ಪ್ರಧಾನಿಗಳಿಗೇಕೆ ಭದ್ರತೆ..?
– ಸುರೇಶ್ ಮುಗ್ಬಾಳ್
ತಿಪಟೂರು
ನಾಯಕರ ಭದ್ರತೆಯ ವಿಚಾರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಎರಡು ಘಟನೆಗಳು
ಒಂದು “ಪ್ರಧಾನಿಗಳಿಗೇಕೆ ಭದ್ರತೆ..? ಜೀವ ಬೆದರಿಕೆ ಇದ್ದರೆ ಸತ್ತರೆ ಸಾಯಲಿ ಬಿಡಿ” ಎಂದು ಹೇಳಿದ ಬಸವರಾಜ ರಾಯರೆಡ್ಡಿಯವರ ಘಟನೆ. ಮತ್ತೊಂದು ಮಂಡ್ಯ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಎದುರಾಗಿ ಕಪ್ಪು ಬಟ್ಟೆ ಪ್ರದರ್ಶಿಸಿದ ಪ್ರತಿಭಟನಾಕಾರರನ್ನು ಮಂಡ್ಯ ಎಸ್.ಪಿ. ‘ಸುಧೀರ್ ಕುಮಾರ್ ರೆಡ್ಡಿ’ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಕಾರ್ಯಕ್ರಮದ ವೇದಿಕೆಯ ಮೇಲೆ ರೆಡ್ಡಿಯವರನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡ ಘಟನೆ.
ದೇಶದ ಪ್ರಧಾನಿಗಳ ಭದ್ರತೆಯ ವಿಚಾರದಲ್ಲಿ ಯಾವನೇ ಆಗಲಿ ಇಂತಹ ಹೇಳಿಕೆ ನೀಡುವುದು ಮತ್ತು ಭದ್ರತೆಯಲ್ಲಿ ಲೋಪ ಕಂಡುಬಂದಿತೆಂಬ ಕಾರಣಕ್ಕೆ ವೇದಿಕೆಯ ಮೇಲೆ ಒಬ್ಬ ಅಧಿಕಾರಿಯನ್ನು ಹೀನಾಯವಾಗಿ ನಡೆಸಿಕೊಳ್ಳುವುದು, ಎರಡೂ ಭದ್ರತೆಯ ವಿಚಾರವನ್ನು ಪ್ರಶ್ನಿಸುವ ಘಟನೆಗಳೇ. ಮುಖ್ಯಮಂತ್ರಿಗಳ ಘಟನೆಯನ್ನು ಕೊಂಚ ಪಕ್ಕಕ್ಕಿಟ್ಟು ದೇಶದ ಪ್ರಧಾನಿಗಳ ಭದ್ರತಾ ವಿಚಾರವನ್ನು ಕೊಂಚ ಕೂಲಂಕಷವಾಗಿ ಚರ್ಚಿಸಿ ನೋಡೋಣ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇವಲ ISIS ಭಯೋತ್ಪಾದಕ ಸಂಘಟನೆಯ ಬೆದರಿಕೆ ಮಾತ್ರ ಇದೆ ಎಂದು ತಿಳಿದರೆ ಅದು ತಪ್ಪು ತಿಳುವಳಿಕೆ. ಪ್ರಧಾನಿಗಿರುವ ಅಂತರರಾಷ್ಟ್ರೀಯ ಮಟ್ಟದ ಜೀವ ಬೆದರಿಕೆಗಳಿಗಿಂತ ಆಂತರಿಕ ಜೀವ ಬೆದರಿಕೆಗಳು (ದೇಶದ ಒಳಗಡೆ) ಬಹಳಷ್ಟಿವೆ. ಪ್ರಧಾನಿಗಳನ್ನು ಗುರಿಯಾಗಿರಿಸಿಕೊಂಡು 2016ರ ಅಕ್ಟೋಬರ್ ತಿಂಗಳಲ್ಲಿ ಲಖ್ನೋವಿನ ಐಶಾಭಾಗ್ ರಾಮ್ ಲೀಲಾ ಮೈದಾನದಲ್ಲಿ ನಡೆದಿತ್ತೆನ್ನಲಾದ ISIS ಉಗ್ರರ ಕೈವಾಡ ಇದಕ್ಕೊಂದು ಉದಾಹರಣೆ. ಅಂದು ISIS ಪ್ರೇರಿತ ಉಗ್ರರು ಮೋದಿಯವರು ಭಾಷಣ ಮಾಡುವ ವೇದಿಕೆಯ ಅಣತಿ ದೂರದಲ್ಲಿಟ್ಟಿದ್ದ ಬಾಂಬ್ ಸಿಡಿದಿರಲಿಲ್ಲ ಎಂದು ಸ್ವತಃ ಬಂಧಿತ ಉಗ್ರರು ಭದ್ರತಾ ಪಡೆಗಳ ಮುಂದೆ ಒಪ್ಪಿಕೊಂಡಿದ್ದರು.
2002 ರಲ್ಲಿ ನಡೆದ ಗೋದ್ರಾ ಹತ್ಯಾಕಂಡಕ್ಕೆ ಮೋದಿಯವರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಲಷ್ಕರ್-ಎ-ತೋಯ್ಬಾ, ಜೈಷ್-ಇ-ಮೊಹಮ್ಮದ್, SIMI ಮತ್ತು ಇಂಡಿಯನ್ ಮುಜಾಯಿದ್ದಿನ್ ಉಗ್ರ ಸಂಘಟನೆಗಳು, ಮೋದಿಯವರನ್ನು 2014ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗಲೇ ಕತ್ತಿ ಮಸೆಯಲು ಪ್ರಾರಂಭಿಸಿದ್ದವು. ಆಗ ಆ ಉಗ್ರ ಸಂಘಟನೆಗಳು ಮೋದಿಯವರ ವಿರುದ್ಧ ನೀಡಿದ ಹೇಳಿಕೆ ಹೇಗಿತ್ತೆಂದರೆ “Its your turn now Modi” ಎಂದು ನೇರ ಸವಾಲೆಸೆದಿದ್ದವು. ಮೋದಿಯವರಿಗೆ ಕೊಡುತ್ತಿರುವ ಭದ್ರತೆ ಏನೇನು ಸಾಲದು ಎಂಬುದನ್ನು ಸಾರುತ್ತಿದ್ದವು. ಈಗಲೂ ಅಷ್ಟೇ, ಮೋದಿಯವರಿಗೆ ಭದ್ರತಾ ಸಿಬ್ಬಂದಿಗಳಾಗಿ ಯಾವಾಗಲೂ ರಕ್ಷಣೆ ನೀಡುತ್ತಿರುವ SPECIAL PROTECTION GROUP (SPG) ಭದ್ರತೆ ಕೂಡ ಮೋದಿಯವರಿಗಿರುವ ಬೆದರಿಕೆಗಳಿಗೆ ಹೋಲಿಸಿಕೊಂಡರೆ ಕಡಿಮೆಯೇ.
ಅನಾಣ್ಯೀಕರಣದ ಸಂದರ್ಭದಲ್ಲಿ ದೇಶದ ಆರ್ಥಿಕತೆಯಲ್ಲಿ ತೂರಿಕೊಂಡಿದ್ದ ಕಪ್ಪುಹಣ ಮತ್ತು ಕೊಟ್ಟಿ ಹಣವನ್ನು ಹೊರಗೆಳೆಯಲು ತೆಗೆದುಕೊಂಡ ಐತಿಹಾಸಿಕ ನಿರ್ಣಯದಿಂದ ಮೋದಿಯವರು ಜೀವಭಯವನ್ನು ಎದುರಿಸುತ್ತಿದ್ದಾರೆ ಎಂಬ ಮಾತನ್ನು ಸ್ವತಃ ಯೋಗ ಗುರು ರಾಮ್ದೇವ್ ಹೇಳಿದ್ದರು. ಅವರ ಮಾತುಗಳು ಅದೆಷ್ಟು ನಂಬಲರ್ಹವೋ ಅಲ್ಲವೋ ಅದು ನಿಮಗೆ ಬಿಟ್ಟಿದ್ದು. ಆದರೆ ಆ ಸಮಯದಲ್ಲಿ ಪ್ರಧಾನಿಗಳು ಇಡೀ ದೇಶದ ತೆರಿಗೆ ಕಳ್ಳರನ್ನು, ಕಪ್ಪು ಹಣಕೋರರನ್ನು, ಕೊಟ್ಟಿ ಹಣ ಮುದ್ರಕರನ್ನು ಮತ್ತು ಕಳ್ಳಸಾಗಾಣಿಕೆಗಾರರನ್ನು (Smugglers) ಎದುರು ಹಾಕಿಕೊಂಡಿದ್ದರು. ಜನವರಿ 31ರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮತ್ತಿನ್ನೇನು ತೀರ್ಮಾನಗಳನ್ನು ಕೈಗೊಳ್ಳುವರೋ ಎಂಬ ಆತಂಕ ಈ ಮೇಲೆ ಹೆಸರಿಸಿದ ಗುಂಪುಗಳಲ್ಲಿತ್ತು. ಒಂದೇ ಒಂದು ಸಣ್ಣ ಭದ್ರತಾ ಲೋಪ ಆ ಸಮಯದಲ್ಲಿ ಕಂಡುಬಂದಿದ್ದರೂ ಮೋದಿಯವರ ಪ್ರಾಣಕ್ಕೆ ಕುತ್ತು ತರುತ್ತಿದ್ದದ್ದಂತೂ ಸುಳ್ಳಲ್ಲ.
ಹೀಗಿರುವಾಗ “ದೇಶದ ಸಮಸ್ತ ಪ್ರಜೆಗಳೂ VIP ಗಳಿದ್ದಂತೆ” ಎಂದು ಹೇಳಿದ ಮೋದಿಯವರಿಗೆ “ನೀವು ಕೂಡ ಒಬ್ಬ VIP, ಹಾಗಾದರೆ ನಿಮಗಿರುವ ಭದ್ರತೆಯನ್ನು ತ್ಯಜಿಸಿ” ಎಂದು ಹೇಳುವುದು ಎಷ್ಟು ಸಮಂಜಸ? ದೇಶವನ್ನು ಮುನ್ನಡೆಸುವ ವ್ಯಕ್ತಿಯೊಬ್ಬನನ್ನು ವಿರೋಧಿಸಲೇ ಬೇಕು ಎಂಬ ಕಾರಣಕ್ಕೆ ಪ್ರತಿಯೊಂದಕ್ಕೂ ವಿರೋಧಿಸುವುದು ಮೂರ್ಖತನವಷ್ಟೇ.
ಭಾರತವು ಈ ಮುಂಚೆ ಇಬ್ಬರು ಮಾಜಿ ಪ್ರಧಾನಿಗಳು ಕೊಲೆಗೀಡಾಗಿದ್ದನ್ನು ಕಣ್ಣಾರೆ ಕಂಡಿದೆ. ಒಂದು ಆಂತರಿಕ ಕಾರಣಗಳಿಂದ ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆ ಮತ್ತೊಂದು ಬಾಹ್ಯ ವಿಚಾರಕ್ಕಾಗಿ (ಇದೂ ಕೂಡ ಕೊಂಚ ಆಂತರಿಕವೇ) ಹತ್ಯೆಯಾದ ರಾಜೀವ್ ಗಾಂಧಿಯವರ ಹತ್ಯೆ. ದೇಶ ಒಂದು ದಶಕದ ಅಂತರದಲ್ಲಿ ಇಬ್ಬರು ಪ್ರಮುಖ ನಾಯಕರನ್ನು ಕಳೆದುಕೊಂಡಿತ್ತು. ಶ್ರೀಮತಿ ಇಂದಿರಾ ಗಾಂಧಿಯವರು ಅಧಿಕಾರದಲ್ಲಿರುವಾಗಲೇ ತಮ್ಮದೇ ಅಂಗರಕ್ಷಕರ ಗುಂಡೇಟಿಗೆ ಬಲಿಯಾಗಿದ್ದರು. ರಾಜೀವ್ ಗಾಂಧಿಯವರನ್ನು ಸಂಚು ಮಾಡಿ ಹತ್ಯೆ ಮಾಡಲಾಗಿತ್ತು. ಒಂದು ವರದಿಯ ಪ್ರಕಾರ ಮತ್ತು ಖ್ಯಾತ ಪತ್ರಕರ್ತ ರಾಮ್ ಬಹದ್ದೂರ್ ರಾಯ್ ರವರು ರಾಜೀವ್ ಹತ್ಯೆಯ ನಂತರ ಬರೆದ ಒಂದು ಅಂಕಣದಲ್ಲಿ ಘಟನೆಗೆ ಕಾರಣಗಳನ್ನು ವಿವರಿಸುತ್ತ, ಭದ್ರತಾ ವೈಪಲ್ಯವೇ ಹತ್ಯೆಗೆ ನೇರ ಕಾರಣ ಎಂದಿದ್ದರು. ತಮಿಳುನಾಡಿಗೆ ಚುನಾವಣಾ ಪ್ರಚಾರಕ್ಕೆಂದು ಹೋಗುವ ಮೊದಲು ಎರಡು ಬಾರಿ ಭದ್ರತಾ ನಿಯೋಗಗಳು ರಾಜೀವ್ ರವರ ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ವರದಿ ನೀಡಿದ್ದವು. ಆದರೆ ನಿಯೋಗದ ವರದಿ ಎಷ್ಟು ಜೊಳ್ಳಾಗಿತ್ತು ಎಂಬುದನ್ನು ರಾಜೀವರ ಹತ್ಯೆಯ ನಂತರ ವಿಮರ್ಶಿಸಲಾಯಿತು.
ಇಷ್ಟೇ ಅಲ್ಲ ಜಾಗತಿಕವಾಗಿ ಅನೇಕ ದೇಶಗಳಲ್ಲಿ ಇಂತಹ ಭದ್ರತಾ ಲೋಪಗಳಿಂದ ಹತ್ಯೆಗಳು ನಡೆದು ಹೋಗಿವೆ. ತೀರ ಇತ್ತೀಚಿನ ಹತ್ಯೆ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಇಂದಿರಾಗಾಂಧಿಯವರ ಆಪ್ತೆಯಾಗಿದ್ದ ಬೆನಜಿರ್ ಭುಟ್ಟೋ ರವರ ಹತ್ಯೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಕ್ಷದ ಚುನಾವಣಾ ಪ್ರಚಾರಕ್ಕೆಂದು ರಾವಲ್ಪಿಂಡಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ಆಗಂತುಕನೊಬ್ಬನ ಗುಂಡೇಟಿಕೆ ಭುಟ್ಟೋ ಕೊನೆಯುಸಿರೆಳೆಯುತ್ತಾರೆ. ಗುಂಡು ಹಾರಿಸಿದ ಮರುಕ್ಷಣದಲ್ಲೇ ಅದೇ ಸ್ಥಳದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಕೂಡ ನಡೆದು 24 ಮಂದಿ ನಾಗರೀಕರು ಸಾವಿಗೀಡಾಗುತ್ತಾರೆ. ಈ ಹತ್ಯೆಗೂ ಮುಂಚೆ ಭುಟ್ಟೋ ತಮಗೆ ಮತ್ತಷ್ಟು ಭದ್ರತೆ ಬೇಕಿರುವುದಾಗಿ ಪಾಕಿಸ್ತಾನ ಸರ್ಕಾರವನ್ನು ಕೇಳಿಕೊಳ್ಳುತ್ತಾರೆ. ಆದರೆ ಅಂದಿನ ಪಾಕಿಸ್ತಾನದ ಅಧ್ಯಕ್ಷರಾದ ಮುಷರಫ್ ಹೆಚ್ಚಿನ ಭದ್ರತೆಯನ್ನು ನೀಡಲು ನಿರಾಕರಿಸುತ್ತಾರೆ. ಭುಟ್ಟೋ ಹತ್ಯೆಯ ನಂತರ ಅಮೇರಿಕ ತನಿಖಾದಳ ನೀಡಿದ ಮಾಹಿತಿಯ ಪ್ರಕಾರ, ಭುಟ್ಟೋರವರಿಗೆ ಎಷ್ಟೇ ಭದ್ರತೆ ನೀಡಿದ್ದರೂ ಹತ್ಯೆ ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ವರದಿ ನೀಡುತ್ತದೆ. ಅಧ್ಯಕ್ಷ ಮುಷರಫ್ ರವರು ಭುಟ್ಟೋ ತಮ್ಮ ಬೇಜವಾಬ್ದಾರಿಯಿಂದ ಹತ್ಯೆಗೀಡಾದರು ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಹತ್ಯೆಯಲ್ಲಿ ಮುಷರಫ್ ಕೈವಾಡವಿರುವುದರ ಬಗ್ಗೆ ತನಿಖೆಗಳು ನಡೆಯುತ್ತವೆ.
ಭದ್ರತಾ ಲೋಪಗಳಿಂದಾಗುತ್ತಿರುವ ಹತ್ಯೆಗಳು ಇತಿಹಾಸದಲ್ಲಿ ಬಹಳಷ್ಟು ಘಟಿಸಿವೆ. ಹಿಂದೆ ಮಹಾರಾಜರ ಹತ್ಯೆಗಾಗಿ ಒಡಹುಟ್ಟಿದವರೇ ಪ್ರಯತ್ನಿಸಿದ್ದನ್ನು ಕೇಳಿರುತ್ತೀರಿ. ಸೈನಿಕರು ಮತ್ತು ಆಸ್ಥಾನದ ಮಂತ್ರಿಗಳ ಕೈವಾಡದಿಂದಲೇ ಹತ್ಯೆಗಳಾಗಿವೆ. ರೋಮನ್ ಸಾಮ್ರಾಜ್ಯದ ಇತಿಹಾಸದಲ್ಲಿ ಇಂತಹ ಹತ್ಯೆಗಳು ಹಲವಾರು ನಡೆದು ಹೋಗಿವೆ. ಜೂಲಿಯಸ್ ಸೀಸರ್ ಹತ್ಯೆ ಇದಕ್ಕೊಂದು ಉದಾಹರಣೆ.
ಅಮೇರಿಕಾದ ಅಧ್ಯಕ್ಷರಿಗೆ ನೀಡುತ್ತಿರುವ ಭದ್ರತೆಯನ್ನೊಮ್ಮೆ ನೀವೇನಾದರು ಗಮನಿಸಿದ್ದರೆ. ಉಫ್..! ಎಷ್ಟು ಭದ್ರತೆ ಈ ವ್ಯಕ್ತಿಗೆ ಎಂದು ಉದ್ಗಾರ ತೆಗೆದಿರುತ್ತೀರಿ. ನಮ್ಮ ದೇಶದ ಪ್ರಧಾನಿಗಳಿಗೆ ನೀಡುವ ಭದ್ರತೆಗಿಂತ 10 ಪಟ್ಟು ಹೆಚ್ಚು ಭದ್ರತೆ ಅಲ್ಲಿನ ಅಧ್ಯಕ್ಷರಿಗೆ ಒದಗಿಸಿಲಾಗುತ್ತದೆ. ಇಂತಹ ಭದ್ರತೆ ನಡುವೆಯೂ ಅಬ್ರಹಾಂ ಲಿಂಕನ್, ಜೇಮ್ಸ್ ಎ. ಗಾರ್ಫೀಲ್ಡ್, ವಿಲಿಯಂ ಮೆಕಿನ್ಲಿ, ಜಾನ್ ಎಫ್. ಕೆನಡಿ ಅಧಿಕಾರದಲ್ಲಿದ್ದಾಗಲೇ ಹತ್ಯೆಯಾಗುತ್ತಾರೆ. ಸಣ್ಣ ಸಣ್ಣ ಭದ್ರತಾ ಮುನ್ನೆಚ್ಚರಿಕೆಗಳ ನಿರ್ಲಕ್ಷದಿಂದಾಗಿ ಅಮೇರಿಕಾದ ನಾಲ್ಕೂ ಅಧ್ಯಕ್ಷರು ಹತ್ಯೆಗೀಡಾಗುತ್ತಾರೆ.
ಈ ಎಲ್ಲಾ ನಡೆದುಹೋದ ಘಟನೆಗಳು ದೇಶದ ಪ್ರಧಾನಿಗಳ ಭದ್ರತೆಯ ವಿಚಾರ ಎಷ್ಟು ಸಂಕೀರ್ಣವಾಗಿದೆ ಎಂದು ಆಗಾಗ ಮನವರಿಕೆ ಮಾಡಿಕೊಡುತ್ತಲೇ ಇರುತ್ತವೆ. ಹತ್ಯೆ ಒಬ್ಬ ಪ್ರಧಾನಿಯ ಸಾವಿನಲ್ಲಿ ಕೊನೆಗೊಳ್ಳುವುದಿಲ್ಲ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ. ಒಬ್ಬ ವ್ಯಕ್ತಿಯ ಸಾವಿನೊಂದಿಗೆ ಆತನ ದೂರದೃಷ್ಟಿ, ದೇಶಕಟ್ಟುವ ಕನಸು, ಆತನ ವಿಚಾರಗಳು ಎಲ್ಲವೂ ಒಂದೇ ಬಾರಿಗೆ ಹತ್ಯೆಯಾಗುತ್ತವೆ. ದೇಶದ ಅಭಿವೃದ್ಧಿಯ ದಿಕ್ಕೇ ಬದಲಾಗಿ ಹೋಗಬಹುದು.
ಈಗಾಗಲೇ ಭದ್ರತಾ ವೈಪಲ್ಯಗಳಿಂದ ಎರಡು ಹತ್ಯೆಗಳನ್ನು ಕಂಡಿರುವ ಭಾರತ ಮತ್ತೊಂದು ಹತ್ಯೆಯನ್ನು ಎಂದೂ ಎದುರು ನೋಡಲಾರದು. ಒಂದು ವೇಳೆ ಮತ್ತೊಂದು ಅನಾಹುತ ಘಟಿಸಿಬಿಟ್ಟರೆ ಅದು ದೇಶದ ಮಿಲಿಟರಿ ಶಕ್ತಿಯನ್ನು ಮತ್ತು ಭದ್ರತಾ ಶಕ್ತಿಯನ್ನು ಅಣಕಿಸಿಬಿಡುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೊಳಪಡಬೇಕಾಗುತ್ತದೆ. ಒಂದು ವೇಳೆ ಸ್ವತಃ ಮೋದಿಯವರೇ ತಮಗೆ ಭದ್ರತೆ ಬೇಡವೆಂದರೂ ಅವರ ನಿರ್ಧಾರವನ್ನು SPG ತಿರಸ್ಕರಿಸುವ ಅಧಿಕಾರವನ್ನೊಂದಿದೆ. ಕಾರಣ; ದೇಶದ ಪ್ರಧಾನಿಗಳ ಭದ್ರತೆ ರಾಷ್ಟ್ರದ ಜವಾಬ್ದಾರಿಯ ಜೊತೆಗೆ ರಾಷ್ಟ್ರದ ಅಸ್ಮಿತೆಯ ಪ್ರಶ್ನೆಯೂ ಕೂಡ.
ಧನ್ಯವಾದಗಳು ನಿಲುಮೆ ಬಳಗಕ್ಕೆ..:-)
ಅತ್ಯುತ್ತಮ ಮತ್ತು ಗಂಭೀರ ಲೇಖನ