ವಿಷಯದ ವಿವರಗಳಿಗೆ ದಾಟಿರಿ

ಜೂನ್ 7, 2017

ಸಂಸ್ಕೃತಕ್ಕಾಗಿ ಯುದ್ಧ

‍ನಿಲುಮೆ ಮೂಲಕ

– ಪ್ರವೀಣ ಜಿ ಹೆಗ್ಡೆ

“ಅಮೆರಿಕನ್ ಓರಿಯಂಟಲಿಸ್ಮ್” ಅಥವಾ ಅಮೇರಿಕಾ ಚಿಂತನಾ ವಿಧಾನ/ರೀತಿ , ಇದು ಅಮೇರಿಕಾದ ಇತಿಹಾಸದಿಂದ ಹುಟ್ಟಿರುವಂಥದ್ದು. ಯೂರೋಪಿನಿಂದ ಅಮೆರಿಕಾಕ್ಕೆ ವಲಸೆ ಹೋದ ಬಿಳಿಯರು , ಅಲ್ಲಿಯ ಮೂಲ ನಿವಾಸಿಗಳ ಜೊತೆ ಕಾದಾಡಿ ಹಿಂಸೆಯ ಮೂಲಕ, ಇಲ್ಲವೇ ಅವರ ಜೊತೆಗಿದ್ದಂತೆ ವರ್ತಿಸಿ ಆಂತರಿಕವಾಗಿ ನಿಶ್ಯಕ್ತಿಗೊಳಿಸುವ ಮೂಲಕ ತಮ್ಮ ಅಧಿಪತ್ಯವನ್ನು ಅಮೇರಿಕಾದಲ್ಲಿ ಸ್ಥಾಪಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈ ಪಾಶ್ಚಾತ್ಯ ದೃಷ್ಟಿಯ ಚೌಕಟ್ಟನ್ನೇ ಉಪಯೋಗಿಸಿ ,ಪಾಶ್ಚಾತ್ಯವಲ್ಲದ ಸಂಸ್ಕೃತಿಗಳನ್ನೂ ಅಧ್ಯಯಿಸುವುದು ಸಾಮಾನ್ಯವಾಗಿ ಜಗತ್ತಿನಾದ್ಯಂತ ರೂಢಿಯಲ್ಲಿರುವ ವಿಷಯ. ಆದರೆ ಇಲ್ಲೊಂದು ಅತ್ಯಂತ ಗಮನಾರ್ಹವಾದ ವಿಷಯವಿದೆ, ಅದ್ಯಾವುದೆಂದರೆ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಹೆಚ್ಚಾಗುತ್ತಿರುವ ಅಮೇರಿಕಾ ಪ್ರಣೀತ ಅಧ್ಯಯನದ ಪ್ರಾಬಲ್ಯ. ಅದರಲ್ಲಿಯೂ ಗಮನಿಸಲೇಬೇಕಾದ ಅತೀ ಎಚ್ಚರಿಕೆಯ ಮತ್ತು ಸೂಕ್ಷ್ಮ ವಿಷಯವೇನೆಂದರೆ,ಅವರುಗಳು ಮೇಲು ಮೇಲೆ ಭಾರತದ ಸಂಸ್ಕೃತಿಯ ಹಿತೈಷಿ ಎನ್ನುವಂತೆ ವರ್ತಿಸಿದರೂ, ಭಾರತದ ಪೂಜ್ಯ ,ಪವಿತ್ರ ಸಂಪ್ರದಾಯಗಳ ಮತ್ತು ಸನಾತನ ಧರ್ಮದ ಬಗೆಗೆ ಅವರಿಗಿರುವ ಕನಿಷ್ಠ ಗೌರವ ಮತ್ತು ಕಾಳಜಿ.

ರಾಜೀವ ಮಲ್ಹೋತ್ರ ಅವರು ತಮ್ಮ ಪುಸ್ತಕದಲ್ಲಿ “ಅಮೇರಿಕಾ ಚಿಂತನಾ ರೀತಿ” ಎಂಬುದು ಏನು, ಅದು ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಯಾವರೀತಿಯಲ್ಲಿ ಉಪಯೋಗಿಸಲ್ಪಡುತ್ತಿದೆ ? ಎನ್ನುವುದನ್ನು ಅತಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಪುಸ್ತಕದ ತಲೆ ಬರಹ ಹೇಳುವಂತೆ,ಸಂಸ್ಕೃತ ರಾಜಕೀಯ ಸಾಧನವೋ ಅಥವಾ ಪವಿತ್ರವೋ ? ಶೋಷಣೆಯೋ ಅಥವಾ ವಿಮೊಚನೆಯೋ?ಸತ್ತಿಹುದೋ ಅಥವಾ ಬದುಕಿಹುದೋ?

ಮಲ್ಹೋತ್ರರವರು, ಅಮೇರಿಕಾ ಶಿಕ್ಷಣದಲ್ಲಿ ಬೇರೂರಿರುವ ಹೊಸ ರೀತಿಯ “ಓರಿಯಂಟಲಿಸ್ಮ್“ ಅಥವಾ ಚಿಂತನಾ ವಿಧಾನ/ರೀತಿಯ ಬಗೆಗೆ ಬರೆದಿರುವ ಅತೀ ಪ್ರಮುಖರು. ಅಮೆರಿಕಾ ದೇಶವು ಜಗತ್ತಿನ ದೊಡ್ಡಣ್ಣನಾಗಿ, ಎಲ್ಲ ಕ್ಷೇತ್ರಗಳಲ್ಲಿಯೂ ಹಿಡಿತ ಸಾಧಿಸುವುದರೊಂದಿಗೆ, ಹಿಂದಿನಿಂದ ನಡೆದುಕೊಂಡು ಬಂದಿದ್ದ ಯೂರೋಪ್ ಕೇಂದ್ರಿತವಾಗಿದ್ದ ಭಾರತೀಯ ಧರ್ಮ, ಸಂಸ್ಕೃತಿಗಳ ಅಧ್ಯಯನವು ಈಗ ಅಪ್ರಸ್ತುತವಾಗಿ, ಅದರ ಸ್ಥಾನವನ್ನು ಅಮೇರಿಕ ಕೇಂದ್ರಿತ ಭಾರತದ ಅಧ್ಯಯನ ಆಕ್ರಮಿಸಿಕೊಂಡಿದೆ.

ಅಮೇರಿಕಾದ ಅಧ್ಯಯನ ಮಾಡುವ “ಚಿಂತನಾ ವಿಧಾನ” ಭಾರತೀಯ ಸಂಸ್ಕೃತಿಗೆ ಹೇಗೆ ಅಪಾಯಕಾರಿ ?

ಭಾರತೀಯ ಸಂಸ್ಕೃತಿಯ ಮೇಲಿಟ್ಟಿರುವ ಕನಿಷ್ಠ ಗೌರವ ,ಕಾಳಜಿಯ ಈ ಅಧ್ಯಯನ ವಿಧಾನವು ಭಾರತೀಯ ಸಂಸ್ಕೃತಿಯನ್ನು ಕೇವಲ ಪೊಳ್ಳು ಸಂಸ್ಕೃತಿಯಾಗಿ ಹೊರ ಜಗತ್ತಿಗೆ ಬಿಂಬಿಸುತ್ತದೆ. ಈ ಅಧ್ಯಯನದ ಭಾಗವಾಗಿ. ಸಂಸ್ಕೃತದ ಶಿರಚ್ಚೆದ ಮಾಡಿ,ದೇಹದಿಂದ ತಲೆಯನ್ನು ಬೇರ್ಪಡಿಸಲಾಗುತ್ತದೆ.ಇದು ಮೃತ ದೇಹದ ಅಧ್ಯಯನವೇ ಹೊರತು ಬದುಕಿರುವ ಸಂಪ್ರದಾಯಗಳ ಅಥವಾ ವಿಚಾರಗಳ ಅಧ್ಯಯನ ಎಂದು ಕರೆಯಲು ಸಾಧ್ಯವೇ ಇಲ್ಲ.

ಇದೇ ರೀತಿಯ ಮನೋಭಾವವನ್ನು “ಅಮೇರಿಕಾ ಚಿಂತನ ವಿಧಾನ” ದ ಚಿಂತಕರು ಸಂಸ್ಕೃತದ ಅಧ್ಯಯನದಲ್ಲೂ ತೋರಿಸುತ್ತಿದ್ದಾರೆ . ಹೊರಗಡೆ ಸಂಸ್ಕೃತ ಭಾಷೆಯ ಪ್ರೇಮಿಯೆಂದು ತೋರ್ಪಡಿಸಿಕೊಂಡು, ಅದರಲ್ಲಿನ ಅಪಾರ ಜ್ಞಾನವನ್ನು ಜೀರ್ಣಿಸಿಕೊಂಡು ನಂತರ ಸಂಸ್ಕೃತವನ್ನು ಅದರ ಸಂಸ್ಕೃತಿಯ ಪೂಜ್ಯ , ಪಾವಿತ್ರ್ಯ , ದಿವ್ಯತಾ, ಧನ್ಯತಾ ಭಾವಗಳ ಬೇರುಗಳಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದಾರೆ.

ಈ ರೀತಿ ಮಾಡಿ ಅವರಿಗಾಗುವ ಉಪಯೋಗವಾದರೂ ಏನು? ನಮಗಾಗುವ ಹಾನಿಯಾದರೂ ಏನು?

ಮಲ್ಹೋತ್ರ ಅವರು ಹೇಳುವಂತೆ , ಸಂಸ್ಕೃತ ಮತ್ತು ಸಂಸ್ಕೃತಿ ಇವು ಅವಿಭಾಜ್ಯವಾಗಿ ತಳಕು ಹಾಕಿಕೊಂಡಿವೆ . ಸಂಸ್ಕೃತವು ಹಾಗೂ ಸಂಸ್ಕೃತಿ ಪರಸ್ಪರರಿಗೆ ಕನ್ನಡಿಯಂತೆ ಇವೆ. ನಮ್ಮ ಪ್ರತಿ ನಿತ್ಯದ ಸಂಸ್ಕೃತಿಯಲ್ಲಿ ಸಂಸ್ಕೃತವು ಹಾಸು ಹೊಕ್ಕಾಗಿದೆ ಅದೇ ರೀತಿ ಸಂಸ್ಕೃತ ಭಾಷೆಯು ನಮ್ಮ ನಿತ್ಯ ನೂತನ ಸಂಸ್ಕೃತಿಯನ್ನೇ ಬಿಂಬಿಸುತ್ತದೆ ಅದ್ದರಿಂದ ಸಂಸ್ಕೃತವು ಕೇವಲ ಆಡು ಭಾಷೆಯಷ್ಟೇ ಅಲ್ಲದೆ ಅದು ನಮ್ಮ ಸಂಸ್ಕೃತಿಯ ಭಾಷೆಯೂ ಆಗಿದೆ.

ಈ ಮೇಲೆ ವಿವರಿಸಿದಂತೆ , ಸಂಸ್ಕೃತವು ನಮ್ಮ ಸಂಸ್ಕೃತಿಯ ಭಾಷೆಯಾಗಿರುವುದರಿಂದ ,ಸಂಸ್ಕೃತಿಯ ಜ್ಞಾನ ಭಂಡಾರ,ವಿಚಾರಧಾರೆ, ಕಲೆ ಸಾಹಿತ್ಯ , ಆಧ್ಯಾತ್ಮ ವಿಚಾರಗಳು , ಆಯುರ್ವೇದ , ಪೂಜ್ಯ ಶ್ರದ್ಧಾ ಭಾವಗಳೂ ಇವುಗಳ ಮೂಲವು ಸಂಸ್ಕೃತದಲ್ಲಿಯೇ ಹುದುಗಿರುವುದನ್ನು ನಾವು ಕಾಣಬಹುದು. ಅಮೇರಿಕಾದ ವಿಚಾರಧಾರೆಯು ಸಂಸ್ಕೃತ ಅಧ್ಯಯನದಲ್ಲಿ ಈ ಮೂಲಭೂತ ಸಂಸ್ಕೃತಿಯನ್ನು ಬೇರೆಯಾಗಿಸಿ, , ಅದರ ಉದಾತ್ತ ವಿಚಾರಗಳನ್ನು ಜೀರ್ಣಿಸಿಕೊಂಡು , ತಮ್ಮದಾಗಿಸಿಕೊಳ್ಳುವುದಷ್ಟೇ ಅಲ್ಲದೆ , ಈ ವಿಚಾರಗಳ ಮೂಲ ಸಂಸ್ಕೃತಿಗೆ ಸಲ್ಲಬೇಕಾದ ಮಾನ್ಯತೆ , ಗೌರವ , ಕಾಳಜಿ ಯನ್ನು ಕೊಡುವುದು ಕಂಡುಬರುವುದಿಲ್ಲ.

ಅತೀ ವೇಗದಿಂದ ಬದಲಾಗುತ್ತಿರುವ ಮತ್ತು ಜಾಗತೀಕರಣಗೊಳ್ಳುತ್ತಿರುವ ಸಂಸ್ಕೃತಿಯ ಈ ಸಮಯದಲ್ಲಿ , ಭಾರತೀಯ ಶೈಕ್ಷಣಿಕ ಪದ್ಧತಿಯಲ್ಲೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ಪ್ರಯತ್ನಗಳಿಲ್ಲದೇ, ಕೇವಲ ಪಶ್ಚಿಮದ ದೃಷ್ಟಿಕೋನದಿಂದ ಶಿಕ್ಷಣವನ್ನು ಪಡೆಯುತ್ತಿರುವ ಭಾರತೀಯ ಜನಾಂಗ, ನಮ್ಮ ಸಂಸ್ಕೃತಿಯ ಬಗ್ಗೆ ಪೂರ್ಣ ಅರಿವಿಲ್ಲದೆಯೇ ನಿಂದಿಸುವ ಪ್ರವೃತ್ತಿಯನ್ನು ನಾವು ಕಾಣಬಹುದು. ಹೀಗೆ ಪಾಶ್ಚಾತ್ಯ ದೃಷ್ಟಿಕೋನ ಒಂದೇ ಸರಿ ಎನ್ನುವ ಮತ್ತು ಭಾರತೀಯ ದೃಷ್ಟಿಕೋನದಲ್ಲಿ ನೋಡಲು ಅರಿವಿಲ್ಲದ ಸ್ಥಿತಿಗೆ ಬದಲಾಗುತ್ತಿರುವ ಭಾರತೀಯ ಜನಾಂಗಕ್ಕೆ , ಮುಂದೆ ತಮ್ಮ ಸಂಸ್ಕೃತಿಯನ್ನು ಅರಿಯಲು ಸಂಸ್ಕೃತಿಯ ಬಗ್ಗೆ ವಿವರಿಸುವ ಜನಪ್ರಿಯ ಮತ್ತು ಅಧಿಕಾರಯುತ ಅಧ್ಯಯನಗಳೇ ಮೂಲ ಆಧಾರವಾಗಿಬಿಡುತ್ತವೆ. ಅತೀ ಅಪಾಯದ ವಿಷಯವೇನೆಂದರೆ ಈ ರೀತಿ, ಸಂಸ್ಕೃತಿಯ ಮೂಲ ವಿಚಾರಗಳನ್ನೇ ಪರಿಗಣಿಸದೆ ಪಶ್ಚಿಮೀಕರಣಗೊಂಡ ಅಧ್ಯಯನಗಳು ಮುಂದಿನ ಭಾರತೀಯ ಪೀಳಿಗೆಗಳನ್ನು ತಮ್ಮದೇ ಸಂಸ್ಕೃತಿಯಿಂದ ದೂರವಾಗಿಸಿ ಅಮೇರಿಕಾದ ವಿಚಾರ ವಿಧಾನದ ಮೇರೆಗೆ ಭೌಗೋಳಿಕ ರಾಜಕೀಯ ನಡೆಸಲು ಸಾಧನಗಳಾಗಬಲ್ಲವು! ಅವರ ಈ ಅಧ್ಯಯನ ಪೂರ್ವೋದ್ದೇಶಿತದ್ದಾಗಿರಲಿ ಅಥವಾ ನಮ್ಮ ಸಂಸ್ಕೃತಿಯ ಬಗ್ಗೆ ಪೂರ್ಣ ಅರಿವಿಲ್ಲದ ಅಜ್ನಾನದಿಂದ ಕೂಡಿರಲಿ ಯಾವುದೇ ರೀತಿಯಲ್ಲಾದರೂ ಅದು ನಮ್ಮ ಸಂಸ್ಕೃತಿಯನ್ನೇ ನಾಶ ಮಾಡಬಲ್ಲವು !

ಮಲ್ಹೋತ್ರ ಅವರು ಅಮೇರಿಕಾ ಚಿಂತನಾ ರೀತಿಯು ಯೂರೋಪಿನ ಚಿಂತನ ರೀತಿಗಿಂತಲೂ ಅಪಾಯಕಾರಿ ಎಂದು ಪ್ರತಿಪಾದಿಸುತ್ತಾರೆ, ಏಕೆಂದರೆ ಇಂಥವರು “ಗೆತ್ರು“ಗಳು (ಹೊಸ ಶಬ್ದ : ಗೆಳೆಯನಂತೆ ವರ್ತಿಸಿದರೂ, ಒಳಗೊಳಗೇ ನಮ್ಮ ವಿಚಾರಧಾರೆಯನ್ನು ವಿರೋಧಿಸುವ ಹಿತ ಶತ್ರುಗಳು), ಈ ವಿಚಾರಧಾರೆ , ತಮ್ಮದೇ ಆದ ಸಂಪ್ರದಾಯಗಳು ಮತ್ತು ನಿರೂಪಣೆ ಬಗ್ಗೆ ಹಿಡಿತವಿಲ್ಲದ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯಕವಾಗುತ್ತವೆ , ಆದರೆ ಇವುಗಳು ನಮ್ಮ ಸಾಂಪ್ರದಾಯಿಕ ಸಂಸ್ಕೃತ ಅಧ್ಯಯನದ ರೀತಿಯಲ್ಲಿ, ಪೀಠದ ಅಡಿ ಸಂಸ್ಕೃತವನ್ನು ಇಡಲು ಮೂಲಭೂತವಾಗಿ ಒಪ್ಪುವುದಿಲ್ಲ.

ಆದರೆ ವಿಪರ್ಯಾಸವೆಂದರೆ, ನಾವೀಗ ಸಂಸ್ಕೃತದ ಅಧ್ಯಯನಕ್ಕಾಗಿ ಅಮೇರಿಕಾದ ವಿಶ್ವವಿದ್ಯಾಲಯಗಳ ಮೇಲೆ ನಮ್ಮದೇ ಸಂಪನ್ಮೂಲಗಳ ಹೊಳೆ ಹರಿಸುವುದನ್ನ ನೋಡಿ ಹೆಮ್ಮ ಪಡುತ್ತಿದ್ದೇವೆ!! , ನಾವು ಮಾಡಬೇಕಾಗಿದ್ದ ಕಾರ್ಯವನ್ನು ಅವರುಗಳು ಕೈಗೊಂಡಿದ್ದಾರೆಂಬ ಭ್ರಾಂತಿಯಲ್ಲಿ ಮುಳುಗಿದ್ದೇವೆ. ನಮ್ಮ ಸಂಸ್ಕೃತಿಯ ಬಗ್ಗೆ ನಮಗೆ ತಿಳಿ ಹೇಳಲು ನಾವುಗಳೇ ಮಿಲಿಯನ್ ಡಾಲರ್ಗಳನ್ನು ಕೊಡುತ್ತಿದ್ದೇವೆ. ಆಲ್ಲಿಯ ವಿದ್ವಾಂಸರುಗಳಿಗೆ ಪದ್ಮಶ್ರೀ ಇನ್ನಿತರ ಪುರಸ್ಕಾರಗಳನ್ನು ಕೊಟ್ಟು ಪುರಸ್ಕರಿಸುತ್ತಿದ್ದೇವೆ !! ಆದರೆ ದುರ್ದೈವವೆಂದರೆ ನಮ್ಮವರೇ ಆದ ಸಾಂಪ್ರದಾಯಿಕ ವಿಧಾನದಲ್ಲಿ ಅಭ್ಯಾಸ ಮಾಡಿರುವ ಭಾರತೀಯ ಮಹಾನ್ ಪಂಡಿತರುಗಳ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಅವರುಗಳು ಪ್ರೋತ್ಸಾಹ, ಸಹಾಯ, ಗೌರವಗಳಿಲ್ಲದೇ ಇದ್ದಲ್ಲಿಯೇ ಬಾಡಿ ಹೋಗುತ್ತಿದ್ದಾರೆ.

ಇದನ್ನೆಲ್ಲಾ ನೋಡಿದರೆ ನಮ್ಮ ಸಂಪ್ರದಾಯವನ್ನೇ ನಮಗೆ ತಿರುಚಿ ಹೇಳುವ ಹಿತ ಶತ್ರುಗಳಿಗೆ ನಾವು ಒಪ್ಪಿಸುತ್ತಿರುವ ನಮ್ಮ ಸಾಂಸ್ಕೃತಿಕ ಸಂಪತ್ತನ್ನು ತಿರುಗಿ ನಮ್ಮ ಅಧೀನದಲ್ಲಿ ತೆಗೆದುಕೊಳ್ಳಲು ನಮ್ಮ ಭೋಳೇತನದ ಹಿಂಜರಿಕೆಯಿಂದ ನಮ್ಮ ಸಂಸ್ಕೃತಿಗೆ ನಾವೇ ವಿನಾಶಕರಾಗುತ್ತಿದ್ದೆವೋ ಎನ್ನುವ ಭಾವ ಮನದ ಮೂಲೆಯಲ್ಲಿ ಮೂಡದೆ ಇರಲಾರದು.
ಈ ಅಮೇರಿಕನ್ ವಿದ್ವಾಂಸರ ಪೈಕಿ, ರಾಜೀವ್ ಮಲ್ಹೋತ್ರ ಅವರು “ಶೆಲ್ಡನ್ ಪೊಲಾಕ್” ಅವರನ್ನು ಮುಖ್ಯ “ಗೆತ್ರು” ವಾಗಿ ಗುರುತಿಸುತ್ತಾರೆ , ಅಮೇರಿಕಾದ “ಚಿಂತನಾ ರೀತಿ” ಉಪಯೋಗಿಸುವ ತಂತ್ರವೆನೆಂದರೆ , ಒಳ್ಳೆ ಪೋಲಿಸ್ – ಕೆಟ್ಟ ಪೋಲಿಸ್ ಧೋರಣೆ ( ಅಂದರೆ ಒಂದು ಸಲ ನಮ್ಮನ್ನು ಒಳ್ಳೆಯ ರೀತಿಯಿಂದ ನಡೆಸಿಕೊಳ್ಳುವುದು , ನಂತರ ನಮ್ಮನ್ನೇ ದೋಷಿಯನ್ನಾಗಿ ಮಾಡಿ ಕೆಟ್ಟ ರೀತಿಯಲ್ಲಿ ವರ್ತಿಸುವುದು ) . ನಿಜವಾಗಿಯೂ ಸಂಸ್ಕೃತವನ್ನು ಉಳಿಸಿ ಬೆಳೆಸಲು ಆಸಕ್ತಿ ಹೊಂದಿದ ಕೆಲವು ಅಮೇರಿಕಾದ ವಿದ್ವಾಂಸರನ್ನು ನೋಡಿ ನಮ್ಮ ಪಕ್ಷದಲ್ಲಿದ್ದರೆ ಎಂದು ನಂಬಿಕೆ ಹುಟ್ಟಿದರೆ, ಮತ್ತೊಂದು ಕಡೆ ಮಾಧ್ಯಮಗಳಲ್ಲಿ ಹಿಡಿತ ಇರುವ , ಶೈಕ್ಷಣಿಕ ಸಂಸ್ಥಗಳನ್ನು ಆವರಿಸಿರುವ ಮತ್ತು ಅಧ್ಯಯನಗಳಿಗೆ ಬೇಕಾಗುವ ವಿಫುಲ ಸಂಪನ್ಮೂಲಗಳನ್ನು ಹೊಂದಿರುವ ಈ ರೀತಿಯ ಅನೇಕ “ಶೆಲ್ಡನ್ ಪೊಲಾಕ್” ಗಳು , ಸಂಸ್ಕೃತದ ಆತ್ಮವಾದ “ಪಾರಮಾರ್ಥಿಕ” ವನ್ನು ಅದರ ದೇಹವಾದ “”ವ್ಯಾವಹಾರಿಕ” ದಿಂದ ಬೇರ್ಪಡಿಸಿ ನಮ್ಮ ಸಂಸ್ಕೃತಿಯ ಮೂಲಧಾರಗಳನ್ನು ನಶಿಸುವಂತೆ ಮಾಡುತ್ತಿರುವ ಪ್ರಯತ್ನ ತುಂಬಾ ಅಪಾಯಕಾರಿ ಸಂಕೇತಗಳನ್ನು ನಮಗೆ ಕಳಿಸುತ್ತಿದೆ.

ಅವರ ಅಧ್ಯಯನದ ಕಾರ್ಯ ತಂತ್ರ , ಹಿಂದೂಗಳು ತಮ್ಮದೇ ಸಂಸ್ಕೃತವನ್ನು ಶೋಷಣೆಯ ಮೂಲವೆಂದು ತಿಳಿದು , ತಮ್ಮ ಸಂಸ್ಕೃತಿಯನ್ನೇ ತಿರಸ್ಕಾರ ಮನೋಭಾವದಿಂದ ನೋಡುವ ಹಾಗೆ ಹಲವು ವಿಷಯಗಳನ್ನು ತಮ್ಮ ಅಧ್ಯಯನದ ಮೂಲಕ ತೋರ್ಪಡಿಸುವುದು. ಸಾಂಪ್ರದಾಯಿಕವಾಗಿ ಭಾರತೀಯ ಸಂಸ್ಕೃತಿಯನ್ನು ಜೀವಿಸುತ್ತ ಬಂದಿರುವ ಮತ್ತು ಮೂಲ ವಿಚಾರಗಳನ್ನು ಯಥಾ ರೀತಿ ಅರ್ಥೈಸುವ ವಿದ್ವಾಂಸರನ್ನು ಕಡೆಗಣಿಸಿ , ನಮ್ಮ ಸಂಸ್ಕೃತಿಯ ಅಧ್ಯಯನದ ಮೇಲೆ ಹಿಡಿತ ಸಾಧಿಸುವುದು.

ಅವರುಗಳ ಪ್ರಕಾರ ಸಂಸ್ಕೃತದಲ್ಲಿ ಕಂಡು ಬರುವ ಕೆಲವು “ಸೆಕ್ಯುಲರ್” ಕಾವ್ಯಗಳು , ಕೇವಲ ವ್ಯಾವಹಾರಿಕ ಬದುಕಿನ ಬಗೆಗೆ ವಿವರಿಸುವಂಥವು ಮಾತ್ರ ಪ್ರಶಂಸೆಗೆ ಪಾತ್ರವಾದವುಗಳು, ಪಾರಮಾರ್ಥಿಕವನ್ನು ವಿವರಿಸುವ , ಪವಿತ್ರ ಭಾವವುಳ್ಳ ಸಂಸ್ಕೃತ ಗ್ರಂಥಗಳು ಶೋಷಣೆಗಳ ಮೂಲ. ದುರ್ದೈವವೆಂದರೆ ಪಾಶ್ಚಾತ್ಯ ರೀತಿಯಲ್ಲಿ ಶಿಕ್ಷಿತರಾದ ಭಾರತೀಯರೂ ಕೂಡ ನಮ್ಮ ದೃಷ್ಟಿಯಲ್ಲಿ ಸಂಸ್ಕೃತಿಯನ್ನು ಅಧ್ಯಯನ ಮಾಡದೆ , ಕೇವಲ ತಾತ್ಕಾಲಿಕ ಪದವಿಗಳು,ಆರ್ಥಿಕ ಸೌಲಭ್ಯ, ಸಮಾಜದಲ್ಲಿ ಘನತೆ ಇನ್ನಿತರ ಆಮಿಷಗಳಿಗೆ ತಮ್ಮನ್ನು ಬಲಿಯಾಗಿಸಿ ಪಾಶ್ಚಾತ್ಯ ಚಿಂತನಾ ರೀತಿಯನ್ನು ನಮ್ಮ ಸಂಸ್ಕೃತಿಯ ಅಧ್ಯಯನಕ್ಕೆ ಮತ್ತು ವಿಮರ್ಶೆಗೆ ಮೈಗೂಡಿಸಿಕೊಂಡಿದ್ದಾರೆ. ನಮ್ಮ ಸಂಸ್ಕೃತಿ ಒಳಗಡೆಯೇ ಅದನ್ನು ಒಡೆಯುವ ಸಾಧನವನ್ನು “ಪಾಶ್ಚಾತ್ಯ ಚಿಂತನ ರೀತಿ” ಮೂಲಕ ಮಾಡಲಾಗುತ್ತಿರುವುದು ಸೂಕ್ಷ್ಮವಾಗಿ ಗಮನಿಸಬೇಕಾದ ವಿಚಾರ.

ಈ ಸಂದರ್ಭದಲ್ಲಿ , ಮಲ್ಹೋತ್ರ ರವರ ಧೋರಣೆಯ ಬಗ್ಗೆ ಹೇಳಬೇಕಾದದ್ದು ಅಗತ್ಯ. ಅವರು “ಹಿಂದುತ್ವದ” ಅತೀವಾದಿ ಅಲ್ಲ (ಅತೀವಾದಿ : ಯಾರು ಸನಾತನ ಧರ್ಮದಲ್ಲಿರುವುದೆಲ್ಲವೂ ಪವಿತ್ರ ಸಂಸ್ಕೃತದಲ್ಲಿರುವುದೆಲ್ಲವೂ ಪ್ರಶ್ನಾತೀತ, ಯಾವುದೇ ಪುರಾವೆಯಿಲ್ಲದಿದ್ದರೂ ಇಲ್ಲ ಸಲ್ಲದ ಕಲ್ಪನೆಗಳೆಲ್ಲವೂ ಸ್ವಲ್ಪವೂ ಅಧ್ಯಯನವಿಲ್ಲದೇ ಸತ್ಯ ಎನ್ನುವವರು). ತಮ್ಮ ಜೀವನವನ್ನು ಧರ್ಮಕ್ಕಾಗಿಯೇ ಸವೆಸಿ , ಧರ್ಮವನ್ನು ಬಾಳುತ್ತಿರುವ ಸಾಕ್ಷಾತ್ ಭಾರತೀಯ ಸಾಂಪ್ರದಾಯಿಕ ವಿದ್ವಾಂಸರನ್ನು ಸಂಪೂರ್ಣವಾಗಿ ಕಡೆಗಣಿಸಿ , ಸಂಸ್ಕೃತ ಅಧ್ಯಯನದಲ್ಲಿ ಅಂತಿಮ ತೀರ್ಪುಗಾರರಾಗಿ ಬರಲು ಪ್ರಯತ್ನಿಸುತ್ತಿರುವ ಪಾಶ್ಚಾತ್ಯ ಪ್ರಯತ್ನವನ್ನು ಮಲ್ಹೊತ್ರರವರು ಪ್ರಶ್ನಿಸುತ್ತಾರೆ.

ಸಂಸ್ಕೃತವನ್ನು ಸರಿಯಾಗಿ ಬಲ್ಲ ನಮ್ಮ ಭಾರತೀಯ ಸಾಂಪ್ರದಾಯಿಕ ವಿದ್ವಾಂಸರು ಈ ಪೊಲಾಕ್ ರೀತಿಯ ಚಿಂತನೆಗಳು ಹೇಗೆ ಉದ್ಭವಿಸುತ್ತಿವೆ ಮತ್ತು ಇವುಗಳ ಮೂಲವೇನು? ಇವುಗಳಿಂದಾಗುವ ಅಪಾಯಗಳೇನು? ಎಂಬುದನ್ನು ಅರಿತುಕೊಂಡು ಈ ಹೊರಗಿನ ವಿಚಾರಗಳನ್ನು ಒಪ್ಪಿಕೊಳ್ಳುತ್ತಾ ಅವುಗಳಲ್ಲಿನ ಋಣಾತ್ಮಕ ವಿಚಾರಗಳನ್ನು ಬದಿಗೊತ್ತಿ ನಮ್ಮ ಸಂಸ್ಕೃತಿಯ ಧೃಢವಾದ ರಕ್ಷಣೆಯನ್ನು ಮತ್ತು ಆಂತರಿಕವಾಗಿ ತಕ್ಕ ಬದಲಾವಣೆ ತಂದು ಉತ್ಕೃಷ್ಟಗೊಳಿಸುವುದು ಅವಶ್ಯಕ ಎನ್ನುವುದು ಮಲ್ಹೊತ್ರರವರ ವಿಚಾರಧಾರೆ.
ಮಲ್ಹೊತ್ರರವರು ನಮ್ಮ ಸಂಸ್ಕೃತಿಯಲ್ಲಿರುವ ಕೆಲವು ಅನಿಷ್ಟಗಳನ್ನು ಎಂದಿಗೂ ಅಲ್ಲಗಳೆಯುವುದಿಲ್ಲ , ಮತ್ತು ಸಂಸ್ಕೃತಿಯ ಆಂತರಿಕ ಬದಲಾವಣೆಗೆ ಎಂದಿಗೂ ಅವರ ಆಕ್ಷೇಪವಿಲ್ಲ. ಆದರೆ ಯಾವ ವಿಚಾರಧಾರೆ ಉಪಯೋಗಿಸಿ ಸಂಸ್ಕೃತಿಯಲ್ಲಿನ ಅನಿಷ್ಟಗಳನ್ನು ನಿವಾರಿಸಬೇಕು , ಯಾವ ರೀತಿಯಲ್ಲಿ ನಿವಾರಿಸಬೇಕು, ಹೇಗೆ ಬದಲಾವಣೆ ತಂದುಕೊಳ್ಳಬೇಕು ಎನ್ನುವುದರ ಬಗ್ಗೆ ಒಂದು ಉದಾಹರಣೆ ನಮಗೆ ಉಪಯೋಗಕರವಾಗಬಲ್ಲದು.

ಇಬ್ಬರು ರೋಗಿಗಳಿದ್ದಾರೆಂದು ಇಟ್ಟುಕೊಳ್ಳಿ. ಒಬ್ಬರಿಗೆ ಕ್ಯಾನ್ಸರ್, ಮತ್ತೊಬ್ಬರಿಗೆ ಹೊಟ್ಟೆ ಅಲ್ಸರ್ ಇದೆ. ಕ್ಯಾನ್ಸರ್ನ ಕೆಲವು ಗುಣಲಕ್ಷಣಗಳು, ಹೊಟ್ಟೆ ಹುಣ್ಣಿನ ಕಲವು ಲಕ್ಷಣಗಳಿಗೆ ಹೋಲಿಕೆ ಕಂಡು ಬರಬಹುದು. ಆದರೆ, ಹೊಟ್ಟೆ ಹುಣ್ಣು ಇದೆಯೆಂದು ಗೊತ್ತಿದ್ದೂ , ಕೇವಲ ಹೊರಗಿನ ಗುಣ ಲಕ್ಷಣಗಳನ್ನು ಆಧರಿಸಿ ಅವನಿಗೆ ಕ್ಯಾನ್ಸರ್ ಔಷಧಿ ನೀಡಿದರೆ ಏನಾದೀತು ? ಒಮ್ಮೆ ಯೋಚಿಸಿ !! ಇದೆ ರೀತಿ ಸಂಸ್ಕೃತಿಯ ಅಧ್ಯಯನದಲ್ಲೂ ನಡೆಯುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ಅನಿಷ್ಟಗಳನ್ನು ಸರಿಪಡಿಸಲು ಉಪಯೋಗಿಸಿದ ರೀತಿಯನ್ನು , ಕೇವಲ ಭಾರತದ ಸಂಸ್ಕೃತಿಯ ಕೆಲವು ಗುಣಲಕ್ಷಣಗಳನ್ನು ನೋಡಿ ಉಪಯೋಗಿಸಿದರೆ !! ನೀವೇ ಯೋಚಿಸಿ. ಒಂದು ವೇಳೆ ನಿಮಗೆ ಇಲ್ಲದ ಖಾಯಿಲೆಯನ್ನು ಇದೆಯೆಂದು ಹೇಳಿ ಔಷಧಿ ನೀಡಿದರೆ ಎನಾದಿತು ? ಅದೇ ರೀತಿ ಇಲ್ಲಿಯೂ ನಡೆಯುತ್ತಿದೆ !

ದುರದೃಷ್ಟಕರವಾಗಿ , ಭಾರತೀಯ ಸಮಾಜದಲ್ಲಿ ಮೂಲಭೂತವಾಗಿ ತಪ್ಪು ಹಾದಿಯಲ್ಲಿರುವ ಮತ್ತು ಬಲವಾಗಿ ಬೇರು ಬಿಟ್ಟಿರುವ ”ಕಾಸ್ಟ್” ಮತ್ತು “ರಿಲಿಜನ್”. ಸ್ವತಂತ್ರ ಭಾರತದಲ್ಲಿ ಎಡ ಪಂಥೀಯರ ಹಿಡಿತದಲ್ಲಿರುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು. ಭಾರತೀಯ ಸಮಾಜದಲ್ಲೇ ಇರುವ ಅಮೇರಿಕಾ ವಿಚಾರ ವಿಧಾನ ಹೊಂದಿರುವ ಗಣ್ಯ ವ್ಯಕ್ತಿಗಳು. ಇವೆಲ್ಲವುಗಳಿಂದಾಗಿ ಹಿಂದೂಗಳು “ಅಮೆರಿಕನ್ ಓರಿಯೆಂಟಲ್” ಮನೋಸ್ಥಿತಿಯ ಅರಿವಿಲ್ಲದವರಾಗಿದ್ದಾರೆ. , ಒಂದು ಜನಾಂಗವಾಗಿ ನಾವು ಕೀಳರಿಮೆಯಿಂದ (inferiority complex ) ಬಳಲುತ್ತಿದ್ದೇವೆ , ಸದಾ ಕಾಲ ನಮ್ಮ ಬಗ್ಗೆ ನಾವು ತಿಳಿದಿರುವುದರ ಮೇಲೆ ಮಹತ್ವ ನೀಡದೆ, ಪಶ್ಚಿಮದವರು ಮಾಡುವ ನಮ್ಮ ಬಗೆಗಿನ ವಿಚಾರಧಾರೆ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಬ್ರಿಟಿಷರು ನಮ್ಮನ್ನು ಅರ್ಥಮಾಡಿಕೊಳ್ಳಲು ತಾವುಗಳು ಬರೆದ ಇತಿಹಾಸವನ್ನು ಇಂದಿಗೂ ಶೈಕ್ಷಣಿಕ ಪದ್ಧತಿಯಲ್ಲಿ ಮುಂದುವರೆಸಿಕೊಂಡು ಬಂದಿರುವ ಕಾರಣ ನಮ್ಮ ಇತಿಹಾಸವನ್ನು ನೋಡಿ ಪೇಚಾಟದಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ.

ನಾವು ಗಮನಿಸಲೇ ಬೇಕಾದಂಥ ಇನ್ನೊಂದು ವಿಷಯವನ್ನು ಮಲ್ಹೊತ್ರರವರು ಸೂಕ್ಷ್ಮವಾಗಿ ಹೇಳುತ್ತಾರೆ. ಕಳೆದ ಹಲವು ವರ್ಷಗಳಿಂದ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಭಾರತದಲ್ಲಿಯೇ ಅದರ ಸಾಂಪ್ರದಾಯಿಕ ವಿದ್ವಾಂಸರಿಗೆ ಒತ್ತು ಕೊಡದೆ , ಅದನ್ನು ತಮ್ಮದೇ ದೃಷ್ಟಿಕೋನದಿಂದ ನೋಡುವ ಮತ್ತು ಸಾಂಪ್ರದಾಯಿಕ ದೃಷ್ಟಿಕೋನವನ್ನು ಕಡೆಗಣಿಸಿ ತಮ್ಮ ಪ್ರಾಬಲ್ಯವನ್ನು ಮೆರೆಯಲು ಹೊರಟಿರುವವರಿಗೆ ನಮ್ಮ ಭಾರತೀಯ billionaires ಗಳು ಅವಕಾಶ ಮಾಡಿಕೊಡುತ್ತಿದ್ದಾರೆ. ಉದಾಹರೆಣೆಗೆ : ನಾರಾಯಣ ಮೂರ್ತಿಯವರು ಯಾವಾಗ “ಕ್ಲಾಸಿಕ್ ಲೈಬ್ರರಿ” ಸ್ಥಾಪಿಸಲು ಹೊರಟರೋ ಅವರು ಇದೇ “ಪೊಲಾಕ್” ನನ್ನು ಕಾರ್ಯ ಮಾಡಲು ಅವಲಂಬಿಸಿರುವುದು ಅತೀ ವಿಷಾದನೀಯ. “Capatalistic Model” ದೂರುವ ಇದೇ “ಪೊಲಾಕ್” ,ಅದೇ ಮೂಲದಿಂದ ಆರ್ಥಿಕ ಸಹಾಯ ಪಡೆದು ತನ್ನ ಕಾರ್ಯ ಪೂರ್ತಿ ಮಾಡಿಕೊಳ್ಳುತ್ತಿರುವುದು ಅವರ ದ್ವಂದ್ವಕ್ಕೆ ಕನ್ನಡಿ ಹಿಡಿಯುತ್ತದೆ.

ಈ ರೀತಿ ದ್ವಿಮುಖ ಹೊಂದಿರುವ ಶೆಲ್ದೊಂ ಪೊಲಾಕ್’ನ ಶಾಲೆಯ ಸಂಪೂರ್ಣ ಸಿದ್ಧಾಂತವೇನು ಮತ್ತು ಅದರಲ್ಲೆನಿವೆ ? ಈ ಸಿದ್ಧಾಂತವನ್ನು ಉಪಯೋಗಿಸಿ ಹೇಗೆ ನಮ್ಮ ಸಂಸ್ಕೃತಿಯನ್ನು ನಾಶದತ್ತ ಕೊಂಡೊಯ್ಯುವ ಭವಿಷ್ಯದ ವಿನ್ಯಾಸ ನಡೆಯುತ್ತಿದೆ ! ಇವುಗಳನ್ನು ನಾವು ಹೇಗೆ ಮೆಟ್ಟಿ ನಿಲ್ಲಬಹುದು. ಅವರುಗಳಿಂದ ನಾವು ಹೇಗೆ ಒಳ್ಳೆಯದನ್ನು ಸ್ವೀಕರಿಸಿ ನಮ್ಮ ಸಂಸ್ಕೃತಿಗೆ ಚ್ಯುತಿ ಬರದಂತೆ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬಹುದು? ನಮ್ಮ ಸಂಸ್ಕೃತಿಯ ಮುಂದಿನ ಹೆಜ್ಜೆ ಏನಾಗಬೇಕು?

ಈ ಮೇಲೆ ನಾನು ಬರೆದಿರುವ ವಿಷಯ ಕೇವಲ ಅಮೇರಿಕಾ ಚಿಂತನಾ ವಿಧಾನದ ಬಗೆಗಿನ ಒಂದು ಸಣ್ಣ ನೋಟವನ್ನಷ್ಟೇ ನೀಡಲು ಪ್ರಯತ್ನಿಸಿರುವುದು. ಈ ರೀತಿಯ ಹಲವು ಮೂಲಭೂತ ವಿಷಯಗಳ ಬಗ್ಗೆ ತಿಳಿದು ಕೊಳ್ಳಲು ಈ ಪುಸ್ತಕವನ್ನು ಓದಲೇ ಬೇಕು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments