ವಿಷಯದ ವಿವರಗಳಿಗೆ ದಾಟಿರಿ

ಮೇ 19, 2017

ಕೈ ಜಾರುತ್ತಿರುವ ಜಮ್ಮುಕಾಶ್ಮೀರ ; ನೆನಪಾಗುವ ಜಗಮೋಹನ್

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಕಳೆದ 5 ತಿಂಗಳಿನಲ್ಲಿ ಸೇನೆಯ ಮೇಲೆ 7 ದಾಳಿಗಳು ; ಮೇ 2ನೇ ತಾರೀಖು ಇಬ್ಬರು ಭಾರತೀಯ ಯೋಧರ ತಲೆಕಡಿಯಲಾಯಿತು;2 ಬ್ಯಾಂಕುಗಳ ದರೋಡೆ,ಹತ್ಯೆಗಳು; ರಾಜ್ಯ ಸರ್ಕಾರವೇ ಭದ್ರತಾ ದೃಷ್ಟಿಯಿಂದ 40 ಬ್ಯಾಂಕುಗಳಲ್ಲಿ ನಗದು ವ್ಯವಹಾರ ಮಾಡದಂತೆ ಸೂಚಿಸಿದ್ದು; ಸಹೋದರಿಯ ಮದುವೆಗೆಂದು ರಜೆಯಲ್ಲಿ ಮನೆಗೆ ಬಂದಿದ್ದ ಯೋಧನನ್ನು ಅಪಹರಿಸಿ,ಚಿತ್ರಹಿಂಸೆ ನೀಡಿ ಹತ್ಯೆ;ಹುತಾತ್ಮ ಯೋಧನ ಶವಯಾತ್ರೆಯಲ್ಲಿ ಕಲ್ಲು ತೂರಾಟ;ಎನ್ಕೌಂಟರಿನಲ್ಲಿ ಸತ್ತ ಉಗ್ರನ ಶವಯಾತ್ರೆಯಲ್ಲಿ ಪ್ರತ್ಯಕ್ಷವಾದ ಉಗ್ರರಿಂದ ಗಾಳಿಯಲ್ಲಿ ಗುಂಡು,ಪ್ರತೀಕಾರದ ಕೂಗು;ಆಡಳಿತಾರೂಢ ಪಿಡಿಪಿ ಪಕ್ಷದ ಪುಲ್ವಾಮ ಜಿಲ್ಲಾಧ್ಯಕ್ಷನನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಇವೆಲ್ಲ ಘನಂಧಾರಿ ಸಾಧನೆಗಳಾಗಿರುವುದು ಆಗುತ್ತಿರುವುದು ಜಮ್ಮುಕಾಶ್ಮೀರ ರಾಜ್ಯದಲ್ಲಿ.ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಉಗ್ರ ಬರ್ಹಾನ್ ವನಿಯ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರ, Demonetization ಮತ್ತು ಸರ್ಜಿಕಲ್ ಸ್ಟ್ರೈಕ್ ನಂತರ ತಾತ್ಕಾಲಿಕವಾಗಿ ತಣ್ಣಗಾಗಿತ್ತಾದರೂ ಈಗ ಭೀಕರ ಹಂತಕ್ಕೆ ಹೊರಟಿರುವಂತೆ ತೋರುತ್ತಿದೆ.ಜಮ್ಮುಕಾಶ್ಮೀರ ರಾಜ್ಯದಿಂದ ಈಗ ಬರುತ್ತಿರುವ ಸುದ್ದಿಗಳು 90ರ ದಶಕವನ್ನು ಮತ್ತೊಮ್ಮೆ ನೆನಪಿಸುತ್ತಿರುವುದು ಸುಳ್ಳಲ್ಲ. 90ರ ದಶಕದಲ್ಲೂ ಹೀಗೆ ಕಾನೂನು-ಸುವ್ಯವಸ್ಥೆಯೆನ್ನುವುದು ಹಾಳು ಬಿದ್ದು ಹೋಗಿತ್ತು.ಆಗಲೂ ಹೀಗೆ ಉಗ್ರಗಾಮಿಗಳು ಕಾಶ್ಮೀರಿಗಳ ಮನೆಬಾಗಿಲು ತಟ್ಟುತ್ತಿದ್ದರು,ಅನಾಮತ್ತಾಗಿ ಮನೆಯಿಂದ ಎತ್ತಾಕಿಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿದ್ದರು.ಈಗ ಹೊತ್ತಿ ಉರಿಯುತ್ತಿರುವ ದಕ್ಷಿಣ ಕಾಶ್ಮೀರದ ಸ್ಥಿತಿ ಮತ್ತೆ 90ರ ದಶಕಕ್ಕೆ ಹೊರಳಿ ನಿಂತಂತಿದೆ.

ಇಬ್ಬರು ಪೋಲಿಸರ ಮನೆಗೆ ನುಗ್ಗಿ ಅವರನ್ನು ಹತ್ತಿರದ ಮಸೀದಿಗೆ ಹೊತ್ತೊಯ್ದು ಸರ್ಕಾರಿ ಹುದ್ದೆಗೆ ರಾಜೀನಾಮೇ ನೀಡುತ್ತಿದ್ದೇವೆ ಎಂದು ಹೇಳಿಸಲಾಯಿತು.ಅವರ ಮನೆ ಮಂದಿಗೆಲ್ಲ ಬೆದರಿಸಿ,ನಿಮ್ಮವರು ಸರ್ಕಾರದ ಪರ ನಿಂತರೆ ಸುಮ್ಮನಿರುವುದಿಲ್ಲ ಎಂದಿದ್ದರು ಉಗ್ರರು.ಅದಾದ ನಂತರ ಇಲಾಖೆಯ ವತಿಯಿಂದಲೇ ಮುಂಜಾಗ್ರತ ಕ್ರಮವಾಗಿ ದಕ್ಷಿಣ ಕಾಶ್ಮೀರದ ಪೋಲಿಸರು ತಮ್ಮ ತಮ್ಮ ಮನೆಗೆ ಹೋಗುವುದು ಅಪಾಯಕಾರಿ ಎಂಬ ಸಂದೇಶ ನೀಡಿತು! ಖುದ್ದು ಪೋಲಿಸ್ ಇಲಾಖೆಯೇ ಪೋಲಿಸರಿಗೆ ಉಗ್ರರಿಂದ ಪ್ರಾಣಭಯವಿದೆ ಎಂಬ ಸಂದೇಶ ನೀಡುತ್ತದೆಯೆಂದರೇ ಪರಿಸ್ಥಿತಿ ಎಷ್ಟು ಹದಗೆಟ್ಟಿರಬೇಡ. ಜಮ್ಮುಕಾಶ್ಮೀರ ಬ್ಯಾಂಕಿಗೆ ಹಣ ಕೊಂಡೊಯ್ಯುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ 5 ಪೋಲಿಸರು,ಇಬ್ಬರು ನಾಗರೀಕರನ್ನು ಕೊಂದ ಘಟನೆ ನಿಮಗೆ ನೆನಪಿರಬೇಕಲ್ಲ. ಅದಾದ ನಂತರ ಜಮ್ಮುಕಾಶ್ಮೀರ ಸರ್ಕಾರ ದಕ್ಷಿಣ ಕಾಶ್ಮೀರ ಭಾಗದ ಬ್ಯಾಂಕುಗಳಿಗೊಂದು ಸಂದೇಶ ಕಳುಹಿಸಿತು.ಭದ್ರತೆ ಒದಗಿಸುತ್ತೇವೆ ಎನ್ನುವ ಸಂದೇಶವಲ್ಲ,ಸರಿ ಸುಮಾರು 40 ಜಾಗಗಳಲ್ಲಿ ದರೋಡೆಯಾಗಬಹುದಾದ ಕಾರಣದಿಂದಾಗಿ ಯಾವುದೇ ರೀತಿಯ ನಗದು ವ್ಯವಹಾರಗಳನ್ನು ಮಾಡದಿರುವಂತೆ ಎಚ್ಚರವಹಿಸಿ ಎಂಬ ಸಂದೇಶವದು!

90ರ ದಶಕದಲ್ಲಿದ್ದ ಫಾರೂಕ್ ಅಬ್ದುಲ್ಲಾ-ಕಾಂಗ್ರೆಸ್ ಸರ್ಕಾರ ಸಮಯದ ಕಾನೂನು-ಸುವ್ಯವಸ್ಥೆಯೇ ಈಗಿನ ಪಿಡಿಪಿ-ಬಿಜೆಪಿ ಕಾಲದಲ್ಲಿ ಪುನಾರವರ್ತನೆಯಾಗುತ್ತಿದೆಯೇ? ಮೋದಿಯವರನ್ನು ಟೀಕಿಸಬೇಕಾಗುತ್ತದೆಂದು ನಾವು ಈ ಪ್ರಶ್ನೆ ಕೇಳದೆ ಉಳಿದುಕೊಳ್ಳುವುದು ಹಿಪೋಕ್ರೆಸಿಯಾದೀತು. 90ರ ದಶಕದಲ್ಲೂ ಫಾರೂಕ್ ಅಬ್ದುಲ್ಲಾನ ನರಿಬುದ್ಧಿಯಿಂದ ಭಾರತದಿಂದ ಕೈಜಾರಲು ಶುರುವಾಗಿದ್ದ ದಿನಗಳವು.ಕೈ ಜಾರಲು ಬೇಕಾಗಿದ್ದ ಎಲ್ಲಾ ಮನೆಹಾಳು ಕೆಲಸಗಳನ್ನು ಮಾಡಿದ್ದ ಫಾರೂಕ್ ತನ್ನ ತಲೆಯ ಮೇಲೋಂದು ಕಳಂಕ ಬಾರದಿರಲಿ ಎನ್ನುವಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಓಡಿಹೋಗಿದ್ದ ದಿನಗಳವು.ಕೇಂದ್ರದ ವಿ.ಪಿ ಸಿಂಗ್ ಸರ್ಕಾರಕ್ಕೆ ಆಗ ಆಪದ್ಬಾಂವನಂತೆ ಕಾಣಿಸಿದ ವ್ಯಕ್ತಿ ಜಗಮೋಹನ್ ಮಲ್ಹೋತ್ರಾ.

ತುರ್ಕ್ ಮನ್ ಗೇಟ್!

ದೇಶದ ರಾಜಧಾನಿಯಲ್ಲಿದ್ದ ಆ ಜಾಗವನ್ನು ಮಿನಿ ಪಾಕಿಸ್ತಾನವೆಂದು ಕರೆಯಲಾಗುತ್ತಿತ್ತು.ಸ್ಲಂಗಳಿಂದ ತುಂಬಿ ಹೋಗಿದ್ದ ಈ ಜಾಗದ ಒತ್ತುವರಿ ತೆರವು ಮಾಡುವ ಕೆಲಸವನ್ನು ದಿಟ್ಟತನದಿಂದ ಕೈಗೊಂಡಿದ್ದವರು ಆಗ ದೆಹಲಿ ಡೆವಲಪ್ಮೆಂಟ್ ಅಥಾರಿಟಿಯ ವೈಸ್ ಚೇರ್ಮನ್ ಆಗಿದ್ದ ಜಗಮೋಹನ್.ಈ ಘಟನೆ ನಡೆದಿದ್ದು ಎಮರ್ಜೆನ್ಸಿಯ ದಿನಗಳಲ್ಲಿ.ಕೆಲಸದ ವಿಷಯದಲ್ಲಿ ಯಾವುದೇ ರಾಜಿಗೂ ಬಗ್ಗದ ಮನುಷ್ಯ ಜಗಮೋಹನ್.ವಾಜಪೇಯಿಯವರ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಯಲ್ಲಿದ್ದಾಗಲೂ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿಸುತ್ತ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದವರು. ಯಾರೆಷ್ಟೇ ಕೆಂಗಣ್ಣು ಬೀರಿದರೂ ಕಾನೂನಿನ ಪ್ರಕಾರ ಮಾಡಬೇಕಾದ್ದನ್ನು ಮಾಡಿಯೇ ತೀರುತ್ತಿದ್ದ ಗಟ್ಟಿಗರು.

1984 ರಿಂದ 89ರವರೆಗೆ ಜಮ್ಮುಕಾಶ್ಮೀರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.ರಾಜ್ಯಪಾಲರಾಗಿದ್ದಾಗ ಕಾಲದಲ್ಲಿ ಬಡ ಕಾಶ್ಮೀರಿಗಳಿಗೆ ರಾಜಭವನದ ಬಾಗಿಲು ಸದಾ ತೆರೆದಿರುತಿತ್ತು.ಪಾಕಿಸ್ತಾನದ ಪ್ರಧಾನಿ,ಸಚಿವರು ನಮ್ಮ ದೇಶದ ಪ್ರಧಾನಿ,ಸಚಿವರ ಬಗ್ಗೆ ಕಮೆಂಟು ಮಾಡುವುದು ವಿಶೇಷವೇನೂ ಅಲ್ಲ.ಆದರೆ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಕಣ್ಣು ರಾಜ್ಯಪಾಲರಾಗಿದ್ದ ಜಗಮೋಹನ್ ಮೇಲೆ ಬಿದ್ದಿತ್ತು. “ಜಗ್ ಜಗ್ ಮೋಹನ್ ಕೋ ಬಾಗ್ ಬಾಗ್ ಮೋಹನ್ ಕರ್ ದೇಂಗೇ” ಎಂದಿದ್ದರು ಬೆನಜಿರ್ ಎಂದರೆ ಈ ವ್ಯಕ್ತಿ ಪಾಕಿಗಳ ಪಾಲಿಗೆ ಯಾವಪರಿ ತಲೆ ನೋವಾಗಿದ್ದಿರಬಹುದು? ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎನ್ನುವಂತೆ ಕಾಶ್ಮೀರ ವಿಷಯದಲ್ಲಿ ತನ್ನ ಅಜ್ಜ ನೆಹರೂವಿನ ದ್ವೇಷಪೂರಿತ ರಾಜಕೀಯ ನಡೆ ಮುಂದುವರೆಸಿದ ರಾಜೀವ್ ಗಾಂಧಿ,1989ರ ಜುಲೈ ತಿಂಗಳಿನಲ್ಲಿ ಕಣಿವೆಯ ರಾಜ್ಯಪಾಲ ಹುದ್ದೆಯಿಂದ ಜಗಮೋಹನ್ ಅವರನ್ನು ಹಿಂದೆ ಕರೆಸಿಕೊಂಡಿದ್ದರು.

ಅವರು ಹಿಂದೆ ಬಂದು ಆರೇ-ಆರು ತಿಂಗಳಿನ ಅಂತರದಲ್ಲಿ ಶ್ರೀಮಾನ್ ಫಾರೂಕ್ ಅಬ್ದುಲ್ಲಾ ಕಾಶ್ಮೀರವನ್ನು ಅದ್ಯಾವ ಪರಿ ಹದಗೆಡಿಸಿದ್ದರೆಂದರೇ, ಕಾಶ್ಮೀರ ಇನ್ನೇನು ಭಾರತದಿಂದ ಶಾಶ್ವತವಾಗಿ ಕೈ ತಪ್ಪುವುದರಲ್ಲಿತ್ತು, ಇಂತ ಸಮಯದಲ್ಲಿ ಪ್ರಧಾನಿಯಾಗಿದ್ದ ವಿ.ಪಿ ಸಿಂಗ್ ಅವರಿಗೆ ನೆನಪಾದ ಆಪದ್ಬಾಂಧವ ಜಗಮೋಹನ್ ಅವರೇ.1990ರ ಜನವರಿ ತಿಂಗಳ ನಡುರಾತ್ರಿಯಲ್ಲಿ ಜಗಮೋಹನ್ ಅವರಿಗೆ ಗೃಹಸಚಿವರಿಂದ ಕರೆಯೊಂದು ಬರುತ್ತದೆ. ಜಮ್ಮುಕಾಶ್ಮೀರ ರಾಜ್ಯ ಭಾರತದ ಕೈ ತಪ್ಪುತ್ತಿದೆ.ತಕ್ಷಣ ನೀವು ಅಲ್ಲಿನ ರಾಜ್ಯಪಾಲರಾಗಿ ಹೊರಡಬೇಕು ಎಂದು ಹೇಳಿ ಅದೇ ರಾತ್ರಿ ಅವರನ್ನು ಕಾಶ್ಮೀರಕ್ಕೆ ಕಳುಹಿಸಲಾಗುತ್ತದೆ.ಹಾಗೇ 1990ರ ಜನವರಿ 19ರಂದು ಶ್ರೀನಗರಕ್ಕೆ ಜಗಮೋಹನ್ ಅವರು ಬಂದು ಇಳಿಯದೇ ಇದ್ದಿದ್ದರೆ ಇವತ್ತಿಗೆ ಜಮ್ಮುಕಾಶ್ಮೀರವೆಂಬ ರಾಜ್ಯ ಬಹುಶಃ ಭಾರತದ ಭಾಗವಾಗಿ ಇರುತ್ತಿಲಿಲ್ಲವೆನೋ!? ಇವತ್ತು ಕಾಶ್ಮೀರ ಭಾರತದಲ್ಲಿಯೇ ಉಳಿದುಕೊಂಡಿರುವುದಕ್ಕೆ ಪ್ರಮುಖ ಕಾರಣ ಜಗಮೋಹನ್ ಎಂಬ ವ್ಯಕ್ತಿ, ಈ ದೇಶ ಅವರನ್ನು ಎಂದಿಗೂ ನೆನಪಲ್ಲಿಡಬೇಕು.

ಹೌದು. ಅವರು ಕಾಶ್ಮೀರಕ್ಕೆ ಬಂದಿಳಿದ ಜನವರಿ 19ನೇ ತಾರೀಖನ್ನು ಕಾಶ್ಮೀರಿ ಪಂಡಿತರೆಂದೂ ಮರೆಯಲು ಸಾಧ್ಯವಿಲ್ಲ.ಮಸೀದಿಗಳ ಲೌಡ್ ಸ್ಪೀಕರ್ರುಗಳು,ರಸ್ತೆಬದಿಯ,ಮನೆಯ ಹೊರಗಿನ ಗೋಡೆಗಳ ಭಿತ್ತಿ ಪ್ರತಗಳೆಲ್ಲ ಹೇಳಿದ್ದು ಒಂದೇ ಮಾತು ಕಾಫೀರರೆ ಕಾಶ್ಮೀರ ಬಿಟ್ಟು ತೊಲಗಿ ಇಲ್ಲವೇ ಸಾಯಿರಿ ಎಂದೇ.ತಲಾತಲಾಂತರದಿಂದ ಬದುಕಿಕಟ್ಟಿಕೊಂಡು ಊರನ್ನು ನಿಂತ ನಿಲುವಲ್ಲೇ ಬಿಟ್ಟು ಹೊರಡಿ ಎಂದರೆ ಹೇಗಾಗಬೇಡ? ಬಹಳಷ್ಟು ಜನರು ಹೊರಟರು.ಹೋಗಲು ಮನಸ್ಸಿಲ್ಲದವರು ಅಲ್ಲೇ ಉಳಿದರು.ಹಾಗೇ ಉಳಿದವರನ್ನು ಒಂದು ಕಾಲದ ನೆರೆಹೊರೆಯವರಾಗಿದ್ದರೇ ಈಗ ಕಾಶ್ಮೀರಿ ಮುಸ್ಲಿಮರಾಗಿ ಬದಲಾಗಿ ಉಗ್ರರಿಗೆ ಹಿಡಿದುಕೊಟ್ಟರು. ಹಾಡಹಗಲೇ,ನಟ್ಟನಡುರಸ್ತೆಗಳಲ್ಲಿ,ಮನೆಯೊಳಗೆ ನುಗ್ಗಿ ಪಂಡಿತರ ಹತ್ಯೆಗಳಾದವು. ಅಂತಹ ಭಯಾನಕ ರಾತ್ರಿಗಳಲ್ಲಿ ಜಗಮೋಹನ್ ಅವರ ಪೋನುಗಳು ಪದೇ ಪದೇ ಕಾಶ್ಮೀರಿ ಪಂಡಿತರ ಸಹಾಯ ಯಾಚನೆಯ ಕರೆಗಳಿಂದಲೇ ತುಂಬಿಹೋಗುತ್ತಿತ್ತೆಂದು ಮತ್ತು ಆ ವಿಷಮ ಪರಿಸ್ಥಿತಿಯಲ್ಲಿ ಕೈಯಲ್ಲಿ ಆದಷ್ಟು ಮಾಡಿದರೂ ಆ Ethnic Cleansing ಅನ್ನು ತಡೆಯಲಾಗದ ಅಸಹಾಯಕತೆಯ ಬಗ್ಗೆಯೂ ಜಗಮೋಹನ್ ತಮ್ಮ ಪುಸ್ತಕ ‘ದಿ ಫ್ರೋಜನ್ ಟರ್ಬ್ಯುಲೆನ್ಸ್ ಇನ್ ಕಾಶ್ಮೀರ್’ದಲ್ಲಿ ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ.

ಪ್ರತ್ಯೇಕತವಾದಿಗಳು,ಭಾರತ ವಿರೋಧಿ ಸೆಕ್ಯುಲರ್ರುಗಳು ಈ ಕಾಶ್ಮೀರಿ ಪಂಡಿತರ ಸಾಮೂಹಿಕ ಕಣಿವೆ ತೊರೆದ ಘಟನೆಯನ್ನು ಸರ್ಕಾರಿ ಪ್ರಾಯೋಜಿತವೆಂದು ಮುಖ್ಯವಾಗಿ ಇದರ ಹಿಂದೆ ಇದ್ದಿದ್ದು ಇದೇ ಜಗಮೋಹನ್ ಎಂದೂ ಈಗಲೂ ವಾದಿಸುತ್ತಾರೆಯೇ ಹೊರತು ಅನ್ಯ ಧರ್ಮ/ನಂಬಿಕೆಯ ಜನರನ್ನು ವಿರೋಧಿಸುವ ಆ ರಿಲಿಜಿನ್ನಿನ ಮೂಲ ಲಕ್ಷಣವನ್ನು ಶತ್ರು ರಾಷ್ಟ್ರ ಮತ್ತು ರಾಷ್ಟ್ರವಿರೋಧಿಗಳು ಬಳಸಿಕೊಂಡಿದ್ದೆಂದೂ ಅಪ್ಪಿತಪ್ಪಿಯೂ ಒಪ್ಪುವುದಿಲ್ಲ.ಹಾಗಿದ್ದರೆ ಜಗಮೋಹನ್ ಅವರೇ ಖುದ್ದು ಪಂಡಿತರನ್ನು ಹೊರಗೇಕೆ ಕಳುಹಿಸಿದರು ಎಂದು ಈ ವಾದ ಮಾಡುವವರನ್ನು ಕೇಳಿದರೆ, ಪಂಡಿತರ ನಂತರ ಉಳಿಯುವ ಮುಸ್ಲಿಮರನ್ನು ನಿವಾಳಿಸಿ ಬಿಸಾಡುವ ಇರಾದೆಯಿಂದಂತೆ! ಎಂತಹ ಕಾಗಕ್ಕ-ಗುಬ್ಬಕ್ಕ ಕತೆಯನ್ನೇ ಇವತ್ತಿಗೂ ಹೇಳಿಕೊಂಡು ಬರುತ್ತಿದ್ದಾರೆ ನೋಡಿ.ಸೆಕ್ಯುಲರ್ರುಗಳ ವಾದವೇ ನಿಜವಾಗಿದ್ದರೆ ಇವತ್ತಿಗೆ ಕಾಶ್ಮೀರದಲ್ಲಿ ಕಲ್ಲು ತೂರುವ ದ್ರೋಹಿಗಳೇ ಇರಬಾರದಿತ್ತಲ್ಲವೇ? ಈಗಲೂ ಇದ್ದಾರಲ್ಲ ಹೇಗೆ? Ofcourse ಅಂತದ್ದೊಂದು ಸ್ಥಿತಿಗೆ ಭಾರತ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲೇಬೇಕು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.ಜಮ್ಮುಕಾಶ್ಮೀರ ಸಮಸ್ಯೆಯೆನ್ನುವುದು ಕೇವಲ ಭಾರತ-ಪಾಕಿಸ್ತಾನದ ನಡುವಿನ ಸಮಸ್ಯೆಯಲ್ಲ.ಅದು ಭಾರತ ಸರ್ಕಾರ ತನ್ನ ರಾಜ್ಯವೊಂದರ ಕಾನೂನು ಸುವ್ಯವಸ್ಥೆಯನ್ನು ಕಾಪಡಲಾಗದ Stateನ ಸಮಸ್ಯೆಯೂ ಹೌದು. ಇಲ್ಲಿ ಕೇವಲ ಮೂಲಭೂತವಾದಿ ಇಸ್ಲಾಂ ಮಾತ್ರವೇ ಸಮಸ್ಯೆಯ ಮೂಲವಲ್ಲ. ರಾಜ್ಯ ಸರ್ಕಾರದ ನೀತಿಗಳೂ ಸಹ ಪ್ರಮುಖ ಕಾರಣವಾಗಿವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ಇತ್ತೀಚೆಗೆ ಗೆಳೆಯರೊಬ್ಬರ ಮನೆಗೆ ಹೋಗಿದ್ದೆ.ಗೆಳೆಯನ ತಂದೆ,ಯಾರ ಬಗ್ಗೆ ಬೇಕಿದ್ದರೂ ಟೀಕೆ ಮಾಡು ಮಗ ಆದರೆ ಮೋದಿಯ ಬಗ್ಗೆ ಬೇಡ ಎಂದಿದ್ದರು.ನಿಜ.ಮೋದಿಯವರನ್ನು ಅವರ ಸರ್ಕಾರದ ನಡೆಯನ್ನು ಪ್ರಶ್ನಿಸುವುದು ಹಲವು ಜನರಿಗೆ ಇಷ್ಟವಾಗಲಿಕ್ಕಿಲ್ಲ.ಆದರೆ,ಜಮ್ಮುಕಾಶ್ಮೀರದ ವಿಷಯದಲ್ಲಿ ಮೋದಿ ಸರ್ಕಾರದ ನಡೆಯನ್ನು ಪ್ರಶ್ನಿಸಲೇಬೇಕಾಗುತ್ತದೆ. 90ರ ದಶಕದಲ್ಲಿ ಫಾರೂಕ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ಸ್ ಜೋಡಿಯ ಸರ್ಕಾರದ ಸಮಯದಲ್ಲಿ ಹೇಗೆ ಪ್ರತ್ಯೇಕತಾವಾದಿಗಳು ಮತ್ತು ಉಗ್ರರು,ಉಗ್ರಗುಂಪುಗಳು ಕಣಿವೆಯಲ್ಲಿ ರಾಜಾರೋಷವಾಗಿ ಹಿಂಸಾಚಾರ ನಡೆಸುತ್ತಿದ್ದವೋ,ಈಗಿನ ಪಿಡಿಪಿ-ಬಿಜೆಪಿ ಸರ್ಕಾರದ ಅವಧಿಯೂ ಅಂತದ್ದೇ ವಿದ್ಯಾಮಾನಗಳಿಗೆ ಸಾಕ್ಷಿಯಾಗುವತ್ತ ಹೆಜ್ಜೆಯಿಟ್ಟಿರುವುದನ್ನು ನಿರಾಕರಿಸುವುದೇಗೆ?

ಪ್ರತ್ಯೇಕತಾವಾದಿಗಳಿಡೆಗೆ ಮೃಧು ಧೋರಣೆ ಹೊಂದಿರುವ ಪಿಡಿಪಿ ಪಕ್ಷ, ಕಲ್ಲು ತೂರುವ ದ್ರೋಹಿಗಳಿಗೆ ಬುದ್ಧಿ ಹೇಳೋಣ ಎನ್ನುತ್ತಿದೆ.ಇನ್ನೊಂದೆಡೆ ಪೆಲೆಟ್ ಬುಲೆಟ್ಟುಗಳನ್ನು ಬಳಸದಂತೆ ಸರ್ಕಾರ ಮತ್ತು ವ್ಯವಸ್ಥೆ ನಮ್ಮ ಯೋಧರ ಕೈ ಕಟ್ಟಿ ಹಾಕುತ್ತಿದೆ.ಇತ್ತೀಚೆಗೆ ನಡೆದ ಉಪಚುನಾವಣೆಯ ಸಂದರ್ಭದಲ್ಲಂತೂ ನಿರಾಯುಧರಾಗಿದ್ದ CRPF ಯೋಧರ ಮೇಲೆ ಹಲ್ಲೆ ಅಲ್ಲಿನ ದ್ರೋಹಿಗಳು ನಡೆಸುತ್ತಿದ್ದ ಹಲ್ಲೆ ಮತ್ತು ಆ ಹಲ್ಲೆಯನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದ ಆ ಯೋಧರನ್ನು ನೋಡಿದರೆ ನಮ್ಮ ರಕ್ತಕುದಿಯುವುದಿಲ್ಲವೇ? ಯೋಧರ ಕೈಕಟ್ಟಿ ಹಾಕಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳೇ ತಾನೇ? ಅದನ್ನೇಕೆ ನಾವು ಪ್ರಶ್ನೆ ಮಾಡುತ್ತಿಲ್ಲ.ಒಂದು ವೇಳೆ ಇದೇ ಘಟನೆ ಯುಪಿಎ ಕಾಲದಲ್ಲಿ ನಡೆದಿದ್ದರೇ!? ಸರ್ಕಾರಗಳು ಬರುತ್ತವೆ ಹೋಗುತ್ತವೆ.ದೇಶ,ದೇಶ ಕಾಯುವ ಯೋಧರು ಇದ್ದೇ ಇರುತ್ತಾರೆ ಅವರ ಆತ್ಮಗೌರವ ಕಾಪಾಡುವುದು ಪ್ರತಿ ಸರ್ಕಾರ ಹೊಣೆಗಾರಿಕೆ ತಾನೇ. ಮೇ 2ನೇ ತಾರೀಖು ಪಾಕಿಸೇನೆ ನಮ್ಮ ಇಬ್ಬರು ಯೋಧರ ತಲೆಕಡಿಯಿತಲ್ಲ,ಅದರ ಮರು ದಿನವೇ ‘ಭಾರತೀಯ ಸೇನೆಯ ಪ್ರತೀಕಾರ,ಹತ್ತು ಮಂದಿಯ ಹತ್ಯೆ,ಸೇನಾ ಬಂಕರ್ರುಗಳ ನಾಶ’ ಅಂತೆಲ್ಲಾ ಸಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಲಾಯಿತು. ಹಲವಾರು ಗೆಳೆಯರು, ನೋಡಿ ನಮ್ ಸರ್ಕಾರದ ಖದರ್ರು,ಪವರ್ರು ಅಂತೆಲ್ಲ ಖುಷಿ ಪಟ್ಟರಪ್ಪ.ಆದರೆ,ಅಂತಹದ್ದೊಂದು ಸುದ್ದಿಯನ್ನು ಸೇನೆಯೂ ಧೃಡಪಡಿಸಲಿಲ್ಲ,ಸುದ್ದಿ ಮಾಧ್ಯಮಗಳೂ ಬಿತ್ತರಿಸಲಿಲ್ಲ.ಆ ಸುದ್ದಿ ಹಿನ್ನೆಲೆಗೆ ಸರಿದಂತೆ ಈಗ ಬಂಕರ್ರುಗಳನ್ನು ಸೇನೆ ನಾಶಮಾಡುತ್ತಿರುವ ವಿಡೀಯೋವೊಂದು ಮುಂದೆ ಬಂದಿದೆ ಸರ್ಕಾರಕ್ಕೆ ಜೈಕಾರ ಮುಂದುವರೆದಿದೆ. ಒಳ್ಳೆಯದು ಬಂದಾಗ ಬೆನ್ನು ತಟ್ಟೋಣ ಆದರೆ,ಕೆಟ್ಟ ನಡೆಯನ್ನು ಪ್ರಶ್ನಿಸುವುದು ಬೇಡವೇ?

ಖುದ್ದು ಪೋಲಿಸ್ ಇಲಾಖೆ,ಪೋಲಿಸರಿಗೆ ಮನೆಗೆ ತೆರಳಬೇಡಿ ಅಪಾಯವಿದೆ ಎನ್ನುತ್ತದೆ.ಸರ್ಕಾರವೇ ಬ್ಯಾಂಕುಗಳಲ್ಲಿ ಹಣವಿಡಬೇಡಿ ದರೋಡೆಯಾಗುತ್ತದೆ ಎನ್ನುತ್ತದೆ.ಕಲ್ಲುತೂರುವವರು ನಮ್ಮ ಮಕ್ಕಳೇ ಅವರತ್ತ ಪೆಲೆಟ್ ಬುಲೆಟ್ ಬಳಸಬೇಡಿ ಎಂದು ಯೋಧರ ಕೈ ಕಟ್ಟಿಹಾಕಲಾಗುತ್ತದೆ.ಉಗ್ರನೊಬ್ಬ ಸತ್ತರೆ ನಾಯಿ-ನರಿ ಪಾಲು ಮಾಡುವುದು ಬಿಟ್ಟು ಆತನನ್ನು ಮಹಾಶೂರನೇನೋ ಎನ್ನುವಂತೆ ಶವಯಾತ್ರೆ ಮಾಡಲು ಬಿಟ್ಟು,ಅವರ ಶವಯಾತ್ರೆಗೆ ಸಿಗುವ ಪ್ರಚಾರದಿಂದಾಗಿ ಇನ್ನೊಂದಿಷ್ಟು ಯುವಕರು ಶಸ್ತ್ರಾಸ್ತ್ರ ಎತ್ತಿಕೊಳ್ಳುವಂತೆ ಈ ಸರ್ಕಾರ ಮಾಡುತ್ತದೆ. ಬರ್ಹಾನ್ ವಾನಿಯ ಶವ ಯಾತ್ರೆಯಿಂದಲಾದರೂ ಈ ಸರ್ಕಾರ ಬುದ್ಧಿ ಕಲಿಯಲಿಲ್ಲ. ಅವನ ನಂತರ ಸತ್ತ ಉಗ್ರರರ ಶವ ಯಾತ್ರೆ ಸಾವಿರಾರು ಜನರ ನಡುವೆ ನಿರ್ವಿಘ್ನವಾಗಿ ನಡೆಯುತ್ತಲೇ ಇದೆ.ಶವಯಾತ್ರೆಯಲ್ಲಿ ಪ್ರತ್ಯಕ್ಷರಾಗುವ ಉಗ್ರರು ಗಾಳಿಯಲ್ಲಿ ಗುಂಡುಹಾರಿಸುತ್ತಾರೆ,ದೇಶದ್ರೋಹಿ ಘೋಷಣೆಗಳೂ ಆಗುತ್ತವೆ.ಸರ್ಕಾರ ತೆಪ್ಪಗಿರುತ್ತದೆ.

ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಮ್ಮುಕಾಶ್ಮೀರ ರಾಜ್ಯಕ್ಕೆ ವಿಶೇಷ ಪ್ಯಾಕೇಜುಗಳನ್ನು ಕೊಟ್ಟಿದೆ,ಪ್ರವಾಹದ ಸಮಯದಲ್ಲಿ ಹೆಗಲು ಕೊಟ್ಟು ನಿಂತಿದೆ,ಇತ್ತೀಚೆಗಷ್ಟೇ ಚಿನಾನಿ-ನಶ್ರಿಯೆಂಬ ದೇಶದ ಅತಿ ಉದ್ದದ ಟನೆಲ್ ಮಾರ್ಗವನ್ನು ಮೋದಿಯವರು ಉದ್ಘಾಟಿಸಿದರು.ಐಫೆಲ್ ಟವರಿಗಿಂತಲೂ ಎತ್ತರದ ಸೇತುವೆ ನಿರ್ಮಾಣದ ಯೋಜನೆಯೂ ಕೈಯಲ್ಲಿದೆ.ಫೈನ್! ಇವೆಲ್ಲ ಅಭಿವೃದ್ಧಿ ಕಾರ್ಯಗಳೂ ಆಗಲಿ.ಆದರೆ,ಶಾಂತಿ-ಸುವ್ಯವಸ್ಥೆಯಿಲ್ಲದ ಅಭಿವೃದ್ಧಿಯನ್ನು ಕಟ್ಟಿಕೊಂಡು ಏನು ಮಾಡುವುದು?

ಈ ಹಿಂದಿನ ಸರ್ಕಾರಗಳ ಭ್ರಷ್ಟಚಾರ,ನಿರುದ್ಯೋಗದ ಸಮಸ್ಯೆಯಿಂದಾಗಿ ಕಾಶ್ಮೀರಿ ಯುವಕರು ಕಲ್ಲನೆತ್ತಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು.ಈಗ ಹೊಸ ಸರ್ಕಾರ ಬಂದ ನಂತರವೂ ಅದು ಮುಂದುವರೆದಿದೆ ಎಂದರೇ, ಈಗಲೂ ಸರ್ಕಾರ ಕಲ್ಲು ಬೀಸುವ ಕೈಗಳಿಗೆ ಉದ್ಯೋಗ ಕೊಡುತ್ತಿಲ್ಲ ಅಥವಾ ಕಲ್ಲು ಬೀಸುವುದರಿಂದ ಸುಲಭವಾಗಿ ಸಿಗುವಷ್ಟು ಹಣ,ಮೋಜನ್ನು ಆ ಯುವಕರಿಗೆ ಅಭ್ಯಾಸವಾಗಿ ಹೋಗಿದೆ.ರಿಪಬ್ಲಿಕ್ ಟೀವಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಎರಡನೇ ವಾದಕ್ಕೆ ಪುಷ್ಟಿ ನೀಡುವ ಅಂಶಗಳಿವೆ. ಲಷ್ಕರ್ ಉಗ್ರ ಸಂಘಟನೆಯ ಸೋಷಿಯಲ್ ಮೀಡಿಯಾ ಸೆಲ್ಲಿನೊಳಗೆ ತೂರಿಕೊಂಡ ಚಾನೆಲ್ಲಿನ ವರದಿಗಾರರು ತಂದಿರುವ ವಿಡಿಯೋ ತುಣುಕುಗಳಲ್ಲಿ, ಗಂಟೆಗಟ್ಟಲೆ ಕಲ್ಲು ತೂರುವ ಹುಡುಗರಿಗೆ ಸಿಗುವ ಸಾವಿರಗಟ್ಟಲೆ ಹಣದ ಬಗ್ಗೆ, ಒಮ್ಮೊಮ್ಮೆ ಸುಮ್ಮನೇ ಮೋಜಿಗಾಗಿ ಕಲ್ಲು ತೂರಾಟ ನಡೆಸುವುದನ್ನು,ಸುಳ್ಳು-ವದಂತಿಗಳ ಮೂಲಕ ಅಶಾಂತಿ ಹರಡುವ, ಯಾವುದೇ ಘಟನೆ ನಡೆದಿದೆ ಎಂದು ತಿಳಿಯದೆಯೂ ಜೊತೆ ಸೇರಿಕೊಂದು ಕಲ್ಲು ತೂರುವಂತಹವರೂ ಇದ್ದಾರೆಂದು ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ. ಹಾಗೇ ಹೇಳಿಕೊಂಡು ನಮ್ಮದೇ ದೇಶದಲ್ಲಿ ನೆಮ್ಮದಿಯಾಗಿ ಓಡಾಡಿಕೊಂಡಿದ್ದಾರೆ.ಸಮ್ಮಿಶ್ರ ಸರ್ಕಾರದ ಚುಂಗುಹಿಡಿದ ಬಿಜೆಪಿ ತೆಪ್ಪಗೆ ಕುಳಿತಿದೆ.ಪ್ರತ್ಯೇಕತವಾದಿಗಳು,ಉಗ್ರರು,ಉಗ್ರರ ಬೆಂಬಲಿಗರು,ಕಲ್ಲು ತೂರಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕಗೊಳ್ಳದೇ ಹೀಗೆ ಅತಿ ಸುಭಗರಂತೆ ವರ್ತಿಸುತ್ತ ಕುಳಿತರೆ ಕಾಶ್ಮೀರ ಮತ್ತೆ ನಮ್ಮ ಕೈ ತಪ್ಪುವ ದಿನಗಳೇನೂ ದೂರವಿದ್ದಂತೆ ಕಾಣಿಸುತ್ತಿಲ್ಲ.

ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಇತ್ತೀಚೆಗೆ ನರೇಂದ್ರ ಮೋದಿಯವರೊಬ್ಬರಿಂದಲೇ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದಿದ್ದರು.ಇರಬಹುದು ಮೋದಿಯವರಂತಹ ಗಟ್ಟಿಗುಂಡಿಗೆಯ ನಾಯಕನ ಕಾಲದಲ್ಲಿ ಅಲ್ಲದೇ ಇನ್ಯಾರ ಕಾಲದಲ್ಲಿ ಈ ಸಮಸ್ಯೆ ಪರಿಹಾರವಾದೀತು.ಆದರೆ,ನನಗಂತೂ ಸದ್ಯದ ಜಮ್ಮುಕಾಶ್ಮೀರ ಸಮಸ್ಯೆಯ ಪರಿಹಾರದ ಮಾರ್ಗವಾಗಿ ಕಾಣುವುದು ಜಗಮೋಹನ್ ಅವರೇ ಹೊರತು ಮೋದಿಯವರಲ್ಲ.ಕಳೆದ ವರ್ಷ ಮೋದಿಯವರ ಸರ್ಕಾರ ಜಗಮೋಹನ್ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿದಾಗ,ಕಾಶ್ಮೀರದ ಆಜಾದಿಗಾಗಿ ಗಂಟಲು ಹರಿದುಕೊಳ್ಳುವವರೆಲ್ಲ ಸೇರಿಕೊಂಡು #JagmohanTheMurderer ಎಂಬ ಹ್ಯಾಷ್ ಟ್ಯಾಗಿನಡಿಯಲ್ಲಿ ಬೊಬ್ಬೆ ಹೊಡೆದರು.ಕಾಶ್ಮೀರದ ರಾಜ್ಯಪಾಲ ಹುದ್ದೆಯಿಂದಿಳಿದು 16 ವರ್ಷಗಳ ಬಳಿಕವೂ ದೇಶದ್ರೋಹಿಗಳ ನೆನಪಿನಲ್ಲಿ ಉಳಿದಿರಬೇಕೆಂದರೇ ಪ್ರತ್ಯೇಕತಾವಾದಿಗಳು ಕನಸಿನಲ್ಲೂ ಮರೆಯದಂತಹ ಕಠಿಣಕ್ರಮಗಳೇ ಕಾರಣವೆಂದು ಪ್ರತ್ಯೇಕವಾಗಿಯೇನೂ ಹೇಳಬೇಕಾಗಿಲ್ಲ.

ಜನವರಿ 26,1990ರಂದು ಜಮ್ಮುಕಾಶ್ಮೀರ ರಾಜ್ಯವನ್ನು ಭಾರತದ ಒಕ್ಕೂಟದಿಂದ ಪ್ರತ್ಯೇಕಗೊಳಿಸಿ ಆಜಾದ್ ಕಾಶ್ಮೀರವನ್ನು ಮಾಡಿಬಿಡುವಂತಹ ಅನಾಹುತಕಾರಿ ಯೋಜನೆಯೊಂದು ಇನ್ನೇನೂ ಸಫಲವಾಗಿಬಿಟ್ಟಿತು ಎನ್ನುವಾಗ,ತನ್ನ ಅಡ್ಮಿನಿಸ್ಟ್ರೇಷನ್ ಸ್ಕಿಲ್ ಮತ್ತು ಕಠಿಣ ನೀತಿಯಿಂದಾಗಿ ಆ ಯೋಜನೆಯನ್ನು ವಿಫಲಗೊಳಿಸಿದವರು ಜಗಮೋಹನ್.ಈಗ 90 ವರ್ಷದವರಾಗಿರುವ ಜಗಮೋಹನ್ ಅವರಂತೂ ಮತ್ತೆ ಜಮ್ಮುಕಾಶ್ಮೀರಕ್ಕೆ ಕಾಲಿಡಲಾರರು.ಆದರೆ ಮೋದಿ ಸರ್ಕಾರ ಈಗ ಜಗಮೋಹನ್ ಅವರಂತೆ ನಡೆದುಕೊಳ್ಳದೇ ಇದ್ದರೇ ಜಮ್ಮುಕಾಶ್ಮೀರ ಸಮಸ್ಯೆ ಬಿಗಡಾಯಿಸುವುದಂತು ಖಚಿತ.

ಜಮ್ಮುಕಾಶ್ಮೀರ ರಾಜ್ಯ ಭಾರತದ ಒಕ್ಕೂಟಕ್ಕೆ ಸೇರಿದ ಐತಿಹಾಸಿಕ ಘಟನೆಗಳನ್ನು ಮತ್ತೆ ಮತ್ತೆ ಉಲ್ಲೇಖಿಸಬೇಕಿಲ್ಲ. ಅವೆಲ್ಲಕ್ಕೂ ಮಿಗಿಲಾಗಿ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಸಾಮರಿಕವಾಗಿ, ವ್ಯವಹಾರಿಕವಾಗಿ, ರಕ್ಷಣೆಯ ದೃಷ್ಟಿಯಿಂದ ಜಮ್ಮುಕಾಶ್ಮೀರ ರಾಜ್ಯ ನಮ್ಮ ದೇಶದ ಭಾಗವಾಗಿ ಇರಲೇಬೇಕು ಎನ್ನುವುದನ್ನು ಅಷ್ಟೇ.ಉಳಿದೆಲ್ಲ ಮಾನವ ಹಕ್ಕು, ಸ್ವಾತಂತ್ರ್ಯದ ಕೂಗುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳಬೇಕಿಲ್ಲ.ಸಂಪೂರ್ಣ ಜಮ್ಮುಕಾಶ್ಮೀರ ನಮ್ಮ ಕೈಸೇರಿದರೇ (ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ) ಮಧ್ಯ ಏಷ್ಯಾದ ಬಾಗಿಲು ನಮಗೆ ತೆರೆದುಕೊಳ್ಳುತ್ತದೆ.ಆ ದೇಶಗಳೊಂದಿಗೆ ನಮ್ಮ ಸಂಪರ್ಕಕ್ಕೆ ಪಾಕಿಸ್ತಾನದ ಮರ್ಜಿಯೂ ಬೇಕಾಗುವುದಿಲ್ಲ.ಗಿಲ್ಗಿಟ್-ಬಾಲ್ಟಿಸ್ತಾನ ನಮ್ಮ ಸುಪರ್ದಿಗೆ ಬಂದರೆ ಚೀನಾ-ಪಾಕಿಸ್ತಾನದ  ರಸ್ತೆ ಮಾರ್ಗದ ಕೊಂಡಿ ಕಳಚಿಕೊಳ್ಳುತ್ತದೆ. ಇವೆಲ್ಲ ಆಗಬೇಕೆಂದರೆ, ಮೊದಲಿಗೆ ನಮ್ಮಲ್ಲಿರುವ ಜಮ್ಮು-ಕಾಶ್ಮೀರ ರಾಜ್ಯವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.ಆ ನಂತರ ಉಳಿದ ಕನಸು ಕಾಣಬಹುದಷ್ಟೇ.

ನರೇಂದ್ರ ಮೋದಿಯವರ ಸರ್ಕಾರ ಈಗಲಾದರೂ ತನ್ನ ಜಮ್ಮುಕಾಶ್ಮೀರದ ಕುರಿತ ದ್ವಂಧ್ವ ನೀತಿಯನ್ನು ಬದಲಾಯಿಸಿಕೊಂಡು ಜಗಮೋಹನ್ ಅವರನ್ನೊಮ್ಮೆ ನೆನೆಸಿಕೊಳ್ಳಲಿ.ಜಗತ್ತು ಗುರುತಿಸುವುದು ಶಕ್ತಿಯನ್ನೇ ಹೊರತು ಬಲಹೀನತೆಯನ್ನೆಲ್ಲ.ಟಿಬೇಟನ್ನು ಆಕ್ರಮಿಸಿಕೊಂಡ ಚೀನಾ,ಈಗ ಹೇಗೆ ಜಗತ್ತಿನಾದ್ಯಂತ ತನ್ನ “ಒನ್ ಚೀನಾ ಪಾಲಿಸಿ”ಗೆ ಎಲ್ಲರೂ ಬದ್ಧರಾಗಿರುವಂತೆ ಮಾಡಿದೆ ನೋಡಿ. ಖುದ್ಧು ಅಮೇರಿಕಾದ ಅಧ್ಯಕ್ಷ ಟ್ರಂಪ್ ಸಹ ತೈವಾನ್ ಅನ್ನು ಕೆದಕಲು ಹೋಗಿ ಕಡೆಗೆ ಚೀನಾಗೆ ಜೈ ಎಂದರು.ಆದರೆ ಜಮ್ಮುಕಾಶ್ಮೀರದ ವಿಷಯದಲ್ಲಿ ಭಾರತದ ಪರಿಸ್ಥಿತಿ ಹೇಗಿದೆ? ಮೊನ್ನೆ ಮೊನ್ನೆ ಟರ್ಕಿಯ ಅಧ್ಯಕ್ಷ ಕಾಶ್ಮೀರಕ್ಕಾಗಿ ಸಂಧಾನ ನಡೆಸಲು ಸಿದ್ದ ಎನ್ನುವ ಅಹಂಕಾರ ತೋರಿದರು.ನಿನ್ನೆಯಷ್ಟೇ ವಿಶ್ವಸಂಸ್ಥೆ ಕಣಿವೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿರುವ ನಿರ್ಬಂಧ ತೆಗೆಯಿರಿ ಎಂದಿದೆ. ಸಮಸ್ಯೆಯೆಡೆಗೆ ಸರ್ಕಾರವೊಂದು ಮೃಧು ಧೋರಣೆ ತೋರಿದಾಗ ನಾಯಿ-ನರಿಗಳೆಲ್ಲ ಊಳಿಡುವುದು ಸಹಜವೇ.ತೊಡೆತಟ್ಟಿ ನಿಂತು ಕಠಿಣವಾಗಿ ವರ್ತಿಸಿದರೆ ಇವೆಲ್ಲ ಬಿಲ ಸೇರಿಕೊಳ್ಳುತ್ತವೆ. ನರೇಂದ್ರ ಮೋದಿ ಸರ್ಕಾರದ ಪ್ರಸ್ತುತ ನೀತಿ ನಾಯಿ-ನರಿಗಳಿಗೂ ಊಳಿಡಲು ಅವಕಾಶ ಕೊಟ್ಟಿದೆ.ಅದಕ್ಕೆ ಹೇಳಿದ್ದು ಜಮ್ಮುಕಾಶ್ಮೀರಕ್ಕೆ ಬೇಕಿರುವುದು ಜಗಮೋಹನ್ ಅವರ ಕಠಿಣ ನೀತಿಯೇ ಹೊರತು ಮೋದಿಯವರ ಮೃಧು ಧೋರಣೆಯಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments