ಪೀರಾಯರು ಬರೆದ ಕಥೆ – ‘ತ್ರಿಕೋನ’ ( ಮುಂದುವರೆದ ಭಾಗ )
– ಮು. ಅ ಶ್ರೀರಂಗ ಬೆಂಗಳೂರು
ರಾಮಾಚಾರ್ಯರು ಸಂಜೆ ಐದು ಗಂಟೆಗೆ ಆಶ್ರಮದ ಶಾಲೆಯಿಂದ ಬಂದು ತಮ್ಮ ಕೊಠಡಿಯಲ್ಲಿ ಕೂತಿದ್ದರು. ಎಂದಿನಂತೆ ಅಡುಗೆಯವನು ಫ್ಲಾಸ್ಕಿನಲ್ಲಿ ಕಾಫಿ ತಂದು ಅವರ ಟೇಬಲ್ ಮೇಲೆ ಇಟ್ಟು ‘ಆಚಾರ್ಯರೇ ರಾತ್ರಿಗೆ ಏನು ಅಡಿಗೆ ಮಾಡಲಿ’ ಎಂದ.
‘ಬೆಳಗ್ಗೆಯ ಸಾರು ಮಿಕ್ಕಿರಬಹುದು. ಯಾವುದಾದರೊಂದು ಪಲ್ಯ ಮಾಡು ಸಾಕು. ಇವತ್ತು ಚಪಾತಿ ಬೇಡ’.
‘ಆಗಲಿ ಸ್ವಾಮಿ’ ಎಂದು ಅವನು ಕೊಠಡಿಯ ಬಾಗಿಲನ್ನು ಮುಂದಕ್ಕೆ ಎಳದು ಕೊಂಡು ಹೋದ.
ನನಗೆ ಎಪ್ಪತ್ತು ವರ್ಷವಾಗುತ್ತಾ ಬಂತು. ಇಷ್ಟು ಸೆಕೆಯಿದೆ. ಆದರೂ ಈ ಕಾಫಿ ಚಪಲ ಬಿಟ್ಟಿಲ್ಲ. ದಿನಕ್ಕೆ ಮೂರು ಸಲ ಕುಡಿಯದಿದ್ದರೆ ಏನೋ ಕಳೆದುಕೊಂಡಂತೆ. ನನ್ನ ಅಪ್ಪ ಅಮ್ಮನಿಗೂ ಆ ಪಾವಗಡದಲ್ಲಿ ರಣ ಬಿಸಿಲಿದ್ದರೂ ಬಿಸಿಬಿಸಿಯಾದ ಸ್ಟ್ರಾಂಗ್ ಕಾಫಿ ಬೇಕೇ ಬೇಕಾಗಿತ್ತು. ಏಕೋ ಎರಡು ಮೂರು ದಿನಗಳಿಂದ ಅಪ್ಪ ಅಮ್ಮನ ನೆನಪು ಕಾಡುತ್ತಿದೆ. ನಿನ್ನೆ ಕನಸಿನಲ್ಲಿ ಬಂದಿದ್ದರು. ಹೋದ ತಿಂಗಳು ತಾನೇ ಇಬ್ಬರದೂ ತಿಥಿ ಮಾಡಿದ್ದೆ. ಅವರು ಸತ್ತು ಮೂವತ್ತು ವರ್ಷವಾಗುತ್ತಾ ಬಂತು. ತಿಥಿಯನ್ನು ಕ್ರಮವಾಗಿ ಮಾಡದಿದ್ದರೆ ಕನಸಿನಲ್ಲಿ ಬರುತ್ತಾರೆ ಎಂದು ಅವರಿವರು ಹೇಳಿದ್ದನ್ನು ಕೇಳಿದ್ದೆ. ಇಲ್ಲಿ ಪಿಂಡ ಹಾಕಿದರೆ, ಅದನ್ನು ಕಾಗೆ ಬಂದು ತಿಂದರೆ ಸ್ವರ್ಗದಲ್ಲೋ ನರಕದಲ್ಲೋ ಇರುವ ಅವರಿಗೆ ತಲುಪತ್ತೆ ಎಂಬ ನಂಬಿಕೆಯೋ, ಮೂಢನಂಬಿಕೆಯೋ ಅಥವಾ ಹಿಂದಿನ ಸಂಪ್ರದಾಯವೋ ಏನೇ ಇರಲಿ ಅದರಲ್ಲಿ ನನಗ್ಯಾವ ವಿಶ್ವಾಸವೂ ಇಲ್ಲ. ಆದರೆ ಜನ್ಮ ಕೊಟ್ಟವರು ತೀರಿಕೊಂಡ ಮೇಲೆ ತಿಥಿಯ ಆಚರಣೆಯ ನೆಪದಲ್ಲಾದರೂ ವರ್ಷಕೊಂದು ದಿನ ಮಕ್ಕಳು ಜ್ಞಾಪಿಸಿಕೊಳ್ಳಲಿ ಎಂಬುದು ಹಿಂದಿನವರ ಉದ್ದೇಶವಾಗಿತ್ತೇನೋ? ಕಾಲ ಕಳೆದಂತೆ ಅದಕ್ಕೆ ಇಂದಿನ ರೂಪ ಬಂದಿದೆ. ತಿಥಿ ಮಾಡದಿದ್ದರೆ ಸತ್ತ ಅಪ್ಪ ಅಮ್ಮನಿಗೆ ವರ್ಷಕೊಂದು ಸಲ ಮೂರು ಪಿಡಿಚೆ ಅನ್ನವನ್ನೂ ಹಾಕದವರು ಎಂಥ ಮಕ್ಕಳು ಎಂದು ಊರಿನವರ, ನೆಂಟರಿಷ್ಟರ ಮೂದಲಿಕೆ, ತಿರಸ್ಕಾರ. ಅಪ್ಪ ಅಮ್ಮ ಬದುಕಿದ್ದಾಗಲೇ ಎರಡು ಹೊತ್ತು ಸರಿಯಾಗಿ ಊಟ ಹಾಕದ ಎಷ್ಟು ಜನ ಮಕ್ಕಳಿಲ್ಲ? ಸತ್ತ ಮೇಲೆ ಅದರ ಪಾಪ ಪರಿಹಾರಾರ್ಥವಾಗಿ ಪುರೋಹಿತರಿಗೆ ದಾನ ಧರ್ಮ, ಹತ್ತಿರದ ನೆಂಟರಿಗೆ ಮೂರ್ನಾಲಕ್ಕು ದಿನ ವಡೆ ಪಾಯಸದ ಸಮಾರಾಧನೆ. ನನಗೆ ತಿಳಿದ ಮಟ್ಟಿಗೆ ನಾನು ಅಪ್ಪ ಅಮ್ಮನ ಮನಸ್ಸನ್ನು ನೋಯಿಸುವ ಕೆಲಸ ಮಾಡಿಲ್ಲ. ನಾನು ಮದುವೆ ಮಾಡಿಕೊಳಲಿಲ್ಲ ಎಂಬ ಕೊರಗು ಅವರಿಬ್ಬರಿಗೂ ಇತ್ತು. ಆದರೆ ಸಂದರ್ಭವೇ ಹಾಗಿತ್ತು. ನಾನು ಮದುವೆಗೆ ಮನಸ್ಸು ಮಾಡುವ ಹೊತ್ತಿಗೆ ಕಾಲ ಮಿಂಚಿತ್ತು. ಅಪ್ಪ ತೀರಿಕೊಂಡಿದ್ದ. ಅಮ್ಮನಿಗೆ ನಾನು ಹೇಳಬಹುದಾಗಿದ್ದ ‘ಆ ವಿಷಯ’ ಇಷ್ಟವಾಗುತ್ತಿತ್ತೇ ಇಲ್ಲವೇ ಎಂಬುದು ಗೊತ್ತಿಲ್ಲ. ಬಹುಶಃ ಆಗುತ್ತಿರಲಿಲ್ಲ. ನಾನು ಎರಡು ಮೂರು ತಿಂಗಳು ಅಳೆದು ಸುರಿದು ಬೇಡ. ಈ ಇಳಿ ವಯಸ್ಸಿನಲ್ಲಿ ಅಮ್ಮನಿಗೆ ಹೇಳುವುದು ತರವಲ್ಲ. ಎರಡನೇ ಮಗನಾದ ನಾನು ಮದುವೆಯಾಗಲಿಲ್ಲ ಎಂಬ ಕೊರಗಿಗಿಂತ ‘ಆ ವಿಷಯ’ ಹೇಳಿದ್ದರೆ ಅಮ್ಮನಿಗೆ ಆಗಬಹುದಾಗಿದ್ದ ಚಿಂತೆ, ನೋವೇ ಜಾಸ್ತಿಯಾಗುತ್ತಿತ್ತು.
ಊಟ ತಂದಿಟ್ಟ ಅಡಿಗೆಯ ರಾಮಣ್ಣ ‘ಅಯ್ಯ್ನೊರೆ ದೊಡ್ಡ ಸ್ವಾಮಿಗಳು ನಿಮ್ಮನ್ನು ಕೇಳಿದ್ರು. ಊಟ ಆದ್ಮೇಲೆ ಹೋಗಿ ನೋಡಬೇಕಂತೆ’.
‘ಆಯ್ತು ರಾಮಣ್ಣ. ಹೋಗ್ತೀನಿ’.
ಟೇಬಲ್ ಮೇಲೆ ಊಟಕ್ಕೆ ಅಣಿಗೊಳಿಸಿ ರಾಮಣ್ಣ ಕೊಠಡಿಯ ಬಾಗಿಲು ಹಾಕಿಕೊಂಡು ಹೊರಟು ಹೋದ. ಈ ರಾಮಣ್ಣ ಮಿತಭಾಷಿ. ಎಷ್ಟು ಬೇಕೋ ಅಷ್ಟೇ ಮಾತು. ನನ್ನ ಸ್ವಭಾವಕ್ಕೆ ಸರಿಯಾಗಿದ್ದಾನೆ.
*****
‘ಬನ್ನಿ ಆಚಾರ್ಯರೇ. ಕುಳಿತುಕೊಳ್ಳಿ. ನಮ್ಮಿಂದ ತಮ್ಮ ವಿಶ್ರಾಂತಿಗೆ ತೊಂದರೆಯಾಯ್ತು. ಆದರೆ ಇದೇ ಸರಿಯಾದ ಸಮಯ ಎಂದು ತಮ್ಮನ್ನು ಕರೆಸಿಕೊಂಡೆವು’..
‘ಇಲ್ಲ. ಯಾವ ತೊಂದರೆಯೂ ಆಗಲಿಲ್ಲ. ಹೇಳಿ ಸ್ವಾಮೀ’.
‘ನಾವು ಇನ್ನು ಒಂದೆರೆಡು ತಿಂಗಳಿನಲ್ಲಿ ಈ ಆಶ್ರಮ ಬಿಟ್ಟು ಹೊರಡಲಿದ್ದೇವೆ. ಇಲ್ಲಿ ನಮ್ಮ ಕೆಲಸ ಆಯ್ತೆಂದು ಅನಿಸುತ್ತಿದೆ. ಬದರಿ, ಕೇದಾರನಾಥದ ಕಡೆ ಹೋಗಿ ಇರಬೇಂದು ಅಂತರಾತ್ಮದ ಪ್ರೇರಣೆ ಆಗುತ್ತಿದೆ’.
‘- – – – – – – ‘
‘ಈ ನಮ್ಮ ಆಶ್ರಮ, ಮೂರ್ನಾಲಕ್ಕು ಕೊಠಡಿಗಳ ಒಂದು ಸಣ್ಣ ಪಾಠಶಾಲೆ, ಇತರೆ ಸ್ವಾಮಿಗಳ ಆಸ್ತಿ, ಶಾಲೆಗಳು, ಕಾಲೇಜುಗಳು, ದೊಡ್ಡ ದೊಡ್ಡ ಕಟ್ಟಡಗಳ ಅವರ ಮಠಗಳಂತೆ ಅಲ್ಲ. ಅದು ತಮಗೂ ಗೊತ್ತಿದೆ. ನಾವು ಮೂವತ್ತು ವರ್ಷದವರಿದ್ದಾಗ ಇಲ್ಲಿಗೆ ನಿಮ್ಮಂತೆಯೇ ಒಬ್ಬ ಶಿಕ್ಷಕನ ಹಾಗೆ ಬಂದೆವು. ಆಗಿದ್ದ ಸ್ವಾಮಿಗಳು ತಮ್ಮ ದೇಹತ್ಯಾಗಕ್ಕೆ ಒಂದು ವಾರ ಮುಂಚೆ ಒಂದು ಮಾತು ಹೇಳಿದರು. ಈ ಆಶ್ರಮ, ಆಶ್ರಮದ ಹಾಗೇ ಇರಲಿ. ಪೀಠ, ಮಠ ಇತ್ಯಾದಿಯೆಂದು ಸ್ಥಾವರ ಕಟ್ಟಡಗಳು, ಅದರ ನಿರ್ವಹಣೆ ಆ ಗೋಜಲಿನಲ್ಲಿ ಸಿಲುಕಬೇಡ. ನಿನ್ನ ಅಂತರಂಗದ ಕರೆಗೆ ಓಗೊಡು. ಬಾಹ್ಯಾಡಂಬರ ಬೇಡ ಎಂದು ಒಂದು ಬೀಜ ವಾಕ್ಯ ಹೇಳಿದರು’.
‘- – – – – – – – – -‘
‘ನಾವು ಅದೇ ರೀತಿ ನಡೆದು ಕೊಂಡು ಈವರೆಗೆ ಬಂದೆವು. ಈ ಆಶ್ರಮಕ್ಕೆ ನಡೆದು ಕೊಳ್ಳುವ ಒಂದು ನೂರು ಭಕ್ತರು ಇರಬಹುದು. ಇತ್ತೀಚಿಗೆ ಸುಮಾರು ಇಪ್ಪತ್ತು ವರ್ಷಗಳಿಂದ ಆ ಭಕ್ತರುಗಳು ಇದನ್ನು ಇತರ ಮಠಗಳ ರೀತಿಯೇ ಮಾಡೋಣ, ನಾವುಗಳು ಧನ ಸಹಾಯ ಮಾಡುತ್ತೇವೆ, ದೊಡ್ಡ ದೊಡ್ಡ ಸ್ಕೂಲು ಕಾಲೇಜು ಕಟ್ಟೋಣ. ರಾಜಕೀಯದಲ್ಲಿ ನಮ್ಮವರಿದ್ದಾರೆ. ಈಗ ಎಲ್ಲಾ ಮಠಗಳಿಗೆ ಸರ್ಕಾರ ಹಣ ಕೊಡುತ್ತಿದೆ. ನಮಗೂ ಕೊಡುತ್ತದೆ. ಹೀಗೆ ನಾನಾ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ನಾವು ಅವರುಗಳ ಮಾತನ್ನು ಕೇಳದ್ದಕ್ಕೆ ಪರೋಕ್ಷವಾಗಿ ಅಲ್ಲಲ್ಲಿ ಬೇಸರ ತೋರಿಸಿದ್ದೂ ಇದೆ ‘.
‘ – – – – – – – -‘
‘ನಮಗೆ ನಮ್ಮ ನಂತರ ನೀವೇ ಈ ಆಶ್ರಮದ ಸ್ವಾಮಿಗಳಾಗಲಿ ಎಂಬ ಆಸೆಯಿತ್ತು. ಅದಕ್ಕೆಂದೇ ಹತ್ತು ವರ್ಷಗಳ ಹಿಂದೆ ನಿಮಗೆ ಕಿರಿಯ ಸ್ವಾಮಿಗಳಾಗಿ, ಮುಂದೆ ನಮ್ಮ ನಂತರ ಸ್ವಾಮಿಗಳಾಗಲು ಅನುಕೂಲವಾಗುತ್ತದೆ ಎಂದು ಹೇಳಿದ್ದು. ಆದರೆ ತಮಗೆ ನಮ್ಮ ಮಾತು ಯಾಕೋ ಇಷ್ಟವಾಗಲಿಲ್ಲ’.
‘ಸ್ವಾಮಿಗಳು ಮನ್ನಿಸಬೇಕು. ಆಗಿನ ನನ್ನ ಸ್ಥಿತಿಯಲ್ಲಿ ನಾನು ತಮ್ಮ, ಈ ಆಶ್ರಮದ ಉತ್ತರಾಧಿಕಾರಿಯಾಗಲು ಸಾಧ್ಯವಿರಲಿಲ್ಲ. ತಮಗೆ ಅರಿಕೆ ಮಾಡಿಕೊಂಡಿದ್ದೆ’.
‘ನಿಮ್ಮ ನಿರ್ಧಾರವನ್ನು ನಾವು ತಪ್ಪು ಎನ್ನುವುದಿಲ್ಲ’.
‘ – – – – – – – -‘
‘ನಾವು ಇಲ್ಲಿಂದ ಹೋದ ಮೇಲೆ ಸಹಜವಾಗಿ ಈಗಿರುವ ಕಿರಿಯ ಸ್ವಾಮಿಗಳು ಈ ಆಶ್ರಮದ ಸ್ವಾಮಿಗಳಾಗುತ್ತಾರೆ. ಅವರು ಈಗಿನ ಕಾಲದವರು. ನಮಗೂ ಮೂರ್ನಾಲಕ್ಕು ಸಲ ಸೂಚ್ಯವಾಗಿ ಈ ಆಶ್ರಮವನ್ನು ಇತರೆ ಮಠಗಳ ರೀತಿಯೇ ಅಭಿವೃದ್ಧಿ ಮಾಡೋಣ ಎಂದು ಹೇಳಿದ್ದರು. ನಾವು ಅವರ ಮಾತುಗಳ ಬಗ್ಗೆ ಏನೂ ಹೇಳದೆ ಮೌನವಾಗಿ ಇದ್ದುಬಿಟ್ಟೆವು. ಮುಂದೆ ಅವರಿಗೆ ಯಾವ ರೀತಿ ಇಷ್ಟವಾಗುತ್ತದೋ ಹಾಗೆ ಈ ಆಶ್ರಮದ ಸ್ವರೂಪ ಬದಲಾಗುತ್ತದೆ. ಆಗ ನಿಮಗೆ ಅದು ಇಷ್ಟವಾಗುತ್ತದೋ ಇಲ್ಲವೋ ಹೇಳಲಾರೆ. ಏಕೋ ನೀವು, ನಿಮ್ಮ ನಡತೆ ನಮಗೆ ನಮ್ಮ ಪೂರ್ವಾಶ್ರಮದ ನೆನಪನ್ನು ಆಗಾಗ ತರುತ್ತಿರುತ್ತದೆ. ಅದು ನಿಮ್ಮ ಬಗ್ಗೆ ನಮ್ಮಲ್ಲಿ ಸಾಂಸಾರಿಕರಿಗೆ ಇರುವ ಮೋಹದ ರೀತಿ ಒಂದು ಎಳೆಯಂತೆ ಬಂಧಿಸಿರಬಹುದು. ಸ್ವಾಮಿಗಳಾದ ಮೇಲೆ ನಮ್ಮ ಪೂರ್ವಾಶ್ರಮದ ಬಂಧನಗಳಿಂದ ಪಾರಾಗಬೇಕು ಎನ್ನುತ್ತಾರೆ. ಆದರೆ ಮನಸ್ಸಿನ ಯೋಚನೆಗಳಿಂದ ಬಿಡುಗಡೆ ಅಷ್ಟು ಸುಲಭವೇ? ಅಥವಾ ನಾವಿನ್ನೂ ಮಾಗಿಲ್ಲವೋ ತಿಳಿಯದಾಗಿದೆ ‘.
‘ – – – – – – – -‘
‘ನಾವು ಈ ಆಶ್ರಮ ಬಿಟ್ಟ ಮೇಲೆ ಇಲ್ಲಿಯ ವಾತಾವರಣ ನಿಮಗೆ ಹಿಡಿಸದೆ ಹೋಗಬಹುದು. ಬೇಸರವಾಗಬಹುದು. ಆ ಹೊತ್ತಿಗೆ ನಾವು ಇಲ್ಲಿಂದ ಸಾವಿರಾರು ಮೈಲಿಗಳಷ್ಟು ದೂರದಲ್ಲಿರಬಹುದು. ಆದರೂ ಅದು ನಮ್ಮನ್ನು ಯಾವಾಗಲಾದರೊಮ್ಮೆ ಬಾಧಿಸಬಹುದು. ಮನಸ್ಸಿನ ಮರ್ಮ ತಿಳಿಯಲು ಕಷ್ಟ ಅಲ್ಲವೇ?’
‘ ನಿಜ ಸ್ವಾಮೀ’
‘ಅದಕ್ಕೇ ನಾವೊಂದು ನಿರ್ಧಾರಕ್ಕೆ ಬಂದಿದ್ದೇವೆ. ಅದು ತಮಗೆ ಒಪ್ಪಿಗೆಯಾದರೆ ಆ ರೀತಿ ನಡೆದುಕೊಳ್ಳಬಹುದು. ನಮ್ಮ ಬಲವಂತವೇನಿಲ್ಲ ‘.
‘ಹೇಳಿ ಸ್ವಾಮೀ’
‘ತಾವು ತಪ್ಪು ತಿಳಿಯಬಾರದು’
‘ಇಲ್ಲ ಹೇಳಿ ಸ್ವಾಮೀ ‘.
‘ನಾವು ಈ ಆಶ್ರಮ ಬಿಡುವ ಐದಾರು ದಿನಗಳ ಮುಂಚಿತವಾಗಿ ತಮಗೆ ಸೂಚನೆ ಕೊಡುತ್ತೇವೆ. ನಾವು ಇರುವಾಗಲೇ ಈ ಆಶ್ರಮದಿಂದ ನಮ್ಮ ಕಣ್ಣೆದುರೇ ತಾವು ಸಂತೋಷ ಚಿತ್ತರಾಗಿ ಹೊರಟರೆ ನಮಗೆ ನಮ್ಮ ಮುಂದಿನ ಪ್ರಯಾಣದಲ್ಲಿ ಯಾವ ಬೇಸರವೂ ಬಾಧಿಸಲಾರದು ಎಂದು ಅಂದುಕೊಂಡಿದ್ದೇವೆ ‘.
‘ತಾವು ಹೇಳಿದಂತೆ ಆಗಲಿ ಸ್ವಾಮೀ. ನನಗೂ ಎಪ್ಪತ್ತು ವರ್ಷವಾಯಿತು. ಮನಸ್ಸಿಗೆ ವಯಸ್ಸು, ಆಯಾಸ ಅನ್ನಿಸದಿದ್ದರೂ ದೇಹದ ಮೇಲೆ ವಯಸ್ಸಿನ ಪ್ರಭಾವ ಆಗೇ ಆಗುತ್ತದಲ್ಲ. ನನಗೂ ವಿಶ್ರಾಂತಿ ಬೇಕೆನ್ನಿಸುತ್ತಿದೆ’.
‘ನೋಡಿ ಇನ್ನೊಮ್ಮೆ ಹೇಳುತ್ತೇವೆ. ನಮ್ಮ ಬಲವಂತವೇನೂ ಇಲ್ಲ. ಇನ್ನೂ ಒಂದೆರೆಡು ತಿಂಗಳುಗಳ ಕಾಲಾವಕಾಶವಿದೆ. ಅವಸರವೇನಿಲ್ಲ. ತಾವು ಇಲ್ಲೇ ಇರಬಹುದು. ನಮ್ಮ ಇಷ್ಟಾನಿಷ್ಟಗಳು ಏನೇಯಿರಲಿ. ತಾವು ಸ್ವತಂತ್ರರು.’
‘ಆಗಲಿ ಸ್ವಾಮೀ. ನಾನಿನ್ನು ಹೊರಡಲೇ? ತಮಗೂ ವಿಶ್ರಾಂತಿಯ ವೇಳೆಯಾಯ್ತು’.
‘ಆಯಿತು. ಒಳ್ಳೆಯದಾಗಲಿ. ಹೋಗಿ ಬನ್ನಿ’.
******
ದೊಡ್ಡ ಸ್ವಾಮಿಗಳೊಡನೆ ಮಾತಾಡಿದ ಹದಿನೈದು ಇಪ್ಪತ್ತು ದಿನಗಳ ನಂತರದ ಒಂದು ದಿನ ರಾಮಾಚಾರ್ಯರು ತಮ್ಮ ಮೂರು ಜೊತೆ ಬಟ್ಟೆಗಳು, ಮೂರ್ನಾಲಕ್ಕು ಬೆಡ್ ಶೀಟ್, ಒಂದು ಶಾಲು, ನಾಲ್ಕೈದು ಪುಸ್ತಕಗಳನ್ನು ತಮ್ಮ ಸೂಟ್ ಕೇಸ್ ನೊಳಗೆ ಹಾಕಿಕೊಂಡು ಬೆಳಗ್ಗೆ ಏಳು ಗಂಟೆಗೆ ಆಶ್ರಮದಿಂದ ಹೊರಟರು. ಬಸ್ಸುಗಳು ಓಡಾಡುವ ರಸ್ತೆಗೆ ಆಶ್ರಮದಿಂದ ಎರಡುವರೆ ಮೂರು ಕಿಲೋಮೀಟರ್ ದೂರ. ತುಮಕೂರು ಬೆಂಗಳೂರಿನ ಹೆದ್ದಾರಿಯಲ್ಲಿ ಅದೊಂದು ಹಳ್ಳಿ. ಶಟಲ್ ಬಸ್ಸುಗಳು ಮಾತ್ರ ಅಲ್ಲಿ ನಿಲ್ಲುತ್ತಿದ್ದವು. ಅಲ್ಲಿಂದ ತುಮಕೂರು ಹತ್ತು ಹದಿನೈದು ಕಿ ಮೀ. ಬಸ್ಸು ಸಿಗದಿದ್ದರೆ ರಿಕ್ಷಾಗಳು. ಯಾವುದೋ ಒಂದು. ತುಮಕೂರಿಗೆ ಹೋದರೆ ಬೆಂಗಳೂರಿಗೆ ಹೋಗಲು ಬಸ್ಸಿಗೇನೋ ಬರವಿಲ್ಲ.
ತುಮಕೂರಿನಲ್ಲಿ ಬಸ್ ಸ್ಟಾಂಡ್ ಸಮೀಪದ ನಂಜುಡೇಶ್ವರ ಹೋಟೆಲ್ ನಲ್ಲಿ ತಿಂಡಿ ಕಾಫಿ ಮುಗಿಸಿಕೊಂಡು ಬೆಂಗಳೂರಿನ ಬಸ್ಸಿನಲ್ಲಿ ಕೂತ ಆಚಾರ್ಯರಿಗೆ ಸ್ವಲ್ಪ ಹೊತ್ತಿಗೆ ಜೋಂಪು ಹತ್ತಿದ ಹಾಗೆ ಆಯಿತು. ಕೂತ ಸೀಟಿನ ಹಿಂಭಾಗಕ್ಕೆ ಹಾಗೆ ಒರಗಿದರು. ನನಗೂ ಆ ಆಶ್ರಮದಿಂದ ಬಿಡುಗಡೆ ಬೇಕಾಗಿತ್ತು. ತಾನಾಗೇ ಅವಕಾಶ ಒದಗಿ ಬಂದಾಗ ಏಕೆ ಬೇಡವೆನ್ನಲಿ?. ಜೀವನೋಪಾಯ ಹೇಗೋ ನಡೆಯುತ್ತದೆ. ಅಪ್ಪ ತೀರಿಕೊಂಡ ನಂತರದ ಐದಾರು ವರ್ಷಗಳಲ್ಲಿ ಅಮ್ಮನೂ ಕಣ್ಮುಚ್ಚಿದಳು. ಅಪ್ಪ ಅಮ್ಮ ಹೋದ ಮೇಲೆ ಊರಿನ ನಂಟೂ ಕಡಿದು ಹೋಯಿತು. ಇದ್ದ ಒಬ್ಬ ಅಣ್ಣನ ಜತೆ ಬಾಂಧವ್ಯ ಮೊದಲಿನಿಂದಲೂ ಅಷ್ಟಕಷ್ಟೇ. ಬೆಂಗಳೂರಿನ ಆ ಖಾಸಗಿ ಕಾಲೇಜಿನ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ಕೊಟ್ಟಾಗ ನನಗೆ ಐವತ್ತು ವರ್ಷ ವಯಸ್ಸು. ಆ ನನ್ನ ನಿರ್ಧಾರ ದುಡಿಕಿನದಾಗಿತ್ತೇ? ಮನಸ್ಸು ಮಾಡಿದ್ದರೆ ಒಂದು ಪಿ ಎಚ್ ಡಿ ಮಾಡಬಹುದಿತ್ತು. ಏಕೋ ಆ ಕಡೆ ಮನಸ್ಸು ಹೋಗಲಿಲ್ಲ. ನನ್ನಷ್ಟೇ ಸರ್ವಿಸ್ ಆದವರು, ನನಗಿಂತ ಚಿಕ್ಕವರು ಪಿ ಎಚ್ ಡಿ ಮಾಡಿದರು. ಪ್ರಿನ್ಸಿಪಾಲರು ಒಂದು ದಿನ ಕರೆಸಿ ‘ ಏಕೆ ಆಚಾರ್ಯರೇ ನಿಮಗೆ ಡಾಕ್ಟರೇಟ್ ಮಾಡುವ ಆಸೆಯಿಲ್ಲವೇ? ಒಂದು ದಿನ ನಿಮಗೆ inferiority complex ಕಾಡಬಹುದು. ಈಗಲೂ ಕಾಲ ಮಿಂಚಿಲ್ಲ. ವಿಶ್ವವಿದ್ಯಾಲಯದಲ್ಲಿ ನನ್ನ ಸ್ನೇಹಿತರು ಸಾಕಷ್ಟು ಜನ ಇದ್ದಾರೆ. ನಾನು ಹೇಳುವೆ. ನಿಮಗೆ ಗೈಡ್ ಆಗುತ್ತಾರೆ. ನಾಳೆಯೇ ಹೆಸರನ್ನು ರಿಜಿಸ್ಟರ್ ಮಾಡಿಸಿ’ ಎಂದು ಹೇಳಿದರು. ಆದರೆ ನಾನು ಕೆಲಸದಿಂದಲೇ ಸ್ವಯಂ ನಿವೃತ್ತಿಗೆ ಅರ್ಜಿ ಕೊಟ್ಟೆ. ಅಂದು ಬೆಂಗಳೂರು ಬಿಟ್ಟವನು ಇಪ್ಪತ್ತು ವರ್ಷಗಳ ಒಂದು ರೀತಿಯ ಅಜ್ಞಾತವಾಸದಿಂದ ಮುಕ್ತಿ ಹೊಂದಿ ಈ ಬೆಂಗಳೂರಿನ ಹಿಂದಿನ ಪರಿಚಿತ ಸ್ಥಳಕ್ಕೆ ಬರುತ್ತಿದ್ದೇನೆ.
ಬಸ್ಸಿನ ಡ್ರೈವರ್ ಯಾಕೋ ಬ್ರೇಕ್ ಹಾಕಿದಾಗ ಕುಳಿತಿದ್ದ ಸೀಟಿನಿಂದ ಮುಂದಕ್ಕೆ ಜಗ್ಗಿದಂತಾಗಿ ಆಚಾರ್ಯರ ತೂಕಡಿಕೆ ಹಾರಿಹೋಯಿತು. ನೆಲಮಂಗಲ ದಾಟಿ ಬೆಂಗಳೂರು ಸಿಟಿಯ ಒಳಗೆ ಬಸ್ಸು ಬಂದಿತ್ತು. ಆಚಾರ್ಯರು ತಮ್ಮ ಎಡ ಹೆಗಲಿಗೆ ನೇತು ಹಾಕಿಕೊಂಡಿದ್ದ ಬ್ಯಾಗಿನಿಂದ ಕಪ್ಪು ಬಣ್ಣದ ಡೈರಿಯೊಂದನ್ನು ತೆಗೆದು ಕನ್ನಡಕ ಹಾಕಿಕೊಂಡು ತಾವು ಈಗ ಹೋಗಬೇಕಾದ ವಿಳಾಸವನ್ನು ಒಮ್ಮೆ ನೋಡಿಕೊಂಡರು. ವಿಲ್ಸನ್ ಗಾರ್ಡನ್ ಮೂರನೇ ಕ್ರಾಸು. ಮನೆ ಹೆಸರು ಸಹ್ಯಾದ್ರಿ. ಮನೆ ಎದುರಿಗೆ ಪಾರ್ಕ್ ಇದೆ. ಇಪ್ಪತ್ತು ವರ್ಷಗಳ ಹಿಂದೆ ನನ್ನ ಸಹೋದ್ಯೋಗಿ ಪ್ರೊಫೆಸರ್ ನಾಗಭೂಷಣ ಅಲ್ಲಿ ಕಟ್ಟಿದ್ದ ಮನೆಯ ಗೃಹ ಪ್ರವೇಶದ ಆಹ್ವಾನ ಪತ್ರಿಕೆಯಲ್ಲಿದ್ದ ವಿಳಾಸ. ಪತ್ರ ವ್ಯವಹಾರಕ್ಕೆ ಬೇಕಾಗುತ್ತದೆ ಎಂದು ಬರೆದಿಟ್ಟುಕೊಂಡಿದ್ದೆ. ಕಾಲೇಜು ಬಿಟ್ಟ ಮೇಲೆ ಯಾರಿಗೂ ಒಂದೂ ಕಾಗದ ಬರೆಯಲಿಲ್ಲ.. ಆಗ ತಾನೇ ಮೊಬೈಲ್ ಬಂದಿತ್ತು. ಅವು ಈಗ ಲಡಕಾಸಿ ಎನಿಸಿಕೊಳ್ಳುವ ಮಾದರಿಯವು. ನಾನು ತೆಗೆದುಕೊಂಡಿರಲಿಲ್ಲ. ಈ ಮನೆ ಕೆಲಸ ಮುಗಿಯಲಿ ನಾನು ಮೊಬೈಲ್ ತೊಗೋತೀನಿ ಅಂತ ಅವನು ಹೇಳುತ್ತಿದ್ದ. ಗೃಹ ಪ್ರವೇಶಕ್ಕೆ ಬರುವವರಿಗೆ ಅನುಕೂಲವಾಗಲಿ ಎಂದು ಆಹ್ವಾನ ಪತ್ರಿಕೆಯಲ್ಲಿ ಸಿಟಿ ಮಾರ್ಕೆಟ್, ಶಿವಾಜಿನಗರ ಮತ್ತು ಮೆಜೆಸ್ಟಿಕ್ ನಿಂದ ವಿಲ್ಸನ್ ಗಾರ್ಡನ್ ಗೆ ಬರುವ ಸಿಟಿ ಬಸ್ಸುಗಳ ನಂಬರ್ ಹಾಕಿಸಿದ್ದ. ವಿಲ್ಸನ್ ಗಾರ್ಡನ್ ಪೊಲೀಸ್ ಸ್ಟೇಷನ್ ಸ್ಟಾಪ್ ನಲ್ಲಿ ಇಳಿಯಬೇಕು ಎಂದು ಸೂಚನೆ ಸಹ ಇತ್ತು. ಆ ಬಸ್ಸುಗಳ ನಂಬರ್ ಈಗ ಬದಲಾಗಿದೆಯೇನೋ? ಸಿಟಿ ಬಸ್ಟಾಂಡ್ ನಲ್ಲಿ ಯಾರಾದರೂ ಟಿ ಸಿ ಗಳನ್ನು ಕೇಳಿದರೆ ಆಯ್ತು. ಅದಕ್ಕೇಕೆ ಚಿಂತೆ? ನಾಗಭೂಷಣ ಈಗಲೂ ಅಲ್ಲೇ ಇರುತ್ತಾನೋ ಇಲ್ಲ ಆ ಮನೆ ಮಾರಿ ಎಲ್ಲಾದರೂ ಬೇರೆ ಕಡೆ ಹೋಗಿದ್ದರೆ? ಇನ್ನೂ ಇಬ್ಬರು ಸ್ನೇಹಿತರ ವಿಳಾಸ ಈ ಡೈರಿಯಲ್ಲಿದೆ. ಮೊದಲು ಇವನನ್ನು ನೋಡೋಣ. ಮುಂದಿನದು ಆಮೇಲೆ ಯೋಚಿಸಿದರಾಯಿತು.
*****
ರಾಮಾಚಾರ್ಯರು ಸಹ್ಯಾದ್ರಿ ಹೆಸರಿನ ಮನೆಯ ಮುಂದೆ ನಿಂತು ಒಮ್ಮೆ ಸುತ್ತಾ ನೋಡಿದರು. ಕಾಂಪೌಂಡ್ ನ ಕಬ್ಬಿಣದ ಗೇಟನ್ನು ತೆಗೆದು ಒಳಗೆ ಹೋದರು. ಮನೆಯ ಮುಂಬಾಗಿಲಿಗೆ ಮತ್ತೊಂದು ಕಬ್ಬಿಣದ ಬಾಗಿಲು. ಪಕ್ಕದ ಗೋಡೆಯ ಮೇಲಿನ ಕರೆ ಗಂಟೆ ಒತ್ತಿದರು. ಐದು ನಿಮಿಷವಾಯ್ತು. ಆತಂಕದಲ್ಲಿದ್ದಾಗ, ಕಾಯುವ ಪರಿಸ್ಥಿತಿಯಲ್ಲಿದ್ದಾಗ ಒಂದೊಂದು ನಿಮಿಷವೂ ಒಂದೊಂದು ಗಂಟೆಯಂತೆ ಭಾಸವಾಗುತ್ತದಲ್ಲವೇ? ಮೂರು ಸಲ ತಮ್ಮ ಕೈ ಗಡಿಯಾರ ನೋಡಿಕೊಂಡರು. ಮರದ ಬಾಗಿಲು ತೆರೆಯಿತು. ಕಬ್ಬಿಣದ ಬಾಗಿಲು ತೆರೆಯಲಿಲ್ಲ. ಅಲ್ಲೇ ಇಣುಕಿ ನೋಡಿದ ಒಬ್ಬರು ‘ಯಾರು ನೀವು? ಯಾರು ಬೇಕಾಗಿತ್ತು?’ ಎಂದು ಕೇಳಿದರು.
‘ನಾನು ರಾಮಾಪುರದ ರಾಮಾಚಾರ್ಯ ಅಂತ. ಇದು ನಾಗಭೂಷಣ ಅವರ ಮನೆಯೇ?’
‘ಹೌದು ನಾನೇ ನಾಗಭೂಷಣ. ನಿಮ್ಮ ಗುರುತು ಸಿಗುತ್ತಿಲ್ಲವಲ್ಲ?’
‘ನಾನು ಬೆಂಗಳೂರು ಬಸವನಗುಡಿಯ ವಿಎನ್ ಖಾಸಗಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿದ್ದೆ. ತಾವು ಅಲ್ಲೇ ಕನ್ನಡ ಪ್ರೊಫೆಸರ್ ಆಗಿದ್ದಿರಿ’…
‘ಬಾರಯ್ಯಾ ಬಾ. ಒಳಕ್ಕೆ ಬಾ. ಇಪ್ಪತ್ತು ವರ್ಷ ಎಲ್ಲೋ ಗುಹೇಲಿ ಯಾರಿಗೂ ಕಾಣದ ಹಾಗೆ ಅವಿತುಕೊಂಡಿದ್ದು ಕಂಪನಿ ನಾಟಕದ transfer scene ಥರ ಹೀಗೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರೆ ನಂಗೆ ಗಲಿಬಿಲಿ ಆಗಲ್ಲವೇನಯ್ಯಾ? ಈ ಮನೆಗೆ ಸಿ ಸಿ ಟಿವಿ ಕ್ಯಾಮೆರಾ ಹಾಕ್ಸಿದ್ದೀನಿ. ನೀನು ಬಾಗಿಲ ಹತ್ರ ನಿಂತಾಗಲೇ ನಿನ್ನ ಫೋಟೋ ಮನೆ ಒಳಗಡೇನೇ ನೋಡ್ದೆ. ನೀನು ರಾಮಾಚಾರ್ಯನೇ ಇರಬೇಕು ಅಂತ ಅನ್ಸುತು. ಆದ್ರೂ ವಯಸ್ಸಾಯ್ತಲ್ಲಯ್ಯ. ಅದಕ್ಕೆ ಅಷ್ಟು ತನಿಖೆ ಮಾಡ್ದೆ. ಬೇಸರ ಮಾಡ್ಕೋಬೇಡಯ್ಯಾ’.
‘ಇಲ್ಲಾ ಸಾರ್ ‘.
‘ನೋಡು ಈ ಸಾರು, ಹುಳಿ ಅಂತೆಲ್ಲಾ ನನ್ನ ಮಾತಾಡ್ಸಬೇಡ. ಈಗ ಮೊದಲು ಸ್ನಾನ ಮಾಡು. ಪ್ರಯಾಣದ ಆಯಾಸ ಅರ್ಧ ಕಳೆಯುತ್ತೆ. ಆಮೇಲೆ ಊಟ, ಊಟ ಆದ್ಮೇಲೆ ಒಂದು ಸಣ್ಣ ನಿದ್ದೆ ಮಾಡು. ಮಿಕ್ಕ ಮಾತೆಲ್ಲಾ ಸಂಜೆಗೆ. ನಡಿ ನಡಿ’.
ರಾಮಾಚಾರ್ಯರಿಗೆ ಸ್ನಾನ, ಊಟದ ನಂತರ ಒಂದೆರೆಡು ಗಂಟೆ ಒಳ್ಳೆಯ ನಿದ್ದೆ ಬಂದಿತ್ತು. ನಾಗಭೂಷಣರ ಮನೆಯಲ್ಲಿ ಅತಿಥಿಗಳಿಗೆಂದೇ ಮೀಸಲಾಗಿದ್ದ ಒಂದು ಬಾತ್ ರೂಮ್ ಸಹಿತ ಕೊಠಡಿಯಲ್ಲಿ ಮಲಗಿದ್ದ ಆಚಾರ್ಯರು ಮಂಚದಿಂದ ಎದ್ದು ಈಚೆಗೆ ಬಂದರು. ನಾಗಭೂಷಣರು ಅಡಿಗೆ ಮನೆಯಲ್ಲಿ ಕಾಫಿಗೆ ಡಿಕಾಕ್ಷನ್ ಹಾಕುತ್ತಿದ್ದರು.
‘ಬಾರಯ್ಯಾ ಇಲ್ಲೇ ಕೂತ್ಕೋ. ಇನ್ನೈದು ನಿಮಿಷಕ್ಕೆ ಕಾಫಿ ರೆಡಿ’.
‘ನಾಗಭೂಷಣ್ ಸರ್ ತಮ್ಮ ಶ್ರೀಮತಿ?’ ಕೇಳಲೋ ಬೇಡವೋ ಎಂದು ಮಧ್ಯಾಹ್ನದಿಂದ ಮನಸ್ಸಿನಲ್ಲೇ ಕೊರೆಯುತ್ತಿದ್ದ ಪ್ರಶ್ನೆ ರಾಮಾಚಾರ್ಯರ ಬಾಯಿಂದ ಈಚೆಗೆ ಬಂದೇ ಬಿಟ್ಟಿತು.
‘ಮಗ ಸೊಸೆ ಜತೆ ಬಾಂಬೆನಲ್ಲಿ ಇದ್ದಾಳಯ್ಯ. ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಎರಡು ವರ್ಷದ ಮಗು. ನಾನೀಗ ತಾತ ಕಣಯ್ಯಾ. ಅವರಿಬ್ಬರಿಗೂ ಬೆಂಗಳೂರಿಗೆ ವರ್ಗ ಆಗಲು ಇನ್ನೂ ಎರಡು ವರ್ಷ ಬೇಕಂತೆ. ಸೊಸೆಗೆ ಕೆಲಸ ಬಿಡಲು ಇಷ್ಟವಿಲ್ಲ. ಮಗು ನೋಡ್ಕೊಳಕ್ಕೆ ಒಬ್ಬರು ಬೇಕಲಪ್ಪ. ಈ ಕಾಲದಲ್ಲಿ ಬೇರೆಯರ ಮೇಲೆ ನಂಬಿಕೆ ಇಡೋದು ಕಷ್ಟ. ಈ ಮನೆ ಮಾರಿ ಅಲ್ಲಿಗೇ ಬನ್ನಿ ಅಂತ ನನ್ನೂ ಬಲವಂತ ಮಾಡ್ತಾರೆ. ನಂಗೆ ಇಷ್ಟವಿಲ್ಲ. ಏನ್ಮಾಡೋದು? ಹೀಗೇ ನಡೀತಾಯಿದೆ ಜೀವನ. ತೊಗೊ ಕಾಫಿ ಕುಡಿ. ಆಮೇಲೆ ವಾಕಿಂಗ್ ಹೋಗೋಣ’.
ಇಬ್ಬರೂ ಮನೆ ಎದುರಿನ ಪಾರ್ಕಿನಲ್ಲಿ ಎರಡು ಸುತ್ತು ವಾಕಿಂಗ್ ಮುಗಿಸಿ ಅಲ್ಲೇ ಇದ್ದ ಒಂದು ಕಲ್ಲು ಬೆಂಚಿನ ಕೂತರು. ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ. ನಾಗಭೂಷಣರೇ ಮೌನ ಮುರಿದರು. ‘ನೀನು ಇದ್ದಕ್ಕಿದ್ದ ಹಾಗೆ ರಾಜೀನಾಮೆ ಕೊಟ್ಟು ಹೋಗಿದ್ದು ನಮಗೆಲ್ಲಾ ಒಂದು ಶಾಕ್ ನ್ಯೂಸ್ ಕಣಯ್ಯಾ. ಒಂದು ತಿಂಗಳ ಕಾಲ ಕಾಲೇಜಿನಲ್ಲಿ ನಿನ್ನದೇ ಮಾತು. ನಿನಗೆ ಬೇಸರವಾಗದಿದ್ದರೆ, ನನಗೆ ಹೇಳುವ ವಿಷಯವಾಗಿದ್ದರೆ ಯಾಕೆ ನೀನು ಕೆಲಸಕ್ಕೆ ರಾಜೀನಾಮೆ ಕೊಟ್ಟೆ ಅಂತ ಈಗಲಾದರೂ ಹೇಳ್ತೀಯಾ?’
‘- – – – – – – – — ‘
‘ನೋಡು ನನ್ನ ಬಲವಂತವಿಲ್ಲ. ಸುಮ್ಮನೆ ಕುತೂಹಲಕ್ಕಷ್ಟೇ ಕೇಳಿದೆ. ಇದೇ ಕಾರಣ ಸಾಕು ಅಂತ ಇಲ್ಲಿಂದ್ಲೂ ಹೊರಟುಹೋಗ ಬೇಡ. ನಂಗೂ ಒಬ್ಬನೇ ಇದ್ದೂ ಇದ್ದೂ ಬೇಜಾರಾಗಿದೆ. ಒಂದು ಹದಿನೈದು ದಿನ ನಮ್ಮನೇಲಿ ಇರು. ಬೆಂಗಳೂರೆಲ್ಲಾ ಸುತ್ತೋಣ. ಈಗ ಬೆಂಗಳೂರು ಮೊದಲಿನ ಹಾಗಿಲ್ಲ ಕಣಯ್ಯಾ. ತುಂಬಾ ಬೆಳೆದಿದೆ. ಮೊಬೈಲ್ ಫೋನ್ ನಲ್ಲಿ ಆರ್ಡರ್ ಮಾಡಿದ್ರೆ ಮನೆ ಮುಂದೆ ಟ್ಯಾಕ್ಸಿ ಬಂದು ನಿಲ್ಲತ್ತೆ. ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿರು ಮೆಣಸಿನ ಕಾಯಿ, ನುಗ್ಗೆಕಾಯಿ, ಅಕ್ಕಿ, ಬೇಳೆ – – – – – ತರೋಕೆ ಹಿಂದಿನ ಹಾಗೆ ಜೇಬಲ್ಲಿ ದುಡ್ಡಿಟ್ಕೊಂಡು, ಕೈನಲ್ಲಿ ಚೀಲ ಹಿಡ್ಕೊಂಡು ಅಂಗಡಿಗೆ ಹೋಗಬೇಕಾಗಿಲ್ಲ. ಸಿನಿಮಾ, ಬಸ್ಸು, ರೈಲು, ಏರೋಪ್ಲೇನ್ ಟಿಕೆಟ್… ಎಲ್ಲಾ on line ವ್ಯವಹಾರ. ಒಂದು ಸ್ಮಾರ್ಟ್ ಮೊಬೈಲ್ ಫೋನ್ ಇದ್ರೆ ಸಾಕಯ್ಯಾ ದಿನ ನಿತ್ಯದ ಜೀವನಾನ ಆರಾಮವಾಗಿ ನಡ್ಸಬೋದು. ಇವೆಲ್ಲಾ ನನಗೆ ಬೇಡ. ಈ ಬೂರ್ಜ್ವಾಗಳ, ಬಂಡವಾಳಶಾಹಿಗಳ, ಕೊಳ್ಳುಬಾಕ ಸಂಸ್ಕೃತಿ, ಜಾಗತೀಕರಣದ ವಿರುದ್ಧ ದೇಸಿ ಸಂಸ್ಕೃತಿನ ಎತ್ತಿ ಹಿಡಿತೀನಿ, ಬೆಳೆಸ್ತೀನಿ, ಹೋರಾಡ್ತೀನಿ ಅಂದ್ರೆ ಮಾಡ್ಕೋ ಹೋಗು. ನಂಗೇನೂ ನಷ್ಟ ಇಲ್ಲ. ನನ್ನ ಹಿಂದೆ ಲಕ್ಷಾಂತರ ಜನ ಇದಾರೆ ಅನ್ನತ್ತೆ ಈ ಬೆಂಗಳೂರು’.
‘ಹಾಗಾದ್ರೆ ನಾನು ಈಗ ಅರ್ಜೆಂಟ್ ಆಗಿ ಒಂದು ಮೊಬೈಲ್ ಫೋನ್ ತೊಗೋಬೇಕು’.
‘ಹೂಂ ಕಣಯ್ಯಾ. ನೀನು ಇಪ್ಪತ್ತು ವರ್ಷ ಅಜ್ಞಾತವಾಸ ಅಂತ ಅದು ಯಾವುದೋ ಒಂದು ಊರಲ್ಲೋ, ಗುಹೆನಲ್ಲೋ ಇದ್ಯಲ್ಲ ಅಲ್ಲಿ ಇದ್ದ ಹಾಗಲಪ್ಪಾ ಬೆಂಗಳೂರಲ್ಲಿ ಇರೋದು’
ಇಬ್ಬರೂ ಜೋರಾಗಿ ನಕ್ಕರು.
‘ನೋಡು ಹೀಗೆ ನಗ್ತಾ ನಗ್ತಾ ಇರಬೇಕು. ಕೋಪ, ಬೇಸರ, ದುಃಖ ಅದು ಇದೂ ಅಂತ ಕೊರಗೋದ್ರಲ್ಲಿ ಯಾವ ಪುರುಷಾರ್ಥನೂ ಇಲ್ಲ ಕಣಯ್ಯಾ’.
‘ನೀವು ಹೇಳೋದು ಸರಿ ಸರ್’.
‘ಮತ್ತೆ ಸಾರು. ನಂಗೊತ್ತು ನೀನು ಬರೀ ಅಧ್ಯಾಪಕನಾಗಿದ್ದೆ; ನಾನು ಯಾವುದೋ ಒಂದು ತೌಡು ಕುಟ್ಟೋ ವಿಷಯದ ಮೇಲೆ ಥೀಸೀಸ್ ಬರೆದು ಪಿ ಎಚ್ ಡಿ ಮಾಡಿ ಪ್ರೊಫೆಸರ್ ಆದೆ ಅಂತ ಈ ಸರ್ ಅನ್ನೋ ಮರ್ಯಾದೆ ಅಲ್ವೇನಯ್ಯ. ನಾನು ಮಾಡಿದ್ದು ಏನಪ್ಪಾ ಅಂತಾ ದೊಡ್ಡ ಸಂಶೋಧನೆ? ‘ಕನ್ನಡದ ನವ್ಯ ಕಾದಂಬರಿಗಳಲ್ಲಿ ಹೆಣ್ಣಿನ ಸ್ಥಾನ ಮಾನ-ಒಂದು ಅಧ್ಯಯನ’. ಇದರಿಂದ ನನಗೆ ಪ್ರಯೋಜನ ಆಯ್ತು ಅಷ್ಟೇ. ಕಥೆ ಕಾದಂಬರಿ ಓದೋರಿಗೆ ಇದರಿಂದ ಮೂರುಕಾಸಿನ ಪ್ರಯೋಜನ ಇಲ್ಲಾ. ಅಲ್ವೇನಯ್ಯಾ?’
‘ – – – – – — – – – – -‘
‘ನನಗೆ ಬೆಂಗಳೂರಿನ ಗಾಂಧೀ ಬಜಾರು, ಬಳೇಪೇಟೆ, ಮೆಜೆಸ್ಟಿಕ್ಕು ಇಂತ ಕಡೆ ಇರೋ ಪುಸ್ತಕದಂಗಡಿಗಳ ಮಾಲೀಕರ ಪರಿಚಯ ಸ್ವಲ್ಪ ಇದೆ. ಕುತೂಹಲಕ್ಕೆ ಅಂತ ಒಂದು ದಿನ ನಾನು ಬರೆದ ಥೀಸಿಸ್ ನಲ್ಲಿ ಉಲ್ಲೇಖ ಮಾಡಿದ್ನಲ್ಲಾ ಆ ಕಾದಂಬರಿಗಳ ಹೆಸರನ್ನ ಮೂರ್ನಾಲಕ್ಕು ಹಾಳೇಲಿ ಬರ್ಕೊಂಡು ಹೋಗಿ ಇವೆಲ್ಲಾ ಎಷ್ಟು ಸಲ ಮರುಮುದ್ರಣ ಆಗಿದೆ ಅಂತ ಒಂದು ತಿಂಗಳಲ್ಲಿ ನೋಡಿ ಹೇಳೋಕ್ಕಾಗತ್ತಾ ಅಂತಾ ಅವರಿಗೆಲ್ಲಾ ಕೊಟ್ಟು ಬಂದೆ. ಎಲ್ಲರದ್ದೂ ಒಂದೇ ಉತ್ತರ ಕಣಯ್ಯಾ. ಒಂದು ತಿಂಗಳು ಯಾಕೆ. ನಾಳೆ ಮಧ್ಯಾಹ್ನದ ಹೊತ್ತಿಗೆ ಬನ್ನಿ. ನಿಮಗೇ ಈ ಕಾದಂಬರಿಗಳ ಒಂದೊಂದು ಕಾಪಿ ಕೊಡ್ತೀವಿ. ನೋಡೋರಂತೆ ಅಂದ್ರು. ನನ್ನ ಕುತೂಹಲಕ್ಕೆ ಅವರಿಗ್ಯಾಕೆ ತೊಂದ್ರೆ ಅಂತ ನಾನು ಒಂದು ವಾರ ಬಿಟ್ಟು ಹೋದೆ’.
‘ ಏನಾಯ್ತು? ಎರಡನೇ ಮುದ್ರಣನಾದ್ರೂ ಆಗಿತ್ತಾ?’
‘ನಾನು ಉಲ್ಲೇಖ ಮಾಡಿದ್ನಲ್ಲ ಒಂದು ಇಪ್ಪತ್ತೈದು ಕಾದಂಬರಿಗಳು, ಅದರಲ್ಲಿ ಹದಿನೈದು ಕಾದಂಬರಿಗಳ ಮೊದಲನೇ ಮುದ್ರಣದ್ದೇ ಕಾಪಿಗಳು ಖರ್ಚಾಗದೆ ಕೂತಿದ್ವು. ಇನ್ನು ಐದು ಕಾದಂಬರಿಗಳ ಲೇಖಕರು ಸತ್ತು ಹೋಗಿದ್ದರು. ಅವರ ನೆನಪಿಗಾಗಿ ಎರಡನೇ ಮುದ್ರಣ ಆಗಿದ್ವು. ಉಳಿದಿದ್ದು ಎಷ್ಟಪ್ಪಾ ಐದು. ಆಲ್ವಾ. ಅವು ಮಾತ್ರ ಎರಡನೇ ಮುದ್ರಣ ಆಗಿತ್ತು. ನವ್ಯ ಸಾಹಿತ್ಯದ ಕಾಲದ್ದು ಅಂತಲ್ಲ, ಅವುಗಳ ಕಥೆ ಚೆನ್ನಾಗಿತ್ತು ಅಂತ. ನಾನೇ ತಾನೇ ತೌಡು ಕುಟ್ಟಿದ್ದು. ಬೇಡದೆ ಇದ್ರೂ ಹೋಗ್ಲಿ ಅಂತ ಒಂದೊಂದು ಅಂಗಡಿಲಿ ಎರಡೆರೆಡು ಪುಸ್ತಕ ಅಂತ ದುಡ್ಡು ಕೊಟ್ಟು ಮನೆಗೆ ತಂದೆ!’
ರಾಮಾಚಾರ್ಯರಿಗೆ ಮತ್ತೊಮ್ಮೆ ನಗು ಬಂತು. ‘sorry’ ಅಂದರು.
‘ಅಯ್ಯೋ ಅದಕ್ಕೆ ಯಾಕಯ್ಯ sorry. ನಾನೇಕೆ ಇದ್ನ ಹೇಳ್ದೆ ಅಂದ್ರೆ, ನೀನು ಮನಸ್ಸು ಮಾಡಿದ್ರೆ ನನಗಿಂತ ಮುಂಚೆ ಒಳ್ಳೆ ವಿಷಯದ ಮೇಲೆ ಥೀಸಿಸ್ ಬರೆದು ಪಿ ಎಚ್ ಡಿ ಮಾಡಿ ಪ್ರೊಫೆಸರ್ ಆಗ ಬಹುದಾಗಿತ್ತು ಅಂತ. ನೀನೋ ಆಕಾಶನೇ ತಲೆ ಮೇಲೆ ಬಿದ್ದಿರೋನ್ತರ ಇರ್ತಿದ್ದೆ. ನೋಡು ನಮ್ಮಿಬ್ಬರಿಗಿಂತ ಸರ್ವಿಸ್ ನಲ್ಲಿ ಜೂನಿಯರ್ ಆಗಿದ್ದರೂ ಬೇಗ ಪಿ ಎಚ್ ಡಿ ಮಾಡಿದ್ನಲ್ಲ ಕೃಷ್ಣರಾವ್ ಅವ್ನು ಇಲ್ಲಿನ ಯೂನಿವರ್ಸಿಟಿಯ ಕನ್ನಡ ಅಧ್ಯಯನ ಸಂಸ್ಥೆನಲ್ಲಿ ಡೈರೆಕ್ಟರ್ ಆಗಿ ರಿಟೈರ್ಡ್ ಆದ. ಆಯ್ತು ಆ ಹಳೆ ಪುರಾಣ ಬೇಡ ಸಾಕು. ಇಲ್ಲೇ ಐದನೇ ಕ್ರಾಸ್ ನಲ್ಲಿ ಚುರುಮುರಿ, ಮೆಣಸಿನಕಾಯಿ ಬೋಂಡಾ ಚೆನ್ನಾಗಿ ಮಾಡ್ತಾರೆ. ನಡಿ ಹೋಗೋಣ’.
ರಾತ್ರಿ ಊಟವಾದ ಮೇಲೆ ರಾಮಾಚಾರ್ಯರು ತಮ್ಮ ಕಪ್ಪು ಬಣ್ಣದ ಡೈರಿ ಮತ್ತು ನಾಲ್ಕೈದು ಹಾಳೆಗಳನ್ನು ನಾಗಭೂಷಣರಿಗೆ ಕೊಡುತ್ತಾ ‘ನೀವು ಸಂಜೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಇದರಲ್ಲಿ ನಿಮಗೆ ಸಿಗಬಹುದು ಓದಿ ನೋಡಿ. ನನಗೆ ರಾತ್ರಿ ಹತ್ತು ಗಂಟೆಗೆ ಮಲಗಿ ಅಭ್ಯಾಸ. ನಿದ್ದೆ ಬರ್ತಿದೆ. ರೂಮ್ಗೆ ಹೋಗಿ ಮಲಕ್ಕೊಳ್ಳೇ? ಎಂದರು.
‘ಓ ಆಗಬಹುದು. ಮಲಕ್ಕೋ ಹೋಗು. ನನಗೆ ರಾತ್ರಿ ಹನ್ನೆರಡು ಗಂಟೆ ತನಕ ನಿದ್ದೆ ಬರೋಲ್ಲ. ಈಗಲೇ ಓದ್ತೀನಿ’.
‘ನಿಧಾನವಾಗಿ ಓದಿ. ಅವಸರವೇನಿಲ್ಲ’.
‘ಆದ್ರೆ ಒಂದು ಕಂಡೀಶನ್. ನಾನು ಇದನ್ನು ಓದಿ ನಿನಗೇನೂ ಪ್ರಶ್ನೆ ಕೇಳೋಲ್ಲ. ಯಾರಿಗೂ ರಾಮಾಚಾರ್ಯ ಹೀಗಂತೆ ಹಾಗಂತೆ ಅಂತ ಹೇಳಲ್ಲ. ನನ್ನ ಹೆಂಡತಿಗೂ ಹೇಳಲ್ಲ ಕಣಯ್ಯಾ. ಆರಾಮಾಗಿ ನಿದ್ದೆ ಮಾಡು. ಬೆಳಗ್ಗೆ ನಾನು ಏಳೋಕೆ ಮುಂಚೆ ಮನೆ ಬಿಟ್ಟು ಮಾತ್ರ ಹೋಗಬೇಡ. ಈ ಷರತ್ತು ಒಪ್ಪಿಗೆನಾ?’
‘ಒಪ್ಪಿದೆ’
‘Ok. Good night’.
ನಾಗಭೂಷಣ ಡೈರಿಯ ಒಂದೊಂದೇ ಪುಟ ಓದುತ್ತಾ ಹೋದರು……..
(ಮುಂದುವರಿಯುತ್ತದೆ)