ವಿಷಯದ ವಿವರಗಳಿಗೆ ದಾಟಿರಿ

ಜೂನ್ 15, 2017

2

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೩ )

‍ನಿಲುಮೆ ಮೂಲಕ

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಭಾಗ – ೧

ಭಾಗ – ೨

ಒಂದು ಹೋಲಿಕೆ

ವಸಾಹತುಶಾಹಿ ಕಾಲದ ಭಾರತೀಯ ಬುದ್ಧಿಜೀವಿಗಳು ಈ ಕಥೆಯನ್ನು ಸಾರಾಸಗಟಾಗಿ ನಂಬಿದ್ದರು. (ಏಕೆ ಎಂಬುದು ಒಂದು ಮುಖ್ಯ ಪ್ರಶ್ನೆಯಾದರೂ, ಈ ಲೇಖನದಲ್ಲಿ ನಾನದನ್ನು ಚರ್ಚೆಗೆತ್ತಿಕೊಳ್ಳುವುದಿಲ್ಲ). ಇದು ಎರಡು ಪರಸ್ಪರ ವಿರುದ್ಧವಾದ ಪ್ರತಿಕ್ರಿಯೆಗಳಿಗೆ ದಾರಿಮಾಡಿತು: ಒಂದೆಡೆ ಕೆಲವು ಜನರು ಹಿಂದುಗಳ ರಿಲಿಜನ್ನಿನ ಪುನರುತ್ಥಾನಕ್ಕಾಗಿ ಪರಿಶ್ರಮಿಸಿದರು. ವೇದ ಉಪನಿಷತ್ತುಗಳಲ್ಲಿರುವ ಶುದ್ಧವಾದ ರಿಲಿಜನ್ನಿಗೆ ಹಿಂದಿರುಗಬೇಕು ಎಂದು ಅವರು ವಾದಿಸಿದರು. ಇನ್ನೊಂದೆಡೆಯಲ್ಲಿ ಹಿಂದೂಯಿಸಂ ಈಗ ಹೇಗಿದೆಯೋ ಅದೇ ಸರಿ ಎಂದು ಗಂಟಾಘೋಷವಾಗಿ ಸಮರ್ಥಿಸುವವರೂ ಇದ್ದರು. ಈ ಎರಡು ತುದಿಗಳ ನಡುವೆ ಹಲವು ವಿವಿಧ ನಿಲುವುಗಳೂ ನಿಧಾನವಾಗಿ ಹರಳುಗಟ್ಟಿದ್ದವು.

ಸುಧಾರಣಾವಾದಿಗಳು ಹಿಂದೂಯಿಸಂನ ಶುದ್ಧವಾದ ರೂಪವನ್ನು ಕಟ್ಟುವ ಪ್ರಯತ್ನದಲ್ಲಿದ್ದರು. ಅವರು ದೇವಸ್ಥಾನದಲ್ಲಿನ ಮತ್ತು ಮನೆಗಳಲ್ಲಿನ ಪೂಜೆಗಳು ಐಡೋಲೇಟ್ರಿ (‘ವಿಗ್ರಹಾರಾಧನೆ’) ಎಂದೂ, ಆದ್ದರಿಂದ ಅವುಗಳನ್ನು ನಿಲ್ಲಿಸಬೇಕು ಎಂದರು. ಅವರು ಕಂಡುಕೊಂಡಂತೆ ಜನರು ಆಚರಿಸುತ್ತಿರುವ ಇಂಥ ಆಚರಣೆಗಳ ಬಗ್ಗೆ ಉಪನಿಷತ್ತುಗಳಲ್ಲಿ ಉಲ್ಲೇಖಗಳಿಲ್ಲದ್ದರಿಂದ, ಬ್ರಾಹ್ಮಣ ಪುರೋಹಿತರೇ ಭಾರತೀಯರ ಶುದ್ಧ ರಿಲಿಜನ್ನನ್ನು ಅಶುದ್ಧಗೊಳಿಸಿದ್ದಾರೆ ಎಂಬುದಾಗಿ ಪ್ರತಿಪಾದಿಸಿದರು. ಬ್ರಿಟಿಷರು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡ ಈ ಬುದ್ಧಿಜೀವಿಗಳು, ತಮಗೆ ತಿಳಿದಂಥ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಮಾದರಿಯಲ್ಲಿ ಹಿಂದೂಯಿಸಂನ ಶುದ್ಧವಾದ ರೂಪವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿದರು. ಈಗಾಗಲೇ ಹಲವಾರು ಭಾರತಿಯರು ನಿರ್ಗುಣ ಬ್ರಹ್ಮನ ಕುರಿತು ತಿಳಿಸಿರುವುದನ್ನು ಕಂಡುಕೊಂಡು, ಭಾರತೀಯರೂ ಸಹ ಮೊನೊಥೇಯಿಸಂನ ಕುರಿತು (ಇದನ್ನು ಏಕದೇವತಾರಾಧನೆ ಎಂಬುದಾಗಿ ತಪ್ಪಾಗಿ ಭಾಷಾಂತರಿಸಲಾಗುತ್ತಿದೆ) ಮಾತನಾಡಿದ್ದಾರೆ ಎಂದುಕೊಂಡರು. ಇವರಿಗೂ ಮತ್ತು  ಪ್ರೊಟೆಸ್ಟಾಂಟ್ ಚಿಂತಕರಿಗೂ ಇದ್ದ ಒಂದೇ ಒಂದು ವ್ಯತ್ಯಾಸ ಈ ಮುಂದಿನ ಪ್ರಶ್ನೆಯ ಕುರಿತು ಮಾತ್ರ: ಭಾರತೀಯರ ರಿಲಿಜನ್ ಅನ್ನು ಸುಧಾರಣೆಮಾಡಿ ಕ್ರಿಶ್ಚಿಯಾನಿಟಿಯ ಒಂದಿಲ್ಲೊಂದು ರೂಪಗಳ ಮಟ್ಟಕ್ಕೆ ತರಲು ಸಾಧ್ಯವೇ ಅಥವಾ ಇಲ್ಲವೇ? ಪ್ರೊಟೆಸ್ಟಾಂಟ್ ಚಿಂತಕರಿಗೆ ಅಸಹ್ಯವೆನಿಸದಂಥ, ಒಂದು ಗೌರವಾನ್ವಿತ ಹಿಂದೂಯಿಸಂನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಬ್ರಹ್ಮ ಸಮಾಜ, ಆರ್ಯ ಸಮಾಜ, ಪ್ರಾರ್ಥನಾ ಸಮಾಜ ಮುಂತಾದವು ತೊಡಗಿಕೊಂಡವು. ಇಂಥ ಎಲ್ಲಾ ಗೌರವಾನ್ವಿತ ರಿಲಿಜನ್ನುಗಳಿಗೆ ಇದ್ದಂತೆ ಇವರು ತಮ್ಮ ಹಿಂದುಯಿಸಂಗೂ ಒಂದಷ್ಟು scripturesಗಳನ್ನು (ಪವಿತ್ರ ಗ್ರಂಥಗಳನ್ನು) ಗುರುತಿಸಿಕೊಂಡರು, ಮತ್ತು ಅವುಗಳ doctrines/ನಂಬಿಕೆಗಳನ್ನು ಕ್ರೋಡಿಕರಿಸಿಕೊಂಡರು. ಈ ನಂಬಿಕೆಗಳ ನಡುವೆ ಒಬ್ಬ ದೇವನನ್ನು ಕೂರಿಸಿದರು, ಅವರದೇ ಆದ ನೈತಿಕ ಆಜ್ಞೆಗಳನ್ನು (commandments) ಹೊಂದಿಸಿಕೊಂಡರು. ತಮ್ಮ ಪ್ರೊಟೆಸ್ಟಾಂಟ್ ಬಂಧುಗಳಂತೆ ಇವರೂ ಹಿಂದೂಯಿಸಂನ್ನು ಸುಧಾರಿಸಿ, ಅದರಲ್ಲಿನ  ಜಾತಿವ್ಯವಸ್ಥೆ ಮುಂತಾದ ಎಲ್ಲಾ ಅನಿಷ್ಟಗಳನ್ನು ನಿರ್ಮೂಲನೆಗೊಳಿಸಲು ಪ್ರಯತ್ನಿಸಿದರು. ಅವರಂತೆಯೇ, ಉಪನಿಷತ್ತಿನ ಸೂಕ್ಷ್ಮ ತತ್ವಗಳ ಗಂಧಗಾಳಿಯೇ ಇಲ್ಲದ, ಮೂಢನಂಬಿಕೆಗಳಲ್ಲಿ ಮುಳುಗಿ ಹೋಗಿರುವ ಮೂರ್ಖ ಭಾರತೀಯರನ್ನು ಕಂಡು ಹೇಸಿಗೆ ಪಟ್ಟುಕೊಂಡರು.

ಹೀಗೆ ಈ ಸುಧಾರಣಾವಾದಿಗಳೂ ಭಾರತೀಯ ಸಂಸ್ಕೃತಿ ಮತ್ತು ಆದರ ವೈವಿಧ್ಯಪೂರ್ಣ ಆಚರಣೆಗಳ ಬಗ್ಗೆ ಅಸಹಿಷ್ಣುತೆಯನ್ನು ಹೊಂದಿದ್ದರೂ, ಭಾರತೀಯರು ಇವರನ್ನು ತಮ್ಮ ದೇಶದಲ್ಲಿರುವ ವಿವಿಧ ಸಂಪ್ರದಾಯಗಳಲ್ಲಿ ಇವರದ್ದೂ ಒಂದು ಎಂಬಂತೆ ಕಂಡು ಸಹಿಸಿ ಕೊಂಡರು. ಉದಾಹರಣೆಗೆ, ವೈಷ್ಣವರು ಎಷ್ಟು ‘ಭಾರತೀಯರೋ’ ಅಥವಾ ‘ಹಿಂದು’ಗಳೋ, ಆರ್ಯ ಸಮಾಜದವರೂ ಅಷ್ಟೇ ‘ಭಾರತೀಯರು’ ಅಥವಾ ‘ಹಿಂದು’ಗಳು, ಎಂಬುದು ಭಾರತೀಯರ ಧೋರಣೆಯಾಗಿತ್ತು. ಅವರ ನಡುವಿನ ಭಿನ್ನತೆಗಳು ಹಲವಾರು ಸಹಸ್ರಮಾನಗಳಿಂದ ಭಾರತಕ್ಕೆ ಚಿರಪರಿಚಿತವಾದ ಆಧ್ಯಾತ್ಮದ ವಿವಿಧ ಮಾರ್ಗಗಳಲ್ಲಿನ ಭಿನ್ನತೆಗಳಂತೆ ಕಂಡವು. ಈ ಪ್ರಕಾರ, ಈ ಹಿಂದೆ ಸಂಪ್ರದಾಯಗಳು ಉಳಿದುಕೊಂಡು ಬಂದ ರೀತಿಯಲ್ಲೇ ಈ ಸುಧಾರಣಾವಾದಿಗಳೂ ಉಳಿದು ಬೆಳೆದರು.

ಬಹುತೇಕ ಭಾರತೀಯರಿಗೆ ತಮ್ಮ ಪವಿತ್ರ ಗ್ರಂಥಗಳ ಕುರಿತು ಏನೂ ಗೊತ್ತಿಲ್ಲವೆಂಬುದನ್ನು ಬ್ರಿಟಿಷರು ಗುರುತಿಸಿದಾಗ, ಅದಕ್ಕೆ ಪ್ರತಿಯಾಗಿ ಸುಧಾರಣಾವಾದಿಗಳು ತಮ್ಮ ಸಾಂಪ್ರದಾಯಗಳಲ್ಲಿದ್ದ ಅಪರಚಿತ ಗ್ರಂಥಗಳನ್ನೆಲ್ಲಾ ಹುಡುಕಿ ತೆಗೆದರು. ಭಾರತೀಯರ ಯಾವುದಾದರೂ ಆಚರಣೆಗಳನ್ನು ಬ್ರಿಟಿಷರು ಟೀಕಿಸತೊಡಗುತ್ತಲೇ, ಸುಧಾರಣಾವಾದಿಗಳು ಆ ಆಚರಣೆಗಳನ್ನು ಬದಲಾಯಿಸುವ ಅಥವಾ ನವೀಕರಿಸುವ ಪ್ರಯತ್ನ ಮಾಡಿದರು. ಬ್ರಿಟಿಷರು ಭಾರತೀಯರನ್ನು ಅನೈತಿಕರೆಂದು ಜರೆದಾಗಳೆಲ್ಲಾ, ಸುಧಾರಣಾವಾದಿಗಳು ತಮ್ಮ ಸಾಂಪ್ರದಾಯಿಕ ಗ್ರಂಥಗಳಲ್ಲಿರುವ ನೈತಿಕ ಅಂಶಗಳನ್ನು ಎತ್ತಿತೋರಿಸಿ ಹಿಂದುಯಿಸಂ ಕೂಡ ನೈತಿಕವಾಗಿ ಸದೃಢವಾಗಿದೆಯೆಂದು ವಾದಿಸಿದರು. ಇಂಥ ಮಾರ್ಗಗಳ ಮೂಲಕ, ಸುಧಾರಣಾವಾದಿಗಳು ಬ್ರಿಟಿಷರಿಂದ ಹಿಂದೂಯಿಸಂನ ಬಗ್ಗೆ ಬಂದ ತಿರಸ್ಕಾರ, ಟೀಕೆಗಳನ್ನು ಒಪ್ಪಿಕೊಂಡು, ಅವರಿಗೆ ಸರಿ ಕಾಣುವಂಥ ಹೊಸ ಮಾದರಿಯ ಹಿಂದುಯಿಸಂನ್ನು ರೂಪಿಸಲು ಹೆಣಗಿದರು. ಇವೆಲ್ಲದರ ನಡುವೆ ತಮಗೆ ಉಪಯೋಗವಾಗಬಹುದಾಗಿದ್ದ ಒಂದು ಕೆಲಸವನ್ನು ಮಾಡಲು ಮಾತ್ರ ಈ ಸುಧಾರಣಾವಾದಿಗಳು ಸೋತರು: ಅದೆಂದರೆ ಆಂಗ್ಲರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ರಿಲಿಜನ್ ಆಧಾರಿತ ಟೀಕೆಗಳ ಗುಣಲಕ್ಷಣವನ್ನು ಕಂಡುಕೊಳ್ಳುವುದು. ಬ್ರಿಟಿಷರು ತಮ್ಮ ಕಾಲದ ಹಿಂದೂಯಿಸಂ ಬಗ್ಗೆ ಮಾಡುತ್ತಿರುವ ಟೀಕೆಗಳು ಸಮರ್ಥನೀಯವೆಂದು ಭಾವಿಸಿಕೊಂಡು, ಈ ಭ್ರಷ್ಟಗೊಂಡ ಹಿಂದೂಯಿಸಂನ ಹಿಂದಿರುವ ಪವಿತ್ರ ರೂಪದ ಹಿಂದೂ ರಿಲಿಜನ್ನನ್ನು ಎತ್ತಿ ತೋರಿಸಲು ಪ್ರಯತ್ನಿಸಿದರು. ಇಲ್ಲಿಯೂ ಸಹ, ಅವರಿಗೆ ಸರಿಯಾಗಿ ಅರ್ಥವಾಗದಿದ್ದರೂ, ಯುರೋಪಿಯನ್ನರು ನೀಡಿದ ಭಾರತದ ಹಾಗೂ ಅದರ ರಿಲಿಜನ್ನಿನ ಅವನತಿಯ ಚಿತ್ರಣವನ್ನು ಒಪ್ಪಿಕೊಂಡು ಮುನ್ನಡೆದರು.

ಈ ಕಥೆ ಇಂದು ನಮಗೇಕೆ ತಿಳಿದಿರಬೇಕು? ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸ್ವರೂಪದ ಬಗ್ಗೆ ಪಶ್ಚಿಮವು ಶತಮಾನಗಳಿಂದ ಕೊಡುತ್ತಿರುವ ಈ ಚಿತ್ರಣವನ್ನೇ ಇಂದು, ಪ್ರಾಥಮಿಕ ತರಗತಿಗಳ ಪಠ್ಯಪುಸ್ತಕಗಳಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಸಾಮಾನ್ಯಜ್ಞಾನದ ವಿಚಾರವೆಂಬಂತೆ ಒಪ್ಪಿಕೊಳ್ಳಲಾಗಿದೆ. ಕ್ರಿಶ್ಚಿಯನ್ ಡಾಕ್ಟ್ರಿನ್ನಿನ ಸತ್ಯವನ್ನು ಪೂರ್ವಭಾವಿಸಿಕೊಳ್ಳದಿದ್ದರೆ, ಪಶ್ಚಿಮವು ನೀಡುವ ಈ ಚಿತ್ರಣವು ಭಾರತೀಯರಿಗೆ ಅರ್ಥವೇ ಆಗುವುದಿಲ್ಲ. ಆದರೆ ವಿಪರ್ಯಾಸವೆಂದರೆ, ಕ್ರಿಶ್ಚಿಯಾನಿಟಿಯ ಬಗ್ಗೆ ಏನೇನೂ ತಿಳಿಯದವರಿಗೂ, ಭಾರತೀಯ ರಿಲಿಜನ್ನುಗಳ ಕುರಿತ ಪ್ರತಿಪಾದನೆಗಳು ತಮಗೆ ಅರ್ಥವಾಗುವಂತೆ ಕಾಣುತ್ತದೆ. ಭಾರತಿಯ ಮತ್ತು ಪಾಶ್ಚಾತ್ಯ ಬುದ್ಧಿಜೀವಿಗಳು ಭಾರತದ ಸಂಸ್ಕೃತಿಯ ಬಗೆಗಿನ ಪಶ್ಚಿಮದ ವಿವರಣೆಗಳನ್ನು ವೈಜ್ಞಾನಿಕ ಎಂದು ನಂಬಿದ್ದಾರೆ. ಪಶ್ಚಿಮದಲ್ಲಿರುವ ಬಹುತೇಕ ಜನರು ಭಾರತದಲ್ಲಿ ಜಾತಿವ್ಯವಸ್ಥೆಯಿದೆ, ದಲಿತರೆಂದು ಕರೆಯಲ್ಪಡುವ ಭಾರತದ ಜನರನ್ನು ಬ್ರಾಹ್ಮಣರು ಸಾವಿರಾರು ವರ್ಷಗಳಿಂದ ಶೋಷಿಸುತ್ತಿದ್ದಾರೆ, ಬ್ರಾಹ್ಮಣ ಪುರೊಹಿತರ ವಿರುದ್ಧ ಬುದ್ಧಿಸಂ ಬಂಡಾಯವೆದ್ದಿತ್ತು, ಇತ್ಯಾದಿ ಕಥೆಗಳನ್ನು ನಂಬುತ್ತಾರೆ. ಭಾರತೀಯ ಬುದ್ಧಿಜೀವಿಗಳೂ ಇದನ್ನೇ ನಂಬುತ್ತಾರೆ. ಭಾರತೀಯರ ಮೀಸಲಾತಿಯ ಕಾಯಿದೆ ಮತ್ತು ಬುದ್ಧಿಸಂಗೆ ದಲಿತರ ‘ಮತಪರಿವರ್ತನೆ’, ಪಶ್ಚಿಮವು ಭಾರತದ ಕುರಿತು ಕಟ್ಟಿದ ಕಥೆಯ ಸತ್ಯದಲ್ಲಿ ಭಾರತೀಯರಿಗಿರುವ ನಂಬಿಕೆಯನ್ನು ತೋರಿಸುತ್ತವೆ.

ಇನ್ನೊಂದು ಪ್ರಮುಖ ಕಾರಣವು ಇದೆ. ಸುಧಾರಣಾವಾದಿಗಳು ಬ್ರಿಟಿಷ್ ಟೀಕೆಗಳಿಗೆ ಪ್ರತಿಕ್ರಿಯಿಸಿದ ರೀತಿಯಲ್ಲಿಯೇ ಇಂದು ಪಶ್ಚಿಮದಲ್ಲಿರುವ ಭಾರತೀಯರು ಅಲ್ಲಿನ ಜನರು ಕೇಳುವ ಪ್ರಶ್ನೆಗಳಿಗೆ ಮತ್ತು ಎತ್ತುವ ಸವಾಲುಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಇಂದಿನ ಪ್ರತಿಕ್ರಿಯೆಗಳು ಯಾವ ರೀತಿಯಲ್ಲಿ ಹಿಂದಿನ ಸುಧಾರಣಾವಾದಿಗಳ ಪ್ರತಿಕ್ರಿಯೆಗೆ ಹೋಲುತ್ತವೆ ಎಂಬುದನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

ಮುಂದುವರೆಯುತ್ತದೆ…

2 ಟಿಪ್ಪಣಿಗಳು Post a comment
  1. Aravind Rayachur
    ಜೂನ್ 20 2017

    ಲೆಖನದ ನಾಕನೆಯ ಭಾಗ ಎಲ್ಲಿ? ತುಂಬಾ ಇಷ್ಟವಾಯಿತು ಲೆಖನ.

    ಉತ್ತರ
  2. ಜೂನ್ 20 2017

    “ಭಾರತಿಯ ಮತ್ತು ಪಾಶ್ಚಾತ್ಯ ಬುದ್ಧಿಜೀವಿಗಳು ಭಾರತದ ಸಂಸ್ಕೃತಿಯ ಬಗೆಗಿನ ಪಶ್ಚಿಮದ ವಿವರಣೆಗಳನ್ನು ವೈಜ್ಞಾನಿಕ ಎಂದು ನಂಬಿದ್ದಾರೆ” ———–ನಂಬಿಸಲು ಪ್ರಯತ್ನವೂ ಮಾಡುತ್ತಿದ್ದಾರೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments