ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 25, 2017

11

ಸತ್ಯಂ ಶಿವಂ ಸುಂದರಂ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

shiv-mahapuran“ನೀವು ವಿಜ್ಞಾನ ಬರಹಗಾರರಾಗಿ ದೇವರನ್ನು ನಂಬ್ತೀರಾ?!” ಎಂಬ ಪ್ರಶ್ನೆ ಸಾಧಾರಣವಾಗಿ ಆಗಾಗ ನನ್ನೆದುರು ಬರುತ್ತದೆ. ಹೆಚ್ಚಾಗಿ ಅಂಥ ಸಂದರ್ಭಗಳಲ್ಲೆಲ್ಲ ಪ್ರಶ್ನೆ ಕೇಳಿದವರು ಯಾರು ಎಂಬುದನ್ನು ನೋಡಿಕೊಂಡು ಉತ್ತರ ಕೊಡುತ್ತೇನೆ. ನಿಜವಾಗಿಯೂ ಧಾರ್ಮಿಕರಾಗಿದ್ದು ನನ್ನ ವಿಜ್ಞಾನ ಲೇಖನಗಳನ್ನೂ ಓದಿಕೊಂಡವರು ಕೇಳಿದ್ದರೆ ಸಂಕ್ಷಿಪ್ತವಾಗಿ “ಹೌದು” ಎಂದುಬಿಡುತ್ತೇನೆ. ಆಗ ಅವರಿಗೆ ಖುಷಿಯಾಗುತ್ತದೆ. ಪರವಾಗಿಲ್ಲ, ವಿಜ್ಞಾನ ಗಿಜ್ಞಾನ ಅಂತ ಹೇಳ್ತಿದ್ದರೂ ಹುಡುಗನಿಗೆ ದೈವಭಕ್ತಿ ಇದೆ ಎಂದು ಸಂಭ್ರಮಪಡುತ್ತ ಹೋಗುತ್ತಾರೆ. ಸ್ವಲ್ಪ ವಿಚಾರವಾದಿಗಳ ಹಾಗೆ ಕಂಡರೆ “ನಾನು ಆಸ್ತಿಕ ಎಂದು ಹೇಳಿದ್ದ ಸ್ಟೇಟ್‍ಮೆಂಟ್ ಇದ್ದರೆ ಕೊಡಿ” ಎಂದು ಕೇಳುತ್ತೇನೆ. ಈ ಮನುಷ್ಯ ಅದ್ಯಾಕೋ ಯುದ್ಧಕ್ಕೆ ಅಣಿಯಾಗುತ್ತಿದ್ದಾನೆ ಎಂದು ಭಾವಿಸಿದ ಅವರು ದೇವರನ್ನು ನಂಬುವ ವಿಚಾರವನ್ನು ಅಲ್ಲಿಗೇ ಬಿಟ್ಟು “ಈ ವಾರ ಈರುಳ್ಳಿ ಬೆಲೆ ಏರಿದೆ ನೋಡಿ” ಎಂದು ವಿಷಯಾಂತರ ಮಾಡುತ್ತಾರೆ. ಒಂದೆರಡು ವರ್ಷಗಳ ಹಿಂದೆ ಓರ್ವ ಹಿರಿಯ ವಿಜ್ಞಾನ ಲೇಖಕರೇ ನನಗೆ “ವಿಜ್ಞಾನ ಬರೆಯುವವನಾಗಿ ದೇವರನ್ನು ಹೇಗೆ ನಂಬ್ತೀಯೋ?” ಎಂದು ಕೇಳಿ ಗೊಂದಲಪಡಿಸಿದ್ದರು. “ನನಗೆ ದೇವರ ಬಗ್ಗೆ ಭಕ್ತಿ ಎಂಬುದು ಯಾಕೋ ಅಷ್ಟು ಸುಲಭದಲ್ಲಿ ಬರುವುದಿಲ್ಲ. ದೇವರ ಬಗ್ಗೆ ಕುತೂಹಲ ಇದೆ, ಪ್ರೀತಿ ಇದೆ, ಗೆಳೆತನ ಇದೆ” ಎಂದಿದ್ದೆ. “ಓಹೋ ಹಾಗೋ? ಅಂದರೆ ನೀನು ನಾಸ್ತಿಕನೆಂದಾಯಿತು. ನಾಸ್ತಿಕನಾಗಿದ್ದು ಆಸ್ತಿಕನಂತೆ ಬರೆಯಬೇಡ. ಆಸ್ತಿಕನಾಗಿದ್ದು ನಾಸ್ತಿಕನಂತೆ ಬರೆ” ಎಂದು ಅವರು ಉಪದೇಶ ಮಾಡಿದ್ದರು! ಅಸಲಿಗೆ ನನಗೆ ನಾನು ಆಸ್ತಿಕನೋ ನಾಸ್ತಿಕನೋ ಎಂಬ ಪ್ರಶ್ನೆಯೇ ಪ್ರಮುಖ ಅನ್ನಿಸಿಲ್ಲ. ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಯೂ ಈ ಎರಡು ಕೆಟಗರಿಗಳಲ್ಲಿ ಒಂದನ್ನು ಆರಿಸಿಕೊಳ್ಳಲೇಬೇಕು ಎಂದು ಯಾರಾದರೂ ಸರ್ವಾಧಿಕಾರಿ ರೂಲ್ಸು ಮಾಡುವ ತನಕ ನನಗೆ ನಿಶ್ಚಿಂತೆ.

ಚಿಕ್ಕವನಿದ್ದಾಗ ನನ್ನನ್ನು ಆಕರ್ಷಿಸಿದ ಮೊದಲ ದೇವರು ಎಂದರೆ ಶಿವ. ಅದಕ್ಕೆ ಹಲವಾರು ಕಾರಣಗಳು. ಒಂದು – ನಾನು ಬಾಲ್ಯ ಕಳೆದ ನನ್ನ ಅಜ್ಜಿಮನೆಯಲ್ಲಿ ಹಜಾರದ ಗೋಡೆಯ ಮೇಲೆ ಒಂದು ಆಕರ್ಷಕವಾದ ಶಿವನ ಫೋಟೋ ಇತ್ತು. ಅವನ ನೀಲಿಗಟ್ಟಿದ ಮೈ, ಸ್ಥಿರವಾಗಿ ಕೂತ ಆ ಗಂಭೀರ ಮುದ್ರೆ, ಮೂರನೇ ಕಣ್ಣಿನ ಅರೆನಿಮೀಲಿತ ನೋಟ, ಹಿನ್ನೆಲೆಯಲ್ಲಿ ಭವ್ಯವಾಗಿ ತಲೆಯೆತ್ತಿನಿಂತ ಕೈಲಾಸ ಪರ್ವತ, ಪಕ್ಕದಲ್ಲಿ ಈ ಧ್ಯಾನ ಯಾವಾಗ ಮುಗಿಯುತ್ತೋ ಎಂದು ಅರ್ಧ ಆಸೆ ಅರ್ಧ ಕುತೂಹಲದಿಂದ ನಿಂತ ನಂದಿಯ ಅಮಾಯಕ ನೋಟ, ಶಿವನ ಕೊರಳ ಕಾಳಸರ್ಪನ ಹೊಳೆವ ಕಣ್ಣು, ಸೊಂಟದಲ್ಲಿದ್ದ ಆ ಹುಲಿಚರ್ಮದ ನುಣುಪು – ಇವೆಲ್ಲ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಂಥ ಶಿವನಿಗೆ ಪ್ರತಿ ಸೋಮವಾರ ನನ್ನ ಚಿಕ್ಕಮ್ಮ ಗೋರಂಟಿ, ಮಂದಾರ, ಸಂಪಿಗೆಗಳ ಆಕರ್ಷಕ ಮಾಲೆ ಮಾಡಿ ಹಾಕುತ್ತಿದ್ದಳು. ಪ್ರತಿದಿನ ಸಂಜೆ ಹಜಾರದ ಹಜಾರ ದೇವಾನುದೇವತೆಗಳಿಗೆಲ್ಲ ಭಕ್ತಿಯಿಂದ ವಾಸು ಅಗರಬತ್ತಿಯನ್ನು ಮೂರು ಮೂರು ಸಲ ತೋರಿಸಿ ಕೊನೆಗೆ ಶಿವನ ಪಟದ ಪಕ್ಕ ಹಚ್ಚಿಡುವ ಕೆಲಸ ನನ್ನದಾಗಿತ್ತು. ನನ್ನ ಅಜ್ಜಿ ಚಿಕ್ಕಮ್ಮನಿಗೆ (ಅಂದರೆ ತನ್ನ ಮಗಳಿಗೆ) ಪ್ರತಿ ಸೋಮವಾರ ಭಕ್ತಿಯಿಂದ ಶಿವನ ಆರಾಧನೆ ಮಾಡಿದರೆ ಬೇಗ ಮದುವೆಯಾಗುತ್ತದೆ ಎಂದು ನಂಬಿಸಿದ್ದರು. ಅದೇನು ಮಹಿಮೆಯೋ, ನನಗೆ ಬುದ್ಧಿ ಬಂದು ಒಂದೆರಡು ವರ್ಷಕ್ಕೆಲ್ಲ ಆಕೆಗೆ ಮದುವೆಯೂ ಆಗಿಬಿಟ್ಟಿತೆನ್ನಿ! ಅದೇ ಅಜ್ಜಿ ನನಗೆ, ದೇವತೆಗಳ ಪೈಕಿ ತಪಸ್ಸಿಗೆ ಬೇಗ ಒಲಿದು ಪ್ರತ್ಯಕ್ಷನಾಗಿ ವರ ಕೊಡುವ ದೇವರು ಶಿವ ಎಂದೂ ಒಂದು ಹುಳ ತಲೆಯೊಳಗೆ ಬಿಟ್ಟಿದ್ದರು. ಹಾಗಾಗಿ ಯಾವಾಗ ನಾನು ಶಿವನನ್ನು ಸಾಕ್ಷಾತ್ ನೋಡುತ್ತೇನೋ, ಯಾವಾಗ ವರ ಪಡೆಯುತ್ತೇನೋ ಎಂಬ ಮುಗ್ಧ ಕೌತುಕ ನನಗೂ ಇತ್ತು. ಬರುವುದಾದರೆ ಬೇಗ ಬರಲಿ ಎಂದು ಲಿಂಗಾಷ್ಟಕ ಕಂಠಪಾಠ ಮಾಡಿ ಹಾಡುತ್ತಿದ್ದೆ. ಆಗಾಗ ಸಂಜೆ ಗುಡ್ಡದ ಕೇಪಳ ಹೂ ಕೊಯ್ದು ತರುತ್ತೇನೆಂದು ಹೇಳಿ, ಗುಡ್ಡದಲ್ಲಿ ಯಾರಿಗೂ ಕಾಣದ ಜಾಗದಲ್ಲಿ ಕೂತು ಶಿವನಿಗಾಗಿ ಭಕ್ತಿಯಿಂದ ತಪಸ್ಸು ಮಾಡುತ್ತಿದ್ದದ್ದೂ ಉಂಟು. ಆದರೆ, ಹಾಗೆ ತಪಸ್ಸಿಗೆ ಕೂತಾಗ ಯಾರ ಮನೆಯ ಎತ್ತು-ಕೋಣಗಳು ನನ್ನೆದುರು ಬರುತ್ತವೋ, ಯಾವ ಹುಲಿರಾಯ ಪೊದೆಯಿಂದ ನನ್ನ ಮೇಲೆ ಹಾರೀತೋ ಎಂದು ಭಯಬಿದ್ದು ಆಗಾಗ ಒಕ್ಕಣ್ಣು ತೆರೆದು ಆಚೀಚೆ ನೋಡುತ್ತಿದ್ದುದರಿಂದಲೇ ತಪೋಭಂಗವಾಗಿ ಶಿವ ಪ್ರತ್ಯಕ್ಷನಾಗಲಿಲ್ಲ ಎಂದು ಈಗಲೂ ನಂಬಿದೆ ಮನಸ್ಸು.

ಅಜ್ಜಿ, “ಶಿವ ಬೇಗ ಒಲಿಯುತ್ತಾನೆ, ವಿಷ್ಣು ಹಾಗಲ್ಲ, ಪರೀಕ್ಷಿಸುತ್ತಾನೆ” ಎಂದು ಹೇಳಿದ್ದಕ್ಕೋ ಏನೋ ನನಗೆ ಕೃಷ್ಣನ ಮೇಲೆ ಅಷ್ಟೇನೂ ಒಲವು ಬೆಳೆಯಲಿಲ್ಲ ಚಿಕ್ಕಂದಿನಲ್ಲಿ. ಮೇಲಾಗಿ ಕೃಷ್ಣನ ಅಂಥ ಆಕರ್ಷಕ ಪಟಗಳೂ ಮನೆಯಲ್ಲಿರಲಿಲ್ಲ ನೋಡಿ. ಇದ್ದದ್ದು ಒಂದು ತಿಮ್ಮಪ್ಪನ ಪಟ, ಮತ್ತೊಂದು ಉಡುಪಿ ಕೃಷ್ಣನ ಪಟ. ಆದರೆ ಅವೆರಡೂ ಮೂರ್ತಿಗಳ ಚಿತ್ರಗಳಾದ್ದರಿಂದ ಹಿಮಾಲಯದ ತಪ್ಪಲಲ್ಲಿ ಕೂತಿದ್ದ ಧ್ಯಾನಾಸಕ್ತ ಶಿವನ ಜೀವಂತಿಕೆ ನನಗೆ ಅವುಗಳಲ್ಲಿ ಕಾಣಲಿಲ್ಲ. ಮೇಲಾಗಿ ಕೃಷ್ಣ ಅಥವಾ ಬೇರಾವುದೇ ದೇವರಿಗೆ ಹೋಲಿಸಿದರೂ ಶಿವ ಡೈನಾಮಿಕ್ ಪರ್ಸನಾಲಿಟಿಯೇ. ಅವನ ಮೈಯಲ್ಲಿ ವಿರೋಧಾಭಾಸಗಳಿಗೇನು ಕಡಿಮೆಯೇ? ಶಿವ ಮೂರನೇ ಕಣ್ಣು ತೆರೆದರೆ ಜಗತ್ತೆಲ್ಲ ಭಸ್ಮ. ಆದರೆ ಜಗವನ್ನು ಪ್ರಳಯದಲ್ಲಿ ತೇಲಿಸಬಲ್ಲ ಗಂಗೆಯೂ ಅವನ ಮುಡಿಯಲ್ಲೇ ಇದ್ದಾಳೆ. ಆತ ನಿಶಾಚರಿ, ಸ್ಮಶಾನವಾಸಿ. ಹಾಗಂತ ಕತ್ತಲಲ್ಲಿ ನಡೆಯಬೇಕಾದ ಪ್ರಮೇಯವಿಲ್ಲ. ಯಾಕೆಂದರೆ ಚಂದ್ರನೆಂಬ ಟಾರ್ಚ್‍ಲೈಟ್‍ಅನ್ನು ಜಟೆಯಲ್ಲೇ ಸಿಕ್ಕಿಸಿಕೊಂಡಿದ್ದಾನೆ. ಇನ್ನು ಅವನ ಕೊರಳನ್ನು ಸುತ್ತಿಕೊಂಡಿರುವುದು ಚಿನ್ನದ ನೆಕ್ಲೇಸೋ ವಜ್ರದ ಕಂಠಿಹಾರವೋ ಅಲ್ಲ, ನಾಗರಹಾವು! ಆದರೆ ಅವನ ಇಬ್ಬರು ಮಕ್ಕಳಾದ ಗಣಪತಿ ಮತ್ತು ಕಾರ್ತಿಕೇಯರ ವಾಹನಗಳು ಇಲಿ ಮತ್ತು ನವಿಲು! ಒಂದನ್ನು ಹಾವು ತಿಂದರೆ ಇನ್ನೊಂದು ಹಾವನ್ನೇ ಕುಕ್ಕಿಬಿಟ್ಟೀತು! ಶಿವನ ವಾಹನ ನಂದಿ. ಆದರೆ ಶಿವನ ಹೆಂಡತಿ ತನ್ನ ವಾಹನವನ್ನೇನಾದರೂ ಏರಿ ಬಂದರೆ ನಂದಿ ಶಿವನನ್ನು ಎತ್ತಿಹಾಕಿ ನಾಗಾಲೋಟ ಕೀಳಬಹುದು! ಅಯ್ಯಬ್ಬ, ಇದೆಂಥ ವಿಚಿತ್ರ ಸಂಸಾರವಪ್ಪ ಎಂದು ಎಷ್ಟೋ ವರ್ಷಗಳ ಕಾಲ ನನಗೆ ಗೊಂದಲವಾಗಿತ್ತು.

ಭವಭೂತಿ ಎಂಬ ಸಂಸ್ಕೃತ ಕವಿ ಮಾಲತೀ ಮಾಧವ ಎಂಬ ಪ್ರಕರಣ (ನಾಟಕ) ಬರೆದಿದ್ದಾನೆ. ಅದರ ಪ್ರಾರಂಭದ ಪದ್ಯ ಶಿವನ ಡ್ಯಾನ್ಸ್ ಅನ್ನು ವಿವರಿಸುವಂಥಾದ್ದು. ಕೈಲಾಸದಲ್ಲಿ ತನ್ನ ಮಕ್ಕಳಿಬ್ಬರ ಜೊತೆ ಕ್ವಾಲಿಟಿ ಟೈಮ್ ಕಳೆಯುತ್ತಿದ್ದ ಶಿವನಿಗೊಮ್ಮೆ ನೃತ್ಯ ಮಾಡುವ ಮನಸ್ಸಾಗಿ ಡಮರು ಬಡಿದನಂತೆ. ಅದಕ್ಕೆ ತಕ್ಕಂತೆ ನಂದಿ ಮುರಜವನ್ನು ಬಡಿಯತೊಡಗಿದನಂತೆ. ಇದನ್ನು ಕೇಳಿ ಖುಷಿಯಾದ ಕಾರ್ತಿಕೇಯನ ನವಿಲು ಡಮರು-ಮುರಜಗಳ ಬಡಿತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಖುಷಿಯಿಂದ ಕೂಗಿತಂತೆ. ನವಿಲಿನ ಕೂಗಿಗೆ ಬೆಚ್ಚಬೇಕಾದ್ದು ಹಾವು ತಾನೆ? ಗಣಪನ ಹೊಟ್ಟೆಗೆ ಬೆಲ್ಟಾಗಿ ಬಿಗಿಯಲ್ಪಟ್ಟಿದ್ದ ಹಾವು ನವಿಲಿನ ಕೇಕೆಗೆ ಹೌಹಾರಿಬಿದ್ದು ಗಣಪನ ಸೊಂಡಿಲೇ ಹುತ್ತದ ಬಾಯಿಯಿರಬೇಕೆಂದು ಭಾವಿಸಿ ಧರಬರನೆ ಒಳಸೇರಲು ಯತ್ನಿಸಿತಂತೆ. ಆಗ ಗಣಪ ಸಭಾಮರ್ಯಾದೆ ಬಿಟ್ಟು “ಆ…ಕ್ಷೀ” ಎಂದು ಸೀನಿಯೇಬಿಟ್ಟನಂತೆ! ತನ್ನ ನಾಟಕದ ಮುಂದಿನೆಲ್ಲ ಸೀನುಗಳಿಗೆ ನಾಂದಿಯಾಗಿ ಭವಭೂತಿ ಬರೆದ ಈ ಪದ್ಯವನ್ನು ಕೈಂತಜೆ ನರಸಿಂಹ ಭಟ್ಟರು,

ಹರನ ತಾಂಡವಕೊಲಿದು ನಂದಿಯು
ಮುರಜವನು ಬಾರಿಸುತಲಿರಲಾ
ವರಕುಮಾರನ ನವಿಲು ನರ್ತಿಸಲಿಡೆ ನಿಜೋದರದ
ಉರಗನತಿ ಬೆದರುತ್ತ ಸೇರಲು
ಕರದಿ ಸಂಕೋಚದಲಿ ಸೀನುತ
ಲಿರುವ ಗಣಪನು ಕಾವ್ಯದೋಷವ ಕಳೆದು ಕರುಣಿಸಲಿ!

– ಎಂದು ಕನ್ನಡಿಸಿದ್ದಾರೆ.

ಬಹುಶಃ ಇಷ್ಟೊಂದು ವೈವಿಧ್ಯಮಯ ವೈಚಿತ್ರ್ಯಮಯ ಸಂಸಾರವಂದಿಗನಾಗಿದ್ದಕ್ಕೇ ಇರಬೇಕು, ಶಿವನ ಬಗ್ಗೆ ನನಗೆ ವಿಚಿತ್ರ ಕುತೂಹಲ ಹುಟ್ಟಿದ್ದು. ಚಿಕ್ಕವನಿದ್ದಾಗ ಯಾವುದಾದರೂ ಪೂಜೆ ನಡೆವಾಗ ಮನೆಯಲ್ಲಿ ಪುರೋಹಿತರು ರುದ್ರ ಹೇಳುತ್ತಿದ್ದರು. ಅದರಲ್ಲಿ ನಮೋ ಭವಾಯ ಚ ರುದ್ರಾಯ ಚ ನಮಃ ಶರ್ವಾಯ ಚ ಪಶುಪತಯೇ ಚ ನಮೋ ನೀಲಗ್ರೀವಾಯ ಚ ಶತಕಂಠಾಯ ಚ ಎಂದು ತಾರಕ ಕಂಠದಲ್ಲಿ ಚಮಕ ಹೇಳುತ್ತಿದ್ದಾಗ ಹುಟ್ಟುತ್ತಿದ್ದ ಧ್ವನಿತರಂಗಗಳ ಮೋಡಿಗೆ ಮರುಳಾಗುತ್ತಿದ್ದೆ. ನನ್ನ ಮಟ್ಟಿಗೆ ಹೇಳುವುದಾದರೆ, ದೇವಾನುದೇವತೆಗಳ ಪೈಕಿ ಶಿವನ ಸ್ತುತಿಯಷ್ಟು ಚಂದದ ವರ್ಣನೆಗಳನ್ನು ಪ್ರಾಚೀನರು ಬೇರೆಯವರಿಗೆ ಮೀಸಲಿಟ್ಟಿಲ್ಲ. ಹತ್ತು ಅವತಾರಗಳನ್ನು ಎತ್ತಿಬಂದ ವಿಷ್ಣುವಿಗೆ ಕೂಡ ಇಲ್ಲದ ಹೊಗಳಿಕೆಯ ಹೊನ್ನಶೂಲಕ್ಕೆ ಶಿವನನ್ನು ಏರಿಸಿಬಿಟ್ಟಿದ್ದಾರೆ! ಅವನ ಜಟೆಯಿಂದ ಹಿಡಿದು ಎಡಗಾಲಿನ ಕಿರುಬೆರಳವರೆಗೆ ಎಲ್ಲವನ್ನೂ ವರ್ಣಿಸಿಬಿಟ್ಟಿದ್ದಾರೆ. ಅವನನ್ನು ಮಾತ್ರವಲ್ಲ, ಬೇರೆಯವರನ್ನು ವರ್ಣಿಸುವಾಗಲೂ ಕವಿಗಳಿಗೆ ಶಿವನೇ ಪ್ರಮಾಣ. ವೀರರಸಪ್ರವೀಣ ಕುಮಾರವ್ಯಾಸ ಚಕ್ರವ್ಯೂಹವನ್ನು ಹೊಗಲು ಹೊರಟ ಅಭಿಮನ್ಯುವಿನ ಬಾಯಲ್ಲಿ ಹೇಳಿಸುತ್ತಾನೆ: ಬವರವಾದರೆ ಹರನ ವದನಕೆ ಬೆವರ ತಹೆನು – ಎಂದು. ಯುದ್ಧವೇನಾದರೂ ನಡೆದೇ ಹೋದರೆ ಆ ಕೌರವರ ಪಾಳೆಯಕ್ಕೇನು ಸ್ವತಃ ಮುಕ್ಕಣ್ಣ ಶಿವನ ಹಣೆಯಲ್ಲೇ ಬೆವರಿಳಿಸಿಬಿಟ್ಟೇನು ಎಂಬ ಪೌರುಷ ಆ ಹದಿನಾರರ ಹರೆಯದ ಹೈದನದ್ದು! ಹಾಗೆಯೇ ಕವಿಚಕ್ರವರ್ತಿ ರನ್ನ ತನ್ನ ಮೇರುಕೃತಿ ಗದಾಯುದ್ಧದಲ್ಲಿ, ದೃಷ್ಟದ್ಯುಮ್ನ ದ್ರೋಣರ ಜುಟ್ಟು ಹಿಡಿದೆಳೆದು ನೆಲಕ್ಕೆ ಕೊಡವಿದಾಗ ಅವರ ಅವಸ್ಥೆಯನ್ನು ಕಂಡ ದುರ್ಯೋಧನನ ಬಾಯಲ್ಲಿ ಹೇಳಿಸುತ್ತಾನೆ: ಅರಿಯೆಮೆ ಬಿಲ್ಲ ಬಿನ್ನಣಕೆ ಗಾಂಡಿವಿಯಲ್ತು ಪಿನಾಕಪಾಣಿಯುಂ ನೆರೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕೆ. ಎಂದರೆ, ನಿಮ್ಮ ಬಿಲ್ವಿದ್ಯೆ ನಿಪುಣತೆಯನ್ನು ನಾವು ಅರಿಯೆವೇ ಆಚಾರ್ಯರೇ? ಆ ಅರ್ಜುನ ಒತ್ತಟ್ಟಿಗಿರಲಿ, ಸ್ವತಃ ಪಿನಾಕಪಾಣಿ ಶಿವ ನಿಮ್ಮ ಜೊತೆ ಯುದ್ಧ ಹೂಡಿ ಗೆಲ್ಲುವುದುಂಟೆ? ಆದರೂ ನಾವು ಶಾಲೆ ಕಲಿಯುತ್ತಿದ್ದ ಸಮಯದಲ್ಲಿ ರಾಬರ್ಟ್ ಜೊತೆ ವಾಗ್ವಾದವಾದಾಗ ಆತ ಶಿವನ ವಿರೋಧಾಭಾಸಗಳನ್ನು ಹಿಗ್ಗಾಮುಗ್ಗಾ ಜಗ್ಗಾಡಿದ್ದ. “ಎಂಥ ದೇವರೋ ನಿಮ್ಮದು? ಸ್ವಂತ ಮಗನ ತಲೆ ಕಡಿಸಿದ. ಸಾಲದ್ದಕ್ಕೆ ಕಡಿದ ರುಂಡವನ್ನೇ ಮತ್ತೆ ಸಿಕ್ಕಿಸದೆ ಆನೆಯ ತಲೆ ಕಡಿಸಿ ತಂದು ಇದಕ್ಕೆ ಜೋಡಿಸಿದ. ಅತ್ತ ಆನೆಯೂ ಸತ್ತಿತು, ಇತ್ತ ಹೊರಲಾರದ ತಲೆ ಹೊತ್ತು ಈ ಹುಡುಗನೂ ಫಡ್ಚ ಆದ” ಎಂದು ರಾಬರ್ಟ್ ಒಂದೊಂದೇ ಲಾ ಪಾಯಿಂಟ್ ಹಾಕುತ್ತಿದ್ದರೆ ನಾವು ಒಂದಷ್ಟು ಹುಡುಗರು ವಾದಕ್ಕೆ ಪಾಯಿಂಟುಗಳು ಸಿಗದೆ ಕಂಗಾಲಾಗುತ್ತಿದ್ದೆವು. ಅವತ್ತು ಮನೆಗೆ ಬಂದವನೇ, “ಇದಕ್ಕೆಲ್ಲ ಉತ್ತರ ಕೊಡು” ಎಂದು ಅಮ್ಮನನ್ನು ಪೀಡಿಸುತ್ತಿದ್ದೆ. ಹೀಗೆ ಬಾಲ್ಯಕಾಲದಲ್ಲಿ ಶಿವ ನಮಗೆ ಕೊಟ್ಟ ಕಾಟವೂ ಅಷ್ಟಿಷ್ಟಲ್ಲ!

ಉತ್ತರವಿಲ್ಲದ ಪ್ರಶ್ನೆಗಳು ಮೊಳೆತ ಮೇಲೆ ನನಗೆ ಶಿವನ ಮೇಲೆ ಜಿಗುಪ್ಸೆ ಬರಬೇಕಿತ್ತು. ಅಥವಾ ಕಡೇಪಕ್ಷ ಅನಾಸಕ್ತಿ ಬೆಳೆಯಬೇಕಿತ್ತು. ಆದರೆ ಇಲ್ಲ, ಕುತೂಹಲ ಹೆಚ್ಚುತ್ತ ಹೋಯಿತು. ನಮ್ಮ ಊರಲ್ಲಿ ಒಂದು ಶಿವನ ದೇವಸ್ಥಾನ ಇತ್ತು. ಅಲ್ಲಿನ ಶಿವನಿಗೆ ಭಕ್ತರು ಎಳನೀರಿನ ಹರಕೆ ಹೊರುತ್ತಿದ್ದರು. ದೇವಸ್ಥಾನವನ್ನು ಸಂದರ್ಶಿಸುವವರೆಲ್ಲರೂ ಒಂದೋ ಎರಡೋ ಎಳನೀರನ್ನು ಕಟ್ಟಿಸಿಕೊಂಡು ಹೋಗಿ ಹಾಕುತ್ತಿದ್ದರು. ದೇವಸ್ಥಾನದ ಪ್ರಾಂಗಣದಲ್ಲಿ ಒಂದು ಮೂಲೆಯಲ್ಲಿ ಎಳನೀರಿನ ಬೆಟ್ಟವೇ ಸದಾ ಇರುತ್ತಿತ್ತು. ಅಲ್ಲಿನ ಎಳನೀರನ್ನು ಕೆತ್ತಿ ಕೆತ್ತಿ ಒಬ್ಬ ಕೊಡುತ್ತಿದ್ದರೆ ಅರ್ಚಕರು ಅವನ್ನು ಎತ್ತೆತ್ತಿ ಶಿವಲಿಂಗದ ನೆತ್ತಿಯ ಮೇಲೆ ಸುರಿಯುತ್ತಿದ್ದರು. ಎಳನೀರಿನ ರುಚಿಯನ್ನು ಇಷ್ಟಪಡುತ್ತಿದ್ದ ನನಗೆ ಛೆ, ಎಷ್ಟೊಂದು ವೇಸ್ಟು ಎನ್ನಿಸಿ ಹೊಟ್ಟೆಯೆಲ್ಲ ಚುರ್ ಅನ್ನಿಸುತ್ತಿತ್ತು. ಆದರೆ ಆ ದೇವರಿಗೆ ಕಾರಣಿಕವಿದೆಯೆಂದು ಇಡೀ ಊರು ನಂಬುತ್ತಿದ್ದದ್ದಕ್ಕೆ ಸರಿಯಾಗಿ, ಪ್ರತಿ ಬೇಸಗೆಯಲ್ಲಿ ಊರಿನ ಎಲ್ಲರೂ ಸೇರಿ ದೇವರಿಗೆ ಸೀಯಾಳ ಅಭಿಷೇಕ ಇಟ್ಟುಕೊಂಡರೆ ಸಾಕು ಅವತ್ತೇ ಸಂಜೆ ಜೋರಾಗಿ ಮಳೆ ಸುರಿದುಬಿಡುತ್ತಿತ್ತು! ನಾನು ದೊಡ್ಡವನಾದ ಮೇಲೆ ಆ ಊರು ಬಿಟ್ಟೆ. ಆದರೆ ಶಿವ, ಮತ್ತವನ ಮಹಿಮೆ, ಆ ದೇವಸ್ಥಾನದಲ್ಲಿ ನಾವು ಹಾಕಬೇಕಿದ್ದ ಆಂದೋಲನದಂಥ ವಿಚಿತ್ರ ಪ್ರದಕ್ಷಿಣೆ, ಆ ಊರಿನ ತೇರು, ತೇರಿಗೆ ದೇವರನ್ನು ಹೊತ್ತು ಅರ್ಚಕರು ಅಂಗಳ ತುಂಬ ಮಾಡುತ್ತಿದ್ದ ನರ್ತನ, ಶತಮಾನಗಳಷ್ಟು ಹಳೆಯದೋ ಎನ್ನಿಸುವಂತಿದ್ದ ಭೀಮಾಕಾರದ ಜೀವಂತ ನಂದಿ.. ಎಲ್ಲವೂ ಮನಸ್ಸಿನಲ್ಲಿ ಕೂತುಬಿಟ್ಟಿವೆ. ಹುಟ್ಟೂರು ಬಿಟ್ಟು ಎತ್ತ ಹೋದರೂ ಶಿವನಿಲ್ಲದ, ಆತನ ಗುಡಿಯಿಲ್ಲದ ಊರುಗಳಂತೂ ನನಗೆ ಇದುವರೆಗೆ ಸಿಕ್ಕಿಲ್ಲ. ಭಾರತದ ಉದ್ದಗಲ, ಬೇರೆಲ್ಲ ದೇವರುಗಳಿಗೆ ಮೀಸಲಾದ ಎಲ್ಲ ಗುಡಿಗಳನ್ನು ಒಟ್ಟಿದರೂ ಅವು ಶಿವಾಲಯಗಳಿಗೆ ಸರಿದೂಗವೇನೋ. ಇತಿಹಾಸ ತಜ್ಞರು ಹರಪ್ಪಾ ಮೊಹೆಂಜೋದಾರೊಗಳ ಉತ್ಖನನದಲ್ಲೂ ಪಶುಪತಿಯ ಮುದ್ರೆಗಳನ್ನು ಹುಡುಕಿ ತೆಗೆದಿದ್ದಾರೆ. ಭಾರತದಲ್ಲಿ ಶೈವ ಪಂಥಕ್ಕೆ ಹಲವು ಸಾವಿರ ವರ್ಷಗಳ ಇತಿಹಾಸವಿದೆ ಎಂದು ತಿಳಿದವರು ಹೇಳುತ್ತಾರೆ. ಭಾರತದಲ್ಲಿ ಕೆಲವು ಶಿವನ ದೇವಸ್ಥಾನಗಳಿಗೆ ಅದೆಷ್ಟು ವಯಸ್ಸಾಗಿದೆಯೋ ಯಾರಿಗೂ ಗೊತ್ತಿಲ್ಲ. ನನ್ನೂರು ಉಡುಪಿಯಲ್ಲಿ ಕೃಷ್ಣನ ಗುಡಿಯೆದುರು ಇರುವ ಅನಂತೇಶ್ವರನಿಗೂ ಚಂದ್ರಮೌಳೀಶ್ವರನಿಗೂ ಕನಿಷ್ಠ ಎರಡು ಸಾವಿರ ವರ್ಷ ವಯಸ್ಸಾಗಿರಬೇಕೆಂದು ಪಂಡಿತರ ಅಂದಾಜು.

ಪ್ರಾಯವಾಗುತ್ತ ಹೋದಂತೆ, ಶಿವ, ನನ್ನ ಅರಿವಿಗೆ ನಿಲುಕುವಷ್ಟು ಹತ್ತಿರದಲ್ಲಿ ತೂಗುತ್ತಿರುವ ಫಲವಲ್ಲ ಎಂಬುದು ಮನವರಿಕೆಯಾಗಿದೆ. ಶಿವಲಿಂಗದ ಎತ್ತರವನ್ನು ಅಳೆಯಲು ಹೋಗಿ ಬ್ರಹ್ಮ, ವಿಷ್ಣು ಇಬ್ಬರೂ ಸುಸ್ತಾದ ಕತೆ, ನಿನ್ನನ್ನು ಪೂರ್ತಿಯಾಗಿ ತಿಳಿದವರು ಯಾರಿದ್ದಾರಪ್ಪಾ ಹರಹರ ಮಹಾದೇವ ಎಂದು ಅವರಿಬ್ಬರೂ ಉದ್ದಂಡ ಬಿದ್ದ ಕತೆ ಕೂಡ ಗೊತ್ತು ನಮಗೆ. ರಾಮಾಯಣದ ರಾಮನ ಹಾಗೆ ಶಿವ ನೇರಾನೇರನಾದರೂ ಸುಲಭಕ್ಕೆ ಅರ್ಥವಾಗುವವನಲ್ಲ (ಅಂದ ಹಾಗೆ, ಈ ರಾಮ ಕೂಡ ರಾಮೇಶ್ವರದಿಂದ ಸಮುದ್ರಕ್ಕಿಳಿದು ಲಂಕೆ ಕಡೆ ಪ್ರಯಾಣ ಹೊರಡುವ ಮುನ್ನ ಶಿವಲಿಂಗವನ್ನಿಟ್ಟು ಪೂಜಿಸಿದವನೇ!). ಹಾಗಂತ ತೀರಾ ಒಗಟೂ ಅಲ್ಲ. ಶಿವನದ್ದು ಅಪ್ಪಟ ಹೆಂಗರುಳು. ಅದಕ್ಕೇ ಇರಬೇಕು, ಆತ ಒಳ್ಳೆಯ ಸಂಸಾರಸ್ಥ ಕೂಡ. ತನ್ನ ಹೆಂಡತಿ ಮಕ್ಕಳನ್ನು ಅಷ್ಟೊಂದು ಅಕ್ಕರೆಯಿಂದ ಜೊತೆಯಲ್ಲಿ ಇಟ್ಟುಕೊಂಡಿರುವ ಬೇರೆ ದೇವರು ಯಾರಿದ್ದಾರೆ? ವಿಷ್ಣುವಾದರೋ ಲಕ್ಷ್ಮಿ ಕಾಲ ಬಳಿ ಕೂತು ಕಾಲೊತ್ತಿತ್ತಿದ್ದರೆ ಸಾಕು ಎನ್ನುವವನು. ಅವನ ಮಕ್ಕಳುಮರಿ ಎಲ್ಲಿದ್ದಾರೆ ಯಾರಿಗಾದರೂ ಗೊತ್ತೆ? ಇನ್ನು ಬ್ರಹ್ಮ, ಅವನ ಸಂಸಾರ ಎಲ್ಲಿದೆ ಯಾರು ನೋಡಿದ್ದಾರೆ? ಇರುವ ದೇವತೆಗಳ ಪೈಕಿ ಶಿವನಷ್ಟು ಪರಿಪೂರ್ಣವಾದ ಸಂಸಾರಿಗ ಬೇರೆ ಇಲ್ಲ ಎಂದು ಕಾಣುತ್ತದೆ. ತನ್ನ ಮಕ್ಕಳಿಗೆ ಶಿವ ಆಗಾಗ ಬುದ್ಧಿಗೆ ಕಸರತ್ತು ಕೊಡುವ ಹೋಂವರ್ಕುಗಳನ್ನೂ ಕೊಡುತ್ತಿದ್ದುದುಂಟು. ಇಬ್ಬರನ್ನೂ ಕರೆದು ಆತ ಒಮ್ಮೆ ಇಡೀ ಬ್ರಹ್ಮಾಂಡವನ್ನು ಸುತ್ತಿಕೊಂಡು ಬರಲು ಹೇಳಿದ ಕತೆ ನಮಗೆಲ್ಲ ಗೊತ್ತಿರುವಂಥಾದ್ದೇ ಅಲ್ಲವೆ?

ಶಿವ, ವಿಷ್ಣುವಿನಂತೆ ಶ್ರೀಮಂತನಲ್ಲ. ಹೇಳಿಕೇಳಿ ಮಸಣದಲ್ಲಿ ಕೂತ ಸುಡುಗಾಡ ಸಿದ್ದ, ಗಜಚರ್ಮಾಂಬರಧಾರಿ, ಮೈಯೆಲ್ಲ ಬೂದಿ ಬಳಿದವನು, ಕೊರಳಲ್ಲಿ ಬಂಗಾರದ ಚೈನೂ ಹಾಕಿಕೊಳ್ಳದೆ ರುದ್ರಾಕ್ಷಿ ಬೀಜ ಕಟ್ಟಿಕೊಂಡವನು, ಕೈಯಲ್ಲಿ ಅವನು ಹಿಡಿದದ್ದು ತಲೆಬುರುಡೆಯಿಂದ ಮಾಡಿದ ಭಿಕ್ಷಾಪಾತ್ರೆ! ತನ್ನನ್ನು ಮೆಚ್ಚಿ ಬಂದ ಉಮೆಗೆ ಅವನು ಬಗೆಬಗೆಯಾಗಿ ತನ್ನ ಪರಿಸ್ಥಿತಿಯನ್ನು ವಿವರಿಸಿ ಹೇಳುತ್ತಾನೆ. ನೀನು ನನ್ನನ್ನು ಕಟ್ಟಿಕೊಂಡರೆ ಒಪ್ಪೊತ್ತು ಊಟಕ್ಕೂ ಪರದಾಡಬೇಕೇನೋ ಎಂದೂ ವಿವರಿಸುತ್ತಾನೆ. ಲೋಕದಲ್ಲಿ ಶ್ರೀಮಂತರು, ರೂಪವುಳ್ಳವರು, ಮೈಕೈ ಶುದ್ಧವಾಗಿಟ್ಟುಕೊಂಡವರು ನೂರು ಜನ ಇದ್ದಾರು; ಆದರೆ ಶಿವನಂಥ ಶಿವ ನೀನೊಬ್ಬನೇ ಅಲ್ಲವೋ ಎಂದು ಉಮೆ ಆಕೆಯನ್ನು ಪಟ್ಟುಬಿಡದೆ ಒಲಿಸಿ ಮದುವೆಯಾಗುತ್ತಾಳೆ. ತನ್ನ ಪತ್ನಿಗೆ ದಕ್ಷನ ಯಜ್ಞಮಂದಿರದಲ್ಲಿ ಅವಮಾನವಾದಾಗ ಶಿವ ಕೆಂಡಾಮಂಡಲನಾಗುತ್ತಾನೆ. ಚಿತೆಗೆ ಹಾರಿದ ಪತ್ನಿಯ ದೇಹವನ್ನು ಹೊತ್ತು ಗೋಳಾಡುತ್ತಾನೆ. ತನ್ನ ಶೀಲ ಪರಿಶೀಲಿಸಲು ಬಂದ ಮನ್ಮಥನನ್ನು ಎರಡನೇ ಯೋಚನೆಯನ್ನೇ ಮಾಡದೆ ಬೂದಿಯಾಗಿಸಿಬಿಡುತ್ತಾನೆ. ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗಿಳಿಯಲು ತಯಾರಾದ ಗಂಗೆಯ ಜಂಭ ನೋಡಿ, ಬಿದ್ದರೆ ಶಿವನ ಮುಡಿಗೆ ಬಿದ್ದು ಅಲ್ಲಿಂದ ಇಳಿದೇನೆನ್ನುತ್ತಾಳಲ್ಲ? ಆಗಲೂ ದುಸರಾ ಮಾತಾಡದೆ ತೆಪ್ಪಗೆ ಬಂದು ತಲೆ ಕೊಡುವ ದೇವರು ಈ ಗೌರೀಶಂಕರ. ಇಂಥ ಮಾನವೀಯ ದೇವರು ಎಷ್ಟು ಜನ?

ಅಜ್ಜಿ ಹೇಳಿದ್ದಂತೆಯೇ ಈ ಶಿವ, ಶಂಕರ, ಗಂಗಾಧರ, ತ್ರ್ಯಂಬಕೇಶ್ವರ, ಉಮಾಮಹೇಶ್ವರ ಮಹಾನ್ ಸಾಧು. ಸ್ವಲ್ಪ ಭೋಳೆ ಕೂಡ. ತಪಸ್ಸಿಗೆ ಕೂತ ಭಕ್ತರು ಯಾರೇ ಇರಲಿ, ಯಾವ ಉದ್ದೇಶವನ್ನಿಟ್ಟು ತಪಸ್ಸು ಮಾಡಲಿ ಹಿಂದೆಮುಂದೆ ಯೋಚಿಸದೆ ಪ್ರಕಟನಾಗಿ ತಥಾಸ್ತು ಅಂದುಬಿಡುವಷ್ಟು ಮುಗ್ಧ. ರಾವಣನಿಗೆ ಈತ ತನ್ನ ಆತ್ಮಲಿಂಗವನ್ನೇ ಎತ್ತಿಕೊಟ್ಟ ಮೇಲೆ ಅದನ್ನು ಲಂಕೆ ತಲುಪದಂತೆ ತಡೆಯಲು ಪಾಪ, ಗಣೇಶ ವಟುವಿನ ವೇಷದಲ್ಲಿ ಗೋಕರ್ಣದ ಸಮುದ್ರತೀರದಲ್ಲಿ ರಾವಣನಿಗೆದುರಾಗಿ ಹೋಗಬೇಕಾಯಿತು. ಇಂಥ ಕತೆಗಳಿಂದಾಗಿಯೇ ಬಹುಶಃ ನನಗೂ ಬಾಲ್ಯದಲ್ಲಿ ಶಿವನನ್ನು ತಪಸ್ಸು ಮಾಡಿ ಒಲಿಸಿಕೊಳ್ಳುವ ಆಸೆ ಮೊಳೆತಿರಬೇಕು! ಬ್ರಹ್ಮನಂತೆ ಶಿವ ಜಡನಲ್ಲ; ತಾಂಡವವಾಡಬಲ್ಲ ಚಲನಶೀಲ. ಈತ ಪ್ರಳಯರುದ್ರ ಹೇಗೋ ಸೃಷ್ಟಿಗೆ ಹೇತುವೂ ಹೌದು. ಶಿವ ಎಂದರೆ ಸುಂದರ ಎಂಬ ಅರ್ಥವುಂಟು. ಅದಕ್ಕೇ ಕವಿ ಕುವೆಂಪು, ಶಿವ ಕಾಣದೆ ಕವಿ ಕುರುಡನೊ, ಶಿವ ಕಾವ್ಯದ ಕಣ್ಣೋ – ಎಂಬ ಉದ್ಗಾರ ಮಾಡಿದ್ದಾರೇನೋ. ಪಾಣಿನಿಗೆ ಭಾಷೆಯ ಹದಿನಾಲ್ಕು ಸೂತ್ರಗಳು ಶಿವನ ಢಕ್ಕೆಯ ನಿನಾದದಿಂದ ಸ್ಫುರಿಸಿದವಂತೆ. ಒಂದೇ ದೇಹದ ಅರ್ಧರ್ಧ ಭಾಗಗಳಾಗಿ ಐಕ್ಯರಾಗಿರುವ ಶಿವಶಿವೆಯರ ಅನ್ಯೋನ್ಯ ಕಾಲಿದಾಸನಿಗೆ ವಾಕ್-ಅರ್ಥಗಳಂತೆ ಕಂಡಿತಂತೆ. ವಿಶ್ವದ ಸೃಷ್ಟಿರಹಸ್ಯ ಭೇದಿಸುವ ಪಣ ತೊಟ್ಟಿರುವ, ಎರಡು ಸಾವಿರಕ್ಕೂ ಹೆಚ್ಚು ಅತ್ಯಂತ ಪ್ರತಿಭಾನ್ವಿತ ವಿಜ್ಞಾನಿಗಳಿರುವ ಪ್ರಯೋಗಾಲಯವಾದ ಜಿನೀವಾದ ಸರ್ನ್-ನಲ್ಲಿ ಮುಖ್ಯದ್ವಾರದಲ್ಲೇ ಕಾಸ್ಮಿಕ್ ಡ್ಯಾನ್ಸ್ ಮಾಡುತ್ತಿರುವ ನಟರಾಜನ ಬೃಹತ್ ಪ್ರತಿಮೆ ಸ್ಥಾಪಿಸಿದ್ದಾರೆ. ವಿಶ್ವದ ಅನೂಹ್ಯತೆಯನ್ನೂ ಅಗಾಧತೆಯನ್ನೂ ವೈವಿಧ್ಯವನ್ನೂ ರಹಸ್ಯವನ್ನೂ ಸಾಂಕೇತಿಸುವ ಅಂಥ ಶಿವನ ಕುರಿತು ಯೋಚಿಸುತ್ತ ಕೂತಾಗ, ಮನಸ್ಸು ನಾಸ್ತಿಕವಾಗಿ ಉಳಿಯುವುದಾದರೂ ಹೇಗೆ?

11 ಟಿಪ್ಪಣಿಗಳು Post a comment
 1. ನವೀನ ಗಂಗೋತ್ರಿ
  ಫೆಬ್ರ 25 2017

  ಒಳ್ಳೆಯ ಲೇಖನ ರೋಹಿತ್ 🙂 ನೀವು ಶಿವನ ಬಗ್ಗೆ ಬರೆಯಬಹುದು ಎಂದುಕೊಂಡಿರಲಿಲ್ಲ!. ಶಿವ ಎಂಬುದು ಅಳತೆಗೆ ಸಿಗದ ಅನಂತವಾಗುತ್ತಲೂ ಎಲ್ಲರ ಶುದ್ಧ ಮನಸಿಗೆ ಕರಗುವ ಮುಗ್ಧಶಂಕರ ಎಂಬುದನ್ನೂ ಚೆನ್ನಾಗಿ ಹೇಳಿದ್ದೀರಿ. ಶಿವನಿಗೆ ಸಾವಿರಾರು ದೇವಾಲಯಗಳಿದ್ದೂ ಉಳಿದ ದೇವತೆಗಳಂತೆ ಒಂದಾದರೂ ದೇವಸ್ಥಾನದಲ್ಲಿ ಶಿವನ ಮೂರ್ತಿಯಿದ್ದುದನ್ನು ನಾ ಕಾಣೆ. ಶಿವನೆಂದರೆ ಲಿಂಗ. ಲಿಂಗವೆಂದರೆ ಚಿಹ್ನೆ ಎಂದರ್ಥ ಸಂಸ್ಕೃತದಲ್ಲಿ. ಶಿವನೆಂದರೆ ಚಿಹ್ನೆಯೇ ಹೌದು, ಸೃಷ್ಟಿಯ ಸ್ಥಿತಿಯ ಲಯದ ಎಲ್ಲದರ ಚಿಹ್ನೆ ಅವನು.

  ಉತ್ತರ
  • sudarshana gururajarao
   ಫೆಬ್ರ 26 2017

   ಮೂರ್ತಿರೂಪದಲ್ಲಿ ಪೂಜೆಯಿಲ್ಲ‌. ಬ್ರಹ್ಮನ ತಲೆ ಕತ್ತರಿಸಿದ ಶಾಪ- ಅನ್ಸುತ್ತೆ.

   ಉತ್ತರ
 2. ವಿಶ್ವಮಾನವ
  ಫೆಬ್ರ 25 2017

  ಮಾನ್ಯ ರೋಹಿತ್ ಚಕ್ರತೀರ್ಥರವರೇ, ಆಗಾಗ್ಗೆ ತಮ್ಮ ವಿಚಾರವಾದೀ ಲೇಖನಗಳನ್ನು ನಾನು ನಿಲುಮೆಯಲ್ಲಿ ಓದುತ್ತಿರುತ್ತೇನೆ. ಸದರೆ ವಿಷಯದಲ್ಲಿ ನಿಮ್ಮ ನಿಲುವು “ಆಸ್ತಿಕನೂ ನಾನಲ್ಲ – ನಾಸ್ತಿಕನೂ ನಾನಲ್ಲ” ಎನ್ನುವಂತಿದೆ. ಹೌದು ಅಥವಾ ಇಲ್ಲ ಇಷ್ಟನ್ನು ಮಾತ್ರ ಹೇಳಿದಲ್ಲಿ ಒಂದು ರೀತಿ ನಂಬಿಕೆಗೆ ಅರ್ಹರಾಗುವ ಹೊಸ್ತಿಲಲ್ಲಿದ್ದೀರಿ ಎನ್ನಬಹುದು. ಯಾರಿಗೋಸ್ಕರವೋ ನೀವು ಇಬ್ಬಂದಿತನವನ್ನು ಪಾಲಿಸಲು ಹೋಗುವುದು ಸರಿಯಲ್ಲ. ನಿಮ್ಮದೇ ಆದ ಸ್ವಂತ ನಿಲುವಿಗೆ ನೀವೇ ನಿಮ್ಮ ಕೈಯ್ಯಾರೆ ಹಳ್ಳ ತೋಡಿಕೊಳ್ಳುವ ದುಸ್ಥಿತಿಯಲ್ಲಿ ನೀವಿದ್ದೀರಿ ಅನ್ನದೇ ಬೇರೆ ದಾರಿಯೇ ಇಲ್ಲ. ನಾನು ಪ್ರಶ್ನೆ ಹಾಕದೇ, ಅದಕ್ಕೆ ಸೈದ್ಧಾಂತಿಕವಾಗಿ ಒಪ್ಪುವಂತಹ ಉತ್ತರ ಸಿಕ್ಕದೇ ಹೋದಲ್ಲಿ ಅದನ್ನು ನಾನು ನಂಬುವುದೂ ಇಲ್ಲ, ಹಿಂಬಾಲಿಸುವುದೂ ಇಲ್ಲ. ನಿಷ್ಠುರವಾಗಿ, ಖಡಾಖಂಡಿತವಾಗಿ ತಿರಸ್ಕರಿಸಿಬಿಡುತ್ತೇನೆ. ನನ್ನ ದೀರ್ಘಕಾಲದ ನಿಷ್ಠುರ ಅನುಭವದ ರೀತ್ಯ, ಪ್ರಕೃತಿಮಾತೆಯೇ ನಮ್ಮ ಕಣ್ಣಿಗೆ ಕಾಣುವ ದೇವರು, ಆಕೆ ನಮಗೆ ಪ್ರಸಾದಿಸಿರುವ ಮೆದುಳು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವುದರಿಂದ ನಮಗೆ ದೊರೆಯುತ್ತಿರುವ ಹಣ, ಅವೆರಡನ್ನೂ ಉಪಯೋಗಿಸಿಕೊಂಡು ನಾವು ನಮ್ಮ ಪ್ರತಿದಿನವನ್ನೂ ಕಳೆಯುತ್ತಿರುವ ರೀತಿ ಇವುಗಳೇ ನಿತ್ಯ ಸತ್ಯ.
  ಕಣ್ಣಿಗೆ ಕಾಣದ, ಕೈಗೆ ಸಿಕ್ಕದ, ನಿರುಪಯೋಗಿಯಾಗಿರುವ ಹಿಂದೂಗಳ ೩೩ ಕೋಟಿ ದೇವರುಗಳನ್ನೂ, ಮುಸ್ಲಿಮರ ಅಲ್ಲಾಹ್ ನನ್ನೂ, ದೇವರ ಮಗನೆಂದು ಕರೆಯುವ ಕ್ರಿಸ್ತಾನರ ಏಸುವನ್ನು ಮನುಷ್ಯರು ಸೃಷ್ಟಿ ಮಾಡಿದ್ದು ಪ್ರಕೃತಿಮಾತೆಯಿಂದ ಸೃಷ್ಟಿಯಾಗುವ ಭೂಕಂಪ, ಜ್ವಾಲಾಮುಖಿ, ಪ್ರವಾಹ, ಬಿರುಗಾಳಿ, ಚಂಡಮಾರುತ, ಭೂಕುಸಿತ, ಬಿಸಿಗಾಳಿ ಇವುಗಳನ್ನು ಎದುರಿಸಲಾರದೇ ಹೋದಾಗ. ಅಷ್ಟೇ ಹೊರತು ಈ ಭೂಮಿಯ ಮೇಲೆ ಯಾವುದೇ ದೇವರಾಗಲೀ, ದೆವ್ವವಾಗಲೀ ಇಲ್ಲ. ಇಲ್ಲದ್ದನ್ನು ನಂಬಿ ಹಾಳಾಗುವುದರ ಬದಲು, ಇರುವುದನ್ನು ನಂಬಿ ಸರಿಯಾಗಿ ಜೀವನ ನಡೆಸಿ, ಈ ನಶ್ವರ ಜಗತ್ತನ್ನು ಒಂದು ದಿನ ಹೇಳದೇ ಕೇಳದೇ ಬಿಟ್ಟು ಹೋಗುವುದಕ್ಕಿಂತ ಶ್ರೇಷ್ಠವಾದ. ಉತ್ತಮವಾದ ಕೆಲಸ ಬೇರೊಂದಿಲ್ಲ.

  ಉತ್ತರ
  • BNS
   ಫೆಬ್ರ 26 2017

   ಮಾನ್ಯ ವಿಶ್ವಮಾನವರೆ, ಅಗ್ನೊಸ್ಟಿಕ್ (agnostic: a person who holds the view that any ultimate reality (such as God) is unknown and probably unknowable; broadly : one who is not committed to believing in either the existence or the nonexistence of God or a god) ಎನ್ನುವ ಪದದ ಅರ್ಥ ಹಿರಿಯರಾದ ತಮಗೆ ತಿಳಿಸಿಕೊಡುವ ಅಗತ್ಯ ಇಲ್ಲ ಎಂದುಕೊಂಡಿದ್ದೇನೆ. ಎಲ್ಲವನ್ನೂ ವಿಂಗಡಿಸಿ ಎಡ-ಬಲ/ ಆಸ್ತಿಕ-ನಾಸ್ತಿಕ ಇತ್ಯಾದಿ ಬಣಗಳಲ್ಲೇ ಜನರನ್ನು ಕಾಣುವ ಹಂಬಲವೇಕೆ? ರೋಹಿತ್ ಲೇಖನದ ಪೀಠಿಕೆಯಾಗಿ ತಮ್ಮ ನಂಬಿಕೆಯ ಬಗ್ಗೆ ಒಂದೆರಡು ಮಾತು ಬರೆದು ‘ಶಿವ’ ಎನ್ನುವ ವಿಷಯದ ಕುರಿತು ಲೇಖನ ಬರೆದಿದ್ದಾರೆ. ದಯವಿಟ್ಟು ವಿಂಗಡಣೆಯ ಹೊರೆ ಬಿಟ್ಟು ಆಸ್ವಾದಿಸಿ. ಇನ್ನು ಅವರ ನಿಲುವನ್ನು ಇಬ್ಬಂದಿತನ ಎಂದು ಕರೆಯುವುದನ್ನು ಅಜ್ಞಾನದ ಪ್ರತೀಕ ಎನ್ನಬಹುದಲ್ಲ!

   ಉತ್ತರ
  • BNS
   ಫೆಬ್ರ 26 2017

   ಹಿಂದುಗಳ ೩೩ ಕೋಟಿ ದೇವತೆಗಳು ಯಾರು? ಜೀಸಸ್ ನನ್ನು ದೇವರಾಗಿ ಯಾರೂ ಸೃಷ್ಟಿ ಮಾಡಲಿಲ್ಲ. ಬದಲಿಗೆ ಜೋಸೆಫ್ ಮತ್ತು ಮೇರಿಯ ಮಗ ಜೀಸಸ್ ಕ್ರೈಸ್ಟ್ ಬದುಕಿದ್ದ ಬಗ್ಗೆ, ಮತ್ತು ಆತನನ್ನು ಶಿಲುಬೆಗೇರಿಸಿದ ಬಗ್ಗೆ ದಾಖಲೆಗಳಿವೆ. ಆತನನ್ನು ದೇವರ ಮಗನೆಂದು ಶ್ರದ್ಧಾಳು ಕ್ರಿಶ್ಚಿಯನ್ನರು ನಂಬುತ್ತಾರೆ. ಪ್ರಕೃತಿ ಮಾತೆ ಎಂದರೆ ಯಾರು? ಆಕೆ ನಮಗೆ ದಯಪಾಲಿಸಿದ ಮೆದುಳು ಎಂದರೆ ಏನು? ಆಸ್ತಿಕರ ಭಾವುಕ ನಂಬಿಕೆಗಳ ಬಗ್ಗೆ ತಿರಸ್ಕಾರವೂ, ತಾವು ದೇವರನ್ನು ನಂಬುವುದಿಲ್ಲವಾದ್ದರಿಂದ ತಮ್ಮನ್ನು ಮೀರಿದ ವೈಜ್ಞಾನಿಕ ಮನೋಭಾವದವರೂ ಈ ಜಗತ್ತಿನಲ್ಲೇ ಇಲ್ಲ ಎನ್ನುವ ಸುಪೀರಿಯಾರಿಟಿ ಕಾಂಪ್ಲೆ‍ಕ್ಸ್ ನಾಸ್ತಿಕರಲ್ಲೇ ಹೆಚ್ಚು ಎಂದು ಕನ್ನಡದ ಹಿರಿಯ ಸಾಹಿತಿಗಳೂ, ಚಿಂತಕರೂ, ಮತ್ತು ವಿಶೇಷತಃ ನಾಸ್ತಿಕರೂ ಆಗಿದ್ದ ದಿವಂಗತ ಎ.ಎನ್. ಮೂರ್ತಿರಾವ್ ತಮ್ಮ ಲೇಖನವೊಂದರಲ್ಲಿ ಬರೆದಿದ್ದಾರೆ. ಈ ಮಾತನ್ನು ಬಹಳ ಬೇಸರದಿಂದಲೇ ಬರೆಯುತ್ತಿದ್ದೇನೆ. ತಮಗೆ ದೇವರು, ನಂಬಿಕೆ ಇಂತಹ ಗಹನ ವಿಚಾರಗಳ ಬಗ್ಗೆ ಬರೆಯುವಷ್ಟು ಅರಿವಾಗಲೀ ಅಧ್ಯಯನವಾಗಲೀಿ ಇರುವ ಬಗ್ಗೆ ತಮ್ಮ ಪ್ರತಿಕ್ರಿಯೆಗಳಿಂದ ಯಾವ ಸುಳಿವೂ ಸಿಗುವುದಿಲ್ಲ.

   ಉತ್ತರ
   • sudarshana gururajarao
    ಫೆಬ್ರ 26 2017

    ಆತ್ಯಂತಿಕ ಸತ್ಯ. ಪ್ರಕೃತಿ ಮಾತೆ ಅಂತ ಈ ನಾಸ್ತಿಕನಿಗೆ ಹೇಗೆ ತಿಳೀತು? ನಾಗಸೆಟ್ಟಿಯ ಮತ್ತೊಂದು ಅವತಾರದಂತೆ ಕಾಣ್ತಿದೆ.

    ಉತ್ತರ
 3. ಫೆಬ್ರ 25 2017

  ಶಿವ ! ಶಿವ! ಎಚ್ ಎಸ್ ವಿ ಸಂಸಾರವಂದಿಗ ರಾಮನ ಕುರಿತಾಗಿ ಚೆನ್ನಾದ ಕವಿತೆ ಬರೆದಿದ್ದಾರೆ. ಆದರೆ ಅಲ್ಲಿ ಲವಕುಶರೇ ಇಲ್ಲ. ನಿಮ್ಮ ಲೇಖನ ಮತ್ತೊಂದು ಸುಂದರ ಹೊಳಹು ಬೀರಿತು. ಫುಲ್ ಫ್ಯಾಮಿಲಿ ಪ್ಯಾಕ್ ಆಫರ್ ಏನಿದ್ದರೂ ನಮ್ಮ ಶಿವನಿಗೇ ಸಿಗಬೇಕು. ಶಿವ ಮತ್ತು ಹನುಮಂತ ಕೂಡಲೇ ಕನೆಕ್ಟಿವಿಟಿಗೆ ಸಿಗುತ್ತಾರೆ. ಬಹಳ ಚೌಕಾಶಿ ಮಾಡುವರಲ್ಲ. ಗ್ರೇಸ್ ಮಾರ್ಕ ಹಾಕಿ ಪಾಸ್ ಮಾಡುತ್ತಾರೆ.

  ಉತ್ತರ
 4. Vishwanath Sunkasala
  ಫೆಬ್ರ 25 2017

  ಶಿವನ ಬಗೆಗೆ ನಾನು ಓದಿದ ದಿ ಬೆಸ್ಟ್ ಲೇಖನ.

  ಉತ್ತರ
 5. ಭೀಮಗುಳಿ ಶ್ಯಾಮ್
  ಫೆಬ್ರ 26 2017

  ಸರಳವಾಗಿ, ಶಿವನ ಜೊತೆಗಿನ ಒಡನಾಟದ ಬಗ್ಗೆ ಬರೆದ ಲೇಖನ.ತರ್ಕ ಬಿಟ್ಟು ಶಿವನನ್ನು ಪ್ರೀತಿಸಿ.ಅವನೇ ಪ್ರಶ್ನೆ ಕೇಳುತ್ತ ಅವನೇ ಉತ್ತರಿಸುತ್ತಾನೆ.ಎಲ್ಲವೂ ಅಲ್ಲೇ ದೊರೆಯುತ್ತದೆ.ಒಂದೊಂದು ರೂಪದಲ್ಲಿ ಒಂದೊಂದು ಭಾವ,ಒಂದೊಂದು ನೀತಿಯ ತತ್ವ. ಕೊನೆಗೆ ಎಲ್ಲವೂ ಒಂದೇ.ಅಲ್ಲಿಯ ವರೆಗೆ ಬಣ್ಣವೋ ಬಣ್ಣ. ನಮ್ಮ ನಮ್ಮ ಆಯ್ಕೆ .

  ಉತ್ತರ
 6. ನಾವಿಕ
  ಮಾರ್ಚ್ 4 2017

  ಅತ್ಯಮೋಘವಾಗಿ ಶಿವನನ್ನು ವರ್ಣಿಸಿದ್ದೀರಿ. ಶಿವ ವಿಚಿತ್ರ ವಿಶಿಷ್ಟ ದೇವರು. ನಿತ್ಯನೂತನನೂ ಹೌದು. ಅವನ ಮೇಲೆ ಕುತೂಹಲ ಕಡಿಮೆಯಾಗೋದು ಕಷ್ಟವೇ!

  ಉತ್ತರ
 7. ಏಪ್ರಿಲ್ 6 2018

  Uttamma chintane .:Shivana bagge mahiti uttamavagide

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments