ಅಂಕಣರಂಗ-೨ : ಡಿ. ವಿ. ಪ್ರಹ್ಲಾದ್ ಅವರ ‘ಹೊಳೆದದ್ದು ತಾರೆ … ಕೆಲವು ಸಂಪಾದಕೀಯಗಳು’ ಪುಸ್ತಕ ಪರಿಚಯ
– ಮು. ಅ ಶ್ರೀರಂಗ ಬೆಂಗಳೂರು
ಹೊಳೆದದ್ದು ತಾರೆ:
ಬೆಂಗಳೂರಿನಿಂದ ಪ್ರಕಟವಾಗುವ ಸಂಚಯ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಡಿ ವಿ ಪ್ರಹ್ಲಾದ್ ಅವರು ಈ ಪುಸ್ತಕದಲ್ಲಿ ‘ನಿಮ್ಮೊಡನೆ’ ಎಂಬ ಶೀರ್ಷಿಕೆಯಲ್ಲಿ ಓದುಗರ ಜತೆ ತಾವು ನಡೆದು ಬಂದ ದಾರಿಯನ್ನು ಈ ರೀತಿ ಹಂಚಿಕೊಂಡಿದ್ದಾರೆ. ‘೧೯೮೭ರಿಂದ ಬರೆದಿರುವ ಸಂಪಾದಕೀಯಗಳಲ್ಲಿ ಆಯ್ದ ಕೆಲವು ಈ ಹೊತ್ತಿಗೆಯ ರೂಪದಲ್ಲಿದೆ. ಮೊದಲ ಸಂಚಿಕೆಯಿಂದಲೂ ಸಂಪಾದಕೀಯ ಆಯಾ ಸಂದರ್ಭಕ್ಕೆ ಪ್ರತಿಸ್ಪಂದನದ ರೂಪದಲ್ಲಿರುತ್ತಿತ್ತು. ಜೆರಾಕ್ಸ್ ಫೋಟೋ ಪ್ರತಿಯ ಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಯ ಮೊದಲ ಬೆನ್ನುಪುಟದಲ್ಲಿ ಒಂದು ಪ್ಯಾರದಷ್ಟು ಬರೆಯಲು ಜಾಗವಿರುತ್ತಿತ್ತು. ಹಾಗೇ ಮೊದಮೊದಲ ಹದಿನಾರು ಪುಟಗಳ ಪ್ರಿಂಟು ಅವತರಣಿಕೆಯಲ್ಲೂ. ‘ಸಂಚಯ’ ಎನ್ನುವ ಗೆಳೆಯರ ಗುಂಪಿನ ಭಾಗವಾಗಿದ್ದ ಈ ಸಾಹಿತ್ಯ ಪತ್ರಿಕೆ ಮೊದಲು ಕೆಲವು ಕಾಲ ಡಿ ವಿ ಪ್ರಹ್ಲಾದ್ ಮತ್ತು ಮಂಡಳಿ ಅಂತ ಪ್ರಕಟಗೊಳ್ಳುತ್ತಿತ್ತು’. ಮಂಡಳಿಗಳು ಮುಗಿದು ಚದುರಿದ ಮೇಲೆ ಪ್ರಹ್ಲಾದರೂ ಸೇರಿದಂತೆ ಉಳಿದವರು ಮೂವರು ಮಾತ್ರ . ‘ಕೊನೆಗೆ ಉಳಿದದ್ದು ಪ್ರಹ್ಲಾದ್ ಅವರೊಬ್ಬರೇ’. ‘ಸಾಮಾನ್ಯವಾಗಿ ಸಾಹಿತ್ಯ ಪತ್ರಿಕೆಗಳು ಕೆಲವು ನಿರ್ದಿಷ್ಟ ಸೈದ್ಧಾಂತಿಕ ನಂಬುಗೆಗಳ ನೆಲೆಯಿಂದ ಹೊರಡುವಂಥದ್ದು. ಆದರೆ ಸಂಚಯಕ್ಕೆ ಅಂಥ ಆಸರೆಗಳು ಇರಲಿಲ್ಲ. ಬೆಂಗಳೂರು ನಗರದಲ್ಲೇ ಹುಟ್ಟಿ ಬೆಳೆದು ಕಲಿತ ನಮಗೆ, ಕಣ್ಣು ಬಿಡುವ ಕಾಲಕ್ಕೆ ಬಂಡಾಯ ಸಾಹಿತ್ಯ ಚಳವಳಿಗೆ ಹತ್ತು ವರ್ಷ. ಅದರ ಉಬ್ಬರ ಇಳಿಯುತ್ತಿದ್ದ ಕಾಲ. ಹತ್ತು ವರ್ಷದ ಬಂಡಾಯ ಸಾಹಿತ್ಯ ಚಳವಳಿ ಕುರಿತು ಚರ್ಚಿಸಿದ ಮೊದಲ ಬಂಡಾಯೇತರ ವೇದಿಕೆ ಸಂಚಯ. ಸಾಕ್ಷಿ, ರುಜುವಾತು ಪತ್ರಿಕೆಗಳನ್ನು ಮುನ್ನಡೆಸಿದವರ ವರ್ಚಸ್ಸು, ದೊಡ್ಡ ಹೆಸರು ನಮ್ಮದಾಗಿರಲಿಲ್ಲ. ಎಂಬತ್ತು, ತೊಂಬತ್ತರ ದಶಕಗಳಲ್ಲಿ ಶೂದ್ರ, ಸಂಕ್ರಮಣ, ಅನ್ವೇಷಣೆ ಮುಂತಾದ ಪತ್ರಿಕೆಗಳ ಸಂಪಾದಕರ ವಾಕ್ ಸಮರ, ಅಂತರಂಗ, ಬಹಿರಂಗ ಪತ್ರಗಳ ಬುದ್ಧಿಮಾತುಗಳ ಬಗ್ಗೆ, ಅದರ ಸಾಚಾತನದ ಬಗ್ಗೆ ಅನುಮಾನವಿತ್ತು. ಸಂಪಾದಕನೇ ಪತ್ರಿಕೆಯ ಹೆಚ್ಚು ಪುಟಗಳನ್ನು ಆಕ್ರಮಿಸಿಕೊಳ್ಳುವ ಆತ್ಮರತಿಗೂ ನನಗೆ ವೈಯಕ್ತಿಕವಾಗಿ ಒಪ್ಪಿಗೆ ಇಲ್ಲ. ಸಂಪಾದಕನ ವಾಚಾಳಿತನ ಅವನ ದೌರ್ಬಲ್ಯವಾಗಿಯೂ ನನಗೆ ಅನೇಕ ಸಲ ಕಾಣಬರುತ್ತದೆ. ಅನೇಕರು ಭೇಟಿಯಾದಾಗ, ‘ನಿಮ್ಮ ಪತ್ರಿಕೆ ಗೊತ್ತು. ಆದರೆ ನೀವು ಗೊತ್ತಿರಲಿಲ್ಲ’ ಅಂದರೆ ಖುಷಿಯಾಗುತ್ತದೆ. ‘ಸಂಚಯ ತಾನು ಪಡೆದ ಅನೇಕ ಮರುಹುಟ್ಟುಗಳ ಒಂದು ಸಂದರ್ಭದಲ್ಲಿ ಹೊಳೆದದ್ದು ತಾರೆ, ಉಳಿದಿದ್ದು ಆಕಾಶ ಎಂಬ ಸಾಲು ಸಂಪಾದಕೀಯ ಬರೆಹಕ್ಕೆ ತಲೆಬರಹವಾಯ್ತು. ಇದು ಕೆ ಎಸ್ ನರಸಿಂಹಸ್ವಾಮಿ ಅವರ ‘ಮುಚ್ಚಿದ ಕಿಟಕಿ’ ಕವಿತೆಯ ಕೊನೆಯ ಸಾಲು. ತಮ್ಮ ಸಂಪಾದಕೀಯಗಳ ಬಗ್ಗೆ ಬಿಚ್ಚು ಮನಸ್ಸಿನಿಂದ ಪ್ರಹ್ಲಾದ್ ಅವರು ಹೇಳಿರುವುದು ಮೆಚ್ಚಬೇಕಾದ ಅಂಶ.
ಸಂಪಾದಕೀಯಗಳು ಒಂದು ನಿರ್ದಿಷ್ಟ ನಿಲುವು ಹಾಗೂ ಗುಣವನ್ನು ಹೊಂದಿರಬೇಕು ಅನ್ನುವುದು ನನ್ನ ಆಶಯ. ಗಾತ್ರದಲ್ಲಿ ಚಿಕ್ಕದಾಗಿ ಹೇಳಬೇಕಾದ್ದು ನೇರವಾಗಿರಬೇಕೆಂಬುದು ನಾನಿಟ್ಟುಕೊಂಡ ಮಾನದಂಡ. ಆಯಾ ಕಾಲಘಟ್ಟದಲ್ಲಿ ಸಂಪಾದಕನ ಸಂವೇದನೆಗೆ, ಸೂಕ್ಷ್ಮತೆಗೆ, ಆಲೋಚನೆಗಳಿಗೆ ದಕ್ಕಿದ ವ್ಯಕ್ತಿ-ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಬಹುಮುಖ್ಯವಾಗಿ ನಮ್ಮ ಕಿರಿದಾದ ಆದರೆ ಗಂಭೀರವಾದ ಓದುಗ ವಲಯದ ಜೊತೆಗೆ ಹಂಚಿಕೊಳ್ಳುವ ಉದ್ದೇಶ ಹೊಂದಿದೆ. ಈ ಪ್ರಕ್ರಿಯೆಯಲ್ಲಿ ಅನೇಕ ಸಲ ಇದ್ದುದ್ದನ್ನ ಇದ್ದಹಾಗೇ ಹೇಳಬೇಕಾಗಿ ಬಂದಿದೆ. ಅನೇಕ ಸಲ ಒಂದು ನೆಲೆಯಿಂದ ಮಾತ್ರ ವಿಷಯ ಗ್ರಹಿಸಲು ಸಾಧ್ಯವಾಗಿದೆ. ಈ ಕಾಲಕ್ಕೆ ಸಲ್ಲದ ಸಿನಿಕತನವೂ, ಕೆಲವು ಸಲ ಏಕಪಕ್ಷೀಯ ಆರ್ಭಟವೂ ಇಲ್ಲಿದೆ’. ತಮ್ಮ ಸಂಪಾದಕೀಯಗಳ ಬಗ್ಗೆ ಪ್ರಹ್ಲಾದ್ ಅವರ ಈ ನೇರಾನೇರಾ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ನಾವು ಈ ಪುಸ್ತಕವನ್ನು ಓದಬೇಕು. ಇದರಿಂದ ನಾವು ‘ಪೂರ್ವಗ್ರಹ’ ಪೀಡಿತರಾಗದೆ ಓದಲು ಸಾಧ್ಯವಾಗುತ್ತದೆ.
ಹೊಳೆದದ್ದು ತಾರೆ… ಪುಸ್ತಕದಲ್ಲಿ ಒಟ್ಟು ಇಪ್ಪತ್ತಮೂರು ಸಂಪಾದಕೀಯಗಳಿವೆ. ಅವುಗಳೆಲ್ಲದರ ತಾತ್ಪರ್ಯ ಬರೆಯುವುದಾಗಲೀ, ಅವುಗಳ ಬಗ್ಗೆ ನನ್ನ ಅಭಿಪ್ರಾಯ ಹೇಳುವ ಉದ್ದೇಶ ನನ್ನದಲ್ಲ. ಆ ಸಂಪಾದಕೀಯಗಳಲ್ಲಿ ನನಗೆ ‘ಸದ್ಯದ ಸನ್ನಿವೇಶದಲ್ಲಿ’ ಮುಖ್ಯವೆಂದು ಅನ್ನಿಸಿದ ಕೆಲವು ಮುಖ್ಯ ಅಂಶಗಳನ್ನಷ್ಟೇ ಉಲ್ಲೇಖಿಸುತ್ತೇನೆ. ಜತೆಗೆ ಆ ಸಂಪಾದಕೀಯಗಳು ಸಂಚಯದ ಯಾವ ಸಂಚಿಕೆಯಲ್ಲಿ ಪ್ರಕಟವಾಗಿತ್ತು ಎಂಬುದರ ವಿವರವನ್ನೂ ತಿಳಿಸಿರುವೆ. ಇದರಿಂದ ಆ ಕಾಲಘಟ್ಟದ ಬಗ್ಗೆ ತಿಳಿಯಲು ಸಾಧ್ಯವಾಗಬಹುದು. .
ಬಹುಗುಣದ ಮಾತಿನ ರಥ
ಪ್ರತಿ ದಿವಸ ಬೆಂಗಳೂರಿಗೆ ಬಂದು ಹೋಗುವ ಮಂದಿ ಲೆಕ್ಕವಿಲ್ಲದಷ್ಟು. ಕೆಲವರ ಬರುವಿಕೆ ಸುದ್ದಿಯಾಗಿ ಅವರ ಗೌಜುಗದ್ದಲ ನಮ್ಮಗಳ ದೈನಿಕಗಳನ್ನು ಅಸ್ತವ್ಯಸ್ತಗೊಳಿಸುತ್ತದೆ. ಆದರೆ ಅವತ್ತು ಬಂದಿದ್ದವರು ಅಂಥವರಲ್ಲ. ಬೆಳ್ಳಗಿನ ಗುಬ್ಬಚ್ಚಿ ಹಾಗಿರುವ ಎಂಬತ್ತರ ಅಂಚಿನ ಆ ವೃದ್ಧನ ಹಿಂದೆ ಗುಂಪು, ಜನಜಂಗುಳಿ ಯಾವುದೂ ಇರಲಿಲ್ಲ. ಆ ಅಜ್ಜ ಸುಂದರಲಾಲ್ ಬಹುಗುಣ. ಪರಿಸರ ಚಳುವಳಿಯ ಗಾಂಧೀ ಪರಂಪರೆಯ ಜೀವ… ನಮ್ಮ ಸರ್ಕಾರಗಳಿಗೆ ನದಿ ಮುಖ್ಯವಲ್ಲ. ನದಿಯ ಮಾಲಿನ್ಯದಿಂದ ಹಾಳಾಗುತ್ತಿರುವ ಸುತ್ತಲ ಜೀವಿಗಳ ಜೀವಕ್ಕೆ ಬೆಲೆ ಇಲ್ಲ. ಕಾಳಿ ನದಿ, ಗಂಗಾ-ಕಾವೇರಿಯಂಥ ದೊಡ್ಡ ನದಿ ಅಲ್ಲದೇ ಇರಬಹುದು. ಉತ್ತರ ಕರ್ನಾಟಕದ ಮುಖ್ಯ ನದಿಯಾದ ಕಾಳಿಯ ಜೀವಕ್ಕೆ ಕುತ್ತು ಬಂದಿದೆ. ಆ ನದಿ ಕಾರ್ಖಾನೆಗಳ ಸತತ ತ್ಯಾಜ್ಯ ವಿಲೇವಾರಿಯಿಂದ ಹದಗೆಟ್ಟಿದೆ. ನಮ್ಮ ನದಿಗಳ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲು ಅಷ್ಟು ದೂರದಿಂದ ಬಹುಗುಣರಂಥವರು ಬರಬೇಕಾಯ್ತು. ಅದಕ್ಕೆ ಪೂರಕವಾಗಿ ಗಾಂಧೀಜಿಯವರ ಒಂದು ಉದಾಹರಣೆಯೂ ಬಂತು. ಒಮ್ಮೆ ಬೆಳಗಾಗೆದ್ದು ಗಾಂಧೀಜಿ ಒಂದು ಲೋಟದಷ್ಟು ನೀರಿನಲ್ಲಿ ಮುಖ ತೊಳೆದುಕೊಂಡರು. ಜೊತೆಯಲ್ಲಿ ಇದ್ದವರೊಬ್ಬರು ಕಿಚಾಯಿಸಿದರು. ‘ಎಷ್ಟೊಂದು ಕಂಜೂಸ್ ಇದ್ದೀರಿ ನೀವು. ಒಂದೇ ಲೋಟ ನೀರಿನಿಂದ ಮುಖ ತೊಳೆಯುತ್ತಿದ್ದೀರಿ. ಆ ಕಡೆ ಯಮುನಾ ನದಿ ಹರಿಯುತ್ತಿದೆ. ‘ಅದಕ್ಕೆ ಗಾಂಧೀಜಿ ಕೊಟ್ಟ ಉತ್ತರ ಮಾರ್ಮಿಕವಾಗಿತ್ತು. ಅವರು, ‘ಯಮುನೆ ಹರಿಯುತ್ತಿರುವುದು ಬರೀ ನನಗೊಬ್ಬನಿಗಾಗಿ ಅಲ್ಲ’ ಅಂದರಂತೆ.[ಸಂಚಯ ಸಂಪುಟ ೧೪, ಸಂಚಿಕೆ ೨(೬೭) ಜುಲೈ ೨೦೦೫]
ನನ್ನ ದೂರದ ಗುರು-ಲಂಕೇಶ್
ಅವತ್ತು ಕವಿ ಶರ್ಮರು ನನ್ನನ್ನು ಪರಿಚಯಿಸಿದಾಗ ಅವರಿಂದ ತೂರಿ ಬಂದ ಮೊಟ್ಟಮೊದಲ ಪ್ರಶ್ನೆ: ನೀವು ಮಾಧ್ವಾ ಬ್ರಾಮಿನ್ಸಾ? ತುಂಬಾ ಮುಜುಗರಕ್ಕೆ ಒಳಗಾದೆ. ನನ್ನ ಇರಿಸು ಮುರಿಸು, ಮೌನ ಗಮನಿಸಿದ ಅವರು ತಟಕ್ಕನೆ ಎಳೆದುಕೊಂಡು, ಹೆಗಲ ಮೇಲೆ ತೋಳು ಹಾಕಿ, ‘ ತಮಾಷೆಗೆ ಕೇಳಿದೆ ರೀ’ ಅಂದರು. ನಂತರದ ಭೇಟಿ ಅವರ ಸಂದರ್ಶನದ್ದು. ಸಂಚಯಕ್ಕೆ ಹತ್ತು ವರ್ಷಗಳಾದ ಸಂದರ್ಭದಲ್ಲಿ 96ರಲ್ಲಿ ಸಂದರ್ಶನಗಳದ್ದೇ ಒಂದು ಪುಸ್ತಕ ಹೊರತರಲು ಯೋಚಿಸಿದಾಗ ನಾವು ಮುಟ್ಟಲಾರದೇ ಉಳಿದಿದ್ದ ಲಂಕೇಶ್, ಚಂಪಾ, ಕಂಬಾರ ಮುಂತಾದವರ ಪಟ್ಟಿ ರೂಪುಗೊಂಡಿತು. ಸರಿ, ಲಂಕೇಶ್ ಸಂದರ್ಶನಕ್ಕೆ ತಯಾರಿ ಮಾಡಿಕೊಂಡು ಹೋಗಿ ಕೂತೆ. ಮೊದಮೊದಲ ಬಿಗುವು ಸಡಿಲಗೊಂಡು ನಮ್ಮ ನೇರ ಮತ್ತು ಗಟ್ಟಿಯಾದ ಪ್ರಶ್ನೆಗಳು ಅವರನ್ನೂ ಉತ್ತೇಜಿಸಿತು. ತಮ್ಮ ಯಾವತ್ತಿನ ಧಾಟಿಯಲ್ಲಿ, ‘ಸ್ವಾಮೀಜಿಗಳೂ ಮನುಷ್ಯರೇ, ಅವರ ಸನ್ಯಾಸಕ್ಕೂ ಅನೇಕ ಬಿಕ್ಕಟ್ಟು, ತೊಡಕು, ಗೊಂದಲಗಳಿರ್ತವೆ ‘ ಅಂದರು. ಮನುಷ್ಯ ತಾನು ಕೆಲವು ಸಾಮಾಜಿಕ ಪಾತ್ರಗಳನ್ನು ಒಪ್ಪಿಕೊಂಡು ಅದನ್ನ ನಿರ್ವಹಿಸಲು ಪಡುವ ಪಾಡುಗಳ ಬಗ್ಗೆ ಅವರ ಮಾತುಗಳಲ್ಲಿ ಸಹಾನುಭೂತಿಯಿತ್ತು. ತಮ್ಮ ದೇಹ, ಅದರ ಖಾಯಿಲೆ, ಅದರ ಜೊತೆಗಿನ ಗುದ್ದಾಟಗಳನ್ನು ಹಂಚಿಕೊಳ್ಳುತ್ತಾ ಒಂದು ಹಂತದಲ್ಲಿ ಲಂಕೇಶ್, ನಾನೂ ಒಂದು ಜಿರಲೆ ಥರ ಸತ್ತು ಹೋಗುತ್ತೀನಿ ಅಂತನ್ನುವ ಮಾತು ಹೇಳುವಾಗ ಅವರ ಕಣ್ಣಲ್ಲಿ ತೆಳುವಾದ ನೀರಿನ ಪರದೆ. ಅಷ್ಟೊತ್ತಿಗೆ ಅವರ ಊಟದ ಸಮಯ ಆಗಿತ್ತು. ಎದ್ದು ಹೋಗಿ ಅಂತ ಮುಲಾಜಿಲ್ಲದೆ ಅಂದರು.
ಮತ್ತೊಂದು ಸಲದ ಭೇಟಿಯಲ್ಲಿ ನನ್ನ ಮೇಲೆ ಒಂಚೂರು ಮುನಿಸು. ‘ನಿಮಗೆ ಫೋನ್ ಮಾಡಿದ್ದೆ, ಯಾಕೆ ಬರಲಿಲ್ಲ. ನನ್ನ ಸಂದರ್ಶನದಲ್ಲಿ ಯಾರು ಯಾರೋ ಗೆಳೆಯರು ಹಿರಿಯರ ಬಗ್ಗೆ ಏನೇನೋ ಹೇಳಿಬಿಟ್ಟಿದ್ದೀನಿ. ಅದೆಲ್ಲ ನೀವು ಹಾಕಿಬಿಟ್ಟರೆ ಅವರ ಮನಸ್ಸಿಗೆ ನೋವಾಗುತ್ತೆ’ ಅಂದರು. ಇಲ್ಲ ನಾನು ಅಂತ ಭಾಗಗಳನ್ನು ಹಾಕೋಲ್ಲ. ಹಾಕಿಲ್ಲ ಅಂದೆ. ಸಣ್ಣಪತ್ರಿಕೆಗಳನ್ನು ಕುರಿತು ಪುಸ್ತಕ ವಿಮರ್ಶೆಗಳಿರಬೇಕು, ಚುರುಕಾಗಿರಬೇಕು ಅಂದರು. ಆ ವಾರವೇ ಅವರ ಸಂಪಾದಕೀಯದಲ್ಲಿ ‘ಸಣ್ಣಪತ್ರಿಕೆಗಳು, ಪುಟ್ಟ ವಚನ’ ಎಂಬ ಬರಹ ಪ್ರಕಟಗೊಂಡಿತು. ನಾಲ್ಕು ನೂರು ರೂಪಾಯಿಗಳನ್ನು ಟೇಬಲ್ಲಿನ ಮೇಲೆ ಹಾಕಿ, ತಗೊಳ್ಳಿ I can only do this ಅಂದರು. ನಮ್ಮ ಪತ್ರಿಕೆಯ ಆ ಕಾಲದ ಆಜೀವ ಚಂದಾ ಹಣ. ಮರೆಯದೇ ರಸೀದಿ ಕಳಿಸಿ. ತಪ್ಪದೇ ಪತ್ರಿಕೆ ಕಳಿಸಿ ಅಂತ ತಾಕೀತು ಮಾಡಿದರು. ಅವರು ಬದುಕಿರೋ ತನಕ ಅವರಿಗೆ ಪತ್ರಿಕೆ ತಲುಪುತ್ತಿತ್ತು. ಅವರ ಹುಳಿಮಾವಿನ ಮರ ಬಂದಿತ್ತು. ಅದರ ಬೆನ್ನಲ್ಲೇ ಅವರ ಬಗ್ಗೆ ಬಂದ ತಲೆಮಾರಿನ ತಳಮದ ಪುಸ್ತಕದ ವಿವಾದ. ಅನಂತಮೂರ್ತಿ, ಲಂಕೇಶ್ ಇಬ್ಬರೂ ಸ್ಕೂಲು ಹುಡುಗರಿಗಿಂತಲೂ ಕಡೆಯಾಗಿ ಸಾರ್ವಜನಿಕವಾಗಿ ವರ್ತಿಸಿದ್ದರ ವಿರುದ್ಧ ಸಂಪಾದಕೀಯದಲ್ಲಿ, ‘ಹುಳಿಮಾವಿನ ಮರ’ ಪುಸ್ತಕದ ತೋರಿಸಿಕೊಳ್ಳುವಿಕೆಯ ಬಗ್ಗೆ ಪುಸ್ತಕ ವಿಮರ್ಶೆಯಲ್ಲಿ ಖಾರವಾಗಿ ಬರೆದೆ. ಮುಂದಿನ ವಾರದಲ್ಲೇ ನಮ್ಮಗಳ ಹೆಸರು ಹೇಳದೆ ನಾವುಗಳು ಬ್ರಾಮಿನ್ ಪಾಲಿಟ್ ಬ್ಯುರೋದ ಸದಸ್ಯರು ಅನ್ನುವ ನಾಮಕರಣದೊಂದಿಗೆ ನಮಗೂ ಶಾಸ್ತಿಯಾಗಿತ್ತು. ಇವುಗಳಲ್ಲೆಲ್ಲಾ ಅವರ ದುಷ್ಟಕೂಟದ ಸದಸ್ಯರ ಕೈವಾಡ ಎಷ್ಟೆಷ್ಟಿತ್ತು? ಯಾರು ಹೇಳಬೇಕು?. ಲಂಕೇಶ್ ರಂಥವರನ್ನು ನಾವು ಟೀಕಿಸಬಹುದು. ಅವರು ನಮ್ಮಂಥ ಚಿಕ್ಕಪುಟ್ಟ ಹುಡುಗರ ಅಭಿಪ್ರಾಯಗಳಿಗೂ ಪ್ರತಿಕ್ರಿಯಿಸುತ್ತಾರೆ ಅನ್ನುವುದು ಒಂದು ರೀತಿ ವಿಶ್ವಾಸ ನೀಡಿತು. ಮೊನ್ನೆ ಮಾರ್ಚ್ ೮, ಲಂಕೇಶ್ ಹುಟ್ಟಿದ ದಿನ. ಯಾಕೋ ಎಲ್ಲ ನೆನಪಾಯಿತು ಹೀಗೆ.. ಆ ನನ್ನ ದೂರದ ಗುರುವು ಬದುಕಿದ್ದರೆ ಎಪ್ಪತ್ತಾಗುತ್ತಿತ್ತು. ಕನ್ನಡ ಜಗತ್ತು ಇನ್ನಷ್ಟು ಹುರುಪು ಹೊಂದಿರುತ್ತಿತ್ತು. [ಸಂಪುಟ ೧೪, ಸಂಚಿಕೆ ೩-೪ ( ೬೮-೬೯ ) ಅಕ್ಟೋಬರ್ ೨೦೦೫-ಜನವರಿ ೨೦೦೬]
ರಣಹಗಲು ಮತ್ತು ತೇಜಸ್ವಿ
ಅವತ್ತು ಗೆಳೆಯರೊಬ್ಬರ ಎಸ್ಸೆಮ್ಮೆಸ್. ತೇಜಸ್ವಿ ಇನ್ನಿಲ್ಲ ಅಂತ. ಇದು ಸುಳ್ಳಿರಬೇಕು ಅನ್ನಿಸ್ತು. ಮನಸ್ಸು, ‘ದೇವರೇ ಇದು ಸುಳ್ಳಾಗಿರಲಿ’ ಅಂತ ಬಯಸುತ್ತಿತ್ತು. ಆ ಸಾವು ಹುಟ್ಟಿಸುವ ಖಾಲಿತನ ಜೀರ್ಣಿಸಿಕೊಳ್ಳಲು ಬಹಳ ಕಾಲ ಬೇಕು. ಅದು ಎಂಬತ್ತರ ದಶಕದ ಕೊನೆಯ ವರ್ಷಗಳು. ಅವತ್ತು ಪ್ರಗತಿರಂಗ ‘ದ ರ್ಯಾಲಿ. ಕಬ್ಬನ್ ಪಾರ್ಕಿನಿಂದ ನ್ಯಾಷನಲ್ ಕಾಲೇಜು ಮೈದಾನದ ತನಕ ಮೆರವಣಿಗೆ… ಅಲ್ಲೊಂದು ಕಾಂಪೌಂಡಿಗೊರಗಿಕೊಂಡು ನಿಂತಿದ್ದವರೊಬ್ಬರನ್ನು ಗೆಳೆಯನೊಬ್ಬ ಅವರೇ ತೇಜಸ್ವಿ ಅಂತ ತೋರಿಸಿದ್ದ. ಹಾಗಾದರೆ ಮಾತಾಡಿಸಲೇಬೇಕು. ಹತ್ತಿರ ಹೋಗಿ, ‘ನೀವೇನಾ ಸಾರ್ ತೇಜಸ್ವಿ?’ ಅಂದದ್ದಕ್ಕೆ ‘ಹೌದು’ ಅಂತ ಸಂಕೋಚದಿಂದ ನಕ್ಕರು. ತೇಜಸ್ವಿ ನಮಗೆ ಗೊತ್ತಿರುವುದು ಅವರ ಪ್ರಯೋಗಶೀಲ ಲವಲವಿಕೆಯ ಬರವಣಿಗೆಗಳ ಮೂಲಕ. ಅವರ ಅನೇಕ ಉಡಾಫೆ ನಿಲುವುಗಳನ್ನು ಒಪ್ಪಿಕೊಂಡೂ ಒಂದು ಆರಾಧನಾ ಭಾವ, ಮೆಚ್ಚುಗೆ ಅವರ ಬಗ್ಗೆ ನಮ್ಮೆಲ್ಲರಲ್ಲೂ ಇತ್ತು. ತಮ್ಮ ಪ್ರತಿ ಮಾತೂ ಅಮೂಲ್ಯ, ಚಾರಿತ್ರಿಕ ದಾಖಲೆ ಅಂದುಕೊಂಡು ವರ್ತಿಸುವ ಅನೇಕ ಲೇಖಕರ ಮಧ್ಯೆ ತೇಜಸ್ವಿ ವಿಸ್ಮಯ ಹಾಗೂ ವೈರುಧ್ಯ. ಅದೇ ಅವರ ವೈಶಿಷ್ಟ್ಯವೂ ಹೌದು. ಈ ಮಾತು ಎಷ್ಟೇ ಕ್ಲೀಷೆ ಅನ್ನಿಸಿದರೂ ತೇಜಸ್ವಿ ಸಾವು ಕನ್ನಡ ಸಾಹಿತ್ಯ ಜಗತ್ತಿಗಾದ ಬಹು ದೊಡ್ಡ ನಷ್ಟ.
[ಸಂಪುಟ ೧೫ ಸಂಚಿಕೆ ೪(೭೩) ಮಾರ್ಚ್ ೨೦೦೭]
ಧೂಳಿನ ಸ್ನಾನದಲ್ಲಿ ಎಸ್. ಎನ್ ಧ್ಯಾನ
ಈ ಸಂಪಾದಕೀಯದ ವಿಷಯ ಪ್ರಹ್ಲಾದ್ ಅವರು ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ ನಮ್ಮ ರಾಜ್ಯದ ಹಿರಿಯ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪನವರು (ಎಸ್. ಎನ್. ) ಬಾಳಿ ಬದುಕಿದ ಮನೆಯನ್ನು ನೋಡಿದ ನೆನಪಿನಲ್ಲಿ ಬರೆದಿದ್ದು. ‘ಚಿತ್ರದುರ್ಗದ ನೆನಪಾಗಿ ಉಳಿಯುವ ಎರಡು ಸಂಗತಿಗಳಲ್ಲಿ ಒಂದು ಚಂದ್ರವಳ್ಳಿಯ ಗುಹೆಗಳು, ಮತ್ತೊಂದು ಹಿರಿಯ ರಾಜಕಾರಣಿ ಎಸ್ ಎನ್ ಅವರ ಮನೆ. ಅವರು ಬಾಳಿ ಬದುಕಿದ ಮನೆಯನ್ನು ಸಮ್ಮೇಳನದ ಸಲುವಾಗಿ ಒಂದು ಸ್ಮಾರಕವಾಗಿ ರೂಪಿಸಲಾಗಿತ್ತು. ಮುಂದೆ ಅದು ಶಾಶ್ವತ ಸ್ಮಾರಕವಾಗಬೇಕಾಗಿದೆ. ಆ ಮನೆಯ ಎಲ್ಲ ಅಮೂಲ್ಯ ನೆನಪುಗಳನ್ನು ಸುಂದರವಾಗಿ ಕಾಪಿಡಲಾಗಿದೆ. ಎಸ್ ಎನ್ ಉಪಯೋಗಿಸುತ್ತಿದ್ದ ಬೆತ್ತ, ಕುರ್ಚಿ, ಹಾಸಿಗೆ, ಎಲ್ಲವೂ ನಮ್ಮ ಕಣ್ಣುಗಳಲ್ಲಿ ತಮ್ಮ ಸರಳತೆ ಹಾಗೂ ಉನ್ನತ ಮೌಲ್ಯಗಳೊಡನೆ ಬದುಕಿದ ಎಸ್ಸೆನ್ ಬಗೆಗೆ ಅಭಿಮಾನ ಮೂಡಿಸುತ್ತವೆ. ಅವರ ಕಾಗದ, ಡೈರಿ ಪತ್ರಗಳ ನಡುವೆ ಒಂದು ಲೆಕ್ಕದ ಚೀಟಿ ಸಿಕ್ಕಿತಂತೆ; ತುಂಬಾ ಆರ್ಥಿಕ ಸಂಕಷ್ಟದ ನಡುವೆ ತಮ್ಮ ಮಗನಿಂದ ಅವರು ಒಂದು ಸಾವಿರ ರೂಪಾಯಿಯನ್ನು ಪಡೆದಿದ್ದರು. ಆ ಸಾವಿರ ರೂಪಾಯಿಗಳಲ್ಲಿ ನೂರಾ ಅರವತ್ತೈದು ರೂಪಾಯಿಯನ್ನು ಇಂಥಾ ಹಳ್ಳಿಯ ಮುದುಕಿಗೆ ಕೊಟ್ಟಿದೆ ಅಂತ ಬರೆದಿದ್ದರು. ಕಾರಣ; ಆ ಮುದುಕಿಯ ಸೊಪ್ಪು ಮಾರುವ ಬುಟ್ಟಿಯನ್ನು ಯಾರೋ ಕದ್ದುಬಿಟ್ಟಿದ್ದರು. ಅವಳು ತನ್ನ ಜೀವನಾಧಾರಕ್ಕೆ ಬುತ್ತಿ ಹಾಗೂ ಸೊಪ್ಪುಕೊಳ್ಳಲು ಹಣ ಕೊಟ್ಟಿದ್ದ ವಿವರಗಳಿವೆ. ಇಳಿ ವಯಸ್ಸಿನಲ್ಲೂ ತಮ್ಮ ಹಳೆಯ ಬಟ್ಟೆಗಳ ಗುಂಡಿಗಳನ್ನು, ಹರಿದ ಭಾಗಗಳನ್ನು ಹೊಲಿದುಕೊಳ್ಳಲ್ಲು ಎಸ್ ಎನ್ ಬಳಸುತ್ತಿದ್ದ ಸ್ವಿಚಿಂಗ್ ಕಿಟ್ ಕಂಡಾಗ ಅಯ್ಯೋ ಅನ್ನಿಸುತ್ತದೆ. ಒಮ್ಮೆ ಇಂದಿರಾಗಾಂಧಿ ಎಸ್. ಎನ್. ಅವರನ್ನು ಭೇಟಿ ಮಾಡಲು ಬಯಸಿದರು; ಫೋನು ಬಂತು. ಬನ್ನಿ. ಆದರೆ ಐದು ಜನಕ್ಕಿಂತ ಜಾಸ್ತಿ ಬೇಡ. ಯಾಕೆಂದರೆ, ನಿಮ್ಮಂಥವರಿಗೆ ಚಹಾ ಕೊಡಬಲ್ಲ ಪಿಂಗಾಣಿ ಕಪ್ಪುಗಳು ನಮ್ಮಲ್ಲಿರುವುದು ಐದೇ ಅಂದರಂತೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಏಳು ವರ್ಷ ಅಧಿಕಾರದಲ್ಲಿದ್ದ ಎಸ್.ಎನ್. ಹೀಗಿದ್ದರು. ಭಾರತ ರತ್ನ ಪ್ರಶಸ್ತಿ ಕೊಡಲು ಮಾಡಿದ ಶಿಫಾರಸ್ಸಿಗೆ ವಿರುದ್ಧವಾಗಿ ತನಗೆ ಇಂಥಾ ಪ್ರಶಸ್ತಿಯಲ್ಲಿ ಆಸಕ್ತಿ ಇಲ್ಲವೆಂದೂ ತಾನು ಅದನ್ನು ಸ್ವೀಕರಿಸಲಾರೆ ಎಂದು ಬರೆದ ಪತ್ರವೊಂದು ಆ ಮನೆಯ ಗೋಡೆಯಲ್ಲಿದೆ. ನಮ್ಮ ಸಾಹಿತಿಗಳು ಓದಬೇಕು.
ಮತ್ತೊಂದು ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು. ಎಸ್. ಎನ್. ಅವರಿಗೆ ಸರ್ಕಾರದ ಅತಿಥಿಯಾಗಿ ಬೆಂಗಳೂರಿಗೆ ಬಂದು ನೆಲಸಿ, ನಿಮ್ಮ ಆಸ್ಪತ್ರೆಯ ಖರ್ಚು-ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಬರೆದ ಪತ್ರಕ್ಕೆ ಉತ್ತರವಾಗಿ ಎಸ್.ಎನ್ ಅವರು ಈ ನಾಡಿನ ಎಲ್ಲ ಮುದುಕರ ನಿರ್ಗತಿಕರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಬಲ್ಲದೆ? ಹಾಗಿದ್ದರೆ ನಾನು ಅದನ್ನು ನಾನು ಒಪ್ಪಿಕೊಳ್ಳಬಲ್ಲೆ ಎಂದು ಬರೆದ ಪತ್ರವೂ ಆ ಮನೆಯ ಗೋಡೆಯಲ್ಲಿದೆ. ಕಾಲಗರ್ಭದಲ್ಲಿ ಅನೇಕ ಅರ್ಥಪೂರ್ಣ ಸಂಗತಿಗಳು ಅಸಂಗತವಾಗುತ್ತ, ಮೆಲುಕಾಡುವ ನೆನಪಾಗಿ ಹೋಗುವುದು ದುರಂತ. ಈ ಕಾಲದವರಿಗೆ ಎಸ್. ಎನ್. ಅತಿಮಾನವರಾಗಿ ಕಂಡರೂ ಆಶ್ಚರ್ಯವಿಲ್ಲ.
[ಸಂಪುಟ ೧೮, ಸಂಚಿಕೆ ೨(೭೯) ಮಾರ್ಚ್-ಏಪ್ರಿಲ್ ೨೦೦೯].
ಎಡ -ಬಲದ ನಡುವೆ
ನಮ್ಮ ಲೇಖಕ ಬಳಗದ ಕೆಟ್ಟ ಚಾಳಿಯಾದ ‘ನೀನು ಎಡವೋ ಬಲವೋ?’ ಎಂದು ತನಿಖೆ ಮಾಡುವ ವಿದ್ಯಮಾನವನ್ನು ೨೦೧೦ರಲ್ಲಿ ಪ್ರಹ್ಲಾದ್ ಮತ್ತು ಅವರ ಸಾಹಿತ್ಯ ಪತ್ರಿಕೆಯಾದ ‘ಸಂಚಯ’ ಎದುರಿಸಬೇಕಾಗಿ ಬಂದ ಬಗೆಯನ್ನು ಈ ಸಂಪಾದಕೀಯದಲ್ಲಿ ಹೇಳಿದ್ದಾರೆ. ಈ ಎಡ-ಬಲದ ವಿದ್ಯಮಾನ ಈಗ ಇನ್ನೂ ಹೆಚ್ಚಾಗಿರುವುದು, ಮತ್ತು ಈಗ ಇವೆರೆಡರ ನಡುವೆ ಸಮಾನ ದೂರದಲ್ಲಿ ಇರಲು ಇನ್ನೊಂದು ಸಿದ್ಧಾಂತ ಚಾಲ್ತಿಗೆ ಬರುತ್ತಿದೆ. ಇರಲಿ. ‘ಗೇಟು ತೆರೆದು ಒಳಗೆ ಹೆಜ್ಜೆ ಇಟ್ಟ ಕೂಡಲೇ ನನ್ನನ್ನು ನಗುತ್ತಾ ಸ್ವಾಗತಿಯಿದ ಆ ಹಿರಿಯರು, ಸ್ವಲ್ಪ ಜೋರಾಗಿಯೇ ಪ್ರಶ್ನೆಯೊಂದನ್ನು ಒಗೆದರು..
ಹಿರಿಯರು – “ಏನು ನೀವು ನಿಮ್ಮ ಪತ್ರಿಕೆ ಎರಡೂ ಈಚೆಗೆ ಬಲಪಂಥೀಯ ಕೋಮುವಾದಿ ಆಗಿಬಿಟ್ಟಿದೆಯಂತೆ ?”.
ಪ್ರಹ್ಲಾದ್ – “ಯಾವುದಿದು ಹೊಸ ಸಂಶೋಧನೆ ? ನನ್ನ ಬಗ್ಗೆ ನನಗೆ ಗೊತ್ತಿಲ್ಲದ್ದು ?”
ಹಿರಿಯರು – “ನಿಮ್ಮ ಮೇಲೆ ಇಂಥದ್ದೊಂದು ಗಂಭೀರ ಆರೋಪ ಇದೆ. ನಿಮಗೂ ಗೊತ್ತಿರುವ ಹಿರಿಯರೊಬ್ಬರು ಮಾಡಿದ್ದಾರೆ”.
ಇರುವ ವಿಷಯ ನೇರವಾಗಿ ಸಂಬಂಧಪಟ್ಟ ಜನರೊಡನೆ ಮಾತನಾಡದೆ, ಹೀಗೆ ಕಿವಿ ಕಚ್ಚುತ್ತ ಒಬ್ಬರಿಂದ ಮತ್ತೊಬ್ಬರಿಗೆ ಸುದ್ದಿ ಹಬ್ಬಿಸಿ ಚಾರಿತ್ಯವಧೆ ಮಾಡುವುದು. ನೇರವಾದರೆ ಗುದ್ದಾಡಬಹುದು. ಮುಸುಕಿನ ಧಾಳಿಗಳನ್ನು ಎದುರಿಸುವುದು ಹೇಗೆ? ಕುವೆಂಪು ಒಮ್ಮೆ ಹೇಳಿದ ಹಾಗೆ ಚಡ್ಡಿ ತೊಟ್ಟು ಮಟ್ಟಿಗಿಳಿದವನ ಜೊತೆ ಕುಸ್ತಿ ಸಾಧ್ಯ. ಅದೂ ಇಲ್ಲದವನ ಜೊತೆಗೆಂಥ ಕುಸ್ತಿ? ಸಂಚಯದ ಮೂಲಕ ನೂರಾರು ಲೇಖಕರು ಈ ಇಪ್ಪತ್ತ್ಮೂರು ವರ್ಷಗಳಲ್ಲಿ ಬರೆದಿದ್ದಾರೆ, ಬೆಳೆದಿದ್ದಾರೆ, ಕೆಲವರು ಬೆಳೆಸಿದ್ದಾರೆ, ಬಳಸಿಕೊಂಡವರೂ ಇದ್ದಾರೆ. ಅದೊಂದು ಸದ್ದಿಲ್ಲದೆ ಹರಿಯುವ ನದಿಯ ಹಾಗೆ ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡು ಹರಿದರೂ ತನ್ನ ಗುಣವನ್ನೆಂದೂ ಬದಲಾಯಿಸಿಕೊಂಡಿಲ್ಲ. ಯಾವುದೇ ಅತಿರೇಕಗಳ ಪಕ್ಷಪಾತಿ ಆಗಿಲ್ಲ. ಬಲ ಪಂಥೀಯ ಖಂಡಿತಾ ಅಲ್ಲ. ಎಡಪಂಥೀಯವೂ ಅಲ್ಲ. ಇದು ವೈಯಕ್ತಿಕವೂ ಹೌದು, ಸಾರ್ವಜನಿಕವೂ ಹೌದು. ಸ್ಪಷ್ಟಗೊಳಿಸಬೇಕಾದ್ದು ಅನಿವಾರ್ಯವೂ ಹೌದು.
[ಸಂಚಿಕೆ ೮೬, ಮೇ-ಜೂನ್ ೨೦೧೦ಕ್ಕೆ ಬರೆದಿದ್ದ ಸಂಪಾದಕೀಯ]
ಕೊನೆಯದಾಗಿ ‘ಸಂಚಯ’ದ ನೂರನೇ ಸಂಚಿಕೆ ಕುರಿತು ಪ್ರಹ್ಲಾದ್ ಅವರು ಬರೆದ ಸಂಪಾದಕೀಯದ ಕೆಲವು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿ ಈ ಅಂಕಣದ ಈ ಸಲದ ಕಂತನ್ನು ಮುಗಿಸುವೆ. ೧೯೮೭ರಿಂದ ಪ್ರಾರಂಭಿಸಿದ ಕನ್ನಡ ಸಾಹಿತ್ಯ ಪತ್ರಿಕೆಯೊಂದನ್ನು ಯಾವುದೇ ಜಾಹೀರಾತುಗಳ ಬೆಂಬಲವಿಲ್ಲದೆ, ಸಾಹಿತ್ಯದ ಗಾಡ್ ಫಾದರ್ ಗಳ , ಸಂಸ್ಥೆಗಳ ಒತ್ತಾಸೆ, ಪ್ರಭಾವಳಿಗಳ ನೆರಳಿಲ್ಲದೆ ಇಂದಿನವರೆಗೆ ಸತತವಾಗಿ ಮೂವತ್ತು ವರ್ಷಗಳ ಕಾಲ ಒಬ್ಬರೇ ನಡೆಸಿಕೊಂಡು ಬರುತ್ತಿರುವುದು ಸಾಮಾನ್ಯದ ವಿಷಯವೇನಲ್ಲ. ಸಂಚಯ ಪ್ರಾರಂಭಿಸಿ ಇಪ್ಪತ್ತೈದು ವರ್ಷಗಳಾದಾಗ ೨೦೧೨ರ ಅಕ್ಟೋಬರ್ ನಲ್ಲಿ ಬರೆದ ಈ ಸಂಪಾದಕೀಯವು ಪ್ರಹ್ಲಾದ್ ಅವರು ತಮ್ಮ ಸಾಹಿತ್ಯ ಪತ್ರಿಕೆಯ ಜೊತೆ ತಾವು ನಡೆದು ಬಂದ ದಾರಿಯನ್ನು ವಿವರಿಸುತ್ತದೆ.
ಸೆಂಚುರಿ ಅಂಚಿನಲ್ಲಿ ನಿಂತು
ನಾಳೆ ‘ಸಂಚಯ’ದ ನೂರನೇ ಸಂಚಿಕೆ ಪ್ರಿಂಟಾಗಲಿದೆ. ಮೊದಲ ಸಂಚಿಕೆ ರೂಪಿಸುವಾಗಿನ ಆತಂಕ, ತಹತಹ ಇಪ್ಪತ್ತೈದು ವರ್ಷಗಳ ನಂತರ ನೂರನೆಯದಕ್ಕೂ ಇದೆ.. ಕೆಲಸಕ್ಕೆ ಸೇರಿದ್ದ ಹೊಸತರಲ್ಲಿ ನನ್ನ ಸಂಬಳ ಎಂಟು ನೂರು. ಎರಡು ತಿಂಗಳಿಗೊಮ್ಮೆ ಪ್ರೆಸ್ಸಿನ ಬಿಲ್ಲು ನಾಲ್ಕು ನೂರು ಸದ್ದಿಲ್ಲದೆ ಸಂದಾಯ. ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನ್ನ ಈ ಹುಚ್ಚು ಕೆಲವರಿಗೆ ವಿಚಿತ್ರವಾಗಿ ಕಂಡರೆ, ಮತ್ತೆ ಕೆಲವರು, ‘ಮಾಡಿ, ಒಳ್ಳೆ ಕೆಲಸ’ ಅಂತ ಹುರಿದುಂಬಿಸಿದರು. ಯಾರಾದರೂ ಸಿಕ್ಕಿ ಸಾಹಿತ್ಯದಲ್ಲಿ ಆಸಕ್ತಿ ಇದೆ ಅಂತ ಅನ್ನಿಸಿದವರಿಗೆ, ಬರಹಗಾರರಿಗೆ ನಮ್ಮ ಪತ್ರಿಕೆ ಕೊಡತೊಡಗಿದೆವು, ಉಚಿತವಾಗಿ. ಒಬ್ಬ ವಿಮರ್ಶಕರು ಒಂದು ಸಂಚಿಕೆ ಪಡೆದ ಮೂರು ನಾಲ್ಕು ದಿನಗಳ ನಂತರ ಸಿಕ್ಕರು. ‘ನಮ್ಮ ಪತ್ರಿಕೆ ಹೇಗಿದೆ ಸಾರ್?’ಅಂತ ಕೇಳಿದ್ದೆ. ಯಾವ ಪತ್ರಿಕೆ ಅಂತ ಪ್ರಶ್ನಿಸಿದ್ದರು. ಸಾಹಿತ್ಯ ಕ್ಷೇತ್ರದ ದೊಡ್ಡ ದೊಡ್ಡವರಿಗೆ ಒಂದೊಂದು ಸಂಚಿಕೆ ಕೊಟ್ಟು ‘ನಿಮ್ಮ ಅನಿಸಿಕೆ ತಿಳಿಸಿ ಸಾರ್ ‘ ಅಂದೆ..( ಒಬ್ಬರು )’ಅದಕ್ಕೆಲ್ಲಾ ನನಗೆ ಟೈಮಿಲ್ಲ’ ಅಂದಿದ್ದರು..(ಮತ್ತೊಬ್ಬರು) ‘ನಿಮ್ಮ ಪತ್ರಿಕೆಯಲ್ಲಿ ಏನೂ ಇಲ್ಲ. ಚಂದಾ ಕೊಡಲಾರೆ’ ಅಂತ ಬರೆದಿದ್ದರು. ಆ ಕಾಲ ಘಟ್ಟದಲ್ಲಿ ಅದು ನಿಜವೂ ಆಗಿದ್ದಿರಬೇಕು. ಶಾಂತಿನಾಥ ದೇಸಾಯಿ ಬಗ್ಗೆ ಸಂಚಿಕೆ, ಪುಸ್ತಕ ಎರಡೂ ಮಾಡಿ ಪುಸ್ತಕ ಬಿಡುಗಡೆಯನ್ನು ಧಾರವಾಡದಲ್ಲಿ ಇಟ್ಟುಕೊಂಡೆವು. ಆಗ ಅಲ್ಲಿನ ಲೇಖಕರು ‘ದೇಸಾಯಿ ನಮ್ಮವರು, ಆದರೆ ನೀವು ಬೆಂಗಳೂರಿನವರು. ಅವರ ಬಗ್ಗೆ ಪುಸ್ತಕ ತಂದಿದ್ದೀರಿ’ ಅನ್ನುವ ಅರ್ಥದ ಮಾತಾಡಿದಾಗ ದೇಸಾಯಿ ಕನ್ನಡದ ಲೇಖಕ ಅಲ್ವಾ ? ಅವರು ಧಾರಾವಾಡದವರಷ್ಟೇ ಬೆಂಗಳೂರಿನವರು ಅಲ್ವಾ?ಅನ್ನುವ ಪ್ರಶ್ನೆ ಬಂತು. ಹೊತ್ತುಕೊಂಡು ಹೋಗಿದ್ದ ಇನ್ನೂರು ಪುಸ್ತಕಗಳಲ್ಲಿ ಎಂಟೋ ಹತ್ತು ಖರ್ಚಾಗಿ ಉಳಿದ ಬ್ಯಾಗುಗಳ ಭಾರ ಹೊತ್ತು ಹೋಟೆಲ್ ಧಾರವಾಡದ ಎದುರು ಆಟೋ ಹತ್ತುವಾಗ, ಇದೆಲ್ಲಾ ಬೇಕಿತ್ತಾ ನನಗೆ ಅಂತ ಕಣ್ಣೀರು ಬಂದಿತ್ತು. ಅದು ೨೦೦೪ರ ಸಮಯ ತೇಜಸ್ವಿ ಈಗಿನಷ್ಟು ಭಜನಾಮಂಡಳಿಗಳ ಆರಾಧ್ಯಮೂರ್ತಿ ಆಗಿರಲಿಲ್ಲ. ಅವರ ಸಾಹಿತ್ಯ ಕುರಿತು ಒಂದು ವಿಶೇಷಾಂಕ ರೂಪಿಸಿದೆವು. ತುಂಬಾ ಚೆನ್ನಾಗಿ ಬಂತು. ಅವರಿಗೆ ಎರಡು ಅಥವಾ ಮೂರು ಪ್ರತಿ ಕಳಿಸಿದ್ದೆವು. ಅವರು ಅದನ್ನು ಇಷ್ಟಪಟ್ಟಿದ್ದರು. ಆತ್ಮೀಯರು ಕೇಳಿದರೆ ಅದನ್ನು ಜೆರಾಕ್ಸ್ ಮಾಡಿಸಿಕೊಡುತ್ತಿದ್ದರು ಅಂತ ಗೆಳೆಯರ ಮೂಲಕ ಅವರ ನಿರ್ಗಮನದ ನಂತರ ಕೇಳಿದಾಗ ಅವರ ನಿರ್ಲಿಪ್ತಿ ಬಗ್ಗೆ ಅಚ್ಚರಿಯಾಯ್ತು. ಮಂಡ್ಯದಲ್ಲಿ ತೇಜಸ್ವಿ ಬಗ್ಗೆ ನಡೆದ ಸೆಮಿನಾರ್ ಒಂದರಲ್ಲಿ ಇಪ್ಪತ್ತು ರೂಪಾಯಿಗೊಂದರಂತೆ ತೇಜಸ್ವಿ ವಿಶೇಷಾಂಕ ಬಿಸಿ ಬಿಸಿ ಬೋಂಡ ಕೊಂಡ ಹಾಗೆ ಕಾಲೇಜು ಹುಡುಗರು ಕೊಂಡಿದ್ದು ಕಣ್ಣ ಮುಂದೆ ಬರುತ್ತದೆ. ಆಮೇಲೆ ಅದು ‘ತೇಜಸ್ವಿಲೋಕ’ ಪುಸ್ತಕವಾಯ್ತು; ಅದೂ ಮುಗಿಯಿತು. ತುಂಬಾ ಜನ ನನ್ನ ಕೇಳುತ್ತಾರೆ. ನೀವು ಕಷ್ಟಪಟ್ಟು ಇಷ್ಟು ವರ್ಷ ಪತ್ರಿಕೆ ತಂದಿದ್ದೀರಿ, ಹೇಗೆ ಅಂತೆಲ್ಲಾ. ಒಂದು ನೆಲೆಯಲ್ಲಿ ಇದು ಕಷ್ಟ ಅನ್ನಿಸಬಹುದು… ಪ್ರೀತಿಯಿಂದ, ಪ್ರಾಮಾಣಿಕತನದಿಂದ ಮಾಡುವ ಯಾವ ಕೆಲಸವೂ ಭಾರ ಅಲ್ಲ, ಹೊರೆಯೂ ಅಲ್ಲ. ಹಾಗಂತ ಯಾವಾಗಲೂ ಈ ಕೆಲಸ ಸಂತೋಷವನ್ನಂತೂ ಕೊಟ್ಟಿಲ್ಲ. ಒಂದು ದಿನ ನನ್ನ ಎಲ್ಲಾ ಕೆಲಸ ಬದಿಗಿಟ್ಟು ಒಂದು ಸಂಚಿಕೆ ರೂಪಿಸಿದಾಗ ನನ್ನ ನಂಬಿದ ಹೆಂಡತಿ ಮಕ್ಕಳಿಗೆ ದ್ರೋಹ ಮಾಡಿದೆ ಅಂತಲೂ ಅನ್ನಿಸಿದೆ. ಇಷ್ಟಕ್ಕೂ ಇವೆಲ್ಲಾ ನಾನು ಮಾಡಿದೆ ಅಂತನ್ನುವ ಕ್ರೆಡಿಟ್ಟೂ ನನ್ನದಲ್ಲ. ಗೆಳೆಯರು ಹೆಗಲು ಕೊಟ್ಟರು, ಓದುಗರು ಚಂದಾ ಕೊಟ್ಟರು, ದೊಡ್ಡವರು ಬೆನ್ನು ತಟ್ಟಿದರು, ಉಳ್ಳವರು ತಮ್ಮಲ್ಲಿದ್ದದ್ದನ್ನು, ಇಲ್ಲದವರು ಬರೀ ಕೈಯನ್ನು, ಜೊತೆಗಾರಿಕೆಯನ್ನು ನೈತಿಕವಾಗಿ ಬೆಂಬಲವನ್ನು. ಹಾಗೇ ಸಾಗಿ ಬಂದಿದೆ ಬಂಡಿ.
[ಸಂಚಯ : ಸಂಚಿಕೆ ೧೦೦, ಅಕ್ಟೋಬರ್ ೨೦೧೨]
ಅಂಕಣರಂಗ ಮಾಲಿಕೆಯಲ್ಲಿ ಮುಂದಿನ ಪುಸ್ತಕ ಪರಿಚಯ ಡಿ ವಿ ಪ್ರಹ್ಲಾದ್ ಅವರ ‘ಅನುದಿನವಿದ್ದು …… ‘