ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 2, 2017

ಅವರು ಅಂಧರು ಅಂತ ಒಂದು ಕ್ಷಣಕ್ಕೂ ಅನ್ನಿಸಲಿಲ್ಲ..!

‍ನಿಲುಮೆ ಮೂಲಕ

– ನರೇಂದ್ರ ಎಸ್ ಗಂಗೊಳ್ಳಿ.

Indian blind cricket team wins world cupಹೌದು ಅವತ್ತು ಫೆಬ್ರವರಿ 12. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುಮಾರು 15000ಕ್ಕೂ ಅಧಿಕ ಸಂಖ್ಯೆ ಪ್ರೇಕ್ಷಕರು ನೆರೆದಿದ್ದರು. ಅದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು. ಅವರೆಲ್ಲರ ತುಂಬು ಹೃದಯದ ಪ್ರೋತ್ಸಾಹದ ನಡುವೆ ನಮ್ಮ ಭಾರತದ ಅಂಧರ ಕ್ರಿಕೆಟ್ ತಂಡ ಸಾಂಪ್ರದಾಯಿಕ ಪ್ರತಿಸ್ಫರ್ಧಿ ಪಾಕಿಸ್ತಾನವನ್ನು ಬಗ್ಗುಬಡಿದು ಸತತ ಎರಡನೇ ಬಾರಿಗೆ ಟಿ-20 ವಿಶ್ವಕಪ್ ನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಇಡೀ ಪಂದ್ಯದ ರೋಚಕತೆ ಎನ್ನುವುದು ಯಾವ ವಿಶ್ವ ಕಪ್ ಪಂದ್ಯಕ್ಕೂ ಕಡಿಮೆ ಇರಲಿಲ್ಲ.

ನಿಮಗೆ ಗೊತ್ತಿರಲಿ ಅವತ್ತು ಅಲ್ಲಿಯವರೆಗೆ ಟಿ-20 ವಿಶ್ವಕಪ್ 2017ರ ಲೀಗ್ ನಲ್ಲಿ ತಾನಾಡಿದ ಒಂಬತ್ತೂ ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿ ಬೀಗುತ್ತಿದ್ದ ಪಾಕಿಸ್ತಾನದ ರಣೋತ್ಸಾಹವನ್ನು ಲೀಗಿನಲ್ಲಿ ಭಾರತವನ್ನು ಕೂಡ ಸೋಲಿಸಿದ್ದ ಕ್ಷಣಗಳು ಮತ್ತಷ್ಟು ಹೆಚ್ಚಿಸಿದ್ದವು. ಇತ್ತ ಬಾರತವೂ ಪಾಕಿನೆದುರು ಲೀಗ್ ಸೋತಿದ್ದು ಬಿಟ್ಟರೆ ಉಳಿದ ಎಂಟು ಪಂದ್ಯಗಳಲ್ಲೂ ಜಯ ಸಾಧಿಸಿತ್ತು. ಹಾಗಾಗಿ ಅತ್ಮವಿಶ್ವಾಸ ಇವರಲ್ಲೂ ಕಡಿಮೆ ಇರಲಿಲ್ಲ. 2012 ರಲ್ಲಿ ಮೊದಲ ಬಾರಿ ನಡೆದಿದ್ದ ಟಿ-20 ವಿಶ್ವಕಪ್‍ನಲ್ಲಿ ಭಾರತ ಇದೇ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತಲ್ಲ ಅದು ಇನ್ನಷ್ಟು ಭರವಸೆ ನೀಡಿತ್ತು.

ಪಂದ್ಯ ಆರಂಭವಾಗಿ ಒಂದು ಇನ್ನಿಂಗ್ಸ್ ಮುಗಿಯುವುದರಲ್ಲೇ ಪಾಕಿಸ್ತಾನಕ್ಕೆ ಪಕ್ಕದಲ್ಲೆಲ್ಲೋ ಸೋಲಿನ ವಾಸನೆ ಹೊಡೆದಿದ್ದು ಸುಳ್ಳಲ್ಲ. ತಾನಾಡಿದ್ದ ಲೀಗಿನ ಕಳೆದ ಮೂರು ಪ್ರಥಮ ಇನ್ನಿಂಗ್ಸುಗಳಲ್ಲಿ ಮುನ್ನೂರು ಪ್ಲಸ್ ಮೊತ್ತ ಸೇರಿಸಿದ್ದ ಪಾಕ್ ಫೈನಲ್ಲಿನಲ್ಲಿ 20 ಓವರುಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಸೇರಿಸಿದ್ದು 197 ರನ್. ಪ್ರತಿಯಾಗಿ ಬ್ಯಾಟಿಂಗಿಗಿಳಿದ ಭಾರತಕ್ಕೆ ಮೊದಲ ವಿಕೆಟ್ ನಲ್ಲೇ ನಾಯಕ ಅಜಯ್ ಕುಮಾರ್ ಮತ್ತು ಪ್ರಕಾಶ್ ಜಯರಾಮಯ್ಯ ಜೋಡಿ 10.1 ಓವರುಗಳಲ್ಲಿ 110 ರನ್ ಕಲೆಹಾಕಿ ಭರ್ಜರಿ ಬುನಾದಿ ಹಾಕಿಕೊಟ್ಟಿದ್ದರು. ಆ ಬಳಿಕ ಕೇತನ್ ಪಟೇಲ್ ಮತ್ತು ಡಿ.ವೆಂಕಟೇಶ್, ಪ್ರಕಾಶ್‍ಗೆ ಸಾಥ್ ನೀಡಿ 17.4 ಓವರುಗಳಲ್ಲಿ ತಂಡ ಗುರಿಮುಟ್ಟುವಂತೆ ಮಾಡಿದರು.

ಟೂರ್ನಿಯಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳ ಒಡೆಯ ಬಿ3 ದರ್ಜೆಯ ಆಟಗಾರ ಕನ್ನಡಿಗರಾದ ಪ್ರಕಾಶ್‍ರ ಆಟವನ್ನು ಅವತ್ತು ನೀವು ನೋಡಬೇಕಿತ್ತು. ಅದೆಷ್ಟು ಆತ್ಮವಿಶ್ವಾಸದಿಂದ ಆಡುತ್ತಿದ್ದರೆಂದರೆ ಎರಡು ರನ್ನಿಗೆ ಅವಕಾಶವಿದ್ದರೂ ಓಡದೆ ತಾನೇ ಮಂಚೂಣಿಯಲ್ಲಿ ನಿಂತು ತಂಡವನ್ನು ತಮ್ಮ ಭರ್ಜರಿ ಹೊಡೆತಗಳ ಮೂಲಕ 60 ಎಸೆತಗಳಲ್ಲಿ 15 ಬೌಂಟರಿಗಳುಳ್ಳ 99 ರನ್ ಸೂರೆಗೈದು ಇಡೀ ಕ್ರೀಡಾಂಗಣದಲ್ಲಿ ಸಂತೋಷದ ಅಲೆಯೆಬ್ಬಿಸಿದ್ದರು. ಆ ದಿನ ವಿಶ್ವಕಪ್ ಗೆದ್ದ ಅಂಧರ ಮುಖಗಳಲ್ಲಿ ಮಿನುಗುತ್ತಿದ್ದ ನಗು ಎಂತವರಲ್ಲೂ ಸ್ಫೂರ್ತಿಯನ್ನು ತುಂಬುವಂತಿತ್ತು.

ಒಂದು ಮಾತಂತೂ ಸತ್ಯ. ಇಡೀ ಪಂದ್ಯ ನೋಡುವಾಗ ಅವರೆಲ್ಲರೂ ಅಂಧರು ಅಂತ ಒಂದು ಕ್ಷಣಕ್ಕೂ ಅನ್ನಿಸಿರಲಿಲ್ಲ. ಅವರೆಲ್ಲರ ಆಟವನ್ನೂ ನೋಡಿಯೇ ಸವಿಯಬೇಕಿತ್ತು. ಇದನ್ನೆಲ್ಲಾ ಇಷ್ಟೊಂದು ವಿವರವಾಗಿ ಹೇಳಲು ಕಾರಣವಿದೆ. ಅಂಧರ ಕ್ರಿಕೆಟ್ ಅಂದಾಕ್ಷಣ ನಮ್ಮಲ್ಲಿ ಬಹುತೇಕ ಜನ ಅದರೆಡೆಗೊಂದು ನಿರ್ಲಕ್ಷ್ಯದ ನೋಟವೆಸೆದು ಸುಮ್ಮನಿದ್ದು ಬಿಡುತ್ತಾರೆ. ಆದರೆ ಇದರ ಹಿಂದಿರುವ ಪರಿಶ್ರಮವನ್ನು ಸಾಧನೆಯನ್ನು ಮರೆತುಬಿಡುತ್ತಾರೆ. ಇದೇನು ಹಾಗೆ ಸುಮ್ಮನೆ ನಡೆಯುವ ಪಂದ್ಯಗಳಲ್ಲ. ನಿಯಮಗಳಿಗೆ ಅನುಸಾರವಾಗಿ ಬಿ1 (ಪೂರ್ಣ ಅಂಧತ್ವ ಹೊಂದಿರುವವರು), ಬಿ2 ( ಗರಿಷ್ಠ ಮೂರು ಮೀಟರು ದೂರದವರೆಗೆ ಕಾಣಬಲ್ಲವರು) ಮತ್ತು ಬಿ3 (ಗರಿಷ್ಠ ನಾಲ್ಕರಿಂದ ಆರು ಮೀಟರು ದೂರದವರೆಗೆ ಕಾಣಬಲ್ಲವರು) ದರ್ಜೆಯ ಆಟಗಾರರನ್ನು ಹೊಂದಿರುವ ಈ ಕ್ರಿಕೆಟ್ ನಲ್ಲಿ ಶಬ್ದ ಮಾಡುವ ಚೆಂಡನ್ನು ಬಳಸಲಾಗುತ್ತದೆ.

ವಿಕೆಟ್ ಮತ್ತು ಚೆಂಡಿನ ಗಾತ್ರವೂ ದೊಡ್ಡದು. ಬಿ1 ಆಟಗಾರರನ್ನು ಸ್ಟಂಪ್ ಮಾಡುವಂತಿಲ್ಲ. ಎಲ್ ಬಿ ಎರಡು ಸಲ ಆದರೆ ಮಾತ್ರ ಬಿ1 ಆಟಗಾರ ಹೊರನಡೆಯಬೇಕು, ಬೌಲಿಂಗ್ ಮಾಡುವಾಗಲೂ ಪಿಚ್ ಬೀಳುವಂತೆ ನಡೆಸಬೇಕು ಎನ್ನುವಂತಹ ವಿವಿಧ ನಿಯಮಗಳು ಇಲ್ಲಿವೆ. ಮೌಖಿಕ ಸಂವಹನ ಮತ್ತು ಸಲಹೆಗಳದ್ದು ಇಲ್ಲಿ ಪ್ರಮುಖ ಪಾತ್ರ. ಇದೆಲ್ಲವನ್ನೂ ಅಭ್ಯಸಿಸಿ ಕ್ರೀಡಾಂಗಣದಲ್ಲಿ ಆಡುವುದೆಂದರೆ ಅದು ಬಹಳ ದೊಡ್ಡ ಸಾಧನೆ ಎನ್ನಿಸಿಕೊಳ್ಳುತ್ತದೆ. ಈ ಬಾರಿ 10 ತಂಡಗಳು ವಿಶ್ವಕಪ್ ನಲ್ಲಿ ಭಾಗವಹಿಸಿದ್ದವು. ಈ ಕ್ರೀಡಾ ಹೋರಾಟದಲ್ಲಿ ಜಯಶಾಲಿಯಾಗುವುದೆಂದರೆ ಅದು ಸಾಧನೆಯ ಮತ್ತೊಂದು ಪರ್ವ. ಒಂದಂತೂ ಸತ್ಯ. ಇಲ್ಲಿ ಯಾರು ಸೋತರು ಯಾರು ಗೆದ್ದರು ಎನ್ನುವುದಕ್ಕಿಂತ ಅಷ್ಟೂ ಆಟಗಾರರು ತಮ್ಮ ದೈಹಿಕ ವಿಕಲತೆಯನ್ನು ಮರೆತು ಸ್ಪೂರ್ತಿಯುತವಾಗಿ ತಮ್ಮನ್ನು ತಾವು ಇಂತಹ ಆಟಗಳಲ್ಲಿ ತೊಡಗಿಸಿಕೊಂಡು ನಮಗೆಲ್ಲಾ ಒಂದು ಜೀವನೋತ್ಸಾಹದ ಮಾದರಿಯಾಗಿ ನಿಂತು ಬಿಡುತ್ತಾರಲ್ಲ ಅದನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಹಾಗಾಗಿ ಭಾರತ ಸೇರಿದಂತೆ ಪಾಕಿಸ್ತಾನ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದಕ್ಷಿಣ ಆಫ್ರಿಕಾ ಅಥವಾ ಇನ್ನಾವುದೇ ದೇಶದ ಅಂಧ ಆಟಗಾರರಿರಲಿ ಅವರೆಲ್ಲರ ಸಾಧನೆಯನ್ನು ನಾವುಗಳು ಮುಕ್ತಕಂಠದಿಂದ ಪ್ರಶಂಸಿಸಲೇಬೇಕು.

ಪಂದ್ಯದ ಬಳಿಕ ಭಾರತ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ತಮ್ಮ ವಿಶ್ವಕಪ್ ಜಯವನ್ನು ಸಮಸ್ತ ಅಂಧರಿಗೆ ಅರ್ಪಿಸಿದ್ದು, ವಿಶೇಷವಾಗಿ ಎನ್ನುವಂತೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿ ಪ್ರೋತ್ಸಾಹಿಸಿದ್ದು ಎಲ್ಲವೂ ಸ್ಮರಣೀಯ ಕ್ಷಣಗಳು. ಇಂತಹ ಬೆಳವಣಿಗೆ ಮತ್ತಷ್ಟು ಉದ್ದೀಪನಗೊಳ್ಳಬೇಕಿದೆ. ಅದು ಕ್ರಿಕೆಟ್ ಇರಲಿ ಅಥವಾ ಇನ್ನಾವುದೇ ಕ್ರೀಡೆಗಳಿರಲಿ ಎಲ್ಲದಕ್ಕೂ ಸರ್ವರೀತಿಯಲ್ಲೂ ಬೆಂಬಲ ಸಿಗಬೇಕಾದ ಅಗತ್ಯತೆಯಿದೆ. ಮಾಧ್ಯಮಗಳು ಈ ನಿಟ್ಟಿನಲ್ಲಿ ಮತ್ತಷ್ಟು ಹೆಚ್ಚಿನ ಅವಕಾಶಗಳನ್ನು ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕೆ ಮೀಸಲಿಡಬೇಕಿದೆ. ಭಾರತದ ಹೆಮ್ಮೆಯ ತಂಡ ಟಿ-20 ಅಂಧರ ವಿಶ್ವಕಪ್ ಗೆದ್ದದಕ್ಕೆ ಅಭಿನಂದನೆಗಳು. ಭವಿಷ್ಯದಲ್ಲೂ ಈ ವಿಶ್ವಕಪ್ ಸಾಧನೆಗಳು ಮರುಕಳಿಸುತ್ತಲೇ ಇರಲಿ ಎನ್ನುವುದು ಹಾರೈಕೆ.

ಕೊನೆ ಮಾತು : ಈ ಹೊತ್ತು ವಿಶ್ವ ಕಪ್ ಅರ್ಹತಾ ಸುತ್ತಿನಲ್ಲಿ ಭರ್ಜರಿ ಗೆಲುವುಗಳೊಂದಿಗೆ ವಿಶ್ವಕಪ್ ಸ್ಪರ್ಧೆಯನ್ನು ಖಾತ್ರಿಪಡಿಸಿಕೊಂಡಿರುವ ನಮ್ಮ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ನಾವು ಪ್ರೋತ್ಸಾಹಿಸುತ್ತಿರುವ ರೀತಿಯೂ ಸಮಂಜಸವಾಗಿಲ್ಲ. ಎಷ್ಟೆಲ್ಲಾ ಕುಂದುಕೊರತೆಗಳ ನಡುವೆಯೂ ಮಿಥಾಲಿರಾಜ್, ಜೂಲನ್ ಗೋಸ್ವಾಮಿ ಸೇರಿದಂತೆ ಅನೇಕರು ಮಹಿಳಾ ಕ್ರಿಕೆಟ್ ನಲ್ಲಿ ತಮ್ಮದೇ ಛಾಪನ್ನು ಜಾಗತಿ ಮಟ್ಟದಲ್ಲಿ ಮೂಡಿಸುತ್ತಿರುವ ರೀತಿ ಇದೆಯಲ್ಲಾ ಅದು ನಿಜಕ್ಕೂ ಅಭಿನಂದನೀಯ. ಈ ಹೆಣ್ಣುಮಕ್ಕಳ ಧೃಡತೆಯೇ ಮುಂದೊಂದು ದಿನ ಅವರ ಕೈಗಳಲ್ಲಿ ವಿಶ್ವಕಪ್ ನೀಡಬಲ್ಲುದು. ಹಾಗಾಗಲಿ ಎನ್ನುವುದು ಆಶಯ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments