ವಿಷಯದ ವಿವರಗಳಿಗೆ ದಾಟಿರಿ

ಜೂನ್ 17, 2017

ಇಂಗ್ಲೆಂಡಿಗೊಬ್ಬನೇ ಟಾಮಿ ರಾಬಿನ್ಸನ್; ಆದರೆ ಇಲ್ಲಿ?

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

tommyಶತಮಾನಗಳ ಕಾಲ ಸೂರ್ಯ ಮುಳುಗದ ಸಾಮ್ರಾಜ್ಯ ಎಂಬ ಕಿರೀಟ ಧರಿಸಿದ್ದ ಬ್ರಿಟಿಷರಿಗೆ ಇಷ್ಟು ಶೀಘ್ರದಲ್ಲಿ ನಿದ್ರೆಗೆಡುವ ಕಾಲ ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಮೊದಲೆಲ್ಲಾ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳು ಅವರೊಳಗಿನ ಸಂಗತಿ ಎಂದುಕೊಳ್ಳುತ್ತಿದ್ದ ಬ್ರಿಟಿಷರು ತಿಂಗಳೊಳಗಾಗಿ ಮೂರು ದಾಳಿಗಳನ್ನು ಅನುಭವಿಸಿದ್ದಾರೆ. ಹಾಗಾಗಿ ಇದ್ದಕ್ಕಿದ್ದಂತೆ ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆ ಎಂಬ ಹುಯಿಲು ಮತ್ತೆ ಮುನ್ನಲೆಗೆ ಬಂದಿದೆ.

ಬ್ರಿಟಿಷರೇನೋ ದಾಳಿಗಳಿಂದ ಬಹುಬೇಗ ಹೊರಬರಬಹುದು, ದಾಳಿಕೋರರನ್ನು ಎಂಟೇ ನಿಮಿಷದಲ್ಲಿ ಪರಲೋಕಕ್ಕೆ ಕಳುಹಿಸಬಹುದು. ಲಂಡನ್ ಸೇತುವೆ, ವೆಸ್ಟ್ ಮಿನಿಸ್ಟರ್, ಮಾಂಚೆಸ್ಟರ್ ದಾಳಿಗಳು ಭದ್ರತೆ, ಭವಿಷ್ಯದ ಬಗ್ಗೆ ಚರ್ಚೆ ಹುಟ್ಟಿಸಬಹುದು. ಆದರೆ ಬ್ರಿಟಿಷ್ ನೆಲದಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳ ಹಿಂದೆ ಕಾಣದ ಹಲವಾರು ಸಂಗತಿಗಳಿವೆ. ಆ ಎಲ್ಲಾ ಕಾರಣಗಳು ಭಾರತೀಯರಿಗೆ ಅರ್ಥವಾಗದ ಸಂಗತಿಗಳೇನಲ್ಲ. ಏಕೆಂದರೆ ಒಂದಾದ ಮೇಲೊಂದರಂತೆ ದಾಳಿಗಳಾಗುತ್ತಿದ್ದರೂ ಇಂಗ್ಲೆಂಡ್‌ನಲ್ಲಿ ಬುದ್ಧಿಜೀವಿಗಳ ಸಂಖ್ಯೆ ಇಳಿಮುಖವಾಗಿಲ್ಲ. ಸರ್ಕಾರದ ತುಷ್ಟೀಕರಣ ನೀತಿಗಳು ಕಡಿಮೆಯಾಗಿಲ್ಲ. ಅಂದು ಲಂಡನಿಸ್ಥಾನವಾಗಲಿದೆ ಎಂದಾಗಲೂ ಆಳುವವರು ಎಚ್ಚೆತ್ತುಕೊಳ್ಳಲಿಲ್ಲ. ತಾಲಿಬಾನ್ ವಿರುದ್ಧ ಏರಿ ಹೋದರೂ ಯಾಕೋ ಇಂಗ್ಲಿಷರಿಗೆ ಭಯೋತ್ಪಾದನೆಯ ಬೇರೆಲ್ಲಿದೆ ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಅದರ ಪರಿಣಾಮ ಇಂಗ್ಲೆಂಡಿನಾದ್ಯಂತ ವಲಸಿಗರ ಸಂಖ್ಯೆ ಹಲವು ವರ್ಷಗಳಿಂದ ತೀವ್ರವಾಗಿ ಹೆಚ್ಚಿವೆ. ಮುಕ್ತ ಪ್ರಜಾಪ್ರಭುತ್ವ, ತಮ್ಮದು ಸ್ವಾತಂತ್ರ್ಯದ ತವರುಮನೆ ಎನ್ನುವ ಅಹಂ ಇಂಗ್ಲೆಂಡಿಗೇರಿದೆಯೋ ಎನ್ನುವಂತೆ ಭಯೋತ್ಪಾದಕ ರಾಷ್ಟ್ರಗಳ ವಲಸಿಗರು ಹಿಂಡುಹಿಂಡಾಗಿ ಇಂಗ್ಲೆಂಡಿಗೆ ಸಾಗುತ್ತಿದ್ದಾರೆ. ಅದರ ಪರಿಣಾಮ ತಿಂಗಳೊಂದು ಮೂರು ದಾಳಿ.
ಇಂಗ್ಲೆಂಡಿನಲ್ಲಿ ಮುಸಲ್ಮಾನ ವಲಸೆಯ ತೀವ್ರತೆಯೆಷ್ಟಿತ್ತೆಂದರೆ Al-Muhajiroun ಎಂಬ ಸಂಘಟನೆ ಇಂಗ್ಲೆಂಡಿನಲ್ಲಿ ಹುಟ್ಟಿಕೊಂಡಿತು. ಶರಿಯಾ ಅನುಷ್ಠಾನದ ಗುರಿಯಿಟ್ಟುಕೊಂಡು Islamic Council of Britain ೨೦೦೨ರಲ್ಲಿ ಆರಂಭವಾಯಿತು. ಅದೇ ವರ್ಷ Islam4UK ಅಸ್ತಿತ್ವಕ್ಕೆ ಬಂತು. ಹೆಚ್ಚು ಕಡಿಮೆ ಅದೇ ಹೊತ್ತಲ್ಲಿ Need4Khilafah, the Shariah Project and the Islamic Dawah Association ಆರಂಭವಾಯಿತು.
ತಮಾಷೆಯೆಂದರೆ ಇಂಗ್ಲೆಂಡ್ ಗಡಿ ದಾಟಿ ಯಾವುದನ್ನು ನಿರ್ನಾಮ ಮಾಡಬೇಕೆಂದುಕೊಂಡಿತ್ತೋ ಅದೇ ಹೊತ್ತಲ್ಲಿ ತನ್ನ ಕಾಲಬುಡದಲ್ಲಿ ಅದಕ್ಕಿಂತಲೂ ಅಪಾಯಕಾರಿಯಾದವರನ್ನು ಬೆಳೆಯಲು ಬಿಟ್ಟಿತ್ತು. ನೋಡನೋಡುತ್ತಲೇ ಅನಧಿಕೃತ ಮದರಸಗಳೆದ್ದವು. ಪೊಲೀಸರ ಮೇಲೆ ದಾಳಿಗಳಾದವು. ಬಹಿರಂಗವಾಗಿ ಬ್ರಿಟನ್ ಎಂದರೆ ವಲಸಿಗರ ದೇಶ ಎಂದು ಘೋಷಣೆ ಮಾಡಿದರು. ಇಷ್ಟೆಲ್ಲಾ ಆದರೂ ಇಂಗ್ಲಿಷ್ ಬುದ್ಧಿಜೀವಿಗಳು ಮತ್ತು ಆಳುವವರು ಸೆಕ್ಯುಲರಿಸ್ ಮಂತ್ರ ಪಠಿಸುತ್ತಲೇ ಇದ್ದರು. ಭಯೋತ್ಪಾದನೆಯ ವಿರುದ್ಧ ಹೋರಾಡಲು ಶಕ್ತಿಯೊಂದೇ ಸಾಕೆಂಬುದೇನೊ ನಿಜ. ಆದರೆ ಭಯೋತ್ಪಾದನೆಯ ಮೂಲವೆಲ್ಲಿ ಎಂಬ ಅರಿವು ಇಲ್ಲದಿದ್ದರೆ ಬೆನ್ನಲ್ಲಿ ಖಾಲಿ ಬತ್ತಳಿಕೆ ಇಟ್ಟುಕೊಂಡಂತೆ.
ಸದ್ಯದ ಇಂಗ್ಲೆಂಡ್ ಪರಿಸ್ಥಿತಿಯನ್ನು ನೋಡುತ್ತಿದ್ದರೆ ಟಾಮಿ ರಾಬಿನ್‌ಸನ್ ತನ್ನ ಆತ್ಮಕಥೆ The enemy of state ಪುಸ್ತಕದಲ್ಲಿ ಬರೆದುಕೊಂಡ ಸಾಲುಗಳು ನೆನಪಾಗುತ್ತವೆ. ಅಲ್ಲಿನ ಪರಿಸ್ಥಿತಿ ನಮಗಿಂತ ಬೇರೇನಲ್ಲ ಎಂದೂ ಅನಿಸುತ್ತದೆ.
“ನಾನು ಟಾಮಿ ರಾಬಿನ್‌ಸನ್. ಕರೆಯುವವರ ಭಾವಕ್ಕೆ ತಕ್ಕಂತೆ ನನಗೆ ನಾನಾ ಹೆಸರುಗಳು. ನಾನು ಇಂಗ್ಲಿಷ್ ಡಿಫೆನ್ಸ್ ಲೀಗಿನ ಸಂಸ್ಥಾಪಕ ಮತ್ತು ಮುಖಂಡ. ಈಗ ನಿವೃತ್ತ. ನನ್ನ ಕಥೆಯನ್ನು ಎಲ್ಲಿಂದ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಬೀದಿ ಕಾಳಗಗಳಿಂದ ಹೇಳಬೇಕೆ? ಪೊಲೀಸರು ಸೆರೆಹಿಡಿದ ದಿನದಿಂದ ಹೇಳಬೇಕೆ? ನನ್ನ ಮನೆಮಂದಿಯ ಭಯಗ್ರಸ್ಥ ವಾತಾವರಣದಿಂದ ಪ್ರಾರಂಭಿಸಬೇಕೇ? ಅಥವಾ ಹಲವು ತಿಂಗಳುಗಳ ಕಾಲದ ನನ್ನ ಏಕಾಂತ ಸೆರೆವಾಸದಿಂದ ಆರಂಭಿಸಲೇ? ಆದರೆ ನನ್ನ ಆರು ವರ್ಷಗಳ ಬದುಕನ್ನು ಅವಲೋಕನ ಮಡಿದಾಗ ಓರ್ವ ಬ್ರಿಟಿಷ್ ನಾಗರಿಕನಾಗಿ ದೇಶಕ್ಕಾಗಿ ಬದುಕನ್ನು ಸವೆಸಿದ ಸಾರ್ಥಕತೆ ನನ್ನಲ್ಲಿ ಕಾಣುತ್ತದೆ. ನಾನು ಅನುಭವಿಸಿದ ಕಷ್ಟಕೋಟಲೆಗಳು ನನ್ನ ದೇಶವಾಸಿಗಳಿಗಾಗಿ ಎಂದುಕೊಳ್ಳುವಾಗ ನಾನು ಎಲ್ಲವನ್ನೂ ಮರೆಯುತ್ತೇನೆ.
೨೦೧೫ರ ಜುಲೈ೨೩. ನಾನಂದು ೧೮ ತಿಂಗಳ ಜೈಲುವಾಸದಿಂದ ಬಿಡುಗಡೆಯಾಗುವನಿದ್ದೆ. ನಾನು ನನ್ನ ಕುಟುಂಬವನ್ನು ಭೇಟಿಯಾಗಬಹುದಿತ್ತು. ನನಗಾಗಿ ಹೊರಗೆ ಹಲವು ವೇದಿಕೆಗಳು ಕಾಯುತ್ತಿದ್ದವು. ನಾನು ಯುಕೆಯಾದ್ಯಂತ ಪ್ರವಾಸ ಮಾಡಬೇಕೆಂದುಕೊಳ್ಳುತ್ತಿದ್ದೆ. ಆದರೆ ಜುಲೈ ೨೨ಕ್ಕೆ ನನ್ನ ಕೈಗೆ ಮತ್ತೊಮ್ಮೆ ಕೊಳ ತೊಡಸಿದ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಲ್ಯೂಟನ್ ಮತ್ತು ಬೆಡ್‌ಫೋರ್ಡ್‌ಶೈರ್ ಗಲಭೆಗಳಲ್ಲಿ ತಪ್ಪಿತಸ್ಥನೆಂದು ಮತ್ತೆ ಜೈಲಿಗೆ ತಳ್ಳಿದರು. ನಾನು ಮನಸೋ ಇಚ್ಛೆ ಕಿರುಚಿದೆ. ಇವೆಲ್ಲವೂ ದೇಶಕ್ಕಾಗಿ ಮಾಡಿದ್ದೆಂದು ಅರಚಿದೆ. ಅದರೆ ನನ್ನ ದೇಶವಾಸಿಗಳೇ ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಪುನಃ ನನ್ನನ್ನು ಏಕಾಂತವಾಸಕ್ಕೆ ಅಟ್ಟಲಾಯಿತು. ಆಶ್ಚರ್ಯ ಎಂದರೆ ನಾನಿದ್ದ ಸೆಲ್ಲಿನ ಎರಡು ಸೆಲ್ಲಿನಾಚೆ ಒರ್ವ ಭಯಾನಕ ಮುಸಲ್ಮಾನ ಕೊಲೆಗಾರನನ್ನು ಇರಿಸಲಾಗಿತ್ತು. ಎರಡು ಸೆಲ್ಲುಗಳ ನಡುವೆ ಎಷ್ಟೊಂದು ವ್ಯತ್ಯಾಸಗಳಿದ್ದವು? ನಾನು ನನ್ನ ದೇಶಕ್ಕಾಗಿ ಕತ್ತಲಲ್ಲಿ ಕೊಳೆಯುತ್ತಿದ್ದರೆ ಆತ ಇನ್ನೊಬ್ಬರ ದೇಶಕ್ಕೆ ನುಸುಳಿ ತನ್ನ ನಂಬಿಕೆಗಾಗಿ ನನ್ನವರನ್ನು ಕೊಲೆ ಮಾಡುತ್ತಿದ್ದ! ಅಲ್ಲದೆ ಆತ ಜೈಲಲ್ಲೇ ನನ್ನ ಮೇಲೆ ಆಕ್ರಮಣಕ್ಕೆ ಕಾಯುತ್ತಿದ್ದ. ಅಂತೂ ಜುಲೈ ೨೨ ಕಳೆಯಿತು. ೪೮ ಗಂಟೆಗಳ ನನ್ನ ಏಕಾಂತವಾಸದ ಶಿಕ್ಷೆ ಮುಗಿಯಿತು. ಆ ೪೮ ಗಂಟೆಗಳು ನಾನು ಹೊರಗಿದ್ದರೆ ನಾನು ಹೌಸ್ ಆಫ್ ಲಾರ್ಡ್ ಅನ್ನು ಟೀಕೆ ಮಾಡಿ ಜನರನ್ನು ರೊಚ್ಚಿಗೇಳಿಸುತ್ತಿದ್ದೆ ಎಂಬ ಭಯ ಸರ್ಕಾರಕಿತ್ತು ಎಂಬುದು ನನಗೆ ತಿಳಿಯಿತು. ಅದೇ ಹೊತ್ತಿಗೆ ನನ್ನ ದೇಶದ ಇತಿಹಾಸದ ಗುಂಗಲ್ಲಿ ಮಂಕಾಗಿದ್ದ ಕೆಲವರು ಮ್ಯಾಗ್ನಾ ಕಾರ್ಟಾವನ್ನು ಹಾಡಿ ಹೊಗಳುತ್ತಿದರು. ದೇಶದ ಘನತೆ, ಗೌರವ ಮತ್ತು ಭದ್ರ ಭವಿಷ್ಯವನ್ನು ಹಾಡಿ ಹೊಗಳುತ್ತಿದ ಸಮಯದಲ್ಲೇ ನಾನು ಇಂಗ್ಲೆಂಡಿನ ನಾನಾ ಜೈಲುಗಳಲ್ಲಿ ಕುಖ್ಯಾತ ರೈಲು ದರೋಡೆಕೋರರೊಡನೆ ಶಿಕ್ಷೆ ಅನುಭವಿಸುತ್ತಿದ್ದೆ. ನಾನಿಂದು ಹೊರಗೆ ಬಂದಿರಬಹುದು. ಆದರೆ ನನ್ನ ಹೆಗಲ ಮೇಲೆ ಕೈಹಾಕುವ ಕೈಗಳಿಂದ ನಾನು ಹೊರತಾಗಿಲ್ಲವೆಂಬುದೂ ನನಗೆ ತಿಳಿದಿದೆ. ಅದು ಒಂದು ಪ್ರತಿಭಟನೆಯೂ ಆಗಬಹುದು. ನನ್ನ ಒಂದು ಟ್ವಿಟ್ಟೂ ಆಗಬಹುದು. ಈಗ ನಾನು ಇಂಗ್ಲಿಷ್ ಡಿಫೆನ್ಸ್ ಲೀಗಿನಿಂದ ಮುಕ್ತಗೊಂಡಿದ್ದೇನೆ. ಆದರೆ ನನ್ನ ಉದ್ದೇಶದಿಂದ ಮುಕ್ತಗೊಳಿಸಿಕೊಂಡಿಲ್ಲ. ಜೈಲಿನ ಸೆಲ್ಲುಗಳು ನನ್ನನ್ನು ಕಿಂಚಿತ್ತೂ ಬದಲಿಸಿಲ್ಲ. ಏಕೆಂದರೆ ನಾನು ಯಾರನ್ನು ವಿರೋಧಿಸುತ್ತೇನೋ ಅವರೂ ಕಿಂಚಿತ್ ಬದಲಾಗುತ್ತಿಲ್ಲ. ಬಹುಷ ಬದಲಾಗುವುದಿಲ್ಲ. ನನ್ನನ್ನು ಸರ್ಕಾರ ನಡೆಸಿಕೊಂಡ ಬಗೆಗೆ ನಾನು ಒಂದು ದಿನವೂ ಕಣ್ಣೀರು ಹಾಕಿಲ್ಲ. ನನ್ನ ಕಥೆ ನನಗೆಂದೂ ಕರುಣಾಜನಕ ಎನಿಸಿಲ್ಲ. ನನ್ನ ದೇಶಭಕ್ತಿಯ ಬಗ್ಗೆ ನನಗಾರೂ ಸರ್ಟಿಫಿಕೇಟ್ ಕೊಡಬೇಕೆಂದು ನಾನು ಬಯಸಿಲ್ಲ.
ನನ್ನ ಬಗ್ಗೆ ಸಮಾಜದಲ್ಲಿ ಹಲವು ಬಿಂಬಗಳಿವೆ. ಆದರೆ ನಾನು ಯಾರನ್ನು ವಿರೋಧಿಸುತ್ತೇನೋ ಅವರ ಬಣ್ಣದ ಬಗ್ಗೆ ನನಗೆ ಪರಿವೆಯಿಲ್ಲ. ಅವರ ಧರ್ಮದ ಬಗ್ಗೆ ನನಗೆ ಆಸಕ್ತಿಯೇ ಇಲ್ಲ. ಆದರೆ ಅವರ ನಿಷ್ಠೆ ಮತ್ತು ವರ್ತನೆಯ ಬಗ್ಗೆ ನನಗೆ ಆತಂಕವಿದೆ. ಇಷ್ಟಿದ್ದರೂ ಅವರು ನನ್ನ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಆದರೆ ಈ ಟಾಮಿ ರಾಬಿನ್‌ಸನ್ ಎಂಬ ನಾನು ಹೊರಜಗತ್ತಿಗೆ ಪರಿಚಯಿಸಿಕೊಂಡಿದ್ದೇ ೨೦೦೯ರಲ್ಲಿ. ಆದರೆ ನಿಮ್ಮ ನಿಷ್ಠೆ, ನಿಮ್ಮ ನಂಬಿಕೆ, ನಿಮ್ಮ ವರ್ತನೆ ಯಾವತ್ತಿನಿಂದಲೂ ಹಾಗಿದೆಯೆಂಬುದನ್ನು ಯಾಕೆ ಚಿಂತಿಸುತ್ತಿಲ್ಲ? ನನ್ನ ದೇಶದ ಕೆಲವು ಬುದ್ಧಿಜೀವಿಗಳು ನನ್ನನ್ನು ಇಸ್ಲಾಂ ವಿರೋಧಿ ಎನ್ನುತ್ತಾರೆ. ಆದರೆ ನಾನು ನಿಜಕ್ಕೂ ಇಸ್ಲಾಂ ವಿರೋಧಿಯಲ್ಲ. ಹಾಗನ್ನುವವರಿಗೆ ೨೦೦೯ರ ಘಟನೆ ನೆನಪಿದೆಯೇ? ರಾಯಲ್ ಆಂಗ್ಲಿಯನ್ ರೆಜಿಮೆಂಟ್ ಪೆರೇಡ್ ನಡೆಸುತ್ತಿದ್ದಾಗ ಯಾವ ಮುಸಲ್ಮಾನರು ಅದನ್ನು ವಿರೋಧಿಸಿದ್ದರೋ ನಾನು ಅವರ ವಿರೋಧಿ. ಯಾರು ಇಂಗ್ಲಿಷ್ ನೆಲದಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೋ ನಾನು ಅವರ ವಿರೋಧಿ. ಯಾರು ನಮ್ಮ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದಾರೋ ನಾನು ಅವರ ವಿರೋಧಿ. ಯಾರು ಅವರ ನಂಬಿಕೆಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೋ ನಾನು ಅವರ ವಿರೋಧಿ. ಯಾರು ಮತಕ್ಕಾಗಿ ಮುಗ್ಧರನ್ನು ಕೊಲ್ಲುವರೋ ನಾನು ಅವರ ವಿರೋಧಿ. ಅಂಥವರನ್ನು ವಿರೋಧಿಸುವುದು ಪ್ರತಿಯೊಬ್ಬ ಇಂಗ್ಲಿಷನ ಕರ್ತವ್ಯವಲ್ಲವೇ?”
ಟಾಮಿ ರಾಬಿನ್ ಸನ್ ತನ್ನ ಪುಸ್ತಕದುದ್ದಕ್ಕೂ ಇಂಗ್ಲಿಷರಿಗೆರಗಿದ ಅಪಾಯವನ್ನು ಹೇಳುತ್ತಾ ಹೋದಂತೆ ನಮ್ಮ ದೇಶ ಮತ್ತು ಧರ್ಮಕ್ಕಾಗಿ ಡಜನ್‌ಗಟ್ಟಲೆ ಕೇಸು ಹಾಕಿಸಿಕೊಂಡ ಸಕಲೇಶಪುರದ ರಘು, ಶನಿವಾರಸಂತೆಯ ಉಲ್ಲಾಸ್, ಮಂಗಳೂರಿನ ಶರಣ್, ಬೆಳಗಾವಿಯ ಸ್ವರೂಪ್ ಕಲ್ಕುಂದ್ರಿ, ಬಳ್ಳಾರಿಯ ಸುಭಾಷ್, ಉಡುಪಿಯ ಕೆ.ಆರ್. ಸುನಿಲ್, ಚಿತ್ರದುರ್ಗದ ಪ್ರಭಂಜನ್ ರೆಡ್ಡಿ, ಕೋಲಾರದ ಬಾಬು ನೆನಪಾಗುತ್ತಿದ್ದರು. ಟಾಮಿ ರಾಬಿನ್ಸನ್ನನಿಗೇನೋ ಇಂಗ್ಲಿಷ್ ಜನಗಳ ಬೆಂಬಲವಿತ್ತು. ಇವರೆಲ್ಲರಿಗೆ ಉತ್ಕಟ ದೇಶಭಕ್ತಿಯೊಂದು ಬಿಟ್ಟರೆ ಇನ್ನೇನಿತ್ತು? ಇಂಗ್ಲೆಂಡಿಗೊಬ್ಬನೇ ಟಾಮಿ ರಾಬಿನ್ಸನ್, ರಾಬಿನ್ಸನ್ನನಿಗೆ ಮಾಡಬೇಕಿದ್ದುದೂ ಒಂದೇ ಕಾರ್ಯ. ಆದರೆ ನಮ್ಮಲ್ಲಿ ಎಷ್ಟೊಂದು ಟಾಮಿ ರಾಬಿನ್ಸನ್‌ಗಳು? ಮುಂದಿರುವ ಗುರಿಗಳು ಎಷ್ಟೊಂದು?
Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments