ವಿಷಯದ ವಿವರಗಳಿಗೆ ದಾಟಿರಿ

ಜೂನ್ 21, 2017

ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು? ( ಭಾಗ – ೪ )

‍ನಿಲುಮೆ ಮೂಲಕ

ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)

ಎರಡು ವಿಭಿನ್ನ ಮಾರ್ಗಗಳು :

ಸಾಮಾನ್ಯವಾಗಿ ಪಶ್ಚಿಮದಲ್ಲಿ ನಮ್ಮ ಸಂಸ್ಕೃತಿಗೆ ಸಂಬಂಧಿಸಿದಂತೆ ಪದೇಪದೇ ಕೇಳಿಬರುವ ಈ ಪ್ರಶ್ನೆಗಳನ್ನು ಗಮನಿಸಿ. ನೀವು ಹಣೆಗೆ ತಿಲಕ ಇಡುವುದೇಕೆ? ಗೋಮಾಂಸವನ್ನು ನೀವೇಕೆ ತಿನ್ನುವುದಿಲ್ಲ? ನೀವು ಶಿಶ್ನವನ್ನು ಪೂಜೆ ಮಾಡುತ್ತೀರಂತೆ ಹೌದೆ? ಜಾತಿ ಪದ್ಧತಿಯ ಬಗ್ಗೆ ನಿಮ್ಮ ಅನಿಸಿಕೆಯೇನು? ಈಗಲೂ ಭಾರತದಲ್ಲಿ ವಿಧವೆಯರನ್ನು ಸುಡುತ್ತಾರೆಯೇ? ನಿಮ್ಮ ದೇವರುಗಳಿಗೇಕೆ ಆರೆಂಟು ಕೈಗಳು ಇರುತ್ತವೆ? ನಿಮ್ಮ ರಿಲಿಜನ್ನಿನ ಚಿಹ್ನೆ ಯಾವುದು? ನೀವು ದೇವಸ್ಥಾನದಲ್ಲಿ ಮೂರ್ತಿಪೂಜೆ/idolatry ಮಾಡುತ್ತೀರಾ? ನೀವು ದೇವರನ್ನು ನಂಬುತ್ತೀರಾ? Are you religious? ಇತ್ಯಾದಿ. ಈ ರೀತಿಯ ಪ್ರಶ್ನೆಗಳು ಎದುರಾದಾಗ ಯಾರಾದರೂ ಹೇಗೆ ಪ್ರತಿಕ್ರಿಯಿಸಬಹುದು? ಸ್ಥೂಲವಾಗಿ ಹೇಳುವುದಾದರೆ, ಇದಕ್ಕೆ ಎರಡು ವಿಧದಲ್ಲಿ ಪ್ರತಿಕ್ರಿಯಿಸಬಹುದು. ಮೊದಲನೆಯದು, ಈ ಪ್ರಶ್ನೆಗಳು ಗ್ರಹಿಸಲು ಸಾಧ್ಯವಾಗುವಂಥ ಮತ್ತು ನಮಗೆ ಅರ್ಥವಾಗುವ ಪ್ರಶ್ನೆಗಳು ಎಂಬ ಊಹೆಯೊಂದಿಗೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು. ಸುಧಾರಣಾವಾದಿಗಳ ಕಾಲದಿಂದ ಇಂದಿನವರೆಗೆ ನಾವು ಅನುಸರಿಸಿದ ಮಾರ್ಗ ಇದೇ. ಆದರೆ ಅಮೆರಿಕೆಯಲ್ಲಿ ನೆಲೆಸುವ ಭಾರತೀಯರ [ಅಷ್ಟೇ ಏಕೆ, ಸಂಕುಚಿತಗೊಳ್ಳುತ್ತಿರುವ ಆ ಜಗತ್ತಿನಲ್ಲಿ, ಭಾರತದಲ್ಲಿನ ಭಾರತೀಯರ] ಪರಿಸ್ಥಿತಿ ಇಂದು ಬದಲಾಗಿದೆ: ಹಿಂದಿನ ಕಾಲದ ಸುಧಾರಕರು ಭಾರತೀಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು, ಆದರೆ ನಾವಿಂದು ಪಾಶ್ಚಾತ್ಯ ಸಂಸ್ಕೃತಿಯ ಸಂದರ್ಭದಲ್ಲಿ ನಿಂತು ಮಾತನಾಡುತ್ತಿದ್ದೇವೆ. ಬದಲಾದ ಈ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನಾವೂ ನಮ್ಮ ಸುಧಾರಣಾವಾದಿಗಳು ನಡೆದ ಮಾರ್ಗವನ್ನು ಅನುಸರಿಸಿದರೆ ಉಂಟಾಗುವ ಪರಿಣಾಮವನ್ನು ಗ್ರಹಿಸುವುದು ಬಹಳ ಮುಖ್ಯವಾಗಿದೆ.

1. ಮೊದಲಿಗೆ ಈ ಪ್ರಶ್ನೆಗಳಿಗೆ ಸಮಧಾನಕರವಾದ ಉತ್ತರವನ್ನು ನೀಡುವುದು ಅವಶ್ಯಕ. ಆದರೆ ಈ ಉತ್ತರಗಳು ಯಾರಿಗೆ ಸಮಧಾನಕರವಾಗಿರಬೇಕು? ಪಶ್ಚಿಮದಲ್ಲಿ ನೆಲೆಸಿರುವ ಮೊದಲ ತಲೆಮಾರಿನ ಭಾರತೀಯರಿಗೋ? ಅವರ ಮಕ್ಕಳಾದ ಎರಡನೆಯ ತಲೆಮಾರಿನ ಭಾರತೀಯರಿಗೋ, ಅಥವಾ ಪ್ರಶ್ನಿಸಿದವರನ್ನೋ? ಉದಾಹರಣೆಗೆ, ನೀವು ಗೋಮಾಂಸವನ್ನು ಏಕೆ ತಿನ್ನುವುದಿಲ್ಲ ಎಂಬ ಪ್ರಶ್ನೆಗೆ ನಾವು ಕೊಡುವ ಉತ್ತರಗಳನ್ನು ಗಮನಿಸಿ. ಭಾರತೀಯರನ್ನು ಪೋಷಣೆ ಮಾಡುವಂತಹ ಹಸುವಿನ ಹಾಲು ತಾಯಿಯ ಎದೆ ಹಾಲಿಗೆ ಸಮಾನ. ತಾಯಿಯಂಥ ಹಸುವನ್ನು ಭಾರತೀಯರು ಹತ್ಯೆ ಮಾಡುವುದಿಲ್ಲ ಮತ್ತು ಅದರ ಮಾಂಸವನ್ನು ತಿನ್ನುವುದಿಲ್ಲ. ಅಥವಾ ದನ-ಕರುಗಳು ಭಾರತೀಯ ರೈತರ ಉಳಿವಿಗೆ ಕಾರಣವಾಗಿದೆ. ಆದ್ದರಿಂದ ಕೃಷಿಕರು ಗೋಹತ್ಯೆಯನ್ನು ಮಾಡುವುದೂ ಇಲ್ಲ ಮತ್ತು ಅದನ್ನು ತಿನ್ನುವುದೂ ಇಲ್ಲ. ಅಥವಾ ಇದೇ ರೀತಿಯ ವಿವಿಧ ನಿರೂಪಣೆಗಳು. ಇಂಥ ಉತ್ತರಗಳು ಪ್ರಶ್ನಿಸಿದವರಿಗೂ ಸಮಾಧಾನಕರವಾಗಿರುವುದಿಲ್ಲ, ಭಾರತದ ಎರಡನೆಯ ತಲೆಮಾರಿನ ಮಕ್ಕಳಿಗೂ ಸಮಾಧಾನಕರವಾಗಿರುವುದಿಲ್ಲ ಎಂಬುದನ್ನು ಮತ್ತೆ ಒತ್ತಿ ಹೇಳಬೇಕಾಗಿಲ್ಲ. ಏಕೆಂದರೆ ಭಾರತದಲ್ಲಿ ಹಸುವಿಗೆ ಹೊಡೆಯುವುದನ್ನು ಮತ್ತು ಹಾದಿಬೀದಿಗಳಲ್ಲಿ ಪ್ಲಾಸ್ಟಿಕ್ ತಿಂದು ಸಾಯಲಿಕ್ಕೆ ಬಿಡುವುದನ್ನೂ ಕೂಡಾ ನೋಡಬಹುದು. ಇದು ಹಸುವಿಗೆ ತೋರಿಸುವ ಉದಾತ್ತವಾದ ಗೌರವವೇನೂ ಅಲ್ಲ. ಭಾರತದಲ್ಲಿ ಯಾರೂ ಹಸುವನ್ನು ತಮ್ಮ ಮಾತೃ ಸಮಾನವೆಂದು ಭಾವಿಸಿ, ತರಕಾರಿಯ ಬುಟ್ಟಿಗೆ ತಲೆ ತೂರುವ ಹಸುವಿಗೆ ಮುದ್ದಿನಿಂದ ಕರೆದು ಉಣಬಡಿಸುವುದಿಲ್ಲ. ಅಷ್ಟೇ ಅಲ್ಲ ಈ ರೀತಿಯ ಉತ್ತರಗಳು ತರ್ಕಹೀನ ಉತ್ತರಗಳಂತೆ ಕಾಣಿಸುವುದನ್ನು ಗಮನಿಸಿ: ಈ ಬಡ ದೇಶದಲ್ಲಿ ಹಸಿವಿನಿಂದ ಸಾಯುವುದಕ್ಕಿಂತ ದನದ ಮಾಂಸವನ್ನು ತಿನ್ನುವುದು ಸಮಂಜಸವಲ್ಲವೇ? ಗೊಮಾಂಸ ಭೋಜನವನ್ನು ಉತ್ತೇಜಿಸಿ ಭಾರತದಲ್ಲಿನ ಹಸಿವು ಮತ್ತು ಪೌಷ್ಟಿಕಾಂಶದ ಕೊರತೆಯನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲವೇ? ಈ ರೀತಿಯ ಪ್ರಶ್ನೆಗಳಿಗೆ ನಾವು ಕೊಡುವು ಗೋಜಲು ಗೋಜಲು ಉತ್ತರಗಳು ಕಡೆಗೆ ಯಾರಿಗೂ ಸಮಾಧಾನ ಪಡಿಸುವುದಿಲ್ಲ. ಕಡೆಗೆ ಸಮಂಜಸ ಉತ್ತರದ ತಡಕಾಟದಲ್ಲಿ, ನಾವು ಯೆಹೂದಿಗಳ ಮತ್ತು ಮುಸ್ಲಿಮರ ಮಾರ್ಗವನ್ನು ಅನುಸರಿಸಬೇಕಾಗುತ್ತದೆ: ಯಾವ ರೀತಿಯಲ್ಲಿ ಮುಸ್ಲಿಮರು ಹಂದಿ ಮಾಂಸವನ್ನು ತಿನ್ನುವುದಿಲ್ಲವೋ, ಯೆಹೂದಿಗಳು ‘ಕೋಷರ್’ ಆಹಾರವನ್ನು ಮಾತ್ರ ತಿನ್ನುತ್ತಾರೋ, ಅದೇ ರೀತಿ ರಿಲಿಜನ್ನಿನ ಕಾರಣದಿಂದಾಗಿ ನಾವೂ ಕೂಡ ದನದ ಮಾಂಸವನ್ನು ತಿನ್ನುವುದಿಲ್ಲ. ಭಾರತದ ಇತಿಹಾಸದ ಬಗ್ಗೆ ಒಂದಷ್ಟು ಓದಿಕೊಂಡಿರುವವರು ಸಿಗುವ ತನಕ ಈ ರೀತಿಯ ಉತ್ತರಗಳು ಪ್ರಯೋಜನಕ್ಕೆ ಬರುತ್ತವೆ. ಭಾರತದ ಯಾವ ಧರ್ಮಗ್ರಂಥದಲ್ಲಿಯೂ ದನದ ಮಾಂಸವನ್ನು ತಿನ್ನುವುದು ನಿಷಿದ್ಧ ಪಡಿಸಿಲ್ಲ ಎಂದು ಯಾರಾದರು ತೋರಿಸಿದ ಕೂಡಲೆ ನಾವು ಪೇಚಿಗೆ ಸಿಕ್ಕಿಕೊಳ್ಳುತ್ತೇವೆ.

2. ಅಷ್ಟೇ ಏಕೆ, ಒಂದು ಪ್ರಶ್ನೆಗೆ ಹೀಗೆ ವಿವಿಧ ಉತ್ತರಗಳು ಲಭ್ಯವಿದೆ ಎಂಬ ವಿಚಾರವೇ ನಮ್ಮನ್ನು ಪೇಚಾಟಕ್ಕೆ ಸಿಲುಕಿಸುತ್ತವೆ. ಇಂಥ ಪ್ರಶ್ನೆಗಳಿಗೇಕೆ ಒಬ್ಬೊಬ್ಬ ಹಿಂದುವೂ ಒಂದೊಂದು ಉತ್ತರಗಳನ್ನು ನೀಡುತ್ತಾನೆ? ಬದಲಾದ ಹೊಸ ಸಾಂಸ್ಕೃತಿಕ ಪರಿಸ್ಥಿತಿ ಇಂಥ ಸಂದರ್ಭದಲ್ಲಿ ನಾವು ಕೊಡುವ ವಿವಿಧ ಉತ್ತರಗಳನ್ನು ಏಕೀಕರಣಗೊಳಿಸಿ, ಒಂದು ಅಧಿಕೃತ ಉತ್ತರವನ್ನು ಕೊಡುವ ಒತ್ತಡವನ್ನು ನಿರ್ಮಿಸಿದೆ. ನೀವು ಹಣೆಯ ಮೇಲೆ ತಿಲಕವನ್ನು ಏಕೆ ಇಟ್ಟುಕೊಳ್ಳುತ್ತೀರ? ಎಂಬ ಪ್ರಶ್ನೆಗೆ ವಿವಿಧ ಉತ್ತರಗಳನ್ನು ಕೊಡುವ ಸಾಧ್ಯತೆ ಇರಬಹುದು. ಆದರೆ, ನೀವು ಶಿಶ್ನವನ್ನು ಏಕೆ ವರ್ಶಿಪ್ ಮಾಡುತ್ತೀರಾ (‘why do you worship phallus’)? ಎಂಬ ಪ್ರಶ್ನೆಗೆ ವಿವಿಧ ಉತ್ತರಗಳನ್ನು ಕೊಡುವುದು ಕಷ್ಟಸಾಧ್ಯ.

3. ಅಧಿಕೃತವಾದ ಒಂದೇ ಒಂದು (ಅನನ್ಯವಾದ) ಉತ್ತರವನ್ನು ಕಟ್ಟುವ ಪ್ರಕ್ರಿಯೆ, ಭಾರತೀಯ ಸಂಪ್ರದಾಯಗಳಲ್ಲಿರುವ ವಿವಿಧತೆಯನ್ನು ಮಟ್ಟಸ ಮಾಡಿ, ಅವುಗಳ ಮೇಲೆ ಅಸಹಜವಾದ ಏಕರೂಪತೆಯನ್ನು ಹೇರುತ್ತದೆ. ಇಂಥ ಉತ್ತರಗಳು ಸಂಪ್ರದಾಯಗಳನ್ನು ಕೇವಲ ಕ್ರೋಡೀಕರಣ ಮಾಡುವುದಿಲ್ಲ. ಜೊತೆಗೆ ಪಶ್ಚಿಮದ ದೇಶಗಳಲ್ಲಿ ಬಂದು ನೆಲೆಸುವ ಭಾರತೀಯರಲ್ಲಿನ ಒಂದು ಪ್ರವೃತ್ತಿಯನ್ನು ಗಟ್ಟಿಮಾಡುತ್ತದೆ. ಅದೆಂದರೆ, ತಮ್ಮ ರೀತು ರಿವಾಜುಗಳು ಬಹು ವಿಶೇಷವೆಂದು ಪರಿಗಣಿಸಿ ಅದಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುವುದು. ತಮ್ಮ ಪೂರ್ವಿಕರಿಂದ ಪಡೆದುಕೊಂಡ ಆಚರಣೆ ಮತ್ತು ನಂಬಿಕೆಗಳನ್ನು ಅವರಿಗಿಂತಲೂ (ಮತ್ತು ಭಾರತದಲ್ಲಿರುವ ಭಾರತೀಯರಿಗಿಂತಲೂ) ಹೆಚ್ಚು ಕಟ್ಟುನಿಟ್ಟಾಗಿ ಪರಿಪಾಲಿಸಿಕೊಂಡು ಬರುವ ಪ್ರವೃತ್ತಿಯಿಂದಾಗಿ ಅತ್ಯಂತ ಮಡಿವಂತ ಹಿಂದು ಸಮುದಾಯವೊಂದು ಹುಟ್ಟಿಕೊಳ್ಳುತ್ತದೆ.

4. ಈ ರೀತಿಯಾಗಿ ನಂಬಿಕೆಗಳನ್ನು ನಿಯಮಾವಳಿಗಳನ್ನಾಗಿ ಕ್ರೋಡೀಕರಣ ಮಾಡಿ, ಸ್ಥಳೀಯ ಆಚರಣೆಗಳನ್ನು (ಭಾರತದಲ್ಲೀ ಕೆಲಸ ಮಾಡದೆಯೂ ಇರಬಹುದಾದ ಆಚರಣೆಗಳನ್ನು) ದೂರದ ಮತ್ತೊಂದು ಪರಿಸರದಲ್ಲಿ ಒತ್ತಾಯಪೂರ್ವಕವಾಗಿ ನೆಟ್ಟು ಬೆಳೆಸುವ ಈ ಪ್ರಯತ್ನವು ಮಾನವ ಆಚರಣೆಗಳನ್ನು ಪಳೆಯುಳಿಕೆಯನ್ನಾಗಿ ಮಾಡುತ್ತದೆ. ಈ ಆಚರಣೆಗಳು ಮಾನವನು ತನ್ನ ಪರಿಸರದ ಜೊತೆ ಮಾಡಿಕೊಳ್ಳುವ ಕ್ರಿಯಾಶೀಲ ಹೊಂದಾಣಿಕೆಯ ಪ್ರತೀಕಗಳು. ಅನ್ಯ ಪರಿಸರದಲ್ಲಿ ಅವು ಜಡವಾದ ಆಚರಣೆಗಳಾಗುವುದರಿಂದ ಅವುಗಳಿಗೆ ತಕ್ಕನಾದ ಸಮರ್ಥನೆಯನ್ನು ನೀಡುವ ಹೊಸ ಅಗತ್ಯ ಈಗ ಹುಟ್ಟಿಕೊಳ್ಳುತ್ತದೆ. ಬಹಳಷ್ಟು ಮಂದಿ ಒಪ್ಪಿಕೊಳ್ಳುವಂಥ ಇಂತಹ ಸಮರ್ಥನೆಗಳನ್ನು ಕೊಡಲು ಕರ್ಮಠ ನಂಬಿಕೆಗಳನ್ನು ಹೊಸೆದು ಕೊಡುವ ಸಂಗಸಂಸ್ಥೆಗಳು ಅಥವಾ ಸ್ವಾಮಿಗಳಿಗೆ ಮಾತ್ರ ಸಾಧ್ಯ. ಹೀಗೆ ಸೆಮೆಟಿಕ್ ರಿಲಿಜನ್ನುಗಳನ್ನು ಹೋಲುವ ‘ಹಿಂದೂಯಿಸಂ’ ಅಸ್ತಿತ್ವಕ್ಕೆ ಬರುತ್ತದೆ.

5. ಇಂಥ ಜಡ ‘ಹಿಂದೂಯಿಸಂ’ ಹೊಸ ಸಾಂಸ್ಕೃತಿಕ, ಸಾಮಾಜಿಕ ಪರಿಸರದ ಸವಾಲುಗಳ ಎದುರು ಇನ್ನೂ ಹೆಚ್ಚು ದುರ್ಬಲವಾಗುತ್ತದೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಭಾರತದಲ್ಲಿರುವ ಸಂಪ್ರದಾಯಗಳ ವಿವಿಧತೆ ಮತ್ತು ಬಹುತ್ವಗಳನ್ನು ಈ ಹೊಸ ಹಿಂದೂಯಿಸಂಗೆ ಹೋಲಿಸುತ್ತಾ, ಆಮೆರಿಕಾದಲ್ಲಿರುವ ಹಿಂದುಗಳನ್ನು ಗೊಡ್ಡು ಸಂಪ್ರದಾಯವಾದಿಗಳು, ತಿಳಿಗೇಡಿ ಕರ್ಮಠರು ಎಂದು ಜರೆಯುವ ಪ್ರತೀತಿ ಹುಟ್ಟುವುದು ಇಲ್ಲೇ. ಯಾವ ಪರಿಸರವು ಹಿಂದೂಯಿಸಂನ್ನು ಸೆಮೆಟಿಕ್ ರಿಲಿಜನ್ನಿನಂತೆ ಕಾಣುವಂತೆ ಮಾಡುವ ಒತ್ತಡವನ್ನು ಆಮೆರಿಕಾದ ಹಿಂದೂಗಳ ಮೇಲೆ ಹೇರುತ್ತದೋ, ಅದೇ ಪರಿಸರವು ಅಂಥ ಕೆಲಸವನ್ನೂ ಬಾಯಿತುಂಬಾ ಟೀಕಿಸುತ್ತದೆ.

ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅನೇಕ ವಿಷಯವನ್ನು ಹೇಳಲಿಕ್ಕಿದೆಯಾದರೂ, ಅದನ್ನು ಮತ್ತೆ ಮುಂದುವರೆಸುತ್ತೇನೆ. ಈ ಸಂದರ್ಭಕ್ಕಂತೂ ಎಲ್ಲರೂ ಗಮನಿಸಬೇಕಾದದ್ದು ಇದು: ಪಾಶ್ಚಾತ್ಯರಿಗೆ ಈ ರೀತಿಯಾಗಿ ಪ್ರತಿಕ್ರಿಯಿಸ ಹೊರಟರೆ ನಾವೂ ನಮ್ಮ ಹಿಂದಿನ ಹಿಂದೂ ಸುಧಾರಕರು ನಡೆದ ದಾರಿಯಲ್ಲೇ ಹೋಗುವ ಒತ್ತಡವುಂಟಾಗುತ್ತದೆ. ಆದರೆ ಆ ಸುಧಾರಕರಂತೆ ನಾವಿಂದು (ವಿಶೇಷವಾಗಿ, ಆಮೆರಿಕಾದಲ್ಲಿರುವ ಹಿಂದುಗಳು) ಭಾರತದ ಸಾಂಸ್ಕೃತಿಕ ಪರಿಸರದಲ್ಲಿ ಮೈತಳೆದ ಪರಿಸ್ಥಿತಿಯಲ್ಲಿ ಬದುಕುತ್ತಿಲ್ಲ. ಅಂದರೆ, ಪಶ್ಚಿಮದ ಪರಿಸರದಲ್ಲಿ ನಾವು ಉಳಿಸಿಕೊಳ್ಳುವ ‘ಹಿಂದೂಯಿಸಂ’, ಭಾರತದ ಸುಧಾರಕರು ಈ ಹಿಂದೆ ಸೃಷ್ಟಿಸಿದಂತಹ ‘ಹಿಂದೂಯಿಸಂ’ಗಿಂತ ಕಳಪೆಯಾಗಿರುವ ಎಲ್ಲಾ ಸಾಧ್ಯತೆಯಿದೆ. ಇಂದಿನ ಈ ಹಿಂದೂಯಿಸಂ, ನಂಬಿಕೆಗಳನ್ನು ಕ್ರೋಡೀಕರಿಸಲು ಪ್ರಯತ್ನಿಸಿದ್ದರಿಂದ ಅಂದಿನ ಹಿಂದೂಯಿಸಂನ್ನು ಹೋಲುತ್ತದೆ ಎಂಬುದೇನೋ ನಿಜ. ಆದರೆ ಕೆಲವೊಂದು ಆಚರಣೆಗಳಿಗೆ ಕುರುಡುಕುರುಡಾಗಿ ಕಟ್ಟುಬೀಳುವ ಅಪಾಯವಿರುವುದರಿಂದ, ಇಂದಿನ ಹಿಂದೂಯಿಸಂ ಹಿಂದಿನದಕ್ಕಿಂತಲೂ ಹೆಚ್ಚು ಕಳಪೆಯಾಗಲಿದೆ. ಸಾವಿರಾರು ವರ್ಷ ವಿಭಿನ್ನ ಪರಿಸರದಲ್ಲಿ ಈ ಸಂಪ್ರದಾಯಗಳು ಉಳಿದುಕೊಂಡು ಬರಲು ಕಾರಣವಾದ ಮೂಲಸತ್ವವನ್ನೇ ನಾವು ಬಲಿಕೊಡಲಿದ್ದೇವೆ.

ಇಂಥ ಅನಿಷ್ಟ ಬೆಳವಣಿಗೆಗಳನ್ನು ತಡೆದು, ಪಶ್ಚಿಮದಲ್ಲಿದ್ದುಕೊಂಡೂ ಭಾರತೀಯ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುವುದು ಹೇಗೆ? ಈ ಸಮಸ್ಯೆಗೆ ಪ್ರತಿಕ್ರಿಯಿಸಲು ಈ ಮುಂದಿನ ಪ್ರಶ್ನೆಯೊಂದಿಗೆ ಪ್ರಾರಂಭಿಸೋಣ. ಭಾರತದಲ್ಲೇ ವಾಸವಾಗಿರುವವರು ಇಂಥ ಪ್ರಶ್ನೆಗಳನ್ನೇಕೆ ಎತ್ತುವುದಿಲ್ಲ? ಅಂದರೆ, ಆಕಳ ಮಾಂಸವನ್ನು ತಿನ್ನುವುದರ ಕುರಿತು, ಹಣೆಗಿಡುವ ಕುಂಕುಮದ ಕುರಿತು, ಲಿಂಗ ಪೂಜೆಯ ಅಸಭ್ಯತೆಯ ಕುರಿತು ಪ್ರಶ್ನೆಗಳನ್ನು ನಾವೇಕೆ ಭಾರತದಲ್ಲಿ ಒಬ್ಬರಿಗೊಬ್ಬರು ಕೇಳಿಕೊಂಡು ತಿರುಗಾಡುವುದಿಲ್ಲ? ನಮ್ಮಲ್ಲಿ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆ ಎನ್ನುವ ಕಾರಣದಿಂದಂತೂ ಖಂಡಿತವಾಗಿಯೂ ಅಲ್ಲ. ಹಾಗೇನಾದರೂ ಆಗಿದ್ದರೆ, ನಮಗೆ ಪಶ್ಚಿಮದವರು ಇಂಥ ಪ್ರಶ್ನೆಗಳನ್ನು ಕೇಳಿದಾಗ ಉತ್ತರ ನೀಡಲು ಸಮಸ್ಯೆಯೇ ಆಗಬೇಕಾಗಿರಲಿಲ್ಲ. ಇಲ್ಲೊಂದು ಬಹು ಸರಳವಾದ ಆದರೆ ಬಹಳ ಮುಖ್ಯವಾದ ಅಂಶವೊಂದಿದೆ: ನಮ್ಮ ಸಂಪ್ರದಾಯಗಳ ಬಗ್ಗೆ ನಮಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಬೇಕು ಎಂದು ಅನಿಸುವುದೇ ಇಲ್ಲ. ಇದರರ್ಥ ನಾವು ಪಶ್ಚಿಮದ ಸಂಸ್ಕೃತಿಯವರಿಗಿಂತ ದಡ್ಡರು ಅಥವಾ ಅವರಿಗಿರುವಷ್ಟು ತಿಳಿದುಕೊಳ್ಳುವ ಆಸಕ್ತಿ ನಮಗಿಲ್ಲ ಎಂದಲ್ಲ. ಬದಲಿಗೆ ನಮ್ಮಲ್ಲಿ ಈ ರೀತಿಯ ಪ್ರಶ್ನೆಗಳು ಅರ್ಥಹೀನ ಎನಿಸಿಕೊಳ್ಳುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಮ್ಮ ಸಂಪ್ರದಾಯದ ಸಂದರ್ಭದಲ್ಲಿ ಇಂಥ ಪ್ರಶ್ನೆಗಳನ್ನು ಕೇಳಬಾರದೆಂಬುದನ್ನು ಕಲಿತಿದ್ದೇವೆ ಮತ್ತು ಈ ಕಲಿಕೆಯು ಭಾರತೀಯ ಸಂಪ್ರದಾಯಗಳನ್ನು ಆಚರಿಸಲು ಕಲಿಯುವ, ಅದರ ಸದಸ್ಯರಾಗುವ ಪ್ರಕ್ರಿಯೆಯ ಭಾಗವೇ ಆಗಿದೆ. ಈ ರೀತಿಯ ಪ್ರಶ್ನೆಗಳನ್ನು ನಾವು ಕೇಳುವುದಿಲ್ಲ ಎಂದರೆ ನಮಗೆ ಈ ರೀತಿಯ ಪ್ರಶ್ನೆಗಳು ಎಂದೂ ತೋಚುವುದೇ ಇಲ್ಲ ಎಂದೇನೂ ಅಲ್ಲ. ಉದಾಹರಣೆಗೆ ನಾವು ಮಕ್ಕಳಾಗಿದ್ದಾಗ ಈ ರೀತಿಯ ಪ್ರಶ್ನೆಗಳು ನಮ್ಮಲ್ಲೂ ಉದ್ಭವವಾಗಿವೆ ಮತ್ತು ಅವಕ್ಕೆ ಹಿರಿಯರಿಂದ ನಮಗೆ ಸಿಕ್ಕ ಉತ್ತರಗಳು ನಮಗೆ ಸಮಾಧಾನವನ್ನೂ ನೀಡಿವೆ. ನಮಗೆ ಸಿಕ್ಕ ಸಾಕಷ್ಟು ಇಂಥ ಉತ್ತರಗಳು ನಮ್ಮ ಸಾಂಪ್ರದಾಯಿಕ ಆಚರಣೆಯ ಗುಣಗಳ ಕುರಿತು ಉಲ್ಲೇಖಗಳಾಗಿರುತ್ತವೆ.

ಅಂದರೆ ನಾವು ಪಶ್ಚಿಮದ ಸಂಸ್ಕೃತಿಯಲ್ಲಿ ಈ ರೀತಿಯ ಪ್ರಶ್ನೆಗಳನ್ನು ಎದುರಿಸಿದಾಗ ಕೆಳಕಂಡ ಎರಡು ಅಂಶಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ;

1) ಈ ಪ್ರಶ್ನೆಗಳು ನಾವು ನಿರ್ದಿಷ್ಟವಾದ ಮತ್ತು ಅನನ್ಯವಾದ ಉತ್ತರಗಳನ್ನೇ ನೀಡಬೇಕೆಂಬ ಒತ್ತಾಯವನ್ನು ಹೇರುತ್ತವೆ;

2) ಭಾರತೀಯರಿಗೆ ಈ ಪ್ರಶ್ನೆಗಳು ಅರ್ಥವಾಗುವುದು ಸಾಧ್ಯವಿಲ್ಲ. ಆದರೆ ಇವು ಪಾಶ್ಚಾತ್ಯರ ಗ್ರಹಿಕೆಗೆ ಸುಲಭದಲ್ಲಿ ದಕ್ಕುತ್ತವೆ.

ಅಂದರೆ, ಭಾರತದ ಸಂಪ್ರದಾಯಗಳ ಬಗ್ಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಿದಾಗ ನಮಗೆ ಅವು ಅರ್ಥವಾಗುತ್ತವೆ ಎಂಬ ಭ್ರಮೆಯನ್ನು ನಾವು ಇಟ್ಟುಕೊಳ್ಳಬಾರದು; ಅವು ನಮಗೆ ಅರ್ಥವಾಗುವುದಿಲ್ಲ. ಇಂಥ ಪ್ರಶ್ನೆಗಳು ಕೇಳುವುದು ಪಾಶ್ಚಾತ್ಯ ಸಂಸ್ಕೃತಿಯ ಸ್ವಾಭಾವಿಕ ಗುಣ.

ಸಾಮಾನ್ಯವಾಗಿ ಪಶ್ಚಿಮದಲ್ಲಿ ಯಶಸ್ವಿಯಾಗಿ ಜೀವನವನ್ನು ನಡೆಸಿರುವ ಎಲ್ಲರೂ, ತಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥಮಾಡಿಕೊಂಡಿದ್ದೇವೆ ಎಂದುಕೊಂಡಿರುತ್ತಾರೆ. ಪಶ್ಚಿಮದಲ್ಲಿ ಯಶಸ್ವಿಯಾಗುವ ಸಾಮರ್ಥ್ಯವಿದೆ ಎಂದರೆ ನಮಗೆ ಈ ಸಂಸ್ಕೃತಿ ಅರ್ಥವಾಗಿದೆ ಎಂಬ ತಪ್ಪು ನಂಬಿಕೆಯೆ ಇದಕ್ಕೆ ಕಾರಣ. ನಮಗೆ ಇಂಗ್ಲಿಷ್ ಅಥವಾ ಇತರೆ ಐರೋಪ್ಯ ಭಾಷೆಗಳಲ್ಲಿ ಸರಾಗವಾಗಿ ಮಾತನಾಡಲು ಬರುತ್ತದೆ ಆದ್ದರಿಂದ ನಮಗೆ ಅವರು ಕೇಳುವ ಪ್ರಶ್ನೆಗಳೂ ಅರ್ಥವಾಗುತ್ತವೆ ಎಂಬ ಮತ್ತೊಂದು ಕಲ್ಪನೆ ಇಲ್ಲಿರುತ್ತದೆ. ನಾನು ಇಲ್ಲಿ ಒತ್ತಿ ಹೇಳಬಯಸುವುದೇನೆಂದರೆ, ಈ ಭಾವನೆಯು ತಪ್ಪು. ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಯಾವ ರೀತಿಯಲ್ಲಿಯೂ ಸಹ ಅರ್ಥಮಾಡಿಕೊಂಡಿಲ್ಲ.

ನನ್ನ ಹೇಳಿಕೆಯ ಒಂದು ಬಹುಮುಖ್ಯವಾದ ಇಂಗಿತವೇನೆಂದರೆ, ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯ ಬಗ್ಗೆ ಕೇಳುವ ಪ್ರಶ್ನೆಗಳು ನಮಗೆ ಅವರ ಸಂಸ್ಕೃತಿಯ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ. ನಮ್ಮನ್ನು ಪ್ರಶ್ನಿಸುವವರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ತೃಪ್ತಿಕರವಾದ ಉತ್ತರ ನೀಡಬೇಕಾದರೆ ನಾವು ಉಪನಿಷತ್ತನ್ನಾಗಲಿ, ಪತಂಜಲಿಯನ್ನಾಗಲಿ ಓದಬೇಕಾಗಿಲ್ಲ. ನಮ್ಮದೇ ಆದ ‘ದಶ ಕಮಾಂಡ್ಮೆಂಟ್ಗೇಳನ್ನೂ’ ಅಥವಾ ಹಿಂದುಯಿಸಂನ ಥಿಯಾಲಜಿಯನ್ನು ತಪ್ಪುತಪ್ಪಾಗಿ ಹೊಸೆಯುವ ಅವಶ್ಯಕತೆ ಇಲ್ಲ. ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ. ಇದನ್ನು ಸರಳವಾಗಿ ಇಡುವುದಾದರೆ: ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಪಾಶ್ಚಾತ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ, ಮೊದಲು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಿ.

ಭಾರತದ ಸಮಾಜ ಸುಧಾರಕರು ಅರ್ಥಮಾಡಿಕೊಳ್ಳಲು ಸೋತಿದ್ದು ಇದನ್ನೆ. ನಾವೂ ಸಹ ಇದನ್ನು ಇನ್ನೂ ಅರ್ಥಮಾಡಿಕೊಂಡಿಲ್ಲ. ಪಾಶ್ಚಾತ್ಯರು ಕೇಳುವ ಪ್ರಶ್ನೆಗಳ ಮೂಲವು ಅವರ ಸಂಸ್ಕೃತಿಯಲ್ಲೇ ಇದೆ. ಆದ್ದರಿಂದ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಮ್ಮ ಮಕ್ಕಳು ಆತ್ಮಸ್ಥೈರ್ಯದಿಂದ ಬದುಕಬೇಕಾದರೆ, ನಾವು ಪಾಶ್ಚಾತ್ಯ ಸಂಸ್ಕೃತಿಯ ಕುರಿತು ಅವರಿಗೆ ತಿಳಿಸಿಕೊಡಬೇಕು. ಪಾಶ್ಚಾತ್ಯರು ಈ ರೀತಿಯ ಪ್ರಶ್ನೆಗಳನ್ನು ಏಕೆ ಕೇಳುತ್ತಾರೆ ಮತ್ತು ಈ ಪ್ರಶ್ನೆಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ನಾವು ಅವರಿಗೆ ಸ್ಪಷ್ಟವಾಗಿ ಅರ್ಥಮಾಡಿಸಲೇಬೇಕು. ಈಗ ಸದ್ಯಕ್ಕೆ ಅವರು ಇವೆರೆಡನ್ನೂ ಅರ್ಥಮಾಡಿಕೊಳ್ಳಲಾರರು. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಅವರಿಗೆ ಕಲಿಸಿಕೊಡಬೇಕಾಗಿಲ್ಲ. ಸಮಂಜಸವಾದ ಉತ್ತರವನ್ನು ಅವರೇ ಕಂಡುಕೊಳ್ಳುತ್ತಾರೆ. ಆದರೆ ನಾವು ಅವರಿಗೆ ಅವಶ್ಯಕವಾಗಿ ಅರ್ಥಮಾಡಿಸಬೇಕಾಗಿರುವುದೇನೆಂದರೆ, ‘ಹಿಂದುಗಳು ಗಾಡನ್ನು ನಂಬುತ್ತಾರೆಯೆ?’, ‘ಹಿಂದುಗಳ ರಿಲಿಜನ್ನಿನ ಚಿನ್ಹೆ ಯಾವುದು?’, ‘ಯಾಕೆ ಹಿಂದುಗಳು ಮಂಗ ಮತ್ತು ಶಿಶ್ನವನ್ನು ಪೂಜಿಸುತ್ತಾರೆ?’ ಎಂಬಂತಹ ಪ್ರಶ್ನೆಗಳನ್ನು ಪಾಶ್ಚಾತ್ಯರು ಕೇಳುವಾಗ ಅವರು ಏನನ್ನು ಕೇಳುತ್ತಿದ್ದಾರೆ ಎಂಬುದನ್ನು.

ಒಟ್ಟಿನಲ್ಲಿ ಹೇಳುವುದಾದರೆ, ಪಶ್ಚಿಮದಲ್ಲಿ ನೆಲೆಸಿರುವ ಭಾರತೀಯರಿಗೆ, ‘ಹಿಂದೂಯಿಸಂ’ನ್ನು ಒಂದು ಅಧಿಕೃತ ಮತ್ತು ಕಠಿಣವಾದ ನಿಯಮಗಳಿಂದ ಕೂಡಿದ ‘ರಿಲಿಜನ್ನ’ನ್ನಾಗಿ ಮಾರ್ಪಡಿಸುವಂಥ ಒತ್ತಡ ಬರುತ್ತದೆ. ನಮ್ಮ ಸುಧಾರಣವಾದಿಗಳ ಮೇಲೂ ಇದೇ ಒತ್ತಡವಿತ್ತು. ಭಿನ್ನತೆ ಮತ್ತು ವಿವಿಧತೆಯನ್ನು ಹೊಂದಿರುವ ಭಾರತೀಯ ಸಂಪ್ರದಾಯಗಳ ನಡುವೆ ಈ ರೀತಿಯ ಹಿಂದೂಯಿಸಂಗೂ ಸ್ಥಾನವಿದೆಯಾದರೂ, ಈ ‘ಹಿಂದುಯಿಸಂ’ ನಮ್ಮ ಮಕ್ಕಳ ಮುಂದಿರುವ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸುವುದೂ ಇಲ್ಲ, ಪರಿಹರಿಸುವುದೂ ಇಲ್ಲ. ನಿಧಾನವಾಗಿಯಾದರೂ ಈ ಸವಾಲು ಮತ್ತು ಸಮಸ್ಯೆಗಳು ಇಂದು ಪ್ರತಿಯೋರ್ವ ಭಾರತೀಯನ ಮುಂದೆಯೂ ಸಾಲುಗಟ್ಟಿ ನಿಲ್ಲಲು ಆರಂಭಿಸಿವೆ. ನಮ್ಮ ಮತ್ತು ನಮ್ಮ ಹಿಂದಿನ ತಲೆಮಾರಿನಂತೆ ನಮ್ಮ ಮಕ್ಕಳ ತಲೆಮಾರೂ ಕೂಡ ಪಾಶ್ಚಾತ್ಯ ಸಂಸ್ಕೃತಿಗೆ ಅಥವಾ ಅದು ಎತ್ತುವ ಸವಾಲುಗಳಿಗೆ ಹೇಗೆ ಸ್ಪಂದಿಸಬೇಕೆಂಬುದನ್ನು ಇನ್ನೂ ಅರ್ಥಮಾಡಿಕೊಂಡಿಲ್ಲ. ಈ ಪರಿಸ್ಥಿತಿಯಲ್ಲಿ ನಮ್ಮ ಮೂಲಭೂತ ಕರ್ತವ್ಯವೇನೆಂದರೆ ನಮ್ಮ ಮಕ್ಕಳಿಗೆ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ತಿಳಿಸುವುದು ಹಾಗೂ ಅದೇ ವೇಳೆಗೆ ಅವರಿಗೆ ನಮ್ಮ ಸಂಪ್ರದಾಯಗಳನ್ನು ವರ್ಗಾಯಿಸುವುದು. ಇದುವರೆಗೂ ಇವೆರೆಡರಲ್ಲೂ ನಾವು ಎಷ್ಟು ಯಶಸ್ವಿಯಾಗಿದ್ದೇವೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments