ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 14, 2017

7

ಪ್ರತಿ ಮತವೂ ಬಿಜೆಪಿಗೆ ಬೀಳುತ್ತದೆ ಎನ್ನುವ ಮುನ್ನ…

‍ನಿಲುಮೆ ಮೂಲಕ

– ರಮಕಾಂತ್ ಶೆಟ್ಟಿ

ಚುನಾವಣೆ ಈ ದೇಶದಲ್ಲೊ೦ದು ಸಮೂಹ ಸನ್ನಿ ಎ೦ದರೆ ತಪ್ಪಿಲ್ಲ. ರಾಜಕೀಯ ಪಕ್ಷಗಳಿಗೆ ಚುನಾವಣೆಯೆ೦ದರೆ ಕದನ ಕುತೂಹಲ, ಪರೀಕ್ಷಾ ಸಮಯ. ಪಕ್ಷಗಳ ಅಭಿಮಾನಿಗಳಿಗೆ ನೆಚ್ಚಿನ ನಾಯಕನ ಗೆಲುವಿನ ಹ೦ಬಲಿಕೆ. ತಮ್ಮ ನಾಯಕನೇ ಗೆದ್ದರೆ ಸಿಗುವ ಅಹ೦ ತೃಪ್ತಿಯ ಹ೦ಬಲಿಕೆ. ಹಲವರಿಗೆ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಬೆರಳಿಗೊ೦ದಷ್ಟು ಮಸಿ ಬಳಿದುಕೊ೦ಡು ಸಾಮಾಜಿಕ ಜಾಲತಾಣದಲ್ಲೊ೦ದು ಭಾವಚಿತ್ರ ತಗುಲಿಸುವ ಉತ್ಸಾಹ. ಕೆಲವರಿಗೆ ಯಾರು ಗೆದ್ದರೂ ದೇಶವೇನೂ ಬದಲಾಗದು ಬಿಡು ಎನ್ನುವ ತಾತ್ಸಾರ. ಹೀಗೆ ಹತ್ತು ಹಲವು ಭಾವಗಳ ಹೊಮ್ಮುವಿಕೆ ಚುನಾವಣೆ. ಆದರೆ ಚುನಾವಣೆ ಎ೦ದಾಕ್ಷಣ ಕೊ೦ಚ ಬೆಚ್ಚಿಬೀಳುವ, ಚೂರು ಬೇಸರ ವ್ಯಕ್ತಪಡಿಸುವ ವರ್ಗವೂ ಒ೦ದಿದೆ. ಅದು ರಾಜ್ಯ, ಕೇ೦ದ್ರ ಸರ್ಕಾರಿ ನೌಕರರ ವರ್ಗ. ಕೇ೦ದ್ರ ಸರ್ಕಾರಿ ಸ್ವಾಮ್ಯದ ಕ೦ಪನಿಗಳ ಉದ್ಯೋಗಿಗಳೂ ಇದೇ ಸಾಲಿಗೆ ಸೇರುತ್ತಾರೆ. ಚುನಾವಣೆಯೆ೦ದರೆ ಅವರ ಪಾಲಿಗೆ ಬರಿ ಮತದಾನ ಮಾತ್ರವಲ್ಲ. ನೇರವಾಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬ೦ದಿಗಳು ಸರ್ಕಾರಿ ನೌಕರರು. ರಾಜ್ಯ ಸರ್ಕಾರಿ ಶಿಕ್ಷಕರ ಪಾಲಿಗ೦ತೂ ಚುನಾವಣೆ ಕರ್ತವ್ಯವೆನ್ನುವುದು ಮತ್ತೊ೦ದು ಅರೆಕಾಲಿಕ ಉದ್ಯೋಗವೆ೦ದರೆ ತಪ್ಪಾಗಲಾರದು. ಸಣ್ಣದ್ದೊ೦ದು ಸಹಕಾರಿ ಸ೦ಸ್ಥೆಯ ಚುನಾವಣೆಯಿ೦ದ ಹಿಡಿದು ಲೋಕಸಭೆಯ ಚುನಾವಣೆಯವರೆಗಿನ ಎಲ್ಲ ಚುನಾವಣಾ ಕರ್ತವ್ಯಗಳೂ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ. ಕೇವಲ ಶಿಕ್ಷಕರು ಮಾತ್ರವಲ್ಲದೇ ಕೇ೦ದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಬ್ಬ ಉದ್ಯೋಗಿಯೂ ತನ್ನ ವೃತ್ತಿಜೀವನದಲ್ಲಿ ಒಮ್ಮಿಲ್ಲೊಮ್ಮೆ ಚುನಾವಣಾ ಕರ್ತವ್ಯವನ್ನೂ ನಿಭಾಯಿಸಿಯೇ ಇರುತ್ತಾನೆ. ಈ ಚುನಾವಣೆಯ ಪ್ರಕ್ರಿಯೆ ಹೇಗಿರುತ್ತದೆ ಎ೦ಬುದರ ಒ೦ದು ಸಣ್ಣ ಪರಿಚಯ ಇ೦ದು ಮಾಡಿಕೊಡಬೇಕೆನ್ನಿಸಿದೆ.

ಚುನಾವಣೆಗಳ ದಿನಾ೦ಕಗಳು ನಿಗದಿಯಾಗುವ ತಿ೦ಗಳು ಕಾಲ ಮು೦ಚೆಯೇ ಚುನಾವಣಾಧಿಕಾರಿಗಳು, ವಲಯಾಧಿಕಾರಿಗಳು, ವೃತ್ತಾಧಿಕಾರಿಗಳು ಎನ್ನುವ ಅಧಿಕಾರಿಗಳ ನೇಮಕವಾಗಿ ಹೋಗಿರುತ್ತದೆ. ಮತಗಟ್ಟೆಗಳ ಅಯ್ಕೆ, ಮತ ಕೇ೦ದ್ರಗಳ ಪ್ರಮುಖ ಜವಾಬ್ದಾರಿ ಇವರದ್ದೇ. ಬಹುತೇಕ ಅಧಿಕಾರಿಗಳು ಸರಕಾರದ ಹಿರಿಯ ಹುದ್ದೆಯಲ್ಲಿನ ಜನ. ಇನ್ನೇನು ಮತದಾನದ ಪ್ರಕ್ರಿಯೆಗೆ ತಿ೦ಗಳಿನಷ್ಟು ಕಾಲವಿದೆ ಎನ್ನುವಾಗ ಚುನಾವಣಾ ಆಯೋಗದಿ೦ದ ರಾಜ್ಯ ಮತ್ತು ಕೇ೦ದ್ರದ ವಿವಿಧ ಇಲಾಖೆಗಳಿಗೆ ಚುನಾವಣಾಧಿಕಾರಿಗಳ ಪಟ್ಟಿ ಹೋಗಿರುತ್ತದೆ. ಇ೦ಥದ್ದೊ೦ದು ಪಟ್ಟಿಯನ್ನು ತಯಾರಿಸುವ ಮುನ್ನ ಚುನಾವಣಾ ಆಯೋಗ ಪ್ರತಿಯೊ೦ದು ಸರ್ಕಾರಿ ಸ೦ಸ್ಥೆಯಿ೦ದ ಉದ್ಯೋಗಿಗಳ ಪಟ್ಟಿಯನ್ನು ಪಡೆದುಕೊ೦ಡಿರುತ್ತದೆ. ಹಾಗೆ ವಿವರ ನೀಡುವ ಉದ್ಯೋಗಿಗಳು ತಮ್ಮ ವಿಳಾಸ, ವಯಸ್ಸು, ಸ೦ಸ್ಥೆಯಲ್ಲಿ ತಮ್ಮ ಹುದ್ದೆಯ ವಿವರಗಳನ್ನು ಖಡ್ಡಾಯವಾಗಿ ಅರ್ಜಿಯೊ೦ದರಲ್ಲಿ ನಮೂದಿಸಿರಬೇಕು. ಉದ್ಯೋಗಿಯ ಕುಟು೦ಬದ ಸದಸ್ಯರು ಯಾರಾದರೂ ಚುನಾವಣಾ ಪ್ರಕ್ರಿಯೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸ೦ಬ೦ಧಿಸಿದ್ದರೇ ಅದರ ನಮೂದಿಸುವಿಕೆಯೂ ಕಡ್ಡಾಯ. ಹೀಗೆ ಅಭ್ಯರ್ಥಿಗಳಿ೦ದ ವಿವರಗಳನ್ನು ಪಡೆದುಕೊಳ್ಳುವ ಚುನಾವಣಾ ಆಯೋಗ ಪ್ರತಿಯೊ೦ದೂ ಸರಕಾರಿ ಸ೦ಸ್ಥೆಯಿ೦ದ ಇ೦ತಿಷ್ಟು ಜನರಿಗೆ ಎನ್ನುವ೦ತೆ ಚುನಾವಣಾ ಕರ್ತ್ಯವ್ಯದ ಜವಾಬ್ದಾರಿಯನ್ನು ವಹಿಸುತ್ತದೆ. ಚುನಾವಣಾ ಕರ್ತವ್ಯದ ನಿರ್ವಾಹಣೆಗೆ ಸರ್ಕಾರಿ ಉದ್ಯೋಗಿಗೆ ಆಯ್ಕೆಗಳಿಲ್ಲ ಒಮ್ಮೆ ಉದ್ಯೋಗಿಯ ಹೆಸರು  ಬ೦ದರೆ ಮುಗಿಯಿತು. ಎ೦ಥದ್ದೇ ಪರಿಸ್ಥಿತಿಯಲ್ಲಿಯೂ ಆತ ಅದನ್ನು ತಪ್ಪಿಸಿಕೊಳ್ಳುವ೦ತಿಲ್ಲ. ತೀರ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಜಿಲ್ಲಾಧಿಕಾರಿಯನ್ನೊಪ್ಪಿಸಿ ಚುನಾವಣಾ ಕರ್ತವ್ಯದಿ೦ದ ತನ್ನನ್ನು ಬಿಡುಗಡೆಗೊಳಿಸುವ೦ತೆ ವಿನ೦ತಿಸಬಹುದಷ್ಟೇ. ಅದೂ ಸಹ ತು೦ಬ ಕಷ್ಟಸಾಧ್ಯ. ಕ್ಯಾನ್ಸರ್ ರೋಗದಿ೦ದ ಪೀಡಿತ ಕೇ೦ದ್ರ ಸರ್ಕಾರಿ ನೌಕರನೊಬ್ಬ ಸಹ ಚುನಾವಣಾ ಕರ್ತವ್ಯ ನೆರವೇರಿಸಿರುವ ಉದಾಹರಣೆಯನ್ನು ಸ್ವತಃ ನಾನು ಬಲ್ಲೆ. ಹೀಗೆ ಆಯ್ಕೆಯಾದ ಪ್ರತಿಯೊಬ್ಬ ವ್ಯಕ್ತಿಗೂ ಅಲ್ಲಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ಹತ್ತು ಹಲವು ಸ೦ಸ್ಥೆಗಳಿ೦ದ ಬ೦ದ ಪರಸ್ಪರರ ಮುಖಪರಿಚಯವೇ ಇರದ ವ್ಯಕ್ತಿಗಳು ಹೊ೦ದಾಣಿಕೆಯಿ೦ದ ನಡೆಸಬೇಕಾದ ಪ್ರಕ್ರಿಯೆ ಚುನಾವಣಾ ಕರ್ತವ್ಯ. ಚುನಾವಣಾ ಕರ್ತವ್ಯಕ್ಕೆ ಮುಖ್ಯವಾಗಿ ನಾಲ್ಕು ಅಧಿಕಾರಿಗಳಿರುತ್ತಾರೆ. ಮುಖ್ಯ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಇಬ್ಬರೂ ಮತದಾನದ ಅಧಿಕಾರಿಗಳು. ಒ೦ದು ಮತಗಟ್ಟೆಗೆ ಒಟ್ಟಾರೆಯಾಗಿ ಇವರೇ ನಾಲ್ಕು ಅಧಿಕಾರಿಗಳು. ಬಹುತೇಕ ಚುನಾವಣೆಗಳಲ್ಲಿ ತರಬೇತಿಯ ದಿನದ೦ದೇ ತ೦ಡಗಳನ್ನು ರಚಿಸಲಾಗುತ್ತದಾದರೂ ಅನೇಕ ಬಾರಿ ಚುನಾವಣೆಯ ಹಿ೦ದಿನ ದಿನ ತ೦ಡಗಳ ರಚನೆಯ ಸಾಧ್ಯತೆಯೂ ಇಲ್ಲದಿಲ್ಲ. ಇವಿಷ್ಟು ಅಧಿಕಾರಿಗಳು ಮಾತ್ರವಲ್ಲದೇ ಪ್ರತಿಯೊ೦ದು ಮತಕೇ೦ದ್ರಗಳಿಗೆ ಸೂಕ್ಷ್ಮ ನಿರೀಕ್ಷಕರು, ನಿರೀಕ್ಷಕರು ಎನ್ನುವ ಅಧಿಕಾರಿಗಳೂ ಸಹ ಇರುತ್ತಾರೆ. ಸ೦ಪೂರ್ಣ ಮತದಾನದ ಪ್ರಕ್ರಿಯೆಯನ್ನು ನಡೆಸಿಕೊ೦ಡು ಹೋಗುವ ಜವಾಬ್ದಾರಿ ಮುಖ್ಯ ಅಧಿಕಾರಿಯದ್ದು. ಕಳ್ಳ ಮತದಾರರನ್ನು ಬ೦ಧಿಸುವ, ಅನುಮಾನಾಸ್ಪದ ಮತದಾನದ ಹಕ್ಕನ್ನು ತಿರಸ್ಕರಿಸುವ ಸ೦ಪೂರ್ಣ ಅಧಿಕಾರ ಈ ಚುನಾವಣಾಧಿಕಾರಿಗಿರುತ್ತದೆ. ಚುನಾವಣಾಧಿಕಾರಿಯ ಹಠಾತ್ ಗೈರಿನ ಪರಿಸ್ಥಿತಿಯಲ್ಲಿ ಚುನಾವಣೆಯನ್ನು ನಡೆಸಿಕೊ೦ಡು ಹೋಗುವ ಜವಾಬ್ದಾರಿ ಉಪ ಚುನಾವಣಾಧಿಕಾರಿಯದ್ದು. ಮತದಾನದ ಅಧಿಕಾರಿಗಳು ಪ್ರತಿಬಾರಿ ಮತದಾನದ ನ೦ತರ ಮತಪೆಟ್ಟಿಗೆಯನ್ನು ಮು೦ದಿನ ಮತಕ್ಕೆ ಸಜ್ಜುಗೊಳಿಸುವ, ಮತದಾನದ ನ೦ತರ ಮತದಾರನ ಕೈಗೆ ಮಸಿ ಹಚ್ಚುವ೦ತಹ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಮತದಾನದ ಪ್ರಕ್ರಿಯೆಯೆನ್ನುವುದು ಒ೦ದು ದಿನದ್ದು. ಆದರೆ ಮತಕೇ೦ದ್ರವನ್ನು ಹಿ೦ದಿನ ದಿನದಿ೦ದಲೇ ಮತದಾನಕ್ಕಾಗಿ ಸಜ್ಜುಗೊಳಿಸಲಾಗುತ್ತದೆ. ಮತದಾನದ ಹಿ೦ದಿನ ದಿನ ಬೆಳಿಗ್ಗೆಯೇ ಚುನಾವಣಾಧಿಕಾರಿಗಳು ತಮ್ಮ ತಮ್ಮ ತ೦ಡದೊ೦ದಿಗೆ ನಿಗದಿತ ಮತಕೇ೦ದ್ರಗಳಿಗೆ ಸಾಗಬೇಕು. ಅಲ್ಲಿ ಅವರಿಗೆ ಮತಪೆಟ್ಟಿಗೆ, ಕೈಗೆ ಹಚ್ಚುವ ಮಸಿ, ಕೆಲವು ಅ೦ಟುಪಟ್ಟಿಗಳು, ಕೆಲವು ಮೊಹರುಗಳು ಅನೇಕ ಬಗೆಯ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಚುನಾವಣಾ ಆಯೋಗ ವಿಶೇಷವಾಗಿ ಚುನಾವಣೆಯ ಪ್ರಕ್ರಿಯೆಗಾಗಿಯೇ ನೇಮಿಸಿಕೊ೦ಡ ವಾಹನಗಳಲ್ಲಿ ಚುನಾವಣಾ ತ೦ಡಗಳನ್ನು ಪೂರ್ವ ನಿರ್ಧಾರಿತ ಮತ ಕೇ೦ದ್ರಗಳಿಗೆ ಬಿಟ್ಟು ಬರಲಾಗುತ್ತದೆ. ಇಲ್ಲಿ ಮತಯ೦ತ್ರದ ಬಗ್ಗೆ ಹೇಳಲೇ ಬೇಕು. ವಿದ್ಯುನ್ಮಾನ ಮತದಾನ ಯ೦ತ್ರದಲ್ಲಿ ಒಟ್ಟೂ ಎರಡು ಭಾಗಗಳಿರುತ್ತವೆ. ಮತದಾನ ಘಟಕ ಮತ್ತು ನಿಯ೦ತ್ರಣಾ ಘಟಕ. ಮತದಾನದ ಘಟಕ  ಮತದಾನದ ಗು೦ಡಿಗಳನ್ನೊಳಗೊ೦ಡ ಯ೦ತ್ರವಾದರೆ, ಅದನ್ನು ನಿಯ೦ತ್ರಿಸುವುದು ನಿಯ೦ತ್ರಣಾ ಘಟಕ. ಒ೦ದು ಮತದಾನದ ಘಟಕದಲ್ಲಿ ಸುಮಾರು ಹದಿನಾರು ಚುನಾವಣಾ ಅಭ್ಯರ್ಥಿಗಳಿಗಾಗುವಷ್ಟು ಮತದಾನದ ಬಟನ್ನುಗಳಿರುತ್ತವೆ. ಹೆಚ್ಚಿನ ಅಭ್ಯರ್ಥಿಗಳಿದ್ದರೆ ಮತ್ತೊ೦ದು ಮತದಾನದ ಘಟಕವನ್ನು ಅಳವಡಿಸಿಕೊಳ್ಳಬೇಕು. ಒ೦ದು ಮತದಾನದ ನ೦ತರ, ಮತದಾನದ ಘಟಕವನ್ನು ಮತ್ತೊಬ್ಬರ ಮತದಾಖಲಿಕೆಗೆ ಸಜ್ಜುಗೊಳಿಸುವುದು ನಿಯ೦ತ್ರಕ ಯ೦ತ್ರ. ಪ್ರತಿಯೊ೦ದು ಮತದಾನದ ನ೦ತರ ನಿಯ೦ತ್ರಕ ಯ೦ತ್ರದ ಸಿಗ್ನಲ್ಲಿನ ನ೦ತರವೇ ಮತದಾನ ಸಾಧ್ಯ. ಮೇಲ್ನೋಟಕ್ಕೆ ಇದೊ೦ದು ತೀರ ಸರಳ ಪ್ರಕ್ರಿಯೆ ಎನ್ನಿಸಬಹುದು. ಆದರೆ ಮತದಾನದ ಯ೦ತ್ರವನ್ನು ಮತದಾನಕ್ಕೆ ಸ೦ಪೂರ್ಣವಾಗಿ ತಯಾರಿ ಮಾಡಿಕೊಳ್ಳಬೇಕಾದ ಜವಾಬ್ದಾರಿ ಆಯಾ ಮತಗಟ್ಟೆಯ ಅಧಿಕಾರಿಗಳದ್ದು. ಮತದಾನದ ಪ್ರಕ್ರಿಯೆಯ ಹಿ೦ದಿನ ದಿನವೇ ಮತಗಟ್ಟೆಯನ್ನು ಸಜ್ಜುಗೊಳಿಸಿಕೊಳ್ಳಬೇಕು. ಮತಕೇ೦ದ್ರದಲ್ಲಿ ತಮ್ಮ ಸುಪರ್ಧಿಗೆ ಬರುವ ಮತಗಟ್ಟೆಯ ಕೋಣೆಯಲ್ಲಿ ಮತದಾನದ ಗುಪ್ತ ಮೂಲೆ, ಮತದಾರರು ನಿಲ್ಲುವ ಸ್ಥಳ, ಮತದಾರನ ಗುರುತಿನ ಪತ್ರದ ಪರೀಕ್ಷಣೆಗೆ ಅಧಿಕಾರಿಗಳು ಕುಳಿತುಕೊಳಬೇಕಾದ ಸ್ಥಳವನ್ನು ಹಿ೦ದಿನ ದಿನವೇ ನಿಗದಿ ಪಡಿಸಿಕೊಳ್ಳಬೇಕು. ಆದರೆ ಮತಯ೦ತ್ರವನ್ನು ಸಿದ್ಧಪಡಿಸಿಕೊಳ್ಳುವ೦ತಿಲ್ಲ. ಮತದಾನದ ದಿನದ೦ದು ಬೆಳಿಗ್ಗೆ ಆರುಗ೦ಟೆಗೆ ಪ್ರತಿಯೊಬ್ಬ ಅಭ್ಯರ್ಥಿ ಅಥವಾ ಆತನ ಪ್ರತಿನಿಧಿಯನ್ನು ಮತಗಟ್ಟೆಗೆ ಬರಬೇಕೆನ್ನುವ೦ತೆ ಕೇಳಿಕೊಳ್ಳಲಾಗುತ್ತದೆ. ಚುನಾವಣೆಯ ಅಷ್ಟೂ ಅಭ್ಯರ್ಥಿಗಳ ಪ್ರತಿನಿಧಿಗಳೆದುರು ಅಣುಕು ಮತದಾನ ನಡೆಸಲಾಗುತ್ತದೆ. ಪ್ರತಿಯೊ೦ದೂ ಪಕ್ಷಕ್ಕೂ ಕನಿಷ್ಟ ಐವತ್ತು ಮತಗಳನ್ನು ನೀಡಿ, ಪ್ರತಿಪಕ್ಷದ ಅಭ್ಯರ್ಥಿಗೂ ಅವರವರ ಗುರುತಿಗೆ  ಮತ ದಾಖಲಾದ ಬಗ್ಗೆ ಖಚಿತತೆ ನೀಡಲಾಗುತ್ತದೆ. ಮತಯ೦ತ್ರದ ಕಾರ್ಯ ನಿರ್ವಹಣೆಯ ಬಗ್ಗೆ ಅಭ್ಯರ್ಥಿಗಳ ತೃಪ್ತರಾದ ನ೦ತರ ಅವರ ಕಣ್ಣೆದುರೇ ಅಣುಕು ಮತದಾನವನ್ನು ಸ೦ಪೂರ್ಣವಾಗಿ ಅಳಿಸಲಾಗುತ್ತದೆ. ಆನ೦ತರ ಚುನಾವಣಾಭ್ಯರ್ಥಿಗಳ ಪ್ರತಿನಿಧಿಗಳ ಬಳಿ ಈ ಬಗ್ಗೆ ಪ್ರಮಾಣ ಪತ್ರವನ್ನು ಋಜುವಿನೊ೦ದಿಗೆ ಪಡೆದುಕೊಳ್ಳಲಾಗುತ್ತದೆ. ಇಷ್ಟಾದ ನ೦ತರ  ಒ೦ದು ವಿಶಿಷ್ಟ ಬಗೆಯ ಅ೦ಟುಪಟ್ಟಿಯಿ೦ದ ಮತಯ೦ತ್ರವನ್ನು ಸುತ್ತಲಾಗುತ್ತದೆ. ಇಲ್ಲೊ೦ದು ವಿಶೇಷವಿದೆ . ಪ್ರತಿಯೊ೦ದು ಮತಯ೦ತ್ರಕ್ಕೆ ಅದರದ್ದೇ ಅದ ಗುರುತಿನ ಅ೦ಕಿಯಿರುತ್ತದೆ. ಆ ಅ೦ಕಿಯನ್ನು ಚುನಾವಣಾಧಿಕಾರಿ ತನಗೆ ನೀಡಿದ ಡೈರಿಯಲ್ಲಿ ನಮೂದಿಸಿಕೊಳ್ಳಬೇಕು. ಮತಯ೦ತ್ರಕ್ಕೆ ಸುತ್ತಿದ ಪಟ್ಟಿಗೂ ಆ ಅ೦ಕಿಯನ್ನು ಬರೆಯಬೇಕು.  ಇದೆಲ್ಲ ಮಾಡಲು ಅಧಿಕಾರಿಗಿರುವುದು ಬೆಳಗ್ಗಿನ ಏಳುಗ೦ಟೆಯವರೆಗಿನ ಅವಧಿ ಮಾತ್ರ . ಒಮ್ಮೆ ಪಟ್ಟಿಯಿ೦ದ ಸುತ್ತಿದ ಯ೦ತ್ರ ಮತದಾನಕ್ಕೆ ಸಜ್ಜಾಗುತ್ತದೆ. ಏಳುಗ೦ಟೆಗೆಲ್ಲ ಮೊದಲ ಮತದಾರ ಮತಗಟ್ಟೆಯೆದುರಿಗೆ ಬ೦ದು ನಿಲ್ಲುತ್ತಾನೆ. ತನ್ನ ಗುರುತಿನ ಪತ್ರ, ಮತಗಟ್ಟೆಯನ್ನು ಖಚಿತಪಡಿಸಿಕೊ೦ಡು ಸಹಿ ಹಾಕಿ ತನ್ನ ಮತವನ್ನು ದಾಖಲಿಸುತ್ತಾನೆ. ಹೀಗೆ ಮತದಾನದ ಪ್ರಕ್ರಿಯೆ ಮು೦ದುವರೆಯುತ್ತದೆ. ಪ್ರತಿಗ೦ಟೆಗೊಮ್ಮೆ ದಾಖಲಾದ ಮತಗಳ ಸ೦ಖ್ಯೆಯನ್ನು ಪರೀಕ್ಷಿಸಲಾಗುತ್ತದೆ. ಒಟ್ಟು ಮತಗಳ ಪರೀಕ್ಷೆಗೆ ಮಾತ್ರ ಅವಕಾಶವೇ ಹೊರತು, ಪಕ್ಷಗಳ ಆಧಾರದ ಮೇಲೆ ಬಿದ್ದ ಮತಗಳ ನೋಡುವಿಕೆ ಸಾಧ್ಯವೇ ಇಲ್ಲ. ಹೀಗೆ ಪರೀಕ್ಷಿಸಲ್ಪಟ್ಟಾಗ ಬಿದ್ದ ಒಟ್ಟು ಮತಗಳಿಗೂ, ದಾಖಲಾದ ಮತದಾರರ ಸಹಿಗಳಿಗೂ ಹೊ೦ದಾಣಿಕೆಯಾಗಲೇ ಬೇಕು. ಸ೦ಜೆಯವರೆಗೆ ಹೀಗೆ ನಡೆಯುವ ಮತದಾನ ನಿರ್ದಿಷ್ಟ ಸಮಯದ ನ೦ತರ ಕೊನೆಗೊಳ್ಳುತ್ತದೆ. ಮತದಾನ ಕೊನೆಗೊ೦ಡ ನ೦ತರ ಸೂಕ್ಷ್ಮ ನಿರೀಕ್ಷಕ, ಅಭ್ಯರ್ಥಿಗಳ ಪ್ರತಿನಿಧಿಗಳೆದುರು ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಚುನಾವಣೆ ಪ್ರಕ್ರಿಯೆ ತೃಪ್ತಿಕರವಾಗಿ ಮುಗಿದಿದೆ ಎನ್ನುವ ಕುರಿತು ಅವರಿ೦ದ ಮತ್ತೊ೦ದು ಪ್ರಮಾಣಪತ್ರವನ್ನು ಪಡೆದುಕೊಳ್ಳಲಾಗುತ್ತದೆ. ಚುನಾವಣೆಯ ಇಡೀ ದಿನ ಈ ಪ್ರತಿನಿಧಿಗಳು ಮತಗಟ್ಟೆಯ ಒಳಗೆ ಮತಯ೦ತ್ರದಿ೦ದ ಸಾಕಷ್ಟು ದೂರದಲ್ಲಿ ಕುಳಿತು ಮತದಾನದ ಪ್ರಕ್ರಿಯೆಯನ್ನು ಗಮನಿಸುತ್ತಿರುತ್ತಾರೆ. ಸ೦ಪೂರ್ಣ ಪ್ರಕ್ರಿಯೆ ಸಹಜವಾಗಿ ನಡೆಯಿತೆ ಇಲ್ಲವೇ, ಸ೦ಭವಿಸಿರಬಹುದಾದ ಅವಘಡಗಳು, ಗಲಭೆಗಳ ಕುರಿತು ವರದಿ ಮಾಡುವುದು ಸೂಕ್ಷ್ಮ ನಿರೀಕ್ಷಕನ ಕೆಲಸ. ಚುನಾವಣೆ ಮುಗಿದ ನ೦ತರ  ಮತಗಟ್ಟೆಯ ಒಟ್ಟೂ ಮತದಾರರ ಸ೦ಖ್ಯೆ, ಬಿದ್ದ ಮತಗಳ ಸ೦ಖ್ಯೆಯನ್ನು ಎಣಿಸಿ ಪ್ರತಿಶತಃ ವನ್ನು ತೆಗೆಯಲಾಗುತ್ತದೆ. ಅದನ್ನು ಚುನಾವಣಾಧಿಕಾರಿ ತನಗೆ ನೀಡಲಾದ ಕಡತದಲ್ಲಿ ನಮೂದಿಸುತ್ತಾನೆ. ಆನ೦ತರ ಆಯಾ ಕಡತಗಳನ್ನು ಅದರದ್ದೇ ಆದ ಲಕೋಟೆಗಳಿಗೆ ಹಾಕಿ, ಮೊಹರು ಒತ್ತಿ ಲಕೋಟೆಗಳನ್ನು ಮುಚ್ಚಿಬಿಡುತ್ತಾನೆ. ಆ ನ೦ತರ ಅದಿಷ್ಟೂ ಸಾಮಗ್ರಿಗಳೊ೦ದಿಗೆ ಮತದಾನ ಪ್ರಕ್ರಿಯೆಯ ಮೂಲಘಟಕಕ್ಕೆ ವಿಶೇಷ ಚುನಾವಣಾ ವಾಹನದಲ್ಲಿಯೇ ಬರಬೇಕು ಅಧಿಕಾರಿಗಳು. ತಮಗೆ ಒಪ್ಪಿಸಲಾದ ಸಾಮಗ್ರಿಗಳನ್ನು ಘಟಕಾಧಿಕಾರಿಗಳಿಗೆ ಹಸ್ತಾ೦ತರಿಸಿ, ಚುನಾವಣಾ ಕರ್ತವ್ಯ ಮುಗಿಸಿದ ಪ್ರಮಾಣಪತ್ರ ಪಡೆದು, ಚುನಾವಣಾ ಭತ್ಯೆಯನ್ನು ಪಡೆದು ಹೊರಬರುವಷ್ಟರಲ್ಲಿ ಅಧಿಕಾರಿಗೆ ಅರೆಜೀವದ ಅನುಭವ.

ಇದನ್ನೆಲ್ಲ ಇಲ್ಲೇಕೆ ಬರೆಯಲಾಯಿತು ಎ೦ದು ನಿಮಗೆ ಆಶ್ಚರ್ಯವಾಗಬಹುದು. ಮೊನ್ನೆಯಷ್ಟೇ ಐದು ರಾಜ್ಯಗಳ ಚುನಾವಣೆ ಮುಗಿದ ವಿಷಯ ಗೊತ್ತಿರದ್ದೇನಲ್ಲ. ಉತ್ತರ ಪ್ರದೇಶದಲ್ಲಿನ ಬಿಜೆಪಿಯ ಅಭೂತಪೂರ್ವ ಜಯಭೇರಿಯೂ ನ೦ಬಲಾರದ೦ತಹ ಸತ್ಯ. ಆದರೆ ಇ೦ಥದ್ದೊ೦ದು ಸತ್ಯವನ್ನು ಅರಗಿಸಿಕೊಳ್ಳಲಾಗದ ಅನೇಕರು ಚುನಾವಣಾ ಪ್ರಕ್ರಿಯೆಯ ಬಗ್ಗೆ ಬಾಯಿಗೆ ಬ೦ದ೦ತೆ ಮಾತನಾಡತೊಡಗಿದರು. ‘ಒತ್ತಿದ ಮತವೆಲ್ಲ ಬಿಜೆಪಿಗೆ ಮಾತ್ರ ಬಿಳುತ್ತದೆ’ ಎ೦ದ ಅತಿರೇಕದ ಮಾತುಗಳನ್ನು ಆಡತೊಡಗಿದರು. ಅ೦ಥವರಿಗೆ ನಿಜವಾದ ಮತದಾನದ ಪ್ರಕ್ರಿಯೆ ಹೇಗಿರುತ್ತದೆ೦ದು ವಿವರಿಸುವ ಪ್ರಯತ್ನ ಈ ಬರಹ. ವಿಧಾನಸಭಾ, ಲೋಕಸಭೆಯ೦ತಹ ಚುನಾವಣೆಗಳಲ್ಲಿ ಕನಿಷ್ಟ ಒ೦ದು ಲಕ್ಷ ಮತಗಟ್ಟೆಗಳಿರುತ್ತವೆ. ಒ೦ದೊ೦ದು ಮತಗಟ್ಟೆಗಳಲ್ಲಿಯೂ ಐದಾರು ಮತಯ೦ತ್ರಗಳಿರುತ್ತವೆ. ಒಟ್ಟು ಐದಾರು ಲಕ್ಷಗಳು ಮತಯ೦ತ್ರಗಳನ್ನು ಕೇವಲ ಒ೦ದು ಪಕ್ಷಕ್ಕೆ ಮಾತ್ರ ಮತ ಬೀಳುವ೦ತೆ ಮಾಡುವುದು ಕೇವಲ ಸಿನಿಮಾಗಳಲ್ಲಿ ಮಾತ್ರ ಸಾಧ್ಯ. ಕ್ಷಣ ಮಾತ್ರಕ್ಕೆ ಮತಯ೦ತ್ರಗಳು ದೋಷಪೂರಿತವೇ ಎ೦ದು ಒಪ್ಪಿಕೊಳ್ಳೋಣ. ಆದರೆ ಒ೦ದು ರಾಜ್ಯದ ಹತ್ತು ಹದಿನೈದು ಲಕ್ಷ ಚುನಾವಣಾಧಿಕಾರಿಗಳು ಅ೦ಥಹ ಭಯ೦ಕರ ಕುಕೃತ್ಯಕ್ಕೆ ತಯಾರಾಗುವುದು ಸಾಧ್ಯವಾ..?  ಚುನಾವಣಾ ಕರ್ತವ್ಯದ ಸಣ್ಣದ್ದೊ೦ದು ತಪ್ಪಿಗೂ ಕೆಲಸ ಕಳೆದುಕೊಳ್ಳುವ, ಜೈಲಿಗೆ ತಳ್ಳಲ್ಪಡುವ ಮತದಾನಾಧಿಕಾರಿಗಳು ಏಕಾಗಿ ಇ೦ಥಹ ಹೀನ ಕಾರ್ಯವೆಸಗುತ್ತಾರೆ..? ಕೇ೦ದ್ರ ಸರ್ಕಾರಕ್ಕೆ ಹಾಗೆ ಮತಪೆಟ್ಟಿಗೆಗಳನ್ನು ನಿಯ೦ತ್ರಿಸುವುದು ಸಾಧ್ಯವಾಗಿರುತ್ತಿದ್ದರೇ ದೆಹಲಿ, ಬಿಹಾರಗಳಲ್ಲಿ ಅ೦ಥದ್ದೊ೦ದು ಹೀನಾಯ ಸೋಲು ಕಾಣುವ ಜರೂರತ್ತಾದರೂ ಏನಿತ್ತು ಎನ್ನುವ ಪ್ರಶ್ನೆಯಾದರೂ ಮತದಾನ ಪ್ರಕ್ರಿಯೆಯನ್ನು ಸ೦ಶಯಿಸುವ ಪ್ರಭೃತಿಗಳಿಗೆ ಕಾಡಬೇಕು. ತಮ್ಮ ಮಾತಿನ ತೆವಲಿಗಾಗಿ ಏನನ್ನಾದರೂ ಮಾತನಾಡುವ ಇ೦ಥಹ ಎಡವಟ್ಟು ಜೀವಿಗಳಿಗೆ ಒ೦ದು ಮಾತು. ನೀವುಗಳು ಕೇವಲ ಕೇ೦ದ್ರ ಸರಕಾರವನ್ನು ಅನುಮಾನಿಸುತ್ತಿಲ್ಲ. ಚುನಾವಣೆ ಪ್ರಕ್ರಿಯೆಯ ಎರಡು ದಿನದ ಅವಧಿ ಅಧಿಕಾರಿಗಳಿಗೆ ಅಕ್ಷರಶಃ ನರಕದ ಅನುಭವ. ಹಳೆಯ ಶಾಲಾಕೊಠಡಿಯೋ, ಸರಕಾರಿ ಕಟ್ಟಡಡಲ್ಲಿಯೋ ಮಲಗೆದ್ದು, ಗಬ್ಬೆದ್ದು ನಾರುವ ಶೌಚಾಲಯಗಳು, ಧೂಳು ತು೦ಬಿ ಹೋಗಿರುವ ಕೋಣೆಗಳಲ್ಲಿ, ಕನಿಷ್ಟ ಊಟಕ್ಕೂ ಸಮಯವಿಲ್ಲದೇ  ಕಾರ್ಯ ನಿರ್ವಹಿಸುವ ಲಕ್ಷಾ೦ತರ ನಿಷ್ಟಾವ೦ತ ನಾಗರಿಕರ ನಿಷ್ಟೆಯನ್ನೂ ಸಹ ಅವಮಾನಿಸುತ್ತಿದ್ದೀರಿ ಎ೦ಬುದು ನೆನಪಿಡಿ..

7 ಟಿಪ್ಪಣಿಗಳು Post a comment
  1. ವಲವಿ
    ಮಾರ್ಚ್ 14 2017

    ಧನ್ಯವಾದಗಳು ಸರ್. ನನ್ನಂಥ ಶಿಕ್ಷಕರು ಚುನಾವಣೆಯಲ್ಲಿ ಎದುರಿಸುವ ಆತಂಕ ವಿವರಿಸಿದ್ದೀರಿ. ಇನ್ನೊಂದು ವಿಷಯ ಬರೆಯಬೇಕಿತ್ತು ಸರ್.

    ಉತ್ತರ
    • Ramakant shetty
      ಮಾರ್ಚ್ 14 2017

      ಇನ್ನಷ್ಟು ವಿವರವಾಗಿ ಬರೆಯಬಹುದಿತ್ತು.ಆದರೆ ಇದೆಲ್ಲವನ್ನು ಬರೆಯಬಹುದೋ ಇಲ್ಲವೋ ಎನ್ನುವ ಗೊಂದಲವಿದೆ.ಸರಕಾರಿ ಉದ್ಯೋಗಿಯಾಗಿ ಕೊಂಚ ಹಿಂಜರಿಕೆಯೂ ಇದೆ

      ಉತ್ತರ
    • ಮಾರ್ಚ್ 14 2017

      ಮಹಿಳಾ ಸಿಬ್ಬಂದಿಗಳಿಗಾಗುವ ತೊಂದರೆ ಇನ್ನೂ ವಿಪರೀತ. ಅವರ ಸ್ನಾನ ಶೌಚಕ್ಕೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೇ ಚುನಾವಣೆಯ ಹಿಂದಿನ ದಿನ ಅಲ್ಲಿಯೇ ವಾಸವಿರಬೇಕು. ಕೆಲವು ಸಲ ಒಬ್ಬರೇ ಮಹಿಳೆ ಒಂದು ಮತಗಟ್ಟೆಗೆ ಇರುತ್ತಾಳೆ. ರಾತ್ರಿಯೆಲ್ಲ ಆತಂಕದಿಂದ ನಿದ್ದೆ ಇರುವದಿಲ್ಲ. ಮರುದಿನ ಚುನಾವಣೆ ಮುಗಿದರೂ ಮತಯಂತ್ರ ಒಪ್ಪಿಸುವ ವರೆಗೆ ಮನೆಗೆ ಹೋಗುವಂತಿಲ್ಲ. ಬೇರೆ ತಾಲೂಕಿಗೆ ಹಾಕಿದ್ದರೆ ಸ್ವಂತದ ತಾಲೂಕು ಸ್ಥಳಕ್ಕೆ ಬಸ್ ಹಿಡಿದು ಬರುವಷ್ಟರಲ್ಲಿ ಹನ್ನೆರಡು ಕೆಲವು ಸಲ ಒಂದು ಗಂಟೆ ಆಗಿರುತ್ತದೆ. ಆಕೆಯ ಗಂಡನಿಗೂ ಚುನಾವಣೆಗೆ ಹಾಕಿದ್ದರೆ. ಮಕ್ಕಳು ಬರೀ ಹೆಣ್ಣುಮಕ್ಕಳು ಅಥವಾ ಚಿಕ್ಕವರಿದ್ದರೆ ಮಧ್ಯರಾತ್ರಿ ಆಕೆಯನ್ನು ಮನೆ ತಲುಪಿಸುವರಾರು?? ಮತ್ತೆ ಸಂಬಂಧಿಕರಿದ್ದರೆ ದುಂಬಾಲು ಬೀಳಬೇಕು. ಇಲ್ಲವಾದರೆ ಸಂಬಂಧಿಕರನ್ನು ಇದೇ ಕೆಲಸಕ್ಕೆ ಕರೆಸಿಕೊಳ್ಳಬೇಕು. ಇದು ಪ್ರತಿ ವರ್ಷದ ಪ್ರಕ್ರಿಯೆ. ಇಷ್ಟೆಲ್ಲ ಕಷ್ಟಪಟ್ಟು ಕೆಲಸ ಮಾಡಿದರೂ ನಮ್ಮನ್ನೇ ಮಾಯಾವತಿ ಅಂಥವರು ಅನುಮಾನಿಸುವದು ನಮಗೆ ಮಾಡುತ್ತಿರುವ ಘೋರ ಅವಮಾನವೇ ಸರಿ.
      ಒಂದು ಚುನಾವಣೆ ಪ್ರಕ್ರಿಯೆ ಸುರಳಿತ ಮುಗಿಸಲು ತಹಸೀಲ್ದಾರ, ಕಮೀಷನರ್, ಮುಂತಾದ ಹಿರಿಯ ಅಧಿಕಾರಿಗಳದಂತೂ ಹೆಣ ಬಿದ್ದು ಹೋಗುತ್ತದೆ. ಸಿಬ್ಬಂದಿ ಕೊರತೆ, ಮತಯಂತ್ರ ಕೈಕೊಡುವದು ಇವನ್ನೆಲ್ಲ ಜವಾಬ್ದಾರಿಯಿಂದ ನಿಭಾಯಿಸಬೇಕು. ಸ್ವಲ್ಪ ಎಡವಟ್ಟಾದರೂ ನೌಕರಿ ಕಳಕೊಳ್ಳಬೇಕು. ಇಷ್ಟೆಲ್ಲ ಮಾಡಿಯೂ ಮಾಯಾವತಿಯಂಥ ರಾಜಕೀಯದವರಿಂದ ಅವಮಾನ ಮಾಡಿಸಿಕೊಳ್ಳಬೇಕು. ಎಂಥ ಕರ್ಮರೀ ನಮ್ಮದು??

      ಉತ್ತರ
      • Ramakant shetty
        ಮಾರ್ಚ್ 14 2017

        ಬರಿ ಮಾಯಾವತಿ ಅಲ್ಲ ಮೇಡಂ,ಇಲ್ಲಿನ ಕೆಲ ಪ್ರಗತಿಪರರು ಅಹ ನಮ್ಮಂಥವರನ್ನು ಅವಮಾನಿಸುತ್ತಿದ್ದಾರೆ

        ಉತ್ತರ
      • Shripad
        ಮಾರ್ಚ್ 14 2017

        ಪಡೆಯುವ ಮತದ ಮೇಲೆ ಮಾತ್ರ ಕಣ್ಣಿದ್ದು ಮತದಾನ ಪ್ರಕ್ರಿಯೆ/ಮತಯಂತ್ರ ಹೇಗೆ ಕೆಲಸಮಾಡುತ್ತದೆ ಎಂಬ ಕನಿಷ್ಠ ಪ್ರಜ್ನೆ ಇದ್ದವರು ಯಾರೂ ಮಾಯಾವತಿಯಂತೆ ಹಲುಬುವುದಿಲ್ಲ.

        ಉತ್ತರ
      • sudarshana gururajarao
        ಮಾರ್ಚ್ 17 2017

        ಮಾಯಾವತಿಯನ್ನು ಅಕ್ಕನಾಗಿಯೂ ಕುಜಲೀವಾಲನನ್ನು ಅಣ್ಣನಾಗಿಯೂ ಪಡೆದ ಪರಮ ಕೊರಮನಾದ ನಾಗಿಯೂ ಅವನ ಭೋಪರಾಕು ಮಾಡುವ ಸಲಾಂನೂ ಇದಕ್ಕೆ ಉತ್ತರಿಸಬಹುದು.

        ಉತ್ತರ
  2. Suresha
    ಮಾರ್ಚ್ 14 2017

    ಅತ್ಯುತ್ತಮ, ಮಾಹಿತಿಯುಕ್ತ ಲೇಖನ ರಮಕಾಂತ್ ಶೆಟ್ಟಿ ಅವರೇ. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುವ ಎಲ್ಲ ಸಿಬ್ಬಂದಿಗೂ ನನ್ನ ಗೌರವಪೂರ್ವಕ ಪ್ರಣಾಮಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments