ಕೇಳುತ್ತಿದೆಯಾ ಗೋವಿನ ಆಕ್ರಂದನ…
– ಶಾರದ ಡೈಮಂಡ್
ಜನನದಿಂದ ಮರಣ ಪರ್ಯಂತ ಹುಲು ಮಾನವರಿಗೆ ಅಮೃತ ಸಮಾನವಾದ ಹಾಲನ್ನುಣಿಸುವವಳು ಗೋಮಾತೆ. “ಗವಾಂ ಅಂಗೇಷು ತಿಷ್ಟಂತಿ ಭುವನಾನಿ ಚತುರ್ದಶ” – ಗೋವಿನ ದೇಹದ ಕಣಕಣಗಳಲ್ಲೂ ಹದಿನಾಲ್ಕು ಲೋಕಗಳನ್ನು ವ್ಯವಸ್ಥಿತವಾಗಿ ನಡೆಸತಕ್ಕ ಮೂವತ್ಮೂರು ಕೋಟಿ ದೇವತೆಗಳು ಅನ್ಯಾನ್ಯ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಗೋವಿನಿಂದ ದೊರಕುವ ಹಾಲು, ಮೊಸರು, ಬೆಣ್ಣೆ, ತುಪ್ಪ ಮನುಷ್ಯ ಸ್ವಾಸ್ಥಮಯ ಜೀವನವನ್ನು ನಡೆಸಲು ಆಧಾರವಾಗಿದೆ. ಗೋಮೂತ್ರ, ಗೋಮಯ ಕೃಷಿಗೆ ಜೀವಾಳ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕಾಮಧೇನುವಾಗಿ ನಮ್ಮನ್ನು ಸಲಹುತ್ತಿರುವ ಗೋವಿಗೆ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ.
ಪೂಜೆ ಪುನಸ್ಕಾರಕ್ಕೊಳಪಟ್ಟ ಪರೋಪಕಾರಿ ಗೋವುಗಳು ಇಂದು ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಹಿಡಿ ಮೇವಿಲ್ಲದೇ ಪ್ರಾಣವನ್ನು ಬಿಡುವತ್ತ ಸಾಗಿದ್ದು ದುರಂತವೇ ಸರಿ. ಕಲಿಗಾಲ ಅಂದರೆ ಬಹುಶಃ ಇದೇ ಇರಬಹುದು. ಕಾಯಬೇಕಾಗಿದ್ದ ಸರಕಾರವೇ ಕಟುಕತನ ಪ್ರದರ್ಶಿಸಿದೆ. ಹುಲಿ ಸಂರಕ್ಷಣೆ ಹೆಸರಿನಲ್ಲಿ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಕಾಡಿಗೆ ಬೇಲಿಯನ್ನು ಹಾಕಿಸಿರೋ ಘನ ರಾಜ್ಯ ಸರ್ಕಾರ ಸಾವಿರಾರು ಗೋವುಗಳ ಮೇವಿಗೆ ಸಂಚಕಾರ ತಂದಿದೆ. ಆ ಗೋವುಗಳಿಗೆ ಪರ್ಯಾಯ ವ್ಯವಸ್ತೆಯ ಕುರಿತು ತಲೆಯನ್ನೇ ಕೆಡಿಸಿಕೊಂಡಿಲ್ಲ. ಮೊದಲಿನ ಹಾಗೆ ಮೇವಿಗಾಗಿ ಕಾಡಿನೊಳಗೆ ಮಚ್ಚು ತೆಗೆದುಕೊಂಡು ಹೋಗೋ ಹಾಗಿಲ್ಲ, ಟೆಂಟ್ ಹಾಕಿಕೊಂಡು ಹಗಲು ರಾತ್ರಿ ಅಲ್ಲೇ ಇರುವುದಕ್ಕೂ ಕೂಡ ಅವಕಾಶವಿಲ್ಲ. ಜಾಸ್ತಿ ಮಾತಾಡಿದರೆ ಅಧಿಕಾರಿಗಳಿಂದ ಬೈಗುಳಗಳ ಸುರಿಮಳೆ ಜೊತೆಗೆ ಇಳಿ ವಯಸ್ಸಿನ ಗೋಪಾಲಕರ ಮೇಲೆ ಕೈ ಮಾಡಿರುವಂತಹ ಉದಾಹರಣೆಗಳು ಕೂಡ ಸಾಕಷ್ಟಿವೆ. ಎಲ್ಲರಿಗೂ ತಿಳಿದಿರುವ ಹಾಗೆ ಈ ವರ್ಷ ಮಳೆ ಕಡಿಮೆ. ಭೀಕರ ಬರಗಾಲಕ್ಕೆ ಈ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಮಳೆಯಿಲ್ಲದ ಕಾರಣ ಹಸುಗಳಿಗೆ ಕಾಡಿನಲ್ಲಿ ಮೇವು ಸಿಗ್ತಾ ಇಲ್ಲ. ದುಡ್ಡು ಕೊಟ್ಟು ಮೇವನ್ನು ತರಿಸಿ ಹಾಕುವುದಕ್ಕೆ ಒಬ್ಬ ಗೋಪಾಲಕನ ಹತ್ತಿರವಿರುವುದು ಒಂದೆರಡು ಹಸುಗಳಲ್ಲ.. ನೂರಾರು ಹಸುಗಳು..! ಈ ನೂರಾರು ಹಸುಗಳಿಗೆ ಮೇವು ಹಾಕಿಸುವಷ್ಟು ಆರ್ಥಿಕ ಪರಿಸ್ಥಿತಿ ಅವರಿಗಿಲ್ಲ. ಇದು ಒಂದು ಸಂಸಾರದ ಕಥೆಯಲ್ಲ.. ಇಂತಹ ಸಾವಿರಾರು ಗೋಪಾಲಕರ ಕುಟುಂಬಗಳ ಕಣ್ಣೀರಿನ ಕಥೆ ಇದು !!
ಈ ಬೆಟ್ಟದ ತಪ್ಪಲಿನಲ್ಲಿರುವ ಸಾವಿರಾರು ಗೋಪಾಲಕರ ಜೀವನಾಧಾರವೇ ದೇಸಿ ಹಸುಗಳ ಸಾಕಣೆ. ಸ್ವಂತ ಜಾಮೀನು ಆಸ್ತಿ ಪಾಸ್ತಿ ಇಲ್ಲದ ಈ ಕುಟುಂಬಗಳು ತಮ್ಮ ಹಸುಗಳನ್ನು ಕಾಡಿಗೆ ಹೊಡೆದು ಕೊಂಡು ಹೋಗಿ, ಹಗಲು ರಾತ್ರಿ ಅಲ್ಲೇ ಇದ್ದು ಹಸುಗಳನ್ನು ಮೇಯಿಸಿಕೊಂಡು ಬರುವುದು ಅವರ ದಿನಚರಿ. ಹಾಲು, ಮೊಸರು ಮಾರಿಕೊಂಡು ಆರಕ್ಕೇರದ ಮೂರಕ್ಕಿಳಿಯದ ನೆಮ್ಮದಿಯ ಬದುಕು ಅವರದ್ದಾಗಿತ್ತು. ಇಂತಹ ಸಾವಿರಾರು ಗೋಪಾಲಕರ ಕುಟುಂಬ ಇವತ್ತು ಬೀದಿಗೆ ಬಂದಿದೆ. ಮನೆ ಮಕ್ಕಳ ತರಹ ಸಾಕಿದ ಗೋವುಗಳಿಗೆ ಮೇವನ್ನು ಒದಗಿಸಲು ಸಾಧ್ಯವಾಗದೇ ತಮ್ಮ ಕಣ್ಣು ಮುಂದೆಯೇ ಆ ಹಸುಗಳು ಪ್ರಾಣ ತ್ಯಜಿಸುತ್ತಿರುವುದನ್ನು ನೋಡಿ ಅಸಹಾಯಕರಾಗಿ ಕಣ್ಣೀರು ಹಾಕ್ತಾ ಇರೋ ಅವರ ಕರುಣಾಜನಕ ಕಥೆ ಎಂತ ಕಟುಕ ಹೃದಯದವರ ಕಣ್ಣಂಚನ್ನೂ ಒದ್ದೆ ಮಾಡಿಸುತ್ತದೆ.
ಮಾತು ಬರುವ ಮನುಷ್ಯ ಕಷ್ಟ ಹೇಳಿಕೊಂಡಾಗಲೇ ಕಿವಿ ಕೊಡುವ ಮನಸ್ಥಿತಿ ಇಲ್ಲದ ಜನರ ಮಧ್ಯೆ ಮೂಕ ಪ್ರಾಣಿಗಳ ದಯನೀಯ ಸ್ಥಿತಿಗೆ ದನಿಯಾಗಿರುವವರು ಶ್ರೀ ಸಂಸ್ಥಾನದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು. ದೇಶದ ಹಿತದೃಷ್ಟಿಯಿಂದ 1965ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ವಾರಕ್ಕೊಂದು ದಿನ ಉಪವಾಸವಿರುವಂತೆ ದೇಶದ ಜನತೆಗೆ ಕರೆ ಕೊಟ್ಟ ಹಾಗೆ ಶ್ರೀಗಳು ಹಸಿದ ಗೋವುಗಳ ಮೇವಿಗಾಗಿ ಕೇವಲ ಮೂರು ತಿಂಗಳು ಪ್ರತೀ ಸೋಮವಾರ ರಾತ್ರಿ ಉಪವಾಸ ಮಾಡುವಂತೆ ಭಿನ್ನವಿಸಿದ್ದಾರೆ. ಜೊತೆಗೆ ಈ ಸಂಕಷ್ಟ ಮಾರ್ಗದಿಂದ ತಪ್ಪಿಸಿಕೊಳ್ಳಲು ಶ್ರೀಮಠದ ನೇತೃತ್ವದಲ್ಲಿ ನಡೆಯುತ್ತಿರುವ #ಗೋಪ್ರಾಣಭಿಕ್ಷಾ ಯೋಜನೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದನ್ನೇ ಮಾಡುತ್ತಿದೆ. ಶ್ರೀಮಠ ಈ ಕಾರ್ಯದಿಂದ ಮೇವಿಲ್ಲದೇ ಕಂಗೆಟ್ಟಿದ್ದ ಸಾವಿರಾರು ಹಸಿದ ಗೋವುಗಳನ್ನು ಜೀವಂತವಾಗಿಡುವಲ್ಲಿ ಯಶಸ್ವಿಯಾಗಿದೆ.
ಗೋಪಾಲಕರ ಕಣ್ಣೀರಿನ ಕಥೆಯನ್ನು ಕೇಳೋಣವೆಂದು ಬೆಂಗಳೂರಿನಿಂದ ಹೊರಟ ನಮ್ಮ ಸ್ವಯಂಸೇವಕರ ತಂಡ ರಾತ್ರಿ ಉಳಿದುಕೊಂಡಿದ್ದು ಮಲೆಮಹದೇಶ್ವರ ಬೆಟ್ಟದಿಂದ 45ಕಿಮೀ ದೂರದಲ್ಲಿರುವ ರಾಮಾಪುರ ಎಂಬ ಹಳ್ಳಿಯಲ್ಲಿ. #ಗೋಪ್ರಾಣಭಿಕ್ಷಾ ಪುಣ್ಯಕಾರ್ಯದ ಸ್ವಯಂ ಸೇವಕರಿಗಾಗಿ ಊರಿನ ಶ್ರೀಮಂತನೊಬ್ಬ ತನ್ನ ಮನೆಯನ್ನು ಬಿಟ್ಟುಕೊಟ್ಟಿದ್ದನ್ನು ಕೇಳಿ “ಸತ್ಕಾರ್ಯಕ್ಕೆ ಸೋಲಿಲ್ಲ, ಕಲಿಗಾಲದಲ್ಲೂ ಇಂತಹ ಪುಣ್ಯಾತ್ಮರು ಇದ್ದಾರಲ್ಲ” ಅಂತ ಅನಿಸಿದ್ದು ಸುಳ್ಳಲ್ಲ. 24*7 ಯಾವ ಸಮಯದಲ್ಲಿ ಹೋದರೂ ಪ್ರೀತಿಯಿಂದ ಮಾತನಾಡಿಸಿ, ಊಟ ತಿಂಡಿ ವ್ಯವಸ್ಥೆ ಮಾಡುವ ಒಂದು ಸ್ವಯಂ ಸೇವಕರ ತಂಡ ಈ ಮನೆಯಲ್ಲಿದೆ.
ತಮ್ಮ ಸ್ವಂತ ಕೆಲಸ ಕಾರ್ಯಕಗಳನ್ನೆಲ್ಲ ಬದಿಗಿಟ್ಟು, #ಗೋಪ್ರಾಣಭಿಕ್ಷಾ ಯೋಜನೆಗಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ಯಾಮ ಭಟ್ಟರ ಜೊತೆಗೆ ಬೆಳಿಗ್ಗೆ 7:00ಕ್ಕೆ ರಾಮಾಪುರದಿಂದ ಹೊರಟೆವು. ಪ್ರತಿದಿನ ಒಂದು ಲಾರಿ ಲೋಡ್ ಮೇವನ್ನು ಪ್ರತಿಯೊಂದು ಪಾಯಿಂಟ್ ಗೂ ಕಳಿಸಲಾಗುತ್ತದೆ. ಒಟ್ಟು 15 ಪಾಯಿಂಟ್ ಗಳು. ಪ್ರತಿಯೊಂದು ಪಾಯಿಂಟ್ ನಲ್ಲೂ 1,500 – 3,500 ತನಕ ಹಸುಗಳಿವೆ. ಬೆಳಗ್ಗೆ 8.00 ರಿಂದ 8.30 ಸುಮಾರಿಗೆ ಬಂದಿರುವ ಮೇವನ್ನು ಗೋಪಾಲಕರು ದೊಡ್ಡ ಬಯಲಿನ ತುಂಬಾ ಹರಡಿದ ನಂತರ ಹಸುಗಳನ್ನು ಮೇಯಲು ಬಿಡುತ್ತಾರೆ. ಸಾವಿರಾರು ಹಸುಗಳು ಹಿಡಿ ಮೇವಿಗಾಗಿ ಕಾದಿದ್ದು ಮೇವು ತಿನ್ನುವ ಈ ದೃಶ್ಯ ನೋಡಬೇಕಾದರೆ ಬೆಳಗ್ಗೆ ಬೇಗ ಹೋಗಬೇಕು.
ಅಂದುಕೊಂಡ ಹಾಗೆ ನಾವು ಹೋದ ಮೊದಲನೇ ಪಾಯಿಂಟ್ “ಯರಂಬಾಡಿ”. ಮೈದಾನದ ಸುತ್ತಮುತ್ತ ನಾಲ್ಕೈದು ಕಡೆ ಹಸುಗಳನ್ನು ಗುಂಪು ಮಾಡಿ ನಿಲ್ಲಿಸಿ ಆಗ ತಾನೇ ಬಂದಿದ್ದ ಮೇವನ್ನು ಹರಡುತ್ತಾ ಇದ್ದರು. ಇಷ್ಟೊಂದು ಹಸುಗಳಿವೆ ಇಷ್ಟು ಹುಲ್ಲು ಸಾಕಾಗುತ್ತಾ ಅಂತ ನಾನು ಕೇಳಿದ ಪ್ರಶ್ನೆಗೆ ಅಲ್ಲಿದ್ದ ಒಬ್ಬರು ತಾತ “ಸದ್ಯದ ಮಟ್ಟಿಗೆ ಜೀವದಿಂದ ಇಡೋದಕ್ಕಷ್ಟೇ ಕಣವ್ವಾ ಇದು. ಸ್ವಾಮೀಜಿ ಇರಲಿಲ್ಲ ಅಂದಿದ್ದರೆ ಇಷ್ಟೊತ್ತಿಗೆ ಇಲ್ಲಿರುವ ಅದೆಷ್ಟೋ ಹಸುಗಳು ಸತ್ತೋಯ್ತಾ ಇದ್ವು.. ದೇವರ ಹಾಗೆ ಬಂದ್ರು ಕಣವ್ವ” ಅಂತ ಉತ್ತರ ಕೊಟ್ಟ ತಾತನ ಕಣ್ಣಂಚು ಒದ್ದೆಯಾಗಿದ್ದನ್ನು ಗಮನಿಸಿದೆ. ಮೇವು ಹರಡುವುದಕ್ಕೆ ಶುರು ಮಾಡ್ತಾ ಇದ್ದ ಹಾಗೆ ಅಲ್ಲಿದ್ದ ಹಸುಗಳು ಅಂಬಾ ಅಂತ ಕೂಗ್ತಾ, ದೃಷ್ಟಿ ಎಲ್ಲಾ ಮೇವಿನ ಮೇಲೆ ಇಟ್ಟು ಓಡಿ ಹೋಗೋಕೆ ಹರ ಸಾಹಸ ಮಾಡ್ತಾ ಇದ್ದ ದೃಶ್ಯ ಈಗಲೂ ಮನ ಕಲಕುತ್ತದೆ. ಮೈದಾನದ ತುಂಬಾ ಮೇವು ಹರಡಿದ ನಂತರ ಹಸುಗಳನ್ನು ಅಲ್ಲಿ ಬಿಟ್ಟರು. ಅಬ್ಬಾ ಆ ಹಸುಗಳ ಜೀವ ಬಂತೇನೋ ಅನ್ನೋ ಹಾಗೆ ಆ ಮೇವು ತಿನ್ನೋ ರೀತಿ ಹಸಿವು ಅಂದರೆ ಏನು ಅನ್ನವುದನ್ನು ತೋರಿಸುತ್ತೆ. “ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ಹಾಗೆ ಅರ್ಧ ಗಂಟೆಯಲ್ಲಿ ಎಲ್ಲಾ ಮೇವು ಮುಗಿದು ಹೋಗಿತ್ತು.. ಮೈದಾನ ಖಾಲಿಯಾಗಿತ್ತು..
ನಂತರ ಮೀಣ್ಯಂ ಮತ್ತು ನಕ್ಕುಂದಿ ಎಂಬ ಇನ್ನೆರಡು ಪಾಯಿಂಟ್ ಗೂ ಭೇಟಿ ಕೊಟ್ಟೆವು. ಅಲ್ಲಿನ ದೃಶ್ಯವೂ ಕೂಡ ಮೊದಲನೇ ಪಾಯಿಂಟ್ ಹಸುಗಳಿಗಿಂತ ಭಿನ್ನವಾಗಿರಲಿಲ್ಲ. ಇಲ್ಲೂ ಒಬ್ಬ ತಾತನನ್ನು ಯಾಕೆ ನೀವು ಸಿದ್ದರಾಮಯ್ಯನವರ ಹತ್ತಿರ ನಿಮ್ಮ ಕಷ್ಟ ಹೇಳಿಕೊಳ್ಳಬಾರದು ಅಂತ ಕೇಳಿದೆ. “ಅವನು ಅರ್ಥ ಮಾಡಿಕೊಳ್ಳಬೇಕಿತ್ತವ್ವ, ಅವ ಮನುಷ್ಯ ಅಲ್ಲ ಎಲ್ಲದನ್ನೂ ಮಾರಿಬಿಡಿ ಅಂದಿದ್ದಾನೆ. ಅದಾಗಕ್ಕಿಲ್ಲವ್ವ” ಎಂದು ಮುಖ ಸಪ್ಪೆ ಮಾಡಿಕೊಂಡರು. ಒಂದು ಹಸುವಿನ ಮೈಯಿಂದ ಅಲ್ಲಲ್ಲಿ ರಕ್ತ ಬರ್ತಾ ಇದ್ದದ್ದನ್ನ ಗಮನಿಸಿ ಅಲ್ಲಿದ್ದವರನ್ನ ವಿಚಾರಿಸಿದಾಗ ತಿಳೀತು ಅದು ನಿಶ್ಯಕ್ತಿಯಿಂದ ನಿನ್ನೆ ಬಿದ್ದು ಬಿಟ್ಟಿತ್ತು.. ಅದಕ್ಕೆ ಡಾಕ್ಟರ್ ಆಯಂಟ್ಮೆಂಟ್ ಹಚ್ಚಿ ಇಂಜೆಕ್ಶನ್ ಮಾಡಿದ್ದಾರೆ ಎಂದು. ಮೇವಿನ ಜೊತೆ ಜೊತೆಗೆ ಅದೆಷ್ಟೋ ಹಸುಗಳಿಗೆ ಗುರುಗಳ ಆಶ್ರಯದಲ್ಲಿ ಆರೈಕೆಯೂ ಕೂಡ ಆಗ್ತಾ ಇದೆ.
ಯಶಸ್ವೀ 38ನೇ ದಿನ, ಇದುವರೆವಿಗೂ 2300 ಟನ್ ಮೇವನ್ನು ಹಸುಗಳಿಗೆ ಒದಗಿಸಲಾಗಿದೆ. ಇನ್ನೊಂದೆರಡು ತಿಂಗಳ ಮಟ್ಟಿಗೆ ಈ ಹಸುಗಳಿಗೆ ಮೇವಿನ ವ್ಯವಸ್ಥೆಯಾದರೆ ಅವುಗಳನ್ನು ಜೀವಾಂತವಾಗಿಡುವಲ್ಲಿ ನಮ್ಮದೂ ಒಂದು ಅಲ್ಪ ಕಾರ್ಯವಾಗುತ್ತದೆ. ಜಾತಿ, ಧರ್ಮ, ಅಂತಸ್ತು, ಎಲ್ಲವನ್ನು ಮರೆತು ಅನೇಕ ಮನಸ್ಸುಗಳು ಗೋವುಗಳನ್ನು ಉಳಿಸಿಕೊಳ್ಳಲೇಬೇಕು, ಗೋಪಾಲಕರ ಸಂಸಾರ ಬೀದಿಗೆ ಬರಬಾರದೆಂಬ ಉದ್ದೇಶದಿಂದ ಗುರುಗಳ ಈ ಪುಣ್ಯ ಕಾರ್ಯದಲ್ಲಿ ಜೊತೆಯಾಗಿದ್ದಾರೆ. ರೈತರ ಪರ ಎಂದು ಹೋಗಿ ಬಂದಲೆಲ್ಲಾ ಬಡಬಡಿಸೋ ಸರಕಾರ ಇಂತಹ ಭಯಾನಕ ಸ್ಥಿತಿಯ ಕಡೆ ಕಣ್ಣು ಬಿಡುವ ಮನಸ್ಸೂ ಮಾಡುತ್ತಿಲ್ಲ. ಸಾಲದ್ದಕ್ಕೆ “ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಗುಂಪು, ವ್ಯಕ್ತಿಗಳಿಗೆ ಕರ್ನಾಟಕ ಗೋವಧೆ ತಡೆ ಕಾಯಿದೆ -1964ರ ಅಡಿ ರಕ್ಷಣೆ ದೊರೆಯುವುದಿಲ್ಲ” ಎಂದು ಟ್ವೀಟಿಸಿ ಪ್ರಶ್ನೆ ಮಾಡಿದವರನ್ನು ಬೆದರಿಸಿದ್ದಾರೆ. ನಾಗರೀಕ ಸಮಾಜ ಇನ್ನಾದರೂ ಎಚ್ಚೆತ್ತುಕೊಳ್ಳಲಿಲ್ಲವೆಂದರೆ ರಾಜ್ಯದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡ ಹಾಗೆ ಈ ಗೋಪಾಲಕರ ಆತ್ಮಹತ್ಯೆ ಮತ್ತು ಸಾವಿರಾರು ಗೋವುಗಳ ಸಾವಿಗೆ ನಾವು ಸಾಕ್ಷಿಯಾಗಬೇಕಾಗುತ್ತದೆ.
#GiveUpAMeal ಯೋಜನೆಯ ಹಾಗೆ ಪ್ರತೀ ಸೋಮವಾರ ರಾತ್ರಿ ಊಟ ಬಿಟ್ಟು ಈ ಗೋವುಗಳ ಮೇವಿಗೆ ನಮ್ಮ ಕೈಲಾದಷ್ಟು ದುಡ್ಡನ್ನು ಕೊಡೋ ಪ್ರಯತ್ನ ಮಾಡೋಣ. ಮನುಷ್ಯರಾಗಿ ಮಾನವೀಯತೆಯನ್ನು ಮೆರೆಯೋಣ. ಹಸುಗಳಿಗೆ ಹುಲ್ಲು ಮತ್ತು ಧಾನ್ಯಗಳನ್ನು ತಿನ್ನಿಸಿದರೆ ಸಾಕ್ಷಾತ್ ಭಗವಂತನನ್ನೇ ಪೂಜೆ ಮಾಡಿದ ಹಾಗೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. “ಜೈ ಗೋ ಮಾತಾ” ಎಂದು ಘೋಷಣೆ ಕೂಗುವುದರಲ್ಲೇ ನಿಲ್ಲದೇ, ಗೋವು ಮತ್ತೊಂದು ಪಕ್ಷದ ಆಸ್ತಿ ಎಂಬಂತೆ ರಾಜಕೀಯ ಮಾಡದೇ ತುರ್ತಾಗಿ ಈ ಗೋವುಗಳ ಪ್ರಾಣ ಉಳಿಸುವಲ್ಲಿ ನಾವೆಲ್ಲರೂ ಜೊತೆಯಾಗೋಣ..