ಅವರ ಸಹಕಾರವಿಲ್ಲದೆ ಈ ಮರಳು ದಂಧೆ ನಡೆಯುತ್ತಾ ?
– ನರೇಂದ್ರ ಎಸ್ ಗಂಗೊಳ್ಳಿ, ವಾಣಿಜ್ಯಶಾಸ್ತ್ರ ಉಪನ್ಯಾಸಕರು.
ಕಳೆದ ಭಾನುವಾರ ರಾತ್ರಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರು ಎಂಬಲ್ಲಿ ತಡರಾತ್ರಿ ಅಕ್ರಮ ಮರಳುಗಾರಿಕೆ ದಂಧೆಯ ಕುರಿತಂತೆ ತನಿಖೆ ಮಾಡಲು ತೆರಳಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ತಹಶೀಲ್ದಾರ್ ಶಿಲ್ಪಾ ನಾಗ್ , ಅಂಪಾರು ಗ್ರಾಮಕರಣ ಕಾಂತರಾಜು ಸೇರಿದಂತೆ ಆರು ಜನರ ತಂಡದ ಮೇಲೆ ಈ ಅಕ್ರಮ ದಂಧೆ ನಿರತ ತಂಡ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದು ಖಂಡನೀಯ. ಮೊದಲು ಬಿಹಾರ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇಂತಹ ಘಟನೆಗಳು ಕೇಳಿಬರುತ್ತಿದ್ದವು, ಆದರೆ ಇದೀಗ ಬುದ್ಧಿವಂತರ ಜಿಲ್ಲೆ ಎಂದೆನ್ನಿಸಿಕೊಂಡ ಉಡುಪಿಯಲ್ಲೇ ಇಂತಹ ಘಟನೆ ನಡೆದಿರುವುದು ಇಡೀ ಜಿಲ್ಲೆಯ ಜನರೇ ತಲೆ ತಗ್ಗಿಸುವಂತಾಗಿದೆ.
ನಿಮಗೆ ಗೊತ್ತಿರಲಿ ಕರಾವಳಿ ಜಿಲ್ಲೆಗಳಲ್ಲಿ ಈ ಮರಳು ಮಾಫಿಯಾ ದಂಧೆ ಅದ್ಯಾವ ಪರಿಯಲ್ಲಿ ಬೆಳೆದು ನಿಂತಿದೆಯೆಂದರೆ ಅದನ್ನು ಊಹಿಸಲು ಅಸಾಧ್ಯ. ಊರಲ್ಲಿ ಕೆಲಸವಿಲ್ಲದೆ ಕೆಲಸ ಹುಡುಕಿಕೊಂಡು ಬೊಬಾಯಿ ಬೆಂಗಳೂರು ಅಂತೆಲ್ಲಾ ಬೇರೆ ಊರುಗಳಿಗೆ ವಲಸೆ ಹೋಗಿದ್ದ ಸಾಕಷ್ಟು ಯುವಕರು ಊರಿಗೆ ಮರಳಿ ಬಂದು ಈ ದಂಧೆಯಲ್ಲಿ ಶಾಮೀಲಾಗಿರುವುದು ಬಹಿರಂಗ ಸತ್ಯ. ಅಂತಿರುವಾಗ ಇದರ ವಿಸ್ತಾರವನ್ನು ಯಾರು ಕೂಡ ಊಹಿಸಬಹುದು. ದಿನಕ್ಕೆ ಸಹಸ್ರಾರು ರೂಪಾಯಿಗಳ ಆದಾಯವನ್ನು ತಂದುಕೊಡುವ ಇಂತಹ ದಂಧೆಯ ಹಿಂದೆ ಹೆಚ್ಚಾಗಿ ಇರುವಂತವರು ಊರಲ್ಲಿ ಪ್ರತಿಷ್ಠಿತರೆನ್ನಿಸಿಕೊಂಡವರೇ ಆಗಿದ್ದಾರೆ. ಏನೂ ಕೆಲಸ ಕಾರ್ಯಗಳನ್ನು ಮಾಡದೆ ಬೀದಿ ತಿರುಗುತ್ತಿದ್ದವರೆಲ್ಲಾ ಇವತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಮನೆಗಳನ್ನು ಕಟ್ಟಿಕೊಂಡು ಕಾರು ಬೈಕುಗಳಲ್ಲಿ ಜುಂ ಜುಂ ಅಂತ ತಿರುಗಾಡುತ್ತಿದ್ದಾರೆ ಎಂದರೆ ಅದರಲ್ಲಿ ಈ ಮರಳು ಮಾಫಿಯಾ ಕೂಡ ಅಲ್ಲಾವುದ್ದೀನ್ ದ್ವೀಪದಂತೆ ಕೆಲಸ ಮಾಡಿರುವುದು ಸತ್ಯ ಸಂಗತಿ.
ಈ ನಡುವೆ ಇಬ್ಬರು ಮಹಿಳಾ ಅಧಿಕಾರಿಗಳು ಮತ್ತು ಅವರ ತಂಡದ ಬಗೆಗೆ ನಾವು ನಿಜಕ್ಕೂ ಹೆಮ್ಮ ಪಡಬೇಕಿದೆ. ನ್ಯಾಯಪರ ಹೋರಾಟಕ್ಕಾಗಿ ಈ ಅಕ್ರಮ ಮರಳುಗಾರಿಕೆ ಧಂಧೆಯನ್ನು ಮಟ್ಟ ಹಾಕಲಿಕ್ಕಾಗಿ ತಡರಾತ್ರಿಯೂ ತಮ್ಮನ್ನು ಕರ್ತವ್ಯದಲ್ಲಿ ತೊಡಗಿಸಿಕೊಂಡ ಅವರ ಅಸಮಾನ್ಯ ಧೈರ್ಯ ತಾಕತ್ತು ನಿಜಕ್ಕೂ ಪ್ರಶಂಸಾರ್ಹ. ಈ ಹಿಂದೆ ಇದೇ ಮರಳು ಮಾಫಿಯಾದ ವಿರುದ್ಧ ಹೋರಾಡಿದ್ದಕ್ಕಾಗಿ ಈ ಹಿಂದಿನ ಡಿಸಿ ವೆಂಕಟೇಶ್ ವರ್ಗಾವಣೆ ಗೊಂಡಿದ್ದು, ಹಿಂದಿನ ತಹಶೀಲ್ದಾರ್ ಮೇಲೆ, ಕೆಲವು ಪತ್ರಕರ್ತರ ಮೇಲೆ, ಜನರ ಮೇಲೆ ಹಲ್ಲೆ ನಡೆದ ಹಲವಾರು ಘಟನೆಗಳು ಕಣ್ಣೆದುರೇ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಈ ಮರಳು ಮಾಫಿಯಾದ ವಿರುದ್ಧ ತೊಡೆತಟ್ಟಿ ನಿಂತಿದ್ದಕ್ಕಾಗಿ ಅವರನ್ನು ಅಭಿನಂದಿಸಲೇ ಬೇಕಿದೆ . ಇಂತಹ ಅಧಿಕಾರಿಗಳನ್ನು ಉಳಿಸಿಕೊಳ್ಳುವ ಒಗ್ಗಟ್ಟನ್ನು ಜನತೆ ತೋರಬೇಕಿದೆ.
ಪೋಲಿಸರ ನೆರವಿಲ್ಲದೆ ನೀವು ಯಾಕೆ ದಾಳಿಗಿಳಿದಿರಿ? ಎಂದು ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ಪ್ರಿಯಾಂಕರವರು ಹೇಳಿದ ಮಾತನ್ನು ಎಲ್ಲರೂ ಗಮನಿಸಬೇಕಿದೆ. `ಪ್ರತಿಬಾರಿ ಪೋಲಿಸರ ಜೊತೆಗೆ ದಾಳಿಗೆ ಹೊರಟಾಗ ದಂಧೆಕೋರರಿಗೆ ಮಾಹಿತಿ ಲಭಿಸಿ ಅವರು ಪರಾರಿಯಾಗಿರುತ್ತಿದ್ದರು. ಹಾಗಾಗಿ ಈ ಬಾರಿ ನಾನೇ ನಿಜವಾದ ವಿಷಯ ತಿಳಿಯುವ ಸಲುವಾಗಿ ಪೋಲಿಸರ ಸಹಾಯವಿಲ್ಲದೆ ನೇರ ದಾಳಿ ಮಾಡುವ ಈ ರಿಸ್ಕ್ ತೆಗೆದುಕೊಂಡಿದ್ದೆ.’ ಎಂದಿದ್ದರು. ನಿಜ. ಮರಳು ಮಾಫಿಯಾಗೆ ರಕ್ಷಣೆ ಕೊಡುತ್ತಿರುವುದು ನಮ್ಮ ಪೋಲಿಸು ವ್ಯವಸ್ಥೆಯೇ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಯಾರೇನೆ ಎಂದರೂ ಅದು ಸತ್ಯ. ಈ ಸರಕಾರದ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪೋಲಿಸರ ಸಹಕಾರವಿಲ್ಲದೆ ಹೋಗಿದ್ದಲ್ಲಿ ಈ ಪರಿ ಅಕ್ರಮ ಮರಳು ದಂಧೆ ನಡೆಯಲು ಸಾಧ್ಯವೇ ಇರುತ್ತಿರಲಿಲ್ಲ.
ನಿಜಕ್ಕೂ ಕೇಳಬೇಕಾದ ಪ್ರಶ್ನೆ ಇದು. ಎಷ್ಟೋ ಬಾರಿ ಸಂಬಂಧಿತ ಅಧಿಕಾರಿಗಳು ನಮಗಿನ್ನೂ ದೂರು ಬಂದಿಲ್ಲ ನಾವು ನೋಡಿಲ್ಲ ಎನ್ನುತ್ತಾರೆ. ಮರಳು ಲಾರಿಗಳೇನು, ರಾತ್ರಿ ಆಕಾಶದಲ್ಲಿ ಹಾರಿಕೊಂಡು ಹೋಗುತ್ತವೆಯೆ? ನಮ್ಮ ಊರ ಜನರಿಗೆ ಕಾಣಿಸುವುದು ಇವರಿಗೆ ಕಾಣಿಸುವುದಿಲ್ಲವೆಂದರೆ ಇವರ ಕಣ್ಣು ಕಪ್ಪಾಗಿದೆಯಾ? ನಮ್ಮ ಪೋಲಿಸು ವ್ಯವಸ್ಥೆ ವ್ಯವಸ್ಥಿತವಾಗಿ ಕೆಲಸ ಮಾಡುವುದೇ ಆಗಿದ್ದಲ್ಲಿ ಅಕ್ರಮ ಮರಳುಗಾರಿಕೆಯ ವಿರುದ್ಧ ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗಿ ವರದಿಗಳು ಬರುತ್ತಿದ್ದವೆ? ಈ ಮರಳು ಮಾಫಿಯಾದ ವಿರುದ್ಧ ಜನ ಪದೇ ಪದೇ ಹೋರಾಟಕ್ಕಿಳಿಯಬೇಕಾದ ಅಗತ್ಯತೆ ಬರುತಿತ್ತಾ? ಸುಳ್ಳು ಕೌಂಟರ್ ಕೇಸುಗಳನ್ನು ಹಾಕಿಕೊಂಡು ಅಮಾಯಕ ಜನ ನ್ಯಾಯಾಲಯಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇರುತಿತ್ತಾ?
ಜಾತಿ ಮತ ಪಂಥ ಪಂಗಡ ಯಾವುದೂ ಕಾನೂನಿನಡಿ ಬರುವುದಿಲ್ಲ …ಅಪರಾಧಿಗಳು ಯಾರೇ ಆಗಿದ್ದರೂ ಶಿಕ್ಷೆ ನೀಡುತ್ತೇವೆ ಎನ್ನುವುದು ಎಡಿಜಿಪಿ ಮೋಹನ್‍ರವರ ಹೇಳಿಕೆ. ಹಾಗಾಗಲಿ ಎನ್ನುವುದು ಆಶಯ. ಆದರೆ ಇದು ಇದೊಂದೇ ಪ್ರಕರಣಕ್ಕೆ ಸೀಮಿತ ಆಗಬಾರದು. ಕೊಳಕು ರಾಜಕೀಯವನ್ನು ಮೆಟ್ಟಿ ನಿಲ್ಲಬಲ್ಲ ನಿಜವಾದ ತಾಕತ್ತು ಪೋಲಿಸು ಇಲಾಖೆಯಲ್ಲಿ ಇರುವುದೇ ಆದಲ್ಲಿ ಕರಾವಳಿ ಜಿಲ್ಲೆಗಳಾದ್ಯಂತ ಇರುವಂತಹ ಎಲ್ಲಾ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಪೋಲಿಸರು ಸ್ವಯಂ ಪ್ರೇರಿತವಾಗಿ ದಾಳಿಗಳನ್ನು ನಡೆಸಬೇಕಿದೆ. ಅಕ್ರಮ ಮರಳುಗಾರಿಕೆ ದಂಧೆ ಶಾಶ್ವತವಾಗಿ ನಿಲ್ಲಬೇಕಿದೆ. ಸರಕಾರವೇ ದುರುಳರನ್ನು ಪೊರೆದರೆ ಅಮಾಯಕ ಜನರು ಎಷ್ಟು ಎಂದು ಹೋರಾಡಬಲ್ಲರು?
ಮಹಿಳೆಯರ ಮೇಲೂ ದೌರ್ಜನ್ಯ ಮಾಡುವಷ್ಟರ ಮಟ್ಟಿಗೆ ಈ ದಂಧೆ ಬೆಳೆದು ನಿಂತಿರುವುದು ನಮ್ಮ ಸಮಾಜ ಅಧಃಪತನದತ್ತ ಸಾಗುತ್ತಿರುವುದರ ಸಂಕೇತವೇ ಆಗಿದೆ. ಇದು ಕೇವಲ ಅಕ್ರಮ ಮರಳಿನ ವಿಚಾರವಲ್ಲ. ಕೋಳಿ ಅಂಕ, ಮಟ್ಕಾ, ಗರಗರ ಮಂಡ್ಲ, ಬೆಟ್ಟಿಂಗ್ ಎಲ್ಲವೂ ಕೂಡ ಕಾನೂನು ರಕ್ಷಕರೆನ್ನಿಸಿಕೊಂಡವರ ಕೃಪಾ ಕಟಾಕ್ಷದಲ್ಲೇ ಊರೂರುಗಳಲ್ಲಿ ಬೆಳೆಯುತ್ತಲೇ ಇದೆ. ಇದಕ್ಕೆ ಬಲಿಯಾಗುತ್ತಿರುವುದು ಮಾತ್ರ ಅಮಾಯಕ ಜನ ಮತ್ತು ಅವರನ್ನು ಪೊರೆಯುತ್ತಿರುವ ಪರಿಸರ. ಒಂದು ಉಗ್ರರೂಪದ ವಿವೇಕಯುತ ನಾಯಕತ್ವವುಳ್ಳ ಸರಕಾರ ಬಾರದ ಹೊರತು ಇಂತಹ ದಂಧೆಗಳನ್ನು ಸಂಪೂರ್ಣ ಮಟ್ಟಹಾಕುತ್ತೇವೆನ್ನುವುದು ಕನಸಿನ ಮಾತು. ಸರಕಾರದ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವಾಗ ಯಾರನ್ನು ಯಾರು ಬಂಧಿಸಬೇಕು ಎನ್ನುವುದು ಬಗೆಹರಿಯದ ಪ್ರಶ್ನೆ ಅನ್ನಿಸುತ್ತದೆ.
ಮರಳು ಗಣಿಗಾರಿಕೆ ಬಗ್ಗೆ ಸರಿಯಾದ ನೀತಿ ಇಲ್ಲದಿರುವುದೇ ಇಂಥಹ ಮಾಫಿಯಾ ಹುಟ್ಟಿಗೆ ಕಾರಣ. ಅಗತ್ಯವಿದ್ದಷ್ಟು ಮರಳು ತೆಗೆಯಲು ಕಂದಾಯ ಸಹಿತ ಅನುಮತಿ ಕೊಟ್ಟರೆ ಇಂತಹ ಮಾಫಿಯಾಗಳನ್ನು ನಿಯಂತ್ರಿಸಬಹುದಷ್ಟೇ. ನದಿ ಮರಳು ಗಣಿಗಾರಿಕೆ ಮಾಡದಿದ್ದರೆ ಹೂಳು ನಿಂತಂತೆ ಮರಳು ನಿಂತು ಆಳ ಕಮ್ಮಿಯಾಗಿ ದಡದ ಮಣ್ಣಿನ ಸವೆತ ಹೆಚ್ಚಾಗುತ್ತದೆ. ಅಲ್ಲದೇ ನದಿಯ ಪ್ರವಾಹದ ತೊಂದರೆಯೂ ಹೆಚ್ಚು .