ರಸಪ್ರಶ್ನೆಯಲ್ಲಿ ರೈಲು ಹಳಿಗಳಿಲ್ಲದ ಜಿಲ್ಲೆ ಯಾವುದು ಎಂದು ಕೇಳುತಿದ್ದಾಗಲೇ ಧೂರ್ತರಲ್ಲಿ ತಂತ್ರಗಾರಿಕೆಯೊಂದು ಹುಟ್ಟುತ್ತಿತ್ತು..
– ಶಿಲ್ಪಾ ನೂರೆರ
ಅಭಿವೃದ್ಧಿಗೆ ಮಾನದಂಡಗಳೇನು? ಅಷ್ಟಕ್ಕೂ ಅಭಿವೃದ್ಧಿ ಎಂದರೇನು? ಇರುವುದನ್ನೆಲ್ಲಾ ಗುಡಿಸಿ ಎಸೆದು ಮತ್ತೊಂದನ್ನು ಕಟ್ಟುವುದು ಅಭಿವೃದ್ಧಿಯೇ? ಸಹಜವಾದುದನ್ನು ನಾಶಮಾಡಿ ಕೃತಕವಾದದ್ದನ್ನು ಸೃಷ್ಟಿಸುವುದು ಅಭಿವೃದ್ಧಿ ಎನಿಸಿಕೊಳ್ಳುತ್ತದೆಯೇ? ಹಾಗಾದರೆ ಸಹಜವಾದುದನ್ನು, ಈ ಮೊದಲೇ ನೆಲೆಯಾದವುಗಳಿಗೆ ನಾನಾ ಕಿರೀಟಗಳನ್ನು ಕೊಟ್ಟು ಹೊಗಳಿ ಹೊನ್ನಶೂಲಕ್ಕೇಕೆ ಏರಿಸುವಿರಿ?- ಇಂಥ ಅನೇಕ ಪ್ರಶ್ನೆಗಳು ಹುಟ್ಟುವುದು ವ್ಯಾಖ್ಯಾನಕಾರರಿಗೆ, ವಿಶ್ಲೇಷಕರಿಗೆ, ಸಮಾಜಶಾಸ್ತ್ರಜ್ಞರಿಗೆ ಮತ್ತು ಅಭಿವೃದ್ಧಿ ನಿರೀಕ್ಷಿಸುವವರಿಗೆ ಹೊರತು ಅಭಿವೃದ್ಧಿಯನ್ನು ಕೈಗೊಳ್ಳುವವರಿಗಲ್ಲ! ಅಭಿವೃದ್ಧಿಗೆ ಸುಸ್ಥಿರ, ಸಮಗ್ರ ಇತ್ಯಾದಿ ವಿಶೇಷಣಗಳನ್ನು ಕೊಟ್ಟುಕೊಂಡವರೂ ಕೂಡ ಅವರೇ. ಹಾಗಾಗಿ ಅಭಿವೃದ್ಧಿ ಎಂಬುದು ತನ್ನ ಗುರಿಯನ್ನು ಇನ್ನೂ ಮುಟ್ಟದೆ ಅಡ್ಡಾದಿಡ್ಡಿ ಓಡುತ್ತಲೇ ಇದೆ. ಇಂದಿಗೂ ಅಭಿವೃದ್ಧಿ ರಾಜಕೀಯದ ಪ್ರಮುಖ ದಾಳವಾಗಿ ಬಳಕೆಯಾಗುತ್ತಲೇ ಇದೆ. ಹೊರನೋಟಕ್ಕೆ ಆಕರ್ಷಕವಾಗಿ, ಜನರ ಆಶಾಕಿರಣವಾಗಿ ನರ್ತನ ಮಾಡುತ್ತ ಬರುವ ಅಭಿವೃದ್ಧಿ ಯೋಜನೆಗಳು ಇನ್ನೂ ಏಕೆ ತನ್ನ ಉದ್ದೇಶವನ್ನು ಪೂರ್ಣಗೊಳಿಸಿಲ್ಲ ಎನ್ನುವುದರ ಹಿಂದೆ ಇಂಥಾ ವ್ಯಾಖ್ಯಾನಗಳ ಕ್ಲೀಷೆಗಳಿವೆ.
ಇದು ಸರಳವಾಗಿ ಅರ್ಥವಾಗಬೇಕೆಂದರೆ ನಮ್ಮ ಕೊಡಗು ಮತ್ತು ಕೊಡಗಿನಲ್ಲಿ ಘೋಷಣೆಯಾಗುವ ಅಭಿವೃದ್ಧಿ ಯೋಜನೆಗಳತ್ತ ನೋಡಬೇಕು. ಅಭಿವೃದ್ಧಿಯ ಕಣ್ಣಿನಿಂದ ನೋಡಿದರೆ ಕೊಡಗು ಕರ್ನಾಟಕದಲ್ಲೇ ಅತ್ಯಂತ ನತದೃಷ್ಟ ಜಿಲ್ಲೆ. ರಾಜ್ಯ ರಾಜಕಾರಣದಿಂದ ಅತೀ ಹೆಚ್ಚು ನಲುಗಿದ ಜಿಲ್ಲೆ. ಏಕೆಂದರೆ ಕೊಡಗಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯ ಮೊದಲ ಇಟ್ಟಿಗೆಯನ್ನೇನೂ ಇಡಬೇಕಾದ ತುರ್ತೇನಿಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಂಗನವಾಡಿಗಳೇ ಇಲ್ಲದ ಕಾಲದಲ್ಲೂ ಇಲ್ಲಿ ಕಿಂಡರ್ ಗಾರ್ಡನುಗಳು ತಲೆ ಎತ್ತಿದ್ದವು. ಕೆಲವು ಜಿಲ್ಲೆಗಳಲ್ಲಿ ಕೃಷಿ ಯೋಜನೆಗಳಿಗೆ ನಕ್ಷೆ ಬರೆಯುತ್ತಿದ್ದರೆ ಇಲ್ಲಿನ ವಾಣಿಜ್ಯ ಬೆಳೆಗಳು ಸಮುದ್ರ ದಾಟಿ ಎಷ್ಟೋ ದಶಕಗಳಾಗಿತ್ತು. ಕೆಲವು ಜಿಲ್ಲೆಗಳು ಸರ್ಕಾರಿ ಸಾರಿಗೆಗಳಿಗೆ ಅರ್ಜಿ ಹಾಕುತ್ತಿದ್ದರೆ ಕೊಡಗಿನಲ್ಲಿ ಖಾಸಗಿ ಬಸ್ಸುಗಳು ಕಚ್ಚಾ ರಸ್ತೆಯಲ್ಲಿ ಓಡುತ್ತಿದ್ದವು. ಬಹುತೇಕ ಜಿಲ್ಲೆಗಳು ಅನಾವೃಷ್ಟಿ ಎಂದು ಆಕಾಶ ನೋಡುತ್ತಿದ್ದರೆ ಕೊಡಗಿನ ರೈತ ಆಕಾಶಕ್ಕೆ ಬಿದ್ದ ರಂಧ್ರವನ್ನು ಮುಚ್ಚುವವರಾರು ಎಂದು ಗೊಣಗಿಕೊಳ್ಳುತ್ತಿದ್ದ. ಪ್ರಾಕೃತಿಕವಾಗಿ ಕೊಡಗು ಕೊಂಚ ಹೆಚ್ಚೇ ಪಡೆದುಕೊಂಡಿದೆ. ಆದರೆ ಆ ಹೆಚ್ಚುವರಿಯೇ ಅದಕ್ಕೆ ಮುಳುವಾಗಿದೆ. ಹಾಗಾಗಿ ನಮಗೆ ಅಭಿವೃದ್ಧಿಯ ಮಾನದಂಡ ಯಾವುದು? ಎಂಬ ಪ್ರಶ್ನೆ ಹೆಚ್ಚು ಕಾಡುತ್ತದೆ.
ಅಂದರೆ ಕೊಡಗಿನಲ್ಲಿ ಇತರ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿಲ್ಲ. ಆದರೆ ಆಗಬೇಕಾಗ ಅಭಿವೃದ್ಧಿಕಾರ್ಯಗಳೂ ಬಹಳಷ್ಟಿವೆ. ಆದರೆ ಅಭಿವೃದ್ಧಿಯ ನೇತಾರರು ಅದನ್ನು ಬಿಟ್ಟು ಅಭಿವೃದ್ಧಿಯ ಹೆಸರಲ್ಲಿ ಲೂಟಿಗಿಳಿಯುತ್ತಾರೆ. ಆಗ ಅವರ ಕಣ್ಣಿಗೆ ಬಿದ್ದಿದ್ದೇ ರೈಲು ಹಳಿಗಳಿಲ್ಲದ ಜಿಲ್ಲೆ ಎಂಬ ನೆಪ! ಯಾವಾಗ ಶಾಲಾ ಮಕ್ಕಳ ರಸಪ್ರಶ್ನೆಗಳಲ್ಲಿ ರಾಜ್ಯದಲ್ಲಿ ರೈಲು ಹಳಿಗಳೇ ಇಲ್ಲದ ರಾಜ್ಯ ಯಾವುದು? ಎಂಬ ಪ್ರಶ್ನೆ ಕೇಳಲ್ಪಟ್ಟಿತೋ ರಾಜಕಾರಣಿಗಳ ಕಣ್ಣು ಕೊಡಗಿನ ಮೇಲೆ ಬಿತ್ತು. ಬಂದ ಎಲ್ಲಾ ರಾಜಕಾರಣಿಗಳೂ ರೈಲು ಬಿಡುವುದರ ಜೊತೆಗೆ ರೈಲು ಬಂಡಿಗಳ ಚಿಂತನೆಗಳಲ್ಲಿ ತೊಡಗಿದರು. ಸರ್ವೆಗಳಾದವು. ಅನೇಕ ಸರ್ವೆಗಳಾದವು. ಏನೇನೋ ನಿಗೂಢತೆ ಆವರಿಸಿತು. ಆರಿಸಿ ಬಂದವರಿಗೆ ಮೈಲುಗಲ್ಲುಗಳನ್ನು ಸ್ಥಾಪಿಸುವುದು, ಹಳಿಗಳಿಲ್ಲದ ಜಿಲ್ಲೆಗೆ ಹಳಿಗಳನ್ನು ತಂದ ಖ್ಯಾತಿಯನ್ನು ಅಮೃತಶಿಲೆಗಳಲ್ಲಿ ಕೆತ್ತಿಸಿಕೊಂಡು ಇತಿಹಾಸಪುರುಷರಾಗುವ ಉಮೇದು ಹುಟ್ಟಿತು. ಇನ್ನೊಂದೆಡೆ ರೈಲು ಮಾರ್ಗ ಸಾಗುವಲ್ಲಿ ಕೊಬ್ಬಿ ನಿಂತ ಕಾಡುಮರಗಳು ರಾಜಕಾರಣಿಗಳ, ಗುತ್ತಿಗೆದಾರರ ಕಣ್ಣನ್ನು ಕುಕ್ಕಿದವು. ಕೊಟ್ಯಂತರ ರೂಪಾಯಿಗಳ ಮರಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಲಪಟಾಯಿಸಬಹುದೆನ್ನುವ ಉಪಾಯವೂ ಹೊಳೆಯಿತು. ಅದಕ್ಕಾಗಿ ಇವರೆಲ್ಲರೂ ಸೇರಿ ಅಭಿವೃದ್ಧಿಯ ತಂತ್ರವೊಂದನ್ನು ಹೆಣೆದರು. ಮೈಸೂರಿನಿಂದ ರೈಲುಮಾರ್ಗವನ್ನು ವಿಸ್ತರಿಸಿ ಕೊಡಗಿಗೆ ತರುವ ಚಿಂತನೆ ನಡೆಯಿತು. ಕುಶಾಲನಗರವೇ ಕೊಡಗಿನ ಕೊನೆಯ ನಿಲ್ದಾಣ ಎನ್ನುವ ಪ್ರಚಾರವನ್ನೂ ನಡೆಸಲಾಯಿತು.
ಆದರೆ ಅಸಲಿ ಉದ್ದೇಶ ಇಷ್ಟು ಮಾತ್ರವಲ್ಲ ಎಂಬುದು ಯಾರಿಗಾದರೂ ಅರ್ಥವಾಗುವಂತಿತ್ತು. ಮೈಸೂರು-ಕುಶಾಲನಗರ ರೈಲು ಮಾರ್ಗ ಕಾಗೆ-ಗುಬ್ಬಕ್ಕನ ಕಥೆಯಂಥಾದ್ದು. ಏಕೆಂದರೆ ಇಲ್ಲಿ ಮರಗಳ ಹನನ ನಡೆಯುವುದಿಲ್ಲ. ಅಸಲಿಗೆ ಕೊಡಗಿಗೆ ರೈಲ್ವೆ ಎಂಬ ಚಿಂತನೆಯ ಹಿಂದೆ ಭಾರೀ ಯೋಜನೆಯೊಂದಿತ್ತು. ರೈಲು ಕೇರಳಕ್ಕೆ ಹೋಗದೆ ರಾಜಕಾರಣಿಗಳ, ಟಿಂಬರ್ ಮಾಫಿಯಾದವರ, ರಾಜಕಾರಣಿಗಳ ಪೋಷಕರ ನೈಜ ಉದ್ದೇಶ ಈಡೇರುವುದಿಲ್ಲ. ಅದಕ್ಕಾಗಿ ಕೆಲವರ್ಷಗಳ ಹಿಂದೆ ರೈಲು ಮಾರ್ಗಕ್ಕಾಗಿ ಸರ್ವೆಯೊಂದು ನಡೆಯಿತು. ಆ ಪ್ರಕಾರ, ಕೇರಳ-ಮೈಸೂರು ರೈಲಿನ ಮಾರ್ಗವನ್ನು ಹೀಗೆ ಗುರುತಿಸಲಾಯಿತು. ತಲಚೇರಿ-ಮಟ್ಟನ್ನೂರು-ಕರಿಕೊಟ್ಟಕೇರಿ-ಬಿರುನಾಣಿ-ಹುದಿಕೇರಿ-ಪೊನ್ನಂಪೇಟೆ-ತಿತಿಮತಿ-ಪಿರಿಯಾಪಟ್ಟಣ-ಹುಣಸೂರು-ಮೈಸೂರು. ತಲಚೇರಿ-ಮೈಸೂರು ರೈಲ್ವೆ ಲೈನ್ ಯ್ಯಾಕ್ಷನ್ ಕೌನ್ಸಿಲ್‌ನ ಇತ್ತೀಚಿನ ಸರ್ವೆಯ ಪ್ರಕಾರ ಈ ಮಾರ್ಗದ ದೂರ ೧೪೫.೫ ಕಿ.ಮೀಗಳು. ಖರ್ಚು ಅಂದಾಜು ೭೮೦ ಕೋಟಿ ರೂಪಾಯಿಗಳು. ಮತ್ತೊಂದು ಮಾರ್ಗ ಮಡಿಕೇರಿ-ಮೈಸೂರು ರೈಲಿನದ್ದು. ಅದು ಮಡಿಕೇರಿ-ಮಕ್ಕಂದೂರು-ಕುಶಾಲನಗರ-ಪಿರಿಯಾಪಟ್ಟಣ-ಹುಣಸೂರು-ಕೆ ಆರ್ ನಗರ-ಮೈಸೂರು. ಈ ಮಾರ್ಗದ ದೂರ ೧೩೦ ಕಿ.ಮೀಗಳಾಗಿದ್ದು ಖರ್ಚು ಅಂದಾಜು ೧೮೦೦ ಕೋಟಿ ರೂಪಾಯಿಗಳು. ಏನೇ ಆದರೂ ಈ ರೈಲು ಮಾರ್ಗಗಳಿಂದ ಸುಮಾರು ೯೦ ಸಾವಿರದಿಂದ ಒಂದು ಲಕ್ಷ ಮರಗಳ ನಾಶವಂತೂ ಖಂಡಿತ. ಮಾನವನ ಮತ್ತು ಪ್ರಾಣಿಗಳ ಒಳಿತಿಗಾಗಿ ಮುಖ್ಯವಾಗಿ ಬೇಕಾಗಿರುವ ಪರಿಸರವನ್ನೇ ನಾಶಮಾಡಲು ಸರಕಾರಕ್ಕೆ ಅದು ಹೇಗೆ ಮನಸ್ಸು ಬರುತ್ತದೋ ತಿಳಿಯದು. ಈಗಾಗಲೇ ನೀರಿಗಾಗಿ ಹಾಹಾಕಾರ ಪಡುತ್ತಿರುವ ಕೊಡಗು ಮುಂದೊಂದು ದಿನ ನೀರಿನ ಸಂಪೂರ್ಣ ಅಭಾವದಿಂದಾಗಿ ಪ್ರಾಣ ಬಿಡುವ ದಿನಗಳನ್ನು ಹತ್ತಿರದಲ್ಲೇ ಕಾಣಬಹುದೆಂದೆನಿಸುತ್ತಿದೆ. ಕಾವೇರಿ ನದಿಯ ಹುಟ್ಟೂರಾಗಿರುವ ಕೊಡಗಿನಲ್ಲಿ ಈ ರೀತಿಯಲ್ಲಿ ಅಭಿವೃದ್ಧಿಯ ನೆಪಹೂಡಿ ಅರಣ್ಯ ನಾಶಕ್ಕೆ ಮುಂದಾಗಿರುವುದು ನಾಡಿಗೆ ಮಾಡುವ ಅನ್ಯಾಯವಲ್ಲವೇ? ಇದರಿಂದ ಕುಡಿಯಲು ಕಾವೇರಿ ನೀರನ್ನೇ ಅವಲಂಬಿಸಿರುವ ಮೈಸೂರು, ಮಂಡ್ಯ ಮತ್ತು ಬೆಂಗಳೂರಿನ ಜನರು, ಜೊತೆಗೆ ತಮಿಳುನಾಡಿನ ಕೆಲವು ಭಾಗದ ಜನರು ಸಂಕಷ್ಟದಲ್ಲಿ ಸಿಲುಕುವುದಿಲ್ಲವೇ? ಉದ್ದೇಶಿತ ಈ ಎರಡೂ ಮಾರ್ಗಗಳು ಪಶ್ಚಿಮಘಟ್ಟದ ಅತ್ಯಂತ ಸೂಕ್ಷ್ಮ ಮತ್ತು ಮಹತ್ತ್ವದ ಪ್ರದೇಶಗಳು. ಪ.ಘಟ್ಟದ ಉಳಿದೆಡೆ ಕಾಣದ ನೂರಾರು ಜೀವವೈವಿಧ್ಯಗಳು ಇಲ್ಲಿ ಕಂಡುಬರುತ್ತವೆ. ರೈಲು ಮಾರ್ಗದಿಂದ ಇವುಗಳ ಪರಿಸ್ಥಿತಿಯೇನು? ರೈಲಿಗಾಗಿ ಒಕ್ಕಲೆಬ್ಬಿಸುವ ಜನರನ್ನು ಸರ್ಕಾರ ಎಲ್ಲಿಗೆ ಸ್ಥಳಾಂತರ ಮಾಡುತ್ತದೆ? ದಿಡ್ಡಳ್ಳಿಗಾ? ನೂರಾರು ವರ್ಷಗಳಿಂದ ನೆಲೆಯಾದ ಇಲ್ಲಿನ ಸಂಸ್ಕೃತಿ ಗಂಜಿ ಕೇಂದ್ರದಲ್ಲಿ ಮತ್ತೆ ಹುಟ್ಟುವುದೇ?
ಪ್ರತೀ ವರ್ಷ ನೂರಾರು ವನ್ಯಜೀವಿಗಳು ರೈಲುಹಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ. ವರದಿಯೊಂದರ ಪ್ರಕಾರ ಇಸವಿ ೧೯೮೭ ರಿಂದ ಇಲ್ಲಿಯವರೆಗೆ ಸುಮಾರು ೧೫೦ ಆನೆಗಳು ರೈಲು ಅಪಘಾತದಿಂದಾಗಿ ಮೃತಪಟ್ಟಿವೆ. ಉದ್ದೇಶಿತ ರೈಲು ಮಾರ್ಗ ಆನೆಕಾರಿಡಾರ್ ಎಂಬುದು ಇಲ್ಲಿ ಗಮನಾರ್ಹ! ವೀರಪ್ಪನ್ ಆನೆ ಕೊಂದರೆ ದಂತಚೋರ ಎಂದು ಕರೆಯುವ ನಾವು ಅನಗತ್ಯ ರೈಲು ಮಾರ್ಗದಿಂದ ಆನೆಗಳನ್ನು ಕೊಲ್ಲುವವರನ್ನು ಏನನ್ನೋಣ? ಕೊಡಗಿನಲ್ಲಂತೂ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೇ ಅರಣ್ಯ ನಾಶದಿಂದಾಗಿ ನಾಡಿನ ಕಡೆ ಮುಖಮಾಡಿರುವ ಪ್ರಾಣಿಗಳು ಜನರ ಬಲಿ ತೆಗೆದುಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮತ್ತೆಷ್ಟು ಮನುಷ್ಯ-ಪ್ರಾಣಿಗಳ ಬಲಿ ಬೇಕಾಗಿದೆ? ಕಣಿವೆಗಳನ್ನು ಹಾದು, ಸುರಂಗಗಳೊಳಗೆ ನುಗ್ಗಿ, ಹಸಿರು ಬೆಟ್ಟಗಳನ್ನು ಕಣ್ತುಂಬಿಕೊಂಡು ಸಾಗುವ ರೈಲು ಪ್ರಯಾಣವೇನೋ ಸುಂದರವಾಗಿರುತ್ತದೆ. ಆದರೆ ಪಶ್ಚಿಮಘಟ್ಟದ ಸೌಂದರ್ಯ? ಬಣ್ಣ ಬಣ್ಣದ ತರಗೆಲೆ, ಹಲವು ರಂಗಿನ ಹೂವುಗಳ, ತೇಲಿ ಬರುವ ಸುವಾಸನೆಗಳ ಜಾಗಗಳನ್ನು ನೀರಿನ ಬಾಟಲಿಗಳ, ಊಟದ ಡಬ್ಬಿಗಳ, ಬಿಸ್ಕೇಟು ಪಟ್ಟಣಗಳಿಂದ ತುಂಬಬೇಕೆಂದು ಹೇಗಾದರೂ ಮನಸ್ಸು ಬಂತು? ಅದೂ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ? ಹೀಗೆ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪಶ್ಚಿಮಘಟ್ಟವನ್ನು ನಾಶ ಮಾಡುವುದರ ಬದಲು ಮಾಡಬೇಕಾಗಿರುವ ಅಭಿವೃದ್ಧಿ ಕಾರ್ಯಗಳು ಕೊಡಗಿನಲ್ಲಿ ಹೇರಳವಾಗಿವೆ. ರಸ್ತೆಗಳ ನಿರ್ಮಾಣ ಮತ್ತು ಅಗಲೀಕರಣ, ಡಿಲಕ್ಸ್ ಬಸ್ಸುಗಳ ಹೆಚ್ಚುವರಿ ಸೌಲಭ್ಯ, ಬಸ್ ನಿಲ್ದಾಣಗಳ ನಿರ್ಮಾಣ, ವಿದ್ಯುತ್ ಸೌಲಭ್ಯ ರಾಜ್ಯದ ಪ್ರವಾಸೋದ್ಯಮಕ್ಕೆ ಸಹಾಯಕವಾದೀತು. ವನ್ಯ ಧಾಮದ ಅಭಿವೃದ್ಧಿಗೆ ಕ್ರಮಗಳು, ಪ್ರತಿ ಹಳ್ಳಿಯಲ್ಲಿ ಸೂಕ್ತ ಸೌಲಭ್ಯದೊಂದಿಗೆ ಸರ್ಕಾರಿ ಆಸ್ಪತ್ರೆಗಳು, ಪ್ರತಿ ಹಳ್ಳಿಯಲ್ಲೂ ಉತ್ತಮ ಶಿಕ್ಷಣದೊಂದಿಗೆ ಸರಕಾರಿ ಶಾಲೆಗಳು, ಬೆಳೆಗಾರರಿಗೆ ಮತ್ತು ರೈತರಿಗೆ ಸರಕಾರದಿಂದ ಸೂಕ್ತ ಸವಲತ್ತುಗಳನ್ನು ಕಲ್ಪಿಸಬೇಕಾಗಿದೆ. ವಿಚಿತ್ರವೆಂದರೆ ಇತರ ಜಿಲ್ಲೆಗಳಲ್ಲಿ ಈ ಸೌಲಭ್ಯಗಳು ಉತ್ತಮವಾಗಿದೆ.
ಮೊದಲೇ ಅಂದಂತೆ ರೈಲು ಮಾರ್ಗದ ನಿರ್ಮಾಣ ಯೋಜನೆಯ ಹಿಂದೆ ದೊಡ್ಡ ದೊಡ್ದ ಕಾಣದ ಕೈಗಳ ಕೈವಾಡವಿದೆ. ತಮ್ಮ ಸ್ವಾರ್ಥಕ್ಕಾಗಿ ಪಶ್ಚಿಮಘಟ್ಟಗಳನ್ನು ನಾಶಮಾಡಲು ಹೊರಟಿರುವ ಆ ರಾಕ್ಷಸ ಸಮೂಹಕ್ಕೆ ಅರಣ್ಯ ಮತ್ತು ಜೀವಸಂಪನ್ಮೂಲಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ವಿಷಾದದ ಸಂಗತಿ. ಒಳ್ಳೆಯತನದ ಮುಖವಾಡ ಹಾಕಿಕೊಂಡಿರುವ ಕೆಟ್ಟ ರಾಜಕಾರಣಿಗಳು, ಬಿಲ್ಡಿಂಗ್ ಕಾಂಟ್ರ್ಯಾಕ್ಟರ್‌ಗಳು, ಟಿಂಬರ್ ಮಾಫಿಯಾ ನಡೆಸುವವರು ಇನ್ನೂ ಹಲವಾರು ದ್ರೋಹಿಗಳಿಗಾಗಿ ಪ್ರಕೃತಿ, ಅದರ ಕೂಸು ನಾಶವಾಗಬೇಕೆ? ಎಲ್ಲಕ್ಕಿಂತ ಮಿಗಿಲಾಗಿ ಕೊಡಗಿನಲ್ಲಿ ಆರಿಸಿಬರುವ ಕೊಡಗಿನವರಲ್ಲದ ರಾಜಕಾರಣಿಗಳು (ಎಲ್ಲಾ ಪಕ್ಷಗಳ, ಎಲ್ಲಾ ಕಾಲದ) ತಮ್ಮ ಮೈಲುಗಲ್ಲು ಸ್ಥಾಪಿಸುವ ಉಮೇದನ್ನು ಬಿಡಬೇಕು. ಆದರೆ ರಾಜಕಾರಣಿಗಳು ಅದನ್ನು ಬಿಡುತ್ತಾರೆ ಎಂಬ ಭರವಸೆ ಯಾರಿಗೂ ಇಲ್ಲ. ಆದರೆ ಅಂಥವರು ಒಂದು ದಿನ ಪಾಠ ಕಲಿಯುತ್ತಾರೆ ಎಂಬುದನ್ನಾದರೂ ಅರಿತುಕೊಳ್ಳಬೇಕು. ಯಾವ ಕಾರಣಕ್ಕೂ ಕೊಡಗಿಗೆ ರೈಲುಹಳಿಗಳು ಬರುವುದನ್ನು ಬಿಡಬೇಡಿ ಎಂದಿದ್ದರು ಫಿಲ್ಡ್ ಮಾರ್ಷಲ್ ಕಾರ್ಯಪ್ಪನವರು. ತಮಾಷೆ ಎಂದರೆ ಕೊಡಗಿನ ಜನಪ್ರತಿನಿಗಳೆಲ್ಲರೂ ಕಾರ್ಯಪ್ಪನವರನ್ನು ಇನ್ನಿಲ್ಲದಂತೆ ಹೊಗಳುತ್ತಾರೆ!
ಹಸಿರು ಕಾಡು, ವನ್ಯ ಪ್ರಾಣಿಗಳ ನಾಶವಾಗುವುದಾದರೆ ಅಂತಹ ಯೋಜನೆಯನ್ನು ಕೈ ಬಿಡುವುದು ಲೇಸು.
ನಿಮ್ಮ ಮೋದಿ ಕೊಡಗಿಗೆ ಬುಲೆಟ್ ಟ್ರೈನ್ ಬಿಡುತ್ತಾರೆ ಬಿಡಿ.
ಆಟರ್ಿಕಲ್ ಚೆನ್ನಾಗಿದೆ. ಇದರ ಜೊತೆಗೆ ಕೊಡಗಿನಲ್ಲಿ ಬೇರೂರುತ್ತಿರುವ ಅಸ್ಸಾಂಮಿಗರಿಂದ ಕೊಡಗಿನಲ್ಲಿ ಕೆಲಸದ ಸಮಸ್ಯೆ ಅನುಭವಿಸುತ್ತಿರುವ ಬಡ ಕಾಮರ್ಿಕರ ಬಗ್ಗೆ ಒಂದು ಆಟರ್ಿಲ್ ಮಾಡ್ಬಹುದಲ್ವಾ