ವಿಷಯದ ವಿವರಗಳಿಗೆ ದಾಟಿರಿ

ಮೇ 24, 2017

1

ಟ್ರಿಗೋನೋಮೆಟ್ರಿ

‍ನಿಲುಮೆ ಮೂಲಕ

– ಎಸ್. ಎನ್. ಸೇತುರಾಂ

“ಅನಾಥ ಆಗ್ಹೋಗಿದ್ದೀನಿ, ಅಪ್ಪಾ, ಅಮ್ಮ, ತಂಗಿ ಯಾರೂ ತಲೆ ಹಾಕಲ್ಲ. ನಂದೇ ಹಣೆಬರಹ ಅನ್ನೋ ಹಾಗೆ ಬಿಟ್ಟಿದ್ದಾರೆ. ಬಂದೋರೂ ಅಷ್ಟೇ. ನೋಡ್ತಾರೆ. ಚೆನ್ನಾಗಿ ಮಾತಾಡ್ತಾರೆ. ಹೆಚ್ಚು ಕಮ್ಮಿ ದಿನವೇ ನಿರ್ಧಾರವಾಗಿ ಹೋಗುತ್ತೆ. ಮಿಕ್ಕಿದ್ದಕ್ಕೆ phone ಮಾಡ್ತೀವಿ ಅಂತಂದು ಹೋಗ್ತಾರೆ. ಮತ್ತೆ phone ಇರೋಲ್ಲ.”

ಅಳ್ತಿದ್ದ ಮಾಧವ, ಮಗಳಿಗೆ ಮೂವತ್ತಾಗಿದೆ, B.E. ಓದಿದ್ದಾಳೆ, ಎಮ್ಮೆಸ್ಸು ಈಗ MBA ಮಾಡ್ತಿದ್ದಾಳೆ. ಮದುವೆಯಾಗಬೇಕು!

“70 ಸಾವಿರ ಬರ್ತಿದೆ ತಿಂಗಳಿಗೆ, ಅವಳ್ದೇ 25 ಲಕ್ಷ ಇಟ್ಟಿದ್ದೀನಿ. ಗಂಡು ಹೂಂ ಅಂದ್ರೆ.. ಎರಡೇ ದಿನದ notice, ಅವ್ರು ಹೇಳಿದ ಛತ್ರದಲ್ಲಿ ಮದುವೆ ಮಾಡ್ತೀನಿ. ನೋಡು ಗುರು.. please” ಅಂಗಲಾಚ್ತಿದ್ದ.

ನಾನೇನು ಮಾಡಬಹುದಿತ್ತು. ಕೂತು ಕೇಳಬಹುದು ಅಷ್ಟೇ. ತಲೆ ಆಡಿಸ್ದೆ.

“ಬದುಕಿನಲ್ಲಿ ಸೋಲೇ ಕಂಡಿರಲಿಲ್ಲ. ಇದೊಂದು ವಿಷಯದಲ್ಲಿ ಸೋತಿದ್ದೀನಿ. ಆಗ್ತಿಲ್ಲ ನನ್ನ ಕೈನಲ್ಲಿ. ನೀನು ಹೇಳಿದ ಹಾಗೆ ಕೇಳ್ತೀನಿ. ಕೂತ್ಕೋ ಅಂದ್ರೆ ಕೂಡ್ತೀನಿ.. ನಿಲ್ಲು ಅಂದ್ರೆ ನಿಲ್ತೀನಿ.. ಒಂದು ಗಂಡು ಹುಡುಕಿ ಕೊಡೊ. ನಂದು ಮಾತು ಸರಿ ಇಲ್ಲ ಅಂತಾರೆ. ನೀನೇ ಮಾತಾಡು… ಮಗಳ ಹತ್ತಿರ ನೇರ ಮಾತಾಡೋದಿದ್ರೂ ಸರೀನೆ. ನನ್ನ ಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನಿಂದು. ದಯವಿಟ್ಟು ಏನಾದ್ರೂ ಮಾಡು.”
ಬಿಕ್ಕುತ್ತಿದ್ದ, ಕಣ್ಣಲ್ಲಿ ನೀರು ಧಾರಾಕಾರ ಹರೀತಿತ್ತು. ಒಂದು ಕ್ಷಣ ಅಂತಃಕರಣ ಕಲುಕ್ತು. ನನ್ನ ಕಣ್ಣಲ್ಲು ಮನುಷ್ಯನ ಅಸಹಾಯಕ ಸ್ಥಿತಿಗೆ ಮರುಗಿ ನೀರು ತುಂಬ್ತು. ನಂತರದ ಕ್ಷಣದಲ್ಲಿ ಮನುಷ್ಯನ ಪರಿಸ್ಥಿತಿ ಬಗ್ಗೆ ಅಸಹ್ಯ ಬಂತು.

ಅನ್ನಿಸಿದ್ದು.
“ದುರಂತ. ಮನಸ್ಸಿಗೆ ದುಃಖವಾಗಿದೆ. ಅನಾಥ ಪ್ರಜ್ಞೆ ಕಾಡ್ತಿದೆ. ಹೇಳ್ಕೋಬೇಕು ಅನ್ನಿಸುತ್ತೆ. ಅಳಬೇಕು ಅನ್ನಿಸುತ್ತೆ. ಆದ್ರೆ ಮುಕ್ತವಾಗಿ ವ್ಯಕ್ತಪಡಿಸೋ ಮನಸ್ಥಿತಿ ಇಲ್ಲ. ಕೂತು ಅಳೋದಕ್ಕೆ ನನ್ನ phone ಮಾಡಿ ಕರೆದು ಊರಾಚೆ ಒಂದು resort ಗೆ ಕರಕೊಂಡು ಹೋಗಿ.. ಅಲ್ಲೂ ಪರಿಚಯದವರು ಯಾರೂ ಇಲ್ಲ ಅನ್ನೋದು ಮನವರಿಕೆಯಾದ ಮೇಲೆ… ಅಷ್ಟು ಸಾಲದು, ಒಂದು ಮೂರು ಬಾಟ್ಲು ಬೀರು ಕುಡಿದ ನಂತರ… ಸಣ್ಣಗೆ ಮತ್ತು ಮಂಪರು ಕಾಡಿ ಮಾನಸಿಕ ಸಮತೋಲನ ಅಲುಗಾಡಿ ಆಮೇಲೆ ಅಳ್ತಾನೆ.”

ಅಯ್ಯೋ ಅನ್ನಿಸ್ತು… ಈ ಸಂಘ ಜೀವಿ ಬಗ್ಗೆ.

ಅಂದು ಬಿಡ್ಲಾ ಮುಖದ ಮೇಲೆ… ಇದೊಂದು ಅವಕಾಶ… “ಮಗಳಿಗೆ ಮೂವತ್ತಾಯ್ತು, ಬಲಿತು ಮಾಗಿದ ಹಲಸಿನ ಹಣ್ಣು! ಇನ್ನೇನಿದ್ರೂ ಕರಡೀನೇ ಗತಿ!” ಅಂತ.

ನಾನೂ ಕುಡಿದಿದ್ದೆ. ಸಮತೋಲನ ತಪ್ಪಿದೆ ಅನ್ನಿಸ್ತು. ಕುಡಿದೋನಿಗೆ ಮಂಪರಲಿ ಅಂದು ದ್ವೇಷ ತೀರಿಸಿಕೊಳ್ಳೋ ಮನಸ್ಸಿರಲಿಲ್ಲ. ಅಂದ್ರೂ ಈ ಮನಸ್ಥಿತಿಲಿ ಅವನಿಗೆ ಅರ್ಥವಾಗೋಲ್ಲ! ನರಳೋಲ್ಲ. ನೋವು ಕೊಡೋಕ್ಕಾಗದ ಕೆಟ್ಟ ಮಾತೇ ವ್ಯರ್ಥ.. ಸುಮ್ಮನಾದೆ.

High school ಮೊದಲ ವರ್ಷ. Exam ಮುಗಿದಿತ್ತು. ಮಾವ ಮೇಷ್ಟ್ರು… ಮನೆಗೆ vacation ನಲ್ಲಿ ಬಂದಿದ್ರು. ಒಂದು ಹತ್ತು ದಿನ ಮನೆನಲ್ಲಿ ಇದ್ರು. SSLC valuation, ಅಮ್ಮ ಅವರ ಹತ್ತಿರ ಹೇಳಿಕೊಂಡು ಅತ್ತಿದ್ರು.

“ಓದೋಲ್ಲ ಕೂತು ಜಿತವಾಗಿ, ಬುದ್ದಿ ಇದೆ. ಆದರೆ ಮೈ ಬಗ್ಗಲ್ಲ. ಶಿಸ್ತಿಲ್ಲ, ಪಾಠಕ್ಕೆ ಕಳಿಸಬೇಕು, ಅದಕ್ಕೆ ಹಣ ಹೊಂದಿಸೋದು ಕಷ್ಟ. ಇವನೊಬ್ಬನೆ ಆಗಿದ್ರೆ ಕಥೆ ಬೇರೆ, ಹಿಂದಕ್ಕೆ ಎರಡು ಹೆಣ್ಮಕ್ಳು. ಸಹಾಯ ಮಾಡ್ತೀಯ?”

ಮಾವ ಅಂದ್ರು
“ನಮ್ಮ ಮನೇಲಿ ಬಂದಿರಲಿ, ಎರಡು ವರ್ಷ ಇಟ್ಟುಕೊಂಡು SSLC ಮುಗಿಸಿ ಕಳಿಸಿ ಕೊಡ್ತೀನಿ. ಊಟ ತಿಂಡಿ ಮನೇಲಾಗತ್ತೆ, ಪಾಠಕ್ಕೆ ನಾನಿದ್ದೀನಿ.”

ಹೀಗೆ ಅವರ ಮನೆಯ ಎರಡು ವರ್ಷದ ವಾಸ್ತವ್ಯ ನಿರ್ಧಾರವಾದದ್ದು. ಸತ್ಯ ಮಾವ ಅಮ್ಮ ಇಬ್ಬರಿಗೇ ಅಲ್ಲಾ… ನನಗೂ ಗೊತ್ತಿತ್ತು.

“ಬೆಳೀತಿದ್ದ ಹುಡುಗ, ಹಸಿವು ಜಾಸ್ತಿ, ಮನೆಯಲ್ಲಿ ಎಲ್ಲಕ್ಕೂ ಕ್ಷಾಮ, ಹೊಟ್ಟೆ ತುಂಬಾ ತಿಂದಾದ್ರು ತಿನ್ನಲಿ, ವಿದ್ಯೆದು ನಂತರವಾಗತ್ತೆ.”

ಮಾವ ಇದ್ದದೊಂದು ಸಣ್ಣ ಊರು. ಅಲ್ಲಿಗೆ ರೈಲು ಹತ್ತಿದ್ದು. ‘ವಿದ್ಯೆಗೆ, ವಿದ್ಯೆಗೆ, ವಿದ್ಯೆಗೆ ಅಂತ ಪ್ರಪಂಚಕ್ಕೆ ಎಲ್ಲ ಕೂಗಿ ಹೇಳ್ತಿದ್ರೂ… ಹೊಟ್ಟೆ ಹಸಿವೆಗೆ ಮನೆ ಬಿಟ್ಟಿದ್ದು ಅನ್ನೋ ಸತ್ಯ ತಲೇಲಿ ಢಾಳಾಗಿ ಕೂತಿತ್ತು.’

ಅವರ ದೊಡ್ಡ ಮಗ… ಈ ಮಾಧವ. ಅವನ ಮೊದಲ ನೋಟದಲ್ಲೆ ವ್ಯಕ್ತ ಸತ್ಯ… ಮೊದಲು ನಾನು… ನಂತರ ನೀನು. ಇದು ನನ್ನ ಮನೆ. ಪಾಲಿನ ಪ್ರಶ್ನೆ ಇಲ್ಲ. ಮಿಕ್ಕದ್ದು ನಿಂದು. ತಟ್ಟೆ ಅನ್ನ…ಹಾಕೋ ಧಿರಸು, ಪುಸ್ತಕ, ಪೆನ್ನು ಎಲ್ಲ…ನಾನು ಬಿಟ್ಟು ಕೊಟ್ರೆ ಉಂಟು.. ಇಲ್ಲದಿದ್ರಿಲ್ಲ. ಬಿಟ್ಟೋಡಬೇಕು ಅನ್ನಿಸಿತ್ತು. ಕಣ್ಣಲ್ಲಿ ನೀರು ತುಂಬಿಕೊಂಡು ನಿಲ್ಲೋ ಅಮ್ಮನ ನೆನಪಾಗಿ ಸುಮ್ಮನಾಗಿದ್ದೆ. ಸ್ವಾತಂತ್ರ್ಯ ಹೋಗಿತ್ತು. ಬೆಳಿಯೋ ರೆಕ್ಕೆ ಪುಕ್ಕ ಒದರಿ ಹಾರೋ ಚೈತನ್ಯದ ಪರೀಕ್ಷೆ ಕೂಡಾ ಮಾಡಿಕೊಳ್ಳಲಾರದ ಪಂಜರದಲ್ಲಿ ಒಂಟಿ ಅನ್ನೋ ಭಾವ ಕಾಡ್ತಿತ್ತು. ಮನಸ್ಸಿನ ನೋವು ಅತೀ ಅಂತನ್ನಿಸಿದಾಗ ಮುಸುಕಲ್ಲಿ ಬಿಕ್ಕುತ್ತಿದ್ದೆ. ಕಟು ವಾಸ್ತವದ ಗಾಭರಿಯಲ್ಲಿ ಅದು ಕೊಡೊ ನೋವು ನಂತರದ ಭಯದಲ್ಲಿ ಎಚ್ಚರವಾಗಿರೋದು ಕಷ್ಟ ಅನ್ನಿಸ್ತು. ನಿದ್ದೆ ಜಾಸ್ತಿಯಾಯ್ತು. ಕೂತಲ್ಲಿ, ನಿಂತಲ್ಲಿ, ಮಲಗಿದಲ್ಲಿ..ಒಂದರೆಕ್ಷಣ ಪುರುಸೊತ್ತಾದ್ರೂ ನಿದ್ದೆ ಬರ್ತಿತ್ತು.

ಅಂತಿದ್ರು
‘classಲ್ಲಿ ನಿದ್ದೆ. ಮನೇಗೆ ಬಂದು ಪುಸ್ತಕದ ಮುಂಡೆ ಕೂತ್ರೆ ನಿದ್ದೆ. ಊಟ ತಿಂಡಿ ಬಡಿಸೋದು ಒಂದರೆಕ್ಷಣ ನಿಧಾನವಾದ್ರೆ ಕೂತಲ್ಲೆ ನಿದ್ದೆ. ಕಲಸಿದ ಅಣ್ಣ ತಟ್ಟೆಯಿಂದ ಬಾಯಿಗೆ ಹೊಗೋ ಅಷ್ಟ್ರಲ್ಲಿ ನಿದ್ದೆ ಬರತ್ತೆ. ಹೀಗಾದ್ರೆ ಹ್ಯಾಗೆ ಅಂತ.’

ಮನಸ್ಸಂತಿತ್ತು.
“ವಾಸ್ತವದ ಕ್ರೌರ್ಯದ ಭಯದಲ್ಲಿ ಮನಸ್ಸು ಕನಸನ್ನರಿಸುತ್ತೆ! ಅದೇ ನಿದ್ದೆ.”

ಮಾಧವ ಕೂತು ಬಿಕ್ಕಳಿಸ್ತಿದ್ದ. ನಿನಪಲ್ಲಿ ನಾನು ಕಳೆದು ಹೋಗಿದ್ದೆ. ಮಾತು ಮೊದಲಾಯ್ತು. ವಾಸ್ತವಕ್ಕೆ ಬಂದೆ.

“ನಿದ್ದೆ ಹೋಗಿಬಿಟ್ಟಿದೆ ಕಣೋ ನನಗೆ, ಮಲಗೋಕೆ ಬಿಡೋಲ್ಲ ಹೆಂಡತಿ. ಹಗಲೆಲ್ಲ ಅವಳಿಗೆ ಪುರುಸೊತ್ತು. ನಿದ್ದೆ ಮುಗಿದಿರತ್ತೆ. ರಾತ್ರಿ ಆಗ್ತಿದ್ದ ಹಾಗೆ ಗಂಟೆಗಟ್ಲೆ ಕುಟುಕ್ತಾಳೆ. ಯೋಗ್ಯತೆಗೆ ಹೆಂಡತಿ ಮಕ್ಕಳು ಯಾಕೆ ಬೇಕು..ಅದೇನು ಸಾಧನೇನೋ..ಒಬ್ಬ ಮಗಳಿಗೆ ಮದುವೆ ಮಾಡೋ ಯೋಗ್ಯತೆಯಿಲ್ಲ ಅಂತ.”

ಮುಂದುವರಿಸಿದ
“ರಾಜ ಬಂದ್ರೆ ಭಯ ಕಣೋ. ಮಗಳು ಮನೇಲಿರ್ತಾಳೆ. ಅವಳ ಪ್ರಶ್ನೆಗಳು ಶುರುವಾಗುತ್ತೆ. ಹಗಲು ಅಂಗಳದಲ್ಲಿ ಅವ್ಳು..ರಾತ್ರಿ ಹಾಸಿಗೇಲಿ ಇವ್ಳು. ನರಕವಾಗಿದೆ. ಅದಕ್ಕೇ 24 ಘಂಟೆ office ಲ್ಲೇ ಕಳೀತಿದ್ದೀನಿ.”

ಕಮ್ಮಿ ನೋವು ಕೊಡ್ಲಿಲ್ಲ ಇವ್ನು, ಇಬ್ಬರೂ ಹೋಗ್ತಿದ್ದದ್ದು ಒಂದೇ ಶಾಲೆ. ಮನೆಯಿಂದ ಒಂದು ನಲ್ಲಕ್ಕು km ಹಾದಿ. ನಡಕೊಂಡು ಹೋಗ್ತಿದ್ವಿ. ಮಧ್ಯಾಹ್ನದ ಊಟಕ್ಕೆ ಮಾವನ ಹೆಂಡತಿ ಒಂದು ಡಬ್ಬೀಲಿ ಮೊಸರನ್ನ ಕಲಸಿ ಕೊಡೋರು. ಅದನ್ನ ಹೊರೋದು ನಾನು. ಹಂಚೋದು ಇವ್ನು. Spoon ಇರ್ತಿತ್ತು. ಹಾಗಿದ್ರು ಕೈಯಲ್ಲೇ ಮುಚ್ಚಳಕ್ಕೆ ಒಂದು ಹಿಡಿ ಹಾಕೋನು. ತೊಳೆಯದ ಕೈ…ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ಮೂಗು, ಕಣ್ಣು…ಕಂಕಳು…ನಾನಾ ಕಡೆ ಓಡಾಡಿರ್ತಿತ್ತು. ಆ ನೆನಪಲ್ಲಿ ತುತ್ತು ಬಾಯಿಯ ಹತ್ತಿರ ಹೋಗ್ತಿದ್ದ ಹಾಗೇ ವಾಕರಿಕೆ ಬರೋದು. ಅನುಭವಿಸಿದ್ದೀನಿ ಆ ಸಂಕತವನ್ನ. ಹಸಿದ ಹೊಟ್ಟೇಲಿ ವಾಕರಿಕೆ ಬಂದು ಕರುಳಲ್ಲಿರೋ ಜೀವರಸ ಹಸಿವಿಗೆ ಅನ್ನವನ್ನು ಹುಡುಕ್ತಾ ಬಾಯಿಯವರೆಗೂ ಬಂದ ಭಾವ.

ಇವ್ನಿಗೆ ತುಟಿಯಂಚಿನಲ್ಲಿ ನಗು, ಕಡೆಗಣ್ಣಲ್ಲಿ ನನ್ನ ನೋಡ್ತಾ ಕೈಯಲ್ಲಿ ಕಲಸಿದ ಅನ್ನ ಉಂಡೆ ಮಾಡಿ ಬಾಯಿಗಿಟ್ಟು ಚಪ್ಪರಿಸೋನು. ನಾನು ಬಲವಂತಕ್ಕೆ ತುರುಕಿಕೊಳ್ತಿದ್ದೆ. ತಿನ್ನದೇ ಕೂತ್ರೆ ಮನೇವರೆಗೂ ಹೋಗತ್ತೆ. ಅವನು ಆ ಮನೆ ಮಗ, ಯಾವತ್ತಿದ್ರೂ ಸರೀನೇ..ತಪ್ಪು ಅಂತನ್ನಿಸಿದ್ರೂ ಅವನನ್ನ ಆಚೆಗೆ ದಬ್ಬಲಾರರು. ಅಲ್ಲಿಗೆ ನನ್ನೇ ಹೋಗು ಅಂತಾರೆ. ತಾಯಿಯ ನೀರು ತುಂಬಿದ ಕಣ್ಣಗಲಿಸಿದ ಮುಖದ ಛಾಯೆ ಮುಂದೆ ತೇಲ್ತಿತ್ತು. ಆ ನೆನಪಲ್ಲಿ ಮೈ ಮನವನ್ನು ತುಂಬಿಕೊಂಡು ಬಾಯಿಗಿಟ್ಟ ಅನ್ನವನ್ನು ನುಂಗ್ತಿದ್ದೆ. ದಿನದಿಂದ ದಿನಕ್ಕೆ ಮನಃಪೂರ್ವಕವಾಗಿ ನಾಲಗೆಯ ರುಚಿಯನ್ನ ಕೊಂದು ಕೊಂಡೆ. ನಂತರದ ಬದುಕಲ್ಲಿ ಸಹಾಯಕ್ಕೆ ಬಂದದ್ದು ಇದು. ಸಂತೋಷ ಪಡೋದಿಕ್ಕೆ ಕಾರಣವೇ ಬೇಕಿಲ್ಲ. ಒಂದೊಳ್ಳೆ ಊಟ…ತಿಂಡಿ…ಕೂತು ತಿನ್ನೋದುಕ್ಕೊಂದು ಶಾಂತವಾದ ವಾತಾವರಣ. ಸಾಕು ಮನಸ್ಸು ಕುಣಿಯುತ್ತೆ. ಹಳೆಯ ನೆನಪಲ್ಲಿ ಕಣ್ಣು ಅರಿವಿಲ್ಲದೆ ತುಂಬಿತ್ತು. ಎದುರಿಗೆ ಕೂತವನು ಮಬ್ಬಾಗಿ ಕಾಣಿಸ್ತಿದ್ದ. ಸಂಕಟವನ್ನು ಸ್ಪಷ್ಟವಾಗಿ ನೋಡಿ ಸಂತೋಷ ಪಡೋ ಆಸೇಲಿ ಕಣ್ಣೊರೆಸಿಕೊಂಡೆ. ಅವನ ದುಃಖಕ್ಕೆ ನಾನು ಸ್ಪಂದಿಸ್ತಿದ್ದೀನಿ..ಅದಕ್ಕೆ ಕಣ್ಣಲ್ಲಿ ನೀರು ಅನ್ನೋ ಭಾವದಲ್ಲಿ ಅವನ ಉತ್ಸಾಹ ಇಮ್ಮಡಿಯಾಯ್ತು.

ಮುಂದುವರೆಸ್ದ,
“ಊಟ ಸೇರೊಲ್ಲ ಗೊತ್ತಾ? ಇತ್ತೀಚೆಗೆ ಇವಳೂ ಅಷ್ಟೇ, ಕೆಟ್ಟದಾಗಿ ಅಡಿಗೆ ಮಾಡ್ತಾಳೆ, ಬಾಯಿಗಿಡೋಕ್ಕಾಗಲ್ಲ, ಮಾತಾಡಿದ್ರೆ…ಯೋಗ್ಯತೆಗೆ ಸಾಕು ಅನ್ನೋ ತರಹ ನೋಡ್ತಾಳೆ, ಆಗಿಲ್ಲ ಮಗಳಿಗೆ ಮದುವೆ…ಗಂಡು ಸಿಕ್ಕಿಲ್ಲ…ಅದು ನನ್ನ ತಪ್ಪಾ?” ನನ್ನ ಕರುಳಿಗೆ ಸೇರಿದ್ದ ಬೀರು ಮೂರು ಮೀರಿತ್ತು. ಮತ್ತು ಮನಸ್ಸನ್ನಾವರಿಸಿ ಸಂಯಮ ಕೈಕೊಟ್ಟಿತ್ತು. ಕಟುಕನ ಮನಸ್ಥಿತಿಯನ್ನು ಬುದ್ಧನ ಮುಖವಾಡದಲ್ಲಿ ಮೆರೆಸಿ ಕೂತಿದ್ದೆ. ಕಿವಿ ನಿಮಿರಿ ಕೆಂಪಾಗಿ, ಕಣ್ಣು ಕೆಕ್ಕರಿಸಿ, ಮೂಗಿನ ಹೊಳ್ಳೆಗಳಲ್ಲಿ ಬಿಸಿಯುಸಿರು ಹರಿದಾಡಿ, ಬುದ್ಧನ ಮುಖವಾಡದ ಅಂಗ ಅಂಗಗಳಲ್ಲಿ ಕಟುಕ ತಾಂಡವವಾಡಿ ತೊದಲು ನಾಲಿಗೆ ಚಪ್ಪರಿಸ್ತಾ ಮಾತಲ್ಲಿ ಸುಖ ಕಂಡಿತ್ತು.

“ಜ್ಞಾಪಕ ಇದೆಯಾ…PUC Trigonometry ಪುಸ್ತಕ ಕೊಡಲಿಲ್ಲ ನೀನು. ಆ ಸರ್ತಿ ಪರೀಕ್ಷೆಗೆ ನಾನು ಪೂರ್ಣ ಸಿದ್ಧವಾಗೋಕೆ ಆಗಲೇ ಇಲ್ಲ. ಮುಸುಕಲ್ಲಿ ವರ್ಷ ಪೂರ್ತಿ ಅತ್ತಿದ್ದೀನಿ. ಅವತ್ತಿನ ಅಸಹಾಯಕ ಪರಿಸ್ಥಿತಿಯಲ್ಲಿ ಮನುಷ್ಯತ್ವ ಇಲ್ಲದೆ ನರಳಿಸ್ದೆ. ಈಗ ಅನುಭವಿಸು…ನಿನ್ನ ಮಗಳಿಗೆ ಮದುವೆ ಆಗಬಾರದು, ಇದು ನನ್ನ ಹಾರೈಕೆ.”

* * * * *

PUC ಓದ್ತಿದ್ದ ಕಾಲ, SSLC ಮುಗಿಸಿ ಮಾವನ ಮನೆಯಿಂದ ವಾಪಸ್ ಬಂದು ಬಿಡಬೇಕಿತ್ತು. ಅದೇನೋ…ಇನ್ನೊಂದು ವರ್ಷ PUC ಮುಗಿಸಿಕೊಂಡೆ ಬಂದು ಬಿಡಲಿ, ಮುಂದಿನ ಭವಿಷ್ಯಕ್ಕೆ ಅದು ಬುನಾದಿ ಅಂತಾಯ್ತು. ಎಲ್ರೂ ತಲೆ ಆಡಿಸಿದ್ರು. ನಾನು ಅಲ್ಲಿಗೇ ಹೋಗಿದ್ದಾಯ್ತು…ಮತ್ತದೇ…ಒಂದೇ ಜೊತೆ ಪುಸ್ತಕ…ಅವನು ಅದನ್ನೋದ್ತಿದ್ದಾಗ ನೀನು ಬೇರೆ ಓದು…ಒಂದೇ ಊಟದ ಡಬ್ಬಿ… ಅವನು ಹಿಡಿದು ಹಾಕಿದ್ದು ನೀನು ತಿನ್ನು.. ಬಚ್ಚಲಲ್ಲಿ ಕೂಡ ಒಂದೇ ಚೊಂಬು, ಅವಂದಾಗಲಿ, ನಿನಿಗೇನವಸರ…

ಇಷ್ಟೆಲ್ಲದರೊಟ್ಟಿಗೆ SSLC ಯಲ್ಲಿ ನನಗೆ ಅವನಿಗಿಂತ ಹೆಚ್ಚು ಅಂಕಗಳು ಬಂದಿದ್ವು. ಈರ್ಷೆ ಕಾಡಿ ಹೆಮ್ಮರವಾಗಿತ್ತು. ಹೋಗಿ ನನ್ನ ಹಾಸಿಗೆ trunk ಇಳಿಸ್ತಿದ್ದಂತೆ ತುಟಿಯಂಚಿನಲ್ಲಿ ಒಂದು ಹುಸಿನಗೆಯೊಟ್ಟಿಗೆ ಸ್ವಾಗತಿಸಿದ. ಬಾ ಈ ವರ್ಷ ಇದೆ ನಿನಗೆ.

ಆಗಿನ ಕಾಲದಲ್ಲಿ ಅಲ್ಲಿ, ಲೆಕ್ಕದಲ್ಲಿ Algebra, Geometry, Trigonometry ಮೂರು ಭಾಗ. ಪ್ರಶ್ನೆ ಪತ್ರಿಕೆಯಲ್ಲಿ Algebra 50, Geometry 50 ಮತ್ತು Trigonometry ಐವತ್ತು ಅಂಕ. ಯಾವುದೇ ನೂರಕ್ಕೆ ಉತ್ತರಿಸಿದರೆ ಸಾಕು. ಈ ಮಾನುಷ್ಯ ವರ್ಷ ಪೂರ್ತಿ Trigonometry ಪುಸ್ತಕ ಕೊಡಲೇ ಇಲ್ಲ. ಒಂದೆರಡು ಸಾರ್ತಿ ಮಾವ, ಮಾವನ ಹೆಂಡತಿಗೆ ಹೇಳೋಕೆ ಪ್ರಯತ್ನಿಸಿದೆ. ಎಲ್ಲೋ ಅವರ ಮನಸ್ಸಿನ ಮೂಲೆಯಲ್ಲೂ ನಾನು ಅವರ ಮಗನಿಗಿಂತ ಬುದ್ಧಿವಂತ ಅಂತನ್ನಿಸಿ…ಸಣ್ಣಗೆ ಈರ್ಷೆ ಕಾಡಿರಬೇಕು. ಅವ್ರು ಕೆಲಸದೋಳ ಮಗನಿಗೆ ಪಾಠ ಹೇಳಿಕೊಟ್ಟು ಪುಸ್ತಕ ಕೊಡಿಸಿ ಊಟ ಹಾಕಿ ಪ್ರೋತ್ಸಾಹಿಸಿ ಸಾಮಾಜಿಕ ಪ್ರಜ್ಞೆ ಮೆರೆಸಿದರೆ… ಈ ಕೆಲಸದೋಳ ಮಗ ಅವರ ಮಗನಿಗಿಂತ ಹೆಚ್ಚಿನ ಅಂಕ ತೊಗೊಂಡು ಸಾಮಾಜಿಕ ಪ್ರಜ್ಞೆ ಮರೆತ್ರೆ… ಕಾಡ್ತಿದ್ದದ್ದು ಆ ಭಾವ. ಆಗಿನ ಕಾಲಕ್ಕೆ ನನಗೆ ಹದಿನೈದು…ಮಾವನಿಗೆ ಅಬ್ಬಬ್ಬಾ ಅಂದ್ರೆ ನಲವತ್ತು. ಸ್ವಂತ ಮಗ ಕಮ್ಮಿ ಅಂತನ್ನಿಸಿದಾಗ ತಾವು ಮೇಷ್ಟ್ರು ಅನ್ನೋ ಅಭಿಮಾನಕ್ಕೆ ಕುತ್ತು. ಗೊತ್ತಾಗ್ತಿತ್ತು. ಮೌನದ ಮೊರೆ ಹೊಕ್ಕಿದ್ದು. ಮುಂಡೇದೆ ಮುಂದಿನ ವರ್ಷ ಇರಬೇಡ. ಬೇಲಿ ಗಿಡ.. ಅದರ ಯೋಗ್ಯತೆ ಏನಿದ್ರೂ ಬೆಳೇನ ಕಾಯೋದು. ಬಲಿತು ಕೆಟ್ಟು ಕಾದ ಬೆಳೆಯನ್ನು ಮೀರಿ ಬೆಳೆದು ಅಂಚಿನಲ್ಲಿ ಹೂವು ಮೆರೆಸೋ ಹುಚ್ಚು ಬೇಡ. ಇದಿತ್ತು ಭಾವ.

ಹತ್ತು ಸ್ತರ ಕೆಳಗಿದ್ದಾಗ ಕೈಯೆತ್ತಿ ಕೊಟ್ಟೋರು… ಹತ್ತಿರ ಹತ್ತಿರ ನಿಮ್ಮದೇ ಸ್ತರ ಅಂತಂದಾಗ… ನೆಲ ಕಚ್ಚಿಸಿ ತೋರಿಸೋ ಹಠಕ್ಕೆ ಬಿದ್ರು.
Trigonometry ಪುಸ್ತಕ ವರ್ಷ ಪೂರ್ತ ಸಿಗಲೇ ಇಲ್ಲ.

* * * * *

“ಕೊಡಲಿಲ್ಲ ನೀನು ಪುಸ್ತಕಾನ… ಆದ್ರೇನಾಯ್ತು… ನೂರಕ್ಕೆ ತಯಾರಿಯಾಗಿ ನೂರು ಬರೆದು…ನೂರು ತಗೊಂಡೆ, ನೀನು ನೂರೈವತ್ತಕ್ಕೆ ತಯಾರಾಗಿ ತೊಂಬತ್ತಾರಕ್ಕೆ ನಿಂತೆ.”

“ಅವತ್ತಿಂದು ಸರಿ, ಮುಂದಿಂದು?”

ನಾಲಿಗೆ ತೊದಲ್ತಿತ್ತು. ಐದನೆದೋ ಆರನೇದೋ ಬೀರು ದೇಹ ಸೇರಿತ್ತು. ಕೂತ ಪರಿಸರದಲ್ಲಿ ಜನ ಜಾಸ್ತಿಯಾಗಿ ಸಿಗರೇಟಿನ ಹೋಗೆ ಎಲ್ಲ ಕಡೆ ಆಕ್ರಮಿಸಿ ಸಣ್ಣಗೆ ಬೆವರಿಳೀತಿತ್ತು. ಇಬ್ಬರು ಸ್ನೇಹಿತರು, ಹಿತೈಷಿಗಳು, ನೆಂಟರು ಒಬ್ಬರ ಸಹಕಾರಕ್ಕೊಬ್ಬರು ಅಂತ ಬದುಕಿದವರು. ಬದುಕಿನ ಹೆಣವನ್ನ ಬಿಡಿ ಬಿಡಿಯಾಗಿ ಬಿಡಿಸಿ… ಒಂದೊಂದೇ ಅಂಗವನ್ನು..ಅದಿರಬೇಕಿದ್ದ ರೀತಿ, ಅದರ ಪ್ರಯೋಜನ, ಅದನ್ನ ಉಪಯೋಗಿಸಿದ್ಯಾತಕ್ಕೆ.. ಅದು ಈಗಿರೋ ಕುರೂಪ…ಬಯಲಲ್ಲಿ ಹರಡಿದ್ವಿ. ಸ್ವಂತದ ಸಾಧನೆ, ಎದುರಿಗಿದ್ದವನ ಸೋಲು ವಿಶ್ಲೇಷಣೆ ಓತಪ್ರೋತವಾಗಿ ಹರೀತು. ಎಲ್ಲ ಬಂದು ಹೋದ್ವು. ನನ್ನ ಹೆಂಡತಿಯ ಪೆದ್ದು ತನ…ಅವನ ಹೆಂಡತಿಯ ಕುರೂಪ..ನಮ್ಮಮ್ಮನ ಅಸಹಜ ಸಾವು.. ಅವರಪ್ಪನ ಕ್ರುಪಣತನ ಮೋಸಗಳು.. ಯಾವುದೋ ಜಾತಿಯವಳ ಜೊತೆ ನನ್ನ ಮಗ ಓಡಿ ಹೋದದ್ದು.. ಪಕ್ಕದ ಮನೆಯವನೊಟ್ಟಿಗೆ ಅವನ ಹೆಂಡತಿಗೆ ಸಲಿಗೆ ಇರಬಹುದು ಅನ್ನೋ ಅನುಮಾನದಲ್ಲಿ ಅವನು ಮನೆ ಬದಲಿಸಿದ್ದು.

“ಆಗೋಲ್ಲ, ನಿನ್ನ ಮಗಳಿಗೆ ಮದುವೆ ಆಗೋಲ್ಲ, ಈ ಜನ್ಮದಲ್ಲಿ ಆಗೋಲ್ಲ…ನೀನು ಕೊಡಲ್ಲಿಲ್ಲ, ನನಗೆ Trigonometry ಪುಸ್ತಕನ…ಮುಂದಿನ ಓದಿನಲ್ಲಿ ಹಿನ್ನಡೆ ಆಗಿದ್ರೆ ಅದಕ್ಕೆ ನೀನೇ ಕಾರಣ. ಕಿತ್ತುಕೊಂಡೆ ನನ್ನ ಬದುಕನ್ನ, ಬಾಲ್ಯದ ಕನಸುಗಳನ್ನ..ನಿನಗೊಂದು ನೆಮ್ಮದಿಯಾದ ವೃದ್ಧಾಪ್ಯ ಇಲ್ಲದಿರಲಿ, ನಿನ್ನ ಸಂಪಾದನೆ, ನಿನ್ನ ಆಸ್ತಿ, ನಿನ್ನೆಲ್ಲ ಸಾಮ್ರಾಜ್ಯ ಭಾಣಗುಟ್ಟುತ್ತಿರಲಿ. ನಿನ್ನ ಕಣ್ಣೆದುರಿಗೇ..”

ಯಾರು ಬಿಲ್ಲು ಕೊಟ್ರೋ.. ಇಬ್ಬರೂ ಕೊಟ್ರೋ.. ವಿಷಯದ ವಿಷ ಒಳಗೆ ಕಕ್ಕಿ ಆಚೆ ಬಂದೋರು…ಹುಣ್ಣಿಮೆ ಚಂದ್ರನ ಮಂದ ಬೆಳಕಲ್ಲಿ.. ಮಿನುಗೋ ನಕ್ಷತ್ರಗಳ ಶುಭ್ರ ಆಕಾಶದ ಕೆಳಗೆ…ಕರುಳ ತಳದಿಂದ ಕುತ್ತಿಗೆಯವರೆಗೂ ತುಂಬಿ ತುಳುಕ್ತಿದ್ದ ಬೀರು..ಆಗಿಂದು, ಅವತ್ತಿಂದು, ಹಿಂದಿನ ದಿನದ್ದು, ತಿಂಗಳ್ದು..ಬದುಕಿನ ಅದೆಷ್ಟೋ ವರ್ಷ ತಿಂದು ಮೈಗೂಡದ ಮತ್ತು ಮೈ ಬಿಡದ ಹೊಲಸನ್ನ..ಒಟ್ಟು ಮಾಡಿ ಕಕ್ಕಿದ್ರು.

* * * * *

ಬೆಳಗ್ಗೆ ಹಾಸಿಗೆಯಲ್ಲಿದ್ದವನಿಗೆ ಧಡ್ದಂತ ಎಚ್ಚರವಾಯ್ತು. ಕಿಟಕಿ ಮೂಲಕ ಕೋಲು ಬಿಸಲು ಒಳಗಿಣಕಿತ್ತು.
Mobileನಲ್ಲಿ time ನೋಡೋಕೆ ಒತ್ತಿದ್ದು…ಮಾಧವಂಗೆ ಅಕಸ್ಮಾತ್ call ಹೋಯ್ತು. ಗಮನಿಸಿ ಪಟ್ಟಂತ disconnect ಮಾಡಿದೆ.
ಅವನು ಬಿಡಬೇಕಲ್ಲ…Call ಬಂತು.
“Sorry ಗುರು, ನಿನ್ನೆ ಲೇಟ್ ಆಗ್ಹೋಯ್ತು!”

“ಎಂಥ ನಿದ್ದೆ ಅಂತೀಯ… It was a great evening”

“ರಾತ್ರಿ ದಿಂಬಿಗೆ ತಲೆ ಇಟ್ಟೋನ್ಗೆ, ಎಚ್ಚರವಾಗಿದ್ದು ಈಗಲೇ!”

“Same with me”

“ಮರೀಬೇಡ ಗುರು ನಾನು ಹೇಳಿದ್ದು”

“ಎಲ್ಲಾದ್ರೂ ಉಂಟಾ… I will do my best”

“ನನ್ನ ಮಗಳಲ್ಲ, ನಿನ್ನ ಮಗಳು ಅಂದ್ಕೋ”

“ಹೇಳಬೇಕ ನೀನದನ್ನ, she belongs to my family, she is my responsibility too!”

“ನನಗ್ಯಾರಿಲ್ಲ, ನಿನ್ನ ಆಸರೇನೇ ಆಗಬೇಕು!”

“ನಾನಿದ್ದೀನಿ ಅಂದ್ನಲ್ಲ… ಜನಕ್ಕೆ ಯೋಗ್ಯತೆಯಿಲ್ಲ, ನಿನ್ನ ಸಂಬಂಧ ಬೆಳಸೋಕೆ… ಏನು ಕಮ್ಮಿಯಾಗಿದೆ, ರೂಪಾನಾ, ವಿದ್ಯೆನಾ, ಹಣನಾ… you just don’t bother, leave it to me!”

“Thanks”

ಇದು ಸತ್ಯ. ನಿನ್ನೆ ರಾತ್ರಿದು ಮಿಥ್ಯ…ನಿಮಗೇನನ್ನಸತ್ತೆ?

ಅದಲ್ಲ ಮುಖ್ಯ.

ಮನುಷ್ಯ ಸಂಘ ಜೀವಿ.

ಒಬ್ಬರನ್ನೊಬ್ಬರು ಹೆಣಕೊಂಡ್ವಿ. ಹಿತೈಷಿಗಳು! ಹಂಗಿಸಿ, ನರಳಿಸಿ, ನೋವು ಕೊಟ್ಟು, ಕರುಬೋಕೆ, ಕರುಬಿಸೋಕೆ ಒಬ್ಬರಿಗೊಬ್ಬರು ಬೇಕಲ್ವ?

ಚಿತ್ರಕೃಪೆ : haikudeck.com

1 ಟಿಪ್ಪಣಿ Post a comment
  1. ಮೇ 24 2017

    ಅಸಹಾಯಕತೆ ಮನುಷ್ಯನನ್ನು ಅಂಗಲಾಚುವಂತೆ ಮಾಡುತ್ತದೆ. ನೊಂದ ಮನದ ಮೌನ ಅದೆಷ್ಟಿವೆಯೊ!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments