ಅಕ್ಷ ತೃತೀಯ – ವೈಶಿಷ್ಟ್ಯ
– ಮಯೂರಲಕ್ಷ್ಮೀ
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಮನುಷ್ಯನ ಆವಿಷ್ಕಾರದೊಡನೆ ಬದಲಾಗುವ ಋತು ಋತುಗಳೊಡನೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಪರಿಪೂರ್ಣತೆಯತ್ತ ಕೊಂಡೊಯ್ಯಲು ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ಹೊಸ ಸಂವತ್ಸರದೊಡನೆ ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸ, ಶುಕ್ಲ ಪಕ್ಷ, ವಸಂತ ಋತುವಿನಲ್ಲಿ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುವ “ಅಕ್ಷ ತೃತೀಯ” ಅತ್ಯಂತ ಮುಖ್ಯವಾದದು.
ಅಕ್ಷ ತೃತೀಯ ಎಂದರೇನು?
ಎಲ್ಲರೂ “ಅಕ್ಷಯ ತೃತೀಯ” ಎಂದು ಕರೆಯುವ ಇದು ವಾಸ್ತವವಾಗಿ ಅಕ್ಷ ತೃತೀಯ. ಸನಾತನ ಧರ್ಮದ ಭಾಗವಾಗಿರುವ ನಮ್ಮ ಋಷಿ ಮುನಿಗಳಿಂದ ಪರಿಗಣಿಸಲ್ಪಟ್ಟ ಭಾರತೀಯ ಕಾಲಗಣನೆ ಅತ್ಯಂತ ಪುರಾತನವಾದದ್ದು ಹಾಗೂ ವೈಜ್ಞಾನಿಕವೂ ಹೌದು.
ಸೂರ್ಯ ಉದಯಿಸುವನು ಹಾಗೂ ಅಸ್ತಮಿಸುವನು, ಇದು ನಿತ್ಯ ಕ್ರಮವಾದರೂ ವಾಸ್ತವವಾಗಿ ಭೂಮಿ ಸೂರ್ಯನ ಸುತ್ತ ಸುತ್ತುವುದರಿಂದ ಹಗಲು ಇರುಳುಗಳು ಎಂಬುದನ್ನು ಭಾರತೀಯರು ಬಹಳ ಹಿಂದೆ (ಗೆಲಲಿಯೋ ನಿರೂಪಿಸುವ ಮುನ್ನವೇ) ತೈತ್ತರೀಯ ಬ್ರಾಹ್ಮಣ, ವೇದದ ಕಾಲದಿಂದಲೂ ಬಲ್ಲವರಾಗಿದ್ದರು. ಭೂಮಿಯು ಸೂರ್ಯನ ಸುತ್ತ ಕೇವಲ ವರ್ತುಲಾಕಾರವಾಗಿ ಸುತ್ತುವುದಿಲ್ಲ, ಅದು ಅಂಡಾಕಾರವಾಗಿ (ಎಲಿಪ್ಟಿಕಲ್) ಪ್ರದಕ್ಷಿಣೆಯ ಪಥದಲ್ಲಿ ತಿರುಗುತ್ತದೆ. ಹೀಗೆ ಸುತ್ತುವ ಭೂಮಿ ಒಂದು ವರ್ತುಲದ ಕೇಂದ್ರದಿಂದ ಹಾಯುತ್ತ, (ಗಾಲಿಯ ಅಚ್ಚು ಅಥವಾ ಅಕ್ಷ ) ಪಕ್ಕದಲ್ಲಿರುವ ಮತ್ತೊಂದು ಕೇಂದ್ರದ ಬಳಿ ಬರುವಾಗ ಎರಡು ಅಕ್ಷಗಳ ನಡುವೆ ಅಂತರದಲ್ಲಿ ಸಂಚರಿಸುವಾಗ ಆಗಬಹುದಾದ ಅಪಾಯದಿಂದ ಭೂಮಿ ಸಿಡಿಯುವ, ಬೀಳುವಂತಾಗುವ ತನ್ನ ಸಮತೋಲನ ಶಕ್ತಿಯನ್ನು ಸ್ಥಿರವಾಗಿಸಿ, ಸೂರ್ಯನು ಒಂದು ಅಕ್ಷದಿಂದ ಮತ್ತೊಂದು ಅಕ್ಷವನ್ನು ಭೂಮಿ ಮುಟ್ಟಲು ಅಕ್ಷ ಬದಲಾಯಿಸಿ ನೆರವಾಗುವುದರ ಮೂಲಕ ಬದಲಾಗುವ ಪ್ರಕೃತಿಯೊಂದಿಗೆ ಮನುಷ್ಯನ ಜೀವನ ಗತಿಯನ್ನು ಬದಲಾಯಿಸಿ ಸಕಲ ಮಂಗಳ ಕಾರ್ಯಗಳನ್ನೂ ಅಕ್ಷಯಗೊಳಿಸುವುಗರಿಂದ ಇದು ಅಕ್ಷ ತೃತೀಯ (ಪಂಚಾಂಗ ನೋಡಿ).
ಆಚರಣೆಯಲ್ಲಿ, ಆಡುಭಾಷೆಯಲ್ಲಿ ಅಕ್ಷಯ ತೃತೀಯವೆನಿಸಿದೆ. ಇನ್ನು ಆಧ್ಯಾತ್ಮಿಕವಾಗಿ ವಿಶ್ಲೇಷಿದರೆ, ಭೂಮಿಯು ತನಗಾಗಬಹುದಾದ ಆಪತ್ತು ಪರಿಹರಿಸಿಕೊಳ್ಳಲು ಸೂರ್ಯ ರೂಪಿಯಾದ ಭಗವಂತನನ್ನು ಪ್ರಾರ್ಥಿಸಿ, ತನ್ನ ಚಲನೆಯನ್ನು ಅಕ್ಷಯಗೊಳಿಸಿದ ದಿನ.
ಈ ಸಮಯದ ಪ್ರಾಮುಖ್ಯತೆ ಏನು?
ಭೂಮಿಯ ಸಾರವನ್ನೆಲ್ಲಾ ಸೂರ್ಯ ಸೆಳೆದು, ಸುಡು ಬೇಸಿಗೆಯಲ್ಲಿ ಉತ್ತರಾಯಣದಲ್ಲಿ ನೀರಿಲ್ಲದಿದ್ದಾಗ ಮುಂಬರುವ ವರ್ಷ ಋತು, ಮಳೆಯ ಸೂಚನೆ, ವಸಂತ, ಗ್ರೀಷ್ಮ, ವರ್ಷ ಹಾಗೂ ಶರತ್ತು, ಹೇಮಂತ, ಶಿಶಿರ ಋತುಗಳ ನಡುವೆ ಬರುವುದು ಈ ದಿನ. ಆಧ್ಯಾತ್ಮಕವಾಗಿ ವಿಶ್ಲೇಷಿದರೆ ಒಂದು ಕೇಂದ್ರವನ್ನು ಉತ್ತರಾಯಣವೆಂದೂ ಮತ್ತೊಂದು ಕೇಂದ್ರವನ್ನು ದಕ್ಷಿಣಾಯನವೆಂದೂ ಪರಿಗಣಿಸಿದಾಗ ಪ್ರಕೃತಿಯಲ್ಲಿನ ಋತು ಪರಿವರ್ತನೆಯ ಸೂಚಕವಾಗಿರುವ ಪ್ರಾಣಿ ಪಕ್ಷಿಗಳೊಂದಿಗೆ ಬದಲಾವಣೆಯನ್ನು ಚೇತನವೆಂಬ ಬೀಜಗಳನ್ನು ಪ್ರಕೃತಿಯಲ್ಲಿ ಬಿತ್ತಿದಾಗ ಜೀವಾತ್ಮನಲ್ಲಿ ಆಗುವ ಬದಲಾವಣೆ ಅಥವಾ ಆವಿಷ್ಕಾರ ಇದರ ತಾತ್ಪರ್ಯ. ಇದು ಜಗತ್ ಸೃಷ್ಟಿಯಾದಂದಿನಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಬದಲಾವಣೆ. ಇದರ ಪ್ರಾಮುಖ್ಯತೆಯನ್ನು ಅರಿತು ಭಾರತೀಯರು ಸಾವಿರಾರು ವರ್ಷಗಳಿಂದ ಹಬ್ಬವನ್ನಾಗಿ ಆಚರಿಸುತ್ತಿದ್ದಾರೆ.
ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಕ್ಕೂ ದಿನ, ಮುಹೂರ್ತಗಳನ್ನು ನೋಡುವ ನಾವು ವರ್ಷದ ಮೂರು ಮುಖ್ಯ ದಿನಗಳಾದ ಮಹಾನವಮಿ, ವಿಜಯದಶಮಿ ಹಾಗೂ ಅಕ್ಷ ತೃತೀಯದಂದು ದಿನ, ಪಂಚಾಂಗ ನೋಡದೆ ಯಾವುದೇ ಶುಭ ಕಾರ್ಯವನ್ನೂ ಆರಂಭಿಸುತ್ತೇವೆ. ಇದಕ್ಕೆ ಕಾರಣ ಈ ದಿನ ಸೂರ್ಯನ ಮೇಲೆ ಅವನ ನೆರಳುಗಳಾದ ರಾಹು, ಕೇತು, ಯಮಗಂಡ ಮುಂತಾದ ಯಾವುದೇ ಸಮಯ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಇರುವುದಿಲ್ಲ. ಆದ್ದರಿಂದ ದಿನದ ಎಲ್ಲಾ ಸಮಯವೂ ಸುಮುಹೂರ್ತ.
ಇನ್ನು ಅಕ್ಷ ತೃತೀಯದಂದು ವೈಶಿಷ್ಟ್ಯಗಳು ಅನೇಕ. ಸೂರ್ಯದೇವನು ಭೂಮಿಯ ಚಲನೆಯನ್ನು ಅಕ್ಷಯಗೊಳಿಸಿದ ಈ ದಿನ ಮಹಾವಿಷ್ಣುವಿನ ಅವತಾರ ರೂಪಿ ಪರಶುರಾಮರ ಅವತಾರ ದಿನ.. ಅವರು ಭೂಪ್ರದಕ್ಷಿಣೆ ಮಾಡಿ ದಿಗ್ವಿಜಯಗಳಿಸಿದ ದಿನ, ಬರಡಾಗಿದ್ದ ಭೂಮಿಯನ್ನು ಉದ್ಧರಿಸಲು ತನ್ನ ತಪಃಶಕ್ತಿಯಿಂದ ಭಗೀರಥನು ಗಂಗೆಯನ್ನು ಭೂಮಿಗಿಳಿಸಿದ ದಿನ, ವನವಾಸಕಾಲದಲ್ಲಿ ಆಪತ್ತಿನಲ್ಲಿದ್ದಾಗ ಧರ್ಮರಾಯನು ಧೌಮ್ಯರಿಂದ ಸೂರ್ಯ ಮಂತ್ರ ಉಪದೇಶ ಪಡೆದು ಅಕ್ಷಯ ಪಾತ್ರೆಯನ್ನು ದ್ರೌಪದಿಗೆ ದಯಪಾಲಿಸಿದ ದಿನ.. ಭಗವಾನ್ ವೇದವ್ಯಾಸರು ತಮ್ಮ ಮಹಾಭಾರತವನ್ನು ಗಣಪತಿಗೆ ಉಕ್ತಲೇಖನ ನೀಡಿ, ಶುಭಾರಂಭಗೊಳಿಸಿ, ಮುಗಿಸಿದ ದಿನ. ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರವಾದ ಬದರಿ ಕ್ಷೇತ್ರ ಭಕ್ತರಿಗೆ ದರ್ಶನ ಭಾಗ್ಯ ನೀಡಲು ಪ್ರವೇಶ ದ್ವಾರ ಪ್ರತಿ ವರ್ಷ ಇದೇ ದಿನದಂದು ತೆರೆಯುತ್ತದೆ.
ಕೇವಲ ಹಿಂದೂಗಳಿಗಷ್ಟೇ ಅಲ್ಲ, ಜೈನ ತೀರ್ಥಂಕರ ಋಷಭದೇವ ತಮ್ಮ ಉಪವಾಸ ವ್ರತವನ್ನು ಸಂಪೂರ್ಣಗೊಳಿಸಿದ ದಿನವಾದ್ದರಿಂದ ಇದು ಜೈನಬಂಧುಗಳಿಗೂ ಅತ್ಯಂತ ಪವಿತ್ರ ದಿನ.
ಹೀಗೆ ಆಶ್ಚರ್ಯ ವೈಶಿಷ್ಟ್ಯಗಳಿಂದ ಕೂಡಿದ ಈ ದಿನದಂದು ದೇಶದೆಲ್ಲೆಡೆ ಸಡಗರದಿಂದ ಆಚರಿಸುತ್ತಾರೆ. ಲಕ್ಷ್ಮೀ ಪೂಜೆಯಿಂದ ಆರಂಭಿಸಿ, ಕುಬೇರನನ್ನು ವಂದಿಸಿ, ಚಿನ್ನ ಬೆಳ್ಳೀ ಖರೀದಿ, ಭೂಮಿ ಬಿತ್ತನೆ, ವಿದ್ಯಾರಂಭ, ಅಕ್ಷರಾಭ್ಯಾಸ, ಪುಂಸವನ, ಮದುವೆ, ಉಪನಯನ ಮುಂತಾದ ಎಲ್ಲಾ ಶುಭ ಸಮಾರಂಭಗಳೂ ನಡೆಯುತ್ತವೆ. ವೈದಿಕರಲ್ಲಿ ಈ ದಿನ ಶ್ರಾದ್ಧ ಮಾಡಿದರೆ ಮುಂದಿನ ಸಂತತಿಗೆ ಶುಭಫಲಗಳುಂಟು. ಈ ದಿನ ದಾನ ಮಾಡಿದಷ್ಟೂ ನಮ್ಮ ಆಯುರಾರೋಗ್ಯ, ಐಶ್ವರ್ಯ ವೃದ್ಧಿಸುವುದು.
ಹೀಗೆ ಅರ್ಥಪೂರ್ಣವಾದ ಅಕ್ಷ ತೃತೀಯದ ಕೇವಲ ಬಾಹ್ಯಾಚರಣೆಯಾಗದೆ ನಮ್ಮ ದಿವ್ಯ ಚೇತನ ಶಕ್ತಿಯನ್ನು ಪುನರುತ್ಥಾನಗೊಳಿಸಿ, ನಮ್ಮ ಅಭಿವೃದ್ದಿಯ ಹಾದಿಯಲ್ಲಿ ಆವಿಷ್ಕಾರಹೊಂದುವತ್ತ ಸಾಗುತ್ತಾ ಈ ಹಬ್ಬವನ್ನು ಸಾರ್ಥಕಗೊಳಿಸೋಣ.