ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೧ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ನನ್ನ ಅನುಭವವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ಈ ಲೇಖನವನ್ನು ಪ್ರಾರಂಭಿಸುತ್ತೇನೆ. ಅಮೇರಿಕಾದಲ್ಲಿರುವ ಅನಿವಾಸಿ ಭಾರತೀಯರ ಬಾಯಲ್ಲಿ ನಾನು ಈ ಕೆಳಗಿನ ಮಾತುಗಳನ್ನು ಪದೇ ಪದೇ ಕೇಳಿದ್ದೇನೆ: “ನಾನು ಹಲವು ದಶಕಗಳ ಹಿಂದೆ ಅಮೇರಿಕಕ್ಕೆ ಬಂದಾಗ ನನಗೆ ಹಿಂದೂಯಿಸಂನ ಕುರಿತು ಅಷ್ಟಾಗಿ ತಿಳಿದಿರಲಿಲ್ಲ. ನನ್ನ ಈ ಅಜ್ಞಾನದ ಕುರಿತು ನನಗೆ ಅರಿವು ಮೂಡಿದ್ದೇ ನನ್ನ ಮಕ್ಕಳು ಹಿಂದೂಯಿಸಂ ಎಂದರೆ ಏನು ಎಂದು ಪ್ರಶ್ನಿಸಲು ಆರಂಭಿಸಿದಾಗ. ನಾನು ಅವರಿಗೆ ಹಿಂದೂಯಿಸಂ ಎಂದರೇನು ಎಂದು ಕಲಿಸಬೇಕಿತ್ತು, ಆದ್ದರಿಂದ ನಾನೂ ಹಿಂದೂಯಿಸಂ ಕುರಿತು ಭಾರತದಲ್ಲಿದ್ದಾಗ ತಿಳಿದುಕೊಂಡದ್ದಕ್ಕಿಂತ ಹೆಚ್ಚು ಅಮೆರಿಕೆಯಲ್ಲಿ ಕುಳಿತು ತಿಳಿದುಕೊಂಡೆ. (ಈ ವಿಚಾರದಲ್ಲಿ ಆ ಸ್ವಾಮಿ ಅಥವಾ ಈ ಸಂಘಟನೆ ನನಗೆ ಸಹಾಯ ಮಾಡಿತು. ಅವರಿಗೆ ನನ್ನ ಕೃತಜ್ಞತೆಗಳು).”
ಈ ಅನುಭವವನ್ನು ಕುರಿತು ಒಮ್ಮೆ ಯೋಚಿಸಿ ನೋಡಿ. ಭಾರತೀಯರು ಅಮೇರಿಕಕ್ಕೆ ಬಂದಾಗ ಅವರಲ್ಲಿ ಹಿಂದೂಯಿಸಂನ ಬಗ್ಗೆ ತಮಗೆ ಹೆಚ್ಚಿನದೇನೂ ತಿಳಿದಿಲ್ಲವೆಂಬ ಭಾವನೆ ಹುಟ್ಟುತ್ತದೆ. ಇದಕ್ಕೆ ತಮ್ಮ ಹಿಂದಿನ ನಿರಾಸಕ್ತಿಯನ್ನು (ಭಾರತದಲ್ಲಿದ್ದಾಗ ರಿಲಿಜನ್ ಅಧ್ಯಯನದ ಕುರಿತ ನಿರಾಸಕ್ತಿಯನ್ನು) ಅಥವಾ ಈ ರೀತಿಯ ವಿದ್ಯಾಭ್ಯಾಸವೇ ಭಾರತದಲ್ಲಿ ಇಲ್ಲದಿರುವುದರ ಬಗ್ಗೆ ಶಪಿಸಿಕೊಳ್ಳುತ್ತಾರೆ. ಆದರೆ ಇಂದು ಸಂಪ್ರದಾಯಗಳನ್ನು ತಮ್ಮ ಮಕ್ಕಳಿಗೆ ದಾಟಿಸಲು ಹಿಂದೂಯಿಸಂನ ಕುರಿತ ವಿದ್ಯಾಭ್ಯಾಸದ ಅವಶ್ಯಕತೆ ಏಕೆ ಉದ್ಭವಿಸಿದೆ ಎಂಬುದನ್ನು ಇವೆರಡು ವಿಚಾರಗಳು ತಿಳಿಸಿಕೊಡುವುದಿಲ್ಲ. ಏಕೆಂದರೆ, ಸಹಸ್ರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿಯನ್ನು ಜನಸಾಮಾನ್ಯರೇ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಾ ಬರುತ್ತಿದ್ದಾರೆ. ಈ ಸಾಮಾನ್ಯ ಜನತೆ ಇದನ್ನು ತಮ್ಮ ಪೋಷಕರಿಂದ ಮತ್ತು ಮಿತ್ರರಿಂದ ಕಲಿತದ್ದೇ ಹೊರತು, ಯಾವುದೇ ಘನ ಪಂಡಿತರಿಂದಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೇರಿಕಾದಲ್ಲಿರುವ ಭಾರತೀಯರ ಜ್ಞಾನ ಮತ್ತು ಅಜ್ಞಾನವನ್ನು ಭಾರತದಲ್ಲಿರುವ ಸಾಮಾನ್ಯ ವ್ಯಕ್ತಿಗಳ ಅದೇ ಜ್ಞಾನಾಜ್ಞಾನಕ್ಕೆ ಹೋಲಿಸಬಹುದು. ಅವರಿಗೆ (ಹಿಂದೂಯಿಸಂನ ಬಗ್ಗೆ) ತಮಗಿರುವ ಅಜ್ಞಾನದ ಕುರಿತು ಈಗಿರುವಷ್ಟು ಬೇಸರ ಬಹುಶಃ ಅವರು ಭಾರತದಲ್ಲೇ ಉಳಿದಿದ್ದರೆ ಇರುತ್ತಿರಲಿಲ್ಲ. ಸಹಸ್ರಾರು ಭಾರತೀಯರು, ತಮ್ಮ ‘ಹಿಂದೂ’ ಎಂಬ ‘ರಿಲಿಜನ್’ ಕುರಿತು ಯಾವುದೇ ಸ್ಪಷ್ಟ ಕಲ್ಪನೆಯಿಲ್ಲದೆ, ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮತ್ತೊಂದು ಪೀಳಿಗೆಗೆ ದಾಟಿಸುತ್ತಿರುವಂತೆ ಇವರೂ ಸಹ ದಾಟಿಸಿರುತ್ತಿದ್ದರು. ಇಂತಹ ಕಾರ್ಯದಲ್ಲಿ ಮಿತ್ರರ ಗುಂಪು, ಕೌಟುಂಬಿಕ ವಲಯ ಮತ್ತು ಸಂಬಂಧಿಗಳು ಪ್ರಮುಖ ಪಾತ್ರವಹಿಸುತ್ತಿದ್ದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಚಿಂತಿಸಬೇಕಾದ ವಿಚಾರವೆನೆಂದರೆ, ಭಾರತದಲ್ಲಿ ಸುಸಂಗತವಾಗಿ ನಡೆದು ಹೋಗುವ ಈ ಕಾರ್ಯ, ಅಮೇರಿಕಾದಲ್ಲಿ ನೆಲೆಸುವ ಭಾರತೀಯರ ನಡುವೆ ನಿಂತುಬಿಡುತ್ತದೆ. ಹಿಂದೂಯಿಸಂ ಕುರಿತು ಒಂದು ನಿರ್ದಿಷ್ಟ ಶಿಕ್ಷಣ ಅಗತ್ಯವಿದೆ ಎಂಬ ಭಾವನೆ ಬೆಳೆಯುವುದು ಇವರು ಅಮೇರಿಕಕ್ಕೆ ಬಂದ ನಂತರವೇ. ಖಂಡಿತವಾಗಿಯೂ ಅವರು ಬದುಕುವ ಪರಿಸರದ ಪ್ರಭಾವವೇ ಇದು. ಈ ಪರಿಸರ ಅವರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಅಷ್ಟೇ ಅಲ್ಲ, ತಮ್ಮ ‘ರಿಲಿಜನ್ನ’ನ್ನು ಒಂದು ನಿರ್ದಿಷ್ಟವಾದ ಕ್ರಮದಲ್ಲಿ ಅಭ್ಯಸಿಸುವ ಒತ್ತಡವನ್ನೂ ಇದು ಭಾರತೀಯ ಪೋಷಕರ ಮೇಲೆ ಹೇರುತ್ತದೆ. ಅಂದರೆ, ಭಾರತೀಯ ಪರಿಸರದಲ್ಲಿ ‘ಹಿಂದು ರಿಲಿಜನ್ನಿ’ನ ಕುರಿತ ಯಾವುದೇ ನಿರ್ದಿಷ್ಟ ಅಧ್ಯಯನವಿಲ್ಲದೆಯೇ ಪೀಳಿಗೆಯಿಂದ ಪೀಳಿಗೆಗೆ ಸಂಸ್ಕೃತಿಯು ಸರಾಗವಾಗಿ ದಾಟುತ್ತಿದ್ದರೂ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಂದು ನೆಲೆಸುತ್ತಲೇ, ತಮ್ಮ ‘ರಿಲಿಜನ್ನಿ’ನ ಕುರಿತು ಸ್ಪಷ್ಟತೆಯನ್ನು ಹೊಂದುವ ಒತ್ತಡವು ಭಾರತೀಯರಿಗೆ ಎದುರಾಗುತ್ತದೆ. ಆದ್ದರಿಂದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರು, ಭಾರತದಲ್ಲಿರುವ ನಮ್ಮ ಬಹುತೇಕ ಪೋಷಕರು ಮತ್ತು ಮಿತ್ರರು ಅನುಭವಿಸಿರದ ಬೇರೆಯ ತೆರನಾದ ಸವಾಲನ್ನು ಎದುರಿಸುತ್ತಾರೆ. ತಮ್ಮ ಮಕ್ಕಳಿಗೆ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ದಾಟಿಸಬೇಕಾದರೆ ‘ಹಿಂದೂಯಿಸಂ’ನ ಸರಿಯಾದ ತಿಳುವಳಿಕೆಯನ್ನು ಗಳಿಸಿಕೊಳ್ಳಬೇಕಾದ ಸವಾಲು ಅದು.
ವಿಚಾರವೇನೆಂದರೆ, ನನ್ನ ಪ್ರಕಾರ, ಅಮೆರಿಕೆಯ ಈ ಅನಿವಾಸಿ ಭಾರತೀಯರಿಗೆ ಯಾವುದು ಸಹಾಯ ಮಾಡಿದಂತೆ ತೋರಿತೋ (ಉದಾ., ‘ಹಿಂದೂಯಿಸಂ’ನ ಆಚರಣೆ ಮತ್ತು ಬಿಲೀಫ್ಗಳನ್ನು ಕ್ರೋಡೀಕರಿಸುವುದು/codify ಮಾಡುವುದು, ಹಿಂದೂಯಿಸಂನ ‘Ten Commandments’ಗಳನ್ನು ನಿರ್ದಿಷ್ಟಪಡಿಸುವುದು) ಅವು ಅಲ್ಲೇ ಹುಟ್ಟಿ ಬೆಳೆದ ಅವರ ಮಕ್ಕಳಿಗೆ ಸಹಾಯ ಮಾಡುತ್ತಿಲ್ಲ. ತಮ್ಮ ಪೋಷಕರ ಅಗತ್ಯಗಳನ್ನು ಏನು ಪೂರೈಸಿತೋ ಅದು ಈ ಹೊಸ ತಲೆಮಾರಿನ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಿಲ್ಲ. ಸ್ವ-ಅಧ್ಯಯನ ಕೇಂದ್ರಗಳಿಗೆ ಭೇಟಿ ನೀಡುವುಡು, ಅಲ್ಲಿ ಪತಂಜಲಿ ಮುಂತಾದವರನ್ನು ಓದುವುದು ಇತ್ಯಾದಿ ಮೊದಲ ತಲೆಮಾರಿನ ಭಾರತೀಯರಿಗೆ ಮುದ ಕೊಟ್ಟಿದ್ದು ನಿಜ. ಏಕೆಂದರೆ ಈಗ ಅವರು ‘ಪ್ರಮಾಣ’ ಮತ್ತು ‘ಅನುಮಾನ’ ಮುಂತಾದ ವಿಷಯಗಳ ಕುರಿತು ಮಾತನಾಡುವ ಹೊಸ ಸಾಧ್ಯತೆ ಅವರಿಗೆ ತಾವೆಲ್ಲೋ ತಲುಪಿದ್ದೇವೆ ಎಂಬ ಭಾವನೆ ಕೊಟ್ಟಿತು. ಆದರೆ ಇದು ಅವರ ಮಕ್ಕಳ ಜರೂರತ್ತನ್ನು ಪೂರೈಸುತ್ತಿಲ್ಲ. ಶಿಕ್ಷಕರು ಮತ್ತು ಗೆಳೆಯರಿಂದ ಬರುವ ಪ್ರಶ್ನೆಗಳನ್ನು ಎದುರಿಸಲು ಇವರಿಗೆ ತಮ್ಮ ಪೋಷಕರು ಕಲಿತ ಮತ್ತು ಕಲಿಸಿದ ಪತಂಜಲಿಯಿಂದ ಸಾಧ್ಯವಾಗುತ್ತಿಲ್ಲ. ಈ ಪ್ರಶ್ನೆಗಳು ಅವರಿಗೆ ಅರ್ಥವೂ ಆಗುವುದಿಲ್ಲ ಮತ್ತು ಉತ್ತರಿಸಲೂ ಆಗುತ್ತಿಲ್ಲ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಲ್ಲಿ ಮೂರು ಬೇರೆ ಬೇರೆ ಸಮಸ್ಯೆಗಳಿರುವಂತೆ ತೋರುತ್ತದೆ. ಮೊದಲನೆಯದಾಗಿ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾರತೀಯರು ನೆಲೆಸಿದಾಗ, ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಭಾರತದಲ್ಲಿ ನಡೆಯುವ ರೀತಿಯ ಪ್ರಕ್ರಿಯೆಯು ನಿಂತುಹೋಗುತ್ತದೆ. ಎರಡನೆಯದಾಗಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಅನಿವಾಸಿ ಭಾರತೀಯರು ತಮ್ಮ ಸಂಪ್ರದಾಯಗಳನ್ನು ವ್ಯವಸ್ಥಿತವಾಗಿ ಕ್ರೋಡೀಕರಿಸುವ ಒತ್ತಡಕ್ಕೆ ಸಿಲುಕುತ್ತಾರೆ. ಮೂರನೆಯದಾಗಿ, ಪೋಷಕರ ಅಗತ್ಯಗಳನ್ನು ಪೂರೈಸಿದಂತೆ ತೋರುವ ಈ ರೀತಿಯ ಕ್ರೋಡೀಕರಣವು ಅವರ ಮಕ್ಕಳಿಗೆ ತಮ್ಮ ಸಮಾಜದೊಂದಿಗೆ ಮತ್ತು ಗೆಳೆಯರೊಂದಿಗೆ ವ್ಯವಹರಿಸಲು ಅದು ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ. ಈ ಮೂರು ಸಮಸ್ಯೆಗಳಿಂದಾಗಿ ನಾಲ್ಕನೆಯ ಸಮಸ್ಯೆಯೊಂದು ಉದ್ಭವಿಸುತ್ತದೆ: ಈ ರೀತಿಯ ಕ್ರೋಡೀಕರಣವು ಭಾರತೀಯ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿರುವ ಬಹುತ್ವತೆ ಮತ್ತು ವೈವಿಧ್ಯತೆಯ ಮಹತ್ವವನ್ನು ಮತ್ತು ಅಗತ್ಯಗಳನ್ನು ಗೌಣಗೊಳಿಸುವ ಗುಣ ಹೊಂದಿದೆ.
ನಾನು ಪ್ರಸಕ್ತ ಲೇಖನದಲ್ಲಿ ಈ ಸನ್ನಿವೇಶವನ್ನು ಸ್ಪಷ್ಟೀಕರಿಸುವ ಉದ್ದೇಶವನ್ನು ಹೊಂದಿದ್ದೇನೆ. ಸಧ್ಯಕ್ಕೆ ನನ್ನ ಈ ಮೇಲಿನ ಅಭಿಪ್ರಾಯಗಳು ಎಲ್ಲಾ ಪಾಶ್ಚಾತ್ಯ ದೇಶಗಳಲ್ಲೂ ನೆಲೆಸಿರುವ ಬಹುತೇಕ ಎಲ್ಲಾ ಅನಿವಾಸಿ ಭಾರತೀಯರಿಗೂ ಅನುವಾಗುತ್ತದೆ ಎಂದು ಇಟ್ಟುಕೊಳ್ಳೋಣ. (ಅಷ್ಟೇ ಏಕೆ, ಇದು ಇಂದು ಭಾರತೀಯರೆಲ್ಲರೂ ಎದುರಿಸುತ್ತಿರುವ ಸಮಸ್ಯೆಯೇ. ಕಡೇಯ ಪಕ್ಷ ಪಟ್ಟಣ ಪ್ರದೇಶದಲ್ಲಿ, ಹೆಚ್ಚಿನ ವಿಧ್ಯಾಭ್ಯಾಸ ಮಾಡುತ್ತಿರುವ, ಅಥವಾ ಅಂಥವರ ಆಸುಪಾಸಿನಲ್ಲಿರುವ ಭಾರತೀಯರು ಈ ಸಮಸ್ಯೆಯನ್ನು ಒಂದಿಲ್ಲ ಒಂದು ರೀತಿಯಲ್ಲಿ ಎದುರಿಸುತ್ತಿದ್ದಾರೆ. [- ಅನುವಾದಕರ ಟಿಪ್ಪಣಿ]). ಸಮಸ್ಯೆಗಳನ್ನು ನಿರ್ದಿಷ್ಟಪಡಿಸಿ ಅವುಗಳಿಗೆ ಪರಿಹಾರ ಹುಡುಕುವುದರಲ್ಲಿ ನನ್ನ ಆಸಕ್ತಿ ಇದೆಯೇ ಹೊರತು ತಪ್ಪಿತಸ್ಥರು ಯಾರು ಎಂದು ಗುರುತಿಸಿ ಅವರನ್ನು ನಿಂದಿಸುವುದರಲ್ಲಿ ಅಲ್ಲ. ಈ ಸನ್ನಿವೇಶಗಳು ಹೇಗೆ ಉಧ್ಬವಿಸಿದವು ಎಂಬುದರ ಬಗ್ಗೆ ನನಗೆ ಒಂದಷ್ಟು ತಿಳಿದಿದ್ದರೂ, ಸದ್ಯಕ್ಕೆ ಅದರ ಬಗ್ಗೆ ನಾನು ಏನನ್ನೂ ಹೇಳಲಿಕ್ಕೆ ಹೋಗುವುದಿಲ್ಲ.
ಮುಂದುವರೆಯುವುದು….