ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 29, 2017

1

ಯೋಧನ ಮಾತುಗಳಲ್ಲಿ…

‍ನಿಲುಮೆ ಮೂಲಕ

ಸುರೇಶ್ ಮುಗ್ಬಾಳ್

ತಿಪಟೂರು

downloadಛತ್ತೀಸಘಡದಲ್ಲಿನ ನಕ್ಸಲರ ಕ್ರೌರ್ಯಕ್ಕೂ, ಹತ್ಯೆಯಾದ 25 ಯೋಧರಿಗೂ ಅದೇನು ದ್ವೇಷಗಳಿತ್ತೋ ಏನೋ ಯಾರಿಗೂ ಗೊತ್ತಿಲ್ಲ. ಆದರೆ 300 ಜನ ನಕ್ಸಲರ ಗುಂಪು ಏಕಾ-ಏಕಿ CRPF ಯೋಧರಿದ್ದಲ್ಲಿಗೆ ನುಗ್ಗಿ ಒಂದೇ ಸಮನೆ ಗುಂಡು ಹಾರಿಸಿಬಿಟ್ಟಿದ್ದರು. ಕಾರಣ; ಗುಂಡುಹಾರಿಸಿಕೊಂಡು ಸತ್ತವರೆಲ್ಲಾ ಯೋಧರಾಗಿದ್ದರು, ಸೇನಾ ಸಮವಸ್ತ್ರದಲ್ಲಿದ್ದರು ಮತ್ತು ಸರ್ಕಾರದ ಪರ ಕೆಲಸ ಮಾಡುವವರಾಗಿದ್ದರು ಅಷ್ಟೇ. ವೈಯಕ್ತಿಕ ದ್ವೇಷ ಖಂಡಿತ ಯಾರಿಗೂ ಇದ್ದಿರಲಿಕ್ಕಿಲ್ಲ.

ಸುದ್ದಿ ತಿಳಿದೊಡನೆ ನನಗೆ ಪರಿಚಯವಿದ್ದ ಯೋಧರೊಬ್ಬರಿಗೆ ಫೋನಾಯಿಸಿದೆ, ದಾಳಿ ನಡೆದ ಸ್ಥಳದಲ್ಲಿ ಅವರು ನಿಯ್ಯುಕ್ತಿಗೊಂಡಿದ್ದರೇ ಎಂಬ ಆತಂಕದಲ್ಲಿದ್ದೆ‌. ಸದ್ಯಕ್ಕೆ ಅವರು ಛತ್ತೀಸಘಡದಲ್ಲಿ ನಿಯ್ಯುಕ್ತಿಗೊಂಡಿರಲಿಲ್ಲ‌, ಬದಲಾಗಿ ರಜೆಯ ಮೇಲೆ ಕರ್ನಾಟಕದಲ್ಲೇ ಇದ್ದರು. ವಿಷಯ ಕೇಳಿ ಸ್ವಲ್ಪ ನಿರುಮ್ಮಳನಾದೆ. ಹೇಳಬೇಕೆಂದರೆ ಅವರು ಮಣಿಪುರದ ರೆಜಿಮೆಂಟ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರಾಗಿದ್ದರು. ಆ ಯೋಧರ ಪ್ರಕಾರ ಪ್ರಚೋದಿತ ಗಲಭೆಗಳು ನಡೆಯುವ ವಿಚಾರಗಳಲ್ಲಿ ಛತ್ತೀಸಘಡವೂ ಒಂದೇ, ಕಾಶ್ಮೀರವೂ ಒಂದೇ, ಮಣಿಪುರ್-ನಾಗಾಲ್ಯಾಂಡ್-ಅಸ್ಸಾಂ ಸೇರಿದ ಯಾವುದೇ ಈಶಾನ್ಯ ರಾಜ್ಯಗಳೂ ಒಂದೇ ಎಂದು ಉತ್ತರಿಸಿದರು. ಘಟನೆಯ ಕುರಿತು ಅವರೊಂದಿಗಿನ‌ ದೂರವಾಣಿ ಚರ್ಚೆ ನಡೆಯುತ್ತಲೇ ಇತ್ತು. ಮಣಿಪುರ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಉದ್ಭವಿಸುವ ಗಲಭೆಗಳ ಸಮಯದಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದರು.

