ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೪
– ಮು. ಅ. ಶ್ರೀರಂಗ, ಬೆಂಗಳೂರು
ಪೀರಾಯರು ಎದ್ದಾಗ ಎಂಟು ಗಂಟೆಯಾಗಿತ್ತು. ರಾತ್ರಿ ಕೃಷ್ಣಾಚಾರ್ಯ ಮಲಗಿದ್ದ ಹಾಸಿಗೆ ನೀಟಾಗಿ ಸುತ್ತಿ ಇಟ್ಟಿತ್ತು. ರಾಯರು ಮುಖ ತೊಳೆದು ಬಂದು ಅಂದಿನ ಪೇಪರ್ ಹಿಡಿದು ಕೂತರು. ಕಾಫಿ ತಂದ ರಾಯರ ಹೆಂಡತಿ
‘ಕೃಷ್ಣಾಚಾರ್ಯರು ಏಳು ಗಂಟೆಗೆ ಎದ್ದು ಮನೆಗೆ ಹೋದ್ರು.. ತಿಂಡಿ ತಿಂದು ಹೋಗಿ ಎಂದು ನಾನು ಬಲವಂತ ಮಾಡಿದರೂ ಇನ್ನೊಂದು ಸಲ ಬರ್ತೀನಿ’ ಅಂದ್ರು..
‘ನನ್ನನ್ನು ನೀನು ಎಬ್ಬಿಸಬಾರದಿತ್ತೇ?’
‘ಅವರೇ ಬೇಡ, ನಿದ್ದೆ ಮಾಡಲಿ. ನಿನ್ನೆ ರಾತ್ರಿ ನಾವು ಹಳೆ ಸಂಗತಿಗಳನ್ನೆಲ್ಲಾ ಎರಡು ಗಂಟೆ ತನಕ ಮಾತಾಡುತ್ತಾ ಇದ್ವು ಎಂದ್ರು.. ಏನು ಅಂತ ರಾಜ ರಹಸ್ಯನಪ್ಪ ಅದು?’
‘ಏನೂ ಇಲ್ಲ ಕಣೆ. ಹೀಗೆ ಸುಮ್ಮನೆ’.
‘ಆಯ್ತು ನಂಗೆ ಅಡಿಗೆ ಮನೇಲಿ ಕೆಲಸ ಇದೆ ಹೋಗ್ತೀನಿ’
ಹೊರಗಡೆ ಬಿಸಿಲೇರುತ್ತಿತ್ತು. ಈಗ ವಾಕಿಂಗ್ ಹೋಗುವುದೋ ಬೇಡವೋ? ಒಂದು ದಿನ ಸೋಮಾರಿತನಪಟ್ಟುಕೊಂಡರೆ ನಾಳೆಯೂ ಮನಸ್ಸು ಇವತ್ತು ಬೇಡ ನಾಳೆ ಹೋದರಾಯ್ತು ಎಂದು ಮೊಂಡಾಟ ಮಾಡುತ್ತದೆ. ನಾನು ಹಿಂದೆ ಚಿಕ್ಕವನಿದ್ದಾಗ ಸರಿ ಸುಮಾರು ಎಲ್ಲಾ ಮನೆಗಳ ಬೀದಿ ಬಾಗಿಲಿನ ಮೇಲೆ ‘ನಾಳೆ ಬಾ’ ಎಂದು ಬರೆದಿರುತ್ತಿದ್ದರು. ಅದು ದೆವ್ವವನ್ನು ಇವತ್ತು ನಮ್ಮ ಮನೆಗೆ ಬರಬೇಡ ಎಂದು ತಿಳಿಸುವ ಸೂಚನೆಯಂತೆ ಎಂದು ನನಗಿಂತ ದೊಡ್ಡ ಹುಡುಗರು ಹೇಳುತ್ತಿದ್ದರು. ದಿನಾ ದೆವ್ವ ಪ್ರತಿ ಮನೆಗೂ ಬಂದು ಬಾಗಿಲಿನ ಮೇಲೆ ಬರೆದ ‘ನಾಳೆ ಬಾ’ ಎಂಬುದನ್ನು ಓದಿಕೊಂಡು ವಾಪಸ್ ಹೋಗುತ್ತದಂತೆ. ಈ ‘ನಾಳೆ ಬಾ’ ಎಂಬುದು ಯಾವತ್ತೂ ಮುಗಿಯದ ಕಥೆ. ಅಂತೂ ಹುಡುಗರಲ್ಲಿ ನಾವು ಎಲ್ಲರೂ ಇದನ್ನು ನಂಬಿದ್ದೆವು. ಈ ನಮ್ಮ ಮನಸ್ಸೂ ಒಂದು ರೀತಿಯ ದೆವ್ವದ ಹಾಗೆ. ಪೇಪರ್ ಆಮೇಲೆ ಓದಿದರಾಯ್ತು ಎಂದು ರಾಯರು ವಾಕಿಂಗ್ ಗೆ ಹೊರಟರು.
ಪಾರ್ಕಿನಲ್ಲಿ ರಾಯರ ದೇಹ ಯಾಂತ್ರಿಕವಾಗಿ ವಾಕಿಂಗ್ ಮಾಡುತ್ತಿತ್ತು. ಆದರೆ ತಲೆಯಲ್ಲಿ ನಿನ್ನೆ ರಾತ್ರಿ ಕೃಷ್ಣಾಚಾರ್ಯ ಹೇಳಿದ ಕಥೆಯ ಪುನರಾವರ್ತನೆ ನಡೆಯುತ್ತಿತ್ತು. ರಾಮನಹಳ್ಳಿ ರಾಮಾಚಾರ್ಯರು ಈ ಹಿಂದೆ ಹೈಸ್ಕೂಲ್ ಒಂದರಲ್ಲಿ ಮೇಷ್ಟ್ರಾಗಿದ್ದು, ಅಲ್ಲಿ ಓದುತ್ತಿದ್ದ ಒಬ್ಬಳು ಹುಡುಗಿಯೊಂದಿಗೆ ಗೆಳೆತನ, ಅದು ಪ್ರೇಮಕ್ಕೆ ತಿರುಗಿ.. ಮದುವೆಯಾದರೆ ಈಕೆಯನ್ನೇ ಎಂದು ಹಠ ಹಿಡಿದಿದ್ದು. ಮನೆ ಮತ್ತು ಊರಲ್ಲಿ ಅದಕ್ಕೆ ವಿರೋಧ. ಕೆಲಸ, ಊರು ಬಿಟ್ಟು ಬೆಂಗಳೂರಿಗೆ ಓದಲೆಂದು ಬಂದಿದ್ದು. ಓದು ಮುಗಿದ ಮೇಲೆ ಬೆಂಗಳೂರಿನ ಹೊರವಲಯವೊಂದರಲ್ಲಿ ಒಂದು ಮಠ ನಡೆಸುತ್ತಿದ್ದ ಶಾಲೆಯಲ್ಲಿ ಮೇಷ್ಟ್ರ ಕೆಲಸಕ್ಕೆ ಸೇರಿದ್ದು. ಅಲ್ಲಿಯ ಸ್ವಾಮಿಗಳಿಗೆ ಆಪ್ತರಾಗಿದ್ದು. ಅವರ ಉತ್ತರಾಧಿಕಾರಿ ಆಗುವ ಅವಕಾಶ ಇದ್ದರೂ ಬೇಡ ಎಂದು ಮೇಷ್ಟ್ರಾಗೇ ಉಳಿದಿದ್ದು. ಈಗ ಪ್ರವಚನ ಮಾಡಿಕೊಂಡು ಓಡಾಡುತ್ತಿರುವುದು. ಆಯ್ತು ಇವೆಲ್ಲಾ ಮಾಮೂಲಿ ಸಿನಿಮಾಗಳ ಕಥೆಯಂತೆ ಇದೆ. ಆದರೆ ನನ್ನ ಮನಸ್ಸು ಈ ಕಥೆಯನ್ನು ರಮಾದೇವಿ ಮತ್ತು ರಾಮಾಚಾರ್ಯರಿಗೆ ಗಂಟು ಹಾಕಲು ಏಕೆ ಪ್ರಯತ್ನಿಸುತ್ತಿದೆ? ಲಿಂಗೇಗೌಡ ಆಕೆಯ ಕಥೆಯನ್ನು ಪೂರ್ತಿ ಹೇಳಿರಲಿಲ್ಲ; ಇತ್ತ ನಿನ್ನೆ ಕೃಷ್ಣಾಚಾರ್ಯನೂ ಹಾಸ್ಟೆಲ್ ನಲ್ಲಿ ಇದ್ದ ಆ ರಾಮಾಚಾರ್ಯರೇ ಈಗ ಪ್ರವಚನ ನೀಡುತ್ತಿರುವ ರಾಮಾಚಾರ್ಯರು ಎಂದೇನೂ ಹೇಳಿರಲಿಲ್ಲ.. ‘ನಿನಗೆ ಹೇಗೆ ಈ ಕಥೆಯಲ್ಲಾ ಗೊತ್ತಾಯಿತು?’ ಎಂದು ಕೃಷ್ಣಾಚಾರ್ಯನನ್ನು ಕೇಳಿದಕ್ಕೆ. ‘ಈ ಪ್ರವಚನ ನೀಡುವ ಆಚಾರ್ಯರ ಖಾಸಾ ಶಿಷ್ಯ ನನ್ನ ದೂರದ ಸಂಬಂಧಿ. ಅವನ ಕಿವಿಗೆ ಹೇಗೋ ಈ ಸುದ್ದಿ ಬಿದ್ದಿದೆ. ಇಂತಹ ಸುದ್ದಿಗಳೆಂದರೆ ಒಂತರ ಕಿವೀಲಿ ಗುಗ್ಗೆ ಇದ್ದ ಹಾಗೆ. ಮುಲ ಮುಲ ಅಂತಿರತ್ತೆ. ಈಚೆಗೆ ತೆಗೆದ ಹೊರತೂ ಸಮಾಧಾನವಿರಲ್ಲ. ಅವನು ಯಾರಿಗೂ ಹೇಳ್ಬೇಡ ಅಂತ ನಂಗೆ ಹೇಳ್ದ. ಹೀಗೇ ಎಷ್ಟು ಜನಕ್ಕೆ ಹೇಳಿದ್ದಾನೋ? ಯಾರಿಗೆ ಗೊತ್ತು? ಈಗ ನಾನೂ ನಿನಗೆ ಯಾರಿಗೂ ಹೇಳ್ಬೇಡ ಅಂತ ಹೇಳ್ದೆ ನೀನು ಇನ್ನೊಬ್ಬರಿಗೆ ಹೇಳೋತಂಕ ನಿನ್ನ ಕಿವಿಲೂ ಇದ್ದು ಗುಗ್ಗೆ ತರ ಇರತ್ತೆ. ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ಇದು ವರ್ಗಾವಣೆ ಆಗತ್ತೆ’. ಅವನ ಎದುರಿಗೆ ನಾನು ಮಹಾ ಸುಭಗ ಎಂದು ತೋರಿಸಿಕೊಳ್ಳಲು ‘ಇಲ್ಲಪ್ಪಾ. ನಾನು ಯಾರಿಗೂ ಹೇಳಲ್ಲ ಅಂದೆ’. ಆದರೆ ಈಗ ನಾನು ಮಾಡುತ್ತಿರುವುದೇನು? ಕೃಷ್ಣಾಚಾರ್ಯ ತನ್ನ ಕಿವಿಯಲ್ಲಿ ಇದ್ದ ಗುಗ್ಗೆಯನ್ನು ನನ್ನ ಕಿವಿಗೆ ಹಾಕಿ ಆರಾಮವಾಗಿ ಬೆಳಗ್ಗೆ ಎದ್ದು ಹೊರಟು ಹೋದ.. ಆದರೆ ನಾನು ಆ ಗುಗ್ಗೆಯನ್ನು ಕಿವಿಯಿಂದ ತೆಗೆಯಲು ಪಿನ್ನು ಹಾಕಿಕೊಂಡು ಈ ಅಲ್ಲ ಸಲ್ಲದ ಕಲ್ಪನೆಯಲ್ಲಿ ಮುಳುಗಿರುವೆ. ನಿನ್ನೆ ಕೃಷ್ಣಾಚಾರ್ಯನ ಜತೆ ಮಾತಾಡುತ್ತಾ ಈ ರಾಮಾಚಾರ್ಯರು ನಮಗಿಂತ ಸುಮಾರು ಐದು ವರ್ಷ ದೊಡ್ಡವರಾಗಿದ್ದರು ಎಂದು ಹೇಳಿದ್ದೆ. ಐದಿರಲಾರದು. ಹತ್ತು ಹದಿನೈದು ವರ್ಷಗಳಷ್ಟು ಇರಬೇಕು ಎಂದು ತಾವು ಹಾಸ್ಟೆಲ್ನಲ್ಲಿದ್ದ ಹಿಂದಿನ ದಿನಗಳನ್ನು ಜ್ಞಾಪಿಸಿಕೊಂಡರು. ಆ ರಾಮಾಚಾರ್ಯರು ಇಪ್ಪತ್ತು ಇಪ್ಪತ್ತೈದರ ಆಸು ಪಾಸಿನಲ್ಲಿದ್ದ ನಮ್ಮಷ್ಟು ತರುಣರಾಗಿರಲಿಲ್ಲ . ಮಧ್ಯವಯಸ್ಕರಾಗಿದ್ದರಲ್ಲವೇ? ಬಹುಷಃ ನಲವತ್ತು ನಲವತ್ತೈದು ವರ್ಷಗಳಿರಬಹುದು. ಹಾಗಾದರೆ ರಮಾದೇವಿಗೆ ಆಗ ವಯಸ್ಸು ಎಷ್ಟಾಗಿದ್ದಿರಬಹುದು? ವಯಸ್ಸಿನ ಅಂತರವೋ, ಜಾತಿಯ ಸಮಸ್ಯೆಯೋ ಅವರಿಬ್ಬರ ಮದುವೆಗೆ ಅಡ್ಡ ಬಂದಿರಬೇಕು. ಟಿ ವಿ ಯಲ್ಲಿ ಬರುವ ಆ ತಲೆಬುಡ ಇಲ್ಲದ ಸೀರಿಯಲ್ ಗಳನ್ನು ನೋಡುವ ಹೆಂಡತಿಯನ್ನು ಟೀಕಿಸುವ ನಾನು ಈಗ ಮಾಡುತ್ತಿರುವುದೇನು? ಈ ನನ್ನ ಕಲ್ಪನೆಗಳಿಗೆ ಆಧಾರವೇನು? ರಾಯರಿಗೆ ಪಾರ್ಕಿನಲ್ಲಿ ಒಂದು ರೌಂಡ್ ಹಾಕುವಷ್ಟರಲ್ಲಿ ಸಾಕಾಯಿತು. ಮನೆ ಕಡೆ ಹೊರಟರು.
ಸ್ನಾನ ತಿಂಡಿ ಊಟಗಳನ್ನು ಮಾಮೂಲಿನಂತೆ ಮುಗಿಸಿದ ರಾಯರು ಮಧ್ಯಾನ್ಹದ ನಿದ್ದೆ ಮಾಡಲು ತಮ್ಮ ರೂಮಿಗೆ ಹೋಗಿ ಮಲಗಿದರು. ಐದು ನಿಮಿಷಕ್ಕೇ ಎಚ್ಚರವಾಯ್ತು. ಹಾಲಿನಲ್ಲಿ ಹೆಂಡತಿ ಟಿವಿಯ ಮ್ಯೂಸಿಕ್ ಚಾನೆಲ್ ಒಂದರಲ್ಲಿ ನೋಡುತ್ತಿದ್ದ ಸಿನಿಮಾ ಹಾಡುಗಳು ಕಿವಿಗೆ ಬೀಳುತ್ತಿತ್ತು. ‘ಎಲ್ಲಿದ್ದೆ ಇಲ್ಲಿ ತಂಕ.. ಎಲ್ಲಿಂದ ಬಂದ್ಯವ್ವ.. ನಿನಕಂಡು- – – – – ‘ , ‘ಏನೋ ಮಾಡಲು ಹೋಗಿ ಏನು ಮಾಡಿದೆ ನೀನು – – – – – ‘ , ‘ಬೊಂಬೆಯಾಟವಯ್ಯಾ ಇದು ಬೊಂಬೆಯಾಟವಯ್ಯಾ ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸಯ್ಯಾ- – – – – – ‘ , ‘ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ ಕಪಟ ನಾಟಕ ಸೂತ್ರಧಾರಿ – – – – ‘.. ಆ ಹಾಡುಗಳನ್ನೇ ಕೇಳುತ್ತಾ ಹದಿನೈದು ನಿಮಿಷಗಳು ಕಳೆದವು. ಏಕೋ ಈ ಹಾಡುಗಳು ತಮ್ಮನ್ನೇ ಅಣಕಿಸಲು ಬರುತ್ತಿರುವಂತೆ ಅನಿಸತೊಡಗಿತು. ನಿದ್ದೆ ಹತ್ತಲಿಲ್ಲ. ಟಿವಿ ಚಾನೆಲ್ ಬದಲಾಯಿತೇನೋ? ಯಾವುದೋ ಸಿನಿಮಾದ ಡೈಲಾಗುಗಳು. ರಾಯರು ಮತ್ತೆ ರಮಾದೇವಿ, ರಾಮಾಚಾರ್ಯ ಇವರುಗಳನ್ನು ಕೃಷ್ಣಾಚಾರ್ಯ ಹೇಳಿದ ಕಥೆಯಲ್ಲಿ ಮತ್ತೊಮ್ಮೆ ಛಲ ಬಿಡದ ತ್ರಿವಿಕ್ರಮನಂತೆ ಹುಡುಕಲು ಪ್ರಾರಂಭಿಸಿದರು. ಅದೇ ಸಮಯಕ್ಕೆ ಮನಸ್ಸಿನ ಇನ್ನೊಂದು ಮೂಲೆಯಿಂದ ‘ಸಾರ್ ನೀವು ಕಥೆ ಬರೆಯೋರಾ’ ಎಂದ ಬಾಳಪ್ಪನ ಮುಖ ತೇಲಿಬಂತು.. ಓಹ್ ಮೂರ್ನಾಲಕ್ಕು ದಿನಗಳಿಂದ ಮರೆಯಾಗಿದ್ದ ಇವನೂ ಈಗಲೇ ಬರಬೇಕೇ? ಇವನ ಕಥೆಯೂ ಒಂದು ರೀತಿ ನಿಗೂಢವೇ. ಪತ್ತೇದಾರಿ ಪುರುಷೋತ್ತಮ ಮಾತ್ರ ಆ ಗೂಢವನ್ನು ಭೇದಿಸಬಲ್ಲನೇನೋ? ಇವರನ್ನೆಲ್ಲಾ ನಾನಾಗೇ ಯಾಕೆ ಆವಾಹಿಸಿಕೊಳ್ಳುತ್ತಿರುವೆ? ನಾನು ಓದುತ್ತಿರುವ ಕಥೆ, ಕಾದಂಬರಿಗಳ ಪ್ರಭಾವವೇ? ಹಾಗೆ ನೋಡಿದರೆ ಈಗ ನಾನು ಓದುತ್ತಿರುವುದು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪ್ರಸಿದ್ಧರಾಗಿರುವ ಲೇಖಕರುಗಳದ್ದೇ. ಅವು ನಾನು ಕಾಲೇಜು ದಿನಗಳಲ್ಲಿ ಕಾಲ ಕಳೆಯಲು ಓದುತ್ತಿದ್ದ ಮೂರು ಅಥವಾ ನಾಲ್ಕನೇ ದರ್ಜೆಯವಲ್ಲ. ಮೈ ಮನಸ್ಸುಗಳನ್ನು ಒಂದೆರೆಡು ನಿಮಿಷ ಬೆಚ್ಚಗೆ ಮಾಡುತ್ತಿದ್ದ, ಅಪ್ಪ ಅಮ್ಮನ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ಓದುತ್ತಿದ್ದ ಪೋಲಿ ಕಥೆಗಳೂ ಅಲ್ಲ. ಕಥೆಯಲ್ಲಿ ಓದಿದ್ದನ್ನು ಅಲ್ಲಿಗಲ್ಲಿಗೇ ಬಿಡದೆ ಸುಮ್ಮನಿರುವವರು ಎಷ್ಟೊಂದು ಮಂದಿಯಿಲ್ಲ? ಈ ಕಿವಿಯಲ್ಲಿ ಕೇಳಿದ ಸುದ್ದಿಯನ್ನು ಆ ಕಿವಿಯಲ್ಲಿ ಬಿಟ್ಟು ಸುಮ್ಮನಿರಲು ನನಗೆ ಏಕೆ ಆಗುತ್ತಿಲ್ಲ? ನನ್ನ ಹೆಂಡತಿ ಅಕ್ಕಪಕ್ಕದ ಮನೆಯವರ, ತೀರಾ ಹತ್ತಿರದ ಸಂಬಂಧಿಗಳ ಸುದ್ದಿಯನ್ನು ನನಗೆ ಹೇಳದ ದಿನವೇ ಇಲ್ಲ. ಆಗ ಬೇರೆ ಮನೆಯವರ ಸುದ್ದಿ ನಮಗೇಕೆ ಎಂದು ಶ್ರಿಮದ್ಗಾಂಭಿರ್ಯ ತೋರಿಸುವ ನಾನು ಈಗ ಮಾಡುತ್ತಿರುವುದೇನು? ಅವಳೇ ವಾಸಿ. ಅವತ್ತಿನ ಸುದ್ದಿ ಅವತ್ತಿಗೆ. ನಾಳೆ ಹೊಸ ಸುದ್ದಿ. ನನ್ನಂತೆ ಕೇಳಿದ ಸುದ್ದಿಯ ಹಿಂದೆ ಬಿದ್ದು ಒದ್ದಾಡುವಳಲ್ಲ. ಅವಳೊಬ್ಬಳೇ ಯಾಕೆ ಬಹಳ ಜನರೂ ಅಷ್ಟೇ. ಈಗ ನನಗೆ ಮಾಡಲು ಕೆಲಸವಿಲ್ಲದೇ ‘ಏನೋ ಮಹಾ ನಾನು ಮನುಷ್ಯರ ಮನದಾಳಕ್ಕೆ ಇಳಿದು ಸತ್ಯ ಹುಡುಕುವ’ ಪೋಸನ್ನು ನನಗೆ ನಾನೇ ಕೊಟ್ಟುಕೊಳ್ಳುತ್ತಿರುವೆನೇ?. ಇದು ಅನೈತಿಕ ಅಲ್ಲವೇ?. ಯಾವುದೋ ಒಂದು ಕಾದಂಬರಿಯಲ್ಲಿ ಓದಿದ ಸಾಲು ತಟಕ್ಕನೆ ಜ್ಞಾಪಕಕ್ಕೆ ಬಂತು. ‘ಕಾಮ ಕೆಟ್ಟದ್ದಲ್ಲ; ಆದರೆ ವಿಕೃತ ಕಾಮ ಕೆಟ್ಟದ್ದು’. ಕಾಮವೆಂದರೆ ಕೇವಲ ಹೆಣ್ಣು ಗಂಡಿನ ನಡುವಿನ ಭೋಗಾಸಕ್ತಿ ಅಷ್ಟೇ ಅಲ್ಲ. ಬಯಕೆ, ಇಚ್ಛೆ ಎಂಬ ಅರ್ಥವೂ ಇದೆ ಅಲ್ಲವೇ?. ಇನ್ನೊಬ್ಬರ ವೈಯಕ್ತಿಕ ಜೀವನದೊಳಗೆ ಇಣುಕಿ ನೋಡುವ ಈ ನನ್ನ ಆಸೆ ವಿಕೃತ ಬಯಕೆ ಅಲ್ಲವೇ? ಇದು ತಪ್ಪಲ್ಲವೇ? ‘ಕೆಲಸವಿಲ್ಲದ ಕುಂಬಾರನ’ ಕಥೆಯಂತೆ ನಾನು ಆಗುತ್ತಿರುವೆನೇ? ಕಾಲ ಕಳೆಯಲು ಎಲ್ಲಿಯಾದರೂ ಒಂದು ಕಡೆ, ಈ ಕೃಷ್ಣಾಚಾರ್ಯನಂತೆ, ಪಾರ್ಟ್ ಟೈಮ್ ಕೆಲಸಕ್ಕೆ ಹೋಗಲೇ? ನಾಳೆಯಿಂದಲೇ ಹುಡುಕಲೇ? ಆ ಕೃಷ್ಣಾಚಾರ್ಯನಿಗೆ ಸಾಕಷ್ಟು ಜನಗಳ ಪರಿಚಯ ಇದೆ. ನನ್ನ ಮನೋಭಾವವೂ ಗೊತ್ತಿದೆ. ನನ್ನ ಇಷ್ಟ-ಅನಿಷ್ಟ ಯಾವುದು ಎಂದು ತಿಳಿದಿದೆ. ನನ್ನ ಆತ್ಮ ಗೌರಕ್ಕೆ ಕುಂದು ಬರದಂತಹ ಕಡೆ ಕಾಲ ಕಳೆಯಲು ಒಂದು ಕೆಲಸ ಹುಡುಕಪ್ಪ ಎಂದರೆ ಆಯಿತು. ನನಗೆ ಹಣ ಮುಖ್ಯವಲ್ಲ ಎಂದೂ ಬಾಯಿಬಿಟ್ಟು ಹೇಳಿದರೆ ಆಯಿತು. ಇವತ್ತು ಸಂಜೆ ಮಠಕ್ಕೆ ಹೋಗೋಣ. ಆ ರಾಮಾಚಾರ್ಯರನ್ನು ಇನ್ನೊಮ್ಮೆ ಹತ್ತಿರದಿಂದ ನೋಡೋಣ. ಸಾಧ್ಯವಾದರೆ ಮಾತಾಡಿಸಿಬಿಡಲೇ? ಕೃಷ್ಣಾಚಾರ್ಯನಿಗೆ ಬೇಸರವಾಗಬಹುದು. ಬೇಡ. ಮನಸ್ಸು ಒಂದು ನಿರ್ಧಾರಕ್ಕೆ ಬಂದಂತಾಯ್ತು. ಸ್ವಲ್ಪ ನಿದ್ದೆಯ ಜೋಂಪು ಹತ್ತಿದಹಾಗೆ ಆಯಿತು. ಐದೇ ನಿಮಿಷ. ಅಷ್ಟೇ. ಮತ್ತೆ ಎಚ್ಚರ. ಈ ಸಲ ಇನ್ನೊಂದು ಯೋಚನೆ ಗುಂಗಿ ಹುಳದಂತೆ ಮನಸ್ಸನ್ನು ಕೊರೆಯಹತ್ತಿತ್ತು. ನಾನು ಕಾಲ ಕಳೆಯಲು ಪಾರ್ಟ್ ಟೈಮ್ ಕೆಲಸಕ್ಕೆ ಹೋಗುತ್ತೇನೆ ಎಂದರೆ ಮನೆಯಲ್ಲಿ ಹೆಂಡತಿ,ಮಗ,ಸೊಸೆಯರಿಂದ ನೂರೆಂಟು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದಲ್ಲ? ಅವರಿಗೆಲ್ಲಾ ಸಮಜಾಯಿಷಿ ಕೊಡುವ ಹೊತ್ತಿಗೆ ಸಾಕು ಬೇಕಾಗುತ್ತದೆ. ಅವರನ್ನು ಬಡಪೆಟ್ಟಿಗೆ ಒಪ್ಪಿಸಲು ಆಗುವುದಿಲ್ಲ. ಮಗನ ಮನಸ್ಸನ್ನು ನೋಯಿಸಿದಂತಾಗುತ್ತದೆ. ಸೊಸೆ ಏನೆಂದುಕೊಳ್ಳುತ್ತಾಳೋ? ಇನ್ನು ಹೆಂಡತಿಗೆ ಏನು ಹೇಳುವುದು. ಬೆಂಗಳೂರಿಂದ ನೂರಾರು ಮೈಲಿ ದೂರದಲ್ಲಿರುವ ಮಗಳು ಕೇಳೆಕೇಳುತ್ತಾಳೆ. ದುಡ್ಡಿಗೆ ತೊಂದರೆಯಾಗಿದ್ದರೆ, ಅಣ್ಣನನ್ನು ಕೇಳಲು ಸಂಕೋಚವಾದರೆ ನನಗೆ ಹೇಳಬೇಕಿತ್ತು. ನಾನು ಪ್ರತಿ ತಿಂಗಳೂ ಕಳಿಸುತ್ತಿದೆ ಅಂತ. ಅಳಿಯನೂ ಅಷ್ಟೆಯೇ ತುಂಬಾ ಮೃದು ಸ್ವಭಾವಿ. ಬೇಜಾರಾದರೆ ಇಲ್ಲಿಗೇ ಬನ್ನಿ ಅನ್ನುತ್ತಾನೆ. ಏಕೋ ಈ ಸಮಸ್ಯೆ ಗೋಜಲಾಗುತ್ತಿದೆ. ಈ ಒದ್ದಾಟದಲ್ಲಿ ಆರು ಗಂಟೆ ಆಯ್ತು. ಅಡುಗೆ ಮನೆಯಿಂದ ಕಾಫಿ ಡಿಕಾಕ್ಷನ್ನಿನ ಪರಿಮಳ ಬರುತ್ತಿದೆ. ಕಾಫಿ ಕುಡಿದು ವಾಕಿಂಗ್ ಹೋಗೋಣ ಎಂದು ರಾಯರು ಮಂಚದಿಂದ ಎದ್ದರು. ಹೆಂಡತಿ ಕೊಟ್ಟ ಕಾಫಿ ಕುಡಿದು ಮನೆ ಕೀ ಕೊಡು ನಾನು ಇವತ್ತು ಮಠಕ್ಕೆ ಬರಲ್ಲ ಎಂದು ವಾಕಿಂಗ್ ಶೂಸ್ ಹಾಕಿಕೊಂಡು ಹೊರಟರು.
೨
ಪಾರ್ಕಿನಲ್ಲಿ ಎರಡು ರೌಂಡ್ ವಾಕಿಂಗ್ ಮುಗಿಸಿದ ರಾಯರು ಅಲ್ಲೇ ಇದ್ದ ಒಂದು ಕಲ್ಲು ಬೆಂಚಿನ ಮೇಲೆ ಕೂತರು. ಇವರಷ್ಟೇ ವಯಸ್ಸಾದ ದಿನವೂ ವಾಕಿಂಗ್ ಮೂಲಕ ಮುಖ ಪರಿಚಯವಿದ್ದ ಒಬ್ಬರು ರಾಯರ ಪಕ್ಕ ಕೋರುತ್ತಾ ‘ಏನು ರಾಯ್ರೆ ಮಠಕ್ಕೆ ಹೋಗಲ್ವೋ? ಆ ಆಚಾರ್ಯರು ತುಂಬಾ ಚೆನ್ನಾಗಿ ಪ್ರವಚನ ಮಾಡ್ತಾರೆ. ಇನ್ನೂ ಹತ್ತು ನಿಮಿಷವಿದೆ ಬನ್ನಿ ಹೋಗೋಣ’
‘ನೀವು ನಡೀರಿ. ನನ್ನ ಸ್ನೇಹಿತರೊಬ್ಬರು ಇಲ್ಲಿಗೆ ಬರ್ತೀನಿ ಅಂತ ಹೇಳಿದ್ರು. ಅವರ ಜತೆ ಬರ್ತೀನಿ’.
ಸದ್ಯ ಅವರು ಮತ್ತೇನೂ ಹೇಳದೆ ಜಾಗ ಖಾಲಿ ಮಾಡಿದರು. ಈ ರಾಮಾಚಾರ್ಯನನ್ನು ನಾನು ಮರೆಯುವ ಬಗೆ ಹೇಗೆ? ಹೆಸರು, ಊರು ಬದಲಾಯಿಸಿ ಹೆಂಡತಿಗೆ ಕಥೆ ಕಟ್ಟಿ ಹೇಳಲೇ? ನಿಮಗೆ ಯಾರು ಹೇಳಿದ್ದು ಎಂದರೆ ಯಾವುದೋ ಕಥೆ ಪುಸ್ತಕದಲ್ಲಿ ಓದಿದ್ದು ಕಣೆ ಅಂದ್ರೆ? ಅಷ್ಟಕ್ಕೇ ಸುಮ್ಮನಾದ್ರೆ ಪರವಾಗಿಲ್ಲ. ‘ಎಲ್ಲಿ ಕೊಡಿ ನಾನೊಂದು ಸಲ ಓದ್ತೀನಿ’ ಅಂತ ಕೇಳಿದರೆ ಏನು ಹೇಳೋದು? ಅದು ಬೇಡ. ಯಾರೋ ನನ್ನ ಸ್ನೇಹಿತರು ಹೇಳಿದ್ದು ಅಂತ ಬಚಾವ್ ಆಗ್ಬೋದು. ಆದ್ರೆ ಅವಳು ವಿಶಾಲಾಕ್ಷಮ್ಮ, ಕಾಮಾಕ್ಷಮ್ಮ, ನಳಿನಮ್ಮ ಅಂತ ತನ್ನ ಮಾತಿನ ಮಂಟಪದ ಸದಸ್ಯರಿಗೆ ಈ ಕಥೆ ಹೇಳದೆ ಇರುತ್ತಾಳೆಯೇ?
‘ನೋಡ್ರಿ ಯಾವ ಹುತ್ತದಲ್ಲಿ ಯಾವ ಹಾವು ಇರತ್ತೋ? ನಮ್ಮ ಯಜಮಾನರ ಸ್ನೇಹಿತರು ಹೇಳಿದ್ರಂತೆ ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ ಅಂತ ಹೇಳಿಲ್ವೇ. ನಮಗ್ಯಾಕಪ್ಪ ಆ ಸುದ್ದಿಗಳೆಲ್ಲಾ ಅಲ್ವೇನ್ರಿ’ ಅಂತ ಗಲ್ಲ ಬಡಿದುಕೊಂಡು ರಾಯರ ಮಠದಲ್ಲಿ ಒಂದೆರೆಡು ನಮಸ್ಕಾರ ಹೆಚ್ಚಾಗಿ ಹಾಕಿ ಮನೆಗೆ ಬಂದು ಆರಾಮವಾಗಿ ಟಿವಿ ಸೀರಿಯಲ್ ನೋಡ್ತಾ ಕೂತ್ಕೊಳ್ತಾಳೆ. ಆ ಕಥೆ ಕೇಳಿಸಿಕೊಂಡ ವಿಶಾಲಾಕ್ಷಮ್ಮ, ಕಾಮಾಕ್ಷಮ್ಮ, ನಳಿನಮ್ಮ ಅವರ ಕಿವಿನೋವಿಗೆ ಪರಿಹಾರವಾಗಿ ಅದು ಅವರವರ ಗಂಡಂದಿರ ಕಿವಿಗೆ ವರ್ಗಾವಣೆ.ಆಗುತ್ತದೆ. ಕೃಷ್ಣಾಚಾರ್ಯ ಹೇಳಿದ ಹಾಗೆ ಈ ಗುಗ್ಗೆ ಕೊನೆಗೆ ಅವನ ಕಿವಿಗೆ ಬಿದ್ದೇ ಬೀಳುತ್ತದೆ. ಈ ಬಡಾವಣೆಯಲ್ಲಿ ಈ ಗುಗ್ಗೆಯ ಮೂಲ ನಾನೇ ಅಂತ ಅವ್ನಿಗೆ ಗೊತ್ತಾಗದೇ ಇರತ್ಯೇ? ಬೇಡ ಇದು ಬೇಡ. ಪಾರ್ಕಿನಲ್ಲಿ ಇನ್ನೂ ಕೂತಿದ್ದರೆ ಸೊಳ್ಳೆಗಳ ಕಾಟ ಎಂದು ಪೀರಾಯರು ಮನೆ ಕಡೆ ಹೆಜ್ಜೆ ಹಾಕಿದರು.
ಏನಾದರೂ ಓದೋಣ ಎಂದು ತಮ್ಮ ಪುಸ್ತಕದ ಶೆಲ್ಫ್ ಕಡೆ ನೋಡುತ್ತಾ ಕೂತ ಪೀರಾಯರ ಕಣ್ಣು ‘ಕಥೆ ಹುಟ್ಟುವ ಪರಿ’ ಎಂಬ ಪುಸ್ತಕ ಕಂಡು ಅದನ್ನು ಕೈಗೆ ತೆಗೆದುಕೊಂಡರು. ಈ ಹಿಂದೆ ಒಂದು ಸಲ ಓದಿದ್ದು. ನೋಡೋಣ ಇನ್ನೊಮ್ಮೆ ಎಂದು ಕೂತರು. ಒಂದೆರೆಡು ಲೇಖನ ಓದಿದ ಮೇಲೆ ನಾನು ಒಂದು ಕಥೆ ಬರೆದರೆ ಹೇಗೆ? ವಸ್ತುವಂತೂ ದಿನಾ ಕುಟ್ಟೆಹುಳದಂತೆ ಮನಸ್ಸನ್ನು ಕೊರೆಯುತ್ತಿದೆ. ಕಥೆಯಲ್ಲಿ ಪೂರ್ತಿ ವಾಸ್ತವಾಂಶ ಇರಲೇ ಬೇಕೆಂದೇನಿಲ್ಲ. ಕಲ್ಪನೆಯ ಅಂಶ ಇದ್ದೇ ಇರುತ್ತದೆ. ನಾನೇನೂ ಯಾವ ಪತ್ರಿಕೆಗೆಗಾಗಲಿ ಕಳಿಸಲು ಬರೆಯುತ್ತಿಲ್ಲವಲ್ಲ. ನೋಡೋಣ. ಪ್ರಯತ್ನ ಮಾಡೋಣ. ಒಂದು ಕಡೆ ಬರೆದಿಡುವುದೂ ಮನಸ್ಸಿನಲ್ಲಿ ಮೂಡಿ ಕಾಡುತ್ತಿರುವುದರಿಂದ ತಪ್ಪಿಸಿಕೊಳ್ಳಲು ತಾನೇ. ದಿನಾ ಡೈರಿ ಬರೆಯುವವರು ಸಾಕಷ್ಟು ಜನರಿಲ್ಲವೇ? ನಾನು ಬರೆಯುತ್ತಿರುವುದೂ ಡೈರಿಯೊಂದರ ನಾಲ್ಕಾರು ಪುಟಗಳು ತಾನೇ. ಇದೇ ಸರಿ.. ಎಂದುಕೊಂಡು ಲ್ಯಾಪ್ಟಾಪ್ ಆನ್ ಮಾಡಿಕೊಂಡು ಕೂತರು. ರಾಜು ವಸಿಷ್ಠನ ಊರಿಗೆ ಹೋದ ದಿನದಿಂದ ಪ್ರಾರಂಭಿಸಿ ಇಂದಿನವರೆಗೆ ಬರೆಯೋಣ ಎಂದು ಮನಸ್ಸಿನಲ್ಲೇ ನಿರ್ಧರಿಸಿಕೊಂಡರು. ನಾಲ್ಕೈದು ಸಾಲುಗಳ ತನಕ ನಿಧಾನವಾದ ಕೈ ಬೆರಳುಗಳು ನಂತರ ಕೀಬೋರ್ಡ್ ಮೇಲೆ ಸರಸರನೆ ಓಡಲಾರಂಭಿಸಿದವು.
(ಮುಂದುವರೆಯುತ್ತದೆ..)
ಒಂದು ತಿದ್ದುಪಡಿ:- ನಾನು ಬರೆದಿರುವ ಈ ನೀಳ್ಗತೆಯ ಭಾಗ ೪ರ ೨ನೇ ಉಪವಿಭಾಗದಲ್ಲಿ ‘ಆ ಕಥೆ ಕೇಳಿಸಿಕೊಂಡ ಅವರ ಹೆಂಡತಿಯರ ಕಿವಿನೋವಿಗೆ ಪರಿಹಾರವಾಗಿ’ ಎಂಬುದನ್ನು ‘ಆ ಕಥೆ ಕೇಳಿಸಿಕೊಂಡ ವಿಶಾಲಾಕ್ಷಮ್ಮ, ಕಾಮಾಕ್ಷಮ್ಮ, ನಳಿನಮ್ಮ ಅವರ ಕಿವಿನೋವಿಗೆ ಪರಿಹಾರವಾಗಿ’ ಎಂದು ಓದಿಕೊಳ್ಳಬೇಕಾಗಿ ವಿನಂತಿ.
–ಮು ಅ ಶ್ರೀರಂಗ