ವಿಷಯದ ವಿವರಗಳಿಗೆ ದಾಟಿರಿ

ಮೇ 31, 2017

1

ಯಶಸ್ಸಿನಿಂದ ಮುನ್ನುಗ್ಗುತ್ತಿರುವ #ಗೋಪ್ರಾಣಭಿಕ್ಷೆ

‍ನಿಲುಮೆ ಮೂಲಕ

-ಶಿಶಿರ್ ಅಂಗಡಿ

ಸಾಮೂಹಿಕ ಪ್ರಾರ್ಥನೆ,ಸಮಾಜದ ಸಹಾಕರ ~ ಯಶಸ್ಸಿನಿಂದ ಮುನ್ನುಗ್ಗುತ್ತಿರುವ #ಗೋಪ್ರಾಣಭಿಕ್ಷೆ

ಪ್ರಾರ್ಥನೆ ಅಂದ್ರೆ ನಿಸ್ವಾರ್ಥವಾಗಿ ಒಳ್ಳೆಯ ಕೆಲಸಗಳನ್ನು ಮಾಡೋದು.ಪ್ರಾರ್ಥನೆ ಅಂದ್ರೆ ರಸ್ತೆ ದಾಟಲು ಕಷ್ಟ ಪಡುತ್ತಿರುವ ವೃದ್ಧರಿಗೆ, ಮಕ್ಕಳಿಗೆ ಸಹಾಯ ಮಾಡುವದು.ಪ್ರಾರ್ಥನೆ ಅಂದ್ರೆ ಇ‌ನ್ನೊಬ್ಬರಿಗೆ ಹೃದಯಾಂತರಾಳದಿಂದ ಶುಭವನ್ನು ಹಾರೈಸುವುದು.ಸಾಮೂಹಿಕ ಪ್ರಾರ್ಥನೆಗೆ ದೇವರನ್ನೇ ಧರೆಗಿಳಿಸುವ ಶಕ್ತಿ ಇದೆ ಅಂತ ಹೇಳ್ತಾರೆ.ಪ್ರಾರ್ಥನೆ ಎಂದರೆ ದೇವರ ಎದುರಿನಲ್ಲಿ ಬೇಡುವುದು ಎಷ್ಟು ಸರಿಯೋ, ಇನ್ನೊಬ್ಬರಿಗೆ ಒಳಿತು ಬಯಸುವುದು, ಒಳಿತನ್ನು ಮಾಡುವುದು ಕೂಡ ಅಷ್ಟೇ ಸರಿ ಎನ್ನುತ್ತಾರೆ ಬಲ್ಲವರು.

ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಸಾವಿನಂಚಿನಲ್ಲಿರುವ ಗೋವುಗಳ ಶೋಷನೀಯ ಸ್ಥಿತಿ ಮನಗಂಡು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಕೊಟ್ಟ ಒಂದು ಕರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಗೋಪ್ರೇಮಿಗಳು ದೇಶದ ಉದ್ದಗಲಗಳಿಂದ ದೊಡ್ಡ ಮಟ್ಟದಲ್ಲಿ ಸ್ಪಂದಿಸಿ ಸರಳ‌ ಭೋಜನ – ಸರಳ‌ ಜೀವನದೊಟ್ಟಿಗೆ ವಾರಕ್ಕೆ ಒಂದು ಹೊತ್ತಿನ ಊಟ ಬಿಟ್ಟು ಆ ಹಣವನ್ನು ಗೋಪ್ರಾಣಭಿಕ್ಷೆಗೆ ಸಮರ್ಪಿಸಿದ್ದಾರೆ. ಈ ಮೂಲಕ ಸಾವಿರಾರು ಟನ್ ಮೇವು ಖರೀದಿಗೆ ಸಹಕರಿಸಿದ್ದಾರೆ. ನೂರಾರು ಕಾರ್ಯಕರ್ತರು ಬೆಟ್ಟದ ತಪ್ಪಲಿನಲ್ಲಿ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಾ ದಿನನಿತ್ಯ ಸಮಯಕ್ಕೆ ಸರಿಯಾಗಿ ಗೋವಿಗೆ ಮೇವು ತಲುಪುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #GiveUpAMeal ಅಭಿಯಾನಗಳ ಮೂಲಕ ದೇಶದ ಒಳ ಹೊರಗಿನ ಒಂದು ಮಿಲಿಯನಗೂ ಅಧಿಕ ಜನರನ್ನು ತಲುಪಿದ್ದು ಬಹುಪಾಲು ಜನ ಈ ಅಭಿಯಾನಕ್ಕೆ ತನು-ಮನ-ಧನದ ಸಹಕಾರ ನೀಡಿದ್ದಾರೆ.

ಹಾಗೇಯೆ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳೂ,‌ ನ್ಯೂಸ್ ಪೋರ್ಟಲ್,ಬ್ಲಾಗುಗಳೂ ಕೂಡ‌‌ ಅಭಿಯಾನದ ಪ್ರತಿಹಂತದಲ್ಲೂ ವಿಷಯಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿವೆ.

#GiveUpAMeal ಮತ್ತು #ಗೋಪ್ರಾಣಭಿಕ್ಷೆ ಇವೆರಡು ಒಂದು ರೀತಿಯಲ್ಲಿ ಅದ್ಬುತ ಕಲ್ಪನೆಗಳು. ಇವು ಮನುಷ್ಯನೊಳಗಿನ ಮನುಷ್ಯನನ್ನು ಬಡಿದೆಬ್ಬಿಸಿ,ಗೋವಿನ ರಕ್ಷಣೆಯ ಜವಾಬ್ದಾರಿ ನಿನ್ನ ಮೇಲಿದೆ ಎಂಬುದನ್ನು ಪುನಃ ಪುನಃ ನೆನಪಿಸಿ, ಆ ಕಾರ್ಯಕ್ಕೆ ಪ್ರೇರಣೆ ನೀಡುತ್ತದೆ.ಹಲವು ತಿಂಗಳುಗಳಿಂದ ಮೇವಿಲ್ಲದೆ ಉಪವಾಸ ಇದ್ದ ಗೋವುಗಳ ವಾಸ್ತವ ಸ್ಥಿತಿ ನಮಗೆ ಅರಿವಾಗೋದು ನಾವು ಉಪವಾಸ ಇದ್ದಾಗಲೇ! ಮತ್ತೆ ಪ್ರತಿ ಬಾರಿ ಉಪವಾಸ ಮಾಡುವ ದಿನ ಬಂದಾಗ, ಗೋರಕ್ಷಣೆ ನಮ್ಮ ಹೊಣೆ ಎಂಬುದು ನಮ್ಮಲ್ಲಿ ಜಾಗೃತವಾಗುತ್ತದೆ. ನಾವು ಒಂದು ಹೊತ್ತಿನ ಊಟವನ್ನು ತ್ಯಾಗ ಮಾಡಿ, ಅದರಲ್ಲಿ ಉಳಿಸಿದ ಹಣವನ್ನು ಗೋವಿನ ಊಟ(ಮೇವು)ಕ್ಕಾಗಿ ಕೊಟ್ಟಾಗ, ಜೀವನ ಪೂರ್ತಿ ನಮ್ಮನ್ನು ಪೋಷಿಸುವ (ಗೋ)ತಾಯಿಯನ್ನು ನಾವು ಉಪವಾಸ ಇದ್ದಾದರೂ ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ.

ಇನ್ನು ಗೋಪ್ರಾಣಭಿಕ್ಷೆ ಎಂದರೆ ಗೋಭಕ್ತರು ಬೀದಿ ಬೀದಿಗಳಲ್ಲಿ ಭಿಕ್ಷಾಟನೆಯ ಮೂಲಕ ಗೋವುಗಳ ಮೇವಿಗಾಗಿ ಸಹಾಯ ಕೇಳುವುದು‌. ಇಲ್ಲಿಯೂ ಕೂಡ ನಮ್ಮ ಸ್ವಾರ್ಥವನ್ನು ಬದಿಗೊತ್ತಿ ಗೋವುಗಳನ್ನು ಉಳಿಸಲು ಸಹಾಯ ಮಾಡಿ‌ ಎಂದು ಕೇಳುವಾಗ ನಮ್ಮ ಅಹಂಕಾರ ಒಂದಷ್ಟು ಕಡಿಮೆಯಾಗಿರುತ್ತದೆ. ಸ್ವಾರ್ಥವನ್ನು ಬಿಟ್ಟರೆ ಮಾತ್ರ ಬದುಕಲು ಸಾಧ್ಯ ಎಂಬ ಪಾಠವನ್ನು ಕಲಿಸುತ್ತದೆ.

ಹೀಗೆ ಗುರುಗಳ‌ ಮಾರ್ಗದರ್ಶನದಲ್ಲಿ ಗೋಸೇವೆಯನ್ನೂ ಮಾಡುತ್ತಾ, ಜೀವನದ ಪಾಠಗಳನ್ನು ಕಲಿತ ಭಾಗ್ಯ ನಮ್ಮೆಲ್ಲ ಗೋಕಿಂಕರದ್ದು.

ಸ್ವಚ್ಛ ಸಂಕಲ್ಪ, ನಿಸ್ವಾರ್ಥ ಪ್ರಯತ್ನಕ್ಕೆ ದೈವಬಲ ಇರುತ್ತದೆ ಎಂಬುದನ್ನು ಕೇಳಿದ್ದೆವು, ಆದರೆ ಈ ಆಂದೊಲನದಲ್ಲಿ ಭಾಗವಹಿಸಿದಾಗ ಅದು ಸತ್ಯ ಎಂಬುದು ಅರಿವಿಗೆ ಬಂದಿದೆ. ನಾಡಿನ ಎಲ್ಲ ಮುಖ್ಯವಾಹಿನಿಗಳಿಂದ, ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಸಹಾಯ ಮಾಡಲು ಧಾವಿಸಿ ಬಂದರು.

ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು #GiveUpAMealಅಭಿಯಾನದಿಂದ‌‌ ಪ್ರಭಾವಿತರಾಗಿ ನಮ್ಮ ತಂಡವನ್ನು ಖುದ್ದು ಭೇಟಿಗೆ ಆಹ್ವಾನಿಸಿ ಗೋಪ್ರಾಣಭಿಕ್ಷೆಯ ಕುರಿತು, ಮಲೆಮಹದೇಶ್ವರ ಬೆಟ್ಟದ‌ ಗೋವುಗಳ‌ ಸಮಸ್ಯೆಯ ಕುರಿತು ದೀರ್ಘವಾಗಿ‌ ಚರ್ಚಿಸಿದರು. ಸಮಸ್ಯೆಗೆ ತಾರ್ಕಿಕ ಅಂತ್ಯ ಕೊಡಿಸಲು ಶ್ರಮಿಸುವುದಾಗಿ ತಿಳಿಸಿದರಷ್ಟೇ ಅಲ್ಲದೇ, ಗೋಪ್ರಾಣಭಿಕ್ಷೆಗೆ ರೂ. ಹತ್ತು ಲಕ್ಷರೂಗಳನ್ನು ಕೊಡುವುದಾಗಿ‌ ಘೋಷಿಸಿದರು. ನಾಡಿನ ಜನತೆಗೂ ಸಹಾಯ ಮಾಡುವಂತೆ ಕರೆ ನೀಡಿದರು. ಹಿರಿಯ ನಟ ಜಗ್ಗೇಶ್ ಕೂಡ ಈ ಅಭಿಯಾನಕ್ಕೆ ಸ್ಪಂದಿಸಿ, ಗೋವುಗಳನ್ನು ಉಳಿಸುವುದಕ್ಕಾಗಿ ನಾವೆಲ್ಲರೂ ಒಂದು ಹೊತ್ತು ಊಟ ಬಿಟ್ಟು ಈ ಅಭಿಯಾನಕ್ಕೆ ಕೈಜೋಡಿಸೋಣ ಎಂದು ಘೋಷಿಸಿದರು‌. ಸಂಘದ ಹಿರಿಯ ಪ್ರಚಾರಕರಾದ ‌ಶ್ರೀ ಬಿ.ಎಲ್.ಸಂತೋಷ್ ಅವರು ಗೋವುಗಳನ್ನು ಉಳಿಸುವ ಈ ಅಭಿಯಾನವನ್ನು ಪ್ರಶಂಸಿಸಿದ್ದಾರೆ. ನಟಿ ಮಾಳಾವಿಕಾ ಅವರೂ ಕೂಡ #GiveUpAMeal ಅಭಿಯಾನಕ್ಕೆ ಬೆಂಬಲಿಸಿದ್ದಾರೆ‌. ಇನ್ನೂ ಸಂಸದ ಸುರೇಶ ಕುಮಾರ್, ಶಾಸಕ‌ ಸಿ.ಟಿ.ರವಿ ಮುಂತಾದವರೂ ಈ ಆಂದೋಲನಕ್ಕೆ ಕೈಜೋಡಿಸಿದ್ದಾರೆ. ಚಿತ್ರ ನಿರ್ದೇಶಕ ಎಸ್.ನಾರಾಯಣ್, ಕಲ್ಯಾಣ್ ಜುವೆಲರ್ಸ್ ಶರವಣ್ ಹೀಗೆ ಸಮಾಜದ ಎಲ್ಲ ಸ್ಥರಗಳಿಂದ ಸಹೃದಯರು ಒಕ್ಕೊರಲಿನಿಂದ #ಗೋಪ್ರಾಣಭಿಕ್ಷೆ ಗೆ ಸ್ಪಂದಿಸಿದ್ದಾರೆ. ಇಮಾಮಿ, ಜಂಡೂ ಹೀಗೆ ಬೃಹತ್ ಕಂಪೆನಿಗಳೂ ದೊಡ್ಡ ರೀತಿಯಲ್ಲಿ ಸಹಾಯ ಹಸ್ತ ಚಾಚಿದೆ.

ಈವರೆಗೆ ಪ್ರತಿದಿನ ೧೯ ಕೇಂದ್ರಗಳಲ್ಲಿ ೫೫ ದಿನಗಳಿಂದ ೩೦೦೦ ಟನ್ ಮೇವನ್ನು ವಿತರಿಸಲಾಗಿದೆ.‌ ಸುಮಾರು ೨೦-೨೫,೦೦೦ ಗೋವುಗಳು ಪ್ರತಿದಿನ ಕನಿಷ್ಠ ಜೀವ ಉಳಿಸಿಕೊಳ್ಳುವಷ್ಟು‌ ಮೇವನ್ನು ಸೇವಿಸಿವೆ. ಕೇವಲ ಮೇವು ಪೂರೈಸಿದರೆ ಆಗಲಿಲ್ಲ, ಹಸಿವಿನಿಂದ ಕಂಗೆಟ್ಟಿದ್ದ ಗೋವುಗಳು ನಿಶ್ಯಕ್ತಿಯಿಂದ ಬಳಲುತ್ತಿವೆ. ಮೇವು‌ ತಿನ್ನಲು ನಡೆದುಕೊಂಡು ಬರುವಾಗಲೆ‌ ನೆಲಕ್ಕುರುಳುತ್ತಿದ್ದವು, ಕೆಲವು‌‌ ಗೋವುಗಳು ಪ್ರಾಣವನ್ನೇ ಬಿಟ್ಟವು. ಮೇವು‌ ಕೊಟ್ಟರೆ ಅಗಿಯಲೂ ಶಕ್ತಿ ಇರುವುದಿಲ್ಲ ಹಲವು‌ ಗೋವುಗಳಿಗೆ. ‌ಇಂತಹ ಸಂದರ್ಭದಲ್ಲಿ ಮಠದ ವತಿಯಿಂದ ಉಚಿತವಾಗಿ ಔಷದಿಗಳೊಟ್ಟಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ನೆರವನ್ನೂ ನೀಡಲಾಗುತ್ತಿದೆ.

ಮೇವು ವಿತರಿಸುತ್ತಿರುವ ಕಾರ್ಯಕರ್ತರ ಶ್ರಮ,ಒಂದು ಹೊತ್ತು ಉಪವಾಸ ಇದ್ದು ಮತ್ತು ಆಭರಣ ಇತ್ಯಾದಿಗಳನ್ನು ಸಮರ್ಪಸಿದವರ ತ್ಯಾಗ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಆಂದೋಲನವನ್ನು ಮಾಡುತ್ತಿರುವ #GiveUpAMeal ತಂಡ ಮತ್ತು ಬೆಂಬಲಿಗರ ಸಾಂಘಿಕ ಹೋರಾಟ, #ಗೋಪ್ರಾಣಭಿಕ್ಷೆಯಲ್ಲಿ ಗೋಭಕ್ತರ ಸಂಘಟನಾತ್ಮಕ ಪ್ರಯತ್ನ.ಹೀಗೆ ಇವೆಲ್ಲವೂ ಸಾಮೂಹಿಕವಾಗಿ ಭಗವಂತನನ್ನು ಸೇರಿ ಅವನಿಗೆ ತೃಪ್ತಿಯಾಗಿದೆಯೆನೋ ಎಂಬಂತೆ ಆಗಾಗ ಮಳೆರಾಯ ಭೂಮಿಯನ್ನು ಉತ್ತಮವಾಗಿಯೇ ಸ್ಪರ್ಶಿಸುತ್ತಿದ್ದಾನೆ, ನಿಧಾನವಾಗಿ ಹಸಿರು ಬೆಳೆಯಲಾರಂಭಿಸಿದೆ.ರಾಷ್ಟ್ರವೇ ಕೇಳರಿಯದ ಈ ಮಹಾಯಜ್ಞವು ಅಂತ್ಯಗೊಳ್ಳಲು ಕೆಲವೇ ದಿನಗಳು ಬಾಕಿಯಿದ್ದು, ಪಾಲ್ಗೊಂಡು ಬೆಂಬಲಿಸುವ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಮುದ್ದಾದ ಗೋವುಗಳು ನಿಮ್ಮ ಸಹಾಯಹಸ್ತಕ್ಕಾಗಿ ಕಾದಿವೆ. ಬನ್ನಿ ಈ ಕಾಲಮಾನದ ಅತಿದೊಡ್ಡ ಗೋರಕ್ಷಣಾ ಕೈಂಕರ್ಯದಲ್ಲಿ ಭಾಗಿಯಾಗೋಣ (ಸಂಪರ್ಕ – 9483484074)

1 ಟಿಪ್ಪಣಿ Post a comment
  1. Usha Bhat
    ಮೇ 31 2017

    ಲಾಲಬಹಾದ್ದೂರ ಶಾಸ್ತ್ರೀಯವರ ನಂತರ #GiveUpAMeal ಗೆ ಕರೆ ಕೊಟ್ಟಿದ್ದು ರಾಮಚಂದ್ರಾಪುರ ಮಠ..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments