ವಿಷಯದ ವಿವರಗಳಿಗೆ ದಾಟಿರಿ

ಮೇ 15, 2017

3

ನನ್ನ ಮೇಲೂ ನಡೆದಿತ್ತು ಆಪರೇಷನ್ ಶಿಲುಬೆ!

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್ ಮಾವಿನಕಾಡು

ಬೆಂಗಳೂರಿಗೆ ಕಾಲಿಟ್ಟು ಕೆಲವೇ ಸಮಯವಾಗಿತ್ತು. ಮಾರಾಟ ಪ್ರತಿನಿಧಿಯಾಗಿ ಮನೆ ಮನೆಮನೆಗಳ ಮೆಟ್ಟಿಲು ಹತ್ತಿಳಿಯುತ್ತಿದ್ದ ಸಮಯದಲ್ಲೇ ಪರಿಚಯವಾದವರು ರಾಜು ಮೆನನ್ ಎಂಬ ಕೇರಳ ಮೂಲದ ವ್ಯಕ್ತಿ. ಪರಿಚಯ ಸ್ನೇಹವಾಗಿ ಸ್ನೇಹ ವ್ಯವಹಾರಕ್ಕೆ ತಿರುಗಿದಾಗ ಪ್ರಾರಂಭವಾಗಿದ್ದೇ ಇಮೇಜ್ ಮೇಕರ್ಸ್ ಎನ್ನುವ ಕಲರ್ ವಿಸಿಟಿಂಗ್ ಕಾರ್ಡ್ ಮುದ್ರಿಸುವ ಸಣ್ಣದೊಂದು ವ್ಯವಹಾರ. ಕೇವಲ ಐದು ಸಾವಿರ ಮುಂಗಡದೊಂದಿಗೆ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಪ್ರಾರಂಭಿಸಿದ ಆ ನಮ್ಮ ವ್ಯವಹಾರ ನಾವಂದುಕೊಂಡಷ್ಟಲ್ಲದಿದ್ದರೂ ಒಂದು ಮಟ್ಟದ ಯಶಸ್ಸು ಕಾಣತೊಡಗಿತು. ಆದರೆ ಆ ವೇಳೆಗಾಗಲೇ ಮದುವೆಯಾಗಿ ಒಂದು ಮಗುವನ್ನೂ ಹೊಂದಿದ್ದ ರಾಜು ಮೆನನ್ ಮಾಡಿಕೊಂಡ ಸಾಲ ವಿಪರೀತವಾಗಿ ವಿಸಿಟಿಂಗ್ ಕಾರ್ಡ್ಸ್ ಮುದ್ರಿಸಲು ಗಿರಾಕಿಗಳಿಂದ ನಾವು ಸಂಗ್ರಹಿಸಿದ್ದ ಮುಂಗಡ ಹಣವೂ ಸೇರಿದಂತೆ ಇದ್ದ ಬದ್ದ ಹಣವನ್ನೆಲ್ಲಾ ಎತ್ತಿಕೊಂಡು ರಾತ್ರೋ ರಾತ್ರಿ ಪರಾರಿಯಾಗಿದ್ದ.

ಮತ್ತೊಮ್ಮೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ನನಗೆ ಸಹೃದಯರಾದ ಆ ಕಟ್ಟಡದ ಮಾಲೀಕರಾದ ನಾರಾಯಣ ರೆಡ್ಡಿ ಅವರು ಕೊಟ್ಟಿರುವ ಮುಂಗಡ ಹಣ ಮುಗಿಯುವವರೆಗೂ ಅದೇ ರೂಮ್ ನಲ್ಲಿ ಉಳಿದುಕೊಳ್ಳಲು ನನಗೆ ಅವಕಾಶ ಮಾಡಿಕೊಟ್ಟಿದ್ದರು.

ಪಕ್ಕದ ರೂಮ್ ನಲ್ಲೇ ವಾಸವಿದ್ದ ಬಾಲ್ಡ್ವಿನ್ ಸ್ಕೂಲ್ ನ ಶಿಕ್ಷಕಿಯಾಗಿದ್ದ ಪ್ಯಾಟ್ಸಿ ಪರ್ಲ್ ಎನ್ನುವವರನ್ನು ನೋಡಲು ಆಗಾಗ ರಾಮಮೂರ್ತಿ ನಗರದ ನಿರ್ಮಲಾ ಶಾಂತಿ ಎನ್ನುವ ತಮಿಳು ಮೂಲದ ಕ್ರಿಶ್ಚಿಯನ್ ಮಹಿಳೆಯೊಬ್ಬರು ಬರುತ್ತಿದ್ದರು. ಅವರು ಅಲ್ಲೇ ಒಂದು ಅನಾಥ ಮಕ್ಕಳ ಆಶ್ರಮ ನಡೆಸುತ್ತಿದ್ದರು. ನನ್ನ ಪರಿಸ್ಥಿತಿಯನ್ನು ತಿಳಿದ ಅವರು ತಮ್ಮ ಆಶ್ರಮದಲ್ಲಿ ಕೆಲಸ ಮಾಡುವಂತೆ ಆಹ್ವಾನಿಸಿದರು. ಅನಾಥ ಮಕ್ಕಳಿಗಾಗಿ ಕೆಲಸ ಮಾಡಲು ಆಸಕ್ತಿಯೂ ಇದ್ದುದರಿಂದ ಮತ್ತು ಕೆಲಸದ ಜೊತೆಗೆ ವಸತಿಯ ಅವಶ್ಯಕತೆಯೂ ಇದ್ದುದರಿಂದ ಅವರ ಆಹ್ವಾನವನ್ನು ಒಪ್ಪಿಕೊಂಡು ಆ ಆಶ್ರಮದಲ್ಲಿ ಕೆಲಸಕ್ಕೆ ಸೇರಿಕೊಂಡೆ. ದಾನಿಗಳಿಂದ ಹಣ ಸಂಗ್ರಹಿಸುವುದು, ಹೋಟೆಲ್ ಗಳಿಂದ ಮತ್ತು ಸಮಾರಂಭಗಳಲ್ಲಿ ಮಿಕ್ಕ ಆಹಾರವನ್ನು ಪಡೆದು ತರುವುದು, ಕಲಾಸಿಪಾಳ್ಯ ಮಾರುಕಟ್ಟೆಯಿಂದ ವಾರಕ್ಕೊಮ್ಮೆ ಉಚಿತವಾಗಿ ತರಕಾರಿಗಳನ್ನು ಸಂಗ್ರಹಿಸಿ ತರುವುದು ಮುಂತಾದವುಗಳು ನನ್ನ ಕೆಲಸವಾಗಿತ್ತು.

ಆದರೆ ಕೆಲವು ದಿನಗಳ ನಂತರ ತಿಳಿದ ವಿಷಯಗಳು ನಿಜಕ್ಕೂ ನನಗೆ ಆಘಾತ ತಂದಿತ್ತು. ಅಲ್ಲಿದ್ದ ಮಕ್ಕಳುಗಳಲ್ಲಿ ಯಾರೂ ಅನಾಥರಾಗಿರಲಿಲ್ಲ! “ಕೆಲಸದ ಸ್ಥಳದಲ್ಲೇ ಉಳಿದುಕೊಂಡು ಮನೆಗೆಲಸ ಮಾಡಲು ಹೆಂಗಸರು ಬೇಕಾಗಿದ್ದಾರೆ. ಉತ್ತಮ ವೇತನದ ಜೊತೆಗೆ ನಿಮ್ಮ ಮಕ್ಕಳಿಗೆ ಉಚಿತ ಊಟ ವಸತಿಯೊಂದಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಿಕೊಡಲಾಗುವುದು” ಎನ್ನುವ ಜಾಹೀರಾತನ್ನು ಪತ್ರಿಕೆಗಳಲ್ಲಿ ನೀಡಲಾಗುತ್ತಿತ್ತು. ಹಾಗೆ ಕೆಲಸ ಹುಡುಕಿ ಬಂದ ಮಹಿಳೆಯರನ್ನು ದೂರದೂರದ ಊರುಗಳಿಗೆ ಕೆಲಸಕ್ಕೆ ಕಳಿಸಲಾಗುತ್ತಿತ್ತು. ಅವರ ಮಕ್ಕಳನ್ನು ಆಶ್ರಮದಲ್ಲಿ ಇಟ್ಟುಕೊಳ್ಳಲಾಗುತ್ತಿತ್ತು. ಆ ಮಕ್ಕಳನ್ನು ಅನಾಥ ಮಕ್ಕಳೆಂದು ತೋರಿಸಲಾಗುತ್ತಿತ್ತು. ಹಾಗೆ ತೋರಿಸಲು ಫೋಟೋ ಆಲ್ಬಮ್ ಗಳನ್ನು ಕೂಡಾ ಉಪಯೋಗಿಸಲಾಗುತ್ತಿತ್ತು.

ಅಷ್ಟೇ ಅಲ್ಲದೆ ಆ ಮಕ್ಕಳ ಹೆಸರುಗಳನ್ನು ಕ್ರಿಶ್ಚಿಯನ್ ಹೆಸರುಗಳಿಗೆ ಬದಲಾಯಿಸಲಾಗುತ್ತಿತ್ತು. ಹೊಸದಾಗಿ ಬಂದ ಮಕ್ಕಳನ್ನು ಅದೇ ಹೆಸರಿನಿಂದ ಉಳಿದ ಮಕ್ಕಳಿಗೆ ಪರಿಚಯಿಸಲಾಗುತ್ತಿತ್ತು. ಪ್ರತೀ ಭಾನುವಾರ ಚರ್ಚ್ ಗೆ ಪ್ರಾರ್ಥನೆಗೆಂದು ಕರೆದುಕೊಂಡು ಹೋಗಲಾಗುತ್ತಿತ್ತು. ಒಂದು ವೇಳೆ ಯಾವುದಾದರೂ ಮಕ್ಕಳು ದೇವರ ಶ್ಲೋಕ ಹೇಳಿದ್ದು ಕೇಳಿದರೆ, ದೇವರ ಚಿತ್ರ ಇಟ್ಟುಕೊಂಡಿದ್ದು ನೋಡಿದರೆ ನಿರ್ಮಲಾ ಶಾಂತಿಯವರ ಮಗಳ ಬಳಿ ಅಥವಾ ಅಳಿಯನ ತಮ್ಮನ ಬಳಿ ದೂರು ಹೇಳಬೇಕಿತ್ತು. ನಂತರ ಅವರು ಆ ಮಗುವಿಗೆ ಚೆನ್ನಾಗಿ ಬಾರಿಸಿ ಮುಂದೆ ಹಾಗೆ ಮಾಡದಂತೆ ಬುದ್ದಿ ಕಲಿಸುತ್ತಿದ್ದರು.

ಹೀಗಿರುವಾಗ ಅದೇ ವೇಳೆಗೆ ಕ್ರಿಸ್ಮಸ್ ಸಮೀಪಿಸಿತ್ತು. ಒಂದು ಭಾನುವಾರ ಮಕ್ಕಳ ಜೊತೆಗೆ ನನ್ನನ್ನೂ ಅಲಸೂರಿನ ಚರ್ಚ್ ಗೆ ಕರೆದುಕೊಂಡು ಹೋದರು. ಅಲ್ಲಿ ಪಾಲ್ ತಂಗಯ್ಯ ಎನ್ನುವ ಚರ್ಚ್ ನ ಮುಖ್ಯಸ್ಥರು ಮೊದಲಬಾರಿಗೆ ಬಂದಿರುವವರಿಗೆಲ್ಲಾ ಕೈ ಎತ್ತಲು ತಿಳಿಸಿದರು. ಆಗ ಕೈ ಎತ್ತಿದ ಹಲವರಲ್ಲಿ ನಾನೂ ಒಬ್ಬನಾಗಿದ್ದೆ. ಉಳಿದವರು ಬಹುತೇಕ ತಮಿಳು ಮೂಲದವರಾಗಿದ್ದರು. ಆಗ ಕೈ ಎತ್ತಿದವರಿಗೆಲ್ಲಾ ಪಾಲ್ ತಂಗಯ್ಯ ಅವರೇ ಹತ್ತಿರ ಬಂದು ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸುತ್ತಿದ್ದರು. ಅವರು ನಮ್ಮ ಕೈಗೆ ಹೂ ನೀಡಿದ ಕೂಡಲೇ ಅಲ್ಲಿದ್ದ ಅಷ್ಟೂ ಜನ ಜೋರಾಗಿ ಕರತಾಡನ ಮಾಡುತ್ತಿದ್ದರು.

ನಂತರ ಮುಂದಿನ ವಾರ ಮತ್ತೆ ಚರ್ಚ್ ಗೆ ಕರೆದುಕೊಂಡು ಹೋದರು. ಎರಡೇ ವಾರದಲ್ಲಿ ಕ್ರಿಸ್ಮಸ್ ಇತ್ತು. ಎಲ್ಲರೂ ಕ್ರಿಸ್ಮಸ್ ನ ಆಚರಣೆಗೆ ಬರಬೇಕೆಂದು ಪಾಲ್ ತಂಗಯ್ಯ ಅವರು ಕೇಳಿಕೊಂಡರು. ನಂತರ ಹೊಸದಾಗಿ ಚರ್ಚ್ ಗೆ ಬರಲು ಪ್ರಾರಂಭಿಸಿದ ನನಗೂ ಸೇರಿದಂತೆ ಹಲವರಿಗೆ ಶರ್ಟ್ ಪೀಸ್ ಗಳನ್ನು ನೀಡಿದರು. ಮುಂದಿನ ವಾರ ಬರುವಾಗ ಇದೇ ಬಟ್ಟೆಯಲ್ಲಿ ಶರ್ಟ್ ಹೊಲಿಸಿಕೊಂಡು ಹಾಕಿಕೊಂಡು ಬರುವಂತೆ ಹೇಳಿದರು.

ಒಂದು ವಾರ ಕಳೆದರೂ ನಾನು ಆ ಬಟ್ಟೆಯನ್ನು ಹೊಲಿಯಲು ಕೊಟ್ಟಿರಲಿಲ್ಲ. ಅದನ್ನು ತಿಳಿದ ನಿರ್ಮಲಾ ಶಾಂತಿಯವರು ಅದೇ ಶನಿವಾರ ಮತ್ತೊಂದು ರೆಡಿಮೇಡ್ ಶರ್ಟ್ ಕೊಡಿಸಿದರು. ಅದನ್ನು ಹಾಕಿಕೊಂಡು ನಾಳೆ ಚರ್ಚ್ ಗೆ ಬರುವಂತೆ ತಿಳಿಸಿದರು. ಅದೇ ದಿನ ಆಶ್ರಮದ ಹುಡುಗನೊಬ್ಬ “ಅಣ್ಣಾ, ನಿಮಗಿನ್ನೂ ಪವಿತ್ರ ಸ್ನಾನ ಆಗಿಲ್ವಾ?” ಎಂದು ಕೇಳಿದ. ನನಗೆ ಕುತೂಹಲವಾಗಿ ಅದರ ಬಗ್ಗೆ ಮಕ್ಕಳ ಬಳಿ ಕೇಳಿದೆ.

ಆ ಮಕ್ಕಳು ಹೇಳಿದಂತೆ ಹೊಸದಾಗಿ ಚರ್ಚ್ ಗೆ ಹೋಗುವ ಜನರನ್ನು ಕೆಲವು ವಾರಗಳ ನಂತರ ಅದೇ ಚರ್ಚ್ ನಲ್ಲಿದ್ದ ಸಣ್ಣ ನೀರಿನ ತೊಟ್ಟಿಯಲ್ಲಿ ತಲೆ ಅದ್ದಿ ತೀರ್ಥ ಪ್ರೋಕ್ಷಣೆ ಮಾಡಿ “ಇಂದಿಗೆ ನಿನ್ನ ಎಲ್ಲಾ ಪಾಪಗಳೂ ಪರಿಹಾರವಾಯಿತು, ಇನ್ನು ಮುಂದೆ ನಿನ್ನ ಹಿಂದಿನ ಧರ್ಮದ ಯಾವ ಹರಕೆಗಳೂ ಬಾಕಿ ಉಳಿದಿಲ್ಲ, ಇನ್ನು ನೀನು ನಿನ್ನ ಯಾವುದೇ ದೇವರಿಗೂ ಹೆದರುವ ಅವಶ್ಯಕತೆಯಿಲ್ಲ” ಎಂದು ಹೇಳುತ್ತಾರೆ ಎನ್ನುವುದು ತಿಳಿಯಿತು. ಎರಡು ದಿನಗಳಿಂದಲೂ ಭಾನುವಾರ ಬೆಳಿಗ್ಗೆ ಎಲ್ಲಿಗೂ ಹೋಗಬೇಡ, ಚರ್ಚ್ ಗೆ ಬರುವುದನ್ನು ತಪ್ಪಿಸಬೇಡ ಎನ್ನುವುದನ್ನು ನಿರ್ಮಲಾ ಶಾಂತಿಯವರು ಪದೇ ಪದೇ ಹೇಳಿದ್ದರಿಂದಾಗಿ ನನಗೆ ನಾಳೆಯೇ ಪವಿತ್ರಸ್ನಾನ ಮಾಡಿಸುತ್ತಾರೆ ಎನ್ನುವ ಅನುಮಾನ ದಟ್ಟವಾಯಿತು.

ಬೆಳಿಗ್ಗೆ ಬೇಗನೆ ಎದ್ದು ರಾಮಮೂರ್ತಿ ನಗರ ಪೊಲೀಸ್ ಸ್ಟೇಷನ್ ಎದುರಿಗಿದ್ದ ಗಣಪತಿ ದೇವಸ್ಥಾನಕ್ಕೆ ಹೋದೆ. ಗಣಪತಿಗೆ ನಮಸ್ಕರಿಸಿ ಸ್ವಲ್ಪ ಕುಂಕುಮವನ್ನು ಕಾಗದದ ಚೂರೊಂದರಲಿ ಕಟ್ಟಿಕೊಂಡು ಜೇಬಿನಲ್ಲಿಟ್ಟುಕೊಂಡೆ. ನಂತರ ಎಲ್ಲರ ಜೊತೆ ಅಲಸೂರಿನ ಚರ್ಚ್ ಗೆ ಹೋದೆ. ಕೊನೆಗೊಮ್ಮೆ ನಾನು ನಿರೀಕ್ಷಿಸಿದಂತೆಯೇ ಹೊಸಬರನ್ನೆಲ್ಲಾ ಪ್ರತ್ಯೇಕಿಸಲಾಯಿತು. ಆ ಪ್ರಕ್ರಿಯೆಯ ಬಗ್ಗೆ ತಿಳಿದಿದ್ದ ಆಶ್ರಮದ ಹುಡುಗರು ಪವಿತ್ರ ಸ್ನಾನಕ್ಕೇ ಕರೆಯುತ್ತಿರುವುದು ಎನ್ನುವುದನ್ನು ನನಗೆ ಮನದಟ್ಟು ಮಾಡಿದರು.

ಆಗ ಆ ಹೊಸಬರುಗಳ ಜೊತೆ ಎದ್ದು ಹೋದವನೇ ಹೊರಗೆ ಹೋಗುತ್ತಿದ್ದಂತೆಯೇ ಜೇಬಿನಲ್ಲಿದ್ದ ಕುಂಕುಮವನ್ನು ತೆಗೆದು ಮೂಗಿನ ಬುಡದಿಂದ ತಲೆಯ ವರೆಗೂ ಎಳೆದುಕೊಂಡೆ. ಬನ್ನಿ ಬನ್ನಿ ಎಂದು ಹಲವಾರು ಬಾರಿ ಕರೆದ ನಂತರವೂ ನಾನು ನಿಂತಲ್ಲಿಂದ ಕದಲಲಿಲ್ಲ. ಆಗ ಬಂದ ನಿರ್ಮಲಾ ಶಾಂತಿಯವರಿಗೆ ನನ್ನನ್ನು ನೋಡಿ ಆಶ್ಚರ್ಯವಾಗಿತ್ತು. ಆದರೂ ತೋರ್ಪಡಿಸದೇ ನನ್ನನ್ನು ಅಲ್ಲಿಗೆ ಬರುವಂತೆ ಕರೆದರು. ನಾನಲ್ಲಿಗೆಲ್ಲಾ ಬರುವುದಿಲ್ಲ ಎಂದು ನಾನು ಧೃಢವಾಗಿ ಹೇಳಿದೆ. ಇವತ್ತು ನಿನ್ನನ್ನು ಕರೆದುಕೊಂಡು ಬಂದಿದ್ದೇ ಈ ಕಾರ್ಯಕ್ರಮಕ್ಕೆ. ಹಾಗಾಗಿ ನೀನು ಬರಲೇ ಬೇಕು ಎಂದರು. ನಾನು ನಿಂತಲ್ಲಿಂದ ಕದಲಲಿಲ್ಲ.

ಅಲ್ಲಿಗೆ ನನ್ನನ್ನು ಶಿಲುಬೀಕರಿಸುವ ಅವರ ಕನಸು ಭಗ್ನವಾದಂತಾಯಿತು. ಪ್ರಾರ್ಥನೆ ಮುಗಿದ ನಂತರ ಎಲ್ಲರ ಜೊತೆಯೇ ಆಶ್ರಮಕ್ಕೆ ಹೋದೆ. ಕೋಪಗೊಂಡಿದ್ದ ನಿರ್ಮಲಾ ಶಾಂತಿಯವರು ನೀನಿನ್ನು ಬೇರೆ ಕೆಲಸ ಹುಡುಕಿಕೊ ಎಂದರು. ಆದರೆ ಪ್ರತೀ ವಾರಕ್ಕೊಮ್ಮೆ ಹಣ ಕೊಡುತ್ತಿದ್ದ, ಪ್ರತೀ ತಿಂಗಳಿಗೊಮ್ಮೆ ಹಣ ಕೊಡುತ್ತಿದ್ದ ಹಲವಾರು ದಾನಿಗಳ ಸಂಪರ್ಕ ನನ್ನ ಬಳಿ ಇದ್ದುದರಿಂದಾಗಿ ಅವರ ಸಂಪರ್ಕಗಳೆಲ್ಲವನ್ನೂ ಅವರೆಲ್ಲರ ಪರಿಚಯವನ್ನೂ ನಿರ್ಮಲಾ ಶಾಂತಿಯವರ ಅಳಿಯನ ತಮ್ಮನಿಗೆ ಮಾಡಿಕೊಡುವವರೆಗೂ ಸುಮಾರು ಒಂದು ತಿಂಗಳ ಕಾಲ ನನಗೆ ಅಲ್ಲೇ ಇರಿಸಿಕೊಳ್ಳುವ ಅನಿವಾರ್ಯತೆ ಇತ್ತು. ಹಾಗಾಗಿ ಒಂದು ತಿಂಗಳ ಕಾಲ ಅಲ್ಲೇ ಇದ್ದು ನಂತರ ಮಕ್ಕಳನ್ನು ಬಿಟ್ಟು ಹೋಗಬೇಕಾಯಿತಲ್ಲಾ ಎನ್ನುವ ಭಾರವಾದ ಮನಸ್ಸಿನಿಂದ ರಾಮಸ್ವಾಮಿ ಪಾಳ್ಯದ ವಸತಿ ಸಹಿತ ಮಾರ್ಕೆಟಿಂಗ್ ಮಾನೇಜ್ಮೆಂಟ್ (ಡೋರ್ ಟು ಡೋರ್ ಮಾರ್ಕೆಟಿಂಗ್) ಕೆಲಸಕ್ಕೆ ಮತ್ತೆ ಸೇರಿಕೊಂಡೆ.

ಒಟ್ಟಿನಲ್ಲಿ ಅವತ್ತು ಎಷ್ಟೇ ಅನಿವಾರ್ಯವಿದ್ದರೂ ನಾನು ತೋರಿದ ಧೃಢ ನಿರ್ಧಾರ ಮತ್ತು ಗಣಪತಿ ದೇವಸ್ಥಾನದ ಕುಂಕುಮದಿಂದಾಗಿ ಇವತ್ತಿಗೂ ನಾನು ಪ್ರವೀಣ್ ಕುಮಾರ್ ಆಗಿಯೇ ಉಳಿದುಕೊಂಡೆ. ಒಂದು ವೇಳೆ ಅವರು ಕೊಡುವ ಶರ್ಟ್, ಪ್ಯಾಂಟ್ ಗಳಿಗೆ ಮರುಳಾಗಿ ಅಂದು ಪವಿತ್ರ ಸ್ನಾನ ಮಾಡಿಬಿಟ್ಟಿದ್ದರೆ ಇಂದು ನನ್ನ ಹೆಸರು ಏನಿರುತ್ತಿತ್ತು ಎನ್ನುವುದನ್ನು ಊಹಿಸುವ ಜವಾಬ್ಧಾರಿ ನಿಮ್ಮದು.

ವಿ.ಸೂ: ಇದೊಂದು ಸತ್ಯಘಟನೆಯಾಗಿದ್ದು ಎಲ್ಲಾ ಅನುಭವಗಳೂ ಲೇಖಕರದ್ದೇ ಆಗಿರುತ್ತವೆ. ಇಲ್ಲಿ ಯಾವುದೇ ಹೆಸರುಗಳನ್ನೂ ಬದಲಾಯಿಸಲಾಗಿಲ್ಲ.

3 ಟಿಪ್ಪಣಿಗಳು Post a comment
  1. ಇಂತಹ ಹಲವಾರು ಘಟನೆಗಳು ಇಂದಿಗು ನಡಿತಾನೆ ಇದೆ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಈ ರೀತಿ ಮತಾಂತರ ಮಾಡುತ್ತಿದ್ದಾರೆ.. ಬಡವರಿಗೆ ಸಹಾಯ ಮಾಡುತ್ತಾರೆ ಒಪ್ಪುವ ಮಾತು ಆದರೆ ಅವರ ಮೇಲೆ ಹೀರಲ್ಪಡುವ ಆಚಾರ ವಿಚಾಗಳ ತಪ್ಪು

    ಉತ್ತರ
  2. ಹಲವಾಗಲ ಶಂಭು
    ಮೇ 15 2017

    ನಾನೂ ಟ್ರೈನಿನಲ್ಲಿ ಬೆಳಗಾವಿ ಕಡೆ ಹೋಗುತ್ತಿದ್ದಾಗ ಮತಾಂತರಗೊಂಡ ಒಬ್ಬ ಕ್ರಿಶ್ಚಿಯನ್ ಪಾಪ , ಪುಣ್ಯ, ಯೇಸು ಮುಂತಾಗಿ ನನ್ನ ತಲೆ ತಿಂದ. ಸಮಾಜಸೇವೆಯ ಸೋಗು ಹಾಕಿ ಮತಾಂತರಗೊಳಿಸುವ ಬಗ್ಗೆ ಸಾಕಷ್ಟು ಅರಿವಿದ್ದ ನಾನೂ ಅವನೊಂದಿಗೆ ಮಾತಿಗಿಳಿದು ಎಲ್ಲ ಧರ್ಮಗಳಂತೆ ಕ್ರಿಶ್ಚಿಯನ್ನೂ ಹೊರತಲ್ಲ ಎಂದು ತಿಳಿಸಿದೆ. ಅವನಿಂದ ಮಾತು ಹೊರಡಲಿಲ್ಲ. ನನ್ನ ಊರು ಬಂದಾಗಿತ್ತು. ಮತ್ತೆ ಸಿಗಲಿ ಎಂದುಕೊಂಡೆ. ಸಿಗಲಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments