ವಿಷಯದ ವಿವರಗಳಿಗೆ ದಾಟಿರಿ

ಮೇ 1, 2017

4

ಯಾರು ಹಿತವರು ಯಡ್ಯೂರಪ್ಪನವರಿಗೆ..?

‍ನಿಲುಮೆ ಮೂಲಕ

ರಾಕೇಶ್ ಶೆಟ್ಟಿ

“ಕೊಟ್ಟ ಕುದುರೆಯನೇರಲರಿಯದೆ…” ವಚನದ ಸಾಲುಗಳು ಕರ್ನಾಟಕ ಬಿಜೆಪಿಯ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಎಪಿಎಂಸಿ,ಪಾಲಿಕೆ ಚುನಾವಣೆಗಳೆನ್ನದೇ ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಗೆದ್ದು ಬರುತ್ತಿರುವ ಕಮಲ ಪಕ್ಷದ ಸುವರ್ಣ ಸಮಯದಲ್ಲೂ, ರಾಜ್ಯ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಮಕಾಡೆ ಮಲಗಿ ಕಿರಗೂರಿನ ಗಯ್ಯಾಳಿಗಳಂತೆ ಕಾದಾಟಕ್ಕಿಳಿದಿದ್ದಾರೆ. ನಿನ್ನೆಯ ಸಂಘಟನೆ ಉಳಿಸಿ ಹೆಸರಿನ ಸಭೆ, ಅದಕ್ಕೆ ಪ್ರತಿಯಾಗಿ ನಡೆದ ಬೆಂಗಳೂರಿನ ಶಾಸಕ, ಸಂಸದರ ಪತ್ರಿಕಾಗೋಷ್ಟಿ, ನಾಯಕರೆನಿಸಿಕೊಂಡವರ ಏಕವಚನ ಪ್ರಯೋಗ, ಆರೋಪ-ಪ್ರತ್ಯಾರೋಪಗಳಿಂದಾಗಿ ನಿನ್ನೆ ಎಷ್ಟು ಮೆಗಾಧಾರವಾಹಿಗಳ ಟಿಆರ್ಪಿ ಕಡಿಮೆಯಾಯಿತೋ!

ದೇಶದ ಉಳಿದ ರಾಜ್ಯಗಳ ಬಿಜೆಪಿ, ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣ ಮತ್ತು ಯುವ ಮನಸ್ಸುಗಳ ಆಲೋಚನಾ ಶಕ್ತಿಯಿಂದ ಮುಂದುವರೆಯುತ್ತಿದ್ದರೆ, ರಾಜ್ಯ ಬಿಜೆಪಿ ಮಾತ್ರ ಪುರಾತನ  ಜಾತಿ ಮತ್ತು ಓಲೈಕೆ ರಾಜಕಾರಣವನ್ನೇ ನೆಚ್ಚಿಕೊಂಡಿದೆ.ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮುಖಂಡರೊಬ್ಬರು, ಕುರುಬರಿಗಾಗಿ ಈಶ್ವರಪ್ಪ ಏನು ಮಾಡಿದ್ದಾರೆ? ಯಡ್ಯೂರಪ್ಪನವರೇ ಕನಕ ಜಯಂತಿ ಆರಂಭಿಸಿದ್ದು ಎಂದು ಹೇಳುತ್ತಿರುವುದನ್ನು ಕೇಳಿದೆ. ಆಗಾಗ್ಗೆ ಬರುವ ಜಯಂತಿಗಳ ನೆಪದಲ್ಲಿ ರಜೆಗಳನ್ನು ಕೊಟ್ಟು ಸರ್ಕಾರಿ ಯಂತ್ರವನ್ನು ನಿಲ್ಲಿಸುವ ಪರಿಪಾಠಗಳು ಕೊನೆಯಾಗಬೇಕೆಂಬ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತವರು ‘ಜಯಂತಿ ರಜೆ’ಗಳನ್ನೇ ಕಿತ್ತೊಗೆಯುವಂತಹ ಕೆಲಸ ಮಾಡುತ್ತಿರುವಾಗ, ರಾಜ್ಯ ಬಿಜೆಪಿಯ ನಾಯಕರ ಮನಸ್ಥಿತಿ ಇನ್ನೂ ಜಯಂತಿ ರಾಜಕಾರಣದಲ್ಲೇ ಇರುವುದು ಇವರ ಯೋಚನಾ ಲಹರಿ ಯಾವ ಕಾಲದಲ್ಲಿದೆ ಎಂದು ಸೂಚಿಸುತ್ತದೆ. ಹಾಗೆ ನೋಡಿದರೇ ಕಾಂಗ್ರೆಸ್ಸಿನ ‘ಭಾಗ್ಯ’ ರಾಜಕಾರಣಕ್ಕೂ, ಬಿಜೆಪಿಯ ‘ಜಯಂತಿ’ ರಾಜಕಾರಣಕ್ಕೂ ಯಾವ ವ್ಯತ್ಯಾಸವಿದೆ ? ಇವೆಲ್ಲವನ್ನೂ ಪ್ರಶ್ನಿಸಬೇಕಾದ ಪತ್ರಿಕೆಗಳು ಮಾಡುತ್ತಿರುವುದಾದರೂ ಏನು?

ಶುಕ್ರವಾರ ವಿಶ್ವವಾಣಿಯ ರಾಘವೇಂದ್ರ ಭಟ್ಟರ ‘ಮಂತ್ರಾಲಯ’ ಅಂಕಣದಲ್ಲಿ, ಬಿಎಸ್ವೈ ಪದಚ್ಯುತಿಯೇ ಸಂತೋಷ್ ಜಿಯವರ ಹೋರಾಟದ ಗುರಿ ಎಂಬ ತಲೆಬರಹದ ಲೇಖನದಲ್ಲಿ, ರಾಜ್ಯ ಬಿಜೆಪಿಯೊಳಗಿನ ಎಲ್ಲಾ ಗೊಂದಲಕ್ಕೂ ಈಶ್ವರಪ್ಪ ಅಂಡ್ ಟೀಂ ಕಾರಣ ಎಂಬಂತೆ ಬರೆಯುತ್ತಾರೆ. ಬಿಎಸ್ವೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸುವುದೇ ಈ ಬಂಡಾಯದ ಉದ್ದೇಶ ಎನ್ನುತ್ತಾರೆ. ಈ ಕಾರಣಕ್ಕಾಗಿಯೇ ಸಂಘಟನೆ ಉಳಿಸಿ ಹೆಸರಿನಲ್ಲಿ ಸಮಾವೇಶ ಆಯೋಜಿಸಿರುವ ಸಂತೋಷ್ ಜಿ ಬಣ, ಏಕ ಪಕ್ಷೀಯ ನಿರ್ಣಯ ತೆಗೆದುಕೊಳ್ಳುವ ಯಡಿಯೂರಪ್ಪನವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಈಶ್ವರಪ್ಪ ಅವರಿಗೆ ಪಟ್ಟ ಕಟ್ಟುವ ಧ್ವನಿ ಮೊಳಗಿಸಿದೆ. ಯಡಿಯೂರಪ್ಪ ಪದಚ್ಯುತಿಗೆ ದೆಹಲಿ ಮಟ್ಟದಲ್ಲಿ ಈಗಾಗಲೇ ಕೆಲ ಪ್ರಯತ್ನ ನಡೆಸಿರುವ ಈ ಬಣ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷಗಿರಿ ಕೊಟ್ಟು ಆಟಕ್ಕುಂಟು ಲೆಕ್ಕಿಕ್ಕಿಲ್ಲ ಎಂಬ ಸ್ಥಿತಿ ತಂದಿಡುವ ಯೋಜನೆ ರೂಪಿಸಿದೆ ಎನ್ನುತ್ತಾರೆ. ಒಂದು ವೇಳೆ ರಾಘವೇಂದ್ರ ಭಟ್ಟರು ಬರೆದಂತೆ, ಸಂತೋಷ್ ಜಿಯವರು ಬಿಎಸ್ವೈ ಅವರನ್ನು ಪದಚ್ಯುತಿಗೊಳಿಸುವ ಉಮೇದಿಯಲ್ಲೇ ಇದ್ದವರಾಗಿದ್ದರೇ, ಯಡೂರಪ್ಪನವರನ್ನು ವಾಪಸ್ ಬರದಂತೆ ತಡೆಯಬಹುದಿತ್ತಲ್ಲ. ಅಷ್ಟು ಶಕ್ತಿ ಅವರ ಬಳಿ ಇರಲಿಲ್ಲವೆನಿಸುತ್ತದೆಯೇ ? ವರ್ಷದ ಹಿಂದೆ ಯುಗಾದಿಯ ಸಂದರ್ಭದಲ್ಲಿ ಯಡ್ಯೂರಪ್ಪನವರನ್ನು ಅಧ್ಯಕ್ಷರನ್ನಾಗಿ ಮತ್ತು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿದಾಗ, ಈಗ “ಸಂಘಟನೆ ಉಳಿಸಿ” ಎನ್ನುತ್ತಿದ್ದವರೂ ಸಂಭ್ರಮಿಸಿದ್ದರು. ವರ್ಷದ ಹಿಂದೆ ಸಂಭ್ರಮಿಸಿದವರು ಈಗ ತೊಡೆ ತಟ್ಟುತ್ತಿದ್ದಾರೆಂದರೇ, ಅದಕ್ಕೇನು ಕಾರಣವೆಂದು ರಾಜಕೀಯ ಪತ್ರಕರ್ತರಿಗೆ ತಿಳಿದಿರುವುದಿಲ್ಲವೇ?

ಅಧ್ಯಕ್ಷರಾಗಿ ಬಂದ ನಂತರ ಯಡ್ಯೂರಪ್ಪನವರು ಮಾಡಿರುವುದೇನು ? ಯಡ್ಯೂರಪ್ಪನವರ ಅಧಿಕಾರ ಹೋದ ಕ್ಷಣದಿಂದ ಜಗನ್ನಾಥ ಭವನದ ಕಡೆಗೆ ತಲೆ ಹಾಕದ ಹಳೇ ಭಟ್ಟಂಗಿಗಳನ್ನೆಲ್ಲ ಹತ್ತಿರ ಬಿಟ್ಟುಕೊಂಡು ಪಕ್ಷ ಕಟ್ಟುವ ನೆಪದಲ್ಲಿ ತಮ್ಮ ಕೋಟೆಯನ್ನು ಭದ್ರ ಮಾಡಿಕೊಳ್ಳುತ್ತ, ಮುಂದೆ ಮುಖ್ಯಮಂತ್ರಿಯಾದ ನಂತರವೋ ಅಥವಾ ಇನ್ನೇನಾದರೂ ಆಗಬಾರದ್ದು ಆದರೆ, ಇಡೀ ಪಕ್ಷವೇ ಸ್ಥಬ್ದ ಮಾಡಿಬಿಡುವಂತಹ ಆಯಕಟ್ಟಿನ ಹುದ್ದೆಗಳನ್ನೆಲ್ಲ ಆಕ್ರಮಿಸಿಕೊಳ್ಳುತ್ತಿದ್ದಾರೆ. ಕೆಜೆಪಿಯಲ್ಲಿದ್ದವರನ್ನೆಲ್ಲ ಕರೆತಂದು ಕೂರಿಸಿಕೊಂಡು, ಬಿಜೆಪಿಯಲ್ಲಿದ್ದವರನ್ನು ಖಾಲಿ ಕೈ ಮಾಡಿ ಕೂರಿಸಲಾಗಿದೆ ಎನ್ನುವುದು ಪಕ್ಷ ಮತ್ತು ಸಿದ್ಧಾಂತ ನಿಷ್ಟ ಕಾರ್ಯಕರ್ತರ ಆಕ್ರೋಶದ ಮೂಲ. ಇವರು ಪಕ್ಷ ಬಿಟ್ಟು ಹೋದ ಸಂದರ್ಭದಲ್ಲಿ ಪಕ್ಷ ನಿಷ್ಟರಾಗಿ ದುಡಿದಂತಹ ನಾಯಕರು, ಕಾರ್ಯಕರ್ತರನ್ನು ಭಟ್ಟಂಗಿ ಪಡೆ ಜಗನ್ನಾಥ ಭವನದ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಂತೂ ಯಡ್ಯೂರಪ್ಪನವರ ಬೆಂಬಲಿಗ ಪಡೆಯವರು ಕೆಳಮಟ್ಟದ ವೈಯುಕ್ತಿಕ ದಾಳಿಗಿಳಿದಿದ್ದಾರೆ. ಉಪಚುನಾವಣೆಯ ಫಲಿತಾಂಶ ಹೊರಬಂದ ಸಂದರ್ಭದಲ್ಲಿ, ರಾಜ್ಯ ಬಿಜೆಪಿಗೆ ಸಂತೋಷ್ ಜಿಯವಂತರ ಸ್ಟಾಟರ್ಜಿಯ ಅಗತ್ಯವಿದೆ ಎಂದು ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆಯವರ ಪ್ರತಿಕೃತಿ ದಹಿಸಲಾಯಿತು. ಅವರನ್ನು ಒಂದು ಜಾತಿಯ ವಿರೋಧಿ ಎನ್ನಲಾಯಿತು. ಈದೀಗ ಅವರ ಹಳೆಯ ಫೋಟೋಗಳನ್ನು ಫೇಸ್ಬುಕ್ಕಿನಲ್ಲಿ ಹಾಕಲಾಗುತ್ತಿದೆ. ಇಂತಹ ಬೆಳವಣಿಗೆಗಳೆಲ್ಲ ಯಡ್ಯೂರಪ್ಪನವರು ನೇಮಿಸಿಕೊಂಡಿರುವ ಬಿಜೆಪಿಯ ಸೋಷಿಯಲ್ ಮೀಡಿಯಾ ತಂಡದ ಗಮನಕ್ಕೆ ಬಂದಿಲ್ಲವೇ ? ಬಿಸಿ ರಕ್ತದ ಆ ತರುಣರಿಗೆ ಹೀಗೆಲ್ಲ ಮಾಡುವುದರಿಂದ ಯಡ್ಯೂರಪ್ಪನವರ ಇಮೇಜಿಗೆ ನೀವೆ ಧಕ್ಕೆ ತಂದಂತಾಗುತ್ತದೆ ಎಂದೇಕೆ ತಿಳಿ ಹೇಳುತ್ತಿಲ್ಲ? ವಿಷಯ ಸ್ಪಷ್ಟವಿದೆ. ಇಂದು ಯಡ್ಯೂರಪ್ಪನವರ ಸುತ್ತಲೂ ತುಂಬಿಕೊಂಡಿರುವವರಿಗೆ ಪಕ್ಷಕ್ಕಾಗಿ ಕೆಲಸ ಮಾಡುವುದಕ್ಕಿಂತಲೂ, ಯಡ್ಯೂರಪ್ಪನವರನ್ನು ಮೆಚ್ಚಿಸುವುದೇ ಮುಖ್ಯವಾಗಿ ಬಿಟ್ಟಿದೆ. ಬರುವವರೆಲ್ಲ ಯಾವುದೋ ಸ್ಥಾನ-ಮಾನ, ಬೇಡಿಕೆಯಿಟ್ಟುಕೊಂಡೇ ಇವರ ಹತ್ತಿರ ಬರುತ್ತಾರೆಂದು ಯಡ್ಯೂರಪ್ಪನವರ ಹತ್ತಿರದವರೇ ಬೇಸರದಿಂದ ಹೇಳುವಂತಾಗಿದೆ. ಈ ಭಟ್ಟಂಗಿಗಳು ಯಡ್ಯೂರಪ್ಪನವರ ಮೆಚ್ಚಿಸಲು ಅವರ ಸುತ್ತ ಸುತ್ತುವ ಬದಲು ಮತದಾರರ ಸುತ್ತ ಸುತ್ತಿದ್ದರೆ ಉಪಚುನಾವಣೆಯಲ್ಲಿ ಗೆಲ್ಲಬಹುದಿತ್ತು ಎಂದು ಗೆಳೆಯರೊಬ್ಬರು ಹೇಳಿದ ಮಾತಿನಲ್ಲಿ ಖಂಡಿತ ಸತ್ಯವಿದೆ ಎನಿಸಿತ್ತು.

ಈ ಹಿಂದೆ ರಾಜ್ಯ ಬಿಜೆಪಿಯಲ್ಲಿ ತಮ್ಮ ಮೇಲೆ ಅನಂತಕುಮಾರ್ ಬಣ ಕೆಲಸ ಮಾಡುತ್ತಿದೆ ಎನ್ನುತ್ತಿದ್ದ ಯಡ್ಯೂರಪ್ಪನವರು, ನಿನ್ನೆ ಸಂಘದ ಪ್ರಚಾರಕ ಮತ್ತು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿರುವ ಸಂತೋಷ್ ಅವರ ಹೆಸರನ್ನು ಮುಂದಿಟ್ಟಿದ್ದಾರೆ. ನಾಯಕನೇ ಹೆಸರು ತೆಗೆದ ಮೇಲೆ ಹಿಂಬಾಲಕರು ಸುಮ್ಮನಿದ್ದಾರೆಯೇ? ರಾಷ್ಟ್ರಕ್ಕಾಗಿ ತಮ್ಮ ವೈಯುಕ್ತಿಕ ಜೀವನವನ್ನೇ ತ್ಯಾಗ ಮಾಡಿ ದುಡಿಯುವ ಪ್ರಚಾರಕರ ಬಗ್ಗೆಯೂ ಮೀಡಿಯಾ, ಸೋಷಿಯಲ್ ಮೀಡೀಯಾಗಳಲ್ಲಿ ಏಕವಚನದ ದಾಳಿ, ವಿಕೃತ ಪೋಸ್ಟುಗಳು ಬರುತ್ತಿವೆ. ಇಂತ ಎಲ್ಲಾ ಬೆಳವಣಿಗೆಗಳಿಂದ ನಷ್ಟ ಅನುಭವಿಸುತ್ತಿರುವುದು ಸ್ವತಃ ಯಡ್ಯೂರಪ್ಪನವರೇ.

ಈ ಹಿಂದೆ ಕ್ಯಾಮೆರಾದೆದುರು ಲೂಸ್ ಟಾಕ್ ಮಾಡಿರುವ ಇತಿಹಾಸವಿರುವುದರಿಂದಲೋ ಏನೋ, ಬಹಳಷ್ಟು ಜನರಿಗೆ ಬಿಜೆಪಿಯ ಸಮಸ್ಯೆಗಳಿಗೆ ಈಶ್ವರಪ್ಪನವರೇ ವಿಲನ್ ಎಂಬಂತೆ ಭಾಸವಾಗುತ್ತಿದ್ದಾರೆ. ಹಲವೂ ಪತ್ರಿಕೆಗಲೂ ಇದೇ ಧಾಟಿಯ ಬರಹ/ ವರದಿಗಳನ್ನು ಬರೆಯುತ್ತಿವೆ/ಬರೆಸಲಾಗುತ್ತಿದೆ. ಆದರೆ, ಸಂಘಟನೆ ಉಳಿಸಿ ಎಂದು ಈಶ್ವರಪ್ಪ ಹೇಳುತ್ತಿದ್ದಾರೆಂದರೇ, ಅದರಲ್ಲಿ ಯಡ್ಯೂರಪ್ಪನವರು ಮತ್ತವರ ತಂಡದ ಪಾಲೂ ದೊಡ್ಡದೇ ಇದೆ ಎನ್ನುವುದು ಕಟುಸತ್ಯ.

ಭಟ್ಟರ ಲೇಖನದಲ್ಲಿ ,”ಬಿಜೆಪಿಯ ನಿರ್ಲಜ್ಜ ಆಡಳಿತ ವೈಖರಿಯಿಂದ ಬೇಸತ್ತ ಕಾರ್ಯಕರ್ತರಿಗೆ ಆಗ ಭರವಸೆಯ ಬೆಳಕಾಗಿ ಕಂಡಿದ್ದು ಸಂತೋಷ್ ಜೀ ಗುಜರಾತ್ನಲ್ಲಿ ನರೇಂದ್ರ ಮೋದಿ ಅವರಂಥ ಪೂರ್ಣಾವಧಿ ಕಾರ್ಯಕರ್ತರು ಮುಖ್ಯಮಂತ್ರಿಯಾಗಿ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸುವ ಹಂತಕ್ಕೆ ಬೆಳೆಯುತ್ತಾರೆಂದರೆ ಕರ್ನಾಟಕದಲ್ಲಿ ಸಂಘ ನಿಷ್ಠರಾದ ನೀವ್ಯಾಕೆ ಮುಖ್ಯಮಂತ್ರಿಯಾಗಬಾರದು? ಎಂಬ ಭಾವನೆಯನ್ನು ಸಂತೋಷ್ ಜೀ ಅವರಲ್ಲಿ ಮೂಡಿಸಲಾಯಿತು” ಎಂಬ ಸಾಲುಗಳಿವೆ. ಇದೇ ಸಂತೋಷ್ ಜಿ ಹಾಗೇ ಬೇಡಿಕೆಯಿಟ್ಟುಕೊಂಡು ಬಂದವರನ್ನು ರೂಮಿನೊಳಗೆ ಸೇರಿಸಿ ಕ್ಲಾಸ್ ತೆಗೆದುಕೊಂಡು, ಹೀಗೆ ಪದವಿ ಪಡೆಯಲು ನಾನು ಪ್ರಚಾರಕನಾಗಿಲ್ಲ ಎಂದು ತಿರಸ್ಕರಿಸಿದ ಘಟನೆ ಬಹುಷಃ ಲೇಖಕರಿಗೆ ತಿಳಿದಿಲ್ಲವೆಂದುಕೊಳ್ಳುತ್ತೇನೆ.

ಇಂದು ಬಿಎಸ್ವೈ vs ಸಂತೋಷ್ ಜಿ ಎಂದು ಬಿಂಬಿಸಲು ಹೊರಟಿರುವವರಿಗೆ ವಾಟ್ಸಾಪಿನಲ್ಲಿ ಹರಿದಾಡುತ್ತಿದ್ದ ಒಂದು ಘಟನೆಯನ್ನು ನೆನಪಿಸಬೇಕು. ಅದು 2014ರ ಲೋಕಸಭಾ ಚುನಾವಣೆ. ಬಿಎಸ್ವೈಯವರು ಆಗತಾನೆ ಕೆಜೆಪಿ ತೊರೆದು ಬಿಜೆಪಿಗೆ ಮರು ಸೇರ್ಪಡೆಗೊಂಡಿದ್ದರು. ಚುನಾವಣಾ ಪ್ರಚಾರವೂ ಭರದಿಂದ ನಡೆದಿತ್ತು. ಶಿವಮೊಗ್ಗದಲ್ಲಿ ಬಿಜೆಪಿಯಿಂದ ಬಿಎಸ್ವೈ, ಕಾಂಗ್ರೆಸ್ ನಿಂದ ಜಯರಾಮ್ ಹೆಗಡೆ ಹಾಗೂ ದಳದಿಂದ ಗೀತಾ ರಾಜ್ ಕುಮಾರ್ ಕಣದಲ್ಲಿದ್ದರು. ಚುನಾವಣೆಯಲ್ಲಿ ಬಿಎಸ್ವೈ ಗೆಲ್ಲುತ್ತಾರೆ ಎಂಬುದರಲ್ಲಿ ಯಾವ ಸಂಶಯವೂ ಇರಲಿಲ್ಲ. ಆದರೆ,  ವಾಹಿನಿಯೊಂದರ ವರದಿಗಳು ತದ್ವಿರುದ್ಧವಾಗಿ ಪ್ರಸಾರವಾಗುತ್ತಿದ್ದವು. “ಬಿ.ಎಸ್.ವೈ ಗೆಲ್ಲುವುದು ಸಂದೇಹ. ಜೆಡಿಎಸ್ ನ ಗೀತಾ ಗೆಲ್ಲುತ್ತಾರೆ” ಎಂಬ sಠಿeಛಿiಚಿಟ sಣoಡಿಥಿ ಗಳು ಬಿಜೆಪಿಗೆ ಇರುಸುಮುರುಸು ಉಂಟು ಮಾಡಿದ್ದವು. ಅದೇ ಸಮಯದಲ್ಲಿ ಆ ವಾಹಿನಿಯ ಜಾಹೀರಾತು ಪ್ರತಿನಿಧಿಗಳು ಬಿಜೆಪಿಯ ಜಾಹೀರಾತು ಕೇಳಿಕೊಂಡು ಪಕ್ಷದ ರಾಜ್ಯ ಕಚೇರಿ ಜಗನ್ನಾಥ ಭವನಕ್ಕೆ ಬಂದರು. ಇತರ ವಾಹಿನಿಗಳ ಜಾಹೀರಾತು ಪ್ರತಿನಿಧಿಗಳನ್ನು ಮಾತನಾಡಿಸದ ಸಂತೋಷ್ ಅವರು, ಸುಳ್ಳು ಸಮೀಕ್ಷೆ ನಡೆಸುತ್ತಿದ್ದ ವಾಹಿನಿಯ ಪ್ರತಿನಿಧಿಗಳನ್ನು ಖುದ್ದಾಗಿ ಕಂಡು ಮಾತನಾಡಿದರು. “ನಿಮ್ಮ ವಾಹಿನಿಯಲ್ಲಿ ಯಡ್ಯೂರಪ್ಪನವರು ಶಿವಮೊಗ್ಗದಲ್ಲಿ ಸೋಲುತ್ತಾರೆ ಎಂದು ವರದಿ ಮಾಡುತ್ತಿದ್ದೀರಿ.ನೀವು ನೈತಿಕ ಪತ್ರಿಕೋದ್ಯಮ ನಡೆಸುವುದಾದರೆ ನಮಗೆ ಯಾವುದೇ ಬೇಸರವಿಲ್ಲ. ನಮ್ಮ ಪಕ್ಷದ ಶಕ್ತಿ ನಿಜಕ್ಕೂ ಎಲ್ಲಿ ಕಡಿಮೆಯುಂಟೋ ಅದನ್ನು ಎತ್ತಿ ತೋರಿಸಿ ತೊಂದರೆಯಿಲ್ಲ. ಆದರೆ ಶಿವಮೊಗ್ಗದಲ್ಲಿ ಯಡ್ಯೂರಪ್ಪ ಸೋಲುತ್ತಾರೆ ಎಂದರೆ ಯಾರಾದರೂ ನಂಬುತ್ತಾರಾ? ಇನ್ನೊಬ್ಬರ ಬಳಿ ಹಣ ಪಡೆದು ನಮ್ಮ ಅಭ್ಯರ್ಥಿಯ ಅಪಪ್ರಚಾರ ಮಾಡುತ್ತಿದ್ದೀರಿ. ಅಪಪ್ರಚಾರ ಮಾಡುವುದಷ್ಟೇ ಅಲ್ಲ, ನಮ್ಮ ಬಳಿ ಬಂದು ಜಾಹೀರಾತನ್ನೂ ಕೇಳುತ್ತಿದ್ದೀರ. ನಿಮಗೆ ನಾಚಿಕೆ ಆಗುವುದಿಲ್ಲವೇ”… ಸಂತೋಷ್ ಅವರ ನೇರ ಮಾತುಗಳನ್ನು ಕೇಳಿದ ವಾಹಿನಿಯ ಪ್ರತಿನಿಧಿಗಳು ಅಕ್ಷರಶಃ ಬೆವರಿದರು. ಇನ್ನೊಮ್ಮೆ ಹಾಗೆ ಆಗುವುದಿಲ್ಲ ಎಂಬ ಭರವಸೆ ನೀಡಿದರು…

ಆದರೆ, ಯಡ್ಯೂರಪ್ಪನವರ ಬೆಂಬಲಿಗರು ಸಂತೋಷ್ ಜಿಯವರ ಬಗ್ಗೆ ನಡೆದುಕೊಳ್ಳುತ್ತಿರುವ ಪರಿ ಹೇಗಿದೆ ನೋಡಿ. ಉತ್ತರ ಪ್ರದೇಶದ ಫಲಿತಾಂಶ ಬಂದ ನಂತರ ಕೆಲವು ಪತ್ರಿಕೆಗಳಲ್ಲಿ, ಹೈಕಮಾಂಡ್ ಸಂತೋಷ್ ಅವರಿಗೆ ರಾಜ್ಯದ ಚಟುವಟಿಕೆಗಳಿಂದ ದೂರವಿರಿ ಎಂದಿದೆ ಅಂತೆಲ್ಲಾ ಸುಖಾ ಸುಮ್ಮನೇ ಬರೆಸಿದರು. ಯಡ್ಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಐಡಿಯಾಲಜಿ ನಿಷ್ಟ ಕಾರ್ಯಕರ್ತರ ಜೊತೆಗೆ ಸೇರಿಕಂಡು ಪಕ್ಷವನ್ನು ಉಳಿಸಿದ್ದು ಸಂತೋಷ್ ಅವರು ಮಾಡಿದ ತಪ್ಪೇನು?

ಯಡ್ಯೂರಪ್ಪನವರನ್ನು ಅಧಕ್ಷಗಿರಿಯಿಂದ ಇಳಿಸುವುದೇ ಬಂಡಾಯಗಾರರ ಉದ್ದೇಶವಾಗಿದ್ದರೇ, ಅವರೇಕೆ ಪದೇ ಪದೇ ಅವರೇ ನಮ್ಮ ಸಿಎಂ ಅಭ್ಯರ್ಥಿ ಎನ್ನಬೇಕಿತ್ತು? ಈಶ್ವರಪ್ಪ ಅಂಡ್ ಟೀಂ ಯಡ್ಯೂರಪ್ಪನವರು ಕಟ್ಟಿಕೊಂಡಿರುವ ತಂಡ ಮತ್ತು ಅವರ ಕಾರ್ಯ ವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿದೆಯೇ ವಿನಃ ಅವರ ನಾಯಕತ್ವವನ್ನು ಪ್ರಶ್ನಿಸುತ್ತಿಲ್ಲ.

ಯಡ್ಯೂರಪ್ಪನವರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಲ್ಲವೆಂದು ಸಂತೋಷ್ ಅವರಗಾಲಿ, ಈಶ್ವರಪ್ಪನವರ ತಂಡವಾಗಲಿ ಇದುವರೆಗೂ ಎಲ್ಲಿಯೂ ಹೇಳಿಲ್ಲ. ಆದರೆ, ಕೆಲವು ಕಿತಾಪತಿ ಚೋರರು ಸುಖಾಸುಮ್ಮನೇ ಯಡ್ಯೂರಪ್ಪನವರಲ್ಲಿ ಅಭದ್ರತೆಯ ಭಾವನೆ ಬಿತ್ತುತ್ತಿದ್ದಾರೆ. ಅವರಿಗೆ ಯಡ್ಯೂರಪ್ಪನವರ ಕುರ್ಚಿಗಿಂತಲೂ, ತಮಗೆ ಸಿಗುವ ಕುರ್ಚಿ ಕೈ ತಪ್ಪುವ ಭಯವಿದ್ದಿರಬಹುದು. ಅಥವಾ ನಾಳೆ ಯಡ್ಯೂರಪ್ಪನವರ ನಂತರ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡರೇ ತಾವೇ ಟವೆಲು ಹಾಸುವಷ್ಟು ಹತ್ತಿರವಿರೋಣವೆನ್ನುವ ದುರಾಸೆಯೂ ಇರಬಹುದು.

ತಮ್ಮನ್ನೇ ಪಕ್ಷದ ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದಾಗಿದೆ, ರಾಜ್ಯದ ಎಲ್ಲಾ ಮುಖಂಡರೂ ಒಪ್ಪಿದ್ದಾರೆ ಎಂದು ತಿಳಿದೂ ಸಹ, ಈ ರೀತಿಯ ಕೆಲಸಕ್ಕೆ ಬಾರದ ರಗಳೆಗಳಲ್ಲೇಕೆ ಯಡ್ಯೂರಪ್ಪನವರು ಸಮಯ ವ್ಯರ್ಥಮಾಡಿಕೊಂಡು, ಜನರ ಮನಸ್ಸಿನಲ್ಲೂ ಗೊಂದಲ ಮೂಡಿಸುತ್ತಿದ್ದಾರೆ. ಅವರ ಸುತ್ತಮುತ್ತಲಿರುವ ನಾಯಕರ ಮುಖಗಳನ್ನೊಮ್ಮೆ ನೋಡಿ. ಯುವ ಮನಸ್ಸುಗಳು ಒಪ್ಪಬಲ್ಲಂತಹ ಸ್ವಚ್ಚ ಚಾರಿತ್ರ್ಯವುಳ್ಳವರೆಷ್ಟು ಜನರನ್ನು ಜೊತೆಗಿಟ್ಟುಕೊಂಡಿದ್ದಾರೆ? ರಾಜ್ಯದ ಜನ ಕಾಂಗ್ರೆಸ್ ಬಿ ಟೀಂನ ಆಡಳಿತವನ್ನು ಯಡ್ಯೂರಪ್ಪನವರಿಂದ ನಿರೀಕ್ಷಿಸುತ್ತಿಲ್ಲ. ಇದು 2008ರ ಕಾಲವಲ್ಲ 2018ರ ಕಾಲ. ಈ ಕಾಲ ಘಟ್ಟದ ಮನಸ್ಥಿತಿಗೆ ಹೊಂದುವಂತಹ ಯುವಕರನ್ನು ಜೊತೆಗಿಟ್ಟುಕೊಂಡು ಮುಂದುವರೆಯಬಾರದೇ?

ಸಂತೋಷ್ ಅವರ ಮೇಲೆ ಯುದ್ಧ ಸಾರುವುದರಿಂದ ಯಡ್ಯೂರಪ್ಪನವರೇನು ಸಾಧಿಸಬಲ್ಲರು? ಕಳೆದುಕೊಳ್ಳಲು ಸಂತೋಷ್ ಅವರ ಬಳಿಯೇನಿದೆ? ಈ ಕಲಹ ಮುಂದುವರೆದರೆ ನಷ್ಟ ಅನುಭವಿಸುವುದು ಪಕ್ಷ ಮತ್ತು ನಿಷ್ಟಾವಂತ ಕಾರ್ಯಕರ್ತರಷ್ಟೇ. ಈ ಸತ್ಯವನ್ನು ಯಡ್ಯೂರಪ್ಪನವರೇ ಅರಿತುಕೊಳ್ಳಬೇಕಷ್ಟೇ. ಸಮಸ್ಯೆಯ ಮೂಲ ಸಂತೋಷ್ ಅವರೂ ಅಲ್ಲ ಈಶ್ವರಪ್ಪನವರೂ ಅಲ್ಲ. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ತನ್ನದೇ ಕಾರ್ಯಶೈಲಿ ಮತ್ತು ತನ್ನ ಭಟ್ಟಂಗಿ ಪಡೆಯೇ ಕಾರಣ ಎಂದು ಅರಿತುಕೊಳ್ಳಲಿ. ಈಗಲೂ ಕಾಲ ಮಿಂಚಿಲ್ಲ. ಯಡ್ಯೂರಪ್ಪ ತಮ್ಮ ಭಟ್ಟಂಗಿಗಳ ಕೋಟೆಯನ್ನು ಮುರಿದು, ಅವರ ಆಟಾಟೋಪಕ್ಕೆ ಬ್ರೇಕ್ ಹಾಕಿ, ನಿಜವಾದ ಹಿತೈಷಿಗಳನ್ನೂ ಗುರುತಿಸಿಕೊಂಡು ಸ್ವಚ್ಚ ಮತ್ತು ಹೊಸ ರಾಜಕಾರಣದ ಭಾಷ್ಯ ಬರೆಯಲಿ.. ಮುಖ್ಯವಾಗಿ ಪಕ್ಷ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿಯಾಗುವುದು ಎನ್ನುವುದನ್ನು ಇನ್ನಷ್ಟು ತಲೆಗೆ ತುಂಬಿಕೊಂಡು ಅನಗತ್ಯ ಭಯ ಬಿಡಲಿ ಎನ್ನುವುದೇ ನನ್ನ ಆಶಯ.

4 ಟಿಪ್ಪಣಿಗಳು Post a comment
 1. SalamBava
  ಮೇ 1 2017

  In what sense the current leaders of Karnataka bjp different from congress leaders? They’ve all the vices of congress politicians but none of the virtues of secular, socialist, progressive politics of congress. Karnataka BJP doesn’t even have a Yogi Adityanath like leader in its cadre. Renukacharya and Halappa are youth leaders and whole world knows what their capabilities are! There’s not even one leader who can address the young voters and make a positive impression on them. Yet BJP speaks of nationalism! Only astrologers, real estate sharks and upper caste Maths are excited about Karnataka BJP.

  ಉತ್ತರ
  • ನಾ-ಗ-ಶೆ-ಟ್ಟಿ
   ಮೇ 1 2017

   +೧

   ಯೋಗೇಂದ್ರ ಯಾದವ್ ಅವರ ಸ್ವರಾಜ್ಯ ಅಭಿಯಾನ ಕರ್ನಾಟಕದಲ್ಲಿ ಬೆಳೆದು ಭದ್ರವಾಗಿ ಪರ್ಯಾಯ ಶಕ್ತಿಯಾಗಿ ರೂಪ ತಾಳುವವರೆಗೆ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುವುದು ಉತ್ತಮ. ಸಿದ್ದರಾಮಯ್ಯನವರು ತಳಸ್ಥರದ ಜನಸಮುದಾಯಗಳ ಅಭಿವೃದ್ಧಿ ಬಗ್ಗೆ ಬದ್ಧತೆ ಇರುವವರಾಗಿದ್ದಾರೆ. ಎರಡನೇ ಬಾರಿ ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ ಕಾಂಗ್ರೆಸ್ ಪಕ್ಷದಲ್ಲಿ ಅವರ ಶಕ್ತಿ ನೂರ್ಮಡಿಯಾಗಿ ಜನಪರ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಇನ್ನಷ್ಟು ಚುರುಕುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ.

   ಉತ್ತರ
 2. Vikram Kamath
  ಮೇ 1 2017

  Well anlysed and written.

  ಉತ್ತರ
 3. ಮೇ 2 2017

  I am also 1of tha b.j.p worker grom lost 10years . And lost 10years just a worker not any more wan tha new face came . Wan tha money came that that face go to hi Pojisan. That is b.j.p. no more good to party Worker to be good…

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments