“ಪಟ್ಟಭದ್ರಹಿತಾಸಕ್ತಿಗಳ ಕೈಗಳಲ್ಲಿ ಸಿಕ್ಕಿ ಒದ್ದಾಡುತ್ತಿದೆ ಕನ್ನಡ ಚಿತ್ರರಂಗ”
– ಸುರೇಶ್ ಮುಗಬಾಳ್
ಗೆಳೆಯನೊಬ್ಬ ತಮಿಳು ನಟ ವಿಜಯ್ ನಟಿಸಿರುವ ‘ಕತ್ತಿ’ ಸಿನೆಮಾವನ್ನು ವೀಕ್ಷಿಸುವಂತೆ ಹೇಳಿದ, ಆ ಸಿನೆಮಾದಲ್ಲೇನಿದೆ ಅಂತಹ ವಿಶೇಷತೆ? ಎಂದು ಕೇಳಿದಾಗ, ‘ಸಾಮಾಜಿಕ ಕಳಕಳಿಯುಳ್ಳ ಅತ್ಯುತ್ತಮ ನಿನೆಮಾ, ಸಾಧ್ಯವಾದರೆ ವೀಕ್ಷಿಸು’ ಎಂದ, ಸರಿ ನಾನೂ Hotstar ನಲ್ಲಿ ಚಿತ್ರಕ್ಕಾಗಿ ತಡಕಾಡಿದೆ, ಸಿನೆಮಾವೇನೋ ವೀಕ್ಷಿಸಲು ಸಿಕ್ಕಿತು, ಆದರೆ ಚಿತ್ರವನ್ನು ಮಲೆಯಾಳಂ ಭಾಷೆಯಲ್ಲಿ ಡಬ್ಬ್ ಮಾಡಲಾಗಿತ್ತು. ಭಾಷೆ ಬಾರದವನಿಗೆ ತಮಿಳು ಭಾಷೆಯಾದರೇನು? ಮಲೆಯಾಳಂ ಭಾಷೆಯಾದರೇನು? ಅದು ಒತ್ತಟ್ಟಿಗಿರಲಿ, ಭಾಷೆಯ ಗಂಧವೇ ಗೊತ್ತಿರದ ಅರೇಬಿಕ್ ಭಾಷೆಯ ಅಲ್ ಲೈಲ್, ಕೋರಿಯನ್ ಭಾಷೆಯ Miracle in cell No. 7 ಸಿನೆಮಾಗಳನ್ನೂ ವೀಕ್ಷಿಸಿದ್ದೇನೆ, ಈ ಚಿತ್ರಗಳಲ್ಲಿ ನನಗೆ ಅರ್ಥವಾಗುತ್ತಿದ್ದದ್ದು ಕೇವಲ ಮುಖಭಾವ, ಆಂಗಿಕ ಚಲನೆ, ಚಿತ್ರದ ನಿರೂಪಣೆಗಳು ಮಾತ್ರ. ಇವುಗಳ ಸಹಾಯದಿಂದಲೇ ಚಿತ್ರಕಥೆಯನ್ನು ಅರ್ಥಮಾಡಿಕೊಳ್ಳು ಪ್ರಯತ್ನಿಸುತ್ತಿದ್ದೆ. ಒಂದು ವೇಳೆ English ಅಡಿಬರಹಗಳಿಲ್ಲದಿದ್ದರೆ ಸಿನೆಮಾ ಅರ್ಥವೇ ಆಗುತ್ತಿರಲಿಲ್ಲ. Miracle in cell No. 7 ಚಿತ್ರವನ್ನು ಇತ್ತೀಚೆಗೆ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ಕನ್ನಡಕ್ಕೆ ‘ಪುಷ್ಫಕ ವಿಮಾನ’ ಎಂಬ ಹೆಸರಿನಲ್ಲಿ ರಿಮೇಕ್ ಕೂಡ ಮಾಡಲಾಯಿತು. ನಾಯಕನ ನಟನೆ ಅದ್ಭುತವಾಗಿದ್ದರೂ ಚಿತ್ರವು ನಿರೀಕ್ಷೆಯನ್ನು ಹುಸಿಗೊಳಿಸಿತು. ಕೊರಿಯನ್ ಭಾಷೆಯಲ್ಲಿ ನಿರ್ಮಾಣವಾದ ಚಿತ್ರ ನನ್ನ ಅಂತರಂಗವನ್ನು ಕಲುಕಿದಷ್ಟೂ ಕನ್ನಡದಲ್ಲಿ ರಿಮೇಕ್ ಮಾಡಿದ ಚಿತ್ರ ಅಂತರಂಗಕ್ಕಿಳಿಯಲಿಲ್ಲ. ಪ್ರಾಯಶಃ ಕೊರಿಯನ್ ಭಾಷೆಯ ಚಿತ್ರವನ್ನೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದರೆ ಚಿತ್ರ ಇನ್ನಷ್ಟು ಅರ್ಥಗಳನ್ನು ಮೂಡಿಸುತ್ತಿತ್ತೇನೋ.
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿಷಯ ಪ್ರಸ್ತಾಪವಾದಗಲೆಲ್ಲಾ ಚಿತ್ರರಂಗದ ಪಟ್ಟಭದ್ರಹಿತಾಸಕ್ತಿಗಳು ಜಾಗೃತರಾಗಲು ಶುರುಮಾಡಿಬಿಡುತ್ತವೆ. ಕನ್ನಡ ಪರ ಸಂಘಟನೆಗಳೂ ಕೂಡ ಇದಕ್ಕೆ ಕೈ ಜೋಡಿಸಿಬಿಡುತ್ತವೆ.. ಡಬ್ಬಿಂಗ್ ವಿರೋಧಿಗಳು ‘ಡಬ್ಬಿಂಗ್ ಬೇಡ, ಡಬ್ಬಿಂಗ್ನಿಂದ ಕನ್ನಡ ಚಿತ್ರರಂಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ’ ಎಂದು ಸುಳ್ಳು ಪ್ರಚಾರ ಮಾಡಿಬಿಡುತ್ತವೆ. ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕಾಗುವ ನಷ್ಟಗಳೇನು? ಎಂದು ಪ್ರಶ್ನಿಸಿದರೆ ಅವರಿಂದ ಬರುವ ಉತ್ತರಗಳು ತರ್ಕರಹಿತವಾಗಿರುತ್ತವೆ. ಇಲ್ಲಿನ ತಂತ್ರಜ್ಞರು, ನಟರು, ಚಿತ್ರರಂಗದಲ್ಲಿ ದುಡಿಯುವ ಕಾರ್ಮಿಕರು ಬೀದಿಪಾಲಾಗುತ್ತಾರೆ. ಇಲ್ಲಿನ ಸಂಸ್ಕೃತಿಯ ಮೇಲೆ ಬೇರೆ ಭಾಷೆ ಚಿತ್ರಗಳಿಂದ ಆಕ್ರಮಣಗಳಾಗುತ್ತವೆ, ಡಬ್ಬಿಂಗ್ ಮಾಡುವುದಕ್ಕಿಂತ ರಿಮೇಕ್ ಮಾಡಿದರೆ ಇವರೆಲ್ಲರಿಗೂ ಕೆಲಸ ದೊರೆಯುತ್ತದೆ ಎಂದುಬಿಡುತ್ತಾರೆ ಡಬ್ಬಿಂಗ್ ವಿರೋಧಿಗಳು. ಕಥೆ ಎರವಲು ಪಡೆದು ರಿಮೇಕ್ ಸಿನೆಮಾ ತಯಾರಿಸಿಬಿಟ್ಟರೆ ಸಿನೆಮಾ ಭರ್ಜರಿ ಪ್ರದರ್ಶನಗೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಬಹುತೇಕ ಚಿತ್ರಗಳನ್ನು ಇಲ್ಲಿನ ಸಂಸ್ಕೃತಿಗೆ ಹೊಂದುವಂತೆ ಮಾರ್ಪಾಟುಮಾಡಿ ಚಿತ್ರಿಸಲಾಗುತ್ತದೆ. ರಿಮೇಕ್ ಮಾಡಿದ ಬಹುತೇಕ 90ರಷ್ಟು ಚಿತ್ರಗಳು ಯಶಸ್ಸು ಕಾಣದೆ ಹಳ್ಳ ಹಿಡಿಯುತ್ತವೆ. ಹೊಸತನವನ್ನು ಬಯಸುವ ಕನ್ನಡ ಭಾಷಿಗರು ಸ್ವಂತ ಕಥೆಯನ್ನು ಹೆಣೆದು ಚಿತ್ರೀಕರಿಸಿದ ಚಿತ್ರಗಳನ್ನೇ ತಿರಸ್ಕರಿಸುವ ಈ ಕಾಲದಲ್ಲಿ ಯಾವುದೋ ಭಾಷೆಯ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಿದರೆ ತಿರಸ್ಕರಿಸಲಾರರೇ? ಆ ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗುವುದಿಕ್ಕಿಂತಲೂ ಮುಂಚೆ ಮೂಲ ಭಾಷೆಯಲ್ಲಿ English ಅಡಿಬರಹಗಳ ಸಹಾಯದಿಂದ ವೀಕ್ಷಿಸಿಬಿಟ್ಟಿರುತ್ತಾರೆ.
ಕನ್ನಡ ಸಿನೆಮಾರಂಗದಲ್ಲಿ ಜಾರಿಯಲ್ಲಿರುವಂತೆ (ಕಾನೂನಾತ್ಮಕವಾಗಿ ಅಲ್ಲ) ಗುಜರಾತಿ, ಬಂಗಾಳಿ ಹಾಗೂ ಪಂಜಾಬಿ ಭಾಷೆಗಳಲ್ಲೂ ಡಬ್ಬಿಂಗ್ ನಿಷೇಧ ಜಾರಿಯಲ್ಲಿದೆ. ಆದರೆ ಡಬ್ಬಿಂಗ್ ವಿರೋಧಿ ಚಳುವಳಿಯನ್ನು ಮೊದಲು ಪ್ರಾರಂಭಿಸಿದ್ದು ಕನ್ನಡ ಚಿತ್ರರಂಗ. 60ರ ದಶಕದಲ್ಲಿ ತಮಿಳು ಹಾಗೂ ತೆಲುಗಿನ ಬಹುತೇಕ ಸಿನೆಮಾಗಳು ಕನ್ನಡಕ್ಕೆ ಡಬ್ಬ್ ಮಾಡಿದ್ದರಿಂದ ಜನ ಹೆಚ್ಚು ಹೆಚ್ಚು ಡಬ್ಬಿಂಗ್ ಚಿತ್ರಗಳನ್ನೇ ನೋಡಲು ಮುಂದಾಗುತ್ತಿದ್ದರು. ಇತ್ತ ಕನ್ನಡ ಚಿತ್ರರಂಗದಲ್ಲಿ ಆರ್ಥಿಕ ಸಂಕಷ್ಟದ ಕಾರಣದಿಂದ ಸಿನೆಮಾಗಳ ನಿರ್ಮಾಣ ತ್ರಾಸದ ಕೆಲಸವಾಗಿತ್ತು. 1960ರಲ್ಲಿ ಒಂದೇ ಒಂದು ಕನ್ನಡ ಸಿನೆಮಾವೂ ಬಿಡುಗಡೆ ಕಾಣಲಿಲ್ಲ. ಬೇರೆ ಭಾಷೆಗಳ ಚಿತ್ರಗಳು ಕನ್ನಡಕ್ಕೆ ಡಬ್ಬ್ ಮಾಡಿ ಬಿಡುಗಡೆಗೊಳಿಸುತ್ತಿದ್ದರಿಂದ ಕನ್ನಡ ಚಿತ್ರರಂಗದ ಕಲಾವಿದರನ್ನು ಜನ ಬಹುತೇಕ ಮರೆತುಬಿಟ್ಟಿದ್ದರು. ಈ ಎಚ್ಚರಿಕೆಯಿಂದ ಜಾಗೃತರಾದ ಕನ್ನಡ ಚಿತ್ರರಂಗದ ಮಹನೀಯರು ಡಬ್ಬಿಂಗ್ ವಿರೋಧಿ ಚಳುವಳಿಯನ್ನು ಪ್ರಾರಂಭಿಸಿದರು. ಪದ್ಮಭೂಷಣ ಡಾ|| ರಾಜ್ ಕುಮಾರ್ ರವರು ಈ ಚಳುವಳಿಯ ನೇತೃತ್ವವನ್ನು ವಹಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಯಾವುದೇ ಪರಭಾಷಾ ಸಿನೆಮಾ ಕನ್ನಡಕ್ಕೆ ಡಬ್ಬ್ ಆಗಿರಲಿಲ್ಲ. ಇತ್ತೀಚೆಗೆ ಬಿಡುಗಡೆ ಹೊಂದಿದ ‘ಸತ್ಯದೇವ್ IPS’ ಚಿತ್ರ ನಿಷೇಧದ ನಂತರ ಬಿಡುಗಡೆಗೊಂಡ ಪ್ರಥಮ ಚಿತ್ರ.
ಕನ್ನಡ ಚಿತ್ರರಂಗದ ಈ ನಡೆ ಅಂಸಂವಿಧಾನಕವೂ ಕೂಡ, ಸಂವಿಧಾನದಲ್ಲಿ ಭಾಷೆಯ ಆಧಾರದ ತಾರತಮ್ಯ ಶಿಕ್ಷಾರ್ಹ ಅಪರಾಧ, ಚಿತ್ರವನ್ನು ವೀಕ್ಷಿಸುವ ಸಹೃದಯನಿಗೆ ತನಗೆ ಯಾವ ಭಾಷೆ ಬೇಕೋ ಆ ಭಾಷೆಯಲ್ಲಿ ಸಿನೆಮಾ ವೀಕ್ಷಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಕನ್ನಡಿಗನೊಬ್ಬ ತಮಿಳಿನಲ್ಲಿ ಚಿತ್ರ ವೀಕ್ಷಿಸಿದರೆ ಅದು ಕನ್ನಡ ವಿರೋಧಿ ಚಟುವಟಿಕೆಯಲ್ಲ! ತಮಿಳಿನ ಚಿತ್ರವೊಂದು ಕನ್ನಡಿಗನ ಅಂತರಂಗಕ್ಕೆ ತುಂಬಾ ಹತ್ತಿರವಿದ್ದಾಗ ಆ ಚಿತ್ರವನ್ನು ಸಹೃದಯಿಗನಾಗಿ ವೀಕ್ಷಿಸುವುದು ಅವನ ಆಯ್ಕೆಯಾಗುತ್ತದೆ. ಇದನ್ನೇ ಆಯ್ಕೆಯ ಸ್ವಾತಂತ್ರ್ಯ ಎಂದೂ ಕರೆಯಬಹುದು. ಕನ್ನಡಕ್ಕಾಗಿ ದನಿ ಎತ್ತರಿಸುವ ಕನ್ನಡ ಸಂಘಟನೆಗಳು ಡಬ್ಬಿಂಗ್ ವಿರೋಧಿಸುವುದು ಒಂದು ರೀತಿ ಕನ್ನಡ ವಿರೋಧಿ ಚಟುವಟಿಕೆ ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಕನ್ನಡಿಗನು ತನ್ನ ಅಂತರಂಗಕ್ಕೆ ಹತ್ತಿರವೆನಿಸಿದ ತಮಿಳು ಚಿತ್ರವೊಂದನ್ನು ಕನ್ನಡಕ್ಕೆ ಡಬ್ಬ್ ಮಾಡಿ ಏಕಕಾಲಕ್ಕೆ ಎರಡೂ ಭಾಷೆಯಲ್ಲಿ ಬಿಡುಗಡೆಗೊಳಿಸುವುದರಿಂದ ಆತ ಆ ಸಿನೆಮಾವನ್ನು ಕನ್ನಡದಲ್ಲಿ ವೀಕ್ಷಿಸಲು ಮುಂದಾಗುತ್ತಾನೆ. ಅಲ್ಲಿಗೆ ಕನ್ನಡ ಗೆದ್ದಂತಾಗುತ್ತದೆ, ಇತ್ತ ಕನ್ನಡಿಗನಿಗೆ ತನ್ನದೇ ಭಾಷೆಯಲ್ಲಿ ಕನ್ನಡ ಸಿನೆಮಾ ನೋಡಿದ ಸಂತೃಪ್ತಭಾವ ಮೂಡುತ್ತದೆ. ಸಿನೆಮಾಗಳ ಡಬ್ಬಿಂಗ್ ಕತೆ ಒಂದುಕಡೆಯಾದರೆ, ಒಳ್ಳೆಯ ಕಾರ್ಯಕ್ರಮಗಳನ್ನೂ ಡಬ್ಬಿಂಗ್ ಮಾಡದಂತೆ ಕನ್ನಡ ಟೆಲಿವಿಷನ್ ಅಸೋಸಿಯೇಷನ್ ನಿರ್ಬಂಧ ಹೇರಿದೆ. ಖ್ಯಾತ ನಟ ಅಮೀರ್ ಖಾನ್ ತನ್ನ ‘ಸತ್ಯವೇವ ಜಯತೆ’ ಕಾರ್ಯಕ್ರಮವನ್ನು ದೇಶದ ಎಲ್ಲಾ ಭಾಷಿಕರಿಗೂ ತಲುಪುವ ಉದ್ದೇಶದಿಂದ ಪ್ರಮುಖ ಭಾಷೆಗಳಲ್ಲಿ ಡಬ್ಬಿಂಗ್ ಮಾಡಲು ಮುಂದಾದಾಗ ಇದೇ ಕನ್ನಡ ಟೆಲಿವಿಷನ್ ಅಸೋಸಿಯೇಷನ್ ನಿಂದ ಪ್ರತಿರೋಧ ಎದುರಾಗಿ ಡಬ್ಬಿಂಗ್ ಕೆಲಸ ನಿಂತಿತು. ಭಾರತದ ಎಲ್ಲಾ ಭಾಷಿಕರಿಗೂ ತಲುಪಿದ ಆ ಕಾರ್ಯಕ್ರಮ ಕನ್ನಡಿಗರನ್ನು ತಲುಪಲಿಲ್ಲ. ಹಿಂದಿ ಭಾಷೆ ಗೊತ್ತಿದ್ದ ಕನ್ನಡಿಗರು ಮಾತ್ರ ಆ ಕಾರ್ಯಕ್ರಮ ವೀಕ್ಷಿಸುವಂತಾಯಿತು. Discovery, NGC, Animal Planet ಚಾನೆಲ್ ಗಳ ಬಹುತೇಕ ಕಾರ್ಯಕ್ರಮಗಳು ಕೂಡ ಈ ನಿರ್ಬಂಧದಿಂದ ಕನ್ನಡಕ್ಕೆ ಡಬ್ಬ್ ಆಗಲೇ ಇಲ್ಲ. ಇಂಗ್ಲೀಷ್ ಮಾಧ್ಯಮದ ಮಕ್ಕಳಿಗೆ ಮಾತ್ರ ಆ ಚಾನೆಲ್ ಗಳ ಭಾಷೆ ಅರ್ಥವಾಯಿತು. ಹಳ್ಳಿಗಾಡಿನ ಮಕ್ಕಳಿಗೆ ಕಾರ್ಯಕ್ರಮಗಳು ತಲುಪಲೇ ಇಲ್ಲ, ಇದರಿಂದಾಗಿ ಕನ್ನಡದ ಮಕ್ಕಳು ಬೌದ್ಧಿಕ ನಷ್ಟ ಅನುಭವಿಸಬೇಕಾಯಿತು.
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಅವಕಾಶ ನೀಡಿಬಿಟ್ಟರೆ, ಇಲ್ಲಿನ ಸಂಸ್ಕೃತಿಯ ಮೇಲೆ ಬೇರೆ ಭಾಷಿಕರ ಆಕ್ರಮಣ ಎದುರಿಸಬೇಕಾಗುತ್ತದೆ ಎಂದು ಸುಳ್ಳು ಹೇಳುವ ಪಟ್ಟಭದ್ರ ಹಿತಾಸಕ್ತಿಗಳಿಗೆ ತಾವು ಬಿಡುಗಡೆಗೊಳಿಸುವ ಮೂರನೇ ದರ್ಜೆಯ ಸಿನೆಮಾಗಳಿಂದ ಸಂಸ್ಕೃತಿಯ ಮೇಲೆ ಆಕ್ರಮಣವಾಗುವುದಿಲ್ಲವೇ ಎಂದು ಪ್ರಶ್ನಿಸುವ ಅವಶ್ಯಕತೆ ಇದೆ. ಒಂದು ಭಾಷೆಯ ಚಿತ್ರರಂಗಕ್ಕಿಂತ ಮತ್ತೊಂದು ಭಾಷೆಯ ಚಿತ್ರಂಗಕ್ಕೆ ಕೊಂಚ ವ್ಯತ್ಯಾಸಗಳಿದ್ದರೂ ಸಾಂಸ್ಕೃತಿಕವಾಗಿ ಇಡೀ ಭಾರತೀಯ ಚಿತ್ರರಂಗಗಳು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ ಎಂಬುದು ಅರ್ಥವಾಗುತ್ತಿಲ್ಲವೇಕೆ? ಇನ್ನು ಸ್ಥಳೀಯ ತಂತ್ರಜ್ಞರು ಬೀದಿಪಾಲಾಗುತ್ತಾರೆ, ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗುವುದಿಲ್ಲ ಎನ್ನುವ ಪ್ರಶ್ನೆಗೆ, ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರರಂಗದಲ್ಲಿ ಡಬ್ಬಿಂಗ್ ಅವಕಾಶವಿದ್ದರೂ ಹೇಗೆ ಸಾಕಷ್ಟು ಮುಂದುವರೆದಿದ್ದಾರೆ? ಹೇಗೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ? ನಿಜ ಹೇಳಬೇಕೆಂದರೆ ನಮಗಿಂತಲೂ ಈ ಚಿತ್ರರಂಗಗಳು ಮುಂಚೂಣಿಯಲ್ಲಿವೆ.. ಏಕೆ ಗೊತ್ತೇ? ಡಬ್ಬಿಂಗ್ ಭಯದಿಂದ ಹೆಚ್ಚು ಹೆಚ್ಚು ಕೆಲಸಮಾಡಲು ಸಿದ್ಧರಾಗುತ್ತಾರೆ, ಸ್ಪರ್ಧೆಯಲ್ಲಿ ಹೊಸತನಗಳನ್ನು ಹುಡುಕಿ ಯಶಸ್ವಿಯಾಗುತ್ತಿದ್ದಾರೆ. 1960ರ ಡಬ್ಬಿಂಗ್ ವಿರೋಧ ಚಳುವಳಿಗೂ ಮುಂಚೆ ಕರ್ನಾಟದಲ್ಲಿ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಇತ್ತು, ಬಿಡುಗಡೆಗೊಳ್ಳುತ್ತಿದ್ದ ಸಿನೆಮಾಗಳೂ ಕಡಿಮೆ ಇದ್ದವು, ಇದೇ ಕಾರಣಕ್ಕಾಗಿ ಕಲಾವಿದರು ಅವಕಾಶ ವಂಚಿತರಾಗುತ್ತಿದ್ದರು. ಈಗಿನ ಸನ್ನಿವೇಶ ಹಾಗಿಲ್ಲ, ಊರಿಗೊಂದರಂತೆ, ಕೇರಿಗೆರಡರಂತೆ ಚಿತ್ರಮಂದಿರಗಳಿವೆ. ವರ್ಷವೊಂದಕ್ಕೆ ಬಿಡುಗಡೆಯಾಗುವ ಸಿನಮಾಗಳ ಸಂಖ್ಯೆ 150 ಮುಟ್ಟುತ್ತಿವೆ, ಹೀಗಿರುವಾಗ ಸಿಗುವ ಅವಕಾಶಗಳಿಗೇನೂ ಕೊರತೆಯುಂಟಾಗುವುದಿಲ್ಲ,
ಡಬ್ಬಿಂಗ್ ವಿರೋಧಿಸುವುದರಿಂದ ಬೇರೆ ಭಾಷಿಕರಿಗೆ ನಮ್ಮ ಸಣ್ಣತನವನ್ನು ನಾವೇ ಎತ್ತಿ ತೋರಿಸಿದಂತಾಗುತ್ತದೆ. ನಮ್ಮ ಭಾಷೆಯ ಚಲನಚಿತ್ರವೊಂದನ್ನು ಬೇರೆ ಭಾಷೆಯಲ್ಲಿ ಡಬ್ಬಿಂಗ್ ಮಾಡಿ ಪ್ರಸಾರ ಮಾಡಿವಾಗ ಖುಷಿಪಡುವ ನಾವು, ಬೇರೆ ಭಾಷೆಯ ಸಿನೆಮಾಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಕನ್ನಡದಲ್ಲೇ ಚಿತ್ರವೀಕ್ಷಿಸುವ ಆನಂದವನ್ನು ಅನುಭವಿಸೋಣ. ಈಗಿನ ಚಿತ್ರರಂಗದ ಪರಿಸ್ಥಿತಿಯನ್ನು ಕಣ್ಣಾರೆ ಕಾಣಲು ವರನಟರೇನಾದರು ಇದ್ದಿದ್ದರೆ ಡಬ್ಬಿಂಗಿಗೆ ತಾವೇ ಬೆಂಬಲ ಸೂಚಿಸುತ್ತಿದ್ದರೇನೋ. ಡಬ್ಬಿಂಗ್ ಬೇಕೋ ಬೇಡವೋ ಎಂದು ಚರ್ಚೆಗಳಾಗುತ್ತಿರು ಈ ಸಂದರ್ಭದಲ್ಲಿ ಕನ್ನಡದಲ್ಲಿ ಹೊಸತನಗಳು ಕಾಣುತ್ತಿರುವುದು ಶ್ಲಾಘನೀಯ. ಈಗೀಗ ಬಿಡುಗಡೆಗೊಳ್ಳುತ್ತಿರುವ ಕನ್ನಡ ಚಿತ್ರಗಳು ಬೇರೆ ಭಾಷೆಗೆ ಡಬ್ಬಿಂಗ್ ಮಾಡುತ್ತಿದ್ದಾರೆಂದರೆ ಡಬ್ಬಿಂಗ್ ಮಾಡುವ ಭಾಷೆಯಲ್ಲಿ ಕಾಣದ ಹೊಸತನವನ್ನು ನಾವು ಕಂಡಿದ್ದೇವೆ ಎಂದರ್ಥ. ಭಾಷೆಯ ಆಧಾರದಲ್ಲಿ ನಿರ್ಬಂಧವೇರುವುದನ್ನು ನಿಲ್ಲಿಸಿದ್ದೇ ಆದರೆ ಮುಂದೊಂದು ದಿನ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುವ ಚಿತ್ರಗಳಿಗೆ ಇಲ್ಲಿ ಮಾರುಕಟ್ಟೆಯೇ ಇಲ್ಲವಾಗಬಹುದು. ಕನ್ನಡದ ಅಥವಾ ಕನ್ನಡದಲ್ಲಿ ಡಬ್ಬ್ ಮಾಡಿದ ಚಿತ್ರಗಳಿಗೆ ಮಾತ್ರ ಸಹೃದಯರು ಮನ್ನಣೆ ನೀಡಬಹುದು, ಇವೆಲ್ಲಾ ಅಂಶಗಳನ್ನು ಮನಗಾಣುವ ಜರೂರು ಕನ್ನಡ ಚಿತ್ರರಂಗಕ್ಕಿದೆ.
ಧನ್ಯವಾದಗಳು ನಿಲುಮೆ ನಿರ್ವಾಹಕರು ಬಳಗಕ್ಕೆ.. -)
ಡಬ್ಬಿಂಗ ವಿರೋಧಿಗಳು ತಾವೂ ಹೊಸದನ್ನು ಮಾಡಿ ತೋರಿಸುವುದಿಲ್ಲ, ಮಾಡಿದವರದ್ದು ನಮಗೆ ಅರ್ಥವಾಗುವ ಹಾಗೆ ತೋರಿಸುದಿಲ್ಲ.
ಸುರೇರ್ ಮುಗಬಾಳ್ ಅವರಿಗೆ– ನಿಮ್ಮ ತರ್ಕ ತಾತ್ವಿಕವಾಗಿ ಸರಿಯಿರಬಹುದು. ಆದರೆ ತಾವು ಸಿನಿಮಾ ಮಾಡುವ ನಿರ್ಮಾಪಕನ ಮೂಲ ಉದ್ದೇಶವೇನು? ಎಂಬ ಪ್ರಾಥಮಿಕ ಪ್ರಶ್ನೆಯನ್ನೇ ಮರೆತಿದ್ದೀರಿ ಅನಿಸುತ್ತದೆ. ಸಿನಿಮಾ ಒಂದು ಹಣ ಮಾಡುವ ವ್ಯವಹಾರ. ಕನ್ನಡದ ಮಟ್ಟಿಗೆ ಹೇಳುವುದಾದರೆ ಒಂದು ಹತ್ತು ಹದಿನೈದು ಕೋಟಿ ಹಾಕಿ (ಸ್ಟಾರ್ ಪಟ್ಟ, ಬಿರುದುಬಾವಲಿಗಳಿರುವ ನಾಯಕ, ನಾಯಕಿಯರನ್ನು ಹಾಕಿಕೊಂಡರೆ) ಸಿನಿಮಾ ಬಿಡುಗಡೆಯಾದ ನಂತರದ ಎರಡು ಮೂರು ತಿಂಗಳಿನಲ್ಲಿ ಡಬ್ಬಲ್ ಮಾಡಿಕೊಳ್ಳುವ ಒಂದು ಉದ್ದೇಶದ ಕೆಲಸ. ಇಂದು ಸೈಟು ಕೊಂಡು ಒಂದು ವರ್ಷದ ನಂತರ ಎರಡು ಪಟ್ಟು ಬೆಲೆಗೆ ಮಾರುವಂತೆ. ಒಂದು ನಾಲ್ಕನೇ ದರ್ಜೆಯ ಸ್ವಂತ ಕಥೆಯ/ ಅನ್ಯ ಭಾಷೆಯಿಂದ ರಿಮೇಕ್ ಸಿನಿಮಾ ಮಾಡುವುದಕ್ಕಿಂತ ಬೇರೊಂದು ಭಾಷೆಯಿಂದ ಕನ್ನಡಕ್ಕೆ ಸಿನಿಮಾ ಡಬ್ಬಿಂಗ್ ಮಾಡುವುದು ಸುಲಭದ ಕೆಲಸ . ಸುಲಭದಲ್ಲಿ ಹಣ ಮಾಡುವಂತಹ ಅವಕಾಶ ಸಿಕ್ಕರೆ ಯಾರು ತಾನೇ ಬಿಡುತ್ತಾರೆ? ನೀವೇ ಯೋಚಿಸಿ. ಈಗ ಡಬ್ಬಿಂಗ್ ಇಲ್ಲದೆಯೂ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸೂಪರ್ ಡೂಪರ್ ಹಿಟ್ ಆದಂತಹ ಸಿನಿಮಾಗಳು ಹಣ ಮಾಡುತ್ತಿವೆ. ಇನ್ನು ಅವೆಲ್ಲವೂ ಕನ್ನಡ ಧ್ವನಿಯಲ್ಲೇ ಸಿಗುವಂತಾದರೆ ಸಿನಿಮಾ ಮಂದಿರಗಳ ಮಾಲೀಕರು, ಡಬ್ಬಿಂಗ್ ಗೆ ಹಣ ಹಾಕಿದವರು ಹಣವಂತರಾಗುತ್ತಾರೆ. ಕಂಠ ದಾನ ಮಾಡುವ ಒಂದು ಹತ್ತು ಹದಿನೈದು ಜನ ಕಲಾವಿದರು, ಮೂಲ ಭಾಷೆಯಿಂದ ಕನ್ನಡಕ್ಕೆ ಆ ಸಿನಿಮಾದ ಹಾಡು,ಸಂಭಾಷಣೆಗಳನ್ನು ಅನುವಾದ ಮಾಡುವವರಿಗೆ ಸ್ವಲ್ಪ ಹಣ ಸಿಗುತ್ತದೆ. ಉಳಿದಂತೆ ಕನ್ನಡ ಚಿತ್ರೋದ್ಯಮವನ್ನು ನಂಬಿದ ಕಲಾವಿದರು,ತಂತ್ರಜ್ಞರು, ವಾಹನ ಚಾಲಕರು,ಕಾಫಿ ಟೀ ಊಟ ಒದಗಿಸುವವರು ಇತ್ಯಾದಿ ಇತ್ಯಾದಿ ಆನುಷಂಗಿಕ ವಲಯದ ಕಾರ್ಮಿಕರು ಬೀದಿ ಪಾಲಾಗುತ್ತಾರೆ . ಒಳ್ಳೆಯ ಡಬ್ಬಿಂಗ್ ಸಿನಿಮಾಗಳನ್ನು ನಾವು ನೋಡಲು ಪ್ರಾರಂಭಿಸಿದಾಕ್ಷಣ ನಮ್ಮ ನಿರ್ಮಾಪಕರು ಒಳ್ಳೆಯ ಕಥೆಯಿರುವ , ಸ್ವಂತಿಕೆಯ ಉತ್ತಮವಾದ ಅಪ್ಪಟ ಕನ್ನಡ ಸಿನಿಮಾ ಮಾಡಲು ಮುಂದಾಗುತ್ತಾರೆ ಎಂಬುದು ಹಗಲು ಕನಸು.
ಹೌದು, ಒಪ್ಪೋಣ, ನಿಮ್ಮಂತೆಯೇ ನಾನೂ ಯೋಚಿಸಿದ್ದೆ, ಆದರೆ ಇಲ್ಲಿ ಒಂದು ಮಾತಂತೂ ಸ್ಪಷ್ಟ, ರಿಮೇಕ್ ಸಿನೆಮಾದ ರೀತಿಯ ತಂಗಳನ್ನವನ್ನು ಬಿಸಿ ಮಾಡಿ ಸಹೃದಯರ ತಟ್ಟೆಗೆ ಬಡಿಸಿದರೇನು ಬಂತು ಪ್ರಯೋಜನ? ನಮ್ಮ ಕನ್ನಡ ಚಲನ ಚಿತ್ರರಂಗ ನಿಧಾನವಾಗಿ ಅಸ್ತಿತ್ವ ಕಳೆದುಕೊಂಡು ಮೂಲೆಗುಂಪಾಗುತ್ತದೆ. ಡಬ್ಬ್ ಮಾಡುವುದರಿಂದ ನಿರ್ಮಾಪಕರು ಡಬ್ಬಗಟ್ಟಲೆ ಹಣ ಮಾಡುತ್ತಾರೆ ಎಂಬ ವಾದ ನಿಜವೇ ಆದರೂ ಕನ್ನಡ ಉಳಿಯುತ್ತದೆ ಎಂಬ ನಿಜವನ್ನು ಯಾಕೆ ಅರ್ಥಮಾಡಿಕೊಳ್ಳಬಾರದು. ಬೇರೆ ಭಾಷೆಯ ಚಿತ್ರಗಳನ್ನು ನೋಡುವ ಹಕ್ಕು-ಸ್ವಾತಂತ್ರ್ಯ ಪ್ರೇಕ್ಷಕನಿಗೆ ಬಿಟ್ಟದ್ದು, ಅದೇ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡದಲ್ಲಿಯೇ ನೋಡುವಂತೆ ಮಾಡುವುದು ಕನ್ನಡಿಗರ ಜಾಣತನ. ಇಲ್ಲಿ ಆ ಭಾಷೆಯವರು ಮಾಡಿದ ಸಿನೆಮಾ, ನಮ್ಮ ಭಾಷಿಗರು ಮಾಡಿದ ಸಿನೆಮಾ ಅನ್ನುವುದನ್ನು ಬಿಟ್ಟು ಕಲಾವಿದರು ಮಾಡಿದ ಸಿನೆಮಾ ಎಂದು ಭಾವಿಸುವುದಾದರೆ ಚಿತ್ರ ಅಂತಃಕರಣ ಮುಟ್ಟುತ್ತದೆ.
ಇನ್ನು ಕೂಲಿ ಕಾರ್ಮಿಕರ ಹಾಗೂ ಕಲಾವಿದರ ಪರಿಸ್ಥಿತಿಯ ಬಗ್ಗೆ ಕೇಳಿದಿರಿ, ಅದಕ್ಕೆ ಉತ್ತರ ಲೇಖನದಲ್ಲಿಯೇ ಇದೆ.
ನಿಮ್ಮ ಪ್ರಶ್ನೆಗಾಗಿ ಧನ್ಯವಾದಗಳು.
