ವಿಷಯದ ವಿವರಗಳಿಗೆ ದಾಟಿರಿ

ಮೇ 17, 2017

ಬರಗಾಲದಲ್ಲಿ ವರವಾದ ಶ್ರೀಸಂಕಲ್ಪ

‍ನಿಲುಮೆ ಮೂಲಕ

– ಶಿಶಿರ್ ಅಂಗಡಿ

ಈ ಬಾರಿಯ ಭೀಕರ ಬರಗಾಲ ಮತ್ತು ಸರಕಾರದ ಅನರ್ಥದ ಕಾನೂನುಗಳು ಬೆಟ್ಟದ ತಪ್ಪಲಿನ ಸಾವಿರಾರು ಗೋವುಗಳನ್ನು ಹಾಗೂ ನೂರಾರು ಗೋಪಾಲಕರನ್ನು ಹಸಿವಿನಿಂದ ನರಳುವಂತೆ ಮಾಡಿ ಅಕ್ಷರಶಃ ಕಂಗೆಡಿಸಿದೆ.. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಲ್ಲಿನ ಗೋವುಗಳಿಗೆ ಮೇವೊದಗಿಸುವ ಮೂಲಕ ಆಪದ್ಬಾಂಧವರಂತೆ ಗೋವು‌ ಮತ್ತು ಗೋವಳರ ಕಷ್ಟಕ್ಕೊದಗಿ ಬಂದವರು  ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು. ಈ 44 ದಿನಗಳಿಂದೀಚೆಗೆ ಸತತವಾಗಿ ಬೆಟ್ಟಕ್ಕೆ ಮಠ ಪೂರೈಸಿದ ಮೇವಿನ ಒಟ್ಟು ಮೊತ್ತ ೨೧೦೦ ಟನ್ ದಾಟಿದೆ. ೨ ಲಕ್ಷ ಕೇಜಿ ಮೇವುಗಳನ್ನು ದಿನವೊಂದಕ್ಕೆ ೨.೫ ಲಕ್ಷ ರೂಪಾಯಿ ವೆಚ್ಚದಲ್ಲಿ ಹದಿಮೂರು ಕೇಂದ್ರಗಳಲ್ಲಿ ಪ್ರತಿದಿನ ಸುಮಾರು ೨೦-೨೫ ಸಾವಿರ ಗೋವುಗಳಿಗೆ ಮೇವು ಒದಗಿಸಲಾಗುತ್ತಿದೆ. ದಶಕಗಳಿಂದ ಗೋರಕ್ಷಣೆಗೆ ಕಟಿಬದ್ಧರಾಗಿರುವ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು, ಸಾವಿನ ಅಂಚಿನಲ್ಲಿರುವ ಗೋವುಗಳನ್ನು ರಕ್ಷಿಸುವ ಮಹದುದ್ದೇಶದಿಂದ ಬೆಟ್ಟದ ತಪ್ಪಲಿನ ಎಲ್ಲ ಗೋವುಗಳಿಗೂ ಮಳೆಗಾಲ ಪ್ರಾರಂಭದವರೆಗೂ ಮೇವು ಒದಗಿಸುವ ಭರವಸೆ ನೀಡಿದ್ದರು.

ಈ ನಿಟ್ಟಿನಲ್ಲಿ ದೇಶದ ಜನತೆಗೆ ಕರೆ‌ ನೀಡಿದ್ದ‌ ಶ್ರೀಗಳು ನಮ್ಮ ಜೀವನದಲ್ಲಿ ಕೆಲ ಅಂಶಗಳನ್ನು ತ್ಯಾಗಮಾಡುವ ಮೂಲಕ ಅತ್ಯಮೂಲ್ಯ ಗೋಸಂತತಿಯನ್ನು ಉಳಿಸೋಣ, ಸರಳ ಜೀವನ ~ ಸರಳ ಭೋಜನ ಜೀವನ ಪದ್ಧತಿ ಅನುಸರಿಸೋಣ‌ ಎಂದರು. ಗೋಕಿಂಕರಿಗೆ ವಾರದಲ್ಲಿ ಒಂದು ಹೊತ್ತು ಉಪವಾಸ ಮಾಡಿ ಉಳಿಸಿದ ಹಣವನ್ನು ಗೋವಿನ ಮೇವಿಗಾಗಿ ಕೊಡೋಣ ಎಂದು ಸೂಚಿಸಿದ್ದರು‌. ಅಷ್ಟೇ ಅಲ್ಲದೇ, ಭಿಕ್ಷೆ ಬೇಡಿಯಾದರೂ ಸರಿ, ಗೋವಿನ ಪ್ರಾಣ ಉಳಿಸಬೇಕೆಂದು ಪಣತೊಟ್ಟರು ಶ್ರೀಗಳು. ಆಗ ಶುರುವಾದದ್ದೇ‌ #ಗೋಪ್ರಾಣಭಿಕ್ಷೆ . ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಬೀದಿ ಬೀದಿಗಳಲ್ಲಿ ಗೋಪ್ರಾಣಭಿಕ್ಷೆಯ ಬ್ಯಾನರ್ ಹಿಡಿದು ಪ್ರತಿ ಅಂಗಡಿಗಳಿಗೆ ತೆರಳಿ ಗೋವುಗಳ ದಯನೀಯ ಸ್ಥಿತಿಯ ಕುರಿತು, ಗೋವುಗಳನ್ನುಳಿಸುವ ರಾಮಚಂದ್ರಾಪುರ ಮಠದ ಯೋಜನೆಯ ಕುರಿತು ಮಾಲೀಕರ ಸಮಯದೊತ್ತಡದಲ್ಲಿಯೇ ವಿವರಿಸಿ, ಸಹಾಯ ಕೇಳುವ ಪ್ರಕ್ರಿಯೆಯೇ ಗೋಪ್ರಾಣಭಿಕ್ಷೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರು, ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಸೇರಿದಂತೆ ಹೆಸರಾಂತ ಕಲಾವಿದರು, ಸಾಮಾಜಿಕ ಧುರೀಣರೆಲ್ಲ ಭಾಗವಹಿಸಿ ಗೋವಿನ ಮೇವಿಗಾಗಿ ಭಿಕ್ಷೇ ಬೇಡಿದ್ದು ವಿಶೇಷ.

ಸಾವಿರಾರು ಗೋಭಕ್ತರು ಗುರು ಕೊಟ್ಟ ಕರೆಗೆ ಓಗೊಟ್ಟು ಒಂದು ಹೊತ್ತಿನ ಉಪವಾಸ ಪ್ರಾರಂಭಿಸಿದರು. ಕೆಲವರು ವಾರಕ್ಕೊಮ್ಮೆ (ಪ್ರತಿ ಸೋಮವಾರ) ಮಾಡಿದರೆ, ಕೆಲವರು ಪ್ರತಿದಿನ ಉಪವಾಸ ಮಾಡಲಾರಂಭಿಸಿದರು. ಸರಳ ಜೀವನದ ಅಡಿಯಲ್ಲಿ ಕೌಟುಂಬಿಕ ಕಾರ್ಯಕ್ರಮಗಳು ಸರಳವಾಗತೊಡಗಿದವು, ಭೂರಿ ಭೋಜನಗಳಿಗೆ ಕಡಿವಾಣ ಬಿತ್ತು. ಸಮಾರಂಭಗಳಲ್ಲಿ ಸಿಹಿ ಮಾಡುವುದನ್ನು ನಿಲ್ಲಿಸಲಾಯಿತು. ಅಬಾಲ ವೃದ್ಧರ ಆದಿಯಾಗಿ ಹಲವಾರು ಗೋಭಕ್ತರು ತಮ್ಮ ಮೈಮೇಲಿನ ಆಭರಣಗಳನ್ನು ದಾನ ಮಾಡಿದರು. ಹೀಗೆ ಅಸಂಖ್ಯ ಜನ ಹಲವಾರು ವಿಧಗಳಲ್ಲಿ ದುಡ್ಡು ಕೂಡಿಡಲು ಪ್ರಾರಂಭಿಸಿದರು. ಒಂದು ಶುಭ ದಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗೆ ಮೇವು ಪೂರೈಕೆ ಪ್ರಾರಂಭವಾಯಿತು. ಶುರುವಾಗಿದ್ದು ಒಂದು ಕೇಂದ್ರ ಮತ್ತು ಒಂದು ಟ್ರಕ್ ಲೋಡ್ ಮೇವಿನೊಂದಿಗೆ. ದಿನಗಳು ಕಳೆದಂತೆ ಮೇವಿನ ಬೇಡಿಕೆ ಬೃಹತ್ ಮಟ್ಟದಲ್ಲಿ ಏರತೊಡಗಿತು. ಆಗ ನಮಗೆ ಹೊಳೆದಿದ್ದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಏಕೆ ಗೋಪ್ರಾಣಭಿಕ್ಷೆ ಆಂದೋಲನದ ಕುರಿತು ಜಾಗೃತಿ ಮೂಡಿಸಿ, ತನ್ಮೂಲಕ ಅತಿ ಹೆಚ್ಚು ಜನರನ್ನು ತಲುಪಿ, ಅವರೂ ಪಾಲ್ಗೊಳ್ಳುವಂತಾಗಬಾರದು ಎಂದು. ಇದರ ಫಲವೇ #GiveUpAMeal campaign. ಅದುವರೆಗೂ #ಗೋಪ್ರಾಣಭಿಕ್ಷೆ ಕುರಿತು ಟ್ವೀಟರಿನಲ್ಲಿ ಮಾಹಿತಿ ವಿನಿಮಯಗಳು ನಡೆಯುತ್ತಿದ್ದವಾದರೂ, ಅದಕ್ಕೊಂದು ವ್ಯವಸ್ಥಿತ ರೂಪ‌ ಇರಲಿಲ್ಲ.‌ ಗುರುಗಳ ಗೋರಕ್ಷಣಾ ಕಾರ್ಯಗಳನ್ನು ಹಿಂದಿನಿಂದಲೂ ಬೆಂಬಲಿಸುತ್ತಿದ್ದವರೂ ನಮ್ಮ ಈ ಅಭಿಯಾನಕ್ಕೆ ಕೈಜೋಡಿಸಿದಾಗ ನಮ್ಮ ಆಂದೋಲನಕ್ಕೆ ಸಾಕಷ್ಟು ಬಲ ಬಂದಿತ್ತು.

ಪ್ರತಿ ಸೋಮವಾರ ನಾವುಗಳು ಮಾಡುತ್ತಿದ್ದ ಉಪವಾಸವನ್ನೇ ಕೇಂದ್ರೀಕರಿಸಿ #GiveUpAMeal ಎಂಬ ಹ್ಯಾಷಟ್ಯಾಗ್ ಇಟ್ಟುಕೊಂಡು ಆಂದೋಲನದ ಕುರಿತು ಟ್ವೀಟಿಸಲು ಪ್ರಾರಂಭಿಸಲಾಗಿ, ಅದು ಟ್ವಿಟರ್ ವಲಯದಲ್ಲಿ ಅದ್ಬುತ ಸಂಚಲನವನ್ನೇ ಉಂಟುಮಾಡಿತು. ಟ್ವಿಟರ್ ದಿಗ್ಗಜರನ್ನು ಸಂಪರ್ಕಿಸಿ ಅವರ ಖಾತೆಯ ಹೆಸರಿನಲ್ಲಿ ಇದೆ ಹ್ಯಾಷಟ್ಯಾಗನ್ನು ಜೋಡಿಸಿಕೊಳ್ಳಲು ಕೋರಲಾಯಿತು. ಅನೇಕಾನೇಕ ಟ್ವಿಟ್ಟರ್ ಪರಿಣಿತರು, ಟ್ವಿಲೋಕದ ದಿಗ್ಗಜರೆಲ್ಲ ನಮ್ಮ ಕರೆಗೆ ಸ್ಪಂದಿಸಿ, ತಮ್ಮ ಖಾತೆಯ ಹೆಸರನ್ನು ಬದಲಿಸಿಕೊಂಡರು. ಒಂದು ಸೋಮವಾರ ಟ್ವಿಟರಿನಲ್ಲಿ ಟ್ರೆಂಡ್ ಮಾಡಲಾಗಿ, ರಾಷ್ಟ್ರೀಯ ಮಟ್ಟದಲ್ಲಿ ಐದರ ಒಳಗಿನ ಸ್ಥಾನ ಪಡೆದಿತ್ತು ನಮ್ಮ #GiveUpAMeal ! ಅದೇ ರೀತಿ ಇನ್ನೊಂದು ವಾರ ನಮ್ಮ ಅಭಿಯಾನವನ್ನು ಒಂದು ಮಿಲಿಯನ್ ಜನರಿಗೆ ತಲುಪಿಸುವ ಉದ್ದೇಶದಿಂದ ಸಾಂಘಿಕ ಪ್ರಯತ್ನ ನಡೆಸಲಾಯಿತು. ಆ ದಿನ ನಾವು ತಲುಪಿದ್ದು ಒಂದು‌ ಮಿಲಿಯನ್ ಒಂದು ಲಕ್ಷ ಜನ. ದೇಶ ವಿದೇಶಗಳ ಗೋಭಕ್ತರು ಈ ಬೃಹತ್ ಆಂದೋಲನದಲ್ಲಿ ‌ಕೈಜೋಡಿಸಿದರು. ತಾವು ಪ್ರತ್ಯಕ್ಷವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲದಿದ್ದರೂ, ಗೋವುಗಳಿಗೆ ಕೊಡುವ ಮೇವನ್ನು ಖರೀದಿಸಲು ಸಾವಿರಾರು ಜನ ಧನ ಸಹಾಯ ಮಾಡಿದ್ದಾರೆ.‌

ಅಷ್ಟೇ ಅಲ್ಲದೇ ಸೆಲೆಬ್ರಿಟಿಗಳಾದ ಚಿತ್ರನಟ ಯಶ್, ನಟಿ ರಾಧಿಕಾ, ಹಿರಿಯ ನಟ ಡಾ|ಶಿವರಾಜ್ ಕುಮಾರ್ ಇಂಥವರೆಲ್ಲ ಈ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ.‌‌ ಅಷ್ಟೇ ಅಲ್ಲದೇ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಬಿ‌.ಎಸ್.ಯಡಿಯೂರಪ್ಪನವರು #GiveUpAMeal ತಂಡವನ್ನು ಅವರೇ ಆಹ್ವಾನಿಸಿ, ಅಭಿಯಾನದ ಕುರಿತು ಸಂಪೂರ್ಣ ವಿವರಗಳನ್ನು ಪಡೆದು, ಇದಕ್ಕೆ ಬೆಂಬಲ ನೀಡುವುದು ತಮ್ಮ ಕರ್ತವ್ಯ ಎಂದಿರುವುದಷ್ಟೇ ಅಲ್ಲದೇ, ತಮ್ಮ ಶಿಕ್ಷಣ ಸಂಸ್ಥೆಯಿಂದ ಹತ್ತು ಲಕ್ಷ ರೂಪಾಯಿಗಳ ಸಹಾಯವನ್ನೂ ಘೋಷಿಸಿದ್ದಾರೆ. ಇನ್ನು ಹಿರಿಯ ನಟ ಜಗ್ಗೇಶ್ ಅವರು, ನಾಡಿನ ಜನತೆಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ‌.
ಸಮಾಜ‌ ಹಾಗೂ ಸಾಮಾಜಿಕ ಜಾಲತಾಣಿಗರ ಸಹಕಾರದಿಂದ ಬೃಹತ್ತಾದ ಈ #ಗೋಪ್ರಾಣಭಿಕ್ಷೆ ಅಭಿಯಾನ ಇಷ್ಟರ‌ ಮಟ್ಟಿಗೆ ಯಶ ಕಂಡಿದೆ.‌

ಹಿನ್ನೆಲೆ:
ಅನಾದಿ ಕಾಲದಿಂದಲೂ ಕೇವಲ‌‌ ಗೋಸಾಕಾಣಿಕೆ ಮಾತ್ರವೇ ಜೀವನಾಧಾರವಾಗಿಸಿಕೊಂಡಿರುವ ಸಹಸ್ರಾರು ಗೋಪಾಲಕ ಕುಟುಂಬಗಳು ಐದು-ಹತ್ತರಿಂದ ಪ್ರಾರಂಭಿಸಿ ಒಂದೊಂದು ಕುಟುಂಬದಲ್ಲೂ ನೂರಕ್ಕಿಂತ ಅಧಿಕ ಗೋವುಗಳನ್ನು ಅತ್ಯಂತ ಪಾರಂಪರಿಕವಾಗಿ ಪಾಲನೆ‌ ಪೋಷಣೆ‌ ಮಾಡಿಕೊಂಡು ಬಂದಿದ್ದಾರೆ. ನೈಸರ್ಗಿಕ ಮೇವನ್ನು ತಿಂದು‌ಕೊಂಡು ಬದುಕುವ ಗೋವುಗಳು ಬೇಸಿಗೆ ಬಂದರೆ ಸಾಕು ಮೇವು ಮತ್ತು ನೀರನ್ನು ಅರಸಿ ಕಾಡಿನೊಳಕ್ಕೆ (ಬೆಟ್ಟದ‌ ಪ್ರದೇಶ) ಹೋಗುತ್ತಿದ್ದವು. ಗೋಪಾಲಕರೂ ಕೂಡ ಅವುಗಳೊಂದಿಗೆ ಕಾಡಿನೊಳಗೇ ದೊಡ್ಡಿ ಹಾಕಿ ಮೂರು ನಾಲ್ಕು ತಿಂಗಳುಗಳ ಕಾಲ ಅಂದರೆ ಮಳೆಗಾಲ ಪ್ರಾರಂಭವಾಗಿ ಸಮೃದ್ಧಯ ಹಸಿರು ಮೇವು ಬೆಳೆಯುವ ತನಕ ಅಲ್ಲೇ ಇದ್ದು, ನಂತರದಲ್ಲಿ ತಮ್ಮ ತಮ್ಮ ಪ್ರದೇಶಗಳಿಗೆ ಮರಳುತ್ತಿದ್ದವು. ಆದರೆ ಸರಕಾರದ ಕೆಂಗಣ್ಣು ಈ ಪಾರಂಪರಿಕ ಗೋ ಪೋಷಕರ‌ ಮೇಲೆ ಬಿದ್ದ ಪರಿಣಾಮ,‌ ಸಂರಕ್ಷಿತ ಅರಣ್ಯದ ಹೆಸರಿನಲ್ಲಿ ಕಾಡಿನ ಸುತ್ತಲೂ ಬೇಲಿ ಹಾಕಿ, ಗೋವುಗಳು ಮೇಯಲು ಹೋಗದಂತೆ ತಡೆಒಡ್ಡಿದೆ. ಒಂದೆಡೆ ಭೀಕರ ಬರಗಾಲ, ಇನ್ನೊಂದೆಡೆ ಸರ್ಕಾರ‌ದ ಕೆಟ್ಟ ನಡೆ ; ಇವುಗಳಿಂದ ಇಲ್ಲಿನ ಗೋವುಗಳು ಸಾವಿನಂಚಿಗೆ ತಲುಪಿವೆ.

ಪರಿಹಾರಕ್ಕೆಂದು ಸರ್ಕಾರ ನಿರ್ಮಿಸಿದ ಗೋಶಾಲೆಗಳು ಅವ್ಯವಹಾರ ಮತ್ತು ಅನ್ಯಾಯದ ಬೀಡಾಗಿದ್ದು,‌ ಗೋವುಗಳಿಗೆ ಮೃತ್ಯುಕಂಟಕವಾಗಿ‌ ಪರಿಣಮಿಸಿತ್ತು. ಈಗ ಕೆಲವು ಕೇಂದ್ರಗಳಲ್ಲಿ ಮೇವು ಪೂರೈಸುತ್ತಿದೆಯಾದರೂ ಅದು ಕೇವಲ ಒಣ ಮೇವಾಗಿದ್ದು, ಅವು ಗೋವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎನ್ನಲಾಗಿದೆ. ಇವೆಲ್ಲವನ್ನೂ ಮನಗಂಡ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಈ ಎಲ್ಲ ಗೋವುಗಳ ರಕ್ಷಿಸುವ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ಮುನ್ನಡೆಯುತ್ತಿದ್ದಾರೆ. ಇನ್ನೂ ಕನಿಷ್ಠ ೨೦-೨೫ ದಿನಗಳ ವರೆಗೆ ಮೇವು ವಿತರಿಸಬೇಕಾಗಿದ್ದು, ಸಮಾಜದ ಸಹೃದಯರ ಸಹಕಾರವನ್ನು ನೀರಿಕ್ಷಿಸಲಾಗಿದೆ. ನೇರವಾಗಿ ಮೇವುಗಳನ್ನೆ ಕಳುಹಿಸಿಕೊಡಬಹುದಾಗಿದ್ದು, ಸ್ವತಃ ಆ ಜಾಗಕ್ಕೆ‌ ತೆರಳಿ ಖುದ್ದಾಗಿ ಗೋವಿಗೆ ಮೇವುಣಿಸುವ ಅವಕಾಶವೂ ಇದೆ. ಇನ್ನೂ ಮೇವು ಖರೀದಿಗಾಗಿ ಧನ ಸಹಾಯ ಮಾಡಬಹುದಾಗಿದೆ. ಸಹಾಯ ಮಾಡಲು ಇಚ್ಛಿಸಿದವರು ಹೆಚ್ಚಿನ ಮಾಹಿತಿಗಾಗಿ 9483484074 ನಂಬರನ್ನು ಸಂಪರ್ಕಿಸಲು ಕೋರಿದೆ‌.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments