ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 23, 2017

1

ವಿಲಕ್ಷಣ..!

‍ನಿಲುಮೆ ಮೂಲಕ

– ಗುರುರಾಜ ಕೊಡ್ಕಣಿ. ಯಲ್ಲಾಪುರ

ಶಮಂತಕ ಏದುಸಿರು ಬಿಡುತ್ತಿದ್ದ. ಅದೆಷ್ಟು ದೂರದಿಂದ ಆ ದಟ್ಟ ಕಾಡಿನಲ್ಲಿ ಓಡುತ್ತ ಸಾಗಿದ್ದನೋ ಅವನಿಗೆ ತಿಳಿಯದು. ಹುಲ್ಲುಗಂಟಿಗಳನ್ನು ದಾಟಿ, ನಡುನಡುವೆ ಮರಗಳನ್ನು ತಪ್ಪಿಸಿ ಜಿಗಿಯುತ್ತ ಮುಂದೆ ಸಣ್ಣದ್ದೊಂದು ದಾರಿಯೂ ಕಾಣದ ಗೊಂಡಾರಣ್ಯ ನಡುವೆ ನಿಂತವನಿಗೆ ತಾಳಲಾಗದ ಬಾಯಾರಿಕೆ. ಸುಮ್ಮನೇ ಉಗುಳು ನುಂಗುತ್ತ ಹಿಂತಿರುಗಿ ನೋಡಿದ. ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಅವನಿಗೆ. ಆ ಸಣ್ಣದ್ದೊಂದು ಅನುಮಾನವೇ ಅವನನ್ನು ದಿಕ್ಕೆಟ್ಟು ಓಡುವಂತೆ ಮಾಡಿದ್ದು. ಅವನ ಹಿಂದೆ ಯಾರೂ ಇದ್ದಂತೆನಿಸಲಿಲ್ಲ. ಒಂದಷ್ಟು ಜೀರುಂಡೆಗಳ ಜಿರ್ ಗುಟ್ಟುವಿಕೆ, ಅಲ್ಲೊಂದು ಇಲ್ಲೊಂದು ಹಕ್ಕಿಗಳ ಹಾಡು, ದೂರದಲ್ಲೆಲ್ಲೋ ’ಘೂಕ್, ಘೂಕ್’ ಎಂದರಚುವ ಕೋತಿಗಳ ಅರಚಾಟ, ಇಷ್ಟೆಲ್ಲದರ ನಡುವೆ ಕಾಡುತ್ತಿರುವ ಅಗೋಚರ ಭಯ. ಶಮಂತಕನ ಕಾಲುಗಳಲ್ಲಿ ಅಸಾಧ್ಯವಾದ ನೋವು. ಓಡಿದ ಅಪರಿಮಿತ ಓಟದ ಪರಿಣಾಮವೋ ಏನೋ ಮೈಯೆಲ್ಲ ಅಂಟಂಟು ಬೆವರು. ಅಸಲಿಗೆ ತಾನು ಹೀಗೆ ಹುಚ್ಚನಂತೆ ಓಡುತ್ತಿದ್ದುದೇಕೆ ಎನ್ನುವುದು ಅವನಿಗೆ ನೆನಪಾಗದು. ಸೊಂಟದೆತ್ತರಕ್ಕೆ ಬೆಳೆದು ನಿಂತಿದ್ದ ಹುಲ್ಲುಗಂಟಿಗಳ ನಡುವೆಯೇ ಎಲ್ಲಿಂದಲೋ ಓಡುತ್ತ ಬಂದವನು ಅಚಾನಕ್ಕಾಗಿ ಎದುರಿಗೆ ಸಿಕ್ಕ ದೊಡ್ಡ ಮರಕ್ಕೆ ಅಪ್ಪಳಿಸಿ ಬಿದ್ದುಬಿಟ್ಟೆನೆಂಬ ಕಾರಣಕ್ಕೆ ನಿಂತಿದ್ದು ಮಾತ್ರ ಅವನಿಗೆ ಗೊತ್ತು. ಸುಸ್ತಾದ ಕಾಲುಗಳಲ್ಲಿನ ಶಕ್ತಿಯಷ್ಟೂ ಬಸಿದುಹೋಗಿತ್ತು. ತಡೆಯಲಾಗದ ನಿಶ್ಯಕ್ತಿ. ಸುಸ್ತಾಗಿ ಮರದ ಕೆಳಗಿನ ಕೆಂಪನೆಯ ಮಣ್ಣಿನ ಮೇಲೆ ಅವನು ಕುಸಿದು ಕುಳಿತ. ನಡು ಮಧ್ಯಾಹ್ನದ ಕಾಡಿನ ಧಗೆ ಅವನನ್ನು ಸುಡುತ್ತಿತ್ತು. ಬಾಯಿಯಿಂದಲೇ ಅಂಗಿಯ ಒಳಗೆ ಗಾಳಿಯೂದಿಕೊಳ್ಳುತ್ತ, ’ಉಫ್’ ಎನ್ನುತ್ತ ಬಿಸಿಯಾರಿಸುವ ವಿಫಲ ಪ್ರಯತ್ನ ಮಾಡತೊಡಗಿದ. ಅವನ ಕಷ್ಟ ನೋಡಲಾಗದು ಎನ್ನುವಂತೆ ಅದೆಲ್ಲಿಂದಲೋ ಬೀಸಿ ಬಂದ ಎಳೆಯ ತಂಗಾಳಿಯ ಅಲೆಯೊಂದು ಅವನನ್ನು ಸವರಿಕೊಂಡು ಹೋಯಿತು. ’ಆಹ್’ಎನ್ನುವ ನೆಮ್ಮದಿಯ ದನಿಯೊಂದು ಅವನ ಬಾಯಿಂದ ಅಪ್ರಯತ್ನವಾಗಿ ಹೊರಹೊಮ್ಮಿತು. ಕುಳಿತಲ್ಲಿಯೇ ಬೆನ್ನ ಹಿಂದಿದ್ದ ಮರದ ಬೊಡ್ಡೆಗೆ ತಲೆಯಾನಿಸಿ ಕಣ್ಣುಮುಚ್ಚಿದ. ಮುಚ್ಚಿದ ಕಣ್ಣುಗಳ ಹಿಂದೆ ಪಕ್ಷಿಗಳ ಚಿಲಿಪಿಲಿ, ಕೋತಿಯ ಕಿರುಚಾಟ ಎಲ್ಲವೂ ಅವನಿಗೆ ಸ್ಪಷ್ಟವಾಗಿ ಕೇಳಿಸುತ್ತಿದ್ದವು.

ಕಣ್ಮುಚ್ಚಿ ಕೊಂಚ ವಿರಮಿಸಬೇಕು ಎಂದುಕೊಂಡಿದ್ದ ಶಮಂತಕನಿಗೆ ಮತ್ತೆ ಅಪಾಯದ ಮುನ್ಸೂಚನೆ. ಬೆಚ್ಚಿ ಬಿದ್ದವನೇ ಕ್ಷಣ ಮಾತ್ರದಲ್ಲಿ ಕಣ್ಣು ತೆರೆದ. ಅಷ್ಟು ಹೊತ್ತು ಚಿಲಿಪಿಲಿಗುಡುತ್ತಿದ್ದ ಪಕ್ಷಿಗಳು, ಕಿರುಚುತಿದ್ದ ಕೋತಿಗಳು ಏಕಾಏಕಿ ಮೌನವಾಗಿ ಹೋಗಿದ್ದು ಅವನ ಬೆನ್ನಹುರಿಯಾಳದಲ್ಲೊಂದು ನಡುಕ ಹುಟ್ಟಿಸಿತ್ತು. ಕೊಂಚವೂ ಮಿಸುಕಾಡದಂತೆ ಕುಳಿತಿದ್ದ ಅವನ ಕಣ್ಣುಗಳು ಮಾತ್ರ ಎಡಕ್ಕೂ ಬಲಕ್ಕೂ ಹೊರಳುತ್ತಿದ್ದವು. ಕಾಡಿನ ಆ ಅಸಹನೀಯ ಮೌನವನ್ನು ಸೀಳಿಕೊಂಡು ಬರುತ್ತಿದ್ದ ಸದ್ದೊಂದು ಅವನಲ್ಲಿ ತೀವ್ರವಾದ ಉದ್ವಿಗ್ನತೆಯನ್ನು ಹುಟ್ಟಿಹಾಕಿತ್ತು. ತಾನು ಓಡಿಬಂದ ದಿಕ್ಕಿನಿಂದಲೇ ಯಾರೋ ನಿಧಾನಕ್ಕೆ ನಡೆದುಕೊಂಡು ಬರುತ್ತಿದ್ದಾರೆನ್ನುವ ಅನುಮಾನ ಅವನನ್ನು ಪುನಃ ಕಾಡತೊಡಗಿತ್ತು. ಅವನ ಅನುಮಾನವನ್ನು ಇನ್ನಷ್ಟು ಬಲಗೊಳಿಸಿದ್ದು ಕಾಡ ತುಂಬೆಲ್ಲ ಹರಡಿ ಬಿದ್ದಿದ್ದ ಮರದ ಒಣಗಿದೆಲೆಗಳ ಮೇಲೆ ಕ್ಷೀಣವಾಗಿ ಕೇಳಿಬರುತ್ತಿದ್ದ ಹೆಜ್ಜೆಗಳ ಶಬ್ದ. ಕುಳಿತಲ್ಲಿಯೇ ನಿಧಾನಕ್ಕೆ ಎದ್ದು ನಿಂತ ಶಮಂತಕ. ಎರಡಡಿ ಎತ್ತರದ ಹುಲ್ಲುಗಳ ನಡುವೆ ನಡೆಯುತ್ತಿರುವ ಜೀವಿ ತನಗೆ ಕಾಣಸುತ್ತಿಲ್ಲವೆಂದಾಗ ಅದು ತನ್ನಂತೆಯೇ ಮನುಷ್ಯನಲ್ಲ ಬದಲಾಗಿ ಯಾವುದೋ ಕಾಡುಪ್ರಾಣಿಯಿರಬೇಕೆನ್ನುವುದು ಅವನಿಗೆ ಖಚಿತವಾಗಿತ್ತು. ಪುನಃ ಓಡೋಣವೆಂದರೆ ಕಾಲುಗಳಲ್ಲೀಗ ಬಳಲಿಕೆ. ಒಂದು ಹೆಜ್ಜೆಯೂ ಮುಂದಿಡಲಾಗದ ಪರಿಸ್ಥಿತಿ. ದಿಕ್ಕು ತೋಚದಂತಾಗಿ ಮರದ ಕಾಂಡವನ್ನೇ ಅಂಟಿಕೊಂಡಂತೆ ನಿಂತುಕೊಂಡ ಶಮಂತಕನಿಗೆ ಉಸಿರಾಡುವುದೂ ಸಹ ಮರೆತಂತಾಗಿತ್ತು. ಮೈಯೆಲ್ಲ ಕಿವಿಯಾಗಿಸಿ ಹೆಜ್ಜೆಯ ಸದ್ದುಗಳನ್ನೇ ಕೇಳುತ್ತಿದ್ದ ಅವನಿಗೆ ಹೆಜ್ಜೆಗಳ ಸದ್ಧು ನಿಂತು ಹೋಗಿದ್ದು ಗಮನಕ್ಕೆ ಬಂದಿತ್ತು. ಒಂದೆರಡು ಕ್ಷಣಗಳ ಕಾಲ ಹೆಜ್ಜೆಯ ಸದ್ದುಗಳು ಕೇಳದಾದಾಗ ಬಿಗಿಹಿಡಿದಿದ್ದ ಉಸಿರನ್ನು ‘ಉಶ್ಶ್’ ಎನ್ನುತ್ತ ಸಡಿಲವಾಗಿಸಿದ್ದ. ಅನಾವಶ್ಯಕವಾಗಿ ತಾನು ಗಾಬರಿಯಾದೆ ಎನ್ನುವ ಭಾವ ಅವನಲ್ಲೊಂದು ಮುಗುಳ್ನಗೆಯನ್ನು ಹೊಮ್ಮಿಸಿತ್ತು. ಎದುರಿಗಿನ ಸಸ್ಯರಾಶಿಯನ್ನು ದಿಟ್ಟಿಸುತ್ತ ಒಮ್ಮೆ ಸಣ್ಣಗೆ ಮುಗುಳ್ನಕ್ಕ. ಇನ್ನೇನು ಭಯ ಕಳೆದು ನಿರಾಳವಾಗಬೇಕೆನ್ನುವಷ್ಟರಲ್ಲಿ ಹುಲ್ಲಿನ ತೆರೆಯಿಂದ ಸಣ್ಣಗೆ ಇಣುಕಿತ್ತು ಆ ಹೆಬ್ಬುಲಿ..! ಕ್ಷಣಕಾಲ ತನ್ನತ್ತ ದಿಟ್ಟಿಸಿ ಮುಂಗಾಲುಗಳನ್ನು ನಿಡಿದಾಗಿ ಗಾಳಿಯಲ್ಲಿ ಚಾಚಿ ಉಗುರುಗಳಿಂದ ತನ್ನನ್ನು ಹರಿದುಹಾಕವಂತೆ ಜಿಗಿದಿದ್ದ, ಕಪ್ಪುಪಟ್ಟೆಗಳ, ಬಿಳಿಹುಲಿಯನ್ನು ಕಂಡ ಶಮಂತಕನಿಗೆ ಮೃತ್ಯುವನ್ನು ಕಂಡ ಅನುಭವ. ಏನೂ ಮಾಡಲಾಗದ ಅಂತಿಮ ಕ್ಷಣಗಳ ಅಸಹಾಯಕತೆಯಿಂದ ತನ್ನೆರಡು ಕೈಗಳನ್ನು ತನ್ನತ್ತ ಹಾರಿ ಬರುತ್ತಿದ್ದ ಹುಲಿಯೆದುರು ಗುರಾಣಿಯಂತೆ ಹಿಡಿದ ಶಮಂತಕ. ಒಂದು ರಣಭೀಕರ ಘರ್ಜನೆಯೊಂದಿಗೆ ಕ್ಷಣ ಮಾತ್ರದಲ್ಲಿ ಹುಲಿ ಅವನ ಮೇಲೆರಗಿತ್ತು.

ಇನ್ನೇನು ಹುಲಿಯ ಚೂಪಾದ ಉಗುರುಗಳು ಅವನನ್ನು ಇರಿಯಬೇಕೆನ್ನುವಷ್ಟರಲ್ಲಿ ’ಹೇಯ್ ಶಮಿ, ಏನಾಯ್ತೋ’ ಎಂಬ ಶಬ್ದಕ್ಕೆ ಒಮ್ಮೆ ಸಣ್ಣಗೆ ನಡುಗಿದ ಶಮಂತಕ ಕಣ್ಣು ತೆರೆದ. ಕಣ್ತೆರೆದವನಿಗೆ ಕೋಣೆಯ ಮಬ್ಬು ಬೆಳಕಿನಲ್ಲಿ ಕಂಡಿದ್ದು ತನ್ನ ಮುಖವನ್ನೇ ವಿಚಿತ್ರವಾಗಿ ದಿಟ್ಟಿಸುತ್ತ ನಿಂತಿದ್ದ ಮಹೇಶನ ಮುಖ, ಮೇಲ್ಛಾವಣಿಯಲ್ಲಿ ಗರಗರ ಸದ್ದು ಮಾಡುತ್ತ ತಿರುಗುತ್ತಿದ್ದ ಸೀಲಿಂಗ್ ಫ್ಯಾನು. ಚಕ್ಕನೇ ಎದ್ದು ಕುಳಿತ ಶಮಂತಕನ ಮೈಯೆಲ್ಲ ಬೆವರಿನಿಂದ ತೊಯ್ದು ತೊಪ್ಪೆಯಾಗಿತ್ತು. ಕೈಕಾಲುಗಳಲ್ಲಿ ಸಣ್ಣದ್ದೊಂದು ಕಂಪನ. ಮಧ್ಯರಾತ್ರಿಯ ಪ್ರಶಾಂತತೆಯ ನಡುವೆ ಅವನ ಎದೆಯ ಬಡಿತ ಎದುರಿಗೆ ನಿಂತ ಗೆಳೆಯನಿಗೂ ಕೇಳಿಸುವಷ್ಟು ಜೋರಾಗಿತ್ತು. ’ಕನಸು ಬಿತ್ತೇನೋ..? ಅದಕ್ಕೆ ಇಷ್ಟು ಬೆಚ್ಚಿಬಿದ್ಯಾ.’? ಎಂದು ಕೇಳಿದ ಮಹೇಶನ ಮುಖದಲ್ಲೊಂದು ಕುಚೋದ್ಯದ ನಗೆ. ಕುಳಿತಲ್ಲಿಂದಲೇ ಹೌದೆನ್ನುವಂತೆ ತಲೆಯಾಡಿಸಿದ ಶಮಂತಕ. ’ಅಯ್ಯೋ ಪೆಂಗೆ, ಒಂದು ಕನಸಿಗೆ ಇಷ್ಟೊಂದು ಹೆದರ್ತಾರಾ, ಮಂಚದ ಮೇಲೆ ಬೋರಲಾಗಿ ಬಿದ್ಕೊಂಡು ಹೇಗೆ ನಡಗುತ್ತಾ ಇದ್ದೆ ಗೊತ್ತಾ, ನಿಂದೊಳ್ಳೆ ಕತೆ ಮಾರಾಯಾ’ ಎಂದ ಮಹೇಶ ತನ್ನ ಮಂಚದ ಮೇಲೆ ಹೋಗಿ ಕುಳಿತುಕೊಂಡ. ‘ಸರಿಸರಿ ಮಲ್ಕೊ ಈಗ, ಗಂಟೆ ನಾಲ್ಕಾಗಿದೆ ಇನ್ನೊಂದೆರಡು ತಾಸಿಗೆಲ್ಲ ಎದ್ದು ಡ್ಯೂಟಿಗೆ ಹೋಗ್ಬೇಕು ನಾನು’ ಎನ್ನುತ್ತ ಕಾಲ ಬಳಿಯಿದ್ದ ಚಾದರವನ್ನು ಮೈಮೇಲೆ ಎಳೆದುಕೊಂಡು ತಲೆದಿಂಬಿನಡಿ ಕೈಗಳನ್ನು ಜೋಡಿಸಿ ಮಲಗಿಬಿಟ್ಟ.

ಕ್ಷಣಹೊತ್ತು ಮಹೇಶನತ್ತ ನೋಡಿದ ಶಮಂತಕ ಪಕ್ಕದ ಮೇಜಿನ ಮೇಲಿದ್ದ ನೀರಿನ ಬಾಟಲಿಯ ಮುಚ್ಚಳ ತೆರೆದು ಗಟಗಟನೆ ನೀರು ಕುಡಿಯಲಾರಂಭಿಸಿದ. ಒಣಗಿದ ಗಂಟಲಿಗೊಂದಿಷ್ಟು ನೆಮ್ಮದಿ ಸಿಕ್ಕಂತಾಯ್ತು. ಬಾಟಲಿಯನ್ನು ಮೇಜಿನ ಮೇಲಿಟ್ಟು ಬಾಯೊರೆಸಿಕೊಂಡ ಶಮಂತಕನ ತಲೆಯೆಲ್ಲ ಭಾರ. ಭಂಗವಾದ ನಿದ್ರೆಯ ಪ್ರತಿಫಲವದು. ಬಿದ್ದ ಭಯಾನಕ ಕನಸಿನ ಕನವರಿಕೆಯಲ್ಲಿ ಅವನಿಗೆ ನಿದ್ರೆಯೇ ಬಾರದು. ಸುಮ್ಮನೇ ಮಂಚದ ಮೇಲೆ ಕುಳಿತುಕೊಂಡ ಅವನ ಮನದಲ್ಲೇನೋ ಅನ್ಯಮನಸ್ಕತೆ. ಅದೆಷ್ಟು ಹೊತ್ತು ಹಾಗೆಯೇ ಕುಳಿತುಕೊಂಡಿದ್ದನೋ ಅವನಿಗೆ ತಿಳಿಯದು. ’ಏಯ್, ಸುಮ್ನೆ ಬಿದ್ಕೊಳೋ ಮಾರಾಯಾ, ಇಲ್ಲಾಂದ್ರೆ ಆ ಬೆಡ್ ಲ್ಯಾಂಪ್ ಆದ್ರೂ ಆಫ್ ಮಾಡು, ಬೆಳಕು ಕಣ್ಣಿಗೆ ಚುಚ್ತಿದೆ, ಒಂದು ಕನಸಿಗೆ ಇಷ್ಟೊಂದ್ ಗಾಬರಿಯಾಗ್ತಿಯಲ್ಲ, ಒಳ್ಳೆ ಹೆಣ್ಮಕ್ಳ ಥರಾ’ಎಂಬ ಮಹೇಶನ ಗದರಿಕೆ ಕೇಳಿ ಯಾಂತ್ರಿಕವಾಗಿ ಅವನ ಕೈಗಳು ದೀಪವಾರಿಸಿದ್ದವು. ಮಂಚದ ಮೇಲೆ ಮಲಗಿ ಕಾಲಬಳಿಯಿದ್ದ ಚಾದರವನ್ನು ಎದೆಯವರೆಗೆಳೆದುಕೊಂಡು ಅಂಗಾತ ಮಲಗಿದವನ ಕಣ್ಗಳಿಗೆ ನಿದ್ರೆಯ ಸುಳಿವೇ ಇಲ್ಲ. ಕನಸಿನಲ್ಲಿ ಕಂಡಿದ್ದ ಹುಲಿಯ ಕೆಂಗಣ್ಣು, ಅದರ ಚೂಪಾದ ಉಗುರುಗಳು, ಎದೆ ನಡುಗಿಸುವ ಘರ್ಜನೆ ಎಲ್ಲವೂ ಅವನಿಗೆ ಕನಸಿನ ಹೊರಗೂ ಸ್ಪಷ್ಟ. ಗೆಳೆಯನಿಗೆ ಅದೊಂದು ಸಣ್ಣ ಕನಸು, ಯಕಶ್ಚಿತ್ ಕನಸೊಂದಕ್ಕೆ ಬೆಚ್ಚಿ ಬಿದ್ದ ಹೆಣ್ಣಿಗ ತಾನು ಎಂಬ ಭಾವ ಅವನದ್ದು. ಆದರೆ ಶಮಂತಕನಿಗೆ ಗೊತ್ತು. ಅದು ಬರಿಯ ಕನಸಲ್ಲ ಅದೊಂದು ಮುನ್ಸೂಚನೆ. ಭೀಕರ ದುರ್ಘಟನೆಯೊಂದರ ಮುನ್ಸೂಚನೆ. ಅದೇ ಕನಸು ಅವನ ಬದುಕಿನಲ್ಲಿ ಹಿಂದೆಯೂ ಎರಡು ಬಾರಿ ಬಂದಿದೆ. ಪ್ರತಿ ಬಾರಿಯೂ ಬೆಳಗಿನ ಜಾವಕ್ಕೆ ಬೀಳುವ ಬೀಭತ್ಸ ಕನಸದು. ಕನಸಿನಲ್ಲಿ ಕಾಣುವ ಬಿಳಿಹುಲಿ ಅವನನ್ನು ಅಷ್ಟಾಗಿ ಹೆದರಿಸುವುದಿಲ್ಲ. ಆದರೆ ಪ್ರತಿಬಾರಿಯೂ ಕನಸಿನ ಹುಲಿ ಅವನ ಬದುಕಿನಲ್ಲಿನ ಅತಿ ಪ್ರೀತಿಯ ವ್ಯಕ್ತಿಯೊಬ್ಬನನ್ನು ಕೊಂಡೊಯ್ಯುತ್ತದೆ. ಕನಸು ಬಿದ್ದ ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ಅವನ ಪರಮಾಪ್ತರೊಬ್ಬರ ಸಾವು ಉಂಟಾಗುತ್ತದೆ. ಅದನ್ನು ನೆನಸಿಕೊಂಡೇ ನಲುಗಿಹೋಗಿದ್ದ ಶಮಂತಕ.

ಹಾಗೂ ಹೀಗೂ ಹಾಸಿಗೆಯಲ್ಲಿ ಹೊರಳಾಡುತ್ತ ಮಲಗೆದ್ದ ಶಮಂತಕನ ತಲೆ ಸಣ್ಣದಾಗಿ ನೋಯುತ್ತಿತ್ತು. ಅದಾಗಲೇ ಮಹೇಶ್ ಕೆಲಸಕ್ಕೆ ಹೊರಟುಹೋಗಿದ್ದ. ಅಸ್ತವ್ಯಸ್ತವಾಗಿ ಮಂಚದ ತುಂಬೆಲ್ಲ ಹರಡಿಕೊಂಡು ಬಿದ್ದಿದ್ದ ಹೊದಿಕೆಯನ್ನು ಮಡಚಿಟ್ಟು ಬಚ್ಚಲಿಗೆ ತೆರಳಿದ ಶಮಂತಕ ಕಣ್ಣೆಲ್ಲ ಕೆಂಪಗಾಗಿದ್ದವು. ಅಲ್ಲಿನ ಶೆಲ್ಪ್ ನ ಮೇಲಿದ್ದ ಟೂಥ್ ಬ್ರಶ್ಶಿಗೊಂದಿಷ್ಟು ಪೇಸ್ಟು ಹಚ್ಚಿ ಹಲ್ಲುಜ್ಜಲಾರಂಭಿಸಿದವನ ಮನಸ್ಸು ಬಾಲ್ಯದೆಡೆಗೆ ಹೊರಳಿತ್ತು. ಶಮಂತಕ ಮೊದಲ ಬಾರಿ ಬಿಳಿ ಹುಲಿಯನ್ನು ನೋಡಿದ್ದು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ. ಐದನೇಯ ತರಗತಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದರೆ ಮೈಸೂರು ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಚಿಕ್ಕಪ್ಪ ಹೇಳಿದ್ದು ಅವನಿಗೆ ನೆನಪಿತ್ತು. ಶಮಂತಕ ಕೇವಲ ಮೊದಲ ದರ್ಜೆಯಲ್ಲಿ ಪಾಸಾಗದೇ ತರಗತಿಗೂ ಮೊದಲ ಸ್ಥಾನ ಗಳಿಸಿಕೊಂಡಾಗ ಚಿಕ್ಕಪ್ಪ ತಮ್ಮ ಮಾತು ಉಳಿಸಿಕೊಂಡಿದ್ದರು. ಅಂದು ಶಮಂತಕನಿಗೆ ಖುಷಿಯೋ ಖುಷಿ. ಅವನ ಬದುಕಿನ ಮೊದಲ ದೊಡ್ಡ ಪ್ರವಾಸವದು. ಒಂದು ರಾತ್ರಿಯ ಪ್ರಯಾಣ ಕಳೆದು ಮೈಸೂರಿಗೆ ಬಂದಿಳಿದಾಗ ಸಾಕ್ಷಾತ್ ಸ್ವರ್ಗ ಕಂಡ ಅನುಭವ. ಚಾಮುಂಡಿ ಬೆಟ್ಟ, ಅರಮನೆಗಳನ್ನು ಕಂಡು ಬೆರಗಾಗಿದ್ದ ಶಮಂತಕನ ಸಂತಸ ಇಮ್ಮಡಿಯಾಗಿದ್ದು ಮೃಗಾಲಯವನ್ನು ಹೊಕ್ಕಾಗ. ತನ್ನೂರಿನ ಸಣ್ಣ ಮೃಗಾಲಯದಲ್ಲಿಯೇ ಚಿರತೆ, ಮೊಸಳೆ ಜಿಂಕೆಗಳಂತಹ ಪ್ರಾಣಿಗಳನ್ನು ಅವನು ನೋಡಿದ್ದನಾದರೂ ಸಿಂಹ ಹುಲಿಗಳಂತಹ ಪ್ರಾಣಿಗಳನ್ನು ಅವನು ನೋಡಿರಲಿಲ್ಲ. ಅವನಿಗೆ ತುಂಬ ಆಸಕ್ತಿಯಿದ್ದದ್ದು ಬಿಳಿಹುಳಿಗಳ ಬಗ್ಗೆ. ಬಿಳಿಹುಲಿಯೆನ್ನುವುದು ಅಸ್ತಿತ್ವದಲ್ಲೇ ಇಲ್ಲ, ಗೆಳೆಯರು ಸುಳ್ಳು ಹೇಳುತ್ತಾರೆ ಎನ್ನುವುದು ಅವನ ತರ್ಕ. ಆದರೆ ಮೈಸೂರು ಝೂನಲ್ಲಿ ನಿಜಕ್ಕೂ ಬಿಳಿಹುಲಿಯಿದೆ ಎಂಬುದಾಗಿ ಚಿಕ್ಕಪ್ಪ ತಿಳಿಸಿದಾಗ ಅವನಲ್ಲೊಂದು ಪುಳಕ. ಗಡಿಬಿಡಿಯಲ್ಲಿ ಉಳಿದೆಲ್ಲ ಕಾಡುಮೃಗಗಳನ್ನು ನೋಡಿದ ಶಮಂತಕ ದೂರದಿಂದಲೇ ಬಿಳಿಹುಲಿಯನ್ನು ಕಂಡಾಗ ರೋಮಾಂಚನಗೊಂಡಿದ್ದ. ಗಟ್ಟಿಯಾದ ಸರಳುಗಳಿಂದ ನಿರ್ಮಿತ, ಸುತ್ತ ತಂತಿಯ ಜಾಲರಿಯನ್ನು ಸುತ್ತಿದ್ದ ಬೋನಿನಲ್ಲಿ ಸುಮ್ಮನೇ ಕುಳಿತಿತ್ತು ಬಿಳಿ ಹುಲಿ. ಬೋನಿನ ಸುತ್ತಲೂ ನಿಂತಿದ್ದ ಹತ್ತಾರು ಜನ ಕುತೂಹಲದಿಂದ ಅದನ್ನೇ ನೋಡುತ್ತಿದ್ದರೆ ಹುಲಿಗೆ ಮಾತ್ರ ಜನರೆಡೆಗೊಂದು ದಿವ್ಯ ನಿರ್ಲಕ್ಷ್ಯ. ಜನರನ್ನು ಸ್ವಲ್ಪ ಸ್ವಲ್ಪವೇ ತಳ್ಳಿ ಮುಂದೆ ಬಂದು ನಿಂತ ಶಮಂತಕ ’ಅಲ್ನೋಡ್ರಿ ಕಾಕಾ, ಬಿಳಿಹುಲಿ ಹೆಂಗ್ ಕೂತೈತಿ ಅಂತ್..’? ಎಂದು ಉದ್ವಿಗ್ನನಾಗಿ ಸಣ್ಣಗೆ ಕಿರುಚುವಷ್ಟರಲ್ಲಿ ವಿಚಿತ್ರವೊಂದು ನಡೆದುಹೋಗಿತು. ಅಲ್ಲಿಯವರೆಗೂ ಸುಮ್ಮನೇ ಕೂತಿದ್ದ ಹುಲಿ ಶಮಂತಕ ದನಿ ಕೇಳುತ್ತಲೇ ಒಮ್ಮೆ ದೊಡ್ಡದಾಗಿ ಘರ್ಚಿಸಿತು. ಏನಾಯಿತೆಂದು ಶಮಂತಕ ನೋಡುವಷ್ಟರಲ್ಲಿ ಬೋನಿನ ಮತ್ತೊಂದು ತುದಿಯಲ್ಲಿದ್ದ ಹುಲಿ ವೇಗವಾಗಿ
ಅವನತ್ತಲೇ ಓಡಿಬಂದು ಒಮ್ಮೆ ಜೋರಾಗಿ ಬೋನಿನ ಮೇಲೆ ನೆಗೆದು ಅವನನ್ನು ಕೆಂಗಣ್ಣಿನಿಂದ ಕೆಕ್ಕರಿಸಿತು. ಅದು ತನ್ನತ್ತ ನೆಗೆದು ಘರ್ಜಿಸಿದ ರೀತಿಗೆ ಗಾಬರಿಯಾದ ಶಮಂತಕ ಧೊಪ್ಪೆಂದು ನೆಲಕ್ಕೆ ಬಿದ್ದುಬಿಟ್ಟ. ನೆರೆದಿದ್ದ ಜನಸ್ತೋಮಕ್ಕೂ ಹುಲಿಯ ಅನೂಹ್ಯ ವರ್ತನೆ ಅರ್ಥವಾಗದಂತಾಗಿತ್ತು. ನೆಲಕ್ಕೆ ಬಿದ್ದು ಮೈತುಂಬ ಧೂಳಂಟಿಸಿಕೊಂಡು ಅಳುತ್ತಿದ್ದ ಶಮಂತಕನನ್ನು ಎತ್ತಿ ನೀರು ಕುಡಿಸಿದ್ದ ಚಿಕ್ಕಪ್ಪ ಅವನನ್ನು ಹುಲಿಯ ಬೋನಿನಿಂದ ದೂರ ಕರೆದೊಯ್ದಿದ್ದರು. ಅವರು ನಿಧಾನವಾಗಿ ನಡೆಯುತ್ತ ದೂರವಾಗುತ್ತಿದ್ದ ಅಷ್ಟೂ ಹೊತ್ತು ಶಮಂತಕನತ್ತಲೇ ನೋಡುತ್ತ ಭೀಕರವಾಗಿ ಘರ್ಜಿಸುತ್ತಿತ್ತು ಹುಲಿ.

ಮೃಗಾಲಯದಿಂದ ಹೊರ ಬಂದ ತುಂಬ ಹೊತ್ತಿನವರೆಗೂ ಬಿಕ್ಕುತ್ತಿದ್ದ ಶಮಂತಕನನ್ನು ಸುಧಾರಿಸುವಷ್ಟರಲ್ಲಿ ಚಿಕ್ಕಪ್ಪನಿಗೆ ಸಾಕಾಗಿಹೋಯಿತು. ಸಂಜೆಯವರೆಗೂ ಮೈಸೂರಿನ ಪೇಟೆ ಸುತ್ತಾಡಿ ಐಸ್ ಕ್ರೀಮು ತಿಂದು, ಜ್ಯೂಸು ಕುಡಿದು ಕಾಲಹರಣ ಮಾಡಿ, ಸಂಜೆಯ ಹೊತ್ತಿಗೆ ಊಟದ ಶಾಸ್ತ್ರ ಮುಗಿಸಿ ಊರಿನ ಬಸ್ಸು ಹತ್ತಿದ ಇಬ್ಬರಿಗೂ ತೀರದ ದಣಿವು. ಬಸ್ಸು ಹತ್ತಿದ ಕೆಲವೇ ಕ್ಷಣಗಳಿಗೆ ಚಿಕ್ಕಪ್ಪ ಗೊರಕೆ ಹೊಡೆಯಲಾರಂಭಿಸಿದರೆ, ಶಮಂತಕನಿಗೆ ನಿದ್ರೆಯೇ ಬಾರದು. ಕಣ್ಮುಚ್ಚಿದರೆ ಕಣ್ಣಮುಂದೆ ಬಿಳಿಹುಲಿಯ ನರ್ತನ. ಬಸ್ಸಿನ ಕಿಟಕಿಯ ಮೇಲೆ ಹುಲಿ ಎಗರಿದಂತೆ ಭಾಸವಾಗುತ್ತಿತ್ತು. ಮೈಸೂರಿನ ಹೊರವಲಯಕ್ಕೆ ಬರುತ್ತಿದ್ದಂತೆ ಬಸ್ಸಿನ ಚಾಲಕ ಬಸ್ಸಿನ ದೀಪವಾರಿಸಿದಾಗಲಂತೂ ಅಳುವೇ ಬಂದಂತಾಗಿತ್ತು ಅವನಿಗೆ. ಸೀಟಿನಲ್ಲಿಯೇ ಹೊರಳುತ್ತ ಅಸೌಖ್ಯದಿಂದ ಕುಳಿತಿದ್ದವನಿಗೆ ಅದೆಷ್ಟು ಹೊತ್ತಿಗೆ ನಿದ್ರೆ ಹತ್ತಿತ್ತೋ ತಿಳಿಯದು. ಅದೇ ರಾತ್ರಿ ಮೊದಲ ಬಾರಿಗೆ ಅವನ ಕನಸಿನಲ್ಲಿ ಬಿಳಿಯ ಹುಲಿ ಬಂದಿತ್ತು. ಕಾಡಿನಲ್ಲಿ ಅಸಹಾಯಕನಾಗಿ ನಿಂತಿದ್ದವನ ಮೇಲೆ ವಿಕಾರವಾಗಿ ಬಾಯಿ ತೆರೆದು ಜಿಗಿದಿತ್ತು ಹುಲಿ. ‘ಹುಲಿ, ಹುಲಿ’ಎನ್ನುತ್ತ ಬಸ್ಸಿನಲ್ಲಿ ಮಲಗಿದ್ದವರಿಗೆಲ್ಲ ಎಚ್ಚರವಾಗುವಂತೆ ಕಿರುಚಿಕೊಂಡಿದ್ದ ಶಮಂತಕನ ಬೆನ್ನನ್ನು ಹಿತವಾಗಿ ಸವರುತ್ತ ಸಮಾಧಾನ ಮಾಡಿದ್ದರು ಚಿಕ್ಕಪ್ಪ. ಹಾಗೆ ಮೊದಲ ಬಾರಿ ಅವನಿಗೆ ಬಿಳಿಹುಲಿಯ ಕನಸು ಬಿದ್ದಾಗಲೂ ಸಮಯ ಬೆಳಗಿನ ಜಾವದ ನಾಲ್ಕು ಗಂಟೆ. ಬಸ್ಸಿನಲ್ಲಿ ಸಮಾಧಾನ ಮಾಡಿದ್ದ ಚಿಕ್ಕಪ್ಪ ಬಸ್ಸಿನಿಂದಿಳಿದು ಮನೆಯತ್ತ ಸಾಗುವಾಗ, ’ಒಂದ್ ಕನಸಿಗ್ ಅಂಜತಾರೇನ್ಲೇ ಮಂಗ್ಯಾ, ಏನೂ ಆಗಾಂಗಿಲ್ಲ ಬಿಡು’ ಎಂದೆನ್ನುತ್ತ ದಾರಿಯುದ್ದಕ್ಕೂ, ’ದೊಡ್ಡ ಅಂಜ್ಬುರ್ಕ್ ಅದಿ ನೀ’ ಎಂದು ಕಾಲೆಳೆದಿದ್ದರು. ಹಾಗೆ ’ಏನೂ ಆಗಾಂಗಿಲ್ಲ’ ಎಂದು ಧೈರ್ಯ ತುಂಬಿದ್ದ ಚಿಕ್ಕಪ್ಪ ಅದೇ ದಿನ ಸಂಜೆ ಊರ ಹೊರಗಿನ ಕೊಳಕು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಏನೇ ಹರಸಾಹಸ ಪಟ್ಟರೂ ಅವರ ಆತ್ಮಹತ್ಯೆಗೆ ನಿಜವಾದ ಕಾರಣ ತಿಳಿಯಲಾಗಲೇ ಇಲ್ಲ.

ಹಲ್ಲುಜ್ಜಿ ಸ್ನಾನ ಮಾಡುತ್ತಿದ್ದ ಶಮಂತಕನಿಗೆ ನೆತ್ತಿಯ ಮೇಲೆ ಬಿಸಿನೀರು ಬಿದ್ದು ಕಣ್ಣು ಮುಚ್ಚಿದಾಗಲೆಲ್ಲ ಕಾಣುತ್ತಿದ್ದದ್ದು ಚಿಕ್ಕಪ್ಪನ ವಿಕಾರವಾದ ಶವ. ಅದೇಕೋ ಏನೋ, ಚಿಕ್ಕಪ್ಪ ಸತ್ತ ದಿನದಂದೇ ಅವರ ಸಾವಿಗೂ, ತನ್ನ ಕನಸಿನ ಹುಲಿಗೂ ಅಲೌಕಿಕ ಸಂಬಂಧವಿದೆ ಎನ್ನಿಸಿಬಿಟ್ಟಿತ್ತು ಅವನಿಗೆ. ಎದೆಗೂಡು ಹೊಟ್ಟೆಗಳಲ್ಲೆಲ್ಲ ನೀರು ತುಂಬಿಕೊಂಡು ಊದಿಕೊಂಡಿದ್ದ ಚಿಕ್ಕಪ್ಪನ ಶವದ ಬಾಯಿ ತೆರೆದು ಹೋಗಿ ಹಲ್ಲುಗಳು ಕರಾಳವಾಗಿ ಚಾಚಿಕೊಂಡದ್ದು ನೆನಪಾಗಿ ಮತ್ತೊಮ್ಮೆ ಬೆಚ್ಚಿಬಿದ್ದಿದ್ದ ಶಮಂತಕ. ಗಡಿಬಿಡಿಯಲ್ಲಿ ಸ್ನಾನ ಮುಗಿಸಿ ದೇವರ ಚಿತ್ರದೆದುರು ತುಪ್ಪದ ದೀಪವನ್ನು ಬೆಳಗಿದ. ಅವನಿಗೆ ದೇವರಲ್ಲಿ ವಿಶೇಷವಾದ ಭಕ್ತಿಯೇನಿಲ್ಲ. ದೇವರ ಮುಂದೆ ಸಣ್ಣದ್ದೊಂದು ಊದುಕಡ್ಡಿಯನ್ನು ಬೆಳಗಿ ಅದ್ಯಾವ ಕಾಲವಾಗಿತ್ತೋ. ಆದರೆ ಇಂದು ಅವನಿಗೇನೋ ಅವ್ಯಕ್ತ ಭಯ. ಖಂಡಿತವಾಗಿಯೂ ಅಶುಭವಾರ್ತೆಯೊಂದು ತನ್ನ ಕಿವಿಗೆ ಬೀಳಲಿದೆ ಎಂಬ ನಂಬಿಕೆ ಅವನದು. ಅಂಥದ್ದೊಂದು ಕೆಟ್ಟ ಸುದ್ದಿಯನ್ನು ದೇವರಾದರೂ ತಪ್ಪಿಸಲಿ ಎನ್ನುವ ಕಾರಣಕ್ಕೆ ಕೊಂಚ ಅಪನಂಬಿಕೆಯಿಂದಲೇ ದೀಪ ಹಚ್ಚಿದ್ದ. ದೇವರೆದುರು ಕೈ ಮುಗಿದು ಕಾಪಾಡಪ್ಪ ದೇವರೇ ಎಂದು ಬೇಡಿಕೊಳ್ಳುವಾಗ ತಾನೊಬ್ಬ ಶುದ್ಧ ಆಷಾಢಭೂತಿ ಎಂದೆನ್ನಿಸಿತು. ತುಂಬ ಹೊತ್ತು ದೇವರೆದುರು ನಿಲ್ಲಲಾರದೇ ಅಲ್ಲಿಯೇ ಇಟ್ಟಿದ್ದ ಚಿಕ್ಕ ಡಬ್ಬಿಯಲ್ಲಿದ್ದ ಕುಂಕುಮದಿಂದ ಸಣ್ಣದಾಗಿ ಹಣೆಯ ಮೇಲೊಂದು ಬೊಟ್ಟಿಟ್ಟುಕೊಂಡ. ಆಫೀಸಿಗೆ ಹೊರಡಲು ಶರ್ಟು ಧರಿಸು ಪ್ಯಾಂಟು ಏರಿಸುವಾಗಲೂ ಅವನನ್ನು ಬಿಡದ ಅನ್ಯಮನಸ್ಕತೆ. ಲ್ಯಾಪ್ ಟಾಪಿನ ಬ್ಯಾಗು ಹಿಡಿದು ಮನೆಯ ಬೀಗ ಹಾಕಿ ಹೊರಬಂದು ರಸ್ತೆಯ ತುದಿಯವರೆಗೂ ನಡೆದು ಬಂದರೆ ಕಂಪನಿಯ ಬಸ್ಸು ಅದಾಗಲೇ ಅಲ್ಲಿ ಬಂದು ನಿಂತಿತ್ತು. ತಕ್ಷಣಕ್ಕೆ ಗಡಿಯಾರ ನೋಡಿಕೊಂಡರೆ ಏಳು ಗಂಟೆಗಿನ್ನೂ ಹತ್ತು ನಿಮಿಷ ಬಾಕಿಯಿತ್ತು. ಸಮಯಕ್ಕೆ ಮುನ್ನವೇ ಬಂದು ತನಗಾಗಿ ಕಾಯುತ್ತಿದ್ದ ಬಸ್ಸನ್ನೇರಿ ಕುಳಿತ ಶಮಂತಕ. ದಿನವೂ ತನ್ನತ್ತ ಸಣ್ಣದ್ದೊಂದು ಮುಗುಳ್ನಗೆಯನ್ನು ಬೀರುತ್ತಿದ್ದ ಶಮಂತಕನನ್ನು ಕಂಡು ಚಾಲಕ ನಸುನಕ್ಕರೆ ಉತ್ತರವಾಗಿ ಇವನದ್ದು ಚಿಕ್ಕ ಯಾಂತ್ರಿಕ ನಗೆ. ಬಸ್ಸಿನ ಬಾಗಿಲು ಮುಚ್ಚಿಕೊಳ್ಳುತ್ತಲೇ ಬಸ್ಸು ಚಲಿಸತೊಡಗಿತು. ಬಸ್ಸು ನಿಧಾನವಾಗಿ ಚಲಿಸುತ್ತಿದ್ದರೆ ಶಮಂತಕನ ಮನಸಲ್ಲೊಂದು ಚಡಪಡಿಕೆ. ಈ ಕನಸು ತನಗೇ ಏಕೆ ಬೀಳುತ್ತದೆ..? ಕನಸಿನಲ್ಲಿ ಕಾಣುವ ಬಿಳಿಹುಲಿ ತಾನು ಮೈಸೂರಿನಲ್ಲಿ ನೋಡಿದ್ದ ಹುಲಿಯದ್ದೇ ಬಿಂಬವಾ..? ಅರ್ಥವಿಲ್ಲದ ಒಂದು ಯಡವಟ್ಟು ಕನಸಿಗೆ ಯಾರನ್ನಾದರೂ ಕೊಲ್ಲುವ ಶಕ್ತಿಯಿದೆಯಾ..? ನನ್ನ ಡಿಜಿಟಲ್ ಜಗದಲ್ಲಿ ಇದನ್ನೆಲ್ಲ ಒಪ್ಪಿಕೊಳ್ಳುವುದಾದರೂ ಹೇಗೆ..? ಅಥವಾ ಇದೆಲ್ಲವೂ ಕೇವಲ ಕಾಕತಾಳೀಯವಾ.? ಎಂಬ ಹತ್ತು ಹಲವು ಪ್ರಶ್ನೆಗಳು ಶಮಂತಕನನ್ನು ಕಾಡತೊಡಗಿದ್ದವು. ಏನೇ ಆದರೂ ಪ್ರತಿಬಾರಿ ಬಿದ್ದಾಗಲೂ ಈ ದರಿದ್ರ ಕನಸು ತನ್ನ ಪ್ರೀತಿಪಾತ್ರರೊಬ್ಬರನ್ನು ಕೊಂದು ತಿಂದಿದೆ. ಈ ಬಾರಿ ಅದೇನು ಅನಾಹುತ ಕಾದಿದೆಯೋ ಎಂದುಕೊಂಡ ಅವನು ಆಲೋಚನೆಗಳ ಲೋಕದಿಂದ ವಾಸ್ತವಕ್ಕೆ ಮರಳಿದ್ದು ’ಅನಿಸುತಿದೆ ಯಾಕೋ ಇಂದು’ ಎಂಬ ಅವನ ಮೊಬೈಲ್ ರಿಂಗ್ ಟೋನ್ ರಿಂಗಣಿಸಿದಾಗ.

ಜೇಬಿನಿಂದ ಫೋನನ್ನೆತ್ತಿ ನೋಡಲಾಗಿ ತೆರೆಯ ಮೇಲೆ ’ಅಮ್ಮ’ ಎಂಬ ಹೆಸರು ಮಿಂಚುತ್ತಿತ್ತು. ಅಮ್ಮನ ಹೆಸರು ಕಾಣುತ್ತಲೇ ಅವನಿಗೆ ಹೃದಯ ಬಾಯಿಗೆ ಬಂದ ಅನುಭವ. ಬೆಂಗಳೂರಿಗೆ ಬಂದ ಇಷ್ಟು ವರ್ಷಗಳಲ್ಲಿ ಅಮ್ಮ ಬೆಳಗ್ಗಿನ ಏಳುಗಂಟೆಗೆ ಫೋನು ಮಾಡಿರುವುದು ಇದೇ ಮೊದಲು. ಅಪ್ಪಿತಪ್ಪಿ ಭಾನುವಾರದಂದು ಬೆಳಿಗ್ಗೆ ಎಂಟು ಗಂಟೆಗೆ ಫೋನು ಮಾಡಿದರೂ ಅಮ್ಮ ಗಾಬರಿಯಾಗಿ, ’ಇಷ್ಟ್ ಮುಂಜಾನೆ ಫೋನ್ ಹಚ್ಚತಾರೆನ ಭಾಡ್ಯಾ, ನಾ ಏನರ್ ಆಗ್ಬಾರ್ದ್ ಆತೆನೋ ಅಂತೇಳಿ ಅಂಜಿ ಬಿಟ್ಟಿದ್ದೆ’ ಎಂದು ಬಯ್ಯುತ್ತಿದ್ದಳು. ಹೀಗಿರುವುವಾಗ ಅವಳೇ ಫೋನು ಮಾಡಿದ್ದಾಳೆಂದರೆ ಏನೋ ಕೆಟ್ಟ ಸಮಾಚಾರ ಕಾದಿದೆ ಎಂಬುದು ಅವನಿಗೆ ಖಚಿತವಾಯಿತು. ನಡುಗುವ ಕೈಗಳಿಂದಲೇ ಫೋನು ಸ್ವೀಕರಿಸಿದ ಶಮಂತಕ ನಿಧಾನಕ್ಕೆ ’ಹಲೋ’ಎಂದ. ’ಶಮಿ, ಎಲ್ಲದೀಪಾ ನಿಮ್ಮ ಅಪ್ಪಾಜಿಗೆ ಬಿಪಿ ಸಿಕ್ಕಾಪಟ್ಟೆ ಹೆಚ್ಚ್ ಆಗೇದ. ಮುಂಜಮುಂಜಲೆ ನಾಕ್ ಗಂಟೆಗ್ ತ್ಯಲಿ ತಿರ್ಗಿ ಬಿದ್ದ ಬಿಟ್ಟಾರ್, ರಕ್ತ ವಾಂತಿನೂ ಆಗೈತಿ, ಸಿದ್ಧಾರೂಡ ನರ್ಸಿಂಗ್ ಹೋಮ್ ಗ್ ಅಡ್ಮಿಟ್ ಮಾಡೇವಿ’ ಎಂದು ಬಿಕ್ಕಲಾರಂಭಿಸಿದ್ದಳು ಅಮ್ಮ. ಒಮ್ಮೇಲೆ ತಲೆ ಸುತ್ತಿದಂತಾಯಿತು ಶಮಂತಕನಿಗೆ. ಎರಡು ದಿನಗಳ ಹಿಂದಷ್ಟೇ ವೈದ್ಯರ ಬಳಿ ಪರೀಕ್ಷೆಗೆ ತೆರಳಿದ್ದ ಅಪ್ಪ ತನ್ನ ರಕ್ತದೊತ್ತಡ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆಯೆಂಬುದಾಗಿ ತಿಳಿಸಿದ್ದರು. ತಾನು ದಿನವೂ ಬೆಳಗ್ಗೆಯೆದ್ದು ವಾಕಿಂಗು, ವ್ಯಾಯಾಮ ಮಾಡುವುದರ ಪರಿಣಾಮವದು ಎಂದು ಹೆಮ್ಮೆಯೂ ಪಟ್ಟಿದ್ದರು. ಈಗ ಏಕಾಏಕಿ ಹೀಗಾಗಿದೆಯೆಂದರೆ ಇದು ಅದೇ ನಿಗೂಢ ಕನಸಿನ ಪರಿಣಾಮ ಎಂದುಕೊಂಡ ಶಮಂತಕ ಏನು ಹೇಳುವುದೆಂದು ತಿಳಿಯದೇ ಸುಮ್ಮನೇ ಅಮ್ಮನ ಬಿಕ್ಕುವಿಕೆಯನ್ನು ಕೇಳಿಸಿಕೊಂಡ. ’ಶಮಿ, ನೀ ಹೆಂಗರ್ ಮಾಡಿ ಬಂದ್ ಬಿಡು. ಇಲ್ಲಿ ಆಜುಬಾಜು ಮನಿಯವರು ಹೆಲ್ಪ್ ಮಾಡ್ತಾರ್ ಖರೇ, ಆದ್ರೂ ನೀ ಇದ್ದಂಗ್ ಆಗಾಂಗಿಲ್ಲ’ ಎಂಬ ಅಮ್ಮನ ಮಾತುಗಳಿಗೆ ಏನೆನ್ನುವುದೋ ತಿಳಿಯದಾಯಿತು. ಅಮ್ಮನ ಮಾತುಗಳಲ್ಲಿಯೂ ಸತ್ಯವಿತ್ತು. ಹುಬ್ಬಳ್ಳಿಯಲ್ಲಿ ಇದ್ದಿದ್ದು ಅಪ್ಪ ಅಮ್ಮ ಇಬ್ಬರೇ. ಇದ್ದೊಬ್ಬ ಚಿಕ್ಕಪ್ಪ ಯಾವತ್ತಿಗೋ ತೀರಿಕೊಂಡಿದ್ದ. ಅಮ್ಮನಿಗೆ ಗಾಬರಿಯಾಗುವುದು ಸಹಜವೇ. ’ನೀ ಏನ್ ಅಂಜಬೇಡ, ನಾ ಕೂಡ್ಲೇ ಹುಬ್ಳಿ ಬಸ್ ಹತ್ತತೀನಿ’ ಎಂದು ಸಮಾಧಾನ ಮಾಡಿದ ಶಮಂತಕ, ’ರಾಜು, ಸ್ವಲ್ಪ ಡೋರ್ ಓಪನ್ ಮಾಡಪ್ಪಾ, ನಾನು ಇಲ್ಲೇ ಇಳ್ಕೊಂಡು ವಾಪಸ್ ಹೋಗ್ತೀನಿ, ಸ್ವಲ್ಪ ಎಮರ್ಜೆನ್ಸಿ’ಎಂದ. ಪ್ರಶ್ನಾರ್ಥಕವಾಗಿ ಅವನನ್ನೇ ನೋಡಿದ ಬಸ್ಸಿನ ಚಾಲಕ ರಾಜು, ಬಸ್ಸಿನ ಬಾಗಿಲನ್ನು ತೆರೆಯುವ ಗುಂಡಿ ಒತ್ತಿದ. ನಿಧಾನವಾಗಿ ’ಉಸ್ಸ್’ ಎಂದು ತೆರೆದುಕೊಂಡ ಬಾಗಿಲಿನಿಂದ ಸರಸರನೇ ಇಳಿದ ಶಮಂತಕ.

ಅದೃಷ್ಟವಶಾತ್ ಬಸ್ಸು ಅವನ ಮನೆಯಿಂದ ಕೇವಲ ಎರಡು ಕಿಮಿಗಳಷ್ಟು ಮಾತ್ರ ಚಲಿಸಿತ್ತು. ರಸ್ತೆ ದಾಟಿ ಮತ್ತೊಂದು ಪಕ್ಕಕ್ಕೆ ತೆರಳಿದವನು ಆಟೋವನ್ನೇರಿ ಮನೆಯತ್ತ ತೆರಳಿದ. ಸರಿಯಾಗಿ ಎಂಟು ಗಂಟೆಗೆ ಮೆಜೆಸ್ಟಿಕ್ ನಿಂದ ಹುಬ್ಬಳ್ಳಿಗೆ ತೆರಳುವ ಬಸ್ಸಿರುವುದು ಅವನಿಗೆ ತಿಳಿದಿದೆ. ಮನೆಗೆ ತೆರಳಿದವನೇ ಬ್ಯಾಗೊಂದಕ್ಕೆ ಕೈಗೆ ಸಿಕ್ಕ ಬಟ್ಟೆಗಳನ್ನು ತುರುಕಿದ. ಬ್ರಶ್ಶು, ಸೋಪುಗಳನ್ನು ಊರಿನಲ್ಲಿ ಕೊಂಡರಾಯ್ತು ಎಂದು ಯೋಚಿಸಿದವನೇ ಬೀಗ ಜಡಿದು ಓಡಬೇಕೆನ್ನುವಷ್ಟರಲ್ಲಿ ಪರ್ಸಿನಲ್ಲಿ ಸಾಕಷ್ಟು ದುಡ್ಡಿಲ್ಲವೆನ್ನುವುದು ನೆನಪಾಯ್ತು. ಪಟಪಟನೇ ನಡೆಯುತ್ತ ಬೀದಿಯ ತುದಿಯಲ್ಲಿದ್ದ ಎಟಿಎಮ್ಮಿನಿಂದ ಹತ್ತು ಸಾವಿರಗಳಷ್ಟು ಹಣ ತೆಗೆದಿರಿಸಿಕೊಂಡು ಪುನಃ ರಿಕ್ಷಾವನ್ನೇರಿ ಮೆಜೆಸ್ಟಿಕನತ್ತ ಪಯಣಿಸಿದ. ರಿಕ್ಷಾದಲ್ಲಿ ಕುಳಿತು ತನ್ನ ಮೇಲಾಧಿಕಾರಿ ಫೋನು ಮಾಡಿ ಪರಿಸ್ಥಿತಿಯನ್ನು ಅರುಹಿದ. ಶಮಂತಕನ ಪರಿಸ್ಥಿತಿಗೆ ಸ್ಪಂಧಿಸಿದ ಅವನ ಅಧಿಕಾರಿ ’ಕಾರು ಮಾಡಿಸಿಕೊಂಡು ಹೋಗೋದಲ್ವಾ ಶಮಿ’ ಎಂಬ ಸಲಹೆಯನ್ನಿತ್ತರು. ಅವರ ಸಲಹೆ ಸಮಂಜಸವಾಗಿತ್ತಾದರೂ ಬಾಡಿಗೆ ಕಾರು ಹೊಂದಿಸುವಷ್ಟರಲ್ಲಿ ಕನಿಷ್ಟ ಒಂದೆರಡು ಗಂಟೆಗಳಷ್ಟಾದ್ದರೂ ಸಮಯ ಬೇಕು. ಅಲ್ಲಿಯವರೆಗೆ ತನ್ನ ಚಡಪಡಿಕೆ ನಿಲ್ಲದು ಎಂದೆನಿಸಿ ಸುಮ್ಮನಾದ. ತುಂಬ ಟ್ರಾಫಿಕ್ ಇರದ ಕಾರಣ ಅರ್ಧ ಗಂಟೆಗೆಲ್ಲ ಮೆಜೆಸ್ಟಿಕ್ ತಲುಪಿಕೊಂಡ. ತರಾತುರಿಯಲ್ಲಿ ಆಟೋದವನ ಕೈಗೆ ಹಣ ತುರುಕಿ ಬಸ್ ನಿಲ್ದಾಣಕ್ಕೋಡಿದ ಶಮಂತಕನಿಗೆ ಹುಬ್ಬಳ್ಳಿಯ ಬಸ್ಸು ಕಂಡಾಗ ದೊಡ್ಡ ಸಮಾಧಾನ. ಯಾವುದೇ ಹಬ್ಬ ಹರಿದಿನ, ರಜೆಗಳ ಸಮಯವಲ್ಲದ್ದರಿಂದ ಬಸ್ಸು ಸಾಕಷ್ಟು ಖಾಲಿಯೇ ಇತ್ತು. ಮೇಲಿದ್ದ ಲಗೇಜುಖಾನೆಗೆ ತನ್ನ ಕೈಲಿದ್ದ ಬ್ಯಾಗು ತೂರಿಸಿ ಕಿಟಕಿಯ ಪಕ್ಕ ಆರಾಮದಾಯಕ ಸೀಟಿನಲ್ಲಿ ಕುಳಿತ ಶಮಂತಕನ ಮೈಯೆಲ್ಲ ಬೆವತು ಹೋಗಿತ್ತು. ಅದನ್ನು ಹೆಚ್ಚಾಗಿ ಲಕ್ಷಿಸದೇ ಕಿಸೆಯಿಂದ ಫೋನ್ ಎತ್ತಿಕೊಂಡು ಅಮ್ಮನಿಗೆ ಡಯಲ್ ಮಾಡಿದ. ’ಹಲೊ’ಎಂಬ ಅಮ್ಮನ ಧ್ವನಿ ಕೇಳುತ್ತಲೇ, ‘ಅವ್ವ, ನಾ ಹುಬ್ಳಿ ಬಸ್ ಹತ್ತೀನಿ, ಏನ್ ಅಂಜಾಕ್ ಹೋಗ್ಬೇಡಾ, ನಾ ಸಂಜಿಕ್ ಬಂದ್ ಮುಟ್ತೀನಿ. ಎಲ್ಲದಿರಿ ಈಗ’ ಎಂದು ಪ್ರಶ್ನಿಸಿದ. ‘ಇಲ್ಲೇ ಆಸ್ಪಿಟಲ್ ನಾಗೆ ಅದೀವಿ. ಒಂದ್ ಇಂಜಿಶನ್ ಕೊಟ್ಟಾರ್, ಆದರೂ ಅಪ್ಪಾಜಿ ಏನೂ ಮಾತಾಡುವಲ್ರು. ಈಗ ಏನೂ ಹೇಳಾಕ್ ಆಗಾಂಗಿಲ್ಲ ಅಂದಾರ್ ಡಾಕ್ಟ್ರು’ ಎನ್ನುವಷ್ಟರಲ್ಲಿ ಅಮ್ಮನ ಧ್ವನಿ ಗದ್ಗದ. ಕರುಳು ಕಿವುಚಿದಂತಾದರೂ ’ಏನು ಆಗಾಂಗಿಲ್ಲೇಳ್ ಅವ್ವ, ನಾ ಬಂದ್ ಮುಟ್ತೀನಿ, ಅವಾಗವಾಗ್ ಫೋನ್ ಮಾಡ್ತಿರು’ ಎಂದವನು ಫೋನ್ ಇಡುವಷ್ಟರಲ್ಲಿ, ಸೀಟಿನ ಪಕ್ಕಕ್ಕೆ ನಿಂತಿದ್ದ ನಿರ್ವಾಹಕ ’ಟಿಕೆಟ್ ಸರ್..’? ಎಂದು ಕೇಳಿದ. ’ಹುಬ್ಬಳ್ಳಿ ಒಂದು’ ಎನ್ನುತ್ತ ಐನೂರರ ಎರಡು ನೋಟುಗಳನ್ನು ನಿರ್ವಾಹಕನ ಕೈಗಿಟ್ಟ ಶಮಂತಕ, ’ಎಷ್ಟೊತ್ತಿಗ್ ಹೋಕ್ಕಿರ್ ಸರ’ ಎಂದ. ಅಪ್ಪನ ಚಿಂತೆಯಲ್ಲಿದ್ದ ತಾನು ತನಗರಿವಿಲ್ಲದಂತೆ ಬಯಲುಸೀಮೆಯ ಕನ್ನಡ ಮಾತನಾಡಿದ್ದು ಅವನ ಗಮನಕ್ಕೆ ಬಂದಿತ್ತು. ನಿರ್ವಾಹಕನಿಗೆ ತಾನು ಕೇಳಿದ್ದು ಅರ್ಥವಾಯಿತೋ ಇಲ್ಲವೋ ಎಂದುಕೊಳ್ಳುವಷ್ಟರಲ್ಲಿ ನಸುನಕ್ಕ ನಿರ್ವಾಹಕ, ’ಈಗ ಹೊರಡುದ ಸರ, ಟೈಮಾತು’ ಎಂದವನೇ ’ರೈಟ್,ರೈಟ್’ ಎಂದ. ಅದಾಗಲೇ ತನ್ನ ಸೀಟಿನಲ್ಲಿ ಕುಳಿತಿದ್ದ ಚಾಲಕ ಬಸ್ಸನ್ನು ಆರಂಭಿಸುತ್ತಲೇ ಒಮ್ಮೆ ಜೋರಾಗಿದ ಒದರಿದ ಬಸ್ಸು ನಿಧಾನವಾಗಿ ನಿಲ್ದಾಣದಿಂದ ಚಲಿಸಲಾರಂಭಿಸಿತು.

ನಿಲ್ದಾಣವನ್ನು ದಾಟಿದ ಬಸ್ಸು ತುಮಕೂರಿನ ಮಾರ್ಗವಾಗಿ ತೆರಳಲಾರಂಭಿಸಿದರೆ ಶಮಂತಕನ ತಲೆಯೆನ್ನುವುದು ಯೋಚನೆಗಳ ಸಾಗರ. ಇಂಜಿನಿಯರಿಂಗ್ ಮುಗಿಸಿ ಕ್ಯಾಂಪಸ್ ಆಯ್ಕೆಯಡಿ ಒಂದು ಒಳ್ಳೆಯ ಕೆಲಸ ಅವನಿಗೆ ಸಿಕ್ಕಿತ್ತು. ಅಪ್ಪ ತನ್ನ ವೃತ್ತಿ ಜೀವನದ ಹತ್ತು ವರ್ಷಗಳ ಅನುಭವದ ನಂತರ ತೆಗೆದುಕೊಂಡ ಸಂಬಳವನ್ನು ಆರಂಭಿಕ ಸಂಬಳವಾಗಿ ಅವನು ಪಡೆಯುತ್ತಿದ್ದ. ಅಪ್ಪ ಅಮ್ಮ ತನ್ನೊಟ್ಟಿಗೆ ಬೆಂಗಳೂರಿಗೆ ಬಂದು ನೆಲೆಸಲಿ ಎಂಬುದು ಅವನ ಆಶಯವಾಗಿತ್ತು. ಆದರೆ ಅದೆಷ್ಟೇ ಅಂಗಲಾಚಿದರೂ ಅವನ ಹೆತ್ತವರು ಬೆಂಗಳೂರಿಗೆ ಬಂದು ಅವನ್ನೊಟ್ಟಿಗಿರಲು ಸುತಾರಾಂ ಒಪ್ಪಿರಲಿಲ್ಲ. ಊರಿನೊಂದಿಗೆ ಭಾವುಕ ನಂಟು ಅವರಿಗೆ. ಕಷ್ಟಪಟ್ಟು ಕಟ್ಟಿಸಿದ ಮನೆಯನ್ನು ಮಾರಿ ಬೆಂಗಳೂರಿಗೆ ಬರುವುದು ತನ್ನಿಂದಾಗದ ಮಾತು ಎಂದು ಅಪ್ಪ ಕಡ್ಡಿ ಮುರಿದಿದ್ದರು. ಅದೊಂದು ವಿಷಯವಾಗಿ ಹೆತ್ತವರ ಮೇಲೊಂದು ಸಣ್ಣ ಅಸಮಾಧಾನವಿತ್ತು ಶಮಂತಕನಿಗೆ. ಈಗ ಅವರಿಗೆ ಅಸೌಖ್ಯವಾದರೇ ತಾನೇ ಅಲ್ಲಿಗೆ ಓಡಬೇಕು. ಹತ್ತಿರವಾದರೂ ಇದೆಯಾ ಎಂದುಕೊಂಡರೆ ಬರೊಬ್ಬರಿ ನಾನೂರು ಕಿಲೊಮೀಟರಗಳ ಪ್ರಯಾಣವದು. ಕನಿಷ್ಟ ತಮ್ಮನಾದರೂ ಪೋಷಕರ ಜೊತೆಗಿದ್ದರೆ ನನಗಿಷ್ಟು ಚಿಂತೆಯಿರುತ್ತಿರಲಿಲ್ಲ ಎಂದುಕೊಂಡ ಶಮಂತಕನ ಆಲೋಚನೆಗಳು ಮತ್ತೊಮ್ಮೆ ಭೂತಕಾಲದ ಬೆನ್ನಟ್ಟಿದ್ದವು. ಅವನಿಗೆ ಆಗ ಹತ್ತೊಂಬತ್ತು ವರ್ಷ. ಇಂಜೀನಿಯರಿಂಗ್ ನ ಎರಡನೇ ಸೆಮಿಸ್ಟರಿನ ಪರೀಕ್ಷೆಗಳನ್ನು ಮುಗಿಸಿ ರಜೆಗೆಂದು ಮನೆಗೆ ತೆರಳಿದ್ದ ಶಮಂತಕ ಊರಿನ ಗೆಳೆಯರೊಡಗೂಡಿ ಗುಟ್ಟಾಗಿ ಬಿಯರ್ ಕುಡಿದಿದ್ದ. ಸ್ನೇಹಿತನೊಬ್ಬನ ಮನೆಯಲ್ಲೇ ಊಟ ಮುಗಿಸಿ ನಿಧಾನವಾಗಿ ತೂರಾಡುತ್ತ ಮನೆಗೆ ತಲುಪುವಷ್ಟರಲ್ಲಿ ರಾತ್ರಿ ಒಂಭತ್ತಾಗಿತ್ತು. ’ಯಾಕಪಾ ಇಷ್ಟ್ ಲೇಟು’ ಎಂಬ ಅಪ್ಪನ ಮಾತಿಗೆ ಅಕ್ಷರಶಃ ಬೆಚ್ಚಿದ್ದ ಶಮಂತಕ. ’ಸತ್ಯಾನ ಮನ್ಯಾಗ್ ಪಾರ್ಟಿ ಇತ್ರಿ ಅಪ್ಪಾ. ಅದಕ ಲೇಟ್ ಆತು. ಅಲ್ಲೇ ಊಟ ಮಾಡ್ ಬಂದಿನ್ರಿ’ ಎಂದುತ್ತರಿಸುವಷ್ಟರಲ್ಲಿ ಅವನ ಮೈಯಲಿದ್ದ ಸತುವೆಲ್ಲ ಇಳಿದುಹೋದಂತಾಗಿತ್ತು. ಅಪ್ಪನ ಪ್ರತ್ಯುತ್ತರಕ್ಕೂ ಕಾಯದೇ ನೇರವಾಗಿ ಬಚ್ಚಲಿಗೆ ತೆರಳಿ ಬಾಯಿ ಮುಕ್ಕಳಿಸಿಕೊಂಡು ತನ್ನ ಬಾಯಿಂದ ಬಿಯರಿನ ವಾಸನೆ ಬರುತ್ತಿಲ್ಲವೆಂದು ಖಚಿತಪಡಿಸಿಕೊಂಡು ತನ್ನ ಕೊಣೆಗೆ ತೆರಳಿ ಮಂಚಕ್ಕೆ ಹಾರಿದ್ದ. ಅದೇ ಕೋಣೆಯ ಮೂಲೆಯ ಟೇಬಲ್ಲಿನ ಮೇಲೊಂದು ಟೇಬಲ್ ಲ್ಯಾಂಪು ಹಾಕಿಕೊಂಡು ಓದುತ್ತ ಕುಳಿತಿದ್ದ ಅವನ ತಮ್ಮ ಉದಯ ಒಮ್ಮೆ ಶಮಂತಕನತ್ತ ನೋಡಿ ವ್ಯಂಗ್ಯವಾಗಿ ಮುಗುಳ್ನಕ್ಕ. ’ಗೊತ್ತೈತ್ ಏಳ್ ನನಗ್ ನೀವೇನ್ ಮಾಡಿರಂತ್’ಎಂದ ತಮ್ಮನ ಮಾತಿಗೆ ಶಮಂತಕನ ಜಂಘಾಬಲವೇ ಉಡುಗಿಹೋಯಿತು. ’ಸುಮ್ ಕುಂದ್ರೋ ಮಂಗ್ಯಾನ್ ಮಗನ್,ಎಲ್ಲೆರ ಅಪ್ಪಾರಿಗ್ ಹೇಳ್ ಗೀಳಿ’ ಎಂದರೆ ಉದಯನ ಮುಖದಲ್ಲಿ ಮತ್ತದೇ ವ್ಯಂಗ್ಯಭರಿತ ಕಿರುನಗೆ. ಮೊದಲ ಬಾರಿ ಕುಡಿದಿದ್ದ ಬಿಯರಿನ ನಶೆಯ ಪ್ರಭಾವಕ್ಕೆ ಶಮಂತಕನಿಗೆ ಮಲಗಿದ ಎರಡೇ ನಿಮಿಷಕ್ಕೆ ಗಾಢನಿದ್ರೆ. ಹಾಗೆ ಕನಸಿಲ್ಲದ ನಿದ್ರೆಯ ಆನಂದವನ್ನು ಅವನು ಅನುಭವಿಸುತ್ತಿದ್ದರೆ, ಅವನ ಸುಖವನ್ನು ಹಾಳುಗೆಡವಲು ಮತ್ತೆ ಘರ್ಜಿಸಿತ್ತು ಬಿಳಿಹುಲಿ..!! ಹುಲಿ ತನ್ನೆಡೆಗೆ ನೆಗೆಯುತ್ತಲೇ ಮಂಚದ ಮೇಲಿಂದ ಕೆಳಗೆ ಬಿದ್ದು ಹೋಗಿದ್ದ ಶಮಂತಕ. ಬಿದ್ದ ಹೊಡೆತಕ್ಕೆ ಬಲಭುಜ ನೋಯುತ್ತಿದ್ದರೆ ಅಲ್ಲಿಯೇ ಪಕ್ಕದಲ್ಲಿ ಮಲಗಿದ ಉದಯನಿಗೆ ಎಚ್ಚರವೇ ಇಲ್ಲ. ನಿದ್ರೆಗಣ್ಣಿನಲ್ಲಿಯೇ ಭುಜವನ್ನು ನೀವಿಕೊಳ್ಳುತ್ತ ಮಂಚವೇರಿ ಮಲಗಿಕೊಳ್ಳುವಾಗ ಸಮಯ ಬೆಳಗಿನ ನಾಲ್ಕು ಗಂಟೆಯೆನ್ನುವುದು ಕತ್ತಲಾವರಿಸಿದ್ದ ಕೋಣೆಯ ಗಡಿಯಾರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿತ್ತು. ಕಷ್ಟಪಟ್ಟು ಹೊರಳಾಡುತ್ತ ನಿದ್ರಿಸಿದವನನ್ನು ಬೆಳಗಿನ ಜಾವಕ್ಕೆ ಎಚ್ಚರಿಸಿದ್ದು ಅಮ್ಮನ ಹೃದಯ ವಿದ್ರಾವಕ ಆಕ್ರಂದನ. ಹಾಗೊಂದು ಕೂಗು ಕೇಳಿ ಬಚ್ಚಲಿನೆಡೆಗೆ ಓಡಿದರೆ ಅಲ್ಲಿ ಕಾಣಿಸಿತ್ತು ತಮ್ಮನ ಶವ..!! ನಸುಕಿನಲ್ಲಿಯೇ ಸ್ನಾನ ಮಾಡಲು ಹೋಗಿ ನೀರು ಕಾಯಿಸುವ ಕಾಯ್ಲ್ ನಿಂದ ಶಾಕ್ ತಗುಲಿ ಸುಟ್ಟು ಕರಕಲಾಗಿ ಹೋಗಿದ್ದ ಉದಯ..!!

ತನ್ನ ಅತ್ಯಾಪ್ತರನ್ನು ಕೊಲ್ಲುವುದಕ್ಕಾಗಿಯೇ ಬಿಳಿಹುಲಿ ಬರುತ್ತದೆ ಎಂಬುದು ಆಗ ಖಚಿತವಾಗಿ ಹೋಗಿತ್ತು ಅವನಿಗೆ. ಬದುಕಿದ್ದರೇ ಈಗ ಇಪ್ಪತ್ತಾಗಿರುತ್ತಿತ್ತು ಉದಯನಿಗೆ ಎಂದುಕೊಳ್ಳುವಷ್ಟರಲ್ಲಿ ’ತುಮ್ಕೂರ್, ತುಮ್ಕೂರ್’ ಎಂಬ ಕಂಡಕ್ಟರಿನ ಧ್ವನಿ ಅವನನ್ನು ಎಚ್ಚರಿಸಿತ್ತು. ಬಸ್ಸು ನಿಲ್ದಾಣದಲ್ಲಿ ನಿಂತಾಕ್ಷಣ ಅಮ್ಮನಿಗೊಂದು ಫೋನು ಮಾಡೋಣವೆಂದುಕೊಂಡ. ಇನ್ನೇನು ಫೋನು ಡಯಲ್ ಮಾಡಬೇಕೆನ್ನುವಷ್ಟರಲ್ಲಿ ಫೋನಿನ ತೆರೆಯ ಮೇಲೆ ಅಮ್ಮ ಎಂಬ ಹೆಸರು ಕಾಣಿಸಿತು. ಚಕ್ಕನೇ ಕರೆ ಸ್ವೀಕರಿಸಿ ’ಹೇಳ್ರಿ ಅವ್ವಾ’ಎಂದರೆ ಆಕಡೆಯಿಂದ ’ನಾನ್ಲೇ ಶಮ್ಯಾ’ ಎಂದವನು ಊರಿನಲ್ಲಿದ್ದ ಗೆಳೆಯ ಸತೀಶ. ಅರೆ, ತನ್ನಮ್ಮನ ಫೋನಿನಿಂದ ಇವನೇಕೆ ಫೋನು ಮಾಡ್ತಿದ್ದಾನೆ.? ಏನಾಗ್ತಿದೆ ಅಲ್ಲಿ ಎಂದುಕೊಳ್ಳುವಷ್ಟರಲ್ಲಿ ಮಾತನಾಡತೊಡಗಿದ ಸತೀಶ, ’ನಿಮ್ಮ ಅವ್ವಾರು ಎದಿ ಹಿಡ್ಕೊಂಡು ಬಿದ್ದ್ ಬಿಟ್ರಲೇ ಈಗ ಒಂದ್ ಹತ್ ಮಿನಿಟ್ ಮೊದ್ಲ್. ಭಾಳ ಟೆನ್ಶನ್ ಮಾಡ್ಕೊಂಡಾರ್ ಕಾಣ್ತೈತಿ. ನಿಮ್ಮ ಮಗ್ಲ್ ಮನಿ ಶಾಂತಿಬಾಯಿ ಹೇಳ್ ಕಳ್ಸಿದ್ರು. ನಾ ದವಾಖಾನೆಗ್ ಬಂದೀನಿ. ನೀ ಆದಷ್ಟ ಜಲ್ದಿ ಬಾ, ನೀ ಬರೋ ತಂಕಾ ನಾ ಇಲ್ಲೇ ಇರ್ತೀನಿ’ ಎಂಬ ಗೆಳೆಯನ ಮಾತು ಕೇಳಿ ತಲೆ ಸುತ್ತಿದಂತಾಯ್ತು ಶಮಂತಕನಿಗೆ. ಭಗವಂತಾ.!! ಇದೇನಾಗುತ್ತಿದೆ..? ಮೊದಲು ಅಪ್ಪ ತಲೆ ಸುತ್ತಿ ಬಿದ್ದರು, ಈಗ ಅಮ್ಮನಿಗೆ ಎದೆನೋವು. ನಿನ್ನೆಯವರೆಗೂ ಆರೋಗ್ಯವಂತರಾಗಿದ್ದ ಇಬ್ಬರೂ ಇಂದಿಗೆ ರೋಗಗ್ರಸ್ಥರು. ಛೇ ಈ ಅನಿಷ್ಟ ಕನಸು ಏನೇನು ಆಟವಾಡಬೇಕೋ ಬದುಕಿನಲ್ಲಿ ಎಂದುಕೊಂಡ. ’ಸತ್ಯಾ, ಆವಾಗವಾಗ್ ಫೋನ್ ಮಾಡ್ತಿರು, ಸ್ವಲ್ಪ ನೊಡ್ಕೋಲೇ ಇಬ್ರನೂ’ ಎಂದು ಅಂಗಲಾಚಿದ ಶಮಂತಕ. ’ಅಷ್ಟ್ಯಾಕ್ ಬೇಡ್ಕೋತಿಲೇ ಹುಚ್ಚ್ ಸೂಳಿ ಮಗನ. ನಾ ನೋಡ್ಕೋತಿನ್ ಬಿಡು, ದೋಸ್ತಿಯೊಳಗ ಅಷ್ಟು ಮಾಡ್ಲಿಲ್ಲ ಅಂದ್ರ ಹೆಂಗೋ’ ಎನ್ನುವ ಸತೀಶನ ಮಾತುಗಳು ತುಸು ಸಮಾಧಾನವಿತ್ತವು. ಫೋನು ಕಟ್ ಮಾಡುವಷ್ಟರಲ್ಲಿ ತುಮಕೂರಿನಿಂದ ಬಸ್ಸು ಚಲಿಸಲಾರಂಭಿಸಿತ್ತು.

ಪುನಃ ಯೋಚನೆಗಳಲ್ಲಿ ಕಳೆದುಹೋದ ಶಮಂತಕ. ಅಪ್ಪನಿಗೆ ಬಿಪಿ ಬಂದಿರುವುದು ನಿನ್ನೆ ಮೊನ್ನೆಯಲ್ಲ. ಹದಿನೈದು ವರ್ಷಗಳಿಂದಲೂ ಅದು ಅವರೊಟ್ಟಿಗಿದೆ. ಈ ಹಿಂದೆ ಒಮ್ಮೆಯೂ ಅವರು ತಲೆ ತಿರುಗಿ ಬಿದ್ದದ್ದು ತನಗೆ ನೆನಪಿಲ್ಲ. ಬಿಪಿ ಜಾಸ್ತಿಯಾದಾಗ ತಲೆ ತಿರುಗುವುದು ತೀರ ಅಸಹಜವೇನಲ್ಲ. ಸಾಮಾನ್ಯ ಸಂದರ್ಭವಾಗಿದ್ದರೆ ಬಹುಶಃ ತಾನು ಊರಿಗೆ ತೆರಳುತ್ತಲೂ ಇರಲಿಲ್ಲ. ಸತೀಶನಿಗೆ ಫೋನು ಮಾಡಿ ಹೇಳಿದ್ದರೂ ಸಾಕಿತ್ತು. ಅವನೇ ಅಪ್ಪನನ್ನ ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದ. ಇವತ್ತೂ ಸಹ ಸತೀಶ ತನ್ನ ಹೆತ್ತವರೆ ಜೊತೆಯಲ್ಲೇ ಇದ್ದಾನೆ. ಆದರೂ ತನ್ನ ಮನಸ್ಸಿಗೆ ಸಮಾಧಾನವಿಲ್ಲ. ಅಷ್ಟಲ್ಲದೇ ಅಪ್ಪನ ಅವಸ್ಥೆಗೆ ಗಾಬರಿಯಾಗಿರುವ ಅಮ್ಮ ಸಹ ಎದೆ ನೋವು ಎಂದು ಬಿದ್ದುಹೋಗಿದ್ದಾಳೆ. ಏನು ಮಾಡವುದೆಂದು ತಿಳಿಯದೇ ಕೈಕೈ ಹಿಸುಕಿಕೊಂಡ ಶಮಂತಕ. ಬಸ್ಸು ಸಾಕಷ್ಟು ವೇಗದಲ್ಲಿಯೇ ಚಲಿಸುತ್ತಿದ್ದರೂ ತುಂಬ ನಿಧಾನವಾಗಿ ಚಲಿಸುತ್ತಿದೆಯೇನೋ ಎನ್ನಿಸುತ್ತಿತ್ತು ಅವನಿಗೆ. ಅಪ್ಪನಿಗಾಗಲಿ ಅಮ್ಮನಿಗಾಗಲಿ ಏನೂ ಆಗುವುದಕ್ಕೆ ಬಿಡಬಾರದು, ಈ ಬಾರಿ ಕನಸು ಸೋಲಬೇಕು ಎಂಬ ರೋಷ ಅವನಲ್ಲುಕ್ಕಿತು. ಇದೊಂದು ಬಾರಿ ಗೆದ್ದುಬಿಟ್ಟರೇ ಮಾನಸಿಕ ತಜ್ನರನ್ನು ಕಂಡು ಕನಸು ಬೀಳದಿರುವಂತೆ ಚಿಕಿತ್ಸೆ ಪಡೆಯುತ್ತೇನೆ ಎಂದುಕೊಂಡ. ಆದರೆ ಇದು ಕೇವಲ ಒಂದು ಮಾನಸಿಕ ಸಮಸ್ಯೆಯಾಗಿದ್ದರೆ ಸಾವುಗಳೇಕೆ ಸಂಭವಿಸುತ್ತಿದ್ದವು ಎಂಬ ತರ್ಕ ಅವನಲ್ಲುಂಟಾಯಿತು. ಬಹುಶಃ ಯಾವುದೋ ಅಗೋಚರ ಶಕ್ತಿಯ ಕಂಟಕವಿದು, ಭಟ್ಟರನ್ನೋ, ಮಾಂತ್ರಿಕರನ್ನೋ ಕಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿಶ್ಚಯಿಸಿದ. ದೇವರನ್ನೇ ನಂಬದ ತಾನು ಮಾಂತ್ರಿಕರ ಬಗ್ಗೆ ಆಲೋಚಿಸಿದ ತನ್ನ ಆಲೋಚನಾ ಧಾಟಿಯ ಬಗ್ಗೆ ಕೊಂಚ ನಾಚಿಕೆಯೂ ಆಯಿತು. ಆದರೆ ಪರಿಸ್ಥಿತಿ ತನ್ನ ತರ್ಕವನ್ನು ಮೀರಿದ್ದು. ಏನೂ ಮಾಡಲಾಗದು ಎಂದುಕೊಂಡು ಸುಮ್ಮನಾದ. ಮಿತಿಮೀರಿದ ಆಲೋಚನೆಗಳಿಂದ ಕೊಂಚ ಸುಸ್ತಾದಂತೆನಿಸಿ ಕಿಟಕಿಗೆ ತಲೆಯಾನಿಸಿಕೊಂಡ. ಕಿಟಕಿಯಿಂದ ನೇರವಾಗಿ ಮುಖಕ್ಕೆ ಬೀಸುತ್ತಿದ್ದ ಗಾಳಿ ಕೊಂಚ ತಂಪು ನೀಡಿತ್ತು. ಕಣ್ರೆಪ್ಪೆಗಳು ನಿಧಾನವಾಗಿ ಎಳೆಯಲಾರಂಭಿಸಿದ್ದವು. ತಲೆಯನ್ನು ಹಿಂದಕ್ಕೆ ಚಾಚಿ ಕುಳಿತ ಕೆಲವೇ ಕ್ಷಣಗಳಲ್ಲಿ ಅವನಿಗೆ ಜೋರು ನಿದ್ರೆ.

ಅದೆಷ್ಟು ಹೊತ್ತು ನಿದ್ರಿಸಿದ್ದನೋ ತಿಳಿಯದು. ಬಸ್ಸಿನ ದೊಡ್ಡದೊಂದು ಬ್ರೇಕು ಅವನನ್ನು ನಿದ್ರೆಯಿಂದೆಬ್ಬಿಸಿತ್ತು. ಗಕ್ಕನೇ ಎದ್ದುಕುಳಿತು ಮುಖವರೆಸಿಕೊಂಡ ಶಮಂತಕ ಕಿಟಕಿಯಿಂದ ಹೊರ ನೋಡಿದ. ಬಸ್ಸು ಯಾವುದೋ ಊರನ್ನು ಪ್ರವೇಶಿಸಿದಂತಿತ್ತು. ರಸ್ತೆಯ ಪಕ್ಕದಲ್ಲಿ ಕಾಣಿಸುತ್ತಿದ್ದ ಅಂಗಡಿಗಳ ಬೋರ್ಡುಗಳನ್ನು ನೋಡಿ ಅದು ದಾವಣಗೆರೆ ಎಂಬುದನ್ನು ತಿಳಿದುಕೊಂಡ. ಕಿಸೆಯಿಂದ ಫೋನೆತ್ತಿಕೊಂಡರೆ ಸಮಯ ಮಧ್ಯಾಹ್ನದ ಎರಡೂವರೆ. ಬಸ್ಸು ಹುಬ್ಬಳ್ಳಿಗೆ ತಲುಪಲು ಕನಿಷ್ಟ ಮೂರುಗಂಟೆಗಳ ಕಾಲಾವಧಿ ಬೇಕು ಎಂದು ಚಡಪಡಿಸಿದವನೇ ಮತ್ತೊಮ್ಮೆ ಫೋನು ಪರೀಕ್ಷಿಸಿದ. ಮನೆಯಿಂದ ಒಂದು ಕರೆ ಸಹ ಬಂದಿರಲಿಲ್ಲ. ಅಮ್ಮನಿಗೆ ಫೋನು ಮಾಡುವಷ್ಟರಲ್ಲಿ ’ಊಟಕ್ ಟೈಮ್ ಅದ ನೋಡ್ರಿ’ ಎಂದು ಜೋರಾಗಿ ನುಡಿಯುತ್ತ ಕಂಡಕ್ಟರ್ ಬಸ್ಸಿಳಿದು ಸಾಗಿದ್ದು ಅವನಿಗೆ ಕಾಣಿಸಿತು. ಮೂರು ಬಾರಿ ರಿಂಗಾಗುವಷ್ಟರಲ್ಲಿ ಫೋನು ಎತ್ತಿದವಳು ಅಮ್ಮ. ’ಹಲೋ,ಶಮಿ.. ಎಲ್ಲದೀಪಾ’ ಎಂದರು ಅಮ್ಮ ಕೊಂಚ ಕಾತುರತೆಯಿಂದ. ’ನಾ ಈಗ ದಾವಣಗೆರ್ಯಾಗ್ ಅದೀನ್ರಿ ಅವ್ವಾ, ನೀವ್ ಹೆಂಗದಿರಿ ಈಗ, ಅಪ್ಪಾರ್ ಹೆಂಗ ಅದಾರ’ ಎಂಬ ಪ್ರಶ್ನೆಗಳ ಸುರಿಮಳೆ ಅವನದ್ದು. ’ನಾ ಆರಾಮ್ ಅದೀನಪಾ, ಸ್ವಲ್ಪ ಟೆನ್ಶನ್ ಆಗಿ ಎದಿ ಹಿಡ್ಕೊಂಡಗಾಗಿತ್ತು. ಈಗ ನಾ ಸರಿ ಆಗೇನಿ, ಅಪ್ಪಾರ್ ಇನ್ನ ಕಣ್ಣ ತಗಿದಿಲ್ಲ’ ಎನ್ನುವ ಅಮ್ಮನ ದನಿಯಲ್ಲೊಂದು ಸಣ್ಣ ಆತಂಕವನ್ನು ಶಮಂತಕ ಗಮನಿಸಿದ್ದ. ಹೆಚ್ಚಿಗೆ ಮಾತನಾಡದೇ, ‘ಆತ್ ಬಿಡ್ರಿ, ಇನ್ನೇನ್ ಮೂರ್ ತಾಸನ್ಯಾಗ್ ಬಂದ್ ಮುಟ್ತೀನ್ ನಾ’ ಎಂದವನೇ ಫೋನಿಟ್ಟುಬಿಟ್ಟ. ಒಂದರೆಕ್ಷಣ ಸುಮ್ಮನೇ ಕುಳಿತವನಿಗೆ ತನ್ನ ಕೈಗಳು ಸಣ್ಣಗೆ ನಡುಗುತ್ತಿರುವುದು ಗಮನಕ್ಕೆ ಬಂದಿತು. ಅದು ಚಿಂತೆಯಿಂದ ಉಂಟಾದ ನಡುಕವಲ್ಲ, ಹಸಿವಿನಿಂದ ಉಂಟಾಗಿದ್ದು ಎಂಬುದರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಹೊಟ್ಟೆ ಭಯಂಕರವಾಗಿ ಚುರುಗುಟ್ಟುತ್ತಿತ್ತು. ಬಸ್ಸು ತಿಂಡಿಗಾಗಿ ತುಮಕೂರಿನಲ್ಲಿ ನಿಂತಾಗ ತಿಂಡಿ ತಿನ್ನುವುದು ಶಮಂತಕನಿಗೆ ಸಾಧ್ಯವಾಗಿರಲಿಲ್ಲ. ರಾತ್ರಿಯ ಊಟದ ನಂತರ ಅವನು ಏನನ್ನೂ ತಿನ್ನದೇ ಸುಮಾರು ಹದಿನೇಳು ಗಂಟೆಗಳಾಗಿದ್ದವು. ಈಗಲೂ ಏನನ್ನಾದರೂ ತಿನ್ನದಿದ್ದರೆ ಹುಬ್ಬಳ್ಳಿ ತಲುಪುವಷ್ಟರಲ್ಲಿ ತಾನು ತಲೆ ತಿರುಗಿ ಬೀಳುವುದು ಖಚಿತವೆಂದೆನಿಸಿ ಕುಳಿತಲ್ಲಿಂದೆದ್ದು ನಿಧಾನವಾಗಿ ಬಸ್ಸಿನಿಂದ ಹೊರನಡೆದ. ಕೆಳಗಿಳಿದು ಮೈಮುರಿದ ಶಮಂತಕನಿಗೆ ದೊಡ್ಡದ್ದೊಂದು ಆಕಳಿಕೆ.

ಅವನಿಗೆ ದಾವಣಗೆರೆಯ ನಿಲ್ದಾಣ ಹೊಸತೇನಲ್ಲ. ಹತ್ತು ಹಲವು ಬಾರಿ ಅಲ್ಲಿನ ಹೊಟೆಲ್ಲಿನಲ್ಲಿ ಊಟ ತಿಂಡಿ ಮಾಡಿದ್ದ. ಹೊಟೆಲಿನತ್ತ ತೆರಳುವಷ್ಟರಲ್ಲಿ ಮತ್ತೆ ರಿಂಗಣಿಸಿತು ಅವನ ಫೋನು. ಫೋನಿನ ತೆರೆಯ ಮೇಲೆ ಅಮ್ಮನ ಹೆಸರು ಕಾಣುತ್ತಲೇ ಅವನ ಕೈಕಾಲುಗಳು ತಣ್ಣಗಾದಂತಾದವು. ಐದು ನಿಮಿಷಗಳ ಹಿಂದಷ್ಟೇ ಮಾತನಾಡಿದ ಅಮ್ಮ ಪುನಃ ಫೋನು ಮಾಡುತ್ತಿದ್ದಾರೆಂದರೆ ಏನೋ ಅನಾಹುತವಾಗಿದೆ ಎಂದೆನ್ನಿಸಿತು. ನಡುಗುವ ಕೈಗಳಿಂದ ಫೋನೆತ್ತಿಕೊಂಡರೆ, ’ಶಮ್ಯಾ ನಿಮ್ಮ ಅಪ್ಪಾಜಿಗೆ ಎಚ್ರಾ ಆಗೈತಿ’ ಎನ್ನುವ ಕಿರುಚು ಧ್ವನಿ ಅಮ್ಮನದು. ತೀವ್ರ ಆತಂಕದ ಮನಸ್ಥಿತಿಯಲ್ಲಿದ್ದ ಶಮಂತಕನಿಗೆ ಅಮ್ಮನ ಮಾತುಗಳು ಅರ್ಥವಾಗಲು ಒಂದೆರಡು ಸೆಕೆಂಡುಗಳ ಕಾಲ ಬೇಕಾಯಿತು. ಅರ್ಥವಾದಾಗ ಹಿಡಿದಿಟ್ಟುಕೊಳ್ಳಲಾಗದ ಉದ್ವೇಗ. ’ಹೌದೇನ್ರಿ ಅವ್ವಾ, ಯಪ್ಪ ಎಂತ ಸುದ್ಧಿ ಹೇಳಿದ್ರಿ. ಜೀವ ಬಂದಂಗಾತು ನಂಗ, ಬೆಳಗ್ಗಿಂದ ಫುಲ್ ಟೆನ್ಶನ್ಯಾಗೆ ಅದೇನಿ ನಾ’ ಎಂದವನೇ ಸಣ್ಣದಾಗಿ ನಕ್ಕ ಶಮಂತಕ. ’ಹೂಂ, ನೀ ಮಾತಾಡಿ ಫೋನ್ ಇಟ್ಟಿ, ಈಕಡೆ ಅಪ್ಪಾಜಿ ಕಣ್ಬಿಟ್ರು, ಸ್ವಲ್ಪ ಸುಸ್ತ ಅದಾರ, ನೀ ಲಗೂನ್ ಬಾ, ಆಮೇಲ್ ಮಾತಾಡೂಣಂತ’ ಎಂದವರೇ ಅವನ ಉತ್ತರಕ್ಕೂ ಕಾಯದೇ ಫೋನಿಟ್ಟು ಬಿಟ್ಟರು ಅಮ್ಮ. ಒಮ್ಮೆ ಗಾಳಿಯಲ್ಲಿ ಕೈ ಗುದ್ದಿದ ಶಮಂತಕ. ಅಪ್ಪ ಸುಧಾರಿಸಿಕೊಂಡರು ಎಂಬ ಸಂತಸ ಅವನಿಗೆ. ಕನಸು ಈ ಬಾರಿ ಸುಳ್ಳಾಯಿತು ಎಂಬ ಖುಷಿ ಅವನನ್ನು ಆವರಿಸಿಕೊಂಡಿತು. ಸಂತಸದ ನಡುವೆಯೇ ಒಂದು ಸಣ್ಣ ಚಿಂತೆ ಹುಟ್ಟಿಕೊಂಡಿತ್ತು. ಅಪ್ಪ ಎಚ್ಚರವಾಗಿದ್ದೇನೋ ನಿಜ. ಆದರೆ ಏಕಾಏಕಿ ಅಪ್ಪ ಹೀಗೆ ಮೂರ್ಛೆ ಹೋಗಲು ಕಾರಣವೇನು..? ಬಿಪಿ ಜಾಸ್ತಿಯಾಗಿ ಮೂರ್ಛೆ ಹೋದರೆ ಹೀಗೆ ಐದಾರು ಗಂಟೆಗಳ ಕಾಲ ಮೂರ್ಛಿತ ಸ್ಥಿತಿಯಲ್ಲಿರುತ್ತಾರಾ..? ಅಥವಾ ಅಪ್ಪನ ಆರೋಗ್ಯದಲ್ಲಿ ಇನ್ನೇನಾದರೂ ಏರುಪೇರು ಉಂಟಾಗಿದೆಯಾ..? ಎಂಬ ಪ್ರಶ್ನೆಗಳು ಅವನನ್ನು ಕಾಡತೊಡಗಿದವು. ಹೇಗೂ ಊರಿಗೆ ಹೋಗುತ್ತಿದ್ದೇನೆ. ಅಪ್ಪನ ವೈದ್ಯರನ್ನು ಸಂಪರ್ಕಿಸಿ ಅಪ್ಪನ ಆರೋಗ್ಯದ ಬಗ್ಗೆ ಪೂರ್ತಿ ವಿವರ ಪಡೆದುಕೊಳ್ಳಬೇಕು ಎಂದುಕೊಂಡ. ಚಿಂತೆ ಕಡಿಮೆಯಾಗಿದ್ದರ ಪ್ರಭಾವವೋ ಏನೋ ಹೊಟ್ಟೆ ಈಗ ಕೊಂಚ ಜಾಸ್ತಿಯೇ ಚುರ್ರೆನ್ನಲಾರಂಭಿಸಿತ್ತು.

ಬಸ್ಸಿನ ಎದುರಿಗಿದ್ದ ಪ್ಲಾಟಫಾರ್ಮಿನ ಮೇಲೆ ನಡೆಯುತ್ತ ದಿನವಿಡಿ ನಡೆದ ಘಟನೆಗಳನ್ನೊಮ್ಮೆ ಮೆಲುಕು ಹಾಕಿದ ಶಮಂತಕ. ತನಗೆ ಕನಸು ಬಿದ್ದಿದ್ದು, ಆ ಕನಸು ತನ್ನ ಆಪ್ತರನ್ನು ಕೊಲ್ಲುತ್ತದೆ ಎಂದು ನಂಬಿರುವ ತಾನು ಸಂಪೂರ್ಣ ಗಾಬರಿಯಾಗಿದ್ದು. ಅದೇ ಹೊತ್ತಿಗೆ ಹೆತ್ತವರ ಆರೋಗ್ಯದಲ್ಲೊಂಚೂರು ಏರುಪೇರು ಉಂಟಾಗಿದ್ದು, ತಾನು ದಿಕ್ಕೆಟ್ಟವರಂತೆ ಊರಿನತ್ತ ಧಾವಿಸಿದ್ದು ಎಲ್ಲವನ್ನೂ ನೆನೆಸಿಕೊಂಡಾಗ ತಾನೊಬ್ಬ ದೊಡ್ಡ ಮೂರ್ಖ ಎಂದು ಭಾಸವಾಗಲಾರಂಭಿಸಿತ್ತು. ಹಿಂದೆ ನಡೆದ ದುರ್ಘಟನೆಗಳು ಮತ್ತು ಕನಸಿಗೆ ಸಂಬಂಧ ಕಲ್ಪಿಸಿದ್ದೂ ಸಹ ತನ್ನ ಮೂರ್ಖತನವಲ್ಲದೇ ಬೇರೆನೂ ಅಲ್ಲ ಎಂಬ ಭಾವನೆ ಬಲವಾಗುತ್ತ ತನ್ನ ಪೆದ್ದುತನದ ಬಗ್ಗೆ ತಾನೇ ನಗಲಾರಂಭಿಸಿದವನು ಒಮ್ಮೆ ಹಣೆ ಚಚ್ಚಿಕೊಂಡ. ಹಾಳಾಗಿ ಹೋಗಲಿ, ಹೇಗಿದ್ದರೂ ಊರಿಗೆ ಬರದೆ ಆರು ತಿಂಗಳ ಮೇಲಾಗಿತ್ತು. ಈಗ ಬಂದಿದ್ದೇನೆ. ಒಂದೆರಡು ದಿನ ಹೆಚ್ಚೇ ರಜಾ ಹಾಕಿ ಹಾಯಾಗಿ ಕಾಲ ಕಳೆದು ವಾಪಸ್ಸು ಹೋಗುತ್ತೇನೆ ಎಂದುಕೊಳ್ಳುವಷ್ಟರಲ್ಲಿ ಶಮಂತಕನ ಮೈಯ ತೀರ ಸಮೀಪಕ್ಕೆ ಎಲೆಯಡಿಕೆಯ ಕೆಂಪನೇಯ ಉಗುಳು ಸಿಡಿದಿತ್ತು. ಅಪ್ರಯತ್ನವಾಗಿ ಚಂಗನೇ ಮುಂದಕ್ಕೆ ಜಿಗಿದ ಶಮಂತಕ ಉಗುಳಿದವನತ್ತ ತಿರುಗಿ ಕೋಪದಲ್ಲಿ ’ಏಯ್’ಎಂದ. ’ಸಾರಿ ಸಾರಿ ಸಾರ್ರೀ ರಿ ಸರ ಕಾಣ್ಲಿಲ್ಲ ನನಗ’ ಎಂದು ಕ್ಷಮೆಯಾಚಿದ ಆ ವ್ಯಕ್ತಿ. ’ಅದೆಂಗ್ ಕಾಣಾಂಗಿಲ್ರಿ , ಏಯ್ ನಿಮ್ಮ…’ ಎಂದು ಗೊಣಗಿದ ಶಮಂತಕ ಇನ್ನೇನು ಮುಂದೆ ಹೆಜ್ಜೆಯಿಡಬೇಕೆನ್ನುವಷ್ಟರಲ್ಲಿ ಕವಳ ಉಗಿದವನು ಗಾಬರಿಗೊಳಗಾದವನಂತೆ ’ಏಯ್ ಏಯ್ ಏಯ್’ಎನ್ನುತ್ತ ಶಮಂತಕನತ್ತಲೇ ಧಾವಿಸಿದ. ಏನಾಯಿತೆಂದು ಶಮಂತಕ ತಿರುಗಿ ನೋಡುವಷ್ಟರಲ್ಲಿ ಚಾಲಕನಿಲ್ಲದೇ ನಿಂತಿದ್ದ ಬಸ್ಸೊಂದು ಧಿಗ್ಗನೇ ಅವನ ಎದೆಗೆ ಗುದ್ದಿತ್ತು. ಗುದ್ದಿದ ವೇಗಕ್ಕೆ ಅಸಾಧ್ಯವಾದ ನೋವು ಅವನಿಗೆ. ಪಕ್ಕಕ್ಕೆ ಸರಿಯೋಣವೆಂದುಕೊಂಡರೆ ತಾನು ಪ್ಲಾಟ್ ಫಾರ್ಮ್ ಮೇಲಿನ ಕಂಬ ಮತ್ತು ಬಸ್ಸಿನ ನಡುವಣ ಜಜ್ಜಿ ಹೋಗಿದ್ದೇನೆ ಎಂಬುದು ಅರಿವಾಯಿತು. ಕ್ಷಣಾರ್ಧದಲ್ಲಿ ಬೆನ್ನು ಮುರಿದ ಅನುಭವ. ಮುರಿದು ಹೋದ ಎದೆಗೂಡಿನ ಫಲವಾಗಿ ಬಾಯಿ ತುಂಬ ರಕ್ತಧಾರೆ. ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಬಸ್ಸಿನ ಗಾಜಿನತ್ತ ನೋಡಿದ. ಗಾಜಿನ ಮೇಲ್ತುದಿಯಲ್ಲಿ ಅಂಟಿಸಿದ್ದ ಸ್ಟಿಕ್ಕರಿನಲ್ಲಿದ್ದ ಹುಲಿಯೊಂದು ತನ್ನನ್ನೇ ದಿಟ್ಟಿಸಿದಂತಾಯ್ತು ಅವನಿಗೆ.. ಕಣ್ಣುಗಳನ್ನೊಮ್ಮೆ ಹಿಗ್ಗಿಸಿ ಕ್ಷಣಕಾಲ ಹುಲಿಯ ಚಿತ್ರವನ್ನು ದಿಟ್ಟಿಸಿದ ಶಮಂತಕನ ಕಣ್ಣುಗಳು ನಿಧಾನಕ್ಕೆ ಮುಚ್ಚಿಹೋದವು. ಅವನತ್ತಲೇ ಓಡಿಬಂದ ಒಂದಷ್ಟು ಜನರು ಅವನನ್ನು ಬಸ್ಸಿನ ಹಿಡಿತದಿಂದ ಬಿಡಿಸುವ ಪ್ರಯತ್ನ ಮಾಡುತ್ತಿದ್ದರೆ, ’ನ್ಯೂಟ್ರಲ್ ನ್ಯಾಗ್ ಇತ್ತರಿ ಗಾಡಿ’ ಎಂದು ಗೊಣಗಿಕೊಂಡ ಚಾಲಕ ಬಸ್ಸನ್ನು ಹಿಂದಕ್ಕೆ ತೆಗೆಯಲು ಅವಸರವಸರವಾಗಿ ಬಸ್ಸನ್ನೇರಿದ.

Read more from ಲೇಖನಗಳು
1 ಟಿಪ್ಪಣಿ Post a comment
  1. Abhilash
    ಏಪ್ರಿಲ್ 23 2017

    ಬಹಳ ಚೆನ್ನಾಗಿದೆ….

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments