25 ಮಾರ್ಚ್ 1971: ಬಾಂಗ್ಲಾ ನರಮೇಧದ ದಿನ
– ಶ್ರೇಯಾಂಕ ಎಸ್ ರಾನಡೆ.
ನರಮೇಧವೆಂದರೆ ಉದ್ದೇಶಪೂರ್ವಕವಾಗಿ ಸಮುದಾಯವೊಂದರ ಮೇಲೆ ದೇಶ ಅಥವಾ ಭಿನ್ನ ಸಮುದಾಯದಿಂದ ನಡೆಯಲ್ಪಡುವ ಅಸಂಖ್ಯ ಜನರ ಮಾರಣಹೋಮ. ವಿಶ್ವ ಇತಿಹಾಸದ ವಿಜೃಂಭಿತ ಆಡುಂಬೋಲದಲ್ಲಿ, ಸೋಲು-ಗೆಲುವುಗಳ ರಕ್ತಸಿಕ್ತ ಪುಟಗಳಲ್ಲಿ ಅಸಂಖ್ಯ ನರಮೇಧಗಳು ನಡೆದಿವೆ. ಟರ್ಕರು, ಮಂಗೋಲಿಯನ್ನರು, ಜಪಾನಿಯರು, ಅಮೆರಿಕದ ಆಟಂ ಬಾಂಬ್‍ಗಳು, ಆಧುನಿಕ ಶಕ್ತಿಗಳು; ಹಿಟ್ಲರ್, ಮುಸೊಲೊನಿ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರುವಾರಿ ಜನರಲ್ ಓ ಡಯರ್, ಸದ್ದಾಂ ಹುಸೇನ್, ಐಎಸ್‍ಐಎಸ್‍ನಂತಹ ಮತಾಂಧ ಕೆಡುಕುಗಳು, ಅದೆಷ್ಟೋ ವಿನಾಶಕಾರಿ ಶಕ್ತಿಗಳು, ಯುದ್ಧಪಿಪಾಸು ನರಹಂತಕರು ಹೀಗೆ ಸಾವಿನ ವ್ಯಾಪಾರಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅರ್ಮೆನಿಯಾ, ರವಾಂಡ, ಸುಡಾನ್ ಮೊದಲಾದ ದೇಶಗಳ ಇತಿಹಾಸವೆಂದರೆ ಅದು ನರಮೇಧದ ಕರಾಳ ಇತಿಹಾಸವೆಂಬಂತಾಗಿಬಿಟ್ಟಿದೆ.
ಭಾರತ ಉಪಖಂಡದ ಚರಿತ್ರೆಯಲ್ಲಿಯೂ ಅಧಿಕಾರ ಗದ್ದುಗೆಗಾಗಿ, ಭೂಮಿಯ ಒಡೆತನಕ್ಕಾಗಿ, ಮತಾಂಧ ಶಕ್ತಿಗಳ ಸ್ವಾರ್ಥ ಸಾಧನೆಗಾಗಿ ಅಸಂಖ್ಯ ಮುಗ್ಧರ ಮಾರಣಹೋಮ ನಡೆದಿದೆ. 11-19ನೇ ಶತಮಾನದವರೆಗೂ ಅವಿರತವಾಗಿ ಹಾಗೂ ಅಸಂಖ್ಯವಾಗಿ ಭಾರತದಲ್ಲಿ ನಡೆದಿರುವ ನಿರ್ಲಕ್ಷ್ಯಕ್ಕೊಳಪಟ್ಟ ಅಗಣಿತ ನರಮೇಧಗಳು ಸಾಮ್ರಾಜ್ಯಗಳನ್ನು ಗಟ್ಟಿಗೊಳಿಸಿವೆ. ಕಾಲ ಬೃಹತ್ ಕೋಟೆ ಕೊತ್ತಲಗಳನ್ನೂ, ಪಾಪಕೂಪದ ಸಾಮ್ರಾಜ್ಯಶಾಹಿ ಶಕ್ತಿಗಳನ್ನೂ ಹೇಳಹೆಸರಿಲ್ಲದಂತೆ ನಿರ್ನಾಮಗೊಳಿಸಿದೆ. 1946-47ರ ಹೊತ್ತಿಗೆ ಅಖಂಡ ಭಾರತದ ರಾಜಕೀಯ ವಿಭಜನೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ನಡೆದ ನರಮೇಧವನ್ನು ಆಧುನಿಕ ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೈದರಾಬಾದ್ ಪ್ರಾಂತ್ಯದ ನಿಜಾಮರ ಕೊನೆಯ ದಿನಗಳಲ್ಲಿ ಆ ಪ್ರಾಂತ್ಯದ ಸಾವಿರಾರು ಜನರ ಮೇಲಿನ ಧರ್ಮಾದಾರಿತ ಕೊಲೆಗಳು, 1984ರ ಸಿಖ್ಖರ ನರಮೇಧ, ನಂತರದಲ್ಲಿ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು, ಡೋಗ್ರಿಗಳು ಹಾಗೂ ಇತರರ ಮೇಲೆ ಅವ್ಯಾಗತವಾಗಿ ನಡೆದ-ನಡೆಯುತ್ತಿರುವ ನಿರಂತರ ಹಿಂಸಾಚಾರ, ಕೆಲವರನ್ನು ಗುರಿಯಾಗಿಸಿಕೊಂಡು ನಡೆದ ನರಮೇಧಗಳು ಎಣಿಸಲಾರದಷ್ಟು ಜನರ ಪ್ರಾಣಗಳನ್ನು ಕಿತ್ತುಕೊಂಡಿವೆ. ಈ ಮಧ್ಯೆ ನಡೆದಿರುವ ಅನೇಕ ಕೋಮುಗಲಭೆಗಳಲ್ಲಿನ ನರಮೇಧಗಳು ಮಾನವೀಯ ಮೌಲ್ಯಗಳನ್ನು ಹಿಂದಿಕ್ಕಿ ಸ್ವಾರ್ಥ, ಮತೀಯ ಮೌಢ್ಯಗಳನ್ನು ಮುನ್ನಲೆಗೆ ತಂದಿವೆ. ಇದರಲ್ಲಿ ಪರಸ್ಪರ ಕೆಸರೆರೆಚಾಟವೇ ನಡೆದಿದೆಯೇ ಹೊರತು ಸತ್ಯದ ಅನ್ವೇಷಣೆಯ ಅನಿವಾರ್ಯತೆ ಮತ್ತು ಸತ್ಯದ ಸಾಧ್ಯತೆಯ ಬುನಾದಿಯ ಮೇಲೆ ಸಾವಯವ ಸಮಾಜವನ್ನು ಕಟ್ಟುವ ಪ್ರಯತ್ನವಾಗಲಿಲ್ಲ.
ನಮ್ಮ ಉಪಖಂಡ ಅನೇಕ ನರಮೇಧಗಳಿಗೆ ಸಾಕ್ಷಿಯಾಗಿದೆ. ಶ್ರೀಲಂಕಾ ದೇಶದ ಆಂತರಿಕ ಕಲಹದಲ್ಲಿ ಸತ್ತವರ ಸಂಖ್ಯೆಯೆಷ್ಟೋ? ಈ ಕುರಿತು ತನಿಖೆಯಿನ್ನೂ ಪ್ರಾರಂಭಗೊಂಡಿಲ್ಲ. ಪಾಕಿಸ್ತಾನದ ಪಂಜಾಬ್, ಸಿಂಧ್, ಗಿಲ್ಗಿಟ್, ಬಲೂಚಿಸ್ಥಾನ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಅನಾಮತ್ತಾಗಿ ನರಮೇಧ ನಡೆಯುತ್ತಿದೆ. ತಾಲಿಬಾನ್ ಪೀಡಿತ ಅಫಘಾನಿಸ್ಥಾನಲ್ಲಿ ಶಾಂತಿಯೆಂಬುದು ಮರೀಚಿಕೆಯಾಗಿಯೇ ಉಳಿದಿದೆ. ಇನ್ನು ಬಾಂಗ್ಲಾದೇಶದ್ದು ಭಿನ್ನವಾದ ಕಥೆ.
ಭಾರತದ ಪೂರ್ವದಿಕ್ಕಿನಲ್ಲಿರುವ ನೆರೆಯ ರಾಷ್ಟ್ರ ಬಾಂಗ್ಲಾದೇಶದ ವಿಮೋಚನೆಯ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಅದರ ಸೇನೆ ತನ್ನ ನೈಜ ಸ್ವರೂಪವನ್ನು ಮತ್ತೊಮ್ಮೆ ಪ್ರದರ್ಶಿಸಿತು. ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದ ತನ್ನ ಚಾಳಿಯನ್ನು 1970-71ರ ಹೊತ್ತಿಗೆ ತನ್ನೆಲ್ಲ ಸಾಮರ್ಥ್ಯವನ್ನು ದುರುಪಯೋಗಪಡಿಸಿಕೊಂಡು ಬಾಂಗ್ಲಾದೇಶದ ಪ್ರಜೆಗಳ ಮೇಲೆ ನಿರಂತರ ಅತ್ಯಾಚಾರ, ದಬ್ಬಾಳಿಕೆ ಹಾಗೂ ಮಾರಣಹೋಮವನ್ನು ತೀವ್ರಗೊಳಿಸಿತ್ತು. ಈ ಕುರಿತು ಒಂದೇ ಒಂದು ವರದಿಯು ಪ್ರಕಟವಾಗದಂತೆ ಅದು ನೋಡಿಕೊಳ್ಳುತ್ತಿತ್ತು. ಹೊರಗಿನ ಪತ್ರಕರ್ತರಿಗೆ ಅಲ್ಲಿ ಪ್ರವೇಶವಿರಲಿಲ್ಲ. ಒಳಗಿನವರು ಪಾಕಿಸ್ತಾನದ ಸೇನೆಗೆ ವಿರುದ್ಧವಾಗಿ ಏನನ್ನೂ ಪ್ರಕಟಿಸುವಂತಿರಲಿಲ್ಲ. ಬಾಂಗ್ಲಾದೇಶವನ್ನು ಜೀವಂತ ದೇಶವಾಗಿ ಅದೆಂದೂ ಕಂಡಿರಲಿಲ್ಲ. ಭಾರತವನ್ನು ಒಡೆಯುವುದಕ್ಕೆ ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಕೇವಲ ದಾಳವಾಗಿತ್ತು. ಅಸಲಿಗೆ ತನ್ನ ದೇಶವನ್ನೇ ಸರಿಯಾಗಿ ಮುನ್ನಡೆಸಲು ಅಸಮರ್ಥ ದೇಶಕ್ಕೆ ಬಾಂಗ್ಲಾದೇಶ ಶೋಕಿಯ ಬೂಟಾಟಿಕೆಯಾಗಿತ್ತು. ಪೂರ್ವಪಾಕಿಸ್ತಾನ ಮೂಲ ಪಾಕಿಸ್ತಾನಕ್ಕೆ ಅಡಿಯಾಳಾಗಿದ್ದಂತಿತ್ತು. ಭಾರತದ ಇನ್ನಷ್ಟು ಪ್ರಾಂತ್ಯಗಳನ್ನು ಒಡೆದು ಮುಸ್ಲಿಂ ಬಾಹುಳ್ಯವಿರುವ ಅಖಂಡ ಪಾಕಿಸ್ತಾನವನ್ನು ಕಟ್ಟುವುದು ಅದರ ಗುರಿಯಾಗಿತ್ತು. ಭಾರತವನ್ನು ತುಂಡಾಗಿಸುತ್ತಾ ಇಡೀ ಉಪಖಂಡವನ್ನೇ ಕಬಳಿಸುವುದು ಅದರ ಉದ್ದೇಶವಾಗಿತ್ತು. ಆದರೆ ಸರ್ದಾರ್ ವಲ್ಲಭಬಾಯಿ ಪಟೇಲ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ರಾಜಸ್ಥಾನದ ಜೈಸಲ್‍ಮೆರ್‍ನಿಂದ ಅಸ್ಸಾಂಮಿನವರೆಗೆ ಭಾರತವನ್ನು ಒಂದುಗೂಡಿಸಿ ಉಕ್ಕಿನ ಮನುಷ್ಯರೆನಿಸಿಕೊಂಡರು.
ದಬ್ಬಾಳಿಕೆ, ಹಿಂಸೆ, ಕೊಲೆ ಮತ್ತು ಭಯದ ತಂತ್ರಗಳಿಂದ ಬಾಂಗ್ಲಾ ವಿಮೋಚನೆಯ ಹೋರಾಟವನ್ನು ಸುಲಭವಾಗಿ ಹತ್ತಿಕ್ಕಬಹುದೆಂಬುದು ಪಾಕಿಸ್ತಾನದ ಲೆಕ್ಕಾಚಾರವಾಗಿತ್ತು. ಆದರೆ ಅದರ ಊಹೆ ದಿನದಿಂದ ದಿನಕ್ಕೆ ಸುಳ್ಳಾಗುತ್ತಾ ಸಾಗಿತ್ತು. ಬಾಂಗ್ಲಾ ವಿಮೋಚನೆಗೆ ಭಾರತದ ಪರೋಕ್ಷ ಹಾಗೂ ಪ್ರತ್ಯಕ್ಷ ಬೆಂಬಲ ಹೋರಾಟಗಾರರ ಆಸ್ಥೆಯನ್ನು ಇಮ್ಮಡಿಗೊಳಿಸಿತ್ತು. ಪ್ರಾರಂಭದಲ್ಲಿ ಬಾಂಗ್ಲಾ ವಿಮೋಚನಾಕಾರ ಹೋರಾಟಗಾರರಿಗೆ ಭಾರತೀಯ ಭೂಸೇನೆ ಪಾಕಿಸ್ತಾನ ಸೇನೆಯ ವಿರುದ್ಧ ಹೋರಾಡಲು ಅಗತ್ಯ ತರಬೇತಿಯನ್ನು ನೀಡಿತು. ಸುಮ್ಮನೆ ಇರಲಾಗದ ಪಾಕಿಸ್ತಾನ ಭಾರತದ ವಾಯುನೆಲೆಗಳ ಮೇಲೆ ದಾಳಿಯನ್ನು ಮಾಡತೊಡಗಿತು. ಇದಕ್ಕುತ್ತರವಾಗಿ ಭಾರತ ಪಾಕಿಸ್ತಾನದ ಮೇಲೆ ನೇರ ಯುದ್ಧವನ್ನು ಸಾರಿತು. ಈ ಯುದ್ಧದಿಂದ ಕಂಗಾಲಾದ ಪಾಕಿಸ್ತಾನ ಎರಡು ಗಡಿಗಳನ್ನೂ ರಕ್ಷಿಸಿಕೊಳ್ಳಲಾಗದೆ ಭಾರತಕ್ಕೆ ಶರಣಾಯಿತು. 03 ಡಿಸೆಂಬರ್ 1971 ಕ್ಕೆ ಪ್ರಾರಂಭವಾದ ಯುದ್ಧ ಕೇವಲ 13 ದಿನಗಳಲ್ಲಿ ಅಂದರೆ ಡಿಸೆಂಬರ್ 16, 1971ರಲ್ಲಿ ಢಾಕಾದ ಪತನದೊಂದಿಗೆ ಕೊನೆಗೊಂಡಿತು. ಹೀಗೆ ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟಿದ್ದ, ಅದರ ಸೇನೆಯ ಶೋಷಣೆಯಿಂದ ಬೇಸತ್ತಿದ್ದ ಪೂರ್ವ ಪಾಕಿಸ್ತಾನ 1971ರಲ್ಲಿ ಭಾರತದ ನೆರವಿನಿಂದ ಬಾಂಗ್ಲಾದೇಶವಾಗಿ ವಿಮೋಚನೆ ಪಡೆಯಿತು.
1971ರ ಮಾರ್ಚ್ 25ರಂದು ಏನಾಯಿತು ?
1970ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಮುಜಿಬುರ್ ರೆಹಮಾನ್ ಬಹುಮತದಿಂದ ಗೆದ್ದಿದ್ದರೂ ಪಾಕಿಸ್ತಾನ ಸೇನೆ ಅಧಿಕಾರವನ್ನು ಹಸ್ತಾಂತರಿಸಲು ನಿರಾಕರಿಸಿತ್ತು. ಇದು ರಾಷ್ಟ್ರೀಯವಾದಿಗಳನ್ನು ಮೊದಲೇ ಕೆರಳಿಸಿತ್ತು. 1971ರ ಹೊತ್ತಿಗೆ ತಮ್ಮ ಬೇಡಿಕೆ ಮತ್ತು ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸತೊಡಗಿದ್ದರು. ಇದನ್ನು ಹೇಗಾದರೂ ದಮನಿಸಲೇಬೇಕೆಂಬ ಉದ್ದೇಶದಿಂದ 25 ಮಾರ್ಚ್ 1971ರಂದು ಪಾಕಿಸ್ತಾನ ಸೇನೆ ಜಮಾತ್-ಎ-ಇಸ್ಲಾಮಿ ಎಂಬ ಮೂಲಭೂತ ಸಂಘಟನೆಯೊಂದಿಗೆ ಸೇರಿಕೊಂಡು, ಬೆಂಗಾಲಿ ರಾಷ್ಟ್ರೀಯವಾದಿ ಚಳುವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ, ಢಾಕಾದಲ್ಲಿ ”ಆಪರೇಶನ್ ಸರ್ಚ್‍ಲೈಟ್(ಹುಡುಕುವ ದೀಪ)”ಅನ್ನು ಪ್ರಾರಂಭಿಸಿತು. 25ರ ಕರಾಳ ರಾತ್ರಿಯ ದಿನ ಢಾಕಾ ವಿಶ್ವವಿದ್ಯಾನಿಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆನಡೆಸಲಾಯಿತು. ಅಧಿಕೃತ ದಾಖಲೆಗಳ ಪ್ರಕಾರ 25ರ ರಾತ್ರಿ ಸುಮಾರು 7,000 ಜನರ ಹತ್ಯೆಯಾಯಿತು. 3,000 ಜನರನ್ನು ವಿನಾಕಾರಣ ಬಂಧಿಸಲಾಯಿತು. ಈ ಬೃಹತ್ ಆಘಾತದಿಂದ ಬೇಸತ್ತ ಬೆಂಗಾಲಿ ರಾಷ್ಟ್ರೀಯವಾದಿಗಳು ಮುಜಿಬುರ್ ರೆಹಮಾನ್ ನೇತೃತ್ವದಲ್ಲಿ “ಬಾಂಗ್ಲಾ ವಿಮೋಚನೆ ಅಥವಾ ಬಾಂಗ್ಲಾ ಸ್ವಾತಂತ್ರ್ಯ”ದ ಕರೆಯನ್ನು ನೀಡಲಾಯಿತು. ಇದೇ ಅಧಿಕೃತವಾಗಿ ವಿಮೋಚನಾ ಯುದ್ಧಕ್ಕೆ ನಾಂದಿಹಾಡಿತು. ಇದು 1942ರಲ್ಲಿ ಗಾಂಧೀಜಿ ನೀಡಿದ “ಭಾರತ ಬಿಟ್ಟು ತೊಲಗಿ” ಕರೆಯಷ್ಟೇ ಮಹತ್ವದ್ದು. ಬಾಂಗ್ಲಾ ವಿಮೋಚನಾ ಯುದ್ಧವನ್ನು ಸುಭಾಷ್ ಚಂದ್ರ ಬೋಸ್‍ರ ಇಂಡಿಯನ್ ನ್ಯಾಶನಲ್ ಆರ್ಮಿಯ ಸಮರದ ಪ್ರಯತ್ನಕ್ಕೆ ಸರಿಸಮಾನಾಗಿ ನೋಡಬಹುದು.
ಪಾಕಿಸ್ತಾನದ ಪ್ರತಿಕ್ರಿಯೆಯೇನು?
ರಾಷ್ಟ್ರೀಯವಾದಿಗಳ ಈ ಪ್ರತಿಕ್ರಿಯಾತ್ಮಕ ಬೆಳವಣಿಗೆಯನ್ನು ಅಪೇಕ್ಷಿಸದಿದ್ದ ಪಾಕಿಸ್ತಾನದ ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಬುಟ್ಟೋ ಕಣ್ಣೊರೆಸುವ ತಂತ್ರವಾಗಿ ಮಾರ್ಚ್ 25ರ ನರಮೇಧವನ್ನು ತನಿಖೆ ನಡೆಸಲು ನ್ಯಾಯಾಂಗ ಸಮಿತಿಯನ್ನು ರಚಿಸುತ್ತಾರೆ. ಜಸ್ಟೀಸ್ ಹಮೂದುರ್ ನೇತೃತ್ವದ ಸಮಿತಿ ತಮ್ಮ ಆಮೆಗತಿಯ ತನಿಖೆಯನ್ನು 1974ರಲ್ಲಿ ಪೂರ್ಣಗೊಳಿಸುತ್ತಾರೆ. ಆ ತನಿಖೆಯ ವರದಿಯನ್ನು ಮೂರು ದಶಕಗಳ ಕಾಲ ಸಾರ್ವಜನಿಕವಾಗಿ ಬಹಿರಂಗಪಡಿಸಲಿಲ್ಲ. 2004ರಲ್ಲಿ ಸಾರ್ವಜನಿಕವಾಗಿ ಹೊರಬಂದ ವರದಿಯಲ್ಲಿ ಪಾಕಿಸ್ತಾನಿ ಸೇನೆಯ ಬೃಹತ್ ಪ್ರಮಾಣದ ಹಿಂಸಾಚಾರವನ್ನು ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ನಡೆದ ನರಮೇಧದ ಉನ್ನತ ತನಿಖೆ ನಡೆಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದು ಇಂದಿಗೂ ಜಾರಿಯಾಗಿಲ್ಲ. ನ್ಯಾಯಾಂಗ ಸಮಿತಿಯ ಪ್ರಕಾರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಹತ್ಯೆಗೀಡಾದವರ ಒಟ್ಟು ಸಂಖ್ಯೆ ಕೇವಲ 26,000 ಮಾತ್ರ. ಇದಂತು ಸತ್ಯದಿಂದ ದೂರವಾದ ಲೆಕ್ಕಾಚಾರ. ಆದರೆ ಬಾಂಗ್ಲಾದೇಶದ ಸರಕಾರಿ ದಾಖಲೆಗಳ ಪ್ರಕಾರ 1971ರ ಬಾಂಗ್ಲಾ ಸ್ವಾತಂತ್ರ್ಯ ಚಳುವಳಿಯಲ್ಲಿ ಕನಿಷ್ಟ 30,00,000ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 10,000 ಲಕ್ಷ ಜನರು ನಿರಾಶ್ರಿತರಾಗಿದ್ದರು. ಇವರಲ್ಲಿ ಹೆಚ್ಚಿನವರು ಅರಸಿ ಬಂದಿದ್ದು ಭಾರತದ ಆಶ್ರಯವನ್ನು. ಬಾಂಗ್ಲಾದೇಶಿಯರ ಮೇಲೆ, ಮಾನವೀಯತೆಯ ಮೇಲೆ ಇಷ್ಟೆಲ್ಲ ಹಿಂಸಾಚಾರ, ಅನಾಚಾರ, ಮಾರಣಹೋಮಗಳಿಗೆ ಕಾರಣವಾದ ಪಾಕಿಸ್ತಾನ ತನ್ನ ದುಷ್ಕೃತ್ಯಗಳಿಗೆ ಶಿಕ್ಷೆ ಅನುಭವಿಸುವುದು ದೂರದ ಮಾತು ಕನಿಷ್ಟ ಕ್ಷಮೆಯನ್ನೂ ಕೋರಿಲ್ಲ. ಇದು ಅದರ ದಾಷ್ಟ್ಯದ ಆಂತರಿಕ ಸಹಜ ರೂಪ. ತಪ್ಪನ್ನು ಒಪ್ಪಿಕೊಳ್ಳದ, ತಪ್ಪಿನ ಅರಿವೇ ಇಲ್ಲದ ದೇಶಕ್ಕೆ ಮಾತ್ರ ಯಾವುದೇ ಪಾಪಪ್ರಜ್ಞೆಯಿಲ್ಲದೆ ಸದಾಕಾಲ ಭಯೋತ್ಪಾದನೆಯ ತಳಿಸಂವರ್ಧನೆಯ ಕೇಂದ್ರವಾಗಿ ಮುಂದುವರೆಯಲು ಸಾಧ್ಯ.
ನರಮೇಧದ ದಿನವಾಗಿ:
ಅನೇಕ ವರ್ಷಗಳಿಂದ ಬಾಂಗ್ಲಾ ವಿಮೋಚನಾ ಸಂದರ್ಭದಲ್ಲಿ ಅಸಂಖ್ಯ ಜನಸಾಮಾನ್ಯರ ಮೇಲೆ ಪಾಕಿಸ್ತಾನ ನಡೆಸಿದ ಹಿಂಸಾಚಾರಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಬೇಕೆಂಬುದು ಎಲ್ಲಾ ವರ್ಗದವರ ಒತ್ತಾಸೆಯಾಗಿತ್ತು. ಇದಕ್ಕಾಗಿ ಅನೇಕ ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಅನೇಕ ಸಂದರ್ಭಗಳಲ್ಲಿ ಈ ಸಂಗತಿಯನ್ನು ಮುನ್ನಲೆಗೆ ತರುವ ಪ್ರಯತ್ನವನ್ನು ಮಾಡಲಾಗುತ್ತಿತ್ತು. ಬಾಂಗ್ಲಾದೇಶದ ಸಂಸತ್ತಿನಲ್ಲಿ ಅನೇಕ ಬಾರಿ ಈ ಕುರಿತು ನಿರ್ಣಯವನ್ನು ತೆಗೆದುಕೊಳ್ಳುವಂತೆ ಚರ್ಚೆಗಳಾಗಿತ್ತು. ಅದರಂತೆ 11 ಮಾರ್ಚ್ 2017ರಂದು ಬಾಂಗ್ಲಾದೇಶದ ಲೋಕಸಭೆ ಈ ನಿರ್ಣಯವನ್ನು ಅಂಗೀಕರಿಸುವಂತೆ ಹಕ್ಕೊತ್ತಾಯವನ್ನು ಮಂಡಿಸಲಾಯಿತು. ಶೇಕ್ ಹಸಿನಾ ಸರಕಾರ 25 ಮಾರ್ಚ್ ನ್ನು ನರಮೇಧ ದಿನವನ್ನಾಗಿ ಗುರುತಿಸಲು ಒಪ್ಪಿಕೊಂಡಿತು. ಅಂತರಾಷ್ಟ್ರೀಯ ಮಟ್ಟದಲ್ಲೂ ಈ ಕುರಿತು ಧ್ವನಿಯೆತ್ತಲು ಕ್ರಮಕೈಗೊಂಡಿದೆ. ವಿಶ್ವಸಂಸ್ಥೆ ಈಗಾಗಲೇ ಡಿಸೆಂಬರ್ 9ರಂದು ಅಂತರಾಷ್ಟ್ರೀಯ ನರಮೇಧದ ದಿನವನ್ನಾಗಿ ಗುರುತಿಸಿದೆ. ಅದರ ಜೊತೆಗೆ ಮಾರ್ಚ್ 25ನ್ನೂ ನರಮೇಧದ ದಿನವನ್ನಾಗಿ ಗುರುತಿಸುವ ಮೂಲಕ ಅಸಂಖ್ಯ ಅಮಾಯಕರ ಬಲಿದಾನವನ್ನು ಗುರುತಿಸಬೇಕೆನ್ನುವುದು ಮತ್ತು ಪಾಕಿಸ್ತಾನ ನಡೆಸಿದ ಸಮಗ್ರ ಹಿಂಸಾಚಾರಗಳು ಲೋಕದ ಕಾಣ್ಕೆಗೆ ಬರಬೇಕೆಂಬುದು ಇದರ ಸದಾಶಯ.
ಪ್ರಸ್ತುತ ಸನ್ನಿವೇಶವೇನು?
ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶ ಪಾಕಿಸ್ತಾನದೊಂದಿಗೆ ಕೈಜೋಡಿಸಿ ದೇಶವಿರೋಧಿ ಕೃತ್ಯವೆಸಗಿದ ತನ್ನ ನೆಲದೊಳಗಿನ ಜಮಾತ್-ಎ-ಇಸ್ಲಾಮಿ ಸಂಘಟನೆಯಂತಹ ಯುದ್ಧ-ಅಪರಾಧಿಗಳನ್ನು(ವಾರ್ ಕ್ರಿಮಿನಲ್ಸ್) ನ್ಯಾಯಯುತವಾಗಿ ಶಿಕ್ಷಿಸಲು ಪ್ರಾರಂಭಿಸಿದೆ. ಅಂದಿನಿಂದಲೂ ಪಾಕಿಸ್ತಾನದೊಂದಿಗಿನ ದ್ವಿಪಕ್ಷಿಯ ಸಂಬಂಧ ಬಿರುಕುಗೊಳ್ಳತೊಡಗಿದೆ. ಈಗ ಬಾಂಗ್ಲಾದೇಶ ತನ್ನ ದೇಶದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳನ್ನು ವಿಶ್ವಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಕಳುಹಿಸಿ ಮಾರ್ಚ್ 25ನ್ನು “ಅಂತರಾಷ್ಟ್ರೀಯ ಬಾಂಗ್ಲ ನರಮೇಧ”ವನ್ನಾಗಿ ಪರಿಗಣಿಸಲು ಕೇಳಿಕೊಂಡಿದೆ. ಇದು ಮಾನ್ಯವಾದರೆ ಪಾಕಿಸ್ತಾನ ನಡೆಸಿದ ಎಲ್ಲಾ ಬಗೆಯ ಹಿಂಸಾಚಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗುವ ಅವಕಾಶ ದೊರೆತಂತಾಗುತ್ತದೆ.
ಭಾರತದೊಂದಿಗೆ ಬಾಂಗ್ಲಾ:
1971ರಲ್ಲಿ ಬಾಂಗ್ಲಾ ವಿಮೋಚನೆಯಾದಾಗಿನಿಂದಲೂ, ಆ ದೇಶಕ್ಕೆ ಭಾರತ ಮೊದಲ ಮಿತ್ರ. ತನ್ನ ಬಿಡುಗಡೆಗೆ ಶ್ರಮಿಸಿದ ಏಕೈಕ ರಾಷ್ಟ್ರ ಎಂಬ ಅರಿವಿನ ಜೊತೆಗೆ ತನ್ನೆಲ್ಲ ಮೂಲಭೂತ ಬೆಳವಣಿಗೆಗೂ ಅದು ಅವಲಂಬಿತವಾಗಿರುವುದು ಭಾರತದ ಮೇಲೆ. ದಿವಂಗತ ಪಿ ವಿ ನರಸಿಂಹರಾವ್ ಆರಂಭಿಸಿದ “ಪೂರ್ವಕ್ಕೆ ನೋಡು” ಯೋಜನೆ ಮೋದಿಯವರ ಕಾಲದಲ್ಲಿ “ಪೂರ್ವದತ್ತ ಕಾರ್ಯನಿರ್ವಹಿಸು” ಆಗಿ ಪರಿವರ್ತನೆಯಾಗಿರುವುದು ಬಾಂಗ್ಲಾದೇಶ, ಮ್ಯಾನ್ಮಾರ್ ದೇಶಗಳಿಗೆ ವರದಾನ. ಸಾಗರ ಕೇಂದ್ರಿತ ನೀಲಿ ಆರ್ಥಿಕತೆಯಿಂದ ನೀರು, ವಿದ್ಯುತ್, ಅಂತರ್ಜಾಲ ಸಂಪರ್ಕದವರೆಗೆ ಬಾಂಗ್ಲಾದೇಶ ಅವಲಂಬಿತವಾಗಿರುವುದು ಭಾರತದ ಮೇಲೆ. ಅದೇ ರೀತಿ ಸದೃಢ ಬಾಂಗ್ಲಾದೇಶ ಭಾರತದ ಪೂರ್ವಾಂಚಲ ದೇಶಗಳ ಸುಸ್ಥಿರತೆ ಮತ್ತು ಬೆಳವಣಿಗೆಗೆ ಪೂರಕ. ತ್ರಿಪುರ ರಾಜ್ಯಕ್ಕೆ ವಿದ್ಯುತ್, ಸಂಪರ್ಕ ಹಾಗೂ ಜಲಸಾರಿಗೆ ವ್ಯವಸ್ಥೆ ದೊರೆಯುತ್ತಿರುವುದು ಬಾಂಗ್ಲಾದೇಶದಿಂದ. 2014ರ ಲ್ಯಾಂಡ್ ಬೌಂಡರಿ ಅರ್ಗಿಮೆಂಟ್ ಎರಡೂ ದೇಶಗಳ ನಡುವಿನ ಶಾಶ್ವತ ಸಹಕಾರಕ್ಕೆ ಬುನಾದಿಯಾಗಲಿದೆ. ಎರಡೂ ದೇಶಗಳು ಬಂಗಾಳ ಕೊಲ್ಲಿ ಬಹುಕ್ಷೇತ್ರಿಯ ಮತ್ತು ಆರ್ಥಿಕ ಸಹಯೋಗದಡಿ “ಬಿಮ್ಸ್‍ಟೆಕ್” ವಿಶೇಷವಾಗಿ ಪರಸ್ಪರ ಬೆಳವಣಿಗೆ ಹಾಗೂ ಭಯೋತ್ಪಾದನಾ ನಿಗ್ರಹಕ್ಕಾಗಿ ಜಂಟಿಯಾಗಿ ಹೋರಾಡುತ್ತಿವೆ. ಇದು ಬಾಂಗ್ಲಾ ದೇಶದ ನರಮೇಧೀಯ ಇತಿಹಾಸದಿಂದ ಹೊರಬರುವುದಕ್ಕೆ ಹಾಗೂ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗಲಿದೆ.
ನವ ಬಾಂಗ್ಲಾದೇಶ ಬದಲಾಗಬಯಸುತ್ತಿದೆ. ಅದೇ ಹೊತ್ತಿಗೆ ಅನೇಕ ಸ್ವಯಂತಂತ್ರವಾದಿ, ಉದಾರವಾದಿ ಮುಕ್ತ ಚಿಂತಕ ಬರಹಗಾರರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಬಡ ಅಲ್ಪಸಂಖ್ಯಾತ ಪಾಡು ಶೋಚನೀಯವಾಗಿದೆ. ಪ್ರಜಾಪ್ರಭುತ್ವ ಬಂದಿದ್ದರೂ ಆಗಾಗ ಅರಾಜಕ ಸಮಾಜದ ದೌರ್ಬಲ್ಯ ಗೋಚರಿಸುತ್ತದೆ. ಅಲ್ಲಿನ ಜನರ ಜೀವನಮಟ್ಟ ಇಂದಿಗೂ ಸುಧಾರಿಸಿಲ್ಲ. ಶ್ರೀಮಂತ ಮತ್ತು ಬಡವರ ಹಾಗೂ ಅಭಿವೃದ್ಧಿಹೊಂದಿದ ಮತ್ತು ಹಿಂದುಳಿದವುಗಳ ಕಂದಕ ಆಳವಾಗಿದೆ. ಇದರ ಜೊತೆಗೆ ನಿರುದ್ಯೋಗ ಮತ್ತು ಜನಸಂಖ್ಯಾಸ್ಫೋಟ, ತಳಮಟ್ಟದಲ್ಲಿ ಉತ್ತಮ ಅವಕಾಶಗಳ ಕೊರತೆಯ ಪರಿಣಾಮ ಹೊರ-ವಲಸೆ ಅನಾಯಾಸವಾಗಿ ಮುಂದುವರೆದಿದೆ.
ನರಮೇಧದ ಕಹಿ ನೆನಪುಗಳನ್ನು ಮುಖ್ಯಭೂಮಿಕೆಯ ಚರ್ಚೆಯ ನೆಲೆಗೆ ತಂದು ದೇಶ ವಿಮೋಚನೆಗಾಗಿ ಬಲಿಯಾದ ಅಮಾಯಕರನ್ನು ಗುರುತಿಸುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕಾದ್ದು ಅನಿವಾರ್ಯವೇ. ಅದೇ ರೀತಿ ತನ್ನ ಗತದ ತಪ್ಪುಗಳನ್ನು ತಿದ್ದಿಕೊಂಡು ಮುಂದುವರೆಯಬೇಕಾದ್ದು ಕಾಲದ ಅನಿವಾರ್ಯತೆ ಕೂಡ. ಆದರೆ ತನ್ನ ಗತವನ್ನು ಹಿಂದಿಕ್ಕಿ ಅಭಿವೃದ್ಧಿ ಹೊಂದಲು ಬಯಸುತ್ತಿರುವ ಬಾಂಗ್ಲಾದೇಶ ಇಂದಿಗೂ ಪಾಕಿಸ್ತಾನದ ಆಳ್ವಿಕೆಯ ರಿಕ್ಥತೆಯನ್ನು ಹುದುಗಿಸಿಕೊಂಡು ಸಂಕೀರ್ಣ ಬೆಳವಣಿಗೆಯ ಹಾದಿಯನ್ನು ಹಿಡಿದಿರುವಂತೆ ತೋರುತ್ತದೆ. ಮೂಲಭೂತವಾದದ ಛಾಯೆ ನವ ಸಮಾಜದಲ್ಲಿಯೂ ಆಳವಾಗಿ ಬೇರುತ್ತಿರುವುದು ಹಾಗೂ ತಸ್ಲೀಮಾ ನಸ್ರೀನ್‍ರ ‘ಲಜ್ಜಾ’ದಲ್ಲಿ ಕಾಣುವ ಚಿತ್ರಣ ಇಂದಿಗೂ ಮುಂದುವರೆಯುತ್ತಿರುವುದು ಬಾಂಗ್ಲಾದ ಭವಿತವ್ಯಕ್ಕೆ ಮಾರಕವಾದ ಸಂಗತಿ. ನರಮೇಧದ ಭಯಂಕರ ದಿನಗಳನ್ನು ಅನುಭವಿಸಿದ ದೇಶಕ್ಕೆ ಪ್ರತಿಯೊಂದು ಜೀವದ ಬೆಲೆಯೂ ಚೆನ್ನಾಗಿ ತಿಳಿದಿರಬೇಕು. ಇಲ್ಲವಾದಲ್ಲಿ ಹಿಂಸೆಯ ವಿರಾಟ್ ಸ್ವರೂಪ, ಸಾಂಸ್ಥಿಕ ರೂಪದಿಂದ ಸಾಮಾಜಿಕ ಸ್ವರೂಪದಲ್ಲಿ ನಿರಂತರವಾಗಿ ಮುಂದುವರೆಯುವ ಅಪಾಯವಿದೆ. ಈಗಿನ ಬಾಂಗ್ಲಾದೇಶ, ರವೀಂದ್ರನಾಥ ಟ್ಯಾಗೋರ್ ಬರೆದಂತೆ “ಅಮರ್ ಸೋನಾ ಬಾಂಗಾ” ಆಗಬೇಕಾದರೆ ಪಾಕಿಸ್ತಾನದ ಜಾಡನ್ನು ಸಂಪೂರ್ಣವಾಗಿ ಕಳಚಿಕೊಂಡು ತನ್ನೊಳಗಿನ ಅಮರಪ್ರಜ್ಞೆಯಿಂದ ಅದು ಎದ್ದುಬರಬೇಕು. ಯಾಕೆಂದರೆ 21ನೇ ಶತಮಾನ ಭಾರತ ಉಪಖಂಡದ್ದಾಗಬೇಕಾದರೆ ಬಾಂಗ್ಲಾ ಸಂದಿಯಲ್ಲಿ ಹಾಗೆಯೇ ಮುಳುಗಿಹೋಗಬಾರದು. ನರಮೇಧದ ಸಾಕ್ಷಿಪ್ರಜ್ಞೆ ನವಸಮಾಜದ ನವನವೋನ್ಮೇಶಶಾಲಿ ನಾಡಿಗೆ-ನಾಳೆಗೆ ನಾಂದಿಹಾಡಲಿ.