ಸುರೇಶ್ ಮುಗಬಾಳ್ ಅವರಿಗೆ —ತಾವು ಡಬ್ಬಿಂಗ್ ವಿರೋಧಿಸುವುದು ಅಸಂವಿಧಾನಿಕ ಎಂದಿದ್ದೀರಿ. ಕೇಂದ್ರ ಸರ್ಕಾರ ೧೯೬೮ ರಲ್ಲಿ ಜಾರಿಗೆ ತಂದ ತ್ರಿ ಭಾಷಾ ಸೂತ್ರವನ್ನು ತಮಿಳುನಾಡು ಪಾಲಿಸುತ್ತಿಲ್ಲ. ಅದು ಅಸಂವಿಧಾನಿಕವಾಗುವುದಿಲ್ಲವೇ? ಒಂದು ವೇಳೆ ಇಲ್ಲಿಯವರೆಗಿನ ಕನ್ನಡ ಸಿನಿಮಾ ರಂಗದ ಡಬ್ಬಿಂಗ್ ವಿರೋಧಿ ನಿಲುವಿನ ವಿರುದ್ಧ ಯಾವುದಾದರೂ ಕೋರ್ಟಿನಲ್ಲಿ ದಾವೆ ಹೂಡಿ ಡಬ್ಬಿಂಗ್ ಪರ ತೀರ್ಪು ಬಂದಿದೆಯೇ? ತಿಳಿಸಬೇಕು. ಡಬ್ಬಿಂಗ್ ಮಾಡುವುದಕ್ಕೋಸ್ಕರ ಒಂದೇ ಒಂದು ಇದ್ದ ಕನ್ನಡ ಚಲನಚಿತ್ರ ಮಂಡಳಿಗೆ ಇನ್ನೊಂದು ಮಂಡಳಿಯನ್ನು ಡಬ್ಬಿಂಗ್ ಪರ ಇರುವ ಕೆಲವು ‘ಚಿತ್ರೋದ್ಯಮಿಗಳು'(?) ಮಾಡಿಕೊಂಡಿದ್ದಾರೆ ಅಲ್ಲವೇ? ಇನ್ನು ತಾವು ತೆಲುಗು,ತಮಿಳು, ಹಿಂದಿ, ಮಲೆಯಾಳಂ ಚಿತ್ರರಂಗದ ಉದಾಹರಣೆ ಕೊಟ್ಟಿದ್ದೀರಿ. ಡಬ್ಬಿಂಗ್ ಇದ್ದರೂ ಅವು ಬೆಳೆದಿಲ್ಲವೇ ಎಂದು ಹೇಳಿದ್ದೀರಿ. ಮಲೆಯಾಳಂ ಚಿತ್ರಗಳ ಬಗ್ಗೆ ನನಗೆ ತಿಳಿಯದು. ಹಿಂದಿ,ತೆಲುಗು ಮತ್ತು ತಮಿಳು ಚಿತ್ರಗಳಿಗೆ ನಮ್ಮ ದೇಶ ಮತ್ತು ಪರ ದೇಶಗಳಲ್ಲಿರುವಷ್ಟು ಬೇಡಿಕೆ,ಮಾರುಕಟ್ಟೆ ಕನ್ನಡ ಸಿನಿಮಾಗಳಿಗೆ ಇದೆಯೇ? ಬಳ್ಳಾರಿ,ಕೋಲಾರದಲ್ಲಿ ತೆಲುಗು, ದಾವಣಗೆರೆ ದಾಟಿದರೆ ಹಿಂದಿ ಸಿನಿಮಾಗಳ ಪ್ರಾಬಲ್ಯವೇ ಜಾಸ್ತಿ. ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳಿಗೆ ಚಿತ್ರ ಮಂದಿರಗಳು ಸಿಗುವುದೇ ದುಸ್ತರ. ತೆಲುಗು/ತಮಿಳು/ಹಿಂದಿ ಸಿನಿಮಾಗಳಿಗೆ ಜಾಗ ಮಾಡಿಕೊಡಲು ಚೆನ್ನಾಗಿ ಹಣ ಮಾಡುತ್ತಿದ್ದ ಕನ್ನಡದ ಸಿನಿಮಾಗಳನ್ನು ಎರಡನೆ ವಾರಕ್ಕೇ ಎತ್ತಂಗಡಿ ಮಾಡುತ್ತಿರುವ ಸುದ್ದಿಯನ್ನು ನೀವು ಪತ್ರಿಕೆಗಳಲ್ಲಿ ಓದಿರಬಹುದು. ಈ ಎಲ್ಲಾ ಕಷ್ಟ ಕೋಟಲೆಗಳ ನಡುವೆ ತಾವೇ ಹೇಳಿರುವಂತೆ ವರ್ಷಕ್ಕೆ ಸುಮಾರು ೧೫೦ ಕನ್ನಡ ಸಿನಿಮಾಗಳು ತಯಾರಾಗುತ್ತಿವೆ. ಅದರಲ್ಲಿ ಜೊಳ್ಳೇ ಹೆಚ್ಚಿರಬಹುದು. ಇಲ್ಲವೆಂದಲ್ಲ. ಇತರ ಭಾಷೆಗಳಲ್ಲಿ ತಯಾರಾಗುವ ಎಲ್ಲಾ ಸಿನಿಮಾಗಳೂ ಉತ್ತಮವಾದವುಗಳೇ?.(ಈ ಬಗ್ಗೆ ನಿಲುಮೆಯಲ್ಲಿ ೨೭ ಜನವರಿ ೨೦೧೪ ಮತ್ತು ೭ ಫೆಬ್ರವರಿ ೨೦೧೪ ರಂದು ಡಬ್ಬಿಂಗ್ ವಿಷಯ ಕುರಿತು ಬಂದ ಲೇಖನಗಳಿಗೆ ನಾನು ವಿವರವಾಗಿ ಪ್ರತಿಕ್ರಿಯಿಸಿದ್ದೇನೆ. ಆಸಕ್ತಿಯಿದ್ದರೆ ತಮಗೆ ಬಿಡುವಾದಾಗ ನೋಡಬಹುದು). ಇನ್ನು ಡಬ್ಬಿಂಗ್ ನಿಂದ ಕೆಲಸವಿಲ್ಲದಂತಾಗುವ ಕನ್ನಡ ಚಿತ್ರೋದ್ಯಮದ ಜನಗಳ ಬಗ್ಗೆ ತಮ್ಮ ಲೇಖನದಲ್ಲಿ convincing ಆಗುವಂತಂಹ ಉತ್ತರ ನನಗೆ ಸಿಗಲಿಲ್ಲ.
ಒಬ್ಬ ಸಹೃದಯನ ಆಸಕ್ತಿಗೆ ತಕ್ಕ ಹಾಗೆ ಆತ ಯಾವ ಭಾಷೆಯಲ್ಲಿ ಬೇಕಾದರೂ ಸಿನೆಮಾ ವೀಕ್ಷಿಸಬಹುದು, ಅದು ತೆಲುಗು ಭಾಷೆಯೇ ಆಗಿರಬಹುದು, ಕನ್ನಡ ಭಾಷೆಯೇ ಆಗಿರಬಹುದು ಅದನ್ನು ವಿರೋಧಿಸುವುದು ಅಸಂವಿಧಾನಿಕ, ಡಬ್ಬಿಂಗ್ ವಿರೋಧಿಸುವುದು ಅಸಂಬಿಧಾನಿಕ ಎಂದು ಹೇಳಿಲ್ಲ, ಅಷ್ಟಾಗಿಯೂ ಡಬ್ಬಿಂಗ್ ಮಾಡಬಾರದು ಎಂಬ ಕಾನೂನು ಜಾರಿಯಲ್ಲಿಲ್ಲ ಅಲ್ಲವೇ? ಡಬ್ಬಿಂಗ್ ಮಾಡಲು ಹೊರಟರೆ ಅದನ್ನು ತಡೆಯುವುದು ಕಾನೂನಿನ ಪ್ರಕಾರವೂ ತಪ್ಪೇ ಆಗುತ್ತದೆ.
ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರದ ಬಗ್ಗೆ ಅಪಸ್ವರಗಳು ಬುಗಿಲೆದ್ದಾಗಲೇ ಕರ್ನಾಟಕದಲ್ಲೂ ಚಳುವಳಿಗಳಾದವು ಅಲ್ಲಿ ಹಿಂದಿಯನ್ನು ಕೈಬಿಡಲಾಯಿತು, ನಮ್ಮಲ್ಲಿ ತೃತಿಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಯಿತು, ಈ ವಾದ ಇಲ್ಲಿ ಅನಾವಶ್ಯಕ.
ಡಬ್ಬಿಂಗ್ ಬೇಕು ಎಂಬುದರ ಕುರಿತಂತೆ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. ವಸಂತ್ ಶೆಟ್ಟಿ ಇದರ ನೇತೃತ್ವ ವಹಿಸಿದ್ದಾರೆ.
ತಮಿಳು, ತೆಲುಗು ಹಿಂದಿ ಚಿತ್ರರಂಗಗಳ ಮಾರುಕಟ್ಟೆ ವ್ಯಾಪ್ತಿಯು ಹಿರಿದಾದದ್ದು ಅವರ ಸ್ವಂತಿಕೆಯಿಂದ, ನಮ್ಮ ಮಾರುಕಟ್ಟೆಯ ವ್ಯಾಪ್ತಿ ಕಿರಿದಾದ್ದದ್ದು ರಿಮೇಕ್ ಹಿಂದೆ ಬಿದ್ದಿದ್ದರಿಂದ, ಈ ವಾದವನ್ನು ನೀವು ಒಪ್ಪಲೇಬೇಕು, ಇದು ನಿಜವೂ ಕೂಡ.
ಕನ್ನಡದಲ್ಲಿ ಬರುವ ಸರಾಸರಿ 150 ಚಿತ್ರಗಳಲ್ಲಿ ಹೊರಬರುವ ಬಹುತೇಕ ಸಿನೆಮಾಗಳು ಜೊಳ್ಳು ಸಿನೆಮಾಗಳು, ಅದೇ ಬೇರೆ ಭಾಷೆಯಲ್ಲಿ ಬರುವ ಸಿನೆಮಾಗಳಲ್ಲಿಯೂ ಜೊಳ್ಳು ಕಾಣುತ್ತವೆ, ಆದರೆ ಆ ಜೊಳ್ಳು ಸಿನೆಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗುವುದಿರಲಿ ಆ ರಾಜ್ಯದಲ್ಲೇ ಬಿಡುಗಡೆ ಕಾಣಲಾರದು, ರಿಮೇಕ್ ಸಿನೆಮಾಗಳಿಗೆ ಅಲ್ಲಿ ಬೆಲೆಯೇ ಇಲ್ಲ.
ಇನ್ನೂ ಚಿತ್ರಮಂದಿರಗಳ ಬಗ್ಗೆ, ಚಿತ್ರಮಂದಿರಗಳನ್ನು ಇಂತಿಷ್ಟು ಎಂದು ಪರಭಾಷೆಗಳಿಗೆ ಮೀಸಲಿರಿಸುವ ಈ ಕಾಲದಲ್ಲಿ ಡಬ್ಬ್ ಮಾಡಿದ ಸಿನೆಮಾಗಳನ್ನೇ ಆ ಮೀಸಲಿರುವ ಚಿತ್ರಮಂದಿರಗಳಲ್ಲಿ ಪ್ರಸಾರ ಮಾಡಬೇಕು, ಕನ್ನಡಕ್ಕಾಗಿ ಮೀಸಲಿರುವ ಚಿತ್ರಮಂದಿರಗಳ ಆಕ್ರಮಣ ಸಲ್ಲದು ಎಂದು ನಿಯಮ ಜಾರಿಗೆ ತಂದರೆ ಮೂಲ ಭಾಷೆಯಲ್ಲಿ ತೆರೆಕಾಣಬೇಕಿದ್ದ ಸಿನೆಮಾ ಕನ್ನಡ ಭಾಷೆಯಲ್ಲೆ ತೆರೆಕಾಣುತ್ತದೆ, ಅನ್ಯ ಭಾಷೆಯೇ ಇಲ್ಲದಾಗುತ್ತದೆ, ಇದು ಜಾಣ್ಮೆಯೂ ಕೂಡ. ಇದೇ ಉತ್ತರದಲ್ಲಿ ಕೂಲಿ ಕಾರ್ಮಿಕರ ಬಗ್ಗೆಯೂ ಉತ್ತರ ಹುಡುಕಬಹುದು.
ಇನ್ನಿ ಡಬ್ಬ್ ಮಾಡಿದ ಸಿನೆಮಾಗಳನ್ನು ಒಪ್ಪಿಕೊಂಡು ಜಾಣ್ಮೆ ತೋರಿಸಿದ್ದೇ ಆದರೆ ಕನ್ನಡ ಉಳಿಯುತ್ತದೆ.
ಮತ್ತೊಮ್ಮೆ ಪ್ರಶ್ನಿಸಿದ್ದಕ್ಕಾಗಿ ಧನ್ಯವಾದಗಳು
ಸುರೇಶ್ ಮುಗಬಾಳ್ ಅವರಿಗೆ—(೧) ನಿಮ್ಮ ಲೇಖನ :-‘ ……… ಅಂದಿನಿಂದ ಇಂದಿನವರೆಗೆ ಯಾವುದೇ ಪರಭಾಷಾ ಸಿನೆಮಾ ಕನ್ನಡಕ್ಕೆ ಡಬ್ಬ್ ಆಗಿರಲಿಲ್ಲ. ಇತ್ತೀಚಿಗೆ ಬಿಡುಗಡೆ ಹೊಂದಿದ ಸತ್ಯದೇವ್ ips ಚಿತ್ರ ನಿಷೇಧದ ನಂತರ ಬಿಡುಗಡೆಗೊಂಡ ಪ್ರಥಮ ಚಿತ್ರ. ಕನ್ನಡ ಚಿತ್ರರಂಗದ ಈ ನಡೆ ಅಸಂವಿಧಾನಿಕವೂ ಕೂಡ. ಸಂವಿಧಾನದಲ್ಲಿ ಭಾಷೆಯ ಆಧಾರದ ತಾರತಮ್ಯ ಶಿಕ್ಷಾರ್ಹ ಅಪರಾಧ. ಚಿತ್ರವನ್ನು ವೀಕ್ಷಿಸುವ ಸಹೃದಯನಿಗೆ ತನಗೆ ಯಾವ ಭಾಷೆ ಬೇಕೋ ಆ ಭಾಷೆಯಲ್ಲಿ ಸಿನೆಮಾ ವೀಕ್ಷಿಸುವ ಹಕ್ಕನ್ನು ಸಂವಿಧಾನ ನೀಡಿದೆ……… ‘
( ನಿಷೇಧದ ನಂತರ ಅಂದರೆ ಡಬ್ಬಿಂಗ್ ನಿಷೇಧ ಎಂದು ನಿಮ್ಮ ಅರ್ಥ ಅಲ್ಲವೇ?—ಶ್ರೀರಂಗ)
ಮಾರ್ಚ್ ೮ನೇ ತಾರೀಖಿನ ನಿಮ್ಮ ಪ್ರತಿಕ್ರಿಯೆ:- ‘……… ಡಬ್ಬಿಂಗ್ ವಿರೋಧಿಸುವುದು ಅಸಂವಿಧಾನಿಕ ಎಂದು ಹೇಳಿಲ್ಲ ……… ‘
ನನ್ನ ಪ್ರತಿಕ್ರಿಯೆ:- ನಿಮ್ಮ ಲೇಖನ ಮತ್ತು ಪ್ರತಿಕ್ರಿಯೆಯಲ್ಲೇ ವಿರೋಧಾಭಾಸ ಇದೆಯಲ್ಲ!! ಕನ್ನಡಿಗರು ಕನ್ನಡಯೇತರ ಸಿನೆಮಾ ವೀಕ್ಷಿಸಬಾರದೆಂದು ನಾನು ನನ್ನ ಈವರೆಗಿನ ಪ್ರತಿಕ್ರಿಯೆಯಲ್ಲಿ ಹೇಳಿಯೇ ಇಲ್ಲವಲ್ಲ!!. ಬೇರೆ ಭಾಷೆಗಳಿಂದ ಸಿನೆಮಾಗಳು ಕನ್ನಡಕ್ಕೆ ಡಬ್ಬ್ ಆದರೆ ಆಗುವ ಕಷ್ಟ ನಷ್ಟಗಳ ಬಗ್ಗೆ ಮಾತ್ರ ನಾನು ಈವರೆಗೆ ಮಾತಾಡಿರುವುದು. ನೀವು ಸಂವಿಧಾನದ ಪ್ರಶ್ನೆ ಎತ್ತಿದ್ದರಿಂದ ನಾನು ತ್ರಿಭಾಷಾ ಸೂತ್ರ ಮತ್ತು ತಮಿಳುನಾಡಿನ ಪ್ರಸ್ತಾಪ ಮಾಡಿದ್ದು. ಇಲ್ಲವಾದರೆ ನಾನೇಕೆ ಮಾಡುತ್ತಿದ್ದೆ?
(೨) ಮಾರ್ಚ್ ೮ರ ನಿಮ್ಮ ಪ್ರತಿಕ್ರಿಯೆ:- ‘ಡಬ್ಬಿಂಗ್ ಬೇಕು ಎಂಬುದರ ಕುರಿತಂತೆ ಹೈಕೋರ್ಟಿನಲ್ಲಿ ದಾವೆ ಹೂಡಲಾಗಿದೆ ……… ‘
ನನ್ನ ಪ್ರತಿಕ್ರಿಯೆ:- ಒಂದು ಪ್ರಕರಣ (ಇಲ್ಲಿ ಡಬ್ಬಿಂಗ್ ಅಂತ ಇಟ್ಟುಕೊಳ್ಳಬಹುದು) ಕೋರ್ಟಿನಲ್ಲಿ ಇರುವಾಗ ತೀರ್ಪು ಬರುವ ಮುನ್ನವೇ ಡಬ್ಬಿಂಗ್ ಮಾಡುವುದು ಕಾನೂನಿನ ಪ್ರಕಾರ ತಪ್ಪಾಗುವುದಿಲ್ಲವೇ?
(೩) ಮಾರ್ಚ್ ೮ರ ನಿಮ್ಮ ಪ್ರತಿಕ್ರಿಯೆ:- ‘ಇನ್ನು ಚಿತ್ರಮಂದಿರಗಳ ಬಗ್ಗೆ …….. ಕನ್ನಡಕ್ಕಾಗಿ ಮೀಸಲಿರಿಸುವ ಚಿತ್ರಮಂದಿರಗಳ ಆಕ್ರಮಣ ಸಲ್ಲದು ಎಂದು ನಿಯಮ ಜಾರಿಗೆ ತಂದರೆ ……… ‘
ನನ್ನ ಪ್ರತಿಕ್ರಿಯೆ:- ನೀವು ಹೇಳಿದಂತಹ ನಿಯಮ ಜಾರಿಗೆ ತಂದರೆ ಅದನ್ನು ಪ್ರಶ್ನಿಸಿ ಚಿತ್ರಮಂದಿರಗಳ ಮಾಲೀಕರು ಕೋರ್ಟಿಗೆ ಹೋಗುವುದಿಲ್ಲ ಎಂಬುದಕ್ಕೆ ಖಾತರಿಯೇನು? ಇಂತಹ ನಿಯಮ ಬರಬಹುದು ಎಂಬ ಗಾಳಿಮಾತು ಬಂದರೆ ಸಾಕು ಚಿತ್ರಮಂದಿರಗಳನ್ನು ಒಡೆದು ಮಾಲ್ ಮಾಡಿದರೆ ಇನ್ನೂ ಲಾಭ ಎಂದು ಚಿತ್ರಮಂದಿರಗಳ ಮಾಲೀಕರು ಯೋಚಿಸುವುದಿಲ್ಲವೇ? ಬೆಂಗಳೂರಿನ ಹೃದಯ ಭಾಗದಲ್ಲಿ ಇರುವ ಕೆ. ಜಿ. ರಸ್ತೆಯಲ್ಲಿ ಈಗಾಗಲೇ ಎಷ್ಟು ಚಿತ್ರಮಂದಿರಗಳನ್ನು ಒಡೆದು ಮಾಲ್ ಗಳು,ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಮಾಡಿದ್ದಾರೆ ಎಂಬುದು ತಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ.
1. ಭಾಷಾ ಆಧಾರದ ತಾರತಮ್ಯ ಅಸಂವಿಧಾನಿಕ ಎಂದು ಹೇಳಿದ್ದೇನೆ. ಡಬ್ಬಿಂಗ್ ಅಸಂವಿಧಾನಿಕ ಎಂದಲ್ಲ, ನಿಷೇಧದ ನಂತರ ಎಂದು ಹೇಳಿರುವುದು ಸತ್ಯದೇವ್ IPS ಚಿತ್ರವನ್ನು ಗುರಿಯಾಗಿರಿಸಿಕೊಂಡು. ಮಾರ್ಚ್ 8 ರ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನೀವು ಕನ್ನಡ ಚಿ. ರಂ. ಕುರಿತಾಗಿ ಮಾತ್ರ ಅಭಿಪ್ರಾಯ ತಿಳಿಸುತ್ತಿದ್ದೀರಿ, ನಾನಾ ಕನ್ನಡದ ಉಳಿವಿಗಾಗಿ ಸ್ವಂತಿಕೆಯ ಅವಶ್ಯಕತೆ ಹಾಗೂ ರಿಮೇಕ್ ವಿರುದ್ಧವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ.
2. ಡಬ್ಬಿಂಗ್ ಬೇಕು ಎಂದು ದಾವೆ ಹೂಡಿರುವುದು ನಿಜ, ಕ.ಚಿ.ರಂ.ಯಾವುದೇ ಕಾನೂನಿನ ಬೆಂಬಲವಿಲ್ಲದೆ, ತಾನೇ ರಚಿಸಿಕೊಂಡ ನಿಯಮಗಳಾನುಸಾರ ಡಬ್ಬಿಂಗ್ ಚಿತ್ರಗಳನ್ನು ನಿಷೇಧಿಸುತ್ತಿದೆ, ಈ ಕಾರಣಕ್ಕಾಗಿ ಕ.ಚಿ.ರಂಗದ ಈ ನಡೆಯನ್ನು ಪ್ರಶ್ನಿಸಿ ದಾವೆ ಹೂಡಲಾಗಿದೆ. ಕನ್ನಡದಲ್ಲಿ ಡಬ್ಬಿಂಗ್ ನಿಷೇಧವಲ್ಲಾ ಎಂದು ಕೊಂಚ ಅರಿಯಬೇಕಾಗಿದೆ. ಕಾನೂನಾತ್ಮಕವಾಗಿ ಡಬ್ಬಿಂಗ್ ನಿಷೇಧವಲ್ಲಾ, ಚಿತ್ರರಂಗದ ಸ್ವಯಂ ನಿಯಮಗಳಿಂದ ನಿಷೇಧವಿದೆ.
3. ಕನ್ನಡಕ್ಕಾಗಿ ಮೀಸಲಿರುವ ಚಿತ್ರಮಂದಿರಗಳಲ್ಲಿ ಬೇರೆಯವರಿಗೆ ಚಿತ್ರಪ್ರದರ್ಶನಮಾಡಲು ಅವಕಾಶವಿಲ್ಲಾ ಎಂದಾಗಬೇಕು. ಎರಡು ವಾಕ್ಯಗಳನ್ನು ಕೂಡಿಸುವಾಗ ತಪ್ಪಾಗಿದೆ.
ಹೌದು, ನಮ್ಮ ಭಾಷೆಗೆ ಮೀಸಲಿರುವ ಚಿತ್ರಮಂದಿರಗಳಿಗೆ ಅನ್ಯಭಾಷೆಯ ಸಿನೆಮಾ ಪ್ರದರ್ಶನ ನಿಷೇಧಿಸಬೇಕು.
ಪ್ರಶ್ನೆಗಳಿಗಾಗಿ ಧನ್ಯವಾದಗಳು.
ಮುಂದಿನ ನಿಮ್ಮ ಪ್ರಶ್ನೆಗಳೇನಾದರು ಇದ್ದರೆ 7204202256 Whatsapp ಸಂಖ್ಯೆಗೆ ಕಳುಹಿಸಿ. ಉತ್ರರಿಸಲು ಸುಲಭವಾಗುತ್ತದೆ.