ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 21, 2017

ಕರ್ನಾಟಕ ಬಿಜೆಪಿಯ ಪ್ರತೀ ನಾಯಕನು ತಾವು ನಡೆದು ಬಂದ ಹಾದಿಯನ್ನು ಒಮ್ಮೆ ಹಿಂದೆ ತಿರುಗಿ ನೋಡುವ ಸಮಯ ಬಂದಿದೆ.!

‍ನಿಲುಮೆ ಮೂಲಕ

– ಸಾಮಾನ್ಯ ಕಾರ್ಯಕರ್ತ.

ಉಪಚುನಾವಣೆಯ ಪಲಿತಾಂಶವನ್ನು ನೆಪವಾಗಿ ಇಟ್ಟುಕೊಂಡು ಕರ್ನಾಟಕ ಬಿಜೆಪಿಗೆ ಕೆಲವು ಮಾತುಗಳನ್ನು ಹೇಳಲೇ ಬೇಕಿದೆ. ಜನಸಾಮಾನ್ಯನ ನಡುವೆ ಬದುಕುವ ಕಾರ್ಯಕರ್ತನ ಮಾತು ಜನರ ಮಾತೇ ಆಗಿರುತ್ತದೆ. ಅವರ ಮಾತನ್ನು ಕೇಳಿದರೆ ಉತ್ತಮ ಕೇಳದಿದ್ದರೆ ನಮ್ಮ ಕರ್ಮ ಅಷ್ಟೆ. ಯಡಿಯೂರಪ್ಪನವರ ಬಗ್ಗೆ ಪ್ರತಿ ಪದ ಬರೆಯುವಾಗ ನನ್ನ ಮನಸ್ಸಿನಲ್ಲಿ ಜಾಗ್ರತೆಯ ಭಾವ ಕಣ್ಣರಳಿಸಿ ಕೂರುತ್ತದೆ, ಯಡಿಯೂರಪ್ಪನವರೇ ಹೀಗೆ ಮಾಡಿ, ಹಾಗೆ ಮಾಡಿ ಎನ್ನಲು ನನಗಿರುವ ಯೋಗ್ಯತೆಯಾದರು ಏನು ಎಂದು ನನ್ನ ಮನಸ್ಸು ಯಾವಾಗಲು ಪ್ರಶ್ನಿಸುತ್ತದೆ. ಯಡಿಯೂರಪ್ಪನವರು ನನ್ನ ಪಕ್ಷದ ಬೆಳವಣಿಗೆಗೆ ಸವೆಸಿರುವ ಕಾಲ ಚರ್ಮದ ಮೂಲೆಯಲ್ಲಿರುವ ದೂಳಿಗೆ ಸಮನಲ್ಲ ಎನ್ನುವ ಶ್ರದ್ದೆ ಇಂದಿಗೂ ಎಂದಿಗೂ ನನ್ನ ಮನಸ್ಸಿನಲ್ಲಿ ಉಳಿಸಿಕೊಳ್ಳುತ್ತೇನೆ. ಆದರೆ ಒಂದಿಡೀ ಯುವ ಸಮೂಹ ತಾಯಿಭಾರತಿಯನ್ನು ವಿಶ್ವಗುರು ಸ್ಥಾನದಲ್ಲಿ ಕುಳ್ಳಿರಿಸಲು ಎಲ್ಲವನ್ನು ತೊರೆದು ದುಡಿಯುತ್ತಿರುವಾಗ, ಆ ಕಾರ್ಯ ಸಾಧನೆಗೆ ಪೂರಕವಾಗಿ ನೀವೊಂದಿಷ್ಟು ಜರೂರ್ ಕೆಲಸಗಳನ್ನು ಮಾಡಲೇಬೇಕಾಗಿರುವುದರಿಂದ ಹಾಗು ನೀವು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವುದರಿಂದ ನಿಮ್ಮ ಬಳಿ ದೇಶದ ಯುವ ಸಮೂಹದ ಪರವಾಗಿ ಈ ಕೆಲಸಗಳನ್ನು ದಯಮಾಡಿ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಹಾಗು ಬಿಜೆಪಿಯ ನಾಯಕ ಪಟ್ಟ ಅಲಂಕರಿಸಿ ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿರುವ ಹಲವು ಮಹಾಶಯರಿಗೂ ಬದಲಾಗುತ್ತಿರುವ ಭಾರತದ ರಾಜಕಾರಣವನ್ನೊಮ್ಮೆ ಕಣ್ಣು ಬಿಟ್ಟು ನೋಡಿ ಎಂದು ಹೇಳಲು ಬಯಸುತ್ತೇನೆ.

ಮೊನ್ನೆ ನಡೆದ ನಂಜನಗೂಡು ಹಾಗು ಗುಂಡ್ಲುಪೇಟೆ ಉಪಚುನಾವಣೆಗಳಲ್ಲಿ ಬಾಜಪಕ್ಕೆ ಹಿನ್ನಡೆಯಾಗಿದೆ. ಸೋಲಿಗೆ ಸಾವಿರ ಸಮರ್ಥನೆಯು ನಮ್ಮ ಬಳಿ ಇದೆ.. ಆದರೆ ಗೆಲ್ಲಬಹುದಾಗಿದ್ದ ಎರಡು ಕ್ಷೇತ್ರಗಳನ್ನು ನಾವೇಕೆ ಕಳೆದುಕೊಂಡ್ವಿ ಎಂದು ಪ್ರಶ್ನೆ ಹಾಕಿ ಉತ್ತರ ಹುಡುಕದಿದ್ದರೆ ಇನ್ನು ಕೇವಲ ಹತ್ತು ತಿಂಗಳಲ್ಲಿ ಅಪ್ಪಳಿಸುವ ಸಾರ್ವರ್ತ್ರಿಕ ಚುನಾವಣೆಯಲ್ಲಿ ಎಡವುವ ಭಯ ಕಾಡದಿರದು. ಚುನಾವಣೆ ಫಲಿತಾಂಶದ ಮಾರನೇ ದಿನ ಅಂಬೇಡ್ಕರ್ ಜಯಂತಿ ಪ್ರಯುಕ್ತ ಜಗನ್ನಾಥ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಯಡಿಯೂರಪ್ಪನವರೆ ಹೇಳುವಂತೆ ‘ದಲಿತ ಕಾಲೋನಿಯಲ್ಲಿ ನಮ್ಮ ಕಾರ್ಯಕರ್ತರು ಪರಿಪಕ್ವವಾಗಿ ಕೆಲಸ ಮಾಡಿ ಸಮನ್ವಯ ಸಾಧಿಸದ ಕಾರಣಕ್ಕೆ ನಮಗೆ ಹಿನ್ನಡೆಯಾಗಿದೆ’ ಎಂದರು. ಈ ವಾಕ್ಯಗಳಲ್ಲಿ ಯಡಿಯೂರಪ್ಪನವರ ರಾಜಕೀಯ ಅನುಭವವಿದೆ, ಬಸಿದ ರಕ್ತದ ನೋವಿದೆ. ಯಾವುದೋ ಸಮರ್ಥನೆಗೆ ಕಾರ್ಯಕರ್ತರ ಮುಂದೆ ಈ ಪದಗಳು ಬರುವುದಿಲ್ಲ ಎನ್ನುವುದು ಎಲ್ಲರಿಗು ಗೊತ್ತಿರುವ ವಿಚಾರವೆ.

ಗುಂಡ್ಲುಪೇಟೆಯಲ್ಲಿ ಭಾವನಾತ್ಮಕ ವಿಚಾರವಿದ್ದುದರಿಂದ ಅದರ ಬಗ್ಗೆ ಚಿಂತಿಸಿ ಫಲವಿಲ್ಲ. ಆದರೆ ನಂಜನಗೂಡು ಗೆಲ್ಲಬಹುದಾಗಿದ್ದ ಕ್ಷೇತ್ರ.. ಏಕೆಂದರೆ ನಮ್ಮ ಬಳಿ ಇದ್ದದ್ದು ಗೆದ್ದಿರುವ ಆಭ್ಯರ್ಥಿಯಾದರೂ ಗೆಲ್ಲಲಿಲ್ಲ.. ತಪ್ಪೆಲ್ಲಿ ಆಗಿರುವುದೆಂದು ಹುಡುಕುತ್ತ ಹೊರಟರೆ ಮೊದಲ ನೋಟದಲ್ಲೆ ಉತ್ತರ ದಕ್ಕಿಬಿಡುತ್ತೆ. ನಂಜನಗೂಡಿನಲ್ಲಿ ದಲಿತರು ಹೆಚ್ಚಿರುವ ಕ್ಷೇತ್ರ. ಹಾಗೆಯೇ ಆ ಕ್ಷೇತ್ರದಲ್ಲಿ ಸಮಭಲವಿರುವ ಲಿಂಗಾಯಿತರು, ಒಕ್ಕಲಿಗರರು ಹಾಗು ದಲಿತರ ನಡುವಿನ ಸಂಘರ್ಷದ ಪರಿಣಾಮ ಬಾರಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಆ ಕಂದಕ ಮುಚ್ಚದೆ ಚುನಾವಣೆಗೆ ಹೋಗಿದ್ದು ತಪ್ಪೋ ಸರಿಯೋ ನಾವೇ ಒಮ್ಮೆ ಪ್ರಶ್ನಿಸಿಕೊಳ್ಳಬೇಕು. ಹಣ, ಸರ್ಕಾರಿ ಯಂತ್ರಗಳು ಪ್ರತಿ ಚುನಾವಣೆಯಲ್ಲೂ ಬಳಕೆಯಾಗುತ್ತವೆ ಅದೇನು ಹೊಸತಲ್ಲ. ಆದರೆ ಆರು ತಿಂಗಳು ಸಮಯವಿದ್ದರು ನಮ್ಮ ಸಂಘಟನೆ ಮಾಡಿದ್ದಾದರೂ ಏನು ಎಂಬ ಪ್ರಶ್ನೆ ಏಳದೆ ಇರಲು ಹೇಗೆ ಸಾಧ್ಯ?. ೨೦೧೩ ರ ಚುನಾವಣೆಯಲ್ಲಿ ನಮ್ಮ ಪಕ್ಷ ಇಬ್ಬಾಗವಾಗಿ ಚುನಾವಣೆಗೆ ಹೋಗಿದ್ದರ ಪರಿಣಾಮದಿಂದಾಗಿ ನಾವು ಈಗ ಒಂದಾದರು ಈಗಲೂ ನಮ್ಮ ಕಾರ್ಯಕರ್ತರ ನಡುವೆ ಸಮನ್ವಯ ಸಾಧ್ಯವಾಗಿಲ್ಲ.. ಇದನ್ನು ಹಾಗೆ ಬಿಟ್ಟರೆ ಚುನಾವಣೆಯ ಕಣದಲ್ಲಿ ಏನು ಮಾಡಬೇಕು ಎಂದು ಒಮ್ಮೆ ಯೋಚಿಸಿ ನೋಡಿ. ಕಾರ್ಯಕರ್ತರನ್ನು ಒಟ್ಟು ಮಾಡುವ ಕೆಲಸವನ್ನು ಸಂಘಟನೆಯಲ್ಲದೆ ಯಾರು ಮಾಡಬೇಕು? ಪ್ರತಿಯೊಬ್ಬರಿಗೂ ಸರಿಯಾದ ಕೆಲಸ ಹಂಚಿದ್ದರೆ ಬಹುತೇಕ ಈಗಾಗಲೇ ಕಾರ್ಯಕರ್ತರು ಒಟ್ಟಾಗುವ ಸೂಚನೆ ಕಂಡು ಬರುತಿತ್ತು. ಆದರೆ ಈಗ ಅದರ ಯಾವ ಸೂಚನೆಯು ಕಂಡು ಬರುತ್ತಿಲ್ಲ ಎನ್ನುವುದೇ ನೋವಿನ ಸಂಗತಿ. ನಂಜನಗೂಡಿನಲ್ಲಿರುವಂತೆಯೇ ಗ್ರಾಸ್ ರೂಟಿನಲ್ಲಿ ಪ್ರತಿ ಕ್ಷೇತ್ರವು ತನ್ನದೇ ಆದ ಸಮಸ್ಯೆಯನ್ನ ಹೊಂದಿರುತ್ತದೆ.. ಅದರ ಬಗ್ಗೆ ಸಂಘಟನೆ ಅಧ್ಯಯನ ಮಾಡಬೇಕು, ಅದರ ಆಧಾರದ ಮೇಲೆ ಕಾರ್ಯಕರ್ತರಿಗೆ ಕೆಲಸ ಒಪ್ಪಿಸಿ ಚುನಾವಣೆ ತಯಾರಿ ನಡೆಸಬೇಕು. ಆದರೆ ಈ ಕೆಲಸಗಳು ನಡೆಯುತ್ತಲೇ ಇಲ್ಲವಲ್ಲ.

ಬಿಜೆಪಿ ಎಲ್ಲ ಪಕ್ಷಗಳಂತಲ್ಲ.. ಪಕ್ಷದಲ್ಲಿ ಎರಡು ರಚನೆಗಳಿವೆ. ಒಂದು ಸಾರ್ವಜನಿಕ ಮುಖ ಸರಳವಾಗಿ ಇವರನ್ನ ರಾಜಕಾರಣಿಗಳೆನ್ನಬಹುದು, ಪಕ್ಷದ ಇನ್ನೊಂದು ಭಾಗ ಸಂಘಟನೆ. ಈ ಸಂಘಟನೆಯಲ್ಲಿ ಸರ್ವಸ್ವವನ್ನು ತ್ಯಜಿಸಿ ರಾಷ್ಟ್ರದ ಕಾರಣಕ್ಕೆ ದುಡಿಯುವ ಪ್ರಚಾರಕರಿರುತ್ತಾರೆ. ಇವರ ಕೆಲಸವೇ ಪಕ್ಷದ ಸಿದ್ದಾಂತವನ್ನು ತಳಮಟ್ಟದಲ್ಲಿ ಕಾರ್ಯಗತಗೊಳಿಸುವುದು. ಇವರ್ಯಾರು ಮಾಧ್ಯಮಗಳ ಮುಂದೆಯೂ ಬರುವುದಿಲ್ಲ, ಕೊನೆ ಪಕ್ಷ ಸ್ಟೇಜ್ ಗಳನ್ನೂ ಹತ್ತುವುದಿಲ್ಲ.. ಪುಡಿಗಾಸು ಹಿಡಿದುಕೊಂಡು ಖರ್ಚುಮಾಡುವ ಪ್ರತಿ ಪೈಸೆಗೂ ಲೆಕ್ಕ ಬರೆದು ೧೮ ಗಂಟೆ ದನಗಳಂತೆ ಪಕ್ಷಕ್ಕಾಗಿ ದುಡಿಯುವುದಷ್ಟೇ ತಮ್ಮ ಕೆಲಸ. ಆದರೆ ಈ ರಾಜಕಾರಣಿಗಳನ್ನು ಅಥವಾ ಸಾರ್ವಜನಿಕ ಮುಖಗಳನ್ನು, ಪಕ್ಷದ ಎಲ್ಲ ಭಾಗಗಳನ್ನು ಹಾಗು ಕಾರ್ಯಕರ್ತರನ್ನು ಬಳಸಿ ಸಂಘಟನೆಗೆ ಕೆಲಸ ಮಾಡಲು ಯಾಕೆ ಬಿಡುತ್ತಿಲ್ಲ ಎನ್ನುವುದೇ ಈಗಿರುವ ಪ್ರಶ್ನೆ. ಸರಿಯಾಗಿ ನಡೆದಿದ್ದರೆ ನಂಜನಗೂಡಿನಲ್ಲಿ ೬ ತಿಂಗಳಿಂದ ಮೋದಿಯವರರು ದಲಿತರಿಗಾಗಿ ಮಾಡಿದ ಕಾರ್ಯಕ್ರಮಗಳು ಮನೆ ಮನೆಗೆ ತಲುಪುತಿದ್ದವು, ಸೈದ್ಧಾಂತಿಕ ಕಾರ್ಯಕ್ರಮಗಳು ನಡೆದು ಹಲವರ ಜಾತಿ ವೈಶಮ್ಯ ಕರಗಿ ಹೋಗುತಿತ್ತು.. ಬಹುಷಃ ಗೆಲುವು ನಮ್ಮದಾಗುತಿತ್ತು.

ರಾಜ್ಯಾಧ್ಯಕ್ಷರೇ, ನಮ್ಮ ಸಂಘಟನೆಗೂ ಬೇರೆ ರಾಜ್ಯದ ಸಂಘಟನೆಗೂ ಸ್ವಲ್ಪ ವ್ಯತ್ಯಾಸ ನೋಡಿ.. ಗುಜರಾತ್, ಮಧ್ಯಪ್ರದೇಶದ ಯುವ ಕಾರ್ಯಕರ್ತರು ದಿನ ಬೆಳಗಾದರೆ ಭೀಮ್ ಆಪ್ ಬಗ್ಗೆ ಪ್ರಚಾರ ಮಾಡುತ್ತ ಸ್ವಚ್ಛ ಭಾರತ್ ಮಾಡುತ್ತ ರಸ್ತೆಯಲ್ಲಿದ್ದಾರೆ. ನಮ್ಮವರು ಎಲ್ಲಿದ್ದಾರೆ? ಯುವ ಮೊರ್ಚಾ ಎಂದರೆ ನಾಳಿನ ಸೈದ್ಧಾಂತಿಕ ರಾಜಕಾರಣದ ರೂವಾರಿಗಳು, ನಿಮ್ಮ ವಾರಸುದಾರರು. ಆದರೆ ನಮ್ಮ ಯುವ ಪಡೆಯನ್ನ ಭಜನಾ ಮಂಡಳಿಯಾಗಿ ಪರಿವರ್ತಿಸಿ ನಾಯಕರ ಮನೆಯ ಗೇಟ್ ಕಾಯಲು ಬಿಟ್ಟಿದ್ದೆವಲ್ಲ..! ಇದರ ಮುಂದಿನ ಪರಿಣಾಮದ ಬಗ್ಗೆ ಯೋಚಿಸಬೇಕಲ್ಲವೇ. ದಿನ ಬೆಳಗಾದರೆ ಹಾರ ತುರಾಯಿ ಹಿಡಿದು ಕಾರಣವಿಲ್ಲದೆ ನಾಯಕರ ಮನೆ ಮನೆ ಬಾಗಿಲಿನಲ್ಲಿ ಜೋತು ಬೀಳುವವರನ್ನು ಉಗಿದು ಅಟ್ಟಿದ್ದರೆ ಅವರೆಲ್ಲ ಮತದಾರರ ಮನೆಯ ಮುಂದಿರುತ್ತಿದ್ದರು. ಆಗ ಪಕ್ಷ ಇನ್ನೊಂದಷ್ಟು ಸಭಲ ಗೊಳ್ಳುತ್ತಿರಲಿಲ್ಲವೇ. ಪಕ್ಷ ಕಷ್ಟದಲ್ಲಿದ್ದಾಗ ದುಡಿದ ಕಾರ್ಯಕರ್ತರು ಯಾವುದೋ ಮೂಲೆಯಲ್ಲಿ ನಿಂತು ಹಣ ಬಲ, ಜಾತಿ ಬಲದಿಂದ ನಮ್ಮ ಪಕ್ಷವನ್ನು ಆಳುತ್ತಿರುವವರನ್ನು ನೋಡಿ ಕಣ್ಣೀರಿಡುತ್ತಿದ್ದಾರೆ.. ಅವರನೊಮ್ಮೆ ಮೈ ತಡವಿದ್ದರೆ ಬಹುಷಃ ಪಕ್ಷದಲ್ಲಿ ಒಂದಿಷ್ಟು ಹುರುಪು ಬಂದಿರುತಿತ್ತು. ಪ್ರತಿ ಕಾರ್ಯಕರ್ತನನ್ನು ಯಾವ ಬಣವೆಂದು ಪರೀಕ್ಷಿಸುವ ಕೆಟ್ಟ ಸಂಪ್ರದಾಯ ಬೆಳದಿದೆ.. ಹೀಗಾದರೆ ಚುನಾವಣೆ ಗೆಲ್ಲುವುದಾದರು ಹೇಗೆ ಹೇಳಿ.

ಯಡಿಯೂರಪ್ಪನವರನ್ನು ಸೇರಿಸಿ ಎಲ್ಲ ಬಿಜೆಪಿ ನಾಯಕರಿಗೂ ನನ್ನ ಕೋರಿಕೆ ಇಷ್ಟೇ.. ನೀವೊಮ್ಮೆ ನಿಮ್ಮ ಹೆಜ್ಜೆಗುರುತುಗಳನೊಮ್ಮೆ ನೋಡಿ, ನೀವು ರಾಜಕಾರಣಕ್ಕೆ ಬರುವಾಗ ನಿಮ್ಮ ಬಳಿ ಹಣವಿತ್ತೇನು ? ನಿಮ್ಮ ಬಳಿ ಜಾತಿ ಬಲವಿತ್ತೇನು ? ನೀವು ನಾಯಕರ ಮನೆಗಳ ಮುಂದೆ ಬಾಗಿಲು ಕಾಯುತಿದ್ರ ? ಇಲ್ಲವಲ್ಲ..! ನೀವೆಲ್ಲ ಇಂದು ನಾಯಕರಾಗಿದ್ದು ಅಸಂಖ್ಯಾತ ಕಾರ್ಯಕರ್ತರ ಅರೆ ಹೊಟ್ಟೆಯ ದುಡಿಮೆಯಿಂದ, ಮೈಮೇಲೆ ಹರಿದ ಬಟ್ಟೆ ಇದ್ದರು ಆತನೊಳಗಿದ್ದ ಸ್ವಚ್ಛ ಧೇಶಭಕ್ತಿಯಿಂದ, ಬಸಿದ ರಕ್ತದಿಂದ.. ಆದರೆ ಗೆದ್ದ ಮೇಲೆ ನಿಮ್ಮ ಸುತ್ತಲೂ ಕೋಟೆ ಕಟ್ಟಿಕೊಂಡು ಮೆರೆಯುತ್ತಿದ್ದೀರಲ್ಲ ನಿಮಗೆ ಗುರಿ ಮರೆತು ಹೋಯಿತಾ ?. ಉರಿಮಜಲು ರಾಮ್ ಭಟ್ರು, ಪ್ರಭಾಕರ್ ಭಟ್ರು, ಮೈ.ಚ.ಜಯದೇವ್ ಜೀ, ಹೀಗೆ ಹಲವಾರು ಹಿರಿಯರು ಸಾಮಾನ್ಯ ಕಾರ್ಯಕರ್ತನನ್ನು ಬೆಳಸಿ
ನಾಯಕರನ್ನಾಗಿಸಿದರು. ಆದರೆ ಈಗ ಚೇಲಾಗಳನ್ನು ಸಾಕಲಾಗುತ್ತಿದೆ.! ಈನಡವಳಿಕೆ ಸಂಘಟನೆಯ ಪರಿಸ್ಥಿತಿಯ ಮೇಲೆ ಯಾವ ಪರಿಣಾಮ ಬೀರಬಹುದೆಂದು ಯೋಚಿಸಿ. ಹಿಂದೆಲ್ಲ ಕಾರ್ಯಕರ್ತನೇ ರಾಜಕಾರಣಿಯಾಗಿ ರಾಜಕಾರಣ ನಡೆಯುತಿತ್ತು, ಈಗ ಪೊಲಿಟಿಕಲ್ ಏಜೇಂಟ್ ಗಳಿಂದ ರಾಜಕಾರಣ ನಡೆಯುತ್ತಿದೆ. ಪ್ರತಿ ಪ್ರಬಲ ರಾಜಕಾರಣಿಯ ಸುತ್ತ ಏಜೇಂಟ್ ಗಳ ದಂಡೇ ಇರುತ್ತೆ, ಸಂಘಟನೆಯ ಆಯಾಕಟ್ಟಿನ ಜಾಗಗಳಲ್ಲಿ ಸಹ ಕೂರುವ ಹುನ್ನಾರ ನಡೆಯುತ್ತಲಿದೆ. ಇವರೇನಾದರೂ ಆ ಜಾಗದಲ್ಲಿ ಕೂತರೆ ನಮ್ಮ ಪಕ್ಷವು ಹಾಳಾಗಿ ಹೋಗುತ್ತದೆ. ಈಗಾಗಲೇ ಜೆಡಿಎಸ್, ಕಾಂಗ್ರೆಸ್, ಕಮ್ಯುನಿಷ್ಟ್ ಪಕ್ಷಗಳು ಪೊಲಿಟಿಕಲ್ ಏಜೇಂಟ್ ಗಳ ದಾಳಿಯಲ್ಲಿ ನಲುಗಿ ಮಸಣ ಸೇರಲು ಸಜ್ಜಾಗಿ ನಿಂತಿವೆ, ನಾವು ಈಗಲೇ ಎಚ್ಚೆತ್ತು ಸಂಘಟನೆಗೆ ಸಂಘಟನೆಯ ಕೆಲಸ ಬಿಟ್ಟು ನಮ್ಮ ಕೆಲಸದ ಕಡೆ ಗಮನ ಕೊಡೋಣ.

ಮತದಾರರು ಬಾಜಪದೊಂದಿಗೆ ಭಾವನಾತ್ಮಕ ಸಂಬಂಧ ಇರಿಸಿರುವ ಕಾರಣಕ್ಕೆ ನಾವಿನ್ನು ಬದುಕಿದ್ದೇವೆ, ರಾಮಮಂದಿರದಿಂದ ಹಿಡಿದು ದೇಶದ ಅಖಂಡತೆಯ ಕಾರಣಕ್ಕೆ, ಸಂಸ್ಕೃತಿಯ ಉಳಿವಿನ ಕಾರಣಕ್ಕೆ, ನಮ್ಮೊಂದಿಗೆ ಇದ್ದಾರೆ. ಆದರೆ ಅವರ ನಂಬಿಕೆಯನ್ನು ಬಹು ಬೇಗ ಈಡೇರಿಸುವ ಹೊಣೆ ನಮ್ಮ ಮೇಲಿದೆ. ೨೦ ಸಾವಿರ ಇದ್ದ ಇಂತಹ ಭಾವನಾತ್ಮಕ ಮತಗಳನ್ನು ಇನ್ನೊಂದಿಪ್ಪತ್ತು ಹೆಚ್ಚಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಇದೆ. ಆದರೆ ಪ್ರತಿ ಕ್ಷೇತ್ರದಲ್ಲಿ ಗೆಲುವಿಗೆ ಬೇಕಾಗಿರುವ ಇನ್ನುಳಿದ ೫ ರಿಂದ ೧೦ಸಾವಿರ ಮತಗಳನ್ನು ತರುವ ಜವಾಬ್ದಾರಿ ಸಂಘಟನೆಗೆ ಇದೆ. ಅದಕ್ಕೆ ಸಂಘಟನೆಯೊಂದೇ ಮಾರ್ಗ ಆ ಕಾರಣಕ್ಕೆ ನಾವು ನಮ್ಮ ಕಾರ್ಯವೈಕರಿಯನ್ನು ಒರೆಗಲ್ಲಿಗೆ ಹಚ್ಚಿ ನೋಡಬೇಕಲ್ಲವೇ. ಗುಜರಾತ್ ಹಾಗು ಮಧ್ಯಪ್ರದೇಶದಲ್ಲಿ ಸಂಘಟನೆ ಸರಿಯಾದ ದಾರಿಯಲ್ಲಿರುವುದರಿಂದ ಚುನಾವಣೆ ದುಬಾರಿಯಾಗಿಲ್ಲ, ಗೆಲುವು ಆರಾಮಾಗಿದೆ, ನಾವು ಆ ದಾರಿಯಲ್ಲಿ ಸಾಗುವ ಜರೂರತ್ತಿದೆ.. ಆಗ ಮಾತ್ರ ಶುದ್ಧ ಚಾರಿತ್ರ್ಯ ನವ ಯುಗದ ಹೊಸ ಮುಖಗಳನ್ನು ರಾಜಕಾರಣಕ್ಕೆ ತಂದು ದೇಶವನ್ನು ಬಹು ಬೇಗ ಉನ್ನತಿಗೆ ತೆಗೆದುಕೊಂಡು ಹೋಗಬಹುದಾಗಿದೆ. ಮುಂದಿನ ೨೦೧೮ ರ ಚುನಾವಣೆಯಲ್ಲಿ ೧೫೦ ಸ್ಥಾನ ಗೆದ್ದು ಯುಡಿಯೂರಪ್ಪನವರು ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವ ಹಾದಿಯು ಸುಗಮವಾಗಲಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments