ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 27, 2017

2

ಛಡಿ ಏಟಿನಿಂದ ಕ್ರಾಂತಿಯ ಕಿಡಿಯವರೆಗೆ…!

‍ನಿಲುಮೆ ಮೂಲಕ

– ಶಿವಾನಂದ ಶಿ ಸೈದಾಪೂರ
(ಎಂ. ಎ. ವಿದ್ಯಾರ್ಥಿ )
ABVP ರಾಜ್ಯ ಕಾರ್ಯಕಾರಿಣಿ ಸದಸ್ಯ .

48345_chandra-shekhar-azad-profileಆವತ್ತು ಒಂದು ದಿನ ಕಾಶಿಯಲ್ಲಿ ದೇಶ ಭಕ್ತರೆಲ್ಲರು ಸೇರಿ ವಂದೇಮಾತರಂ ಘೋಷಣೆ ಕೂಗುತ್ತಾ ಶಾಂತಿಯುತವಾಗಿ ಮೆರವಣಿಗೆ ಹೋಗುತ್ತಿದ್ದ ಸಂದರ್ಭ. ಇದ್ದಕಿದ್ದಂತೆ ದುರಳ ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ದೇಶ ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಶಾಂತಿಯುತವಾಗಿ ಮೆರವಣಿಗೆಯಲ್ಲಿದ್ದವರಿಗೆ ಮನ ಬಂದಂತೆ ತಳಿಸತೊಡಗಿದ್ದರು. ಇದನ್ನು ಗಮನಿಸಿದ ಕಾಶಿವಿದ್ಯಾಪೀಠದಲ್ಲಿ ಅಧ್ಯಯನ ಮಾಡುತಿದ್ದ ಪುಟ್ಟ ಬಾಲಕನೊಬ್ಬ ಬ್ರಿಟಿಷ್ ಪೊಲೀಸರಿಗೆ ಅಟ್ಟಾಡಿಸಿ ಕಲ್ಲು ಹೊಡೆದು ಪರಾರಿಯಾದ. ಆತನ ಬೆನ್ನಟ್ಟಿದ ಪೊಲೀಸರೆ ಓಡಿ ಓಡಿ ಸುಸ್ತಾದರೆ ಹೊರತು ಆತನೇನು ಆವತ್ತು ಸಿಗಲಿಲ್ಲ. ಮರುದಿನ ಯಾರದೋ ಮೊಸದ ಜಾಲದಿಂದ ಆ ಬಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಯ್ದರು. ಆತನ ಪ್ರತಿಯೊಂದು ಮಾತುಗಳನ್ನು ಕೇಳಿ ಜಡ್ಜನೇ ಹೌಹಾರಿದ. ಆ ಪುಟ್ಟ ಬಾಲಕನ ಬಾಯಿಂದ ಅಂತಹುದೆ ಮಾತುಗಳು ಬರುತ್ತಿದ್ದವು. ನಿನ್ನ ಹೆಸರು ಏನೆಂದು ಜಡ್ಜ ಕೇಳಿದರೆ ”ಅಜಾದ್” ಎಂದು ಅಬ್ಬರಿಸಿದ. ಎಲ್ಲಿ ನಿನ್ನ ಮನೆ ಎಂದರೆ ”ಜೈಲು..! ನನ್ನ ಮನೆ” ಎಂದು ಪ್ರತ್ಯುತ್ತರ ನೀಡಿದ ಆ ಬಾಲಕ. ಆ ಪುಟ್ಟ ಬಾಲಕನ ನಿಷ್ಟುರತೆಯನ್ನು ಕಂಡ ಕೋಪಿಷ್ಟ ಜಡ್ಜ ಸಾಹೇಬ್ ೧೫ ಛಡಿ ಏಟಿನ ಶಿಕ್ಷೆ ನೀಡಿದ. ಪ್ರತಿಯೊಂದು ಏಟು ಬಿದ್ದಾಗ ”ವಂದೇಮಾತರಂ”, ”ಭಾರತ್ ಮಾತಾ ಕೀ ಜೈ”, ”ಗಾಂಧೀಜಿ ಕೀ ಜೈ” ಎಂಬುವ ಘೋಷಣೆಗಳು ಆತನ ಬಾಯಿಂದ ಹೊರಡುತಿದ್ದವು. ಆ ಪುಟ್ಟ ಬಾಲಕನೆ ಚಂದ್ರಶೇಖರ್ ಅಜಾದ್. ಅಜಾದರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಜೀವನದ ಮೊದಲ ಮತ್ತು ಕೊನೆಯ ಬಾರಿ ಬ್ರಿಟಿಷ್ ಜೈಲಿನ ಶಿಕ್ಷೆ ಅನುಭವಿಸಿದರು. ಆತನ ಸಾಹಸ ಗಾತೆಯನ್ನು ಕಂಡ ಜನತೆ ಒಂದು ಸಾರ್ವಜನಿಕ ಸಮಾರಂಭ ಏರ್ಪಡಿಸಿದ್ದರು. ಜನರನ್ನು ಉದ್ದೇಶಿಸಿ ಮಾತನಾಡುತ್ತ. ಅಜಾದ್ ”ದುಷ್ಮನೋಂಕಿ ಗೊಲಿಯೋಂ ಸೇ ಮೈ ಸಾಮ್ನಾ ಕರೂಂಗಾ. ಅಜಾದ್ ಹೂಂ ಮೇ ಅಜಾದ್ ಹೀ ರಹೂಂಗಾ” ಎಂದು ಅಬ್ಬರಿಸಿದರು. ಅಕ್ಷರಶ ಅದನ್ನೇ ಕೊನೆಯತನಕ ಪಾಲಿಸಿದ್ದರು.

೧೯೦೬ರ ಜುಲೈ ತಿಂಗಳ ೨೩ ರಂದು ಮಧ್ಯಪ್ರದೇಶದ ಭಾವರಾ ಎಂಬ ಹಳ್ಳಿಯಲ್ಲಿ ಸೀತಾರಾಮ ತಿವಾರಿ ಮತ್ತು ಜಗರಾಣಿದೇವಿ ತಿವಾರಿ ದಂಪತಿಯ ಮಗನಾಗಿ ಜನಿಸಿದರು. ತಂದೆ ತೋಟ ಒಂದರಲ್ಲಿ ಮಾಲಿಯಾಗಿ, ತಾಯಿ ಗೃಹಿಣಿಯಾಗಿ ಕೆಲಸ ಮಾಡುತಿದ್ದರು. ಕೂಲಿನಾಲಿ ಮಾಡಿ ಬದುಕುತ್ತಿದ್ದರೂ ಮಕ್ಕಳಿಗೆ ಸತ್ಯ ನ್ಯಾಯ ನಿಷ್ಠೆಯನ್ನು ತುಂಬುವುದರಲ್ಲಿಯೇನು ಹಿಂದೆ ಇರಲಿಲ್ಲ. ಅದರಲ್ಲೂ ವಿಶೇಷವಾಗಿ ಈ ಪುಟ್ಟ ಬಾಲಕ ಚಂದ್ರಶೇಖರರಲ್ಲಿ ಇಂತಹ ಮೌಲ್ಯಗಳಿಗೆ ಕೊರತೆಯಂತು ಇದ್ದಿರಲೇ ಇಲ್ಲ. ತಪ್ಪನ್ನು ಯಾರೇ ಮಾಡಿದರು ಅದಕ್ಕೆ ತಕ್ಕಂತೆ ಶಿಕ್ಷೆಗೆ ಒಳಗಾಗಬೇಕೆನ್ನುವ ಜಾಹಿಮಾನ ಹೊಂದಿರುವ ಹುಡುಗ. ಇವರಿಗೆ ಪ್ರಾಥಮಿಕ ಶಿಕ್ಷಣ ನೀಡಿದ ಮನೋಹರ ತಿವಾರಿಯವರು ಅಜಾದರ ಬಾಲ್ಯದ ದಿನಗಳನ್ನು ನೆನಪಿಸುತ್ತ ”ನಾನು ಅಂತಹ ಶಿಷ್ಯನನ್ನು ನನ್ನ ಶಿಕ್ಷಕ ವೃತ್ತಿಯಲ್ಲಿಯೇ ನೋಡಿರಲಿಲ್ಲ. ಆತನಿಗೂ ಆತನ ಅಣ್ಣನಿಗೂ ನಾನು ಪಾಠ ಹೇಳಿಕೊಡುತ್ತಿದ್ದೆ. ಶಿಷ್ಯರು ತಪ್ಪು ಮಾಡಿದಾಗ ಅವರನ್ನು ದಂಡಿಸುವುದು ಸಾಮಾನ್ಯ. ಆ ಕಾರಣದಿಂದಲೇ ಬೆತ್ತವೊಂದು ಪಕ್ಕದಲ್ಲೇ ಇರುತಿತ್ತು. ಒಮ್ಮೆ ನಾನು ಪಾಠ ಹೇಳುವಾಗ ನಾನೇ ತಪ್ಪಾಗಿ ಹೇಳಿಬಿಟ್ಟೆ. ತಕ್ಷಣ ನನ್ನ ಎದುರಿಗಿದ್ದ ಆ ಬಾಲಕ ಬೆತ್ತ ತೆಗೆದುಕೊಂಡು ನನಗೆ ಲತ್ತೆ ಕೊಟ್ಟು ಬಿಟ್ಟ. ಅಂತಹ ಧೈರ್ಯ ಆತನದು” ಹೀಗೆ ಅಜಾದರ ಬಗ್ಗೆ ಅವರ ಗುರುಗಳು ಹೇಳಿದುಂಟು. (ಅಜೇಯ: ಬಾಬು ಕೃಷ್ಣಮೂರ್ತಿ)

ಜಲಿಯನ್ ವಾಲಾಬಾಗ್ ದುರಂತವನ್ನು ಕಂಡಾಗಲೆ ಅವರಿಗೆ ಸ್ವತಂತ್ರ ಹೋರಾಟದ ಗೀಳು ಆರಿಸಿಕೊಂಡಿತ್ತು. ಅದಕ್ಕೆ ಪ್ರೇರಣೆ ನೀಡಿದ್ದು ೧೯೨೧ರ ಹೊತ್ತಿಗೆ ಆರಂಭವಾದ ಅಸಹಕಾರ ಚಳವಳಿ. ಗಾಂಧೀಜಿಯವರ ಪ್ರಭಾವದಿಂದಾಗಿ ಅಸಹಕಾರ ಚಳವಳಿಯ ಮೂಲಕ ತಮ್ಮನ್ನು ತೊಡಗಿಸಿಕೊಂಡರು. ಆದರೆ ಗಾಂಧೀಜಿಯವರು ಚೌರಿಚೌರಾ ಘಟನೆಯಿಂದಾಗಿ ತಮ್ಮ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು. ಗಾಂಧೀಜಿಯವರ ಈ ನಿರ್ಣಯಕ್ಕೆ ಬೇಸತ್ತು, ಕಾಂಗ್ರೆಸ್ಸಿನ ಈ ಮಂದಗತಿಯ ನಿಲುವುಗಳಿಂದ ದೂರ ಸರಿದರು. ದೂರ ಸರಿದರೆ ವಿನಹಃ ಹೋರಾಟದ ಕಿಚ್ಚಿನಿಂದ ಹೂರ ಬರಲಿಲ್ಲ. ಅನಂತರ ಅವರು ಕ್ರಾಂತಿಕಾರಿ ರಾಮಪ್ರಸಾದ ಬಿಸ್ಮಿಲ್ಲರ ಗುಂಪಿಗೆ ಸೇರಿಕೊಂಡರು.

೧೯೨೫ರಲ್ಲಿ. ಭಾರತೀಯ ಕ್ರಾಂತಿಗಳಿಂದ ಮಾಡಲ್ಪಟ್ಟ ಕಾಕೋರಿ ದರೋಡೆಯ ಒಂಬತ್ತು ಜನರಲ್ಲಿ ಈ ಚಂದ್ರಶೇಖರ್ ಅಜಾದರು ಕೂಡ ಒಬ್ಬರು. ಆ ಕಾಕೋರಿ ದರೋಡೆಯ ಮೊಕದ್ದಮೆಯಲ್ಲಿ ಬ್ರಿಟಿಷರಿಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿ ಎಂದರೆ ಅದು ಅಜಾದರು ಮಾತ್ರ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಕ್ರಾಂತಿಕಾರಿಗಳಲ್ಲಿ ಪೊಲೀಸರಿಗೆ ಬೇಕಾದ ಹಿಟ್ ಲಿಸ್ಟನಲ್ಲಿ ಅಜಾದರು ಮೊದಲಿಗರಾಗಿದ್ದರು.

ಕಾಕೋರಿ ಮೊಕದ್ದಮೆಯಲ್ಲಿ ರಾಮಪ್ರಸಾದ ಬಿಸ್ಮಿಲ್ಲರ ಬಂಧನದ ನಂತರ ಕ್ರಾಂತಿ ಸಂಘಟನೆಯ ನಾಯಕತ್ವ ವಹಿಸಿಕೊಂಡ ಅಜಾದರು ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಬಲಿದಾನಿಯಾಗಲು ಪಣ ತೊಟ್ಟು ನಿಂತರು. ೧೯೨೮ ರಲ್ಲಿ ಭಾರತಕ್ಕೆ ಸೈಮನ್ ಕಮಿಷನ್ ಬರುವ ಸಂದರ್ಭದಲ್ಲಿ ಅದರ ವಿರುದ್ಧ ಹೂಡಿದ ಮುಷ್ಕರದಿಂದಾಗಿ ಲಾಲಾ ಲಜಪತ್ ರಾಯರ ಮೇಲಾದ ಕ್ರೂರ ಹಿಂಸಾಚಾರಕ್ಕೆ ಪ್ರತ್ಯುತ್ತರವಾಗಿ ಪೊಲೀಸ್ ಠಾಣೆ ಎದುರಿಗೆ ಅಜಾದರ ನೇತೃತ್ವದಲ್ಲಿಯೇ ಭಗತ್ ಸಿಂಗ್, ರಾಜಗುರು, ಸುಖದೇವರು ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸನನ್ನು ಹತ್ಯೆ ಮಾಡಿದರು.

ಕ್ರಾಂತಿಕಾರಿಗಳನ್ನು ಹತ್ತಿಕ್ಕುವ ಆಲೋಚನೆಯಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ಆಗಿನ ಕಾಲದಲ್ಲಿಯೇ ಅಜಾದರ ತಲೆಗೆ ಮೂವತ್ತು ಸಾವಿರ ರೂಪಾಯಿ ನಗದು ಘೋಷಣೆ ಮಾಡಿದರು. ಪ್ರತಿ ಸಲವೂ ಚಳ್ಳೆ ಹಣ್ಣು ತಿನ್ನಿಸುತಿದ್ದ ಅಜಾದರಿಗೆ ಅದೊಂದು ಕರಾಳ ದಿನ ಎದುರಿಗೆ ಬಂತು. ಆವತ್ತು ೧೯೩೧ರ ಪೆಬ್ರುವರಿ ೨೭. ಅಜಾದರ ಸುಳಿವು ಸಿಗದೇ ಕೈ ಚೆಲ್ಲಿ ಕುಳಿತಿದ್ದ ಬ್ರಿಟಿಷರಿಗೆ ವೀರಭದ್ರ ತಿವಾರಿ ಎಂಬ ವಿಶ್ವಾಸ ಘಾತುಕನೊಬ್ಬನಿಂದ ದೇಶವನ್ನೆ ಬೆಳಗ ಬೇಕಿದ್ದ ಕ್ರಾಂತಿ ಸೂರ್ಯನ ಅಂತ್ಯಕ್ಕೆ ಕಾರಣವಾಯಿತು.

೧೯೩೧ರ ಪೆಬ್ರುವರಿ ೨೭ ರಂದು ಅಜಾದರು ಸುಖದೇವರಾಜನನ್ನು ಭೇಟಿಯಾಗಲು ಆಲ್ಫ್ರೈಡ್ ಪಾರ್ಕ್ ಗೆ ಹೋಗಿದ್ದರು. ಎಂಜಲು ಕಾಸಿನ ಆಸೆಗೆ ಬಲಿಯಾದ ತಿವಾರಿ ಮಾತಿನಂತೆ ಆವತ್ತು ಶಸ್ತ್ರಸಜ್ಜಿತ ಎಂಭತ್ತು ಪೊಲೀಸರು ನಾಟಭಾವರ್ ಎಂಬ ಬ್ರಿಟಿಷ್ ಅಧಿಕಾರಿಯೊಂದಿಗೆ ಸುತ್ತುವರೆದು ನಿಂತರು. ನಾಟಭಾವರ್ ಹಾರಿಸಿದ ಗುಂಡು ಅಜಾದರ ತೊಡೆಗೆ ತಾಗಿತು. ಅಪಾಯದ ಅರಿವಾದ ತಕ್ಷಣ ಎಚ್ಚತ್ತ ಅಜಾದರು ಸುಖದೇವರಾಜನನ್ನು ಉಳಿಸಲು ಶತಪ್ರಯತ್ನ ನಡೆಸಿದರು. ಆ ಕಾಳಗದಲ್ಲಿ ಎಂಭತ್ತು ಪೊಲೀಸರೆದುರು ಒಬ್ಬ ಅಜಾದ್ ಚಿರತೆಯಂತೆ ಕಾದಾಡಿದರು. ಏಕಾಂಗಿಯಾಗಿಯೇ ಎದುರಾಳಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಅಭಿಮನ್ಯುವಿನಂತೆ ಕಾದಾಡಿದರು. ಏಕಾಂಗಿಯಾಗಿದ್ದರೂ ಎದುರಾಳಿಗಳಿಗೆ ತಕ್ಕ ಉತ್ತರ ನೀಡಿದರು. ಅಜಾದರಿಗೆ ತನ್ನ ಪಿಸ್ತೂಲಿನಲಿದ್ದ ಗುಂಡುಗಳ ಲೆಕ್ಕವಿತ್ತು. ಅಂತಹ ಆತಂಕದ ಪರಿಸ್ಥಿತಿಯಲ್ಲಿಯು ಅವರ ಸಮಯ ಪ್ರಜ್ಞೆ ಕಾರ್ಯ ಪ್ರವೃತವಾಗಿತ್ತು. ಬಾಲ್ಯದಲ್ಲಿ ತಾನೇ ಹೇಳಿದಂತೆ ”ನನ್ನ ಜೀವಂತ ದೇಹದ ಮೇಲೆ ಕೈ ಹಾಕುವ ಪೊಲೀಸ್ ಇನ್ನೂ ಜನ್ಮ ತಾಳಿಲ್ಲ… ಆಜಾದ್ ಹೀ ರಹೇಂಗೆ.. ಆಜಾದ್ ಹೀ ಮರೇಂಗ್” ಎನ್ನುತ್ತ ತನ್ನ ಪಿಸ್ತೂಲಿನಲಿದ್ದ ಕೊನೆಯ ಗುಂಡನ್ನು ತನ್ನ ತಲೆಗೆ ಗುರಿಯಾಗಿಸಿಟ್ಟುಕೊಂಡರು. ಹೀಗೆ ತನ್ನ ಪ್ರಾಣವನ್ನು ಭಾರತ ಮಾತೆಯ ಮುಡಿಗೆ ಅರ್ಪಿಸಿದರು.

ಸಂಸ್ಕೃತ ಪಂಡಿತನಾಗಲು ಕಾಶಿವಿದ್ಯಾಪೀಠಕ್ಕೆ ತೆರಳಿದ ಪುಟ್ಟ ಬಾಲಕ ಚಂದ್ರಶೇಖರ ತಿವಾರಿ ಕ್ರಾಂತಿಯ ಗೀಳು ಹಚ್ಚಿಕೊಂಡು ತಾಯ್ನಾಡಿನ ದಾಸ್ಯ ವಿಮೋಚನೆ ಚಿಂತನೆಯಲ್ಲಿ ಮಗ್ನನಾದ. ಆತ ಜನಿಸಿ ೧೧೧ ವರ್ಷ ಕಳೆಯಿತು. ಆತ ಆತ್ಮಾರ್ಪಣೆ ಮಾಡಿ ೮೭ ವರ್ಷ ಉರುಳಿದವು. ನಮ್ಮ ಇಂದಿನ ಸುಂದರ ದಿನಗಳಿಗಾಗಿ ತನ್ನ ಹೆತ್ತ ತಂದೆ ತಾಯಿರನ್ನೆ ಮರೆತು, ತನ್ನ ಬಾಳನ್ನೇ ಬಲಿಕೊಟ್ಟು ಜೀವನವನ್ನೆ ತ್ಯಾಗ ಮಾಡಿ ಹುತಾತ್ಮನಾದವನನ್ನು ಎಂದಾದರೂ ಮರೆಯುವುದುಂಟೆ? ಅಜಾದರ ನೆನಪು ಚಿರಂಜೀವಿಯಾಗಿರಬೇಕಲ್ಲವೇ?

2 ಟಿಪ್ಪಣಿಗಳು Post a comment
 1. ವಿಶ್ವಮಾನವ
  ಫೆಬ್ರ 27 2017

  ಇಂದಿನ ಭಾರತದ ಜನತೆಗೆ ಯಾರೂ ಬೇಕಿಲ್ಲ. ನಮಗೆ ಸಿಕ್ಕಿದ ಅಪಕ್ವ ಸ್ವಾತಂತ್ರ‍್ಯದಿಂದ ಯಾವುದೇ ಅನುಕೂಲವಾಗಿಲ್ಲ. ಮೊದಲು ಅವಿದ್ಯಾವಂತರೆಲ್ಲರೂ ವಿದ್ಯಾವಂತರಾಗಬೇಕು. ಸ್ವಾರ್ಥ, ಧೂರ್ತತೆ, ಅವಿವೇಕ, ವಿಶ್ವಾಸಘಾತುಕತನ, ಒಣಜಂಭ, ದುರಹಂಕಾರ ಇವುಗಳು ನಮ್ಮ ಜನರಿಂಗ ದೂರವಾಗಬೇಕು. ಇಲ್ಲವಾದಲ್ಲಿ ನಮ್ಮ ದೇಶ ಉದ್ಧಾರವಾಗುವುದಿಲ್ಲ. ಲೇಖನವೇನೋ ಚೆನ್ನಾಗಿದೆ. ಆದರೆ ನಮ್ಮ ದೇಶದ ಜನರ ರೀತಿನೀತಿಗಳಲ್ಲಿ ಕೊಂಚವಾದರೂ ಬದಲಾವಣೆಯಾಗುವುದೇ ಎಂಬುದೇ ಅನುಮಾನ.

  ಉತ್ತರ
  • satyampriya
   ಫೆಬ್ರ 27 2017

   If everyone follows the path of Buddha-Basava-Ambedkar then there’s hope of renaissance. Otherwise casteism-communalism-materialism will spoil the hard work of freedom fighters.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments