ಅನಿವಾರ್ಯತೆ…!
– ಗೀತಾ ಹೆಗ್ಡೆ
ನಮ್ಮಿಷ್ಟದಂತೆ ಜೀವನ ಸಾಗಿಸುವುದು ಅಷ್ಟು ಸುಲಭದಲ್ಲಿಲ್ಲ. ಕೆಲವೊಂದು ಅನಿವಾರ್ಯತೆಗಳು ಎದುರಾದಾಗ ನಾವು ತಲೆ ಬಾಗಲೇ ಬೇಕು. ಹಾಗೆ ಬದುಕುವುದು ನಮಗೆ ಇಷ್ಟವಿಲ್ಲದಿದ್ದರೂ ನಮಗಾಗಿ ಅಲ್ಲದಿದ್ದರೂ ಹೆತ್ತವರಿಗಾಗಿಯೋ, ಹೆಂಡತಿಗಾಗಿಯೋ, ಮಕ್ಕಳಿಗಾಗಿಯೋ, ಬಂಧು ಬಾಂಧವರಿಗಾಗಿಯೋ ಅಥವಾ ಈ ಸಮಾಜಕ್ಕಾಗಿಯೋ ನಮ್ಮತನವನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗುತ್ತದೆ. ಆಗೆಲ್ಲ ಮನಸ್ಸಿಗೆ ಅತ್ಯಂತ ನೋವಾದರೂ ಅಥವಾ ನಮ್ಮ ಕಠಿಣ ನಿರ್ಧಾರದಿಂದ ಬೇರೆಯವರಿಗೆ ನೋವಾಗುವಂತಿದ್ದರೂ ಹಾಗಿರದೆ ಗತಿ ಇಲ್ಲ. ಕಾರಣ ನಾವು ಈ ಸಮಾಜದಲ್ಲಿ ಬದುಕುತ್ತಿರುವವರು. ನಾವು ಮನುಷ್ಯ ಜನ್ಮದಲ್ಲಿ ಜನಿಸಿದವರು. ಇಲ್ಲಿ ಇತಿಹಾಸದಿಂದಲೂ ರೂಢಿಯಲ್ಲಿರುವ ಅನೇಕ ಕಟ್ಟುಪಾಡುಗಳಿವೆ. ರೀತಿ ರಿವಾಜುಗಳಿವೆ. ಇದನ್ನು ಮೀರಿ ನಡೆಯಲು ಸಾಧ್ಯವಿಲ್ಲ. ಹಾಗೇನಾದರೂ ನಡೆದುಕೊಂಡರೆ ಅದು ಹುಟ್ಟಿದ ವಂಶಕ್ಕೆ ಕಳಂಕ ತರುವುದರಲ್ಲಿ ಸಂಶಯವಿಲ್ಲ.
ಹುಚ್ಚು ಆಸೆಗೆ ಬಲಿಯಾಗಿಯೋ ಅಥವಾ ಅತಿಯಾದ ಧೈರ್ಯವಿರುವ ಎದೆಗಾರಿಕೆಯ ಮನುಷ್ಯರು ಎಲ್ಲವನ್ನೂ ಮೀರಿ ನಡೆದುಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಈ ಹಠದಲ್ಲಿ ತಾನು ಗೆದ್ದೆ, ತಾನೇನೊ ಸಾಧಿಸಿದೆ ಅನ್ನುವ ಅಹಂಕಾರದಲ್ಲಿ ಬದುಕಿದರೂ ಜನ ಹಿಂದಿನಿಂದ ಆಡಿಕೊಳ್ಳುವುದು ಆ ವ್ಯಕ್ತಿ ಸತ್ತ ನಂತರವೂ ಮುಂದುವರೆದಿರುತ್ತದೆ. ಇದು ಎಷ್ಟು ಹಿಂಸೆಯ ಪ್ರವೃತ್ತಿ ಎಂಬುದು ಬದುಕಿರುವಾಗ ಆ ಮನುಷ್ಯನಿಗೆ ಗೋಚರವಾಗದೆ ಇರಬಹುದು ಅಥವಾ ಈ ಕುರಿತು ಸಾಧಿಸುವ ಮಧದಲ್ಲಿ ತನ್ನ ಆಸೆ ಈಡೇರಿಸಿಕೊಳ್ಳುವ ಯೋಚನೆಯಲ್ಲಿ ಚಿಂತನೆಯನ್ನೆ ಮಾಡಿರದೇ ಇರಬಹುದು. ಆದರೆ ಇದು ಎಷ್ಟು ಸಮಂಜಸ? ಇಂತಹ ನಡೆ ಬದುಕಿರುವವರ ಜೀವ ಹಿಂಡುವುದಂತೂ ನಿಶ್ಚಿತ. ಏಕೆಂದರೆ ಬಾಳಿ ಬದುಕಬೇಕಾದ ಜೀವಗಳು ಆ ವ್ಯಕ್ತಿಯ ಹಿಂದೆ ಇದ್ದರಂತೂ ಮುಗಿಯಿತು; ಜೀವನ ಪರ್ಯಂತ ಇರುವವರು ಅನುಭವಿಸದೆ ಗತಿ ಇಲ್ಲ. ಅಪವಾದ, ಅವಮಾನ, ಮಾತುಗಳ ಚಾಟಿ ಏಟು, ಪ್ರತ್ಯೇಕತೆಯಿಂದ ನೋಡುವ ದೃಷ್ಟಿ ಇತ್ಯಾದಿ ದಿನ ನಿತ್ಯದ ಬದುಕಲ್ಲಿ ಸೇರಿಕೊಂಡಿರುತ್ತದೆ.
ಒಂದು ಗಾದೆ ಇದೆ; ಯಾರೋ ಮಾಡಿದ ತಪ್ಪು ಇನ್ನೊಬ್ಬರು ಅನುಭವಿಸಬೇಕು. ಗರುಡ ಪುರಾಣದಲ್ಲಿ ಈ ಕುರಿತು ಅನೇಕ ರೀತಿಯ ವಿಶ್ಲೇಷಣೆ ಇದೆಯೆಂದು ಕೇಳಿದ್ದೇನೆ. ಹಿರಿಯರು ಮಾಡಿದ ಒಂದೇ ಒಂದು ನೀತಿ ಬಾಹಿರವಾದ ತಪ್ಪು ಕೂಡಾ ವಂಶದಲ್ಲಿರುವವರಿಗೆ ಏಳೇಳು ಜನ್ಮಕ್ಕೂ ಕಾಡುತ್ತದೆ. ಪಾಪದ ಪರಿಣಾಮ ಅನುಭವಿಸಲೇ ಬೇಕು. ಇದು ಎಷ್ಟರ ಮಟ್ಟಿಗೆ ಸತ್ಯವೊ ಗೊತ್ತಿಲ್ಲ. ಆದರೆ ನಿತ್ಯ ಜೀವನದಲ್ಲಿ ಏನಾದರೂ ಅವಘಡ ಘಟಿಸಿದಲ್ಲಿ ಓ! ಇದಕ್ಕೆ ಇರಬೇಕು ಹೀಗಾಯಿತು ಎಂದೆನಿಸುವುದು ಖಂಡಿತಾ. ಅದೇನೊ ಹೇಳುತ್ತಾರಲ್ಲ; ನಡೆದಿದ್ದಕ್ಕೆಲ್ಲ ಶನೀಶ್ವರನೆ ಕಾರಣ ಅಂತ. ಹಾಗಾಯಿತು ಕಥೆ. ಎಷ್ಟು ಕ್ರೂರವಾಗಿದೆಯಲ್ಲವೆ ಪಾಪದ ಪರಿಣಾಮ.
ಅದೇನೆ ಇರಲಿ, ಪ್ರತಿಯೊಂದಕ್ಕೂ ಮನಸ್ಸು ಹೆದರಿ ಹೆದರಿ ನಾನೆಲ್ಲಿ ಎಡವಿದೆ, ಏನು ನನ್ನಿಂದ ತಪ್ಪಾಯಿತು, ಏನು ಕಾರಣ, ಹೇಗಿರಬೇಕಿತ್ತು ನಾನು, ಇದು ಶಾಪವೆ? ಅಥವಾ ಪೂರ್ವ ಜನ್ಮದ ಕರ್ಮವೆ? ಇನ್ನೆಷ್ಟು ಅನುಭವಿಸಬೇಕೊ ಎಂದನ್ನುತ್ತ ಒಳಗೊಳಗೆ ನಡುಗುವ ಹೃದಯ ಕಾಲ ಸರಿದಂತೆಲ್ಲ ತನ್ನನ್ನು ತಾನು ವಿಶ್ಲೇಷಿಸಿಕೊಳ್ಳುತ್ತ ಆ ಪರಮಾತ್ಮನಲ್ಲಿ ಮೊರೆಯಿಡುವುದು ಸಂಕಷ್ಟದಲ್ಲಿ ನರಳುವ ಯಾವ ಮಾನವನನ್ನು ಬಿಟ್ಟಿಲ್ಲ. ಇದೂ ಕೂಡಾ ಜೀವನದ ಅನಿವಾರ್ಯತೆಯಲ್ಲದೆ ಇನ್ನೇನು.
ಬದುಕು ನಮ್ಮ ಕೈಯಲ್ಲಿ ಇಲ್ಲ. ನಿನ್ನೆ ಮತ್ತೆ ಸಿಗುವುದಿಲ್ಲ, ನಾಳೆಯ ದಿನ ಗೊತ್ತಿಲ್ಲ, ಇಂದಿನ ದಿನ ನಮ್ಮದು ಅಷ್ಟೆ. ಇಲ್ಲಿ ಚಿಂತನೆಯ ಮಾತುಗಳು ಆಗಾಗ ಮನಸ್ಸನ್ನು ನಾಟಿದಾಗ ಹೌದು ನಾನು ಈ ಭೂಮಿಗೆ ಬಂದು ಅದೆಷ್ಟು ವರ್ಷಗಳು ಕಳೆದಿವೆ. ಏನೇನೆಲ್ಲಾ ಕಂಡೆ. ಒಳಿತೊ ಕೆಡುಕೊ ನಡೆದ ಘಟನಾವಳಿಗಳು ನೆನಪಿನಂಗಳ ತಿಕ್ಕಿ ತಿಕ್ಕಿ ತೊಳೆಯುವ ಸಂಧ್ಯಾಕಾಲ ಕೆಲವೊಮ್ಮೆ ಖುಷಿ ಕೊಟ್ಟರೆ, ಕೆಲವೊಮ್ಮೆ ಭರ್ಚಿಯಂತೆ ಇರಿಯುತ್ತವೆ. ಈ ನೆನಪುಗಳೆ ಹಾಗೆ. ಅದು ನಾವು ಮಾಡಿದ ತಪ್ಪು ಒಪ್ಪುಗಳನ್ನು ಒರೆಗೆ ಹಚ್ಚಿ, ನೋಡು ಇಷ್ಟು ಕಾಲ ಕಳೆದೆಯಲ್ಲ, ಯಾಕೆ ಎಲ್ಲವನ್ನೂ ಮರೆಯುವ ಕುತಂತ್ರ ಬುದ್ಧಿ, ಇಲ್ಲೂ ನಿನ್ನ ಪಲಾಯನ ವಾದವಾ? ಯೋಚನೆ ಮಾಡು ಸಂತೋಷ ಪಡು, ಪಶ್ಚಾತ್ತಾಪ ಪಡು. ಈ ಜನ್ಮದ ಪಾಪ ಕರ್ಮಗಳನ್ನು ನೀ ಅನುಭವಿಸಿಯೆ ಸಾಯಿ, ಮಾಡಿದ್ದುಣ್ಣೊ ಮಾರಾಯಾ. ಯಾರು ಯಾರಿಗೂ ಹೊಣೆಯಲ್ಲ, ಯಾರಲ್ಲು ಹೇಳಿದರೂ ತೀರುವುದಿಲ್ಲ. ನಿನಗೆ ನೀನೆ ಹೊಣೆ ಗೋಡೆಗೆ ಮಣ್ಣೆ. ಅನುಭವಿಸದೆ ಗತಿ ಇಲ್ಲ. ಇಲ್ಲಿ ಕೂಡಾ ನೆನಪಿನೊಂದಿಗೆ ಅನಿವಾರ್ಯತೆ ಮುಂದುವರಿಯುತ್ತದೆ ಮಾಡಿದ ಕರ್ಮದ ಜೊತೆ ಬದುಕಿನ ಗತಿ.
ಎಷ್ಟು ವಿಚಿತ್ರ ಈ ಜೀವನ ; ಅಂದುಕೊಂಡಿದ್ದು ನಡೆಯುವುದಿಲ್ಲ ಆಗದಿರುವುದಕ್ಕೆ ಪರಿತಪಿಸುವವರೆಲ್ಲ. ಮನುಷ್ಯನಿಗೆ ಸಾವು ಎನ್ನುವುದು ಯಾವಾಗ ಬಂದೆರಗುತ್ತದೊ ಗೊತ್ತಿಲ್ಲ. ಆದರೂ ಮನಸಲ್ಲಿ ಆಸೆಯ ಗುಡಾಣ ಕಟ್ಟುತ್ತಲೆ ಸಾಗುತ್ತಿರುತ್ತಾನೆ. ಇನ್ನೂ ಬೇಕು ಇನ್ನೂ ಬೇಕು. ಬದುಕಿಗೆ ಭರವಸೆ ಇಲ್ಲ. ಆದರೂ ನಾಳೆಯ ಕುರಿತು ಅದೆಷ್ಟು ಯೋಚನೆ, ಯೋಜನೆ. ಸಾವನ್ನು ಮರೆತು ಬದುಕುವುದಿದೆಯಲ್ಲ; ಇದೆ ದೇವರು ಕೊಟ್ಟ ವರವಿರಬೇಕು.. ಮನುಷ್ಯನಿಗೆ ಆಸೆಯ ಬಲೆ ಹೆಣೆಯಲು ಹಾಕಿ ಕೊಟ್ಟ ಮೆಟ್ಟಿಲು.
ನಾನು ನನ್ನದೆನ್ನುವ ಮಮಕಾರ ಬಿಟ್ಟು ಬದುಕು ನಡೆಸುವವರು ಸಾಧುಗಳು ಸನ್ಯಾಸಿಗಳು. ಆದರೆ ನಿಜ ಜೀವನದಲ್ಲಿ ಅಂಟಿಕೊಂಡ ಮನುಷ್ಯ ಹೀಗಿರಲು ಸಾಧ್ಯವಿಲ್ಲ. ಅವನು ಎಲ್ಲಾ ಮರೆತು ತಾನು ನೂರಾರು ವರ್ಷ ಬದುಕುತ್ತೇನೆಂಬ ಭರವಸೆಯಲ್ಲಿ ಕೂಡಿ ಹಾಕುವುದತ್ತಲೆ ಅವನ ಗಮನ.
ಅಯ್ಯೋ! ಈಗಷ್ಟೆ ದುಡಿತಾ ಇದ್ದೇನೆ, ಇನ್ನು ಮುಂದೆ ಏನೇನೆಲ್ಲಾ ನಡೀಬೇಕು. ಎಲ್ಲದಕ್ಕೂ ಈಗಿನಿಂದಲೆ ಜೋಡಿಸುತ್ತಾ ಇದ್ದರೆ, ಆಗ ಎಷ್ಟಾಗಬಹುದು, ಈಗ ಎಷ್ಟಿದೆ ಸಂಬಳ.. ಹೀಗೆ ಬರೀ ಕಂಜೂಸು ತನದಲ್ಲೆ ಅರ್ಧ ಆಯುಷ್ಯ ಕಳೆದು ಬಿಡುತ್ತಾನೆ. ಒಂದೊಮ್ಮೆ ಕೂಡಿ ಹಾಕಿದ್ದಕ್ಕೆ ಸಾರ್ಥಕ ಬದುಕು ದಕ್ಕಿದರೆ ಪರವಾಗಿಲ್ಲ. ಕಾಲ ಕಾಲಕ್ಕೆ ನಡೆಯುವ ಕಾರ್ಯ ಏರುಪೇರಾದರೆ ಆಗ ಶುರು… ನಿರಾಸೆಯ ಗಂಟು ಒಂದೊಂದೆ ಬಿಚ್ಚಲು ಶುರುವಾಗುತ್ತದೆ.
ಛೇ! ಆಗ ಇರುವಷ್ಟು ದಿನಗಳಲ್ಲಿ ಏನೇನೆಲ್ಲಾ ಮಾಡಬೇಕಿತ್ತೊ ಅದಕ್ಕೆಲ್ಲ ಕಡಿವಾಣ ಹಾಕಿ ಬರಿ ನಾಳೆಯ ದಿನಗಳ ಯೋಚನೆಯಲ್ಲಿ ಅನುಭವಿಸದೆ ಕಳೆದು ಬಿಟ್ಟೆನಲ್ಲಾ. ಸರಿಯಾಗಿ ತೊಟ್ಟಿಲ್ಲ, ತಿಂದಿಲ್ಲ, ಸುತ್ತಿಲ್ಲ. ಈಗ ಕೈಲಾಗಲ್ಲ ಇಟ್ಟುಕೊಂಡು ಏನು ಮಾಡಲಿ ಅನ್ನುವಂತಾಗುತ್ತದೆ ಪರಿಸ್ಥಿತಿ. ಏನು ಮಾಡೋಕೂ ಆಗೋದಿಲ್ಲ, ಹೊಂದಾಣಿಕೆ ಮಾಡಿಕೊಂಡು ಮನದ ದುಃಖ ಹತಾಶೆ ನುಂಗಿಕೊಂಡು ಬದುಕಲೇ ಬೇಕು. ಇಷ್ಟ ಪಟ್ಟು ಕಷ್ಟ ತಂದುಕೊಂಡಿದ್ದು ಕೊನೆ ಕೊನೆಗೆ ಅರಿವಾಗಿ ಕಣ್ಣು ತುಂಬುವುದು ಈ ಅನಿವಾರ್ಯ ಬದುಕಿನಲ್ಲಿ.
ಇಂದಿನ ದಿನಗಳಲ್ಲಿ ನಾವು ಹಿರಿಯರು ಈಗಿನ ಜನರ ಬದುಕಿಗೂ ನಮ್ಮ ಕಾಲದ ಬದುಕಿಗೂ ಸೂಕ್ಷ್ಮವಾಗಿ ಗಮನಿಸಿದಾಗ ಇಂದಿನ ತಲೆಮಾರಿನ ಜನರು ಹೆಚ್ಚು ಹೆಚ್ಚು ತಿಳುವಳಿಕೆ ಹೊಂದಿರುತ್ತಾರೆ. ನಮಗಿರುವ ಐವತ್ತು ವರ್ಷದ ಬುದ್ಧಿ ಈಗಿನವರಿಗೆ ಇಪ್ಪತ್ತು ವರ್ಷದಲ್ಲೆ ಬಂದಿರುತ್ತದೆ. ಹಳ್ಳಿಯಾಗಲಿ ಪಟ್ಟಣವಾಗಲಿ ಹಳೆಯ ಆಚಾರ ವಿಚಾರ ಹಿಮ್ಮೆಟ್ಟಿ ಬದುಕನ್ನು ಅನುಭವಿಸುವದರತ್ತಲೆ ಅವರ ಗಮನ ಜಾಸ್ತಿ. ಕೈಯಲ್ಲಿ ಹಣವಿದ್ದರಂತೂ ಮುಗಿದೇ ಹೋಯಿತು ; ಕಣ್ಣಿಗೆ ಕಂಡಿದ್ದೆಲ್ಲ ತಗೋಬೇಕು, ಹಣ ಎಷ್ಟಾದರೂ ಪರವಾಗಿಲ್ಲ. ಬೇಕು ಅಂದರೆ ಬೇಕೆ ಬೇಕು. ಯಾವುದೇ ವಿಷಯವಾಗಿ ನೋಡಿದರೂ ಆತುರ ಜಾಸ್ತಿ.
“ಅಯ್ಯೋ! ಏನಿದು? ಹೀಂಗಾ ಹಣ ವ್ಯಯ ಮಾಡೋದು” ಅಂದರೆ, “ಅದೆಲ್ಲಾ ನಿಮ್ಮ ಕಾಲ, ಈಗ ನಮ್ಮ ಕಾಲ. ಇಷ್ಟು ದಿನ ಹೀಗೆ ಜೀವನ ಮಾಡಿ ಬದುಕಲ್ಲಿ ಏನು ಕಂಡಿರಿ? ನಿಮ್ಮ ತರ ನಾವಿರಕಾಗೋಲ್ಲಪ್ಪ. ನಮದೇನಿದ್ರೂ ಧಿಲ್ಧಾರಾಗಿ ಇರಬೇಕು”. ಇದಕ್ಕೆ ಸರಿಯಾಗಿ ಪಾಪ! ಇರಲಿ ಬಿಡಿ, ನಾವಂತೂ ಕಷ್ಟ ಪಟ್ಟಿದ್ದಾಯಿತು ನಮ್ಮ ಮಕ್ಕಳಾದರೂ ತಿಂದುಂಡ್ಕೊಂಡು ಆರಾಮಾಗಿರಲಿ. ದುಡಿತಾರೆ ಖರ್ಚು ಮಾಡ್ತಾರೆ ಅಂತ ಕೆಲವು ಹೆತ್ತವರ ಕುಮ್ಮಕ್ಕು ಬೇರೆ.
ಹೀಗೆ ಅಂದೂ ಅಂದೂ ಪಾಪ, ಇಲ್ಲದ ಮಕ್ಕಳ ಗತಿ ಅಯೋಮಯ. ಅವರಿಗೆ ಸರಿಸಮಾನವಾಗಿ ಅಲ್ಲದಿದ್ದರೂ ಸ್ವಲ್ಪವಾದರೂ ತಮ್ಮ ಮಕ್ಕಳಿಗೆ ಬೇಜಾರಾಗದಿರಲಿ, ಅವಕ್ಕೂ ಆಸೆ ಆಗೋಲ್ವೆ? ಅನ್ನುತ್ತ ಇಲ್ಲದವರೂ ಸಾಲ ಸೋಲ ಮಾಡಿಯಾದರೂ ತಮ್ಮ ಮಕ್ಕಳ ಸಂತೋಷ, ಆಸೆ ಪೂರೈಸಲು ಹೆಣಗಾಡುವ ಅನೇಕ ಹೆತ್ತವರಿಗೆ ಅನಿವಾರ್ಯವಾಗಿ ಕಾಲಕ್ಕೆ ತಕ್ಕಂತೆ ತಲೆ ಬಾಗುವ ಪರಿಸ್ಥಿತಿ.
ಜೀವನದ ಸಂಧ್ಯಾ ಕಾಲದಲ್ಲಂತೂ ಮಕ್ಕಳಂತಾಗುವ ಮನಸ್ಸು ಕೈಲಾಗದ ದೇಹ ತನ್ನ ಆಟ ತೋರಿಸುವಾಗ ಸಂಯಮವನ್ನು ಕಳೆದುಕೊಳ್ಳದೆ ಮಕ್ಕಳು, ಮೊಮ್ಮಕ್ಕಳ ಜೊತೆ ಅದೆಷ್ಟು ತಾಳ್ಮೆಯಿಂದ ಹೊಂದಿಕೊಂಡರೂ ಸಾಲದು. ಬಹುಶಃ ಈ ಅನಿವಾರ್ಯತೆ ಈಗಲೆ ಜಾಸ್ತಿ ಕಾಟ ಕೊಡಬಹುದೆ ಅನಿಸುತ್ತದೆ. ಕೆಲವು ಸಾರಿ ಕಣ್ಣಿದ್ದೂ ಕುರುಡರಾಗಬೇಕೇನೊ! ಮಕ್ಕಳು ಮೊಮ್ಮಕ್ಕಳು ಹಾಕುವ ಬಟ್ಟೆಯಿಂದ ಹಿಡಿದು ಅವರ ಮಾತು ನಡೆ ನುಡಿ ಸಂಪೂರ್ಣ ಬದಲು. ಕೆಲವು ಸಾರಿ ಏನಾದರೂ ಹೇಳಬೇಕೆಂದರೂ ಹೇಳದೆ ಬಾಯಿಗೆ ಬೀಗ ಹಾಕಿಕೊಂಡು ಇರಬೇಕಾದ ಪರಿಸ್ಥಿತಿ. ವಯಸ್ಸಾದ ಕಾಲದಲ್ಲಿ ಎಂಥಾ ಕಠಿಣ ಪರಿಸ್ಥಿತಿ.
ಬದಲಾಗುತ್ತಿರುವ ಸಮಾಜದಲ್ಲಿ ಪ್ರತಿಯೊಂದಕ್ಕೂ ಹೊಂದಾಣಿಕೆ ಮಾಡಿಕೊಳ್ಳುತ್ತ ತನ್ನತನವ ಮರೆಯದೆ ಬರುವ ಕಷ್ಟ ನಷ್ಟ ಎಲ್ಲವನ್ನೂ ಎದುರಿಸುತ್ತ ನ್ಯಾಯ ನೀತಿ ಧರ್ಮದಿಂದ ಬದುಕುವುದು ಒಂದು ಕತ್ತಿಯ ಅಲುಗಿನ ಮೇಲೆ ನಡೆದಷ್ಟೆ ಕಠಿಣವಾಗಿದೆ. ಎಷ್ಟು ಕಲಿತರೂ ಸಾಲದು. ಪ್ರತಿ ದಿನ ಪ್ರತಿ ಕ್ಷಣ ಸಾಯುವ ಕೊನೆಯವರೆಗೂ ಕಲಿತಷ್ಟೂ ಮುಗಿಯುವುದಿಲ್ಲ. ಈ ಬದುಕೆ ಒಂದು ಪಾಠ ಶಾಲೆ. ಇಲ್ಲಿ ಎದುರಾಗುವ ಜನರೆ ಗುರುಗಳು. ಒಬ್ಬೊಬ್ಬರ ಸಹವಾಸದಲ್ಲೂ ನಾವು ಅರಿಯುವ ಪಾಠ ಅನೇಕವಿರುತ್ತದೆ. ಇಲ್ಲಿ ಒಳಿತೂ ಇದೆ ಕೆಡುಕೂ ಇದೆ. ನಮ್ಮ ಹಿರಿಯರು ಹೇಳೋದಿಲ್ವೆ “ಎಲ್ಲದಕ್ಕೂ ಸಹವಾಸ ದೋಷ. ಒಳ್ಳೆಯವರ ಸಹವಾಸ ಮಾಡಿದ್ರೆ ಹೀಗಾಗ್ತಿತ್ತ. ಸಹವಾಸ ಮಾಡಬೇಕಾದರೆ ಸ್ವಲ್ಪ ಯೋಚನೆ ಮಾಡಬೇಕಿತ್ತು. ಯಾರೊ ಏನೊ ಹೇಳಿದ್ರೂ ಅಂತ ಹಂಗೆ ಆಡಬಿಡೋದಾ? ಸ್ವಂತ ಬುದ್ಧಿ ಎಲ್ಲೋಗಿತ್ತು?” ಅಂತೆಲ್ಲಾ…
ದಿಟವಾದ ಮಾತು. ನಾವು ಯಾರ ಸಹವಾಸ ಮಾಡಲಿ ಒಳಿತು ಕೆಡುಕು ವಿಚಾರ ಮಾಡುವ ಬುದ್ಧಿ ನಮ್ಮಲ್ಲಿ ಇರಬೇಕು. ನಾವು ಸರಿಯಾಗಿ ಇದ್ದರೆ ನಮ್ಮ ಸಹವಾಸ ಮಾಡಿದ ಕೆಟ್ಟವನೂ ಒಳ್ಳೆಯವನಾದ ನಿದರ್ಶನ ಬೇಕಾದಷ್ಟಿದೆ. ಆಗ ಬಹುಶಃ ಕೆಲವು ಅನಿವಾರ್ಯತೆಗಳಿಂದ ಮುಕ್ತಿ ಹೊಂದಬಹುದೇನೊ. ಅದಿಲ್ಲವಾದಲ್ಲಿ ಜಂಜಡದಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿತಿ ನಾವೇ ತಂದುಕೊಂಡಂತಾಗುತ್ತದೆ.
ಅದೇನೆ ಇರಲಿ, ಕೆಲವು ಸಮಯದಲ್ಲಿ ಈ ಅನಿವಾರ್ಯತೆ ಎದುರಾಗಿ ನಮ್ಮ ಕೆಲವು ನಿರ್ಧಾರಗಳು, ಬದುಕುವ ರೀತಿ, ನೀತಿ ಬೇರೆಯವರಿಗೆ ಕೊಂಚ ನೋವು ಕೊಟ್ಟರೂ ಹಾಗೆ ಬದುಕದೆ ಗತಿ ಇಲ್ಲ. ನಂತರದ ದಿನಗಳಲ್ಲಿ ಅವರಿಗೂ ಅರ್ಥವಾದಾಗ ಮನಸಿಗಾಗುವ ಸಂತೋಷ ಅಷ್ಟಿಷ್ಟಲ್ಲ. ನಾನು ಸರಿ ದಾರಿಯಲ್ಲಿ ನಡೆದಿದ್ದೇನೆ, ನನ್ನ ಆತ್ಮಕ್ಕೆ ತೃಪ್ತಿ ಸಿಕ್ಕಿತು, ನಾನು ಯಾರಿಗೂ ಕೇಡು ಬಗೆದಿಲ್ಲ, ನನ್ನ ನಡೆ ಅವರಿಗೂ ಸಂತೋಷ ತಂದಿತು. ಹೀಗೆ ಅಂದುಕೊಳ್ಳುವ ಮನಸ್ಸಿದೆಯಲ್ಲ ಅದೇ ಹೃದಯದ ಬಡಿತ ಹೆಚ್ಚು ಮಾಡಿ ಅನಿರ್ವರ್ಣೀಯ ಆನಂದವನ್ನು ತಂದು ಕೊಡುವ ಕ್ಷಣ. ಆದುದರಿಂದ ಬದುಕಲ್ಲಿ ಹೊಂದಾಣಿಕೆ ಅನ್ನುವುದು ಮುಖ್ಯ.
ಹುಟ್ಟಿನಿಂದ ಸಾಯುವವರೆಗೂ ಬದುಕು ಬಂಗಾರದಂತೆ ಖಂಡಿತಾ ಆಗುವುದಿಲ್ಲ. ಆದರೆ ಈ ಸಂಯಮ, ತಾಳ್ಮೆ ರೂಢಿಸಿಕೊಂಡು ಎಲ್ಲ ಜನರೊಂದಿಗೆ ಬೆರೆತು ನಮ್ಮ ತನವ ಉಳಿಸಿಕೊಂಡು ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಬದುಕಲ್ಲಿ ಬರುವ ಅನಿವಾರ್ಯತೆ ಸ್ವೀಕರಿಸಿ ಅಳವಡಿಸಿಕೊಳ್ಳುವುದು ಉತ್ತಮ. ನೀರು ಯಾವ ಪಾತ್ರೆಗೆ ಹಾಕಲಿ ಅದೇ ಆಕಾರ ತಳೆಯುವಂತೆ ಎಂತಹ ಕಷ್ಟ ಬಂದರೂ ಈ ಹೊಂದಾಣಿಕೆ ಮನೋಭಾವ ರೂಢಿಸಿಕೊಂಡಷ್ಟೂ ಜೀವನದಲ್ಲಿ ಏನೇ ಕಷ್ಟ ಬರಲಿ ಎದುರಿಸಿ ಮುನ್ನಡೆಯಲು ನಮ್ಮಲ್ಲಿ ಹೆಚ್ಚಿನ ಧೈರ್ಯ ತಂದು ಕೊಡುತ್ತದೆ. ಬಾಳಿನ ನಂದಾದೀಪವಾಗಿ ದಾರಿ ತೋರಿಸುತ್ತದೆ.
ಒಳ್ಳೆಯ ಲೇಖನ…
ತುಂಬಾ ಧನ್ಯವಾದಗಳು ಸರ್
ಉತ್ತಮ ಲೇಖನ. ಈಗಿನ ಕಾಲದಲ್ಲಿ ಕೇವಲ ಅನಿವಾರ್ಯತೆಯೇ ಜೀವನವಾಗಿದೆ.