ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೨ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ಹಿನ್ನೆಲೆ:
ಭಾರತದ ಹಲವು ಪ್ರದೇಶಗಳ ಮೇಲೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಹಿಡಿತವನ್ನು ಬಿಗಿಗೊಳಿಸಿ, ಅದರ ಆಡಳಿತಾಧಿಕಾರಿಗಳು ಆಳುವವರ ಸ್ಥಾನಕ್ಕೆ ಬಂದಾಗ, ಭಾರತೀಯ ಸಂಪ್ರದಾಯಗಳ ಕುರಿತಂತೆ ಒಂದು ವಿಶೇಷ ಹಗೆತನವು ವಸಾಹುತು ಆಡಳಿತ ನೀತಿಯ ಹೆಗ್ಗುರುತಾಯಿತು. ಈ ಹಗೆತನಕ್ಕೆ ಬಹಳ ಪುರಾತನ ಇತಿಹಾಸವಿರುವುದು ನಿಜ. ಹಿಂದೂಗಳ ‘ರಿಲಿಜನ್’ ಆದ ‘ಹಿಂದೂಯಿಸಂ’ನ ಪ್ರತಿ ಅಂಶವೂ ಅವರಿಗೆ ಆಕ್ಷೇಪಾರ್ಹ ಮತ್ತು ಅಸಂಗತವಾಗಿ ಕಂಡಿದ್ದು ಹಳೆಯ ವಿಚಾರ. ಬಾಲ್ಯವಿವಾಹ, ಸತಿ ಪದ್ಧತಿ ಮುಂತಾದ ಅಸಹನೀಯ ಮತ್ತು ಅನೈತಿಕ ಆಚರಣೆಗಳನ್ನು ಅವರು ಭಾರತದಲ್ಲಿ ‘ಕಂಡುಕೊಂಡಿದ್ದರಿಂದ’ ಮಾತ್ರವೇ ಈ ಹಗೆತನವು ಬೆಳೆದದ್ದಲ್ಲ. ಅವರ ಹಗೆತನಕ್ಕೆ ಸಾಕಷ್ಟು ಆಳವಾದ ಬೇರುಗಳಿವೆ: ತಮ್ಮ ರಿಲಿಜನ್ನಿನ ಕನ್ನಡಕದಿಂದ ನೋಡಿದಾಗ, ಇಂತಹ ವಿಕೃತ ಆಚರಣೆಗಳು ಸುಳ್ಳು ರಿಲಿಜನ್ಗಳ ಅವಿಭಾಜ್ಯ ಅಂಗಗಳು ಎಂದು ಅವರಿಗೆ ಅನಿಸಿತ್ತು. ‘ಹಿಂದೂಯಿಸಂ’ ಎನ್ನುವುದು ಸುಳ್ಳು ಮತ್ತು ಅವನತಿ ಹೊಂದಿದ ರಿಲಿಜನ್ನಾದ್ದರಿಂದ, ಇಂತಹ ಅರ್ಥಹೀನ ವಿಕೃತ ಆಚರಣೆಗಳು ಕೇವಲ ಆಕಸ್ಮಿಕಗಳಲ್ಲ, ಬದಲಿಗೆ ಅದರ ಅಗತ್ಯ ಲಕ್ಷಣಗಳು ಎಂದು ಅವರು ನಂಬಿದ್ದರು.
ಈ ವಿಚಾರವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ‘ಸುಳ್ಳು ರಿಲಿಜನ್’ ಎಂಬ ಸಂಗತಿಯೇ ಭಾರತೀಯರಾದ ನಮಗೆ ಅರ್ಥವಾಗುವುದಿಲ್ಲ. ಆದ್ದರಿಂದ ಇದನ್ನು ತುಂಬಾ ಸರಳವಾದ ಪರಿಭಾಷೆಯಲ್ಲಿ ಹೇಳುತ್ತೇನೆ. ಸೆಮೆಟಿಕ್ ರಿಲಿಜನ್ನಿನ (ಅಂದರೆ ಜುಡಾಯಿಸಂ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂನ) ಅನುಯಾಯಿಗಳ ಪ್ರಕಾರ ‘ಗಾಡ್’ಗೆ ಮಾತ್ರ ವರ್ಶಿಪ್ ಸಲ್ಲಬೇಕಾದದ್ದು. ಅವರು ತಮ್ಮ ‘ಗಾಡ್’ ಬಗ್ಗೆ ಮಾತನಾಡುವಾಗ, ನಾವು ಎರಡು ಸಂಗತಿಗಳನ್ನು ಸ್ಪಷ್ಟವಾಗಿ ತಿಳಿದಿರಬೇಕು. ಮೊದಲನೆಯದು: ಈ ‘ಗಾಡ್’, ಅಬ್ರಹಾಂ, ಐಸಾಕ್, ಮತ್ತು ಜಾಕೋಬರ ಗಾಡ್. ಅವರ ಧರ್ಮಗ್ರಂಥದ (ಬೈಬಲ್ ಇತ್ಯಾದಿಗಳ) ಪ್ರಕಾರ, ಗಾಡ್ ಈ ಪ್ರಪಂಚವನ್ನು ಸೃಷ್ಟಿಸಿದ್ದಾನೆ (ಬೈಬಲ್ನಮ ಓಲ್ಡ್ ಟೆಸ್ಟಮೆಂಟ್/ಹಳೆಯ ಒಡಂಬಡಿಕೆಯ ಭಾಗದಲ್ಲಿ ಸೃಷ್ಟಿಯ ಕುರಿತು ವಿವರಿಸಿರುವುದನ್ನು ಉದಾಹರಣೆಯಾಗಿ ನೋಡಬಹುದು). ಈತ ಇಸ್ರಾಯೇಲರಿಗೆ ಕೂಡ ಗಾಡ್. ತನ್ನನ್ನು ಮರೆತದ್ದಕ್ಕಾಗಿ ಈತ ಯೆಹೂದಿಗಳನ್ನು ಶಿಕ್ಷಿಸಿ, ಅವರನ್ನು ಪ್ರಪಂಚದಲ್ಲೆಡೆ ಚೆದುರಿ ಬಿಡುತ್ತಾನೆ. ಆದರೆ ಜೊತೆಗೆ ಅವರನ್ನು ರಕ್ಷಿಸುವ ಭರವಸೆಯನ್ನೂ ಕೂಡ ನೀಡುತ್ತಾನೆ. ಮುಂದೆ ಕ್ರಿಶ್ಚಿಯನ್ನರ ಕೈಯಲ್ಲಿ, ಯೆಹೂದಿಗಳನ್ನು ರಕ್ಷಿಸಲು ಓರ್ವ ಪ್ರವಾದಿಯನ್ನು ಕಳುಹಿಸುತ್ತೇನೆ ಎಂದು ಗಾಡ್ ಕೊಟ್ಟ ಆಶ್ವಾಸನೆಯ ಈ ಕಥೆ ಮಾರ್ಪಾಡುಗೊಂಡು, ಅದು ಸಮಸ್ತ ಮಾನವ ಜನಾಂಗದ ರಕ್ಷಣೆಯ/ಸಾಲ್ವೇಶನ್ನಿನ ಇತಿಹಾಸವಾಗಿ ಬದಲಾಗುತ್ತದೆ. ಇಸ್ರಾಯೇಲಿನ ಈ ಗಾಡ್, ಅಬ್ರಹಾಂ, ಐಸಾಕ್, ಮತ್ತು ಜಾಕೋಬ್ನನ ಗಾಡ್ ಆಗಿಯೇ ಮುಂದುವರೆದರೂ ಕೂಡ, ಮುಂದೆ ಈತ ಏಕೈಕ, ಅನನ್ಯ ಮತ್ತು ವಿಶೇಷಣರಹಿತ ‘ಗಾಡ್’, ಮಾನವ ಜಗತ್ತಿನ ಗಾಡ್ ಆಗಿಬಿಡುತ್ತಾನೆ. ಈತನ ರಕ್ಷಣೆಯ ಭರವಸೆ ನಝರೇತ್ನನ ಜೀಸಸ್ನಟಲ್ಲಿ/ಯೇಸುವಿನಲ್ಲಿ ಈಡೇರಿತು ಎಂದು ಕ್ರಿಶ್ಚಿಯನ್ನರು ನಂಬುತ್ತಾರೆ. ಈ ಯೇಸುವೆ ಆ ಗಾಡ್ ಘೋಷಿಸಿದ್ದ ತನ್ನ ದೂತ ಅಥವಾ ಪ್ರವಾದಿ. (‘ಕ್ರಿಸ್ತ/Christ’ ಎಂದರೆ ‘promised one’ / ಮೆಸ್ಸಾಯ, ಅಂದರೆ ಯಾರು ಬರುತ್ತಾನೆ ಎಂದು ಗಾಡ್ ವಾಗ್ದಾನವನ್ನು ಮಾಡಿದ್ದರೋ ಆತನೇ). ನಜರೇತ್ನಲ ಯೇಸುವೇ ಕ್ರಿಸ್ತ ಎಂದು ಯೆಹೂದಿಗಳು ಒಪ್ಪಲಿಲ್ಲ. ಆದರೆ ಏಸುವಿನ ಅನುಯಾಯಿಗಳು ಮಾತ್ರ ಅವನು ಖಂಡಿತವಾಗಿಯೂ ಕ್ರಿಸ್ತನೇ ಎಂದು ಸಾಧಿಸುತ್ತಿದ್ದರು. ಈ ಅರ್ಥದಲ್ಲಿ, ಕ್ರೈಸ್ತರು ಮತ್ತು ಯೆಹೂದಿಗಳ ನಡುವೆ ಮೂಡಿದ ಒಂದು ಮೂಲ ಭಿನ್ನಾಭಿಪ್ರಾಯವು ನಜರೇತ್ನರ ಯೇಸುವಿನ ಸ್ಥಾನಮಾನದ ಕುರಿತಾಗಿದೆ. ಅವನು ಕ್ರಿಸ್ತನೋ ಅಲ್ಲವೋ? ಕ್ರೈಸ್ತರು ಹೇಳುವಂತೆ ಕ್ರಿಸ್ತನು ಈಗಾಗಲೇ (ಭೂಮಿಗೆ) ಬಂದಿದ್ದಾನೋ, ಅಥವಾ ಯೆಹೂದಿಗಳು ಪುನರುಚ್ಚರಿಸುವಂತೆ ಅವನು ಬರುವವರೆಗೆ ಕಾಯಬೇಕೋ?
ಎರಡನೆಯ ಅಂಶವೆಂದರೆ, ಗಾಡ್ನನ್ನು ವರ್ಶಿಪ್ ಮಾಡುವ ಮಾರ್ಗದಿಂದ ಜನರನ್ನು ದಿಕ್ಕುತಪ್ಪಿಸಿ ದುರ್ಮಾರ್ಗಕ್ಕೆ ಎಳೆಯುವ ಕಾರ್ಯವನ್ನು ಅವಿರತವಾಗಿ ಮಾಡಲು ಸೈತಾನ್ ಅಥವಾ ಡೆವಿಲ್ ಎಂಬುವವನು ಪ್ರಯತ್ನಿಸುತ್ತಿರುತ್ತಾನೆ. ಕ್ರೈಸ್ತರು ಬಳಸುವ ‘ಜನರು’ ಅಥವಾ people ಎಂಬ ಪದ ಸಮಸ್ತ ಮಾನವ ಜನಾಂಗವನ್ನು ಸೂಚಿಸುತ್ತದೆ. ಈ ಡೆವಿಲ್‍ಗೆ ಬಹಳಷ್ಟು ಹೆಸರುಗಳಿವೆ, ಅವನ ಹಿಂಬಾಲಕರು ಕೂಡ ಅಪಾರ. ಈತ ತಾನೇ ನಿಜವಾದ ಗಾಡ್ ಎಂದು ನಂಬುವಂತೆ ಅಮಾಯಕ ಜನರನ್ನು ಸದಾ ತರತರದ ಆಮಿಷಗಳನ್ನೊಡ್ಡಿ ಪ್ರಚೋದಿಸುತ್ತಿರುತ್ತಾನೆ. ಆದರೆ ಈತ ನಿಜವಾದ ಗಾಡ್ ಅಲ್ಲ. ಈತನು ‘ಸುಳ್ಳು ಗಾಡ್’. ತನ್ನ ಈ ಕಾರ್ಯದಲ್ಲಿ ಈತನಿಗೆ ಬಹಳಷ್ಟು ಸಹಾಯ ಮಾಡುವ ಜನರ ವರ್ಗವೊಂದಿದೆ: ಅವರೇ ‘ಪ್ರೀಸ್ಟುಗಳು’. ಈ ಪ್ರೀಸ್ಟುಗಳು ಎಲ್ಲಾ ಬಗೆಯ ಅಸಂಬದ್ಧ ಆಚರಣೆಗಳನ್ನು ಸೃಷ್ಟಿಸಿದರು, ಅಮಾಯಕರನ್ನು ದಾರಿತಪ್ಪಿಸಿದರು, ಗಾಡ್ ನ ಸತ್ಯಸಂದೇಶವನ್ನು ಮುಚ್ಚಿಟ್ಟರು, ಇತ್ಯಾದಿ, ಇತ್ಯಾದಿ. ಒಟ್ಟಿನಲ್ಲಿ ಸಾಮಾನ್ಯ ಜನರು ತನ್ನನು ಮತ್ತು ತನ್ನ ಪಡೆಯನ್ನು ವರ್ಶಿಪ್ ಮಾಡುವಂತೆ ಡೆವಿಲ್ ಜನರನ್ನು ಹುರಿದುಂಬಿಸಿದನು. ಈ ಡೆವಿಲ್ ಮತ್ತು ಈತನ ಪಡೆಯೇ ‘ಸುಳ್ಳು ದೇವರುಗಳು’. ಹೀಗೆ ನಾವಿಂದು ಒಂದು ನಿಜವಾದ ಗಾಡ್ (ಅಬ್ರಹಾಂ, ಐಸಾಕ್ ಮತ್ತು ಜಾಕೋಬರ ಗಾಡ್) ಮತ್ತು ಅಸಂಖ್ಯಾತ ಸುಳ್ಳು ದೇವರುಗಳನ್ನು ಹೊಂದಿದ್ದೇವೆ. ರಿಲಿಜನ್ ಎಂದರೆ ಗಾಡ್ ವರ್ಶಿಪ್ ಆಗಿರುವುದರಿಂದ ನಮ್ಮಲ್ಲಿಂದು, ಈ ಅರ್ಥದಲ್ಲಿ, ಎರಡು ಬಗೆಯ ರಿಲಿಜನ್ನುಗಳು ಅಸ್ತಿತ್ವದಲ್ಲಿವೆ: ನಿಜವಾದ ಗಾಡ್ ನನ್ನು ವರ್ಶಿಪ್ ಮಾಡುವ ‘ಸತ್ಯವಾದ ರಿಲಿಜನ್’ ಮತ್ತು ಸುಳ್ಳುಗಾಡ್ ಗಳನ್ನು ವರ್ಶಿಪ್ ಮಾಡುವ ‘ಸುಳ್ಳು ರಿಲಿಜನ್’.
ಬ್ರಿಟಿಷ್ ಕ್ರೈಸ್ತರಿಗೆ (ಮತ್ತು ಅವರ ಹಿಂದಿನ ಇಸ್ಲಾಂ ಆಡಳಿತಗಾರರಿಗೆ), ಹಿಂದೂಗಳ ‘ರಿಲಿಜನ್’ ಕೇವಲ ಸುಳ್ಳು ರಿಲಿಜನ್ ಮಾತ್ರ ಆಗಿರಲು ಸಾಧ್ಯ. ನಮ್ಮ ದೇವಾನುದೇವತೆಗಳು ಸುಳ್ಳು ದೇವರುಗಳು ಮತ್ತು ಇವರು ಡೆವಿಲ್ನಾ ಬೇರೆ ಬೇರೆ ರೂಪಗಳು ಅಥವಾ ಆತನಿಂದ ನಿಯೋಜಿತರಾದವರು. ಪ್ರೊಟೆಸ್ಟಾಂಟರು ಮತ್ತು ಬಹುತೇಕ ಕ್ಯಾಥೋಲಿಕ್ ಮಿಷನರಿಗಳು ಇಂಥ ಸುಳ್ಳು ರಿಲಿಜನನ್ನೂ ಸೈತಾನನ ಕೈಚಳಕ ಮತ್ತು ಆತನ ‘ಪ್ರೀಸ್ಟ್’ಗಳ – ಅಂದರೆ ಬ್ರಾಹ್ಮಣ ಪುರೋಹಿತರ – ಪಿತೂರಿಯೆಂದಲ್ಲದೇ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲು ಅಸಮರ್ಥರು. ಇವರ ಪ್ರಕಾರ ಈ ಸುಳ್ಳು ರಿಲಿಜನ್ ಅಮಾಯಕರನ್ನು ಸೈತಾನನ ಕೈಹಿಡಿತಕ್ಕೆ ಒಪ್ಪಿಸಿ, ಅವರನ್ನು ನೇರವಾಗಿ ಹೆಲ್ ಗೆ ಕಳುಹಿಸುವ ಕಾರ್ಯ ಮಾಡಿದ್ದು ಮಾತ್ರವಲ್ಲ, ಇದು ಮೂಲತಃ ಒಂದು ಅನೈತಿಕ ಸಂಗತಿಯೂ ಆಗಿತ್ತು. ಪರಿಣಾಮವಾಗಿ ಅವರು ಭಾರತದಲ್ಲಿ ತಾವು ನೋಡಿದೆವು ಎಂದುಕೊಂಡ ಪ್ರತಿ ಸಂಗತಿಯನ್ನೂ — ಅದು ಸತಿ ಪದ್ಧತಿ ಅಥವಾ ಬಾಲ್ಯವಿವಾಹವಿರಬಹುದು, ಅಥವಾ ಪೂಜೆ ಪುರಸ್ಕಾರಗಳಿರಬಹುದು –- ‘ಹಿಂದೂಯಿಸಂ’ ಎಂಬ ಸುಳ್ಳು ರಿಲಿಜನ್ನಿನ ಅನೈತಿಕತೆಗೆ ಮತ್ತು ಅದರ ಪ್ರೀಸ್ಟಗಳ ಹೇಯಕೃತ್ಯಕ್ಕೆ ಆರೋಪಿಸುತ್ತಿದ್ದರು. ಇಂಥ ಸುಳ್ಳು ರಿಲಿಜನ್ ಇರಲು ಸಾಧ್ಯವಾದದ್ದು, ಬಹುಸಂಖ್ಯಾತ ಜನರನ್ನು ವಂಚಿಸಿ ಅಡ್ಡದಾರಿಗೆಳೆಯಬಲ್ಲ ಠಕ್ಕಿನ ಪ್ರೀಸ್ಟಗಳು ಇದ್ದುದರಿಂದ ಮಾತ್ರ ಸಾಧ್ಯ ಎಂಬುದು ಅವರ ನಂಬಿಕೆಯಾಗಿತ್ತು. ಬ್ರಾಹ್ಮಣರಲ್ಲಿ ಅವರು ಇಂಥ ಹಿಂದೂಯಿಸಂನ ‘ಪ್ರೀಸ್ಟ’ಗಳನ್ನು ಕಂಡುಕೊಂಡರು. ಈ ಪ್ರೀಸ್ಟುಗಳು ಇಂಥ ಅಧಿಕಾರವನ್ನು ಪಡೆದುಕೊಂಡು ಉಳಿಸಿಕೊಂಡು ಬಂದದ್ದಾದರೂ ಹೇಗೆ? ಎಂಬ ಪ್ರಶ್ನೆ ಅವರಲ್ಲಿ ಮೂಡಿತು. ಇದಕ್ಕೆ ಅವರು ಕಂಡುಕೊಂಡ ಉತ್ತರವೇ ‘ಕಾಸ್ಟ್ ಸಿಸ್ಟಂ’, ಜಾತಿ ಎಂಬ ಅನೈತಿಕ ಸಾಮಾಜಿಕ ವ್ಯವಸ್ಥೆ. ಹಾಗೂ ಹೀಗೂ ಹೇಗೋ ಒಂದು ರೀತಿಯಲ್ಲಿ ಈ ಬ್ರಾಹ್ಮಣ ಪ್ರೀಸ್ಟ’ಗಳು ‘ಕಾಸ್ಟ್ ಸಿಸ್ಟಂ’ನ್ನು ಕಂಡುಹಿಡಿದರು. ಹೇಗೋ ಈ ಅನೈತಿಕ ಸಾಮಾಜಿಕ ವ್ಯವಸ್ಥೆಯನ್ನು ಸಮಸ್ತ ಸಮಾಜದ ಮೇಲೆ ಒತ್ತಾಯ ಪೂರ್ವಕವಾಗಿ ಹೇರಿದರು. ಹಾಗಾಗಿ ಈ ‘ಕಾಸ್ಟ್ ಸಿಸ್ಟಂ’ ಎನ್ನುವುದು ಅವರ (ಸಮಾಜ-ವಿಜ್ಞಾನಗಳ) ಚಿಂತನೆಯಲ್ಲಿ, ‘ಹಿಂದೂಯಿಸಂ’ ಎಂಬ ಸುಳ್ಳು ರಿಲಿಜಿನ್ನಿನ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ.
ಅವರ ಈ ಎಲ್ಲ ‘ಶೋಧನೆಗಳ’ ಚೌಕಟ್ಟು ಮತ್ತು ತಳಹದಿಯು ಯಾವುದೇ ರೀತಿಯ ವಸ್ತುಸ್ಥಿತಿಯನ್ನಾಧರಿಸಿದ ತನಿಖೆಯಾಗಿರದೇ, ಅವರ ಥಿಯಾಲಜಿಯ ನಂಬಿಕೆಗಳಿಂದ ಹುಟ್ಟಿವೆ ಎಂಬುದನ್ನು ನೀವು ಮರೆಯಬಾರದು. ಅವರು ‘ಶೋಧನೆ ಮಾಡಿದ’ ಎಲ್ಲವನ್ನೂ ಈ ಒಂದು ಚೌಕಟ್ಟಿನಲ್ಲಿಯೇ ಜೋಡಿಸಲಾಗಿದೆ. ಉಪನಿಷತ್ತುಗಳು ಮತ್ತು ಬೌದ್ಧ ಹಾಗು ಜೈನ ಸಂಪ್ರದಾಯಗಳ ಶೋಧನೆಯು ಈ ಚೌಕಟ್ಟಿಗೆ ಹೆಚ್ಚಿನ ಬಲವನ್ನು ಒದಗಿಸಿತು. ಹಾಗಾಗಿಯೇ ಅವರು ‘ಭಾರತದ ರಿಲಿಜನ್’ನ ಅವನತಿ ಮತ್ತು ಅಧಃಪತನದಲ್ಲಿ ಮೂರು ಪ್ರಮುಖ ಹಂತಗಳನ್ನು ಗುರುತಿಸುತ್ತಾರೆ: ವೈದಿಕ ರಿಲಿಜನ್, ಬ್ರಾಹ್ಮನಿಸಂ ಮತ್ತು ಹಿಂದೂಯಿಸಂ. ವೈದಿಕ ರಿಲಿಜನ್ ಗಾಡ್ನಾ ಮೂಲ ಸಂದೇಶವನ್ನು ಸ್ವಲ್ಪಮಟ್ಟಿಗೆ ಉಳಿಸಿಕೊಂಡಿತ್ತು. ಬ್ರಾಹ್ಮಣ ಪ್ರೀಸ್ಟುಗಳಿಂದಾಗಿ ಅದು ಅವನತಿಗೊಂಡು ಬ್ರಾಹ್ಮನಿಸಂ ಆಯಿತು. ಈ ಬ್ರಾಹ್ಮನಿಸಂ ಮಾತ್ತೂ ಭ್ರಷ್ಟವಾಗಿ ‘ಹಿಂದೂಯಿಸಂ’ ಆಯಿತು. ಬುದ್ಧನು ಇಂಥ ‘ಬ್ರಾಹ್ಮಣ ಪ್ರೀಸ್ಟುಗಳ’ ವಿರುದ್ಧ ಹೋರಾಟ ನಡೆಸಿದನು ಎಂಬ ಕಥೆಯಿಂದಾಗಿ, ಪ್ರೊಟೆಸ್ಟಾಂಟರ ದೃಷ್ಟಿಕೋನದಲ್ಲಿ ಬ್ರಾಹ್ಮನಿಸಂಗಿಂತಲೂ ಬುದ್ಧಿಸಂ ಕಡಿಮೆ ಪ್ರಮಾಣದಲ್ಲಿ ಭ್ರಷ್ಟವಾದ ರಿಲಿಜನ್ ಆಗಿದೆ. ದುರದೃಷ್ಟವಶಾತ್, ಬಹುಪಾಲು ಭಾರತೀಯರು ಅನುಸರಿಸುತ್ತಿರುವುದು ಈ ಅತ್ಯಧಿಕವಾಗಿ ಭ್ರಷ್ಟವಾದ ‘ಸುಳ್ಳು ರಿಲಿಜನ್’ ‘ಹಿಂದೂಯಿಸಂ’ನ್ನೆ.
ಆದುದರಿಂದ, ಭಾರತೀಯ ಸಮಾಜದ ಮತ್ತು ಸಂಸ್ಕೃತಿಯ ಎಲ್ಲಾ ಖಾಯಿಲೆಗಳನ್ನು ‘ಹಿಂದೂಯಿಸಂ’ನಿಂದಲೇ ಹುಟ್ಟಿದ್ದು ಎಂದು ನೋಡಲಾಗುತ್ತದೆ. ಈ ಖಾಯಿಲೆಗಳೆಲ್ಲ ಹಿಂದೂಯಿಸಂ’ನ ರಿಲಿಜನ್ನಿಗೆ ಸ್ವಭಾವಜನ್ಯ ಮತ್ತು ಅದರ ಅವಿಭಾಜ್ಯ ಅಂಗವೆಂದು ಬ್ರಿಟಿಷರು ವಾದಿಸಿದರು. ಒಂದು ಸುಳ್ಳನ್ನು ಪದೇಪದೇ ಹೇಳಿದಾಗ ಅದು ಸತ್ಯದಂತೆಯೇ ಗೋಚರಿಸತೊಡಗುತ್ತದೆ. ಬುದ್ದಿಗೇಡಿ ವಿಚಾರಗಳನ್ನು ವ್ಯಾಪಕವಾಗಿ ಪ್ರಚಾರಪಡಿಸಿದಾಗ, ಅದು ಸುಸಂಬದ್ಧವಾಗಿರುವಂತೆ ಕಾಣತೊಡಗುತ್ತದೆ. ಇದು ಭಾರತದ ‘ರಿಲಿಜನ್ಗಳ’ ಬಗ್ಗೆ, ವಿಶೇಷವಾಗಿ ‘ಹಿಂದೂಯಿಸಂ’ ಬಗ್ಗೆ ನಡೆದಿರುವ ಸಂಗತಿ.
ಮುಂದುವರೆಯುವುದು….
ಉತ್ತಮ ಬರಹ.
“ಆದುದರಿಂದ, ಭಾರತೀಯ ಸಮಾಜದ ಮತ್ತು ಸಂಸ್ಕೃತಿಯ ಎಲ್ಲಾ ಖಾಯಿಲೆಗಳನ್ನು ‘ಹಿಂದೂಯಿಸಂ’ನಿಂದಲೇ ಹುಟ್ಟಿದ್ದು ಎಂದು ನೋಡಲಾಗುತ್ತದೆ.”
ಅಂದರೆ ಭಾರತೀಯ ಸಮಾಜದಲ್ಲಿ ಹಾಗೂ ಸಂಸ್ಕೃತಿಯಲ್ಲಿ ಬ್ರಿಟಿಶ್ ಪೂರ್ವದಲ್ಲಿ ಖಾಯಿಲೆಗಳಿದ್ವು ಅಂತ ಒಪ್ಪಿಕೊಳ್ಳುತ್ತೀರೆಂದಾಯಿತು. ಸರಿ ಹಾಗಿದ್ದರೆ ಈ ಎಲ್ಲಾ ಖಾಯಿಲೆಗಳು ’ಹಿಂದೂಯಿಸ್ಮ್’ ನಿಂದ ಹುಟ್ಟಿದ್ದಲ್ಲ, ಹಿಂದೂಯಿಸ್ಮ್ ರಿಲಿಜಿಯನ್ ಅಲ್ಲ ಅಂತ ವ್ಯಾಖ್ಯಾನಿಸಿದಾಗ ಗುಣಮುಖನಾಗುತ್ತವೆಯೆ?
’ಪಾಶ್ಚಾತ್ಯ ಸಂಸ್ಕೃತಿಯನ್ನು ಏಕೆ ಅರ್ಥ ಮಾಡಿಕೊಳ್ಳಬೇಕು?’ ಎನ್ನುವ ಪ್ರಶ್ನೆಯ ನಂತರ ನನಗೆ ಸಿಕ್ಕ ಪ್ರಶ್ನೆ ’ವಸಾಹತುಶಾಹಿ ಪ್ರಜ್ನೆಯ ತಿಳುವಳಿಕೆ ಪ್ರಸ್ತುತ ಸಾಮಾಜಿಕ ಸಮಸ್ಯೆಯನ್ನು ದೂರಮಾಡುತ್ತದೆಯೆ?’ ಎನ್ನುವದು.
ಬಾಲಗಂಗಾಧರರ ಹಾಗೂ ಪಟಾಲಮ್ಮುಗಳ ಸಂಶೋಧನೆ ಎಲ್ಲಿ ಫುಲ್ ಸ್ಟಾಪ್ ಆಗುತ್ತದೆಯೆಂದರೆ ಯಾವುದೆ ಸಮಸ್ಯೆಯಲ್ಲಿ ವಸಾಹತು ಪ್ರಜ್ನೆ ಹೇಗೆ ಇದೆ ಎಂದು ವಿವರಿಸುವದರ ಮೂಲಕ. ಹಾಗಾದರೆ ಸಮಸ್ಯೆಯ ನಿವಾರಣೆ ಏನು? ವಸಾಹತು ಪ್ರಜ್ನೆಯಿಂದ ಹೊರಬರಬೇಕೆ? ಹಾಗಿದ್ದರೆ ವಸಾಹತುಪ್ರಜ್ನೆಯ ಆಡಳಿತ ಪ್ರಕಾರವಾದ ಪ್ರಜಾಪ್ರಭುತ್ವವನ್ನು ಕಿತ್ತೊಗೆದು ದೇಶೀಯ ಸಂಸ್ಕೃತಿಯ ಆಡಳಿತ ಪ್ರಕಾರವನ್ನು ಜಾರಿಗೆ ತರಬೇಕೆ? ಆ ಆಡಳಿತ ಪ್ರಕಾರ ಯಾವುದು? ಅದರ ರೂಪು ರೇಷೆ ಏನು? ಇದರ ಬಗ್ಗೆ ಸಂಶೋಧನೆ ನಡೆದಿದೆಯೆ, ನಡೆಯುತ್ತದೆಯೆ?
ಈ ಪ್ರಶ್ನೆಗಳಿಗೆ ಯಾವ ಶಿಷ್ಯಕೋಟಿಗಳಿಂದಲೂ ಉತ್ತರವಿಲ್ಲ.
ಬಾಟನಿ ಸರ್ ಅವರ ಗಟ್ಟಿ ಬ್ಯಾಟಿಂಗ್ ನಿಂದ ಬಾಲಂಗೋಚಿಗಳು ಕಂಗಾಲಾಗಿದ್ದಾರೆ! ಭೇಷ್!
😀
ಯಾರಿದು ಬಟಾಣಿ ಸಾರು?
Nimma taatha