ಬಿಗ್ ಬಾಸ್ ನಲ್ಲೂ ಮೀಸಲಾತಿಗೆ ಒತ್ತಾಯ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ಬಿಗ್ ಬಾಸ್ ನಲ್ಲೂ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರಗತಿಪರ ಹೋರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು: ಖಾಸಗಿ ಚ್ಯಾನಲ್ ಗಳು ನಡೆಸುವ ಬಿಗ್ ಬಾಸ್ ಸ್ಪರ್ಧೆಗಳಲ್ಲೂ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರಗತಿಪರ ಹೋರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದರು. ಚಿನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರ.ಹೋ.ಸಂ. ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀಸಲಾತಿ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಘೋಷಣೆಗಳನ್ನು ಕೂಗಿದರು.
ಬಿಗ್ ಬಾಸ್ ಸೀಸನ್ ಒಂದರಿಂದ ಸೀಸನ್ ನಾಲ್ಕರವರೆಗೆ ಆಯ್ಕೆಯಾಗಿದ್ದ ಸ್ಪರ್ಧಿಗಳ ಸಮೀಕ್ಷೆ ನಡೆಸಿದ ಪ್ರಗತಿಪರ ಹೋರಾಟಗಾರರ ಸಂಘ ಆ ಸಮೀಕ್ಷೆಯ ಫಲಿತಾಂಶವನ್ನು ಇದೇ ಸಮಯದಲ್ಲಿ ಬಿಡುಗಡೆಗೊಳಿಸಿದ್ದು ಶೇ.65.63ರಷ್ಟು ಮೇಲ್ಜಾತಿಯವರು, ಶೇ.22.50ಯಷ್ಟು ಒಬಿಸಿ ಮತ್ತು ಶೇ.3.07ರಷ್ಟು ಅಲ್ಪಸಂಖ್ಯಾತರನ್ನು ಆಯ್ಕೆ ಮಾಡಲಾಗಿದ್ದು ಉಳಿದ ಸ್ಥಾನಗಳನ್ನು ಇತರರಿಗೆ ನೀಡಲಾಗಿದೆ. ಇನ್ನೊಂದು ಆಘಾತಕಾರೀ ಅಂಶವೆಂದರೆ ಬ್ರಹ್ಮಾಂಡ ಸ್ವಾಮೀಜಿ, ಋಷಿಕುಮಾರ ಸ್ವಾಮೀಜಿ ಮುಂತಾದ ಸ್ವಾಮೀಜಿಗಳನ್ನು ಆಯ್ಕೆ ಮಾಡುವ ಮೂಲಕ ಕಾರ್ಯಕ್ರಮದ ನಿರ್ಮಾಪಕರು ಮನುವಾದಿ ಧೋರಣೆಯನ್ನು ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಪ್ರ.ಹೋ.ಸಂ ಜಿಲ್ಲಾ ಘಟಕದ ಅಧ್ಯಕ್ಷ ಸಿಕ್ಕರಾಯಪ್ಪ ಅವರು ‘ಮೀಸಲಾತಿ ಭಿಕ್ಷೆ ಅಲ್ಲ; ಅದು ಸಮಾನತೆಯ ಸಾಧನ’ ಎಂದು ಹೇಳಿದರು. ಲಕ್ಷಾಂತರ ವರ್ಷಗಳಿಂದ ಸಾರ್ವಜನಿಕ ವಲಯಗಳಲ್ಲಿ ಪ್ರಾತಿನಿಧ್ಯವೇ ಇಲ್ಲದ ಸಾಮಾಜಿಕವಾಗಿ– ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ಸಮಾನ ಪ್ರಾತಿನಿಧ್ಯ ಒದಗಿಸಿಕೊಡುವ ನಿಯಮವೇ ಮೀಸಲಾತಿಯಾಗಿದೆ’ ಎಂದು ಅವರು ಇದೇ ಸಂದರ್ಭದಲ್ಲಿತಿಳಿಸಿದರು.
‘ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ಎಂಬ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದಿದ್ದರಿಂದ ಮನರಂಜನಾ ಕ್ಷೇತ್ರಗಳಲ್ಲಿ ಉದ್ಯೋಗಗಳು ಹೆಚ್ಚು ಹೆಚ್ಚು ಸೃಷ್ಟಿಯಾದವು. ಹೀಗೆ ಸೃಷ್ಟಿಯಾದ ಉದ್ಯೋಗಗಳೆಲ್ಲವೂ ಕೆಲವೇ ಜಾತಿಗಳ ಪಾಲಾದವು. ಇದರಿಂದ ಕೆಲವು ವರ್ಗಗಳ ಜನರು ವಂಚಿತರಾಗುತ್ತಿದ್ದಾರೆ. ಹೀಗಾಗಿ ಖಾಸಗಿ ವಲಯದ ಬಿಗ್ ಬಾಸ್ ನಲ್ಲೂ ಮೀಸಲಾತಿ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು. ‘ಖಾಸಗಿ ಚ್ಯಾನಲ್ ಗಳ ರಿಯಾಲಿಟಿ ಷೋಗಳಲ್ಲಿ ಮೀಸಲಾತಿ ಕಲ್ಪಿಸುವುದು ಹಾಗೂ ಆ ರಿಯಾಲಿಟಿ ಷೋ ಗಳಲ್ಲಿ ಮೀಸಲು ಅಭ್ಯರ್ಥಿಗಳನ್ನು ಫಿನಾಲೆ ವರೆಗೂ ಕಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರುವರಿ 24 ರಿಂದ 28 ರವರೆಗೆ ಬೆಂಗಳೂರಿನ ಸಂಬಂಧಪಟ್ಟ ಚ್ಯಾನಲ್ ಗಳ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ತಿಳಿಸಿದರು.
ಒಳ ಮೀಸಲಿಗೆ ಒತ್ತಾಯಿಸಿ ಧರಣಿ ಮಾ.10ಕ್ಕೆ
ಖಾಸಗಿ ವಲಯದ ಬಿಗ್ ಬಾಸ್ ನಲ್ಲಿ ಒಳಮೀಸಲು ಕಲ್ಪಿಸಿಕೊಡುವಂತೆ ಒತ್ತಾಯಿಸಿ, ಮಾರ್ಚ್.10ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದು ದಿನ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಒಳಮೀಸಲು ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮೀಸೆಮಾವಪ್ಪ ಹೇಳಿದರು. ಭಾನುವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಳಮೀಸಲು ವರ್ಗೀಕರಣಕ್ಕೆ ಕಳೆದ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಒಳ ಮೀಸಲು ಸೌಲಭ್ಯದಿಂದ ರಾಜ್ಯದ ಬಹುತೇಕ ವರ್ಗದವರು ವಂಚಿತರಾಗಿದ್ದಾರೆ. ಪಂಜಾಬಿ, ತಮಿಳು ಸೇರಿ ಇತರ ಭಾಷೆಗಳ ಬಿಗ್ ಬಾಸ್ ನಲ್ಲಿ ಈಗಾಗಲೇ ಜನಸಂಖ್ಯೆ ಆಧರಿಸಿ ಒಳಮೀಸಲು ನೀಡಿವೆ.ಆದರೆ ಕನ್ನಡ ವಾಹಿನಿಗಳಲ್ಲಿ ಮಾತ್ರ ಇಂದಿಗೂ ಒಳಮೀಸಲಾತಿ ಜಾರಿಯಾಗಿಲ್ಲ. ಇತ್ತೀಚಿಗೆ ಸರ್ಕಾರ ನಡೆಸಿದ ಜಾತಿಗಣತಿ ವರದಿಯನ್ನಾಧರಿಸಿ ಮುಂದಿನ ಬಿಗ್ ಬಾಸ್ ನಲ್ಲಿ ಒಳಮೀಸಲು ಕಲ್ಪಿಸಬೇಕೆಂದು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ನಡುವೆ ಬಿಗ್ ಬಾಸ್ ನಲ್ಲಿ ಮೀಸಲಾತಿಗೆ ಆಗ್ರಹಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿರುವ ಘಟನೆ ನಡೆದಿದೆ. ಪ್ರತಿಪಕ್ಷಗಳ ಮುಖಂಡರು ಸ್ಥಳಕ್ಕೆ ಧಾವಿಸಿದ್ದು ಘಟನೆಯನ್ನು ಖಂಡಿಸಿ ಬಿಗ್ ಬಾಸ್ ನಲ್ಲಿ ಮೀಸಲಾತಿಗೆ ಒತ್ತಾಯಿಸುತ್ತಿರುವವರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಮುಂದಿನ ಅಧಿವೇಶನದ ಸಂದರ್ಭದಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನವೊಂದನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಮುಂದಿನ ಬಿಗ್ ಬಾಸ್ ನಲ್ಲಿ ನಮ್ಮ ಬೇಡಿಕೆಗಳು ಅನುಷ್ಠಾನಕ್ಕೆ ಬಾರದಿದ್ದರೆ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಪ್ರ.ಹೋ.ಸಂ.ರಾಜ್ಯಾಧ್ಯಕ್ಷರು ಎಚ್ಚರಿಸಿದ್ದಾರೆ.
ವಿ.ಸೂ: ಈ ಸುದ್ದಿಯು ಖಾಸಗಿ ಉದ್ಯಮ,ಸಾಹಿತ್ಯ,ಮಾಧ್ಯಮ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಮೀಸಲಾತಿಗೆ ಒತ್ತಾಯಿಸುತ್ತಿರುವುದನ್ನು ಕಂಡು ಕಲ್ಪಿಸಿಕೊಂಡು ಬರೆದ ಕಾಲ್ಪನಿಕ ಸುದ್ದಿಯಾಗಿದ್ದು ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳಿಗೆ ಸಂಬಂಧಿಸಿದ್ದಲ್ಲ. ಒಂದು ವೇಳೆ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ.
ಸುಳ್ಸುದ್ದಿಯ ಸುಳ್ಳುಗಾರ.. ಹ ಹ ಹ..