ವಿಷಯದ ವಿವರಗಳಿಗೆ ದಾಟಿರಿ

ಜೂನ್ 21, 2017

1

ಯೋಗದ ಮಹತ್ವ ಹಾಗೂ ಅರಿವು

‍ನಿಲುಮೆ ಮೂಲಕ

– ಗೀತಾ ಹೆಗ್ಡೆ

ಈ ದಿನ ಅಂತಃರಾಷ್ಟ್ರೀಯ ಯೋಗ ದಿನ. ಇತ್ತೀಚಿನ ದಿನಗಳಲ್ಲಿ ಈ ಯೋಗದ ಬಗ್ಗೆ ತುಂಬಾ ಪ್ರಚಾರ ಹಾಗೂ ಕಲಿಯುವವರು ಕೂಡಾ ಹೆಚ್ಚಾಗುತ್ತಿರುವುದು ಸಂತೋಷದ ಸಂಗತಿ. ಮತ್ತು ಪುರಾತನ ಕಾಲದ ಈ ವಿದ್ಯೆ ಜನ ಮೈಗೂಡಿಸಿಕೊಂಡು ಯೋಗದ ಮಹತ್ವ ತಿಳಿಯುವತ್ತ ದಾಪುಗಾಲು ಹಾಕುತ್ತಿದ್ದಾರೆ. ಹಾಗೂ ದಿನ ಹೋದಂತೆ ಆರೋಗ್ಯದತ್ತ ಕಾಳಜಿ, ಆಸ್ತೆ, ಔಷಧಿಗಳಿಂದ ಆಗುವ ದುಷ್ಪರಿಣಾಮಗಳು, ಅಯ್ಯೋ! ಹೀಗೆ ಇದ್ದರೆ ಮುಂದೇನಾಗುತ್ತದೊ ಅನ್ನುವ ಮನದೊಳಗಿನ ಗಾಬರಿ ಜನ ಆಹಾರ, ವ್ಯಾಯಾಮ, ವಾಕಿಂಗು, ಯೋಗದ ಕಡೆ ಹೆಚ್ಚು ಹೆಚ್ಚು ವಾಲುತ್ತಿರುವುದು ಹಾಗೂ ತಿಳಿದುಕೊಳ್ಳುವ ಆಸಕ್ತಿ ಅಧಿಕವಾಗುತ್ತಿರುವುದನ್ನು ಕಾಣಬಹುದು.

ಆಹಾರದ ಕ್ರಮ ತಿಳಿದುಕೊಳ್ಳಲು ಹಲವಾರು ಮಾರ್ಗವಿದೆ. ವಾಕಿಂಗು ಕಣ್ಣೆದುರಿಗೆ ಕಾಣುವಂತಹುದು.. ಆದರೆ ಈ ವ್ಯಾಯಾಮದ ಕ್ರಮ ಹಾಗೂ ಯೋಗದ ಸಂಪೂರ್ಣ ಅರಿವು ತಿಳಿಯಲು ಆಯಾ ಕ್ಲಾಸಿಗೆ ಹೋಗಿ ಕ್ರಮಬದ್ಧವಾಗಿ ಕಲಿತರೆ ಮಾತ್ರ ಪ್ರಯೋಜನ ಮತ್ತು ಇದರಿಂದ ಅಡ್ಡ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾಧ್ಯ. ಕಾರಣ ನಮ್ಮಷ್ಟಕ್ಕೇ ಗುರುವಿನ ಮಾರ್ಗದರ್ಶನವಿಲ್ಲದೆ ಕಲಿತಲ್ಲಿ ಆಗುವ ಅವಾಂತರ ಹಲವಾರು. ” ಅಯ್ಯೋ! ನನ್ನ ಸೊಂಟ ಉಳುಕಿಹೋಯಿತು, ಕಾಲು ಹಿಡಿದುಕೊಂಡು ಬಿಡ್ತು, ಕುತ್ತಿಗೆ ತಿರುಗಿಸೋಕೆ ಆಗ್ತಿಲ್ಲ ಕಂಡ್ರೀ… ಹೀಗೆ ಹಲವಾರು ಮಾತುಗಳನ್ನು ಹೇಳಬೇಕಾಗಬಹುದು. “

ಅಂದರೆ ಕ್ಲಾಸಿಗೆ ಹೋಗಿ ಕಲಿತರೆ ಏನೂ ಆಗೋದಿಲ್ವಾ? ಅಂತ ನೀವು ಕೇಳಬಹುದು. ಆಗುತ್ತದೆ ತೊಂದರೆಗಳು ಹಲವಾರು. ಇದ್ದಕ್ಕಿದ್ದಂತೆ ಮೊದಲೆರಡು ದಿನ ತಲೆ ನೋವು, ವಾಂತಿ, ಸ್ವಲ್ಪ ಮೈಕೈ ನೋವು, ಸುಸ್ತು ಇತ್ಯಾದಿ. ಅವರವರ ದೇಹ ಪ್ರಕೃತಿಗೆ ತಕ್ಕಂತೆ ಹೊಸದರಲ್ಲಿ ಪರಿಣಾಮ ಗೋಚರಿಸುತ್ತದೆ. ಯಾಕೆ ಹೀಗೆ? ಅದರಿಂದ ಪದೆ ಪದೆ ಏನಾದರೂ ತೊಂದರೆ ಆಗುತ್ತಾ? ನನ್ನ ಹತ್ತಿರ ಇದ್ಯಾವುದು ಮಾಡೋಕೇ ಆಗಲ್ಲಪ್ಪಾ ಅಂತ ಕ್ಲಾಸಿಗೆ ಹೋದ ಒಂದೆರಡು ದಿನಕ್ಕೆ ಬಿಟ್ಟವರೂ ಇದ್ದಾರೆ. ಆದರೆ ಈ ಅಭಿಪ್ರಾಯ ತಪ್ಪು.

ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ. ಹೊಸದರಲ್ಲಿ ಎರಡು ದಿನ ತೀವ್ರವಾದ ತಲೆ ನೋವು ಹಗಲೂ ರಾತ್ರಿ ಅನುಭವಿಸಿದ್ದೇನೆ.  ಗುರುಗಳನ್ನು ಕೇಳಿದಾಗ “ಇಂತಹ ತೊಂದರೆಗಳಿಗೆ ಕಾರಣ ನಮ್ಮ ದೇಹದಲ್ಲಿರುವ ಕೆಟ್ಟ ಗಾಳಿ ಹೊರ ಹೋಗುತ್ತಿದ್ದಂತೆ ದೇಹ ಪ್ರತಿಭಟಿಸಲು ಪ್ರಾರಂಭಿಸುತ್ತದೆ. ಹೊಸದಕ್ಕೆ ಒಗ್ಗಿಕೊಳ್ಳಲು ದೇಹ ಶ್ರಮ ಪಡುತ್ತದೆ. ಸುಖೀ ದೇಹವಲ್ಲವೇ. ಆರಾಮವಾಗಿ ತಿಂದುಂಡುಕೊಂಡು ಬೆಳೆದ ದೇಹ ಮೈ ಬಗ್ಗಿಸು ಅಂದರೆ ಅದಕ್ಕೂ ಸೋಂಬೇರಿತನ. ಒಲ್ಲೆ ಒಲ್ಲೆ ಅನ್ನುತ್ತದೆ ಹೊಸದರಲ್ಲಿ. ಆದರೆ ನಮ್ಮ ಮನಸ್ಸು ದೃಢ ನಿಶ್ಚಯ ಹೊಂದಿರಬೇಕು. ಆಗಲಿ ಅದೇನೆ ಆದರೂ ನಾನು ಕ್ಲಾಸಿಗೆ ಹೋಗೋದು ತಪ್ಪಿಸಲ್ಲ. ಬೆಳಗ್ಗೆ ಏಳಲು ಸೋಂಬೇರಿತನ ಮಾಡಲ್ಲ. ನನಗೆ ನನ್ನ ಆರೋಗ್ಯ ಮುಖ್ಯ. ಯಾಕೆ ನನ್ನ ಹತ್ತಿರ ಕಲಿಯಲು ಸಾಧ್ಯ ಇಲ್ಲ… ನೋಡೇಬಿಡ್ತಿನಿ ಅನ್ನುವಷ್ಟು ನಮ್ಮ ಮನಸ್ಸು ಹಠಕ್ಕೆ ಶರಣಾಗಬೇಕು. ಆದರೆ ಈ ರೀತಿ ತೊಂದರೆ ಎಲ್ಲರಿಗೂ ಆಗುವುದಿಲ್ಲ ತಿಳಿದಿರಲಿ.” ಅಂದರು.

ಇನ್ನು ಈ ಯೋಗ ಕ್ಲಾಸಿಗೆ ಹೋಗಿ, ಕಲಿತು ಆರೋಗ್ಯ ಸುಧಾರಿಸಿಕೊಳ್ಳಿ, ಯಾಕೆ ಇಷ್ಟೊಂದು ಕಷ್ಟ ಪಡ್ತೀರಾ, ಇಲ್ಲೆ ಹತ್ತಿರದಲ್ಲಿ ಇದೆ, ಬೇಕಾದರೆ ನಾನೇ ಕರೆದುಕೊಂಡು ಹೋಗುತ್ತೇನೆ ಬನ್ನಿ ಅಂದರೆ ಕೆಲವರ ಪ್ರತಿಕ್ರಿಯೆ ; ಏನ್ರಿ ನನಗಿಷ್ಟು ವಯಸ್ಸಾಯಿತು. ಅಲ್ಲಿ ಏನೇನೋ ಮಾಡಿಸ್ತಾರೆ, ಟೀವಿಯಲ್ಲಿ ನೋಡಿಲ್ವಾ?  ಯಪ್ಪಾ ನನ್ನ ಹತ್ತಿರ ಅದೆಲ್ಲಾ ಮಾಡೋಕೇ ಆಗಲ್ಲಪ್ಪಾ. ಮತ್ತೆ ಕೆಲವರು ನನಗೆ ಟೈಮೇ ಇರೋದಿಲ್ಲ.. ಮಕ್ಕಳನ್ನು ನೋಡಿಕೊಳ್ಳೋದೇ ಸಾಕಾಗೋಗುತ್ತದೆ, ಹೋಂ ವರ್ಕ ಮಾಡಿಸಬೇಕು, ಎಷ್ಟೆಲ್ಲಾ ಕೆಲಸ.  ಮತ್ತೊಂದಷ್ಟು ಜನ ನನಗೆ ಈ ಬಾಬಾಗಳು, ಗುರುಗಳು ಇವರೆಲ್ಲರ ಮೇಲೆ ನಂಬಿಕೆನೆ ಇಲ್ಲ. ಯಾವ ಪ್ರಯೋಜನ ಇಲ್ಲ ಅಂತ ಸಾರಾಸಗಟಾಗಿ ತಿರಸ್ಕರಿಸಿದವರೂ ಇದ್ದಾರೆ. ಅವರ ತಪ್ಪು ಕಲ್ಪನೆ ಅವರಿಗೆ ಅರ್ಥ ಆಗಬೇಕಷ್ಟೆ. ಹೀಗೆ ಹಲವರದು ಹಲವಾರು ಸಬೂಬು.

ಇವೆಲ್ಲ ಎಲ್ಲಾ ಸಂಸಾರದಲ್ಲೂ ಇದ್ದಿದ್ದೇ. ಆದರೆ ಇವುಗಳ ಮಧ್ಯೆ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಪ್ರತಿಯೊಬ್ಬರೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ. ಯೋಗ ಮಾಡಲು ಬೆಳಗಿನ ಜಾವವೇ ಆಗಬೇಕೆಂದೇನಿಲ್ಲ : ಮಧ್ಯಾಹ್ನ ಹನ್ನೆರಡು ಗಂಟೆಯ ಒಳಗೆ, ಸಾಯಂಕಾಲ ನಾಲ್ಕರ ನಂತರ ಸುಮಾರು ಎಂಟು ಗಂಟೆಯವರೆಗೂ ಸಮಯ ತೆಗೆದುಕೊಳ್ಳಬಹುದು. ಏಕೆಂದರೆ ಈಗಿನ ಧಾವಂತದ ಜೀವನದಲ್ಲಿ ಯೋಗ ಮಾಡಲು ಒಂದರಿಂದ ಒಂದೂವರೆ ಗಂಟೆ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಅನೇಕರಿಗೆ ಕಷ್ಟ. ಆದರೆ ಇಲ್ಲೂ ಕೂಡಾ ಯೋಗ ಮಾಡುವ ಕ್ರಮ ಎರಡು ಭಾಗಗಳಾಗಿ ವಿಂಗಡಿಸಿಕೊಂಡು ಬೆಳಿಗ್ಗೆ ಹಾಗೂ ಸಾಯಂಕಾಲ ಸೇರಿ ಮಾಡಬಹುದು.

ಅದು ಹೇಗೆಂದರೆ ಬೆಳಗಿನ ಹೊತ್ತಲ್ಲಿ ಹದಿನೈದು ನಿಮಿಷ ವಾಕಿಂಗ್, ನಂತರ ಧ್ಯಾನ, ಫ್ರೀ ಎಕ್ಸರ್ಸೈಸ್, ಸೂರ್ಯ ನಮಸ್ಕಾರ ಸಾಯಂಕಾಲ ಕೆಲವು ಆಸನಗಳು, ಪ್ರಾಣಾಯಾಮ, ಶವಾಸನ. ಇಷ್ಟವಾದಲ್ಲಿ ಕೆಲವು ಶ್ಲೋಕಗಳು ಅಥವಾ ಜಪ ಹೀಗೆ ನಮ್ಮ ಸಮಯದ ಅನುಕೂಲಕ್ಕೆ ತಕ್ಕಂತೆ ನಾವೇ ಇವುಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಯೋಗ ಮಾಡುವ ಮೊದಲು ಕನಿಷ್ಠವೆಂದರೂ ಮೂರು ಗಂಟೆ ಹೊಟ್ಟೆಗೆ ಏನೂ ತೆಗೆಕೊಳ್ಳಬಾರದು. ಅದರಲ್ಲೂ ಆಸನಗಳು, ಪ್ರಾಣಾಯಾಮ ಮಾಡುವ ಹೊತ್ತಲ್ಲಿ ಇದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂಬುದು ಯೋಗದ ನಿಯಮ. ಯೋಗ ಮುಗಿದ ಮೇಲೆ ಹೊಟ್ಟೆ ತುಂಬ ನೀರು ಕುಡಿದು ಅರ್ಧ ಗಂಟೆಯ ನಂತರ ಆಹಾರ ತೆಗೆದುಕೊಳ್ಳಬಹುದು. ಸ್ನಾನ ಮಾಡಬಹುದು. ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಲ್ಲಿ ಮಾಡಬಹುದು.

ಈಗಿನ ಸಾರ್ವತ್ರಿಕ ಕಾಯಿಲೆ ಈ ಶುಗರ್. ಈ ಕಾಯಿಲೆ ಇರುವವರಿಗೆ ಹಸಿವು ತಡೆದುಕೊಳ್ಳುವುದು ಕಷ್ಟ. ಪ್ರತಿ ಎರಡು ಗಂಟೆಗೊಂದಾವರ್ತಿ ಆಹಾರ ತೆಗೆದುಕೊಳ್ಳಬೇಕೆನ್ನುವುದು ಡಾಕ್ಟರ್ ಉವಾಚ. ಇದು ಹೌದು. ಅದಕ್ಕಾಗಿ ಈ ಕಾಯಿಲೆ ಇರುವವರು ಯೋಗ ಮಾಡುವ ಎರಡು ಗಂಟೆ ಮೊದಲು ಲಘು ಆಹಾರ ಅಂದರೆ ಬೇಗ ಜೀರ್ಣವಾಗುವಂಥ ಆಹಾರ ಸೇವಿಸಿದಲ್ಲಿ ಯೋಗ ಮಾಡಲು ತೊಂದರೆಯಾಗುವುದಿಲ್ಲ.

ಮತ್ತೆ ಈ ಯೋಗ ಕಲಿತುಬಿಟ್ಟರೆ ನಮಗೆ ಯಾವ ರೋಗ ಬರುವುದೇ ಇಲ್ಲವೆ? ಯಾವ ಮಾತ್ರೆಗಳೂ ಬೇಡವೆ? ಡಾಕ್ಟರ್ ನೋಡುವ ಪ್ರಮೇಯವಿಲ್ಲವೆ? ಎಂದು ಹಲವರ ಪ್ರಶ್ನೆ. ನಿಜ ಇದರ ಬಗ್ಗೆ ವಿಚಾರ ಮಾಡಬೇಕು, ಹಾಗೆ ಆರೋಗ್ಯದ ಕುರಿತು ಎಚ್ಚರಿಕೆಯೂ ಅಗತ್ಯ. ಏಕೆಂದರೆ ಕೆಲವು ಕಾಯಿಲೆಗಳು ಬರುತ್ತವೆ ಯಾವಾಗ? ಅದು ಆನುವಂಶಿಕವಾಗಿದ್ದರೆ ಒಂದು, ಇನ್ನೊಂದು ಯೋಗ ಮಾಡಿಯೂ ಆಹಾರ ಜೀವನ ಕ್ರಮ ಸರಿಯಾಗಿ ಅನುಸರಿಸದೇ ಇದ್ದರೆ, ಹೆಚ್ಚಿನ ಮಾನಸಿಕ ತೊಳಲಾಟ ಇರುವಾಗ ಬರಬಹುದು. ಆದರೆ ಚಿಕ್ಕ ವಯಸ್ಸಿನಿಂದ ಯೋಗದಲ್ಲಿ ತೊಡಗಿಸಿಕೊಂಡವರಿಗೆ ರೋಗದಿಂದ ಮುಕ್ತಿ ಹೊಂದುವ ಅವಕಾಶ ಯೋಗದಲ್ಲಿ ಇದೆ. ಅವರಿಗೆ ಸಾಮಾನ್ಯವಾಗಿ ಆಗಾಗ ಕಾಡುವ ಕಾಯಿಲೆಗಳಿಂದಂತೂ ಖಂಡಿತಾ ಮುಕ್ತಿ ಸಿಕ್ಕೇ ಸಿಗುತ್ತದೆ. ಹೆಚ್ಚಿನ ಜನ ವಯಸ್ಸಾದ ಮೇಲೆ ಏನಾದರೂ ಕಾಯಿಲೆ ಬಂದಾದ ಮೇಲೆ ವಾಕಿಂಗು ಮತ್ತು ಯೋಗ ಕಲಿಯುವ ಮನಸ್ಸು ಮಾಡುತ್ತಾರೆ. ಇದರಿಂದ ಯಾವಾಗಾದರೂ ಜ್ವರ, ಅಲರ್ಜಿ ಅಕಸ್ಮಾತ್ ಬಂದಾಗ ಕೆಲವು ವಿಟಮಿನ್ ಕೊರತೆ ಕಂಡಾಗ ತತ್ಕಾಲಕ್ಕೆ ಮಾತ್ರ ಔಷಧಿಯ ಅಗತ್ಯ ಬೇಕಾಗುತ್ತದೆ. ಆದರೆ ದೀರ್ಘ ಕಾಯಿಲೆಗಳಾದ ಅರ್ಥ್ರೈಟೀಸ್, ಶುಗರ್, ಬಿಪಿ, ಅಸ್ತಮಾ, ಎಸಿಡಿಟಿ ಇತ್ಯಾದಿಗಳಿಗೆ ಯಾವ ಮಾತ್ರೆಗಳಿಲ್ಲದೆ ಕೇವಲ ಆಹಾರ ಪಥ್ಯ, ವಾಕಿಂಗ, ಯೋಗ ನಿಯಮಿತವಾಗಿ ಮಾಡುತ್ತಿದ್ದರೆ ನೆಮ್ಮದಿಯಿಂದ ಜೀವಿಸಬಹುದು. ಆದರೆ ಆಯಾ ಕಾಯಿಲೆಗೆ ತಕ್ಕಂತೆ ಪ್ರತೀ ಬಾರಿ ರಕ್ತ, ಮೂತ್ರ ಪರೀಕ್ಷೆ ಇತ್ಯಾದಿ ಮಾಡಿಸಿ ರೋಗ ಕಂಟ್ರೋಲ್ನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ ಮಾರ್ಗ. ಏಕೆಂದರೆ ದೇಹದೊಳಗಿನ ಸಮಾಚಾರ ಇವುಗಳಿಂದ ಮಾತ್ರ ಗೊತ್ತಾಗುತ್ತದೆ. ಮನಸ್ಸಿನ ಆತಂಕವೂ ದೂರವಾಗುತ್ತದೆ. ಮಾತ್ರೆಗಳಿಂದ ದೂರ ಇದ್ದು ಅಡ್ಡ ಪರಿಣಾಮ ಆಗುವುದರಿಂದ ಬಚಾವಾಗ್ತಾ ಇದ್ದೇನೆ ಅನ್ನುವ ಖುಷಿ ಕೂಡಾ ಅನುಭವಿಸಬಹುದು. ಹಲವಾರು ಕಾಯಿಲೆ ಅನುಭವಿಸಿ ಯಾವ ಔಷಧಿಯಿಂದಲೂ ವಾಸಿಯಾಗದವುಗಳನ್ನು ಯೋಗ ಕಲಿತು ಮಾಡುತ್ತಿರುವುದರಿಂದ ಆ ಸಮಸ್ಯೆಯಿಂದ ಮುಕ್ತಿ ಹೊಂದಿದ್ದೇನೆ. ಇದು ನಾನು ಅನುಸರಿಸುತ್ತಿರುವ ಆರೋಗ್ಯದ ಕ್ರಮ.

ಆಗಲೇ ಹೇಳಿದೆ.. ಎಲ್ಲರೂ ಕ್ಲಾಸಿಗೆ ಹೋಗಿ ಯೋಗ ಕಲಿತರೆ ಒಳ್ಳೆಯದೆಂದು. ಇಲ್ಲಿ ಯೋಗ ಕಲಿಸುವ ಗುರುಗಳು ಪೂರ್ಣ ಪರಿಣತಿ ಹೊಂದಿದವರಾಗಿದ್ದರೆ ಹೆಚ್ಚಿನ ಅನುಕೂಲ. ಏಕೆಂದರೆ ಇತ್ತೀಚೆಗೆ ಅರ್ಧಂಬರ್ಧ ಕಲಿತವರೂ ಕೂಡಾ ಯೋಗ ಕಲಿಸಲು ಶುರು ಮಾಡಿದ್ದಾರೆ. ಇದೊಂದು ಕಮರ್ಷಿಯಲ್ ವಿದ್ಯೆ ಅಲ್ಲ. ಯೋಗದಲ್ಲಿ ಹೇಗೆ ದೇಹವನ್ನು ಸುಸ್ತಿತಿಯಲ್ಲಿ ಇಡಲು ಫ್ರೀ ಎಕ್ಸರ್ಸೈಸ್, ಆಸನಗಳು, ಪ್ರಾಣಾಯಾಮ ಇವೆಯೋ ಹಾಗೆ ಧ್ಯಾನದಲ್ಲಿ ಮನಸ್ಸನ್ನು ಏಕಾಗ್ರತೆಯಲ್ಲಿ ಕಟ್ಟಿಹಾಕಿ ನಮ್ಮನ್ನು ತನ್ಮಯಗೊಳಿಸುವ ಕಲೆ ಪರಿಣಿತ ಗುರುವಿಗೆ ಮಾತ್ರ ಸಾಧ್ಯ. ನಾವು ಧ್ಯಾನ ಮಾಡುವಾಗ ಅವರು ಕ್ರಮಬದ್ಧವಾಗಿ ತಮ್ಮ ವಾಕ್ಜರಿಯಲ್ಲಿ ಮನಸ್ಸು ತಲ್ಲೀನವಾಗುವಂತೆ ಮಾಡುತ್ತಾರೆ. ಹಾಗೆ ಪ್ರಾಣಾಯಾಮದ ನಂತರ ಮಾಡುವ ಶವಾಸನ ಈ ಸಮಯದಲ್ಲೂ ಕೂಡಾ ನಾವೆಲ್ಲಿದ್ದೇವೆ ಎಂಬುದನ್ನೂ ಕೂಡಾ ಮರೆಸುವಷ್ಟು, ನಾವೆಲ್ಲೋ ಕಳೆದೇ ಹೋಗಿದ್ದೆವೊ ಅನ್ನುವಷ್ಟರ ಮಟ್ಟಿಗೆ ನಮ್ಮ ಮನಸ್ಸು ಇಡೀ ದೇಹದಲ್ಲಿ ಆ ಒಂದು ಶಕ್ತಿ ಉತ್ಪನ್ನ ಮಾಡುವ ಕಲೆ ಆ ಗುರುವಿಗೆ ಗೊತ್ತಿರುತ್ತದೆ. ಇಂಥಹ ಗುರುವಿನಲ್ಲಿ ಯೋಗ ಕಲಿಯುವ ಭಾಗ್ಯ ನನಗೆ ದೊರಕಿತ್ತು. ಆದರೆ ಅವರು ಕಾಲವಾಗಿ ಆರು ವರ್ಷಗಳಾಯಿತು. ಅವರು ಹೇಳುತ್ತಿದ್ದ ಪ್ರವಚನ ಇನ್ನೂ ಕಿವಿಯಲ್ಲಿ ಗುಣಗುಣಿಸುತ್ತಿರುವುದು ಮಾತ್ರ ಸತ್ಯ.

ಹಾಗೆ ಈ ಯೋಗ ಕಲಿಯಲು ವಯಸ್ಸಿನ ಅಂತರವಿಲ್ಲ. ಜಾತಿ ಭೇದವಿಲ್ಲ. ಯಾರು ಬೇಕಾದರೂ ಯಾವ ವಯಸ್ಸಿನಲ್ಲಾದರೂ ಕಲಿಯಬಹುದು. ಆದರೆ ಈ ಯೋಗದ ಬಗ್ಗೆ ಮನಸ್ಪೂರ್ತಿ ನಂಬಿಕೆ ಇರಬೇಕು. ಕಲಿಯುವ ದೃಢ ಸಂಕಲ್ಪ ಮಾಡಿಕೊಂಡೇ ಕ್ಲಾಸಿಗೆ ಸೇರುವುದು ಉತ್ತಮ. ನೋಡೋಣ ಹೋಗಿ ನನ್ನ ಹತ್ತಿರ ಸಾಧ್ಯವಾ ಅನ್ನುವಷ್ಟಾದರೂ ಮನಃಸ್ಥಿತಿ ಇದ್ದರೆ ಸಾಕು. ಮತ್ತೆ ನೀವು ಹಿಂದಿರುಗುವ ಪ್ರಮೇಯವೇ ಬರುವುದಿಲ್ಲ. ಕೋಟ್ಯಾಂತರ ಮಂದಿ ಕಲಿಯುತ್ತಿರುವಾಗ ನನಗೆ ಯಾಕೆ ಆಗೋದಿಲ್ಲ. ಆದಷ್ಟು ಯಾವ ಔಷಧಿ ಮಾತ್ರೆಗಳಿಲ್ಲದೆ ರೋಗವನ್ನು ಗುಣ ಮಾಡಿಕೊಳ್ಳುವ, ತಡೆಗಟ್ಟುವ, ಮನಸ್ಸು ಹದ್ದುಬಸ್ಥಿನಲ್ಲಿಡುವ ಇದೊಂದು ಕ್ರಿಯೆ, ನಾನೂ ಕಲಿಯಬೇಕೆನ್ನುವ ಛಲವಿರಬೇಕು. ಯೋಗ ಅಂದರೆ ಏನು? ಅದರಿಂದ ಏನು ಉಪಯೋಗ? ಎಂಬುದನ್ನು ಕ್ಲಾಸಿಗೆ ಸೇರುವ ಮುನ್ನ ತಿಳಿದುಕೊಳ್ಳುವುದು ಉತ್ತಮ. ಈಗಂತೂ ಯೋಗದ ಕುರಿತಾದ ಕಾರ್ಯಕ್ರಮಗಳು ವಾಹಿನಿಗಳಲ್ಲಿ ಭಿತ್ತರವಾಗುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಪಟ್ಟ ಪುಸ್ತಕಗಳೂ ಸಿಗುತ್ತವೆ. ಉಚಿತವಾಗಿ ಕೆಲವರು ಯೋಗವನ್ನು ಹೇಳಿಕೊಡುವವರೂ ಇದ್ದಾರೆ. ಕ್ಲಾಸಿಗೆ ಹೋಗಿ ಕಲಿಯಲಾಗದಿದ್ದವರು ಯೋಗ ಹೇಳಿಕೊಡುವವರನ್ನು ಮನೆಗೇ ಕರೆಸಿ ಮನೆಯಲ್ಲಿ ಕೂಡಾ ಯೋಗ ಮಾಡುವ ಕ್ರಮವನ್ನು ಹೇಳಿಸಿಕೊಳ್ಳಬಹುದು. ಈ ರೀತಿಯ ಅನುಕೂಲವೂ ಇದೆ ಈಗ. ದಿನ ನಿತ್ಯ ಒಂದು ಗಂಟೆ ಯೋಗ, ಐದು ತಾಸು ನಿದ್ರೆ ಮಾಡಿದರೆ ಸಾಕು ದಿನವೆಲ್ಲ ಉತ್ಸಾಹಿಯಾಗಿ ಇರಬಹುದು.

ಎಲ್ಲರಲ್ಲೂ ಒಂದು ಕುತೂಹಲವಿದ್ದೇ ಇರುತ್ತದೆ. ಅದು ಏನೆಂದರೆ ಕ್ಲಾಸಿಗೆ ಸೇರಿದ ದಿನದಿಂದಲೇ ಎಲ್ಲವನ್ನೂ ಮಾಡಿಸುತ್ತಾರಾ? ಹೇಗಪ್ಪಾ ಮಾಡೋದು? ಅಲ್ಲಿ ಸೀರೆ ಉಟ್ಟು ಮಾಡೋಕೆ ಆಗೋದಿಲ್ಲ, ನನಗೆ ಡ್ರೆಸ್ ಹಾಕಿ ಅಭ್ಯಾಸ ಇಲ್ಲ ಇತ್ಯಾದಿ. ನಿಜ ಈ ಆತಂಕ ಸ್ವಾಭಾವಿಕ. ಆದರೆ ಅಲ್ಲಿ ಈ ರೀತಿ ಪರಿಸ್ಥಿತಿ ಎದುರಿಸುವ ಪ್ರಮೇಯವೇ ಇರುವುದಿಲ್ಲ. ಸೀರೆ ಉಡುವವರು ಒಳಗಡೆ ಒಂದು ಪಾಯಿಜಾಮಾ ಹಾಕಿಕೊಂಡರಾಯಿತು.

ಮೊದಲ ದಿನ ನೀವು ಹೋದಾಗ ನಿಮಗೆ ಎಲ್ಲರ ಪರಿಚಯ ಮಾಡಿಸುತ್ತಾರೆ. ಯಾವ ರೀತಿ ಕುಳಿತುಕೊಳ್ಳಲು ಸಾಧ್ಯವೊ ಹಾಗೆ ಕುಳಿತುಕೊಳ್ಳಿ, ಬೇಕಾದರೆ ಚೇರ್ ಮೇಲೆ ಕುಳಿತುಕೊಳ್ಳಬಹುದು ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯ ಆಗದವರು. ನಂತರ ಅಲ್ಲಿ ಯೋಗ ಮಾಡುತ್ತಿರುವವರನ್ನು ಗಮನಿಸಿ, ಗುರುಗಳು ಹೇಳುವ ಮಾತು, ಕಲಿಸುವ ಕ್ರಮ, ಪ್ರವಚನದತ್ತ ಗಮನ ಹರಿಸಿ ಎಂದು ಹೇಳುತ್ತಾರೆ. ಒಂದೆರಡು ದಿನದಲ್ಲೇ ಸಾವಕಾಶವಾಗಿ ಒಂದೊಂದೇ ಕಲಿಯುತ್ತ ಸಾಗುವ ನೀವು ಸುಮಾರು ಹದಿನೈದು ಇಪ್ಪತ್ತು ದಿನಗಳಲ್ಲಿ ಒಂದು ಹಂತದವರೆಗೆ ಕಲಿತಿರುತ್ತೀರಾ. ಪ್ರತಿ ದಿನ ಒಂದು ತಾಸು ಯೋಗ ಮಾಡುತ್ತ ಮಾಡುತ್ತ ಹೇಗೆ ಸಮಯ ಹೋಯಿತು ಅನ್ನುವುದು ಗೊತ್ತಾಗುವುದೇ ಇಲ್ಲ. ಅಲ್ಲಿ ಇನ್ನಿತರ ಸ್ನೇಹಿತರ ಪರಿಚಯ, ಅವರ ತೊಂದರೆಗಳು, ಅವರು ಇಲ್ಲಿ ಬಂದು ಹೇಗೆ ಆರೋಗ್ಯ ಸುಧಾರಿಸಿಕೊಂಡರು ಇತ್ಯಾದಿ ವಿಷಯಗಳ ಚರ್ಚೆ ಹಾಗೂ ಆಗಾಗ ವಿಶೇಷ ದಿನಗಳಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮಗಳು ಮನಸ್ಸಿಗೊಂದಿಷ್ಟು ಖುಷಿ ಕೊಡುತ್ತವೆ. ಒಮ್ಮೊಮ್ಮೆ ಕ್ಲಾಸಿನವರೆಲ್ಲ ಸೇರಿ ಆಯೋಜಿಸುವ ಒಂದೆರಡು ದಿನಗಳ ಪ್ರವಾಸ ಅಥವಾ ದೂರದ ಯೋಗ ಕೇಂದ್ರಗಳಲ್ಲಿ ಉಳಿದು ಮೂರು ನಾಲ್ಕು ದಿನ ಕಟ್ಟು ನಿಟ್ಟಿನ ಯೋಗ ಸಾಧನೆಯಲ್ಲಿ ಭಾಗವಹಿಸುವಿಕೆ ಹೀಗೆ ಹಲವಾರು ಸನ್ನಿವೇಶಗಳಲ್ಲಿ ಭಾಗವಹಿಸುವ ಅವಕಾಶ ಒದಗಿ ಬರುತ್ತದೆ. ಹೀಗೆ ಆಯಾ ಕ್ಲಾಸಿನವರು ನಡೆಸುವ ಇನ್ನೂ ಹಲವಾರು ಯೋಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸರ್ಟಿಫಿಕೇಟ್ ಪಡೆದು ಸ್ವಂತ ಕ್ಲಾಸ್ ನಡೆಸಿ ಜೀವನಕ್ಕೆ ದಾರಿ ಮಾಡಿಕೊಳ್ಳುವ ಅವಕಾಶವೂ ಇದೆ ಇಲ್ಲಿ. ಇದಲ್ಲದೆ ನಮ್ಮ ಆಹಾರ ಪದ್ಧತಿಯ ಕುರಿತು ಆಯಾಯಾ ಕ್ಲಾಸಿಗೆ ತಕ್ಕಂತೆ ಮನಸ್ಸು ದೇಹ ಶುದ್ಧಿಗೊಳಿಸುವ ಕ್ರಮವನ್ನು ಕೂಡಾ ಹೇಳಿಕೊಡಲಾಗುತ್ತದೆ.

ಇಷ್ಟೇ ಅಲ್ಲದೆ ಆಗಾಗ ಸತ್ಸಂಗ ಅಂದರೆ ಭಜನೆ, ಹಾಡುಗಳ ಕಾರ್ಯಕ್ರಮ ಏರ್ಪಡಿಸುತ್ತಾರೆ. ದಿನ ನಿತ್ಯ ಕ್ಲಾಸಿಗೆ ಬರುವ ಯಾರಿಂದಲಾದರೂ ಒಂದಲ್ಲಾ ಒಂದು ಹಾಡು ಕೇಳುವುದರೊಂದಿಗೆ ನಮ್ಮಲ್ಲಿ ಈ ಪ್ರತಿಭೆ ಇದ್ದರೆ ಅನಾವರಣ ಮಾಡಬಹುದು. ನುರಿತ ಸಂಗೀತಕಾರರಿಂದ ಕಾರ್ಯಕ್ರಮ ಇದ್ದರಂತೂ ಬಿಡಿ, ಈ ಸಂಗೀತ ಕೇಳುವುದೂ ಒಂದು ಯೋಗವೇ ಸರಿ. ಕೇಳುವ ಕಿವಿಗಳು ನಾದದ ತರಂಗದ ಅಲೆಯಲ್ಲಿ ಮನಸ್ಸನ್ನು ಪ್ರಫುಲ್ಲವಾಗುವುದಂತೂ ದಿಟ. ಇದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುವುದು ನಮಗರಿವಿಲ್ಲದಂತೆ. ಓಂ ಕಾರದ ನಾದ ದಿನ ನಿತ್ಯ ಹೇಳುವುದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಜಾಗೃತಗೊಂಡು ಮನಸ್ಸೆಲ್ಲ ಶಾಂತವಾಗುತ್ತದೆ. ಯೋಗ ಮಂದಿರದ ನಿಷ್ಯಬ್ಧ ವಾತಾವರಣದಲ್ಲಿ ಧ್ಯಾನಾಸಕ್ತರಾಗಿ ಕುಳಿತರೆಂದರೆ ಈ ಅನುಭವ ಪಡೆಯಬಹುದು.

ಆರು ತಿಂಗಳೊ ಅಥವಾ ಒಂದು ವರ್ಷ ಹೀಗೆ ಕ್ಲಾಸಿಗೆ ಹೋಗಿ ಮನಸ್ಸಿಟ್ಟು ಯೋಗ ಕಲಿತಲ್ಲಿ ಆಮೇಲೆ ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು. ಏನಾದರೂ ಮತ್ತೊಂದಷ್ಟು ಕಲಿಬೇಕು, ತಿಳಿದುಕೊಳ್ಳಬೇಕು ಅಥವಾ ಮತ್ತೆ ಕ್ಲಾಸಿಗೆ ಸೇರಿಕೊಳ್ಳಬೇಕೆಂದರೂ ಇಲ್ಲಿ ಅವಕಾವಿದೆ. ತಿಂಗಳ ಫೀಸ್ ಮಾತ್ರ ಕೊಟ್ಟರಾಯಿತು. ಅದೇ ಕ್ಲಾಸಿಗೆ ಸೇರಬೇಕೆನ್ನುವ ನಿಯಮ ಕೂಡಾ ಇಲ್ಲ. ಈ ಯೋಗದಲ್ಲಿ ಹಲವಾರು ವಿಧಗಳಿವೆ ; ಪಥಂಜಲಿ ಯೋಗ, ಅಯ್ಯಂಗಾರ್ ಯೋಗ, ಕುಂಡಲಿನಿ ಯೋಗ ಇತ್ಯಾದಿ. ಆದರೆ ಎಲ್ಲವೂ ಉಸಿರು, ದೇಹದ ವ್ಯಾಯಾಮ, ಮನಸ್ಸು, ಧ್ಯಾನಕ್ಕೆ ಸಂಬಂಧಪಟ್ಟವುಗಳೆ.

ಇನ್ನೊಂದು, ಯೋಗ ಕಲಿಯುವವರಿಗೆ ಒಂದು ದಿನ ಊಟವನ್ನು ಏರ್ಪಡಿಸಿರುತ್ತಾರೆ. ಆದರೆ ಯಾವುದನ್ನು ಬೇಯಿಸದೆ ಗ್ಯಾಸಿಲ್ಲದ ಅಡುಗೆ ಹಿರಿಯ ಯೋಗ ಪಟುಗಳಿಂದ. ನಿಜಕ್ಕೂ ಎಂಥ ಸ್ವಾಧಿಷ್ಟ ಅಡುಗೆ ಅಂದರೆ ನೀವು ತಿಂದು ಸವಿಯ ಬೇಕು ಅದರ ರುಚಿ. ಇದು ವರ್ಷಕ್ಕೆ ಒಮ್ಮೆಯಾದರೂ ಉಣಬಡಿಸುತ್ತಾರೆ. ಇಪ್ಪತ್ತೈದು ಬಗೆಯ ಖಾಧ್ಯಗಳು ಅದರಲ್ಲಿರುತ್ತವೆ. ದೇಹಕ್ಕೆ ಹಿತವಾದ ಈ ಆಹಾರ ಮನಸ್ಸು ಖುಷಿಯಿಂದ ಸವಿಯುವಂತೆ ಮಾಡುತ್ತದೆ.

ಜಾತಿ ಭೇದವಿಲ್ಲದ ನಾವೆಲ್ಲರೂ ಒಂದೇ ಅನ್ನುವ ಭಾವೈಕ್ಯತೆ ಪ್ರತಿಯೊಬ್ಬರ ಮನದಲ್ಲಿ ನೆಲೆಯೂರುವಂತೆ ಮಾಡುವ, ಆರೋಗ್ಯ ಅದಷ್ಟು ಸುಸ್ಥಿತಿಯಲ್ಲಿಡುವ, ದಿನವೆಲ್ಲ ನವ ಚೈತನ್ಯದತ್ತ ಕೊಂಡೊಯ್ಯುವ ಈ ಯೋಗವೆಂಬ ಮಾಂತ್ರಿಕ ಶಕ್ತಿಯನ್ನು ಪಡೆಯಲು ಪ್ರತಿಯೊಬ್ಬರೂ ಮನಸ್ಸಿಟ್ಟು ಕಲಿತು ನಿಮ್ಮ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ ಹಾಗೂ ಜನರ ಮನಸ್ಸಿನಲ್ಲಿರುವ ಯೋಗದ ಕುರಿತಾದ ಸಂಶಯ, ಆತಂಕಗಳನ್ನು ದೂರ ಮಾಡಬೇಕು, ಅದರ ಬಗೆಗೆ ತಿಳುವಳಿಕೆ ಉಂಟುಮಾಡಬೇಕೆನ್ನುವುದೇ ಈ ಬರವಣಿಗೆಯ ಉದ್ದೇಶ.

ನಮ್ಮಲ್ಲಿ ಒಂದು ಗಾದೆ ಇದೆ. ಅದೇನೆಂದರೆ “ಎಲ್ಲದಕ್ಕೂ ಯೋಗಾವಳಿ ಕೂಡಿ ಬರಬೇಕು, ಅದಕ್ಕೂ ಯೋಗ ಬೇಕು ಮಾರಾಯಾ, ಎಲ್ಲಾ ಸುಮ್ಮನೆ ಬೇಕು ಅಂದರೆ ಸಿಗುತ್ತಾ?  ಅದೃಷ್ಟ ಬೇಕು”  ಹೀಗೆ ಜನರಾಡುವ ರೂಢಿ ಮಾತು, ಗಾದೆಗಳು ತಮ್ಮೆಲ್ಲರ ಜೀವನಲ್ಲೂ ಆದಷ್ಟು ಬೇಗ ಕೂಡಿ ಬರಲಿ, ಯೋಗ ಕಲಿಯುವ ಅವಕಾಶ, ಮನಸ್ಸು ಒದಗಿ ಬರಲಿ ಎಂಬ ಹಾರೈಕೆ ನನ್ನದು

ಎಲ್ಲರಿಗೂ ಅಂತಃರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments