ದೆಹಲಿ ಪಾಲಿಕೆಯ ಫಲಿತಾಂಶದಲ್ಲಿ ಕರ್ನಾಟಕ ಬಿಜೆಪಿಗೇನು ಪಾಠ?
– ವಿನಾಯಕ ಹಂಪಿಹೊಳಿ
ಕಳೆದ ಹತ್ತು ವರ್ಷಗಳಿಂದ ದೆಹಲಿಯ ಮಹಾನಗರ ಪಾಲಿಕೆಯು ಬಿಜೆಪಿಯ ಕೈಯಲ್ಲಿದೆ. ಇಂದು ಸತತ ಮೂರನೇ ಬಾರಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ನಿರ್ಮಿಸಿದೆ. ಆದರೆ ಹತ್ತು ವರ್ಷಗಳ ಆಡಳಿತದ ಕುರಿತು ಜನರಿಗೇನೂ ಒಳ್ಳೆಯ ಅಭಿಪ್ರಾಯವಿಲ್ಲ. ಮಹಾನಗರ ಪಾಲಿಕೆಗೆ ಆಯ್ಕೆಯಾದ ಬಿಜೆಪಿಗರಲ್ಲಿ ಹತ್ತು ವರ್ಷ ಭ್ರಷ್ಟಾಚಾರವೂ ವ್ಯಾಪಕವಾಗಿಯೇ ನಡೆದಿತ್ತು. ಎರಡು ವರ್ಷಗಳ ಹಿಂದೆ ರಾಜ್ಯ ಚುನಾವಣೆಯಲ್ಲಿ ಆಪ್ ಪಕ್ಷವು ಪ್ರಚಂಡ ಬಹುಮತದಿಂದ ಗೆದ್ದಿತ್ತು. ೨೦೧೩ ಹಾಗೂ ೨೦೧೫ರಲ್ಲಿ ಆಪ್ ಪಕ್ಷಕ್ಕೆ ದೆಹಲಿಯ ಜನತೆ ವೋಟಿನ ಜೊತೆ ಪ್ರೀತಿಯನ್ನೂ ನೀಡಿತ್ತು.
ಇಂಥ ಜನಪ್ರಿಯ ಸರ್ಕಾರದ ಜೊತೆ ಬಿಜೆಪಿಯ ಹಿಡಿತದಲ್ಲಿದ್ದ ಮಹಾನಗರ ಪಾಲಿಕೆಯು ಜಗಳಕ್ಕಿಳಿಯಿತು. ದೆಹಲಿ ಸರ್ಕಾರವು ಪಾಲಿಕೆಗೆ ಹಣ ಬಿಡುಗಡೆ ಮಾಡುವಲ್ಲಿ ನಿಧಾನಗತಿ ತೋರಿಸುತ್ತಿದೆ ಹಾಗೂ ವೇತನ ಬಿಡುಗಡೆ ಮಾಡದೇ ತಡೆಹಿಡಿದಿದೆ ಎಂದು ಪಾಲಿಕೆ ಆರೋಪಿಸಿತು. ಹಾಗೆಯೇ, ಪಾಲಿಕೆಯ ಕೆಲಸಗಾರರು ಕೆಲಸ ನಿಲ್ಲಿಸಿ ಪ್ರತಿಭಟಿಸಿದ್ದರಿಂದ ಇಡೀ ಊರು ಸ್ವಚ್ಛತೆಯನ್ನು ಕಾಣದೇ ದುರ್ನಾತ ಹಿಡಿಯಿತು. ಪಾಲಿಕೆಯು ೧೦ ವರ್ಷಗಳಲ್ಲಿ ಜನರಿಂದ ಪ್ರಶಂಸೆಗೆ ಒಳಗಾಗುವಂತಹ ಶ್ರೇಷ್ಠ ಸಾಧನೆಯನ್ನೇನೂ ಮಾಡಿರಲಿಲ್ಲ. ಪ್ರಗತಿ ಕಾರ್ಯಗಳ ವೇಗ ಅಷ್ಟಕ್ಕಷ್ಟೇ ಇತ್ತು.
ಈ ಪರಿಸ್ಥಿತಿಯಲ್ಲಿಯೇ ಮಹಾನಗರ ಪಾಲಿಕೆಯ ಚುನಾವಣೆ ನಡೆದಾಗ ಸಹಜವಾಗಿಯೇ ಆಪ್ ಪಕ್ಷವು ಪಾಲಿಕೆಯನ್ನು ಗೆಲ್ಲಬೇಕಿತ್ತು. ಆದರೆ ಎರಡೇ ವರ್ಷಗಳಲ್ಲಿ ಆಪ್ ಪಂಚರ್ ಆದ ಟಯರಿನಂತೆ ಟುಸ್ಸಾಯಿತು. ಸತತ ಮೂರನೇ ಬಾರಿ ಬಿಜೆಪಿಯು ಮಹಾನಗರ ಪಾಲಿಕೆಯನ್ನು ಗೆದ್ದುಬಿಟ್ಟಿತು. ಪಾಲಿಕೆಯ ಕುರಿತು ಜನರಲ್ಲಿ ಅಪಾರ ಆಕ್ರೋಶವಿದ್ದರೂ, ಆಡಳಿತ ವಿರೋಧೀ ಅಲೆಯನ್ನು ಮೀರಿ ಗೆದ್ದು ಬಂದಿತು.
ಆಪ್ ಪಕ್ಷದ ಆಡಳಿತದ ಕಾರ್ಯವೈಖರಿಯ ಕುರಿತು ಜನರಲ್ಲಿ ಅಸಮಾಧಾನ ಇದ್ದೇ ಇತ್ತು ಜನರಲ್ಲಿ. ಬಿಜೆಪಿಯ ಪಾಲಿಕೆಯ ಆಡಳಿತದ ಕುರಿತೂ ಜನರಲ್ಲಿ ಅಸಮಾಧಾನವಿತ್ತು. ಇವೆರಡನ್ನೂ ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು. ಕಾಂಗ್ರೆಸ್ಸಿನಿಂದ ಆಪ್ ಪಕ್ಷಕ್ಕೆ ವಲಸೆ ಹೋದ ಮತದಾರರಲ್ಲಿ ಕೆಲವರಷ್ಟೇ ಕಾಂಗ್ರೆಸ್ಸಿಗೆ ಹಿಂದಿರುಗಿದರು. ಆದರೆ ಅಮಿತ್ ಶಾ ಮಾಡಿದ ಒಂದು ಯೋಜನೆಯು, ಪಾಲಿಕೆಯ ಕುರಿತು ಜನರಿಗಿರುವ ಸಿಟ್ಟನ್ನು ಗಣನೀಯವಾಗಿ ಕಡಿಮೆ ಮಾಡಿತು ಎನ್ನುವದನ್ನು ಬಹುತೇಕರು ಒಪ್ಪುತ್ತಾರೆ.
ಹತ್ತು ವರ್ಷಗಳಿಂದ ಪಾಲಿಕೆಗೆ ಆಯ್ಕೆಯಾಗಿ ಹೆಚ್ಚು ಕೆಲಸ ಮಾಡದ ಬಿಜೆಪಿ ನಾಯಕರಿಗೆ ಅಮಿತ್ ಶಾ ಚುನಾವಣೆಯಿಂದ ಹಿಂದೆ ಸರಿದು ಸಂಘಟನೆ ಕೆಲಸ ಮಾಡುವಂತೆ ಸೂಚಿಸಿದರು. ಹಾಗೂ ಹೊಸ ಯುವ ಮುಖಗಳೊಂದಿಗೆ ಮೋದಿಯ ಅಭಿವೃದ್ಧಿಯ ಮಾದರಿಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದರು. ಜನರ ಸಿಟ್ಟಿಗೆ ಪಾತ್ರರಾಗಿದ್ದ ಕಾರ್ಪೋರೇಟರ್ ಗಳ ಬದಲಾಗಿ ಹೊಸ ಯುವ ಮುಖಗಳು ಬಂದಿದ್ದು ಜನರ ಆಡಳಿತ ವಿರೋಧೀ ಅಲೆಯನ್ನು ಕಡಿಮೆ ಮಾಡಿತು. ಹಾಗೆಯೇ ಮೋದಿಯ ಅಭಿವೃದ್ಧಿಯ ಮಾದರಿಯ ಆಡಳಿತ ಜನರಿಗೆ ಹಿಡಿಸಿತ್ತು. ಇದೇ ಅಮಿತ್ ಶಾ ಮಾಡಿದ ಯೋಜನೆಯಾಗಿತ್ತು.
ಭ್ರಷ್ಟಾಚಾರವನ್ನು ಕಡಿಮೆ ಮಾಡುವಲ್ಲಿ ಡಿಜಿಟಲೀಕರಣದ ಪಾತ್ರವನ್ನು ಜನತೆ ಅರಿತಿದ್ದರು. ೧೦೦% ಡಿಜಿಟಲೀಕರಣವೇ ಬಿಜೆಪಿಯ ಚುನಾವಣೆಯ ಮುಖ್ಯ ಅಂಶವಾಯಿತು. ಕಾಂಗ್ರೆಸ್ಸಿನ ಕಳೆಗುಂದಿದ ವರ್ಚಸ್ಸು ಹಾಗೂ ಆಪ್ ಪಕ್ಷದ ದುರಾಡಳಿತವು ಬಿಜೆಪಿಗೆ ಸಹಾಯಕವಾದವು. ಐದು ವರ್ಷಗಳ ಕಾಲ ಪಾಲಿಕೆಯು ಕಾಂಗ್ರೆಸ್ ನೇತೃತ್ವದ ಸರ್ಕಾರದ ಕೆಳಗಿದ್ದರೂ, ಯಾವುದೇ ಜಗಳವನ್ನು ಮಾಡಿಕೊಂಡಿರಲಿಲ್ಲ. ಆದರೆ ಆಪ್ ವಿನಾಕಾರಣ ಪಾಲಿಕೆಯ ಜೊತೆ ಜಗಳ ಕಾದಿದ್ದು ಜನರಿಗೆ ಹಿಡಿಸಲಿಲ್ಲ. ರಾಜ್ಯ ಸರ್ಕಾರವು ವೇತನ ಬಿಡುಗಡೆ ಮಾಡದಿರುವದೇ ದೆಹಲಿ ಗಬ್ಬೇಳಲು ಕಾರಣ ಎನ್ನುವದನ್ನು ಜನತೆ ಅರ್ಥಮಾಡಿಕೊಂಡಿದ್ದರು. ಇವೆಲ್ಲವೂ ಬಿಜೆಪಿಯ ಗೆಲುವಿಗೆ ಕಾರಣವಾಯಿತು.
ಈ ಚುನಾವಣೆಯು ಕರ್ನಾಟಕದ ಬಿಜೆಪಿಯ ಪಾಲಿಗೆ ಬಹುಮುಖ್ಯವಾದ ಪಾಠವಾಗಿದೆ. ಆಡಳಿತ ಸರ್ಕಾರದ ವಿರುದ್ಧ ಜನರಿಗೆ ಸಿಟ್ಟಿದ್ದ ಮಾತ್ರಕ್ಕೆ ವಿರೋಧೀ ಪಕ್ಷವು ಗೆದ್ದುಬಿಡಬೇಕೆಂಬ ನಿಯಮವೇನೂ ಇಲ್ಲ. ಆಡಳಿತ ವಿರೋಧೀ ಅಲೆಗೆ ಸ್ಪಂದಿಸಿ, ಈಗಿರುವ ಆಡಳಿತಾರೂಢ ಪಕ್ಷವೇ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಖಂಡಿತ ಜನರಿಂದ ಮನ್ನಣೆ ಗಳಿಸಲಿದೆ. ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಿಗೆ ಸಿಟ್ಟಂತೂ ವಿಪರೀತವೇ ಇದೆ. ಆದರೆ ಇದೊಂದೇ ಕಾರಣಕ್ಕೆ ನಮಗೇ ಮುಂದೆ ಅಧಿಕಾರ ಸಿಗುತ್ತದೆ ಎಂದು ಈಗಿನ ಬಿಜೆಪಿ ನಾಯಕರು ಭಾವಿಸಿರುವದು ತಪ್ಪು. ಹಾಗೆಯೇ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆಸಿದ ಹಗರಣಗಳ ಕುರಿತೂ ಜನರಿಗೆ ಅಷ್ಟೇ ಸಿಟ್ಟಿದೆ.
ಆದ್ದರಿಂದ, ಯಾವೆಲ್ಲ ರಾಜ್ಯ ಬಿಜೆಪಿ ನಾಯಕರ ಕುರಿತು ಜನರಲ್ಲಿ ನಿರಾಸೆ ಹಾಗೂ ಸಿಟ್ಟು ಮಡುಗಟ್ಟಿದೆಯೋ, ಅವರನ್ನೆಲ್ಲ ನೇಪಥ್ಯಕ್ಕೆ ಸರಿಸಿ, ಸಂಘಟನಾ ಕಾರ್ಯದಲ್ಲಿ ತೊಡಗಿಸಿ, ಉತ್ಸಾಹಿ ಯುವ ಪಡೆಯೊಂದನ್ನು ಬೆಳೆಸಿ, ಮೋದಿಯ ಅಭಿವೃದ್ಧಿಯ ಮಾದರಿಯನ್ನು ಚುನಾವಣಾ ಅಂಶವನ್ನಾಗಿಸಿಕೊಂಡು ಮುಂದಿನ ವಿಧಾನಸಭೆಯ ಪರೀಕ್ಷೆಯನ್ನು ಎದುರಿಸುವದೇ ಉತ್ತಮ ವಿಧಾನ. ಆಗ ಮಾತ್ರ ಬಿಜೆಪಿಯು, ಕಾಂಗ್ರೆಸ್ ಆಡಳಿತದ ವಿರುದ್ಧ ಇರುವ ಆಡಳಿತ ವಿರೋಧೀ ಅಲೆಯನ್ನು ಸಮರ್ಥವಾಗಿ ಎದುರಿಸಬಲ್ಲದು.
ಈಗಿರುವ ಬಿಜೆಪಿ ರಾಜ್ಯನಾಯಕತ್ವಕ್ಕೆ ಕಾಂಗ್ರೆಸ್ಸಿನ ಹಗರಣಗಳನ್ನು ಪ್ರಶ್ನಿಸುವ ನೈತಿಕತೆಯಿಲ್ಲ. ಕಾರಣ ಈಗಿನ ನಾಯಕರೂ ಹಗರಣ ಮಾಡಿಕೊಂಡಿರುವವರೇ. ಅಲ್ಲದೇ, ೪ ವರ್ಷಗಳಿಂದ ಕಾಂಗ್ರೆಸ್ ನಡೆಸುತ್ತಿರುವ ಹಗರಣಗಳ ಕುರಿತು ದಿವ್ಯ ಮೌನವನ್ನು ತಳೆದವರೂ ಇವರೇ. ಹೀಗಾಗಿ ಈಗಿರುವ ರಾಜ್ಯ ನಾಯಕರನ್ನು ನೇಪಥ್ಯಕ್ಕೆ ಸರಿಸಿ, ಅವರನ್ನು ಕೇಲವ ಸಂಘಟನಾ ಕಾರ್ಯಗಳಲ್ಲಿ ತೊಡಗಿಸಿ, ಹೊಸ ಯುವಕರನ್ನು ಮುಂದೆ ತಂದು ಮೋದೀ ನೇತೃತ್ವದಲ್ಲಿ ಚುನಾವಣೆ ನಡೆಸುವಲ್ಲಿ ಅಮಿತ್ ಶಾ ಯಶಸ್ವಿಯಾದರೆ, ಬಿಜೆಪಿಗೆ ವಿಜಯ ಕಟ್ಟಿಟ್ಟ ಬುತ್ತಿ.
ಒಂದು ವೇಳೆ ಕಾಂಗ್ರೆಸ್ ಹಾಗೂ ದಳವು ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ನಿಂತರೆ, ದಳದ ನಾಯಕರು ಕಾಂಗ್ರೆಸ್ಸಿನ ಹಗರಣಗಳ ಕುರಿತು ಮೌನ ತಾಳಬೇಕಾಗುತ್ತದೆ. ಆಗ ಚುನಾವಣೆಯಲ್ಲಿ ಈಗಿರುವ ಆಡಳಿತದ ಕುರಿತು ಚರ್ಚೆಯಾಗುವ ಬದಲು ಮೋದಿ ಚುನಾವಣೆಯ ವಿಷಯವಾಗುತ್ತಾರೆ. ಆಗ ಬಿಜೆಪಿಯು ಗೆಲ್ಲಬೇಕಾದರೆ, ದಳದ ಮತಗಳನ್ನು ಆಕರ್ಷಿಸಬೇಕಾಗುತ್ತದೆ. ಅದಕ್ಕೆ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿಯೇ, ಕಳಂಕರಹಿತ ಯುವ ಪಡೆಯೊಂದು ಚುನಾವಣೆಗೆ ಸಜ್ಜಾಗಬೇಕೇ ಹೊರತು ಈಗಿನ ದುರ್ಬಲ ರಾಜ್ಯ ನಾಯಕತ್ವದಿಂದ ಸಾಧ್ಯವಿಲ್ಲ. ಒಂದು ವೇಳೆ ದಳವು ಸ್ವತಂತ್ರವಾಗಿ ಸ್ಪರ್ಧಿಸಿದರೂ ಸಹ, ಬಿಜೆಪಿ ಬಹುಮತ ಪಡೆಯಲು ಈ ಹೊಸ ನಡೆ ಬಿಜೆಪಿಗೆ ಅನಿವಾರ್ಯ.
Rayanna brigade is doing good work. State BJP will split and Eshwarappa will join Mahaghatbandhan of Congress & JDS. Secularism and socialism will thrive in Karnataka thanks to our daring and dynamic CM.
😀 And Mr.Salaam Bava becomes our CM.ಎಂತ ಸಾವಾ
ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದು ಎಲ್ಲಾ ಪ್ರಗತಿಪರ ಆಶಯ. ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ನಮ್ಮ ಹುರುಪನ್ನು ನೂರ್ಮಡಿಗೊಳಿಸಿದೆ. ನಮೋ ಸುನಾಮಿ ನಡುವೆ ಸಿದ್ದರಾಮಯ್ಯನವರು ಅಚಲವಾಗಿ ನಿಂತು ಕರ್ನಾಟಕ ರಾಜ್ಯದ ಕೀರ್ತಿಯನ್ನು ಇನ್ನಷ್ಟು ವಿಸ್ತರಿಸುವುದು ನಿಸ್ಸಂದೇಹ.