ಮೇರಾ ರಂಗ್ ದೇ ಬಸಂತಿ ಚೋಲಾ…
ಶಿವಾನಂದ ಶಿವಲಿಂಗಪ್ಪ ಸೈದಾಪೂರ (ಎಂ.ಎ.ವಿದ್ಯಾರ್ಥಿ)
ರಾಜ್ಯ ಕಾರ್ಯಕಾರಣಿ ಸದಸ್ಯರು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ಸುಮಾರು ನೂರಾರು ವರ್ಷಗಳ ಕಾಲ ಪರಾಧೀನತೆಯನ್ನು ಕಿತ್ತೊಗೆಯಲು ಲಕ್ಷಾಂತರ ಜನ ತಮ್ಮ ಬಿಸಿ ನೆತ್ತರವನ್ನು ನೀರಾಗಿ ಹರಿಸಿ ನಮಗಾಗಿ, ನಮ್ಮ ಉಳಿವಿಗಾಗಿ ಹೋರಾಡಿ ಜೀವವನ್ನೇ ತೆತ್ತು ಇಂದಿನ ಸುಭದ್ರತೆಗೆ ಕಾರಣರಾದರು. 1857ರ ಮಹಾ ಸಂಗ್ರಾಮದಿಂದ 1947 ರ ವರೆಗೆ ಅನೇಕಾನೇಕ ಕ್ರಾಂತಿಕಾರಿ ಮಹನೀಯರು ಕಾರಣೀಕರ್ತರಾಗಿದ್ದಾರೆ. ಅಂತಹವರಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಯ ಹೊಸ ಅಧ್ಯಾಯವನ್ನೇ ಬರೆದ ಮಹಾನ್ ಹೋರಾಟಗಾರರೆಂದರೆ ಅದು ಭಗತ್ ಸಿಂಗ್, ಸುಖದೇವ್, ರಾಜಗುರುರವರು. ಕ್ರಾಂತಿಯ ಇತಿಹಾಸದಲ್ಲಿ ಅವರ ಆತ್ಮ ಬಲಿದಾನವೇ ಅತ್ಯಂತ ಪ್ರಮುಖದೆಂದು ಹೇಳಬಹುದು. ದಾಸ್ಯ ಮುಕ್ತಿಗಾಗಿ, ತಮ್ಮ ಜೀವನದ ಅಂತಿಮ ಹೊತ್ತಿನಲ್ಲಿಯೂ ಕೂಡ ನಗು ನಗುತ ತಾಯಿ ಭಾರತಮಾತೆಯನ್ನು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತ ಉರುಳನು ಚುಂಬಿಸಿ ನೇಣಿನ ಕುಣಿಕೆಗೆ ಕೊರಳನ್ನೊಡ್ಡಿದ್ದರು.
ಅಂತಹ ಮಹಾನ್ ಹೋರಾಟಗಾರರ ಬಲಿದಾನವಾಗಿ 87 ವರ್ಷ ಉರುಳಿದವು. ಅದರ ಸ್ಮರಣೆಯೇ ಈ ಲೇಖನ.
ಆವತ್ತು….
1927ರ ಸಮಯ.. ಬ್ರಿಟೀಷ್ ಸರ್ಕಾರವು ಜಾನ್ ಸೈಮನನ್ನು ಭಾರತಕ್ಕೆ ಕಳುಹಿಸಿತು. ಅದೊಂದು ಜಾನ್ ಸೈಮನನ ಅಧ್ಯಕ್ಷತೆಯಲ್ಲಿ ಒಳಗೊಂಡ ಏಳು ಜನರ ಕಮಿಟಿಯಾಗಿತ್ತು. ಆ ಕಮಿಟಿಯ ಉದ್ದೇಶ ಪ್ರಸ್ತುತ ಭಾರತದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ವರದಿಯನ್ನು ರಚಿಸಬೇಕಿತ್ತು. ಇದಾದ ನಂತರ ಭಾರತೀಯರಿಗೆ ಪರಮಾಧಿಕಾರ ನೀಡುವುದೆಂದು ಬ್ರಿಟೀಷರು ಭಾರತೀಯ ಹೊರಟಗಾರರಿಗೆ ನೀಡಿದ ಸಮಾಧಾನಕರ ಉತ್ತರವಾಗಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರೂ ಮತ್ತು ಗಾಂಧೀಜಿಯವರು ಕೂಡ ಇದಕ್ಕೆ ಸಹಮತ ಸೂಚಿಸಿದರು. ಆದರೆ ಆ ಕಮೀಟಿಯಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಅಲ್ಲಿಯವರೆಗೂ ನೇರವಾಗಿಯೇ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದ ಇಂಗ್ಲೀಷರು ಪರಮಾಧಿಕಾರದ ಆಸೆ ತೋರಿಸಿ ಭಾರತೀಯರಿಂದಲೇ ಪರೋಕ್ಷವಾಗಿ ಕೊಳ್ಳೆ ಹೊಡೆಯುವ ಉದ್ದೇಶ ಮುಂದಿನದಾಗಿತ್ತು. ಭಾರತೀಯರಿಂದಲೇ ಭಾರತದ ಮೇಲೆ ಅನಾಚಾರವೆಸಗುವ ಈ ಕೃತ್ಯವನ್ನು ಬಹು ತೀಕ್ಷ್ಣವಾಗಿ
ಗಮನಿಸಿದ ಲಾಲಾ ಲಜಪತರಾಯರು ಹಿಂದಿನಕ್ಕಿಂತಲೂ ತಮ್ಮ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದರು. ಭಾರತೀಯರ ಮೇಲೆ ಅನಾಚಾರವಾಗುವುದನ್ನು ತಡೆಯುವುದಕ್ಕೆ ಸಿದ್ಧತೆ ಮಾಡಿದರು.
ಈ ಜಾನ್ ಸೈಮನನ ಕಾರ್ಯ ಮೊದಲ ಬಾರಿಗೆ 1927 ಅಕ್ಟೋಬರ 30 ರಂದು ಲಾಹೋರಿನಲ್ಲಿ ಅರಂಭವಾಗುದರಲ್ಲಿತ್ತು. ಪೂರ್ವ ಸಿದ್ಧತೆಯೊದಿಂಗೆ ಲಾಲಾ ಲಜಪತರಾಯರು ಮತ್ತು ಮದನ ಮೋಹನ ಮಾಳವಿಯವರು ನಾಯಕರಾಗಿ ಅವರೊಂದಿಗೆ ನವ್ ಜವಾನ ತಂಡದ ಯುವ ಜನತೆಯು ಜೊತೆಯಾದರು. ಲಾಲಾ ಲಜಪತರಾಯ ಪೂರ್ಣ ಸ್ವರಾಜವೇ ನಮ್ಮ ಜನ್ಮ ಸಿದ್ಧ ಹಕ್ಕು ಜಾನ್ ಸೈಮನ ಬರುವ ಅವಶ್ಯಕತೆಯೇ ಇಲ್ಲವೆಂದು ಕಪ್ಪು ಬಾವುಟ ಹಿಡಿದು ‘ಸೈಮನ್ ಗೋ ಬ್ಯಾಕ್ ‘ ಎಂದು ಮುಷ್ಕರ ಆರಂಬಿಸಿದರು.
ಪೋಲೀಸರಿಗೆ ಯಾವ ರೀತಿಯಿಂದ ಪ್ರಯತ್ನಿಸಿದರೂ ಚಳುವಳಿಯನ್ನು ಹತೋಟಿಯಲ್ಲಿಡಲಾಗದೆ ಒಳ್ಳೆಯ ಪಿಕಲಾಟ ಶುರುವಾಯಿತು. ಜಾನ್ ಸೈಮನ ರೈಲಿನಿಂದ ಕೆಳಗೆ ಇಳಿಯುವ ಹೋತ್ತಿಗೆ ಎಲ್ಲಾ ಕ್ರಾಂತಿಕಾರಿಗಳು ತಮ್ಮ ಘೋಷಣೆಯನ್ನು ಕೂಗಲು ಪ್ರಾರಂಭಿಸಿದರು. ಆಗ ಕ್ರಾಂತಿಕಾರಿಗಳ ವಿರೋಧ ಉಗ್ರ ಸ್ವರೂಪದತ್ತ ಸಾಗಿತು. ಪೋಲೀಸರು ಎಷ್ಟೇ ತಿಣಕಾಡಿದರೂ ಈ ಚಳುವಳಿಯನ್ನು ತಡೆಯಲು ಅಗಲೇ ಇಲ್ಲ. ಭಯಂಕರ ಕೋಪಿಷ್ಟನಾದ ಲಾಹೋರಿನ ಮುಖ್ಯ ಪೋಲೀಸ ಅಧಿಕಾರಿ ಸ್ಕಾಟ್, ಚಳುವಳಿಗಾರರ ಮೇಲೆ ಲಾಟಿ ಚಾರ್ಜಿಗೆ ಆಜ್ಞೆ ಹೊರಡಿಸಿದ. ಎಷ್ಟೇ ಪ್ರಯತ್ನಿಸಿದರು ಪರಸ್ಥಿತಿ ಹತೋಟಿಗೆ ಬರದೆ ಹೋಯಿತು. ಸ್ಯಾಂಡರ್ಸ ಎಂಬುವವ ಕಿರಿಯ ಅಧಿಕಾರಿ ವಯೋವೃದ್ಧ ಲಾಲಾ ಲಜಪತರಾಯರಿಗೆ ಬಿರುಸಿನಿಂದ ಹೊಡೆದ. ಏಟು ತಲೆಗೆ, ಎದೆಗೆ ಬಿರುಸಾಗಿ ಬಿದ್ದುದ್ದರಿಂದ ಲಾಲಾಜಿ ಆಸ್ಪತ್ರೆಗೆ ಸೇರುವಂತಾಯಿತು. ಲಾಲಾಜಿ ಚೇತರಿಸಿಕೊಳ್ಳದೇ 1928ರ ನವಂಬರ 17 ರಂದು ದಿವಂಗತರಾದರು.
ಪರಿಣಾಮ!!….
ಎಲ್ಲ ಕ್ರಾಂತಿಕಾರಿಗಳು ರೊಚ್ಚಿಗೆದ್ದರು. ರಕ್ತದಾರೆಗೆ ಪ್ರತಿಯಾಗಿ ರಕ್ತದಾರೆಯೆಂದು ರಣತಂತ್ರಗಳನ್ನು ರೂಪಿಸಲು ಮುಂದಾದರು. ಯಾವ ಸ್ಕಾಟ್ ಆಜ್ಞೆ ಹೊರಡಿಸಿದನೊ ಆತನನ್ನು ಕೊಂದು ರಕ್ತದ ಕುದಿಯನ್ನು ತಣ್ಣಗಾಗಿಸುವ ಯೋಚನೆ ಮಾಡಿದರು. ಅದಕ್ಕಾಗಿ 10 ಡಿಸೆಂಬರ 1928ರಂದು ಕ್ರಾಂತಿಕಾರಿಗಳೆಲ್ಲರೂ ತಮ್ಮ ಮೊದಲ ಸಭೆ ಮಾಡಿ ಒಂದು ಅಂತಿಮ ನಿರ್ಣಯ ಕೈಗೊಂಡರು. ಸ್ಕಾಟನ ಸಂಹಾರಕ್ಕಾಗಿ ಭಗತ್‍ಸಿಂಗ್, ಸುಖದೇವ, ರಾಜಗುರು, ಜಯಗೊಪಾಲ ಆಯ್ಕೆಯಾದರು.
ಮುಂದೇ ಡಿಸೆಂಬರ 15ರ ರಾತ್ರಿ ಮತ್ತೊಂದು ಸಭೆ ಮಾಡಿ ಸ್ಕಾಟ್ ನನ್ನು ಕೊಲ್ಲುವ ಬಗ್ಗೆ ತಮ್ಮಲ್ಲಿಯೇ ಹಂಚಿಕೊಂಡರು. ಸುಖದೇವ ಇಡೀ ಕಾರ್ಯದ ಒಂದು ನೀಲ ನಕ್ಷೆ ತಯಾರಿಸಿದ. ಜಯಗೋಪಾಲ ಸ್ಕಾಟನ ಇಡೀ ಚಲನವಲನಗಳ ಮೇಲೆ ನಿಗಾ ಇಡುವುದು: ‘ಭಗತ್‍ಸಿಂಗ್’ ರಾಜಗುರುರವರಿಗೆ ಸಹಕಾರಿಯಾಗಿ ನಿಲ್ಲುವುದು. ಸ್ಕಾಟನ ಹತ್ಯೆಯಾದ ನಂತರ ಚಂದ್ರಶೇಖರ ಅಜಾದ್ ಇವರನ್ನು
ಸುರಕ್ಷಿತವಾಗಿ ಕರೆದೊಯುವುದು. ಆವತ್ತು 1927ರ ಡಿಸೆಂಬರ 17ಕ್ಕೆ ಲಾಲಾಜಿ ದಿವಂಗತರಾಗಿ ಒಂದು ತಿಂಗಳಾಗಿತ್ತು. ಕ್ರಾಂತಿಕಾರಿಗಳು ಬೇಟೆಗಾಗಿ ಕಾತರಿಸುತ್ತಿದ್ದರು. ಜಯಗೋಪಾಲ ಅವತ್ತು ಮಧ್ಯಾಹ್ನ ಪೋಲೀಸ್ ಸ್ಟೇಷನಿಗೆ ಹೋಗಿ ಅಧಿಕಾರಿ
ಇರುವುದನ್ನು ಖಾತ್ರಿ ಮಾಡಿಕೊಂಡು ಬಂದ.
ಪಂಜಾಬ ಸಿವಿಲ್ ಸೆಕ್ರೆಟರಿಯೇಟ್‍ನ ಬಳಿಯಲ್ಲಿ ಸ್ಕಾಟನ ಮನೆಯಿತ್ತು. ಸ್ಕಾಟ್ ಸುಮಾರು ನಾಲ್ಕುವರೆ ಹೊತ್ತಿಗೆ ಕಚೇರಿಯಿಂದ ಹೊರಬಂದನೆಂದು ತಿಳಿದು ದೂರದಲ್ಲಿ ನಿಂತು ನೋಡುತಿದ್ದ ಜಯಗೋಪಾಲ ಅಧಿಕಾರಿ ಬಂದನೆಂದು ಸೂಚನೆ ನೀಡಿದ. ಶಿವಾಜಿಯ ಗೇರಿಲ್ಲಾ ತಂತ್ರಗಳ ಮೇಲೆ ಅಪಾರ ಅಭಿಮಾನ ಹೊಂದಿದ ರಾಜಗುರುವಿಗೆ ಅಧಿಕಾರಿಯ ಮೇಲೆ ಯಾವಾಗ ಗುಂಡು ಹೊಡೆದೆನೆಂಬ ಆತುರ ಕಾತುರಗಳಿದ್ದವು. ಅಧಿಕಾರಿ ಇನ್ನೇನು ತನ್ನ ಮೋಟರ ಸೈಕಲ್ ಹತ್ತ ಬೇಕೆನ್ನುವಷ್ಟರಲ್ಲಿ ‘ಭಗತ್‍ಸಿಂಗ್’ ಬೇಟೆಗಾಗಿ ಕಾತರಿಸುತ್ತಿದ್ದ ರಾಜಗುರುವನ್ನು ತಡೆದು ಆತ ಸ್ಕಾಟ್‍ನಲ್ಲ ಸ್ಯಾಂಡರ್ಸನೆಂದು ಹೇಳಿದ. ಆದರೆ ಅಷ್ಟೊತ್ತಿಗಾಗಲೇ ರಾಜ ಗುರುವಿಗೆ ತನ್ನಲ್ಲಿದ್ದ ರೋಷವೆಲ್ಲಾ ಉಕ್ಕಿ ರಕ್ತ ಕುದಿದು ನರಮಂಡಲ ಬಿಗಿದು ಮೆದುಳು ಪ್ರಚೋದಿತವಾಗಿತ್ತು. ರಾಜಗುರುವಿಗೆ ಸಹನೆಯ ಕಟ್ಟೆಯೇ ಒಡೆದು ಹೋಗಿತ್ತು. ಆತ ಸ್ಕಾಟನಾದ್ರು ಆಗಿರಲಿ ಸ್ಯಾಂಡರ್ಸ್ ನಾದ್ರು ಆಗಿರಲೆಂದು ತನ್ನ ಕೈಯಲ್ಲಿದ್ದ ಪಿಸ್ತೂಲಿನ ಟ್ರೀಗರನ್ನು ಎಳೆದೇ ಬಿಟ್ಟ!!… ಇತ್ತ ಭಗತ್ ಸಿಂಗ್‍ನು ಸ್ಟಾಂಡರ್ಸನ ಮೇಲೆ ಗುಂಡು ಹಾರಿಸಲೇ ಬೇಕಾಯಿತು: ತಮ್ಮ ಪಿಸ್ತೊಲಿನ ಐದಾರು ಗುಂಡುಗಳನ್ನೆಲ್ಲ ಖಾಲಿ ಮಾಡಿದರು. ಸ್ಟಾಂಡರ್ಸನ ತಲೆ, ಹೆಗಲು ತೂತಾಗಿ ರಕ್ತದ ಮಡುವಿನಲ್ಲಿ ಉರುಳಾಡಿ ಬೀದಿನಾಯಿಯಂತೆ ಜೀವ ಕಳೆದುಕೊಂಡ. ಬ್ರಿಟೀಷ ಪೋಲಿಸ ಅಧಿಕಾರಿ ಪರ್ನ್ ಮತ್ತು ಇನ್ನಿಬ್ಬರು ಸಿಪಾಯಿಗಳು ಇವರ ಬೆನ್ನ ಹಿಂದೇ ಬಿದ್ದರು. ಭಗತ್‍ಸಿಂಗ್ ಪಿಸ್ತೂಲ ತೋರಿಸಿ ಹೆದರಿಸಿದ; ಅವರು ಮರೆಯಾದರು. ಅನಂತರ ಸ್ವಾಮಿ ನಿಷ್ಟ ಭಾರತೀಯ ಅಧಿಕಾರಿ ಚಂದನಸಿಂಹನೆಂಬವ ಇವರ ಬೆನ್ನಟ್ಟಲಾರಂಭಿಸಿದ. ಚಂದ್ರಶೇಖರ ಅಜಾದ ಆತನಿಗೂ ಅಂತಿಮ ಎಚ್ಚರಿಕೆ ನೀಡಿದ. ಆತ ಕೇಳಲಿಲ್ಲ.. ಕೊನೆಗೆ ಅಜಾದರ ಗುಂಡಿಗೆ ಆತನು ಬೇಟೆಯ ಪ್ರಾಣಿಯಾದ. ಕೆಲವೇ ಕ್ಷಣಗಳಲ್ಲಿ ಭಾರತದ ಕ್ರಾಂತಿ ಕೇಸರಿಗಳು ಅಲ್ಲಿಂದ ಮರೆಯಾದರು.
ಆ ಸಂದರ್ಭದಲ್ಲಿ ಇವರ ಚಲನವಲನಗಳ ಮೇಲೆ ಯಾವುದೇ ಗುಪ್ತಚರರ ಕಣ್ಣಿರಲಿಲ್ಲ. ಒಟ್ಟಾರೆ ಆಗಿನ ಸಮಯದಲ್ಲಿ ಇಡೀ ಇಂಗ್ಲೀಷ ಗುಪ್ತಚರಕ್ಕೆ ಲಕ್ವಾ ಹೊಡದಂತಾಗಿತ್ತು. ಹಗಲಿನಲ್ಲಿಯೇ ಭೀಕರ ಹತ್ಯೆಗಳಾಗಿ ಹೋಗಿದ್ದವು. ಇಡೀ ಇಂಗ್ಲೀಷ್ ಸರ್ಕಾರವೇ ಅಲ್ಲೋಲ ಕಲ್ಲೋಲವಾಯಿತು. ಈ ದೇಶದ ಜನತೆ ನಿದ್ದೆಯಲ್ಲಿದ್ದವರಲ್ಲ, ಗುಲಾಮರೂ ಅಲ್ಲ, ಎಚ್ಚರಗೊಂಡಿದ್ದಾರೆ. ಅದು ಎಂತಹ ಎಚ್ಚರವೆಂದರೇ!? ಪೋಲೀಸ ಠಾಣೆಯ ಎದುರಿಗೆ ಪೋಲೀಸ ಅಧಿಕಾರಿಯನ್ನೆ ರಾಜಾರೋಷವಾಗಿ ಗುಂಡು ಹೊಡೆದು ಕೊಲ್ಲುತ್ತಾರೆಂದರೆ; ಇನ್ನೂ ಇಲ್ಲಿ ನಮ್ಮ ಅಧಿಕಾರ ನಡಿಯೊಲ್ಲ ಎಂಬುದು ಖಾತ್ರಿಯಾಗಿತ್ತು. ಸ್ಯಾಂಡರ್ಸ ಹತ್ಯೆಯಾದ ಬಳಿಕ ಅನೇಕ ಆಂಗ್ಲ ಅಧಿಕಾರಿಗಳು ಭಾರತ ಬಿಟ್ಟು ಪಲಾಯನ ಮಾಡಲಾರಂಭಿಸಿದರು. ಈ ಘಟನೆಯಿಂದ ಸ್ವತಃ ಅವರಿಗೆ 1857ರ ಮಹಾಸಂಗ್ರಾಮದ ನೆನಪಾಗಿರಲೂಬಹುದು..
ಸ್ಯಾಂಡರ್ಸ ಹತ್ಯೆಯ ಬಳಿಕ ಎಲ್ಲ ಕ್ರಾಂತಿಕಾರಿಗಳು ಕಲ್ಕತ್ತೆ ಸೇರಿದರು. ಮುಖ್ಯವಾಗಿ ಕ್ರಾಂತಿಯ ಬೀಜ ಮೊಳಕೆಯೊಡೆಯ ಬೇಕಾದದ್ದೇ ಕಲ್ಕತ್ತದಲ್ಲಿ. ಆಗ ಸ್ಯಾಂಡರ್ಸನನ್ನು ಕೊಲೆ ಮಾಡಿದವರಾರು ಲಾಹೋರಿದಲ್ಲಿರಲಿಲ್ಲ; ಅಷ್ಟೇಯಲ್ಲ ಸ್ಯಾಂಡರ್ಸನನ್ನು ಹತ್ಯೆ ಮಾಡಿದವರಾರು ಪೋಲೀಸರಿಗೆ ಸಿಗಲಿಲ್ಲ. ಭಗತ್‍ಸಿಂಗ್ ಕಲ್ಕತಕ್ಕೆ ಪ್ರಯಾಣಿಸಿದ ನಂತರ ಅಲ್ಲಿನ ತ್ರೈಲೋಕ್ಯನಾಥ ಚಕ್ರವರ್ತಿ ಪಾಣಿಂದ್ರನಾಥಘೋಷ, ಪ್ರಪುಲ್ಲ್ ಗಂಗೂಲಿ, ಜತೀಂದ್ರನಾಥದಾಸ್.. ಹೀಗೆ ಮುಂತಾದ ಹೋರಾಟದ ಮಹಾನುಭಾವರನ್ನು ಭೇಟಿಯಾದ.
ಕ್ರಾಂತಿಕಾರಿಗಳು ಎಂದರೆ ಹತ್ಯಾಕೊರರು ಎಂದು ನಂಬಿದವರಿಗೆ, ಅವರ ಮುಖ್ಯ ಗುರಿ ಏನೆಂದು ತಿಳಿಸಲು ಶಾಸನ ಸಭೆಯಲ್ಲಿ ಬಾಂಬ್ ಎಸೆಯುವ ಕಾರ್ಯಕ್ಕೆ ಮುಂದಾದರು. ಕ್ರಾಂತಿಕಾರಿಗಳು ಸುಖಾ ಸುಮ್ಮನೆ ಹತ್ಯೆ ಮಾಡುವವರಲ್ಲ, ತಮ್ಮ ವಿಚಾರ ಉದ್ದೇಶಗಳೇನೆಂಬುವುದನ್ನು ಸಾಬೀತು ಪಡಿಸಲು 1929ರ ಏಪ್ರಿಲ್ 8 ರಂದು ಶಾಸನ ಸಭೆಯ ಪ್ರೇಕ್ಷಕ ಗ್ಯಾಲರಿಯಲ್ಲಿ ಬಂದು ಕುಳಿತರು. ಶಾಸನ ಸಭೆ ಕಲಾಪ ಅರಂಭವಾಗಿ ಸಭೆಯಲ್ಲಿನ ಎಲ್ಲಾ ಚರ್ಚೆಗಳು ಮುಗಿಯುವ ಹೊತ್ತಿಗೆ ಭಗತ್‍ಸಿಂಗ್ ಯಾರು ಇಲ್ಲದ ಸ್ಥಳದಲ್ಲಿ ಬಾಂಬನ್ನು ಎಸೆದ. ನಂತರ ಎರಡನೆಯ ಬಾಂಬನ್ನು ಎಸೆಯುವ ಹೊತ್ತಿಗೆ ಸಭೆಯ ಸದಸ್ಯರು ಗಾಬರಿಗೊಂಡು ಯಾವ ಕಡೆಗೆ ಓಡಲಾರದಂತಹ ಪರಿಸ್ಥಿತಿ ಉದ್ಭವವಾಯಿತು. ಆಗ ಭಗತ್‍ಸಿಂಗ್ ಮತ್ತು ಬಿ.ಕೆ.ದತ್ತ ತಮ್ಮ ಉಚ್ಚ ಕಂಠದಿಂದ ಇಂಕ್ವಿಲಾಬ್ ಜಿಂದಾಬಾದ್ ಎರಡೆನೆಯ ಬಾರಿಗೆ ಸಮಾಜವಾದಿ ಮುರ್ದಾಬಾದ್ ಎಂದು ಕ್ರಾಂತಿಯ ಘೋಷಣೆ ಕೂಗಿದರು. ಅಲ್ಲಿದ್ದ ಪೊಲೀಸರಿಗೆ ತಾವಾಗಿಯೇ ಬಂಧನ ಮಾಡುವಂತೆ ಆಗ್ರಹಿಸಿದರು.
ಭಗತ್‍ಸಿಂಗ್‍ನ ಬಂಧನವಾದ ಅವರ ಮೇಲೆ ಆರೋಪಗಳ ಸುರಿಮಳೆಯೇ ಆಯಿತು. ಒಂದಕ್ಕೆ ನಾಲ್ಕರಂತೆ ಆರೋಪಗಳ ಪಟ್ಟಿಯನ್ನು ಬ್ರಿಟೀಷರು ತಯಾರಿಸಿದ್ದರು. ಆ ಸಂದರ್ಭದಲ್ಲಿ ಭಗತ್‍ಸಿಂಗರೊಬ್ಬರ ಮೇಲೆಯೆ ಸುಮಾರು ಇಪ್ಪತ್ತಕ್ಕೂ ಅಧಿಕ ಆರೋಪ ಆದವು. ಭಗತ್‍ಸಿಂಗ್ ಬಂಧನದ ನಂತರ ಉಳಿದ ಕ್ರಾಂತಿಕಾರಿಗಳೆಲ್ಲರೂ ಬಂಧೀತರಾದರು. ಇವರ ಬಾಂಬಿನ ಎಲ್ಲ ಕಾರ್ಖಾನೆಗಳು ಬ್ರಿಟೀಷರ ವಶವಾದವು. ಇವರ ವಿಚಾರಣೆಯು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯಲಾರಂಭಿಸಿತು. ಬ್ರಿಟೀಷ ಸರ್ಕಾರ 1930ರ ಅಕ್ಟೋಬರ 7 ರಂದು ತನ್ನ ನ್ಯಾಯ ತೀರ್ಮಾನವನ್ನು ಪ್ರಕಟಿಸಿತು. ಭಗತ್‍ಸಿಂಗ್‍ರ ವಿರುದ್ಧ ಭಾರತೀಯ ದಂಡ ಸಂಹಿತೆ 121 ಮತ್ತು 302ನೇ ವಿಧಿಯನ್ವವಾಗಿ ಉದ್ಧೇಶ ಪೂರ್ವಕವಾಗಿ ಹಾಗೂ ಹೇಡಿತನದಿಂದ ಹತ್ಯೆಯಲ್ಲಿ ತೊಡಗಿದನೆಂಬ ಹೆಸರಿನಡಿ ಮತ್ತು ಕಾಕೋರಿ ಪಿತೂರಿಯ ಪ್ರಮುಖ ಸದಸ್ಯನಾಗಿದನೆಂಬ ಅಪವಾದ ಹೊರಿಸಿ ಭಗತ್‍ಸಿಂಗನಿಗೆ ಸಾಯುವವರೆಗೂ ಕುತ್ತಿಗೆಗೆ ನೇಣು ಹಾಕಬೇಕು ಎಂದು ಶಿಕ್ಷೆ ವಿಧಿಸಿದರು. ಸುಖದೇವ ಮತ್ತು ರಾಜಗುರುವಿಗೂ ಕೂಡ ಇದೇ ರೀತಿಯ ತೀರ್ಪು ನಿಡಲಾಯಿತು. ಭಗತ್‍ಸಿಂಗ್, ಸುಖದೇವ ಮತ್ತು ರಾಜಗುರುವರನ್ನು ನ್ಯಾಯಾಲಯಕ್ಕೆ ತರದೆ ತೀರ್ಪು ನಿಗದಿಗೊಳಿಸಲಾಗಿತ್ತು. 1931 ಮಾರ್ಚ24 ರಂದು ಅವರನ್ನು ಗಲ್ಲಿಗೇರಿಸುವುದೆಂದು ಹೇಳಲಾಯಿತು.
ಆದರೆ ಅದೇ ತಿಂಗಳ ಅಂತ್ಯದಲ್ಲಿ ಕಾಂಗ್ರೇಸ್ ಅಧಿವೇಶನ ಇದ್ದದ್ದರಿಂದ ಒಂದು ದಿನ ಮುಂಚಿತವಾಗಿ (23 ರಂದು) ಗಲ್ಲಿಗೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ, ಸ್ಥಳೀಯ ಪಂಜಾಬ್ ಸರ್ಕಾರಕ್ಕೆ ಆಜ್ಞೆ ಮಾಡಿತು. ಮಾರ್ಚ ತಿಂಗಳ 23ರ ಸಾಯಂಕಾಲದ ಹೊತ್ತಿಗೆ ಜೈಲಿನ ಮುಖ್ಯ ಅಧಿಕಾರಿ ಛೋಪ್ರಾ, ಲಾಹೋರಿನ ಡೆಪ್ಯುಟೀ ಕಮೀಷನರ್, ಜನರಲ್ ಆಪ್ ಪೋಲೀಸ್ ಇನ್ಸಪೇಕ್ಟರ್, ಅಲ್ಲಿನ ಜೈಲಿನ ಇನ್ಸಪೆಕ್ಟರ್, ಹೀಗೆ ನಾಲ್ವರು ಬಂದು ನೇಣುಗಂಬದ ಬಳಿ ನಿಂತರು. ಸಾವಿಗೆ ಸಿದ್ದರಾಗಿಯೇ ಹೋರಾಟದ ಯಜ್ಞಕ್ಕೆ ಧುಮುಕಿದ ಈ ಮಹಾನ್ ಮೂವರು ದೇಶ ಭಕ್ತರು ತಾಯಿ ಭಾರತ ಮಾತೆಯನ್ನು ಸ್ಮರಿಸುತ್ತಾ ಇಂಕ್ವಲಾಬ್ ಜಿಂದಾಬಾದ್ ಎಂದು ಘೋಷನೆ ಕೂಗುತ್ತ ದೇಶದ ಆದರ್ಶ ಪಾಲನೆಗಾಗಿ ಮೃತ್ಯುವನ್ನು ಸಂತೋಷದಿಂದ ಸ್ವೀಕರಿಸುವುದಕ್ಕಾಗಿ ತಮ್ಮನ್ನು ತಾವೇ ತ್ಯಾಗ ಮಾಡಿಕೊಂಡರು.
ಇನ್ನೇನು ನೇಣುಗಂಬವೇರುವ ಕರಾಳ ಹೊತ್ತು. ಕೊನೆಯ ಬಾರಿಗೆ ಭಗತ್ ಸಿಂಗ್, ಸುಖದೇವ್, ರಾಜಗುರುರೆಲ್ಲರೂ ಗಟ್ಟಿಯಾಗಿ ಒಬ್ಬರನೊಬ್ಬರು ತಬ್ಬಿಕೊಂಡರು. ತಾಯಿ ಭಾರತಮಾತೆಯನ್ನು ದಾಸ್ಯ ಮುಕ್ತಗೊಳಿಸಲು ಈ ಮೂವರು ಮಹಾನ ಸಾಧಕರು ತಮ್ಮ ಇಡೀ ಜೀವನದ ಜೊತೆ ಪ್ರಾಣವನ್ನೂ ಮಹಾತ್ಯಾಗ ಮಾಡಿದರು. ದೇಶಕ್ಕಾಗಿ ಸತ್ತು ತೋರಿಸಿದವರ ವಯಸ್ಸು ಇನ್ನೂ ಕೇವಲ ಇಪ್ಪತ್ತೈದು ಕೂಡ ದಾಟಿರಲಿಲ್ಲ. ಭಗತ್ ಸಿಂಗ್ ಸುಖದೇವ್‍ರಿಗೆ ಇಪ್ಪತ್ಮೂರು. ರಾಜಗುರುವರಿಗೆ ಕೇವಲ ಇಪ್ಪತ್ತೆರಡು. ಅಲ್ಪಕಾಲದಲ್ಲಿಯೇ ಆತ್ಮ ಬಲಿದಾನ ಮಾಡಿ ವೀರ ಅಮರರಾದರು.
ಆದರೇ!!….
ಅಂದಿನ ದಿನಗಳಲ್ಲಿ ಈ ಮಹಾನ ಹೋರಾಟಗಾರರಿಗೆ ನೀಡಿದ ಬ್ರಿಟೀಷ್ ಕಾನೂನಿನ ಗಲ್ಲು ಶಿಕ್ಷೆಯನ್ನು ಆವತ್ತಿನ ಕಾಂಗ್ರೇಸಿನ ಒಬ್ಬೆ ಒಬ್ಬ ನಾಯಕನೂ ವಿರೋಧಿಸಲಿಲ್ಲ. ಇಂದಿನ ದಿನಮಾನಗಳಲ್ಲಿ ಅಂತಹ ಮಹಾನ ಬಲಿದಾನಿಗಳ ಜೀವನಗಾಥೆ ಆದರ್ಶವಾಗುತ್ತಿಲ್ಲ. ರಾಷ್ಟ್ರೀಯತೆ ರಾಷ್ಟ್ರಭಿಮಾನ ಮೂಡಿಸುವ ಶೈಕ್ಷಣಿಕ ವ್ಯವಸ್ಥೆಯು ನಮ್ಮಲ್ಲಿ ಇಲ್ಲದಾಗಿದೆ. ಬದಲಿಗೆ ದೇಶ ವಿರೋಧಿ ಮನೋಭಾವಕ್ಕೆ ಕುಮಕ್ಕು ನೀಡುತ್ತಿರುವ ವ್ಯವಸ್ಥೆ ನಮ್ಮ ದೇಶದಲ್ಲಿಂದು ಕಂಡು ಬರುತ್ತಿದೆ. ಮಹಾನ ಬಲಿದಾನಿಗಳನ್ನು ಆದರ್ಶ ವ್ಯಕ್ತಿಗಳನ್ನಾಗಿ ಪಡೆಯದೇ ಅಫ್ಜಲ್‍ಗುರುವಂತಹ ಭಯೋತ್ಪಾದಕರೆ ಹೆಚ್ಚು ಆದರ್ಶ ವ್ಯಕ್ತಿಗಳಾಗಿ ಕಾಣುತ್ತಿದ್ದಾರೆ. ಜೆ.ಎನ್.ಯು ನಂತಹ ಕೇಂದ್ರಿಯನ ವಿಶ್ವವಿದ್ಯಾಲಯದಲ್ಲಿ…. ‘ಕಿತ್ನೆ ಅಫ್ಜಲ್ ಮಾರೋಗೆ, ಘರಘರಸೆ ಅಫ್ಜಲ್ ನಿಕಲೇಗಾ’ (ಎಷ್ಟು ಜನ ಅಫ್ಜಲ್‍ರನ್ನು ಕೋಲ್ಲುತ್ತಿರಿ? ಮನೆ ಮನೆಯಿಂದ ಅಫ್ಜಲ್‍ರು ಹೊರ ಬರುತ್ತಾರೆ.) ಇಂಡಿಯಾ ಗೋ ಬ್ಯಾಕ್, ಇಂಡಿಯಾ ಮುರ್ದಾಬಾದ್, ಮಾವೋ ಜಿಂದಾಬಾದ್, ಪಾಕೀಸ್ತಾನ ಜಿಂದಾಬಾದ್( ಭಾರತವೇ ಹಿಂದೇ ಸರಿ, ಭಾರತಕ್ಕೆ ದಿಕ್ಕಾರ, ಮಾವೋವಾದಿಗೆ ಜಯವಾಗಲಿ, ಪಾಕಿಸ್ತಾನಕ್ಕೆ ಜಯವಾಗಲಿ)..
ಅಷ್ಟೇಯಲ್ಲ 1993ರಲ್ಲಿ ಮುಂಬೈ ಸರಣಿ ಸ್ಪೋಟದ ರುವಾರಿ ಯಾಕುಬ್ ವೆಮುನ್‍ನ ಪರ ವಕಾಲತ್ತು ವಹಿಸಿ ‘ತುಮ್ ಕಿತನೇ ಯಾಕುಬ್ ಮಾರ್ ದೇಂಗೆ? ಹರಘರ್ ಸೆ ಏಕ್ ಏಕ್ ಯಾಕುಬ್ ನಿಕಲೇಗಾ’ (ನೀವು ಎಷ್ಟು ಜನ ಯಾಕುಬ್‍ರನ್ನು ಕೋಲ್ಲುರಿ? ಪ್ರತಿ ಮನೆಯಿಂದ ಒಬ್ಬೊಬ್ಬ ಯಾಕುಬ್ ಮತ್ತೆ ಹುಟ್ಟಿ ಬರತ್ತಾನೆ.)ಎಂಬಂತಹ ದೇಶ ದ್ರೋಹದ ಘೋಷಣೆಯನ್ನು ಹೈದರಾಬಾದಿನ ವಿಶ್ವ ವಿದ್ಯಾಲಯದಲ್ಲಿ ಕೂಗಲಾಯಿತು. ಅಷ್ಟೇ ಯಾಕೆ ಅನೇಕಾನೇಕ ಯೋಧರು ತಮ್ಮ ಜೀವ ಒತ್ತೆ ಇಟ್ಟು ದೇಶ ರಕ್ಷಣೆ ಮಾಡುತಿದ್ದರೇ, ಅಮ್ನೆಷ್ಟಿ ಇಂಟರ್ ನ್ಯಾಷನಲ್ ಎಂಬ ಎನ್.ಜಿ.ಒ.ನ ಘಟನೆಯನ್ನೇ ನೋಡಿ! ದೇಶದಲ್ಲಿದ್ದುಕೊಂಡೇ ದೇಶ ಒಡೆಯಲು ದೇಶ ದ್ರೋಹಿಗಳು ವಿವಿಧ ಸೋಗು ಹಾಕುತಿದ್ದಾರೆ. ಸಿಂಪತಿಗಾಗಿ ಕೆಲವರನ್ನು ಕರೆತಂದು ಮುರಿದ ಮನೆಗಳು ಎಂಬ ಕಾರ್ಯಕ್ರಮ ಆಯೋಜಿಸಿ ಆಜಾದಿ, ಆಜಾದಿ, ಗೋ ಬ್ಯಾಕ್ ಇಂಡಿಯನ್ ಆರ್ಮಿ, ಭಾರತ್ ಕೀ ಬರ್ಬಾದಿ ತಕ್ ಜಂಗ್ ಲಡೇಂಗೆ ವಕ್ತ್ ಆಗಯ ಆಜಾದಿ ಎಂದೂ ಕಿರುಚುತಿದ್ದಾರೆ. ಅಷ್ಟೇ ಅಲ್ಲದೇ ‘ಗುರು ಮೇಹರ್ ಕೌರ್’ ಎಂಬ ಯುವತಿಯ ಬಾಯಿಂದ ದೇಶದ್ರೋಹಿ ಹೇಳಿಕೆಯನ್ನು ನೀಡುವಷ್ಟು ಬೌದ್ಧಿಕ ಭಯೋತ್ಪಾದನೆಗೆ ಕೆಲವೊಂದು ಸಂಘಟನೆಗಳ ಜೊತೆಗೆ ಕೆಲ ವಿಶ್ವವಿದ್ಯಾಲಯದ ಕ್ಯಾಂಪಸ್‍ಗಳು ಕೆಲಸ ಮಾಡುತ್ತಿವೆ. ಇಂತಹ ಘಟನೆಯಿಂದ ಎಂತಹ ರಾಷ್ಟ್ರೀಯತೇಯ ಭಾವ ಬೆಳೆಯುತ್ತಿದೆ ಎಂಬುದನ್ನು ತರ್ಕಿಸಬೇಕಾದದ್ದೆ. ಇಂತಹ ದುಷ್ಕೃತ್ಯಗಳು ಇಂದಿನ ದೌರ್ಭಾಗ್ಯದ ಸಂಗತಿಯಾಗಿದೆ. ಇದನ್ನು ಮೆಟ್ಟಿ ನಿಲ್ಲಲು ನಾವಿಂದು ಜಾಗೃತರಾಗಬೇಕಿದೆ.
ಇಂದು ಆಗಬೇಕಾದದ್ದು ಊರು ಊರುಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ರಂಗ್ ದೇ ಬಸಂತಿಯಂತಹ ಕಾರ್ಯಗಳು ಹೊರತು ಮುರಿದ ಮನೆಗಳಲ್ಲ. ರಾಷ್ಟ್ರದ ಏಳಿಗೆಗಾಗಿ ನಾವು ಸಿದ್ದಗೊಳ್ಳಬೇಕಿದೆ. ಅದಕ್ಕಾಗಿ ಇಂತಹ ಕಾರ್ಯ ನಿರ್ವಹಿಸುವಲ್ಲಿ ರಾಷ್ಟ್ರಭಕ್ತ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿಯಲ್ಲಿ ಸತತ ಎಂಟು ವರ್ಷದಿಂದ ಈ ಹುತಾತ್ಮರ ಬಲಿದಾನವನ್ನು ರಂಗ್ ದೇ ಬಸಂತಿ ಹೆಸರಿನಲ್ಲಿ ನಡೆಸಿಕೊಂಡು ಬರುತಿದೆ. ಇಡೀ ಜಗತ್ತಿಗೊಂದು ಜಗದ್ಗುರು ದೇಶ ಭಾರತವಾದರೆ ಆ ಮಾಹಾನ್ ವ್ಯಕ್ತಿಗಳು ಮಾಡಿದ ಆ ಆತ್ಮ ಬಲಿದಾನ ನಿಜಕ್ಕೂ ಸಾರ್ಥಕವಾಗುತ್ತದೆ.
ಜೈ ಹಿಂದ್.