇದರ ಜೊತೆಗೆ “ಶಾಂತಿ,  ಅಹಿಂಸೆ” ಅಂತನೂ ಸೇರಿಸಿಕೊಳ್ಳಿ ಎಂದೆ. ಅವರಿಂದೇನೂ ಉತ್ತರ ಬರಲಿಲ್ಲ. ಉತ್ತರ ಬರುವುದಾದರೆ ಹೇಗೆ ಹೇಳಿ ? ಎಲ್ಲಿಯ ಪಿಣರಾಯಿ ? ಎಲ್ಲಿಯ ಸೌಹಾರ್ದತೆ ? ಎಲ್ಲಿಯ ಶಾಂತಿ ? ಎಲ್ಲಿಯ ಅಹಿಂಸೆ ?

ಇದೇ ಪಿಣರಾಯಿ ವಿಜಯನ್, ಸಿಪಿಎಂನ ರಾಜ್ಯ ಕಾರ್ಯದರ್ಶಿಯಾಗಿದ್ದಾಗ ನಡೆದ ಘಟನೆಯೊಂದೇ ಸಾಕು, ಈ ಮನುಷ್ಯನ ಮತ್ತು ಕಮ್ಯುನಿಸ್ಟರ ಮನಸ್ಥಿತಿಯೆಂತದ್ದೆಂದು ಹೇಳಲು. ಒಂದು ಕಾಲದ ಕಮ್ಯುನಿಸ್ಟರಾಗಿ, ಈಗ ಕಾಂಗ್ರೆಸ್ಸಿನಲ್ಲಿರುವ ಅಬ್ದುಲ್ಲಾ ಕುಟ್ಟಿಯವರು ವರ್ಷಗಳ ಹಿಂದೆ ಬರೆದ ಲೇಖನವೊಂದನ್ನು ಬರೆದಿದ್ದರು. ೨೦೦೮ರ ಮಾರ್ಚ್ ತಿಂಗಳಿನಲ್ಲಿ ನಡೆದ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ, ಬಿಜೆಪಿಯವರು ಸಂಸತ್ತಿನಲ್ಲಿ ಕೇರಳದ ಕಮ್ಯುನಿಸ್ಟ್ ರಕ್ತ ಚರಿತ್ರೆಯ ಬಗ್ಗೆ ದನಿಯೆತ್ತುತ್ತಿರುವ ವಿಷಯ ಚರ್ಚೆಗೆ ಬಂದಿತು. ಆಗ, ಸಿಪಿಎಂನ ರಾಜ್ಯ ಕಾರ್ಯದರ್ಶಿಯಾಗಿದ್ದ ಪಿಣರಾಯಿ ವಿಜಯನ್ ಇತರೆ ಕಾಮ್ರೇಡುಗಳನ್ನು ಉದ್ದೇಶಿಸಿ, ನಾವು “ಬಂಗಾಳ ಮಾಡೆಲ್” ಅನ್ನು ಅನುಸರಿಸಿದರೆ ಈ ಸಮಸ್ಯೆಯಿರುವುದಿಲ್ಲ ಎಂದರಂತೆ. ರಾಜಕೀಯ ಎದುರಾಳಿಗಳನ್ನು ಅನಾಮತ್ತಾಗಿ ಎತ್ತಾಕಿಕೊಂಡು ಬಂದು ಆಳವಾದ ಗುಂಡಿ ತೆಗೆದು ಜೀವಂತ ಹೂತು ಹಾಕುವುದೇ ಬಂಗಾಳದ ಮಾಡೆಲ್. ಹೊರ ಜಗತ್ತಿಗೆ ವ್ಯಕ್ತಿ ಮಿಸ್ಸಿಂಗ್ ಕೇಸ್. ಅಸಲಿಗೆ ಕಾಮ್ರೇಡುಗಳು ಆತನಿಗೆ ಆಜಾದಿ ಕರುಣಿಸಿರುತ್ತಾರೆ. ಬಂಗಾಳದ ಕಾಮ್ರೇಡ್ ಅನಿಲ್ ಬಸು ಅವರೇ ಖುದ್ದು ಮಾಡೆಲ್ ಬಗ್ಗೆ ಮಾಹಿತಿ ನೀಡಿದರು ಅಂತ ಬರೆಯುತ್ತಾರೆ ಅಬ್ದುಲ್.

ರಾಜಕೀಯ ಎದುರಾಳಿಗಳಿಗೆ “ಬಂಗಾಳ ಮಾಡೆಲ್” ಮೂಲಕ ಉತ್ತರ ನೀಡಿ ಎನ್ನುವ ವ್ಯಕ್ತಿ ಈಗ ಪಕ್ಕದ ರಾಜ್ಯದ ಮುಖ್ಯಮಂತ್ರಿ. ದೇವರ ನಾಡು ಎಂದು ಕರೆಸಿಕೊಳ್ಳುವ ರಾಜ್ಯಕ್ಕೆ ಯಾವ ಶಾಪದ ರೂಪದಲ್ಲಿ ಇವರ ಆಳ್ವಿಕೆ ನೋಡುವ ಕಾಲ ಬಂತೋ ಗೊತ್ತಿಲ್ಲ. ಆದರೆ ಈ ಮನುಷ್ಯನ ಭಾಷಣ ಕೇಳಿಸಿಕೊಂಡು, ಕಣ್ಣೂರಿನ ರಕ್ತಚರಿತ್ರೆಯನ್ನು ಕರಾವಳಿಯಲ್ಲಿ ಪಸರಿಸುವ ಪಿಣರಾಯಿ ಅಂಡ್ ಕಾಮ್ರೇಡುಗಳ ಕನಸನ್ನು ಭಗ್ನಗೊಳಿಸಬೇಕಾಗಿರುವುದು ಈ ಕ್ಷಣದ ತುರ್ತು.

ನಾವು ಬಡವರ ಪರ, ಶೋಷಿತರ ಪರ, ದಲಿತ ಪರ ಅಂತೆಲ್ಲ ಕೊಚ್ಚಿಕೊಳ್ಳುವ ಈ ಕಮ್ಯುನಿಸ್ಟರೆಂಬ ಭಾರತ ರಾಜಕೀಯ ರಂಗದ ಹಿಂಸಾಪಶುಗಳು ನೆಲೆಕಂಡುಕೊಂಡ ಬಂಗಾಳದತ್ತ ಹೊರಳಿ ಇವರ ಅಸಲಿ ಇತಿಹಾಸವನ್ನೊಮ್ಮೆ ಕೆದಕಿ ನೋಡಿದರೆ, ಇವರು “ಹಿಂಸೆ, ರಕ್ತಪಾತ, ರೌಡಿಸಂ” ಪರ ಮಾತ್ರವೆಂಬುದು ಅರಿವಾಗುತ್ತದೆ. ಮೊನ್ನೆ ಜನವರಿ ೩೧ಕ್ಕೆ, ಮಹಿಳೆಯರು-ಮಕ್ಕಳೆನ್ನದೇ ಎರಡು ಸಾವಿರಕ್ಕೂ ಜನರ ಮಾರಣಹೋಮ ನಡೆಸಿದ ಕಮ್ಯುನಿಸ್ಟ್ ರಕ್ತಚರಿತ್ರೆಯ ಭಯಾನಕ ಅಧ್ಯಾಯವೊಂದು ಮುಖ್ಯವಾಹಿನಿಯ ಗಮನಕ್ಕೆ ಬಾರದೇ ಬದಿಗೆ ಸರಿದು ೩೮ ವರ್ಷಗಳಾಯಿತು. ಮಾರಿಚ್ಝಾಪಿಯನ್ನು ಮತ್ತೆ ನನಗೆ ನೆನಪಿಸಿದ್ದು ಸ್ವರಾಜ್ಯದಲ್ಲಿ ಬಂದ ಬರಹ. ಕಣ್ಣೂರಿನ ಹತ್ಯಾಕಾಂಡಗಳ ಕೇಂದ್ರಬಿಂದುವಾದ ಪಿಣರಾಯಿ ನಮ್ಮ ಕರಾವಳಿಗೆ ಕಾಲಿಡುತ್ತಾನೆಂದಾಗ, ಕಮ್ಯುನಿಸ್ಟರ ಪಾಲಿಗೆ ಬಡವರು-ದಲಿತರು-ಹಿಂದುಳಿದವರು ಎಂದರೇನೆಂದು ಸ್ಪಷ್ಟವಾಗಿ ಹೇಳುವ ಮಾರಿಚ್ಝಾಪಿಯ ರಕ್ತಚರಿತ್ರೆಯನ್ನು ಹೇಳಲೇಬೇಕು.

ಭಾರತ ವಿಭಜನೆಯಾಗಿ ಪಾಕಿಸ್ತಾನ ಹುಟ್ಟಿಕೊಂಡಿದ್ದು ನಮಗೆಲ್ಲ ತಿಳಿದಿದೆ. ಪಾಕಿಸ್ತಾನದ ಸೃಷ್ಟಿಕರ್ತ ಜಿನ್ನಾರ ಕೊನೆಯ ದಿನಗಳಲ್ಲಿಯೇ ಅವರೇ ಪೋಷಿಸಿ ಬೆಳೆಸಿದ್ದ ಮೂಲಭೂತವಾದಿಗಳು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದ ಹಿಂದೂಗಳ ಮೇಲೆ ನಿರಂತರ ದೌರ್ಜ್ಯನ್ಯ, ಕೊಲೆ, ರಕ್ತಪಾತವನ್ನು ಶುರು ಮಾಡಿಕೊಂಡರು. ಈಗೀನ ಬಾಂಗ್ಲಾದೇಶದಿಂದ, ವಿಭಜನೆಯ ನಂತರ ಮತ್ತು ೧೯೫೦ರ ಸಮಯದಲ್ಲಿ ಹೆಚ್ಚು ಹಿಂದೂ ನಿರಾಶ್ರಿತರು ಪಶ್ಚಿಮ ಬಂಗಾಳದ ಕಡೆಗೆ ಬರಲಾರಂಭಿಸಿದ್ದರು. ಮೊದಲಿಗೆ ಬಂದವರಿಗೆಲ್ಲ ಬಂಗಾಳ, ಪಕ್ಕದ ಅಸ್ಸಾಂ, ತ್ರಿಪುರಗಳಲ್ಲಿ ವಸತಿ ಕಲ್ಪಿಸಲಾಯಿತು. ಇದಾದ ನಂತರವೂ ಮೂಲಭೂತವಾದಿ ಸರ್ಕಾರ ಮತ್ತು ಮುಸ್ಲಿಮರ ಹಿಂಸೆಗೆ ನಲುಗಿ ಪ್ರವಾಹೋಪಾದಿಯಲ್ಲಿ ಬರುತ್ತಲೇ ಇದ್ದ ನಿರಾಶ್ರಿತರಿಗೆ ಈಗ ವಸತಿ ಕಲ್ಪಿಸಲು ಈಶಾನ್ಯ ರಾಜ್ಯಗಳಲ್ಲಿ ಜಾಗ ಉಳಿದಿರಲಿಲ್ಲವಾದ್ದರಿಂದ, ಕೇಂದ್ರ ಸರ್ಕಾರ ಈ ನಿರಾಶ್ರಿತರನ್ನು, ಈಗ ಒಡಿಶಾ, ಮಧ್ಯಪ್ರದೇಶ, ಚತ್ತೀಸಗಢ, ಮಹಾರಾಷ್ಟ್ರದ ಭಾಗವಾಗಿರುವ “ದಂಡಕಾರಣ್ಯ”ದಲ್ಲಿ ನೆಲೆ ಕಲ್ಪಿಸುವ ಯೋಜನೆಯೊಂದನ್ನು ಹಾಕಿಕೊಂಡಿತ್ತು. ೭೦ರ ದಶಕದಲ್ಲಿ ಬಾಂಗ್ಲಾ ವಿಮೋಚನೆಯ ಯುದ್ಧದ ಸಂದರ್ಭದಲ್ಲಂತೂ ಪೂರ್ವ ಪಾಕಿಸ್ತಾನದ ಮೇಲೆ ಪಾಕಿ ಸರ್ಕಾರ, ಸೈನ್ಯದ ಪೈಶಾಚಿಕ ಕೃತ್ಯಗಳಿಂದಾಗಿ ನಿರಾಶ್ರಿತರ ಪ್ರವಾಹವೇ ಭಾರತದತ್ತ ಹರಿದು ಬರಲಾರಂಭಿಸಿತ್ತು. ಇತ್ತ, ಸ್ವಚ್ಚ ಮತ್ತು ಸ್ಪಷ್ಟ ರಾಜಕೀಯ ಹಿತಾಸಕ್ತಿಯಿಲ್ಲದೆ ಹಳ್ಳ ಹಿಡಿಯುವ ಎಲ್ಲಾ ಸರ್ಕಾರಿ ಯೋಜನೆಗಳಂತೆಯೇ ದಂಡಕಾರಣ್ಯ ಯೋಜನೆಯೂ ಸಮಸ್ಯೆಯ ಕೂಪದಲ್ಲಿ ಮುಳುಗಿತ್ತು. ಅಲ್ಲಿ ನೆಲೆಕಂಡುಕೊಂಡ ನಿರಾಶ್ರಿತರಿಗೆ ಮೂಲಭೂತ ಸೌಕರ್ಯಗಳೂ ಇಲ್ಲದೇ, ವೀಪರೀತ ಬೇಸಿಗೆ, ವೀಪರಿತ ಚಳಿಯ ವಾತವಾರಣಕ್ಕೆ ಹೊಂದಿಕೊಳ್ಳಲಾಗದೇ ಹೈರಾಣಾಗಿದ್ದರು. ಇದೇ ಸಮಯಕ್ಕೆ ಬಂಗಾಳದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಹವಣಿಸುತ್ತಿದ್ದ ಕಮ್ಯುನಿಸ್ಟರಿಗೆ, ಬಾಂಗ್ಲಾದೇಶದಿಂದ ಬಂದ ಹಿಂದುಳಿದ-ದಲಿತ ವರ್ಗದ ಬಡವರು ಭರ್ಜರಿ ಓಟುಗಳಾಗಿ ಕಂಡರು.

ನಾವು ಅಧಿಕಾರಕ್ಕೆ ಬಂದರೆ, ನಿಮಗೆಲ್ಲ ದಂಡಕಾರಣ್ಯದಿಂದ ಮುಕ್ತಿ ಕೊಡಿಸಿ, ಬಂಗಾಳದಲ್ಲೇ ವಸತಿ ಕಲ್ಪಿಸಿಕೊಡುತ್ತೇವೆ ಎಂದು ಓಲೈಕೆ, ಭರವಸೆಗಳ ಮಹಾಪೂರವನ್ನೇ ಹರಿಸಿ, ನಿರಾಶ್ರಿತರ ನಡುವೆ ಸೇರಿಕೊಂಡು ಅವರನ್ನು ನಿರಂತರವಾಗಿ ಸರ್ಕಾರದ ವಿರೋಧ ಪ್ರಚೋದಿಸಿದ ಕಮ್ಯುನಿಸ್ಟರು ತಮ್ಮತ್ತ ಸೆಳೆದುಕೊಂಡರು. ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಮ್ಯುನಿಸ್ಟರ ಓಟು ಬ್ಯಾಂಕಿನ ಪ್ರೀತಿಯನ್ನೇ ಸತ್ಯವೆಂದು ನಂಬಿ ಸಹಜವಾಗಿಯೇ, ಈ ನಿರಾಶ್ರಿತರು ದಂಡಕಾರಣ್ಯದಿಂದ, ಬಂಗಾಳದತ್ತ ವಾಪಸ್ ಬರಲಾರಂಭಿಸಿದರು. ೧೯೭೮ರ ಮಧ್ಯದಲ್ಲಂತೂ ಒಂದೂವರೆ ಲಕ್ಷದಷ್ಟು ನಿರಾಶ್ರಿತರು ಕಮ್ಯುನಿಸ್ಟರ ಭರವಸೆಗಳನ್ನು ನಂಬಿಕೊಂಡು ಬಂದರು. ಹೀಗೆ ಬಂದವರಲ್ಲಿ ಸಾವಿರದಷ್ಟು ನಿರಾಶ್ರಿತರು ಸುಂದರ್ ಬನ್ಸ್ ದ್ವೀಪಗಳ ಮಾರಿಚ್ಝಾಪಿಯಲ್ಲಿ ನೆಲೆಯೂರಿದರು. ಅಲ್ಲಿನ ಕಾಡುಗಳನ್ನು ಕಡಿದು, ಗುಡಿಸಲುಗಳು, ಮೀನುಗಾರಿಕೆಗಾಗಿ, ಬೀಡಿ ತಯಾರಿಕ ಘಟಕ, ಕಾರ್ಪೆಂಟರಿ ವರ್ಕ್ ಶಾಪ್, ಬೇಕರಿ ಹೀಗೆ ಬದುಕು ಕಟ್ಟಿಕೊಂಡಿದ್ದರು. ೧೯೭೮ರ ಜೂನ್ ಸಮಯದಲ್ಲಿ ಮಾರಿಚ್ಝಾಪಿಯಲ್ಲಿ ಮೂವತ್ತು ಸಾವಿರದಷ್ಟು ಜನರು ಬಂದು ನೆಲೆಯೂರಿದರು.

ಹೀಗೆ ನೆಲೆಯೂರಿದವರು ನಿಧಾನವಾಗಿ ಬದುಕು ಕಟ್ಟಿಕೊಂಡು, ತಾವು ಉತ್ಪಾದಿಸಿದ ವಸ್ತುಗಳನ್ನು ಪಕ್ಕದ ಕುಮಿರ್ಮಾರಿ ದ್ವೀಪದಲ್ಲಿ ಮಾರಾಟ ಮಾಡುತ್ತ ಜೀವನವನ್ನು ಕಟ್ಟಿಕೊಳ್ಳುತ್ತಿದ್ದರು. ಇತ್ತ, ಅಧಿಕಾರಕ್ಕೇರಿದ ನಂತರ ನಿರಾಶ್ರಿತರ ಪರ ಹುಸಿ ಅನುಕಂಪ ತೋರಿಸಿ ಸಾಧಿಸಬೇಕಾದ್ದು ಏನು ಇರಲಿಲ್ಲ ನೋಡಿ, ಹಾಗಾಗಿ ಇವರ ಕುರಿತಂತೆ ಕಮ್ಯುನಿಸ್ಟರ ನೀತಿ ನಿಲುವುಗಳು ಬದಲಾಗಿದ್ದವು. ಅಧಿಕಾರಕ್ಕೆ ಮೊದಲು, ದಂಡಕಾರಣ್ಯ ಪ್ರಾಜೆಕ್ಟನ್ನೇ ಸ್ಥಗಿತಗೊಳಿಸಿ, ಎಲ್ಲಾ ನಿರಾಶ್ರಿತರಿಗೂ ಪಶ್ಚಿಮ ಬಂಗಾಳದಲ್ಲೇ ನೆಲೆ ಕಲ್ಪಿಸಬೇಕೆಂದು ಕಾಮ್ರೇಡ್ ಜ್ಯೋತಿ ಬಸು ನೇತೃತ್ವದಲ್ಲಿ ಅರಚಿಕೊಳ್ಳುತ್ತಿದ್ದ ಕಮ್ಯುನಿಸ್ಟರು, ಅಧಿಕಾರ ಸಿಕ್ಕ ನಂತರ ಮುಖ್ಯಮಂತ್ರಿ ಜ್ಯೋತಿ ಬಸು ನೇತೃತ್ವದಲ್ಲಿ, ನಿರಾಶ್ರಿತರಿಗೆ ಬಂಗಾಳದಲ್ಲಿನ್ನು ಜಾಗವಿಲ್ಲ. ಎಲ್ಲರೂ ದಂಡಕಾರಣ್ಯಕ್ಕೆ ತಿರುಗಿ ಎಂದು ಆದೇಶಿಸಿದರು. ಇವರನ್ನು ನಂಬಿಕೊಂಡು ದಂಡಕಾರಣ್ಯ ಬಿಟ್ಟು ಹೊರಟು ಬಂದ ಹತ್ತು ಸಾವಿರದಷ್ಟು ಮಂದಿಯನ್ನು ರೈಲ್ವೇ, ಬಸ್ಸು ನಿಲ್ದಾಣಗಳಲ್ಲಿ ಹಿಡಿದು ವಾಪಸ್ ಕಳುಹಿಸಿದರು. ಪ್ರತಿರೋಧ ತೋರಿದವರ ಮೇಲೆ ಕಮ್ಯುನಿಸ್ಟ್ ಗೂಂಡಾಗಳು ಹಲ್ಲೆ, ಲೂಟಿ ನಡೆಸಿ, ಅವರಲ್ಲಿದ್ದ ಅಲ್ಪಸ್ವಲ್ಪ ಹಣ, ಹಕ್ಕುಪತ್ರಗಳನ್ನೆಲ್ಲ ನಾಶಗೊಳಿಸಿದ್ದರು. ಹೀಗೆ ನಿರಾಶ್ರಿತರ ಬೆನ್ನು ಬಿದ್ದ ಕಮ್ಯುನಿಸ್ಟರು ಡಿಸೆಂಬರ್ ಅಂತ್ಯದ ವೇಳೆಗೆ ಪೋಲಿಸರನ್ನು, ಕಮ್ಯುನಿಸ್ಟ್ ಗೂಂಡಾಗಳನ್ನು ತಂದು ಮಾರಿಚ್ಝಾಪಿ ದ್ವೀಪದಲ್ಲಿ ನಿಲ್ಲಿಸಿದ್ದರು. ದ್ವೀಪದಲ್ಲಿ ನೆಲೆ ಕಂಡುಕೊಂಡಿದ್ದ ಹಿಂದುಳಿದ ಮತ್ತು ದಲಿತ ವರ್ಗದ ಬಡ ನಿರಾಶ್ರಿತರನ್ನು ನಿರಂತರವಾಗಿ ಬೆದರಿಸಿ, ಜಾಗ ಖಾಲಿ ಮಾಡಿ ದಂಡಕಾರಣ್ಯಕ್ಕೆ ತೆರಳುವಂತೆ ಹಿಂಸೆ ನೀಡಲಾರಂಭಿಸಿದರು. ತಿಂಗಳುಗಟ್ಟಲೆಯ ದುಡಿಮೆ, ಶ್ರಮದಿಂದ ಬದುಕು ಇನ್ನೇನು ಹಳಿಗೆ ಬರುತ್ತಿದೆ ಎಂದುಕೊಳ್ಳುತ್ತಿದ್ದ ನಿರಾಶ್ರಿತರು ಕಮ್ಯುನಿಸ್ಟರ ಬೆದರಿಕೆಗೆ ಬಗ್ಗಲಿಲ್ಲ. ಸರ್ಕಾರಕ್ಕೆ ಸೆಡ್ಡು ಹೊಡೆದು ಅಲ್ಲೇ ನಿಂತರು.

ತಮ್ಮ ರಾಜಕೀಯ ಎದುರಾಳಿಗಳನ್ನೇ ಹಾಡಹಗಲೇ ಕೊಚ್ಚಿಕೊಲ್ಲುವ ಕಮ್ಯುನಿಸ್ಟರಿಗೆ, ಹೇಳುವ ಕೇಳುವವರಿಲ್ಲದ ಈ ಬಡ ನಿರಾಶ್ರಿತರು ಸೆಡ್ಡು ಹೊಡೆದು ನಿಂತರೆ ಕೇಳುತ್ತಾರೆಯೇ? ಮಾರಿಚ್ಝಾಪಿ ದ್ವೀಪದವರ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಕ್ಕಪಕ್ಕದ ದ್ವೀಪಗಳಿಗೆ ತೆರಳಿದ ಕಮ್ಯುನಿಸ್ಟ್ ಗೂಂಡಾಗಳು, ನಿರಾಶ್ರಿತರೊಂದಿಗೆ ಯಾವುದೇ ರೀತಿಯ ಸಂಬಂಧ, ವ್ಯವಹಾರಗಳನ್ನು ನಡೆಸದಂತೆ ಬೆದರಿಕೆ ಒಡ್ಡಲಾರಂಭಿಸಿದ್ದರು. ಮತ್ತೊಂದು ಕಡೆ, ಮಾರಿಚ್ಝಾಪಿಯಲ್ಲಿ ನೆಲೆ ಕಂಡುಕೊಂಡಿರುವ ಹಿಂದುಳಿದ-ದಲಿತ ವರ್ಗದ ನಿರಾಶ್ರಿತರು ಈ ಭಾಗದಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಹಿಂದೂಗಳನ್ನು ಬಹುಸಂಖ್ಯಾತರನ್ನಾಗಿಸಿ, ನಿಮ್ಮನ್ನೆಲ್ಲ ಇಲ್ಲಿಂದ ಓಡಿಸುವ ತಯಾರಿಯಲ್ಲಿದ್ದಾರೆ ಎಂದು ಮುಸ್ಲಿಮರಲ್ಲಿ ಆತಂಕ ಸೃಷ್ಟಿಸಿ, ಅವರನ್ನು ನಿರಾಶ್ರಿತರ ವಿರುದ್ಧ ಎತ್ತಿಕಟ್ಟಲಾರಂಭಿಸಿದರು.

ಇಷ್ಟು ಸಾಲದೆಂಬಂತೆ, ಜನವರಿಯ ವೇಳೆಗೆ ಪೋಲಿಸರ ವೇಷದ ಕಮ್ಯುನಿಸ್ಟ್ ಗೂಂಡಾಗಳು ದ್ವೀಪದ ಸುತ್ತ ಮೋಟಾರು ಬೋಟುಗಳಲ್ಲಿ ಸುತ್ತಲಾರಂಭಿಸಿದರು. ಮೀನುಗಾರರು ಹಿಡಿದ ಮೀನನ್ನು ಕಿತ್ತುಕೊಳ್ಳುವುದು, ಅಕ್ಕಪಕ್ಕದ ದ್ವೀಪಗಳಲ್ಲಿ ಮಾರಾಟಕ್ಕೆ ಕೊಂಡೊಯ್ಯುವ ವಸ್ತುಗಳನ್ನು ಕಿತ್ತುಕೊಂಡು ಹಾಳು ಮಾಡುವುದು, ತಡ ರಾತ್ರಿಯಲ್ಲಿ ದ್ವೀಪದೊಳಗೆ ನುಗ್ಗಿ ಮೀನುಗಾರಿಕೆಯ ದೋಣಿಗಳು, ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಲು ಶುರುವಿಟ್ಟುಕಂಡರು. ಒಟ್ಟಿನಲ್ಲಿ ಆ ಬಡಪಾಯಿ ದ್ವೀಪವಾಸಿಗಳನ್ನು ವಾರಗಟ್ಟಲೇ ದಿಗ್ಬಂಧನದಲ್ಲಿಡಲಾಗಿತ್ತು. ತಮ್ಮಲ್ಲಿದ್ದ ಧವಸ-ಧಾನ್ಯ, ಮಕ್ಕಳ ಔಷಧಿ, ಹಾಲು ಎಲ್ಲವೂ ಖಾಲಿಯಾದ ನಂತರ ನಿರಾಶ್ರಿತರು ಅನಿವಾರ್ಯವಾಗಿ ಅವನ್ನು ತರಲು ಬೇರೆ ದ್ವೀಪಗಳತ್ತ ಹೊರಡಲೇಬೇಕಿತ್ತು. ೨೯ರ ಜನವರಿಯ ತಡರಾತ್ರಿ ಇಪ್ಪತ್ತು ಜನರಷ್ಟಿದ್ದ ತಂಡ, ಪೋಲಿಸ್-ಕಮ್ಯುನಿಸ್ಟ್ ರಕ್ಕಸರ ಕಣ್ಣು ತಪ್ಪಿಸಿ ಪಕ್ಕದ ಕುರ್ಮಿಮಾರಿ ದ್ವೀಪವನ್ನೇನೋ ತಲುಪಿಬಿಟ್ಟಿತು. ಆದರೆ ಬೆಳಗಾಗುವುದರೊಳಗೆ ಅವರನ್ನು ಬಂಧಿಸಿದ ಪೋಲಿಸ್ ಮತ್ತು ಕಮ್ಯುನಿಸ್ಟ್ ರಕ್ಕಸ ಪಡೆ ಅವರಲ್ಲಿದ್ದ ಹಣವನ್ನು, ಅಕ್ಕಿ, ಮಕ್ಕಳ ಔಷಧಿ, ಆಹಾರ ಧಾನ್ಯಗಳನ್ನು ಕಿತ್ತುಕೊಳ್ಳಲು ನೋಡಿದಾಗ, ಜಗಳ ಶುರುವಾಯಿತು. ಒಂದು ಡಜನ್ನಿನಷ್ಟು ನಿರಾಶ್ರಿತರು ಪೋಲಿಸರ ಗುಂಡಿಗೆ ಬಲಿಯಾದರು. ಹೀಗೆ ಬಲಿಯಾದವರನ್ನು ಮೊಸಳೆಗಳು ಹೆಚ್ಚಿದ್ದ ಕೊರಂಖಲಿ ನದಿಗೆ ಎಸೆಯಲಾಯಿತು, ಗಾಯಗೊಂಡು ಅಳಿದುಳಿದ ನಿರಾಶ್ರಿತರನ್ನು ಎಳೆದೊಯ್ಯಲಾಯಿತು. ಹಾಗೆ ಎಳೆದುಕೊಂಡು ಹೋದವರನ್ನೇನು ಮಾಡಲಾಯಿತು ಎಂಬುದು ಕಮ್ಯುನಿಸ್ಟರ ರಕ್ತಸಿಕ್ತ ಇತಿಹಾಸವನ್ನು ಅರಿತವರ ಊಹೆಗೆ ಬಿಟ್ಟಿದ್ದು. ತಮ್ಮವರನ್ನು ಹತ್ಯೆ ಮಾಡಿದ ವಿಷಯ ಜನವರಿ ೩೦ರ ಮಧ್ಯಾಹ್ನದ ವೇಳೆಗೆ ದ್ವೀಪದ ನಿವಾಸಿಗಳಿಗೆ ತಲುಪಿ ಆಘಾತಕ್ಕೊಳಗಾದರು ಮತ್ತು ಪ್ರತೀಕಾರಕ್ಕೂ ಮುಂದಾದರು. ಪೋಲಿಸ್ ಮತ್ತು ಕಮ್ಯುನಿಸ್ಟ್ ಗೂಂಡಾಗಳ ದಿಗ್ಬಂಧನವನ್ನು ಬೇಧಿಸಲೇಬೇಕೆಂದು ನಿರ್ಧರಿಸಿ, ಮರುದಿನ ಬೆಳಗ್ಗೆ ಹೆಂಗಸರು-ಮಕ್ಕಳ ಬೋಟನ್ನು ಕುರ್ಮಿಮಾರಿ ದ್ವೀಪದತ್ತ ಕಳುಹಿಸುವುದು ಎಂದು ನಿಶ್ಚಯಿಸಲಾಗಿತ್ತು. ಹೆಂಗಸರು-ಮಕ್ಕಳಿಗೆ ಈ ರಕ್ಕಸರೇನು ಮಾಡುವುದಿಲ್ಲ ಎನ್ನುವ ಮುಗ್ಧ ಲೆಕ್ಕಾಚಾರ ನಿರಾಶ್ರಿತರದು. ಅಮ್ಮ ಚುನಾವಣೆಗೆ (ಕೇರಳದಲ್ಲಿ) ನಿಂತಳೆಂದು ಏಳು ವರ್ಷದ ಮಗನ ಕೈ ಮುರಿಯುವ ಮನಸ್ಥಿತಿಯ ಕಮ್ಯುನಿಸ್ಟ್ ರಾಕ್ಷಸರಿಗೆ ಹೆಂಗಸರು ಯಾವ ಲೆಕ್ಕ ಹೇಳಿ? ಕುರ್ಮಿಮಾರಿಯೆಡೆಗೆ ಹೊರಟ ಹದಿನಾರು ಜನ ಹೆಂಗಸರು-ಮಕ್ಕಳಿದ್ದ ದೋಣಿಯನ್ನು ಹಿಂತಿರುಗಿಸುವಂತೆ ಪೋಲಿಸರು ಆದೇಶಿಸಿದರು. ಆದೇಶವನ್ನು ಧಿಕ್ಕರಿಸಿ ಮುನ್ನಡೆಯುತ್ತಿದ್ದಂತೆ, ಅವರಿಗೆ ದೋಣಿಗೆ ಮೋಟಾರು ಬೋಟುಗಳಿಂದ ಢಿಕ್ಕಿ ಹೊಡೆಸಲಾಯಿತು. ನೀರಿಗೆ ಹಾರಿದ ಇಬ್ಬರ ಮಹಿಳೆಯರನ್ನು ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆಗೈಯ್ಯಲಾಯಿತು. ಉಳಿದ ಹೆಂಗಸರ ಶವಗಳು ಒಂದೆರಡು ದಿನಗಳ ನಂತರ ಹತ್ತಿರದ ಕಾಡಿನಲ್ಲಿ ದೊರೆಯಿತು, ಅವರನ್ನು ಹತ್ಯೆ ಮಾಡುವ ಮೊದಲು, ನಿರಂತರ ಅತ್ಯಾಚಾರ ನಡೆಸಲಾಗಿತ್ತು. ಕಮ್ಯುನಿಸ್ಟ್ ಕ್ರೌರ್ಯ ಅಲ್ಲಿಗೇ ನಿಲ್ಲಲಿಲ್ಲ!

ತಮ್ಮ ಮನೆಯ ಹೆಣ್ಣುಮಕ್ಕಳ ಮೇಲಾದ ದೌರ್ಜನ್ಯಕ್ಕೆ ಸಹಜವಾಗಿಯೇ ಸಿಟ್ಟಾದ ದ್ವೀಪವಾಸಿಗಳು ಕೈಗೆ ಸಿಕ್ಕ ಆಯುಧಗಳನ್ನು ಝಳಪಿಸಿದರು. ಇದಕ್ಕಾಗಿಯೇ ಕಾಯುತ್ತಿದ್ದ ಪೋಲಿಸ್ ಮತ್ತು ಕಮ್ಯುನಿಸ್ಟ್ ರಕ್ಕಸರು, ಇಡೀ ದಿನ ಆ ಊರನ್ನೇ ಸ್ಮಶಾಣವನ್ನಾಗಿಸಿದರು. ಇವರ ಕ್ರೌರ್ಯಕ್ಕೆ, ಹನ್ನೆರಡು ವರ್ಷದ ಆಸುಪಾಸಿನ ೧೫ ಮಕ್ಕಳೂ ಬಲಿಯಾದವು. ಮರುದಿನದ ಸರಸ್ವತಿ ಪೂಜೆಗಾಗಿ ಶಾಲೆಯೊಳಗಿದ್ದ ಮಕ್ಕಳು ತಮ್ಮ ಅಪ್ಪ-ಅಮ್ಮಂದಿರ ಆಕ್ರಂದನ ಕೇಳಿ ಓಡಿ ಬಂದರೆ ಅವರನ್ನೂ ಬಿಡಲಿಲ್ಲ. ಒಂದು ಅಂದಾಜಿನ ಪ್ರಕಾರ ಅಂದು ಕಮ್ಯುನಿಸ್ಟ್ ಕ್ರೌರ್ಯಕ್ಕೆ ಬಲಿಯಾಗಿದ್ದು ಸರಿ ಸುಮಾರು ೨೦೦೦ ದಷ್ಟು ಜನ. ಈ ಕ್ರೌರ್ಯದಿಂದ ತಪ್ಪಿಸಿಕೊಂಡು ಅಳಿದುಳಿದವರು ಅಕ್ಕಪಕ್ಕದ ಊರಿನಲ್ಲಿ ಇಂದಿಗೂ ಅಜ್ನಾತ ಮತ್ತು ಕೆಟ್ಟ ಜೀವನವನ್ನು ಸಾಗಿಸುತ್ತಿದ್ದಾರೆ. ಆ ದಿನದ ಘಟನೆಯನ್ನೂ ಅವರು ನೆನಪಿಸಿಕೊಳ್ಳಲು ಬಯಸುವುದಿಲ್ಲ. ಕಮ್ಯುನಿಸ್ಟರಿಗೆ ಹೆದರಿ ತಾವು ಯಾರೆಂದು ಹೇಳಿಕೊಳ್ಳಲೂ ತಯಾರಿಲ್ಲ. ಇಂತದ್ದೊಂದು ಹತ್ಯಾಕಾಂಡ ನಡೆದ ಬಗ್ಗೆ ಭಾರತದ ಉಳಿದ ಭಾಗಗಳಿಗೇ ತಿಳಿದಿಲ್ಲ ಎನ್ನುವುದನ್ನು ಹೇಳುವದಕ್ಕಿಂತ ಬಂಗಾಳವೇ ಮಾರಿಚ್ಝಾಪಿಯ ನತದೃಷ್ಟ ಹಿಂದುಗಳನ್ನು ನೆನಪಿಸಿಕೊಳ್ಳುತ್ತಿಲ್ಲ ಎಂದು ಹೇಳಬೇಕಾಗುತ್ತದೆ.

ಕಷ್ಟವೋ-ಸುಖವೋ ದಂಡಕಾರಣ್ಯದಲ್ಲಿದ್ದವರನ್ನು, ಬಂಗಾಳದೊಳಗೆ ಬರ ಮಾಡಿಕೊಂಡಿದ್ದು ಇದೇ ಕಮ್ಯುನಿಸ್ಟರು. ಇದ್ದಕ್ಕಿದ್ದ ಹಾಗೇ ಅವರ ವಿರುದ್ಧವೇ ತಿರುಗಿ ಬೀಳಲು ಕಾರಣವೇನೆಂದು ತಿಳಿಯಲೇ ಇಲ್ಲ. ಬಹುಷಃ ಅವರು ಹಿಂದೂಗಳಾಗಿದ್ದೇ ಕಮ್ಯುನಿಸ್ಟರ ಕಣ್ಣು ಕೆಂಪಾಗಿಸಿತೇನೋ? ನಮ್ಮ ಕಾಲದಲ್ಲಿ ನಡೆದ ನಂದಿಗ್ರಾಮದ ಹಿಂಸಾಚಾರ ಈ ಘಟನೆಯ ಮುಂದೆ ಏನೇನೂ ಅಲ್ಲವೆಂದು ಹೇಳುವವರಿದ್ದಾರೆ. ನಂದಿಗ್ರಾಮದ ವಿಷಯದಲ್ಲೇನೋ ಕಮ್ಯುನಿಸ್ಟರ ವಿರುದ್ಧ ಮಮತಾ ಬ್ಯಾನರ್ಜಿ ತೊಡೆತಟ್ಟಿನಿಂತರು. ಆದರೆ ಈ ಮಾರಿಚ್ಝಾಪಿಯ ಬಡಪಾಯಿಗಳ ಪರ ಯಾರೂ ನಿಲ್ಲಲಿಲ್ಲ. ಈ ಹತ್ಯಾಕಾಂಡದ ತನಿಖೆ ನಡೆಸುತ್ತೇನೆ ಎಂದಿದ್ದ ಮಮತಾ ಬ್ಯಾನರ್ಜಿಯವರೇ ಇಂದು ಮುಖ್ಯಮಂತ್ರಿಯಾಗಿದ್ದರೂ ಅವರಿಗೇ ತಮ್ಮ ಮಾತು ಮರೆತೇ ಹೋಗಿದೆ. ತನ್ನ ಕಚೇರಿಯಿಂದ ಅರ್ಧಗಂಟೆ ದೂರದಲ್ಲಿಯೇ ಒಂದಿಡಿ ಊರಿನ ಹಿಂದೂಗಳನ್ನು ಆಪೋಷನ ತೆಗೆದುಕೊಂಡ ಗಲಭೆಯನ್ನೇ ನಡೆದಿಲ್ಲವೆಂದು ವಾದಿಸುವ ಮಮತಾರಿಂದ ನ್ಯಾಯ ನಿರೀಕ್ಷಿಸುವುದು ಸಾಧ್ಯವೇ?

ಮಾತು ಮಾತಿಗೆ ತಾವು ಬಡವರ ಪರ, ಶೋಷಿತರ ಪರವೆಂದು ಎದೆ ತಟ್ಟಿಕೊಳ್ಳುವ ಕಮ್ಯುನಿಸ್ಟರು, ಹಿಂದುಳಿದ-ದಲಿತ ವರ್ಗದ ಬಡ ನಿರಾಶ್ರಿತರ ರಕ್ತದ ಕೋಡಿ ಹರಿಸಿದರು. ಕಮ್ಯುನಿಸ್ಟರಿಗೆ ಅಧಿಕಾರವಷ್ಟೇ ಮುಖ್ಯ, ಅಧಿಕಾರ ಸಿಕ್ಕ ನಂತರ ಅದನ್ನು ಉಳಿಸಿಕೊಳ್ಳುವುದಷ್ಟೇ ಮುಖ್ಯ. ಎದುರಿಗೆ ಬರುವ ಯಾರನ್ನೂ ಅವರು ಉಳಿಸುವುದಿಲ್ಲ ಎನ್ನುವುದಕ್ಕೆ ಬಂಗಾಳದ ಇತಿಹಾಸದ ಪುಟಗಳಷ್ಟೆ ಸಾಕ್ಷಿ ಹೇಳುವುದಿಲ್ಲ, ಈಗಿನ ಕೇರಳವನ್ನೇ ನೋಡಿ. ಬಂಗಾಳ ಮಾಡೆಲ್ ಅನ್ನು ಬಳಸಿ ಎನ್ನುವ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾದ ಈ ಆರು ತಿಂಗಳಿನ ನಂತರ ನಡೆದಿರುವ ರಾಜಕೀಯ ಹತ್ಯೆಗಳ ಸಂಖ್ಯೇ ಈಗಾಗಲೇ ಹತ್ತನ್ನೂ ದಾಟಿದೆ. ಇಂತಹ ವ್ಯಕ್ತಿ ಕರಾವಳಿಗೆ ಬಂದು ಶಾಂತಿ, ಸೌಹಾರ್ದದ ರ‌್ಯಾಲಿ ನಡೆಸುತ್ತಾನೆ ಎನ್ನುವುದು ಹಾಸ್ಯಾಸ್ಪದವಲ್ಲವೇ? ಇವನ ಸಭೆಗೆ, ಕಮ್ಯುನಿಸ್ಟರ ಸುಳ್ಳನ್ನು ನಂಬುವ ಹಿಂದುಳಿದ-ದಲಿತ ಸಮುದಾಯಗಳು ಕಮ್ಯುನಿಸ್ಟರ ರಕ್ತಸಿಕ್ತ ಇತಿಹಾಸವನ್ನು ನೋಡಿಕೊಳ್ಳುವುದು ಒಳಿತು. ಮಾರಿಚ್ಝಾಪಿಯಲ್ಲಿ ನಡೆದ ಹತ್ಯಾಕಾಂಡವನ್ನು ಈ ಜನರು ಮುಂದೊಂದು ಮಂಗಳೂರಿನಲ್ಲೂ ನಡೆಸಿದರೆ ಆಶ್ಚರ್ಯವೇನಿಲ್ಲ.

ಅಂದ ಹಾಗೇ, ಭಾರತ ವಿಭಜನೆಯ ನಂತರವೂ ದೊಡ್ಡ ಸಂಖ್ಯೆಯ ದಲಿತರು ಪೂರ್ವ ಪಾಕಿಸ್ತಾನದಲ್ಲೇ ಉಳಿದಿದ್ದು ಯಾಕೆ ? ಏನನ್ನು ನಂಬಿ ಉಳಿದರು ಇತ್ಯಾದಿಗಳನ್ನು ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ. ಸದ್ಯಕ್ಕೆ ಕಮ್ಯುನಿಸ್ಟ್ ಎಂಬ ಭಾರತಕ್ಕಂಟಿದ ಶಾಪ ನಮ್ಮ ಕರಾವಳಿಯ ಕಡೆಗೆ ಬರಲು ಬಿಡಬೇಕೆ ಎಂದು ಯೋಚಿಸಿ.

1 ಟಿಪ್ಪಣಿ Post a comment
  1. shripad
    ಫೆಬ್ರ 23 2017

    good article

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments