ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 3, 2017

ಪೀರಾಯರ ಒಂದು ಕಥಾನಕ (ನೀಳ್ಗತೆ ಭಾಗ-೫)

‍ನಿಲುಮೆ ಮೂಲಕ

– ಮು. ಅ ಶ್ರೀರಂಗ ಬೆಂಗಳೂರು

ಪೀರಾಯರು ನಾಲ್ಕೈದು ದಿನಗಳಲ್ಲಿ ತಾವು ಬರೆಯಬೇಕೆಂದುಕೊಂಡಿದ್ದ ಕಥೆಯನ್ನು ಬರೆದು ಮುಗಿಸಿದರು. ಕೊನೆಯ ಸಾಲು ಬರೆದು ಮುಗಿಸಿದಾಗ ಏನೋ ಒಂದು ಭಾರ ತಲೆಯಿಂದ ಇಳಿದ ಹಾಗೆ ಅನಿಸಿತು. ಇದುವರೆಗೆ ಭಾರ ಹೊತ್ತುಕೊಂಡವನಂತೆ ಇದ್ದದ್ದು ಈಗ ನಿರಾಳ ಅನಿಸುತ್ತಿದೆ ಎಂದು ಭಾವಿಸುವುದು ಕೇವಲ ನನ್ನ ಕಲ್ಪನೆಯೇ? ಹೀಗೆಲ್ಲಾ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳಬಾರದೆಂದು ಅನಿಸಿತು. ತಮ್ಮ ಗಂಡ ಮೂರ್ನಾಲಕ್ಕು ದಿನಗಳಿಂದ ಸಂಜೆ ವಾಕಿಂಗೂ ಬಿಟ್ಟು ಮತ್ತೆ ಲಾಪ್ಟಾಪ್ ಹಿಡಿದು ಕುಳಿತಿದ್ದು ಕಂಡು ರಾಯರ ಹೆಂಡತಿ ‘ಏನು ಮತ್ತೆ ಶುರು ಮಾಡಿದಿರಲ್ಲ ನಿಮ್ಮ ಹಳೇ ಚಾಳಿ? ಸಂಜೆ ವಾಕಿಂಗೂ ಬಿಟ್ಟಿದ್ದೀರಿ. ಏಕೆ? ಯಾರ ಜೊತೆಯಾದರೂ ಚಾಟಿಂಗೋ?’

‘ನೋಡೇ ಆಪಾದನೆ ಮಾಡೋಕು ಒಂದು ಇತಿ ಮಿತಿ  ಅಂತ ಇರಬೇಕು. ಫೇಸ್ ಬುಕ್ ನಲ್ಲಿ ಚಾಟಿಂಗ್ ಮಾಡ್ಕೊಂಡು ಇರೋ ವಯಸ್ಸೇನೆ ನಂದು?’
‘ಹುಣಿಸೆ ಮರ ಮುಪ್ಪಾದರೇ ಹುಳಿ ಮುಪ್ಪೇ?. ವೇದದ ಮಾತು ಸುಳ್ಳಾದರೂ ಗಾದೆ ಮಾತು ಸುಳ್ಳಾಗಲ್ಲ’
‘ನೀನು ಇವತ್ತು ನೋಡಿದ ಯಾವುದೋ ಹಳಸಲು ಸೀರಿಯಲ್ ನ ಹೊಸ ಡೈಲಾಗೋ ಇದು?’
‘ಪ್ರಶ್ನೆಗೆ ಮರುಪ್ರಶ್ನೆ ಉತ್ತರವಾಗಲ್ಲ. ಎದುರಿಗೆ ಸಾಕ್ಷಿನೇ ಇದೆಯಲ್ಲ?’
‘ಒಳ್ಳೆ ಲಾ ಪಾಯಿಂಟ್ ಹಾಕ್ತಿಕಣೆ ನೀನು. ನಿನ್ನ ವಂಶದಲ್ಲಿ ಯಾರಾದರೂ ಫೂಟ್ ಲಾಯ್ರಿಗಳಿದ್ದರೇನೇ?. ನೋಡು ಜಾಸ್ತಿ ಮಾತಾಡಕ್ಕೆ ನಂಗೆ ಇಷ್ಟ ಇಲ್ಲ. ಎರಡು ಮೂರು ದಿನಗಳ ಹಿಂದೆ ಎಲೆಕ್ಷನ್ ರಿಸಲ್ಟ್ ಬಂತಲ್ಲ ಐದು ರಾಜ್ಯಗಳದ್ದು. ಅದರ ಬಗ್ಗೆ ಒಂದಷ್ಟು ಲೇಖನಗಳಿದ್ವು. ಅದನ್ನು ಓದ್ತಿದ್ದೆ. ಈಗ ಮುಗಿತು. ವಾಕಿಂಗ್ ಗೆ ಹೊರಟೆ.. ಕಾಫಿ ಕೊಡೋ ಹಾಗಿದ್ದರೆ ಕೊಡು. ನೀನು ಮಠಕ್ಕೆ ಆ ಆಚಾರ್ಯರ ಪ್ರವಚನ ಕೇಳೋಕೆ ಹೋಗೋಳ್ ತಾನೇ. ಇನ್ನೂ ಎಷ್ಟು ದಿನ ಅಂತೆ ಅವರ ಪ್ರವಚನ. ನಾನು ಮನೆ ಕೀ ತೊಗೊಂಡು ಹೋಗ್ತೀನಿ. ನಿನ್ನ ಹತ್ರ ಒಂದು ಸೆಟ್ ಇದೆಯಲ್ಲ’ ಎನ್ನುತ್ತಾ ಮುಂದಿನ ಮಾತಿಗೆ ಅವಕಾಶ ಕೊಡದವರಂತೆ ವಾಷ್ ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡರು.

ವಾಕಿಂಗ್ ಮಾಡುತ್ತಾ ತಾವು ಬರೆದ ಕತೆಯಲ್ಲಿ ಉಪಯೋಗಿಸಿದ ಭಾಷೆ, ತಂತ್ರ ಪರವಾಗಿಲ್ಲ ಅನಿಸಿತು. ಒಂದಷ್ಟು ಪದಗಳ ಕಾಗುಣಿತ ತಿದ್ದಬೇಕಾಗಬಹುದು. ಕತೆಗೆ ಹೆಸರೇನು ಇಡಲಿ? ‘ಮೂರು ಜೀವ ಮೂರು ಜೀವನ’. ಬೇಡ ಇದು ಹಳೆ ಕಾಲದ್ದು. ‘ಮೂರು ಬಿಂದುಗಳು’. ಊಹೂಂ ಬೇಡ. ‘ತ್ರಿಕೋನ’. ಇದು ಪರವಾಗಿಲ್ಲ. ಆಯ್ತು. ನಾಳೆ ನಾಡಿದ್ದು ಕೂತು ಕಥೆಯನ್ನು ಸ್ವಲ್ಪ ತಿದ್ದೋಣವೆಂದು ಕೊಂಡು ಮಾಮೂಲಿಗಿಂತ ಪಾರ್ಕಿನಲ್ಲಿ ಒಂದೆರೆಡು ಸುತ್ತು ಜಾಸ್ತಿ ಹಾಕಿದರು.

ಪೀರಾಯರು ಬರೆದ ಒಂದು ಕಥೆ:- ತ್ರಿಕೋನ
——————————————
-೧-

ನನ್ನ ಅವ್ವ ಸತ್ತಾಗ ನನಗೆ ಹನ್ನೆರೆಡು ವರ್ಷ ಅಲ್ಲವೇ? ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ.. ಮೂರು ದಿನ ಎದೆ ನೋವೆಂದು ಮಲಗಿದ್ದಳು. ನಾಲ್ಕನೇ ದಿನ ಅಪ್ಪ ಸೈಕಲ್ ಮೇಲೆ ನಮ್ಮೂರಿಗಿಂತ ಸ್ವಲ್ಪ ದೊಡ್ಡದಾಗಿದ್ದ ವೆಂಕಟಾಪುರಕ್ಕೆ ಹೋಗಿ ಅಲ್ಲಿಂದ ಒಂದು ರಿಕ್ಷಾವನ್ನು ಬಾಡಿಗೆಗೆ ತಂದು ಪಾವಗಡದ ಆಸ್ಪತ್ರೆಗೆ ಅಮ್ಮನನ್ನು ಕರ್ಕೊಂಡು ಹೋದ. ಜತೆಗೊಬ್ಬ ಹೆಂಗಸೂ ಇರ್ಬೇಕು ಅಂತ ಪಕ್ಕದ್ಮನೆ ಲಕ್ಷ್ಮಮ್ಮ ತಾನೂ ಹೋದಳು. ಪಾವಗಡ ಸರ್ಕಾರಿ ಆಸ್ಪತ್ರೆ ಡಾಕ್ಟ್ರು ತುಂಕೂರಿನ ದೊಡ್ಡ ಆಸ್ಪತ್ರೆಗೆ ಹೋಗ್ಬೇಕಪ್ಪ. ಇಲ್ಲಿ ಆಗಲ್ಲ. ಅಂದ್ರಂತೆ. ಅದೇ ರಿಕ್ಷಾದಲ್ಲಿ ಮೂರು ಜನನೂ ಹೋದ್ರು. ದಾರೀಲಿ ಹೋಗ್ತಾ ಇದ್ದಾಂಗೆ ಅಮ್ಮನ ಕೈಕಾಲು ತಣ್ಣಗಾಗ್ತಾ ಬಂತಂತೆ. ದೊಡ್ಡ ಆಸ್ಪತ್ರೆ ಡಾಕ್ಟ್ರು ಜೀವ ಹೋಗ್ಬಿಟ್ಟಿದೆ ಕಣಪ್ಪ ಅಂದ್ರಂತೆ. ವಾಪಸ್ ಅದೇ ರಿಕ್ಷಾದಲ್ಲಿ ಜೀವಂತವಾಗಿ ಹೋಗಿದ್ದ ಅವ್ವ ಹೆಣವಾಗಿ ವಾಪಸ್ ಬಂದ್ಲು. ಅಮ್ಮನ ಮಣ್ಣು ಆದ್ಮೇಲೆ ಅಪ್ಪ ಮೂರ್ನಾಲಕ್ಕು ದಿನ ಇದೇ ಮಾತಾಡ್ತಾ ಆಡ್ತಾ ಇದ್ದಿದ್ದ್ರಿಂದ ಅದೆಲ್ಲಾ ನನಗೆ ಈಗ ಕೇಳಿದ ಹಾಗೆ, ಕಣ್ಣಲ್ಲಿ ಕಟ್ಟಿದ ಹಾಗೆ ಇದೆ. ಹತ್ತನೇ ದಿನ ಆದ್ಮೇಲೆ ಬಂದಿದ್ದ ಹತ್ತಿರದ ನೆಂಟರೆಲ್ಲಾ ಅವರವರ ಊರಿಗೆ ಹೋದ್ರು. ಮನೆಯಲ್ಲಿ ಅಪ್ಪನ ಜತೆಗೆ ನಾನು, ನನ್ನ ತಂಗಿ ಇಬ್ಬರು ತಮ್ಮಂದ್ರು.. ಕೊನೆಯ ಇಬ್ಬರಿಗೆ ನಾಲ್ಕು ಐದು ವರ್ಷವೇನೋ? ಅಷ್ಟೇ. ಅವ್ವ ಎಲ್ಲಿ? ಅವ್ವ ಬೇಕು ಅಂತ ಅಳೋರು. ಹತ್ತು ವರ್ಷದ ತಂಗಿಗೆ ಅವ್ವ ಸತ್ತೋಗಿದಾಳೆ. ಇನ್ನು ಬರಲ್ಲ ಅಂತ ಗೊತ್ತಾಗಿರಬೇಕು. ಅಳ್ತಿರ್ಲಿಲ್ಲಾ. ಆದ್ರೆ ಮಂಕಾಗಿರೋಳು. ಅಪ್ಪನಿಗೆ ಹೆಂಡತಿ ಸತ್ತು ಹೋದ ದುಃಖ ಒಂದು ಕಡೆಯಾದರೆ, ಇನ್ನು ಈ ಮನೆ ಹೊಲ ಎರಡೂ ಕಡೆ ನಾನೊಬ್ನೆ ಹೇಗೆ ನಿಭಾಯ್ಸ್ಲಿ ಅನ್ನೋ ಚಿಂತೆ ಮತ್ತೊಂದೆಡೆ. ಎರಡೂ ಸೇರಿಕೊಂಡು ಕೊನೆ ಇಬ್ಬರು ಮಕ್ಕಳ ಗಲಾಟೆ ನೋಡೋ ತಂಕ ನೋಡಿ ಹೊಡೀತಿದ್ದ. ನಾನು ಮಧ್ಯೆ ಹೋಗಿ ಬಿಡಿಸ್ಕೊತ್ತಿದ್ದೆ. ‘ಯಾಕ್ ಆ ಮಕ್ಕಳ್ನ ಹೊಡಿತಿ. ಅವಕ್ಕೆ ಏನು ಗೊತ್ತಾಗತ್ತೆ. ಬಿಡು’ ಅಂತ. ‘ಏನೋ ನೀನೇ ಸಮಾಧಾನ ಮಾಡವ್ವ. ನಂಗೆ ಸಾಕಾಗ್ ಹೋಗಿದೆ ಈ ಸಂಸಾರ’ ಅಂತ ಆಚೆ ಕಡೆ ಹೊರ್ಟ್ಹೋಗೋನು. ಹಾಗೂ ಹೀಗೂ ಒಂದ್ ವರ್ಷ ಕಳೀತು. ಒಂದ್ ದಿನ ಗುಬ್ಬಿ ಹತ್ತಿರದ ಒಂದು ಹಳ್ಳಿಲಿ, ಏನ್ ಅದರ ಹೆಸರು, ಅರೇಹಳ್ಳಿನೊ ಅವ್ವೆರಹಳ್ಳಿನೊ ಇರ್ಬೇಕು, ಇದ್ದ ನಮ್ಮಪ್ಪನ ಅಕ್ಕ ಮಧ್ಯಾನ್ಹ ಬಂದ್ಲು. ಬೆಳಗ್ಗೆ ರೊಟ್ಟಿ ತಿಂದು ಚಿಕ್ಕೋರು ಇಬ್ರು ಏನೋ ಆಟ ಆಡಕ್ಕೊಂಡ್ ಇದ್ವು. ನಾನು ಹಿಟ್ಟು ಸೊಪ್ಪಿನ ಸಾರು ಮಾಡ್ತಾ ಅಡ್ಗೆ ಮನೇಲಿ ಇದ್ದೆ.

‘ರಮವ್ವಾ ಏಳು. ನಾನು ಒಂದೆರೆಡ್ ದಿನಾನಾದ್ರೂ ಮಾಡ್ತೀನಿ. ನಿಮ್ಮವ್ವ ನಿಮ್ನೆಲ್ಲಾ ಇಷ್ಟು ಬೇಗ ಬಿಟ್ ಆ ಶಿವ್ನ್ ಪಾದ ಸೇರ್ಕೊಂಡ್ ಬಿಟ್ಲಲ್ ಅವ್ವಾ? ಏಳು ಏಳು. ಬೇರೆ ಏನಾರ ಕೆಲ್ಸ್ ಇದ್ರೆ ಮಾಡ್ಕೋ ಹೋಗವ್ವಾ’. ಅಂತ ತಾನೇ ಒಲೆ ಮುಂದೆ ಕೂತ್ಲು. ಊಟ ಆದ್ಮೇಲೆ ‘ಸಿದ್ರಾಮು ಇನ್ನು ಎಷ್ಟು ದಿನಾ ಅಂತ ನೀನು ಈ ಸಣ್ಣ ಮಕ್ಕಳನ್ನ ಕಟ್ಕೊಂಡು, ಹೊಲ, ಮನೆ ಅಂತಾ ಒಬ್ನೇ ಒದ್ದಾಡ್ತಿಯಪ್ಪಾ? ರಮವ್ವಾ ಇಸ್ಕೂಲ್ ಗೂ ಹೋಗಿ ಮನೇಲೂ ಮಾಡಕ್ ಆಗ್ತದಾ? ಆ ಹೆಣ್ಣು ಇನ್ನೊಂದೆರೆಡ್ ವರ್ಷಕ್ಕೆ ದೊಡ್ಡೋಳಾಗ್ತಾದೆ. ಆಮೇಲೆ ಮದ್ವೆ ಮಾಡ್ಬೇಡ್ವಾ?’
‘ನಂಗ್ ಒಂದೂ ತೊಚ್ತಿಲ್ಲ ಕಣಕ್ಕಾ. ಆಗ ತಂಕಾ ಮಾಡ್ತೀನಿ. ಆಮೇಲ್ ನಾನು ಯಾವ್ದಾದ್ರು ಕೆರೇನೋ ಭಾವಿನೋ ನೋಡ್ಕೊಂಡು ಶಿವ್ನ್ ಪಾದ ಸೇರ್ಕೊತ್ತೀನಿ’.
‘ಯಾಕಪ್ಪಾ ನಾವೆಲ್ಲಾ ಸತ್ ಹೋಗಿದೇವೇನಪ್ಪ ನಿನ್ ಪಾಲ್ಗೆ?’
‘ಹಾಂಗಾರೆ ನಾನೇನ್ ಮಾಡ್ಲಿ ನೀನೇ ಹೇಳಕ್ಕಾ?’

ಹೀಗೆ ಮಾತಾಡ್ತಾ ಆಡ್ತಾ ಅದೂ ಇದೂ ಹೇಳ್ತಾ ಸಂಜೆ ಹೊತ್ತಿಗೆ ಅಪ್ಪನ್ನ ಎರಡನೇ ಮದುವೆಗೆ ಒಪ್ಪಿಸಿಯೇ ಬಿಟ್ಟಳು. ಆಮೇಲೂ ಎರಡು ದಿನ ಇದ್ದು ತನ್ನೂರಿಗೆ ಹೋದ್ಲು. ಅದಾಗಿ ಮೂರ್ನಾಲಕ್ಕು ತಿಂಗಳಿಗೆ ಗುಬ್ಬಿ ಕಡೆಯ ಒಂದು ಹಳ್ಳಿಯಲ್ಲಿ ಅಪ್ಪನಿಗೆ ಎರಡನೇ ಮದುವೆ ಆಯ್ತು. ಅಪ್ಪನ ಎರಡನೇ ಹೆಂಡತಿ, ನನ್ನ ಮಲತಾಯಿ, ನಮ್ಮ ಮನೆಗೆ ಬಂದ್ಲು. ನಾನು ನನ್ನ ತಂಗಿ ಸರೋಜಾ ಅವಳ್ನ ಚಿಕ್ಕವ್ವ ಅಂದ್ರೆ ‘ಅಲ್ಲ ಕಣವ್ವಾ ನಾನೂ ನಿಮ್ಮವ್ವ ಇದ್ದಂಗೆ ಅಲ್ವ. ಅವ್ವ ಅಂತ ಕರೀರವ್ವಾ’ ಅಂತ ನಯವಾಗಿ ಮಾತಾಡಿಸಿ, ‘ನೀವು ಸ್ಕೂಲು ಪಾಠ ಓದದು, ಬರ್ಯೋದು ಮಾಡ್ಕಳಿ. ನಾನು ಮನೆ ಕೆಲಸ ನೋಡ್ಕೋತೀನಿ. ಹೆಣ್ಣ್ ಮಕ್ಳು ಓದೋ ಟೈಮ್ನಾಗೆ ಓದ್ಕೊಬೇಕು. ಮದ್ವೆ ಆದ್ ಮೇಲೆ ಗಂಡನ್ ಮನ್ಯಾಗೆ ಹಿಟ್ ತೋಳ್ಸ್ಕೊಂಡ್, ಮಕ್ಳ್ ಹೆತ್ತ್ಕೊಂಡ್ ಇರೋದ್ ಇದ್ದೇ ಇದೆ’ ಅನ್ನೋಳು. ಚಿಕ್ಕಂದಿನಲ್ಲಿ ಸ್ಕೂಲಿನ ಪಾಠಗಳಲ್ಲಿದ್ದ ಪುರಾಣದ ಒಂದೆರೆಡು ಕಥೆಗಳ ಮಲತಾಯಿಯರ ಬಗ್ಗೆ ಓದಿದ್ದ ನನಗೆ, ನನ್ನ ಈ ಮಲತಾಯಿ ಹಾಗೆ ಇಲ್ಲವಲ್ಲ ಸದ್ಯ ಎಂದು ನೆಮ್ಮದಿಯಾಗಿರಬಹುದು. ಇಲ್ಲವೆಂದಲ್ಲ. ನನ್ನ ಜತೆ ಓದುತ್ತಿದ್ದ ಒಂದಿಬ್ಬರಿಗೂ ಅವರ ತಾಯಿ ಸತ್ತು ಹೋಗಿದ್ದರು. ತಮ್ಮ ಮನೆಯಲ್ಲಿ ಮಲತಾಯಿ ಕೊಡುತ್ತಿದ್ದ ಕಷ್ಟಗಳು, ಆಡುತ್ತಿದ್ದ ಬೈಗುಳಗಳ ಮಾತುಗಳನ್ನು ಹೇಳಿಕೊಂಡು ಅಳುತ್ತಿದ್ದರು. ಹೀಗಾಗಿ ಒಂದೆರೆಡು ವರ್ಷಗಳಲ್ಲಿ ನನ್ನ ಚಿಕ್ಕಂದಿನಲ್ಲೇ ಅವ್ವ ಸತ್ತು ಹೋದ ವಾಸ್ತವದ ತೀವ್ರತೆ ಸ್ವಲ್ಪ ಕಡಿಮೆ ಆಗಿರಬಹುದು. ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದಿನ ಘಟನೆಗಳು ಜ್ಞಾಪಕ ಇರುವ ಹಾಗೆ ಆಗ ಮನಸ್ಸಿನಲ್ಲಿ ಮೂಡಿದ ಭಾವನೆಗಳೆಲ್ಲವೂ ನೆನಪಿನಲ್ಲಿ ಇರುವುದು ಸಾಧ್ಯವಿಲ್ಲ. ಈಗ ಕಾಲ ಸರಿದಂತೆ ನನ್ನ ಅವ್ವ ಅಷ್ಟು ಬೇಗ ಸತ್ತುಹೋದಳಲ್ಲ ಎಂಬ ದುಃಖ ಇದ್ದರೂ ಆ ಭಾವದ ತೀವ್ರತೆ ಕಮ್ಮಿಯಾಗುತ್ತಾ ಹೋಗಿದೆ ಅಲ್ಲವೇ?. ಸರೋಜಾ ಆಗಲೂ ಹೆಚ್ಚು ಮಾತಾಡುತ್ತಿರಲಿಲ್ಲ; ಈಗಲೂ ಅಷ್ಟೇ. ಅವಳಿಗೆ ಏನೆನ್ನಿಸಿರಬಹುದು? ಇನ್ನು ಕೊನೆಯ ಇಬ್ಬರು ಚಿಕ್ಕವರು. ಯಾರು ಪ್ರೀತಿ ತೋರಿಸುತ್ತಾರೋ ಅವರಿಗೇ ಹೊಂದಿಕೊಂಡು ಹೋಗುವ ವಯಸ್ಸು. ನನ್ನ ಚಿಕ್ಕವ್ವ ಮೊದಲನೇ ಹೆರಿಗೆಗೆ ಹೋಗುವ ಹೊತ್ತಿಗೆ ನಾನು ಏಳನೇ ಕ್ಲಾಸಿನ ಪರೀಕ್ಷೆ ಬರೆದು ಮುಗಿಸಿದ್ದೆ. ಎರಡು ತಿಂಗಳ ಬೇಸಿಗೆ ರಜ. ಮನೆ ಕೆಲಸ ಮಾಡಿಕೊಂಡು ಇದ್ದೆ. ಸರೋಜಾ ಅದು ಇದು ಸಹಾಯ ಮಾಡುತ್ತಿದ್ದಳು. ಕೊನೆಯವರಿಬ್ಬರು ತಮ್ಮ ಪಾಡಿಗೆ ತಾವು ಇದ್ದರು. ಮೊದಲಿನಷ್ಟು ಗಲಾಟೆ ಇಲ್ಲ. ರಜ ಮುಗಿಯುವ ದಿನ ಹತ್ತಿರ ಬರುತ್ತಿತ್ತು. ಆಗ ನಮ್ಮೂರಿನಲ್ಲಿ ಹೈ ಸ್ಕೂಲ್ ಇರಲಿಲ್ಲ. ಈಗ ಆಗಿದೆಯಂತೆ. ಎಂಟನೇ ಕ್ಲಾಸು ಓದಬೇಕಾದರೆ ಮೂರು ಮೈಲಿ ದೂರದಲ್ಲಿದ್ದ ವೆಂಕಟಾಪುರಕ್ಕೆ ಹೋಗಬೇಕಾಗಿತ್ತು. ಪಕ್ಕದಮನೆ ಲಕ್ಷ್ಮಮ್ಮನ ಮಗಳು ಜಯಂತಿನೂ ನನ್ನ ಜತೆಯವಳೇ. ಒಂದು ಮಧ್ಯಾನ್ಹ ಲಕ್ಷಮ್ಮ ಮನೆಗೆ ಬಂದು ‘ಸಿದ್ರಾಮಣ್ಣ ಮುಂದೆ ರಮವ್ವನ್ನ ಓದಕ್ಕೆ ಕಳ್ಸಲ್ವೇನಪ್ಪಾ? ನಮ್ಮ ಹುಡ್ಗಿ ಹಂಗಂದ್ಲು. ಅವ್ಳ್ ತಾವ ನಂಗೆನೋ ಹೈ ಸ್ಕೂಲ್ಗೆ ಹೋಗಿ ಓದಾಕ್ ಇಷ್ಟ. ಆದ್ರೆ ನಮ್ ಅಪ್ಪ ಬೇಡಾ ಅಂತಾನೆ ಅಂದ್ಳಂತೆ’.
‘ಸಾಕ್ ಬಿಡು ಲಕ್ಷಮ್ಮಕ್ಕ. ಇವಳೆನ್ ಇನ್ನೂ ಓದಿ ಅಮುಲ್ದಾರಾಗಿ ತಾಲೋಕ್ ಆಳ್ ಬೇಕಾ?’
‘ಈ ಅಳ್ಳೀಲಿ ಕೂತ್ಕೊಂಡ್ ಇರೋ ನಂಗೆ ನಿಂಗೆ ಹಂಗ್ ಅನ್ಸ್ಬೋದು ಕಣಣ್ಣಾ. ನನ್ ತಮ್ಮ ಅದೇ ಮೈಸೂರ್ ಹತ್ರ ಒಂದ್ ಹಳ್ಳಿಲೀ ಮೇಷ್ಟ್ರಾಗವ್ನಲ್ಲಾ ಅವ್ನ ನೀನೋಡಿಲ್ವಾ?’
‘ಹೂಂ ನೋಡಿವ್ನಿ. ಮುಂದಕ್ ಹೇಳವ್ವಾ’
‘ಅವ್ನು ರೂಮ್ ಮಾಡ್ಕೊಂಡಿರೋದು ಮೈಸೂರ್ ಪಟ್ಣದಾಗೆ. ದಿನಾ ಕೆಲ್ಸ್ಕೆ ಬಸ್ನಾಗೆ ಬೆಳ್ಗೆ ಆ ಹಳ್ಳಿಗ್ ಹೋಗ್ತಾನೆ ಸಂಜ್ಕೆ ಬತ್ತಾನೆ. ಆ ಪಟ್ನದಾಗೆ ಹೆಣ್ ಮಕ್ಳೂ ಕಾಲೇಜ್ ತಂಕಾ ಓದಾಕ್ ಹೋಗ್ತಾರಂತೆ. ಅಂತದ್ರಾಗೆ ನೀನ್ ಏನ್ ಮಾತು ಅಂತ ಆಡ್ತಿಯಪ್ಪಾ?’
‘ಹಾಂಗಾರೆ ಈ ನಮ್ ಹಳ್ಳಿನ ಮೈಸೂರ್ ತರ ಮಾಡಕ್ ನೀ ಹೊಂಟಿದಿಯಾ. ಈ ಸರಿ ಎಲೆಕ್ಸ್ನ್ ಗಾದ್ರೂ ನಿಂತ್ಕೋ. ನನ್ ಓಟು ನಿಂಗೇಯಾ’.
‘ನೋಡು ನಗ್ಸಾರದ ಮಾತು ಸಾಕು. ಈಗಿನ್ ಕಾಲ್ದಾಗೆ ಹೆಣ್ ಮಕ್ಳು ಒಂದ್ ಹತ್ನೇ ಕಲಾಸ್ ಗಂಟಾನಾರಾ ಓದಿರಬೇಕು. ರಮವ್ವಾ ಅದ್ಕೆ ಏನೋ ಅಂತಾರಲ್ಲ ಏನವ್ವಾ ಅದು?’
ಅಲ್ಲೇ ಕೂತಿದ್ದ ನಾನು ‘ಎಸ್ ಎಸ್ ಎಲ್ ಸಿ’ ಅಂದೆ.
‘ಹೂಂ ಅದೇಯಾ. ನಂ ಹುಡ್ಗಿ ವೆಂಕ್ಟಾಪುರದಾಗೆ ಇದ್ಯಲ್ಲಾ ಹೈಸ್ಕೂಲ್ಗೆ ಹೋಗ್ತಾಳೆ. ನೀನೂ ಸುಮ್ಕೆ ಕಳ್ಸು. ಒಬ್ರಿಗೊಬ್ರು ಜತೆಯಾಗ್ತದೆ. ಬಾಣಂತನಕ್ಕೆ ಹೋಗಿರೋ ನಿನ್ ಹೆಂಡ್ರಿಗೆ ಬೇಕಾದ್ರೆ ನಾನ್ ಹೇಳ್ತಿನಿ’.
‘ಏ ಅವ್ಳನೆನ್ ಕೇಳಾದು. ಆಯ್ತು ಓದ್ಲಿ ಬಿಡು’.
ಅಂತೂ ಇಂತೂ ನಾನು ಹೈಸ್ಕೂಲ್ಗೆ ಹೋದೆ. ಬಾಣಂತನ ಮುಗಿಸಿಕೊಂಡು ಆರು ತಿಂಗಳ ಗಂಡು ಮಗುವಿನೊಡನೆ ಬಂದ ನನ್ನ ಚಿಕ್ಕವ್ವ ಮಲತಾಯಿಯಾಗಿ ತನ್ನ ವರಸೆ ತೋರಿಸಲಾರಂಭಿಸಿದಳು. ನಾನು ಮನೆಯಲ್ಲೇ ಕಸ ಮುಸುರೆ, ಅಡಿಗೆ ಮಾಡಿಕೊಂಡು ಇರ್ತೀನಿ ,. ತಾನು ಆರಾಮವಾಗಿ ಮೇಲ್ವಿಚಾರಣೆ ಮಾಡಿಕೊಂಡು ಇರೋಣ ಅಂದುಕೊಂಡಿದ್ದಳೇನೋ? ನಾನು ಸ್ಕೂಲಿಗೆ ಹೊರಡುವ ತನಕ ಮತ್ತು ಬಂದ ನಂತರ ನನ್ನ ಮೇಲೆ, ಅಪ್ಪ, ಸರೋಜಾ ಮತ್ತು ಇಬ್ಬರು ಗಂಡು ಮಕ್ಕಳ ಮೇಲೆ ವಟಗುಟ್ಟಲು ಶುರುಮಾಡಿದಳು. ಅಪ್ಪ ನೋಡೋ ತಂಕಾ ನೋಡಿ ಒಂದು ಸೌದೆ ತುಂಡು ಕೈಗೆ ತೊಗೊಂಡು ಅವಳಿಗೆ ಹೊಡೆಯಲು ಹೋಗುತ್ತಿದ್ದ. ನಾನು ಅಪ್ಪನ ಕೈಯಿಂದ ಸೌದೆ ಕಿತ್ತುಕೊಂಡು ಜಗಳ ಬಿಡಿಸಲು ಹೋಗುತ್ತಿದೆ. ಅದಕ್ಕೂ ‘ಮಾಡೋ ತಂಕಾ ಮಾಡಿ ಈಗ ಜಗಳ ಬಿಡಿಸೋಕೆ ಬರ್ತಾಳೆ. ಆಹಾ ಬಿನ್ನಾಣಗಿತ್ತಿ’ ಅಂತ ಕೊಂಕು ಮಾತು. ಇಂತಹ ಮಾತುಗಳನ್ನು ಎಷ್ಟು ದಿನ ಅಂತ ಸೈರಿಸಿಕೊಂಡು ಇರಲು ಸಾಧ್ಯ?. ಈ ಜಗಳ, ಈ ರಂಪ ನಾನಿದ್ದಾಗ ಮಾತ್ರವೋ ಇಲ್ಲಾ ಯಾವಾಗಲೋ?. ಒಂದು ದಿನಾ ಸರೋಜಾಳನ್ನು ಬಲವಂತ ಮಾಡಿ ಕೇಳಿದ್ದಕ್ಕೆ ‘ದಿನಾ ಜಗಳ. ಮಾಮೂಲಾಗಿದೆ. ಸ್ಕೂಲ್ಗೆ ಹೋಗೋತಂಕಾ ಆಮೇಲೆ ಬಂದಮೇಲೂ ನಾನು ಎಲ್ಲಾ ಮನೆ ಕೆಲ್ಸ ಮಾಡುದ್ರೂ ಚಿಕ್ಕಿಗೆ ಸಮಾಧಾನ ಇಲ್ಲ’ ಎಂದು ಅಳಲು ಶುರು ಮಾಡಿದಳು. ನಾನು ಹೈಸ್ಕೂಲ್ಗೆ ಓದೋಕೆ ಹೋಗಿದ್ದಿಕ್ಕೆ ತಾನೇ ಇವೆಲ್ಲಾ? ನನ್ನಿಂದ, ನನ್ನ ತಂಗಿ, ತಮ್ಮಂದಿರಿಗೆ ಕಷ್ಟ. ನಾನು ಹೋಗದೆ ಇದ್ದರಾಯ್ತು ಅಂತ ‘ ಅಪ್ಪಾ ನಾಳೆಯಿಂದ ನಾನು ವೆಂಕ್ಟಾಪುರದ ಸ್ಕೂಲ್ಗೆ ಓದಾಕ್ ಹೋಗಲ್ಲ’ ಅಂದೆ. ಆಗ ತಾನೇ ಮುಗಿದಿದ್ದ ದಿನನಿತ್ಯದ ಮಾಮೂಲಿ ಜಗಳದಿಂದ ರೋಸಿ ಹೋಗಿದ್ದ ಅಪ್ಪನ ಕೋಪ ಇಳಿದಿರಲಿಲ್ಲವೇನೋ?

‘ಯಾಕೇ ಹೋಗಾಕಿಲ್ಲ. ಆ ಬೋ…. ಸೂ….. ಗೆ ಹೆದ್ರುಕೊಂಡು ಏನೇ? ಹೋಗಾಕಿಲ್ಲ ಅಂದ್ರೆ ಆ ಸೌದೆ ತುಂಡಲ್ಲಿ ನಿಂಗೆ ಹೊಡಿತೀನಿ ನೋಡೀಗಾ. ನಾನಿನ್ನೂ ಬದುಕಿವ್ನಿ ಕಣೆ. ನಾ ಸತ್ಮೇಲೆ ನಿಮ್ ಪಾಡು ಏನಾರ ಮಾಡ್ಕೊಂಡು ಹಾಳಾಗ್ ಹೋಗಿ’.

ಈ ಎಲ್ಲಾ ಗಲಾಟೆ ಜಗಳಗಳ ನಡುವೆ ಎರಡು ವರ್ಷ ಕಳೆಯಿತು. ಆ ನನ್ನ ಮಲತಾಯಿ, ಚಿಕ್ಕವ್ವ ಎನ್ನಲೂ ಈಗ ಮನಸ್ಸು ಒಪ್ಪುತ್ತಿಲ್ಲ, ಇನ್ನೊಂದು ಹೆರಿಗೆ, ಬಾಣಂತನಕ್ಕೆ ತನ್ನ ತೌರಿಗೆ ಹೋದಳು. ಈ ಸಲ ಎರಡನೇ ಮಗುವಿಗೆ ಒಂದು ವರ್ಷ ಆಗುವ ತನಕ ಬರಲಿಲ್ಲ. ಅಪ್ಪ ಆರು ತಿಂಗಳಾದ ಮೇಲೆ ಕರೆದುಕೊಂಡು ಬರಲು ಒಂದೆರೆಡು ಸಲ ಹೋಗಿದ್ದ. ನಾನು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಆಗಿತ್ತು. ಆಗ ಬಂದಳು. ಆ ವೇಳೆಗೆ ಅಪ್ಪನಿಗೂ ಐವತ್ತು ವರ್ಷವಾಗುತ್ತಾ ಬಂದಿತ್ತಲ್ಲವೇ? ವಯಸ್ಸಿನ ಪ್ರಭಾವವೋ, ಎರಡನೇ ಹೆಂಡತಿಯಿಂದ ತನ್ನ ಮೊದಲನೇ ಹೆಂಡತಿಯ ಮಕ್ಕಳಿಗೆ ಕಷ್ಟವಾಗುತ್ತಿದೆ ಅದಕ್ಕೆ ತಾನೇ ಕಾರಣನಲ್ಲವೇ ಎಂಬ ಅಪರಾಧಿ ಮನೋಭಾವವೋ ಅಥವಾ ಎರಡೂ ಸೇರಿಯೇ ಇರಬಹುದು ಅಂತೂ ನಡೆ ನುಡಿಯಲ್ಲಿ ಮೆತ್ತಗಾಗುತ್ತಾ ಬಂದಿದ್ದ. ಮೊದಲಿನ ಹಾಗೆ ಕೋಪ ತಾಪ ಇಲ್ಲವಾಗುತ್ತಿತ್ತಲ್ಲವೇ? ಮನೆಯಲ್ಲಿ ಗಲಾಟೆ ಶುರುವಾದರೆ ಆಚೆ ಕಡೆ ಹೋಗಿಬಿಡುತ್ತಿದ್ದ. ನಾನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿದ್ದೆ. ವೆಂಕ್ಟಾಪುರದ ಆ ಹೈಸ್ಕೂಲ್ ನಲ್ಲೆ ಪಿ ಯು ಸಿ ಆ ವರ್ಷ ಪ್ರಾರಂಭವಾಗಿತ್ತು. ಲಕ್ಷ್ಮಮ್ಮ ತನ್ನ ಮಗಳನ್ನು  ಕಾಲೇಜಿಗೆ ಸೇರಿಸುತ್ತಾಳಂತೆ. ನನ್ನನ್ನೂ ಕಾಲೇಜಿಗೆ ಸೇರಿಸು ಅಂತ ಅಪ್ಪನಿಗೆ ಹೇಳಲು ಈ ಸಲ ಲಕ್ಷ್ಮಮ್ಮ ಸಂಧಾನಕ್ಕೆ ಬಂದಾಗ ಅಪ್ಪ ಕಡ್ಡಿ ಮುರಿದಂತೆ ‘ಬೇಡ.. ಅವಳು ಓದಿದ್ದು ಸಾಕು. ಇನ್ನೊಂದೆರೆಡು ವರ್ಷಕ್ಕೆ ಮದುವೆ ಮಾಡಿ ತನ್ನ  ಜವಾಬ್ದಾರಿಯನ್ನು ಒಂದೊಂದಾಗಿ ಕಳೆದುಕೊಳ್ಳುತ್ತೇನೆ’ ಅಂದು ವಾಪಸ್ಸು ಕಳಿಸಿದ.

                                                                                             *****

ಅಪ್ಪ ನನ್ನ ಮದುವೆಗಾಗಿ ಗಂಡು ಹುಡುಕಲು ಶುರು ಮಾಡಿದ. ಆ ಊರು ಈ ಊರು, ಅವರು ಹೇಳಿದ್ದಾರೆ, ಲಕ್ಷ್ಮಮ್ಮನಿಗೆ ಗೊತ್ತಂತೆ, ಊರ ಐನೋರು ಹೇಳಿದ್ರು ಅಂತ ವಾರಕ್ಕೆ ಮೂರ್ನಾಲಕ್ಕು ದಿನ ಸಂಚಾರ. ನಾನು ಮುಂದಕ್ಕೆ ಓದದಿದ್ದರೂ ಬೇಡ ಮನೇಲೇ ಇರ್ತೀನಿ. ನಿನ್ನ, ತಂಗಿ, ತಮ್ಮಂದಿರನ್ನು ನೋಡಿಕೊಂಡು, ಮನೆ ಕೆಲಸ ಮಾಡಿಕೊಂಡು ಚಿಕ್ಕವ್ವನಿಗೂ ಸಹಾಯ ಆಗತ್ತೆ ಅಂತ ಎರಡು ಮೂರು ಸಲ ಅಪ್ಪನಿಗೆ ಹೇಳಿದೆ. ‘ಎಷ್ಟು ದಿನಾ ಅಂತ ಮದುವೆ ಬೇಡ ಅಂತ ಇರ್ತೀಯವ್ವ? ನೀನ್ ಮದ್ವೆ ಬೇಡ ಅಂತ ಮನೇಲೇ ಕೂತ್ರೆ, ಎರಡನೆಯೊಳ್ಗೆ ಮದುವೆ ಮಾಡಕ್ ಹೋದ್ರೆ ಮೊದಲ್ನೇ ಹುಡ್ಗಿಗ್ ಯಾಕ್ ಇಲ್ಲಿಗಂಟ ಮದ್ವೆ ಆಗಿಲ್ಲ ಅಂತ ಕೇಳಾಕಿಲ್ವಾ ನೀನೇ ಹೇಳವ್ವ. ಊರ್ ಜನಾ ತಲ್ಗೊಂದ್ ಮಾತಾಡಕಿಲ್ವ? ಅವ್ಳಗೆ ಗಂಡ್ ಹುಡ್ಕಕ್ಕೆ ನಾನ್ ಯಾವ್ ಮಕ ಇಟ್ಕೊಂಡ್ ಹೋಗ್ಲಿ ನೀನೆ ಹೇಳವ್ವ?’ ಅಪ್ಪ ಹೇಳೋದೂ ಒಂದ್ ರೀತಿಲಿ ಸರಿ. ಈ ಮನೆಯಿಂದ ಹೋದ ಮೇಲಾದರೂ ಆ ನನ್ನ ಮಲತಾಯಿ ಸ್ವಲ್ಪವಾದರೂ ಸರಿಯಾಗ್ತಾಳೇನೋ? ಅದರಿಂದ ಅಪ್ಪ, ನನ್ನ ತಂಗಿ ಮತ್ತಿಬ್ಬರು ತಮ್ಮಂದಿರು ನೆಮ್ಮದಿಯಾಗಿದ್ರೆ ಸಾಕು ಅಂತ ಮದ್ವೆ ಮಾಡ್ಕೊಂಡಿದ್ದಾಯ್ತು.

(ಮುಂದುರಿಯುತ್ತದೆ)……

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments