ಕ್ವೀನ್ ಆಫ್ ಕಟ್ವೆ..!
– ರವಿಶಂಕರ್
ಹೇ ಪಪ್ಪಾ.. ನಾಳೆ ಸಿಸಿಲಿಯನ್ ಡ್ರ್ಯಾಗನ್ ಕಲ್ತ್ಕೊಂಡ್ ಹೋಗ್ಬೇಕು ಅಂದ ಪುತ್ರ ರತ್ನ! ಬರೀ ಎಂಟರ್ ದಿ ಡ್ರ್ಯಾಗನ್ ಗೊತ್ತಿರೋ ನಾನು ‘ಲೋ ಅದನ್ನ ಕಲ್ತಕೊಂಡ್ ಹೋಗೋಕೆ ಆಗಲ್ಲ, ಬೇಕಾದ್ರೆ ನೋಡಬಹುದು’ ಅಂದೆ. ಪಪ್ಪಾ, ಬ್ರೂಸ್ ಲೀ ಪಿಕ್ಚರ್ ಅಲ್ಲ.. ಇದು ಚೆಸ್ ಮೂವ್ಸ್ ಅಂದಾಗ್ಲೇ ನಂಗೆ ಗೊತ್ತಾಗಿದ್ದು ಸಿಸಿಲಿಯನ್ ಡ್ರ್ಯಾಗನ್ ಅಂದ್ರೆ ಚೆಸ್ ಆಟದಲ್ಲಿನ ಒಂದು ಡಿಫೆನ್ಸಿವ್ ಅಥವಾ ಆಟ ಶುರು ಮಾಡೋ ಒಂದು ತಂತ್ರ ಅಂತ (ಅದೂ ಗೂಗಲ್ ಮಾಡಿದ್ ಮೇಲೆ). ಬರೀ ಆನೆ, ಒಂಟೆ, ರಾಣಿ, ಕುದುರೆ ಹೀಗ್ ಪರಿಚಯ ಇರೋ ಈ ಆಟ.. ನೈಟ್, ರೂಕ್, ಬಿಷಪ್.. ಅದರ ಜೊತೆಗೆ ಡ್ರಾಗನ್ನು, ಮಣ್ಣು, ಮಸಿ ಅಂದ್ರೆ ಹೆಂಗ್ ಗೊತ್ತಾಗ ಬೇಕು ಹೇಳಿ!
ಈ ನಮ್ಮ್ ಶಿಷ್ಯ ಬರೀ ಅಷ್ಟಕ್ಕೇ ಸುಮ್ನಾಗ್ಲಿಲ್ಲ.. ಇವತ್ತು ಕ್ಲಾಸ್ನಲ್ಲಿ ಸರ್ ಒಂದು ಮೂವಿ ನೋಡಿ ಅಂತ ಹೇಳಿದ್ರು.. ‘ಕ್ವೀನ್ ಆಫ್ ಕ್ರಾಂಟಿವಿಯರ್’ ಅಂತೆ ಅಂದ. ಬರೀ ಕ್ಯಾಂಟಿ ಲಿವರ್ ಬೀಮ್ಸ್ ಬಗ್ಗೆ ಒಂದು ಸೆಮಿಸ್ಟರ್ ಓದಿರೋ ನಮಗೆ.. ಹೆಂಗ್ ಗೊತ್ತಾಗ್ಬೇಕು ಹೇಳಿ ನೀವೇ! ಸರಿ ಮತ್ತೆ ಗೂಗಲಮ್ಮನಿಗೆ ಶರಣು ಹೊಡೆದು ‘ಕ್ವೀನ್’, ‘ಚೆಸ್’ ಹಾಗೂ ಮೂವಿ ಸರ್ಚ್ ಪ್ಯಾರಾಮೀಟರ್ಸ್ ಹಾಕಿದೆ ನೋಡಿ.. ಬಂತಲ್ಲ ರಿಸಲ್ಟ್ “ಕ್ವೀನ್ ಆಫ್ ಕಟ್ವೆ” [Queen of Katwe].. ಅರೇ ಇದು ರಿಲೀಸ್ ಆಗಿ ಬಹಳ ದಿನ ಆಗಿಲ್ಲ.. ೨೦೧೬ ರದ್ದು..! ಮತ್ತೆ ಅದನ್ನ ಡೈರೆಕ್ಟ್ ಮಾಡಿರೋದು ‘ಮೀರಾ ನೈರ್’.. ಇಷ್ಟ್ ಸಾಕಲ್ಲ ಪಿಕ್ಚರ್/ಮೂವಿ ಅಂದ್ರೆ ಬಾಯ್ ಬಿಡೋ ನಮಗೆ! ಸರಿ, ಮಗನಿಗೆ ಪ್ರಾಮಿಸ್ ಬೇರೆ ಮಾಡಿದ್ದೆ.. ಸ್ವಲ್ಪ ಸರ್ಚ್ ಮಾಡಿದ ತಕ್ಷಣ ಸಿಕ್ತು ಫುಲ್ ಮೂವಿ ಲಿಂಕು! ಯಾವುದೇ ಪಿಕ್ಚರ್-ನ ಟ್ರೈಲರ್ ಮುಂಚೆ ನೋಡೀನೇ ಫುಲ್ ಮೂವಿ ನೋಡೋ ಅಭ್ಯಾಸ ಇರೋ ನಾನು – ಇದರ ಟ್ರೈಲರ್ ಕ್ವಾಲಿಟಿ ನೋಡಿ ಅಲ್ಲ, ಪಿಕ್ಚರ್ ನೋಡಿದ್ದು..! ಆದ್ರೆ ಟ್ರೈಲರ್ ನಲ್ಲಿ ಮೊದಲಿಗೆ ಬರೋ ಕೋಟ್ ಹಾಗೂ ಒಂದು ಡೈಲಾಗ್-ನಿಂದ ಅಂದ್ರೆ ನೀವು ನಂಬಲೇ ಬೇಕು!
The size of your dreams must always exceed your current capacity to achieve them!
– Ellen Johnson Sirleaf, Nobel Peace prize winner & President of Liberia
ಈ ಕೋಟ್-ನಿಂದ ಶುರುವಾಗೋ ಟ್ರೈಲರ್ ನಲ್ಲಿ, ಮತ್ತೊಂದು ಮುತ್ತಿನಂಥ ಮಾತೊಂದಿದೆ!
Sometimes the place you are used to.. is not the place you belong to. You belong, where you believe you belong to.. Where is that for you?
ಶುರು ಹಚ್ಕೊಳ್ಳೋಕೆ ನಮಗಿನ್ನೇನು ಬೇಕು ಹೇಳಿ! ಗೆಟ್… ಸೆಟ್ … ಗೋ
ಕಟ್ವೆ.. ಉಗಾಂಡಾದ ರಾಜಧಾನಿ ಕಂಪಾಲದಲ್ಲಿನ ಎಂಟು ಸ್ಲಂ-ಗಳ ಪೈಕಿ ದೊಡ್ಡ ಸ್ಲಂ! ಫಿಯೋನಾ-ಮ್-ಟೇಸಿ (ಫಿಯೋನಾ ಮ್ಯೂಟೇಸಿ ಅಂತ ಬೇಕಾದ್ರೂ ಓದ್ಕಳ್ಳಿ). ಈಕೆ ಮೂರು ವರ್ಷದವಳಿದ್ದಾಗ ಅಪ್ಪ ಏಡ್ಸ್ ನಿಂದ ಸತ್ತುಹೋದ! ಕೆಲವೇ ದಿನಗಳಲ್ಲಿ ತಲೆ ನೋವು ಅಂತ ಮಲಗಿದ ಅಕ್ಕ ಮೇಲೇಳಲೇ ಇಲ್ಲ! ಸ್ವತಃ ಈಕೆಯೇ ತಾಯಿಯೇ ಹೇಳಿದಂತೆ ಫಿಯೋನಾ ಮಲೇರಿಯಾ ಜ್ವರದಿಂದ ಸಾವಿನ ಮನೆಯ ಬಾಗಿಲು ಮುಟ್ಟಿ ಬಂದವಳು.. ಅದೂ ಎರಡು ಬಾರಿ! ಶಾಲೆಗೆ ಕಳಿಸುವುದಕ್ಕೆ ಆಗದೆ ತಾಯಿ ಹೇಳಿದಂತೆ ಫಿಯೋನಾ ಮಾಡುತ್ತಿದ್ದುದು ಬೇಯಿಸಿದ ಮೆಕ್ಕೆ ಜೋಳದ (ಕಾರ್ನ್) ಮಾರಾಟ! ಅಕಸ್ಮಾತ್ ಆಗಿ ತನ್ನ ಅಣ್ಣನ ಹಿಂದೆ ಹೋದರೆ ಊಟ ಸಿಗುತ್ತದೇನೋ ಅನ್ನೋ ಆಸೆಯಿಂದ ಅವನ ಹಿಂದೆ ಹೋಗೋ ಫಿಯೋನಾ ಸೀದಾ ತಲುಪುವುದು ಚೆಸ್ ಆಟ ಆಡುತ್ತಿರೋ ಹುಡುಗ/ಹುಡುಗಿಯರಿಂದ ತುಂಬಿದ ವರಾಂಡ-ಗೆ! ಇಣುಕಿ ನೋಡುತ್ತಿದ್ದ ಈಕೆಗೆ ‘ಹೇಯ್ ಹುಡುಗಿ – ಹೆದರ ಬೇಡ, ಒಳಗೆ ಬಾ..! ಅಂದ ಅಲ್ಲಿನ ಕೋಚ್-ಗೆ ಬಹುಷ ಅನ್ನಿಸಿರಲಿಕ್ಕಿಲ್ಲ – ಮುಂದಿನ ನ್ಯಾಷನಲ್ ಜೂನಿಯರ್ ಚಾಂಪಿಯನನ್ನ ಕರೆಯುತ್ತಿದ್ದೇನೆ ಎಂದು! ಅಲ್ಲಿಂದ ಶುರುವಾದ ಈಕೆಯ ಚೆಸ್ ಜೀವನ ಒಂದು ಅದ್ಭುತ ಮಜಲುಗಳನ್ನು ಹತ್ತಿಳಿದು , ರಷ್ಯಾದಲ್ಲಿ ನಡೆಯುವ ಅಂತರ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್-ವರೆಗೂ ತಲುಪುತ್ತದೆ.
ತೀರಾ ಕಡ್ಡಿ ತುಂಡು ಮಾಡಿದಂತೆ ಹೇಳಿದರೆ ಈಕೆಯ ಚೆಸ್, ಒಂದು ಆವರೇಜ್ ಮಟ್ಟದ್ದಷ್ಟೇ.. ಬಹುಷ ಈಕೆಯ ಕಥೆ ಒಂದು ಓವರ್ ಹೈಪ್ಡ್ ಇರಬಹುದು ಎಂದು ಉಸುರಿದ ಗ್ರಾಂಡ್-ಮಾಸ್ಟರ್ ಗಳೂ ಇದ್ದಾರೆ! ಆದರೆ ಶಾಲೆಗೆ ಆರು ಕಿಲೋಮೀಟರು ನಡೆದು ತಲುಪುವ ಫಿಯೋನಾ, ತೀರಾ ಪ್ರೋಡಿಜಿ ತರಹದ ಮೆಟೀರಿಯಲ್ ಅಲ್ಲದಿದ್ದರೂ, ಒಂದು ಸಾಧಾರಣ ಹಿನ್ನೆಲೆಯಿಂದ ಬಂದು ಈ ಮಟ್ಟ ತಲುಪಿರುವ ಫಿಯೋನಾ ಬಗ್ಗೆ ಪ್ರೌಡ್ ಫೀಲಿಂಗ್ ಬರದಿದ್ದರೆ ಕೇಳಿ!
ಇಷ್ಟು ಹೇಳಿದ ಮೇಲೆ.. ಇನ್ನೂ ಇಲ್ಲಿ ನನ್ನ ಹರಿಕಥೆ ಕಥೆ ಮುಂದುವರೆಸುವುದು ಅಷ್ಟು ಥರವಲ್ಲ! ಡಿಸ್ನಿ-ಯ ಶ್ರೇಷ್ಠ ಪ್ರೊಡಕ್ಷನ್ ವ್ಯಾಲ್ಯೂ-ಗಳನ್ನೊಳಗೊಂಡ ಈ ಚಿತ್ರ.. ಉತ್ತಮ ಸಿನಿಮಾಟೋಗ್ರಫಿ ಯಿಂದ ಗಮನ ಸೆಳೆಯುತ್ತದೆ! The Queen of Katwe: A Story of Life, Chess, and One Extraordinary Girl’s Dream of Becoming a Grandmaster, ಅನ್ನೋ ನಿಜ ಜೀವನದ ಕಥೆ ಮೊದಲು ಪ್ರಕಟವಾದದ್ದು ೨೦೧೨ರ ಈ ಎಸ್ ಪಿ ಏನ್ ಮ್ಯಾಗಜಿನ್ ನಲ್ಲಿ. ಉಗಾಂಡಾ ಮೂಲದ ಡಿಸ್ನಿ-ಯಾ ಕ್ರಿಯೇಟಿವ್ ಡೈರೆಕ್ಟರ್ ಕೈಗೆ ಸಿಗುವ ಈ ಕಥೆ ಸಿನಿಮಾ ಆಗಲು ತೆಗೆದುಕೊಂಡಿದ್ದು ಭರ್ತಿ ಎರಡು ವರ್ಷ! ಆಫ್ರಿಕಾ ಸಿನಿಮಾ ಎಂದರೆ ಬರೀ ಚೈಲ್ಡ್ ಸೋಲ್ಡ್ಜರ್ಸ್, ಬರ, ಮತಾಂತರ.. (‘ಬ್ಲಡ್ ಡೈಮಂಡ್’ ಹೊರತು ಪಡಿಸಿ ) ಇವೇ ಜ್ಞಾಪಕ ಬರೋ ನನಗೆ, ಒಂದು ವಿಭಿನ್ನವಾದ ಅನುಭವ ನೀಡಿದ ಚಿತ್ರವಿದು!
ಮುಂದಿನದನ್ನು ನೀವೇ ಬೆಳ್ಳಿ ತೆರೆಯ [ಟಿ ವಿ ಅಥವಾ ಲ್ಯಾಪ್ಟಾಪ್-ನ] ಮೇಲೆ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ! ಹಾಗೆಯೇ ನೋಡಿದ ಮೇಲೆ ನಿಮಗೆನ್ನನ್ನಿಸಿತು ಅಂತಾ ಒಂದ್ ನಾಲ್ಕು ಲೈನ್, ಇಲ್ಲಿ ಗೀಚಿ!
ಕ್ವೀನ್ ಆಫ್ ಕಟ್ವೆ ನೋಡಲು ಕೆಳಗಿನ ಕೊಂಡಿ ಬಳಸಿ
https://solarmovie.sc/movie/queen-of-katwe-18860/568718-8/watching.html