(ಯೋಧರ ಜೊತೆಗಿನ ಸಂದರ್ಶನ ಪ್ರಶ್ನೆ ಮತ್ತು ಉತ್ತರ ರೂಪದಲ್ಲಿದ್ದರೂ ಅವರು ನೀಡಿದ ವಿವರಣೆಯನ್ನು ಅವರ ಮಾತಿನಲ್ಲೇ ಕೇಳಿದರೆ ಉತ್ತಮ ಎನಿಸಿ ಇಡೀ ಸಂದರ್ಶನದವನ್ನು ಅವರೊಬ್ಬರೇ ಮಾತನಾಡಿದಂತೆ ಚಿತ್ರಿಸಿದ್ದೇನೆ.)

ಸಂದರ್ಶನದ_ಭಾಗ (ಪ್ರಶ್ನೆ-ಉತ್ತರದ ಗೋಜಿಲ್ಲದೆ)

“ನಿಮಗೆ ಕಾಶ್ಮೀರದ ಪರಿಸ್ಥಿತಿ ಗೊತ್ತಿರಬೇಕು, ಅಲ್ಲಿ ಉಗ್ರವಾದ ಎಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಸಾಮಾನ್ಯ ನಾಗರೀಕರ್ಯಾರು? ಉಗ್ರರ್ಯಾರು? ಎಂಬ ಗೊಂದಲ ಶುರುವಾಗಿಬಿಡುತ್ತದೆ. ಇಡೀ ಊರಿಗೂರೇ ಉಗ್ರವಾದದ ಬೆನ್ನಿಗೆ ನಿಂತಿರುತ್ತದೆ. ಒಂದೊಮ್ಮೆ ಸೈನಿಕರು ಕಾರ್ಯಾಚರಣೆ ಹೆಸರಿನಲ್ಲಿ ಮನೆಯೊಂದರ ಬಾಗಿಲು ತಟ್ಟಿ ಒಳಹೋಗಿ ಅಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಗುರುತಿಸಿ ‘ಯಾರಿವರು?’ ಎಂದು ಪ್ರಶ್ನಿಸಿದರೆ ‘ಇವರು ನಮ್ಮ ನೆಂಟರು’ ಎಂದು ಸುಳ್ಳು ಹೇಳಿ ಬಿಡುತ್ತಾರೆ ಆ ಮನೆಯವರು. ಮುಂದೊಂದು ದಿನ ಆ ಅಪರಿಚಿತ ವ್ಯಕ್ತಿಯ ಶವ ಉಗ್ರರ ಕ್ಯಾಂಪಿನಲ್ಲಿ ಸಿಕ್ಕಾಗಲೇ ಗೊತ್ತಾಗುವುದು ಈತ ಅಂದು ಆ ಮನೆಯಲ್ಲಿದ್ದ ವ್ಯಕ್ತಿಯಲ್ಲವೇ ಎಂದು. ಇಂತಹದ್ದೇ ಪರಿಸ್ಥಿತಿ ಮಣಿಪುರದಲ್ಲಿಯೂ ಕೂಡ, militants (ಉಗ್ರರು) ಯಾರು? ನಾಗರೀಕರ್ಯಾರು? ಎಂಬ ಗೊಂದಲ ಶುರುವಾಗಿಬಿಡುತ್ತದೆ. ಊರಿಗೂರೇ militants ಗಳ ಬೆಂಬಲಕ್ಕೆ ನಿಂತಿರುತ್ತವೆ. ಊರಿಗೂರನ್ನೇ militants ಎಂದು ಕರೆದರೂ ತಪ್ಪಿಲ್ಲ. Respect and Suspect ಎಂಬ ಮಾತನ್ನು ನಮ್ಮ ರೆಜಿಮೆಂಟ್ ಗಳಲ್ಲಿ ಆಗಾಗ ಹೇಳುತ್ತಲೇ ಇರುತ್ತಾರೆ. ಆದ್ದರಿಂದ Suspect ಮಾಡುವುದಕ್ಕೆ ಮುಂಚೆ Respect ಅನಿವಾರ್ಯ.

ಮಣಿಪುರದಲ್ಲಿ ಮತ್ತು ಅಸ್ಸಾಂ ಒಳಗೊಂಡ Seven sisters of north east state ಗಳಲ್ಲಿ ನಾಗ, ಬೋಡೋ ಲ್ಯಾಂಡ್, ಗೂರ್ಖಾ ಲ್ಯಾಂಡ್ ಪ್ರತ್ಯೇಕ ರಾಷ್ಟ್ರಗಳ ಕೂಗು ಆಗಾಗ ಪ್ರಕ್ಷುಬ್ಧ ವಾತಾವರಣ ಸೃಷ್ಠಿಸುವುದು ನಿಮಗೆ ಗೊತ್ತಿರಬೇಕು. ಈ ವಿಭಜನಾ ತಂತ್ರವನ್ನು ಮಣಿಸಲು ಸರ್ಕಾರ 1958ರಲ್ಲಿ ARMED FORCE SPECIAL POWERS ACT (AFSPA) ಅನ್ನು ಜಾರಿಗೆ ತಂದು ಸೇನೆಗೆ ಹೆಚ್ಚಿನ ಬಲ ನೀಡಿತು. ಇದನ್ನು ದುರುಪಯೋಗ ಪಡಿಸಿಕೊಂಡ ಸೈನ್ಯವು ಅಲ್ಲಿನ ನಾಗರೀಕರ ಮೇಲೆ ಹಲ್ಲೆ, ನಕಲಿ ಎನ್ಕೌಂಟರ್, ಹತ್ಯೆ, ಅತ್ಯಾಚಾರಗಳಂತ ನೀಚ ಕೆಲಸಗಳನ್ನು ಮಾಡಿತು ಎಂದು ಆರೋಪಿಸುವ ಅಲ್ಲಿನ ಜನರಿಗೆ ಈಗಲೂ CRPF ಹಾಗೂ BSF ಯೋಧರನ್ನು ಕಂಡರೆ ಕೊಲ್ಲುವಷ್ಟು ಕೋಪವಿದೆ. ಇರೋಮ್ ಶರ್ಮಿಳ ರವರು ಕೂಡ AFSP Act, 1958 ವಿರುದ್ಧವೇ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು.

ಮಣಿಪುರದ ಸಾಮಾಜಿಕ ಜೀವನದ ಬಗ್ಗೆ ಹೇಳಬೇಕೆಂದರೆ ಇಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರೇ ದುಡಿಯುತ್ತಾರೆ‌. ಅಲ್ಲಿನ ಬಹುತೇಕ ಸ್ಥಳಗಳು ಹಳ್ಳಿಗಳಂತಿದ್ದರೂ ವ್ಯಕ್ತಿಗಳು ಮಾತ್ರ ಹೈ-ಫೈ ಜೀವನ ನಡೆಸುತ್ತಿರುತ್ತಾರೆ. ಅಲ್ಲಿನ ಮಹಿಳೆ ಕೃಷಿ ಕೆಲಸಕ್ಕೆ ಹೊರಟರೂ ತುಟಿ ಬಣ್ಣವಿಲ್ಲದೆ ಹೊರ ಹೋಗಲಾರಳು ಮತ್ತು ಒಬ್ಬ ಪುರುಷ ಹೊರ ಹೋಗಬೇಕೆಂದರೆ ಸ್ವಂತ ಕಾರಿನಲ್ಲೇ ಹೋಗುವುದು (ಬಹಪಾಲು). ನಿಮಗೆ ಆಶ್ಚರ್ಯವಾಗಬಹುದು ದುಡಿಯದೆ ಅದ್ಹೇಗೆ ಕಾರಿನಲ್ಲಿ ಓಡಾಡುತ್ತಾರೆ ಎಂದು. ಹೌದು, ಅಲ್ಲಿನ ಪುರುಷರು ತಮ್ಮದೇ militant ಗುಂಪುಗಳಲ್ಲಿ ಸಕ್ರಿಯರಾಗಿರುತ್ತಾರೆ. ಪ್ರತಿದಿನವೂ ಸಭೆಗಳನ್ನು ನಡೆಸುತ್ತಾರೆ, ಈ ದಿನ ಎಲ್ಲಿ? ಎಷ್ಟು ಗಂಟೆಗೆ ಗಲಭೆ ಶುರು ಮಾಡಬೇಕೆಂದು ಹೊಂಚು ಹಾಕುತ್ತಿರುತ್ತಾರೆ. ಆ ಗುಂಪುಗಳು ನಡೆಸುವ ಸಭೆಗಳಲ್ಲಿ ಸಾಕಷ್ಟು ಹಣವನ್ನು ಬಿಟ್ಟಿಯಾಗಿ ಹಂಚಲಾಗುತ್ತದೆ‌. ಈಗ ಗೊತ್ತಾಯಿತಲ್ಲವೇ ಹಣದ ಮೂಲ ಯಾವುದೆಂದು?

ಇಂತಹ militants ಗುಂಪುಗಳು ಮಣಿಪುರದ ತುಂಬೆಲ್ಲಾ ಸಕ್ರಿಯವಾಗಿವೆ. ಕನಿಷ್ಟವೆಂದರೂ 35 militants ಗುಂಪುಗಳು ಅಲ್ಲಿನ ನಾಗರೀಕರನ್ನು ತಮ್ಮತ್ತ ಸೆಳೆಯಲು ಆಮಿಷಕ್ಕೊಳಪಡಿಸುತ್ತವೆ‌. ನಿಮಗೆ ಆಶ್ಚರ್ಯವಾಗಬಹುದು; ಒಂದೊಂದು militant ಗುಂಪುಗಳಿಗೂ ಒಬ್ಬೊಬ್ಬ ನಾಯಕನಿರುತ್ತಾನೆ.. ಆ ನಾಯಕನ ಜನುಮ ದಿನಾಚರಣೆಯನ್ನು ಸೈನಿಕರನ್ನು ಕೊಲ್ಲುವ ಮೂಲಕ ಆಚರಿಸಬೇಕೆಂಬ ದೌಲತ್ತು ತೋರುತ್ತಾರೆ..!

ನಾವು ಮಣಿಪುರಕ್ಕೆ ಮೊದಮೊದಲು ಕಾಲಿಟ್ಟಾಗ ಮಣಿಪುರದ ಶಾಲಾ ಮಕ್ಕಳು ನಮ್ಮನ್ನು ನೋಡಿದಾಗಲೆಲ್ಲಾ Good Morning uncle ಎಂದು ಶುಭ ಕೋರುತ್ತಿದ್ದವು. ಮಧ್ಯಾಹ್ನವೂ Good morning, ಸಂಜೆಯೂ Good morning. ಆ ಮಕ್ಕಳಿಗೆ ಈಗಿನಿಂದಲೇ ದೇಶ ಮತ್ತು ಸೈನಿಕರ ಬಗ್ಗೆ ಅಭಿಮಾನ ಮೂಡಿಸುವ ಕೆಲಸಗಳಾಗಲಿಲ್ಲವೆಂದರೆ ಮುಂದೊಂದು ದಿನ militants ಗುಂಪುಗಳಿಗೆ ಸೇರಿಬಿಡುತ್ತವಲ್ಲಾ ಎಂಬ ಕೊರಗು ಆಗಾಗ ನಮ್ಮನ್ನು ಕಾಡುತ್ತಲೇ ಇರುತ್ತವೆ.

ನಮ್ಮ ಪರಿಸ್ಥಿತಿ ಎಷ್ಟರ ಮಟ್ಟಿಗೆ ಭಯದಿಂದ ಕೂಡಿರುತ್ತದೆಂದರೆ? ಇಲ್ಲ! ಭಯ ಎಂಬ ಪದ ಸರಿಯಲ್ಲ, ಆತಂಕ ಎಂದು ಕರೆಯುತ್ತೇನೆ. ಎಷ್ಟು ಆತಂಕದಿಂದ ಕೂಡಿರುತ್ತದೆಂದರೆ, ನಮ್ಮ ದಿನ ನಿತ್ಯದ ಸಾಮಾಗ್ರಿಗಳನ್ನು ಕೊಳ್ಳಲು ನಮ್ಮ ನಮ್ಮ ರೆಜಿಮೆಂಟ್ ಗಳನ್ನು ಬಿಟ್ಟು ಹೊರ ಹೋಗುವ ಸಂದರ್ಭ ಬಂದರೆ ಒಬ್ಬೊಬ್ಬರೇ ಓಡಾಡುವುದು ಅಸಾಧ್ಯ. ಒಬ್ಬೊಬ್ಬರನ್ನೇ ಎಲ್ಲೂ ಹೊರಗೆ ಕಳುಹಿಸುವುದಿಲ್ಲ. ಒಂದು ವೇಳೆ ಹೋಗಲೇಬೇಕಾದ ಅನಿವಾರ್ಯತೆ ಎದುರಾದರೆ ಒಂದಷ್ಟು ಮಂದಿ ಸೈನಿಕರು ಜೊತೆ-ಜೊತೆಯಾಗಿ ಹೋಗಬೇಕು.. ಅದೂ ಅತ್ಯಾಧುನಿಕ ಬಂದೂಕುಗಳನ್ನು ಹೆಗಲ ಮೇಲೇರಿಸುಕೊಂಡು. ಒಂದು ವೇಳೆ ಒಬ್ಬೊಬ್ಬರೇ ಸಂಚರಿಸುವ ವಿಷಯ ಅಲ್ಲಿನ ನಾಗರೀಕರಿಗೆ ತಿಳಿದರೆ, ಖಂಡಿತ ಈ ಸುದ್ದಿಯನ್ನು ತಮಗೆ ಗೊತ್ತಿರುವ militent ಗುಂಪುಗಳಿಗೆ ತಿಳಿಸಿಬಿಡುತ್ತಾರೆ‌. ಅಲ್ಲಿಗೆ ಆ ಸೈನಿಕನಿಗೆ ಜೀವ ಹಾನಿ ಸಂಭವಿಸುವ ಎಲ್ಲಾ ಅಪಾಯಗಳೂ ಎದುರಾಗುತ್ತವೆ‌.

ದಟ್ಟ ಕಾಡುಗಳಲ್ಲಿ ಇಂತಹ militant ಗುಂಪುಗಳು ಬಹಳಷ್ಟಿರುತ್ತವೆ. ಕಾಡುಗಳಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭ ಇದ್ದಲ್ಲಿ ಸೈನಿಕರು ಈ ಕಾಡಿನೊಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ‌. ಈ ವಿಷಯ ಅಲ್ಲಿನ ನಾಗರೀಕರ ಮೂಲಕ militants ಗಳಿಗೆ ತಿಳಿದು ಒಂದೇ ಬಾರಿಗೆ 400-500 ಜನ militants ಗಳು ಸೈನಿಕರ ಮೇಲೆ ಬಂದೂಕು ದಾಳಿ ನಡೆಸಲು ಶುರುಮಾಡುತ್ತಾರೆ. ಇತ್ತ ಸೈನಿಕರೂ ಪ್ರತಿದಾಳಿ ನಡೆಸಲು ಶುರು ಮಾಡುತ್ತಾರೆ. ಆದರೆ ದುರಾದೃಷ್ಟವಶಾತ್ ನಮ್ಮದೇ ಸೈನಿಕರ ಗುಂಡಿಗೆ ಕೆಲವು ಸೈನಿಕರು ಬಲಿಯಾಗುತ್ತಾರೆ. Militants ಗಳಿಗೆ ಇಟ್ಟ ಗುರಿ ಒಮ್ಮೊಮ್ಮೆ ನಮ್ಮದೇ ಸೈನಿಕರ ಎದೆಗೆ ನಾಟಿಬಿಡುತ್ತವೆ.

ಮಣಿಪುರ ಜನಕ್ಕೆ ಅಭಿವೃದ್ಧಿಯ ಬಗ್ಗೆ ಎಷ್ಟು ನಿರ್ಲಕ್ಷಗಳಿವೆಯೆಂದರೇ! ಒಂದು ವೇಳೆ ಸರ್ಕಾರವೇನಾದರೂ ದೊಡ್ಡ ಮನಸ್ಸು ಮಾಡಿ ಅಭಿವೃದ್ಧಿ ಕೆಲಸಗಳಿಗೆ ಕೈ ಹಾಕಿದರೆ ಅದನ್ನು ಹಾಳು ಮಾಡಲು ಅಲ್ಲಿನ ನಾಗರೀಕರೇ ಕಾಯುತ್ತಿರುತ್ತಾರೆ‌. ಸರ್ಕಾರ ಒಂದು ರಸ್ತೆಯನ್ನು ಸರಿ ಮಾಡಬೇಕೆಂದು ಟೆಂಡರ್ ಕರೆಯಿತೆಂದಿಟ್ಟುಕೊಳ್ಳಿ, ಖಂಡಿತ ಯಾವ ವ್ಯಕ್ತಿಯೂ ಟೆಂಡರ್ ಪಡೆಯಲು ಮುಂದೆ ಬರಲಾರ. ಒಂದು ವೇಳೆ ಯಾವನಾದರೂ ಮುಂದೆ ಬಂದನೆಂದುಕೊಳ್ಳಿ… ಎಲ್ಲಾ militants ಗುಂಪುಗಳು ಅವನ ಮೇಲೆ ಮುಗಿಬೀಳುತ್ತವೆ‌. ದುಡ್ಡಿಗಾಗಿ ಬೇಡಿಕೆ ಇಡುತ್ತವೆ‌. ಇಂತಹ ಅಪಾಯವೇ ಬೇಡವೆಂದು ಯಾವ ವ್ಯಕ್ತಿಯೂ ಟೆಂಡರ್ ಪಡೆಯಲು ಮುಂದೆ ಬರುವುದಿಲ್ಲ. ಸರ್ಕಾರವೇ ಮುಂದೆ ನಿಂತು ರಸ್ತೆ ಹಾಕಿಸುವ ಕೆಲಸ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ CRPF ಯೋಧರನ್ನು ಆ ರಸ್ತೆ ಹಾಕುವ ಜಾಗದಲ್ಲಿ ಭದ್ರತೆಗೆ ನಿಯೋಜಿಸಲಾಗುತ್ತದೆ.

ನಾವೆಲ್ಲಾ ಒಂದೊಂದು ಗುಂಪುಗಳನ್ನು ಕಟ್ಟಿಕೊಂಡು IED (Improvised explosive device) ತಪಾಸಣೆಗೆಂದು ಹೋಗುತ್ತಿದ್ದೆವು. ಮೊದಲೆಲ್ಲಾ ಬಾಂಬ್ ಗಳೆಂದು ಕರೆಯುತ್ತಿದ್ದರು ಈಗ IED ಗಳೆಂದು ಕರೆಯುತ್ತಾರೆ. IED ಯಾವ ರೂಪದಲ್ಲಿ ಬೇಕಾದರೂ ಇರಬಹುದು, ಪತ್ತೆ ಮಾಡುವುದು ಬಹಳ ಕಷ್ಟದ ಕೆಲಸ. IED ಗಳು ಸಿಡಿಯುವಂತೆ ವಿಚಿತ್ರ ಕೆಮಿಕಲ್ ಗಳನ್ನು ಒಂದಕ್ಕೊಂದು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಗಲಭೆ ಸಂದರ್ಭದಲ್ಲಿ ಇಂತಹ IED ಗಳ ಬಳಕೆ ಹೆಚ್ಚಿರುತ್ತವೆ. ನಾವು ಮಣಿಪುರಕ್ಕೆ ಹೋಗುವುದಕ್ಕೂ ಮುಂಚೆ IED ಬಳಸಿ ಸೇನಾ ಲಾರಿಯನ್ನು ಉಡಾಯಿಸಿದ್ದರಂತೆ militants ಗಳು. ಸರ್ಕಾರವು ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಮುಂದಾಗಿದ್ದಾಗ ರಸ್ತೆಗೆ ಅಡ್ಡಲಾಗಿದ್ದ ಸೇತುವೆಯನ್ನೇ ಉಡಾಯಿಸಿದ್ದರಂತೆ militants ಗಳು.

ಕೆಲವೇ ಕೆಲವು ನಾಗರೀಕರು ಸೈನ್ಯದೊಂದಿಗೆ ಒಳ್ಳೆಯ ಸಂಬಂಧ ಹೊಂದಿರುತ್ತಾರೆ. ಮತ್ತೆ ಕೆಲವರು ಯಾವ ಉಸಾಬರಿಯೂ ಬೇಡವೆಂದು ದಕ್ಷಿಣ ರಾಜ್ಯಗಳಿಗೆ ವಲಸೆ ಹೋಗಿಬಿಡುತ್ತಾರೆ. ಕಡಿಮೆ ಸಂಬಳವಾದರೂ ಸರಿ ನಿರ್ಭೀತಿಯ ಬದುಕು ಕಟ್ಟಿಕೊಳ್ಳಲು ಬಯಸುತ್ತಾರೆ. ಇದೇ ಕಾರಣಕ್ಕೆ ಬೆಂಗಳೂರಿನಂತಹ ನಗರದಲ್ಲಿ ಈ ಭಾಗದ ಜನರು ಹೆಚ್ಚಿರುವುದು. ಒಂದಷ್ಟು ಜನ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವವರೂ ಇದ್ದಾರೆ. ಮೊದ ಮೊದಲು ಆಶ್ಚರ್ಯವೆನಿಸುತ್ತಿತ್ತು.

ಸರ್ಕಾರ ಮತ್ತು ಈ ಉಗ್ರರ ನಡುವಿನ ಕಲಹದಿಂದ ಅಮಾಯಕರು ಸಾವಿಗೀಡಾಗುತ್ತಾರೆ, ಇಲ್ಲಿ ಅಮಾಯಕರೆಂದರೆ ಬೇರೆ ಯಾರೂ ಅಲ್ಲ ಸೈನಿಕರೇ. ಛತ್ತಿಸಘಡದಲ್ಲಿಯೂ ಅಷ್ಟೇ, ಮೊದಲೇ ನಕ್ಸಲ್ ಪೀಡಿತ ರಾಜ್ಯವದು. ಬುಡಕಟ್ಟು ಜನರೇ ಹೆಚ್ಚಿರುವ ಆ ರಾಜ್ಯದಲ್ಲಿ ಸರ್ಕಾರದ ಒಕ್ಕಲೆಬ್ಬಿಸುವಿಕೆಯಿಂದಾಗಿ ಬಹಳಷ್ಟು ಮಂದಿ ನಕ್ಸಲೈಟ್ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಇಂತಹ ನಕ್ಸಲೈಟ್ ಗಳನ್ನು ನಿಯಂತ್ರಿಸಲೆಂದೇ CRPF ಮತ್ತು ಕೋಬ್ರಾ ಕಮಾಂಡೋಗಳನ್ನು ನಿಯೋಜಿಸುತ್ತಿದೆ ಸರ್ಕಾರ. ಯೋಧರು ನಕ್ಸಲೈಟ್ ಗಳನ್ನು ಕೊಲ್ಲುತ್ತಾರೆ, ಪ್ರತೀಕಾರವೆಂಬಂತೆ ನಕ್ಸಲರು ಯೋಧರನ್ನು ಕೊಲ್ಲುತ್ತಾರೆ. ಕೊಲ್ಲುವ ಪರಂಪರೆ ಮುಂದುವರೆಯುತ್ತಲೇ ಇರುತ್ತದೆ. ಈಗ ನಕ್ಸಲೈಟ್ಸ್ ಯೋಧರನ್ನು ಕೊಂದಿದ್ದಾರಲ್ಲವೇ? ಮುಂದೆ ನೋಡಿ ಆ ಸರಧಿ ಯೋಧರದ್ದಾಗಿರುತ್ತದೆ. ಮತ್ತೊಂದಷ್ಟು ಹೆಣಗಳ ರಾಶಿ ಬೀಳುತ್ತವೆ. ಹೀಗೇ ಮುಂದುವರೆಯುತ್ತಲೇ ಇರುತ್ತದೆ.. ಆದರೆ ಸಮಸ್ಯೆಗಳಿಗೆ ಪರಿಹಾರ ಮಾತ್ರ ಯಾರಿಗೂ ಹೊಳೆಯುವುದಿಲ್ಲ.

*****************

ಕಾಶ್ಮೀರದ ಸೈನಿಕರೇ ಇರಲಿ, ಗಡಿ ಕಾಯುವ ಗಡಿ ಭದ್ರತಾ ಪಡೆಯೇ ಇರಲಿ, ಅಥವಾ CRPF ತುಕಡಿಗಳೇ ಇರಲಿ ಎಲ್ಲರೂ ದೇಶಕ್ಕಾಗಿಯೇ ದುಡಿಯುತ್ತಿರುತ್ತಾರೆ. ಆದರೆ ಅತೀ ಎನಿಸುವ ಗಲಭೆ, ನಕ್ಸಲ್ ಚಟುವಟಿಕೆಗಳು, ಉಗ್ರರ ದಾಳಿಗಳು ದೇಶವನ್ನು ನಾಶಗೊಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತವೆ. ಸೈನ್ಯದಲ್ಲಿರುವವರು ಎಷ್ಟೇ ಮುಂಜಾಗ್ರತ ಕ್ರಮ ವಹಿಸಿದರೂ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಪಠಾಣ್ ಕೋಟ್ ಘಟನೆ, ಕಾಶ್ಮೀರದ ಘಟನೆಗಳು ಹಾಗೂ ಮೊನ್ನೆ ನಡೆದ ನಕ್ಸಲೈಟ್ ದಾಳಿಯ ಘಟನೆಗಳು ಇದಕ್ಕೆ ಉದಾಹರಣೆಗಳಷ್ಟೆ. ಒಂದು ವೇಳೆ ಸೈನಿಕರೆಲ್ಲಾ ತಮ್ಮ ಜೀವಕ್ಕಂಜಿ ಸೈನ್ಯದಿಂದ ಓಡಿಬಂದರೇ? ಅಖಂಡ ಭಾರತ ಉಳಿಯುತ್ತದೆಯೇ?

ಸಾವು ಯಾವಾಗಬೇಕಾದರೂ ಬಂದಪ್ಪಿಕೊಳ್ಳಬಹುದು ಎಂಬ ಅರಿವಿದ್ದರೂ ದೇಶಕ್ಕಾಗಿ ದುಡಿಯುವ ಸೈನಿಕರು ನಮ್ಮ ನಿಮ್ಮೆಲ್ಲರ ಹೀರೋಗಳೇ ಸರಿ. ಅಂದು ಸ್ವತಂತ್ರ್ಯ ಹೋರಾಟಗಾರರಿದ್ದರು, ಇಂದು ನಮ್ಮ ಸ್ವಾತಂತ್ರ್ಯವನ್ನು ಉಳಿಸಲು ಸೈನಿಕರು ಹೋರಾಡುತ್ತಿದ್ದಾರೆ.

1 ಟಿಪ್ಪಣಿ Post a comment
  1. ಸುರೇಶ್ ಮುಗ್ಬಾಳ್
    ಏಪ್ರಿಲ್ 29 2017

    ಧನ್ಯವಾದಗಳು ನಿಲುಮೆ ಬಳಗಕ್ಕೆ..-)

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments