ವಿಷಯದ ವಿವರಗಳಿಗೆ ದಾಟಿರಿ

ಮೇ 20, 2017

4

ಬಾಹುಬಲಿ ಹಾಗೂ ಬುದ್ಧಿಜೀವಿಗಳು

‍ನಿಲುಮೆ ಮೂಲಕ

ವಿನಾಯಕ ಹಂಪಿಹೊಳಿ

ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ-೨ ಚಿತ್ರವು ಉಳಿದೆಲ್ಲ ಚಿತ್ರಗಳ ದಾಖಲೆಗಳನ್ನೆಲ್ಲ ಮುರಿದು ಇತಿಹಾಸವನ್ನು ಸೃಷ್ಟಿಸಿತು. ಒಂದು ಸಾವಿರ ಕೋಟಿ ಗಳಿಸಿದ ಮೊತ್ತಮೊದಲ ಭಾರತೀಯ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜನರು ಬಾಹುಬಲಿ ಚಿತ್ರದ ಎರಡೂ ಸರಣಿಗಳನ್ನು ಮನಸಾರೆ ಆನಂದಿಸಿದರು. ಬಾಹುಬಲಿಯ ಮೊದಲ ಭಾಗದಲ್ಲಿ ಕಂಡು ಬಂದಿದ್ದ ಹಲವಾರು ತಾಂತ್ರಿಕ ಹಾಗ ನಟನೆಯ ನ್ಯೂನತೆಗಳನ್ನೆಲ್ಲ ತಿದ್ದಿಸಿ, ರಾಜಮೌಳಿ ಎರಡನೇ ಭಾಗವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟರು. ಕಥೆಯ ಮೊದಲ ಭಾಗದಲ್ಲಿ ಕಾಡುವ ಎಲ್ಲ ಪ್ರಶ್ನೆಗಳಿಗೂ ಕಾರಣವನ್ನು ಒದಗಿಸಿ, ಯಾವ ಪ್ರಶ್ನೆಯನ್ನೂ ಹಾಗೇ ಉಳಿಸಿಕೊಳ್ಳದೇ, ಕಥೆಯನ್ನು ಮುಗಿಸಿದ ಕೀರ್ತಿ ರಾಜಮೌಳಿಗೆ ಸಲ್ಲಬೇಕು.

ಯುದ್ಧದ ದೃಶ್ಯಗಳಂತೂ ಎರಡೂ ಚಿತ್ರಗಳಲ್ಲಿ ಬಹಳ ಚೆನ್ನಾಗಿ ಮೂಡಿಬಂದಿವೆ. ನಮ್ಮ ಪೂರ್ವಜರು ಯಾವೆಲ್ಲ ತಂತ್ರಗಳನ್ನು ಅನುಸರಿಸಿ ಯುದ್ಧಗಳನ್ನು ನಡೆಸಿದ್ದಾರೋ, ಅವೆಲ್ಲವುಗಳನ್ನೂ ರಾಜಮೌಳಿಯವರು ಕಲಾತ್ಮಕವಾಗಿ ತೋರಿಸಿದ್ದಾರೆ. ಮೇಲ್ನೋಟಕ್ಕೆ ಈ ಎಲ್ಲ ಯುದ್ಧತಂತ್ರಗಳೂ ರಾಜಮೌಳಿಯ ಕಲ್ಪನೆಯಂತೆ ಕಂಡರೂ, ಅವುಗಳಲ್ಲಿ ಬಹಳಷ್ಟು ತಂತ್ರಗಳನ್ನು ಹಿಂದೆ ನಮ್ಮ ಕ್ಷತ್ರಿಯರು ಅನುಸರಿಸಿರುವದಕ್ಕೆ ಚಾರಿತ್ರಿಕ ದಾಖಲೆಗಳಿವೆ. ಶಿವಗಾಮಿ, ದೇವಸೇನಾ, ಅವಂತಿಕಾ ಅಂಥ ಸ್ತ್ರೀ ಪಾತ್ರಗಳೂ ಕ್ಷಾತ್ರಗುಣಗಳಿಂದ ಕೂಡಿದ್ದವು. ಇದೂ ಕೂಡ ನಮ್ಮ ಚರಿತ್ರೆಯಲ್ಲಿ ಹೋರಾಡಿದ ವೀರ ವನಿತೆಯರನ್ನೇ ಬಿಂಬಿಸುತ್ತದೆ.

ಬಾಹುಬಲಿಯನ್ನು ಬಹುತೇಕ ಭಾರತೀಯರು ಮುಕ್ತವಾಗಿ ಸ್ವೀಕರಿಸಿ ಆನಂದಿಸಿದ್ದರೆ, ಅತ್ತ ನಮ್ಮ ಬುದ್ಧಿಜೀವಿಗಳೇಕೋ ಪರಪರಾಂತ ಮೈಯೆಲ್ಲ ಕೆರೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರಿಗೆ ಚಿತ್ರಗಳಲ್ಲಿ ಕಾಣದ ವಿಚಿತ್ರ ಅಂಶಗಳೆಲ್ಲ ಈ ಬುದ್ಧಿಜೀವಿಗಳಿಗೆ ಕಂಡಿವೆ. ರಾಜವಂಶಜರ ಚರ್ಮವು ಬಿಳಿಯಾಗಿರುವದು ಹಾಗೂ ಬುಡಕಟ್ಟು ಜನರ ಚರ್ಮವು ಕಂದುಬಣ್ಣದ್ದಿರುವದು ಮತ್ತು ಕಾಲಕೇಯನ ಜನಾಂಗದವರ ಚರ್ಮವು ಕಡುಗಪ್ಪಾಗಿರುವದು ಇವರಿಗೆ ವರ್ಣಭೇದನೀತಿಯೆಂದು ತೋರಿದೆ. ಕ್ಷತ್ರಿಯರು ಬಿಳಿಯರಾಗಿದ್ದರಿಂದ ಶ್ರೇಷ್ಠರು. ಉಳಿದವರು ಕಪ್ಪಾಗಿರುವದರಿಂದ ಕನಿಷ್ಠರು ಎಂಬಂತೆ ಚಿತ್ರವು ಬಿಂಬಿಸಿದೆ ಎಂದು ಇವರು ವಾದಿಸುತ್ತಾರೆ. ಆದರೆ ಜನಸಾಮಾನ್ಯರಿಗೆ ಚಿತ್ರವನ್ನು ನೋಡುವಾಗ ಮಾತ್ರ ಹಾಗೆ ಎಂದೂ ಅನ್ನಿಸಿಲ್ಲ.

ಕಟ್ಟಪ್ಪ ರಾಜಮನೆತನಕ್ಕೆ ಗುಲಾಮರಾಗಿದ್ದರೆಂಬ ಚಿತ್ರಣವನ್ನು ಈ ಬುದ್ಧಿಜೀವಿಗಳು ಜಾತಿಪದ್ಧತಿಯೊಂದಿಗೆ ಸಮೀಕರಿಸುತ್ತಾರೆ. ಅವಂತಿಕಾ ಹಾಗೂ ದೇವಸೇನರ ಪಾತ್ರಗಳು ಬಾಹುಬಲಿಯಷ್ಟು ಶಕ್ತಿಶಾಲಿಯಲ್ಲವಾದ್ದರಿಂದ ಲಿಂಗತಾರತಮ್ಯವೂ ಈ ಚಿತ್ರದಲ್ಲಿದೆ ಎಂದು ವಾದಿಸುತ್ತಾರೆ. ಒಬ್ಬರು ಮಹಿಳಾಮಣಿಯಂತೂ ಶಿವುಡು, ಅವಂತಿಕಾಳಿಗೆ ಹೆಣ್ತನದ ಪರಿಚಯವನ್ನು ಮಾಡಿಸುವದನ್ನೂ ಸ್ತ್ರೀವಿರೋಧೀ ಚಿತ್ರಣವೆಂಬಂತೆ ಬಿಂಬಿಸುತ್ತಾರೆ. ಒಂದು ಪತ್ರಿಕೆಯಂತೂ ಇಡೀ ಚಿತ್ರವು ಮೋದಿಯ ಸುಳ್ಳು ಆಶ್ವಾಸನೆಗಳ ಕಂತೆಯಂತೆ ಬಣ್ಣಬಣ್ಣದಿಂದ ಕೂಡಿದೆ ಎಂದು ಬರೆದಿದೆ. ಮುಂದುವರೆದು ಈ ಚಿತ್ರವು ಸಂಘವು ಮಾಡುತ್ತಿರುವ ವರ್ಣಾಶ್ರಮ ಪದ್ಧತಿಯನ್ನು ಜೀವಂತವಿರಿಸುವ ಹುನ್ನಾರದ ಭಾಗವಾಗಿ ಮೂಡಿಬಂದಿದೆ ಅಲ್ಲದೇ ಮುಂದಿನ ದಿನಗಳಲ್ಲಿ ಮೋದಿ ಹಾಗೂ ಸಂಘವು ಈ ಚಿತ್ರಕತೆಯನ್ನು ಇತಿಹಾಸಗಳ ಪಠ್ಯಗಳಲ್ಲಿ ಸೇರಿಸುವ ದಿನಗಳು ದೂರವಿಲ್ಲ ಎಂದೆಲ್ಲ ಬರೆದುಕೊಂಡಿದೆ. ಒಟ್ಟಿನಲ್ಲಿ ಈ ಚಿತ್ರವು ಜನರನ್ನು ಮರುಳು ಮಾಡಲೆಂದೇ ಬಂದಿರುವ ದುಷ್ಟಕಾವ್ಯವೆಂಬುದು ಈ ಬುದ್ಧಿಜೀವಿಗಳ ಅಭಿಪ್ರಾಯವಾಗಿದೆ. ಆದರೆ ಈ ಯಾವ ಅಂಶವೂ ಚಿತ್ರವನ್ನು ವೀಕ್ಷಿಸುವಾಗ ಜನಸಾಮಾನ್ಯರಿಗೆ ಉಂಟಾಗುವ ಅನುಭವದ ಭಾಗವಲ್ಲ ಎಂಬುದು ಗಮನಾರ್ಹ.

ಜನಸಾಮಾನ್ಯರಿಗೆ ಈ ಚಿತ್ರವು ಇಷ್ಟವಾಗಲು ಕೇವಲ ಗ್ರಾಫಿಕ್ಸ್ ತಂತ್ರವಷ್ಟೇ ಕಾರಣವಲ್ಲ. ಈ ಚಿತ್ರವು ಅದರದೇ ಕಾರಣಗಳಿಂದ ಜನರಿಗೆ ಇಷ್ಟವಾಗಿದೆ. ಬಿಜ್ಜಳದೇವನ ಪುತ್ರವ್ಯಾಮೋಹ ಧೃತರಾಷ್ಟ್ರನನ್ನು ನೆನಪಿಸುತ್ತದೆ. ಬಲ್ಲಾಳದೇವನು ಕುತಂತ್ರದಿಂದ ರಾಜ್ಯವನ್ನು ಹೊಡೆದ ಪ್ರಸಂಗವು ದುರ್ಯೋಧನನನ್ನು ನೆನಪಿಸುತ್ತದೆ. ತಾನು ಅನ್ಯಾಯದ ಪಕ್ಷದಲ್ಲಿದ್ದೇನೆಂದು ಅರಿತರೂ ವಚನಕ್ಕೆ ಬದ್ಧನಾಗಿ ಅಮರೇಂದ್ರ ಬಾಹುಬಲಿಯನ್ನು ವಧಿಸುವ ಕಟ್ಟಪ್ಪ ಭೀಷ್ಮ ದ್ರೋಣರನ್ನು ನೆನಪಿಗೆ ತರುತ್ತಾನೆ. ದೇವಸೇನೆಯು ಬಲ್ಲಾಳದೇವನನ್ನು ಸುಡುವ ಪ್ರಸಂಗವು, ಭೀಮನು ದುಶ್ಶ್ಯಾಸನನನ್ನು ಕೊಂದಾಗ, ದ್ರೌಪದಿಯು ಸಂಭ್ರಮಿಸಿದ ಪರಿಯನ್ನು ನೆನಪಿಸುತ್ತದೆ. ನಮ್ಮ ಪುರಾಣಗಳಲ್ಲಿರುವ ಪಾತ್ರಗಳೇ ಗ್ರಾಫಿಕ್ಸಿನ ಅಲಂಕಾರದೊಂದಿಗೆ ಹೊಸರೂಪ ತೊಟ್ಟು ಜಗಮಗಿಸುವದರಿಂದ ಈ ಚಿತ್ರವು ಜನಸಾಮಾನ್ಯರಿಗೆ ಇಷ್ಟವಾಗಿದೆ ಎಂದು ಹೇಳಬಹುದು.

ನೈತಿಕತೆಯ ದೃಷ್ಟಿಯಿಂದಲೂ ಈ ಚಿತ್ರವು ಬಹಳ ಮುಖ್ಯವಾಗಿದೆ. ಮಾತೃಭಕ್ತಿ, ಕ್ಷಾತ್ರಧರ್ಮ, ನ್ಯಾಯನಿರ್ಣಯ ಹಾಗೂ ವಚನಬದ್ಧತೆಯಂತ ಮೌಲ್ಯಗಳನ್ನು ಚಿತ್ರವು ಹಲವಾರು ಪಾತ್ರಗಳ ಮೂಲಕ ಅನೇಕ ಬಾರಿ ಪ್ರಕಟಿಸುತ್ತದೆ. ವಚನವನ್ನು ನೀಡುವಾಗ ಪರಾಮರ್ಶಿಸಬೇಕು ಎನ್ನುವ ಮೌಲ್ಯವನ್ನು ಶಿವಗಾಮಿಯು ಪುತ್ರವ್ಯಾಮೋಹದ ಭರದಲ್ಲಿ ನೀಡುವ ವಚನದ ಪ್ರಸಂಗವು ತಿಳಿಸುತ್ತದೆ. ಕ್ಷತ್ರಿಯನಾದವನ ಕರ್ತವ್ಯಗಳೇನು, ತನ್ನ ವಚನಕ್ಕಾಗಿ ಎಂಥೆಂಥ ತ್ಯಾಗವನ್ನು ಮಾಡಲು ಸಿದ್ಧರಿರಬೇಕು ಎನ್ನುವದು ಅಮರೇಂದ್ರನ ಪ್ರಸಂಗವು ತಿಳಿಸುತ್ತದೆ. ರಾಜನಾಗಲು ಯಾರು ಯೋಗ್ಯ ಎನ್ನವದನ್ನು ನಿಷ್ಪಕ್ಷಪಾತವಾಗಿ ನಿರ್ಣಯಿಸುವ ಶಿವಗಾಮಿಯ ಪಾತ್ರವೇ ಇಡೀ ಚಿತ್ರದಲ್ಲಿ ಪ್ರಬಲ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು.

ಭಕ್ತಿಪ್ರಧಾನವಾಗಿಯೂ ಬಾಹುಬಲಿ ಚಿತ್ರವು ಜನರಿಗೆ ಇಷ್ಟವಾಗುತ್ತದೆ. ಇಡೀ ಚಿತ್ರವು ಶಿವನ ಲೀಲೆಯ ಆವಿರ್ಭಾವವೋ ಎಂಬಂತೆ ಚಿತ್ರಿತವಾಗಿದೆ ಎಂದು ಹೇಳಿದರೆ ಬಹುಶಃ ತಪ್ಪಾಗಲಾರದು. ಶಿವಗಾಮಿಯು ಮಗುವನ್ನು ಉಳಿಸುವಂತೆ ಪರಮೇಶ್ವರನನ್ನು ಬೇಡಿಕೊಂಡಾಗ ಆಕೆ ನೀರಲ್ಲಿ ಮುಳುಗುತ್ತಿದ್ದರೂ ಮಗುವಿಗೆ ಏನೂ ಆಗುವದಿಲ್ಲ. ಹಾಗೆಯೇ, ಬೆಟ್ಟ ಹತ್ತುವಲ್ಲಿ ಪದೇ ಪದೇ ವಿಫಲನಾಗುತ್ತಿದ್ದ ಶಿವುಡು, ಶಿವಲಿಂಗವನ್ನು ಜಲಧಾರೆಯ ಕೆಳಗೆ ಇಟ್ಟ ತಕ್ಷಣ, ಬೆಟ್ಟದ ಮೇಲಿನ ಜನರ ಸುಳಿವು ಸಿಗುತ್ತದೆ ಹಾಗೂ ಆತ ಬೆಟ್ಟ ಹತ್ತುವಲ್ಲಿ ಸಫಲನಾಗುತ್ತಾನೆ. ದೇವಸೇನೆಯು ಆಗ ತಾನೇ ಹುಟ್ಟಿದ ಮಹೇಂದ್ರನಿಂದ ಪಡೆದ ವಚನವನ್ನು ತನಗೇ ಗೊತ್ತಿಲ್ಲದಂತೆ ಈಡೇರಿಸುವದು, ಜನರಿಗೆ ಶಿವನ ಲೀಲೆಯಿಂದಲೇ ಎಂದು ಅನಿಸುತ್ತದೆ. ಕೊನೆಗೆ ಮಹೇಂದ್ರ ಬಾಹುಬಲಿಯು ತನ್ನ ದೊಡ್ಡಪ್ಪನಾಗಿದ್ದ ಬಲ್ಲಾಳದೇವನನ್ನು ಮಣಿಸುವಾಗಲೂ ಶಿವನ ಅನುಗ್ರಹ ಬಾಹುಬಲಿಗೆ ಸಿಗುತ್ತದೆ. ಬಲ್ಲಾಳದೇವನ ಚಿನ್ನದ ಮೂರ್ತಿಯ ತಲೆಯು ನೀರಿನಲ್ಲಿ ತೇಲಿ, ಜಲಪರ್ವತದಿಂದ ಕೆಳಗುರುಳಿ, ಬಾಹುಬಲಿ ಬೆಟ್ಟ ಹತ್ತುವದಕ್ಕೆ ಮುಂಚೆ ಸ್ಥಾಪಿಸಿದ್ದ ಶಿವಲಿಂಗದ ಪಕ್ಕವೇ ಬಂದು ಬೀಳುತ್ತದೆ.

ಈ ಕತೆಯು ಪೌರಾಣಿಕ ಕತೆಗಳ ಮರುರೂಪವಾಗಿದ್ದು, ಈ ಹಿಂದೆ ಆಗಿ ಹೋದ ರಾಜರು ರೂಪಿಸಿದ ಯುದ್ಧ ತಂತ್ರಗಳನ್ನೆಲ್ಲ ಕತೆಯಲ್ಲಿ ಹೆಣೆದು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ರಾಜಮೌಳಿ. ಜನ ಸಾಮಾನ್ಯರಿಗೆ ಈ ಚಿತ್ರದಲ್ಲಿ ವಚನಬದ್ಧತೆ, ಕ್ಷಾತ್ರಧರ್ಮ, ನ್ಯಾಯನಿಷ್ಠೆ ಮುಂತಾದ ನೈತಿಕ ಮೌಲ್ಯಗಳು ಹಿಡಿಸುತ್ತವೆ. ಮೊದಲನೇ ಚಿತ್ರದ ಗ್ರಾಫಿಕ್ಸಿನಲ್ಲಿ ಇದ್ದ ಹಲವಾರು ಲೋಪದೋಷಗಳು ಎರಡನೇ ಭಾಗದಲ್ಲಿ ಸರಿಮಾಡಲ್ಪಟ್ಟಿವೆ. ಹೀಗಾಗಿ ಜನಸಾಮಾನ್ಯರಿಗೆ ಈ ಚಿತ್ರವು ಜನರಿಗೆ ಇಷ್ಟವಾಗುತ್ತದೆ.

ಆದರೆ ಬುದ್ಧಿಜೀವಿಗಳಿಗೆ ಜನಸಾಮಾನ್ಯರ ಈ ತರ್ಕವು ಅರ್ಥವಾಗುವದಿಲ್ಲ.  ಬುದ್ಧಿಜೀವಿಗಳಿಗೆ ಬಾಹುಬಲಿ ಚಿತ್ರವು ಹಿಡಿಸದಿರುವದಕ್ಕೆ ಕಾರಣ ಚಿತ್ರವು ಸರಿಯಿಲ್ಲವೆಂದಲ್ಲ. ಒಂದು ಭಾರತೀಯ ಚಿತ್ರವನ್ನು ಹೇಗೆ ಸ್ವೀಕರಿಸಬೇಕೆಂಬುದರ ಸ್ಪಷ್ಟತೆಯು ಬುದ್ಧಿಜೀವಿಗಳಲ್ಲಿ ಇಲ್ಲದೇ ಇರುವದೇ ಚಿತ್ರವು ಅವರಿಗೆ ಹಿಡಿಸದಿರುವದಕ್ಕೆ ಕಾರಣ. ಜನಸಾಮಾನ್ಯರು ಪರಂಪರಾಗತವಾಗಿ ಕಲೆಯಲ್ಲಿ ರಸವನ್ನು ಹುಡುಕುತ್ತಾರೆ. ಆ ರಸವನ್ನು ಆಸ್ವಾದಿಸುತ್ತಾರೆ. ಆದರೆ ಬುದ್ಧಿಜೀವಿಗಳು ಕಲೆಯೊಂದರಲ್ಲಿ ರಸವನ್ನು ಹುಡುಕುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ.

ಬುದ್ಧಿಜೀವಿಗಳು ಮಾರ್ಕ್ಸಿಸಂ ಮುಂತಾದ ಐಡಿಯಾಲಜಿಗಳಿಂದ ಪ್ರಭಾವಿತರಾಗಿದ್ದಾರೆ. ಅವರು ಚಿತ್ರದಲ್ಲಿ ಕಾಣುವ ಕಟ್ಟಪ್ಪನ ರಾಜನಿಷ್ಠೆಯನ್ನು ಪೂರ್ವಜರು ನೀಡಿದ್ದ ವಚನದೊಡನೆ ಸಮೀಕರಿಸುವದಿಲ್ಲ. ಬದಲಿಗೆ ಆತನನ್ನು ಗುಲಾಮನನ್ನಾಗಿ ಉಳಿಸುವ ಶ್ರೇಣೀಕೃತ ವರ್ಣವ್ಯವಸ್ಥೆಯ ಹುನ್ನಾರವೆಂದು ತಿಳಿಯುತ್ತಾರೆ. ಆದರೆ ಇವರ ವಾದದಲ್ಲಿ ದೋಷವಿದೆ. ಒಂದು ವೇಳೆ ಆತ ಬರಿ ಗುಲಾಮನೇ ಆಗಿದ್ದರೆ, ಮಹೇಂದ್ರ ಬಾಹುಬಲಿಯ ಪಕ್ಷ ವಹಿಸಬೇಕೇ ಇಲ್ಲವೇ ಬಲ್ಲಾಳದೇವನ ಪಕ್ಷ ವಹಿಸಬೇಕೇ ಎಂಬ ಗೊಂದಲ ಆತನಲ್ಲಿ ಇರುತ್ತಿರಲಿಲ್ಲ. ಆದರೆ ಅಮರೇಂದ್ರ ಬಾಹುಬಲಿಯನ್ನು ಕೊಲ್ಲುವಾಗ ಶಿವಗಾಮಿಯ ಪಕ್ಷವನ್ನು ವಹಿಸಬೇಕೇ ಬೇಡವೇ ಎಂಬ ಗೊಂದಲ ಆತನಲ್ಲಿತ್ತು. ಚಿತ್ರದ ಕೊನೆಯಲ್ಲಿ ಕಟ್ಟಪ್ಪನು ಬಿಜ್ಜಳದೇವನಿಗೆ ತಾನೇಕೆ ಇಷ್ಟು ವರ್ಷ ಬಲ್ಲಾಳದೇವನಿಗೆ ವಿಧಿಯಿಲ್ಲದೇ ನಿಷ್ಠನಾಗಿದ್ದೆ ಎನ್ನುವದನ್ನು ತಿಳಿಸಲು ಮರೆಯುವದಿಲ್ಲ.

ಬುದ್ಧಿಜೀವಿಗಳು ಈ ಚಿತ್ರದಲ್ಲಿ ಲಿಂಗತಾರತಮ್ಯವಿದೆ ಎಂದು ಆಕ್ಷೇಪಿಸುತ್ತಾರೆ. ಮಹೇಂದ್ರ ಬಾಹುಬಲಿಯು ಅವಂತಿಕಾಳಿಗೆ ಹೆಣ್ತನದ ಪರಿಚಯ ಮಾಡಿಸುವದು ಬುದ್ಧಿಜೀವಿಗಳಿಗೆ ಸ್ತ್ರೀ ದೌರ್ಜನ್ಯದ ದ್ಯೋತಕವಾಗಿ ಕಾಣುತ್ತದೆ. ಒಂದು ವೇಳೆ ಅದು ದೌರ್ಜನ್ಯವೇ ಆಗಿದ್ದರೆ, ಅದರ ವಿರುದ್ಧ ಆಕೆ ಪ್ರತಿಭಟಿಸುತ್ತಿದ್ದಳು. ಆದರೆ ಆಕೆ ತನ್ನ ಸ್ತ್ರೀತ್ವವನ್ನು ಕಂಡು ಮುದಗೊಳ್ಳಲು ಕಾರಣವೇನು? ದೌರ್ಜನ್ಯದಿಂದ ಯಾರಿಗೆ ತಾನೇ ಸಂತೋಷವಾಗುತ್ತದೆ? ದೇವಸೇನೆ ಶೂರಳಾಗಿದ್ದರೂ ಒಟ್ಟಿಗೇ ಮೂರ್ನಾಲ್ಕು ಬಾಣಗಳನ್ನು ಬಿಡಲು ಸಾಧ್ಯವಾಗದೇ ಒದ್ದಾಡುತ್ತಿದ್ದಾಗ, ಅಮರೇಂದ್ರ ಬಾಹುಬಲಿಯು ಆಕೆಗೆ ಅದನ್ನು ಹೇಳಿಕೊಡುವದನ್ನೂ ಈ ಬುದ್ಧಿಜೀವಿಗಳು ಲಿಂಗತಾರತಮ್ಯವೆಂದು ಕಾಣುತ್ತಾರೆ. ಆದರೆ ಬಲ್ಲಾಳದೇವ, ದೇವಸೇನೆಯನ್ನು ವರ್ಷಗಟ್ಟಲೇ ಬಂಧಿಸಿಡುವದು, ತನ್ನ ತಾಯಿಗೇ ಬಾಣ ಹೊಡೆಯುವದನ್ನು ತಪ್ಪೆಂದು ಯಾವ ಬುದ್ಧಿಜೀವಿಯೂ ಹೇಳಿಲ್ಲ. ಏಕೋ ಏನೋ?

ಬುದ್ಧಿಜೀವಿಗಳ ಇನ್ನೊಂದು ಗುರುತರ ಆರೋಪವೆಂದರೆ, ಈ ಚಿತ್ರದಲ್ಲಿ ವರ್ಣತಾರತಮ್ಯವಿದೆ ಎನ್ನುವದು. ಕಾಲಕೇಯನನ್ನು ಕಪ್ಪು ಬಣ್ಣದಲ್ಲಿ ಚಿತ್ರಿಸಿ, ಬಾಹುಬಲಿಯನ್ನು ಬಿಳಿಬಣ್ಣದಲ್ಲಿ ಕಂಗೊಳಿಸುವಂತೆ ಚಿತ್ರವನ್ನು ನಿರ್ಮಿಸಿರುವದೇ, ಬಿಳಿಯು ಶ್ರೇಷ್ಠ ಹಾಗೂ ಕಪ್ಪು ಕನಿಷ್ಠ ಎಂಬ ಭೇದ ನೀತಿಯನ್ನು ಸಾರಲು ಎಂದು ಹೇಳುತ್ತಾರೆ. ಆದರೆ ಅದೂ ಕೂಡ ಸತ್ಯವಲ್ಲ. ಯಾವುದೋ ಕಾಲದ ಚರ್ಚಿನ ಮನಸ್ಥಿತಿಯನ್ನೇ ಬುದ್ಧಿಜೀವಿಗಳು ಇಲ್ಲಿಯೂ ಹುಡುಕುವ ಪ್ರಯತ್ನ ಮಾಡುತ್ತಾರೆ. ನಮ್ಮಲ್ಲಿ ನ್ಯಾಯ, ಸತ್ಯ ಧರ್ಮವನ್ನು ಬೆಳಕಿಗೂ, ಅನ್ಯಾಯ, ಅಧರ್ಮ, ಅನೈತಿಕತೆಯನ್ನು ಕತ್ತಲಿಗೂ ಹೋಲಿಸುವದು ಸಹಜ. ಬಾಹುಬಲಿ ಹಾಗೂ ಕಾಲಕೇಯರನ್ನು ಚಿತ್ರಿಸುವಾಗ ಈ ಅಂಶವೇ ಕೆಲಸ ಮಾಡಿದೆ ಅಷ್ಟೇ. ಒಂದು ವೇಳೆ ವರ್ಣಭೇದ ನೀತಿಯೇ ಸತ್ಯವಾಗಿದ್ದರೆ, ಕಪ್ಪುಬಣ್ಣದಲ್ಲಿದ್ದ ಹಳ್ಳಿಯ ಜನರನ್ನು ತನ್ನವರೆಂದು ತಿಳಿದು ಬಾಹುಬಲಿ ಏಕೆ ರಕ್ಷಿಸುತ್ತಿದ್ದ? ಬುದ್ಧಿಜೀವಿಗಳು ನಂಬಿಕೊಂಡಿರುವ ಐಡಿಯಾಲಜಿಗಳು ಸತ್ಯವಲ್ಲ. ಹೀಗಾಗಿ ಇಂತಹ ಚಿತ್ರಗಳನ್ನು ಆ ಐಡಿಯಾಲಜಿಯಲ್ಲಿ ವಿವೇಚಿಸುವದು ಮೂರ್ಖತನ.

ಚಲನಚಿತ್ರವೊಂದನ್ನು ಟೀಕಿಸಲೇಬಾರದೆಂಬುದು ಲೇಖನದ ಆಶಯವಲ್ಲ. ಬಾಹುಬಲಿ ಚಿತ್ರದ ಕುರಿತು ಈಗಲೂ ಹಲವಾರು ವಿಷಯಗಳಲ್ಲಿ ಟೀಕೆಗಳನ್ನು ಮಾಡಬಹುದು. ಬಾಹುಬಲಿಯು ಬೀಳುತ್ತಿದ್ದ ವಿಗ್ರಹವನ್ನು ತಡೆದು ನಿಲ್ಲಿಸುವ ಚಿತ್ರೀಕರಣದಲ್ಲಿ ಎಡವಟ್ಟುಗಳಾಗಿವೆ. ಭಾರತೀಯ ಚಿತ್ರರಂಗದ ಪಾಲಿಗೆ ಈ ಚಿತ್ರದಲ್ಲಿರುವ ಗ್ರಾಫಿಕ್ಸ್ ಆಕರ್ಷಣೀಯವೆನಿಸಿದರೂ, ಈಗಾಗಲೇ ಹಾಲಿವುಡ್ ಚಿತ್ರಗಳನ್ನು ನೋಡಿಕೊಂಡು ಬಂದಿರುವವರಿಗೆ ಈ ಗ್ರಾಫಿಕ್ಸ್ ತುಂಬಾ ಎಳಸಾಗಿ ಕಾಣುತ್ತದೆ. ಅನೇಕ ಯುದ್ಧದ ದೃಶ್ಯಗಳು, ಲಾರ್ಡ್ ಆಫ್ ರಿಂಗ್ಸ್, ೩೦೦, ಟ್ರಾಯ್ ಮುಂತಾದ ಚಿತ್ರಗಳ ನೇರಾನೇರ ಕಾಪಿಯಾಗಿ ಕಾಣುತ್ತವೆ. ವಾಸ್ತವವಾಗಿ ಚಲನಚಿತ್ರದ ನ್ಯೂನತೆಯೊಂದನ್ನು ಪಟ್ಟಿ ಮಾಡುವಾಗ ಇವುಗಳು ಪ್ರಮುಖವಾಗಿರಬೇಕು.

ಆಗಿನ ಕಾಲದ ರಾಜಕುಮಾರಿಯರು ತಮ್ಮ ವರನನ್ನು ತಾವೇ ಆಯ್ದುಕೊಳ್ಳುತ್ತಿದ್ದರು. ದೇವಸೇನೆಯು ತುಂಬಿದ ಸಭೆಯಲ್ಲಿ ಅದನ್ನೇ ಹೇಳಿದ್ದಳು. ಆದರೆ ಆಕೆ ಹೇಳುವಾಗ ತನ್ನ ಸಂಗಾತಿಯನ್ನು ತಾನೇ ಆಯ್ದುಕೊಳ್ಳಲು ಹಕ್ಕಿದೆ ಎಂಬ ಮಾತನ್ನು ಪ್ರಯೋಗಿಸಿದಳು. ವಾಸ್ತವವಾಗಿ ಹಕ್ಕು ಎಂಬುದು ಅರೇಬಿಕ್ ಪದ. ಇತಿಹಾಸದ ಪ್ರಸಂಗದಲ್ಲಿ ಅಪ್ರಾಸಂಗಿಕ ಶಬ್ದಗಳನ್ನು ಪ್ರಯೋಗಿಸುವದು ಉಚಿತವಲ್ಲ. ರಾಮಾಯಣದ ನಾಟಕದಲ್ಲಿ ಪಾತ್ರಧಾರಿಗಳು ಮಧ್ಯದಲ್ಲಿ ಇಂಗ್ಲೀಷ್ ಪ್ರಯೋಗಿಸಿದರೆ ಸರಿಯಾಗುವದೇ? ಹಾಗೆಯೇ ಬಾಹುಬಲಿಯಲ್ಲಿ ಬರುವ ಭಾರತೀಯ ಪಾತ್ರಗಳ ಬಾಯಿಯಲ್ಲಿ (ಅಸ್ಲಂ ಖಾನ್ ಹೊರತುಪಡಿಸಿ) ಭಾರತೀಯವಲ್ಲದ ಭಾಷೆಯು ಬರುವದು ಅಸಹಜವಾಗುತ್ತದೆ.

ಇಷ್ಟೆಲ್ಲ ನ್ಯೂನತೆಗಳನ್ನು ಬದಿಗಿಟ್ಟು ಬುದ್ಧಿಜೀವಿಗಳು ಚಲನಚಿತ್ರವನ್ನು ತಮ್ಮದೇ ಐಡಿಯಾಲಜಿಯ ಆಯಾಮದಲ್ಲಿ ವಿಮರ್ಶಿಸಿದರು. ಆದ್ದರಿಂದ ಈ ವಿಮರ್ಶೆಗಳು ಅಸಂಗತವಾಗಿದ್ದವು. ಈ ವಿಮರ್ಶೆಗಳು ಜನರ ಮಧ್ಯೆ ನಗೆಪಾಟಲಿಗೀಡಾಯಿತು. ಬಾಹುಬಲಿಯ ಜನಪ್ರಿಯತೆಯನ್ನು ಅರಗಿಸಿಕೊಳ್ಳಲಾರದೇ, ಇಡೀ ಚಿತ್ರವು ಬಿಜೆಪಿ-ಆರ್.ಎಸ್.ಎಸ್.ನ ಹುನ್ನಾರವಾಗಿದೆಯೆಂದು ಕೆಲವು ಬುದ್ಧಿಜೀವಿಗಳು ಬರೆದುಕೊಂಡರು. ಈ ಚಿತ್ರದ ಕತೆಯನ್ನು ಬಿಜೆಪಿಯು ಇತಿಹಾಸವನ್ನಾಗಿಸಿ ಪಠ್ಯಗಳಲ್ಲಿ ಸೇರಿಸಲಿದೆಯೆಂದು ಕೆಲವು ಬುದ್ಧಿಜೀವಿಗಳು ಭವಿಷ್ಯವನ್ನೂ ನುಡಿದರು. ಬಾಹುಬಲಿಯ ಕುರಿತು ಅಷ್ಟೇನೂ ಕ್ರೇಜ್ ಇಟ್ಟುಕೊಂಡಿರದಿದ್ದ ಜನರೂ ಸಹ ಇಂತಹ ವಿಮರ್ಶೆಗಳನ್ನು ಓದಿದ ನಂತರ ಚಲನಚಿತ್ರವನ್ನು ನೋಡಲು ಓಡುವಂತಾಯಿತು. ಬಾಹುಬಲಿ ಸಾವಿರ ಕೋಟಿಯನ್ನು ಬಾಚಲು ಈ ಬುದ್ಧಿಜೀವಿಗಳ ಪಾಲೂ ಇದೆ.

4 ಟಿಪ್ಪಣಿಗಳು Post a comment
 1. ಹಂಸಗೀತ
  ಮೇ 21 2017

  ಈ ಲೇಖನದ ಹೆಸರನ್ನು ’ಬಾಹುಬಲಿ ಹಾಗೂ ಬುದ್ಧಿಜೀವಿಗಳು ಹಾಗೂ ಓರಿಯಂಟಲಿಸ್ಟ್ ವಿವರಣೆಗಳ ಪುನರುತ್ಪಾದನೆ’ ಎಂದು ಹೆಸರಿಸಿ ಈ ಕೆಳಗಿನ ಅಂಶಗಳನ್ನು ಒಳಗೊಂಡಿದಿದ್ದರೆ ಲೆಖನ ಹೆಚ್ಚು ಅರ್ತಪೂರ್ಣವಾಗುತ್ತಿತ್ತೆನೊ:
  ಅಮರೇಂದ್ರ ಬಾಹುಬಲಿಗೆ ರಾಜ್ಯದಿಂದ ಗಡಿಪಾರು ಮಾಡುವಂತೆ ಶಿಕ್ಷೆ ವಿಧಿಸುವಾಗ ಶಾಸನ/ಶಾಸ್ತ್ರ ದಲ್ಲಿ ಏನಿದೆ ಎಂದು ಓದಿ ಅದರಂತೆ ವಿಧಿಸಿರುವದು, ಕ್ಷತ್ರಿಯ ಧರ್ಮವೆಂದು ಉದ್ದರಿಸಿ, ಆ ಅನುಸಾರ ನಡೆಯುವಂತೆ ತೋರಿಸಿರುವದು ಹಾಗು ಚಿತ್ರದ ಕೊನೆಯಲ್ಲಿ ಬಲ್ಲಾಳದೇವನ ತಂದೆ ಕಟ್ಟಪ್ಪನಿಗೆ ರಾಜ್ಯದ ನಿಯಮದ ಪ್ರಕಾರ ಮಹೇಂದ್ರ ಬಾಹುಬಲಿಯನ್ನು ಅವನ ತಂದೆಯನ್ನು ಕೊಂದಂತೆ ಕೊಂದು ಎಂದು ಹೇಳಿದಾಗ ಅದಕ್ಕೆ ಕಟ್ಟಪ್ಪ ಮಹೇಂದ್ರ ಬಾಹುಬಲಿಯೆ ಈ ರಾಜ್ಯದ ರಾಜ ಎಂದು ಘೋಶಿಸಿ ಆಗಿದೆಯೆಂದೂ ಹಾಗಾಗಿ ಆತನ ಪರ ಹೋರಾಡುತ್ತೇನೆಂದೂ ಹೇಳುವದು ಓರಿಯಂಟಲಿಸ್ಟ್ ವಿವರಣೆಗಳ ಪುನರುತ್ಪಾದನೆಯಾಗಿದೆ. ಯಾಕೆಂದರೆ ಈ ಎಲ್ಲಾ ಘಟನೆಗಳಲ್ಲಿ ನಮಗೆ ಎದ್ದು ಕಾಣುವದು ’ರೂಲ್ ಆಫ್ ಲಾ ಈಸ್ ಎಬೌ ಆಲ್’ ಎನ್ನುವ ಓರಿಯಂಟಲಿಸ್ಟ್ ವಿವರಣೆ. ಶಾಸನವನ್ನು ಬರೆದಿಡುವಂತೆ ತೋರಿಸಿರುವದು ಹಾಗೂ ಅದಕ್ಕೆ ಬದ್ಧವಾಗಿರುವಂತೆ ತೋರಿಸಿರುವದು ವಸಾಹತುಶಾಹಿ ಪರಿಕಲ್ಪನೆಗಳ ಭಾಗ ಅಲ್ಲವೆ? ಇನ್ನು ಬಾಹುಬಲಿ-೧ ರಲ್ಲಿ ತೋರಿಸಿರುವ ಬಾಹುಬಲಿ ಪ್ರಾಣಿವಧೆಯನ್ನು ವಿರೋಧಿಸಿರುವ ಘಟನೆ ಯಾವುದರ ಪುನರುತ್ಪಾದನೆ ಎಂದು ನೀವೆ ಹೇಳಬೇಕು.
  ಸಾಮಾಜಿಕ ಚಿತ್ರಣವಂತೂ ವಸಾಹತುಪ್ರಜ್ನೆಯಿಂದ ಹೊರಬರಲಾರದಷ್ಟು ಚಿತ್ರಿಸಲ್ಪಟ್ಟಿದೆ ಎಂದರೆ ತಪ್ಪಲ್ಲ. ಬಾಹುಬಲಿ ರಾಜ್ಯದಿಂದ ಬಹಿಷ್ಕಾರಗೊಂಡಾಗ ಹಳ್ಳಿಯ ಜನರ ಜೊತೆ ವಾಸಿಸುತ್ತಾನೆ. ಅಗ ಒಂದು ಹಾಡಿನಲ್ಲಿ ಯಂತ್ರಗಳ ಆವಿಷ್ಕಾರವನ್ನು ತೋರಿಸಲಾಗಿದೆ. ಯುದ್ಧೋಪಕರಣಗಳು, ಟೆಲಿಸ್ಕೋಪ್ ಉಪಕರಣಗಳು ಇಂದಿನ ಬಲಪಂಥೀಯರ ’ಆಗ ವಿಜ್ನಾನ, ತಂತ್ರಜ್ನಾನ ಬಹಳಷ್ಟು ಮುಂದುವರೆದಿತ್ತು’ ಎಂಬ ಹೆಮ್ಮೆಯ ಉದ್ಗಾರಕ್ಕೆ ಹೊಂದುವಂತಿದೆ.

  ಉತ್ತರ
 2. ಹಂಸಗೀತ
  ಮೇ 21 2017

  “ಈ ಕತೆಯು ಪೌರಾಣಿಕ ಕತೆಗಳ ಮರುರೂಪವಾಗಿದ್ದು, ಈ ಹಿಂದೆ ಆಗಿ ಹೋದ ರಾಜರು ರೂಪಿಸಿದ ಯುದ್ಧ ತಂತ್ರಗಳನ್ನೆಲ್ಲ ಕತೆಯಲ್ಲಿ ಹೆಣೆದು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ರಾಜಮೌಳಿ”
  ಪೌರಾಣಿಕ ಕಥೆಗಳು ವಸಾಹತುಶಾಹಿ ಕಾಲದಲ್ಲಿ ಮರುರೂಪ ಪಡೆದುಕೊಂಡಿತು. ಮರುರೂಪಗೊಂಡ ಪೌರಾಣಿಕ ಪಾತ್ರಗಳು ಚಿತ್ರದಲ್ಲಿ ಮತ್ತೆ ಮರುರೂಪಗೊಂಡವು. ಹಾಗಾಗಿ ಇಡಿ ಚಿತ್ರಣ ವಸಾಹತುಶಾಹಿ ಪ್ರಜ್ನೆಯಿಂದ ಮರುರೂಪಗೊಂಡ ಅವತಾರಗಳೆ. ಬುದ್ಧಿಜೀವಿಗಳ ಈಡಿಯಾಲಜಿ ಪ್ರೇರಿತ ಬುಡಬುಡಕಿಯ ಜೊತೆಗೆ ಚಿತ್ರದಲ್ಲಿ ತೋರಿಸಿದ ಕ್ಷಾತ್ರಧರ್ಮ, ಮೌಲ್ಯಗಳೆಲ್ಲವೂ ಈಡಿಯಾಲಜಿಯ ಸರಕು ಎಮ್ದು ನಿಮಗೆ ಕಾಣದಿದ್ದುದು ವಿಶೇಷ

  ಉತ್ತರ
  • sudarshana gururajarao
   ಮೇ 23 2017

   ನೀವೂ ಒಂದು ವಿಶ್ಲೇಷಣೆ ಬರೆಯಿರಿ

   ಉತ್ತರ
   • ಹಂಸಗೀತ
    ಮೇ 23 2017

    ಬಾಹುಬಲಿ ಎಂಬ ಸಿನೆಮಾ ಮನರಂಜನೆಗೆ ಯೋಗ್ಯವಾದ ಸಿನೆಮಾ. ನೋಡಿ ಆನಂದಿಸಿ..
    ಅದನ್ನು ಐಡಿಯಾಲಜಿಯ ಕನ್ನಡಕದಲ್ಲಿ ನೋಡುವದು ಮೂರ್ಖತನ. ಅದು ಬಾಹುಬಲಿಯನ್ನು ಟಿಕಿಸಿದವರಿರಬಹುದು, ಇಲ್ಲಾ ಕ್ಷಾತ್ರ ಧರ್ಮ, ಪೌರಾಣಿಕ, ಐತಿಹಾಸಿಕ ಎಂಬರ್ಥಕ್ಕೆ ಮಾರು ಹೋದವರಿರಬಹುದು. ಬಾಹುಬಲಿಯನ್ನು ಮೆಚ್ಚುವ ಆತುರದಲ್ಲಿ ಪಂಥೀಯತೆಯ ಮೂಲಕ ಪರಿಗಣಿಸುವದರಲ್ಲಿ ಅರ್ಥವೆ ಇಲ್ಲ. ಬಾಹುಬಲಿಯು ವರ್ಣಬೇದ, ಲಿಂಗಬೇದ ಎಂದು ಒಂದು ಪಂಥ ಆಪಾದಿಸುತ್ತದೆ, ಇದೊಂದು ಐಡಿಯಾಲಜಿ ಪ್ರೇರಿತ ವಿಮರ್ಶೆ ಎಂದು ಅದನ್ನು ಟೀಕಿಸುತ್ತಾ ಇನ್ನೊಂದು ಐಡಿಯಾಲಜಿ ತೆರೆದುಕೊಳ್ಳುತ್ತದೆ. ಇದು ಬೇಕಿತ್ತಾ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments