ವಿಷಯದ ವಿವರಗಳಿಗೆ ದಾಟಿರಿ

ಮೇ 4, 2017

4

ಸಿದ್ಧಾಂತಕ್ಕಾಗಿ ಬದುಕುವ ಜೀವನ ಯಾವ ಸಂತರಿಗೂ ಕಡಿಮೆಯದ್ದಲ್ಲ..

‍ನಿಲುಮೆ ಮೂಲಕ

– ಅರುಣ್ ಬಿನ್ನಡಿ

೨೫ ವರ್ಷಗಳ ಪ್ರಚಾರಕ್ ಜೀವನದಲ್ಲಿ ಗಳಿಸಿದ ಆಸ್ತಿ ಮೂರೂ ಜೊತೆ ಪಂಚೆ,ಎರಡು ಜುಬ್ಬ, ಎರಡು ಮೊಬೈಲ್, ಪುಸ್ತಕಗಳು ಜೊತೆಗೆ ಪ್ರಾಣಕೊಡುವ ಅಸಂಖ್ಯಾತ ಕಾರ್ಯಕರ್ತರು….

ಕೆಲವೊಮ್ಮೆ ಇಂದಿನ ಕರ್ನಾಟಕ ಬಿಜೆಪಿ ಯ ಸೈದ್ಧಾಂತಿಕ ತಿಕ್ಕಾಟಗಳಿಗೆ ನರೇಂದ್ರ ಮೋದಿಯೆ ಕಾರಣ ಎನ್ನಿಸಿ ಬಿಡುತ್ತದೆ, ಯುವ ಸಮುದಾಯವನ್ನು ಕಾಂಗ್ರೆಸಿನ ಪಾರಂಪರಿಕ ಓಲೈಕೆ ಹಾಗು ಜಾತಿ ರಾಜಕಾರಣದಿಂದ ರಾಷ್ಟ್ರೀಯತೆಯ ಸೈದ್ಧಾಂತಿಕ ರಾಜಕಾರಣಕ್ಕೆ, ಅಭಿವೃದ್ಧಿ ರಾಜಕಾರಣಕ್ಕೆ, ನೈತಿಕ ರಾಜಕಾರಣಕ್ಕೆ ಬದಲಾಯಿಸಿದ್ದೆ ದೊಡ್ಡ ಅಪರಾಧವಾಗಿಬಿಟ್ಟಿದೆ ಎನ್ನಬಹುದು. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಮಾಧ್ಯಮಗಳಲ್ಲು ಸಹ ರಾಜಕಾರಣದ ಬದಲಾವಣೆ ಬಯಸುವ ಯುವ ಸಮುದಾಯ ಎಲ್ಲ ಪಕ್ಷಗಳನ್ನು ಒತ್ತಡಕ್ಕೆ ಹಚ್ಚಿವೆ ಎಂದರೆ ತಪ್ಪಿಲ್ಲ. ಸಾಲು ಸಾಲು ತಪ್ಪುಗಳನ್ನೇ ಮಾಡಿ ಈಗ ಬದಲಾಗುತ್ತೇವೆ ಎನ್ನುತ್ತಿರುವ ಕರ್ನಾಟಕ ಬಿಜೆಪಿಯ ಮುಖಗಳನ್ನು ಸಹಿಸಿಕೊಳ್ಳಬೇಕಾದ ದುಸ್ಥಿತಿಯಲ್ಲಿ ನಾಡಿನ ಯುವ ಜನತೆ ಇಲ್ಲ ಎನ್ನುವ ಸ್ಪಷ್ಟತೆ ಅರಿತ  ಕರ್ನಾಟಕ ಬಿಜೆಪಿಯ ಸಂಘಟನೆಯ ಭಾಗ ಸಂಘಟನೆಗೆ ಹೊಸ ರೂಪಕೊಡಲು ಹೋಗಿದ್ದೆ ಈ ಎಲ್ಲ ತಿಕ್ಕಾಟಗಳಿಗೆ ಕಾರಣ ಎಂದರೆ ತಪ್ಪಿಲ್ಲ. ರಾಜಕಾರಣವೇ ಹಾಗೆ ಅಲ್ಲವೇ, ಇಲ್ಲಿ ಲಾಬಿಗಳ ಮಹಾದಂಡೆ ಇರುತ್ತದೆ ಅವುಗಳು ಸುಮ್ಮನೆ ಇರಲು ಹೇಗೆ ಸಾಧ್ಯ ಹಾಗಾಗಿ ಕರ್ನಾಟಕ ಬಿಜೆಪಿಯ ಬದಲಾವಣೆಯ ಕಟ್ಟ ಕಡೆಯ ಘಟ್ಟದಲ್ಲಿ ಬಂದು ನಿಂತಿರುವುದರಿಂದ ಮಹಾ ಸ್ಫೋಟಗಳು ಉತ್ಪತಿಯಾಗುತ್ತಿವೆ. ಹಾಗಾಗಿ ಹಿಂದೆದೂ ನಾಡಿನ ಜನತೆ ಕೇಳದ ಹೆಸರೊಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ, ಹೆಸರಿಗೆ ಕಳಂಕ ಹಚ್ಚಲು ಹುನ್ನಾರಗಳು ನಡೆಯುತ್ತಿವೆ. ಆದರೆ ಇವೆಲ್ಲವುಗಳ ನಡುವೆ ಸಾಮಾನ್ಯ ಜನರಾದ ನಾವು ಬಿಜೆಪಿಯಲ್ಲಿ ಗುಪ್ತಗಾಮಿನಿಯಂತಿದ್ದ “ಸಂತೋಷ್ ಬಿ.ಎಲ್” ಹೆಸರಿನ ಹಿಂದಿರುವ ವ್ಯಕ್ತಿತ್ವವನ್ನು ತೆರೆದ ಮನಸ್ಸಿನಿಂದ ನೋಡಬೇಕಾಗಿದೆ.

ಸಂತೋಷ್ ಬಿ.ಎಲ್ ಅಥವಾ ಕಾರ್ಯಕರ್ತರು ಪ್ರೀತಿಯಿಂದ ಸಂತೋಷ್ ಜೀ ಎಂದು ಕರೆಯುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವುದು ಸಾಮಾನ್ಯ ವಿಚಾರವಲ್ಲ. ಏಕೆಂದರೆ ಆ ಮನುಷ್ಯ ಇಲ್ಲಿಯವರೆಗೆ ಕಾರ್ಯಕರ್ತರೊಂದಿಗೆ ಖಾಲಿ ಹರಟೆ ಮಾಡಿಯೇ ಇಲ್ಲ. ಬರಿ ಕೆಲಸ ಕೆಲಸ ಅಷ್ಟೆ. ಸೋಷಿಯಲ್ ಮೀಡಿಯಾಗಳಲ್ಲಿ ಕಾರ್ಯಕರ್ತರು ತೋಡಿಕೊಂಡ ಅಭಿಮಾನ ಹಾಗು ಕೋಪದ ಎಲ್ಲ ರೀತಿಯ ಬರಹಗಳನ್ನು ನೋಡಿದ ಮೇಲೆ ಹಾಗು ಸಂಘದ ಹಲವು ಹಿರಿಯರ ಬಳಿ ಅವರ ಬಗ್ಗೆ ಕೇಳಿದಾಗ ಹಾಗು ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನೋಡಿರುವ ಕಾರಣದಿಂದ ಈ ಮನುಷ್ಯ ಸಾಮಾನ್ಯನಲ್ಲ, ಗಟ್ಟಿಗ, ಪ್ರಖರ ಹಿಂದುತ್ವವಾದಿ, ಸಿದ್ದಾಂತ ನಿಷ್ಠ, ದುಡಿಮೆಗಾರ, ಮುಂಗೋಪಿ ಎನ್ನುವುದು ಖಾತ್ರಿಯಾಯಿತು ಇವೆಲ್ಲವನ್ನೂ ನೋಡಿ ಕೇಳಿದ ಮೇಲೆ ಸಂತೋಷ್ ಜೀ ಎಂದೂ  “ಮುಖ್ಯಮಂತ್ರಿ” ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ ಎಂದು ಎದೆ ತಟ್ಟಿ ಹೇಳುತ್ತಲೇ, ಈ ಕೆಲವು ಉದಾಹರಣೆಗಳನ್ನು ನೀಡುತ್ತೇನೆ.

೨೦೧೧ ರಲ್ಲಿ ಸದಾನಂದ ಗೌಡರು ಮುಖ್ಯಮಂತ್ರಿ ಯಾಗುವ ವೇಳೆಗೆ ಸಂತೋಷ್ ಅವರನ್ನು ಮುಖ್ಯಮಂತ್ರಿ ಮಾಡಲು ಸೈದ್ಧಾಂತಿಕ ಹಿನ್ನಲೆಯ ಶಾಸ ಕರ ತಂಡ ಪ್ರಯತ್ನ ಮಾಡಿದರು. ಆಗ ಅವರೆಲ್ಲರನ್ನ ಬಿಜೆಪಿಯ ಜಗನ್ನಾಥ ಭವನದ ಪಾಂಚಜನ್ಯ ಕೊಠಡಿಯಲ್ಲಿ ಒಟ್ಟು ಸೇರಿಸಿ  ನಾನು ಇಲ್ಲಿ ಸಿಎಂ ಆಗಲು ಬಂದಿಲ್ಲ ಎಂದು ಗುರುಗುಟ್ಟಿ, ಇದೆ ಕೊನೆ ಇನ್ನೆಂದು ಇಂತಹ ಚಟುವಟಿಕೆಗಳು ನಡೆಯಬಾರದು. ಇಂತಹ ನಡೆಗಳು ಸಂಘಟನೆಗೆ ಹಾಗು ಸಂಘಟನಾ ಕಾರ್ಯದರ್ಶಿ ಜವಾಬ್ದಾರಿಗೆ ಕಳಂಕ ತರುತ್ತವೆ ಎಂದು ಬಾಗಿಲ್ಲನ್ನು ಧಡಾರನೆ ಮುಚ್ಚಿ ಸಿಟ್ಟಿನಿಂದ ಹೊರನಡೆದಿದ್ದರು.

೨೦೧೩ ರಲ್ಲಿ ವಿಧಾನಸಭೆ ಚುನಾವಣೆ ಸೋತ ನಂತರ ನರೇಂದ್ರ ಮೋದಿಯ ಮುಖ ಹಿಡಿದು ಕಾಂಗ್ರೆಸ್ ನ ದುರಾಡಳಿತದ ಕರಪತ್ರಗಳನ್ನು ಮನೆ ಮನೆಗೆ ತಲುಪಿಸಲು ‘ ಔಟ್ ರಿಚ್ ‘ ಕಾರ್ಯಕ್ರಮಕ್ಕೆ ಜಗನ್ನಾಥ ಭವನದಲ್ಲಿ ಎಲ್ಲ ಉದ್ಯೋಗಿ ಕಾರ್ಯಕರ್ತರ ಬೈಠಕ್ ನಡೆಯುತಿತ್ತು. ನೆನಪಿರಲಿ ಸೋತು ಹೋಗಿದ್ದ ಬಿಜೆಪಿಗೆ ಅಂದು ಸರಿಯಾದ ನಾಯಕತ್ವ ಇರಲಿಲ್ಲ, ಬಹಳಷ್ಟು ನಾಯಕರು ದಿಕ್ಕಾಪಾಲಾಗಿದ್ದರು. ಚುನಾವಣೆ ಕಳೆದು ಕೇವಲ ಎರಡು ತಿಂಗಳು ಕಳೆದಿರಲಿಲ್ಲ,ಕೋಮಾದಲ್ಲಿದ ರಾಜ್ಯ ಬಿಜೆಪಿ ಘಟಕವನ್ನು ಪುನರ್ ನಿರ್ಮಾಣ ಮಾಡಲು ಈ ಮನುಷ್ಯ ಆಗಲೆ ತಯಾರಿ ನಡೆಸಿಯಾಗಿತ್ತು. ಆ ಬೈಠಕ್ ನಲ್ಲಿ ಅಲ್ಲಿದ್ದ ಎಲ್ಲಾ ಕಾರ್ಯಕರ್ತರು ನೀವು ಮುಂದಿನ ಸಿಎಂ ಆಗಬೇಕು ಎಂದಾಗ ಕಣ್ಣು ಕೆಂಪು ಮಾಡಿಕೊಂಡೆ ಇದು ಸಾಧ್ಯವಿಲ್ಲ ಮೊದಲು ಮಾಡುವ ಕೆಲಸದ ಬಗ್ಗೆ ಚಿಂತಿಸಿ ಎಂದು ಅಬ್ಬರಿಸಿದ್ದರು. ಅಂದು ಇಡೀ ಕೊಠಡಿ ಒಂದು ಕ್ಷಣ ನಿಶ್ಯಬ್ದವಾಗಿತ್ತು.

ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಇಂತಹ ನೂರಾರು ಘಟನೆಗಳನ್ನು ಕಣ್ಣಾರೆ ನೋಡಿದ್ದೇನೆ. ಅವರ ಕೋಪ, ಸಿಟ್ಟು, ಸಂಘಟನಾ ಕೌಶಲ್ಯ, ಕಾರ್ಯಕರ್ತರ ಮೇಲಿನ ಪ್ರೀತಿ, ನಿದ್ದೆ ಇಲ್ಲದೆ ದುಡಿಯುವ ಪರಿ ಎಲ್ಲವನ್ನು ದೂರದಿಂದಲೇ ನೋಡಿ ಹೆಮ್ಮೆ ಪಟ್ಟಿದ್ದೇನೆ. ಪ್ರತಿ ಕಾರ್ಯಕ್ರಮ ನಡೆಯುವಾಗ ವೇದಿಕೆ ಮೇಲೆ ರಾಜಕಾರಣಿಗಳು ಅಬ್ಬರಿಸುವಾಗ ಯಾವುದೊ ಮೂಲೆಯಲ್ಲಿ ನಿಂತು ಮೈಕ್ ಸೌಂಡ್ ಸರಿ ಇದೆಯೇ, ಚೇರು ಸರಿ ಸಂಖ್ಯೆಯಲ್ಲಿ ಇದೆಯಾ, ಕುಡಿಯಲು ನೀರಿದೆಯೆ, ಹೀಗೆ ಸಾಮಾನ್ಯ ಸಂಗತಿಗಳಲ್ಲೂ ಪರಫೆಕ್ಷನ್ ಬಯಸುತ್ತ ತೆರೆಮರೆಯಲ್ಲಿ ದುಡಿದ ವೈಚಾರಿಕ ವ್ಯಕ್ತಿಯ ಬಗ್ಗೆ ಸೋಕಾಲ್ಡ್ ರಾಜಕಾರಣಿಗಳ ಚೇಲಾಗಳು ಅಬ್ಬರಿಸುವಾಗ ಖಂಡಿತವಾಗಿ ” ಚರೈವೇತಿ ಚರೈವೇತಿ” ಪದಗಳನ್ನು ಕೇಳಿ ಬೆಳೆದ ಕಾರ್ಯಕರ್ತನ ಮನಸ್ಸಿಗೆ ಆಗುವ ನೋವು ಎಂತದ್ದು ಎಂದು ಇವರ್ಯಾರಿಗೂ ಅರ್ಥವಾಗುವುದಿಲ್ಲ. ಇದನ್ನು ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಳು ಖಾತ್ರಿಪಡಿಸುತ್ತಿವೆ.

ಬಿ ಎಲ್ ಸಂತೋಷ್ ಅವರ ಮೇಲೆ ಮುಗಿಬಿದ್ದವರಿಗೆ ಹಲವು ವಿಚಾರ ತಿಳಿದೇ ಇಲ್ಲ ಎನ್ನುವುದು ಅವರ ವಾದಗಳೇ ಸ್ಪಷ್ಟಪಡಿಸುತ್ತವೆ. ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ತಾಕತ್ತಿಲ್ಲ, ಅವರ್ಯಾರು ಅಂತ ಜನಕ್ಕೆ ಗೊತ್ತೇ ಇಲ್ಲ, ಅವರು ಮಾಸ್ ಲೀಡರ್ ಅಲ್ಲ, ಇಂತಹ ಹೇಳಿಕೆಗಳು ರಾಜಕೀಯದ ಪಡಸಾಲೆಗಳ್ಳಲ್ಲಿ ಪದೇ ಪದೇ ಉಪಯೋಗವಾಗುವ ಬಿಸ್ಕೆಟ್ ಹೇಳಿಕೆಗೆಳು ಅಂತ ಜಗತ್ತಿಗೆ ಗೊತ್ತಿದೆ. ಬಿಜೆಪಿಯ ಸಂಘಟನೆಯ ಹಿಂದೆ ಇರುವ ಯಾವ ವ್ಯಕ್ತಿಯು ರಾಜಕೀಯ ಕಾರ್ಯಕ್ರಮದ ವೇದಿಕೆ ಹತ್ತುವುದಿಲ್ಲ.. ಅದು ಪ್ರಚಾರಕರಿಗೆ ಇರುವ ನಿಯಮ, ಇಂತಹ ನಿಯಮಾವಳಿಗಳು ಅವರ ಶಕ್ತಿಯೆ ಹೊರತು ದೌರ್ಬಲ್ಯವಲ್ಲ. ವೇದಿಕೆ ಸಿದ್ಧಪಡಿಸುವದರಿಂದ ಹಿಡಿದು ಕಾರ್ಯಕರ್ತರನ್ನು ಒಗ್ಗೂಡಿಸುವ ಶಕ್ತಿ  ಇಂತಹ  ಸಂಘಟನಾ ವ್ಯಕ್ತಿಗಳು ಎನ್ನುವುದು ಇವರ್ಯಾರಿಗೂ ತಿಳಿದಿಲ್ಲ. ಪ್ರತಿ ಕಾರ್ಯಕ್ರಮಕ್ಕೂ ತಿಂಗಳುಗಟ್ಟಲೆ ಮಣ್ಣು ಹೊತ್ತಿರುತ್ತಾರೆ ಎನ್ನುವ ಸಾಮಾನ್ಯ ಜ್ಞಾನವು ಇಲ್ಲದ ಭಟ್ಟಂಗಿ ಪಡೆ ಲಾಭಿಗಾಗಿ ಆಗಾಗ ಲಬೊ ಲಬೊ ಎನ್ನುತ್ತಲೆ ಇರುತ್ತದೆ. ಪ್ರತಿ ಸಂಘಟನೆ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ಗ್ರಾಮ ಪಂಚಾಯಿತಿ ಗೆಲ್ಲದಿರಬಹುದು. ಆದರೆ ಸಾವಿರಾರು ಗ್ರಾಮ ಪಂಚಾಯಿತಿ ಗೆಲ್ಲಿಸುವ ತಾಕತ್ತಿದೆ, ಮಾಸ್ ಲೀಡರ್ ಆಗದಿರಬಹುದು ಆದರೆ ಸಾಮಾನ್ಯ ಕಾರ್ಯಕರ್ತನನ್ನ ಮಾಸ್ ಲೀಡರ್ ಮಾಡುವ ಕಮಿಟ್ ಮೆಂಟ್ ಇರುತ್ತದೆ. ಎಲ್ಲವನ್ನು ಬದಿಗೊತ್ತಿ ಕೇವಲ ಸಿದ್ದಾಂತಕ್ಕೆ ಬದುಕುವ ಆ ಜೀವನ ಇದೆಯಲ್ಲ ಅದು ಯಾವ ಋಷಿತ್ವಕ್ಕೂ ಕಡಿಮೆಯದ್ದೇನೂ ಅಲ್ಲ.

ಪ್ರಚಾರದ ಹಂಬಲಕ್ಕೆ ಬೀಳದ ಸಂತೋಷ್ ಅವರನ್ನು ಒಮ್ಮೆ ಒಳಗಿಳಿದು ನೋಡಬೇಕಿದೆ. ಬಿಜೆಪಿಯ ಸಂಘಟನಾ ಕಾರ್ಯದರ್ಶಿಗಳ ಎಲ್ಲರ ಫೋಟೋಗಳು ತುಂಬಾ ದೊರೆಯುತ್ತವೆ.. ಆದರೆ ಸಂತೋಷ್ ರವರ ಮೂರೂ ಫೋಟೋಗಳನ್ನ ಇಟ್ಕೊಂಡು ಮಾಧ್ಯಮಗಳು ಚರ್ಚಿಸುತ್ತಿವೆ. ಅಂದರೆ ಅವರ ಗುಪ್ತಗಾಮಿನಿ ವ್ಯಕ್ತಿತ್ವಕ್ಕೆ ಹಿಡಿದ ಕೈ ಗನ್ನಡಿಯಲ್ಲವೆ..? ಎಲ್ಲರಿಗೂ ಪಿ.ಎ ಗಳಿದ್ದರು.. ಇಲ್ಲಿಯವರೆಗೆ ಒಬ್ಬೇ ಒಬ್ಬ ಪಿ.ಎ ಇಟ್ಟುಕೊಳ್ಳದೆ ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಿರುವ ವರ್ಕೋಹಾಲಿಕ್ ವ್ಯಕ್ತಿತ್ವ ಸಂತೋಷ್ ಅವರದ್ದು. ಯಾವುದೇ ವಿಚಾರ ಕೊಡಿ, ಅದನ್ನ ಸಮರ್ಥವಾಗಿ ಮಂಡನೆ ಮಾಡುವ ತಾಕತ್ತು ಈ ವ್ಯಕ್ತಿಗಿದೆ ಅಂದರೆ ಅಧ್ಯಯನದ ತುಡಿತ ಹೇಗಿರಬಹುದು ಯೋಚಿಸಿ. ಅಂತಾರಾಷ್ಟ್ರೀಯ ಮಟ್ಟದಿಂದ ಹಿಡಿದು ಸಣ್ಣ ಸಣ್ಣ ವಿಚಾರಗಳಿಗೂ ತಾರ್ಕಿಕ ಅಂತ್ಯ ಕೊಡುವ ಬುದ್ದಿಮತ್ತೆ ಈ ಮನುಷ್ಯನಿಗಿದೆ. ಎಷ್ಟೇ ಗುಣಮಟ್ಟ ಇದ್ದರು ತನ್ನನು ತಾನು ಹವಿಸ್ಸಿನಂತೆ ರಾಷ್ಟ್ರ ಕಾರ್ಯದಲ್ಲಿ ಗುಪ್ತಗಾಮಿನಿಯಂತೆ ಅರ್ಪಿಸಿಕೊಂಡಿರುವ ಸಂತೋಷ್ ಬಗ್ಗೆ ಬಹಿರಂಗವಾಗಿ ಮಾತನಾಡುವಾಗ ಕನಿಷ್ಠ ಶ್ರದ್ಧೆಯಾದರು ಇರಬೇಕಿತ್ತು ಎಂದು ಅನಿಸುವುದಿಲ್ಲವೇ. ವೇದಿಕೆ ಮೇಲೆ ಅಬ್ಬರಿಸುವವರು, ಮಾಧ್ಯಮಗಳಲ್ಲಿ ಕಾಣಿಸುವವರು ಮಾತ್ರ ಬಿಜೆಪಿ ಕಟ್ಟಿದ್ದಲ್ಲ.. ಸಂತೋಷ್ ಜೀ ಯಂತಹ ಸಾವಿರಾರು ಪ್ರಚಾರಕ ಕಾರ್ಯಕರ್ತರು ಪಕ್ಷವನ್ನ ತಳಮಟ್ಟದಿಂದ ಕಟ್ಟಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಗಲ್ಲಿ ಗಲ್ಲಿಯ ಕಾರ್ಯಕರ್ತರ ಹೆಸರು ನೆನಪಿರುವುದು ಇವರಿಗೆ ಹೊರತು ಯಾವುದೇ ರಾಜಕೀಯ ನಾಯಕನಿಗಲ್ಲ.

೨೦೧೩ ರಲ್ಲಿ ಬಿಜೆಪಿಯಲ್ಲಿ ಯಾವ ಮಾಸ್ ಲೀಡರ್ ಇರಲಿಲ್ಲ.. ತಮ್ಮ ತಮ್ಮ ಕೋಟೆ ಕಟ್ಟಿ ಕೊಳ್ಳುವಲ್ಲಿ ಬ್ಯುಸಿಯಾಗಿದ್ದ ನಾಯಕರ ನಡುವೆ ತೆರೆಮರೆಯಲ್ಲಿ ಅಂದು ಸಂಘಟನಾತ್ಮಕವಾಗಿ ಪಕ್ಷ ಕಟ್ಟಿದ್ದು ಇದೆ ಸಂತೋಷ್. ಸೋತು ಸುಣ್ಣವಾಗಿ ಮನೋಭಲ ಕಡಿಮೆ ಮಾಡಿಕೊಂಡು  ಮನೆಯಲ್ಲಿ ಕೂತಿದ್ದ ಕಾರ್ಯಕರ್ತನನ್ನು ಮೈ ತಡವಿ ಮತ್ತೆ ಸಂಘಟನಾ ಕಾರ್ಯಕ್ಕೆ ಇಳಿಸಿದ್ದು ಇದೆ ಸಂತೋಷ್. ನಾನೇನು ಅಂದಿನ ಅಧ್ಯಕ್ಷರಾದ ಪ್ರಹ್ಲಾದ್ ಜೋಷಿಯವರ ದುಡಿಮೆಯನ್ನು ಅಲ್ಲಗೆಳೆಯುವುದಿಲ್ಲ. ಅವರು ಏನೂ ಮಾಡಲಿಲ್ಲ ಎಂದು ಅವಮಾನಿಸಿದ ಆಷಾಡಭೂತಿಗಳು ನಮ್ಮ ಪಕ್ಷದಲ್ಲಿ ಕಡಿಮೆ ಏನು ಇರಲಿಲ್ಲ. ಅವರೊಂದಿಗೆ ಇಡಿ ರಾಜ್ಯವನ್ನು ಸುತ್ತಿ ೨೦೧೩ ಹಾಗು ೨೦೧೪ ರ ಚುನಾವಣೆಗಳಲ್ಲಿ ಪಕ್ಷವನ್ನು ಉಳಿಸಿದ್ದು ಇದೇ ಸಂತೋಷ್. ವೇದಿಕೆಗಳ ಮೇಲೆ ಕಾಣುವ ನಾಯಕರೇ ಪಕ್ಷ ಕಟ್ಟಿದ್ದು ಎನ್ನುವ ಭ್ರಮೆ ಇನ್ನಾದರೂ ಹೋಗಬೇಕಿದೆ.. ವೇದಿಕೆಯ ಮೂಲೆಯಲ್ಲಿ ಕಾರ್ಯಕರ್ತನ ಜೊತೆ ನಿಂತು ಪಕ್ಷ ಕಟ್ಟುವ ಪ್ರತಿ ಪೂರ್ಣಾವಧಿ ಕಾರ್ಯಕರ್ತರ ದುಡಿಮೆಯ ಸತ್ಯ ಸಂಗತಿಗಳನ್ನು ಮುಚ್ಚಿಟ್ಟು ಸುಳ್ಳುಗಳನ್ನೆ ಆಗಾಗ ಉದುರಿಸುವುದು ಆತ್ಮ ಸಾಕ್ಷಿಯ ಕೊಲೆಗಡುಕುತನ ಎನ್ನಬಹುದೇನೊ. ಈಗಲೂ ನಮ್ಮ ಪಕ್ಷದಲ್ಲಿ ಸಂಘಟನೆಯಲ್ಲಿ ೧೫ ಜನ ಪೂರ್ಣಾವಧಿ ಕಾರ್ಯಕರ್ತರು, ೬೮ ಕ್ಕೂ ಹೆಚ್ಚು ವಿಸ್ತಾರಕರು ಮನೆ ಮಠ ಬಿಟ್ಟು ದುಡಿಯುತ್ತಿದ್ದಾರೆ. ನಾಳೆ ರಾಜಕೀಯ ಕಾರಣಕ್ಕೆ ಇವರಿಗೆ ಅವಮಾನ ಮಾಡಿದರೆ ನಾವು ಸುಮ್ಮನೆ ಕೂರಬೇಕಾ ? ಸ್ವಯಂಸೇವಕರ, ಕಾರ್ಯಕರ್ತರ ಮನೆಯಲ್ಲಿ ಮಲಗಿದ್ದು ಅವರು ಕೊಟ್ಟ ಅನ್ನಾಹಾರವನ್ನು ತಿಂದು, ದಿನಕ್ಕೆ ೧೮ ಗಂಟೆ ಪಕ್ಷಕ್ಕಾಗಿ ದುಡಿಯುವ ಇವರಿಗೆ ಕನಿಷ್ಠ ಮರ್ಯಾದೆಯಾದರು ಕೊಡಬಾರದೇ?

ಸಂತೋಷ್ ಜೀ ಹುಟ್ಟಿದ್ದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ, ಓದಿದ್ದು ಇಂಜಿನಿಯರಿಂಗ್, ಆದ್ರೆ ಕುಟುಂಬಕ್ಕೆ ಆಸರೆಯಾಗಬೇಕಾದ ವಯಸ್ಸಿನಲ್ಲಿ ಎಲ್ಲ ತೊರೆದು ರಾಷ್ಟ್ರ ಕಾರ್ಯಕ್ಕೆ ಆರ್. ಎಸ್. ಎಸ್ ಪ್ರಚಾರಕರಾದವರು. ಇಲ್ಲಿಯವರೆಗೂ ಅವರ ಮನೆಗೆ ಸಣ್ಣ ಕಾಲು ದಾರಿ ಇತ್ತು, ಇತ್ತೀಚೆಗೆ ೧೦ ಅಡಿ ರಸ್ತೆಯಾಗಿದೆ, ತನ್ನ ಮನೆಯ ಕುರಿತೇ ಚಿಂತಿಸದ ವ್ಯಕ್ತಿತ್ವಕ್ಕೆ ಎಂತ ಆರೋಪ ಸ್ವಾಮಿ? ತನ್ನದೆಲ್ಲವನ್ನೂ ತೊರೆದು ಬದುಕುವ ವ್ಯಕ್ತಿಗೆ ಕೋಟಿಗಟ್ಟಲೆ ಅಸ್ತಿ ಇದೆ, ಅಕ್ರಮ ಸಂಬಂಧವಿದೆ ಎಂದು ಶಿಷ್ಯ ಕೋಟಿಯಿಂದ ಕೆಲವು ಸೋಕಾಲ್ಡ್ ನಾಯಕರು ಮನೆಗೆ ಕರೆದು ಉಪಿಟ್ಟು ಕೇಸರಿಬಾತು ಹಾಕಿ ಬೇಕಾದ್ದನ್ನೆಲ್ಲ ಬರೆಸುವಾಗ ಅವರ ಬದುಕನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿತ್ತು ಅಲ್ಲವೇ? ವ್ಯಕ್ತಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ಕೊಟ್ಟ ಕೊನೆಗೆ ಬಳಸುವ ಅಸ್ತ್ರವೆ ವ್ಯಕ್ತಿತ್ವ ಹರಣ.  ಇದು ಪುರಾಣಗಳಿಂದಲು ನಡೆದ ಬಂದ ಸಂಗತಿಯೆ.. ಆದರೆ ತಾವು ಮಹಾನ್ ನಾಯಕರು ಎನ್ನಿಸಿಕೊಳ್ಳುವವರು, ಬೇರೆಯವರ ಮೇಲೆ ಭಲವಂತವಾಗಿ ಬೆರಳು ಉದ್ದ ಮಾಡುವವರು ತಾವು ಕಡಿವಾಣ ಹಾಕಿಕೊಳ್ಳಬೇಕಲ್ಲವೇ. ಸಂತೋಷ್ ಜೀ ೨೫ ವರ್ಷಗಳ ಪ್ರಚಾರಕ್ ಜೀವನದಲ್ಲಿ ಗಳಿಸಿದ ಆಸ್ತಿ ಮೂರೂ ಜೊತೆ ಪಂಚೆ, ಎರಡು ಜುಬ್ಬ, ಎರಡು ಮೊಬೈಲ್, ಬರೋಬ್ಬರಿ ಪುಸ್ತಕಗಳ ಜೊತೆಗೆ ಪ್ರಾಣಕೊಡುವ ಅಸಂಖ್ಯಾತ ಕಾರ್ಯಕರ್ತರು. ಯಾರೋ ಕಾರ್ಯಕರ್ತ ಕೊಟ್ಟ ಪಂಚೆ, ಯಾರೋ ಹೊಲಿಸಿದ ಜುಬ್ಬಾ, ಸಾಮಾನ್ಯ ಚಪ್ಪಲಿ ಧರಿಸಿ ಬದುಕುವ ಇಂತಹ ವ್ಯಕ್ತಿಯ ರಾಷ್ಟ್ರ ಭಕ್ತಿಯ ಶ್ರೀಮಂತಿಕೆ ದೊಡ್ಡದಿದೆ ಅಲ್ಲವೆ.

ಬಿಜೆಪಿ ಹಾಗು ಆರ್ ಎಸ್ ಎಸ್  ಸೈದ್ಧಾಂತಿಕವಾಗಿ ಒಂದು ಅಷ್ಟೆ.. ಆದರೆ ಆರ್ ಎಸ್ ಎಸ್ ಎಂದೂ ಬಿಜೆಪಿಯ ವಿಚಾರಗಳಿಗೆ ತಲೆ ಹಾಕುವುದಿಲ್ಲ.. ಕೆಲವೊಮ್ಮೆ ಸೂಚನೆಗಳನ್ನು ನೀಡಬಹುದು ಅಷ್ಟೆ, ಬಿಜೆಪಿ ಅವಶ್ಯಕತೆ ಇದ್ದರೆ ಮಾರ್ಗದರ್ಶನವನ್ನು ಪಡೆಯಬಹುದು.. ಇದು ಬೇರೆ ಬೇರೆ ಸೈದ್ಧಾಂತಿಕ ವಿಚಾರವುಳ್ಳ ಹಲವು ಸರ್ಕಾರಗಳು ವಿವಿಧ ರೀತಿಯಲ್ಲಿ ಆಯಾ ಪಕ್ಷಗಳ ಸರ್ಕಾರಗಳಿಗೆ ಸಂಬದ್ಧಪಟ್ಟ ಸೈದ್ಧಾಂತಿಕ ಹಿನ್ನಲೆಯುಳ್ಳ ಸಂಘಟನೆಗಳ ಮಾರ್ಗದರ್ಶನ  ಪಡೆಯುವಂತೆಯೆ ಇರುತ್ತದೆ ಹೊರತು ಬೇರೆ ವಿಶೇಷತೆ ಇರುವುದಿಲ್ಲ. ಬಿಜೆಪಿಯ ಮೂಲ ಜನಸಂಘದ ಕಾಲದಿಂದಲೂ ಸಂಘದಿಂದ ಪ್ರಚಾರಾಕರನ್ನು ಸೈದ್ಧಾಂತಿಕ ಅನುಷ್ಠಾನದ ಕಾರಣಕ್ಕೆ ಬಿಜೆಪಿಗೆ ಹಾಗು ವಿವಿದ ಸಂಘಟನೆಗಳಿಗೆ ಕೊಡುತ್ತಾರೆ. ನಮ್ಮ ಪಕ್ಷಕ್ಕೆ ಸೈದ್ಧಾಂತಿಕ ನೆಲೆಗಟ್ಟನ್ನು ಸ್ಪಷ್ಟವಾಗಿ ಕೊಟ್ಟ ದೀನ್ ದಯಾಳ್ ಉಪಾಧ್ಯಾಯ್ ಜೀ ಯಿಂದ ಹಿಡಿದು ಇಲ್ಲಿಯವೆರೆಗಿನ ಸಂಘಟನಾ ಜವಾಬ್ಧಾರಿಗಳ ಪ್ರತಿ ವ್ಯಕ್ತಿತ್ವವು ರಾಷ್ಟೀಯ ಸ್ವಯಂ ಸೇವಕ ಸಂಘದ ಆಸ್ತಿ, ಅವರ್ಯಾರು ಸಂಘಟನೆ ವಿರುದ್ಧವಾಗಿ ಇಂದಿಗೂ ಹೆಜ್ಜೆ ಇಟ್ಟಿಲ್ಲ, ಇವರೆಲ್ಲರೂ ಲೌಕಿಕ ಬದುಕಿನ ಎಲ್ಲಾ ಆಮಿಷಗಳನ್ನು ಸಾಯಿಸಿ ಅಕ್ಷರಶಃ ಸಂತರಂತೆ ನಂಬಿದ ಧ್ಯೇಯಕ್ಕಾಗಿ ಬದುಕಿರುತ್ತಾರೆ.  ಅವರಿಗೆ ವಹಿಸುವ ಜವಾಬ್ಧಾರಿ ಬೆಂಕಿಯ ಮೇಲೆ ಹೆಜ್ಜೆ ಹಾಕಿದಂತೆ, ರಾಜಕಾರಣದಲ್ಲಿ ಹಣ, ವ್ಯಾಮೋಹ, ಅಧಿಕಾರ, ದರ್ಪ, ಕಾಮ, ಎಲ್ಲವು ತುಂಬಿ ತುಳುಕುತ್ತಿರುತ್ತದೆ.. ಇಲ್ಲಿ ಸಭ್ಯರಿಂದ ಹಿಡಿದು ರಾಕ್ಷಸಿ ವ್ಯಕ್ತಿಗಳು ಏಜೆಂಟ್ಗಳಾಗಿರುತ್ತಾರೆ, ಇಂತವರನ್ನೆಲ್ಲ ನಿರ್ವಹಿಸಲು ಮೊಂಡುತನ, ಖಡಕ್ ವ್ಯಕ್ತಿತ್ವ ಬೇಕೆ ಬೇಕು, ಸಂಘಟನಾ ಕಾರ್ಯದರ್ಶಿ ಜವಾಬ್ದಾರಿಯೆ ಹಾಗೆ.. ತಾಯಿ ಇದ್ದ ಹಾಗೆ ಯಾರಿಗೂ ಮೋಸ ಮಾಡುವಂತಿಲ್ಲ,  ಕಾರ್ಯಕರ್ತನನ್ನು ಬಿಡುವಂತಿಲ್ಲ. ಹಾಗಾಗಿ ಒರಟುತನ ಈ ಹುದ್ದೆಯ ಬಹುಮುಖ್ಯ ಅಂಶವು ಹೌದು. ಮನೆಯಲ್ಲಿ ತಾಯಿಗೆ ಮಕ್ಕಳನ್ನು ಮುದ್ದು ಮಾಡಲು ಗೊತ್ತು, ಬುದ್ದಿ ಹೇಳಲೂ ಗೊತ್ತು, ಪ್ರಸಂಗ ಬಂದರೆ ಗುದ್ದಿ ಬುದ್ದಿ ಹೇಳಲೂ ಗೊತ್ತು. ಈ ರೀತಿಯಯದು ಸಂಘಟನಾ ಕಾರ್ಯದರ್ಶಿಯ ಕೆಲಸ.

ಇತ್ತೀಚೆಗೆ ರಾಜಕೀಯ ವ್ಯಕ್ತಿಗಳ ಪಟಾಲಂ ಪಡೆ ತನಗೆ ಆಗದವರನ್ನ ಹಣಿಯಲು ವಿವಿಧ ದಾಳಿಗಳನ್ನ ಮಾಡ ತೊಡಗಿದೆ. ಪಟಾಲಂ ಮಾತುಗಳ ಪಟ್ಟಿ ಮಾಡಿದರೆ ಸಭ್ಯ ಎನಿಸಿಕೊಂಡವನಿಗೆ ಅಸಹ್ಯ ಎನಿಸುವಷ್ಟು ಕೀಳು ಮಟ್ಟದ ಹೇಳಿಕೆಗಳಿರುತ್ತವೆ. ರಾಜಕೀಯ ಮಾಡಲು ಗ್ರಾಮ ಪಂಚಾಯಿತಿ ಗೆಲ್ಲಲೇ ಬೇಕೆನ್ನುವ ಫರ್ಮಾನುಗಳ ಜೊತೆಗೆ ಜಾತಿಯ ಯೋಗ್ಯತೆ ಪ್ರಶ್ನಿಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಅಕ್ಕ, ತಾಯಿ ಸಂಬಂಧಗಳ ಅರ್ಥಗಳನ್ನು ಮೀರಿ ಮನದ ಕಸವನ್ನು ವಾಂತಿಮಾಡುವ ಮಟ್ಟಿಗೆ ಬೆಳೆದು ನಿಂತಿರುವ ವ್ಯಕ್ತಿ ಪೂಜಿತ ಸಧ್ಗುಣ ಅಸಂಪನ್ನ ಚೇಲಗಳಿಗೆ ಉತ್ತರ ಕೊಡುವ ಜರೂರತ್ತಿದೆ ಎನ್ನುವ ಕಾರಣಕ್ಕೆ  ಈ ಲೇಖನ ಬರೆದಿದ್ದೇನೆ. ಸಮಾಜ ತೀರ್ಮಾನಿಸಲಿ.. ಯಾವುದೇ ಆಕಾಂಕ್ಷೆ ಇಲ್ಲದೆ ಬದುಕುವ ಸಂತೋಷ್ ರಂತವರು ರಾಷ್ಟ್ರಕ್ಕೆ ಸಮಾಜಕ್ಕೆ ಅವಶ್ಯಕತೆ ಇದೆಯೆ ಅಥವಾ ತಮ್ಮ ಸ್ವಂತ ಅಧಿಕಾರಕ್ಕೆ ಹವಣಿಸುವ ರಾಜಕಾರಣಿಗಳು ಉತ್ತಮರೊ ಎಂದು ತೀರ್ಮಾನಿಸಲಿ. ಒಟ್ಟಿನಲ್ಲಿ ಬಿಜೆಪಿ ಕರ್ನಾಟಕದ ಅವಕಾಶವಾದಿ ರಾಜಕೀಯ ಪ್ರಚಾರಕರನ್ನು ಬಹಿರಂಗವಾಗಿ ಅವಹೇಳನ ಮಾಡುವುದು ಸ್ವಯಂ ಸೇವಕರಿಗೆ ಮನಸ್ಸಿಗೆ ಕೊಡುವ ಕೊಡಲಿಯೇಟು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಷ್ಟ್ರವೇ ಪ್ರಥಮ ಸಿದ್ಧಾಂತವೆ ಅಂತಿಮ ಎನ್ನುವ ಸ್ವಯಂ ಸೇವಕನ ಕೂಗು ಇನ್ನಾದರೂ ರಾಜಕೀಯ ವ್ಯಕ್ತಿಗಳಿಗೆ ಕೇಳಲಿ ಎನ್ನುವುದೆ ನನ್ನ ಬಯಕೆ…

ವಂದೇ ಮಾತರಂ…

4 ಟಿಪ್ಪಣಿಗಳು Post a comment
  1. Sundaresha
    ಮೇ 4 2017

    ಮಾನ್ಯ ಯೆಡೆಯೂರಪ್ಪ, ಈಶ್ವರಪ್ಪ ಮತ್ತು ಇನ್ನುಳಿದ ಬಿ ಜೆ ಪಿ ನಾಯಕರಿಗೆ ಕರೆ- ವಿಶ್ವಾಸಘಾತುಕರಾಗಬೇಡಿ.

    ನನಗೆ ಇಗ ೬೮ ವರ್ಷ, ತಲೆಯಮೇಲೆ ಇನ್ನೂ ಉಳಿದಿರುವ ಕೆಲವೇ ಕೆಲವು ಕೂದಲುಗಳೂ ಪೂರ್ತಿಯಗಿ ಬೆಳ್ಳಗಾಗಿದೆ. ಅದರಿಂದೇನೂ ನನಗೆ ದುಃಖವಿಲ್ಲ ಆದರೆ ನಿಮ್ಮ ವರ್ತನೆ ನಮಗೆಲ್ಲಾ ಅತೀವ ದುಃಖವನ್ನು ಕೊಡುತ್ತಿದೆ.

    ನನಗೆ ಜ್ಞಾಪಕವಿರುವಹಾಗೆ ಅದು ೧೯೬೨ ಅಥವ ೧೯೬೩ನೇ ಇಸವಿ ಇರಬಹುದು. ನನಗಾಗ ೧೩/೧೪ ವರ್ಷ. ನಮ್ಮ ಹಳ್ಳಿಯಲ್ಲಿ ಆಗ ಪ್ರೌಢಶಾಲೆ ಇಲ್ಲದ ಕಾರಣ ಹತ್ತಿರದ ತಾಲೂಕು ಕೇಂದ್ರದಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ಅಗಲೇ ನಾವು ಸಂಘದ ಸಂಪರ್ಕಕ್ಕೆ ಬಂದಿದ್ದು! ಆಗ ಬಿ ಜೆ ಪಿ ಇರಲಿಲ್ಲ, ಆಗ ಇದ್ದುದು ಭಾರತೀಯ ಜನಸಂಘ. ಆಗ ಸಂಘದ ಕಾರ್ಯಕರ್ತರೇ ಜನಸಂಘದ ಕಾರ್ಯಕರ್ತರು. ಆ ವರ್ಷ ವಿಧಾನಸಭಾ ಚುನಾವಣೆಗೆ ನಮ್ಮ ತಾಲ್ಲೂಕಿನಿಂದಲೂ ಜನಸಂಘದ ಪರವಾಗಿ ಉಮೇದುವಾರರು ನಿಂತಿದ್ದರು ! ನಮ್ಮ ತಾಲ್ಲೂಕ್ ಪ್ರಚಾರಕರ ಆದೇಶದ ಮೇರೆಗೆ ನಮ್ಮ ಬಾಲಕರ ತಂಡದವರೂ ಜನಸಂಘದ ಪರ ಪ್ರಚಾರದಲ್ಲಿ ಭಾಗವಹಿಸೆದ್ದೆವು! ಕರಪತ್ರಗಳನ್ನು ಮನೆಮನೆಗೆ ಹಂಚುವುದೇ ನಮಗೆ ನಮ್ಮ ಪ್ರಚಾರಕರು ಕೊಟ್ಟ ಕೆಲಸ!ರಾಜಕೀಯ,ಹಿಂದುತ್ವ,….ಇದಾವುದನ್ನೂ ಅರ್ಥಮಾಡಿಕೊಳ್ಳುವಷ್ಟು ವಯಸ್ಸಲ್ಲ ನಮ್ಮದು. ಸಂಘದ ಪ್ರಚಾರಕರು ಹೇಳಿದ್ದಾರೆ ಎನ್ನುವುದೇ ನಮಗೆ ಪ್ರೇರಣೆ.

    ಕಾಲಕಳೆದ ಹಾಗೆ ನಮ್ಮ ಸಂಘದ ಸಹವಾಸ ಮತ್ತಷ್ಟೂ ಬಲವಾಯಿತು ಮತ್ತೂ ಇಂದೂ ನಮ್ಮ ಸಂಘದ ನಿಷ್ಠೆ ಬಲವಾಗೇ ಇದೆ. ನಾನು ೧೯೬೯ ರಲ್ಲಿ ಉದ್ಯೋಗವನ್ನರಸುತ್ತಾ ಬೆಂಗಳೂರು ಸೇರಿದೆ ಮತ್ತು ಜೊತೆಜೊತೆಗೇ ಸಂಘನಿಷ್ಠೆಯ ಜೊತೆಗೆ ಜನಸಂಘ ನಿಷ್ಠೆಯೂ ಬೆಳೆಯಿತು, ಜನಸಂಘದ ಕೆಲಸವೂ ಸಂಘದ್ದೇ ಕೆಲಸ ಎಂದು ತಿಳಿದಿದ್ದ ಕಾಲ ಅದು! ಸಾಮಾನ್ಯವಾಗಿ ಜನಸಂಘದ ಉಮೇದುವಾರರು ಠೇವಣಿ ಕಳೆದುಕೊಳ್ಳುವುದು ಅಭ್ಯಾಸವಾಗಿಹೋಗಿತ್ತು! ಅದೇನೂ ನಮ್ಮ ಉತ್ಸಾಹವನ್ನು ಕುಂದಿಸುತ್ತಿರಲಿಲ್ಲ! ಪುನಃ ಪುನಃ ಎಲ್ಲವನ್ನು ಮರೆತು ಅದೇ ಉತ್ಸಾಹದಿಂದ ಮುಂದಿನ ಚುನಾವಣೆಯಲ್ಲಿ ಜನಸಂಘಕಾಗಿ ಕೆಲಸ ಮಾಡುತ್ತಿದ್ದೆವು! ಜನಸಂಘ ಕಾರ್ಯಕರ್ತರಿಗೆ ಚುನಾವಣೆ ಸಮಯದಲ್ಲಿ ಖರ್ಚಿಗಾಗಿ ಹಣ ಕೊಡುವ ಪದ್ಧತಿಯೇ ಇರಲಿಲ್ಲ ಆಗ! ಸಂಘದ ಸೂಚನೆಯೇ ನಮಗೆ ವೇದವಾಕ್ಯ ಆಗಿತ್ತು. ಪ್ರತಿ ಚುನಾವಣೆಯಲ್ಲೂ ನಾವು ಕಷ್ಟಪಟ್ಟು ಬೆವರುಸುರಿಸಿ ಸಂಪಾದಿಸಿದ ನಮ್ಮದೇ ಹಣ ಖರ್ಚುಮಾಡುತ್ತಿದ್ದೆವು! ನಮಗೀಗ ಸ್ವಲ್ಪ ಸ್ವಲ್ಪವಾಗಿ ಸಂಘದ ವಿಚಾರಧಾರೆ, ಹಿಂದುತ್ವ, ನಮ್ಮದೇಶದ ಮತ್ತು ಹಿಂದುಗಳ ಸಮಸ್ಯೆಗಳು…ಇವೆಲ್ಲದರ ಅರಿವಾಗುತ್ತಿತ್ತು.

    ಬಹುಶಃ ೧೯೬೭ರನಂತರ ಸ್ವಲ್ಪ ಸ್ವಲ್ಪವಾಗಿ ಬದಲಾವಣೆ ಕಾಣಿಸುತ್ತಿತ್ತು. ಕೆಲವು, ಜನಸಂಘದ ಉಮೇದುವಾರರೂ ಠೇವಣಿ ಉಳಿಸಿಕೊಳ್ಳಲು ಪ್ರಾರಂಭಿಸಿದ್ದರು ಮತ್ತು ಕರ್ನಾಟಕದಲ್ಲಿ ಒಂದೆರಡು ಕಡೆ ಗೆದ್ದು ವಿಧಾನಸಭೆ/ವಿಧಾನಪರಿಷತ್ತನ್ನೂ ಪ್ರವೇಷಿಸಿದ್ದರು! ನಮ್ಮಲ್ಲೂ ಕ್ರಮೇಣ ಆಶಾಭಾವನೆ ಮತ್ತು ವಿಶ್ವಾಸ ಮೂಡತೊಡಗಿತು.

    ೧೯೭೫ ಜೂನ್ ೨೬- ಕೇವಲ ಸಂಘ ಮತ್ತು ಜನಸಂಘ ಮಾತ್ರವಲ್ಲದೆ ಇಡೀ ಭಾರತಕ್ಕೆ ಗ್ರಹಣ ಬಡಿಯಿತು! ಅದು ದೇಶದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಘೋಷಿಸಿದ ತುರ್ತುಪರಿಸ್ತಿತಿಯ ಪರಿಣಾಮ. ರಾತ್ರೋರಾತ್ರಿ ಇಡೀ ದೇಶದಮೇಲೆ ತುರ್ತುಪರಿಸ್ತಿತಿಯ ಕರಾಳ ಛಾಯೆ ಆವರಿಸಿತು. ಎಲ್ಲಾ ವಿರೋಧಪಕ್ಷದ ನಾಯಕರೂ, ಕಾರ್ಮಿಕಸಂಘದ ನಾಯಕರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸ್ರ ಸಹಸ್ರ ಕಾರ್ಯಕರ್ತರು ಒಂದೇ ದಿನದಲ್ಲಿ ಸೆರಮನೆಗೆ ತಳ್ಳಲ್ಪಟ್ಟರು! ಆ ಸಮಯದಲ್ಲಿ ಸೆರೆಮನೆಗಳಲ್ಲಿ ಬಂಧನದಲ್ಲಿದ್ದ ಸಹಸ್ರ ಸಹಸ್ರ ಬಂಧಿತರಲ್ಲಿ ಶೇಕಡ ೯೫ ಕ್ಕೂ ಹೆಚಿನವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದರು!

    ದೇವರ ದಯದಿಂದ ಉಳಿದ ಸಹಸ್ರ ಸಹಸ್ರ ಸಂಖ್ಯೆಯ ಸಂಘದ ಸ್ವಯಂಸೇಕರು ಪೊಲೀಸರ ಕೈಗೆ ಸಿಗದೆ ಭೂಗತರಾಗಿ ತುರ್ತುಪರಿಸ್ತಿತಿಯ ವಿರುದ್ದ ಕಾರ್ಯಾಚರಣೆಯನ್ನು ಪ್ರಾರಂಭಿಸುದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೋರಾಟದಿಂದಾಗಿಯೇ ತುರ್ತುಪರಿಸ್ತಿತಿ ದೂರವಾಯಿತು, ಭಾರತಕ್ಕೆ ಆವರಿಸಿದ್ದ ಗ್ರಹಣ ಬಿಡುಗಡೆಯಾಯಿತು. ಇಂದಿನ ಬಿ ಜೆ ಪಿಯ ಬಹಳಷ್ಟು ನಾಯಕರೂ ತುರ್ತು ಪರಿಸ್ತಿತಿಯಲ್ಲಿ ಕಾರಾಗ್ರಹದಲ್ಲಿದ್ದರು!

    ತುರ್ತುಪರಿಸ್ತಿತಿಯ ನಂತರ ಎಲ್ಲಾ ವಿರೋಧಪಕ್ಷದವರೂ ಸೇರಿ ಒಂದು ಹೊಸ ಪಕ್ಷವನ್ನುಕಟ್ಟಿ ಅದಕ್ಕೆ ಜನತಾ ಪಕ್ಷ ಎಂದು ನಾಮಕರ್ಣಮಾಡಿದರು ಮತ್ತು ಭಾರತೀಯ ಜನಸಂಘವೂ ಜನತಾ ಪಕ್ಷದಲ್ಲಿ ವಿಲೀನವಾಗಿಹೋಯಿತು!

    ಹೊಸ ಜನತಾ ಪಕ್ಷ ಕೆಂದ್ರದಲ್ಲೂ ಅಧಿಕಾರಕ್ಕೆ ಬಂತು ಆದರೆ, ವಿವಿಧ ಮೂಲೆಗಳಿಂದ ಬಂದ ರಾಜಕೀಯ ನಾಯಕರು ಒಂದಾಗಿರಲು ಸಾಧ್ಯವಾಗಲಿಲ್ಲ! ಜನತಾ ಪಕ್ಷದಲ್ಲಿದ್ದ ಕೆಲವರಿಗೆ ಜನಸಂಘದಿಂದ ಬಂದವರ ಪ್ರಾಮಾಣಿಕತೆ, ಜನಪ್ರಿಯತೆ ಮತ್ತು ಅಭ್ಯುದಯವನ್ನು ಸಹಿಸಲು ಸಾಧ್ಯವಾಗಲಿಲ್ಲ! ಪರಿಣಾಮ ಜನತಾಪಕ್ಷ ಒಡೆದು ಚೂರು ಚೂರಾಯಿತು ಮತ್ತು ಕೇಂದ್ರದಲ್ಲಿ ಮತ್ತೆ ಶ್ರೀಮತಿ ಇಂದಿರಾ ಗಾಂಧಿಯವರೇ ಪ್ರಧಾನಮಂತಿಗಳಾದರು! ಹಿಂದಿನ ಜನಸಂಘದಲ್ಲಿದ್ದ ನಾಯಕರೆಲ್ಲಾ ಮತ್ತೆ ಸೇರಿ ಭಾರತಿಯ ಜನತಾ ಪಕ್ಷ ಎಂಬ ಹೊಸ ಪಕ್ಷದ ಉದಯಕ್ಕೆ ಕಾರಣರಾದರು ಮತ್ತು ಎಲ್ಲಾ ಸಂಘದ ಸ್ವಯಂಸೇವಕರೂ ಈ ಹೊಸ ಪಕ್ಷಕ್ಕಾಗಿ ಬೆವರುಸುರಿಸಲು ಪ್ರಾರಭಿಸಿದರು.

    ಸಂಘದ ಸ್ವಯಂಸೇವಕರಿಗೆಲ್ಲಾ ಒಂದೇ ಆಸೆ. ಇದರಲ್ಲಿ ಸ್ವಾರ್ಥ ಸ್ವಲ್ಪವೂ ಇಲ್ಲ. ಸಹಸ್ರಾರು ವರ್ಷಗಳಿಂದ ಸಾವು, ನೋವು, ನರಳಾಟ, ಅವಮಾನ…..ಇವುಗಳನ್ನೇ ಅನುಭವಿಸುತ್ತಿರುವ ಹಿಂದೂ ಸಮಾಜಕ್ಕೆ ಸ್ವಲ್ಪ ತಂಪೆರೆಯಬೇಕು, ಅವರ ನೋವನ್ನು ಅಳಿಸಬೇಕು ಮತ್ತು ಕಣ್ಣೀರೊರಸಬೇಕು, ನಮ್ಮ ಹೆಣ್ಣುಮಕ್ಕಳು ನಿರ್ಭಯವಾಗಿ ಬಾಳುವಂತಾಗಬೇಕು, ಪುನಃ ಭಾರತದಲ್ಲಿ ಆನಂದ, ಸಮೃದ್ಧಿ ಮತ್ತು ಸಂತೋಷ ತುಂಬಿ ತುಳುಕಬೇಕು….ಇದೇ ನಮ್ಮೆಲ್ಲರ ಆಸೆ. ಇದನ್ನು ಬಿ ಜೆ ಪಿ ಪೂರೈಸುತ್ತದೆ ಮತ್ತು ಭಾರತ ಮತ್ತೆ ಉನ್ನತಿಗೇರುವಂತೆ ಮಾಡುತ್ತದೆ ಎಂಬುದೇ ನಮ್ಮೆಲ್ಲರ ನಂಬಿಕೆ. ನಾವು ಸಂಘದ ಸ್ವಯಂಸೇವಕರು ನಮ್ಮ ಸ್ವಂತ ಬೇಡಿಕೆಗಳನ್ನು ನಿಮ್ಮ ಮುಂದಿಡುವುದಿಲ್ಲ, ನಾವೇನಿದ್ದರೂ ಹಿಂದೂ ಸಮಾಜದ, ಹಿಂದೂ ಧರ್ಮ ಮತ್ತು ಭಾರತದ ಹಿತವನ್ನು ಮತ್ತು ಪರಮ ವೈಭವವನ್ನು ಬಯಸುವವರು. ಇವೆಲ್ಲವೂ ರಾಜಕೀಯ ಅಧಿಕಾರವಿಲ್ಲದೆ ಸಾಧ್ಯವಿಲ್ಲ. ಅದನ್ನು ನೀವು ಸಾಧ್ಯ ಮಾಡುತ್ತೀರೆಂದೇ ನಮ್ಮ ನಂಬಿಕೆ ಮತ್ತು ವಿಶ್ವಾಸ.

    ಆದರೆ ಕರ್ನಾಟಕದ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದಮೇಲೆ ನಿಮ್ಮಮೇಲಿನ ನಮ್ಮ ನಂಬಿಕೆ ವಿಶ್ವಾಸ ಕುಸಿಯುತ್ತಿದೆ, ಭ್ರಮನಿರಸವಾಗುತ್ತಿದೆ. ನೀವು ವಿಶ್ವಾಸ ದ್ರೋಹ ಮಾಡುತ್ತಿದ್ದೀರೇನೋ ಎಂಬ ಭಾವನೆ ನಮ್ಮಲ್ಲಿ ಬಲಿಯುತ್ತಿದೆ. ಇನ್ನೂ ಕಾಲ ಮಿಂಚಿಲ್ಲ, ಸರಿದಾರಿಗೆ ಬನ್ನಿ. ಸಹಸ್ರ ಸಹಸ್ರ ನಿಸ್ವಾರ್ಥೀ ವ್ಯಕ್ತಿಗಳ ತಪಸ್ಸು, ದುಡಿಮೆ, ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ಹಿಂದೂ ಸಮಾಜ ಮತ್ತು ಭಾರತ ಮತ್ತೆ ವೈಭವ ಸ್ತಿತಿಗೆ ತಲುಪಬಹುದೇನೋ ಎನ್ನುವ ಆಸೆ ಮುಡುತ್ತಿದೆ. ಆ ಆಸೆಯಮೇಲೆ ತಣ್ಣೀರೆರಚಬೇಡಿ ಮತ್ತು ವಿಘ್ನ ಸಂತೋಷಿಗಳಾಗಬೇಡಿ. ನಿಮ್ಮ ಸ್ವಾರ್ಥವನ್ನು ಬದಿಗಿಟ್ಟು ಒಂದಾಗಿ ಬನ್ನಿ. ನಮ್ಮ ಕನಸಿನ ಪರಮ ವೈಭವ ಭಾರತವನ್ನು ಸಾಕಾರಗೊಳಿಸೋಣ. ನೆನಪಿಡಿ, ಇದಕ್ಕೆ ವಿರುದ್ಧವಾಗಿ ನೀವು ನಡೆದರೆ ಇತಿಹಾಸ ಮತ್ತು ಹಿಂದೂ ಸಮಾಜ ನಿಮ್ಮನ್ನು ಕ್ಷಮಿಸುವುದಿಲ್ಲ ಮತ್ತು ತಾಯಿ ಭಾರತಿಯು ನಿಮ್ಮನ್ನಷ್ಟೆ ಅಲ್ಲ ನಿಮ್ಮ ವಂಶವನ್ನೂ ಕ್ಷಮಿಸುವುದಿಲ್ಲ.

    ಉತ್ತರ
  2. vasu
    ಮೇ 5 2017

    ಜನಸಂಘ ಬಿಜೆಪಿಯಾಗಿ ಮಾರ್ಪಟ್ಟಾಗಲೇ ಅದರ ನೈತಿಕ ಻ಅದಃ ಪತನ ಆರಂಭವಾಯಿತು, ಜನಸಂಘಕ್ಕೆ ಮೂಲದಲ್ಲಿ ಪ್ರೋ. ಬಲರಾಜ್ ಮಧೋಕ್ ಅಂತಹ ವಿಚಾರವಾದಿಗಳಿದ್ದರು. ಆದರೆ ಕ್ಷುಲ್ಲಕ ರಾಜಕಾರಣ ಮಾಡಿ ಅವರನ್ನು ಪಕ್ಷದಿಂದ ಹೊರದಬ್ಬಿದರು. ಅವರು ಮತ್ತೊಮ್ಮೆ ಇಂದಿರಾಗಾಂಧಿಯವರ ಕ್ಯಾಬಿನೆಟ್ ನಲ್ಲಿ ರಕ್ಷಣಾ ಸಚಿವರಾಗಬಹುದಿತ್ತು.ಆದರೆ ಅವರ ಹಿಂದುತ್ವ ನಿಷ್ಠೆ ಯ ಮುಂದೆ ಇವೆಲ್ಲಾ ಗೌಣವಾಯಿತು. 1977 ರ ಚುನಾವಣೆಯಲ್ಲಿ ಯಕಶ್ಚಿತ್ ವೈಕ್ತಿಗಳಿಗೆಲ್ಲಾ ಲೋಕಸಭೆಗೆ ಸ್ಪರ್ದಿಸಲು ಟಿಕೇಟು ನೀಡಲಾಯಿತು. ಮಧೋಕ್ ಗೆ ಕೊಡಲಿಲ್ಲ. ಅಲ್ಲಿಯೂ ರಾಜಕಾರಣ. 2014 ರಲ್ಲಿ ಚುನಾವಣೆಗಳಲ್ಲಿ ಲೋಕಸಭೆಗೆ ಸ್ಪರ್ದಿಸಲು ಡಾ|| ಸ್ವಾಮಿಯವರಿಗೆ ಟಿಕೇಟ್ ನ್ನು ಕೊನೆಯ ಹಂತದಲ್ಲಿ ನಿರಾಕರಿಸಲಾಯಿತು. ರಾಮ ಮಂದಿರ, ಸಮಾನ ನಾಗರಿಕ ಸಂಹಿತೆ ಮುಂತಾದ ವಿಷಯಗಳಲ್ಲಿ ಇಂದಿನ ಬಿಜೆಪಿಯವರು ಬಾಯಿ ಮುಚ್ಚಿಕುಳಿತಿದ್ದಾರೆ. ಆದರೆ ಹಿಂದುತ್ವ ನಿಷ್ಠೆಯ ಪ್ರಖರ ದ್ಯೋತಕ ಕೇವಲ ಡಾ|| ಸ್ವಾಮಿಯವರೊಬ್ಬರೇ ಇವುಗಳ ಬಗ್ಗೆ ಧೈರ್ಯವಾಗಿ ಮಾಡುವ ಎದೆಗಾರಿಕೆ ಉಳಿಸಿಕೊಂಡಿದ್ದಾರೆ, ಇಂತಹ ಮಧೋಕ್ , ಡಾ|| ಸ್ವಾಮಿ ಮುಂತಾದ ಪ್ರಖರ ಹಿಂದುತ್ವ ನಿಷ್ಠೆಯುಳ್ಳವರನ್ನು ತುಳಿಯುವ ಪ್ರಯತ್ನ ನಿರಂತರ ಸಾಗಿದೆ.
    ಇದೇ ತರಹೆ ಮುಂದುವರೆದು ನಾಳೆ ಸಂತೋಷ್ ಜೀಯವರನ್ನೂ ಮೂಲೆಗುಂಪುಮಾಡುವ ಪ್ರಯತ್ನ ಮಾಡಬಹುದು. ಅದು ಈಗಾಗಲೇ ಪ್ರಾರಂಭಿಕ ಹಂತದಲ್ಲಿಜಾರಿಯಿದೆ. ಇದು ಫಲಿತ ಗೊಂಡು ಅವರನ್ನು ಕೈಬಿಟ್ಟು ಬೆನ್ನು ಮೂಳೆಯಿಲ್ಲದ ವ್ಯಕ್ತಿಗಳನ್ನು ಅಧಿಕಾರ ಸ್ಥಾನದಲ್ಲಿ ಕೂಡಿಸುವ ಪ್ರಯತ್ನವನ್ನು ಈಗ ಮಿಂಚುತ್ತಿರುವ ಕೆಲವು ಬಿಜೆಪಿ ನಾಯಕರು ಯಶಸ್ವಿಯಾಗಿ ಮಾಡುತ್ತಾರೇನೋ ಎಂಬ ಕೊರಗು ನನ್ನನ್ನು ಕಾಡುತ್ತಿದೆ.

    ಉತ್ತರ
  3. ಜೂನ್ 22 2017

    I fully agree..

    ಉತ್ತರ
  4. vikram
    ನವೆಂ 14 2017

    ವ್ಯಕ್ತಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ಕೊಟ್ಟ ಕೊನೆಗೆ ಬಳಸುವ ಅಸ್ತ್ರವೆ ವ್ಯಕ್ತಿತ್ವ ಹರಣ – straight & right point

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments