ನಿಮ್ಮ ಮಕ್ಕಳನ್ನು ಗಿಣಿಯಂತೆ ಸಾಕಿ ಪ್ರಗತಿಪರರ ಕೈಗೊಪ್ಪಿಸಬೇಡಿ..
– ಪ್ರವೀಣ್ ಕುಮಾರ್ ಮಾವಿನಕಾಡು
ಆಕೆ ನನಗಿಂತಾ ಎರಡು ಮೂರು ವರ್ಷ ದೊಡ್ಡವಳು. ನನ್ನದೇ ಶಾಲೆಯಲ್ಲಿ ನನ್ನ ಹಿರಿಯ ವಿದ್ಯಾರ್ಥಿಯಾಗಿದ್ದವಳು. ನನ್ನಂತೆಯೇ ನಾಲ್ಕೈದು ಮೈಲಿ ದೂರದಿಂದ ಗದ್ದೆ, ಬಯಲು, ಗುಡ್ಡ, ಹಾಡ್ಯ, ಒಳ ದಾರಿಗಳನ್ನು ದಾಟಿ ಶಾಲೆಗೆ ಬರುತ್ತಿದ್ದಳು. ನನಗೆ ಪಾಠ ಮಾಡಿದ ಶಿಕ್ಷಕರೇ ಆಕೆಗೂ ಪಾಠ ಮಾಡಿದ್ದರು. ಆದರೆ ಆಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ನನಗಿಂತಲೂ ತುಂಬಾ ಚುರುಕಾಗಿದ್ದಳು. ಆದರೆ ನಾನಿನ್ನೂ ಬದುಕಿದ್ದೇನೆ. ಆಕೆ ಪೊಲೀಸರ ಗುಂಡಿಗೆ ಬಲಿಯಾಗಿ ಒಂದು ದಶಕವೇ ಕಳೆದಿದೆ!
ಆ ವರ್ಷ ನಮ್ಮ ಪ್ರೌಢಶಾಲೆಯ ಬೆಳ್ಳಿ ಹಬ್ಬ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಏಳನೇ ತರಗತಿ ಮುಗಿಸಿದ ನಂತರ ಸೇರುತ್ತಿದ್ದುದು ಅದೇ ಪ್ರೌಢಶಾಲೆಗೆ. ಹಾಗಾಗಿ ಹತ್ತಾರು ಹಳ್ಳಿಗಳಲ್ಲೂ ಬೆಳ್ಳಿ ಹಬ್ಬದ ಸಂಭ್ರಮ. ಬೆಳ್ಳಿ ಹಬ್ಬದ ಸಂಭ್ರಮವನ್ನು ಸ್ಮರಣೀಯಗೊಳಿಸಲು ಶಾಲೆಯಿಂದ ವಿದ್ಯಾರ್ಥಿಗಳ ಬರಹಗಳೇ ತುಂಬಿರುವ ಸ್ಮರಣಸಂಚಿಕೆಯೊಂದನ್ನು ಹೊರತರಲಾಯಿತು. ಆ ಸ್ಮರಣಸಂಚಿಕೆಯಲ್ಲಿ ಕೆಲವು ಮಕ್ಕಳು ನಗೆ ಹನಿಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ಮಲೆನಾಡಿನ ಸೊಬಗನ್ನು ವರ್ಣಿಸಿ ಬರೆದಿದ್ದರು. ಕೆಲವು ವಿದ್ಯಾರ್ಥಿಗಳು ಶಾಲೆಯ ಅನುಭವಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಬೆಳಕು ಚೆಲ್ಲುವ ಬರಹಗಳನ್ನು ಬರೆದಿದ್ದರು. ಬುದ್ದಿವಂತೆ ಎಂದು ಗುರುತಿಸಿಕೊಂಡಿದ್ದ ಆಕೆ ಮಾತ್ರ ಬಡತನ, ಶೋಷಣೆ, ಜಮೀನ್ದಾರೀ ಪದ್ಧತಿಯ ಬಗ್ಗೆ ತನಗನ್ನಿಸಿದ ರೀತಿಯಲ್ಲಿ ಹಲವು ಬರಹಗಳನ್ನು ಬರೆದಿದ್ದಳು.
ಇಲ್ಲೇ ಆಗಿದ್ದು ಯಡವಟ್ಟು. ಆಗ ತಾನೇ ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಸರ್ಕಾರಗಳ ವಿರುದ್ಧ ಬಚ್ಚಿಟ್ಟುಕೊಂಡು ಗೆರಿಲ್ಲಾ ಮಾದರಿಯಲ್ಲಿ ಯುದ್ಧ ಮಾಡಲು ಅಪಾರ ಪ್ರಮಾಣದಲ್ಲಿ ಕಾಡು ಹೊಂದಿರುವ ಪಶ್ಚಿಮ ಘಟ್ಟ ಪ್ರದೇಶವೇ ಅತ್ಯುತ್ತಮ ಎನ್ನುವುದನ್ನು ಗುರುತು ಮಾಡಿಟ್ಟುಕೊಂಡು ನೆಪಕ್ಕೆಂಬಂತೆ ಕುದುರೆಮುಖ ಅಭಯಾರಣ್ಯ ಯೋಜನೆಯ ವಿರುದ್ಧ ಹೋರಾಟದ ರೂಪು ರೇಷೆ ಸಿದ್ಧಪಡಿಸುತ್ತಿದ್ದ ಸಭ್ಯರ ಸೋಗು ಹಾಕಿಕೊಂಡಿದ್ದ ನಾಡ ನಕ್ಸಲರಿಗೆ ಅದು ಹೇಗೋ ಆ ಸ್ಮರಣ ಸಂಚಿಕೆ ದೊರಕಿಬಿಟ್ಟಿತು. ಅಲ್ಲಿಗೆ ಆ ನಾಡ ನಕ್ಸಲರಿಗೆ ತಮ್ಮ ಪ್ರಜಾಪ್ರಭುತ್ವದ ವಿರುದ್ಧದ ಹೋರಾಟಕ್ಕೆ ಬಲಿಯಾಗಲು ಮಲೆನಾಡ ಮೂಲೆಯಲ್ಲೊಂದು ಕುರಿ ತಯಾರಾಗಿ ನಿಂತಿದೆ ಎನ್ನುವ ಸ್ಪಷ್ಟ ಸಂದೇಶ ತಲುಪಿದಂತಾಯಿತು.
ಅದು ಯಾವ ಮಾಯಕದಲ್ಲೋ ಆಕೆಯನ್ನು ಆ ನಾಡ ನಕ್ಸಲರು ಸಂಪರ್ಕಿಸಿಯೇ ಬಿಟ್ಟರು. ನಂತರ ಆಕೆ ಕಂಡಿದ್ದು ಈದು ಎನ್ನುವ ಕುಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಯಚೂರು ಜಿಲ್ಲೆಯ ಹಾಜಿಮ ಎನ್ನುವ ಇನ್ನೊಬ್ಬ ಮುಗ್ಧ ಹುಡುಗಿಯೊಂದಿಗೆ ಹೆಣವಾಗಿ!
ಆಕೆ ನಮ್ಮ ಮಲೆನಾಡ ಮುಗ್ಧ ಹುಡುಗಿ ಪಾರ್ವತಿ.
********************
ಆತ ಅಯ್ಯಂಗಾರ್ ಕುಟುಂಬಕ್ಕೆ ಸೇರಿದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಪುತ್ರ. ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಆತನ ಬಂಗಲೆಯಿತ್ತು. ನಗರದ ಹೃದಯ ಭಾಗವಾದ ಆರ್.ಟಿ.ಓ. ಕಚೇರಿಯ ಬಳಿ ಕೈ ತುಂಬಾ ಆದಾಯ ತರುವ ಪೆಟ್ರೋಲ್ ಬಂಕ್ ಕೂಡಾ ಇತ್ತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದು ನಂತರ ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಗೆ ಸೇರಿದ ಪ್ರತಿಷ್ಠಿತ ಇಂಡಿಯನ್ ಇನ್ಸಿಟ್ಯೂಟ್ ಆಪ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಪತ್ರಿಕೋದ್ಯಮದ ಸ್ನಾತ್ತಕೋತ್ತರ ಪದವಿಗೆ ಸೇರ್ಪಡೆಯಾದ.
ಅಲ್ಲೇ ಆಗಿದ್ದು ಎಡವಟ್ಟು. ಮೊದಲೇ ‘ಜಿಹಾದಿ ನಕ್ಸಲ್ ಯೂನಿವರ್ಸಿಟಿ’ ಎಂದು ಗೇಲಿಗೊಳಗಾಗಿರುವ ಜೆ.ಎನ್.ಯು.ನ ನಕ್ಸಲ್ವಾದೀ ಪ್ರೊಫೆಸರ್ ಗಳ ಕಣ್ಣಿಗೆ ಆತ ಸುಲಭವಾಗಿ ಬಿದ್ದುಬಿಟ್ಟಿದ್ದ. ಅವರು ಸಂಪೂರ್ಣವಾಗಿ ಆತನ ಬ್ರೈನ್ ವಾಷ್ ಮಾಡಿ ದೊಡ್ಡ ನಾಯಕನೆನ್ನುವಂತೆ ಅವನ ಮುಂದೆ ಅವನನ್ನು ಬಿಂಬಿಸುತ್ತಾ ಉಬ್ಬಿಸತೊಡಗಿದರು. ಅದಕ್ಕೆ ಪೂರಕವೆಂಬಂತೆ ಆತನನ್ನು ಸಿ.ಪಿ.ಐ (ಎಂ.ಎಲ್) ಕಮ್ಯುನಿಸ್ಟ್ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿಯನ್ನಾಗಿ ಮಾಡಿದರು. ಆಂಧ್ರದ ಪೀಪಲ್ಸ್ ವಾರ್ ಗ್ರೂಪ್ ಜೊತೆಗೆ ಸಂಪರ್ಕ ಒದಗಿಸಿಕೊಟ್ಟರು. ನಾವು ನಿನಗೆ ಅತ್ಯಂತ ದೊಡ್ಡ ಜವಾಬ್ಧಾರಿ ನೀಡಿದ್ದು ನೀನಿದನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು. ಇದರಿಂದ ಪ್ರೇರಿತನಾದ ಆತ ಸೀದಾ ಆಂಧ್ರದತ್ತ ನಡೆದು ಎ.ಕೆ. 47 ಬಂದೂಕು ಕೈಗೆತ್ತಿಕೊಂಡುಬಿಟ್ಟ. ಹಾಗೆ ಅಂದು ಪ್ರಗತಿಪರ ಹೋರಾಟಗಾರರ ಬೆಂಬಲದಿಂದ ಪ್ರಜಾ ಪ್ರಭುತ್ವ ಸರ್ಕಾರದ ವಿರುದ್ಧ ಬಂದೂಕು ಕೈಗೆತ್ತಿಕೊಂಡ ಆ ಯುವಕನ ಹೆಸರು ಸಾಕೇತ್ ರಾಜನ್ ಅಲಿಯಾಸ್ ಪ್ರೇಮ್.
ಇದೇ ವೇಳೆಗೆ ಕುದುರೆಮುಖ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಅಭಯಾರಣ್ಯವೆಂದು ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಕರ್ನಾಟಕದಲ್ಲೂ ಬಲಿಷ್ಠ ನಕ್ಸಲ್ ಚಳುವಳಿಯನ್ನು ಕಟ್ಟಬೇಕೆಂಬುದು ವಿಶ್ವವಿದ್ಯಾಲಯಗಳಲ್ಲಿ, ಪತ್ರಿಕೆಗಳ ಕಚೇರಿಗಳಲ್ಲಿ, ಸರ್ಕಾರೀ ಕಚೇರಿಗಳ ಎ.ಸಿ.ರೂಮುಗಳಲ್ಲಿ ಕುಳಿತ ನಾಡ ನಕ್ಸಲರ ಯೋಜನೆಯಾಗಿತ್ತು. ಆ ಯೋಜನೆಗೆ ಬಲಿ ಕೊಡಲು ಇದೇ ಸಾಕೇತ್ ರಾಜನ್ ಎನ್ನುವ ಕುರಿಯನ್ನು ಗುರುತಿಸಲಾಯಿತು. ಆತ ಅದಾಗಲೇ ಎಲ್ಲಾ ಪ್ರಗತಿಪರರಿಗೆ, ಯುವ ಬರಹಗಾರರಿಗೆ ತೀರಾ ಹತ್ತಿರದ ವ್ಯಕ್ತಿಯಾಗಿದ್ದ. ಬರಹಗಾರರಾದ ಡಾ.ಮೊಗಳ್ಳಿ ಗಣೇಶ, ಡಾ.ಬಂಜಗೆರೆ ಜಯಪ್ರಕಾಶ್, ಅಬ್ದುಲ್ ರಶೀದ್, ಪತ್ರಕರ್ತೆ ಗೌರಿ ಲಂಕೇಶ್, ಮೈಸೂರು ಮಿತ್ರ ಸಂಪಾದಕ ಕೆ.ಬಿ.ಗಣಪತಿ, ಪ್ರೊ.ಲಿಂಗರಾಜ್ ಗಾಂಧಿ ಸೇರಿದಂತೆ ಹಲವರ ಜೊತೆ ಸಾಕೇತ್ ರಾಜನ್‌ಗೆ ಒಡನಾಟವಿತ್ತು. ಇತ್ತ ಮಲೆನಾಡಿನಲ್ಲಿ ಇತ್ತೀಚಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತರಾಗಿರುವ ಕಲ್ಕುಳಿ ವಿಠಲ ಹೆಗ್ಡೆ ಮತ್ತು ಸ್ನೇಹಿತರು ತುಂಗಾ ಉಳಿಸಿ ಎಂಬ ಆಂಧೋಲನ ಆರಂಭಿಸಿದ್ದರು. ಕುದುರೆಮುಖ ಗಣಿಗಾರಿಕೆಯಿಂದ ಆಗುವ ಪರಿಸರ ನಾಶದ ಬಗ್ಗೆ ಪರಿಸರವಾದಿಗಳು ಹೋರಾಟ ಆರಂಭಿಸಿದ್ದರು. ನಾಡ ನಕ್ಸಲರು ಅವರ ಸಂಪರ್ಕವನ್ನು ಸಾಕೇತ್ ರಾಜನ್ ಗೆ ಕಲ್ಪಿಸುವ ಮೂಲಕ ನೇರವಾಗಿ ಮಲೆನಾಡಿನ ಕಾಡಿನೊಳಗೆ ಅತ್ಯಾಧುನಿಕ ಆಯುಧಗಳೊಂದಿಗೆ ಆತನನ್ನು ನುಗ್ಗಿಸಿ ಬಿಟ್ಟಿದ್ದರು.
2005 ರ ಅದೊಂದು ದಿನ ಸಾಕೇತ್ ರಾಜನ್ ನಕ್ಸಲ್ ನಾಯಕನೆಂಬ ಹಣೆಪಟ್ಟಿಯೊಂದಿಗೆ ತಾನು ಯಾರು, ಇಲ್ಲಿಗೆ ಯಾಕೆ ಬಂದಿದ್ದೇನೆ, ನನ್ನ ಸಿದ್ಧಾಂತವೇನು, ನನ್ನ ಗುರಿಯೇನು ಎನ್ನುವುದೇ ಗೊತ್ತಿಲ್ಲದ ಶಿವಲಿಂಗು ಎನ್ನುವ ತನ್ನ ಅಂಗರಕ್ಷಕನೊಂದಿಗೆ ಪೊಲೀಸರ ಗುಂಡಿಗೆ ಬಲಿಯಾಗಿ ಅರಣ್ಯದಲ್ಲಿ ಅನಾಥ ಶವವಾಗಿ ಮಲಗಿದ್ದ. ಅವನ ಶವವನ್ನು ನೋಡುವ ಧೈರ್ಯ ತನಗಿಲ್ಲವೆಂದು ಹೇಳಿ ಆತನ ತಾಯಿ ತನ್ನ ಮಗನ ಶವ ಪಡೆಯಲು ನಿರಾಕರಿಸಿದರು. ನಾಡ ನಕ್ಸಲರ ಒಂದಷ್ಟು ನಾಟಕಗಳೊಂದಿಗೆ ಆತನ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನೆರವೇರಿತು. ಸಾಕಷ್ಟುವಿದ್ಯೆ, ಬುದ್ದಿ, ಆಸ್ತಿ, ಪಾಸ್ತಿ, ಯೌವನ ಎಲ್ಲವನ್ನೂ ಪಡೆದಿದ್ದ ಸಾಕೇತ್ ರಾಜನ್ ಆತನ ಮನೆಯವರಿಗೆ ಬಿಟ್ಟರೆ ಈಗ ಇನ್ಯಾವ ಪ್ರಗತಿಪರ ಹೋರಾಟಗಾರರಿಗೂ ನೆನಪಿಲ್ಲ.
ವಿಪರ್ಯಾಸವೆಂದರೆ ಸಾಯುವ ಕೆಲವೇ ದಿನಗಳ ಹಿಂದೆ ಗೌರಿ ಲಂಕೇಶ್ ಮತ್ತು ಕೆಲವು ಆಪ್ತ ಪತ್ರಕರ್ತರು ಆತನಿದ್ದ ಅಡಗುತಾಣಕ್ಕೆ ಹೋಗಿ ಮಾತನಾಡಿದ್ದರು. ತಮ್ಮ ಸಹಪಾಠಿ ಗೌರಿ ಲಂಕೇಶ್‌ಗೆ ಮಾತ್ರ ಇತರರಿಗೆ ತಿಳಿಯದಂತೆ ಎರಡು ಚಿತ್ರಗಳನ್ನು ತೆಗೆಯಲು ಅವಕಾಶ ನೀಡಿದ್ದ ಮತ್ತು ಆ ಚಿತ್ರಗಳೇ ಆತನ ಜೀವನದ ಕೊನೆಯ ಚಿತ್ರಗಳು ಎನ್ನಲಾಗುತ್ತಿದೆ.
********************
ಆತ ಒಬ್ಬ ಪ್ರತಿಭಾವಂತ ಯುವಕ. ಆತನ ಮನೆಯಿದ್ದಿದ್ದು ಮಲೆನಾಡಿನ ಮೂಲೆಯಲ್ಲಿರುವ ದಟ್ಟ ಕಾಡಿನ ಒಳಗೆ. ಎಷ್ಟೇ ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿದರೂ ಆತನ ಕುಟುಂಬದ ವರ್ಷದ ಆದಾಯ ಇಪ್ಪತ್ತೈದು ಸಾವಿರ ಮೀರುತ್ತಿರಲಿಲ್ಲ. ಆದರೆ ವಿದ್ಯಾಭ್ಯಾಸ ಮಾಡಬೇಕೆನ್ನುವ ಆತನ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಅದಕ್ಕಾಗಿ ಆತ ಕಾಡಿನಲ್ಲಿ ಸಿಗುವ ಮುರುಗನ ಹುಳಿ(ಕೋಕಂ), ಗೇರು ಬೀಜ (ಅಲ್ಲಿನ ಗುಡ್ಡಗಳಲ್ಲಿ ಅಲ್ಲಲ್ಲಿ ಗೇರು ಮರಗಳಿರುತ್ತವೆ) ಆರಿಸಿ ಅದನ್ನು ಮಾರಿ ಬಂದ ಆದಾಯದಲ್ಲಿ ಕಾನೂನು ಪದವಿ ಪಡೆದ. ದೊಡ್ಡ ಕನಸಿನೊಂದಿಗೆ ಬೆಂಗಳೂರಿಗೆ ಕಾಲಿಟ್ಟ. ಅವಕಾಶಗಳಿಗಾಗಿ ಅಲೆಯುತ್ತಿದ್ದಾಗಲೇ ಅಲ್ಲೊಂದು ಪ್ರತಿಭಟನೆ ಕಣ್ಣಿಗೆ ಬಿತ್ತು. ಹೇಗಿದ್ದರೂ ಕೆಲಸವಿಲ್ಲದ್ದರಿಂದ ಕುತೂಹಲಕ್ಕಾಗಿ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡ.
ಅಲ್ಲೇ ಆಗಿದ್ದು ಯಡವಟ್ಟು.. ಮಲೆನಾಡಿನ ಕಾಡುಗಳಲ್ಲಿ ತಮ್ಮ ನಕ್ಸಲ್ ಚಟುವಟಿಕೆಗಳನ್ನು ಪ್ರಾರಂಭಿಸಲು ರೂಪುರೇಷೆ ಸಿದ್ಧಪಡಿಸಿಕೊಂಡು ಆ ಕಾಡುಗಳ ಇಂಚಿಂಚು ಮಾಹಿತಿಯಿರುವ ಅದೇ ಭಾಗದ ಯುವಕರನ್ನು ಹುಡುಕುತ್ತಿದ್ದ ಕೆಲವು ಪ್ರಗತಿಪರ ನಾಯಕರುಗಳಿಗೆ ಮಲೆನಾಡಿನ ಆ ಮುಗ್ಧ ಯುವಕನ ಮುಖದಲ್ಲಿ ತಮ್ಮ ಬಲಿಗೆ ಸಿದ್ಧವಾಗಿ ಬಂದಿರುವ ಕುರಿಯೊಂದು ಕಂಡಿತು.
ನಂತರ ಆತನಿಗೆ ಯಾರೋ ಡಾ.ಬಂಜಗೆರೆ ಜಯಪ್ರಕಾಶ್ ಅವರು ಹುಟ್ಟು ಹಾಕಿದ್ದ “ಕರ್ನಾಟಕ ವಿಮೋಚನಾ ರಂಗ” ಎಂಬ ಸಂಘಟನೆಯನ್ನು ಪರಿಚಯಿಸಿದರು. ಅಲ್ಲಿಂದ ಮುಂದೆ ಕೆಲವು ಪ್ರಗತಿಪರ ಹೋರಾಟಗಾರ ನಾಯಕರು ಚೆನ್ನಾಗಿ ಆತನ ಬ್ರೈನ್ ವಾಷ್ ಮಾಡಿ ಕೈಗೆ ಬಂದೂಕು ಕೊಟ್ಟು ಆತ ಹುಟ್ಟಿ ಬೆಳೆದ ಊರಿಗೇ ಆತನನ್ನು ಕಳಿಸಿದರು. ನ್ಯಾಯವಾದಿಯಾಗಿ ಹೆಸರು ಗಳಿಸಿ ಕೈ ತುಂಬಾ ಸಂಪಾದಿಸಿ ಹೆಮ್ಮೆಯಿಂದ ಮನೆಗೆ ಬರುತ್ತಾನೆ ಎಂದು ಕಾದಿದ್ದ ಆತನ ವೃದ್ಧ ತಂದೆ ತಾಯಿಯರಿಗೆ ಪ್ರಗತಿಪರ ಹೋರಾಟಗಾರರು ಸರಿಯಾಗಿಯೇ ಶಾಕ್ ಕೊಟ್ಟಿದ್ದರು. ಆ ಭಾಗದಲ್ಲಿ ನಡೆಯುವ ಎಲ್ಲಾ ನಕ್ಸಲ್ ಕೃತ್ಯಗಳಿಗೂ ಆತನೇ ನೇತೃತ್ವ ವಹಿಸಿದ್ದಾನೆ ಎಂದು ಬಿಂಬಿತವಾಯಿತು. ಗೃಹ ಇಲಾಖೆ ಆತನ ತಲೆಗೆ ಐದು ಲಕ್ಷ ಬಹುಮಾನ ಘೋಷಿಸಿತು. ಯಾವ ನ್ಯಾಯಾಲಯಗಳಲ್ಲಿ ಭಾರತೀಯ ದಂಡ ಸಂಹಿತೆಗಳ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕಾಗಿತ್ತೋ ಅದೇ ಕಾನೂನಿಗೆ ವಿರುದ್ಧವಾಗಿ ನಿಂತು ಆತ ಈಗ ಕಾಡು ಮೇಡುಗಳಲ್ಲಿ ಅಲೆಯುತ್ತಿದ್ದಾನೆ. ನಕ್ಸಲ್ ಸಿದ್ಧಾಂತದ ತಲೆ ಬುಡ ತಿಳಿಯದ ಅದೇ ಊರಿನ ಗುಡ್ಡಗಾಡು ನಿವಾಸಿ ಮುಂಡಗಾರು ಲತಾ ಎನ್ನುವ ಹದಿಹರಯದ ಹುಡುಗಿಯನ್ನೂ ಕೂಡಾ ತಲೆ ಕೆಡಿಸಿ ಆಕೆಯ ಕೈಗೆ ಬಂದೂಕು ನೀಡಿ ಕಾಡಿಗೆ ಕಳಿಸಲಾಯಿತು. ಈಗ ಆತ ಮತ್ತು ಆ ಹುಡುಗಿ ಕಾಡಿನಲ್ಲೇ ಮದುವೆಯಾಗಿದ್ದಾರೆ ಎನ್ನುವ ಊಹಾಪೋಹಗಳೂ ಇವೆ. ಇನ್ನು ಕೆಲವರ ಪ್ರಕಾರ ಅವರು ಕೇರಳದ ಕಾಡಿಗೆ ತಮ್ಮ ವಾಸ ಸ್ಥಾನವನ್ನು ಬದಲಾಯಿಸಿದ್ದಾರೆ. ಇನ್ನು ಕೆಲವರ ಪ್ರಕಾರ ಆತ ಅನಾರೋಗ್ಯದಿಂದ ಆ ದಟ್ಟ ಕಾಡಿನಲ್ಲೇ ಮೃತಪಟ್ಟಿದ್ದಾನೆ!
ನಿಜವಾದ ವಿಷಯ ತಿಳಿದವರು ಯಾರೂ ಇಲ್ಲ. ಒಟ್ಟಿನಲ್ಲಿ ಕಷ್ಟಪಟ್ಟು ಓದಿದ, ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸಬೇಕಿದ್ದ, ಕಡುಬಡವ ತಂದೆ ತಾಯಿಯರಿಗೆ ಆಶ್ರಯ ನೀಡಬೇಕಿದ್ದ, ಮುಂದೆ ನಿಂತು ತನ್ನ ತಂಗಿಯರ ಮದುವೆ ಮಾಡಬೇಕಿದ್ದ, ತನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ಇರಬೇಕಾಗಿದ್ದ ಒಬ್ಬ ಪ್ರತಿಭಾವಂತನ ಜೀವನ ಪ್ರಗತಿಪರ ಹೋರಾಟಗಾರರ ಸಂಪರ್ಕದಿಂದಾಗಿ ಕಾಡುಪಾಲಾಯಿತು.
ಈ ನಡುವೆ ಆತನ ವೃದ್ಧ ತಂದೆ ತಾಯಿಯರು, ಬಂಧು ಬಳಗದವರು ಅನುಭವಿಸಿದ ಅವಮಾನಗಳೆಷ್ಟೋ, ಕಷ್ಟಗಳೆಷ್ಟೋ, ಅನುಮಾನಗಳೆಷ್ಟೋ, ಪೊಲೀಸ್ ವಿಚಾರಣೆಗಳೆಷ್ಟೋ… ಲೆಕ್ಕವಿಟ್ಟವರು ಯಾರೂ ಇಲ್ಲ.
ಆ ಪ್ರತಿಭಾವಂತ ಯುವಕನ ಹೆಸರು ಬಿ.ಜಿ.ಕೃಷ್ಣಮೂರ್ತಿ ಅಲಿಯಾಸ್ ಬೀಜೀಕೆ.
********************
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಂಬತ್ತರ ದಶಕದಲ್ಲಿ ಕಮ್ಯುನಿಸ್ಟ್ ಪಕ್ಷ ಹೋರಾಟದ ಮೂಲಕ ಪ್ರಬಲವಾಗಿ ಬೇರೂರಿತ್ತು. ಸುಂದರೇಶ್ ಎನ್ನುವವರು ಇಡೀ ಜಿಲ್ಲೆಯಲ್ಲಿ ಕಾಫಿ ತೋಟದ ಕೃಷಿ ಕೂಲಿ ಕಾರ್ಮಿಕರನ್ನು ಒಗ್ಗೂಡಿಸಿ ಅಲ್ಲಿ ಕಮ್ಯುನಿಷ್ಟ್ ಪಕ್ಷವನ್ನು ಪ್ರಬಲವಾಗಿ ಬೆಳೆಸಿದ್ದರು. ರೈಲು ಅಪಘಾತವೊಂದರಲ್ಲಿ ಸುಂದರೇಶ್ ಮೃತಪಟ್ಟ ನಂತರ ಆ ಸ್ಥಾನದ ಮೇಲೆ ಅದಾಗಲೇ ಹಿಂದೂಗಳ ಮೌಡ್ಯವನ್ನು ಕಂದಾಚಾರವನ್ನು ವಿರೋಧಿಸುತ್ತಾ ಎಲ್ಲ ಹಿಂದೂ ಮಠ ಮಾನ್ಯಗಳ ವಿರುದ್ಧ ಉಗ್ರ ಭಾಷಣ ಮಾಡುತ್ತಾ ಪ್ರಗತಿಪರ ಹೋರಾಟಗಾರ ಎಂದು ಗುರುತಿಸಿಕೊಳ್ಳಲು ಹವಣಿಸುತ್ತಿದ್ದ ಸಿರಿಮನೆ ನಾಗರಾಜ್ ಎನ್ನುವವರು ಕಣ್ಣಿಟ್ಟರು. ಆ ವ್ಯಕ್ತಿ ಕೂಡಾ. ಬಂಜಗೆರೆ ಜಯಪ್ರಕಾಶ್ ಹುಟ್ಟುಹಾಕಿದ್ದ “ಕರ್ನಾಟಕ ವಿಮೋಚನಾ ರಂಗ”ಎಂಬ ಸಂಘಟನೆಯ ಉಪಾಧ್ಯಕ್ಷರಾಗಿದ್ದವರು. “ಕರ್ನಾಟಕ ವಿಮೋಚನಾ ರಂಗ”ದ ಮೂಲಕ ಹೋರಾಡುತ್ತಲೇ ಸಹಜವಾಗಿ ಸಿರಿಮನೆ ನಾಗರಾಜ್ ಆಂಧ್ರ ನಕ್ಸಲರ ಸಂಪರ್ಕಕ್ಕೆ ಬಂದರು. ಹಾಗೆ ಸಂಪರ್ಕಕ್ಕೆ ಬಂದ ಅವರು ಬಂದೂಕು ಹಿಡಿದು ನೇರವಾಗಿ ತಮ್ಮದೇ ಜಿಲ್ಲೆಯ ಕಾಡು ಸೇರಿದರು. ದಶಕಗಳ ಕಾಲ ಕಾಡಿನಲ್ಲೇ ತಲೆ ಮರೆಸಿಕೊಂಡು ಓಡಾಡಿದರು. ಅವರ ಈ ಕೃತ್ಯದಿಂದಾಗಿ ನೊಂದ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರ ಪತ್ನಿ ಸ್ವಯಂ ನಿವೃತ್ತಿ ಪಡೆದು ಅನಾಮಿಕರಂತೆ ವಾಸಿಸತೊಡಗಿದರು. ತನ್ನ ಮಗಳನ್ನು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ತೊರೆದು ಹೋದ ನಾಗರಾಜ್ ಅಷ್ಟೂ ವರ್ಷಗಳ ಕಾಲ ತಿರುಗಿ ಕೂಡಾ ನೋಡಲಾಗಲಿಲ್ಲ. ನಂತರ ಪದವೀಧರೆಯಾದ ಆ ಮಗಳು ತನ್ನ ತಂದೆಯ ಕೃತ್ಯದಿಂದಾಗಿ ಸರ್ಕಾರಿ ಉಗ್ಯೋಗಗಳಿಂದ ವಂಚಿತಳಾಗಿ ಸ್ವಯಂ ಸೇವಾ ಸಂಘಟನೆಯಲ್ಲಿ ದುಡಿಯತೊಡಗಿದಳು.
ಆದರೆ ನಕ್ಸಲ್ ಸಂಘಟನೆಯ ಸೂತ್ರಧಾರಿಗಳು ಯಾರು, ಆಯುಧಗಳು ಎಲ್ಲೆಲ್ಲಿಂದ ಯಾರ ಯಾರ ಮೂಲಕ ಸರಬರಾಜಾಗುತ್ತವೆ ಎನ್ನುವ ಎಲ್ಲಾ ಮಾಹಿತಿಯಿದ್ದಿದ್ದರಿಂದಾಗಿ ಅವರು ನಾಡ ನಕ್ಸಲರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅವರ ಅದೇ ಸಂಪರ್ಕ ಬಳಸಿಕೊಂಡು ಮತ್ತೆ ಮುಖ್ಯವಾಹಿನಿಗೆ ಮರಳಿ ಪರೋಕ್ಷವಾಗಿ ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ. ನೂರ್ ಜುಲ್ಫಿಕರ್ ಎನ್ನುವ ಇನ್ನೊಬ್ಬ ನಕ್ಸಲ್ ಕೂಡಾ ತನ್ನ ಸಂಪರ್ಕ ಬಳಸಿಕೊಂಡು ಮುಖ್ಯವಾಹಿನಿಗೆ ಮರಳಿದ್ದಾರೆ. ಆದರೆ ಆತ ಈಗಲೂ ನ್ಯಾಯಾಲಯ ನೀಡುವಾಗ ವಿಧಿಸಿದ್ದ ನಿಬಂಧನೆಗಳನ್ನು ಮುರಿದು ತಿರುಗಾಡುತ್ತಿದ್ದಾರೆ ಎನ್ನುವ ಸುದ್ದಿಗಳಿವೆ.
ಅದೇನೇ ಇರಲಿ, ಇದುವರೆಗೆ ಅವರ ಕುಟುಂಬದವರು, ಹೆಂಡತಿ ಮಕ್ಕಳು ಅನುಭವಿಸಿದ್ದ ಕಷ್ಟಗಳನ್ನು, ಅವರ ಕ್ರಿಮಿನಲ್ ಕೃತ್ಯಗಳಿಂದ ನರಕ ಯಾತನೆ ಅನುಭವಿಸಿದವರ ಸಂತೋಷವನ್ನು ಪ್ರಗತಿಪರ ಹೋರಾಟಗಾರರು ಮರಳಿಸಬಲ್ಲರೇ?
********************
ಇವು ಕೇವಲ ಕೆಲವೇ ಕೆಲವು ಉದಾಹರಣೆಗಳು ಮಾತ್ರ. ರಾಷ್ಟ್ರ ಮಟ್ಟದಲ್ಲಿ ನಕ್ಸಲ್ ಪೀಡಿತ ರಾಜ್ಯ ಎಂದು ಗುರುತಿಸಿಕೊಳ್ಳದಿದ್ದರೂ ನಮ್ಮ ರಾಜ್ಯದಲ್ಲೇ ಇದುವರೆಗೆ ಪೊಲೀಸರು ಮತ್ತು ನಕ್ಸಲರ ನಡುವಿನ ಸಂಘರ್ಷದಲ್ಲಿ 25 ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ. ಹಾಗೆ ಹತ್ಯೆಗೀಡಾದವರಲ್ಲಿ ಪ್ರಗತಿಪರರಿಂದ ಬ್ರೈನ್ ವಾಷ್ ಗೊಳಗಾದ ಹಲವು ನಕ್ಸಲರಷ್ಟೇ ಅಲ್ಲದೇ ಪೊಲೀಸ್ ಮಾಹಿತಿದಾರರು, ಒಬ್ಬ ಕಾಂಗ್ರೆಸ್ ಮುಖಂಡ, ಗಿರಿಜನ ದಂಪತಿಗಳು, ಪೊಲೀಸರು ಹಾಗೂ ಓರ್ವ ಅಮಾಯಕ ಬಸ್ ಕ್ಲೀನರ್ ಕೂಡಾ ಸೇರಿದ್ದಾನೆ.
ಪ್ರಗತಿಪರ ಹೋರಾಟಗಾರರ ಕೈಗೆ ಸಿಕ್ಕಿ ನಕ್ಸಲರಾಗಿ ಕಾಡಿಗೆ ಹೋದವರ ಪೈಕಿ ಪ್ರಭಾ, ಮುಂಡಗಾರು ಲತಾ, ವಿಷ್ಣು, ಕನ್ಯಾಕುಮಾರಿ, ಸುರೇಶ, ರಮೇಶ್ ಅಲಿಯಾಸ್ ಶ್ರೀನಿವಾಸ್, ಈಶ್ವರ್, ಸಾವಿತ್ರಿ, ವನಜಾ ಅಲಿಯಾಸ್ ಜಲಜಾಕ್ಷಿ, ಭಾರತಿ, ಮನೋಜ್, ರಾಯಚೂರು ಜಿಲ್ಲೆಯ ಕಲ್ಪನಾ, ಜಾನ್ ಅಲಿಯಾಸ್ ಜಯಮ್ಮ, ರವೀಂದ್ರ, ತಮಿಳುನಾಡಿನ ವೀರಮಣಿ ಅಲಿಯಾಸ್ ಮುರುಗನ್, ಕೇರಳದ ನಂದಕುಮಾರ್, ಆಶಾ, ತಮಿಳುನಾಡಿನ ಕುಪ್ಪಸ್ವಾಮಿ… ಹೀಗೆ ಹಲವಾರು ಜನ ಏನಾಗಿದ್ದಾರೆ, ಎಲ್ಲಿದ್ದಾರೆ ಎನ್ನುವ ಮಾಹಿತಿಯೇ ಇಲ್ಲ. ಬದುಕಿದ್ದಾರಾ ಸತ್ತಿದ್ದಾರಾ ಎನ್ನುವುದೂ ಕೂಡಾ ತಿಳಿದಿಲ್ಲ. ಇವರುಗಳಲ್ಲಿ ನಕ್ಸಲ್ ವಿಚಾರಧಾರೆ ಹಿನ್ನೆಲೆ ಇರುವ ವ್ಯಕ್ತಿಗಳು ತೀರಾ ಕಡಿಮೆ. ಮಲೆನಾಡು ಭಾಗದ ಹಿಂದುಳಿದ ಸಮುದಾಯಗಳ ಬಡ, ನಿರ್ಗತಿಕ ಕುಟುಂಬಗಳಿಂದ ಬಂದವರು, ರಾಯಚೂರು ಮತ್ತು ಹೈದರಾಬಾದ್ ಭಾಗದ ಕೂಲಿಕಾರ್ಮಿಕರ ಮಕ್ಕಳೇ ಹೆಚ್ಚು. ನಾಡ ನಕ್ಸಲರು ಇವರಲ್ಲಿ ಕೆಲವರಿಗೆ ಕ್ರಾಂತಿ ಎಂಬ ಭ್ರಾಂತಿ ಹತ್ತಿಸಿ ನಕ್ಸಲರನ್ನಾಗಿ ಮಾಡಿದ್ದರೆ ಇನ್ನು ಕೆಲವರಿಗೆ ಕಾಡಿನಲ್ಲಿ ಮುಕ್ತ ಲೈಂಗಿಕತೆಯ ಆಸೆ ತೋರಿಸಿ ನಕ್ಸಲರನ್ನಾಗಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸ್ಥಳೀಯ ಬುಡಕಟ್ಟು ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿಕೊಂಡು ಬಂದ ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾದಾಗ ಸ್ಥಳೀಯ ಬುಡಕಟ್ಟು ಜನರು ತಮಗೆ ಒದಗಿ ಬಂದ ಆಪತ್ತುಗಳು ಒಂದೊಂದಾಗಿ ಕರಗುತ್ತಿವೆ ಎಂದು ಸಂತೋಷಪಟ್ಟರೇ ಹೊರತೂ ಯಾವ ಬುಡಕಟ್ಟು ಜನರೂ ಕಣ್ಣೀರು ಹಾಕಿದ ಉದಾಹರಣೆಯಿಲ್ಲ.
ಆದರೆ ಅವರನ್ನು ಕಾಡಿಗೆ ಕಳಿಸಿದ ನಾಡ ನಕ್ಸಲರು ಮಾತ್ರ ಎಲ್ಲಾ ಕಾನೂನು ಸಮಸ್ಯೆಗಳಿಂದಲೂ ಮುಕ್ತರಾಗಿ, ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಪಡೆಯುತ್ತಾ, ಸರಕಾರದ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸುತ್ತಾ, ದೇಶ ವಿದೇಶಗಳಲ್ಲಿ ಸುತ್ತುತ್ತಾ ಪ್ರಗತಿಪರ ಹೋರಾಟಗಾರರು, ಬುದ್ದಿ ಜೀವಿಗಳು, ಸಾಕ್ಷಿ ಪ್ರಜ್ಞೆಗಳು ಎನ್ನುವ ಹಲಾವಾರು ಬಿರುದು ಬಾವಲಿಗಳಿಂದ ಹೊಗಳಿಸಿಕೊಳ್ಳುತ್ತಾ ಹೆಂಡತಿ ಮಕ್ಕಳೊಂದಿಗೆ ಸುಖ ಸಂತೋಷದಿಂದ ಬದುಕುತ್ತಿದ್ದಾರೆ.
ಏಕೆಂದರೆ ಯಮದೂತರ ಜೊತೆ ಹೋಗುವವರಿಗೆ ಮಾತ್ರ ಸಾವೇ ಹೊರತೂ ಯಮದೂತರಿಗೆ ಸಾವಿಲ್ಲ. ಪ್ರಾಣ ತೆಗೆಯುವುದೇ ಅವರ ಕರ್ತವ್ಯ.
ಇದೆಲ್ಲವನ್ನೂ ಓದಿದ ನಂತರವೂ ನಿಮ್ಮ ಮಕ್ಕಳು ಪ್ರಗತಿಪರ ಎಂದು ಹೇಳಿಕೊಳ್ಳುವ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದನ್ನು ಕಂಡೂ ಸುಮ್ಮನಿರುತ್ತೀರಿ ಎಂದರೆ ನಿಮ್ಮ ಮಕ್ಕಳು, ನಿಮ್ಮಿಷ್ಟ.
ಚಿತ್ರ ಕೃಪೆ: http://www.outlookindia.com