ಅಮಿತ್ ಷಾ ಲಕ್ಷದ್ವೀಪ ಪ್ರವಾಸ ವಿಸ್ತಾರದ ಮತ್ತೊಂದು ಮಜಲು…
ಸಂತೋಷ್ ಬಿ.ಎಲ್
ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ
ಭಾಜಪ
ವಿಸ್ತಾರ-ವಿಕಾಸ ಬಿಜೆಪಿಗೆ ಒಂದೇ ನಾಣ್ಯದ ಎರಡು ಮುಖಗಳು. ಬಹುಮತದಲ್ಲಿ ನಿಲ್ಲದೇ ಸರ್ವವ್ಯಾಪಿಯಾಗಬೇಕು.. ಸರ್ವಸ್ಪರ್ಶಿಯಾಗಬೇಕು ಎಂಬುದು ಬಿಜೆಪಿಯ ಗುರಿ. ವಿಚಾರ-ವಿಕಾಸ-ಸಂಘಟನೆ ನಮ್ಮ ಬೆಳವಣಿಗೆಯ ಮೂರು ಆಯಾಮಗಳು. ವಿಕಾಸ ಪುರುಷ ನರೇಂದ್ರ ಮೋದಿಯವರ ನೇತೃತ್ವ ವಿಸ್ತಾರ ಪುರುಷ ಅಮಿತ್ ಷಾರವರ ಸಾರಥ್ಯ ಇಂದು ಬಿಜೆಪಿಯನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯುತ್ತಿದೆ. ಪ್ರತೀ ಮನೆ-ಮನವನ್ನು ಮುಟ್ಟುವ ಯೋಜನೆಯೊಡನೆ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಎಂಬ ಗುರಿಯೊಡನೆ ಬಿಜೆಪಿಯ ಯಾತ್ರೆ ಭರದಿಂದ ಸಾಗಿದೆ. ಪಂ.ದೀನದಯಾಳ ಉಪಾಧ್ಯಾಯ ಜನ್ಮಶತಾಬ್ದಿ ವರ್ಷ ಈ ಯಾತ್ರೆಗೆ ಇನ್ನಷ್ಟು ಹುರುಪು ತುಂಬಿದೆ. 3 ಸಾವಿರಕ್ಕೂ ಮಿಕ್ಕಿ 1 ವರ್ಷದ ‘ವಿಸ್ತಾರಕ’ರು ಹಾಗೂ 4 ಲಕ್ಷಕ್ಕೂ ಹೆಚ್ಚು 15 ದಿನ ಸಮಯ ನೀಡುವ ‘ವಿಸ್ತಾರಕ’ರನ್ನು ಹೊರಡಿಸುವುದು ನಮ್ಮ ಗುರಿ. ಆ ಗುರಿಗೆ ಚೈತನ್ಯ ತುಂಬಲು ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾರವರು ಸ್ವತಃ ತಾವು 15 ದಿನ ವಿಸ್ತಾರಕರಾಗಿ ‘ವಿಸ್ತಾರ ಯಾತ್ರೆ’ ಘೋಷಣೆ ಮಾಡಿದರು. ಪಶ್ಚಿಮ ಬಂಗಾಲ, ಓರಿಸ್ಸಾ, ತೆಲಂಗಾಣ, ಲಕ್ಷದ್ವೀಪ ಹಾಗೂ ಗುಜರಾತ್‌ನಲ್ಲಿ 3 ದಿನ ಕೆಲಸ ಮಾಡುವ ಸಂಕಲ್ಪ ಘೋಷಿಸಿದರು. ಈ ಘೋಷಣೆಯೇ ಪಕ್ಷದ ಒಳಗೆ ವಿದ್ಯುತ್ ಸಂಚಾರ ಮೂಡಿಸಿತು.
ನಕ್ಸಲ್ ಆಂದೋಲನ ಆರಂಭವಾದ ನಕ್ಸಲ್‌ಬಾರಿಯಿಂದ ಆರಂಭವಾದ ಅಮಿತ್ ಷಾರವರ ವಿಸ್ತಾರ ಯಾತ್ರೆಯ ಎರಡನೇ ಹಂತ ಲಕ್ಷದ್ವೀಪ. ಕೇರಳದ ಕೊಚ್ಚಿಯಿಂದ 500 ಕಿ.ಮೀ. ದೂರದಲ್ಲಿರುವ ಕವರತ್ತಿ ಲಕ್ಷದ್ವೀಪ ದ್ವೀಪ ಸಮೂಹದ ಕೇಂದ್ರ ಸ್ಥಾನ. 36 ದ್ವೀಪಗಳ ಪೈಕಿ 10ರಲ್ಲಿ ಜನವಸತಿಯಿದೆ. ಒಟ್ಟು 56,000 ಜನಸಂಖ್ಯೆ 48,000 ಮತದಾರರು. ಮುಸ್ಲಿಂ ಸಮಾಜವೇ ಶೇ 100ರಷ್ಟಿರುವ ಜನಸಮುದಾಯ. ನೋಟಿಫೈಡ್ ಏರಿಯಾವಾದ್ದರಿಂದ ದ್ವೀಪಕ್ಕೆ ಹೋಗಲು ಅನುಮತಿ ಪತ್ರ ಕಡ್ಡಾಯ. ಕೊಚ್ಚಿಯ ಮಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅನುಮತಿ ಪತ್ರ ಪಡೆಯಬೇಕು.
ಅಗಾತಿ ದ್ವೀಪದಲ್ಲಿ ವಿಮಾನ ನಿಲ್ದಾಣವಿದೆ. ಕೊಚ್ಚಿಯಿಂದ ವಾರದ 6 ದಿನ ವಿಮಾನ ಸಂಪರ್ಕವಿದೆ. ಮೀನುಗಾರಿಕೆಯೇ ಜನರ ಬಹುದೊಡ್ಡ ಕಸುಬು. ಇತ್ತೀಚೆಗೆ ಪ್ರವಾಸೋದ್ಯಮವೂ ಗರಿಗಟ್ಟುತ್ತಿದೆ. ಡೀಸೆಲ್ ಜನರೇಟರ್‌ನಿಂದ ವಿದ್ಯುತ್, ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರು, ದೊಡ್ಡ ದೋಣಿ-ಹಡಗುಗಳ ಮೂಲಕವೇ ಅಂತರ್‌ದ್ವೀಪ ಸಂಚಾರ, ರೋಗಿಗಳನ್ನು ಕೊಚ್ಚಿಗೆ ಕರೆದೊಯ್ಯಲು ಸರಕಾರ ಮೀಸಲಿರಿಸಿರುವ ವೈದ್ಯಕೀಯ ಹೆಲಿಕಾಪ್ಟರ್‌ಗಳು ಹೀಗೆ ಎಲ್ಲವೂ ಹೊಸ ಅನುಭವಗಳೇ ಇಲ್ಲಿ… ಪ್ರತಿಯೊಂದು ವಸ್ತುವನ್ನೂ ಮಂಗಳೂರು, ಕೋಝಿಕ್ಕೋಡ್‌ನಿಂದ ಹಡಗಿನಲ್ಲಿ ತರಬೇಕಾದ ಸ್ಥಿತಿ… ಸಾಮಾಜಿಕವಾಗಿ, ಪ್ರಾಕೃತಿಕವಾಗಿ ತುಂಬಾ ಸೂಕ್ಷ್ಮಪ್ರದೇಶ.
ರಾಷ್ಟ್ರೀಯ ಅಧ್ಯಕ್ಷರ ಪ್ರವಾಸದ ಯೋಜನೆಯೂ ಒಂದು ಸವಾಲೇ ಆಗಿತ್ತು. ಸಮುದ್ರದ ಮೇಲೆ ಹಾರಲು ಫ್ರೋಟ್ ಇರುವ ಹೆಲಿಕಾಪ್ಟರ್, ರಾತ್ರಿ ಹೆಲಿಕಾಪ್ಟರ್ ತಂಗಲು, ಇಂಧನ ತುಂಬಲು ಕೇವಲ ಕವರತ್ತಿಯಲ್ಲಿ ಮಾತ್ರ ಸೌಲಭ್ಯ. ಸುಮಾರು 300-400 ಕಿ.ಮೀ. ಹಾರಬೇಕಾದ್ದರಿಂದ ತೂಕ ಮತ್ತು ಇಂಧನದ ಪ್ರತೀ ಹಾರಾಟದ ಸಮತೋಲನ, ಸ್ವಾಗತ ಕಮಾನು-ಭಿತ್ತಿ ಫಲಕಗಳ ತಯಾರಿ ಕೊಚ್ಚಿಯಲ್ಲಿ, ಹೂಹಾರಗಳನ್ನು ಮಂಗಳೂರಿನಿಂದ ತರಬೇಕಾದ್ದು – ಒಟ್ಟಾರೆ ಮಾರುಕಟ್ಟೆಗೆ ಹೋಗಿ ತರಲು ಸಾಧ್ಯವಿಲ್ಲದ್ದರಿಂದ ಪ್ರತಿಯೊಂದನ್ನೂ ವಿವರವಾಗಿ – ಪೂರ್ವಭಾವಿಯಾಗಿ ಯೋಜನೆ ಮಾಡಬೇಕಾದ ಅನಿವಾರ್ಯತೆ, ಹತ್ತು ಪ್ರವಾಸದ ಯೋಜನೆಯ ಅನುಭವ ಒಂದರಲ್ಲಿ ದೊರಕಿದಂತಾಗಿದ್ದು ಬಹುದೊಡ್ಡ ಲಾಭ.
ಅಗಾತಿಯಲ್ಲಿ ಇಳಿದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇತರರಿಗೆ ದೊರಕಿದ್ದು ಎಳನೀರು ಸಹಿತ ಆತ್ಮೀಯ ಸ್ವಾಗತ. ಅಲ್ಲಿಂದ ಕವರತ್ತಿಗೆ ಬಂದಿಳಿದ ಅಮಿತ್ ಷಾರವರಿಗೆ ಕಾರ್ಯಕರ್ತರ ಉತ್ಸಾಹ ಕಂಡು ಅಚ್ಚರಿ. ಬೈಕ್-ಆಟೋ-ಕಾರ್ ರ‌್ಯಾಲಿಯ ಮುಖಾಂತರ ರಾಷ್ಟ್ರೀಯ ಅಧ್ಯಕ್ಷರು ದ್ವೀಪ ವೀಕ್ಷಿಸಿದರು. ಇದರೊಂದಿಗೆ ಆರಂಭವಾದ ಬಿಡುವಿಲ್ಲದ ಚಟುವಟಿಕೆಗಳು ಲಕ್ಷದ್ವೀಪ ಸಮೂಹದ ಅತಿದೊಡ್ಡ ರಾಜಕೀಯ ಚಟುವಟಿಕೆಗೆ ನಾಂದಿ ಹಾಡಿತು. ಅಗಾತಿ, ಕವರತ್ತಿ, ಆ್ಯಂಡ್ರೋತ್ ಎಂಬ 3 ದ್ವೀಪಗಳಿಗೆ ಅಧ್ಯಕ್ಷರು ಭೇಟಿ ನೀಡಿದರು. 3 ಕಡೆ ಸ್ವಾಗತ, 2 ಬೂತ್ ಸಮಿತಿ ಸಭೆ, 7 ಮನೆಗಳಿಗೆ ಭೇಟಿ, ಬಿ. ಅಬ್ದುಲ್ ಖಾದರ್ ಮನೆಯಲ್ಲಿ ಉಪಾಹಾರ, 2 ಸಾರ್ವಜನಿಕ ಸಭೆಗಳು, 2 ನಿಯೋಗಗಳ ಭೇಟಿಯ ಜೊತೆಗೆ ಕೋರ್ ಸಮಿತಿ ಸಭೆ, ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ಪಂ. ದೀನದಯಾಳ ಉಪಾಧ್ಯಾಯ ಜನ್ಮಶತಾಬ್ದಿ ಸಮಿತಿಯ ಸಭೆ ನಡೆಸಲಾಯಿತು.
ದ್ವೀಪ ಸಮೂಹದಲ್ಲಿ ಬಿಜೆಪಿಯ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. ಕಳೆದ ಲೋಕಸಭೆಯಲ್ಲಿ ನಮಗೆ ಬಂದ ಮತಗಳು 200ರಷ್ಟು. ಆದರೆ ಅಧ್ಯಕ್ಷರ ಈ ವಿಸ್ತಾರ ಯಾತ್ರೆ ನಮ್ಮೆದುರಿಗೆ ಅನಂತ ಸಾಧ್ಯತೆಗಳನ್ನು (Infinite Opportunities) ತೆರೆದಿಟ್ಟಿದ್ದು ಸತ್ಯ. ಕಾರ್ಯಕರ್ತರ ಉತ್ಸಾಹ, ದ್ವೀಪಗಳನ್ನು ಸಜ್ಜುಗೊಳಿಸಿದ ರೀತಿ, ಸಾರ್ವಜನಿಕ ಸಮಾರಂಭದ ವ್ಯವಸ್ಥೆ ಜನರ ಗಮನ ಸೆಳೆದಿದ್ದು ಕಣ್ಣಿಗೆ ಕಾಣುತ್ತಿತ್ತು.
ರಾಷ್ಟ್ರೀಯ ಅಧ್ಯಕ್ಷರು ಕಾರ್ಯಕರ್ತರಿಗೆ ಕೊಟ್ಟ ಗುರಿ 4-
1. ಮುಂದಿನ 4 ತಿಂಗಳಲ್ಲಿ 5000 ಸದಸ್ಯತ್ವ
2. ಎಲ್ಲಾ ಮತಗಟ್ಟೆಗಳಲ್ಲಿ ಸಮಿತಿ ರಚನೆ.
3. 50 ಕಾರ್ಯಕರ್ತರು ಅಲ್ಪಾವಧಿ ವಿಸ್ತಾರಕರಾಗಿ 15 ದಿನ ಸಮಯ ಕೊಡುವುದು.
4. ನವೆಂಬರ್‌ನಲ್ಲಿ ಬರುವ ಪಂಚಾಯ್ತಿ ಚುನಾವಣೆಗಳಲ್ಲಿ ಅತೀ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುವುದು.
ಈ ನಾಲ್ಕೂ ಗುರಿಗಳನ್ನು ಸಾಧಿಸುವ ಉತ್ಸಾಹವಿದೆ. ಯೋಜನೆ-ಅನುವರ್ತೀ ಪ್ರಯತ್ನಗಳಾಗಬೇಕಿದೆ. ಕೇರಳದಿಂದ ಎಲ್ಲಾ ದ್ವೀಪಗಳಿಗೆ ಒಬ್ಬ ಕಾರ್ಯಕರ್ತರನ್ನು ಜೋಡಿಸುವ ಪ್ರಯತ್ನ ಸಾಗಿದೆ. ರಾಷ್ಟ್ರೀಯ ಅಧ್ಯಕ್ಷರು ಸ್ಥಾನೀಯವಾಗಿ ರೇಶನ್ ಸಮಸ್ಯೆ, ಕುಡಿಯುವ ನೀರು, ಸಂಪರ್ಕ ವ್ಯವಸ್ಥೆ, ಮೀನುಗಾರಿಕೆ, ನಾರಿನ ಉದ್ಯಮದ ಸಮಸ್ಯೆ, ಪ್ರವಾಸೋದ್ಯಮ ಬೆಳವಣಿಗೆ, ಈ ಎಲ್ಲಾ ವಿಷಯಗಳ ಕುರಿತು ವಿವರಗಳನ್ನು ತಿಳಿದುಕೊಂಡರು. ಜೊತೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಇವೆಲ್ಲಕ್ಕೂ ಕಲಶವಿಟ್ಟಂತೆ ಜನವರಿ-ಫೆಬ್ರವರಿ ತಿಂಗಳಲ್ಲಿ ಮಿನಿಕೊಯ್ ಸೇರಿದಂತೆ ಎರಡು ದ್ವೀಪಗಳಲ್ಲಿ ಪ್ರವಾಸ ಮಾಡುವಂತೆ ಸನ್ಮಾನ್ಯ ಪ್ರಧಾನಮಂತ್ರಿಗಳಲ್ಲಿ ವಿನಂತಿಸುವುದಾಗಿಯೂ ತಿಳಿಸಿದರು. ಕಾರ್ಯಕರ್ತರಲ್ಲಿ ಈ ಎರಡೂ ಅಂಶಗಳು ಅಪರಿಮಿತ ಉತ್ಸಾಹ ತುಂಬಿತು.
ಲಕ್ಷದ್ವೀಪದ ಈಗಿನ ಸಂಸತ್ ಸದಸ್ಯರು ಫೈಸಲ್, ಎನ್‌ಸಿಪಿ ಪಕ್ಷದವರು. ಅವರು ತಮ್ಮ ಪಕ್ಷದ ಪ್ರಮುಖರೊಡನೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ, ದ್ವೀಪಸಮೂಹದ ಸಮಸ್ಯೆಗಳನ್ನು ವಿವರಿಸಿ, ಪರಿಹರಿಸಲು ಕೋರಿದರು. ಅದಲ್ಲದೇ ಸಾರ್ವಜನಿಕ ಸಭೆಯಲ್ಲಿ ಸಭಿಕರಾಗಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ರಾಜಕೀಯ ಬದಲಾವಣೆಗೆ ಸಂಕೇತವಾಗಿ ಈ ಘಟನೆ ನಡೆದಿದ್ದು ದ್ವೀಪದ ಎಲ್ಲರಲ್ಲಿ ಕುತೂಹಲ ಮೂಡಿಸಿತು. ತನ್ನ ಉದ್ದೇಶ ಸಾಧನೆಯಲ್ಲಿ ಸಫಲವಾದ ರಾಷ್ಟ್ರೀಯ ಅಧ್ಯಕ್ಷರ ವಿಸ್ತಾರ ಯಾತ್ರೆ ಬಿಜೆಪಿಯ ದೃಷ್ಟಿಯಿಂದ ಹೊಸ ಆಯಾಮಗಳನ್ನು ಸೃಷ್ಟಿಸಿದ್ದು ಎಲ್ಲರ ಅನುಭವಕ್ಕೆ ಬಂತು. ಪಕ್ಷದ ಶಕ್ತಿ ವೃದ್ಧಿಸುವಲ್ಲಿ, ಜಾಲ ವಿಸ್ತರಿಸುವಲ್ಲಿ, ರಾಜಕೀಯ ನೆಲೆಗಟ್ಟಿಗೊಳಿಸುವಲ್ಲಿ ಪ್ರವಾಸ ಪ್ರಮುಖ ಪಾತ್ರ ವಹಿಸಿತು. ಕೆಲವೇ ಶಬ್ಧಗಳಲ್ಲಿ ವ್ಯಕ್ತಗೊಳಿಸುವುದಾದರೆ…
‘He came… He saw… He conquered’
ತಿಂಗಳ ಪೆಟ್ರೋಲ್ ಅನ್ನು ಮೂರುದಿನದಲ್ಲಿ ಮುಗಿಸಿದ ಕಾರ್ಯಕರ್ತರು..!
ಪ್ರತಿದಿನ ಕಚೇರಿಗೆ ಸ್ವಂತ ವಾಹನದಲ್ಲಿ ಹೋಗುವವರಿಗೆ ನಾಳೆಯಿಂದ ಪೆಟ್ರೋಲ್-ಡೀಸಲ್ ಸಿಗುವುದಿಲ್ಲ ಎಂದರೆ ಏನಾದೀತು? ಅವರ ದೈನಂದಿನ ಕಾರ್ಯಗಳಿಗೆ ಏನೆಲ್ಲ ಸಮಸ್ಯೆಯಾಗಬಹುದು ಅಲ್ಲವೇ? ನಿಮಗೆ ಗೊತ್ತಿರಲಿ, ಲಕ್ಷದ್ವೀಪದಲ್ಲಿ ಒಂದು ದ್ವಿಚಕ್ರ ವಾಹನಕ್ಕೆ ಸರ್ಕಾರ ನೀಡುವುದು ತಿಂಗಳಿಗೆ ಕೇವಲ 10 ಲೀ. ಪೆಟ್ರೋಲ್. ಚತುರ್ ಚಕ್ರವಾಹನಗಳಿಗೆ (ಕಾರ್) ಕೇವಲ 25 ಲೀ. ಡೀಸಲ್. ಅಮಿತ್ ಷಾ ಅವರು ನಮ್ಮೂರಿಗೆ ಬರುತ್ತಾರೆ ಎಂಬ ಸೂಚನೆ ಬಂದ ಕೂಡಲೆ, ಕಾರ್ಯಕರ್ತರೆಲ್ಲ ತಮ್ಮ ವಾಹನವನ್ನು ಉಪಯೋಗಿಸಿಲ್ಲ. ಉಳಿಸಿಟ್ಟ ಅಷ್ಟೂ ಇಂಧನವನ್ನು ಕಾರ್ಯಕ್ರಮದ ದಿನದಂದು ವಿನಿಯೋಗಿಸಿದ್ದಾರೆ. ಇದರರ್ಥ, ತಿಂಗಳ ಉಳಿದ 27 ದಿನವೂ ತಮ್ಮ ವಾಹನಗಳನ್ನು ಹೊರಗೆ ತೆಗೆಯುವಂತಿಲ್ಲ. ಕಾರ್ಯಕರ್ತರ ಇಂತಹ ತ್ಯಾಗಗಳಿಂದಲೇ ಪಕ್ಷವು ದೇಶದೆಲ್ಲೆಡೆ ವಿಸ್ತರಿಸುತ್ತಿದೆ.