ನೆನಪುಗಳೊಂದಿಗೆ ಯುಗಾದಿ…
– ಗೀತಾ ಹೆಗ್ಡೆ
ಅನೇಕ ಸಲ ನಾವಂದುಕೊಳ್ಳುತ್ತೇವೆ; ಈ ನೆನಪುಗಳು ಇರಲೇಬಾರದು. ಅದರಲ್ಲೂ ಕಹಿ ನೆನಪುಗಳಂತೂ ಪೂರ್ತಿ ಮರೆತು ಹೋಗಬೇಕು. ಬರಿ ಸಿಹಿ ಸಿಹಿ ನೆನಪುಗಳೆ ಇದ್ದರೆ ಸಾಕು. ಎಷ್ಟು ಖುಷಿಯಾಗಿರಬಹುದು. ಛೆ! ಯಾಕೆ ಬರುತ್ತೋ ಈ ನೆನಪು, ಜೀವ ಹೈರಾಣೋಗುತ್ತಿದೆ ಈ ಕೆಟ್ಟ ನೆನಪು. ಮರುಕಳಿಸಬಾರದಿತ್ತು. ಯಾರಲ್ಲೂ ಹೇಳಿಕೊಳ್ಳಲೂ ಆಗೋದಿಲ್ಲ, ಒಬ್ಬನೆ ಅನುಭವಿಸೋಕೂ ಆಗೋದಿಲ್ಲ. ರಾತ್ರಿ ನಿದ್ದೆ ಕೂಡಾ ಕಸಿದುಕೊಂಡುಬಿಡುತ್ತದಲ್ಲಾ. ಹಾಸಿಗೆಯಲ್ಲಿ ನಿದ್ದೆ ಇಲ್ಲದೆ ಹೊರಳಾಟ. ಅಬ್ಬಾ! ಎಷ್ಟು ಶಕ್ತಿ ಇದಕ್ಕೆ.
ಆದರೆ ಈ ನೆನಪುಗಳು ನಮ್ಮ ಶತ್ರು ಅಲ್ಲ. ಅವು ನಮ್ಮ ಮಿತ್ರರು. ಅದು ದೇವರು ಕೊಟ್ಟ ವರ. ಯಾಕೆ ಗೊತ್ತಾ ಈ ನೆನಪುಗಳು ನಮ್ಮ ತಪ್ಪನ್ನು ಎತ್ತಿ ತೋರಿಸುತ್ತವೆ. ನಮ್ಮ ನಡೆ ಎಲ್ಲಿ ತಾಳ ತಪ್ಪಿತು. ನಾನ್ಯಾಕೆ ಹೀಗೆ ಮಾಡಿದೆ. ನಾನು ಇನ್ನು ಮೇಲೆ ಹೀಗೆ ಮಾಡಬಾರದು.. ಹಾಗೆ ಮಾಡಬಾರದು. ಒಂದು ರೀತಿ ಸ್ವಾವಲಂಬಿ, ಸದೃಡ ವ್ಯಕ್ತಿತ್ವ ರೂಪಿಸುವುದರಲ್ಲಿ ಖಂಡಿತಾ ನೆರವಾಗುತ್ತವೆ. ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಗೆ ಸಂಪೂರ್ಣ ಜವಾಬ್ದಾರಿ ನಾವೇ ಆಗಿರುತ್ತೇವೆ. ಆದರೆ ಆ ಸಮಯದಲ್ಲಿ ನಮಗೆ ತಿಳುವಳಿಕೆಯ ಕೊರತೆಯೊ ಅಥವಾ ತಾಳ್ಮೆ, ಸಮಾಧಾನದ ನಡೆ ನಮ್ಮಲ್ಲಿ ಇದ್ದಿರೋದಿಲ್ಲವೊ! ಒಟ್ಟಿನಲ್ಲಿ ಆ ಕ್ಷಣ ನಮ್ಮ ಬಗ್ಗೆ ನಾವು ಯೋಚಿಸದೆ ಆಗು ಹೋಗುಗಳ ಬಗ್ಗೆ ಬೇರೆಯವರನ್ನು ದೂಶಿಸಿ ನಮ್ಮನ್ನು ನಾವು ಸಂಭಾವಿತರಂತೆ ಕಾಣುತ್ತೇವೆ. ಕೆಲವೊಮ್ಮೆ ನಮಗೆ ನಮ್ಮ ನಡೆ ತಪ್ಪು ಅಂತ ಗೊತ್ತಿದ್ದರೂ ಬೇರೆಯವರ ಎದುರಲ್ಲಿ ನಮ್ಮನ್ನು ನಾವು ಸಮರ್ಥಿಸುವ ಪ್ರಯತ್ನ ಮಾಡುತ್ತೇವೆ. ಇದು ಒಂದು ರೀತಿ ಬಿಸಿ ರಕ್ತದ ಉಮೇದಿನೂ ಕಾರಣವಿರಬಹುದು.
ಜೀವನ ಕಳೆದಂತೆಲ್ಲ ಮನಸ್ಸಿನ ತಿಳುವಳಿಕೆ ಹೆಚ್ಚಾದಂತೆಲ್ಲ ನಮ್ಮನ್ನು ನಾವು ವಿಶ್ಲೇಷಿಸುವತ್ತ ಮನಸ್ಸು ವಾಲುತ್ತದೆ ಈ ನೆನಪುಗಳು ಕಾಡಿದಾಗ. ಆಗ ಮೊದಲಿನ ಹಿಂಸೆ, ನೋವು ತನ್ನ ಛಾಪನ್ನು ಬದಲಾಯಿಸಿಕೊಳ್ಳುತ್ತ ಹೋಗುತ್ತದೆ. ಅಲ್ಲಿ ಒಂದು ರೀತಿ ಜ್ಞಾನದ ಅರಿವು ಗೋಚರಿಸಲು ಪ್ರಾರಂಭವಾಗುತ್ತದೆ. ಮನಸ್ಸು negative thinking ಬಿಟ್ಟು positive thinking ಅತ್ತ ವಾಲುವುದು ನಮಗರಿವಿಲ್ಲದೆ ತನ್ನ ಕೆಲಸ ಮುಂದುವರಿಸುತ್ತದೆ. ಆಗ ಈ ಕ್ರೋದ, ಹತಾಷೆ ಎಲ್ಲ ಕಡಿಮೆ ಆಗಿ ಒಂದು ರೀತಿ ನಿರ್ಲಕ್ಷ್ಯ ಭಾವ, ಆಗಿದ್ದಾಯಿತು ಇನ್ಯಾಕೆ ಹಪಹಪಿಸಲಿ ಅನ್ನುವ ಸಂಕಲ್ಪ ತಾಳುತ್ತದೆ ಮನಸ್ಸು.
ಇದು ದೇವರ ಸಂಕಲ್ಪವಲ್ಲದೆ ಇನ್ನೇನು. ವಯಸ್ಸಾದ ಕಾಲದಲ್ಲಿ ಗತ ಕಾಲದ ನೆನಪಿನೊಂದಿಗೆ ಬದುಕು. ನಿನ್ನ ತಪ್ಪನ್ನು ಅರಿತುಕೊ. ನಿನ್ನ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊ. ಇರುವಷ್ಟು ದಿನಗಳನ್ನು ಒಳ್ಳೆಯ ಕಾರ್ಯದಲ್ಲಿ ತೊಡಗಿಸಿಕೊ. ಮಧುರವಾದ ನೆನಪುಗಳು ಮನಸ್ಸಿಗೆ ಹಿತ ನೀಡುವ ಗುಳಿಗೆ. ಅದೆ ಸಿಹಿ ಸಿಹಿ ಬೆಲ್ಲ. ಕಹಿ ನೆನಪುಗಳು ಕಷಾಯದ ಗುಳಿಗೆ. ಅದೆ ಬೇವು. ಈ ಎರಡು ಬೇವು ಬೆಲ್ಲದ ರುಚಿ ಕಂಡ ಮನುಷ್ಯನಿಗೆ ವಯಸ್ಸಾದ ಕಾಲದಲ್ಲಿ ಬರುವ ಪ್ರತಿ ಹಬ್ಬದಲ್ಲೂ ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕುತ್ತಲೆ ಕಳೆಯುತ್ತಾನೆ. ಅಯ್ಯೋ! ನಮ್ಮ ಕಾಲದಲ್ಲಿ ಹಾಗಿತ್ತು ಹೀಗಿತ್ತು. ಹಾಗೆ ನಡೆದಿತ್ತು ಹೀಗೆ ನಡೆದಿತ್ತು. ಹೀಗೆ ಹಲವಾರು ಸನ್ನಿವೇಶಗಳು ಮಕ್ಕಳು, ಮೊಮ್ಮಕ್ಕಳು ಬಂಧು ಬಾಂಧವರ ಹತ್ತಿರ ಹೇಳಿಕೊಳ್ಳದೆ ಇರಲಾರ. ಇಂತಹ ಕೆಲವು ನೆನಪುಗಳು ನನ್ನಲ್ಲೂ ನೆನಪಾಗಿವೆ.
ನಮ್ಮೂರು ಮಲೆ ನಾಡಿನ ಹಳ್ಳಿ. ಅಲ್ಲಿ ಎಲ್ಲ ಹಬ್ಬಗಳಲ್ಲೂ ಶಾಸ್ತ್ರ ಸಂಪ್ರದಾಯಕ್ಕೆ ಹೆಚ್ಚು ಮಹತ್ವ. ಈಗಿನ ವೈಭೋಗವಿಲ್ಲ. ಸುತ್ತ ಮುತ್ತಲ ಪ್ರಕೃತಿಯಲ್ಲಿ ದೊರೆಯುವ ಹೂ, ಹಣ್ಣು, ಕಾಯಿಗಳೆ ಹಬ್ಬಕ್ಕೆ ಕಳೆ. ಅದರಲ್ಲೂ ಈ ಯುಗಾದಿ ಹಬ್ಬದ ವೇಳೆ ಎಂದರೆ ಅಡಿಕೆ ಕೊಯ್ಲು ಮುಗಿಯುವ ಹಂತ. ಪೇಟೆಗೆ ಹೋದ ಅಡಿಕೆ ಚೀಲಗಳು ಎತ್ತಿನ ಗಾಡಿಯಲ್ಲಿ ವಾಪಸ್ಸು ಬರುವಾಗ ಮಳೆಗಾಲದ ಸಾಮಾನು ತುಂಬಿಕೊಂಡು ಮನೆ ಮಂದಿಗೆಲ್ಲ ಬಟ್ಟೆ ಅದೂ ಇದು ಎಲ್ಲ ಹೇರಿಕೊಂಡು ಅಪ್ಪ ಮನೆಗೆ ಬರುವ ವೇಳೆ ರಾತ್ರಿಯಾಗಿರುತ್ತಿತ್ತು. ಬಟ್ಟೆಯ ನೋಡಲು ಬಾಳೆಹಣ್ಣಿನ ಸುಕೇಳಿ ತಿನ್ನಲು ನಮಗೆಲ್ಲ ಆಸೆ .. ಆಗ ಈಗಿನಂತೆ ಚಾಕ್ಲೇಟು ಇಲ್ಲ ಆದರೆ ಈ ಸುಕೇಳಿ ಖಾಯಂ. ಇದು 1968-69ರ ಕಥೆ ನಾನೇಳುತ್ತಿರುವುದು.
ಊರಲ್ಲಿ ಕೊನೆಯ ಮನೆ ಗೆಳತಿ ಮಾದೇವಿ. ಕರೆಯೋದು ಮಾದಿ. ಎಲ್ಲಿ ಹೋಗೋದಿದ್ದರೂ ನಾನವಳೊಟ್ಟಿಗೆ ಅವಳೂ ಅಷ್ಟೆ. ಗುಡ್ಡದಲ್ಲಿ ಗೇರು, ಕೌಳಿಹಣ್ಣು, ಬಿಕ್ಕೆ ಹಣ್ಣು, ಮುಳ್ಳಣ್ಣು ಶ್ರಾಯ. ಸರಿ ಇಬ್ಬರೂ ಹಸಿ ಗೇರು ಬೀಜ ಕೊಯ್ದು ತರುವ ಹುನ್ನಾರದಲ್ಲಿ ಯಾರದ್ದೊ ಮನೆ ಗೇರು ಮರ ಹತ್ತಿ ಕೊಯ್ದು ಯಾರಿಗೂ ಕಾಣಬಾರದೆಂದು ಅಂಗಿ ಒಳಗಡೆ ಮೊದಲೆ ಪ್ಲ್ಯಾನು ಮಾಡಿಕೊಂಡಂತೆ ಸೇರಿಸಿಕೊಂಡು ಇನ್ನೇನು ಹೊರಡಬೇಕು. ಬಂದೇ ಬಿಟ್ಟ ಆ ಬೆಟ್ಟದ ವಾರಸುದಾರನ ಮಗ. “ಎಂತದ್ರೆ, ಯಮ್ಮನೆ ಬೆಟ್ಟಕ್ಕೆ ಬಂದು ಗೇರುಬೀಜ ಕೊಯ್ತ್ರನೆ? ಕೊಡಿ ಎಲ್ಲಾ ಇಲ್ಲಿ” ಅಂದಾಗ ನಾವಿಬ್ಬರೂ ಹೇಗೊ ಬೇಲಿ ಹಾರಿ ಮನೆಗೆ ಪರಾರಿ. ಎಲ್ಲರೂ ಮಧ್ಯಾಹ್ನ ಊಟ ಮಾಡಿ ಮಲಗಿದ ವೇಳೆ ನಾವು ಹೋಗಿದ್ದು ಬರುವ ಹೊತ್ತಿನಲ್ಲಿ ಅಪ್ಪ ಸಧ್ಯ ಇರಲಿಲ್ಲ. ಕದ್ದ ಗೇರಣ್ಣು ಬೀಜ ಮರೆಯಲ್ಲಿ ಇಬ್ಬರೂ ಹಂಚಿಕೊಂಡು ತೆಪ್ಪಗೆ ಇದ್ವಿ. ಮಾರನೇ ದಿನ ಯುಗಾದಿ ಹಬ್ಬ. ಬೆಳಿಗ್ಗೆ ನೋಡಿದರೆ ಮೈಯ್ಯೆಲ್ಲ ಚಿಕ್ಕ ಚಿಕ್ಕ ಬೊಕ್ಕೆಗಳು. ಹಸಿ ಗೇರುಬೀಜದ ಸೋನೆ ಮೈಗೆ ಮುಲಾಮು ಹಚ್ಚಿತ್ತು. ನಮಗೆ ಗೊತ್ತಿರಲಿಲ್ಲ. ಆಗಿನ್ನೂ ಹತ್ತು ವರ್ಷವಿರಬಹುದು ನಮಗೆ. ಅವಳ ಕಥೆನೂ ಅದೆ. ಆಯಿಗೆ (ಅಮ್ಮ) ಗೊತ್ತಾಗಿ ಎಲ್ಲರಿಂದ ಮಂಗಳಾರತಿನೂ ಆಯಿತು ಅನ್ನಿ.
ಈ ನೆನಪು ನನಗಂತೂ ಪ್ರತಿ ಯುಗಾದಿಗೂ ಸವಿ ಸವಿ ನೆನಪು. ತುಂಬಾ ನಗು ಬರುತ್ತದೆ ಒಂದಿಡಿ ಗೇರು ಬೀಜಕ್ಕೆ ಏನೇನೆಲ್ಲಾ ಕಸರತ್ತು ಮಾಡಿದ್ದೆ.
1979ನೇ ಇಸವಿ ನಾನು ಬೆಂಗಳೂರಿಗೆ ಮೊದಲ ಸಲ ಕಾಲಿಟ್ಟ ವರ್ಷ. ಸಿರ್ಸಿಯಿಂದ ಹಗಲು ಬಸ್ಸಿಗೆ ಎಷ್ಟಪ್ಪಾ ಬಸ್ ಚಾರ್ಜು ಅಂದರೆ ಹದಿನೇಳು ರೂಪಾಯಿ! ನಂಬೋಕೆ ಆಗಲ್ಲ ಅಲ್ವಾ! ನೋಡಿ ಎಷ್ಟು ಚೆನ್ನಾಗಿ ನೆನಪಿದೆ. ಈ ನೆನಪುಗಳು ಇನ್ನೊಂದು ವಿಚಿತ್ರ ಏನು ಗೊತ್ತಾ? ಯಾವುದು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅಂದುಕೋತೀವೊ ಅದು ನನ್ನಪ್ಪನಾಣೆಗೂ ನೆನಪಿರೋದೆ ಇಲ್ಲ. ಅದ್ಯಾವಾಗೊ ಟುಸಕ್ಕೆಂದು ಯಾವು ಯಾವುದೊ ನೆನಪುಗಳು ಎಷ್ಟು ವರ್ಷ ಆದರೂ ಮರೆಯೋದೆ ಇಲ್ಲ. ಇದೂ ಹಾಗೆ.
ಆಗ ಬೆಂಗಳೂರಿನಲ್ಲಿ ಇಡೀ ದಿನ ಸ್ವೆಟರ್ ಹಾಕಿಕೊಂಡು ಇರುವಷ್ಟು ಚಳಿ ಚಳಿ. ಇದ್ದದ್ದು ಶೇಷಾದ್ರಿಪುರಂ. ಮಹಡಿ ಮನೆ ನಮ್ಮಾವನ ಮನೆ.. ಟೈಪಿಂಗ ಕಲಿಯಲು ಬಂದಿದ್ದೆ. ನನಗೋ ಇಷ್ಟು ದೊಡ್ಡ ಪೇಟೆ ನೋಡಿದ್ದು ಆಗಲೇ. ಎಷ್ಟೋ ಬೀದಿಗಳನ್ನು ಊರು ನೋಡೊ ಹುಚ್ಚಲ್ಲಿ ಕಾಸಿಲ್ಲದೆ ಬರಿ ಕಾಲ್ನಡಿಗೆಯಲ್ಲಿ ನನ್ನತ್ತೆ, ತಂಗಿ ಜೊತೆ ಸುತ್ತಿದ್ದೆ ಸುತ್ತಿದ್ದು. ಆಗ ಬಂದಿತ್ತು ಒಂದು ಯುಗಾದಿ. ಅವಳಿಗೆ ಸ್ವಲ್ಪ ಸ್ವಲ್ಪ ಇಂಗ್ಲಿಷ್ ಬರುತ್ತಿತ್ತು. ನಾನು ಹಳ್ಳಿ ಗುಗ್ಗು. ಆದರೆ ಅವಳದೊಂದು ತಾಕೀತು. “ನೋಡು ಇಲ್ಲೆಲ್ಲರೂ ಇಂಗ್ಲಿಷ್ ಮಾತಾಡುತ್ತಾರೆ. ನಿನಗೆ ಇಂಗ್ಲಿಷ್ ಬರುವಂತೆ ನಟಿಸು. ಹೋ ಯಾ, ಯಸ್, ನೊ ಅಂತ ನಾನು ಮಾತಾಡಿದಾಗ ಉತ್ತರಿಸು ಸಾಕು.” ಅದೂ ಎಲ್ಲಾದರೂ ಬಸ್ಸು ಹತ್ತಿದರೆ ಅವಳ ಇಂಗ್ಲಿಷ್ ಜೋರು. ನಾನೋ ಅವಳು ಹೇಳಿದಂತೆ ಕೋಲೆ ಬಸವಾ.
ಕೈಯಲ್ಲಿ ಕಾಸಿಲ್ಲದೇ ಇದ್ದರೂ ನಮ್ಮ ಧಿಮಾಕೇನೂ ಕಡಿಮೆ ಇರಲಿಲ್ಲ. ಹಾಗೊಂದು ಮೂರು ನಾಲ್ಕು ಬಟ್ಟೆ ಅಂಗಡಿ ಹೊಕ್ಕು ಹೊಂಟು ಮಾಡಿ ಬಟ್ಟೆ ಎಲ್ಲಾ ತೆಗೆಸಿ ಹಾಕಿ ಹರಕು ಮುರುಕು ಇಂಗ್ಲಿಷ್ನಲ್ಲಿ ವ್ಯವಹಾರ ಮಾಡಿದ್ದು ಅದು ಏನೂ ತೆಗೆದುಕೊಳ್ಳದೆ. ಬರೀ ಶೋಕಿ..
ಆಯಿತು ಹಬ್ಬದ ದಿನ ನಮಗೇನು ಖರ್ಚಿಲ್ಲ, ಪೊಗದಸ್ತಾಗಿ ಹೋಳಿಗೆ ಊಟ,ಬಾಯಿತುಂಬ ಪಾನು, ಆಗಷ್ಟೆ ಹೊಸದಾಗಿ ಟೀವಿ ಬಂದ ಸಮಯ ಸಿನೇಮಾ ನೋಡುವ ಆತುರ. ಒಂದು ರೀತಿ ಜಾಲಿ ಲೈಫ್, ಜವಾಬ್ದಾರಿ ಕಿಂಚಿತ್ತೂ ಇರಲಿಲ್ಲ. ಬರಿ ನಗು ನಗು ನಗು. ಚೆನ್ನಾಗಿ ಇತ್ತು ಆಗ ಕಳೆದ ಬೆಂಗಳೂರಿನ ಯುಗಾದಿ ಹಬ್ಬ.
ಹಾಗೆ ಬಂತು 2008ರ ಯುಗಾದಿ. ಸಂಸಾರ, ಮನೆ, ಮಕ್ಕಳು ಎಲ್ಲ ಅನುಭವ ಮೇಳೈಸಿತ್ತು ಜೀವನದಲ್ಲಿ. ದೊಡ್ಡದೊಂದು ಹೇಳಿಕೊಳ್ಳಲಾಗದ ಆಘಾತ. ದೇವರಿಗೆ ತಪ್ಪದೆ ಮಾಡುವ ಪೂಜೆಯನ್ನು ಬಿಡದೆ ಅಳುತ್ತ ಮಂಗಳಾರತಿ ಎತ್ತಿ ತಣ್ಣನೆಯ ಮೊದಲನೆ ದಿನ ಮಿಕ್ಕಿ ಉಳಿದ ತಂಗಳು ತಿಂದು ಯುಗಾದಿ ಹಬ್ಬ ಆಚರಿಸಿದ ಕಹಿ ಕಹಿ ಕಷಾಯ ಕುಡಿದ ನೆನಪು ಕೂಡಾ ಪ್ರತಿ ಯುಗಾದಿಗೆ ನೆನಪಾಗದೆ ಇರೋದಿಲ್ಲ. ಆಗೆಲ್ಲ ಕಣ್ಣು ಮಂಜಾದರೂ ಮರೆಯುವ ಶಕ್ತಿ ದೇವರು ಎಲ್ಲರಿಗೂ ಕೊಟ್ಟಂತೆ ಕ್ಷಣದಲ್ಲಿ ಮರೆತು ಇಂದಿಗೂ ಸಿಹಿ ಕಹಿ ನೆನಪಿನೊಂದಿಗೆ ಹಬ್ಬವನ್ನು ಆಚರಿಸುತ್ತೇನೆ. ಆದರೆ ಕಳೆದೆರಡು ವರ್ಷದಿಂದ ಪಂಚಾಗದ ದುಡ್ಡು, ಇನ್ನಿತರ ಆಡಂಬರಕ್ಕೆ ವ್ಯಯವಾಗುವ ದುಡ್ಡು ಹಾಗೆಯೆ ಎತ್ತಿಟ್ಟು ಮನೆ ಮುಂದೆ ಬರುವ ಪರಿಸರ ಶುಚಿಗೊಳಿಸುವ ನನ್ನ ಬಂಧುಗಳಿಗೆ ಹಂಚಿ ತೃಪ್ತಿ ಪಡುತ್ತೇನೆ. ಪಂಚಾಂಗ ತಂದು ಒಂದು ದಿನ ಓದಿ ಮೂಲೆಯಲಿ ಧೂಳು ಹಿಡಿಯುವ, ಒಬ್ಬಟ್ಟು ಅದೂ ಇದೂ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಹೀಗೆ ಹಬ್ಬ ಆಚರಿಸಿದರೆ ಕಳೆದು ಕೊಳ್ಳುವುದು ಏನು? ಒಂದು ರೀತಿ ನಿರ್ಲಿಪ್ತವೊ, ಶಕ್ತಿಯ ಹೀನತೆಗೊ ಗೊತ್ತಿಲ್ಲ ಎಲ್ಲ ಹಬ್ಬಗಳು ದೇವರಿಗೆ ಹೂ, ಹಣ್ಣು, ಕಾಯಿ, ಪತ್ರೆ ಪೂಜೆಯಲ್ಲಿ ಮುಗಿಸುವುದರಿಂದ ಮನಸ್ಸಿಗಂತೂ ಖುಷಿ ಇದೆ. ಪರಮಾತ್ಮನಲ್ಲಿ ಅಳಲು ಹೇಳಿಕೊಳ್ಳಲು ಹಬ್ಬದ ದಿನವೂ ಸಮಯಾವಕಾಶ, ದೇವಸ್ಥಾನದಲ್ಲಿನ ಪಂಚಾಂಗ ಶ್ರವಣ ಕೇಳಲು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ.
ಈಗ ಹೇಳಿ. ನೆನಪುಗಳು ಬೇಕಲ್ಲವೆ? ಎಲ್ಲ ನೆನಪುಗಳನ್ನೂ ನೆನಪಿಸಿಕೊಂಡು, ನೆನಪಾಗಿ ಉಳಿಸಿಕೊಂಡು ಬರುವ ಯುಗಾದಿಯನ್ನು ಮನಸಿನ ಸಂಭ್ರಮದೊಂದಿಗೆ ಎಲ್ಲರೂ ಆಚರಿಸೋಣ. ಸರ್ವರಿಗೂ ಈ ಯುಗಾದಿ ಸಂತಸವನ್ನೇ ನೀಡಲಿ. ಹಬ್ಬದ ಶುಭಾಶಯಗಳು
ಚಿತ್ರ ಕೃಪೆ : http://nammakinnigoli.com
ಜೆ.ಕೃಷ್ಣಮೂರ್ತಿ ಟೀಚಿಂಗ್ಸ್ ಓದಿ ನೆನಪುಗಳನ್ನು ಬದಿಗಿಟ್ಟು ನಿತ್ಯ ನೂತನ ಬದುಕನ್ನು ನೋಡಿ,ಗ್ರಹಿಸಿ ಅನುಭವಿಸುತ್ತಲೇ ಇರಿ. ಇದರ ಬಹು ಮುಖ್ಯ ಭಾಗವೆಂದರೆ ನಾನು ಅನುಭವಿಸುತ್ತೇನೆಂದು ( ಮನಸ್ಸಿನಲ್ಲಿ ಕೂಡಿಹಾಕಬೇಕೆನ್ನುವ….ಭಾವ ….ಇದು ಇಂದು ಅಭ್ಯಾಸ ) ಎಂದು ಹೇಳಬೇಡಿ. ಇದು ಅನಿಭವಎಂದು ಹೇಳದೆ ಅನುಭವಿಸುತ್ತಲಿರುವದು. ಯಾವಾಗಲು ಈಗ. ರೈಟ್ ನೌ ಪ್ರತಿಕ್ಷಣ ಹೊಸದು.
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು