ವಿಷಯದ ವಿವರಗಳಿಗೆ ದಾಟಿರಿ

ಮೇ 25, 2017

10

ಯಕ್ಷಗಾನದಲ್ಲಿ ಏಸುಕ್ರಿಸ್ತ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ಏಸುಕ್ರಿಸ್ತನ ಜೀವನ ಕಥೆಯನ್ನು ಯಕ್ಷಗಾನದ ಆಟದ ರೂಪದಲ್ಲಿ ತೋರಿಸುವ ಪ್ರಯತ್ನವೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಒಂದು ಗುಂಪು ಇಂಥದೊಂದು ಪ್ರಯತ್ನವು ಕ್ರಿಶ್ಚಿಯಾನಿಟಿಯನ್ನು ಹರಡುವ ಹುನ್ನಾರದ ಭಾಗವೆಂದು ಭಾವಿಸಿದೆ. ಏಸುಕ್ರಿಸ್ತನ ಜೀವನವನ್ನು ಭಾರತೀಯ ಕಲೆಯೊಂದರ ಮೂಲಕ ತೋರಿಸಿ, ಏಸುವು ಇಡೀ ಮಾನವ ಸಮುದಾಯವನ್ನು ರಕ್ಷಿಸಲು ಹುಟ್ಟಿದ್ದಾನೆ ಎಂಬ ಕ್ರಿಶ್ಚಿಯಾನಿಟಿಯ ನಂಬಿಕೆಯೊಂದನ್ನು ಹರಡಿ, ಜನರನ್ನು ಮತಾಂತರಗೊಳಿಸುವ ಯೋಜನೆಯ ಒಂದು ಭಾಗ ಎಂಬುದು ಮೊದಲನೇ ಗುಂಪಿನ ವಾದವಾಗಿದೆ. ಹೀಗಾಗಿ ಇಂಥ ಪ್ರಯೋಗಗಳು ಉಚಿತವಲ್ಲ ಎಂಬುದು ಈ ಗುಂಪಿನವರ ಅಭಿಪ್ರಾಯ.

ಇನ್ನೊಂದು ಗುಂಪು ಇಂಥ ಹೊಸ ಪ್ರಯತ್ನವನ್ನು ಸ್ವಾಗತಿಸುತ್ತದೆ. ಕಲೆಗೆ ಯಾವುದೇ ನಿರ್ಬಂಧಗಳಿರಕೂಡದು. ಯಕ್ಷಗಾನವು ಯಾರೊಬ್ಬರ ಸೊತ್ತೂ ಅಲ್ಲ. ಭಾರತದಲ್ಲಿರುವ ಕ್ರಿಶ್ಚಿಯನ್ನರು ತಮ್ಮ ಯಕ್ಷಗಾನ ಕಲೆಯಲ್ಲಿ ಏಸುವನ್ನೇಕೆ ರೂಪಿಸಿಕೊಳ್ಳಬಾರದು ಎನ್ನುವದು ಎರಡನೇ ಗುಂಪಿನವರ ವಾದವಾಗಿದೆ. ಯಕ್ಷಗಾನದಲ್ಲಿ ಹೊಸ ಪ್ರಯೋಗಗಳು ನಡೆಯಬೇಕು. ಈ ರೀತಿಯ ಪ್ರಯೋಗಗಳು ಕೋಮು ಸೌಹಾರ್ದಕ್ಕೆ ಅಡಿಗಲ್ಲಾಗಿರುತ್ತವೆ. ಆ ನಿಟ್ಟಿನಲ್ಲಿ ಇಂಥ ಪ್ರಯೋಗಗಳನ್ನು ಅನುಮತಿಸಬೇಕು ಎನ್ನುವದು ಈ ಗುಂಪಿನವರ ಅಭಿಪ್ರಾಯವಾಗಿದೆ.

ಯಕ್ಷಗಾನದಲ್ಲಿ ಏಸುವಿನ ಕತೆಯನ್ನು ಅಳವಡಿಸುವದು ಚರ್ಚುಗಳ ಹುನ್ನಾರವೇ ಆಗಿರಬೇಕೆಂಬುದು ಕೇವಲ ಅನುಮಾನವಷ್ಟೇ ಆಗಿದೆ, ಒಂದು ವೇಳೆ ಅದು ಹುನ್ನಾರವೇ ಆಗಿದ್ದರೂ, ಆಗಿರದಿದ್ದರೂ ಅದೊಂದೇ ಕಾರಣವು ಅಂತಹ ಪ್ರಯೋಗಗಳನ್ನು ನಿಲ್ಲಿಸಲು ಸಮರ್ಥವಾದ ವಾದವಾಗುವದಿಲ್ಲ. ಅಲ್ಲದೇ ಕಲಾವಿದನಿಗೆ ಸ್ವಾತಂತ್ರ್ಯವಿರಬೇಕೆಂಬುದು ಎಲ್ಲರಿಗೂ ಒಪ್ಪಿತವಾಗುವ ಅಂಶವೇ ಆಗಿದೆ. ಹೀಗಾಗಿ ಯಕ್ಷಗಾನದಲ್ಲಿ ಏಸುವಿನ ಕತೆಯು ಅಳವಡಿಸಲ್ಪಡಬಾರದು ಎನ್ನುವ ವಾದವು ತರ್ಕಬದ್ಧವಾಗಿ ಯೋಚಿಸಿದಾಗ ಸಮರ್ಪಕವೆಂದು ಅನಿಸುವದಿಲ್ಲ.

ಆದರೆ ಯಕ್ಷಗಾನದಲ್ಲಿ ಏಸುವಿನ ಕತೆಯು ಸಮರ್ಪಕವಲ್ಲ ಎನ್ನುವದು ಯಕ್ಷಗಾನ ಕಲಾವಿದರ ಅನಿಸಿಕೆಯಂತೂ ಹೌದು. ಯಕ್ಷಗಾನ ಕಲಾವಿದರು ಹಾಗೂ ಕಲಾರಸಿಕರು ಯಕ್ಷಗಾನದಲ್ಲಿ ಬಾಹುಬಲಿಯಂತ ಚಿತ್ರಗಳನ್ನು ತೋರಿಸುವ ಹೊಸ ಪ್ರಯೋಗಗಳನ್ನು ನಡೆಸುತ್ತಾರಾದರೂ ಏಸು, ಮೋಸೆಸ್ ಮುಂತಾದ ಪ್ರವಾದಿಗಳ ಕಥೆಯನ್ನು ಸರಿಯಾಗಿ ಅರಿತ ಕಲಾವಿದರು ಆ ಕತೆಗಳನ್ನು ಸಮರ್ಪಕವಾಗಿ ಯಕ್ಷಗಾನದಲ್ಲಿ ಅಳವಡಿಸಲು ಸಾಧ್ಯವಾಗುವದಿಲ್ಲ ಎನ್ನುವದನ್ನು ಒಪ್ಪುತ್ತಾರೆ. ಹೀಗಾಗಿ ಇದು ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳದ ಜಡತ್ವದ ಸಂಕೇತವಾಗಲೀ, ಪರಮತಗಳ ಕುರಿತು ಇರುವ ದ್ವೇಷವಾಗಲೀ ಅಲ್ಲ.

ಏಸುವಿನ ಕತೆಯನ್ನು ಯಕ್ಷಗಾನದಲ್ಲಿ ಅಳವಡಿಸುವದರ ಕುರಿತು ಹುನ್ನಾರದ ಕತೆಯನ್ನು ಹೆಣೆಯುವ ಬದಲು, ಯಕ್ಷಗಾನ ಕಲಾರಸಿಕರಿಗೆ ಹಾಗೂ ಕಲಾವಿದರಿಗೆ ಏಸುವಿನ ಕತೆಯು ಈ ಕಲೆಯಲ್ಲಿ ಏಕೆ ಅನ್ವಯವಾಗುವದಿಲ್ಲ ಎನ್ನುವದನ್ನು ತಾರ್ಕಿಕವಾಗಿ ನಾವು ಮಂಡಿಸಬೇಕು. ಆಗ ಅಂತಹ ವಿವರಣೆಯು ಕೇವಲ ಯಕ್ಷಗಾನಕ್ಕಷ್ಟೇ ಅಲ್ಲ, ಉಳಿದ ಭಾರತೀಯ ಕಲಾ ಪ್ರಕಾರಗಳಿಗೂ ಅನ್ವಯವಾಗುತ್ತದೆ. ಏಸುವಿನ ಕುರಿತು ಭರತನಾಟ್ಯವೊಂದನ್ನು ಮಾಡಬಹುದೇ, ಕಥಕ್ಕಳಿಯನ್ನು ಮಾಡಬಹುದೇ ಎಂಬ ಪ್ರಶ್ನೆಗಳನ್ನೂ ಆ ವಿವರಣೆಯು ಉತ್ತರಿಸುತ್ತದೆ.

ಯಕ್ಷಗಾನ ಹಾಗೂ ಇನ್ನಿತರ ಕಲಾ ಪ್ರಯೋಗಗಳು ಒಂದು ಮಂಗಲ ಶ್ಲೋಕದೊಂದಿಗೆ ಆರಂಭವಾಗುತ್ತದೆ. ಈ ಮಂಗಲ ಶ್ಲೋಕವು ಆ ಕಲೆಯಲ್ಲಿ ತೊಡಗುವ ಕಲಾವಿದರ ಇಷ್ಟದೇವತೆಯಾಗಿರುತ್ತದೆ. ಯಕ್ಷಗಾನದಲ್ಲಿ ಗಾಯನ ಮಾಡುವ ಭಾಗವತನು ತನಗಿಷ್ಟವಾದ ದೇವತೆಯ ಸ್ತುತಿಯೊಂದನ್ನು ಮಾಡಿ ಯಕ್ಷಗಾನವನ್ನು ಆರಂಭಿಸುತ್ತಾನೆ. ಯಕ್ಷಗಾನದ ವಿಷಯಕ್ಕೂ ಹಾಗೂ ಆರಂಭದಲ್ಲಿ ಸ್ತುತಿಸಲ್ಪಡುವ ದೇವತೆಗೂ ಯಾವುದೇ ಸಂಬಂಧವಿರುವ ಅಗತ್ಯವಿಲ್ಲ. ಉದಾಹರಣೆಗೆ ವಿಷ್ಣುವಿನ ಅವತಾರವಾದ ರಾಮನ ವಂಶದ ಕತೆಯನ್ನು ಹೇಳುವಾಗ, ಕಾಳಿದಾಸನು ಆರಂಭದಲ್ಲಿ ಪಾರ್ವತೀ ಪರಮೇಶ್ವರನನ್ನೇಕೆ ಸ್ತುತಿಸಿದ್ದಾನೆ ಎಂಬ ಪ್ರಶ್ನೆಯನ್ನು ನಾವು ಎಂದಿಗೂ ಹಾಕಿಕೊಂಡಿಲ್ಲ. ಏಕೆಂದರೆ ಮಂಗಲ ಸ್ತುತಿಯು ಆಯಾ ಕಲಾವಿದನ ಸ್ವತಂತ್ರ ಆಯ್ಕೆಯಾಗಿದೆ. ಇಂದಿಗೂ ಭಾರತೀಯ ಚಲನಚಿತ್ರಗಳಲ್ಲಿ ಅನೇಕ ಚಿತ್ರಗಳು ಈ ರೀತಿಯ ಮಂಗಲ ಶ್ಲೋಕದಿಂದಲೇ ಆರಂಭವಾಗುತ್ತವೆ.

ಯಕ್ಷಗಾನದ ಭಾಗವತನು ಗಣಪತಿಯನ್ನು ಸ್ತುತಿಸಿ ಆಟವನ್ನು ಆರಂಭಿಸುವ ಪರಿಪಾಠವನ್ನು ಬೆಳೆಸಿಕೊಂಡಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಏಸುವಿನ ನಾಟಕವನ್ನು ಮಾಡುವಾಗ ಆತ ಆರಂಭದಲ್ಲಿ ಗಣಪತಿಯನ್ನು ಸ್ತುತಿಸಬಹುದೇ? ಯಕ್ಷಗಾನವನ್ನು ಬಾಲ್ಯದಿಂದ ನೋಡಿಕೊಂಡು ಬಂದವರಿಗೆ ಈ ಪ್ರಶ್ನೆಯೇನೂ ಮಹತ್ತ್ವದ್ದಾಗಿ ಕಾಣಿಸುವದಿಲ್ಲ. ಆದರೆ ಆ ಆಟವನ್ನು ನೋಡಲು ಬಂದ ಕ್ರಿಶ್ಚಿಯನ್ ಪಾದ್ರಿಗಳು ಇದನ್ನು ಸ್ವಾಗತಿಸುತ್ತಾರೆಯೇ? ಐಡೋಲೇಟರಿಯನ್ನು ನಿಷೇಧಿಸುವ, ಮೂರ್ತಿಗಳನ್ನು ಸುಳ್ಳು ದೇವತೆಗಳೆಂದು ಸಾರುವ ಬಿಬ್ಲಿಕಲ್ ಕತೆಗಳನ್ನು ಯಕ್ಷಗಾನದಲ್ಲಿ ಅಳವಡಿಸಲು ಕಲಾವಿದರು ಮಂಗಲಶ್ಲೋಕವನ್ನು ಬಲಿಕೊಡಬೇಕೇ ಇಲ್ಲವೇ ಆಟದಲ್ಲಿ ಬರುವ ಬೈಬಲ್ಲಿನ ಸಂದೇಶಗಳಿಗೂ, ಅದೇ ಆಟದ ಆರಂಭದ ಮಂಗಲಶ್ಲೋಕಕ್ಕೂ ಯಾವ ಸಂಬಂಧವೂ ಇಲ್ಲವೆಂದು ಪಾದ್ರಿಗಳು ಬಲವಂತವಾಗಿ ಭಾವಿಸಬೇಕೇ?

ಇಂಥ ಪ್ರಶ್ನೆಗಳಿಗೆ ಪರಿಹಾರ ದೊರಕಿಸುವಲ್ಲಿ ನಮ್ಮ ಬುದ್ಧಿಜೀವಿಗಳು ಕುಪ್ರಸಿದ್ಧರು. ಗಣಪತಿ, ಸರಸ್ವತಿ ಎಂಬ ನಿರ್ದಿಷ್ಟ ಧರ್ಮವೊಂದರ ದೇವತೆಯ ಸ್ತುತಿ ಬೇಡ, ಇಡೀ ಮನುಕುಲಕ್ಕೆ ಒಂದೇ ದೇವತೆ. ಆ ದೇವತೆಯನ್ನು ಯಾವ ಹೆಸರೂ ಇಲ್ಲದೇ ಸ್ತುತಿಸೋಣ ಎನ್ನುತ್ತಾರೆ. ದೇವರಿಗೆ ಹೆಸರು ಕೊಟ್ಟಿದ್ದು ಮಾನವರೇ ಎಂಬ ಸಮಜಾಯಿಷಿ ಕೊಡುತ್ತಾರೆ. ಆದರೆ ಭಾಗವತನು ಮಂಗಲ ಶ್ಲೋಕದಲ್ಲಿ ತನ್ನ ಇಷ್ಟದೇವತೆಯನ್ನು ಸ್ತುತಿಸಿ, ಇಡೀ ಆಟವನ್ನು ಆತನಿಗೆ ಸಮರ್ಪಿಸುತ್ತಿದ್ದೇನೆ ಎಂಬ ಭಾವದಿಂದ ತೊಡಗಿಕೊಳ್ಳುವ ಮೂಲ ಸ್ವಾತಂತ್ರ್ಯಕ್ಕೇ ಘಾಸಿಯನ್ನುಂಟು ಮಾಡುತ್ತದೆ. ಬುದ್ಧಿಜೀವಿಗಳಿಗೆ ಇದು ಕಾಣಿಸುವದಿಲ್ಲ. ಮಂಗಲಕ್ಕೇ ಇಷ್ಟೆಲ್ಲ ವಿಘ್ನವಾಯಿತು. ಇನ್ನು ಆಟ ಮುಂದೆ ಸಾಗಿದಂತೆ ಎಷ್ಟೆಲ್ಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎನ್ನುವದನ್ನು ನೋಡೋಣ.

ರಾಮ ಹಾಗೂ ಕೃಷ್ಣನ ಕತೆಗಳನ್ನು ಕಾಶ್ಮೀರದಿಂದ, ಬಾಲಿಯ ತನಕ ಅನೇಕ ಕಲಾ ಸಂಪ್ರದಾಯಗಳು ಅಭಿನಯಿಸಿ, ಬೆಳೆಸಿಕೊಂಡು ಬಂದಿವೆ. ಪ್ರತಿಯೊಂದು ಸಂಪ್ರದಾಯವೂ ತನ್ನದೇ ಆದ ವಸ್ತ್ರಸಂಹಿತೆಯನ್ನು ಹೊಂದಿದೆ. ಯಕ್ಷಗಾನದ ರಾಮನು ಧರಿಸುವ ವಸ್ತ್ರವೇ ಬೇರೆ. ಕಥಕ್ಕಳಿಯ ರಾಮನು ಧರಿಸುವ ವಸ್ತ್ರವೇ ಬೇರೆ. ಜಪಾನ್, ಚೀನಾ, ಟಿಬೇಟ್, ನೇಪಾಳ, ಬಾಲಿ ಹಾಗೂ ಇಂಡೋನೇಷ್ಯಾದಲ್ಲಿರುವ ಜನಪದ ಕಲೆಗಳಲ್ಲಿ ರಾಮನು ಧರಿಸುವ ವಸ್ತ್ರವೇ ಬೇರೆ. ಒಂದೇ ಪಾತ್ರವನ್ನು ಬೇರೆ ಬೇರೆ ಪ್ರದೇಶಗಳಲ್ಲಿರುವ ಬೇರೆ ಬೇರೆ ಕಲಾ ಪ್ರಕಾರಗಳಲ್ಲಿ ಬೇರೆ ಬೇರೆ ರೂಪದಲ್ಲಿ ಊಹಿಸಬಹುದು. ಏಕೆಂದರೆ ಇಂತಹ ಕಲೆಗಳಲ್ಲಿ ಅಭಿನಯಿಸಲ್ಪಡುವ ಪಾತ್ರಗಳು ಪೌರಾಣಿಕ ಅಥವಾ ಐತಿಹಾಸಿಕ ಪಾತ್ರಗಳು. ಈ ಐತಿಹಾಸಿಕ ಪಾತ್ರಗಳು ಪ್ರಾದೇಶಿಕ ಭಾಷೆ, ಉಡುಪು ಹಾಗೂ ನಾಟ್ಯ ಶೈಲಿಯೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಗುಣವನ್ನು ಹೊಂದಿವೆ.

ಜೀಸಸ್, ಅಬ್ರಹಾಂ, ಮೋಸಸ್ ಅಂತಹ ಬಿಬ್ಲಿಕಲ್ ಪಾತ್ರಗಳಿಗೆ ಈ ರೀತಿ ಸ್ಥಳೀಯ ರೂಪದೊಡನೆ ಸಮ್ಮಿಳಿತವಾಗುವ ಶಕ್ತಿಯಿದೆಯೇ ಎಂಬ ಪ್ರಶ್ನೆಯನ್ನು ಉತ್ತರಿಸಿಕೊಳ್ಳದ ಹೊರತು ಬಿಬ್ಲಿಕಲ್ ಕಥೆಗಳನ್ನು ಸ್ಥಳೀಯ ಕಲಾಪ್ರಕಾರದಲ್ಲಿ ಸಮರ್ಪಕವಾಗಿ ನಿರೂಪಿಸಲು ಸಾಧ್ಯವಿಲ್ಲ. ಬಿಬ್ಲಿಕಲ್ ಕಥೆಗಳ ಪಾತ್ರಗಳು ಕ್ರಿಶ್ಚಿಯನ್ನರ ಪಾಲಿಗೆ ಹಿಸ್ಟಾರಿಕಲ್ ಪಾತ್ರಗಳು. ಅಂತಹ ವ್ಯಕ್ತಿಗಳು ವಾಸ್ತವವಾಗಿ ಯಾವ ಬಟ್ಟೆಯನ್ನು ಉಟ್ಟಿದ್ದವೋ, ಆ ವ್ಯಕ್ತಿಗಳನ್ನು ಪ್ರತಿನಿಧಿಸುವ ಪಾತ್ರಗಳು ಆ ರೀತಿಯ ಬಟ್ಟೆಯನ್ನೇ ಉಟ್ಟುಕೊಳ್ಳಬೇಕೆಂದು ಕ್ರಿಶ್ಚಿಯನ್ನರು ಅಪೇಕ್ಷಿಸುವದು ಸಹಜ. ಇನ್ಯಾವುದೋ ವಸ್ತ್ರದಲ್ಲಿ ಅವರನ್ನು ಊಹಿಸುವದು ಅವರಿಂದ ಸಾಧ್ಯವೂ ಇಲ್ಲ. ಹೀಗಾಗಿ ಯಕ್ಷಗಾನದಂತಹ ಕಲಾ ಪ್ರಕಾರಗಳ ಸಮರ್ಪಕ ಪ್ರಯೋಗಕ್ಕೆ, ಈ ಪಾತ್ರಗಳು ತಮ್ಮ ಹಿಸ್ಟಾರಿಕಲ್ ರೂಪವನ್ನು ಕಳೆದುಕೊಂಡು ರಾಮ ಕೃಷ್ಣರಂತೆ ಮುಕ್ತರೂಪವನ್ನು ಹೊಂದಬೇಕೇ ಅಥವಾ ಈ ಪಾತ್ರಗಳ ಜಡತ್ವವನ್ನು ಹಾಗೇ ಉಳಿಸಿಕೊಳ್ಳಲು ಆಯಾ ಕಲಾಪ್ರಕಾರದ ವಸ್ತ್ರಸಂಹಿತೆಯನ್ನೇ ಬಲಿಕೊಡಬೇಕೇ?

ಇನ್ನು ಯಕ್ಷಗಾನದ ಮಟ್ಟಿಗೆ ಹೇಳುವದಾದರೆ, ಪಾತ್ರಗಳ ಸಂಭಾಷಣೆಯು ತೊಂಬತ್ತು ಪ್ರತಿಶತ ಯಾವುದೇ ರೀತಿಯ ಪೂರ್ವಸಿದ್ಧತೆಯಿಲ್ಲದೇ ಆ ಕ್ಷಣಕ್ಕೆ ಸ್ವಾಭಾವಿಕವಾಗಿ ಬರುವ ಹೇಳಿಕೆಗಳಾಗಿರುತ್ತವೆ. ಉದಾಹರಣೆಗೆ ದ್ರೌಪದೀ ವಸ್ತ್ರಾಪಹರಣದ ಪ್ರಸಂಗವು ನಡೆಯುತ್ತಿದ್ದರೆ, ದುಶ್ಯಾಸನನು ಸೀರೆ ಎಳೆಯಬೇಕು ಹಾಗೂ ದ್ರೌಪದೀ ಸಹಾಯಕ್ಕಾಗಿ ಎಲ್ಲರಲ್ಲಿ ಬೇಡಿ, ಕೃಷ್ಣನ ಮೊರೆ ಹೋಗಬೇಕು ಎನ್ನುವದಷ್ಟೇ ಪಾತ್ರಗಳ ಮೇಲೆ ವಿಧಿಸಲ್ಪಡುವ ನಿಬಂಧನೆಯಾಗಿರುತ್ತದೆ. ಅದನ್ನು ಬಿಟ್ಟರೆ ದುಶ್ಯಾಸನ ಆಕೆಯನ್ನು ಯಾವೆಲ್ಲ ಮಾತುಗಳಿಂದ ಹಂಗಿಸಬೇಕು, ದ್ರೌಪದಿಯು ಯಾವೆಲ್ಲ ಮಾತುಗಳನ್ನು ಆಡಬೇಕು ಎನ್ನುವದು ಅನೇಕ ಬಾರಿ ಸಾಂದರ್ಭಿಕವಾಗಿರುತ್ತವೆ. ಯಕ್ಷಗಾನದಲ್ಲಿ ಈ ವಾಕ್ಪಟುತ್ವವು ಅತ್ಯಂತ ಮಹತ್ತ್ವದ್ದು ಹಾಗೂ ಆಟದ ಯಶಸ್ಸಿನಲ್ಲಿ ಬಹಳ ನಿರ್ಣಾಯಕವಾದದ್ದು. ಗದಾಯುದ್ಧದಲ್ಲಿ ದುರ್ಯೋಧನನ ಹಂಗಿಸುವಿಕೆಗೆ ಭೀಮನು ಅಷ್ಟೇ ಪ್ರಮಾಣದಲ್ಲಿ ತಿರುಗಿ ಹಂಗಿಸಬೇಕೇ ಹೊರತು ಬ್ಬೆಬ್ಬೆಬ್ಬೆ ಮಾಡಿದರೆ ಪಾತ್ರಧಾರಿಗಳಿಗೆ ಟೊಮೆಟೋ ಭಾಗ್ಯ ಕಟ್ಟಿಟ್ಟ ಬುತ್ತಿ. ಈ ರೀತಿಯ ಸಾಂದರ್ಭಿಕ ಸಂಭಾಷಣಾ ಕಲೆಯು ಭಾರತದ ಎಲ್ಲ ಕಲಾ ಪ್ರಕಾರಗಳಲ್ಲಿ ಹರಡಿರುವದನ್ನು ನಾವು ಕಾಣುತ್ತೇವೆ.

ಏಸು ತನ್ನ ಜೀವನದಲ್ಲಿ ಯಾರೆಲ್ಲರ ಜೊತೆ ಸಂಭಾಷಿಸಿದ್ದಾನೆ, ಏನೆಲ್ಲ ಹೇಳಿದ್ದಾನೆ ಎನ್ನುವದೆಲ್ಲ ಈಗಾಗಲೇ ದಾಖಲಾಗಿರುವ ಸಂಗತಿಗಳು. ಹೀಗಾಗಿ ಯಾವ ಪಾತ್ರಗಳು ಏನು ಹೇಳಬೇಕೆಂಬುದು ಈಗಾಗಲೇ ನಿರ್ಧಾರಿತವಾಗಿಬಿಟ್ಟಿದೆ. ಹೀಗಾಗಿ ಇಷ್ಟು ಸ್ನಿಗ್ಧವಾಗಿರುವ ಸಂಭಾಷಣೆಗಳನ್ನಿಟ್ಟುಕೊಂಡು ಯಕ್ಷಗಾನ ಮಾಡುವದು ಚಂಡೆಯ ಹಿನ್ನೆಲೆಯಲ್ಲಿ ಮಾಡುವ ಡ್ರಾಮಾ ಆಯಿತೇ ಹೊರತು ಅದರಲ್ಲಿ ಯಕ್ಷಗಾನದ ಯಾವ ರಸವೂ ಉತ್ಪತ್ತಿಯಾಗಲು ಅವಕಾಶವೇ ಇಲ್ಲದಂತಾಗಿದೆ. ಹೀಗಾಗಿ ಕಥೆಯ ಸ್ನಿಗ್ಧತೆಗಾಗಿ ಯಕ್ಷಗಾನದ ಸಾಂದರ್ಭಿಕ ಸಂಭಾಷಣಾ ಶೈಲಿಯನ್ನೇ ಬಿಡಬೇಕೇ ಇಲ್ಲವೇ ಯಕ್ಷಗಾನದ ಸೌಂದರ್ಯವೃದ್ಧಿಗಾಗಿ ಸಾಂದರ್ಭಿಕ ಸಂಭಾಷಣೆಯನ್ನು ಉಳಿಸಿಕೊಳ್ಳಲು ಏಸುವಿನ ಜೀವನದಲ್ಲಿ ನಡೆದಿರುವ ನಿಖರವಾದ ಸಂಭಾಷಣೆಯನ್ನೇ ಬಲಿ ಕೊಡಬೇಕೇ? ಇವೆಲ್ಲ ಪ್ರಶ್ನೆಗಳನ್ನು ಸಂಪೂರ್ಣ ಬದಿಗೊತ್ತಿ ಸ್ಥಳೀಯ ಕಲಾ ಪ್ರಕಾರಗಳಲ್ಲಿ ಬಿಬ್ಲಿಕಲ್ ಕತೆಗಳನ್ನು ಹೆಣೆದರೂ ಅದು ಎಷ್ಟರ ಮಟ್ಟಿಗೆ ಯಶಸ್ಸಾಗಲಿದೆ? ಜನರು ಎಷ್ಟು ಬಾರಿ ಅದೇ ಆಟವನ್ನು ನೋಡಲು ಬಯಸುತ್ತಾರೆ? ಕೊನೆಯ ಆಕ್ಷೇಪದ ಕುರಿತು ಹೇಳುವದಾದರೆ, ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನೂ ಪುರುಷರೇ ನಿರ್ವಹಿಸುತ್ತಾರೆ. ಇನ್ನು ಏಸುವಿನ ತಾಯಿ ಮೇರಿಯ ಪಾತ್ರದಲ್ಲಿ ಗಂಡಸೊಬ್ಬನು ಬಂದು ನಟಿಸುವದು ಕ್ರಿಶ್ಚಿಯನ್ ಪಾದ್ರಿಗಳಿಗೆ ಅದೆಷ್ಟು ರುಚಿಸುವದೋ ಪರಲೋಕದಲ್ಲಿರುವ ಅವರ ತಂದೆಗೇ ಗೊತ್ತು. ಅಲ್ಲವೇ?

ಎಸ್. ಎನ್. ಬಾಲಗಂಗಾಧರರು ಹೇಳುವಂತೆ, ಪೌರಾಣಿಕ ಅಥವಾ ಐತಿಹಾಸಿಕ ಪಾತ್ರಗಳು ’ಪರ’ ಪಾತ್ರಗಳೇ ಹೊರತು ’ಇಹ’ ಪಾತ್ರಗಳಲ್ಲ. ಈ ಇಹ ಹಾಗೂ ಪರವೆಂಬ ಭೇದಗಳು ನಮ್ಮ ಜನರಿಗೆ ಪರಿಚಿತವೇ ಆಗಿವೆ. ಪಂಚೇಂದ್ರಿಯಗಳ ಅನುಭವಕ್ಕೆ ಬರುವ ಪ್ರತಿಯೊಂದು ವಸ್ತುವೂ ಇಹವೇ. ಆದರೆ ಇಹದಲ್ಲಿರುವ ವ್ಯಕ್ತಿ ಹಾಗೂ ವಸ್ತುಗಳಂತೆಯೇ ಇರುವ ಅಥವಾ ಅದಕ್ಕಿಂತ ಬೇರೆಯಾಗಿರುವ ಅಂದರೆ ’ಪರ’ವಾಗಿರುವ ಪಾತ್ರ, ವಸ್ತು ಹಾಗೂ ಸ್ಥಳಗಳ ಮೂಲಕ ಕತೆಗಳನ್ನು ಕಟ್ಟಿಕೊಳ್ಳುವದೇ ಇತಿಹಾಸ ಅಥವಾ ಪುರಾಣ. ನಮ್ಮ ದೈನಂದಿನ ಬದುಕಿನಲ್ಲಿ ಬರುವ ಸುಖ, ದುಃಖಗಳನ್ನು ’ಪರ’ಪಾತ್ರಗಳ ಮೂಲಕ ಅಭಿವ್ಯಕ್ತಗೊಳಿಸುವದೇ ಭಾರತೀಯ ಕಲಾ ಪ್ರಕಾರಗಳಲ್ಲಿ ಕಂಡು ಬರುವ ಮುಖ್ಯವಾದ ಅಂಶ.

ಉದಾಹರಣೆಗೆ, ಕಾಳಿದಾಸನು ಕುಮಾರಸಂಭವವನ್ನು ಬರೆದಾಗ, ರಾಜನಿಗೆ ಗಂಡು ಮಗುವಾಗಿತ್ತು. ಆ ಶುಭ ಸಂದರ್ಭದಲ್ಲಿ ಕಾಳಿದಾಸನು ಕುಮಾರಸಂಭವನನ್ನು ಬರೆದನು ಎಂದು ಕೆಲವರು ವಾದಿಸುತ್ತಾರೆ. ಸದ್ಯಕ್ಕೆ ಇದನ್ನು ಸತ್ಯ ಎಂದೇ ಇಟ್ಟುಕೊಳ್ಳೋಣ. ಇಲ್ಲಿ ಪ್ರಶ್ನೆ ಬರುವದು, ರಾಜನಿಗೆ ಮಗ ಹುಟ್ಟಿದರೆ, ಕಾಳಿದಾಸ, ಈಶ್ವರನಿಗೆ ಮಗ ಹುಟ್ಟುವ ಕಥೆಯನ್ನೇಕೆ ಬರೆಯಬೇಕು ಎನ್ನುವದು. ಅದಕ್ಕೆ ಕಾರಣ ಇಷ್ಟೇ. ಭಾರತೀಯರು ಇಹದಲ್ಲಿ ಉಂಟಾಗುವ ಕ್ರಿಯೆಗಳನ್ನು ’ಪರ’ಪಾತ್ರಗಳ ಮೂಲಕ ಅಭಿವ್ಯಕ್ತಗೊಳಿಸಲು ಇಷ್ಟಪಡುತ್ತಾರೆ ಎನ್ನುವದೇ ಕಾರಣ. ಈಗಲೂ ಕೂಡ ಮನೆಯಲ್ಲಿ ಗಂಡು ಮಗುವಾದರೆ, ಮನೆಗೆ ಕೃಷ್ಣ ಬಂದಿದ್ದಾನೆ ಎಂತಲೋ, ಹೆಣ್ಣು ಮಗುವಾದರೆ ಲಕ್ಷ್ಮೀ ಬಂದಿದ್ದಾಳೆ ಎಂತಲೋ ಹೇಳುವದು ವಾಡಿಕೆ. ಹಾಗೆಯೇ ತೀರಿಕೊಂಡಾಗ ಲಿಂಗೈಕ್ಯರಾದರು, ವೈಕುಂಠವಾಸಿಗಳಾದರು ಎಂದು ಹೇಳುವದಕ್ಕೂ ಇದೇ ಕಾರಣ.

ಇತಿಹಾಸದ ಕತೆಗಳಲ್ಲಿ ಬರುವ ಪಾತ್ರಗಳು ’ಪರ’ವಾಗಿರುವದರಿಂದಲೇ ಅವುಗಳನ್ನು ನಾವು ವಿಭಿನ್ನ ರೂಪಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೊರಕುವ ದೇವತೆಗಳ ಶಿಲ್ಪಗಳ ರೂಪಗಳು ಭಿನ್ನಭಿನ್ನವಾಗಿವೆ. ಮೇಲುಕೋಟೆಯ ಚೆಲುವನಾರಾಯಣನಿಗೂ, ಪುರಿಯ ಜಗನ್ನಾಥನಿಗೂ ಇರುವ ಶಿಲ್ಪವ್ಯತ್ಯಾಸವನ್ನು ಗಮನಿಸಬಹುದು. ಆದರೆ ಭಕ್ತರ ಭಕ್ತಿಗೆ ಈ ಭೇದವು ಯಾವ ಪರಿಣಾಮವನ್ನೂ ಉಂಟು ಮಾಡುವದಿಲ್ಲ. ಈ ಪಾತ್ರಗಳು ಅನೇಕ ಕಲಾ ಪ್ರಕಾರಗಳಲ್ಲಿ, ಬೇರೆ ಬೇರೆ ಭೂಷಣಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ಸಮ್ಮಿಳಿತಗೊಳ್ಳಲು ಸಾಧ್ಯವಾಗಿರುವದೂ ಸಹ ಇವುಗಳು ’ಪರ’ವಾಗಿರುವರಿಂದ.

ಇತಿಹಾಸದ ಪಾತ್ರಗಳು ಪರಸ್ಪರ ವಿರೋಧಾಭಾಸದಿಂದ ಕೂಡಿರುವ ಕಾರ್ಯಗಳನ್ನು ಮಾಡುವದನ್ನೂ ಸಹ ಈ ಪರಿಕಲ್ಪನೆಯು ವಿವರಿಸುತ್ತದೆ. ಉದಾಹರಣೆಗೆ ಸರ್ವಜ್ಞನಾಗಿದ್ದ ಶಿವನು ತನ್ನ ಮಗನಾದ ಗಣಪತಿಯನ್ನೇಕೆ ಗುರುತಿಸದಾದ ಹಾಗೂ ಸರ್ವಶಕ್ತನಾಗಿದ್ದ ಆತ ಮೂಲ ತಲೆಯನ್ನೇ ಏಕೆ ಜೋಡಿಸಲಾರದೇ ಆನೆಯ ತಲೆಯನ್ನು ಜೋಡಿಸಿದ ಎಂಬ ಜಾಕೀರ್ ನಾಯ್ಕನ ಪ್ರಶ್ನೆಗಳು ನಮಗೆ ಎಂದಿಗೂ ಕಾಡಿಲ್ಲ. ಏಕೆಂದರೆ ಆ ಕತೆಗಳು ಇರುವದೇ ಇಹದಲ್ಲಿ ಬರುವ ಭಾವಗಳನ್ನು, ’ಇಹ’ದಲ್ಲಿ ಕಲಿಯಬೇಕಾದ ಮೌಲ್ಯಗಳನ್ನು ’ಪರ’ಪಾತ್ರಗಳ ಮೂಲಕ ಅರಿಯುವದು ಹಾಗೂ ಅಭಿವ್ಯಕ್ತಗೊಳಿಸುವದು. ಹಲವಾರು ಪ್ರಾಂತ್ಯಗಳಲ್ಲಿ ಒಂದೇ ಕಥೆಯ ಪಾಠಭೇದಗಳಿರುವದನ್ನೂ ಕೂಡ ನಾವು ಈ ಪರಿಕಲ್ಪನೆಯೊಂದಿಗೆ ವಿವರಿಸಬಹುದು. ಪ್ರತಿಯೊಂದು ಹಳ್ಳಿಯಲ್ಲಿಯೂ ರಾಮ ಹಾಗೂ ಕೃಷ್ಣನ ಕುರುಹುಗಳು ಏಕಿವೆ. ಭಾರತದ ಎಲ್ಲ ಭಾಗಗಳು ರಾಮಾಯಣ ಹಾಗೂ ಮಹಾಭಾರತಕ್ಕೆ ಸಂಬಂಧ ಪಟ್ಟ ಕತೆಗಳೊಂದಿಗೆ ಏಕೆ ಕೊಂಡಿಯನ್ನು ಹೊಂದಿವೆ ಎನ್ನುವದನ್ನೂ ಕೂಡ ಈ ಪರಿಕಲ್ಪನೆಯ ಮೂಲಕ ಸಮರ್ಪಕವಾಗಿ ಮನದಟ್ಟು ಮಾಡಿಕೊಳ್ಳಬಹುದು.

ಐತಿಹಾಸಿಕ ಪಾತ್ರಗಳಿಗೆ ಸಂಬಂಧ ಪಟ್ಟ ಹಬ್ಬಗಳನ್ನು ಆಚರಿಸುವ ಪರಿಯನ್ನು ಅರ್ಥೈಸುವಲ್ಲೂ ಕೂಡ ’ಪರ’ ಕಲ್ಪನೆಯು ಸಹಾಯಕವಾಗಿದೆ. ಉದಾಹರಣೆಗೆ ರಾಮ ನವಮಿಯಂದು ರಾಮನ ವಿಗ್ರಹವನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತೇವೆ. ವಿಜಯ ದಶಮಿಯಂದು ರಾವಣನ ವಿಗ್ರಹ ಮಾಡಿ ಅದನ್ನು ಸುಡುತ್ತೇವೆ. ಜನ್ಮಾಷ್ಟಮಿಯಂದು ಮೊಸರು ಕುಡಿಕೆಯನ್ನು ಒಡೆಯುತ್ತೇವೆ. ವಿಶ್ವಾಮಿತ್ರ, ರಾಮಲಕ್ಷ್ಮಣರನ್ನು ಕಾಡಿಗೆ ಕರೆದುಕೊಂಡು ಬಂದಿದ್ದಾಗ, ಆತನನ್ನು ಎಬ್ಬಿಸಲು ಹೇಳಿದ್ದ “ಕೌಸಲ್ಯಾ ಸುಪ್ರಜಾ ರಾಮ” ಎಂಬ ಶ್ಲೋಕವು ಇಂದು ಮನೆಮನೆಗಳಲ್ಲಿ ಬೆಳಿಗ್ಗೆ ಮೊಳಗುತ್ತದೆ. ರಾತ್ರಿ ಮಲಗುವಾಗಲೂ ತಾಯಿ ಲಾಲಿಯನ್ನು ಹಾಡುವಾಗ ರಾಮನನ್ನೋ ಕೃಷ್ಣನನ್ನೋ ಮಲಗಿಸುವ ವಾಕ್ಯಗಳನ್ನು ಹಾಡಿನಲ್ಲಿ ತೂರಿಸುವದು ಅತ್ಯಂತ ಸಹಜ. ಕ್ರಿಸ್ಮಸ್ ಸಂದರ್ಭದಲ್ಲಿ ಗೋವಾದಲ್ಲಿ ಹಲವಾರು ಕಡೆ ಜೀಸಸ್ ಹುಟ್ಟಿರುವ ಜಾಗವನ್ನು ಚಿತ್ರಿಸಿ, ಮೂರ್ತಿಗಳನ್ನು ಮಾಡುತ್ತಾರೆ. ಏಸುವಿನ ಹುಟ್ಟಿನ ಪ್ರಸಂಗವನ್ನು ಪುನಃ ಸೃಷ್ಟಿಸುವದು ಕ್ರಿಶ್ಚಿಯಾನಿಟಿಗೆ ಮೂಲತಃ ವಿರುದ್ಧವೇ ಆದರೂ, ಇಲ್ಲಿ ಕ್ರಿಶ್ಚಯಾನಿಟಿಗೆ ಮತಾಂತರವಾದವರ ಮೇಲೆ ಭಾರತೀಯ ಸಂಪ್ರದಾಯಗಳು ಬೀರಿರುವ ಪ್ರಭಾವವೇ ಆಗಿದೆ.

ಇನ್ನು ಕ್ರಿಶ್ಚಿಯಾನಿಟಿಗೆ ಬರೋಣ. ಕ್ರಿಶ್ಚಿಯನ್ನರ ಪಾಲಿಗೆ ಬಿಬ್ಲಿಕಲ್ ಪಾತ್ರಗಳು ಒಂದಾನೊಂದು ಕಾಲದಲ್ಲಿ ಈ ’ಇಹ’ದಲ್ಲಿ ಇದ್ದು ಹೋದ ಪಾತ್ರಗಳೇ ಆಗಿವೆ. ಹೀಗಾಗಿ ಬಿಬ್ಲಿಕಲ್ ಪಾತ್ರಗಳು ಸ್ಥಳೀಯ ಕಲಾ ಪ್ರಕಾರಗಳಲ್ಲಿ ಬೆರೆತಕೊಳ್ಳಲಾರವು. ಹಾಗೆ ಬೆರೆತುಕೊಳ್ಳಬೇಕಾದರೆ ಒಂದೋ ಆ ಪಾತ್ರಗಳು ತಮ್ಮ ಇಹತ್ವವನ್ನು ಕಳೆದುಕೊಳ್ಳಬೇಕು ಇಲ್ಲವೇ, ಆ ಕಲಾ ಪ್ರಕಾರಗಳು ’ಪರ’ ಪಾತ್ರಗಳನ್ನು ಕಟ್ಟಿಕೊಡುವ ವೈಶಿಷ್ಟ್ಯತೆಯನ್ನು ಬಿಟ್ಟುಕೊಟ್ಟು ಅಂಗವಿಕಲವಾಗಬೇಕು. ಮೊದಲನೇಯದು ಕ್ರಿಶ್ಚಿಯನ್ನರಿಗೆ ಇಷ್ಟವಿಲ್ಲ ಹಾಗೂ ಎರಡನೇಯದು ಕಲಾವಿದರಿಗೆ ಇಷ್ಟವಿಲ್ಲ. ಈ ಕಾರಣಕ್ಕಾಗಿ ಏಸುವಿನ ಕತೆಯನ್ನು ಯಕ್ಷಗಾನದಲ್ಲಿ ಅಳವಡಿಸುವದು ಸಮರ್ಪಕವಾಗುವದಿಲ್ಲ ಎಂದು ಭಾವಿಸುತ್ತಾರೆ.

ಬಿಬ್ಲಿಕಲ್ ಕತೆಗಳು ಭಾರತೀಯ ಕಲೆಗಳಲ್ಲಿ ಸಮ್ಮಿಳಿತವಾಗಬೇಕಾದರೆ, ಗೋವಾದಲ್ಲಿ ಆದಂತೆ, ಆ ಕತೆಗಳು ಸ್ಥಳೀಯ ಬದಲಾವಣೆಗಳಿಗೆ ಒಳಗಾಗಬೇಕು. ಆ ಕತೆಗಳು ಸಂಪ್ರದಾಯದ ಕತೆಗಳಾಗಿ ಮಾರ್ಪಾಡಾಗಲು ಅದರಲ್ಲಿ ಬರುವ ಪಾತ್ರಗಳು ’ಇಹ’ಲೋಕವನ್ನು ತ್ಯಜಿಸಿ ’ಪರ’ಪಾತ್ರಗಳಾಗಬೇಕು. ಕತೆಯ ಮೂಲ ಎಳೆಯನ್ನಷ್ಟು ಬಿಟ್ಟು ಉಳಿದೆಲ್ಲ ಸ್ವಂತ ಅಭಿವ್ಯಕ್ತಿಗೆ ತೆರೆದುಕೊಳ್ಳಬೇಕು. ಹೀಗೆ ಆಗಬೇಕಾದರೆ ಆ ಕತೆಗಳು ಸಂಪ್ರದಾಯವೊಂದರ ಕತೆಯಾಗಿ ಬದಲಾಗಬೇಕು. ಆ ಪಾತ್ರಗಳು ಕಲಾವಿದರಿಗೆ ಅನುಭವ ರೂಪದಲ್ಲಿ ಒದಗಿ ಬರುವಂತೆ ಕತೆಗಳನ್ನು ಹೆಣೆದುಕೊಳ್ಳಬೇಕು.

ಭಾರತದಲ್ಲಿ ಸಂಪ್ರದಾಯಗಳಿಗೆ ಎಂದೆಂದಿಗೂ ಸ್ವಾಗತವಿದೆ. ಇಸ್ಲಾಂ ರಿಲಿಜನ್ನು ಸೂಫಿ ಸಂಪ್ರದಾಯಗಳಾಗಿ ಬದಲಾಗುವದರ ಮೂಲಕ ಭಾರತದಲ್ಲಿ ನೆಲೆಯನ್ನು ಕಂಡುಕೊಂಡಿದ್ದರಿಂದ ಭಾರತೀಯ ಕಲಾ ಪ್ರಕಾರಗಳಲ್ಲಿ ಬೆರೆಯಲು ಸಾಧ್ಯವಾಯಿತು. ಹಿಂದುಸ್ತಾನೀ ಸಂಗೀತದಲ್ಲಿ ಇಸ್ಲಾಂ ಪರಂಪರೆಗಳು ಬೆಳೆದು ಆ ಸಂಗೀತವನ್ನು ಇನ್ನಷ್ಟು ಶ್ರೀಮಂತಗೊಳಿಸಿದವು. ಹೊಸ ಘರಾಣೆಗಳು ಹುಟ್ಟಿದವು. ನೃತ್ಯ ಪ್ರಕಾರಗಳಲ್ಲೂ ಇಸ್ಲಾಂ ಸಂಪ್ರದಾಯದ ರೂಪವನ್ನು ತಾಳಿ ಬೆರೆತುಕೊಂಡಿತು. ಹೀಗಾಗಿ ಯಕ್ಷಗಾನದಲ್ಲಿ ಸೂಫಿ ಸಂತನೊಬ್ಬನನ್ನು ಎಳೆದು ತರುವದು ಸಮಸ್ಯೆಯೇ ಅಲ್ಲ. ಹಾಗೆಯೇ ಕ್ರಿಶ್ಚಿಯಾನಿಟಿಯ ಕತೆಗಳೂ ಸಂಪ್ರದಾಯದ ಕತೆಗಳಾಗಿ ರೂಪಾಂತರವಾದರೆ, ಆ ಕತೆಗಳು ಸಹಜವಾಗಿಯೇ ಯಕ್ಷಗಾನದಂತಹ ಕಲಾ ಪ್ರಕಾರಗಳಲ್ಲಿ ಸೇರಿಕೊಳ್ಳಬಹುದು.

ಈ ಹಿಂದೆ ಪೀಟರ್ ಬ್ರೂಕ್ ಎನ್ನುವ ಹಾಲಿವುಡ್ ನಿರ್ದೇಶಕ ಮಹಾಭಾರತವನ್ನು ಇಂಗ್ಲೀಷ್ ಭಾಷೆಯಲ್ಲಿ ಚಲನಚಿತ್ರದ ರೂಪದಲ್ಲಿ ಸಿದ್ಧಪಡಿಸಿದ. ಆ ಚಿತ್ರದಲ್ಲಿ ನಟಿಸಿದ ಕಲಾವಿದರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಆದರೆ ಆ ಚಿತ್ರವು ಸಂಪೂರ್ಣ ವಾಸ್ತವಿಕವೋ ಎಂಬಂತೆ ’ಇಹ’ರೂಪದಲ್ಲಿ ಮೂಡಿ ಬಂದಿತು. ಹೀಗಾಗಿ ಭಾರತೀಯ ಪೌರಾಣಿಕ ಚಿತ್ರಗಳಲ್ಲಿ ಅನುಭೂತಿಗೆ ಬರುವ ಭಕ್ತಿ ಇಲ್ಲಿ ಮಾಯವಾಗಿತ್ತು. ಏಕೆಂದರೆ ಆ ಪಾತ್ರಗಳು ’ಪರ’ವಾಗಿರಲೇ ಇಲ್ಲ. ಹೀಗಾಗಿ ಈ ಚಿತ್ರವು ಭಾರತೀಯ ಜನಸಾಮಾನ್ಯ ವೀಕ್ಷಕರನ್ನು ರಂಜಿಸಲೇ ಇಲ್ಲ.  ಒಂದು ವೇಳೆ ಇತಿಹಾಸ ಹಾಗೂ ಪುರಾಣಗಳ ಕಥೆಗಳನ್ನು ಚಲನಚಿತ್ರವನ್ನಾಗಿಸಲು ಹಾಲಿವುಡ್ ನಿರ್ದೇಶಕರು ಬಯಸಿದರೆ ಹಾಗೂ ಅದು ಭಾರತೀಯರ ಮೇಲೆ ನಮ್ಮ ಪ್ರಾಚೀನ ಕಲೆಗಳು ಸೃಷ್ಟಿಸುವ ಭಾವವನ್ನೇ ಸೃಷ್ಟಿಸಬೇಕಾದರೆ ಆ ಪಾತ್ರಗಳನ್ನು ’ಪರ’ವನ್ನಾಗಿ ಚಿತ್ರಿಸುವದು ಅಗತ್ಯ. ಹಾಗೆಯೇ ಚಿಕ್ಕಂದಿನಿಂದ ಮಾತೃಭಾಷೆಯಲ್ಲಿ ಐತಿಹಾಸಿಕ ಕತೆಗಳನ್ನು ಕೇಳಿ, ನೋಡಿ ಆನಂದಿಸಿದ ನಾವು ಜಗತ್ತಿನ ಬೇರೆ ಭಾಷೆಗಳಲ್ಲಿ ಅದೇ ಆನಂದವನ್ನು ಕೇಳುಗರಲ್ಲಿ ಹಾಗೂ ನೋಡುಗರಲ್ಲಿ ಮೂಡಿಸಬೇಕಾದರೂ ’ಪರ’ ಅನುಭವವು ಸೃಜಿಸುವಂತೆ ರೂಪಿಸುವದು ಅತೀ ಅಗತ್ಯ. ಏಕೆಂದರೆ ಜಪಾನಿನಿಂದ ಬಾಲಿಯ ತನಕ ಸ್ಥಳೀಯ ಕಲೆಗಳಲ್ಲಿ ಹಬ್ಬಿರುವ ರಾಮ ಹಾಗೂ ಕೃಷ್ಣನ ಕತೆಗಳು ಅದರಾಚೆಗೂ ಹಬ್ಬಬಾರದೆಂಬ ನಿಯಮವೇನೂ ಇಲ್ಲ. ಅಗತ್ಯವಿರುವದು ಆ ’ಪರ’ಪಾತ್ರಗಳನ್ನು ಆ ಸ್ಥಳೀಯರ ಅನುಭವ ಪ್ರಪಂಚಕ್ಕೆ ಒಗ್ಗಿಸುವ ಪ್ರಯತ್ನವಷ್ಟೇ.

ಕ್ರಿಶ್ಚಿಯಾನಿಟಿಯ ಬರ್ಬರ ಚರಿತ್ರೆಯು ಇಂಥ ಪ್ರಯೋಗಗಳ ಕುರಿತು ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸುವದು ಸಹಜ. ಉದಾಹರಣೆಗೆ, ಕ್ರಿಸ್ಮಸ್ ಟ್ರೀ, ಸಾಂತಾಕ್ರುಜ್ ಮುಂತಾದ ಕ್ರಿಶ್ಚಿಯನ್ ಆಚರಣೆಗಳು ಒಂದಾನೊಂದು ಕಾಲದಲ್ಲಿ ಯುರೋಪಿನ ಸ್ಥಳೀಯ ಆಚರಣೆಗಳಾಗಿದ್ದವು. ಆದರೆ ಯುರೋಪಿನ ಸ್ಥಳೀಯ ಸಂಸ್ಕೃತಿಗಳನ್ನು ನುಂಗಿಹಾಕಿದ ಕ್ರಿಶ್ಚಿಯಾನಿಟಿಯು, ಅವುಗಳ ಅವಶೇಷಗಳನ್ನು ಮಾತ್ರ ತನ್ನಲ್ಲಿ ಉಳಿಸಿಕೊಂಡಿತು. ಆದ್ದರಿಂದ ಕ್ರಿಶ್ಚಿಯನ್ ರಿಲಿಜನ್ನೊಂದು, ಆಮಿಷಗಳ ಮೂಲಕ ಸ್ಥಳೀಯ ಕಲೆಯಲ್ಲಿ ಜನರೆದುರಿಗೆ ತೆರೆದುಕೊಳ್ಳುವದು, ಮುಂದೆ ಆ ಸ್ಥಳೀಯ ಸಂಸ್ಕೃತಿಯನ್ನು ನುಂಗುವದಕ್ಕಾಗಿಯೇ ಎಂದು ಜನರೇಕೆ ಭಾವಿಸಬಾರದು? ಇಲ್ಲಿ ಜನರಿಗೆ ಆತಂಕ ಇರುವದು ಕಥೆಯ ಕುರಿತಲ್ಲ. ರಿಲಿಜನ್ನುಗಳ ಧೋರಣೆಯ ಕುರಿತು. ಏಸುವಿನ ಕಥೆಯನ್ನು ಯಕ್ಷಗಾನದಲ್ಲಿ ಪ್ರಸ್ತುತಪಡಿಸಲು, ಆಯೋಜಿಸುವ ಚರ್ಚು, ಕಲಾವಿದರನ್ನು ಗಣಪತಿಯ ವಂದನೆಯೊಂದಿಗೆ ಆಟವನ್ನು ಆರಂಭಿಸುವದರ ಕುರಿತು ತಕರಾರು ತೆಗೆಯುವದಿಲ್ಲವೆಂದು ಭರವಸೆ ಕೊಡುವದೇ? ಚೌಕಿಯನ್ನು ಪೂಜಿಸಲು ಅನುಮತಿಸುವದೇ? ಸ್ಥಳೀಯ ವಸ್ತ್ರಗಳಲ್ಲಿ ಪಾತ್ರಗಳು ಮೂಡಿ ಬರುವದನ್ನು ಸಹಿಸಿಕೊಳ್ಳುವದೇ? ಪಾತ್ರಗಳು ವಾಕ್ಯಗಳನ್ನ ಸ್ವಂತವಾಗಿ ಕಟ್ಟಿಕೊಳ್ಳಲು ಬಿಡುವದೇ? ಅಥವಾ ದುಡ್ಡು ಕೊಡುತ್ತಿದೆ ಎಂಬ ಏಕೈಕ ಕಾರಣಕ್ಕೆ ಚರ್ಚಿಗೆ ಸರಿಬರದ ಅಂಶಗಳನ್ನೆಲ್ಲ ತೆಗೆದು ಯಕ್ಷಗಾನವನ್ನು ಅಂಗವಿಕಲವನ್ನಾಗಿಸಬೇಕೇ? ಕೊನೆಯದಾಗಿ ಈ ರೀತಿಯ ಪ್ರಯೋಗಗಳು ನಡೆಯಬೇಕೆಂಬುದು ಯಕ್ಷಗಾನ ಕಲಾವಿದರಿಗೆ ಅನಿಸಬೇಕೇ ಹೊರತು, ಚರ್ಚೊಂದು ಮುಂದೆ ಬಂದು ಕಲಾವಿದರಿಗೆ ಆಮಿಷವನ್ನೊಡ್ಡಿ, ಅವರ ಕೈಯಲ್ಲಿ ಏಸುವಿನ ಆಟವನ್ನು ಬಲವಂತವಾಗಿ ಹೆರುವಂತೆ ಮಾಡಿದರೆ ಅಂತಹ ಪ್ರಯೋಗಗಳು ಹೆಚ್ಚು ದಿನಗಳ ತನಕ ಅಸ್ತಿತ್ವವನ್ನು ಉಳಿಸಿಕೊಳ್ಳಲಾರವು.

10 ಟಿಪ್ಪಣಿಗಳು Post a comment
 1. ಮಾರ್ಕ್ಸ್ ಮಂಜು
  ಮೇ 25 2017

  ಯಕ್ಷಗಾನದಲ್ಲಿ ಮಹರ್ಷಿ ಮಾರ್ಕ್ಸ್ ಮಹಾತ್ಮೆ ಮಾಡಬೇಕಾದ ಅವಶ್ಯಕತೆಯಿದೆ

  ಉತ್ತರ
 2. ಪ್ರಜ್ನಾ
  ಮೇ 25 2017

  ೧. “ಅಲ್ಲದೇ ಕಲಾವಿದನಿಗೆ ಸ್ವಾತಂತ್ರ್ಯವಿರಬೇಕೆಂಬುದು ಎಲ್ಲರಿಗೂ ಒಪ್ಪಿತವಾಗುವ ಅಂಶವೇ ಆಗಿದೆ”
  ೨. “ಯಕ್ಷಗಾನದಲ್ಲಿ ಏಸುವಿನ ಕತೆಯು ಸಮರ್ಪಕವಲ್ಲ ಎನ್ನುವದು ಯಕ್ಷಗಾನ ಕಲಾವಿದರ ಅನಿಸಿಕೆಯಂತೂ ಹೌದು”.
  –>
  ಈ ಎರಡೂ ಹೇಳಿಕೆಗಳೂ ತದ್ವಿರುದ್ಧವಾಗಿದೆ. ’ಏಸುವಿನ ಕತೆಯು ಸಮರ್ಪಕವಲ್ಲ’ ಎಂಬುದು ಕಲಾವಿದರ ಅಭಿಪ್ರಾಯವಾದರೆ ’ಮಹಾಚೇತನ ಏಸು ಕ್ರಿಸ್ತ ಮಹಾತ್ಮೆ’ ಎಂಬ ಯಕ್ಷಗಾನದಲ್ಲಾದರೂ ಯಾಕೆ ಕಲಾವಿದರು ಪಾಲ್ಗೊಳ್ಳುತ್ತಿದ್ದರು? ಈ ಯಕ್ಷಗಾನಕ್ಕೆ ವಿರೋಧಾಭಿಪ್ರಾಯ ಎದುರಾಗುತ್ತಿರುವದು ಕಲಾವಿದರಿಂದಲ್ಲವಲ್ಲ!

  “ಯಕ್ಷಗಾನ ಕಲಾರಸಿಕರಿಗೆ ಹಾಗೂ ಕಲಾವಿದರಿಗೆ ಏಸುವಿನ ಕತೆಯು ಈ ಕಲೆಯಲ್ಲಿ ಏಕೆ ಅನ್ವಯವಾಗುವದಿಲ್ಲ ಎನ್ನುವದನ್ನು ತಾರ್ಕಿಕವಾಗಿ ನಾವು ಮಂಡಿಸಬೇಕು”
  –>
  ಇದರಲ್ಲಿ ತರ್ಕವಾದರೂ ಏನಿದೆ? ಅಗತ್ಯವಾದರೂ ಏನಿದೆ? ಯೇಸುವಿನ ಕತೆ ಈ ಕಲೆಯಲ್ಲಿ ಅನ್ವಯವಾಗುತ್ತದೊ ಬಿಡುತ್ತದೊ ಎಂದು ನಿರ್ಧರಿಸಬೇಕಾದವರು ವೀಕ್ಷಕರು, ಯಕ್ಷಗಾನ ರಸಿಕರು, ಕಲಾ ಆಸಕ್ತರು. ವಿರೋಧ ವ್ಯಕ್ತವಾಗುತ್ತಿರುವದು ಮೂರನೆಯವರಿಂದ. ಕಲಾರಸಿಕರಿಗೆ, ಕಲಾಸಕ್ತರಿಗೆ ಈ ಪ್ರಯೋಗ ಇಷ್ಟವಾಗದಿದ್ದರೆ ಅದನ್ನು ನೋಡಹೋಗುವದಿಲ್ಲ ಅಷ್ಟೆ. ಅಷ್ಟಕ್ಕೂ ಯಕ್ಷಗಾನದಲ್ಲಿ ಪುರಾಣ, ರಾಮಾಯಣ, ಮಹಾಭಾರತಗಳನ್ನು ಮಾತ್ರ ಆಡಿಸಬೇಕೆಂದು ಎಲ್ಲಾದರೂ ರೂಲ್ಸ್ ಇದೆಯೆ? ಯಕ್ಷಗಾನದಲ್ಲಿ ಆಧುನಿಕ ಸಾಮಾಜಿಕ ಜೀವನ ಕಥೆಯ ಆಟಗಳನ್ನೂ ಆಡಿಸಲಾಗಿದೆ, ಭಾಗವತಿಕೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಜೋಡಿಸುವ ಪ್ರಯೋಗವನ್ನೂ ಕೆಲವರು ಮಾಡಿದ್ದಾರೆ. ಇದರಲ್ಲಿ ಅನ್ವಯ, ಅನನ್ವಯ, ತಾರ್ಕಿಕ ಅತಾರ್ಕಿಕದ ಪ್ರಶ್ನೆಯೆ ಇಲ್ಲ. ವಿವಿಧ ಪ್ರಯೋಗಗಳನ್ನು ಮಾಡಿದಾಗಲೆಲ್ಲ ಕೆಲವು ಜನರು ಸ್ವೀಕರಿಸಿದವರೂ ಇದ್ದಾರೆ, ಸ್ವೀಕರಿಸದಿದ್ದವರೂ ಇದ್ದಾರೆ. ಸಂಗೀತ ಸೇರಿದಂತೆ ಎಲ್ಲ ಕಲೆಗಳೂ ಪ್ರಯೋಗಕ್ಕೆ, ಬದಲಾವಣೆಗೆ ಒಡ್ಡಿಕೊಂಡಿವೆ. ಯಕ್ಷಗಾನಕ್ಕೆ ಯಾವುದನ್ನು ಒಳಗೊಳ್ಳಬೇಕು, ಒಳಗೊಳ್ಳಬಾರದು ಎಂದು ರೂಲ್ ಮಾಡಿ ತಾರ್ಕಿಕ ವಾದ ಮಂಡಿಸುವದೇ ’ವಸಾಹತುಶಾಹಿ ಪ್ರಜ್ನೆ’. ಯಾಕೆಂದರೆ ಅದು ರಿಲಿಜಿಯಸ್ ಮನಸ್ಥಿತಿಯಿಂದ ಹುಟ್ಟಿಕೊಳ್ಳುವಂತದ್ದು.

  “ಬಿಬ್ಲಿಕಲ್ ಕತೆಗಳು ಭಾರತೀಯ ಕಲೆಗಳಲ್ಲಿ ಸಮ್ಮಿಳಿತವಾಗಬೇಕಾದರೆ, ಗೋವಾದಲ್ಲಿ ಆದಂತೆ, ಆ ಕತೆಗಳು ಸ್ಥಳೀಯ ಬದಲಾವಣೆಗಳಿಗೆ ಒಳಗಾಗಬೇಕು”
  –>
  ನೀವೆ ಬದಲಾವಣೆಗೆ ತೆರೆದುಕೊಳ್ಳದೆ ಬದಲಾವಣೆಗೊಳಪಡಬೇಕು ಎನ್ನುವದರಲ್ಲಿ ಯಾವ ವಾದ ಇದೆ? ಈ ಯಕ್ಷಗಾನವನ್ನು ನಡೆಸಬೇಕು ಎಂದು ಮುಂದೆ ಬಂದಿರುವದು ಕ್ರಿಶ್ಚಿಯನ್ ಸಮುದಾಯ. ಆದ್ದರಿಂದ ಆ ಸಮುದಾಯ ಬದಲಾವಣೆಗೆ ತೆರೆದುಕೊಂಡಿದೆ ಅಂತಾನೆ ಅರ್ಥ. ಈ ಯಕ್ಷಗಾನ ಏಸುವಿನ ಕಥೆಗೆ ಅನ್ವಯ ಅಲ್ಲ ಎಂದು ವಾದಿಸುತ್ತಾ ಬದಲಾವಣೆಗೆ ತೆರೆದುಕೊಳ್ಳದವರು ನೀವು. ಹಾಗಿದ್ದಾಗ ಬದಲಾವಣೆಗೊಳಗಾಗಬೇಕು ಎನ್ನುವ ನಿಮ್ಮ ಉಪದೇಶ ಅನ್ವಯವಾಗಬೇಕಾದ್ದು ನಿಮಗೆ ಹೊರತು ಯಕ್ಷಗಾನದ ಪರ ಇರುವವರಿಗಲ್ಲ.
  ಒಮ್ಮೆ ಮದುವೆ ಮನೆಯಲ್ಲಿ ಊಟಕ್ಕೆ ಕುಳಿತಾಗ ಒಬ್ಬ ತನಗೆ ಸಾಂಬಾರ್ ಬೇಕೆನ್ನುತ್ತಾನೆ, ಇನ್ನೆನು ಬಡಿಸಬೇಕೆನ್ನುವಷ್ಟರಲ್ಲಿ ಪಕ್ಕದಲ್ಲಿ ಕುಳಿತಿದ್ದವನು ’ಅವನಿಗೆ ಸಾಂಬಾರ್ ಹಾಕಬೇಡಿ, ಅದವನಿಗೆ ಅಲರ್ಜಿ. ಅವನ ದೇಹಸ್ಥಿತಿ ಸಾಂಬಾರ್ ಗೆ ಹೊಂದಿಕೊಳ್ಳಲಾರದು. ಸಾಂಬಾರ್ ಗೆ ಹೊಂದಿಕೊಳ್ಳುವಂತೆ ಅವನ ದೇಹ ಹೊಂದಿಕೊಂಡ ನಂತರ ಹಾಕಿಕೊಳ್ಳಲಿ’ ಎನ್ನುತ್ತಾನೆ. ನಿಮ್ಮ ವಾದ ಆ ಪಕ್ಕದಲ್ಲಿ ಕುಳಿತಿದ್ದವನ ವಾದದ ತರವೆ ಇದೆ.

  “…ಆದರೆ ಆ ಆಟವನ್ನು ನೋಡಲು ಬಂದ ಕ್ರಿಶ್ಚಿಯನ್ ಪಾದ್ರಿಗಳು ಇದನ್ನು ಸ್ವಾಗತಿಸುತ್ತಾರೆಯೇ? ”
  –>
  ಆ ಚಿಂತೆ ನಿಮಗೇಕೆ? ಪಾದ್ರಿಗಳು, ಕಟ್ಟಾ ಕ್ರಿಶ್ಚಿಯನ್ನರೆನಿಸಿಕೊಂಡವರು ಅದನ್ನು ಸ್ವಾಗತಿಸುತ್ತಾರೊ ಬಿಡುತ್ತಾರೊ ಎನ್ನುವದು ಅವರಿಗೆ ಬಿಟ್ಟಿದ್ದು. ಅವರಿಗೆ ಐಡೊಲೆಟ್ರಿಯಾಗನಿಸಿದರೆ, ಕ್ರಿಶ್ಚಿಯನ್ ಧರ್ಮದ ವಿರುದ್ಧ ಎಂದು ಅವರಿಗನಿಸಿದರೆ ಅದರಿಂದ ಅವರೆ ದೂರ ಇದ್ದಾರು. ಅಷ್ಟಕ್ಕೂ ಈಗ ಈ ಯಕ್ಷಗಾನದ ಬಗ್ಗೆ ಕ್ಯಾತೆ ತೆಗೆಯುವವರಿಗೆ ಯಾಕೆ ಆ ಉಸಾಬರಿ?
  ತಮಾಶೆ ಎಂದರೆ, ಈ ಸಂಪೂರ್ಣ ಘಟನೆಯ ಸುತ್ತ ಎದ್ದ ವಾದ ವಿವಾದಗಳು ಸ್ಪಷ್ಟವಾಗಿ ಬಾಲಗಂಗಾಧರರ ಥಿಯರಿಯನ್ನು, ಲೇಖಕರ ವಾದವನ್ನು ಅಲ್ಲಗೆಳೆಯುತ್ತವೆ. ಯಾಕೆಂದರೆ ಬಾಲಗಂಗಾಧರರ ಥಿಯರಿಯ ಪ್ರಕಾರ(ಹಾಗೂ ಲೇಖಕರ ಪ್ರಕಾರ) ಏಸುವಿನ ಕಥೆಯನ್ನು ಇಹವೆಂದು ಭಾವಿಸುವ ಕ್ರಿಶ್ಚಿಯನ್ ಸಮುದಾಯ ’ಮಹಾಚೇತನ ಏಸು ಕ್ರಿಸ್ತ ಮಹಾತ್ಮೆ’ ಯಕ್ಷಗಾನವನ್ನು ಆಡಿಸಲು ಮೊದಲನೆಯದಾಗಿ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಆದರೆ ನಡೆದದ್ದು ಅದಕ್ಕೆ ತದ್ವಿರುದ್ಧವಾದದ್ದು. ಈಗ ಸ್ವತಃ ಕ್ರಿಶ್ಚಿಯನ್ ಸಮುದಾಯ ಯಕ್ಷಗಾನವನ್ನು ನಡೆಸಲು ಮುಂದಾಗಿದೆ. ಈ ಮೊದಲು ಈ ಯಕ್ಷಗಾನ ನಡೆದದ್ದೂ ಇದೆ. ಇಲ್ಲಿ ಲೇಖಕರೆ ಹೇಳಿದಂತೆ ಯಕ್ಷಗಾನ ಐಡೊಲೆಟ್ರಿ, ’ಪರ’ಲೋಕದ ವ್ಯಾಖ್ಯಾನವನ್ನು ಹೊಂದಿದೆ. ಹಾಗಾಗಿ ಪಾದ್ರಿಗಳು, ಕ್ರಿಶ್ಚಿಯನ್ನರು ಇದನ್ನು ವಿರೋಧಿಸಬೇಕಾಗಿತ್ತು. ಆದರೆ ಈ ಮೊದಲು ಈ ಯಕ್ಷಗಾನ ನಡೆದಾಗ ಯಾವ ಕ್ರಿಶ್ಚಿಯನ್ನರೂ ವಿರೋಧ ವ್ಯಕ್ತಪಡಿಸಲೆ ಇಲ್ಲವಲ್ಲ! ಹಾಗಿದ್ದ ಮೇಲೆ ಇಲ್ಲಿ ಲೇಖಕರು ಪರಿಭಾವಿಸುತ್ತಿರುವದು, ಬಾಲಗಂಗಾಧರರ ವಾದ ತಪ್ಪೆಂದೆ ಅಲ್ಲವೆ?
  ಎರಡನೆಯದಾಗಿ, ಇಲ್ಲಿ ಲೇಖಕರು ಯಕ್ಷಗಾನದ ಸುತ್ತ ಗೆರೆ ಹಾಕಿ ಜೀಸಸ್ ನ ಕಥೆಯನ್ನು ಒಳಗೊಳ್ಳಬಾರದೆಂದು ಅಭಿಪ್ರಾಯಪಡುತ್ತಿದ್ದರೆಂದರೆ ವಸಾಹತುಪ್ರಜ್ನೆಯ ಬಗ್ಗೆ ಅಧ್ಯಯನ ಮಾಡಿ, ಮಥಿಸಿ ನಂತರ ವಸಾಹತು ಪ್ರಜ್ನೆಯಿಂದಲೆ ನುಂಗಲ್ಪಟ್ಟವರೆಂದು ಅನಿಸುತ್ತಿದೆ.

  ಉತ್ತರ
  • ನಾ-ಗ-ಶೆ-ಟ್ಟಿ
   ಮೇ 29 2017

   ಕಿರಣ್ ಬಾಟನಿ ಸರ್ ಅವರು ಸಕತ್ತಾಗಿ ಬಾಲಂಗೋಚಿಗಳನ್ನು ಅಟ್ಟಾಡಿಸಿದ್ದಾರೆ! ಭೇಷ್!

   ಉತ್ತರ
   • ಪ್ರಜ್ನಾ
    ಮೇ 29 2017

    ನಾಗಶೆಟ್ಟಿ ಸರ್,
    ನೋಡಿ ಲೇಖಕರು ಹೀಗೆ ಹೇಳ್ತಾರೆ. ಈ ರೀತಿಯ ಪ್ರಯೋಗಗಳು ನಡೆಯಬೇಕೆಂಬುದು ಯಕ್ಷಗಾನ ಕಲಾವಿದರಿಗೆ ಮಾತ್ರ ಅನಿಸಬೇಕಂತೆ. ಚರ್ಚೊಂದು ಕಲಾವಿದರಿಗೆ ಹಣದ ಆಮಿಶವೊಡ್ಡಿ ಸ್ಪಾನ್ಸರ್ ಮಾಡಬಾರದಂತೆ. ಅದು ಬಲವಂತದ ಹೇರಿಕೆಯಂತೆ.
    ಹಾಗಿದ್ದರೆ ಈ ಲೇಖಕರು ಟಿ.ವಿ ವಾಹಿನಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನೂ, ಚಲನಚಿತ್ರ, ನಾಟಕಗಳನ್ನು ವಿರೋಧಿಸಬೇಕು. ಯಾಕೆಂದರೆ ಈ ಎಲ್ಲ ಕಾರ್ಯಕ್ರಮಗಳು ಕಲಾವಿದರ ಅನಿಸಿಕೆಯಂತೆ ನಡೆಯುತ್ತಿಲ್ಲ, ಅದರ ಡೈರೆಕ್ಟರ್ ಹೇಳಿದಂತೆ ನಡೆಯುತ್ತವೆ. ಈ ಲೇಖಕರ ವಾದದ ಪ್ರಕಾರ ಹೇಳುವದಾದರೆ ಬಲವಂತವಾಗಿ ಹಣದ ಆಮಿಷಕ್ಕೆ ಒಳಗಾಗಿ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.
    ಕ್ರಿಕೆಟ್ ನಲ್ಲಿ ಒನ್-ಡೆ, ಟ್ವೆಂಟಿ-ಟ್ವೆಂಟಿ ಪಂದ್ಯಗಳನ್ನು ನಿಷೇಧಿಸಬೇಕು. ಯಾಕೆಂದರೆ ಕ್ರಿಕೆಟ್ ನಲ್ಲಿ ಈ ಪ್ರಯೋಗಗಳನ್ನು ಅಳವಡಿಸಿದ್ದು ಕ್ರಿಕೆಟ್ ಮಂಡಳಿ, ಆಟಗಾಗರರಲ್ಲ. ಹೀಗೆ ಪಟ್ಟಿ ಮಾಡುತ್ತಾ ಸಾಗಬಹುದು.
    ಸಿಎಸ್ ಎಲ್ಸಿ ಸಂಶೋಧನೆಯ ಆಧಾರದ ಮೇಲೆ ಒಂದು ಲೇಖನವನ್ನು ಎಷ್ಟು ಹಾಸ್ಯಾಸ್ಪದವಾಗಿ, ಬಾಲಿಶವಾಗಿ ಬರೆಯಬೇಕೆಂಬುದಕ್ಕೆ ಈ ಲೇಖನ ಸಾಕ್ಷಿ. ಸಿಎಸ್ ಎಲ್ಸಿ ಈ ಲೇಖನವನ್ನು ತನ್ನ ಮುಕುಟಕ್ಕೆ ಸೇರಿಸಿಕೊಳ್ಳದಿದ್ದರೆ ಸಾಕು.
    ಪೋಸ್ಟ್ ಸ್ಕ್ರಿಪ್ಟ್: ಏಸುಮಹಾತ್ಮೆ ಯಕ್ಷಗಾನ ಯಾವುದೆ ಅಡೆತಡೆಯಿಲ್ಲದೆ ನಡೆದಿದೆ. ಲೇಖಕರು ಈ ಲೇಖನದಲ್ಲಿ ವ್ಯಕ್ತಪಡಿಸಿದ ಯಾವ ಅಡೆತಡೆಗಳೂ, ಆತಂಕಗಳೂ ಎದುರಾಗಿಲ್ಲ. ಈ ಲೇಖನದಲ್ಲಿನ, ಹಾಗೂ ಅದರಲ್ಲಿನ ವಾದ, ತರ್ಕ, ಥಿಯರಿಯ ಜೊಳ್ಳು ಮಾತ್ರ ಢಾಳಾಗಿ ಎದ್ದು ಕಾಣುತ್ತಿವೆ.

    ಉತ್ತರ
    • ನಾ-ಗ-ಶೆ-ಟ್ಟಿ
     ಮೇ 31 2017

     ಕಿರಣ್ ಬಾಟನಿ ಅವರೇ, ಖರೆ ಹೇಳಿದಿರಿ ನೀವು! ಈ ಬಾಲಂಗೋಚಿಗಳದ್ದೂ ಒಂದು ರಿಲಿಜನ್. ಹಿಂದೂ ಮತ ರಿಲಿಜನ್ ಅಲ್ಲ ಎಂದು ಸಾಧಿಸುತ್ತಲೇ ತಮ್ಮದೇ ಆದ ಅಕಾಡೆಮಿಕ್ ರಿಲಿಜನ್ ಕಟ್ಟಿಕೊಂಡಿದ್ದಾರೆ. ಇವರ ಪ್ರವಾದಿ ಸ್ವಘೋಷಿತ ಬ್ರಹ್ಮಜ್ಞಾನಿ ಬಾಲಗಂಗಾಧರ! ಇವರ ಪವಿತ್ರ ಗ್ರಂಥ ‘ಹೀದನ್ ಇನ್ ಹಿಸ್ ಬ್ಲೈಂಡ್ ನೆಸ್’. ಎಲ್ಲವನ್ನೂ ಈ ಪುಸ್ತಕದ ಸೀಮಿತ ಚೌಕಟ್ಟಿನಲ್ಲೇ ಅರ್ಥೈಸುತ್ತಾರೆ. ಅವರ ಅರ್ಥೈಸುವಿಕೆಯನ್ನು ಒಪ್ಪದವರ ಮೇಲೆ ಅಸಹಿಷ್ಣುತೆಯನ್ನು ತೋರಿಸುತ್ತಾರೆ. ಮತಾಂತರವಾಗದೆ ಇವರೊಡನೆ ಸಂವಾದ ಅಸಾಧ್ಯ. ನಿಮ್ಮಂತಹ ಧೀಮಂತ ನಿರ್ಭೀತ ಸಂಸ್ಕೃತಿ ಚಿಂತಕರಿಂದ ಮಾತ್ರ ಇವರುಗಳ ಉಪಟಳವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ದಯವಿಟ್ಟು ಮುಂದುವರೆಸಿ. ನಿಮಗೆ ಪ್ರಜ್ಞಾವಂತರೆಲ್ಲರ ಬೆಂಬಲವಿರುತ್ತದೆ.

     ಉತ್ತರ
     • ಪ್ರಜ್ನಾ
      ಮೇ 31 2017
      • SalamBava
       ಜೂನ್ 1 2017

       I too wholeheartedly support your endeavour. But please be prepared to face vile abusive trolling by Witian, Rao, Shripada and others.

       ಉತ್ತರ
 3. ಮೇ 26 2017

  ನೀವು ಹೇಳಿದ್ದು ಹೀಗೆ “ಈ ರೀತಿಯ ಪ್ರಯೋಗಗಳು ನಡೆಯಬೇಕೆಂಬುದು ಯಕ್ಷಗಾನ ಕಲಾವಿದರಿಗೆ ಅನಿಸಬೇಕೇ ಹೊರತು, ಚರ್ಚೊಂದು ಮುಂದೆ ಬಂದು ಕಲಾವಿದರಿಗೆ ಆಮಿಷವನ್ನೊಡ್ಡಿ, ಅವರ ಕೈಯಲ್ಲಿ ಏಸುವಿನ ಆಟವನ್ನು ಬಲವಂತವಾಗಿ ಹೆರುವಂತೆ ಮಾಡಿದರೆ ಅಂತಹ ಪ್ರಯೋಗಗಳು ಹೆಚ್ಚು ದಿನಗಳ ತನಕ ಅಸ್ತಿತ್ವವನ್ನು ಉಳಿಸಿಕೊಳ್ಳಲಾರವು.”.

  ಇನ್ನು ನಾಕು ದಿನ ಕಾದು ನೋಡುವ, ಪ್ರೇಕ್ಷಕರು ಮತ್ತು ಕಲಾವಿದರ ಅನಿಸಿಕೆ ಏನು ಅಂತ ಗೊತ್ತಾಗುತ್ತದೆ. ಆಮೇಲೆ ಪ್ರಸಂಗ ಬರ್ಕತ್ತಿಲ್ಲ ಅಂತ ಆದರೆ ಮಣ್ಣು ತಿನ್ನಲಿ,

  Advertisements

  ಉತ್ತರ
 4. vageesh kumar
  ಮೇ 26 2017

  ಕರಾವಳಿಯ ಪಾದ್ರಿಗಳಿಗೆ ಯಕ್ಷಗಾನದ ರೀತಿ-ರಿವಾಜು ಗೊತ್ತಿದ್ದೇ ಇರುತ್ತದೆ. ಹೀಗಾಗಿ ಅವರು ವೇಷ ಭೂಷಣ, ಗಜಮುಖದವಗೆ, ಚೌಕಿ ಪೂಜೆ ಇತ್ಯಾದಿಗಳನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ ಎಂಬ ಅನಿಸಿಕೆಯೇ ಬಾಲಿಶ. ಇನ್ನು ಯಕ್ಷಗಾನದ ಅರ್ಥಗಾರಿಕೆಯನ್ನು ಕೇಳಿದ್ದವರಿಗೆ ಮಾತ್ರ, ಯಾವುದೇ ಪುರಾಣ, ಇತಿಹಾಸ, ಕಾವ್ಯವನ್ನಾದರೂ ಯಕ್ಷಗಾನದ ಭಾಷೆಗೆ ತಕ್ಕಂತೆ ಅಳವಡಿಸಿಕೊಳ್ಳಲು ಸಾಧ್ಯ ಎಂಬುದು ತಿಳಿದೀತು. ಬಪ್ಪನಾಡು ಕ್ಷೇತ್ರ ಮಹಾತ್ಮೆಯಲ್ಲಿ ದೇವಿಗೆ ಬಪ್ಪ ಬ್ಯಾರಿ ಕೈಮುಗಿದು ಸ್ತುತಿಸುವುದಿಲ್ಲ, ನಮಾಜು ಮಾಡುತ್ತಾನೆ. ಅಂತಿಮವಾಗಿ ಯಕ್ಷಗಾನ ಅಥವಾ ತಾಳಮದ್ದಳೆ ಚೆನ್ನಾಗದರೆ ಪ್ರೇಕ್ಷಕ ನೋಡುತ್ತಾನೆ. ಅದು ಬಿಟ್ಟು ಅದು ಹಾಗಿರಬಹುದು, ಹೀಗಾಗಬಹುದು ಎಂದು ಊಹನೆಯ ಮೇಲೆ ಬರೆಯುವುದು ಎಷ್ಟು ಸರಿ ? ವಿಸೂ- ನಾನೇನು ಎಡಪಂಥೀಯನಲ್ಲ

  ಉತ್ತರ
 5. Ananda Kuruswami
  ಮೇ 26 2017

  ಹೀಗೊಂದು ಮಾಹಿತಿ ಬೇಕು ನನಗೆ, ಈ ಲೇಖನ ಬರೆದವರು ಮತ್ತು ಅದರ ಹಿಂದೆ ಕೆಲಸ ಮಾಡಿದವರಿಂದ. ನೀವು ಹೇಳಿದ್ದು ಸರಿ ಎಂದು ಒಪ್ಪಿಕೊಳ್ಳೋಣ. ಈಗ ನನಗೆ ಹೇಳಿ,
  (೧) ಇಂಥ ಒಂದು ಯಕ್ಷಗಾನ ನಡೆದಲ್ಲಿ, ಹಿಂದೂಗಳು ಏನು ಮಾಡಬೇಕು?
  (೨) ಯಕ್ಷಗಾನದ ಕುರಿತು ಕ್ರಿಶ್ಚಿಯನ್ನರ ಧೋರಣೆ ಏನಿರಬೇಕು? (೨.೧) ಒಂದುವೇಳೆ, ಏಸುಕ್ರಿಸ್ತನ ಯಕ್ಷಗಾನಕ್ಕೆ ಹಿಂದುತ್ವ ಪಡೆ ವಿರೋಧಿ ಮಾಡಿದರೆ, ಕ್ರಿಶ್ಚಿಯನ್ನರು ಏನು ಮಾಡಬೇಕು?
  (೩) ಇವೆಲ್ಲದರ ಯಾವ ಗೊಡವೆ ಇಲ್ಲದ — ಎಲ್ಲಾ ಧರ್ಮ ಜಾತಿಗೂ ಸೇರಿರುವಂಥ — ಯಕ್ಷಗಾನದ ರಸಿಕರು ಏನು ಮಾಡಬೇಕು?
  (೪) ನೀವು ಪದೇ ಪದೇ ಹಂಗಿಸುವ ‘ಬುದ್ಧಿಜೀವಿಗಳು’ ಇಲ್ಲಿ ಯಾವ ಪಾತ್ರ ವಹಿಸಬೇಕು?
  (೫) ನಿಮ್ಮಂತ ಅತ್ಯಂತ ಪ್ರಾಮಾಣಿಕ ಬುದ್ಧಿಜೀವಿಗಳಲ್ಲದ ಪಂಡಿತರು ಏನು ಮಾಡಬೇಕು? (ಲೇಖನಗಳನ್ನು ಬರೆಯುವದನ್ನು ಬಿಟ್ಟು ಉಳಿದಂತೆ)

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments