ನಿಮ್ಮ ದೇವರ ಶಕ್ತಿಯನ್ನು ಸಂಶಯಿಸಿದರೆ ಟಿಪ್ಪೂ ಸುಲ್ತಾನರ ಕಥೆಯನ್ನೊಮ್ಮೆ ನೆನಪಿಸಿ.
– ಪ್ರವೀಣ್ ಕುಮಾರ್ ಮಾವಿನಕಾಡು
ದೇವರು, ದೇವಾಲಯ ಎಂದ ಕೂಡಲೇ ಕೆಲವು ವಿಚಾರವಾದಿಗಳು ಅದೊಂದು ಶೋಷಿಸಲೆಂದೇ ಸೃಷ್ಠಿಸಲಾದ ವ್ಯವಸ್ಥೆ ಎಂದುಬಿಡುತ್ತಾರೆ. ಅವರನ್ನು ಅನುಸರಿಸುವ ಇಂದಿನ ಬಹುತೇಕ ಯುವ ಜನರೂ ಕೂಡಾ ದೇವರಿಗೆ ಶಕ್ತಿಯಿಲ್ಲ, ದೇವರನ್ನು ಪೂಜಿಸುವುದರಿಂದ ಸಮಯ ಹಾಳು, ಹಣ ವ್ಯರ್ಥ ಎಂದೆಲ್ಲಾ ತಗಾದೆ ತೆಗೆಯುತ್ತಾರೆ.
ದೇವರು, ದೇವಾಲಯ, ಪೂಜೆ ಇವುಗಳ ಪರ ಯಾರೆಷ್ಟೇ ಸಮರ್ಥಿಸಿಕೊಂಡರೂ ಅದನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ. ವೇದ, ಪುರಾಣ, ಮಹಾಭಾರತ, ರಾಮಾಯಣ, ಸಾವಿತ್ರಿ, ಪ್ರಹ್ಲಾದ … ಉಹೂಂ. ಇವ್ಯಾವುದನ್ನು ಉಲ್ಲೇಖಿಸಿಯೂ ಅವರನ್ನು ಒಪ್ಪಿಸಲು ಸಾಧ್ಯವಿಲ್ಲ. ಅವುಗಳನ್ನೆಲ್ಲಾ ಕಟ್ಟುಕಥೆಗಳೆಂದರೆ ಮುಗಿದೇ ಹೋಯಿತಲ್ಲ, ಮುಂದೆ ಮಾತಾಡುವುದಾದರೂ ಹೇಗೆ? (ಆದರೆ ಅವರು ಮಾತ್ರ ಅದೇ ಕಟ್ಟುಕಥೆಗಳನ್ನು ಬಳಸಿಕೊಂಡು ತಮ್ಮ ವಾದಗಳನ್ನು ಸಮರ್ಥನೆ ಮಾಡಿಕೊಳ್ಳಬಹುದು ಎನ್ನುವುದು ನಿಮಗೆ ನೆನಪಿರಲಿ).
ಹಾಗಾದರೆ ದೇವರಿಗೆ ಶಕ್ತಿಯಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದೇ ಸರಿ ಎಂದು ನಿಮಗನ್ನಿಸುತ್ತಿದೆಯೇ? ಹಾಗಿದ್ದರೆ ಸ್ವಲ್ಪ ಇರಿ. ನಮ್ಮ ಹಿಂದೂ ದೇವರ ಶಕ್ತಿಯ ಬಗ್ಗೆ ನಿಮಗೊಂದು ಮಾಹಿತಿ ಕೊಡಲಿಕ್ಕಿದೆ.
ರಾಮಾಯಣ, ಮಹಾಭಾರತ ಕಟ್ಟುಕಥೆಯೆಂದೇ ಇಟ್ಟುಕೊಳ್ಳೋಣ. ಪ್ರಹ್ಲಾದ,ಹರಿಶ್ಚಂದ್ರ ಸಿನಿಮಾಗಾಗಿಯೇ ಮಾಡಿದ ಸ್ಕ್ರಿಪ್ಟ್ ಎಂದುಕೊಳ್ಳೋಣ, ಸತೀ ಸಾವಿತ್ರಿಯ ಕಥೆ ಜಾನಪದರು ಬೇಜಾರು ಕಳೆಯಲು ಹುಟ್ಟುಹಾಕಿದ್ದೆಂದೇ ಅಂದುಕೊಳ್ಳೋಣ. ಆದರೆ ಇತಿಹಾಸ?
ಇತಿಹಾಸವನ್ನು ಮಾತ್ರ ಯಾರೂ ಸುಳ್ಳೆಂದು ಹೇಳಲಾಗದು. ಅದನ್ನು ತಿರುಚಿ ಬರೆಯುವುದೂ ಆಗದು. ಇತಿಹಾಸ ಹಿಂದೆ ಏನು ನಡೆದಿದೆಯೋ ಅದನ್ನೇ ಹೇಳಿರುತ್ತದೆ. ನಾವು ಕಲಿಯುತ್ತಿರುವ ಇತಿಹಾಸಗಳೆಲ್ಲವನ್ನೂ ಇತಿಹಾಸ ತಜ್ಞರು ಸಂಶೋಧನೆ ನಡೆಸಿ ಸತ್ಯವೆಂದು ಪ್ರಮಾಣೀಕರಿಸಿರುತ್ತಾರೆ. ಅದೇ ಇತಿಹಾಸವನ್ನು ಪೀಳಿಗೆಯಿಂದ ಪೀಳಿಗೆಗೆ ಹೆಮ್ಮೆಯಿಂದ ತಿಳಿಸಿಕೊಡುತ್ತಲೇ ಇದ್ದೇವೆ. ಆದ್ದರಿಂದ ಇತಿಹಾಸ ಎನ್ನುವುದು ಪುರಾಣದಂತಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಸತ್ಯವೆಂದು ಒಪ್ಪಿಕೊಳ್ಳಲೇಬೇಕು.
ಇದೆಲ್ಲಾ ಪೀಠಿಕೆ ಯಾಕೆ ಗೊತ್ತಾ? ನಮ್ಮ ಹಿಂದೂ ದೇವರು ತನ್ನ ದೈವೀ ಶಕ್ತಿಯ ಮೂಲಕ ಭಕ್ತರಿಗೆ ಒಳ್ಳೆಯದು ಮಾಡಿದ ಬಗ್ಗೆ ಕೇವಲ ಪುರಾಣ ಪುಣ್ಯಕಥೆಗಳಲ್ಲಷ್ಟೇ ಅಲ್ಲ, ಇತಿಹಾಸದಲ್ಲೂ ದಾಖಲಾಗಿದೆ! ಇತಿಹಾಸ ಸತ್ಯ ಎಂದು ಒಪ್ಪಿಕೊಂಡ ಮೇಲೆ ಇತಿಹಾಸದಲ್ಲಿ ಬರುವ ಘಟನೆಗಳೂ ಸತ್ಯ ಎಂದು ಯಾರೇ ಆದರೂ ಒಪ್ಪಿಕೊಳ್ಳಲೇ ಬೇಕಲ್ಲವೇ?
ಹಾಗಾದರೆ ಇತಿಹಾಸದಲ್ಲಿ ನಡೆದ ಯಾವ ಘಟನೆ ನಮ್ಮ ಹಿಂದೂ ದೇವರಿಗಿರುವ ಶಕ್ತಿಯನ್ನು ತೋರಿಸಿಕೊಟ್ಟಿದೆ ಎನ್ನುವುದನ್ನು ನೋಡಿಯೇ ಬಿಡೋಣ ಅಲ್ಲವೇ..
ಕೆಲವು ವರ್ಷಗಳ ಹಿಂದೆ ಟಿಪ್ಪು ಸುಲ್ತಾನರ ಅತ್ಯಂತ ಪ್ರೀತಿಯ ಪಟ್ಟದ ಆನೆ ತನ್ನ ಕಣ್ಣಿನ ದೃಷ್ಠಿ ಕಳೆದುಕೊಂಡಿತ್ತು. ಆಗ ಸುಲ್ತಾನರು ನಂಜುಂಡೇಶ್ವರನ ಸನ್ನಿಧಿಗೆ ಹೋಗಿ ಪ್ರಾರ್ಥಿಸಿಕೊಂಡರು. ನಂಜುಂಡೇಶ್ವರನ ಅಭಿಷೇಕಕ್ಕೆ ಬಳಸುವ ಕಪಿಲಾ ತೀರ್ಥವನ್ನು ಆ ಆನೆಗೆ ಭಕ್ತಿಯಿಂದ ಪ್ರೋಕ್ಷಿಸಿದ ನಂತರ ದೃಷ್ಠಿ ಕಳೆದುಕೊಂಡಿದ್ದ ಪಟ್ಟದ ಆನೆಗೆ ಪುನಃ ದೃಷ್ಟಿ ಬಂದಿತು. ತನ್ನ ಭಕ್ತಿಗೆ ಮೆಚ್ಚಿ ತನ್ನ ಸಮಸ್ಯೆಯನ್ನು ಪರಿಹರಿಸಿದ ನಂಜುಂಡೇಶ್ವರನನ್ನು ಟಿಪ್ಪು ಸುಲ್ತಾನರು ಹಕೀಂ(ವೈದ್ಯ) ನಂಜುಂಡ ಎಂದು ಕರೆದರೂ. ಅದೇ ನೆನಪಿಗಾಗಿ ಅಮ್ಮನವರ ಗರ್ಭಗುಡಿ ಪಕ್ಕದಲ್ಲಿ ಪಚ್ಚೆ ಲಿಂಗವೊಂದನ್ನು ಸ್ಥಾಪಿಸಿದರು.
ಇಲ್ಲಿ ಗಮನಿಸಬೇಕಾದದ್ದೇನೆಂದರೆ ಇದೇನೂ ಹಲವು ಸಾವಿರ ವರ್ಷದ ಹಿಂದಿನ ಇತಿಹಾಸವಲ್ಲ. ಕೇವಲ ಎರಡೂಕಾಲು ಶತಮಾನದೊಳಗಿನ ಇತಿಹಾಸ. ಹಾಗಾಗಿ ಇದನ್ನು ಸುಳ್ಳು ಎನ್ನಲು ಸಾಧ್ಯವೇ ಇಲ್ಲ. ಅಲ್ಲದೇ ಟಿಪ್ಪು ಸುಲ್ತಾನರು ಸ್ಥಾಪಿಸಿದ ಆ ಪಚ್ಚೆ ಲಿಂಗದ ಗರ್ಭ ಗುಡಿಯ ಮೇಲೆ ಸ್ವತಃ ಸರ್ಕಾರವೇ ಅದರ ಹಿನ್ನೆಲೆ ಏನು ಎನ್ನುವುದನ್ನು ಬರೆಸಿದೆ. ಸರ್ಕಾರದ ಕೆಲವು ವೆಬ್ ಸೈಟ್ ಗಳಲ್ಲೂ ಈ ಬಗ್ಗೆ ವಿವರಗಳಿವೆ. ಸರ್ಕಾರವೇ ಸುಳ್ಳು ಹೇಳಲು ಸಾಧ್ಯವೇ?
“ಟಿಪ್ಪು ಸುಲ್ತಾನರ ಪಟ್ಟದ ಆನೆ ಕುರುಡಾಗಿದ್ದಾಗ ನಂಜನಗೂಡಿನಲ್ಲಿ ಹರಕೆ ಹೊತ್ತ ಬಳಿಕ ಆನೆಗೆ ಕುರುಡು ವಾಸಿಯಾಗಿತ್ತು. ನಂತರ ಹಕೀಮ್ ನಂಜುಂಡ ಅನ್ನೋ ಲಿಂಗವನ್ನು ಸ್ಥಾಪನೆ ಮಾಡಿದ್ದ” ಎಂದು ಸ್ವತಃ ಈ ದೇಶದ ಪ್ರಧಾನಮಂತ್ರಿಗಳಾಗಿದ್ದ ಶ್ರೀ ಹೆಚ್.ಡಿ.ದೇವೇಗೌಡರೇ ಹೇಳಿದ್ದಾರೆ. ಹಾಗಾಗಿ ಟಿಪ್ಪು ಸುಲ್ತಾನರಿಗೆ ನಮ್ಮ ದೇವರು ಒಲಿದು ಪಟ್ಟದ ಆನೆಗೆ ಕಣ್ಣು ಕೊಟ್ಟಿದ್ದನ್ನು ಸುಳ್ಳು ಎನ್ನಲು ಸಾಧ್ಯವೇ ಇಲ್ಲ ಅಲ್ಲವೇ?
ಇದಿಷ್ಟೇ ಅಲ್ಲದೇ ಬಹುತೇಕ ರಾಜಕಾರಣಿಗಳು, ಸಾಹಿತಿಗಳು, ಧಾರ್ಮಿಕ ಮುಖಂಡರುಗಳು ಟಿಪ್ಪು ಸುಲ್ತಾನರ ಪಟ್ಟದ ಆನೆಗೆ ತನ್ನ ಶಕ್ತಿಯಿಂದ ಮಾಹಾದೇವ ನಂಜುಂಡೇಶ್ವರನು ಕಣ್ಣು ಕೊಟ್ಟಿರುವ ಇತಿಹಾಸವನ್ನು ಯಾವುದೇ ವಿರೋಧವಿಲ್ಲದಂತೆ ಒಪ್ಪಿಕೊಂಡಿದ್ದಾರೆ. ಸ್ಥಳೀಯರು ಕೂಡಾ ಈಗಲೂ ಇದೇ ಇತಿಹಾಸವನ್ನು ಮೆಲುಕು ಹಾಕುತ್ತಲೇ ಇದ್ದಾರೆ. ಯಾವ ವಿಚಾರವಾದಿಯೂ ಕೂಡಾ ಇದುವರೆಗೂ ದೈವೀ ಶಕ್ತಿಯ ಈ ಇತಿಹಾಸ ಸುಳ್ಳು ಎಂದು ವಾದಿಸಿಲ್ಲ. ಹಾಗಿದ್ದ ಮೇಲೆ ನಾವು ಪೂಜಿಸುವ ದೇವರಿಗೆ ಶಕ್ತಿ ಇದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕಲ್ಲವೇ? ಈ ಕಲಿಯುಗದಲ್ಲೂ ಒಬ್ಬ ಅನ್ಯ ಧರ್ಮೀಯ ವ್ಯಕ್ತಿಯ ಪ್ರಾರ್ಥನೆಗೆ ಒಲಿದು ಅವರ ಪಟ್ಟದ ಆನೆಗೆ ಕಣ್ಣು ಬರಿಸಿದ್ದು ಹಿಂದೂ ದೇವರ ಶಕ್ತಿಯೇ ಅಲ್ಲವೇ? ಹಾಗಿದ್ದ ಮೇಲೆ ನಿತ್ಯವೂ ಪೂಜಿಸುವ ನಮಗೆ ದೇವರು ಒಲಿಯದಿರುತ್ತಾನೆಯೇ? ತನ್ನ ಶಕ್ತಿಯನ್ನು ತೋರದೆ ಇರುತ್ತಾನೆಯೇ?
ದೈವೀ ಶಕ್ತಿಯ ಮೇಲೆ ನಂಬಿಕೆ ಕಳೆದುಕೊಂಡಿದ್ದ ನಿಮಗೆ ಈಗ ನಂಬಿಕೆ ಬಂತಲ್ಲವೇ? ಹಾಗಿದ್ದ ಮೇಲೆ ಇನ್ನೊಮ್ಮೆ ಯಾರಾದರೂ ನಿಮ್ಮ ಮುಂದೆ ನಿಮ್ಮ ದೇವರ ದೈವೀ ಶಕ್ತಿಯನ್ನು ಸಂಶಯಿಸಿದರೆ ಟಿಪ್ಪೂ ಸುಲ್ತಾನರ ಕಥೆಯನ್ನೊಮ್ಮೆ ಅವರಿಗೆ ನೆನಪಿಸಿ.