ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 15, 2017

3

ಯಡಿಯೂರಪ್ಪನವರಿಗೊಂದು ಪತ್ರ…

‍ನಿಲುಮೆ ಮೂಲಕ

– ಸಂದೀಪ್ ಕುಮಾರ್ ಶೆಟ್ಟಿ

ಪ್ರೀತಿಯ ಯಡಿಯೂರಪ್ಪ ಅವರೆ,

ಪ್ರೇಮಪೂರ್ವಕ ನಮಸ್ಕಾರಗಳು. ಮೊನ್ನೆಯ ದಿನ ಭಾರತೀಯ ಜನತಾ ಪಕ್ಷದ ಪಾಲಿಗೆ ಅಷ್ಟೇನೂ ಆಶಾದಾಯಕವಾದ ದಿನ ಅಲ್ಲ. ಉಪಚುನಾವಣೆಯ ಫಲಿತಾಂಶ ಪಕ್ಷದ ವಿರುದ್ಧವಾಗಿ ಬಂದಿದೆ. ಪಕ್ಷದ ಸಂಘಟನೆಯಲ್ಲಿ ಮೂರು ದಶಕಗಳಿಗೂ ಹೆಚ್ಚಾಗಿ ದುಡಿದ ನಿಮಗೆ ಈ ರೀತಿಯ ಹಿನ್ನಡೆ ಹೊಸದು ಅಲ್ಲ, ತಿಳಿಯದೆ ಇರುವುದೂ ಅಲ್ಲ, ರಾಜಕೀಯ ಜೀವನದಲ್ಲಿ ಇದು ಸಾಮಾನ್ಯ ಮತ್ತು ಸ್ವಾಭಾವಿಕ ಕೂಡ. ಆತ್ಮೀಯ ಸ್ನೇಹಿತ, ಸಂಸದ ಪ್ರತಾಪ ಹೇಳಿದ ರೀತಿಯಲ್ಲಿ ಇದು ಆಳಿಗೊಂದು ಕಲ್ಲು ಅಲ್ಲ ಬದಲಾಗಿ ಇದು ನಿಮ್ಮ ಸುತ್ತ ಮುತ್ತ ಇರುವ, ಆದರೆ ನಿಮ್ಮನ್ನು ಮಾತನಾಡಿಸಲು ಸಾಧ್ಯವಿಲ್ಲದ, ಹಿತೈಷಿಗಳ ಪ್ರತಿನಿಧಿಯಾಗಿ ಈ ಸಂಧರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ.

ಬಿಜೆಪಿ ಪಕ್ಷದ ಅಧಿಕೃತ ಮುಖ್ಯಮಂತ್ರಿ ಅಭ್ಯರ್ಥಿ ನೀವು ಆದರೆ ನಿಮಗೆ ಇನ್ನು ಅದರ ಬಗ್ಗೆ ನಂಬಿಕೆ ಬಂದ ಹಾಗೆ ಇಲ್ಲ. ಇನ್ನೂ ಕೂಡಾ ಪಕ್ಷದ ಇತರ ನಾಯಕರು ಮುಖ್ಯಮಂತ್ರಿಗಳಾಗಬಹುದು ಎಂಬ ಭಯ ನಿಮ್ಮನ್ನು ಬಿಟ್ಟಿಲ್ಲ ಎಂದು ತೋರುತ್ತದೆ. ಈ ಭಯವನ್ನು ಬಿಡಿ. ಇತ್ತೀಚಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ವ್ಯಕ್ತಿ ನೀವೊಬ್ಬರೆ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ, ಸಂಘಟನೆಯ ಮೇಲೆ ವಿಶ್ವಾಸವಿಡಿ.

2014ರ ಚುನಾವಣೆಯ ಉದಾಹರಣೆ ತೆಗೆದುಕೊಳ್ಳಿ, ಪ್ರಧಾನಿ ಅಭ್ಯರ್ಥಿ ಆಗಿ ಘೋಷಣೆ ಅದ ಮೇಲೆ ನರೇಂದ್ರ ಮೋದಿ ಪಕ್ಷದ ಮೇಲೆ, ಸಂಘಟನೆಯ ಮೇಲೆ ಇಟ್ಟ ನಂಬಿಕೆಯನ್ನು ನೋಡಿ ಅರಿತುಕೊಳ್ಳಿ. ಅವರು ವಿವಿಧ ರಾಜ್ಯಗಳ ಸಂಘಟನೆ ತೋರಿಸಿದ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಹೊರತಾಗಿ , ಇವನೇ ಅಭ್ಯರ್ಥಿ ಆಗಬೇಕು, ಅವನೇ ಅಭ್ಯರ್ಥಿ ಆಗಬೇಕು ಎಂದಿ ಚಂಡಿಹಿಡಿಯಲಿಲ್ಲ. ತನಗೆ ಜೈಕಾರ ಹಾಕುವವರೆ ಸುತ್ತ ಇರಬೇಕು, ಪಕ್ಷದ ಜವಾಬ್ದಾರಿ ಹೊರಬೇಕು ಎಂದು ಕೂಗಾಡಿ, ಏಕಸ್ವಾಮ್ಯ ಬೇಕೆಂದು ರಂಪ ಮಾಡಲಿಲ್ಲ. ಇದು ಸಂಘಟನೆಗೆ ಅವರು ಕೊಟ್ಟ ಗೌರವ, ಅದು ಇವತ್ತು ಅವರನ್ನು ಯಾವ ಎತ್ತರಕ್ಕೆ ತಂದು ನಿಲ್ಲಿಸಿದೆ ನೋಡಿ. ಅದು ನಿಮಗ್ಯಾಕೆ ಮಾದರಿ ಆಗಬಾರದು?

ಮೋದಿಯವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಅದ ಮೇಲೆ ಅವರ ಕಾರ್ಯ ವ್ಯಾಪ್ತಿಯನ್ನು ಗಮನಿಸಿ, ಎಲ್ಲೂ ಕೂಡ ಅಪನಂಬಿಕೆಯಿಂದ, ಭಟ್ಟಂಗಿಗಳನ್ನು ಕಟ್ಟಿಕೊಂಡು ಓಡಾಡಲಿಲ್ಲ. ಸಭೆಯಲ್ಲಿ ಮಾತನಾಡಬೇಕಾದ ವಿಷಯದಿಂದ ಹಿಡಿದು, ತನ್ನ ಜೊತೆ ವೇದಿಕೆಯಲ್ಲಿ, ತನ್ನ ಸುತ್ತ ಮುತ್ತ ಯಾರಿರಬೇಕು ಅನ್ನುವ ಪ್ರತಿ ಸೂಕ್ಷ್ಮ ವಿಚಾರದವರೆಗೂ, ಅದರ ನಿರ್ಧಾರವನ್ನು ಸಂಘಟನೆಗೆ ಬಿಟ್ಟರು. ಯಾವತ್ತೂ ತನ್ನ ಸುತ್ತ ಮುತ್ತ ಒಂದಿಬ್ಬರು ನಾಯಕರ ಕೋಟೆ ಕಟ್ಟಿ ಕೊಳ್ಳಲಿಲ್ಲ. ಅದರ ಫಲಶ್ರುತಿ ಇಂದು ನಮ್ಮ ಮುಂದಿದೆ. ಇದನ್ನು ಯಾಕೆ ನೀವೂ ರೂಪಿಸಿಕೊಳ್ಳಬಾರದು?

ಯಡಿಯೂರಪ್ಪ ಅವರೆ, ನೀವೊಬ್ಬ ಅದ್ಭುತ ಸಂಘಟಕರಾಗಿದ್ದೀರಿ ಅನ್ನುವುದರ ಬಗ್ಗೆ ಯಾವ ಸಂಶಯವೂ ಇಲ್ಲ. ಪಕ್ಷದ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಮಹತ್ತರವಾದದ್ದು. ಆದರೆ ಇವತ್ತು ರಾಜಕೀಯದ ಪರಿಸ್ಥಿತಿ, ರಾಜಕೀಯ ನಡೆಸುವ ರೀತಿ ಬದಲಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ತಾವು ಸಂಪೂರ್ಣವಾಗಿ ವಿಫಲರಾಗಿದ್ದೀರಿ. ನೀವು ವಿಫಲರಾಗಿದ್ದೀರಿ ಅನ್ನುವುದಕ್ಕಿಂತ ಹೆಚ್ಚಾಗಿ ನಿಮ್ಮ ಸುತ್ತ ನೀವು ನಿರ್ಮಿಸಿಕೊಂಡಿರುವ ಕೋಟೆ ನಿಮ್ಮನ್ನು ಆ ಬಂಧನದಲ್ಲಿ ಇರಿಸಿದೆ ಎಂದರೆ ಹೆಚ್ಚು ಸೂಕ್ತವೇನೋ. ದಯವಿಟ್ಟು ನೀವು ಕರ್ನಾಟಕದ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಗಿ ಕೆಲಸ ಮಾಡಿ. ಸಂಘಟನೆಯ ಕೆಲಸವನ್ನು ಒಬ್ಬ ಅತ್ಯುತ್ತಮ ಸಂಘಟಕನ ಕೈಗೆ ನೀಡಿ. ಪಕ್ಷದಲ್ಲಿ ಉತ್ತಮ ಸಂಘಟಕರಿದ್ದಾರೆ , ಅವರನ್ನು ಗುರುತಿಸಿ ಅವರಿಗೆ ಕೊಡಬೇಕಾದ ಜವಾಬ್ದಾರಿ ಕೊಡಿ. ನಿಮಗೆ ಈಗ ಬೇಕಾಗಿರುವುದು ಸೋನಿಯಾ ಗಾಂಧಿಯವರ ಸುತ್ತ ಮುತ್ತ ಇದಂತಹ ಭಟ್ಟಂಗಿಗಳ ಗುಂಪಲ್ಲ, ಮೋದಿಯವರ ಜೊತೆ ನಿಂತಂತಹ ಅಮಿತ್ ಶಾ ಅಂತಹ ಒಬ್ಬ ಅತ್ಯದ್ಭುತ ಚಾಣಕ್ಯ ಮತ್ತು ಚಾಣಾಕ್ಷ. ಇದನ್ನು ಆದಷ್ಟು ಬೇಗ ಅರಿತುಕೊಂಡು ನಿಮಗೊಬ್ಬ ಅಮಿತ್ ಶಾನನ್ನು ರೂಪಿಸಿಕೊಳ್ಳಿ.

ಯಾವುದೊ ಕೆಟ್ಟ ಘಳಿಗೆಯಲ್ಲಿ ನೀವು ಪಕ್ಷವನ್ನು ತೊರೆದಾಗ, ಕರ್ನಾಟಕದಾದ್ಯಂತ ಪಕ್ಷವನ್ನು ಉಳಿಸಿದ್ದು ಸಂಘಟನೆ. ಸಂಘಟನೆಗೆ ಸಂಘಟಕರಿಗೆ ಬೆಲೆ ಕೊಟ್ಟರೆ ಅವರುಗಳ ಕಾರ್ಯಕ್ಷಮತೆಯನ್ನು ಉಪಯೋಗಿಸಿ ಕೊಂಡರೆ ಮುಂದಿನ ಚುನಾವಣೆಯಲ್ಲಿ ತಾವು ಮುಖ್ಯಮಂತ್ರಿ ಆಗುವುದು ಖಚಿತ. ಇಲ್ಲವಾದರೆ ನೆನಪಿಟ್ಟುಕೊಳ್ಳಿ ಕರ್ನಾಟಕದಲ್ಲಿ ಇನ್ನೂ ಹತ್ತು ವರ್ಷ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟ ಸಾಧ್ಯ.

ದೇಶದಲ್ಲಿ ಚುನಾವಣೆಯನ್ನು ಎದುರಿಸುವ ರೀತಿ ಇಂದು ಬದಲಾಗಿದೆ. ಕಾಂಗ್ರೇಸ್ ಪಕ್ಷಕ್ಕೆ ಈ ಬದಲಾವಣೆ ಅರ್ಥ ಆಗಿಲ್ಲ, ಇನ್ನೂ ಕೆಲವು ವರ್ಷಗಳೆ ಬೇಕು ಈ ಪಕ್ಷಕ್ಕೆ ಬದಲಾದ ಚುನಾವಣಾ ಹೋರಾಟದ ನೆಲೆಯನ್ನು ಅರ್ಥ ಮಾಡಿಕೊಳ್ಳಲಿಕ್ಕೆ. ದುರಂತ ಎಂದರೆ ಈ ಬದಲಾದ ನೆಲೆ ನಿಮಗೆ ಅರ್ಥ ಆಗದೆ ಇರುವುದು. ಜಾತಿ, ಹಣ, ದರ್ಪ ಇದರ ಕಾಲ ಮುಗಿಯಿತು. ಚುನಾವಣೆಯನ್ನು ಅಭಿವೃದ್ಧಿಯ ನೆಲೆಯಲ್ಲಿ, ಸಬ್ಕಾ ಸಾಥ್ ಸಬ್ಕ ವಿಕಾಸ್ ಅನ್ನುವ ನೆಲೆಯಲ್ಲಿ ನಡೆಸಲಾಗುತ್ತಿದೆ. ಕರ್ನಾಟಕದ ಜನರೂ ಬಿಜೆಪಿಯಿಂದ ಅದನ್ನೆ ನಿರೀಕ್ಷೆ ಮಾಡುತ್ತಿದ್ದಾರೆ ಹೊರತಾಗಿ ಆ ಜಾತಿ, ಈ ಜಾತಿ ಅನ್ನುವ ಲೆಕ್ಕಾಚಾರದಲ್ಲಿ ಅಲ್ಲ. ಇದನ್ನು ಅರ್ಥ ಮಾಡಿಕೊಂಡು ಚುನಾವಣೆಯನ್ನು ಎದುರಿಸಲು ನಿಮ್ಮ ಸುತ್ತ ಮುತ್ತ ಇರುವ ಯಾವ ಒಬ್ಬನಿಗೂ ಸಾಧ್ಯವಿಲ್ಲ, ಅಂಥವರನ್ನು ಎಷ್ಟು ದೂರ ಇಟ್ಟು ಕೆಲಸ ಮಾಡುತ್ತಿರೋ ಅಷ್ಟು ಉತ್ತಮ ನಿಮಗೆ ಮತ್ತು ಬಿಜೆಪಿಗೆ.

ಅದಕೊಬ್ಬ ರಾಜಕೀಯ ಚಿಂತಕ, ಮುತ್ಸದ್ಧಿ, ದೂರದರ್ಶಿತ್ವ ಉಳ್ಳ ಒಬ್ಬ ಸಂಘಟಕ ಬೇಕು. ನಿಮಗೊಬ್ಬ, ನಿಮ್ಮ ಜೊತೆ ನಿಲ್ಲುವ, ಕಾರ್ಯಕರ್ತರ ನಾಡಿ ಮಿಡಿತವನ್ನು ಅರಿತ, ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನಿಲ್ಲಿಸಿ ಅಮಿತ ಸಂತೋಷವನ್ನು ಹೊಂದುವಂತಹ ಕರ್ನಾಟಕದ ಅಮಿತ್ ಶಾ ಬೇಕು. ಇನ್ನೂ ತಡವಾಗಿಲ್ಲ, ನೀವು ಸಂಘಟನೆಯನ್ನು ಗೌರವಿಸಿ, ಸಂಘಟನೆ ನಿಮ್ಮನ್ನು ಕಾಪಾಡುತ್ತದೆ.

Read more from ಲೇಖನಗಳು
3 ಟಿಪ್ಪಣಿಗಳು Post a comment
  1. ಏಪ್ರಿಲ್ 15 2017

    ಸರಿಯಾಗಿ ವಿಶ್ಲೇಷಣೆ ಮಾಡಿ ಹೇಳಿರುವಿರಿ. ನಿಮ್ಮ ಮಾತುಗಳು ಅವರಿಗೆ ತಲುಪೋದಿಲ್ಲ…ಅಂತಹ ಅಡ್ಡಗೋಡೆಗಳಿವೆ. ಜಯಲಲಿತ ಸುತ್ತ ಕೋಟೆ ಕಟ್ಟಿ ಅಡ್ಡದಾರಿಗಳು, ಅಗೋಚರ ಭಯಗಳನ್ನು ಸ್ರಷ್ಟಿಸಿ ಬೇನಾಮಿ ಅಧಿಕಾರ ಸೂತ್ರ ಹಿಡಿದ ಶಶಿಕಲಾ ತರಹ ಜನ ಸುತ್ತ ಇರುವಾಗ, ಆ ವ್ಯಾಮೋಹದ ಪಂಜರದಲ್ಲಿ ಸ್ವಂತ ಇಷ್ಟಪಟ್ಟು ಬಂದಿಯಾಗಿರುವುದರಿಂದ ಯಡಿಯೂರಪ್ಪ ಬದಲಾಗುತ್ತಾರೆ ಅಂತ ನೀರೀಕ್ಷಿಸುವುದು ಬಹುಶಃ ಭ್ರಮೆಯೇನೋ.

    ಉತ್ತರ
  2. ವಿಶ್ವನಾಥ ಮ ಬ
    ಏಪ್ರಿಲ್ 15 2017

    ಅತ್ಯುತ್ತಮ ವಾಗಿದೆ ನಿಮ್ಮ ವಿಶ್ಕೆಷಣೆ. ಇದಕ್ಕೆಲ್ಲಾ ಶ್ರಿಮಾನ ಪ್ರತಾಪ ಶಿಮ್ಹ ಮತ್ತು ಸಿಟಿ ರವಿ ಸರಿಯಾದ ವ್ಯಕ್ತಿಗಳು.

    ಉತ್ತರ
  3. vasu
    ಏಪ್ರಿಲ್ 17 2017

    ಯಾರು ಏನೇ ಹೇಳಲಿ ಯಡಿಯೂರಪ್ಪನವರ ಮೇಲಿನ ಆಪಾದನೆಗಳು [ ಅವು ಸುಳ್ಳೇ ಇರಬಹುದು, ಕೋರ್ಟ ನ ಅಂತಿಮ ತೀರ್ಮಾನ ಬಂದಿಲ್ಲ] ಪಕ್ಷವನ್ನು ಮತ್ತು ಸ್ವತಃ ಯಡಿಯೂರಪ್ಪನವರನ್ನು ಕಾಡಿಸದೇ ಬಿಡದು. ಒಂದು ವಿಷಯದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಕೊಡಲು ಬಿಜೆಪಿ ತನ್ನ ಆಡಳಿತದಲ್ಲಿ ವಿಫಲವಾಯಿತು. ಹೀಗಾಗಿ ಜನಮಾನಸದಲ್ಲಿ ಬಿಜೆಪಿ ಎಂದರೆ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಗೆ ಏನೂ ಕಡಿಮೆಯಿಲ್ಲ ಎಂಭ ಭಾವನೆ ಮೂಡಿದೆ. ಜೀವನದುದ್ದಕ್ಕೂ ಮೊದಲು ಜನಸಂಘ ಮತ್ತು ನಂತರ ಬಿಜೆಪಿಯನ್ನು ಸಮರ್ಥಿಸಿದ ನೂರಾರು ಮಂದಿ ಹಿತೈಷಿಗಳು ಮತ್ತು ಕಾರ್ಯಕರ್ತರಿಗೆ ಇದರಿಂದ ತೀರ್ವ ನಿರಾಶೆಯಾಗಿದೆ. ಆದರೆ ಕೇಂದ್ರದಲ್ಲಿ ಮೋದಿಯವರು ಭ್ರಷ್ಟಾಚಾರ ಮುಕ್ತ ಸರಕಾರವನ್ನು ಕೊಡಲು ಯಶಸ್ವಿಯಾಗಿದ್ದಾರೆ. ಅಲ್ಲಿಯೂ ಸಹ ಭ್ರಷ್ಟಾಚಾರ ಆಗುವ ಸಾಧ್ಯತೆ ಮೋದಿ ಮತ್ತು ಇಂತಹವನ್ನು ಮೆಟ್ಟಿಹಾಕಲು ಸಿದ್ಧವಿರುವ ಡಾ|| ಸ್ವಾಮಿಯವವರು ಇಡುವವರೆಗೂ ಸಾಧ್ಯವಿಲ್ಲ.
    ಯಡಿಯೂರಪ್ಪನವರಿಗೆ ಈಗ ವಯಸ್ಸಾಗಿದೆ, ಇನ್ನೇನು ಅವರು ಸಹ 75 ರನ್ನು ಮುಟ್ಟಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಮುಖ್ಯ ಮಂತ್ರಿ ಪದವನ್ನು ಬಿಜೆಪಿಯಲ್ಲಿರುವ ಇತರ ಸಮರ್ಥ ಻ಅಭ್ಯರ್ಥಿಗೆ ವಹಿಸುವುದು ಒಳ್ಳೆಯದು. ಹೇಗಿದ್ದರೂ ಅವರ ಶಿಷ್ಯೆ ಶೋಬ ಕರಂದ್ಲಾಜೆಯವರು ಇದ್ದಾರೆ. ಅವರು ಶುಬ್ರವಾಗಿಯೇ ಇದ್ದಾರೆ. ಮತ್ತು ಕೆಲಸಮಾಡುವುದರಲ್ಲಿ ನಿಪುಣೆ ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದಲ್ಲಿ ಇದುವರೆಗೆ ಮಹಿಳೆಯರ ಪೈಕಿ ಯಾರೂ ಮುಖ್ಯ ಮಂತ್ರಿಯಾಗಿಲ್ಲ. ಹೀಗಿರುವಾಗ ಶೋಬಕ್ಕನವರನ್ನು ಬಿಜೆಪಿಯವರು ಮುಂದಿನ ಮುಖ್ಯ ಮಂತ್ರಿ ಎಂದು ಬಿಂಬಿಸಿ ಹೋರಾಟ ಮಾಡಿದಾಗ ಚುನಾವಣೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಈಗಿರುವ ಸಂದರ್ಭದಲ್ಲಿ ಚುನಾವಣೆಯನ್ನು ಗೆಲ್ಲಲು ಇದೊಂದೇ ಮಾರ್ಗ. ಇಲ್ಲವಾದಲ್ಲಿ ಜೆಡಿಸ್ ಮತ್ತು ಕಾಂಗ್ರೆಸ್ ನ ಸಂಯುಕ್ತ ಹೋರಾಟವನ್ನು ಎದುರಿಸಿ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಕಷ್ಟ. ಬಿಜೆಪಿಯ ಸಂಘಟನೆಯ ಬಾರ ಹೊತ್ತ ಮಹನೀಯರು ಇತ್ತ ಕಡೆ ತಮ್ಮ ಗಮನವನ್ನು ಹರಿಸಬೇಕು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments