ವಿಷಯದ ವಿವರಗಳಿಗೆ ದಾಟಿರಿ

ಮೇ 14, 2017

ಸತ್ಯಕ್ಕೆ ಸಾವಿಲ್ಲವೆನ್ನುವುದೇನೋ ನಿಜ, ಆದರೆ ಸುಳ್ಳಿಗೆ ಕೈಕಾಲುಗಳಿವೆಯಲ್ಲಾ!

‍ನಿಲುಮೆ ಮೂಲಕ

– ಹನುಮಂತ ಕಾಮತ್

11143647_10204577244893080_67827641632082198_nಲೋಕ ಕಲ್ಯಾಣಕ್ಕಾಗಿ ತಪೋನಿರತ ಋಷಿಮುನಿಗಳಿಗೆ ರಾಕ್ಷಸರು ಉಪಟಳವನ್ನು ಕೊಡುತ್ತಿದ್ದರು, ಋಷ್ಯಾಶ್ರಮಗಳಿಗೆ ದಾಳಿ ಮಾಡುತ್ತಿದ್ದರು ಎನ್ನುವ ಕಥೆಗಳು ಪುರಾಣಗಳಲ್ಲಿ ಪದೇಪದೇ ಬರುತ್ತವೆ. ತ್ರೇತಾಯುಗದಲ್ಲೂ, ದ್ವಾಪರದಲ್ಲೂ ರಾಕ್ಷಸರದ್ದು ಅದೇ ಬುದ್ಧಿ, ಅದೇ ಚಾಳಿ. ಲೋಕಕಲ್ಯಾಣಕ್ಕೆ ಅಡ್ಡಗಾಲು ಹಾಕುವುದೆಂದರೆ ದುಷ್ಟಶಕ್ತಿಗಳಿಗೆ ಏನೋ ಖುಷಿ. ಅಂದರೆ ಸಮಾಜದಲ್ಲಿ ಸಾತ್ವಿಕ ಗುಣ ವೃದ್ಧಿಯಾದಾಗಲೆಲ್ಲಾ ಅದನ್ನು ತಡೆಯುವ ಪ್ರವೃತ್ತಿ ಅನಾದಿಯಿಂದಲೂ ಸೃಷ್ಟಿಯಲ್ಲಿ ನಡೆಯುತ್ತಾ ಬಂದಿವೆ.

ಹಾಗಾಗಿ ಪ್ರಸ್ತುತ ಸಮಾಜದಲ್ಲಿ ಸಾತ್ವಿಕ ಶಕ್ತಿಯ ವಿರುದ್ಧ ದುಷ್ಟ ಶಕ್ತಿಗಳು ಪದೇ ಪದೇ ಎದುರುಬಿದ್ದಾಗ ಅಂಥಾ ಆಶ್ಚರ್ಯವೇನೂ ಉಂಟಾಗುವುದಿಲ್ಲ. ರಾಕ್ಷಸೀ ಶಕ್ತಿಗಳು ಎಲ್ಲಾ ಕಾಲದಲ್ಲೂ ಇರುತ್ತವೆಂಬ ಸತ್ಯದ ಪ್ರಕಟೀಕರಣ ಆಗುತ್ತಲೇ ಇರುತ್ತವೆ. ಪುರಾಣ ಕಾಲದ ಋಷಿಮುನಿಗಳನ್ನೇ ಬಿಡದ ಈ ದುಷ್ಟಶಕ್ತಿಗಳು ಇನ್ನು ಕಲಿಕಾಲದ ಸಾತ್ವಿಕ ಶಕ್ತಿಯನ್ನು ಬಿಟ್ಟಾರೇ ಎಂದೂ ಅನಿಸತೊಡಗುತ್ತದೆ. ಆದರೆ ಅಂಥ ಶಕ್ತಿಗಳ ತಂತ್ರ ಇಂದು ಬದಲಾಗಿದೆ. ಆದರೆ ಧೋರಣೆ ಬದಲಾಗಿಲ್ಲ. ಅದರ ಪ್ರಕಟೀಕರಣಕ್ಕೆ ಹಲವು ದಾರಿಗಳ ಬಳಕೆಯಾಗಿವೆ. ರಾಜಕಾರಣದ ಮೂಲಕ, ಸಾಮಾಜಿಕ ತೊಡರುಗಳ ಮೂಲಕ, ಎಕನಾಮಿಕ್ ಹಿಟ್ಮನ್ ಮನೋಭಾವದ ಮೂಲಕ, ವ್ಯಕ್ತಿತ್ವ ಹನನದ ಮೂಲಕ, ನೈತಿಕ ಮೌಲ್ಯಗಳನ್ನು ಹಾಳುಗೆಡವುವ ಮೂಲಕ, ಚಾರಿತ್ರ್ಯಹೀನ ಎಂಬ ಆರೋಪಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಸಾತ್ವಿಕ ಶಕ್ತಿ ಹುಟ್ಟದಂತೆ ದುಷ್ಟಶಕ್ತಿಗಳು ತಡೆಯುತ್ತಿವೆ. ಈ ಮೂಲಕ ಸಮಾಜದಲ್ಲಿ ಸಭ್ಯ ನಾಗರಿಕ ಪ್ರಜ್ಞೆಯನ್ನೇ ನಾಶಮಾಡುವ ಒಂದು ವರ್ಗ ಇಂದಿಗೂ ಸಕ್ರೀಯವಾಗಿವೆ. ಇಂಥ ಗುಂಪು ಕೇವಲ ಮಧ್ಯಯುಗದ ಭಾರತ ಇತಿಹಾಸದಲ್ಲಿ ಮತ್ತು ಬ್ರಿಟಿಷ್ ಅವಧಿಯಲ್ಲಿ ಮಾತ್ರವಲ್ಲ ಇಂದಿಗೂ, ಈ ಕ್ಷಣದಲ್ಲೂ ಸಕ್ರೀಯವಾಗಿವೆ. ಸಮಾಜ ಕಂಟಕವಾಗುತ್ತಿವೆ.

ಇಂಥ ಪ್ರವೃತ್ತಿಯಿಂದ ಸಮಾಜ ಎಂಥಾ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದೆಯೆಂಬುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಉದಾಹರಣೆ. ಬರೋಬ್ಬರಿ ಒಂದೂವರೆ ದಶಕಗಳ ಕಾಲ ಗೋಧ್ರೋತ್ತರ ಗಲಭೆಗಳ ಹಿಂದೆ ಮೋದಿಯವರ ಕೈವಾಡವಿದೆ ಎಂಬಂತೆ ಅರಚಲಾಯಿತು. ವಿದೇಶಗಳಿಗೂ ಭಾರತದ ಮೇಲೆ ನಕಾರಾತ್ಮಕ ಅಭಿಪ್ರಾಯ ಬರುವಂತೆ ವಾತಾವರಣವನ್ನು ಸೃಷ್ಟಿಮಾಡಲಾಯಿತು. ಇನ್ನಿಲ್ಲದಂತೆ ಅವರನ್ನು, ಅವರ ಪಕ್ಷವನ್ನು ಮಾನಸಿಕವಾಗಿ ಹಿಂಸಿಸಲಾಯಿತು. ಒಂದು ಹಂತದಲ್ಲಿ ನರೇಂದ್ರ ಮೋದಿಯವರನ್ನು ಅವರ ಪಕ್ಷವೇ ಸಂದೇಹಿಸುವಂತಾಯಿತು. ಪ್ರಾಮಾಣಿಕ ವ್ಯಕ್ತಿತ್ವವನ್ನು ತುಳಿಯಲು ಏನೇನು ಹುನ್ನಾರಗಳನ್ನು ಮಾಡಬಹುದೋ ಅವೆಲ್ಲವನ್ನೂ ಮಾಡಿದ ಸಾತ್ವಿಕ ವಿರೋಧಿ ಗುಂಪುಗಳು ಮುಂದೆ ಗೋಧ್ರೋತ್ತರ ಗಲಭೆಗಳಿಗೂ ನರೇಂದ್ರ ಮೋದಿಯವರಿಗೂ ಏನೇನೂ ಸಂಬಂಧವಿರಲಿಲ್ಲ ಎಂದು ನ್ಯಾಯಾಲಯ ತೀರ್ಪಿತ್ತಾಗ ಇದ್ದಕ್ಕಿದ್ದಂತೆ ತಣ್ಣಗಾಗಿಬಿಟ್ಟವು. ಆ ಹೊತ್ತಿಗೆ ನರೇಂದ್ರ ಮೋದಿಯವರಿಗೆ ಈ ಜನ ಸಾವಿನ ವ್ಯಾಪಾರಿ ಎಂದು ಹೆಸರಿಟ್ಟುಬಿಟ್ಟಿದ್ದರು! ಹಾಗಾದರೆ ಈ ಗುಂಪಿನ ಅಸಲಿ ಉದ್ದೇಶವೇನಿತ್ತು? ಅದೇ ಪುರಾಣಕಾಲದ ರಾಕ್ಷಸರಿಗೆ ಏನಿತ್ತೋ ಅದೇ ಉದ್ದೇಶವಲ್ಲದೆ ಮತ್ತಿನ್ನೇನು?

ಇಂಥ ಹುನ್ನಾರಗಳು ಸಮಾಜದ ನಡುವೆ, ಸಮಾಜಕ್ಕಾಗಿ ಕೆಲಸ ಮಾಡುವ ಪ್ರತೀ ವ್ಯಕ್ತಿತ್ವದೊಡನೆಯೂ ನಡೆಯುತ್ತಿರುತ್ತವೆ. ಕೆಲವು ಸದ್ದಾಗುತ್ತವೆ. ಸುದ್ಧಿಯಾಗುತ್ತವೆ. ನೆಲಕಚ್ಚಿಹೋಗುವ ಪ್ರಕರಣಗಳು ಇನ್ನೆಷ್ಟೋ ಇರುತ್ತವೆ. ಅಂದರೆ ಈ ಗುಂಪಿನ ಉದ್ದೇಶ ಬಹುತೇಕ ಸಫಲವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಭಾಜಪಾ ರಾಷ್ಟ್ರೀಯ ಅಧ್ಯಕ್ಷ ಬಂಗಾರು ಲಕ್ಷ್ಮಣ ಅವರ ಚಾರಿತ್ರ್ಯಹರಣ ನಡೆಯಿತು. ಸೆಕ್ಯುಲರ್ ಬುದ್ಧಿಜೀವಿಗಳ ಬಣ ಎಷ್ಟೊಂದು ನಾಜೂಕಾಗಿ ತಂತ್ರ ಹೆಣೆದರೆಂದರೆ ಭಾಜಪಾದ ಮೇಲ್ಮಟ್ಟದ ಕಾರ್ಯಕರ್ತರಿಗೂ ಒಂದು ಕ್ಷಣ ಸುಳ್ಳನ್ನು ನಿಜ ಎಂದು ನಂಬುವಷ್ಟರಮಟ್ಟಿಗೆ. ಪರಿಣಾಮ ಬಂಗಾರು ಲಕ್ಷ್ಮಣರ ರಾಜಕೀಯ ಬದುಕೇ ಕೊನೆಗೊಂಡಿತು. ಒಬ್ಬ ಮೌಲ್ಯಾಧಾರಿತ ರಾಜಕಾರಣಿಯೊಬ್ಬನನ್ನು ಈ ಬಣ ವ್ಯವಸ್ಥಿತವಾಗಿ ಮುಗಿಸಿ ಕೇಕೆ ಹಾಕಿತು. ನಾನಾ ಅಪಪ್ರಚಾರ, ಚಾರಿತ್ರ್ಯಹರಣಗಳ ಮೂಲಕ ಈ ಗ್ಯಾಂಗು ನಡೆಸುವ ಅವೆಷ್ಟೋ ಪ್ರಕರಣಗಳಿವೆ. ಗಾಂಧಿ ಹತ್ಯೆಯನ್ನೇ ತೆಗೆದುಕೊಳ್ಳಿ. ಅಲ್ಲಿ ಎಲ್ಲವೂ ಸ್ಪಷ್ಟವಾಗಿತ್ತು. ಸ್ವತಃ ನಾಥೂರಾಂ ಗೋಡ್ಸೆಯೇ ಗಾಂಧಿಯನ್ನು ನಾನೇ ಕೊಂದೆ, ತನಗೆ ಕೊಲ್ಲಲು ಇಂತಿಂಥ ಕಾರಣಗಳಿದ್ದವು ಎಂಬುದನ್ನು ದೇಶದ ಕಾನೂನಿನ ಮುಂದೆ ಘಂಟಾಘೋಷವಾಗಿ ಹೇಳಿದ್ದ. ಆದರೆ ಅಂದು ಆ ಕೊಲೆಯನ್ನು ಆರೆಸ್ಸೆಸ್ಸಿನ ಗುರೂಜಿ ಗೋಳವಲಕರ್, ಹಿಂದೂ ಮಹಾಸಭೆಯ ಸಾವರ್ಕರರ ತಲೆ ಮೇಲೆ ಹೊರಿಸಲಾಯಿತು. ಅಂದರೆ ಗಾಂಧಿಯಂಥ ರಾಷ್ಟ್ರಪಿತನ ಶವವನ್ನಿಟ್ಟು ಕೆಲವರು ರಾಜಕೀಯ ಮಾಡಿದರು. ಅಷ್ಟೇ ಅಲ್ಲ, ಗಾಂಧಿಜಿಯನ್ನು ಬ್ರಾಹ್ಮಣರು ಕೊಂದರು ಎಂದು ಬ್ರಾಹ್ಮಣರನ್ನು ಅಟ್ಟಾಡಿಸಿ ಬಡಿಯಲಾಯಿತು. ಶಾಂತಿಧೂತನ ಅಂತಿಮ ಸಂಸ್ಕಾರವನ್ನು ಹಿಂಸೆಯ ಮೂಲಕ ಆಚರಿಸಲೂ ಇವರು ಹಿಂಜರಿಯಲಿಲ್ಲ. ಮುಂದೆ ನ್ಯಾಯಾಲಯ ಗೋಡ್ಸೆಯನ್ನು ಕೊಲೆಗಾರ ಎಂದು ತೀರ್ಮಾನಿಸಿ ಆತನನ್ನು ಗಲ್ಲಿಗೇರಿಸಿದರೂ ಈ ಬಣದ ಅಪಪ್ರಚಾರ ಮಾತ್ರ ನಿಲ್ಲಲೇ ಇಲ್ಲ. ಇಂದಿಗೂ ಆರೆಸ್ಸೆಸ್ ಅನ್ನು ಟೀಕಿಸಲು ಗಾಂಧಿ ಹತ್ಯೆಯನ್ನು ಎಳೆದು ತರಲಾಗುತ್ತದೆ. ಇದು ಸಂವಿಧಾನ ರಚಿತ ನ್ಯಾಯಾಂಗದ ತೀರ್ಪನ್ನೇ ಅಲ್ಲಗೆಳೆದಂತಲ್ಲವೇ? ಸಾತ್ವಿಕ ಶಕ್ತಿಯನ್ನು ವಿರೋಸುವ ಬಣಕ್ಕೆ ನ್ಯಾಯಾಂಗವೆಂದರೆ ಅಷ್ಟೊಂದು ಅಲಕ್ಷ್ಯವೇ?

ಇಂಥ ಶಕ್ತಿಗಳು ಯಾವುವು? ಸಾತ್ವಿಕ ಗುಣವನ್ನು ವಿರೋಧಿಸುವ ಈ ಜನಗಳ ಗುಂಪು ಎಲ್ಲಿರುತ್ತವೆ ಎಂದು ಪತ್ತೆ ಹಚ್ಚುವುದೂ ಕೂಡಾ ಕಷ್ಟ. ಪುರಾಣಕಾಲದ ರಾಕ್ಷಸರೂ ನಾನಾ ವೇಷಗಳಲ್ಲಿದ್ದರಲ್ಲವೇ? ಇವರೂ ಕೂಡಾ ಅಂಥವರೇ. ಅವರು ವ್ಯವಸ್ಥೆಯ ಒಳಗೂ ಹೊರಗೂ ಇರುತ್ತಾರೆ, ಬಗಲಲ್ಲೂ ಇರುತ್ತಾರೆ. ಸಾತ್ವಿಕ ಶಕ್ತಿಯ ನಾಶವೇ ಗುರಿಯಾದ ಕಾರಣ ಅವರು ಸರ್ವಾಂತರ್ಯಾಮಿಗಳೂ ಆಗಿರುತ್ತಾರೆ. ಅವರು ನಾನಾ ಸಿದ್ಧಾಂತಗಳ ಮುಖವಾಡ ಹೊದ್ದಿರುತ್ತಾರೆ. ನಾನಾ ಬಣ್ಣಗಳನ್ನು ಹಚ್ಚಿರುತ್ತಾರೆ. ಹಾಗಾಗಿ ಅವರು ಸಫಲರಾಗಿರುತ್ತಾರೆ! ರಾಮಚಂದ್ರಾಪುರ ಮಠದ ಸಂತ ಶ್ರೀ ರಾಘವೇಶ್ವರ ಭಾರತಿಗಳ ಪ್ರಕರಣವನ್ನೇ ನೋಡಿ. ಅಲ್ಲಿ ಸಾತ್ವಿಕ ಶಕ್ತಿ ಇತ್ತು. ಅವರ ಕಾರ್ಯಗಳೆಲ್ಲವೂ ಸಾತ್ವಿಕವಾದುದಾಗಿತ್ತು. ರಾಕ್ಷಸೀ ಶಕ್ತಿಗಳು ಮಠದೊಳಗೇ ಅಡಗಿ ಕುಳಿತಿತ್ತು. ಪುರಾಣಕಾಲದ ಮಾರುವೇಷದ ರಾಕ್ಷಸರಂತೆ! ಸಂತರಿಗೆ ಮಾಡಬಾರದ ಆರೋಪಗಳನ್ನು ಮಾಡಲಾಯಿತು. ಅಪಪ್ರಚಾರ ಎಗ್ಗಿಲ್ಲದೆ ನಡೆದವು. ಮಠವನ್ನು ಸದಾ ಸುದ್ಧಿಯಲ್ಲಿರುವಂತೆ ನೋಡಿಕೊಳ್ಳಲಾಯ್ತು. ಚಾರಿತ್ರ್ಯಹರಣ, ನಂಬಿಕೆಗಳಿಗೆ ಮರ್ಮಾಘಾತ  ನಡೆಯಿತು. ಸಹಜವಾಗಿ ಸುಳ್ಳು ಸತ್ಯಕ್ಕಿಂತ ಆಕರ್ಷಣೀಯವಾಗಿರುತ್ತದೆ. ಅದರ ಸದ್ದೂ ಕೂಡಾ ಜೋರಾಗಿರುತ್ತದೆ. ಸುವಾಸನೆಗಿಂತ ದುರ್ಗಂಧ ಬೇಗ ವ್ಯಾಪಿಸುವಂತಿರುತ್ತದೆ. ಸ್ವಾಮಿಗಳ ವಿಷಯದಲ್ಲೂ ಅದು ನಡೆಯಿತು. ಒಬ್ಬ ತೀರಾ ಕೀಳು ದರ್ಜೆಯ ಮನುಷ್ಯನನ್ನು ನೋಡುವಂತೆ ವ್ಯವಸ್ಥೆ ಅವರನ್ನು ನೋಡಿತು. ಈ ಬಣ ನ್ಯಾಯಾಲಯಕ್ಕಿಂತಲೂ ಮುಂಚಿತವಾಗಿ ಸ್ವಾಮಿಗಳ ವಿರುದ್ಧ ತೀರ್ಪು ಕೊಡಲಾರಂಭಿಸಿತು! ಅಂತಿಮ ಜಯ ಸತ್ಯದ್ದೇ ಎನ್ನುವುದನ್ನು ಒಪ್ಪೋಣ, ಅದರ ಮೇಲೆ ನಂಬಿಕೆಯಿಡೋಣ. ಆದರೆ ಜಯದ ಹಾದಿಯಲ್ಲಿ ಎದುರಾಗುವ ಸುಳ್ಳುಗಳು ಸೃಷ್ಟಿಸುವ ಉಪದ್ವಾಪಗಳನ್ನೇನು ಮಾಡೋಣ? ರಾಮಚಂದ್ರಾಪುರ ಮಠ ಗೋ ಸಂಭಂದಿತ ಹಲವು ಯೋಜನೆಗಳನ್ನು ಹಮ್ಮಿಕೊಂಡಿತ್ತು. ಬ್ರಾಹ್ಮಣೇತರ ಜನರೂ ಮಠಕ್ಕೆ ನಡೆದುಕೊಳ್ಳಲಾರಂಭಿಸಿದ್ದರು. ಹೇಳಬೇಕೆಂದರೆ ಮಠಕ್ಕೆ ಮತ್ತು ಸ್ವಾಮಿಗಳಿಗೆ ಅದು ತುಂಬಾ ಅಮೂಲ್ಯವಾದ ಸಮಯವಾಗಿತ್ತು. ಸಾತ್ವಿಕ ವಿರೋಧಿ ಬಣ ಆ ಸಮಯವನ್ನು ಪೋಲು ಮಾಡುವಲ್ಲಿ ಯಶಸ್ವಿಯಾಗಿತ್ತು. ಸ್ವಾಮೀಜಿಗಳಿಗೆ ಭಕ್ತವೃಂದವಿತ್ತು. ಸುಳ್ಳನ್ನು ದಾಟಿ ಬರುವೆ ಎನ್ನುವ ಶಕ್ತಿಯಿತ್ತು. ಅದಕ್ಕಿಂತಲೂ ಹೆಚ್ಚಾಗಿ ತಪೋಬಲವಿತ್ತು. ಹಾಗಾಗಿ ಅವರ ಎಂದಿನ ಕಾರ್ಯಗಳು, ಸಮಾಜಮುಖಿ ಕೆಲಸಗಳು ಯಥಾವತ್ತು ಮುಂದುವರಿದವು. ಆದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಹೀಗಾಗಿದ್ದರೆ…? ಆತನಿಗೆ ಆಳಿಗೊಂದು ಕಲ್ಲುಹಾಕುವ ಬಣದ ಎದುರು ಗೆಲ್ಲಲಾದೀತೇ? ಮುಂದೊಂದು ದಿನ ಸಮಾಜಕ್ಕೆ ಸತ್ಯ ಅರಿವಾಗಬಹುದು. ಆದರೆ ಅಷ್ಟರವರೆಗೆ?

ವರ್ಷದ ಹಿಂದೆ ಮಂಗಳೂರಿನ ಒಂದು ಕೊಲೆ ಪ್ರಕರಣ ದೇಶವ್ಯಾಪಿ ಚರ್ಚೆಯಾಯಿತು. ಸಾಮಾಜಿಕ ಕಾರ್ಯಕರ್ತ ವಿನಾಯಕ ಬಾಳಿಗ ಎಂಬುವರು ಕೊಲೆಯಾದರು. ಆ ಕೊಲೆಯ ನಂತರ ಗಾಳಿ ಸುದ್ಧಿಗಳು ಅದೆಷ್ಟು ವೇಗವಾಗಿ ಹರಡಿತೆಂದರೆ ಕೆಲವರು ಇಂತಿಂಥ ಕಾರಣಕ್ಕೆ, ಇಂತಿಂಥವರೇ ಕೊಲೆ ಮಾಡಿದ್ದಾರೆ ಎಂದು ಮಾಧ್ಯಮಗಳು ಹೇಳಲಾರಂಭಿಸಿದರು. ಕೆಲವು ಗಂಟೆಗಳ ನಂತರ ಸಾಮಾಜಿಕ ಕಾರ್ಯಕರ್ತರಾಗಿ ರಾಜ್ಯಮಟ್ಟದಲ್ಲಿ ಹೆಸರು ಕೇಳಿಬರುತ್ತಿದ್ದ ನರೇಶ್ ಶೆಣೈ ಅವರನ್ನೇ ಕೊಲೆಗಾರ ಎಂದು ಸುದ್ಧಿ ಮಾಡಲಾಯಿತು. ವಿಚಿತ್ರವೆಂದರೆ ಅಂದು ಎಂ.ಎಂ ಕಲಬುರ್ಗಿ ಕೊಲೆಯಾದಾಗ ಕೆಲವರು ಇದು ಸಂಘಪರಿವಾರ ನಡೆಸಿದ ಕೊಲೆ ಎಂದಂತೆ ನರೇಶ್ ಶೆಣೈ ಮೇಲೂ ಅಪವಾದ ಕೇಳಿಬಂತು. ಮತ್ತು ದೇಶದ ಎಲ್ಲಾ ಆರ್ಟಿಐ ಹೋರಾಟಗಾರರ ಕೊಲೆ ಪ್ರಕರಣವನ್ನೂ ಬಾಳಿಗ ಕೊಲೆ ಪ್ರಕರಣದಲ್ಲಿ ಸಮೀಕರಿಸಿ ರಾಷ್ಟ್ರಮಟ್ಟದಲ್ಲಿ ಡಂಗುರ ಹೊಡೆಸಲಾಯಿತು. ನರೇಶ್ ಶೆಣೈ ಕಾನೂನಿನ ಮೊರೆ ಹೋದರು. ಕಾನೂನು ಪ್ರಕಾರ ಸತ್ಯದ ಹೋರಾಟಕ್ಕೆ ಮುಂದಾದರು.

ಆದರೆ ವಕ್ಕರಿಸಿಕೊಂಡ ಒಂದು ಬಣ ನ್ಯಾಯದ ಮೇಲೆ ನಂಬಿಕೆ ಇಡದೆ ಹಳೆ ಕ್ಯಾಸೆಟ್ಟನ್ನು ಮತ್ತೆಮತ್ತೆ ಹಾಕುತ್ತಿದೆ. ನಮ್ಮ ನ್ಯಾಯಾಂಗ, ಪ್ರಕರಣ ಇತ್ಯರ್ಥ ಆಗುವವರೆಗೆ ಯಾವುದೇ ವ್ಯಕ್ತಿ ಅಪರಾಧಿಯಲ್ಲ ಎಂದು ಹೇಳುತ್ತದೆ. ಆದರೆ ನರೇಶ್ ಶೆಣೈ ಕೆಲವರ ಕಣ್ಣಲ್ಲಿ ಅಪರಾಧಿಯಾಗಿಬಿಟ್ಟಿದ್ದಾರೆ! ಸತ್ಯಕ್ಕೆ ಸಾವಿಲ್ಲವೆಂಬುದೇನೋ ನಿಜ. ವಿಚಾರಣೆ ಮುಗಿಯುವವರೆಗೂ ಅವರನ್ನು ಕೊಲೆಗಾರ ಎನ್ನುವ ಅಧಿಕಾರ ಕಾನೂನಿಗೇ ಇಲ್ಲವೆಂದ ಮೇಲೆ ಆರೋಪಿಸುವವರಿಗಿದೆಯೇ? ನಾಳೆ ಕಾನೂನು ನರೇಶ್ ಶೆಣೈ ಅವರಿಗೂ ಬಾಳಿಗಾ ಕೊಲೆಗೂ ಏನೇನೂ ಸಂಬಂಧವಿಲ್ಲ ಎಂದು ತೀರ್ಪಿತ್ತರೆ ನರೇಶ್ ಶೆಣೈ ಮತ್ತು ಅವರ ಕುಟುಂಬವನ್ನು ಆರೋಪಿಸುತ್ತಿರುವವರು ಯಾವ ಧೋರಣೆಯನ್ನು ಹೊಂದುವರು? ನಮ್ಮ ನ್ಯಾಯಾಂಗವೆಷ್ಟು ಪ್ರಬಲ ಮತ್ತು ನಾಗರಿಕ ಸ್ನೇಹಿ ಎಂದರೆ ಎಲ್ಲರಿಗೂ ಎಲ್ಲದಕ್ಕೂ ಮುಕ್ತ ಅವಕಾಶವನ್ನು ನೀಡಿದೆ. ಕೇವಲ ಸಂಶಯದ ಆಧಾರದ ಮೇಲೆ ಒಂದು ಪ್ರಕರಣ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಕೇವಲ ಸಂಶಯದ ಆಧಾರದ ಮೇಲೆ ಒಬ್ಬನನ್ನು ದೈಹಿಕ ಮತ್ತು ಮಾನಸಿಕವಾಗಿ ಶಿಕ್ಷಿಸುವ ಅಧಿಕಾರವನ್ನು, ತೇಜೋವಧೆ ಮಾಡುವುದನ್ನು ನ್ಯಾಯಾಲಯ ಒಪ್ಪಲಾರದು. ಆದರೆ ಇಲ್ಲಿ ನರೇಶ್ ಶೆಣೈ ಅವರನ್ನು, ರಾಮಚಂದ್ರಾಪುರ ಮಠಾಧೀಶರನ್ನು ಅಪರಾಧಿಗಳೆಂಬಂತೆ ಕಾಣುವ ಒಂದು ದೊಡ್ಡ ವರ್ಗವೇ ಇದೆ. ಸಾವರ್ಕರ್-ಗೋಳವಲಕರ್ ಅವರನ್ನು ಇನ್ನೂ ಅಪರಾಧಿಗಳು ಎನ್ನುತ್ತಿರುವ ವರ್ಗವೇ ಇವರೆಲ್ಲರನ್ನೂ ಅಪರಾಧಿಗಳು ಎಂದು ಆಡಿಕೊಳ್ಳುತ್ತಿದೆ ಎನ್ನುವುದು ಇಲ್ಲಿ ಇನ್ನೊಂದು ವಿಶೇಷ.

ಇಲ್ಲಿ ನರೇಶ್ ಶೆಣೈ ಅವರ ಮೇಲೆ ಯಾವುದೇ ನ್ಯಾಯಾಲಯ, ತನಿಖಾ ಸಂಸ್ಥೆ  ತೀರ್ಪು ಕೊಟ್ಟಿಲ್ಲ. ಯಾವುದೇ ನ್ಯಾಯಾಕರಣದಿಂದ ಶಿಕ್ಷೆಯೂ ಆಗಿಲ್ಲ. ಹಾಗಿರುವಾಗ ಇನ್ನೂ ವಿಚಾರಣೆ ನಡೆಯುತ್ತಿರುವಾಗಲೇ ನರೇಶ್ ಶೆಣೈಯವರನ್ನು ಅಪರಾಧಿಯಂತೆ ಬಿಂಬಿಸುತ್ತಿರುವುದು ಎಷ್ಟು ಸರಿ? ಅವರ ಶಕ್ತಿ, ಅವರಿಂದ ಸಮಾಜಕ್ಕಾಗಬೇಕಾದ ಕೆಲಸಗಳು ನಡೆಯಬಾರದೇ? ಏಕೆಂದರೆ, ನರೇಶ್ ಶೆಣೈ ನಮೋ ಬ್ರಿಗೇಡ್ ಸಂಸ್ಥಾಪಕರಲ್ಲೊಬ್ಬರು. ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ಉದ್ದೇಶದಿಂದ ತನ್ನ ವೈಯಕ್ತಿಕ ಕೆಲಸ-ಕಾರ್ಯಗಳನ್ನು ಬದಿಗಿರಿಸಿ ರಾಜ್ಯಾದ್ಯಂತ ನಮೋ ಬ್ರಿಗೇಡು ಕಟ್ಟಿ ದೇಶಕ್ಕೋಸ್ಕರ, ದೇಶದ ಅಭಿವೃದ್ಧಿಗೋಸ್ಕರ ಮೋದಿಗೆ ಮತ ಹಾಕಿ ಎಂದು ಜನರ ಬಳಿ ಗೋಗರೆದವರು. ಸಂಘ ಪರಿವಾರದ ಸಂಘಟನೆಗಳ ಸಹಿತ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ಅಂತಹಾ ವ್ಯಕ್ತಿಯ ಮೇಲೆ ಯಾರೋ ಕೇಸು ಹಾಕಿದರು ಎಂದ ಮಾತ್ರಕ್ಕೆ ಅವರು ಅಪರಾಧಿಯಾಗಿ ಹೋದರಾ? ವಿವಿಧ ಸಂಘಟನೆಯಲ್ಲಿ ತೊಡಗಿ ಸಮಾಜಕ್ಕೋಸ್ಕರ ಕೆಲಸ ಮಾಡಿದ ಕಾರಣಕ್ಕೆ ನರೇಶ್ ಶೆಣೈಯವರನ್ನು ಹತ್ತಿಕ್ಕಲು ನಡೆಯುತ್ತಿರುವ ಷಡ್ಯಂತ್ರವೇ ಇದು? ಮೋದಿಯವರನ್ನು ಪ್ರಧಾನಿ ಮಾಡುವ ಸಲುವಾಗಿ ಅವರ ಪಕ್ಷದೊಂದಿಗೆ, ಪಕ್ಷದ ಸಂಘಟನೆಗಳೊಂದಿಗೆ ಗುರುತ್ತಿಸಿಕೊಂಡ ಕಾರಣಕ್ಕೆ ಕೆಲವರ ಕೆಂಗಣ್ಣಿಗೆ ಗುರಿಯಾದರಾ ನರೇಶ್? ಹಾಗಾದರೆ ಸಂಘಪರಿವಾರದ ಜೊತೆ ಗುರುತಿಸಿಕೊಳ್ಳುವುದು ಅಪರಾಧವೇ? ಸಮಾಜಕ್ಕಾಗಿ ಕೆಲಸ ಮಾಡುವುದೇ ತಪ್ಪೇ? ಯಾವುದೋ ಒಂದು ಕೊಲೆಯ ತನಿಖೆಯಲ್ಲಿ ನರೇಶ್ ಶೆಣೈ ವಿಚಾರಣೆ ನಡೆದಿದೆ ಎಂದಾಕ್ಷಣ ನರೇಶ ಶೆಣೈ ಸಮಾಜದಲ್ಲಿ ಏನೂ ಅಲ್ಲವೇ? ಅಷ್ಟಕ್ಕೆ ಅವರ ಸಮಾಜಮುಖಿ ಕೆಲಸಗಳೆಲ್ಲಾ ಶೂನ್ಯವಾಗಿ ಹೋಯಿತೇ?

ಸಾತ್ವಿಕ ಶಕ್ತಿ ರಾಕ್ಷಸೀ ಶಕ್ತಿಯೆದುರು ಮಂಕಾಗಬೇಕೇ? ಸತ್ಯಕ್ಕೆ ಸಾವಿಲ್ಲ ಎಂಬ ತತ್ವಶಾಸ್ತ್ರ ಕೇವಲ ಭೋದನೆಗೆ ಮಾತ್ರವೇ? ಸತ್ಯಕ್ಕಿಂತ ಹೆಚ್ಚಾಗಿರುವ ಸುಳ್ಳಿನ ವೇಗಕ್ಕೆ ಮಾರುಹೋಗಬೇಕೇ? ಪ್ರಜ್ಞಾವಂತರು ಇದರ ಬಗ್ಗೆ ಆಲೋಚಿಸಬೇಡವೇ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments